Date: 23-09-2024
Location: ಬೆಂಗಳೂರು
"ಪಾಶ್ಚಾತ್ಯ ಸಾಹಿತ್ಯ ಮತ್ತು ವಿಮರ್ಶೆ, ಸಂಸ್ಕೃತ ಸಾಹಿತ್ಯ ಮತ್ತು ಮೀಮಾಂಸೆ, ಕನ್ನಡ ಸಾಹಿತ್ಯ ಪರಂಪರೆ ಮತ್ತು ಹೊಸ ಸಾಹಿತ್ಯ, ಸಮಾಜ ಮತ್ತು ಸಂಸ್ಕೃತಿ ಈ ಎಲ್ಲ ನೆಲೆಗಳ ಅನುಸಂಧಾನವಾಗಿ ಏರುಗತಿಯ ಕಾಲದ ಕನ್ನಡ ವಿಮರ್ಶೆಯು ಸಂಭವಿಸಿದೆ. ಈ ಹೊಸನೀರಿನ ಕಾಲದ ಎಲ್ಲ ವಿಮರ್ಶಕರೂ ಕೇವಲ ವಿಮರ್ಶಕರಲ್ಲ. ಸಾಹಿತ್ಯದ ಇತರ ಪ್ರಕಾರಗಳಲ್ಲೂ ಬರವಣಿಗೆ ಮಾಡಿರುವ ಇವರು ಏಕಕಾಲಕ್ಕೆ ಕವಿಗಳೂ, ಪ್ರಬಂಧಕಾರರೂ, ನಾಟಕಕಾರರೂ, ಕತೆ-ಕಾದಂಬರಿಕಾರರೂ, ಸಾಹಿತ್ಯದ ಓದುಗರೂ, ವಿಮರ್ಶಕರೂ ಆಗಿದ್ದಾರೆ," ಎನ್ನುತ್ತಾರೆ ಡಾ. ರಾಮಲಿಂಗಪ್ಪ ಟಿ. ಬೇಗೂರು. ಅವರು ತಮ್ಮ ‘ನೀರು ನೆರಳು’ ಅಂಕಣಕ್ಕೆ ಕನ್ನಡ ವಿಮರ್ಶೆಯ ಕುರಿತು ಬರೆದಿರುವ ಲೇಖನ.
ಕನ್ನಡ ವಿಮರ್ಶೆ -1
ಕನ್ನಡ ವಿಮರ್ಶೆಯ ಬಗೆಗೆ ನಮ್ಮಲ್ಲಿ ಹಲವು ನಂಬಿಕೆಗಳು ಈಗಾಗಲೆ ಸೃಷ್ಟಿಯಾಗಿವೆ. ಆ ನಂಬಿಕೆಗಳು ಹಾಗೆಯೆ ಏತಕ್ಕೆ ಸೃಷ್ಟಿಯಾಗಿವೆ ಎಂದು ನೋಡಿದರೆ ಅವುಗಳ ಹಿಂದೆ ಹಲವು ಕಲ್ಪನೆಗಳು ಇರುವುದನ್ನು ಕಾಣಬಹುದು. ಈ ಬರಹದಲ್ಲಿ ಮೊದಲಿಗೆ ಅಂತಹ ನಂಬಿಕೆಗಳನ್ನು ಪ್ರಶ್ನೋತ್ತರ ಧಾಟಿಯಲ್ಲಿ ಪರಿಶೀಲಿಸಿಕೊಳ್ಳಲಾಗುವುದು. ಅವುಗಳೂ ಕೂಡ ಇಲ್ಲಿ ಸಮಗ್ರವಾಗಿ ಮಂಡಿತವಾಗಿಲ್ಲ ಎಂಬುದನ್ನು ಓದುಗರು ಗಮನಿಸಬಹುದು.
ನಂತರ ಎರಡನೆ ಭಾಗದಲ್ಲಿ ಕ್ರಿ.ಶ. 1800ರಿಂದ 1950ರವರೆಗಿನ ಕಾಲವನ್ನು ಕನ್ನಡ ವಿಮರ್ಶೆಯ ಹೊಸ ನೀರು ನುಗ್ಗಿದ ಕಾಲ ಎಂದು ನಾಮಾಂಕಿಸಿಕೊಂಡು ಅಲ್ಲಿನ ಆಚಾರಗಳ ಪರಿಕಲ್ಪನೀಕರಣ ಮತ್ತು ತಾತ್ವೀಕರಣ ಮಾಡುತ್ತ ಅವುಗಳನ್ನು ಸಂಕ್ಷಿಪ್ತವಾಗಿ ಮಂಡಿಸಲು ಯತ್ನಿಸಲಾಗುವುದು.
ಮೂರನೆ ಭಾಗದಲ್ಲಿ 1950ರ ನಂತರದ ಕಾಲವನ್ನು ಕನ್ನಡ ವಿಮರ್ಶೆಯ ಏರುಗತಿಯ ಕಾಲ ಎಂದು ಕರೆದುಕೊಂಡು ವಿಮರ್ಶೆಯ ಬಗೆಗಳು ಮತ್ತು ಕನ್ನಡ ವಿಮರ್ಶೆಯ ಚಿಂತನಾ ಶಾಲೆಗಳ ಬಗ್ಗೆ ಪರಿಶೀಲಿಸಲಾಗುವುದು. ಆಮೂಲಕ ಕನ್ನಡ ವಿಮರ್ಶೆಯನ್ನು ಕಟ್ಟಿಕೊಳ್ಳುವ ಸಾಧ್ಯತೆಗಳನ್ನು ಮಂಡಿಸಲು ಪ್ರಯತ್ನಿಸಲಾಗುವುದು. ಇದಕ್ಕೆ ಇಲ್ಲಿ ವಿಶ್ಲೇಷಣಾ ವಿಧಾನವನ್ನು ಅಲ್ಲಲ್ಲಿ ಬಳಸಿದ್ದರೂ ಪ್ರಧಾನವಾಗಿ ತತ್ವಗಳ ಕ್ರೋಡೀಕರಣ ಮತ್ತು ಆಚಾರಗಳ ತಾತ್ವೀಕರಣ ಎಂಬ ವಿಧಾನವನ್ನು ಬಳಸಲಾಗಿದೆ.
ಶಿಕ್ಷಣ ವ್ಯವಸ್ಥೆಯಲ್ಲಿ ಭಾಷೆಯ ಅಧ್ಯಯನ ಮತ್ತು ಐಚ್ಛಿಕವಾಗಿ ಸಾಹಿತ್ಯದ ಅಧ್ಯಯನಗಳು ವ್ಯವಸ್ಥಿತವಾಗಿ ರೂಪಗೊಳ್ಳತೊಡಗಿದ್ದ ಕಾಲದಲ್ಲಿ ಸಾಹಿತ್ಯ ಶಿಸ್ತು ಒಂದು ಶೈಕ್ಷಣಿಕ ಶಿಸ್ತಾಗಿ ನಮ್ಮಲ್ಲಿ ಸಂಭವಿಸತೊಡಗಿತು. ಇದರ ಭಾಗವಾಗಿ ಒಂದು ಸಾಂಸ್ಕೃತಿಕ ಆಚಾರವಾಗಿ ಚಾಲ್ತಿಯಲ್ಲಿದ್ದ ವಿಮರ್ಶೆಯೂ ಒಂದು ಶೈಕ್ಷಣಿಕ ಶಿಸ್ತಾಗಿ ಮತ್ತು ಸಾಹಿತ್ಯಾನುಸಂಧಾನದ ಆಚಾರವಾಗಿ ಹೊರಳಿಕೊಂಡಿತು. ಹಾಗೆಯೇ ನಮ್ಮತನದ ಹುಡುಕಾಟ ಅಥವಾ ಐಡೆಂಟಿಟಿ ಪಾಲಿಟಿಕ್ಸ್, ರಾಷ್ಟ್ರ ನಿರ್ಮಾಣ ಪ್ರಜ್ಞೆ ಅಥವಾ ರಾಷ್ಟ್ರೀಯತೆಯ ರಾಜಕಾರಣ, ಪುನರುಜ್ಜೀವನ ಪ್ರಜ್ಞೆ ಅಥವಾ ಎನ್ಲೈಂಟನ್‌ಮೆಂಟ್ ಪ್ರಾಜೆಕ್ಟ್, ಓರಿಯೆಂಟಲ್ ಅಧ್ಯಯನಗಳು ಮತ್ತು ಅಲ್ಲಿನ ವೈಟ್‌ಮ್ಯಾನ್ಸ್ ಬರ್ಡನ್ ಧೋರಣೆ, ಹಾಗೆಯೇ ಮಾರ್ಕ್ಸ್ವಾದಿ, ಸುಧಾರಣಾವಾದಿ, ಉದಾರ ಮಾನವತಾವಾದಿ, ವಿಜ್ಞಾನವಾದಿ, ಆಧಾರವಾದಿ (ಪಾಸಿಟಿವಿಸ್ಟ್), ವಿಕಾಸವಾದಿ ಇತ್ಯಾದಿ ಧೋರಣೆಗಳು ಹಾಗೆಯೇ ಮುದ್ರಣ ತಂತ್ರಜ್ಞಾನ, ಇಂಗ್ಲಿಶ್ ಸಾಹಿತ್ಯ ಲೋಕದ ಗಾಳಿ, ಹಾಗೆಯೇ ಇವೆಲ್ಲವುಗಳಿಂದ ರೂಪಿತಗೊಂಡ ಕನ್ನಡದ ಭಿನ್ನ ಜ್ಞಾನಶಿಸ್ತುಗಳಾದ ಚರಿತ್ರೆ ರಚನಾಶಾಸ್ತ್ರ, ಶಾಸನಶಾಸ್ತ್ರ, ಸಂಪಾದನಾಶಾಸ್ತ್ರ, ಛಂದಸ್ಶಾಸ್ತ್ರ, ಸಂಶೋಧನಾಶಾಸ್ತ್ರ, ಕೋಶರಚನೆ, ಅನುವಾದ, ಪತ್ರಿಕೋದ್ಯಮ, ಪೌರ್ವಾತ್ಯ ಅಧ್ಯಯನ, ಪುಸ್ತಕ ಸಮೀಕ್ಷೆ ಇತ್ಯಾದಿಗಳ ಮೂಲಕ ಮುಖ್ಯವಾಗಿ ಅನುವಾದಿತ ಗ್ರಹಿಕೆಯಾಗಿ ಹೊಸನೀರಿನ ಕಾಲದ ವಿಮರ್ಶೆಯು (ಆಧುನಿಕ ವಿಮರ್ಶೆಯು) ಸಂಭವಿಸಿತು-ರೂಪಗೊಂಡಿತು.
ಪಾಶ್ಚಾತ್ಯ ಸಾಹಿತ್ಯ ಮತ್ತು ವಿಮರ್ಶೆ, ಸಂಸ್ಕೃತ ಸಾಹಿತ್ಯ ಮತ್ತು ಮೀಮಾಂಸೆ, ಕನ್ನಡ ಸಾಹಿತ್ಯ ಪರಂಪರೆ ಮತ್ತು ಹೊಸ ಸಾಹಿತ್ಯ, ಸಮಾಜ ಮತ್ತು ಸಂಸ್ಕೃತಿ ಈ ಎಲ್ಲ ನೆಲೆಗಳ ಅನುಸಂಧಾನವಾಗಿ ಏರುಗತಿಯ ಕಾಲದ ಕನ್ನಡ ವಿಮರ್ಶೆಯು ಸಂಭವಿಸಿದೆ. ಈ ಹೊಸನೀರಿನ ಕಾಲದ ಎಲ್ಲ ವಿಮರ್ಶಕರೂ ಕೇವಲ ವಿಮರ್ಶಕರಲ್ಲ. ಸಾಹಿತ್ಯದ ಇತರ ಪ್ರಕಾರಗಳಲ್ಲೂ ಬರವಣಿಗೆ ಮಾಡಿರುವ ಇವರು ಏಕಕಾಲಕ್ಕೆ ಕವಿಗಳೂ, ಪ್ರಬಂಧಕಾರರೂ, ನಾಟಕಕಾರರೂ, ಕತೆ-ಕಾದಂಬರಿಕಾರರೂ, ಸಾಹಿತ್ಯದ ಓದುಗರೂ, ವಿಮರ್ಶಕರೂ ಆಗಿದ್ದಾರೆ. (ಇದಕ್ಕೆ ಅಪವಾದಗಳು ಇವೆ)
ಗ್ರಂಥಸಂಪಾದನೆ, ಪಾಠಪರಿಷ್ಕರಣೆ, ಸಂಗ್ರಹ, ಕಾಲನಿರ್ಣಯ, ಚರಿತ್ರೆರಚನೆ, ಪ್ರಭಾವ - ಸ್ವಂತಿಕೆಗಳ ವಿವರಣೆ, ಪರಸ್ಪರ ತುಲನೆ, ಅನುವಾದ, ಸಂಶೋಧನೆ ಇತ್ಯಾದಿ ಕರ‍್ಯಗಳಲ್ಲಿ ತೊಡಗಿದ್ದ ಆರಂಭದ ಸಾಹಿತ್ಯದ ಅನುಸಂಧಾನವು 19ನೇ ಶತಮಾನದವರೆಗಿನ ಸಾಹಿತ್ಯ ಪರಂಪರೆಯ ವಿಮರ್ಶೆಯೇ ಆಗಿತ್ತು. ಹಳಗನ್ನಡ ಸಾಹಿತ್ಯ, ನಡುಗನ್ನಡ ಸಾಹಿತ್ಯ, ಹೊಸಗನ್ನಡ ಸಾಹಿತ್ಯ ಎಂಬ ವಿಂಗಡಣೆಯ ಜೊತೆಗೆ ಪ್ರಾಚೀನ ಸಾಹಿತ್ಯ ಆಧುನಿಕ ಸಾಹಿತ್ಯ ಎಂಬ ವಿಂಗಡಣೆಯೂ ಈ ಹೊಸನೀರಿನ ಕಾಲದಲ್ಲಿ ಚಾಲ್ತಿಗೆ ಬಂದಿತು. ಕನ್ನಡಿಗರ ಆಧುನಿಕ ವಿಮರ್ಶೆಯು ಅಂದರೆ ಹೊಸನೀರಿನ ಕಾಲದ ವಿಮರ್ಶೆಯು ಆರಂಭಗೊಂಡಿದ್ದೇ ಪ್ರಾಚೀನ ಸಾಹಿತ್ಯದ ಪರಿಷ್ಕರಣ ಮತ್ತು ಮರು ನಿರ್ವಚನಗಳ ಮೂಲಕ. ಹಾಗಾಗಿ ಹೊಸನೀರಿನ ಕಾಲದ (ಆಧುನಿಕ ವಿಮರ್ಶೆಯ) ಮೊದಲ ಹಂತ ಎಂದರೆ ಪ್ರ‍್ರಾಚೀನ ಸಾಹಿತ್ಯದ ವಿಮರ್ಶೆ ಮಾತ್ರ. ಹೊಸಗನ್ನಡ ಸಾಹಿತ್ಯದ ಕುರಿತ ವಿಮರ್ಶೆ ಏನಿದ್ದರೂ ನಂತರದ ಹಂತ.
ಭಾಗ 1: ಕನ್ನಡ ವಿಮರ್ಶೆಯ ಕುರಿತ ನಂಬಿಕೆ, ಆಚಾರಗಳು
1. ವಿಮರ್ಶೆಯು ಕನ್ನಡದಲ್ಲಿ ಒಂದು ಸಾಹಿತ್ಯ ಪ್ರಕಾರ ಮಾತ್ರವೊ? ಸಾಂಸ್ಕೃತಿಕ ಆಚಾರವೂ ಹೌದೊ?
ವಿಮರ್ಶೆಯು ಸಾಹಿತ್ಯ ಪ್ರಕಾರ ಎಂಬ ನಂಬಿಕೆ ನಮ್ಮಲ್ಲಿ ಇದೆ. ಇದೊಂದು ಊನವಾದ ನಂಬಿಕೆ. ಭಾಗಶಃ ಸತ್ಯ. ನಮ್ಮ ಪ್ರಾಚೀನರಲ್ಲು ವಿಮರ್ಶೆ ಇತ್ತು. ಆದರೆ ಅದು ಆಧುನಿಕರು ಭಾವಿಸಿದ ರೂಪದಲ್ಲಿ ಇರಲಿಲ್ಲ. ಟೀಕು ರೂಪಿಯಾಗಿ, ಸಂಪಾದನಾ ರೂಪಿಯಾಗಿ, ಸಾರಸಂಗ್ರಹ ರೂಪಿಯಾಗಿ, ಮೀಮಾಂಸಾ ರೂಪಿಯಾಗಿ, ಪಾರಾಯಣ ರೂಪಿಯಾಗಿ, ಕಾವ್ಯರೂಪಿ-ಪುನರ್ಕಥನ ರೂಪಿಯಾಗಿ ಹೀಗೆ ಹಲವು ರೂಪಗಳಲ್ಲಿ ಇತ್ತು. ಆದರೆ ಅದನ್ನು ವಿಮರ್ಶೆಯೆಂದು ಗ್ರಹಿಸುವ ದೃಷ್ಟಿ `ಆಧುನಿಕರ’ಲ್ಲಿ (?) ಇರಲಿಲ್ಲ ಅಷ್ಟೆ. ಅಲ್ಲದೆ ಅಲ್ಲಿನ ಎಲ್ಲ ಬಗೆಯ ಸಾಹಿತ್ಯಕ ಅನುಸಂಧಾನಗಳನ್ನು ನಮ್ಮವರು ಕ್ರೋಡೀಕರಿಸಿಕೊಳ್ಳುವ ಮತ್ತು ತಾತ್ವೀಕರಿಸಿಕೊಳ್ಳುವ ಕೆಲಸವನ್ನು ಮಾಡದೆ ಇಂಗ್ಲಿಶಿನಿಂದ ಕಡ ತಂದ ತತ್ವ, ಆಚಾರ, ಸಿದ್ಧಾಂತಗಳನ್ನು ಇಲ್ಲಿ ಅನ್ವಯಿಸುವ ಕೆಲಸ ಮಾಡಿದರಷ್ಟೆ. ಹಾಗಾಗಿ ವಿಮರ್ಶೆಯನ್ನು ನಮ್ಮವರು ಹೊರಗಿನಿಂದ ಸ್ವೀಕರಿಸಿದ ಒಂದು ಆಚಾರ ಎಂಬಂತೆ ಭಾವಿಸಿದರು. ಹಾಗೆಯೆ ಇದನ್ನು ಒಂದು ಸಾಹಿತ್ಯ ಪ್ರಕಾರವೆಂದೂ, ಸಾಹಿತ್ಯದ ಉಪ ಉತ್ಪನ್ನವೆಂದೂ ಭಾವಿಸಿದರು.
ನಮ್ಮ ವಿಮರ್ಶೆಯು ಕೇವಲ ವಿಮರ್ಶೆ ಅಲ್ಲ. ಇದು ವಿಮರ್ಶಾ ಸಂಸ್ಕೃತಿ. ಆಧುನಿಕ ಕಾಲದಲ್ಲಾಗಲೀ, ಹೊಸನೀರಿನ ಕಾಲದಲ್ಲಾಗಲೀ, ಪ್ರಾಚೀನ ಕಾಲದಲ್ಲಾಗಲೀ ವಿಮರ್ಶೆ ಎಂದರೆ ಪಂಡಿತವರ್ಗದ ಬರವಣಿಗೆ ಮಾತ್ರ ಎಂಬ ಧೋರಣೆ ನಮ್ಮ ಆಚರಣೆಯಲ್ಲಿ ಇಲ್ಲ. ವಿಮರ್ಶೆ ಎಂಬುದು ಬರಹ ರೂಪದ ಪ್ರತಿಕ್ರಿಯೆ; ಮೌಲ್ಯಮಾಪನ-ನ್ಯಾಯನಿರ್ಣಯ ಸ್ಥಾನನಿರ್ಣಯ-ಭಿನ್ನಾರ್ಥವ್ಯಾಖ್ಯಾನ-ಪ್ರತಿಪಠ್ಯ ನಿರ್ಮಾಣ ಇತ್ಯಾದಿ ಸಾಧ್ಯತೆಗಳ ಲಿಪಿಕ ದಾಖಲೆ ಮಾತ್ರ ಅಲ್ಲ. ಹಲವು ತೆರನ ಸಾಂಸ್ಕೃತಿಕ ಆಚಾರಗಳ ಮೂಲಕ ಪ್ರಕಟವಾಗಿರುವ, ಪ್ರಕಟವಾಗುವ ಬಹುರೂಪಿ ಅನುಸಂಧಾನ. ಇದೊಂದು ಸಾಂಸ್ಕೃತಿಕ ಸಂಕಥನ. ಇದು ಸಾಹಿತ್ಯವನ್ನು ಆಧರಿಸಿದ ಸಮಾಜ ವಿಮರ್ಶೆಯೇ; ಬದುಕಿನ ಮೀಮಾಂಸೆಯೇ ಹೌದು.
ವಿಮರ್ಶೆ ಎನ್ನುವುದು ಸಾಹಿತ್ಯದ ಒಂದು ಪ್ರಕಾರ ಮಾತ್ರ ಅಲ್ಲ. ಇದೊಂದು ಶಿಸ್ತು. ಸಾಹಿತ್ಯ, ಸಂಗೀತ, ಹರಿಕತೆ, ಗಮಕ, ಕೇಳಿಕೆ, ಪಾರಾಯಣ, ಅಧ್ಯಯನ, ಟೀಕು-ವ್ಯಾಖ್ಯಾನಗಳೆಲ್ಲ ಸೇರಿದ ಸಾಹಿತ್ಯದ ಸಾಂಸ್ಕೃತಿಕ ಅನುಸಂಧಾನಗಳ ಆಚಾರ. ಹಾಗೇ ಇದೊಂದು ಹಲವು ಪ್ರಕಾರಗಳು, ಮಾರ್ಗಗಳು, ವಲಯಗಳನ್ನು ಒಳಗೊಂಡಿರುವ ಒಂದು ಶಿಸ್ತು. ಮಹಿಳಾ ಅಧ್ಯಯನ, ಭಾಷಾಂತರ ಅಧ್ಯಯನ, ತೌಲನಿಕ ಅಧ್ಯಯನ, ಸಂಸ್ಕೃತಿ ಅಧ್ಯಯನ ಇಂತಹ ಅಧ್ಯಯನ ಶಿಸ್ತುಗಳ ರೀತಿಯಲ್ಲೆ ಸಾಗಬಹುದಾದ ಮತ್ತು ಇವನ್ನೆಲ್ಲ ಒಳಗೊಳ್ಳಬಹುದಾದ ಒಂದು ಸ್ವತಂತ್ರ ಶಿಸ್ತು: ವಿಮರ್ಶಾ ಸಂಸ್ಕೃತಿ.
2. ವಿಮರ್ಶೆಯು ಆಧುನಿಕ ಮಾತ್ರವೆ?
ನಮ್ಮಲ್ಲಿ ಸಾಹಿತ್ಯವನ್ನು ವಿಮರ್ಶೆ ಮಾಡುವ ಕ್ರಿಯೆಯು ಒಂದು ಸಾಹಿತ್ಯದ ಹಾಗೂ ಸಮಾಜದ ಅನುಸಂಧಾನದ ಬಗೆಯಾಗಿ ಬಹಳ ಕಾಲದಿಂದಲು ಚಾಲ್ತಿಯಲ್ಲಿದೆ. ಆದರೆ ರೆನೆಸಾನ್ಸ್ ಅವಧಿಯ ನಂತರದಲ್ಲಿ ಇದನ್ನು ನಾವು ಆಧುನಿಕ ವಿಮರ್ಶೆ ಎಂದು ಕರೆದುಕೊಂಡಿದ್ದೇವೆ. ಹಾಗೆ ನಮ್ಮ ವಿಮರ್ಶೆಯ ಚರಿತ್ರೆಯನ್ನು ನೋಡಿದರೆ ಇಲ್ಲಿ ವಿಮರ್ಶೆ ಆಧುನಿಕ ಕಾಲದಲ್ಲಿ ಮಾತ್ರವೆ ಸಂಭವಿಸಿದ ಚಟುವಟಿಕೆ ಏನೂ ಅಲ್ಲ. ಪಶ್ಚಿಮ ಪ್ರಣೀತ ದೃಷ್ಟಿ ಇರುವವರಿಗೆ ಹಾಗೆ ಅನ್ನಿಸಬಹುದಷ್ಟೆ. ನಮ್ಮ ವಿಮರ್ಶೆಯು ಈಗಾಗಲೆ ಹೇಳಿರುವ ಹಾಗೆ ಆದಿಪ್ರಾಚೀನ ಕಾಲದಿಂದಲೂ ಅಂದರೆ ಶ್ರೀವಿಜಯ, ವಡ್ಡಾರಾಧನೆಯ ಕಾಲದಿಂದಲು ಸೃಷ್ಟಿಯಾಗಿದೆ. ಪಂಪನಲ್ಲಿ ಬರುವ ಅಕ್ಕರಗೊಟ್ಟಿ, ಮಧುಮಹೋತ್ಸವ, ಗೇಯದಲಂಪು ಇತ್ಯಾದಿಗಳು ಅಂತಹ ಅನುಸಂಧಾನಗಳನ್ನೆ ಸೂಚಿಸುತ್ತವೆ. ಇವೆಲ್ಲವೂ ಶಿಷ್ಟರ ಪರಿಪಾಠವಾಗಿರಲಿಕ್ಕೆ ಸಾಕು. ಅದಕ್ಕು ಮೊದಲು ಜನಪದ ಸಾಹಿತ್ಯದ ಸೃಷ್ಟಿ ಮತ್ತು ಬಳಕೆ ಇದ್ದೆ ಇರಬೇಕು. ಆದರೆ ಅ ಮುಂಚಿನ ಜನಪದರಲ್ಲಿ ಇದ್ದಿರಬಹುದಾದ ಸಾಹಿತ್ಯದ ಅನುಸಂಧಾನಗಳು ನಮಗೆ ತಿಳಿದಿಲ್ಲವಷ್ಟೆ.
3. ಮೀಮಾಂಸೆ ಮತ್ತು ವಿಮರ್ಶೆಗಳು ಅವಳಿ ವೈರುದ್ಯಗಳೋ?
ಆಧುನಿಕರು ಭಾವಿಸಿದಂತೆ ವಿಮರ್ಶೆ ಮತ್ತು ಮೀಮಾಂಸೆಗಳು ಅವಳಿ ವೈರುಧ್ಯಗಳಲ್ಲ. ಪರಸ್ಪರ ಬೇರೆ ಬೇರೆ ಪ್ರಕಾರಗಳಲ್ಲ. ನಮ್ಮ ವಿಮರ್ಶೆಯು ಮೀಮಾಂಸೆಯ ಆಧುನಿಕ ರೂಪ ಅಷ್ಟೆ. ಹಾಗೆಯೆ ಮೀಮಾಂಸೆಯು ನಮ್ಮ ವಿಮರ್ಶೆಯ ಒಂದು ಪ್ರಾಗ್ರೂಪವೇ ಹೌದು. ಇದು ನಮ್ಮ ಪರಂಪರೆಯನ್ನು ಅವಲೋಕಿಸಿದರೆ ತಿಳಿಯುತ್ತದೆ. ಕನ್ನಡ ಕವಿಗಳ ಕಾವ್ಯತತ್ವವನ್ನು ಕ್ರೋಡೀಕರಿಸಿಕೊಳ್ಳಲು ಯತ್ನಿಸಿರುವ ಕುವೆಂಪು, ತೀನಂಶ್ರೀ, ಕೆ.ಕೃಷ್ಣಮೂರ್ತಿ, ಜಿ.ಎಸ್. ಶಿವರುದ್ರಪ್ಪ ಇಂಥವರ ಪ್ರಯತ್ನಗಳಲ್ಲಿ ಇದನ್ನು ನಿಚ್ಚಳವಾಗಿ ಕಾಣಬಹುದು. ಇದಂತು ಮೀಮಾಂಸೆಯು ಸಾಹಿತ್ಯದ ಅನುಸಂಧಾನದ ತತ್ವದ ಭಾಗದಂತೆಯು ವಿಮರ್ಶೆಯು ಆಚಾರದ ಭಾಗದಂತೆಯು ಇದೆಯಷ್ಟೆ. ಯಾವುದನ್ನು ನಾವು ತತ್ವ ಎನ್ನುತ್ತೇವೊ ಅದೆ ಮೀಮಾಂಸೆ. ಅದರ ಆಚರಣೆಯ ಭಾಗವೆ ವಿಮರ್ಶೆ. ಓದಿನ ಮಂಡನೆಗಳೆಲ್ಲವೂ, ಅನುಸಂಧಾನದ ಬಗೆಗಳೆಲ್ಲವೂ ವಿಮರ್ಶೆಗಳೇ. ಅವುಗಳಲ್ಲಿನ ಹೇಗೆ ಓದಬೇಕು, ಹೇಗೆ ಬರೆಯಬೇಕು ಎಂಬ ತಾತ್ವಿಕ ವಿಚಾರಗಳೆ ಮೀಮಾಂಸೆ. ಇಂದಂತು ವಿಮರ್ಶೆ, ಮೀಮಾಂಸೆ, ಸಂಶೋಧನೆಗಳು ಸೋದರ ಸಂಬಂಧಿ ಶಿಸ್ತುಗಳಾಗಿಯೆ ಬಳಕೆ ಆಗುತ್ತಿವೆ. ಸಂಶೋಧನಾ ಅಧ್ಯಯನ, ವಿಮರ್ಶಾತ್ಮಕ ಅಧ್ಯಯನ ಕಲ್ಪನೆಗಳಲ್ಲಿ ಇಂತಹ ಸಂಬಂಧವನ್ನು ಕಾಣಬಹುದು.
4. ವಿಮರ್ಶೆ ಪಂಡಿತಮಾನ್ಯರ ಗದ್ಯರೂಪಿ, ಪ್ರಬಂಧರೂಪಿ ಬರವಣಿಗೆ ಮಾತ್ರವಾ?
ವಿಮರ್ಶೆ ಎಂದರೆ ಕೇವಲ ಸಾಹಿತ್ಯದ ಗುಣದೋಷಗಳನ್ನು ನಿರ್ಣಯಿಸುವ ಅಥವಾ ಅದರ ಒಳ ಅರ್ಥಗಳನ್ನು ವಿವರಿಸುವ ಅಥವಾ ಸಾಹಿತ್ಯದ ಸ್ಥಾನ ನಿರ್ಣಯ ಮಾಡುವ ಸಂಶೋಧಕ-ನ್ಯಾಯಾಧೀಶ ಪಾತ್ರದ್ದು ಮಾತ್ರ ಅಲ್ಲ. ಸಾಹಿತ್ಯ ವಿಮರ್ಶೆಯು ಅಂತಿಮವಾಗಿ ಸಮಾಜದ ವಿಮರ್ಶೆಯೆ ಆಗಿದೆ. ಸಾಹಿತ್ಯವು ಹೇಗೆ ತನ್ನದೆ ಆದ ಬೇರೆ ಬೇರೆ ಪ್ರಕಾರಗಳ ಮೂಲಕ ಸಮಾಜವನ್ನು ಅನುಸಂಧಾನಕ್ಕೆ ಗುರಿಮಾಡುತ್ತದೊ ಹಾಗೆಯೆ ವಿಮರ್ಶೆಯು ಕೂಡ ಹಲವು ಆಚಾರಗಳ ಮೂಲಕ ಸಮಾಜವನ್ನೆ ಅನುಸಂಧಾನಕ್ಕೆ ಗುರಿ ಮಾಡುತ್ತದೆ. ಕಾವ್ಯ, ಕತೆ, ಕಾದಂಬರಿ ಹೀಗೆ ಈ ಮೊದಲಾದುವು ಹೇಗೆ ಒಂದೊಂದು ಸಾಹಿತ್ಯ ಪ್ರಕಾರಗಳೋ ಹಾಗೆ ವಿಮರ್ಶೆ ಕೂಡ ಒಂದು ಸಾಹಿತ್ಯ ಪ್ರಕಾರ ಎಂದು ಅನ್ನಿಸುತ್ತದೆ. ಆದರೆ ಹಾಗೆ ನೋಡಿದರೆ ಇದು ಒಂದು ಸಾಹಿತ್ಯ ಪ್ರಕಾರ ಮಾತ್ರ ಅಲ್ಲ; ಇದೊಂದು ಬರವಣಿಗೆಯ ವಲಯ. ಇದು ಗದ್ಯರೂಪಿಯಾಗಿ ಮಾತ್ರ ಅಥವಾ ಪ್ರಬಂಧ ರೂಪಿಯಾಗಿ ಮಾತ್ರ ಪ್ರಕಟವಾಗುವ ಒಂದು ಪ್ರಕಾರ ಅಲ್ಲ. ಹಲವು ಪ್ರಕಾರಗಳಲ್ಲಿ ಪ್ರಕಟವಾಗಬಹುದಾದ ಒಂದು ದೊಡ್ಡ ಶಿಸ್ತಾಗಿ ಇದು ಇಂದು ಬೆಳೆದಿದೆ. ನಮ್ಮ ಹಳೆಯ ಸಾಹಿತ್ಯವನ್ನು ಮತ್ತು ಸಾಹಿತ್ಯದ ಅನುಸಂಧಾನದ ಚರಿತ್ರೆಗಳನ್ನು ಗಮನಿಸಿದರೆ ಇದು ತಿಳಿಯುತ್ತದೆ.
ನಮ್ಮ ಪರಂಪರೆಗಳಲ್ಲಿ ಇರುವ ಮಲ್ಲಿಕಾರ್ಜುನನ ಸೂಕ್ತಿಸುಧಾರ್ಣವ, ಮಲ್ಲಕವಿ ಮತ್ತು ಅಭಿನವ ವಾದಿವಿದ್ಯಾನಂದರ ಕಾವ್ಯಸಾರಗಳು, ಹಲಗೆಯರ‍್ಯ, ಗೂಳೂರು ಸಿದ್ಧವೀರಣ್ಣ, ಗುಮ್ಮಳಾಪುರದ ಸಿದ್ಧಲಿಂಗಯತಿ, ಶಿವಗಣಪ್ರಸಾದಿ ಮಹದೇವಯ್ಯಾದಿಗಳ ಶೂನ್ಯಸಂಪಾದನೆಗಳು, ಕಲ್ಲುಮಠದ ಪ್ರಭುದೇವನ ಲಿಂಗಲೀಲಾವಿಲಾಸ ಚಾರಿತ್ಯ್ರ ಮೊದಲಾದ ಸಂಪಾದನಾ ಗ್ರಂಥಗಳನ್ನು ನೋಡಿದರೆ; ಹರಿಹರ, ಚಾಮರಸ, ಎಳಂದೂರ ಹರಿಹರೇಶ್ವರ, ಸಿದ್ಧನಂಜೇಶ, ರಾಘವಾಂಕಾದಿಗಳ ಶರಣಚರಿತ್ರೆಯ ಕಾವ್ಯಗಳನ್ನು ನೋಡಿದರೆ, ಪಿ.ಸಿ.ಬ್ರೌನನ ಪ್ರಭುಲಿಂಗಲೀಲೆ ಅನುವಾದ, ಬಸವಕವಿಯ ಬಸವಪುರಾಣ ಅನುವಾದ ಇತ್ಯಾದಿಗಳನ್ನು ನೋಡಿದರೆ; ಹಿರಣ್ಯಗರ್ಭನ ವಿಶ್ವಕೃತಿ ಪರೀಕ್ಷಣಂ, ದೇವಚಂದ್ರನ ರಾಜಾವಳಿ ಕಥಾಸಾರಗಳನ್ನು ನೋಡಿದರೆ ನಮ್ಮಲ್ಲಿ ಸಾಹಿತ್ಯದ ಅನುಸಂಧಾನವು ಹೇಗೆಲ್ಲ ನಡೆದಿದೆ ಎಂಬುದು ತಿಳಿಯುತ್ತದೆ. ಅಲ್ಲದೆ ನಮ್ಮ ಯಕ್ಷಗಾನಗಳು, ಗಮಕಗಳು, ತಾಳಮದ್ದಲೆಗಳು, ಕೇಳಿಕೆಗಳು, ತತ್ವಕ್ಕೆ ಹಾಕುವುದು, ಬಯಲಾಟಗಳು, ಹರಿಕತೆಗಳು ಇತ್ಯಾದಿ ಪ್ರದರ್ಶನ ಕಲೆಗಳು ಮತ್ತು ಆಚಾರಗಳೊಂದಿಗಿನ ಸಾಹಿತ್ಯದ ಸಂಬಂಧಗಳನ್ನು ನೋಡಿದರೆ ನಮ್ಮ ಸಾಹಿತ್ಯದ ಅನುಸಂಧಾನ ಹೇಗೆಲ್ಲ ನಡೆದಿದೆ ಎಂಬುದು ತಿಳಿಯುತ್ತದೆ.
ಹೀಗೆ ಈ ಸಾಹಿತ್ಯದ ಅನುಸಂಧಾನದ ಪರಂಪರೆಗಳಲ್ಲಿ ಅನೇಕ ಬಗೆಯಲ್ಲಿ ಸಾಹಿತ್ಯವನ್ನು ಬಾಳಿಗೆ ಎತ್ತಿಕೊಳ್ಳುವ ವಿಮರ್ಶಾ ವಿನ್ಯಾಸಗಳಿವೆ. ಆದರೆ ಶೈಕ್ಷಣಿಕವಾಗಿ ಸಾಹಿತ್ಯವನ್ನು ಓದುವ, ವಿಮರ್ಶಿಸುವ ಆಚಾರದಲ್ಲಿ ಈ ರೀತಿಯ ಪಾರಂಪರಿಕ ವಿಮರ್ಶಾ ವಿನ್ಯಾಸಗಳಿಂದ ನಾವಿಂದು ಬಹಳ ದೂರ ಬಂದಿದ್ದೇವೆ. ಸಾಹಿತ್ಯವನ್ನು ಬಾಳಿನೊಂದಿಗೆ ಅನುಸಂಧಾನ ಮಾಡುವ ನಮ್ಮ ಜನಪದರ ಆಚಾರಗಳನ್ನು ಅಸಡ್ಡೆ ಮಾಡುತ್ತಿದ್ದೇವೆ. ವಿಮರ್ಶೆ ಎಂದರೆ ಸಾಹಿತ್ಯದ ಅನುಸಂಧಾನ ಎನ್ನುವುದಕ್ಕಿಂತ ಸಾಹಿತ್ಯವನ್ನು ಬೆಲೆಕಟ್ಟುವುದು, ದೋಷ ಹುಡುಕುವುದು, ಪರಿಭಾಷೆ-ಪರಿಕಲ್ಪನೆಗಳ ಕಗ್ಗಾಡನ್ನು ಸೃಷ್ಟಿಸುವುದು ಎಂಬ ಹಂತಕ್ಕೆ ಬಂದು ನಿಂತಿದ್ದೇವೆ. ಬಹುಮುಖಿಯಾದ ಪರಂಪರೆಯ ಅನುಸಂಧಾನದ ವಿನ್ಯಾಸಗಳನ್ನು ಆಂಗ್ಲಪ್ರಣೀತ ತತ್ವ ಸಿದ್ಧಾಂತಗಳ ಹಾವಳಿಯಲ್ಲಿ ಮರೆವಿಗೆ ಸರಿಸಿದ್ದೇವೆ. ಯಾಕೆ ಹೀಗಾಯಿತು? ವಿಮರ್ಶೆಯು ಸಾಮಾಜಿಕ ಸ್ತರದಿಂದ ಶೈಕ್ಷಣಿಕ ಶಿಸ್ತಾಗಿ ಮಾತ್ರವೆ ಹೊರಳಿಕೊಂಡ, ಯೂನಿವರ್ಸಿಟಿ-ಕಾಲೇಜು ವಿಚಾರಗೋಷ್ಠಿಗಳ ವಿದ್ವಾಂಸ ಮಹಾಶಯರ ಬೌದ್ಧಿಕ ಚಟುವಟಿಕೆಯಾಗಿ ಹೊರಳಿಕೊಂಡ ಪರಿಣಾಮವೆ ಇದಾಗಿದೆ. ಬಹುಪರಂಪರೆಗಳ ಏಕರೂಪೀಕರಣ ಮತ್ತು ಶೈಕ್ಷಣಿಕ ಶಿಸ್ತೀಕರಣಗಳ ಪರಿಣಾಮವೆ ಇದಾಗಿದೆ.
5. ಸಾಹಿತ್ಯಗಳನ್ನು ಸೃಜನಶೀಲ, ಸೃಜನೇತರ ಎಂದು ವಿಂಗಡಿಸುವುದು ತರವೆ? ವಿಮರ್ಶೆಯು ಸೃಜನೇತರವೋ?
ವಿಮರ್ಶೆಯು ಸೃಜನಶೀಲವೋ ಸೃಜನೇತರವೋ ಎಂಬ ಸಲ್ಲದ ಸಂದಿಗ್ಧವೊಂದು ಕೂಡ ನಮ್ಮಲ್ಲಿ ಚಲಾವಣೆಯಲ್ಲಿದೆ. ಇದೊಂದು ಅಪ್ರಸ್ತುತವಾದ ಸಂದಿಗ್ಧತೆ. ನಮ್ಮ ಆಧುನಿಕ ಕಾಲದಲ್ಲಿ ಸೃಷ್ಟಿಯಾದ ವಿಮರ್ಶೆ ಎಂದರೆ ಏನು? ಎಂಬುದರ ಕುರಿತ ವಿಮರ್ಶೆಯ ಪರಿಕಲ್ಪನೆಯ ಬಗೆಗಿನ ಅಪಕಲ್ಪನೆಗಳೇ ಈ ಸಂದಿಗ್ಧತೆ ಉಂಟಾಗಲು ಕಾರಣವಾಗಿವೆ. ಪ್ರಾಥಮಿಕವಾಗಿ ಸೃಜನಶೀಲ ಮತ್ತು ಸೃಜನೇತರ ಎಂಬ ಕಲ್ಪನೆಗಳನ್ನೆ ಒಪ್ಪಲಾಗುವುದಿಲ್ಲ. ಹಾಗೊಂದು ವೇಳೆ ಒಪ್ಪಿದರೂ ವಿಮರ್ಶೆಯು ಸೃಜನಶೀಲವೂ ಹೌದು, ಸೃಜನೇತರವೂ ಹೌದು ಎಂದೇ ಹೇಳಬೇಕಾಗುತ್ತದೆ. ವಿಮರ್ಶೆ ಎಂದರೆ ಕೇವಲ ಬರವಣಿಗೆ ರೂಪದ; ಅಕಾಡೆಮಿಕ್ಕಾದ ಸಾಹಿತ್ಯದ ಕುರಿತ ಪ್ರತಿಕ್ರಿಯೆ ಅಲ್ಲ; ಟೀಕು, ಪಾರಾಯಣ, ಕೇಳಿಕೆ, ಇತ್ಯಾದಿಗಳೆಲ್ಲ ಇದರ ಕಕ್ಷೆಯಲ್ಲೇ ಬರುತ್ತವೆ. ವಿಮರ್ಶೆಯು ಸಂಸ್ಕೃತಿ; ಶಿಸ್ತು; ಸಾಂಸ್ಕೃತಿಕ ಆಚಾರ ಎಂದೆಲ್ಲ ತಿಳಿದಾಗ ಅದು ಸೃಜನಶೀಲವೋ, ಸೃಜನೇತರವೋ ಎಂಬ ಬೈನರಿ ಸಂದಿಗ್ಧವೇ ಉದ್ಭವಿಸುವುದಿಲ್ಲ.
ವಿಮರ್ಶೆ ಎಂದರೆ ಸಾಹಿತ್ಯದ ಓದು ಎಂಬ ನಂಬಿಕೆಯೂ ನಮ್ಮಲ್ಲಿ ಚಾಲ್ತಿಯಲ್ಲಿ ಇದೆ. ಹಾಗಾಗಿಯೆ ವಿಮರ್ಶೆಯನ್ನು ಓದಿನ ದಾರಿ ಎಂದೂ ಕರೆಯುವ ವಾಡಿಕೆ ಇದೆ. ಇಂತಹ ಕಡೆ ಸಾಹಿತ್ಯವನ್ನು ಅಧ್ಯಯನ, ಅಭ್ಯಾಸ ಮಾಡುವ ಒಂದು ಸಾಧನವಾಗಿ ವಿಮರ್ಶೆಯನ್ನು ನೋಡಲಾಗುತ್ತದೆ. ವಿಮರ್ಶೆ ಕೂಡ ಒಂದು ಪ್ರಜ್ಞೆಯಾಗಿ ಎಲ್ಲ ಬಗೆಯ ಬರವಣಿಗೆಗಳಲ್ಲು ಇರಬಲ್ಲುದು ಎಂಬ ತಿಳಿವು ಕುಗ್ಗುತ್ತಿದೆ.
ಸಾಹಿತ್ಯ ವಿಮರ್ಶೆ ಮತ್ತು ಸಮಾಜವಿಮರ್ಶೆಗಳು ಬೇರೆಯಲ್ಲದಂತೆ ಬೆರೆತುಹೋಗುವ ಬರವಣಿಗೆಗಳು ನಮ್ಮಲ್ಲಿ ಸಾಕಷ್ಟು ಸಂಭವಿಸಿವೆ. ಸಾಹಿತ್ಯವಿಮರ್ಶೆ ಎಂಬುದು ಕೂಡ ಸೃಜನಶೀಲವೆ. ಒಂದೊಂದು ಓದೂ ಸೃಜನಶೀಲವೆ. ಸೃಜನಗುಣ ಇಲ್ಲದೆ ಯಾವುದೆ ಒಳನೋಟವಾದಿ ಬರವಣಿಗೆ ಸಂಭವಿಸಲಾರದು. ಅಷ್ಟೆ ಅಲ್ಲದೆ; ಸಾಹಿತ್ಯದ ಗುಣ-ಅವಗುಣಗಳನ್ನು ಮಾತ್ರವೆ, ಸಾಹಿತ್ಯದ ರಾಚನಿಕತೆಯ ಚರ್ಚೆಯನ್ನು ಮಾತ್ರವೆ ತಮ್ಮ ಚರ್ಚೆಯ ಕೇಂದ್ರ ಮಾಡಿಕೊಳ್ಳದೆ ಸಾಹಿತ್ಯದ ಆಚೆಗೂ ಹಲವಾರು ಪ್ರಬಂಧಗಳು ತಾತ್ವಿಕ ಚರ್ಚೆಯನ್ನು ಬೆಳೆಸಿವೆ. ಒಡನಾಟ ಕಥನಗಳಲ್ಲಿ, ಸಂಶೋಧನಾ ಅಧ್ಯಯನಗಳಲ್ಲು ಅಂತಹ ಸೃಜನಶೀಲ ಮತ್ತು ಸೃಜನೇತರ ಎಂಬ ಗಡಿಗೆರೆಗಳನ್ನು ಮೀರುವ ಯತ್ನಗಳು ಸಾಕಷ್ಟು ಇರುವುದನ್ನು ಕಾಣಬಹುದು. ವಿಮರ್ಶೆಯ ತತ್ವ ಕೂಡ ನಮ್ಮಲ್ಲಿ ಸಾಕಷ್ಟು ಸೃಷ್ಟಿಯಾಗಿದೆ. ಅಂತಹ ತತ್ವವನ್ನು ಗಮನಿಸಿದರೆ ಅದು ಸಾಹಿತ್ಯದ ಸೃಷ್ಟಿಮೀಮಾಂಸೆ ಮತ್ತು ವಿಮರ್ಶೆಯ ಸೃಷ್ಟಿಮೀಮಾಂಸೆ ಎರಡನ್ನೂ ತನ್ನ ಒಡಲಾಗಿ ಬೆಳೆಸಿರುವುದನ್ನು ಕಾಣಬಹುದು.
6. ವಿಮರ್ಶೆ ಸಾಹಿತ್ಯದ ಉಪ ಉತ್ಪನ್ನವೆ? ಪ್ರಕಾರಗಳ ತರತಮ ನಿರ್ವಚನ ಸಾಧುವೆ?
ಖಂಡಿತಾ ಅಲ್ಲ. ಸಾಹಿತ್ಯದ ಹೊರತಾಗಿಯೂ ವಿಮರ್ಶೆಗೆ ಹಲವು ಬಗೆಯ ಚಾಚುಗಳು ಇವೆ. ಕನ್ನಡದಲ್ಲಿ ಸಾಹಿತ್ಯ ವಿಮರ್ಶೆಯು ಸಾಹಿತ್ಯದ ತತ್ವ, ಬರವಣಿಗೆಯ ಆಚಾರಗಳನ್ನು ನಿರ್ದೇಶಿಸುವ, ರೂಪಿಸುವ ಕೆಲಸವನ್ನೂ ಮಾಡಿದೆ. ಅಲ್ಲದೆ ಸಮಾಜದ, ಪರಂಪರೆಗಳ, ಸಂಸ್ಕೃತಿಯ ಕುರಿತ ಚಿಂತನೆಗಳೂ ಇಲ್ಲಿವೆ. ಸಂಸ್ಕೃತಿ ಚಿಂತಕರು ಎಂದು ವಿಮರ್ಶಕರನ್ನು ಕರೆಯುವ ವಾಡಿಕೆ ಕೂಡ ನಮ್ಮಲ್ಲಿದೆ. ಹಾಗಾಗಿ ಸಾಹಿತ್ಯದ ಉಪ ಉತ್ಪನ್ನ ಮಾತ್ರವಾಗಿ ವಿಮರ್ಶೆಯನ್ನು ನೋಡುವ ಅಗತ್ಯವಿಲ್ಲ. ಆದರೆ ವಿಮರ್ಶೆಯನ್ನು ನಮ್ಮಲ್ಲಿ ಸಾಹಿತ್ಯದ ಉಪಉತ್ಪನ್ನ ಎಂದು ಬ್ರಾಂಡು ಮಾಡುವ ಮತ್ತು ಆ ಮೂಲಕ ವಿಮರ್ಶೆಯನ್ನು ಎರಡನೆ ದರ್ಜೆಯ ಬರಹ ಎಂದು ಭಾವಿಸುವಂತೆ ಮಾಡುವ ಕೆಲಸ ಪರೋಕ್ಷವಾಗಿ ನಡೆಯುತ್ತಿದೆ. ಸೃಜನಶೀಲ ಮತ್ತು ಸೃಜನೇತರ ಎಂಬ ವರ್ಗೀಕರಣಗಳೂ ತರತಮ್ಯ ನಿರ್ವಚನದ ಕೆಲಸವನ್ನೆ ಮಾಡುತ್ತಿವೆ. ಪ್ರಶಸ್ತಿ, ಪುರಸ್ಕಾರ, ಮಾನ್ಯತೆ ಮತ್ತು ಓದುಗಾರಿಕೆ ವಿಚಾರ ಬಂದಾಗಲು ವಿಮರ್ಶೆಗೆ ಕಾವ್ಯ, ಕಥನ, ನಾಟಕಗಳಿಗೆ ಇರುವ ಸ್ಥಾನ ಇಲ್ಲ. ಇದೆಲ್ಲವೂ ವಿಮರ್ಶೆ ಎಂಡೇಜರ್ಡ್ ಆಗಲು ಕಾರಣವಿರಬಹುದು.
ವಿಮರ್ಶೆ ಎಂದರೆ ಅದು ಸಾಹಿತ್ಯ ವಿಮರ್ಶೆಯೇ ಎಂದು ನಮ್ಮವರು ಭಾವಿಸುತ್ತಾರೆ. ಆದರೆ ಹಾಗೆ ಭಾವಿಸುವ ಅಗತ್ಯ ಕೂಡ ಇಲ್ಲ. ಎಲ್ಲ ವಿಮರ್ಶೆಯೂ ಸಾಹಿತ್ಯ ವಿಮರ್ಶೆಯೆ ಆಗಿರುವುದಿಲ್ಲ. ಅಲ್ಲದೆ ಸಾಹಿತ್ಯ ವಿಮರ್ಶೆ ಎನ್ನುವುದು ಸದಾ ಸಾಹಿತ್ಯದ ಉಪಉತ್ಪನ್ನವೆಂಬಂತೆಯೆ ನೋಡುವ ಅಗತ್ಯ ಕೂಡ ಇಲ್ಲ. ಸಾಹಿತ್ಯದ ಓದು ಮತ್ತು ಅದರ ಮಂಡನೆ, ಸಾಹಿತ್ಯದ ಅರ್ಥಗ್ರಹಿಕೆ, ವ್ಯಾಖ್ಯಾನ ಮತ್ತು ಅದರ ಮಂಡನೆ ಇವೆಲ್ಲವೂ ಸಾಹಿತ್ಯ ವಿಮರ್ಶೆಯಲ್ಲಿ ಇರುತ್ತವೆ. ಆದಾಗ್ಯೂ ಅದೆ ಸಾಹಿತ್ಯ ವಿಮರ್ಶೆಯ ಸರ್ವಾಂಗ ಅಲ್ಲ. ಎಲ್ಲ ಸಾಹಿತ್ಯದ ಪ್ರಕಾರಗಳ ಒಳಗೂ ವಿಮರ್ಶಾ ಪ್ರಜ್ಞೆ ಎಂಬುದೊAದು ಇರುತ್ತದೆ. ಆ ಪ್ರಜ್ಞೆಯೆ ಸಮಾಜ ವಿಮರ್ಶೆಯಾಗಿ ಸಂಭವಿಸುತ್ತಿರುತ್ತದೆ. ಅಂತಹದ್ದನ್ನು ವಿಮರ್ಶೆಯು ವಿಮರ್ಶೆ ಮಾಡುತ್ತ ಇರುತ್ತದೆ. ಹಾಗಾಗಿ ಇದು ವಿಮರ್ಶೆಯ ವಿಮರ್ಶೆಯೂ ಹೌದು.
ಹಾಗೆ ನೋಡಿದರೆ ಸಾಹಿತ್ಯ ಪ್ರಕಾರಗಳ ವಿಚಾರದಲ್ಲಿ ನಮ್ಮಲ್ಲಿ ತರತಮ ನಿರ್ವಚನ ಇದೆ. ಕಾವ್ಯ ಪ್ರಕಾರವು ಎಲ್ಲ ಪ್ರಕಾರಗಳಿಗಿಂತ ಶ್ರೇಷ್ಠವಾದುದು ಎಂಬ ಅನೌಪಚಾರಿಕೆ ನಂಬಿಕೆಯೊಂದು ನಮ್ಮಲ್ಲಿದೆ. ಕಥನ, ನಾಟಕಗಳ ನಂತರದ ಸ್ಥಾನವನ್ನು ವಿಮರ್ಶೆಗೆ ನೀಡಲಾಗಿದೆ. ಇದೆಲ್ಲ ಸಾಮಾಜಿಕ ತಾರತಮ್ಯದ ಭಾಗ. ನಾನೃಷಿ ಕೃತೇ ಕಾವ್ಯಂ ಎಂಬ ಹಳೆ ನಂಬಿಕೆಗಳ ಹೊಸ ಅವತಾರಗಳ ಭಾಗ. ಇಂತಹ ಪ್ರಕಾರಗಳ ತರತಮ ನಿರ್ವಚನ ಮತ್ತು ಆಚಾರ ಸಲ್ಲದು.
7. ಸಾಹಿತ್ಯಗಳ ವಿಮರ್ಶೆಯಲ್ಲಿ ತಾರತಮ್ಯ ಇದೆಯೆ?
ಆಧುನಿಕ ಯುಗದಲ್ಲಿ ಆರಂಭಕ್ಕೆ ನಿಯತಕಾಲಿಕೆಗಳು ಮತ್ತು ಕಿರು ಸಾಹಿತ್ಯ ಪತ್ರಿಕೆಗಳು ಕೂಡ ಸಾಹಿತ್ಯ ಮತ್ತು ವಿಮರ್ಶೆಯ ಸೃಷ್ಟಿಗೆ ತಮ್ಮದೇ ಕೊಡುಗೆ ನೀಡುತ್ತ ಬಂದಿವೆ. ನೀಡುತ್ತಿವೆ. ಇಂದು ಸೃಷ್ಟಿಯಾಗುತ್ತಿರುವ ಎಲ್ಲ ಬಗೆಯ ವಿಮರ್ಶೆಗಳಲ್ಲಿ ನಮ್ಮ ಪ್ರತಿಷ್ಠಿತ ಸಾಹಿತ್ಯ ಮಾತ್ರವೆ ಹೆಚ್ಚು ಗಮನಕ್ಕೆ ಪಾತ್ರವಾಗುತ್ತಿರುವುದು ಎದ್ದು ಕಾಣುತ್ತದೆ. ಶಾಸನಗಳಿಂದ ಪಂಪ ರನ್ನರಿಂದ ಹಿಡಿದು ಇಂದಿನವರೆಗಿನ ಪ್ರಿತಿಷ್ಠಿತ ಸಾಹಿತ್ಯ ಮಾತ್ರವೆ ವಿಮರ್ಶೆಗೆ ಗುರಿಯಾಗುತ್ತಿದೆ. ವಿಮರ್ಶೆಯ ಪ್ರಮಾಣವನ್ನು ತೌಲನಿಕವಾಗಿ ಗಮನಿಸಿದರೆ ನಮ್ಮ ಚಿತ್ರಸಾಹಿತ್ಯ, ಸುಗಮಸಾಹಿತ್ಯ, ಶಿಶುಸಾಹಿತ್ಯ, ಜನಪ್ರಿಯ ಸಾಹಿತ್ಯಗಳು ಬಹುಪಾಲು ಅಸ್ಪೃಶ್ಯವೆಂಬAತೆ ವಿಮರ್ಶೆಯ ಗರ್ಭಗುಡಿಯಾಚೆ ಇಡಲ್ಪಟ್ಟಿವೆ. ೬೦ರ ದಶಕದ ನಂತರ ಜನಪದ ಸಾಹಿತ್ಯವನ್ನು ಸ್ವಲ್ಪ ಮಟ್ಟಿಗೆ ವಿಮರ್ಶೆಯು, ವಿಮರ್ಶಾತ್ಮಕ ಅಧ್ಯಯನವು (ಸಂಶೋಧನೆಯು) ಒಳಗೊಳ್ಳುತ್ತ ಬಂದಿದೆ. ಒಳಗೊಂಡರೂ ಅದರಲ್ಲು ಬಹುಪಾಲು ಶಿಷ್ಟ ಸಾಹಿತ್ಯದೊಂದಿಗಿನ ತುಲನೆಯಲ್ಲಿ ತರತಮ ಮೌಲ್ಯಮಾಪನಕ್ಕೆ ಗುರಿಯಾಗುತ್ತ ಬಂದಿದೆ! ಯಾಕೆ ಹೀಗೆ? ನಮ್ಮ ವಿಮರ್ಶೆಯ ಪರಿಕಲ್ಪನೆಯಲ್ಲೆ ತೊಡಕುಗಳು ಇರುವುದರಿಂದ ಹೀಗಾಗುತ್ತಿದೆ. ಶಿಕ್ಷಣವ್ಯವಸ್ಥೆಯಲ್ಲಿ ಭಾಷೆಯ ಹೆಸರಿನಲ್ಲಿ ಮತ್ತು ಸಾಹಿತ್ಯದ ಕಲಿಕೆಯ ಹೆಸರಿನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಲಿಕೆಯ ಹೇರಿಕೆ ಮತ್ತು ಯಜಮಾನಿಕೆ ಹಾಗೂ ಸಾಹಿತ್ಯ ಜಗತ್ತಿನಲ್ಲಿ ಇರುವ ಸೋ ಕಾಲ್ಡ್ ಸಾಹಿತ್ಯ ಎಂದರೇನು ಎಂಬ ಕುರಿತ ಆಚಾರ ಮತ್ತು ನಂಬಿಕೆಗಳೇ ಇದಕ್ಕೆ ಕಾರಣ.
8. ಪೂರ್ವಾಗ್ರಹವಿಲ್ಲದ ವಿಮರ್ಶೆ ಸಾಧ್ಯವೆ?
ವಿಮರ್ಶಕ ಕೂಡ ಎಲ್ಲರಂತೆ ಸಾಮಾನ್ಯ ಮನುಷ್ಯ. ಹುಲುಮಾನವ. ಅವನಿಗು ಹಸಿವು, ಬಾಯಾರಿಕೆ, ಇರುತ್ತವೆ. ವಿಮರ್ಶಕನೇನೂ ಆಕಾಶದಿಂದ ಉದುರಿದವನಲ್ಲ. ಸ್ವಜನ ಪಕ್ಷಪಾತವಿಲ್ಲದ, ಧರ್ಮನಿರಪೇಕ್ಷವಾದ, ವ್ಯಾಲ್ಯೂ ನೂಟ್ರಂಟ್ ಆದ, ಜಂಡರ್ ನ್ಯೂಟ್ರಂಟ್ ಆದ, ಪೂರ್ವಾಗ್ರಹವಿಲ್ಲದ ಬರಹವನ್ನು ವಿಮರ್ಶಕ ಮಾಡಬೇಕು ಎಂಬುದು ಅಪೇಕ್ಷಿತವೇ ಆದಾಗ್ಯೂ ಅದು ಹಾಗೆ ಸುಲಭಸಾಧ್ಯವಲ್ಲ. ಕಾಲ ದೇಶ ಲಿಂಗ ಪಂಥಗಳಿಂದ ಬಿಡುಗಡೆ ಹೊಂದುವುದು ತೀರಾ ಆದರ್ಶದ ಸ್ಥಿತಿ. ಹಾಗೆ ನೋಡಿದರೆ ಸಂಶೋಧನೆಗೆ ಇರುವ ಎಲ್ಲ ಮಿತಿಗಳು ವಿಮರ್ಶೆಗೂ ಒದಗುತ್ತವೆ. ಹಾಗಾಗಿ ಎಲ್ಲರಿಗು ಒಪ್ಪಿತವಾಗುವ, ಸರ್ವಜನಹಿತಾಯ ಸರ್ವಜನಸುಖಾಯ ಎಂಬಂತೆ ವಿಮರ್ಶೆ ಬರೆಯಲು ಸಾಧ್ಯವಿಲ್ಲ. ಸಮಾಜದ ಬಿಂಬವೆ ವಿಮರ್ಶೆ ಆಗಿರುವುದರಿಂದ ಅಲ್ಲಿರುವ ಮಿತಿಗಳು ಇಲ್ಲಿಯೂ ಇರುತ್ತವೆ. ಪೂರ್ವಾಗ್ರಹವಿಲ್ಲದೆ ವಿಮರ್ಶೆ ಸಂಭವಿಸಬೇಕು ಎಂಬುದು ಆದರ್ಶ. ಆದರೆ ಆಚಾರದಲ್ಲಿ ಅದು ವಾಸ್ತವವಲ್ಲ.
ಕೆಲವು ವಿಮರ್ಶೆಗಳಲ್ಲಿ ಇಂತಹ ಪೂರ್ವಾಗ್ರವಿಲ್ಲದ ಸ್ಥಿತಿಯನ್ನು ಸಾಧಿಸುವ ಪ್ರಜ್ಞಾಪೂರ್ವಕ ಎಚ್ಚರ ಇರಬಹುದು. ಆದಾಗ್ಯೂ ಯಾವ ಬರಹವೂ ತನ್ನದೆ ಸಾಂಸ್ಕೃತಿಕ ರಾಜಕಾರಣವಿಲ್ಲದೆ ನಿರ್ವಾತದಲ್ಲಿ ಸಂಭವಿಸುವುದಿಲ್ಲ. ಇದು ವಿಮರ್ಶೆಗೂ ಅನ್ವಯಿಸುತ್ತದೆ. ಪಾಂಥಿಕವಾದ, ವಾರ್ಗಿಕವಾದ ಅಪಸವ್ಯಗಳು ಇರುವಾಗ ಹಾಗೆ ನೂಟ್ರಲ್ ಆಗಿ ಇರುವುದು ಅಗತ್ಯವೂ ಇಲ್ಲ. ವಿರೋಧಿಸುವುದನ್ನು ಮುಲಾಜಿಲ್ಲದೆ ವಿರೋಧಿಸಲೇಬೇಕಾಗುತ್ತದೆ. ಅಪಕಲ್ಪನೆಗಳನ್ನು ನಿರ್ದಾಕ್ಷಿಣ್ಯವಾಗಿ ನಿರಾಕರಿಸಲೇ ಬೇಕಾಗುತ್ತದೆ. ಹಾಗಾದಾಗ ಕೆಲವರಿಗೆ ಸಮಾಜಿಕ ನ್ಯಾಯದ ಮಾತುಗಳು ಪೂರ್ವಾಗ್ರಹಪೀಡಿತ ಎಂಬಂತೆಯೂ ಕಾಣಬಹುದು. ಹಾಗೆ ನೋಡಿದರೆ ವಿಮರ್ಶೆಯಲ್ಲಿ ಸಾಂದರ್ಭಿಕತೆಯ ರಾಜಕಾರಣ ಮತ್ತು ಸಂಬಂಧಿಕತೆಯ ರಾಜಕಾರಣಗಳಿಂದ ತಪ್ಪಿಸಿಕೊಂಡು ಬರೆಯುವುದು ಸವಾಲೇ ಹೌದು.
ಕೆಲವರು ತಮ್ಮ ಜಾತಿ, ಸ್ನೇಹ, ಲಿಂಗ, ಪ್ರದೇಶ ಇತ್ಯಾದಿಗಳ ಓಲುವೆಯಿಂದ ಕೆಲವರನ್ನು ಜೈಕಾರದ ದೃಷ್ಟಿಯಲ್ಲೆ ನೋಡಬಹುದು. ಇದೊಂದು ಸಂಬಂಧಿಕತೆಯ ರಾಜಕಾರಣ. ಇದರಿಂದ ತಪ್ಪಿಸಿಕೊಳ್ಳುವುದು ಬಹು ಪ್ರಯಾಸದ ಕೆಲಸ. ಆದರೆ ಅಸಾಧ್ಯವೇನೂ ಅಲ್ಲ. ಕೆಲವೊಮ್ಮೆ ಅಭಿನಂದನಾ ಸಮಾರಂಭದಲ್ಲಿ ಮಾತಾಡುವಾಗ, ಹುಟ್ಟು ಹಬ್ಬದ ಆಚರಣೆ (ಲೇಖಕರಿಗೆ 50 ವರ್ಷ 75 ವರ್ಷ ತುಂಬಿದಾಗ ಮಾಡುವ ಅಭಿನಂದನೆಗಳ) ಸಂದರ್ಭದಲ್ಲಿ ವಿಮರ್ಶೆ ಮಾಡುವಾಗ ಕೆಲವು ರೀತಿಯ ಗುಣಗಾನ ಧಾಟಿಯ ವಿಮರ್ಶೆ ಸಂಭವಿಸಬಹುದು. ಇಂಥದ್ದನ್ನು ಸಾಂದರ್ಭಿಕತೆಯ ರಾಜಕಾರಣ ಎನ್ನಬಹುದು. ಇವೆರಡರಿಂದಲು ವಿಮರ್ಶೆ ತಪ್ಪಿಸಿಕೊಳ್ಳುವುದು ಒಂದು ಸವಾಲು.
9. ಕನ್ನಡದಲ್ಲಿ ಇರುವುದು ಜೈ ಮತ್ತು ಬೈ ಎರಡೇ ವಿಮರ್ಶೆಗಳಾ?
ಒಂದು ಶೈಕ್ಷಣಿಕ ಅಧ್ಯಯನ ಶಿಸ್ತಾಗಿ ಮಾತ್ರವಲ್ಲ, ಒಂದು ಸಾಹಿತ್ಯದ ಅನುಸಂಧಾನದ ಆಚಾರವಾಗಿ ಕೂಡ ನಮ್ಮ ವಿಮರ್ಶೆ ರೂಪಗೊಂಡಿದೆ. ನಮ್ಮಲ್ಲಿನ ವಿಮರ್ಶೆಯನ್ನು ಜೈ ವಿಮರ್ಶೆ, ಬಯ್ ವಿಮರ್ಶೆ ಮತ್ತು ಅಲಿಪ್ತ ವಿಮರ್ಶೆ ಎಂದು ಮೂರು ಬಗೆಯಾಗಿ ವಿಂಗಡಿಸಿ ನೋಡಲು ಸಾಧ್ಯ. ಕನ್ನಡದಲ್ಲಿ ಇರುವುದು ಎರಡೇ ಬಗೆಯ ವಿಮರ್ಶೆ: ಒಂದು ಜೈಜೈ ವಿಮರ್ಶೆ ಇನ್ನೊಂದು ಬಯ್ ಬಯ್ ವಿಮರ್ಶೆ ಎಂದು ಕೆಲವರು ಇದನ್ನು ತಮಾಶೆಯಾಗಿ ಹೇಳುವುದೂ ಉಂಟು. ಜೈ ಎಂದರೆ ಲೇಖಕರನ್ನು ಕೃತಿಯನ್ನು ಸಿಕ್ಕಾಪಟ್ಟೆ ಹೊಗಳುವುದು. ಬಯ್ ಎಂದರೆ ಸದಾ ಬೈಯ್ದುಕೊಂಡೆ ಇರುವುದು. ಇವೆರಡೂ ಸಾಕಷ್ಟು ಕನ್ನಡದಲ್ಲಿ ಇವೆ ಮಾತ್ರ. ಸಂಬಂಧಿಕತೆಯ ಮತ್ತು ಸಾಂದರ್ಭಿಕತೆಯ ರಾಜಕಾರಣದಲ್ಲಿ ಇಂಥವು ಸಂಭವಿಸುವುದು ಹೆಚ್ಚು. ಕುವೆಂಪು ಬಗೆಗೆ ಬಂದಿರುವ ವಿಮರ್ಶೆಯನ್ನು ಗಮನಿಸಿದರೆ ಇಂತಹ ಸಂಬಂಧಿಕತೆಯ ಜೈ ವಿಮರ್ಶೆ, ಮತ್ತು ಸಾಂದರ್ಭಿಕತೆ ಜೈ ವಿಮರ್ಶೆಗಳು ಹಾಗೆಯೆ ಬೈ ವಿಮರ್ಶೆಗಳೂ ಸಾಕಷ್ಟು ಸೃಷ್ಟಿಯಾಗಿರುವುದನ್ನು ಕಾಣಬಹುದು.
ಗುಣಗ್ರಹಣ ಮಾತ್ರವೆ ವಿಮರ್ಶೆಯ ಕಾರ‍್ಯ; ಕೃತಿ ರಚನೆ, ತಾತ್ವಿಕತೆಯ ದೋಷಗಳನ್ನು ಎತ್ತಿ ತೋರುವುದು ವಿಮರ್ಶೆಯ ಕೆಲಸ ಅಲ್ಲ; ರಸಗ್ರಹಣ ಮಾತ್ರ ಸಹೃದಯನ ಕಾರ್ಯ; ವಿಮರ್ಶಕನು ಸಹೃದಯನಾಗಿ ಮಾತ್ರ ಇರಬೇಕು; ಸಾಹಿತ್ಯವನ್ನು ಅವನು ಆಸ್ವಾದಿಸಬೇಕು, ವಿಮರ್ಶಿಸಬಾರದು ಎಂಬ ನಿಯಮಗಳನ್ನು ಕೆಲವೊಮ್ಮೆ ಹೇರಲಾಗುತ್ತದೆ. ಅಲ್ಲದೆ ವಿಮರ್ಶಕ ಪರೀಕ್ಷಕನಾಗಿ ಇರಬಾರದು ಎಂಬ ನಿರೀಕ್ಷೆ ನಮ್ಮಲ್ಲಿ ಇರುವಂತೆಯೆ ಟೀಕೆ ಮಾಡುವುದೆ ವಿಮರ್ಶೆಯ ಗುರಿ ಅಲ್ಲ; ದೋಷಗಳನ್ನು ಹುಡುಕುವುದೆ ವಿಮರ್ಶೆಯ ಕಾರ್ಯ ಅಲ್ಲ ಎಂಬ ಚಿಂತನೆಯೂ ನಮ್ಮಲ್ಲಿ ಇದೆ.
ಇತ್ತ ಸಂಪೂರ್ಣ ಗುಣ ಮಾತ್ರವನ್ನೆ ಗುರ್ತಿಸುವುದು ಅತ್ತ ಸಂಪೂರ್ಣ ದೋಷಗಳನ್ನು ಮಾತ್ರವೆ ಹುಡುಕುವುದು ವಿಮರ್ಶೆ ಅಲ್ಲ. ವಿಮರ್ಶೆಯಲ್ಲಿ ಸಮತೂಕ ಇರಬೇಕು. ಜಾತಿ, ಲಿಂಗ, ಧರ್ಮ, ಪಂಥ, ಪ್ರದೇಶಗಳ ಕುರಿತಾದ ಅಲಿಪ್ತತೆ, ನ್ಯೂಟ್ರಾಲಿಟಿ ಇರಬೇಕು ಎಂಬ ಅಪೇಕ್ಷೆಯೂ ನಮ್ಮಲ್ಲಿದೆ.
10. ವಿಮರ್ಶೆಯು ಅಕಾಡೆಮಿಕ್ಕಾಗಿ ಮಾತ್ರ ಉಪಯುಕ್ತವಾದುದೆ? ಅದು ಸಾಮಾಜಿಕವಾಗಿ ಉಪಯುಕ್ತವಾದುದಲ್ಲವೆ?
ವಿಮರ್ಶೆಯು ಅಕಾಡೆಮಿಕ್ಕಾಗಿ ಮಾತ್ರ ಉಪಯುಕ್ತವಾದುದು; ಅದು ಸಾಮಾಜಿಕವಾಗಿ ಉಪಯುಕ್ತವಾದುದಲ್ಲ ಎಂಬ ನಂಬಿಕೆಯೊಂದು ನಮ್ಮಲ್ಲಿದೆ. ವಿಮರ್ಶೆಯ ಸೃಷ್ಟಿ ಮತ್ತು ಅದರ ಕುರಿತಾದ ಅಧ್ಯಯನ ಕೂಡ ಸಾಮಾಜಿಕವಾಗಿ ಉಪಯುಕ್ತವಲ್ಲ ಎಂಬ ನಂಬಿಕೆ ನಮ್ಮಲ್ಲಿದೆ. ಅಷ್ಟೇ ಅಲ್ಲ, ವಿಜ್ಞಾನ ಮತ್ತು ಅನ್ವಯಿಕ ಶಾಸ್ತ್ರಗಳ ಅಧ್ಯಯನಗಳಿಗೆ ಇರುವಷ್ಟು ಉಪಯುಕ್ತತೆ ಸಾಹಿತ್ಯ ಸಂಬಂಧಿ ಸಂಶೋಧನೆ/ಮಾನವಿಕ ಸಂಶೋದನೆಗಳಿಗೆ ಇರುವುದಿಲ್ಲ ಎಂಬ ನಂಬಿಕೆಯೂ ನಮ್ಮಲ್ಲಿದೆ. ಸಮಾಜವನ್ನು ಕುರಿತಾದ ಯಾವುದೇ ಅಧ್ಯಯನವೂ ಅನುಪಯುಕ್ತ ಆಗಲಾರದು. ಜ್ಞಾನವ್ಯವಸ್ಥೆಗಳ ವೈವಿಧ್ಯತೆಯನ್ನು ಕಾಪಾಡಿಕೊಳ್ಳುವುದು ಜೀವವೈವಿಧ್ಯತೆಗಳನ್ನು ಕಾಪಾಡಿಕೊಳ್ಳುವಷ್ಟೇ ಮುಖ್ಯವಾದುದು. ಜ್ಞಾನಮೀಮಾಂಸೆಗಳ ಕುರಿತಾದ ಅಧ್ಯಯನ-ಜಿಜ್ಞಾಸೆಯು ಅನುಪಯುಕ್ತ ಎಂದು ಭಾವಿಸಲಾಗದು. ಅಲ್ಲದೆ, ನಾವು ಹರಿಕತೆ, ಟೀಕು-ವ್ಯಾಖ್ಯಾನ, ದಂತಕತೆ, ಪ್ರಕ್ಷಿಪ್ತ, ಸಂಗ್ರಹ, ಸಂಪಾದನೆ, ಅಧ್ಯಯನ-ಪಾರಾಯಣ, ಅಭಿನಂದನ, ಉತ್ಸವ-ವಿಚಾರಗೋಷ್ಠಿ-ಗಾಯನ-ಗಮಕಾದಿಗಳನ್ನು ವಿಮರ್ಶೆಯ ಕಕ್ಷೆಯಲ್ಲೆ ನೋಡಬೇಕು; ಆಗ ವಿಮರ್ಶೆಯನ್ನು ವಿಮರ್ಶಾ ಸಂಸ್ಕೃತಿ ಎಂದು ಗ್ರಹಿಸಬಹುದು. ಹಾಗಾದಾಗ ಇದಕ್ಕೊಂದು ಸಾಮಾಜಿಕತೆ ಇದ್ದೇ ಇದೆ.
11. ರಸಾನಂದ, ರಸಾಸ್ವಾದನೆ ಮಾತ್ರವೆ ಸಾಹಿತ್ಯದ ಅನುಸಂಧಾನದ ಗುರಿಯೆ?
ಖಂಡಿತಾ ಅಲ್ಲ. ಆನಂದ ಸಿದ್ಧಾಂತದ ರಸಾನಂದ, ಬ್ರಹ್ಮಾನಂದ ಕಲ್ಪನೆಗಳು ಸಾಹಿತ್ಯವನ್ನು ಕೇವಲ ರಂಜಕ ಸಾಮಗ್ರಿಯಾಗಿ, ಅನುಭವ ಸಾಧನವಾಗಿ ಭಾವಿಸುತ್ತವೆ; ಹಾಗಾಗಿ ಸಾಹಿತ್ಯವನ್ನು ಓದುವಾಗ ನಮಗೆ ಆನಂದ ಮಾತ್ರವಲ್ಲ; ಸಮಸ್ಯೆಯ ಸಾಗರವೂ ಅನಾಬರಣ ಆಗಬಹುದು. ಅಪಾರವಾದ ದುಃಖವೇ ಆಗಬಹುದು. ಆನಂದವೆಂದರೆ ರಸವೆಂದರೆ ಹಲವು ಬಗೆಯ ಭಾವಗಳ ಸ್ಥಾಯಿ ಮತ್ತು ಸಂಚಾರಿ ಅನುಭವ ಎಂಬ ವ್ಯಾಖ್ಯಾನ ಇದ್ದಾಗ್ಯೂ, ರಸಾಸ್ವಾದದ ಕಲ್ಪನೆಯೆ ಸಾಹಿತ್ಯವನ್ನು ಪ್ರಶ್ನಿಸದೆ ಆನಂದಿಸಬೇಕು ಮತ್ತು ಅದು ನಮ್ಮ ನಂಬಿಕೆಗಳನ್ನು ರೂಪಿಸಬಹುದಾದ ಸಾಧ್ಯತೆಗಳನ್ನು ಪ್ರಶ್ನಿಸಬಾರದು ಎಂಬ ರೂಲಿಂಗ್ ಇರುವಂತಿದೆ. ಸಾಮಾಜಿಕ ಅಸಮಾನತೆ, ಶೋಷಣೆ, ಲಿಂಗತಾರತಮ್ಯ, ಸಾವು ನೋವುಗಳನ್ನು ಆನಂದಿಸಲು ಸಾಧ್ಯವೆ? ಸಾಮಾಜಿಕ ನ್ಯಾಯದ ಪ್ರಶ್ನೆಗಳನ್ನು ಸಾಹಿತ್ಯದ ಓದು ನಮ್ಮಲ್ಲಿ ಹುಟ್ಟಿಸದೆ ಇದ್ದರೆ ಅದೆಂತಹ ಓದು? ಆನಂದದ ನೆಲೆಯಿಂದ ನೋಡುವುದಕ್ಕಿಂತ ಸಾಮಾಜಿಕ ನ್ಯಾಯದ ದೃಷ್ಟಿಯಿಂದ, ಸಾಮಾಜಿಕ ಬದಲಾವಣೆಯ ದೃಷ್ಟಿಯಿಂದ ಸಾಹಿತ್ಯವನ್ನು ನೋಡಬೇಕು ಎಂಬ ಜಿಜ್ಞಾಸೆಗಳೂ ನಮ್ಮಲ್ಲಿ ಮಂಡಿತವಾಗಿವೆ. ಸಾಹಿತಿಯನ್ನು ಋಷಿಯೆಂದು ಭಾವಿಸಿ, ದೇವರೆಂದು ಭಾವಿಸಿ ಆರಾಧಿಸುವ, ಪೂಜಿಸುವ ಅಗತ್ಯವಿಲ್ಲ. ಇದು ವಿಮರ್ಶೆಯ ಕೆಲಸ ಅಲ್ಲ; ವಿಮರ್ಶೆಯು ಸಾಹಿತ್ಯದ ರಾಜಕಾರಣವನ್ನು ಪರಿಶೀಲಿಸುವ ಕೆಲಸವನ್ನು ಮಾಡಬೇಕು ಎಂಬ ಚಿಂತನೆಗಳೂ ಇಲ್ಲಿ ಮಂಡಿತವಾಗಿವೆ. ನಟರಾಜ ಬೂದಾಳು, ರಹಮತ್ ತರೀಕೆರೆ, ಬಿ.ಎಂ. ಪುಟ್ಟಯ್ಯ, ಅರವಿಂದ ಮಾಲಗತ್ತಿ, ಮೊಗಳ್ಳಿ ಗಣೇಶ ಮೊದಲಾದವರ ವಿಮರ್ಶೆಗಳಲ್ಲಿ ಈ ಧೋರಣೆಗಳನ್ನು ಕಾಣಬಹುದು.
12. ವಿಮರ್ಶೆ ಎಂಡೇಜರ್ಡಾ?
ಜಾತಿ, ಲಿಂಗ, ಪ್ರಾದೇಶಿಕತೆ, ಸ್ವಜನಪಕ್ಷಪಾತದ ರಾಜಕಾರಣಗಳು; ಪಾಂಡಿತ್ಯ ಪ್ರದರ್ಶನ, ಕಡತಂದ ಅನ್ಯ ಸಿದ್ಧಾಂತಗಳ ಅನ್ವಯೀಕರಣಗಳು ಹೀಗೆ ಹತ್ತು ಹಲವು ಬಿಕ್ಕಟ್ಟುಗಳಿಂದ ನಮ್ಮ ವಿಮರ್ಶೆಯು ಇಂದು ಜರ್ಝರಿತವಾಗಿ ಹೋಗಿದೆ. ಇಂದು ಕೃತಿವಿಮರ್ಶೆ ಕೂಡ ಕೃತಿಯ ವಿಶ್ಲೇಷಣೆಗೆ ಅದರ ಒಳಗಿನಿಂದಲೆ ಓದಿನ ದಾರಿಗಳನ್ನು ಸೃಷ್ಟಿಸಿಕೊಳ್ಳದೆ ಅಥವಾ ಸ್ಥಳೀಯವಾಗಿಯೆ ಅದರ ವಿಮರ್ಶೆಯ ಹತಾರಗಳನ್ನು ಎತ್ತಿಕೊಳ್ಳದೆ ಅನ್ಯ ಸಿದ್ಧಾಂತಗಳನ್ನು ಅನ್ವಯಿಸುವ ಕಡೆಗೆ ಸಾಗುತ್ತಿದೆ. ಸಾಮಾಜಿಕ ವಾಸ್ತವಗಳನ್ನು, ಚಾರಿತ್ರಿಕ ಕಾರಣ-ಪರಿಣಾಮಗಳನ್ನು ಗಮನಿಸದೆ ಅನ್ಯ ಸಿದ್ಧಾಂತಗಳ ಅನ್ವಯೀಕರಣದಲ್ಲಿ ತೊಡಗಿದ್ದು ನಮ್ಮ ವಿಮರ್ಶೆಯ ದುರಂತವೆ ಸರಿ.
ತೌಲನಿಕ ವಿಮರ್ಶೆಯಾದರೋ ತರತಮ ತುಲನೆಯ ಕಡೆಗೇ, ಸ್ಥಾನೀಕರಣದ ಕಡೆಗೇ ಸಾಗುತ್ತಿದೆ. ವಿಮರ್ಶೆಯ ಕ್ಷೇತ್ರಕ್ಕೆ ಹೊಸದಾಗಿ ಬರುವ ಹಲವರಿಗೆ ಇಂದಿನ ಸಿದ್ಧಾಂತಗಳು-ಪರಿಭಾಷೆಗಳನ್ನು ತಿಳಿದುಕೊಳ್ಳುವುದರಲ್ಲೆ ಆಯುಷ್ಯ ಸೋರಿಹೋಗಬಹುದು ಎನ್ನಿಸುತ್ತಿದೆ. ಒಂದು ಕಡೆಯಿಂದ ಸಂಸ್ಕೃತದಿಂದ ಕಡ ತಂದ ಮೀಮಾಂಸಾ ಸಿದ್ಧಾಂತಗಳು ಇನ್ನೊಂದು ಕಡೆ ಇಂಗ್ಲಿಶಿನಿಂದ ದಾಳಿ ಮಾಡುತ್ತಿರುವ ಪರಿಭಾಷೆ, ಸಿದ್ಧಾಂತಗಳು ಇವೆಲ್ಲವುಗಳಿಂದ ಇಂದಿನ ವಿಮರ್ಶೆಯ ವಿದ್ಯಾರ್ಥಿ ಬಸವಳಿಯುವಂತೆ ಆಗಿದೆ. ಅಪಾರ ವಿದ್ವತ್ತು ಇರುವವರು ಮಾತ್ರವೆ ವಿಮರ್ಶೆ ಮಾಡಬಲ್ಲರು ಎಂಬಂತೆ ಆಗುತ್ತಿದೆ. ದುರಂತವೆಂದರೆ ಇದರಿಂದ ಈ ಕ್ಷೇತ್ರಕ್ಕೆ ಬರುವವರ ಸಂಖ್ಯೆಯೆ ಕ್ಷೀಣಿಸುತ್ತಿದೆ.
ಇಂದು ನಮ್ಮ ವಿಮರ್ಶೆಯನ್ನು ಅನೇಕ ಸಮಸ್ಯೆಗಳು ಕಾಡುತ್ತಿವೆ. ನಮ್ಮ ಕವಿ, ಅನ್ಯ ಕವಿ; ನಮ್ಮ ಪರಂಪರೆ, ಅನ್ಯ ಪರಂಪರೆ ಎಂಬ ಭಾವಗಳಿಂದ ವಸ್ತುನಿಷ್ಠತೆಯು ತೀರಾ ಕಡಿಮೆಯಾಗಿ ಇಲ್ಲಿ ವ್ಯಕ್ತಿನಿಷ್ಠತೆಯು ಇಂದು ತಾಂಡವವಾಡುತ್ತಿದೆ. ಪ್ರಾದೇಶಿಕ ಮೀಸಲಾತಿ, ಲಿಂಗಾಧಾರಿತ ಮೀಸಲಾತಿ, ಜಾತಿ ಆಧಾರಿತ ಮೀಸಲಾತಿ ಇತ್ಯಾದಿಗಳು ವಿಮರ್ಶೆಯಲ್ಲಿ ಕೂಗುಗಳಾಗಿ ಕೇಳಿಬರುತ್ತಿವೆ. ಮುದ್ರಣ ಮಾದ್ಯಮವು ಇಂದು ಪ್ರಬಲವಾಗಿ ಬೆಳೆದಿರುವುದರಿಂದ ಸಾಹಿತ್ಯದ ಅನುಸಂಧಾನಗಳಿಗು ಮುದ್ರಣ ಮಾದ್ಯಮಕ್ಕು ಅನ್ಯೋನ್ಯವಾದ ಸಂಬಂಧಗಳು (ಒಳ ಸಂಬಂಧಗಳು?) ಬೆಳೆದಿವೆ. ಹಾಗಾಗಿ ವಿಮರ್ಶೆಯನ್ನು ಒಳಗೊಂಡಂತೆ ಇಡೀ ಸಾಹಿತ್ಯವನ್ನೆ ಪ್ರಿಂಟ್ ಕ್ಯಾಪಿಟಲಿಸಮ್ಮು ಅಂದರೆ ಮುದ್ರಣ ಬಂಡವಾಳಶಾಹಿಯು ನಿಯಂತ್ರಿಸುತ್ತಿದೆ. ಈ ಎಲ್ಲವುಗಳನ್ನೂ ನಾವಿಂದು ಗಂಭೀರವಾಗಿ ಚಿಂತಿಸಬೇಕಿದೆ.
ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಅಭಿವ್ಯಕ್ತಿ ಮಾಡುವುದು ನಮ್ಮಲ್ಲಿ ರೆನೆಸಾನ್ಸ್ ಅವಧಿಯಿಂದಲೂ ಚಾಲ್ತಿಗೆ ಬಂದಿರುವ ರೂಢಿ. ಅದುವರೆಗೆ ನಮ್ಮಲ್ಲಿ ಪ್ರತಿಷ್ಠಿತ ಸಾಹಿತ್ಯದಲ್ಲಿ ಇದ್ದದ್ದು ಗದ್ಯಕಾವ್ಯ ಮತ್ತು ಪದ್ಯಕಾವ್ಯ ಎರಡೆ ಪ್ರಕಾರವಾದರೂ ಅವೆರಡೂ ಕಾವ್ಯಪ್ರಕಾರಗಳೆ. ಆದರೂ ಕಾವ್ಯಗಳಲ್ಲೆ ಹತ್ತು ಹಲವು ಪ್ರಕಾರಗಳನ್ನು ನಮ್ಮವರು ರೂಢಿಸಿಕೊಂಡಿದ್ದರೂ ಅವೆಲ್ಲವೂ ಕಾವ್ಯ ಎಂಬ ಚೌಕಟ್ಟಿನಲ್ಲೆ, ಛಂದಸ್ಸಿನ ಬಂಧನದಲ್ಲೆ ಹುಟ್ಟಿ, ಬದುಕಿ ಬೆಳೆಯಬೇಕಿತ್ತು. ಸಾಹಿತ್ಯದ ಅನುಸಂಧಾನವೂ (ವಿಮರ್ಶೆಯೂ) ಕಾವ್ಯರೂಪದಲ್ಲೆ ಅಭಿವ್ಯಕ್ತಿ ಪಡೆಯಬೇಕಿತ್ತು. ಆದರೆ ಆಧುನಿಕ ಕಾಲಕ್ಕೆ ಪ್ರಕಾರಗಳು ಹಲವಾಗಿ ಕವಲೊಡೆದುವು. ಅದಕ್ಕೆ ಶಿಕ್ಷಣಕ್ಕಾಗಿ ಹುಟ್ಟಿಕೊಂಡ ಶಿಸ್ತೀಕರಣ ಮತ್ತು ಇಂಗ್ಲಿಶ್ ಸಾಹಿತ್ಯದ ಓದು ಕೂಡ ಕಾರಣ ಎಂಬುದು ಈಗ ಇತಿಹಾಸ. ಹಾಗೆ ಹುಟ್ಟಿಕೊಂಡ ಹಲವು ಪ್ರಕಾರಗಳಲ್ಲಿ ಕೃಷಿ ಮಾಡುವುದನ್ನು ನಮ್ಮ ಲೇಖಕರು ಅಭಿವ್ಯಕ್ತಿಯ ಬಹುತ್ವ ಎಂಬಂತೆ ರೂಢಿಸಿಕೊಂಡರು.
ಈ ಹಿನ್ನೆಲೆಯಲ್ಲಿ ಡಿವಿಜಿ ಅವರಲ್ಲಿ ಸಾಹಿತ್ಯ ಚಿಂತನೆಯ ಬರಹಗಳೂ, ಅಧ್ಯಾತ್ಮದ ಬರಹಗಳೂ, ಪತ್ರಿಕೋದ್ಯಮ ತತ್ವಜ್ಞಾನದ ಬರಹಗಳೂ, ಮಂಕುತಿಮ್ಮನ ಮರುಳಮುನಿಯನ ಕಗ್ಗಗಳೂ, ಶ್ರೀರಾಮಪರೀಕ್ಷಣಂ ಕಾವ್ಯವೂ ಹೀಗೆ ಹಲವು ಪ್ರಕಾರಗಳ ಕೃಷಿಯ ಜೊತೆಗೆ ವಿಮರ್ಶೆಯ ಕೃಷಿಯನ್ನೂ ಕಾಣಬಹುದು. ಹಾಗೆಯೆ ಕುವೆಂಪು, ಮಾಸ್ತಿ, ಬೇಂದ್ರೆ, ಕಾರಂತ, ಅನಂತಮೂರ್ತಿ, ತೇಜಸ್ವಿ, ಲಂಕೇಶರಲ್ಲು ಕಾವ್ಯ, ಕಥನ, ಪ್ರಬಂಧ, ನಾಟಕ, ವಿಮರ್ಶೆ ಹೀಗೆ ಹಲವು ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಆಗಿರುವುದನ್ನು ಕಾಣಬಹುದು. ಇತ್ತೀಚಿನ ಪೀಳಿಗೆಯ ಮೂವರ ಬರಹಗಳನ್ನು ಈ ಹಿನ್ನೆಲೆಯಲ್ಲಿ ನೋಡುವುದಾದರೆ; ನಟರಾಜ ಹುಳಿಯಾರ, ನಟರಾಜ ಬೂದಾಳ, ಲಕ್ಷ್ಮೀಪತಿ ಕೋಲಾರ ಇವರು ವಿಮರ್ಶೆ, ಸಂಶೋಧನೆಗಳನ್ನು ಕಡಿಮೆ ಮಾಡಿ ನಾಟಕ, ಪ್ರಬಂಧ, ಕಥನಗಳಿಗೆ ಹೆಚ್ಚು ಹೊರಳಿಕೊಳ್ಳುತ್ತಿದ್ದಾರೆ. ವಿಮರ್ಶೆಯ ಪ್ರಕಾರವೆ ಎಂಡೇಜರ್ಡ್ ಸ್ಪೀಸೀಸ್ ಆಗುತ್ತಿದೆ ಎಂಬುದಕ್ಕೆ ಇವರ ಬರಹಗಳೂ ಪುರಾವೆ ಆಗುತ್ತಿವೆ.
ಅಪಾರವಾದ ಪರಿಶ್ರಮ, ಅಪಾರವಾದ ಓದಿಗೆ ಸಮಯ ವಿನಿಯೋಗಿಸಬೇಕಾದ ಅಗತ್ಯಗಳೂ ಈ ಪ್ರಕಾರದಲ್ಲಿ ಹೆಚ್ಚಿನ ಬೆಳೆ ಸೃಷ್ಟಿಯಾಗದೆ ಇರಲು ಕಾರಣ ಇರಬಹುದು. ಮತ್ತು ಅಂತಹ ಬರಹಗಳನ್ನು ಶೈಕ್ಷಣಿಕ ಓದಿಗೆ ನಿಗಧಿಸುವ ಸಾಧ್ಯತೆಗಳೂ ನಮ್ಮಲ್ಲಿ ಕಡಿಮೆಯಿವೆ. ನೆನ್ನೆ ಮೊನ್ನೆ ಕಣ್ಣು ಬಿಟ್ಟ ಹೈಕಳು ಏನೇನೊ ಲಾಬಿ ಮಾಡಿ ತಮ್ಮ ಕವಿತೆ, ಕತೆ ನಾಲ್ಕಾರು ವಿವಿಗಳಲ್ಲಿ ಪದವಿಗಳಲ್ಲಿ ಪಠ್ಯ ಆಗಿದೆ ಎಂದು ಫೇಸ್‌ಬುಕ್ ಪೋಸ್ಟ್ ಹಾಕುವುದೂ, ಅದಕ್ಕೆ ಹಲವಾರು ಸ್ನೇಹಿತರು ಲೈಕ್, ಕಾಮೆಂಟ್ ಮಾಡುವುದೂ ನೋಡಿದರೆ ವಿಮರ್ಶೆಯನ್ನು ಅವಜ್ಞೆ ಮಾಡುತ್ತಿದ್ದಾರಾ ಅನ್ನಿಸುತ್ತದೆ. ಚಿಂತನಶೀಲ ಬರಹಗಳನ್ನೂ ವಿಚಾರ ಸಾಹಿತ್ಯವನ್ನೂ ನಮ್ಮಲ್ಲಿ ಓದುವವರು ಮತ್ತು ಸೃಷ್ಟಿಸುವವರು ಕಡಿಮೆ ಆಗಿದ್ದಾರೆ. ಇದನ್ನೆಲ್ಲ ನೋಡಿದರೆ ರಂಜನೆಯ ಮೂಲಕವೆ ಜನಮಾನಸವನ್ನು ತಲುಪುವ ಅಲವಾಟಿಗೆ ನಾವೆಲ್ಲ ಸಿಗೆಬಿದ್ದಿದ್ದೇವಾ ಅನ್ನಿಸುತ್ತದೆ.
ಇಂದು ನಮ್ಮಲ್ಲಿ ನಾನೊಬ್ಬ ವಿಮರ್ಶಕ ಎಂದು ಹೇಳುವುದನ್ನೆ ಡಿಸ್ ಓನ್ ಮಾಡಬೇಕಾದ ಸ್ಥಿತಿಯಿದೆ. ಅವರನ್ನು ಕುರಿತು ಇವರು ಏನನ್ನೂ ಬರೆದಿಲ್ಲ, ವಿಮರ್ಶಾ ನ್ಯಾಯ ಎಷ್ಟರಮಟ್ಟಿಗೆ ಸಲ್ಲಬೇಕೊ ಅಷ್ಟು ಇವರಿಗೆ ಸಂದಿಲ್ಲ. ಇಂತಹ ಕೃತಿಗೆ ವಿಮರ್ಶೆಯಿಂದ ಅನ್ಯಾಯವಾಗಿದೆ, ಕನ್ನಡ ವಿಮರ್ಶೆ ಜಾತಿ, ಲಿಂಗ, ಪಂಥ ಇತ್ಯಾದಿಗಳಿಂದ ಬಾಧಿತವಾಗಿದೆ ಎಂದೆಲ್ಲ ಅವರಿವರು ಪದೆ ಪದೆ ದೂರುತ್ತಾರೆ. ಅದಕ್ಕೆ ತಕ್ಕಂತೆ ಒಂದು ಎರಡೊ ಅಂತಹ ಉದಾಹರಣೆಗಳೂ ಆಗಾಗ ಸಿಗುತ್ತವೆ. ಇದರಿಂದಾಗಿ ವಿಮರ್ಶಕರಿಗೆ ಅತಿಯಾದ ಹೊಣೆಗಳನ್ನು ಹೊರಿಸುವ ಕೆಲಸ ನಮ್ಮಲ್ಲಿ ನಡೆಯುತ್ತಿದೆ. ಇದೂ ಕೂಡ ವಿಮರ್ಶೆಯ ಬೆಳೆಯು ಕ್ಷೀಣವಾಗಲು ಕಾರಣವಿರಬಹುದು.
13. ಒಡಕುಗಳನ್ನು ಏನು ಮಾಡುವುದು?
ಸಾಹಿತ್ಯದಲ್ಲಿ ಈಗಾಗಲೇ ಒಡಕುಗಳು ನಿರ್ಮಾಣವಾಗಿ ಹೋಗಿವೆ. ಇದರಲ್ಲಿ ನಮ್ಮ ವಿಮರ್ಶೆಯ ಪಾತ್ರವೂ ಇದೆ. ಗಂಭೀರ ಸಾಹಿತ್ಯ-ಜನಪ್ರಿಯ ಸಾಹಿತ್ಯ-ಸುಗಮ ಸಾಹಿತ್ಯ-ಚಿತ್ರಸಾಹಿತ್ಯ ಹೀಗೆ ಈಗಾಗಲೇ ಮೂಡಿರುವ ಒಡಕುಗಳು ಸಾಲದು ಎಂಬಂತೆ ದಲಿತ ಮತ್ತು ದಲಿತೇತರ ಸಾಹಿತ್ಯ, ಪುರುಷ ಸಾಹಿತ್ಯ ಮತ್ತು ಮಹಿಳಾ ಸಾಹಿತ್ಯ ಮೊದಲಾದ ಒಡಕುಗಳೂ ಸೇರಿಕೊಳ್ಳುತ್ತಿವೆ. ದಲಿತ ಸಾಹಿತ್ಯ ಚರಿತ್ರೆ, ಜನಪದ ಸಾಹಿತ್ಯ ಚರಿತ್ರೆ, ಮಹಿಳಾ ಸಾಹಿತ್ಯ ಚರಿತ್ರೆ, ದಲಿತ ಮಹಿಳಾ ಸಾಹಿತ್ಯ ಚರಿತ್ರೆ ಹೀಗೆ ಬೇರೆ ಬೇರೆ ಸಾಹಿತ್ಯ ಚರಿತ್ರೆಗಳು ಇಂದು ರಚನೆಯಾಗುತ್ತಿವೆ. ಹಾಗೆಯೆ ಇವುಗಳನ್ನು ಅನುಸರಿಸಿ ವಿಮರ್ಶೆಗಳೂ, ಮೀಮಾಂಸೆಗಳೂ ಸಂಭವಿಸುತ್ತಿವೆ. ಇವುಗಳು ಬೇಕೆ ಬೇಡವೇ ಎನ್ನುವ ಪ್ರಶ್ನೆಯೇ ಇಲ್ಲ. ಸಂಭವಿಸುತ್ತಿರುವುದರಿಂದ ಅವುಗಳನ್ನು ರೂಪಿಸುವ ಬಗೆಗೆ ನಾವೆಲ್ಲ ಚಿಂತಿಸಲಿಕ್ಕಿದೆ. ಇವುಗಳನ್ನೆಲ್ಲ ಒಡಕುಗಳೆಂದು ನೋಡದೆ ವೈವಿಧ್ಯಗಳೆಂದು, ಭಿನ್ನ ಪರಂಪರೆಗಳೆಂದು ನೋಡಬೇಕಿದೆ. ಈ ಬಗೆಗೆ ಕೂಡ ನಾವಿಂದು ಗಂಭೀರವಾಗಿ ಯೋಚಿಸಬೇಕಿದೆ.
14. ವಿಮರ್ಶೆಯ ಭಾಷೆ ಪರಿಭಾಷೆ ಏಕೆ ಹೀಗಿದೆ?
ಇನ್ನು ವಿಮರ್ಶೆಯ ಭಾಷೆ ಮತ್ತು ಪರಿಭಾಷೆಗೆ ಬಂದರೆ ಅದರ ಬಗ್ಗೆ ಹೇಳಲೇಬೇಕಾಗಿಲ್ಲ. ಅದೊಂದು ಬಹಳ ದೊಡ್ಡ ಭಯೋತ್ಪಾದಕ ಕ್ಷೇತ್ರ. ಒಂದು ಕಡೆ ಸಾಹಿತ್ಯ ವಿಮರ್ಶೆಗೆ ಹೊಸ ದಾರಿಗಳನ್ನು ಮಾಡಿಕೊಳ್ಳುವುದನ್ನು ನಮ್ಮ ಪದವಿ ಸ್ನಾತಕ ಪದವಿಗಳಲ್ಲಿ ನಾವು ಕಲಿಸದೆ ಹಳೆಯ ದಾರಿಗಳನ್ನು ಕಾವ್ಯಮೀಮಾಂಸೆ, ವಿಮರ್ಶೆ ಎಂದು (ಪಾಶ್ಚಾತ್ಯ ಭಾರತೀಯ ಕನ್ನಡ ಹೀಗೆ ಮೂರೂ ನೆಲೆಯಲ್ಲಿ) ವಿದ್ಯಾರ್ಥಿಗಳ ಪ್ರಾಣ ತೆಗೆಯುತ್ತಿದ್ದೇವೆ. ಇನ್ನೊಂದು ಕಡೆ ವಿಮರ್ಶಕರು ತಮ್ಮ ಆಚಾರದಲ್ಲಿ (ಬಳಕೆಯಲ್ಲಿ) ತಮ್ಮ ತಮ್ಮ ನಾಡು-ಊರು-ಮನೆ ನುಡಿಗಳನ್ನು ಬಳಸದೆ ಮಾನಕ ಭಾಷೆ ಪರಿಭಾಷೆಯನ್ನು ಬಳಸುತ್ತ ಪರಿಭಾಷೆಯ ಕಗ್ಗಾಡಿನ ಜೊತೆಗೆ ಇನ್ನಷ್ಟು ಕಗ್ಗಾಡನ್ನು ಬೆಳೆಸುತ್ತಿದ್ದಾರೆ. ನಮ್ಮ ಸಾಹಿತ್ಯಗಳಲ್ಲಿ (ಕವಿತೆ, ಕಾದಂಬರಿ, ನಾಟಕಗಳಲ್ಲಿ) ಪ್ರಾದೇಶಿಕ ಭಾಷೆ ಸಾಕಷ್ಟು ನುಗ್ಗಿ ಬಂದಿದೆ. ಆದರೆ ನಮ್ಮ ವಿಮರ್ಶೆ ಮಾತ್ರ ಮಾನಕ ಭಾಷೆಗೇ ಇನ್ನೂ ಜೋತುಬಿದ್ದಿದೆ. ಇದು ತಪ್ಪಬೇಕು. ಸರಳವಾಗಿ ನಮ್ಮ ಆಡುಕನ್ನಡಗಳಲ್ಲೆ ನಮಗೆ ಅನ್ನಿಸಿದ್ದನ್ನು ವಿಮರ್ಶೆಯಲ್ಲಿ ಬರೆಯುವಂತಾಗಬೇಕು. ಆಗ ಹೊಸಬರಿಗು ತಮ್ಮ ಭಾಷೆಯನ್ನು ಕೊಂದುಕೊಂಡು ಹೊಸ ಭಾಷೆ ಪರಿಭಾಷೆಯನ್ನು ಕಲಿತು ವಿಮರ್ಶೆಗೆ ಪ್ರವೇಶಿಸಬೇಕಾದ ಕಷ್ಟ ಇರುವುದಿಲ್ಲ. ಅಂತು ವಿಮರ್ಶೆಗೆ ಎಲ್ಲ ದಿಕ್ಕುಗಳಲ್ಲಿ ಬಿಕ್ಕಟ್ಟುಗಳು ಇವೆ. ಟಕಾರ್ ಅಂತ ಇವೆಲ್ಲ ಒಂದೇ ಏಟಿಗೆ ಪರಿಹಾರ ಆಗಿಬಿಡಬಹುದಾದ ಬಿಕ್ಕಟ್ಟುಗಳಲ್ಲ. ಇವಕ್ಕೆ ಒಂದು ಆಂಧೋಲನವೆ ನಡೆಯಬೇಕು.
15. ಪರಿಭಾಷೆಗಳ ಕಗ್ಗಾಡು?
ಆಧುನಿಕ ಸಂದರ್ಭದಲ್ಲಿ ವಿಮರ್ಶೆಯ ಪರಿಭಾಷೆಗಳ ಮತ್ತು ಸಿದ್ಧಾಂತಗಳ ಕಗ್ಗಾಡೇ ಸೃಷ್ಟಿಯಾಗಿದೆ. ಈ ಪರಿಭಾಷೆಯ ಕಗ್ಗಾಡಿನಲ್ಲಿ ತೌಲನಿಕ ವಿಮರ್ಶೆ, ಸ್ತ್ರೀವಾದಿ ವಿಮರ್ಶೆ, ಪ್ರಾಯೋಗಿಕ ವಿಮರ್ಶೆ, ರೂಪನಿಷ್ಠ ವಿಮರ್ಶೆ, ಅನ್ವಯಿಕ ವಿಮರ್ಶೆ, ವರ್ಣನಾತ್ಮಕ ವಿಮರ್ಶೆ ಇಂತಹ ಕೆಲವೊಂದು ಮಾರ್ಗಗಳು ಮಾತ್ರವೇ ನಮ್ಮಲ್ಲಿ ತಕ್ಕಮಟ್ಟಿಗೆ ಪ್ರಯೋಗವಾಗಿವೆ. ಮಿಕ್ಕಂತೆ ನಮ್ಮಲ್ಲಿ ಬಹುತೇಕ ಮಾರ್ಗ-ಪಂಥ-ಸಿದ್ಧಾಂತಗಳು ತತ್ವ-ಸಿದ್ಧಾಂತಗಳ ಮಟ್ಟದಲ್ಲೇ ಉಳಿದು ಹೋಗಿವೆ. ಕೆಲವು ಪ್ರಯೋಗಕ್ಕಾಗಿ ಪ್ರಯೋಗವಾಗಿದ್ದರೆ; ಕೆಲವು ನಾಮಮಾತ್ರಕ್ಕೆ ಇವೆ. ಆದರೆ ನಮ್ಮಲ್ಲಿನ ವಿಮರ್ಶೆಯ ರೂಪಗಳು ಕನ್ನಡದಲ್ಲಿ ಸಾಕಷ್ಟು ಬೇರೂರಿದ ಪ್ರಯೋಗಗಳಾಗಿವೆ. ಅಭಿನಂದನ ರೂಪಿ, ಸೂಕ್ತಿ ರೂಪಿ, ಚರಿತ್ರೆ ರೂಪಿ, ಸರಳ ರೂಪಿ, ಸಾಹಿತ್ಯ ರೂಪಿ, ಒಡನಾಟ ರೂಪಿ, ಅಧ್ಯಯನ ರೂಪಿ, ವಿಮರ್ಶಾರೂಪಿ, ಸಮೀಕ್ಷಾ ರೂಪಿ, ಮುನ್ನುಡಿ ರೂಪಿ ಹೀಗೆ ಹತ್ತು ಹಲವು ರೂಪಗಳು ಸ್ಥಾಪಿತ ವಿಮರ್ಶಾ ಮಾರ್ಗಗಳಾಗಿ ಸ್ಥಾಪಿತವಾಗುತ್ತಿವೆ. ಇವುಗಳ ಜೊತೆಗೆ ಪುಸ್ತಕ ವಿಮರ್ಶೆ, ಪುನರಾಲೋಕನ-ಪುನರ್ಮೌಲ್ಯೀಕರಣ, ಪುನರ್ಕಥನ, ಟೀಕು-ವ್ಯಾಖ್ಯಾನ, ಸಾಂಸ್ಕೃತಿಕ ಅನುಸಂಧಾನಾದಿ ಹಲವು ಮಾರ್ಗಗಳು ಚಾಲ್ತಿಯಲ್ಲಿವೆ. ಇವೆಲ್ಲವನ್ನು ಕನ್ನಡ ವಿಮರ್ಶೆಯ ಪಂಥ ವಿನ್ಯಾಸಗಳೆಂದು ನಾವು ಮಾನ್ಯ ಮಾಡಬೇಕಿದೆ. ತತ್ವ ಸಿದ್ಧಾಂತಗಳನ್ನು ನೋಡಿ ಅವು ನಮ್ಮಲ್ಲಿ ಇವೆಯೇ ಎಂದು ಪರೀಕ್ಷಿಸುತ್ತ, ಇಲ್ಲವೆಂದು ಕೊರಗುತ್ತ, ಪ್ರಯೋಗಿಸಿ ಬಸವಳಿಯುವುದಕ್ಕಿಂತ ನಮ್ಮ ಆಚರಣೆಯನ್ನೆ ತಾತ್ವೀಕರಿಸಿಕೊಳ್ಳಬೇಕಿದೆ. ಆಚರಣೆಯ ತಾತ್ವೀಕರಣವೊಂದೇ ನಮ್ಮನ್ನು ಆತ್ಮಗೌರವಯುತವಾಗಿ-ನಮ್ಮನ್ನು ನಾವಾಗಿ-ಕಂಡುಕೊಳ್ಳುವ ಮಾರ್ಗವಾಗಿದೆ.
16. ಸ್ವ ಮತ್ತು ಅನ್ಯದ ಪ್ರಶ್ನೆಗಳು ಹೇಗಿವೆ?
ಕನ್ನಡ ಸಾಹಿತ್ಯ ಸಂಸ್ಕೃತಿಯು ಪ್ರಾಚೀನ ಕಾಲದಲ್ಲಿ ಸಂಸ್ಕೃತದಿಂದಲೂ, ಆಧುನಿಕ ಕಾಲದಲ್ಲಿ ಇಂಗ್ಲಿಷಿನಿಂದಲೂ ಪ್ರೇರಣೆ-ಪ್ರಭಾವಗಳನ್ನು ಪಡೆದು; ಹೊಸತನಗಳನ್ನು ಸ್ವೀಕರಿಸಿ ಬೆಳೆದಿದೆ ಎಂಬ ಸ್ಥಾಪಿತ ನಂಬಿಕೆಯೊಂದು ನಮ್ಮಲ್ಲಿದೆ. ಹಾಗೆ ನೊಡಿದರೆ ನಮ್ಮಲ್ಲಿ ಸ್ವಂತಿಕೆಯ ಸಿದ್ಧಾಂತಗಳು ಮತ್ತು ಸ್ವೀಕರಣಾ ಸಿದ್ಧಾಂತಗಳು ಚರ್ಚೆಗೆ ಗುರಿಯಾಗೇ ಇಲ್ಲ. ಈ ನೆಲೆಯಲ್ಲಿ ಸಿದ್ಧಾಂತಗಳನ್ನು ರೂಪಿಸುವ ಯತ್ನಗಳೂ ನಡೆದಿಲ್ಲ. ಕೀಳರಿಮೆಯ ಪ್ರಜ್ಞೆ, ಪರಕೀಯ ಪ್ರಜ್ಞೆ, ಐಡೆಂಟಿಟಿಯ (ಸ್ವಂತಿಕೆಯ) ಬಿಕ್ಕಟ್ಟುಗಳಿಂದ ನಮ್ಮ ಚರಿತ್ರೆ ರಚನೆಯು ನರಳಿದೆ. ಈಗೀಗ ಕನ್ನಡದ್ದೆ ವ್ಯಾಕರಣ, ಕನ್ನಡದ್ದೆ ಛಂದಸ್ಸು, ಕನ್ನಡದ್ದೆ ಮಿಮಾಂಸೆಗಳ ನಿರ್ಮಾಣಗಳೂ ನಡೆಯುತ್ತಿವೆ. ಇದು ಶುದ್ಧಾಂಗವಾಗಿ ನಮ್ಮದು. ಇದು ಶುದ್ಧಾಂಗವಾಗಿ ಅನ್ಯರದು ಎಂದು ಯಾವುದನ್ನಾದರೂ ನಿರ್ಣಯಿಸಲು ಬರುತ್ತದೆಯೇ? ಅದರಲ್ಲೂ ಚರಿತ್ರೆಯನ್ನು ಹೀಗೆ ವಿಂಗಡಿಸಲು ಬರುವುದಿಲ್ಲ.
ಕನ್ನಡದಲ್ಲಿ ಏನೇನು ಸಂಭವಿಸಿದೆಯೋ ಅದೆಲ್ಲವೂ ನಮಗಾಗಿ ಸಂಭವಿಸಿರುವಾಗ ಅದು ಕ್ರಮೇಣ ಕನ್ನಡದ್ದೆ ಅಲ್ಲವೇ? ಸಂಕರವಾಗಲಿ-ಅನ್ಯವಾಗಲಿ ನಮ್ಮಲ್ಲಿ ಸಂಭವಿಸಿದ ಮೇಲೆ ಅದು ನಮ್ಮದಾಗಿಯೇ ಸಂಭವಿಸಬೇಕು. ಮೂಲವನ್ನು ಅನ್ವೇಷಿಸುವ-ವಿಂಗಡಿಸಿ ಬೇರ್ಪಡಿಸುವ ಅಗತ್ಯವಿಲ್ಲ. ಅನಗತ್ಯವಾದುದನ್ನು-ಅನುಪಯುಕ್ತವಾದುದನ್ನು ವಿಂಗಡಿಸಬೇಕೋ-ಅನ್ಯ ಮತ್ತು ಸ್ವಗಳನ್ನು ವಿಂಗಡಿಸಬೇಕೋ? ನಮ್ಮಲ್ಲಿ ಏನೇನು ಸಂಭವಿಸಿದೆಯೋ ಅದೆಲ್ಲವೂ ನಮ್ಮದೇ ಎಂಬ ಗ್ರಹೀತವನ್ನು ಇರಿಸಿಕೊಂಡರೆ ತಪ್ಪಲ್ಲವೊ? ಇದೊಂದು ಸುಲಭಕ್ಕೆ ಬಿಡಿಸಲಾರದ ಪ್ರಶ್ನೆ. ಬೇರೆ ಭಾಷೆಯಿಂದ ಯಾವುದೆ ಸಾಮಗ್ರಿ ಕನ್ನಡಕ್ಕೆ ಬರುವಾಗ ಅದು ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ರೂಪಾಂತರವಾಗಿ ಬರಬೇಕಷ್ಟೆ. ಕನ್ನಡಕ್ಕೆ ಬರುವಾಗ ಅನ್ಯ ಮತ್ತು ಸ್ವ ಎಂಬುವು ಹುಸಿ ಕಲ್ಪನೆಗಳಾದರೂ ಇಂಗ್ಲಿಶಿನಿಂದ ಸಂಸ್ಕೃತದಿಂದ ಯಥಾವತ್ತಾಗಿ ಅಲ್ಲಿನ ಚಿಂತನೆಗಳನ್ನು ಕನ್ನಡೀಕರಿಸದೆ ತಂದು ಸುರಿದುಕೊಳ್ಳುವುದರಿಂದ ಏನೇನು ಅನಾನುಕೂಲ ಮತ್ತು ಅನುಕೂಲ ಆಗಬಹುದು ಎಂಬುದು ಒಂದು ಪ್ರತ್ಯೇಕ ಅಧ್ಯಯನವೆ ಆದೀತು.
ಇಲ್ಲೆ ಇನ್ನೊಂದು ಸ್ಪಷ್ಟೀಕರಣ ಅಗತ್ಯ. ಇಂಗ್ಲಿಶಾಗಲೀ, ಸಂಸ್ಕೃತವಾಗಲಿ ಕನ್ನಡಕ್ಕೆ ನೀಡುವ ಲೋಕಗಳು: ಕನ್ನಡವು ಕಡ ಪಡೆಯಲೆಂದೇ ಸದಾ ಹಪಾಹಪಿಸುವ, ಪಡೆಯುವ ಜಗತ್ತು ಎಂದೇನೂ ನಾವು ಭಾವಿಸಬೇಕಿಲ್ಲ. ಅಲ್ಲದೆ ಯಾವ ಸಂಸ್ಕೃತಿಗಳೂ ಮೇಲಲ್ಲ-ಕೀಳಲ್ಲ. ಭಿನ್ನಗಳು ಅಷ್ಟೆ. ಇಂತಹ ಭಿನ್ನತೆಗಳ ನಡುವೆ ತುಲನೆ ಮಾಡುವಾಗ ತರತಮ ಶ್ರೇಣೀಕರಣ ದೃಷ್ಟಿಯಿಂದ ತುಲನೆ ಮಾಡುವುದು ಯುಕ್ತವಲ್ಲ. ಆದರೆ ನಮ್ಮಲ್ಲಿ ‘ಮೀಮಾಂಸೆಯ’ ಕಾರಣಕ್ಕೆ ಸಂಸ್ಕೃತವನ್ನು ‘ವಿಮರ್ಶೆಯ’ ಕಾರಣಕ್ಕೆ ಇಂಗ್ಲಿಶನ್ನು ಹೋಲಿಕೆಗೆ ಎಳೆದು ತರುವ ಪ್ರವೃತ್ತಿ ಸಾಮಾನ್ಯವಾಗಿದೆ. ತೌಲನಿಕ ಕಾವ್ಯ ಮೀಮಾಂಸೆಯ ಮುಂದುವರಿದ ಬೆಳೆಯಾಗಿ ತೌಲನಿಕ ವಿಮರ್ಶೆಯು ನಮ್ಮಲ್ಲಿ ಸಂಭವಿಸುತ್ತಿದೆ. ಐಡಿಯಾಲಜಿಗಳ; ಸಿದ್ಧಾಂತಗಳ ಅನ್ವಯೀಕರಣ; ಅಲ್ಲಿರುವುದು ಇಲ್ಲಿಯೂ ಇದೆಯೆಂದು ನೋಡುವ ಅನ್ವಯೀಕರಣ ಪ್ರವೃತ್ತಿ ಬೆಳೆಯುತ್ತಿದೆ. ಆದರೆ ಇದು ಅಗತ್ಯವೇ? ಭಿನ್ನ ಓದಿನ ದಾರಿಗಳನ್ನು ಭಾಷಾತೀತವಾಗಿ, ದೇಶಾತೀತವಾಗಿ ಪ್ರಯೋಗಿಸಿ ನೋಡುವ; ಬಳಸಿನೋಡುವ ವ್ಯಾಯಾಮ ಮಾಡುವುದರಲ್ಲಿ ದೋಷವಿಲ್ಲ. ಆದರೆ ನಾವು ‘ಅನ್ಯ’ವೆಂದು ಭಾವಿಸುವ ಅನ್ಯ ಸಿದ್ಧಾಂತಗಳನ್ನು ನಮ್ಮಲ್ಲಿನ ಸಿದ್ಧಾಂತಗಳಿಗೆ ತಾಳೆ ನೋಡುತ್ತ ನಮ್ಮಲ್ಲಿಯೂ ಇದು ಇತ್ತೆಂದು ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ. ಆಧುನಿಕವನ್ನು ಪ್ರಾಚೀನರಲ್ಲಿ ಹುಡುಕುವ; ಅನ್ಯವನ್ನು ಸ್ವದಲ್ಲಿ ಹುಡುಕುವ ಯತ್ನಗಳಿಗಿಂತ ಪುನರ್ಕಥನ-ಪುನರ್‌ಸೃಷ್ಟಿಗಳೇ ಯುಕ್ತ ಮಾರ್ಗಗಳೆಂದೂ ಭಾವಿಸುವುದು ಒಳ್ಳೆಯದು.
17. ವಿಮರ್ಶೆಯ ಹೊಣೆಗಳೇನು ಎಂಬ ಜಿಜ್ಞಾಸೆಯ ಮರುಪರಿಶೀಲನೆ ಅಗತ್ಯವಿದೆಯೆ?
ಇಷ್ಟಕ್ಕು ನಮ್ಮಲ್ಲಿ ಇಂದು ಚಾಲ್ತಿಯಲ್ಲಿ ಇರುವ ವಿಮರ್ಶೆಯ ಪರಿಕಲ್ಪನೆಯಾದರೂ ಎಂಥದ್ದು? ಸಾಹಿತ್ಯದ ಸೌಂರ‍್ಯವನ್ನು ವಿವರಿಸುವುದು, ಸಾಹಿತ್ಯ ಕೃತಿಯ ಆಶಯ ತಾತ್ವಿಕತೆಗಳನ್ನು ಗುರ್ತಿಸುವುದು, ಕೃತಿ ಕಥನದ ಅರ್ಥಸಾಧ್ಯತೆಗಳನ್ನು ವಿವರಿಸುವುದು, ಸಾಹಿತ್ಯದ ಬೆಲೆ ಕಟ್ಟುವುದು, ಮೌಲ್ಯಮಾಪನ ಮಾಡುವುದು, ಲೇಖಕರ ಸ್ಥಾನ ನಿರ್ಣಯ ಮಾಡುವುದು, ಸಾಹಿತ್ಯ ಕೃತಿಯ ಗುಣದೋಷಗಳನ್ನು ಗುರ್ತಿಸುವುದು, ಸಾಹಿತ್ಯದ ಒಳಿತು ಕೆಡುಕುಗಳನ್ನು ಚರ್ಚಿಸುವುದು, ಸಾಹಿತ್ಯದ ಸಾಮಾಜಿಕ ಪರಿಣಾಮಗಳನ್ನು ಗುರ್ತಿಸುವುದು, ಒಳ್ಳೆಯ ಸಾಹಿತ್ಯವೆಂದರೆ ಯಾವುದು ಎಂದು ವ್ಯಾಖ್ಯಾನಿಸುವುದು ಇತ್ಯಾದಿ ಇತ್ಯಾದಿ ಇವೆಲ್ಲವನ್ನೂ ವಿಮರ್ಶೆಯು ತನ್ನ ಜವಾಬ್ದಾರಿ ಎಂದೇ ಹೇರಿಕೊಂಡಿದೆ. ಈ ಜವಾಬ್ದಾರಿಯನ್ನು ಹೊರಲು ವಿಮರ್ಶೆಗೆ ಹಕ್ಕು ನೀಡಿದವರು ಯಾರು? ಇದರ ಹಿಂದಿನ ಸಾಂಸ್ಕೃತಿಕ ರಾಜಕಾರಣ ಯಾವುದು? ನಿಜಕ್ಕು ವಿಮರ್ಶೆಯ ಜವಾಬ್ದಾರಿಗಳು ಯಾವುವು? ಈ ಬಗೆಗೆ ನಾವು ಗಂಭೀರವಾಗಿ ಆಲೋಚಿಸಬೇಕಿದೆ.
18. ಸಾಹಿತ್ಯದ ವರ್ಗೀಕೃತ ದೃಷ್ಟಿಯಲ್ಲೆ ವಿಮರ್ಶೆಯನ್ನೂ ವರ್ಗೀಕರಿಸುವುದು ಸಾಧುವೆ?
ಆಧುನಿಕ ಸಂದರ್ಭದಲ್ಲಿ ನವೋದಯ ವಿಮರ್ಶೆ, ನವ್ಯ ವಿಮರ್ಶೆ, ಬಂಡಾಯ ವಿಮರ್ಶೆ ಎಂಬಂತೆ ವಿಮರ್ಶೆಯನ್ನು ಸಾಹಿತ್ಯ ಸಂವೇದನೆಗಳಿಗೆ ಅನುಸಾರವಾಗಿ ವರ್ಗೀಕರಿಸಿಕೊಂಡು ನೋಡುವ ಪ್ರವೃತ್ತಿ ಇದೆ. ನವೋದಯ, ನವ್ಯ, ಬಂಡಾಯದಂತಹ ವರ್ಗೀಕರಣಗಳು ನಮ್ಮ ವಿಮರ್ಶೆಯ ಪರಂಪರೆಯನ್ನು ಸರಿಯಾಗಿ ವ್ಯಾಖ್ಯಾನಿಸಲಾರವು. ಈ ರೀತಿಯಲ್ಲಿ ಸಾಹಿತ್ಯ ಚರಿತ್ರೆಯನ್ನು ವರ್ಗೀಕರಿಸಿ-ನಾಮಾಂಕಿಸಿ ನೋಡುವುದೇ ಊನವಾದ ದೃಷ್ಟಿ. ನವೋದಯದ ಲಕ್ಷಣ-ಸಂವೇದನೆಗಳು ನವ್ಯದಲ್ಲಿಯೂ ಬಂಡಾಯದಲ್ಲಿಯೂ ಇಲ್ಲವೋ? ಬಂಡಾಯದ ಸಂವೇದನೆಗಳು ನವ್ಯದಲ್ಲಿಯೂ ನವೋದಯದಲ್ಲಿಯೂ ಇಲ್ಲವೋ? ಇವೆ. ನವೋದಯ-ನವ್ಯ-ಪ್ರಗತಿಶೀಲ-ಬಂಡಾಯಗಳನ್ನು ಕಾಲಘಟ್ಟಗಳನ್ನಾಗಿಯೂ ನಿರ್ಧರಿಸಲು ಸಾಧ್ಯವಿಲ್ಲ. 1960ರ ದಶಕದಲ್ಲಿ ಕುವೆಂಪು ಕಾದಂಬರಿ ಪ್ರಕಟಿಸಿದರೆ ಬಹುಪಾಲು ನಮ್ಮ ವಿಮರ್ಶೆಯು ಈ ದಶಕದ ನಂತರದಲ್ಲೆ ಪ್ರಕಟವಾಗಿದೆ. ಅಡಿಗ, ಸಿದ್ಧಲಿಂಗಯ್ಯ, ಕುವೆಂಪು ಇವರೆಲ್ಲರ ನಡುವೆ ವಯಸ್ಸಿನ ಅಂತರ ಇದ್ದರೂ ಇವರನ್ನು ಸಂವೇದನೆ, ಕಾಲಘಟ್ಟ, ಚಳುವಳಿ, ಪಂಥ ಇತ್ಯಾದಿ ಯಾವ ದೃಷ್ಟಿಗಳಿಂದಲೂ ನವೋದಯ, ನವ್ಯ, ಬಂಡಾಯ ಮಾತ್ರವೆಂದು ವರ್ಗೀಕರಿಸಿ ಹೇಳಲಾಗುವುದಿಲ್ಲ. ಎಲ್ಲ ಸಂವೇದನೆಗಳೂ ಇವರೆಲ್ಲರಲ್ಲು ಇವೆ. ಹಾಗೇ ಒಂದೇ ಕಾಲಮಾನದಲ್ಲಿ ಮತ್ತು ಕಾಲಾತೀತವಾಗಿ ಇವರೆಲ್ಲ ಬರೆದಿದ್ದಾರೆ. ಹೀಗಿರುವಾಗ ನವೋದಯ, ನವ್ಯ, ಬಂಡಾಯವೆಂಬ ವರ್ಗೀಕರಣ ಯಾವ ರೀತಿಯಲ್ಲಿ ಖಚಿತ? ಸಮರ್ಥನೀಯ? ಕೇವಲ ಕವಿತೆಯ ಶೈಲಿಯನ್ನು ಗಮನಿಸಿ ಹೀಗೆ ನಾಮಾಂಕಿಸುವುದೂ ಪಾರ್ಶ್ವಿಕವೆ.
ವಿಮರ್ಶೆಯ ವಿಚಾರದಲ್ಲು ಈ ಎಲ್ಲ ಮಾತುಗಳು ಅನ್ವಯವಾಗುತ್ತವೆ. ಖಚಿತವಾಗಿ ಲಕ್ಷಣೀಕರಿಸಬಹುದಾದ-ಸಿದ್ಧಾಂತೀಕರಿಸಬಹುದಾದ ನವೋದಯವೆಂಬ, ನವ್ಯವೆಂಬ, ಬಂಡಾಯವೆಂಬ, ವಿಮರ್ಶೆ ನಮ್ಮಲ್ಲಿ ಇಲ್ಲ. ಒಂದೇ ಕಾಲಘಟ್ಟ, ಸಾಹಿತಿ, ವಿಮರ್ಶಕರಲ್ಲಿ ಇರಬಹುದಾದ ಸಂವೇದನೆಗಳಿವು ಅಷ್ಟೆ. ಕೆಲವರಲ್ಲಿ ಕೆಲವು ಸಂವೇದನೆಗಳು ಪ್ರಧಾನವಾಗಿಯೂ ಕೆಲವರಲ್ಲಿ ಕಡಿಮೆಯಾಗಿಯೂ ಇರಬಹುದಷ್ಟೆ. ಆ ಕಾರಣಕ್ಕಾಗಿ ಲೇಖಕರನ್ನಾಗಲೀ, ವಿಮರ್ಶಕರನ್ನಾಗಲೀ ನವೋದಯ, ನವ್ಯ, ಬಂಡಾಯವೆಂದು ಬ್ರಾಂಡು ಮಾಡಲು ಆಗುವುದಿಲ್ಲ. ಕಾಲಘಟ್ಟದ ದೃಷ್ಟಿಯಿಂದ ನೋಡಿದರೆ ವಿಮರ್ಶೆಯಲ್ಲಿ ಹೊಸನಿರು ನುಗ್ಗಿದ ಕಾಲ ಮತ್ತು ಎರುಗತಿಯನ್ನು ಕಂಡ ಕಾಲ ಎಂದು ಎರಡೇ ರೀತಿಯಲ್ಲಿ ಕನ್ನಡ ವಿಮರ್ಶೆಯನ್ನು ನೋಡಬಹುದೆ ವಿನಹ ಹಾಗೆ ನವೋದಯ, ನವ್ಯ, ಪ್ರಗತಿಶೀಲ, ದಲಿತ ಬಂಡಾಯವೆಂಬ ಚೀಲಗಳಲ್ಲಿ ವಿಮರ್ಶೆಯನ್ನು ವರ್ಗೀಕರಿಸಲು ಆಗುವುದಿಲ್ಲ. ಹಾಗೆ ವಿಮರ್ಶೆಯನ್ನು ವರ್ಗೀಕರಿಸುವುದಾದರೆ ಅಭಿನಂದನ ರೂಪಿ ವಿಮರ್ಶೆ, ಸಾಹಿತ್ಯ ರೂಪಿ ವಿಮರ್ಶೆ, ಸೂಕ್ತಿ ರೂಪಿ ವಿಮರ್ಶೆ, ಸರಳರೂಪಿ ವಿಮರ್ಶೆ(ಟೀಕು) ಇತ್ಯಾದಿಯಾಗಿ ವರ್ಗೀಕರಿಸಿಕೊಳ್ಳಬಹುದೇ ವಿನಾ ನವೋದಯ-ನವ್ಯ-ಬಂಡಾಯ ಮುಂತಾಗಿ ಅಲ್ಲ.
ಅಭಿನಂದನ ರೂಪಿ ವಿಮರ್ಶೆಯನ್ನು ತೆಗೆದುಕೊಂಡರೆ ಬಿ.ಎಂ.ಶ್ರೀಗೆ ಬಂದ ‘ಸಂಭಾವನೆ’ಯಿಂದ ಹಿಡಿದುಕೊಂಡು ಇತ್ತೀಚೆಗೆ ಜಿ.ಎಸ್.ಆಮೂರರಿಗೆ ಬಂದಿರುವ ‘ಸಹೃದಯ ಸಂವಾದ’ದವರೆಗೆ ಯಾವ ಅಭಿನಂದನ ಗ್ರಂಥವನ್ನು ಗಮನಿಸಿದರೂ ಅವನ್ನು ನವೋದಯ, ಬಂಡಾಯ, ನವ್ಯ ಅಭಿನಂದನೆಗಳೆಂದು ವರ್ಗೀಕರಿಸಲಾಗುವುದಿಲ್ಲ. ಅಲ್ಲದೆ ಅವುಗಳ ಲಕ್ಷಣ, ಗುಣ, ಭಿನ್ನ ವಿನ್ಯಾಸಗಳನ್ನು ಬೇರೆ ನೆಲೆಗಳಿಂದಲೇ ನೋಡಬೇಕಾಗುತ್ತದೆ. ಅಲ್ಲಮನ ಬಗೆಗೆ, ಬಸವಣ್ಣನ ಬಗೆಗೆ ಬಂದಿರುವ ಆಧುನಿಕ ಕಾಲದ ನಾಟಕಗಳು, ಪ್ರಾಚೀನ ಕಾಲದ ತಾರಾವಳಿ, ಪುರಾಣ, ಚರಿತ್ರೆಗಳ ಚರಿತ್ರೆಯನ್ನು ನೋಡಿದರೆ ನಮ್ಮ ಸಾಹಿತ್ಯ ರೂಪಿ ವಿಮರ್ಶೆಗೆ ಅಪಾರವಾದ ಪರಂಪರೆಯೇ ಇರುವುದು ಕಾಣುತ್ತದೆ. ಇಂಥದ್ದನ್ನು ಕೂಡ ಈ ಆಧುನಿಕ ಪಂಥೀಯ ಪರಿಭಾಷೆಯಾದ ನವೋದಯ, ನವ್ಯ, ಬಂಡಾಯಾದಿಗಳಿಂದ ನೋಡಲಾಗುವುದಿಲ್ಲ. ವಿಮರ್ಶೆಯ ಅಖಂಡ ಪರಂಪರೆಯ ಮತ್ತು ಅದರ ಬಹುವಿನ್ಯಾಸಗಳ ಕಲ್ಪನೆ ನಮ್ಮವರಿಗೆ ಇಲ್ಲದುದರಿಂದಲೆ ಇಂತಹ ಸೀಮಿತ ದೃಷ್ಟಿಯ ನಂಬಿಕೆಗಳು ಸೃಷ್ಟಿಯಾಗಿವೆ.
19. ಸಾಹಿತ್ಯದ ವಿಭಾಗೀಕರಣ ಮಾರ್ಗವನ್ನೆ ವಿಮರ್ಶಾ ಚರಿತ್ರೆಯ ವರ್ಗೀಕರಣಕ್ಕು ಅನ್ವಯಿಸಬಹುದೊ?
ಕಾಲಘಟ್ಟಗಳ ಚರಿತ್ರೆಗಳು, ಪ್ರಕಾರರೂಪಿ ಚರಿತ್ರೆಗಳು, ಆಧುನಿಕ-ಪ್ರಾಚೀನ ಎಂಬ ವಿಂಗಡಿತ ಚರಿತ್ರೆಗಳು ಇತ್ಯಾದಿಯಾಗಿ ಹಲವು ರೀತಿಯ ಸಾಹಿತ್ಯ ಚರಿತ್ರೆಗಳು ನಮ್ಮಲ್ಲಿ ರಚನೆಯಾಗಿವೆ. ಆದರೆ ವಿಮರ್ಶೆಯ ಚರಿತ್ರೆಯು/ಗಳು ನಮ್ಮಲ್ಲಿ ರಚಿತವಾಗಿಲ್ಲ. ಆಧುನಿಕ ಕಾಲದಲ್ಲಿ ಮಾತ್ರ ವಿಮರ್ಶೆ ಸಂಭವಿಸಿದೆ ಎಂಬ ನಂಬಿಕೆಯಿಂದಲೆ ನಮ್ಮ ಪ್ರಾಚೀನರಲ್ಲಿ ವಿಮರ್ಶೆಯು ಇಲ್ಲದಿರಲು ಕಾರಣಗಳೇನು ಎಂದು ಅನ್ವೇಷಿಸಲೂ ಯತ್ನಿಸಲಾಗಿದೆ. ಇದಲ್ಲದೆ; ವಿಮರ್ಶೆಯ ಕುರಿತ ಅಧ್ಯಯನಗಳು ಮತ್ತು ವಿಚಾರಸಂಕಿರಣಗಳಲ್ಲಿ ನವೋದಯ ವಿಮರ್ಶೆ, ನವ್ಯ ವಿಮರ್ಶೆ, ಬಂಡಾಯ ವಿಮರ್ಶೆ, ಸ್ತ್ರೀವಾದಿ ವಿಮರ್ಶೆ, ಮಾರ್ಕ್ಸ್ವಾದಿ ವಿಮರ್ಶೆ, ತೌಲನಿಕ ವಿಮರ್ಶೆ ಇತ್ಯಾದಿ ಇಂತಹ ಮಾರ್ಗಗಳಲ್ಲಿ ಮಾತ್ರವೆ ವಿಮರ್ಶೆಯ ಚರಿತ್ರೆಯನ್ನು ವರ್ಗೀಕರಿಸಿ ಚರ್ಚಿಸಲು ಯತ್ನಿಸಲಾಗಿದೆ. ಸಾಹಿತ್ಯ ಚರಿತ್ರೆಯನ್ನು ಕಟ್ಟುವ ದೃಷ್ಟಿಗಳಿಂದಲೇ ವಿಮರ್ಶೆಯ ಚರಿತ್ರೆಯನ್ನು ನಮ್ಮವರು ಕಟ್ಟಿಕೊಳ್ಳಲು ಯತ್ನಿಸುತ್ತಿದ್ದಾರೆ. ಮತ್ತು ಆ ನೆಲೆಯಲ್ಲಿ ಹಲವು ಸಂಶೋಧನೆಗಳೂ ನಡೆದಿವೆ. ನಡೆಯುತ್ತಿವೆ. ವಿಮರ್ಶೆಯು ಒಂದು ಸಾಹಿತ್ಯ ಪ್ರಕಾರ ಮಾತ್ರ ಎಂದು ತಿಳಿದಾಗ ಇಂತಹ ದೃಷ್ಟಿಗಳು ಚಾಲ್ತಿಯಾಗುತ್ತವೆ. ದೋಷಪೂರ್ಣ ಸಾಹಿತ್ಯ ವಿಭಾಗೀಕರಣ ಮಾರ್ಗವನ್ನೆ ವಿಮರ್ಶಾ ಚರಿತ್ರೆಯ ವರ್ಗೀಕರಣಕ್ಕು ಅನ್ವಯಿಸಬಹುದೊ? ಹಾಗೆ ಮಾಡುವುದು ಸರ್ವಥಾ ಸಾಧುವಲ್ಲ. ನಮ್ಮ ವಿಮರ್ಶಾ ಚರಿತ್ರೆ ರಚನಾಶಾಸ್ತ್ರವು ಸಾಹಿತ್ಯ ಚರಿತ್ರೆ ರಚನಾ ಶಾಸ್ತçಕ್ಕಿಂತ ಭಿನ್ನವಾಗಿ ರೂಪಗೊಳ್ಳಬೇಕಾಗಿದೆ.
ರೂಪ, ಪಂಥ, ದೃಷ್ಟಿ ಹೀಗೆ ಭಿನ್ನ ನೆಲೆಗಳಲ್ಲಿ ವಿಮರ್ಶೆಯ ಚರಿತ್ರೆಯನ್ನು ಕಟ್ಟಿಕೊಳ್ಳಬಹುದಾದ ಸಾಧ್ಯತೆಗಳಿವೆ. ಆಚರಣೆ ಮತ್ತು ತತ್ವ ಎಂದು ಎರಡು ಮುಖ್ಯ ಕವಲಾಗಿ ನಮ್ಮ ವಿಮರ್ಶಾ ಚರಿತ್ರೆಯನ್ನು ಕಟ್ಟುವ ಸಾಧ್ಯತೆಗಳಿವೆ. ಆಚರಣೆಯನ್ನು ತಾತ್ವೀಕರಿಸುವ ಮೂಲಕ, ತತ್ವಜ್ಞಾನೀಕರಿಸುವ ಮೂಲಕ, ತತ್ವಗಳನ್ನು ಪರಿಕಲ್ಪಿಸುವ-ಕ್ರೋಡೀಕರಿಸುವ ಮೂಲಕ ಈ ಚರಿತ್ರೆ ಕಟ್ಟಿಕೊಳ್ಳುವ ಸಾಧ್ಯತೆಗಳಿವೆ.
20. ವಿಮರ್ಶೆಯಲ್ಲಿ ತತ್ವಗಳ ಕ್ರೋಡೀಕರಣ, ಆಚಾರದ ತಾತ್ವೀಕರಣ ಎಂದರೇನು?
ತತ್ವರೂಪದಲ್ಲಿ ಪ್ರಕಟವಾಗಿರುವ ವಿಮರ್ಶೆಯ ರೂಪಗಳನ್ನು, ದೃಷ್ಟಿಗಳನ್ನು ಕ್ರೋಡೀಕರಿಸಿಕೊಳ್ಳುವುದೆ ತತ್ವದ ಕ್ರೋಡೀಕರಣ. ಇದು ಗದ್ಯರೂಪದಲ್ಲೆ ಪ್ರಕಟ ಆಗಿರಬೇಕು ಎಂದೇನಿಲ್ಲ. ನಮ್ಮ ಪ್ರಾಚೀನರಲ್ಲಿ ಇದು ಎಲ್ಲ ಕಾವ್ಯಗಳ ಪೀಠಿಕೆಗಳಲ್ಲಿ ಪದ್ಯರೂಪಿಯಾಗಿ ಪ್ರಕಟವಾಗಿದೆ. ಅದನ್ನೆಲ್ಲ ಕ್ರೋಡೀಕರಿಸಿ ತಾತ್ವೀಕರಿಸಿಕೊಳ್ಳುವ ಅಗತ್ಯವಿದೆ. ಆದಾಗ್ಯೂ ಇದರಿಂದ ನಮ್ಮ ವಿಮರ್ಶೆಯ ಭಾಗಶಃ ಪರಿಚಯ ಮಾತ್ರ ಮಾಡಿಕೊಂಡಂತೆ ಆಗುತ್ತದೆ. ಅದರ ಬದಲಿಗೆ ನಮ್ಮಲ್ಲಿನ ಸಾಹಿತ್ಯದ ಆಚರಣೆಯನ್ನು ಮತ್ತು ವಿಮರ್ಶೆಯ ಆಚರಣೆಯನ್ನು ಪರಿಕಲ್ಪಿಸಿ-ತಾತ್ವೀಕರಿಸಿಕೊಳ್ಳುವುದರಿಂದ ನಮ್ಮ ವಿಮರ್ಶೆಯ ಅಜಮಾಸು ವಿನ್ಯಾಸಗಳನ್ನು ತಿಳಿಯಬಹುದಾಗಿದೆ. ಇಂತಹ ಪ್ರಾಕ್ಟೀಸಿನಲ್ಲಿ ಇರುವ ವಿಮರ್ಶೆಯ ವಿನ್ಯಾಸಗಳನ್ನು ಪರಿಕಲ್ಪಿಸಿ, ತಾತ್ವೀಕರಿಸಿಕೊಳ್ಳುವುದನ್ನು ಅಚಾರದ ತಾತ್ವೀಕರಣ ಎನ್ನಬಹುದು. ಅಂದರೆ ನಮ್ಮಲ್ಲಿ ಆದಿಯಿಂದ ಇದುವರೆಗೆ ಬೇರೆ ಬೇರೆ ವ್ಯಕ್ತಿಗಳಿಂದ ರಚನೆ ಆಗಿರುವ ವಿಮರ್ಶೆಗಳನ್ನು (ವಿಮರ್ಶೆಯ ಆಚಾರದ ಲೋಕವನ್ನು) ವರ್ಗೀಕರಿಸಿಕೊಂಡು ಅವುಗಳ ತಾತ್ವಿಕತೆ, ದಾರ್ಶನಿಕತೆ, ಭಿನ್ನತೆಗಳನ್ನು ವ್ಯಾಖ್ಯವಾನಿಸಿಕೊಳ್ಳುವ, ಪರಿಕಲ್ಪಿಸಿಕೊಳ್ಳುವ ಮತ್ತು ತಾತ್ವೀಕರಿಸಿಕೊಳ್ಳುವ ಅಗತ್ಯವಿದೆ. ಇದೊಂದು ಅಗತ್ಯವಾಗಿ ಆಗಬೇಕಿರುವ ಕೆಲಸ.
ಡಾ. ರಾಮಲಿಂಗಪ್ಪ ಟಿ. ಬೇಗೂರು
ಈ ಅಂಕಣದ ಹಿಂದಿನ ಬರೆಹಗಳು:
ನಾನೊಂದು ಕನಸ ಕಂಡೆ
ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ
ರಬ್ಬರ್ ಪ್ರಜ್ಞೆ
ಹಲವು ಬಗೆಯ ಕನ್ನಡ ರಾಮಾಯಣಗಳು
ನೇಮಿಚಂದ್ರ ಮತ್ತು ದೇಸಿ ಅನುಸಂಧಾನ
ಕಾವ್ಯಪ್ರಮಾಣ - ಕವಿಪ್ರಮಾಣಗಳ ನಿರಾಕರಣೆ
ಕಾಕಾಸುರ, ವಿರಾಧ ಪ್ರಸಂಗಗಳ ರಾಜಕಾರಣ
ರಾಮಾಯಣ ಸಂಕಥನ -03
ರಾಮಾಯಣ ಸಂಕಥನ 2
ರಾಮಾಯಣ ಸಂಕಥನ-1
ಕೆರೆಯ ನೀರನು ಕೆರೆಗೆ ಚೆಲ್ಲಿ
ಕೊಂಡಿ ಎಲ್ಲಿ ಕಳಚಿದೆ?
ಯಾರದೊ ಅಜೆಂಡಾ ಮಾರಮ್ಮನ ಜಾತ್ರೆ
ಹೊಸಕಾವ್ಯದ ಭಾಷೆ, ಗಾತ್ರ, ಹೂರಣ
ಗೌರಿಯರು: ಕುಟುಂಬ - ದಾಂಪತ್ಯ ಸಂಕಥನ
ರಾಷ್ಟ್ರೀಯತೆಯ ಆಚರಣೆಯ ಸುತ್ತ
ನೆನ್ನೆ ಮನ್ನೆ-1
ನಿನಗೇ ಬರೆದ ಪತ್ರ
ಆಯ್ದಕ್ಕಿ ಕಾಯಕ ಎಂದರೇನು?
ಐದು ಕೃಷಿ ಸಂಬಂಧಿ ಪುಸ್ತಕಗಳು
ಅಮೃತ ಮಹೋತ್ಸವದ ಹೊತ್ತಿಗೆ ಸಂವಿಧಾನದ ಪೀಠಿಕೆಯನ್ನಾದರೂ ಸಾಧಿಸಿದೆವಾ?
ವ್ಯಕ್ತಿ ಪೂಜೆ, ಸ್ಥಾನ ಪೂಜೆ
ವೇಶಾಂತರದ ಸಿಟ್ಟು ದೇಶಾಂತರದ ದ್ವೇಶ
ಕನಸಲ್ಲಿ ಬರುವ ಛೂಮಂತ್ರಯ್ಯ
ವಸ್ತ್ರ ಸಂಹಿತೆಯ ಸುತ್ತ
‘ಉರಿವ ಉದಕ’: ಕನ್ನಡದ ಕಥನ ಜಗತ್ತಿನ ಅನುಭವ ಲೋಕವನ್ನು ವಿಸ್ತರಿಸುವಂತಹ ಕತೆಗಳು
ಲೇಖನ ಚಿಹ್ನೆಗಳು
ಆತಂಕ, ಸಂಭ್ರಮಗಳು ಒಟ್ಟಿಗೇ ಕುದಿಯುತ್ತವೆ
ಪದವಿ ಪೂರ್ವ ಕನ್ನಡ ಪಠ್ಯ ಮತ್ತು ಕಲಿಕೆಯ ಅನುವಿನ ಉಪಕ್ರಮಗಳು:
ದೇಶ ಕಟ್ಟುವ ಕನಸು: ‘ಹಿಂದ್ ಸ್ವರಾಜ್’
ಬಂಡಾಯ ಕತೆಗಳ ನೋಟ ನಿಲುವು
ವ್ಯಕ್ತಿಹೆಸರುಗಳ ಸುತ್ತ ಮುತ್ತ
ಪ್ರೀತಿಯೆ ಲೋಕನೀತಿ ಆದ ಬಳಗಪ್ರಜ್ಞೆಯ ಪದ್ಯಗಳು....!
ಪೋಸ್ಟ್ ಬಾಕ್ಸ್ ನಂ.9
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -2
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -1
ಹರಿಭಕ್ತಿ ಸಾರ ಎಂಬ ಗಿಳಿಪಾಠ
ಕಲ್ಲು ದೈವ, ಮೊರ ದೈವ?
ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳು: ಕೆಲ ಟಿಪ್ಪಣಿಗಳು
ಲೋಕಸೌಂದರ್ಯವೇ ತಿರುಳಾದ ಸಾಹಿತ್ಯ ಸದಾ ಚಲನಶೀಲ
"ಯಶವಂತ ಚಿತ್ತಾಲರ ಸೆರೆ ಕಥೆಯನ್ನು ಒಂದು ದೃಷ್ಟಾಂತವಾಗಿ ನೋಡಬಹುದಾದದ್ದು. ತಂದೆಯ ಶ್ರಾದ್ಧದ ದಿನದಂದೇ ಮಗನ ಮದುವೆ...
"ತಾಯ್ಮಾತು ಎಂಬುದು ಸಹಜವಾಗಿಯೆ ತಾಯಿ ಪದವನ್ನು ಒಳಗೊಂಡಿರುವುದರಿAದ ತಾಯಿಯೊಂದಿಗೆ ನಂಟನ್ನು ತೋರಿಸುತ್ತದೆ. ಈ ಪದದ...
"ಎನ್. ಧರ್ಮಸಿಂಗ್ ಅವರನ್ನು ಮೊಟ್ಟ ಮೊದಲ ಬಾರಿ ನಾನು ಅತ್ಯಂತ ಹತ್ತಿರದಿಂದ ನೋಡಿದ್ದು 1972ರಲ್ಲಿ. ಆಗ ನಾನು ಹೈಸ್...
©2024 Book Brahma Private Limited.