ಹಲವು ಬಗೆಯ ಕನ್ನಡ ರಾಮಾಯಣಗಳು

Date: 24-01-2024

Location: ಬೆಂಗಳೂರು


"ನಮ್ಮ ಕನ್ನಡ ರಾಮಾಯಣಗಳಲ್ಲಿ ಹಲವು ಕಾಲಗಳಲ್ಲಿ ಹಲವು ಪಂಥಗಳಲ್ಲಿ ಹಲವು ಬಗೆಯ ಕಥನಗಳು ಹುಟ್ಟಿಕೊಂಡಿವೆ. ಅವುಗಳಲ್ಲಿ ಜೈನ ಧಾರೆ, ವೈದಿಕ-ವೈಷ್ಣವ ಧಾರೆ, ಜನಪದ ಧಾರೆ, ಆಧುನಿಕ ಧಾರೆ ಎಂದು ಮುಖ್ಯವಾಗಿ ನಾಲ್ಕು ಧಾರೆಗಳನ್ನು ಗುರ್ತಿಸಬಹುದು," ಎನ್ನುತ್ತಾರೆ ಡಾ. ರಾಮಲಿಂಗಪ್ಪ ಟಿ.ಬೇಗೂರು. ಅವರು ತಮ್ಮ ‘ನೀರು ನೆರಳು’ ಅಂಕಣದಲ್ಲಿ ‘ಹಲವು ಬಗೆಯ ಕನ್ನಡ ರಾಮಾಯಣಗಳು’ ಕುರಿತು ಬರೆದಿದ್ದಾರೆ.

ನಮ್ಮ ಕನ್ನಡ ರಾಮಾಯಣಗಳಲ್ಲಿ ಹಲವು ಕಾಲಗಳಲ್ಲಿ ಹಲವು ಪಂಥಗಳಲ್ಲಿ ಹಲವು ಬಗೆಯ ಕಥನಗಳು ಹುಟ್ಟಿಕೊಂಡಿವೆ. ಅವುಗಳಲ್ಲಿ ಜೈನ ಧಾರೆ, ವೈದಿಕ-ವೈಷ್ಣವ ಧಾರೆ, ಜನಪದ ಧಾರೆ, ಆಧುನಿಕ ಧಾರೆ ಎಂದು ಮುಖ್ಯವಾಗಿ ನಾಲ್ಕು ಧಾರೆಗಳನ್ನು ಗುರ್ತಿಸಬಹುದು. 50ಕ್ಕು ಹೆಚ್ಚು ಕೃತಿಗಳು ಈ ಎಲ್ಲ ಧಾರೆಗಳಲ್ಲಿ ರಚನೆಯಾಗಿವೆ. ಇವುಗಳಲ್ಲಿ ಸಾಕಷ್ಟು ಕಥಾವ್ಯತ್ಯಾಸಗಳು ಇವೆ. ಕಥನದ ಕಾರ್ಯವೆ ಜನರ ಮಿದುಳನ್ನು ರಂಜನೆಯ ಮೂಲಕ ತೊಳೆಯುವ ಪ್ರಯತ್ನ. ಇನ್ನು ಅಂಥವನ್ನು ಓದುವ ಮತ್ತು ಓದಿಸುವ ಓಜಯ್ಯಗಳಂತು ನಿರಂತರ ಇದನ್ನೆ ಮಾಡುತ್ತ ಬಂದಿದ್ದಾರೆ. ಇದು ಹೀಗೆ ನಡೆದ ಕಥೆ. ಇದರಿಂದ ಇವರಿಗೆ ಹೀಗೆ ಆಯಿತು. ನೀವೂ ಹೀಗೆಲ್ಲ ನಡೆದುಕೊಂಡರೆ ನಿಮಗೂ ಹೀಗೆಲ್ಲ ಆಗಬಹುದು. ಹುಷಾರು ಎಂದು ಎಚ್ಚರಿಸುವ ಕೆಲಸಕ್ಕೆ ನಮ್ಮಲ್ಲಿ ರಾಮಾಯಣ ಕಥನವನ್ನು ಹೆಚ್ಚಾಗಿ ಬಳಸಲಾಗಿದೆ.

ಇಲ್ಲಿ ಸೀತೆಗೆ ಬಾಯಾರಿಕೆ ಆದಾಗ ರಾಮ ಬಾಣ ಹೂಡಿ ನೀರು ಬರಿಸಿದ್ದ (ಮೇಲುಕೋಟೆಯ ಧನುಷ್ಕೋಟಿ). ಇದು ಲಕ್ಷ್ಮಣ ರಾಮಸೀತೆಯರಿಗೆ ನಿರ್ಮಿಸಿದ ನೀರಿನ ಹೊಂಡ. ಅದಕ್ಕೆ ಇದನ್ನು ಲಕ್ಷ್ಮಣ ತೀರ್ಥ ಎನ್ನುತ್ತಾರೆ. ಇಲ್ಲಿ ಬಾಯಾರಿಕೆ ಆದಾಗ ಸೀತೆಗೆ ನೀರು ಕುಡಿಸಲು ರಾಮ ಬಂಡೆಗೆ ಬಾಣ ಹೂಡಿ ನೀರು ಚಿಮ್ಮಿಸಿದ (ಉತ್ತರಕನ್ನಡದ ಹೊನ್ನಾವರದ ರಾಮತೀರ್ಥ). ಸ್ನಾನ ಮಾಡಲು ನೀರಿಲ್ಲದಾಗ ರಾಮ ಬಂಡೆಗೆ ಬಾಣ ಹೂಡಿ ಬಾವಿ ನಿರ್ಮಿಸಿದ (ಚಿತ್ರದುರ್ಗದ ಹೊಳಲ್ಕೆರೆಯ ರಾಮಗಿರಿ ಬೆಟ್ಟ). ಇಲ್ಲಿ ನಾಮ ಇಟ್ಟುಕೊಳ್ಳಲು ನೀರಿಲ್ಲದಾಗ ಬಂಡೆಗೆ ಬಾಣ ಹೂಡಿನೀರು ಚಿಮ್ಮಿಸಿದ. ಅದಕ್ಕೇ ಇದನ್ನು ನಾಮದ ಚಿಲುಮೆ ಎನ್ನುತ್ತಾರೆ. (ತುಮಕೂರಿನ ದೇವರಾಯನ ದುರ್ಗ). ಹೀಗೆ ಸದಾ ದೇಶ, ಕಾಲಗಳನ್ನು ಮೀರಿ ರಾಮಾಯಣವನ್ನು ಚರಿತ್ರೆ, ಸ್ಥಳಪುರಾಣ, ಐತಿಹ್ಯಗಳನ್ನಾಗಿ ನೋಡುತ್ತ, ಮಾಡುತ್ತ ಬರಲಾಗಿದೆ. ಅಂದರೆ ಇದೆಲ್ಲ ನಡೆದದ್ದೆ, ಕಲ್ಪಿತ ಅಲ್ಲ ಎಂದು ನಮ್ಮ ಜನರನ್ನು ನಂಬಿಸುವ ಕೆಲಸದ ಭಾಗವಿದು. ಕಥನಕ್ಕೆ ವಾಸ್ತವತೆ ತುಂಬುವ, ಆ ಮೂಲಕ ಜನರಲ್ಲಿ ಶ್ರದ್ಧೆ ಉತ್ಪಾದಿಸುವ ಕೆಲಸ ಇದು.

ವೈದಿಕ-ವೈಷ್ಣವರು ಅವರನ್ನು ಅವತಾರಗಳೆಂದೂ, ಸಾಕ್ಷಾತ್‌ ವಿಷ್ಣುಪರಮಾತ್ಮ, ಲಕ್ಷ್ಮೀದೇವಿ ಎಂದೂ ಕಲ್ಪಿಸಿದ್ದಾರೆ. ಆದರೆ ಬೌದ್ಧ, ಜೈನ ಕಥನಗಳಲ್ಲಿ ರಾಮ, ಸೀತೆ ಯಾರೂ ದೇವರಲ್ಲ. ಸಾಮಾನ್ಯ ಮನುಷ್ಯರು. ಅನಾದಿಯಿಂದಲು ಇಂತಹ ಸಾಮಾನ್ಯ ರಾಮಸೀತೆಯರಲ್ಲಿ ಇರುವ ಕೇಡಿನ ಅಂಶಗಳನ್ನು ಪರಿಹರಿಸಿ; ಒಳಿತಿನ, ಸದ್ವರ್ತನೆಯ ಸಂಕೇತವಾಗಿ ಅವರನ್ನು ಕಟ್ಟಲು ಹಲವು ರಾಮಾಯಣಗಳು ಯತ್ನಿಸಿವೆ. ಮನುಷ್ಯನ ಒಳಗೇ ಇರಬಹುದಾದ ದೈವತ್ವದ ಉದ್ದೀಪನದ ಸಾಧನವಾಗಿ ರಾಮಕಥನಗಳನ್ನು ಬಳಸುವ ಕೆಲಸವನ್ನು ನಮ್ಮ ಕೆಲವು ರಾಮಾಯಣ ಅನುಸಂಧಾನಗಳೂ ಮಾಡುತ್ತ ಬಂದಿವೆ. ನ್ಯಾಯ, ಸತ್ಯ, ಸೋದರತೆ, ಕರುಣೆ, ವಚನಪಾಲನೆ, ಏಕಪತ್ನಿತ್ವ, ಲೈಂಗಿಕ ನಿಷ್ಠೆ, ಕುಟುಂಬಿತನ ಇತ್ಯಾದಿ ಮೌಲ್ಯಗಳ ಪ್ರತೀಕವಾಗಿ ಈತನನ್ನು ಕಟ್ಟಿಕೊಳ್ಳುತ್ತ ಬರಲಾಗಿದೆ. ಇಂತಹ ರಾಮನನ್ನು ದೂರವಿರಿಸಿ; ಇತರರ ನಂಬಿಕೆ, ಶ್ರದ್ಧೆಗಳನ್ನು ಗೌರವಿಸಬೇಕು ಎಂದು ನಮಗೆ ನಾವೆ ಸಂವಿಧಾನದಲ್ಲಿ ಹೇಳಿಕೊಂಡು, ನಾಲ್ಕು ಶತಮಾನ ಇದ್ದ ಮಸೀದಿಯನ್ನು ಕೆಡವಿ ಅಲ್ಲಿ ರಾಮದೇಗುಲ ಕಟ್ಟುವುದು ಯಾವ ನ್ಯಾಯ? ಮಸೀದಿಯ ಜಾಗದಲ್ಲೆ ರಾಮನ ಮೂರ್ತಿ ನೆಲೆಗೊಳ್ಳಬೇಕೆ? ಅದರ ಆಸುಪಾಸು ಆಗದೆ? ಗುಡಿ ಚರ್ಚು ಮಸೀದಿಗಳನ್ನೆಲ್ಲ ನಾವು ಬಿಟ್ಟುಬಿಡಬೇಕು: ಅವು ನಮ್ಮ ಬಡತನವನ್ನು ನೀಗಿಸುವುದಿಲ್ಲ; ಸಮಸಮಾಜವನ್ನು ಕಟ್ಟಗೊಡುವುದಿಲ್ಲ. ಆದಾಗ್ಯೂ ಆಸುಪಾಸಲ್ಲೆ ಮಸೀದಿ ಮಂದಿರ ಎರಡೂ ಕಟ್ಟಿದ್ದಿದ್ದರೆ ಜಗತ್ತಿಗೇ ನಾವು ಸಹಬಾಳ್ವೆಗೆ ಮಾದರಿ ಆಗುತ್ತಿದ್ದೆವಲ್ಲವೆ? 1992ರಲ್ಲಿ ಮಸೀದಿ ಧ್ವಂಸ ಆದ ನಂತರ ನಡೆದ ಕೋಮುಗಲಭೆಗಳಲ್ಲಿ ಎರಡು ಸಾವಿರಕ್ಕು ಹೆಚ್ಚು ಮಂದಿ ಮೃತರಾದರೆಂದು ವರದಿಗಳು ಹೇಳುತ್ತವೆ. ಇನ್ನು ಶ್ರೀರಾಮನ ಹೆಸರಿನಲ್ಲಿ ಮುಂದೆ ಎಷ್ಟೆಲ್ಲ ಧಾರ್ಮಿಕ ಯಜಮಾನಿಕೆಗಳು, ಧಾರ್ಮಿಕ ಬ್ಯುಸಿನೆಸ್ಸುಗಳು, ಕೋಮು ಗಲಭೆಗಳಿಗೆ ಕಾರಣವಾಗಬಹುದು?

ರಾಜತ್ವವನ್ನು ದೈವತ್ವಕ್ಕೆ ಏರಿಸುವ, ಪುರಾಣೀಕರಿಸುವ ಕೆಲಸಕ್ಕು ನಮ್ಮಲ್ಲಿ ರಾಮನ ಕಥನವನ್ನು ಆಗಾಗ ಬಳಸುತ್ತ ಬರಲಾಗಿದೆ. ಇದರ ಮುಂದುವರಿದ ಭಾಗವಾಗಿ ಸದ್ಯದಲ್ಲೆ ಅಯೋಧ್ಯಾ ದೇಗುಲದ ಜೊತೆಗೆ ಮೋದಿಯವರನ್ನು ದೈವೀಕರಿಸುವ, ಪುರಾಣೀಕರಿಸುವ ಕೆಲಸವೂ ಆಗಬಹುದು. ಜನರಿಂದ ಅವರನ್ನು ರಾಮಾವತಾರಿ ಎನ್ನಿಸಬಹುದು. ದಂಪತಿ ಪ್ರತೀಕ ರಾಮನನ್ನು, ಬೇಟೆಗಾರ ರಾಮನನ್ನು, ಧನುರ್ಧಾರಿ ಯೋಧ ರಾಮನನ್ನು, ಶೂದ್ರತಪಸ್ವಿಯನ್ನು ಕೊಂದ ಪ್ರಕ್ಷಿಪ್ತ ರಾಮನನ್ನು – ಹಾಗೆಯೆ ಶೂದ್ರತಪಸ್ವಿಯನ್ನು ಗೌರವಿಸಿದ ಕುವೆಂಪು ರಾಮನನ್ನು, ಅಹಲ್ಯೆಯನ್ನು ಉದ್ಧರಿಸಿದ ಲಿಂಗಸಂವೇದಿ ರಾಮನನ್ನು, ಶಬರಿಯ ಎಂಜಲ ಹಣ್ಣ ತಿಂದ ವಾತ್ಸಲ್ಯಮಯಿ ರಾಮನನ್ನು, ಹೆಂಡತಿಯನ್ನು ಮರಳಿ ಪಡೆಯಲು ವಾಲಿಯನ್ನು ಮರೆಯಿಂದ ಕೊಂದ ಹುನ್ನಾರಗಾರ ರಾಮನನ್ನು, ರಾವಣನ ಆಸ್ಥಾನದಲ್ಲಿ ವಿಭೀಷಣನನ್ನು ಪ್ರತಿಷ್ಠಾಪಿಸಿದ ಯುದ್ಧತಂತ್ರಿ ರಾಮನನ್ನು, ರಾಮಧಾನ್ಯವೆಂದು ರಾಗಿಗೆ ತನ್ನ ಹೆಸರನ್ನೆ ನೀಡಿದ ಅಪವರ್ಗೀಕೃತ ರಾಮನನ್ನು ಹೀಗೆ ಹಲವು ಬಗೆಯ ರಾಮರನ್ನು ನಾವು ಕಂಡಿದ್ದೇವೆ. ಬಿಳಿಗಡ್ಡದ ಮುನಿರಾಮನನ್ನು ನಾವು ಕಂಡಿಲ್ಲ. ಸದ್ಯದಲ್ಲೆ ಅದೂ ಆಗಬಹುದು!

ಪಟೇಲ್‌ ವೇಶ, ಗಾಂಧಿ ವೇಶ, ಬೋಸ್‌ ವೇಶ, ವನ್ಯಜೀವಿ ಸಂರಕ್ಷಕನ ವೇಶ, ಚಾರಣಿಗನ ವೇಶ, ಸಮುದ್ರಮುಳುಗನ ವೇಶ ಹೀಗೆ ನಾನಾ ವೇಶಗಳನ್ನು ನಮ್ಮ ದೇಶದ ಪ್ರಧಾನಿಗೆ ತೊಡಿಸಿದವರು ಧನುರ್ಧಾರಿ ರಾಮವೇಶವನ್ನು ತೊಡಿಸಲಾರರೆ? ಕಟೆದ ಕಲ್ಲಿಗೆ ಪ್ರಾಣಪ್ರತಿಷ್ಠಾಪನೆಗೆ ಮುಖ್ಯ ಯಜಮಾನರಾಗಿ ಬರುತ್ತಿರುವುದು ನಮ್ಮ ದೇಶದ ಪ್ರಧಾನಿಯವರು. ಇದನ್ನು ಎಲ್ಲ ಪಕ್ಷಪಾತಿ ಮಾದ್ಯಮದವರೂ ಒಪ್ಪಿ ಭಜನೆಯಂತೆ ಬಿತ್ತರಿಸುತ್ತಿದ್ದಾರೆ. ದೇಶದ ಬಹುಸಂಖ್ಯಾತ ಜನರನ್ನು ಪಕ್ಷಭಕ್ತರನ್ನಾಗಿ ಮಾಡುವ ಹುನ್ನಾರವಿದು ಎಂಬುದು ಮೇಲ್ನೋಟಕ್ಕೇ ಕಾಣುತ್ತಿದೆ.

ಪಕ್ಷ-ಪಾತಿ ರಾಮನನ್ನಾಗಿ ಶ್ರೀರಾಮನನ್ನು ಬ್ರಾಂಡ್‌ ಮಾಡುವ ಮತ್ತು ಅದನ್ನು ಒಡೆಯುವ ಎರಡೂ ಪ್ರಯತ್ನಗಳು ಈಗೀಗ ಜರುಗುತ್ತಿವೆ. ಇವೆಲ್ಲ ಅಧಿಕಾರ ರಾಜಕಾರಣ ಮತ್ತು ಪ್ರತಿರಾಜಕಾರಣದ ನಡೆಗಳು. ಇವು ಸಮಾಜದ ಯಾವ ಒಳಿತಿಗು ಬರುವುದಿಲ್ಲ. ದೇವರ ಪ್ರಾಣಪ್ರತಿಷ್ಠೆಗೆ, ಆರಾಧನೆಗೆ, ಮಹಾಂತರ ಜಯಂತಿಗಳ ಆಚರಣೆಗೆ ರಜೆ ಘೋಷಣೆ ಮಾಡುವ ಸರ್ಕಾರಿ ಪದ್ಧತಿ ನಿಜಕ್ಕು ಅನುಸರಣೀಯ ನಡೆ ಅಲ್ಲ. ನಮ್ಮ ಸರ್ಕಾರಗಳು ಜಾತಿ ಧರ್ಮಗಳನ್ನು ತುಷ್ಠೀಕರಿಸುವುದನ್ನು ಬಿಡಬೇಕು. ನಾವು ವಿಚಾರವಂತರನ್ನು ಉತ್ಪಾದಿಸಬೇಕು. ಅಂಧಭಕ್ತರನ್ನಲ್ಲ. ನಮ್ಮ ಸಂವಿಧಾನದ ಪೀಠಿಕೆಯಲ್ಲೆ ಎಲ್ಲರಿಗು ಉಪಾಸನಾ ಸ್ವಾಂತಂತ್ರ್ಯ ನೀಡುವ ಬಗ್ಗೆ ನಾವೆ ಅವಕಾಶ ವಿಧಿಸಿಕೊಂಡಿದ್ದೇವೆ. ಆದರೆ ಆಚಾರದಲ್ಲಿ ಒಂದೆ ದೇವರನ್ನು ಎಲ್ಲ ಭಾರತದ ಜನತೆಯು ಆರಾಧಿಸಿ ಎಂದೂ ಒತ್ತಾಯಿಸುತ್ತ ಇದ್ದೇವೆ. ಇದೆಂಥ ವೈರುಧ್ಯ!

ಇರಲಿ ನಮ್ಮ ರಾಮಾಯಣದ ಬಹುತ್ವಕ್ಕೆ ಬರೋಣ: ಕನ್ನಡದಲ್ಲಿ ರಚನೆಯಾಗಿರುವ ರಾಮಾಯಣಗಳನ್ನು ಇಲ್ಲಿಷ್ಟು ನೋಡೋಣ: ನಮ್ಮಲ್ಲಿ ಕಾಲಕಾಲಕ್ಕೆ ಕನ್ನಡದಲ್ಲಿ ರಚನೆ ಆಗಿರುವ ರಾಮಾಯಣ ಕಾವ್ಯಗಳು ಹೀಗಿವೆ.

1. ಭುವನೈಕ ರಾಮಾಭ್ಯುದಯ –ಪೊನ್ನ (ಅಲಭ್ಯ) 950
2. ಚಾವುಂಡರಾಯ ಪುರಾಣ (ಇಲ್ಲಿನ ರಾಮಕಥಾ) –ಚಾವುಂಡರಾಯ, 980
3. ರಾಮಚಂದ್ರ ಚರಿತ ಪುರಾಣ – ನಾಗಚಂದ್ರ, 1100
4. ಜೀವಸಂಬೋಧನ (ಒಂದು ಭಾಗ) –ಬಂಧುವರ್ಮ, 1200
5. ಕುಮುದೇಂದು ರಾಮಾಯಣ –ಕುಮುದೇಂದು, 1275
6. ತೊರವೆ ರಾಮಾಯಣ -ತೊರವೆ ನರಹರಿ, 1500
7. ರಾಮವಿಜಯ ಕಾವ್ಯ -ದೇವಪ್ಪ ಕವಿ, 1540
8. ಜೈಮಿನಿ ಭಾರತ –ಲಕ್ಷ್ಮೀಶ, 1550
9. ಅದ್ವೈತ ರಾಮಾಯಣ –ನಿಜಗುಣಾರ್ಯ, 1650
10. ಮಾರ್ಕಂಡೇಯ ರಾಮಾಯಣ –ತಿಮ್ಮರಸ, 1650
11. ವರದವಿಠ್ಠಲ ರಾಮಾಯಣ -ವಾಲಗಳ್ಳಿ ವದವಿಠ್ಠಲ, 1675
12. ಕೌಶಿಕ ರಾಮಾಯಣ -ಬತ್ತಲೇಶ್ವರ ಕವಿ, 1700
13. ರಾಮಚಂದ್ರ ಚರಿತ್ರೆ –ಚಂದ್ರಶೇಖರ, ಪದ್ಮನಾಭ, 1700
14. ರಾಮಾಭ್ಯುದಯ (ಕಥಾಕುಸುಮಮಂಜರಿ) –ತಿಮ್ಮಾಮಾತ್ಯ (ತಿಮ್ಮಾರ್ಯ), 1700
15. ಮೈರಾವಣ ಕಾಳಗ –ವೆಂಕಟಕವಿ, 1720
16. ಸೀತಾ ಕಲ್ಯಾಣ -ಹೆಳವನಕಟ್ಟೆ ಗಿರಿಯಮ್ಮ, 1750
17. ಲವಕುಶ ಕಾಳಗ/ ಪಟದ ಸಂಧಿ -ಹೆಳವನಕಟ್ಟೆ ಗಿರಿಯಮ್ಮ, 1750
18. ಸೀತಾ ಸ್ವಯಂವರ -ಅಳಿಯ ಲಿಂಗರಾಜ, 1750
19. ಚಿಕ್ಕ ಪಟ್ಟಾಭಿಷೇಕ -ಅಳಿಯ ಲಿಂಗರಾಜ, 1750
20. ಸೀತಾಪಹಾರ -ಅಳಿಯ ಲಿಂಗರಾಜ, 1750
21. ಕುಶಲವ ಕಾಳಗ -ಅಳಿಯ ಲಿಂಗರಾಜ, 1750
22. ಜಿನರಾಮಾಯಣ –ಚಂದ್ರಸಾಗರವರ್ಣಿ, 1757
23. ಶ್ರೀರಾಮ ಕಥಾಮೃತ –ವೆಂಕಮಾತ್ಯ, 1770
24. ಜಿನ ರಾಮಾಯಣ –ಪದ್ಮಣಾಂಕ 1800 ?
25. ಶಂಕರ ರಾಮಾಯಣ –ತಿಮ್ಮಣ್ಣ, 1800 ?
26. ಅಧ್ಯಾತ್ಮ ರಾಮಾಯಣ –ಶಂಕರನಾರಾಯಣ 1800 ?
27. ಮೂಲಬಲ ರಾಮಾಯಣ –ಹರಿದಾಸ 1800 ?
28. ಕುಮಾರ ಕಾಳಗ –ಪದ್ಮಶಾಲಿ ತಿಮ್ಮಣ್ಣ ಕವಿ 1850
29. ಸಂಕ್ಷೇಪ ರಾಮಾಯಣ -ಹರಪನಹಳ್ಳಿ ಭೀಮವ್ವ (ಕಮಲಾಕ್ಷಿ) 1823-1903
30. ರಾಮಕಥಾವತಾರ –ದೇವಚಂದ್ರ, 1838
31. ಶ್ರೀರಾಮಾಶ್ವಮೇಧಂ -ಮುದ್ದಣ, 1869
32. ಶ್ರೀರಾಮ ಪಟ್ಟಾಭಿಷೇಕ -ಮುದ್ದಣ, 1890
33. ಅದ್ಭುತ ರಾಮಾಯಣ -ಮುದ್ದಣ, 1890
34. ಶೇಷ ರಾಮಾಯಣ –ಸೋಸಲೆ ಅಯ್ಯಾಶಾಸ್ತ್ರಿ, 1900
35. ಶ್ರೀರಾಮ ಕಥಾಮೃತ -ಸುಂದರಕಾಂಡದ ಅಂಬಾಬಾಯಿ, 1902(1935)
36. ಸೀತಾ ಚರಿತ್ರೆ -ಸಿ. ಎ. ಅಣ್ಣಯ್ಯ, 1912
37. ರಾಮಾಯಣ (ಗದ್ಯ) –ಆಳಸಿಂಗ್ರಾಚಾರ್‌, 1912
38. ಶ್ರೀ ರಾಮ ಪರೀಕ್ಷಣಂ –ಡಿವಿಜಿ, 1945
39. ರಾಮಾಯಣ (ಗದ್ಯ) –ವಿ.ಸೀತಾರಾಮಶಾಸ್ತ್ರಿ, 1960
40. ಶ್ರೀ ರಾಮಾಯಣ ದರ್ಶನಂ –ಕುವೆಂಪು, 1964
41. ಶ್ರೀ ರಾಮ ಪಟ್ಟಾಭಿಷೇಕಂ –ಮಾಸ್ತಿ, 1968
42. ಜನಪದ ರಾಮಾಯಣ -ವಿವಿಧ ಗಾಯಕರು, 1973
43. ಮಂದಾರ ರಾಮಯಣ –ಮಂದಾರ ಕೇಶವಭಟ್ಟ, 1984
44. ಗೊಂಡರ ರಾಮಾಯಣ –ತಿಮ್ಮಪ್ಪಗೊಂಡರ ಹಾಡುಗಾರಿಕೆ, 1999
45. ರಾಮಾಯಣ ಮಹಾಕಾವ್ಯ –ಹು.ಬ. ಶಿವರುದ್ರಯ್ಯ ಬಾಪುರಿ, 1999
46. ಶ್ರೀ ರಾಮಾಯಣ ಮಹಾನ್ವೇಷಣಂ -ವೀರಪ್ಪ ಮೊಯಿಲಿ, 2015
47. ಶ್ರೀರಾಮದರ್ಶನ -ಲತಾ ರಾಜಶೇಖರ 2014
48. ಶ್ರೀರಾಮಚಾರಣ -ಎಚ್. ಎಸ್‌. ವೆಂಕಟೇಶಮೂರ್ತಿ, 2016
49. ಚಿತ್ರಪಟ ರಾಮಾಯಣ –ಜನಪದ ಕವಿ
50. ಉತ್ತರ ರಾಮಾಯಣ –ನರಸಪ್ಪಕವಿ
51. ಉತ್ತರ ರಾಮಾಯಣ -ಯೋಗೀಂದ್ರ
52. ಉತ್ತರ ರಾಮಾಯಣ –ನಾರಾಯಣ ಕವಿ
53. ಉತ್ತರ ರಾಮಾಯಣ –ತಿರುಮಲೆ ವೈದ್ಯ
54. ಅಧ್ಯಾತ್ಮ ರಾಮಾಯಣ –ಅನು: ಮುಮ್ಮಡಿ ಕೃಷ್ಣರಾಜ
55. ರಾಮಾಶ್ವಮೇಧ –ಸೋಸಲೆ ಅಯ್ಯಾಶಾಸ್ತ್ರಿ,
56. ಲವಕುಶ ಕಾಳಗ –ತಿಪ್ಪಣಾಯಣ,
57. ಮೂಲಕ ರಾಮಾಯಣ –(ವರದ ವಿಟ್ಠಲ?) ಅಜ್ಞಾತ ಕವಿ
58. ಸೀತಾಚರಿತ್ರೆ –ನಂಜನಗೂಡು ಸುಬ್ಬಾಶಾಸ್ತ್ರಿ
59. ಗೀತ ರಾಮಾಯಣ –ಶ್ರೀನಿವಾಸ ತೋಪಖಾನೆ
60. ರವಿಶೇಣ ರಾಮಾಯಣ –ಮಿರ್ಜಿ ಅಣ್ಣಾರಾಯ?
61. ರಾಮಾಯಣ (ಎರಡು ಕಾಂಡ: ಅಪೂರ್ಣ ) –ಸಾಲಿ ರಾಮಚಂದ್ರರಾಯ (ಅಪ್ರಕಟಿತ)
62. ವಾಕ್ಯರಾಮಾಯಣ –ಬಾಗಲೂರು ರಾಮಸ್ವಾಮಿ?
63. ವಾಸಿಷ್ಟ ರಾಮಾಯಣ – ಕವಿ? ಸಂ: ಬೇಕಲ್‌ ರಾಮನಾಯಕ
64. ಸಂಕ್ಷೇಪ ರಾಮಾಯಣ –ಭಾಷ್ಯಂ ತಿರುಮಲಾಚಾರ್ಯ?
65. ಕಾವ್ಯರಾಮಾಯಣ –ಲಕ್ಷ್ಮಣ ವಿ. ಜೋಷಿ?

ನಮ್ಮ ಕನ್ನಡದಲ್ಲಿನ ವೈವಿದ್ಯಮಯ ರಾಮಾಯಣಗಳನ್ನು ಹೆಸರಿಸಲು ಈ ಪಟ್ಟಿಯನ್ನು ನಿಡಲಾಗಿದೆ. ಈ ಪಟ್ಟಿ ಅಪೂರ್ಣ. ಇಲ್ಲಿ ಕಾವ್ಯಗಳನ್ನು ಮಾತ್ರ ಗಮನಿಸಲಾಗಿದೆ. ನೂರಾರು ಯಕ್ಷಗಾನಗಳು, ನೂರಾರು ಬಯಲಾಟಗಳು, ನೂರಾರು ಮೌಖಿಕ ಕಥನಗಳು, ಹಾಡುಗಳು – ಹಾಡ್ಗತೆಗಳು, ನೂರಾರು ಆಧುನಿಕ ಪದ್ಯಗಳು ಮತ್ತು ಹವ್ಯಾಸಿ, ಸಾಮಾಜಿಕ, ಪೌರಾಣಿಕ ನಾಟಕಗಳು, ಕತೆ, ಕಾದಂಬರಿಗಳು ಇಲ್ಲಿ ರಾಮಾಯಣದ ಸುತ್ತ ರಚನೆಯಾಗಿವೆ. ಅವೆಲ್ಲವನ್ನೂ ಸೇರಿಸಿಕೊಂಡರೆ ಈ ಪಟ್ಟಿ ಐನೂರು, ಸಾವಿರವನ್ನೂ ದಾಟಬಹುದು.

ಇಲ್ಲಿನ ಪಟ್ಟಿಯಷ್ಟನ್ನೆ ಗಮನಿಸಿ ಹೇಳುವುದಾದರೆ. ಇಲ್ಲಿನ ರಾಮಸೀತೆಯರು ಒಂದೊಂದರಲ್ಲು ಭಿನ್ನವಾಗಿ ಚಿತ್ರಿತರಾಗಿದ್ದಾರೆ. ಇಲ್ಲಿ ಬೌದ್ಧ, ಜೈನ, ವೈಷ್ಣವ, ವೈದಿಕ, ಜನಪದ ಧಾರೆಗಳು ಇರುವಂತೆಯೆ ಮಹಿಳಾ ಧಾರೆಗಳೂ ಇವೆ. ಬಹುಪಾಲು ಮಹಿಳಾ ಕಾವ್ಯಗಳಲ್ಲೂ ಪುರುಷಧ್ವನಿಗಳೇ ಯಜಮಾನಿಕೆ ವಹಿಸಿವೆ. ಪುರುಷರು ಬರೆದ ಕೆಲವು ರಾಮಾಯಣಗಳಲ್ಲಿ ಸ್ತ್ರೀಪರ ಕಾಳಜಿಗಳೂ ವ್ಯಕ್ತವಾಗಿವೆ. ಉದಾಹರಣೆಗೆ ಹೆಳವನಕಟ್ಟೆ ಗಿರಿಯಮ್ಮ ಬರೆದ ರಾಮಾಯಣದಲ್ಲಿ ರಾಮನನ್ನು ಭಕ್ತಿಯಿಂದ ಕೊಂಡಾಡಲಾಗಿದೆ. ಕುವೆಂಪು ಬರೆದ ರಾಮಾಯಣದಲ್ಲಿ ಅವನನ್ನು ವಾಲಿವಧೆ, ಪತ್ನಿಪರಿತ್ಯಾಗ ಇಂತಹ ಕೆಲವೆಡೆ ಪ್ರಶ್ನಿಸಲಾಗಿದೆ. ಮುದ್ದಣ ಬರೆದ ಅದ್ಭುತ ರಾಮಾಯಣದಲ್ಲಿ ಸೀತೆಯನ್ನು ಕಾಳಿಯ ಪ್ರತಿರೂಪ ಎಂಬಂತೆ, ರಾಮನಿಗಿಂತ ಶಕ್ತಿಶಾಲಿ ಎಂಬಂತೆ ಚಿತ್ರಿಸಲಾಗಿದೆ.

ಅಧ್ಯಾತ್ಮ ರಾಮಾಯಣದ ಪ್ರಭಾವದಿಂದ ಅಂಬಾಬಾಯಿ ಬರೆದ ರಾಮಾಯಣದಲ್ಲಿ ನಿಜಸೀತೆ ಮತ್ತು ಮಾಯಾಸೀತೆ ಎಂದು ಎರಡು ಸೀತೆಯರ ಪಾತ್ರ ತರಲಾಗಿದೆ. ಅಲ್ಲಿ ನಿಜ ಸೀತೆ ರಾವಣನಿಂದ ಅಪಹರಣಕ್ಕೆ ಗುರಿಯಾಗುವುದೆ ಇಲ್ಲ. ಅಪಹಣಕ್ಕೆ ಗುರಿಯಾಗುವವಳು ಮಾಯಾಸೀತೆ. ಸೀತೆಯ ಪರಿತ್ಯಾಗವನ್ನು ಪ್ರಶ್ನಿಸುವ, ಕೊಂಡಾಡುವ ಮತ್ತು ಸಮರ್ಥಿಸುವ ಕೆಲಸವನ್ನು ಲಕ್ಷ್ಮೀಶ, ಡಿವಿಜಿ ರಾಮಾಯಣ ಕಥನಗಳಲ್ಲಿ ಮಾಡಲಾಗಿದೆ. ಜನಪದ ರಾಮಾಯಣಗಳಲ್ಲಿ ಧನುಸ್ಸನ್ನು ಮುರಿಯುವುದಕ್ಕಿಂತ ಕಾಗೆಯನ್ನು ಹೊಡೆಯುವ ಪ್ರಸಂಗವಿದೆ. ಲವಕುಶ ಕಾಳಗದಲ್ಲಿ ವಾಲ್ಮೀಕಿಯ ಮಂತ್ರಶಕ್ತಿಯಿಂದ ಕುಶ ಜನಿಸಿದರೆ; ಪದ್ಮಶಾಲಿ ತಿಮ್ಮಣ್ಣಕವಿಯ ಕುಮಾರ ಕಾಳಗದಲ್ಲಿ ಕುಶನ ಜನನ ಜನಕನಿಂದ ಆಗುತ್ತದೆ. ಅಂದರೆ ರಾಮನು ಲವನ ತಂದೆ ಮಾತ್ರ; ಕುಶನ ತಂದೆ ರಾಮನೇ ಅಲ್ಲ. ಹೀಗೆ ಇಲ್ಲಿ ವೈವಿದ್ಯತೆ ಕಾಲಕಾಲಕ್ಕೆ ಪ್ರಕಟ ಆಗುತ್ತ ಬಂದಿದೆ.

ಹೀಗಿರುವಾಗ ಅಯೋಧ್ಯಾ ಭಕ್ತರೇ ಇವರಲ್ಲಿ ನಿಮ್ಮ ರಾಮ ಯಾರು ಎಂದು ಯಾರಾದರು ಕೇಳಿದರೆ ಎಲ್ಲ ರಾಮರ ಪ್ರತೀಕ ಅಯೋಧ್ಯಾ ರಾಮ ಎಂದೆ ಭಕ್ತರು ಹೇಳಿಯಾರು! ದೇಶಾದ್ಯಂತ ಏಕರೂಪಿ ರಾಮನನ್ನು ನಿರ್ಮಿಸುವ ಹುನ್ನಾರವಿದು. ಏಕದೇವೋಪಾಸಕ ಶ್ರದ್ಧೆಯೆ ನಮ್ಮ ಇಂದಿನ ಜರೂರು ಅಗತ್ಯ ಎಂದು ನಂಬಿಸುವ ಆ ಮೂಲಕ ಮತರಾಜಕಾರಣಕ್ಕೆ ಧರ್ಮವನ್ನು, ದೇವರನ್ನು ಬಳಸಿಕೊಳ್ಳುವ ಹುನ್ನಾರವಿದು. ಹೀಗೆ ಧರ್ಮವನ್ನೆ ಒಂದು ಪಕ್ಷ ಗುತ್ತಿಗೆ ಪಡೆದರೆ ಸಂವಿಧಾನದ ಗತಿ ಏನು? ಎರಡು ಕೋಮುಗಳ ನಡುವೆ ದ್ವೇಷ ಬಿತ್ತಿ, ಮಸೀದಿ ಧ್ವಂಸ ಮಾಡಿ, ಸಾವಿರಾರು ಕೋಟಿ ವೆಚ್ಚ ಮಾಡಿ ರಾಮಗುಡಿ ಕಟ್ಟಿ ತಾನು ಗೆಲುವು ಸಾಧಿಸಿದೆ ಎಂದು ಬೀಗುವ ಒಂದು ಕೋಮು ಮುಂದೆ ಇದನ್ನು ಎಲ್ಲಿಗೆ ಒಯ್ಯಬಹುದು? ಲೋಕಸಭೆಯಲ್ಲಿ ಇದರಿಂದಲೆ ಗೆಲುವು ಪಡೆದ ಪಕ್ಷ ಮುಂದೆ ಇನ್ನೆಂತಹ ರಾಮರಾಜ್ಯ ಕಟ್ಟಬಹುದು?

- ರಾಮಲಿಂಗಪ್ಪ ಟಿ. ಬೇಗೂರು

ಈ ಅಂಕಣದ ಹಿಂದಿನ ಬರೆಹಗಳು:
ನೇಮಿಚಂದ್ರ ಮತ್ತು ದೇಸಿ ಅನುಸಂಧಾನ
ಕಾವ್ಯಪ್ರಮಾಣ - ಕವಿಪ್ರಮಾಣಗಳ ನಿರಾಕರಣೆ
ಕಾಕಾಸುರ, ವಿರಾಧ ಪ್ರಸಂಗಗಳ ರಾಜಕಾರಣ
ರಾಮಾಯಣ ಸಂಕಥನ -03
ರಾಮಾಯಣ ಸಂಕಥನ 2
ರಾಮಾಯಣ ಸಂಕಥನ-1
ಕೆರೆಯ ನೀರನು ಕೆರೆಗೆ ಚೆಲ್ಲಿ
ಕೊಂಡಿ ಎಲ್ಲಿ ಕಳಚಿದೆ?
ಯಾರದೊ ಅಜೆಂಡಾ ಮಾರಮ್ಮನ ಜಾತ್ರೆ

ಹೊಸಕಾವ್ಯದ ಭಾಷೆ, ಗಾತ್ರ, ಹೂರಣ
ಗೌರಿಯರು: ಕುಟುಂಬ - ದಾಂಪತ್ಯ ಸಂಕಥನ
ರಾಷ್ಟ್ರೀಯತೆಯ ಆಚರಣೆಯ ಸುತ್ತ
ನೆನ್ನೆ ಮನ್ನೆ-1
ನಿನಗೇ ಬರೆದ ಪತ್ರ
ಆಯ್ದಕ್ಕಿ ಕಾಯಕ ಎಂದರೇನು?
ಐದು ಕೃಷಿ ಸಂಬಂಧಿ ಪುಸ್ತಕಗಳು
ಅಮೃತ ಮಹೋತ್ಸವದ ಹೊತ್ತಿಗೆ ಸಂವಿಧಾನದ ಪೀಠಿಕೆಯನ್ನಾದರೂ ಸಾಧಿಸಿದೆವಾ?
ವ್ಯಕ್ತಿ ಪೂಜೆ, ಸ್ಥಾನ ಪೂಜೆ

ವೇಶಾಂತರದ ಸಿಟ್ಟು ದೇಶಾಂತರದ ದ್ವೇಶ
ಕನಸಲ್ಲಿ ಬರುವ ಛೂಮಂತ್ರಯ್ಯ
ವಸ್ತ್ರ ಸಂಹಿತೆಯ ಸುತ್ತ
‘ಉರಿವ ಉದಕ’: ಕನ್ನಡದ ಕಥನ ಜಗತ್ತಿನ ಅನುಭವ ಲೋಕವನ್ನು ವಿಸ್ತರಿಸುವಂತಹ ಕತೆಗಳು
ಲೇಖನ ಚಿಹ್ನೆಗಳು
ಆತಂಕ, ಸಂಭ್ರಮಗಳು ಒಟ್ಟಿಗೇ ಕುದಿಯುತ್ತವೆ
ಪದವಿ ಪೂರ್ವ ಕನ್ನಡ ಪಠ್ಯ ಮತ್ತು ಕಲಿಕೆಯ ಅನುವಿನ ಉಪಕ್ರಮಗಳು:
ದೇಶ ಕಟ್ಟುವ ಕನಸು: ‘ಹಿಂದ್ ಸ್ವರಾಜ್’
ಬಂಡಾಯ ಕತೆಗಳ ನೋಟ ನಿಲುವು
ವ್ಯಕ್ತಿಹೆಸರುಗಳ ಸುತ್ತ ಮುತ್ತ
ಪ್ರೀತಿಯೆ ಲೋಕನೀತಿ ಆದ ಬಳಗಪ್ರಜ್ಞೆಯ ಪದ್ಯಗಳು....!
ಪೋಸ್ಟ್ ಬಾಕ್ಸ್ ನಂ.9
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -2
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -1
ಹರಿಭಕ್ತಿ ಸಾರ ಎಂಬ ಗಿಳಿಪಾಠ
ಕಲ್ಲು ದೈವ, ಮೊರ ದೈವ?
ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳು: ಕೆಲ ಟಿಪ್ಪಣಿಗಳು
ಲೋಕಸೌಂದರ್ಯವೇ ತಿರುಳಾದ ಸಾಹಿತ್ಯ ಸದಾ ಚಲನಶೀಲ

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...