ಕಾವ್ಯಪ್ರಮಾಣ - ಕವಿಪ್ರಮಾಣಗಳ ನಿರಾಕರಣೆ

Date: 23-11-2023

Location: ಬೆಂಗಳೂರು


“ಕಾವ್ಯವೇ ಎಲ್ಲ ಪ್ರಕಾರಗಳನ್ನು ಬ್ಲಾಕ್‌ಹೋಲ್ ಥರ ನುಂಗಿ ಬಿಟ್ಟಿದೆ. ನಮ್ಮ ಸೂಕ್ತಿ ಸುಧಾರ್ಣವ, ಕಾವ್ಯ ಸಾರದಂತಹ ಸಂಪಾದನಾ ಗ್ರಂಥಗಳನ್ನು ನೋಡಿದರೆ; ಶೂನ್ಯಸಂಪಾದನೆಗಳಂತಹ ಸಂಪಾದನೆಗಳನ್ನು ನೋಡಿದರೆ, ಕಲ್ಲುಮಠದ ಪ್ರಭುದೇವನ ಲಿಂಗಲೀಲಾವಿಲಾಸ ಚಾರಿತ್ರ‍್ಯ ನೋಡಿದರೆ, ಕುವೆಂಪು ನಾಟಕಗಳನ್ನು ನೋಡಿದರೆ ಸಂಪಾದನೆ, ಸೂಕ್ತಿ ಸಂಕಲನ, ಟೀಕು, ನಾಟಕಾದಿ ಪ್ರತ್ಯೇಕ ಪ್ರಕಾರಗಳೇ ತಾವು ಕಾವ್ಯಗಳಾಗಲು ಹವಣಿಸಿರುವುದು ಕಾಣುತ್ತದೆ,” ಎನ್ನುತ್ತಾರೆ ಅಂಕಣಕಾರ ಬೇಗೂರು ರಾಮಲಿಂಗಪ್ಪ. ಅವರು ತಮ್ಮ ‘ನೀರು ನೆರಳು' ಅಂಕಣದಲ್ಲಿ ‘ಕಾವ್ಯಪ್ರಮಾಣ - ಕವಿಪ್ರಮಾಣಗಳ ನಿರಾಕರಣೆ' ವಿಚಾರದ ಕುರಿತು ಬರೆದಿದ್ದಾರೆ.

ಕಾವ್ಯ ಪ್ರಮಾಣಗಳ ನಿರಾಕರಣೆ
ಕಾವ್ಯವೆಂಬುದು ಒಂದು ಪ್ರಮಾಣ. ಕವಿ ಎಂಬುದೂ ಒಂದು ಪ್ರಮಾಣವೆ. ನಾನೃಷಿ ಕೃತೇ ಕಾವ್ಯಂ? ಋಷಿಯಲ್ಲದವನು ಕಾವ್ಯ ಬರೆಯುವುದು ಸಾಧ್ಯವೇ? ಇಂತಹ ಪ್ರಮಾಣಗಳನ್ನು ನಮ್ಮಲ್ಲಿ ಬಲವಾಗಿ ಜಾರಿ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಂಪರೆ ಎಂದರೆ ಕಾವ್ಯ ಪರಂಪರೆ ಎಂಬಂತೆಯೇ ಇದೆ. ನಮ್ಮ ಪರಂಪರೆಯಲ್ಲಿ ಅಶ್ವಶಾಸ್ತ್ರ, ಗಜಶಾಸ್ತ್ರ, ಸೂಪ ಶಾಸ್ತ್ರ, ನಿಘಂಟುಶಾಸ್ತçಗಳೆಲ್ಲವೂ ಕಾವ್ಯ ರೂಪದಲ್ಲಿಯೆ ಬರೆಯಲ್ಪಟ್ಟಿವೆ. ಹೀಗಾಗಿ ನಮ್ಮಲ್ಲಿ ಪ್ರಾಚೀನರಲ್ಲಿ ಇರುವುದು ಎರಡೇ ಪ್ರಕಾರ ಒಂದು ಪದ್ಯಕಾವ್ಯ, ಇನ್ನೊಂದು ಗದ್ಯ ಕಾವ್ಯ. ಪದ್ಯ ಕಾವ್ಯ ಬರೆದರೆ ಅದು ಛಂದೋಬದ್ಧ ಆಗಿಯೇ ಇರಬೇಕು. ಹದಿನೆಂಟು ವರ್ಣನೆಗಳಿಂದ ಕೂಡಿರಬೇಕು. ಗದ್ಯ ಬರೆದರೂ ಅದು ಕಾವ್ಯಾತ್ಮಕವಾಗಿಯೇ ಇರಬೇಕು. ಎಂಬ ಪ್ರಮಾಣಗಳನ್ನು ನಮ್ಮಲ್ಲಿ ನಿರ್ಮಿಸಲಾಗಿದೆ. ಹೀಗಾಗಿಯೇ ನಾಗವರ್ಮ ಸಂಸ್ಕೃತ ಗದ್ಯ ಕಾವ್ಯವಾದ ಬಾಣ ಕಾದಂಬರಿಯನ್ನು ಅನುವಾದ ಮಾಡುವಾಗ ಪದ್ಯಕಾವ್ಯ ಆಗಿಯೇ ಅನುವಾದ ಮಾಡಿದ್ದಾನೆ. ಇಂತಹ ಪ್ರಮಾಣ ಸಾಹಿತ್ಯದಲ್ಲಿ ಕಾವ್ಯದ ಯಜಮಾನಿಕೆಯೇ ಅತಿಯಾಗಿದೆ. ಇದರಿಂದ ಎರಡು ರೀತಿಯ ಪರಿಣಾಮಗಳು ಆಗಿವೆ. 1) ಇತರ ಪ್ರಕಾರಗಳ ಸೃಷ್ಟಿಯನ್ನು ಹತ್ತಿಕ್ಕಿದಂತೆ ಆಗಿದೆ. ಅಷ್ಟೇ ಅಲ್ಲ 2) ಛಂದಸ್ಸನ್ನು ತಿಳಿಯದ ಕವಿಗಳು ಸಾಹಿತ್ಯ ರಚಿಸುವ ಕೆಲಸದಿಂದ ದೂರ ಉಳಿಯುವಂತೆ ಆಗಿದೆ. ಛಂದೋಂಬುಧಿ ಬರೆಯಲಿ, ಕರ್ನಾಟಕ ಶಬ್ಧಮಂಜರಿ ಬರೆಯಲಿ, ಕವಿರಾಜಮಾರ್ಗ ಬರೆಯಲಿ, ರನ್ನಕಂದ ಬರೆಯಲಿ ಕವಿಜಿಹ್ವಾಬಂಧನ ಬರೆಯಲಿ ಎಲ್ಲವನ್ನು ಛಂದಸ್ಸಿನಲ್ಲೆ ಅಡಗಿಸುವ ಕೆಲಸ ಆಗಿದೆ.

ಕಾವ್ಯವೇ ಎಲ್ಲ ಪ್ರಕಾರಗಳನ್ನು ಬ್ಲಾಕ್‌ಹೋಲ್ ಥರ ನುಂಗಿ ಬಿಟ್ಟಿದೆ. ನಮ್ಮ ಸೂಕ್ತಿ ಸುಧಾರ್ಣವ, ಕಾವ್ಯ ಸಾರದಂತಹ ಸಂಪಾದನಾ ಗ್ರಂಥಗಳನ್ನು ನೋಡಿದರೆ; ಶೂನ್ಯಸಂಪಾದನೆಗಳಂತಹ ಸಂಪಾದನೆಗಳನ್ನು ನೋಡಿದರೆ, ಕಲ್ಲುಮಠದ ಪ್ರಭುದೇವನ ಲಿಂಗಲೀಲಾವಿಲಾಸ ಚಾರಿತ್ರ‍್ಯ ನೋಡಿದರೆ, ಕುವೆಂಪು ನಾಟಕಗಳನ್ನು ನೋಡಿದರೆ ಸಂಪಾದನೆ, ಸೂಕ್ತಿ ಸಂಕಲನ, ಟೀಕು, ನಾಟಕಾದಿ ಪ್ರತ್ಯೇಕ ಪ್ರಕಾರಗಳೇ ತಾವು ಕಾವ್ಯಗಳಾಗಲು ಹವಣಿಸಿರುವುದು ಕಾಣುತ್ತದೆ. ಚಾಮರಸನಾದರೋ ತನಗಿಂತ ಮುಂಚಿನ ಶೂನ್ಯಸಂಪಾದನೆಯಾದ ಹಲಗೆಯರ‍್ಯನ ಶೂನ್ಯ ಸಂಪಾದನೆಯನ್ನು ಆಧರಿಸಿ ಪ್ರಭುಲಿಂಗಲೀಲೆ ಬರೆಯುವಾಗ ಯಾಕೆ ಷಟ್ಪದಿ ರೂಪಿ ಮಹಾಕಾವ್ಯವನ್ನೆ ಬರೆದ? ಬಹುಪಾಲು ಅಲ್ಲಮನ ವಚನಗಳನ್ನೆ ಆತ ಷಟ್ಪದಿಗೆ ತಿರುಗಿಸಿದ್ದಾನೆ. ವಚನಗಳಿಗೆ ಷಟ್ಪದಿಯ ದೀಕ್ಷೆ ಕೊಡುವ ಒತ್ತಡಕ್ಕೆ ಆತ ಯಾಕೆ ಒಳಗಾದ? ಹರಿಹರ ನಂತರ ಕವಿ-ಗದ್ಯದಲ್ಲಿ ಸುಂದರವಾದ ಜೀವನ ಚರಿತ್ರೆಗಳನ್ನು ಬರೆಯಬಹುದಾದ ಸಾಧ್ಯತೆಗಳಿದ್ದರೂ ಯಾಕೆ ರಗಳೆಯನ್ನೇ ಸೃಷ್ಟಿಸಿಕೊಂಡ? ಕಾವ್ಯ ವಸ್ತು ಪ್ರಮಾಣವನ್ನು ಕ್ರಾಂತಿಕಾರಕವಾಗಿ ಬದಲಾಯಿಸಿದ ಹರಿಹರ; ಗಿರಿಜೆಯ ಹೆಸರಿನಲ್ಲಿ ಕಾವ್ಯ ಬರೆದ ಹರಿಹರ ಹೊಲೆಮಾದಿಗರ-ನಟುವಾಂಗರ ಪಾಡನ್ನು ಹಾಡು ಮಾಡಿದ ಹರಿಹರ, ಶಿವ ಮತ್ತು ದಲಿತನನ್ನು ಒಂದೇ ತಟ್ಟೆಯಲ್ಲಿ ಊಟಕ್ಕೆ ಕೂರಿಸಿದ ಹರಿಹರ ಯಾಕೆ ಚಂಪೂ ಕಾವ್ಯ ಬರೆಯುವ ಒತ್ತಡಕ್ಕೆ ಒಳಗಾದ? ಹಾಗೆಯೆ ಕನಕದಾಸನೂ ಇದೇ ರೀತಿಯ ಒತ್ತಡಕ್ಕೆ ಗುರಿಯಾದನಲ್ಲ!

ಹರಹರನ ಬೆನ್ನಿಗೇ ಇದ್ದ ಶಿವಶರಣರು ಅಂದರೆ ಅವನ ಕಾವ್ಯನಾಯಕರೇ ಕಾವ್ಯವೆಂಬ ಪ್ರಮಾಣವನ್ನು ಮೀರಿದ ಕವಿಗಳಾಗಿದ್ದರು. ಆದರೂ ಯಾಕೆ ಹರಿಹರ ರಗಳೆ- ಚಂಪೂ ಆಶ್ರಯಿಸಿದ? ವಚನಗಳನ್ನು ಮೊನ್ನೆ ಮೊನ್ನೆಯವರಗೆ ನಾವು ಕಾವ್ಯ ಅಂತಾನೇ ಕರೆಯುತ್ತಿರಲಿಲ್ಲ. ವಚನಶಾಸ್ತ್ರ ಅಂತ ಕರಿರೆಯುತಿದ್ದೆವು. ಕವಿಯೆಂಬ ಪ್ರಮಾಣ; ಕಾವ್ಯವೆಂಬ ಪ್ರಮಾಣಗಳು ಅಷ್ಟು ಬಲಿಷ್ಟವಾಗಿದ್ದವು. ಈ ದೃಷ್ಟಿಯಿಂದ ನಮ್ಮ ಪರಂಪರೆಗಳನ್ನು ನೋಡಿದರೆ ಪ್ರಮಾಣಗಳ ಸ್ವೀಕರಣೆ ಮತ್ತು ನಿರಾಕರಣೆ ಹಾಗೂ ನವ ಪ್ರಮಾಣಗಳ ನಿರ್ಮಾಣ ಈ ಮೂರೂ ಏಕಕಾಲಕ್ಕೆ ಪ್ರಯೋಗ ಆಗಿರುವುದು ಕಾಣುತ್ತದೆ.

ರನ್ನ ಒಂದು ಕಡೆ ತನ್ನ ಕೃತಿಯನ್ನು ‘ಇದೇನು ಬೀದಿವರೆಯ ಬೀರನ ಕತೆಯೆ?’ ಎಂದು ಕೆಳುತ್ತಾನೆ. ನನ್ನ ಕಾವ್ಯ ಶ್ರೇಷ್ಠವಾದುದು ಎಂದು ಹೇಳುವಾಗ; ನನ್ನ ಕಾವ್ಯವನ್ನು ಹಾಗೆಲ್ಲ ಕಮ್ಮಿಯೆಂದು ಭಾವಿಸಬೇಡಿ ಎಂದು ಹೇಳುವಾಗ ರನ್ನ ಹೀಗೆ ಬೀದಿಯ ಬೀರಪ್ಪನ ಕತೆ ಕೀಳು ಎಂಬ ನಂಬಿಕೆಯನ್ನು ಪ್ರಕಟಿಸುತ್ತಾನೆ. ಇದು ರನ್ನನ ಅಭಿಪ್ರಾಯ ಮಾತ್ರ ಅಲ್ಲ; ಆ ಕಾಲದ ಸಾಹಿತ್ಯಕ ಮತ್ತು ಸಾಮಾಜಿಕ ನಂಬಿಕೆ ಮಾತ್ರ ಅಲ್ಲ. ಈ ಕಾಲದ ಕೆಲವರ ನಂಬಿಕೆಯೂ ಹೌದು. ಬಳೆಗಾರ ಕುಲದಿಂದ ಬಂದ ಒಬ್ಬ ಕವಿ ಜೈನನಾಗಿ ಮಹಾಕಾವ್ಯ ಬರೆದ ಕೂಡಲೆ ಅವನ ಕಾವ್ಯದ ಎದುರಿಗೆ ಜನಪದ ಕಾವ್ಯ ಕಡಿಮೆ ದರ್ಜೆಯದ್ದು ಆಗಿಬಿಡುತ್ತದೋ?

ನಾಗವರ್ಮನ ಕಾವ್ಯಾವಲೋಕನದ ಒಂದು ಪದ್ಯ ಮತ್ತು ಶಾಂತಿನಾಥನ ಸುಕುಮಾರ ಚರಿತದ ಒಂದು ಪದ್ಯವನ್ನು ಇಲ್ಲಿ ಉದಾಹರಣೆಗೆ ನೋಡಬಹುದು.

ಕಾಳ್ಪುರಮಾಗೆ ಕಾವ್ಯರಸಮುಮಕ್ಕರಮುಂ ಪ್ರತೀತಿಯುಂ

ಮಾಳ್ಪಿನೆಗಂ ಜಳಕ್ಕನಿರೆ ಪೇಳದೆ ಕಮ್ಮನೊಗಂಟುವೇಳ್ದು ಚಿಃ
ನೋಳ್ಪುದೆ ಮುಯ್ಯನಾಕೃತಿಗೆ ಪಂಚಿಕೆ ಪೇಳ್ದವನುಂ ಕವಿಯೆಂಬಲೆಕ್ಕಮೇ? (ಕಾ.ಲೋ. ಲಕ್ಷ್ಯ 299)
ಬೀಣೆಯ ಕೊಳಲ ಬೆದಂಡೆಯ, ಗಾನರ ಬಳಿವಿಡಿದು ಸುಳಿದಿ ಕುಂದಿಂ ಕಥಕ
ಶ್ರೇಣಿಯೊಡನೆಳಸಿ ಬಳಸುವ ನಾಣಿಲಿಗಳನೀ ಬುಧಾಳಿ ತಾಳ್ ಪುಗಿಸುವುದೇ (ಸು.ಚ.2-24)

ಅಂದರೆ ಟೀಕು ಬರೆಯುವವನು, ಪಂಚಿಕೆ ಬರೆಯುವವನು, ಒಗಟು-ಗಾದೆಗಳನ್ನು ಹೇಳುವವನು, ಬೀಣೆ - ಕೊಳಲುಗಳನ್ನು ಬಳಸಿ ಬೆದಂಡೆ ಕಾವ್ಯ ಪ್ರಸ್ತುತಪಡಿಸುವವನು, ಜನಪದ ಕಥನಗಳನ್ನು ಹಾಡುವ ಅಲೆಮಾರಿ ಕಥಕ ಇರ‍್ಯಾರೂ ಕವಿಗಳಲ್ಲವಂತೆ! ಕವಿ ಎಂದರೆ ಅವನು ಋಷಿ, ಎಂಬ ಪ್ರಮಾಣವನ್ನು ಇಲ್ಲಿ ಕಾಣಬಹುದು. ಆದರೆ ನಮ್ಮವರು ಇಂಥ ಪ್ರಮಾಣಗಳನ್ನು ಎಂದೂ ಲೆಕ್ಕಿಸಿದವರಲ್ಲ. ನೀವು ನಮ್ಮನ್ನು ಕವಿ ಎಂದು ಕರೆದರೆ ಕರೆಯಿರಿ, ಬಿಟ್ಟರೆ ಬಿಡಿ, ನಾವು ಬರೆಯದೆ ಇರುವುದಿಲ್ಲ ಎಂದೇ ಬಾಳಿದ್ದಾರೆ. ಒಗಟು ಗಾದೆಗಳನ್ನು ನಾವಿಂದು ಕಾವ್ಯ ಎಂದು ಕರೆಯಲು ತಯಾರಿಲ್ಲ. ಗಾದೆಗಳು ನಿಜವಾಗಿಯೂ ನಮ್ಮ ನಡುವಿನ ಒಂದು ಸಾಲಿನ ಕಾವ್ಯಗಳು. ರೂಪಕ ಧಾಟಿಯಲ್ಲಿ ಇರುವ ಒಂದೊಂದು ಗಾದೆಯೂ ಒಂದೊಂದು ಸಾಲಿನ ಕಾವ್ಯ. ದೋಹೆಗಳನ್ನು, ಹಾಯ್ಕುಗಳನ್ನು ಅಪಾರವಾಗಿ ನಾವು ಆಮದು ಮಾಡಿಕೊಳ್ಳುತ್ತಿದ್ದೇವೆ. ಆದರೆ ಗಾದೆಗಳನ್ನು ಮುರಿದು ಬರೆದುಕೊಂಡರೆ ಅವು ಇವುಗಳಿಗಿಂತ ಬಲಶಾಲಿಯಾಗಿ ಕಾಣುತ್ತವೆ. ಆದರೆ ಜನಪದವನ್ನು, ಜನಪದ ಚೌಕಟ್ಟುಗಳನ್ನು ಶಿಷ್ಟ ವಿದ್ಯಾವಂತರು ಪ್ರಯೋಗಿಸುವುದನ್ನು ಕೀಳೆಂದೇ ನಮ್ಮಲ್ಲಿ ಭಾವಿಸಲಾಗುತ್ತಿದೆ. ಆದಾಗ್ಯೂ ಯಾರು ಕವಿ - ಯಾವುದು ಕಾವ್ಯ ಎಂಬ ಪ್ರಮಾಣಗಳು ನಮ್ಮಲ್ಲಿ ನಿರಾಕರಣೆಗೆ ಗುರಿಯಾಗಿವೆ ಮಾತ್ರ ಪರಿಕರ ಪ್ರಮಾಣಗಳ ನಿರಾಕರಣೆ.

ಕಾವ್ಯವನ್ನು ನಿರ್ಮಿಸುವ ಪರಿಕರಗಳಲ್ಲಿ ಭಾಷೆ, ಛಂದಸ್ಸು, ಅಲಂಕಾರ ಮೊದಲಾದುವು ಮುಖ್ಯವಾದವು. ಇವೆಲ್ಲ ಪ್ರಮಾಣಗಳೂ ನಿರಂತರವಾಗಿ ನಮ್ಮಲ್ಲಿ ನಿರಾಕರಣೆಗೆ ಗುರಿಯಾಗುತ್ತ ಬಂದಿವೆ. ಹಾಗೆ ನೋಡಿದರೆ ಸಂಸ್ಕೃತ ಕಾವ್ಯ ಮೀಮಾಂಸೆ ಪ್ರತಿಪಾದಿಸುವ ಅಲಂಕಾರ, ರಸ, ಔಚಿತ್ಯ, ರೀತಿ ವಕ್ರತೆಗಳೆಲ್ಲವು ಕಾವ್ಯ ಪರಿಕರಗಳೇ ಆಗಿವೆ. ಪರಿಕರಗಳನ್ನೆ ಸಿದ್ಧಾಂತಗಳನ್ನಾಗಿಯೂ ನಾವು ಭಾವಿಸಿದ್ದೇವೆ.

ಬಸವಣ್ಣನದು ಒಂದು ಪ್ರಸಿದ್ಧವಾದ ವಚನವಿದೆ. “ತಾಳಮಾನ ಸರಿಸವನರಿಯೆ, ಓಜೆ ಬಜಾವಣೆಯ ಲೆಕ್ಕವನರಿಯೆ, ಕೂಡಲಸಂಗಮ ದೇವಾ ನಿಮಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ” ಗಣ-ಮಾತ್ರೆಗಳಿಂದ ಕೂಡಿದ ಛಂದೋಪ್ರಮಾಣಗಳ ಸ್ಪಷ್ಟವಾದ ನಿರಾಕರಣೆ ಇದು. ವಚನಕಾರರೆಲ್ಲರೂ ಹೀಗೆ ತಮ್ಮ ವಚನಗಳೆಲ್ಲವನ್ನು ತಾವು ಒಲಿದಂತೆ ಹಾಡುವ ಮೂಲಕ ಕಾವ್ಯದ ಪರಿಕರಗಳಾದ ಭಾಷೆ ಮತ್ತು ಛಂದೋ ಪ್ರಮಾಣಗಳನ್ನು ಮೀರಿದ್ದಾರೆ.

ಮಾದಪ್ಪನ ಕತೆಯ ಪೀಠಿಕೆಯಲ್ಲಿ ಒಂದು ನುಡಿ ಬರುತ್ತದೆ. ‘ಮೊದಲೇ ನಿಮ್ಮಯ ಪಾದವ ನೆನೆವೆನು, ಮತಿಗಳ ಕರುಣಿಸು ಮಹದೇವ, ಯತಿಗಣ ಪ್ರಾಸನ್ನರಿಯೆನು ನಾನು, ದುಡ ಮೋಕ್ಷವ ಕೊಡು ಗುರುದೇವ’ ಇಲ್ಲಿ ನೀಲಗಾರ ದುಡ ಮೋಕ್ಷ ನೀಡೆಂದು ಮಾದಪ್ಪನನ್ನು ಪ್ರಾರ್ಥಿಸುತ್ತಿದ್ದಾನೆ. ಇಲ್ಲಿ ನಿಜವಾಗಿಯೂ ಮೋಕ್ಷ ಬೇಕಾಗಿರುವುದು ಯತಿ, ಗಣ. ಪ್ರಾಸಾದಿ ನಿಯಮಗಳಿರುವ ಛಂದೋ ಪ್ರಮಾಣಗಳಿಂದ. ಛಂದಸ್ಸಿನ ನಿಯಮಗಳನ್ನು ನಾನು ತಿಳಿದವನಲ್ಲ ಎಂಬ ಕೀಳರಿಮೆಯನ್ನು ನೀಲಗಾರ ಕವಿಯೊಬ್ಬ ಅನುಭವಿಸುವಮತೆ ಮಾಡಿರುವುದೇ ನಮ್ಮ ಛಂದೋಬದ್ಧ ಕಾವ್ಯ ಪ್ರಮಾಣಗಳು; ವಿದ್ಯಾವಂತ ಅವಿದ್ಯಾವಂತ, ಬರಹಪಠ್ಯ-ಮೌಖಿಕ ಪಠ್ಯಗಳ ನಡುವಿನ ಮೇಲುಕೀಳಿನ ಪ್ರಮಾಣಗಳು.

‘ಶರಧಿಗೆ ನೀಡದಿರು ಷಟ್ಪದಿಯ ದೀಕ್ಷೆಯನು’ ಎಂದು ಹೇಳಿದ ಮಾತಿಗಿಂತ ಶತಮಾನಗಳ ಹಿಂದೆಯೇ ಆನು ಒಲಿದಂತೆ ಹಾಡುವೆ ಎಂಬ ಮಾತು ಬಂದಿದೆ. ಶ್ರೀವಿಜಯನಲ್ಲೆ ಒಂದು ಮಾತು ಬರುತ್ತದೆ. “ದೇಸೆ ಬೇರೆ ವೇರೆಯಪ್ಪುದರಿಂ ವಾಸುಗಿಯುಂ ಬೇಸರಿಸುಗುಂ” ಎಂದು. ಇಲ್ಲಿನ ಸಮಸ್ಯೆ ಬಹುತ್ವದ್ದು. ಅಂದರೆ ಕಾವ್ಯಪದ್ಧತಿ ಮತ್ತು ಕಾವ್ಯಕ್ಕೆ ಬಳಸುವ ದೇಸಿ ಭಾಷೆಗಳನ್ನು ಪ್ರಮಾಣೀಕರಿಸುವ-ಬಹುತ್ವಗಳನ್ನು ನಿರಾಕರಿಸುವ; ಒಂದು ಮಾನಕ ಕಾವ್ಯಕ್ರಮವನ್ನು ಸ್ಥಾಪಿಸುವ ಕೆಲಸವನ್ನು ಶ್ರೀವಿಜಯ ಮಾಡಿದ್ದಾನೆ. ಆನಂತರ ಕೇಶೀರಾಜನೂ ಭಾಷೆಯ ಮತ್ತು ವ್ಯಾಕರಣದ ವಿಷಯದಲ್ಲಿ-ಶಬ್ದ ಪ್ರಯೋಗದ ವಿಷಯದಲ್ಲಿ ಪ್ರಮಾಣಗಳನ್ನು ನಿರ್ಮಿಸಲು ಯತ್ನಿಸಿದ್ದಾನೆ. ಆದರೆ ಇವರ ಪ್ರಮಾಣಗಳಾವುವೂ ಉಳಿದಿಲ್ಲ. ನಮ್ಮಲ್ಲಿ ಹೀಗೆ ಭಾಷೆಯ ಮಾನಕೀರಣವೆ ಪ್ರಮಾಣೀಕರಣದ ಭಾಗವೂ ಆಗಿದೆ.

ಭಾಷೆಯ, ಪ್ರಕಾರ ಪ್ರಮಾಣಗಳ ನಿರಾಕರಣೆ

ಭಾಷೆಯ ಮಾನಕೀರಣವನ್ನು ಆಧುನಿಕ ಸಂದರ್ಭದಲ್ಲಿ ನಾವು ಚರ್ಚಿಸಲೇ ಬೇಕು. ಇಲ್ಲಿ ಎರಡು ಮುಖ್ಯವಾದ ವಲಯಗಳಿವೆ. ಇಂಗ್ಲಿಷ್ ಶಿಕ್ಷಣ ಪದ್ಧತಿ ಇಲ್ಲಿ ಆರಂಭವಾದಾಗ ಶುರುವಾದ ಶಿಕ್ಷಣದ ಭಾಷೆಯ

ಮಾನಕೀಕರಣ ಒಂದು ವಲಯವಾದರೆ; ಇನ್ನೊಂದು ನಮ್ಮ ಆಧುನಿಕ ಕವನಕ್ಕೆ ಬಳಕೆಯಾದ ಭಾಷೆ ಮತ್ತು ಚೌಕಟ್ಟುಗಳ ಪ್ರಮಾಣೀಕರಣ.

ಶಿಕ್ಷಣವನ್ನು ಪಡೆಯುವುದೆಂದರೆ ನಮ್ಮ ನಮ್ಮ ಪ್ರಾದೇಶಿಕ ಮತ್ತು ಜನಾಂಗಿಕ ಭಾಷೆಗಳನ್ನು ಕಳೆದುಕೊಳ್ಳುವುದು ಎಂದೇ ಅರ್ಥ. ನಮ್ಮ ನಮ್ಮ ನುಡಿವರಸೆ –ಕಾಕು-ನುಡಿಗಟ್ಟುಗಳನ್ನು ಕಳೆದುಕೊಳ್ಳುವುದು ಎಂದೇ ಅರ್ಥ. ಶಿಕ್ಷಿತರಾಗುವುದೆಂದರೆ ಮಾನಕ ಭಾಷಿಕರಾಗುವುದು ಎಂದೇ ಅರ್ಥ. ಡಿ.ಎನ್. ಶಂಕರಭಟ್ಟರು ಮತ್ತು ಕೆ.ವಿ.ನಾರಾಯಣರು ಈ ಶಿಕ್ಷಣ ಪ್ರಮಾಣಿತ ಮಾನಕ ಭಾಷೆಯನ್ನು ದಾಟಲು-ನಿರಾಕರಿಸಲು ಬಹಳಷ್ಟು ಪ್ರಯತ್ನಿಸಿದ್ದಾರೆ. ಅದಕ್ಕೆ ಬಲವಾದ ಪ್ರತಿರೋಧಗಳೂ ಎದುರಾಗಿವೆ. ಏನೇ ಪ್ರತಿರೋಧ ಎದುರಾದರೂ ನಮ್ಮ ಭಾಷಾ ಪ್ರಮಾಣ ನಿರಾಕರಣೆಗೆ ಗುರಿಯಾಗಿದೆ ಎಂಬುದು ಮಾತ್ರ ನಿಜ. ಇದಕ್ಕು ಕಾವ್ಯ ಮೀಮಾಂಸೆಗು ಏನು ಸಂಬAಧ ಅನ್ನಿಸಬಹುದು. ಖಂಡಿತಾ ಸಂಬAಧ ಇದೆ. ಯಾವ ಭಾಷೆಯನ್ನು ನಾವು ಶ್ರೇ಼ಷ್ಠವೆಂದು ಕಲಿಯುತ್ತೇವೋ ಆಭಾಷೆಯನ್ನೆ ನಾವು ನಮ್ಮ ಎಲ್ಲ ಅಭಿವ್ಯಕ್ತಿ ರಂಗದಲ್ಲಿ ಬಳಸುತ್ತೇವೆ. ನಮ್ಮ ಶಿಕ್ಷಿತರು ಬಳಸುವ ಕಾವ್ಯ ಭಾಷೆಯನ್ನು ನೋಡಿದರೆ ಇದು ತಿಳಿಯುತ್ತದೆ. ವ್ಯವಹಾರ ಭಾಷೆಯನ್ನು ನೋಡಿದರೂ ಇದು ತಿಳಿಯುತ್ತದೆ. ವಿದ್ಯಾವಂತ-ಅವಿದ್ಯಾವAತರನ್ನು ತರತಮವಾಗಿ ಬೇರ್ಪಡಿಸುವ ಮುಖ್ಯ ಪ್ರಮಾಣವೇ ಭಾಷೆಯಾಗಿದೆ.

ಮಾತು ಮತ್ತು ಬರಹಗಳಲ್ಲಿ ಬಳಸುವ ಭಾಷೆಯ ಪ್ರಮಾಣವು ಸಾಹಿತ್ಯದಲ್ಲು ಪ್ರತಿಷ್ಠಾಪಿತವಾಗಿದೆ. ನಮ್ಮ ಆಧುನಿಕ ಕವನಗಳ ಭಾಷೆ ಮತ್ತು ಚೌಕಟ್ಟುಗಳು ನಿಜಕ್ಕು ಜಡ್ಡುಗಟ್ಟು ಹೋಗಿವೆ. ಇಂದು ಬರೆಯುತ್ತಿರುವ ಹೊಸ ಕವಿಗಳಿಗೆ ಈ ಭಾಷೆ ಮತ್ತು ಚೌಕಟ್ಟುಗಳಿಗೆ ಒದಗಿರುವ ಜಡತೆಯನ್ನು ಮೀರುವುದೇ ಒಂದು ದೊಡ್ಡ ಸವಾಲಾಗಿದೆ. ಕವನದಲ್ಲಿ ಬಳಸುವ ಪ್ರಮಾಣ ಭಾಷೆಯನ್ನು ಮತ್ತು ಚೌಕಟ್ಟುಗಳ ಪ್ರಮಾಣವನ್ನು ಹಲವರು ಪ್ರಾದೇಶಿಕ ಭಾಷೆ-ಜನಾಂಗಿಕ ಉಪಭಾಷೆಗಳನ್ನು ಬಳಸುವ ಮೂಲಕ ಮೀರಿದ್ದಾರಾದರೂ ಅದು ಸಾಲದು. ಕುವೆಂಪು ಇದನ್ನು ಸಾಕಷ್ಟು ಮಾಡಿದ್ದಾರೆ. ಇಕ್ರಲಾ ಒದೀರಲಾ ಎಂಬ ಶಬ್ದಗಳನ್ನು ಸಿದ್ಧಲಿಂಗಯ್ಯನವರು ಬಳಸಿದಾಗ ಕಾವ್ಯದ ಭಾಷಿಕ ಮಡಿವಂತಿಕೆ ಛಿದ್ರವಾಗಿದೆ. ಬಕಾಲ-ಗಲ್ಲೆಬಾನಿ-ಅನಾತ್ಮಗಳನ್ನು ಕೆ.ಬಿ.ಯವರು ಬರೆದಾಗ ಚೌಕಟ್ಟುಗಳ ಮಡಿವಂತಿಕೆ ಛಿದ್ರವಾಗಿದೆ. ಸ್ಥಾಪಿತ ಪ್ರಮಾಣಗಳನ್ನು ನಿರಾಕರಿಸಿರುವ ಬರಹಗಳಿವು. ಸಿದ್ಧಲಿಂಗಯ್ಯ-ಸಿದ್ಧಯ್ಯರಂತೆ ಬೇಂದ್ರೆ, ಚಂಪಾ, ಕಂಬಾರ, ಮುಕ್ತಾಯಕ್ಕ, ಶೈಲಜಾ ಉಡಚಣ, ಶಶಿಕಲಾ ವೀರಯ್ಯಸ್ವಾಮಿ, ಸುಕನ್ಯಾ ಮಾರುತಿ, ಧರಣಿದೇವಿ ಮೊದಲಾದವರು ಪ್ರಾದೇಶಿಕ ಮತ್ತು ಜನಾಂಗಿಕ ಉಪಭಾಷೆಗಳನ್ನು-ನುಡಿಗಟ್ಟುಗಳನ್ನು ಬಳಸಿ ಸ್ಥಾಪಿತ ಭಾಷಿಕ ಪ್ರಮಾಣಗಳನ್ನು ಮೀರಿದ್ದಾರೆ. ಲಕ್ಷ್ಮೀಪತಿ ಕೋಲಾರ, ಎಚ್.ಎಸ್. ಶಿವಪ್ರಕಾಶ್ ಇವರ ಕಾವ್ಯ ಇತರರ ಕಾವ್ಯದ ತಾತ್ವಿಕಕತೆಯ ಪ್ರಮಾಣಗಳನ್ನು ಬಲವಾಗಿ ನಿರಾಕರಿಸುತ್ತವೆಯಾದರೂ ಭಾಷಿಕ-ಚೌಕಟ್ಟಿನ ಪ್ರಮಾಣಗಳನ್ನು ಇವು ನಿರಾಕರಿಸಿಲ್ಲ ಎಂಬುದೇ ಇವರ ಕಾವ್ಯದ ರೀಚಬಲಿಟಿಯ ಸಮಸ್ಯೆಯಾಗಿದೆ. ದೇವನೂರ ಮಹದೇವ ಅವರು ಬರೆದಿರುವ ಕುಸುಮಬಾಲೆ ಕಾದಂಬರಿಯು ಆ ಪ್ರಕಾರಕ್ಕೆ ತೋರಿದ ಪ್ರತಿರೋಧವೆ ಹೌದು. ಆದಾಗ್ಯೂ ಕನ್ನಡದ ಸಾಹಿತ್ಯದಲ್ಲಿ ಮೀರುವಿಕೆಯ ಪ್ರಮಾಣ ಕಿರಿದೇ.

ನಮ್ಮಲ್ಲಿ ಕತೆ ಕಾದಂಬರಿಗಳಿಗೆ ಹೋಲಿಸಿದರೆ ಕಾವ್ಯದಲ್ಲಿ ಇಂತಹ ನುಡಿಬಳಕೆ ಮತ್ತು ಪ್ರಕಾರ ಮೀಮಾಂಸೆಯ ಪ್ರಮಾಣಗಳನ್ನು ನಿರಾಕರಿಸಿರುವ ಪ್ರಮಾಣ ಕಡಿಮೆಯೆ. ಇವೆರಡಕ್ಕು ಹೋಲಿಸಿದರೆ ವಿಮರ್ಶೆಯ ನುಡಿ ಮತ್ತು ನುಡಿಗಟ್ಟಂತು ತುಂಬಾ ಜಡ್ಡುಗಟ್ಟಿದೆ. ಇದಂತು ಮಾನಕ ಭಾಷೆ ಮತ್ತು ಪರಿಬಾಷೆಗಳ ಪರಿಕಲ್ಪನೆಗಳ ಕಗ್ಗಾಡಾಗಿಯೇ ಉಳಿದಿದೆ. ಇದರ ಜಡತ್ವದಿಂದ ಬಿಡುಗಡೆ ನೀಡದಿದ್ದರೆ ಇದಕ್ಕೆ ಜೀವಂತಿಕೆ ಬರಲಾರದು.

ಕತೆ, ಕಾದಂಬರಿಗಳಲ್ಲಿ ಪ್ರಾದೇಶಿಕ-ಜನಾಂಗಿಕ ಬಹುಭಾಷಿಕತೆಗಳು ಒಳನುಗ್ಗಿರುವಂತೆ ವಿಮರ್ಶೆಯಲ್ಲಿ ಒಳನುಗ್ಗಿಲ್ಲ. ವಿಮರ್ಶೆಯ ‘ಮೂರು ಲೋಕವೂ ಹಲ್ಲಣವ ಹೊತ್ತುಕೊಂಡು ಬಳಲುತ್ತಿದೆ’. ವಿಮರ್ಶೆಯ ಭಾಷೆ ಮತ್ತು ಪರಿಭಾಷೆಯ ಪ್ರಮಾಣಗಳನ್ನೂ ನಾವು ಧಿಕ್ಕರಿಸದಿದ್ದರೆ ಖಂಡಿತಾ ವಿಮರ್ಶೆಗೂ ಉಳಿಗಾಲವಿಲ್ಲ. ಕಾವ್ಯ ಮೀಮಾಂಸೆಗೂ ಬೆಲೆಯಿಲ್ಲ. ವಿಮರ್ಶೆಯ ಭಾಷೆ ಪ್ರಮಾಣಗಳಿಂದ ಕೊಳೆತು ನಾರುತ್ತಿದೆ. ಇದರ ಮಾನದಂಡಗಳೂ ಕೂಡ ಪ್ರಮಾಣಗಳಿಂದ ಕಲ್ಲಾಗಿವೆ. ಇದರಲ್ಲೆ ಹೊಸನೀರಿನ ಅವಶ್ಯಕತೆ ಇದೆ. ನಮ್ಮ ವಿಮರ್ಶೆಯ ರೀಚಬಲಿಟಿ ಸೋತಿರುವುದಕ್ಕೆ ಇದೇ ಮುಖ್ಯ ಕಾರಣ. ಇದನ್ನು ಬೌದ್ಧಿಕತೆಯ ಭಾರದಿಂದ, ಪರಿಕಲ್ಪನೆಗಳ ಭಾರದಿಂದ ಬಿಡುಗಡೆ ಮಾಡದಿದ್ದರೆ ಖಂಡಿತಾ ಇದು ಜನದೂರವಾಗುತ್ತದೆ. ಪಂಡಿತ ಮಂಡಲಿಯ ಖಾಸಗಿ ಆಲಾಪ್ ಆಗುತ್ತದೆ.

ಸೃಷ್ಟಿ ಪ್ರಮಾಣಗಳ-ಪಠ್ಯ ಪ್ರಮಾಣಗಳ ನಿರಾಕರಣೆ

ಸೃಷ್ಟಿ ಪ್ರಮಾಣಗಳಿಗು ಮತ್ತು ಲೋಕಗ್ರಹಿಕೆ-ಲೋಕವಿವರಣೆ-ಲೋಕದರ್ಶನಕ್ಕು ನೇರ ಸಂಬಂಧ ಇದೆ. ಜೀವನ ಮೀಮಾಂಸೆಯೊಂದಿಗೆ ಇಲ್ಲಿ ಕಾವ್ಯ ಮೀಮಾಂಸೆ ನೇರ ಸಂಬಂಧ ಪಡೆಯುತ್ತದೆ. ನಮ್ಮಲ್ಲಿನ ಸೃಷ್ಟಿ ಪ್ರಮಾಣಗಳ ನಿರಾಕರಣೆಯನ್ನು ಎರಡು ಬಗೆಯಲ್ಲಿ ನೊಡಬಹುದು. 1. ಲೋಕ ಸೃಷ್ಟಿ ಪ್ರಮಾಣಗಳ ನಿರಾಕರಣೆ 2. ಕಾವ್ಯ ಸೃಷ್ಟಿ ಪ್ರಮಾಣಗಳ ನಿರಾಕರಣೆ. ಇವೆರಡೂ ಮೇಲ್ನೋಟಕ್ಕೆ ಭಿನ್ನವಾದರೂ ದರ್ಶನ ದೃಷ್ಟಿಯಿಂದ ಎರಡೂ ಒಂದೇ. ಮೊದಲಿಗೆ ಲೋಕಸೃಷ್ಟಿ ಕುರಿತ ಪ್ರಮಾಣಗಳ ನಿರಾಕರಣೆ ನೋಡೋಣ;

ಈ ಲೋಕವನ್ನು ಬ್ರಹ್ಮ ಸೃಷ್ಟಿ ಮಾಡಿದ ಎಂಬ ಕಲ್ಪನೆಯೇ ಒಂದು ಪ್ರಮಾಣ. ಸೃಷ್ಟಿ ಸ್ಥಿತಿಲಯ ಕಲ್ಪನೆ ಮತ್ತು ಇವುಗಳಿಗೆ ಕಾರಣರಾದ ತ್ರಿಮೂರ್ತಿಗಳ ಕಲ್ಪನೆ ಮತ್ತೊಂದು ಪ್ರಮಾಣ. ಇವರ ಜೊತೆ ಜೊತೆಗೆ ಬರುವ ಹಣೆಬರಹ-ಪುನರ್ಜನ್ಮ-ಪೂರ್ವಜನ್ಮ ಕರ್ಮಫಲ-ಸ್ವರ್ಗ-ನರಕ-ಯಮಲೋಕ-ದೇವಲೋಕ-ಪಾತಾಳಲೋಕ-ತ್ರಿಲೋಕ-ವೈಕುಂಠ-ಕೈಲಾಸ ಇತ್ಯಾದಿಗಳೆಲ್ಲವೂ ಶಬ್ದಪ್ರಮಾಣಗಳೇ. ಇವನ್ನು ಕಂಡವರೂ ಇಲ್ಲ ಉಂಡವರೂ ಇಲ್ಲ. ನಾವು ಕಾಣದ ಪೂರ್ವಜನ್ಮ-ಬ್ರಹ್ಮನ ಪೆನ್ನುಗಳೇ ನಮ್ಮ ಹಣೆಬರಹವನ್ನು ಬರೆಯುತ್ತವೆ ಎಂಬ ಪ್ರಮಾಣವೇ ತಳಬುಡವಿಲ್ಲದ್ದು. ಇರಲಿ ಆಧುನಿಕ ವಿಜ್ಞಾನವು ಈ ಎಲ್ಲ ಪ್ರಮಾಣಗಳನ್ನು ನಿರಾಕರಿಸಿದೆ ಎಂಬುದು ನಮಗೆಲ್ಲ ತಿಳಿದಿದೆ. ಶಬ್ದ ಪ್ರಮಾಣವನ್ನೆ ಇಡಿಯಾಗಿ ವಿಜ್ಞಾನ ನಿರಾಕರಿಸಿ ಪ್ರತ್ಯಕ್ಷ ಮತ್ತು ತರ್ಕಪ್ರಮಾಣಗಳನ್ನು ಮಾತ್ರ ನಂಬುತ್ತದೆ ಎಂಬುದನ್ನು ನಾವು ಬಲ್ಲೆವು. ಆದರೆ ನಮ್ಮ ಆಧುನಿಕ ಮತ್ತು ಆಧುನಿಕ ಪೂರ್ವ ಸಾಹಿತ್ಯ ಕಥನಗಳೂ ಕೂಡ ಈ ಪ್ರಮಾಣಗಳನ್ನು ನಿರಾಕರಿಸಿವೆ ಎಂಬುದನ್ನು ಮರೆಯುವಂತಿಲ್ಲ. ಇದಕ್ಕೆ ಸಮರ್ಥನೆಯಾಗಿ ಮೂರು ಉದಾಹರಣೆಗಳನ್ನು ನೋಡಬಹುದು. ಮೊದಲನೆಯದ್ದು:

1) ಮಂಟೆಸ್ವಾಮಿ ಕಾವ್ಯದಲ್ಲಿ ಮಂಟೆಸ್ವಾಮಿ ತಾನೆ ಲೋಕವನ್ನು ಸೃಷ್ಟಿ ಮಾಡುತ್ತಾನೆ. ಒಂದು ‘ಈಬತ್ತಿ ಗಟ್ಟಿ’ ತೆಗೆದು ಎರಡು ಹೊಳು ಮಾಡಿ ಒಂದರಿಂದ ಆಕಾಶವನ್ನು ಇನ್ನೊಂದರಿಂದ ಭೂಮಿಯನ್ನು ಸೃಷ್ಟಿಸುತ್ತಾನೆ. ಎಲ್ಲ ದೇವರುಗಳನ್ನು ಇವನೇ ಸೃಷ್ಟಿಸುತ್ತಾನೆ.

2) ಎರಡನೆಯದ್ದು ಹೆಪ್ಪುಮುನಿ ಕತೆ. ಇಲ್ಲಿ ಜಲಜಾಂಬವ ಮುನಿ ತನ್ನ ರಕ್ತವನ್ನೆ ಹೆಪ್ಪು ಹಾಕಿ ಭೂಮಿಯನ್ನು ಸೃಷ್ಟಿ ಮಾಡುತ್ತಾನೆ. ಇನ್ನು ಮೂರನೆಯದ್ದು

3) ದೇವಿಮಹಾತ್ಮೆಯ ಸೃಷ್ಟಿಪುರಾಣ. ಇಲ್ಲಿ ಇಡೀ ಬ್ರಹ್ಮಾಂಡಗಳನ್ನು ಸೃಷ್ಟಿ ಮಾಡಿರುವವಳು ದೇವಿ ಪಾರ್ವತಿ. ನಾವಿರುವ ಇಡೀ ಬ್ರಹ್ಮಾಂಡವೇ ಒಂದು ಹತ್ತಿಯ ಹಣ್ಣಿಗೆ ಸಮ. ಇಂತಹ ಅಸಂಖ್ಯ ಹತ್ತಿಯ ಹಣ್ಣುಗಳಿವೆ. ಅಂತಹ ಒಂದೊಂದು ಹಣ್ಣುಗಳಲ್ಲೂ (ಬ್ರಹ್ಮಾಂಡಗಳಲ್ಲೂ) ಇರುವ ಹರಿಹರ ಬ್ರಹ್ಮಾದಿಗಳನ್ನೆಲ್ಲ ಸೃಷ್ಟಿ ಮಾಡಿರುವವಳೂ ಈಕೆಯೇ. ಹೀಗೆ ಈ ಲೋಕವು ಹೆಣ್ಣಿನ ಸೃಷ್ಟಿ. ಹರಿಹರ ಬ್ರಹ್ಮಾದಿ ದೇವರುಗಳೂ- ಇಂತಹ ಅಸಂಖ್ಯ ಬ್ರಹ್ಮಾಂಡಗಳಲ್ಲಿರುವ ಅಸಂಖ್ಯ ದೇವಮಾನವ ದಾನವ ಸಕಲ ಜೀವ ಸೃಷ್ಟಿಗೂ ಹೆಣ್ಣೊಬ್ಬಳು ಕಾರಣವೆಂಬ ಸೃಷ್ಟಿ ಪುರಾಣ ಇರುವ ಇನ್ನೊಂದು ಗ್ರಂಥ ನಮ್ಮಲ್ಲಿಲ್ಲ. ಅಂದರೆ ಇಲ್ಲಿ ಲೋಕ ಸೃಷ್ಟಿಯ ಕುರಿತ ಸ್ಥಾಪಿತ ಪ್ರಮಾಣಗಳನ್ನೂ ಅದರಲ್ಲೂ ಶಬ್ದ ಪ್ರಮಾಣಗಳನ್ನು ನಿರಾಕರಿಸುವ ಅನೇಕ ಪ್ರತಿ ಪುರಾಣಗಳು ಇವೆ. ಇವುಗಳ ಜೊತೆ ಅಲ್ಲಮನ ವಚನ ನೋಡಿ:

ಮರ್ತ್ಯಲೋಕದ ಕವಿಗಳೆಲ್ಲರೂ ಎನ್ನ ತೊತ್ತಿನ ಮಕ್ಕಳು
ದೇವಲೋಕದ ಕವಿಗಳೆಲ್ಲರೂ ಎನ್ನ ಕರುಣದ ಕಂದಗಳು
ಹಿಂದೆ ಮುಂದೆ ಆಡುವ ಕವಿಗಳೆಲ್ಲರೂ ಎನ್ನ ಲೆಂಕ ಡಿಂಗರಿಗರು
ಹರಿಬ್ರಹ್ಮರುದ್ರ ಈ ಮೂವರೂ ಎನ್ನ ಕೃಪೆಯ ಒಕ್ಕಲು
ಗುಹೇಶ್ವರಾ ನೀ ಮಾವ ನಾ ಅಳಿಯ

ಇಲ್ಲಿ ಅಲ್ಲಮ ಸಕಲ ಸೃಷ್ಟಿ ಪುರಾಣಗಳ ಶಬ್ದ ಪ್ರಮಾಣಗಳನ್ನು ನಿರಾಕರಿಸುತ್ತಿದ್ದಾನೆ. ಇಲ್ಲೆ ಇವನ ‘ನಾ ದೇವನಲ್ಲದೆ ನೀ ದೇವನೇ’ ‘ನೀ ಕಲ್ಲಾದಡೆ ನಾನೇನಪ್ಪೆ?’ ಇಂತಹ ಮಾತುಗಳನ್ನು ನೆನಪಿಸಿಕೊಳ್ಳಬೇಕು.

ಇಲ್ಲೆಲ್ಲ ಅಲ್ಲಮ ತನಗು ಮುಂಚಿನ ಲೋಕ ವಿವರಣೆಯನ್ನು ಮತ್ತು ಸೃಷ್ಟಿ ಪುರಾಣದ ಪ್ರಮಾಣಗಳನ್ನು ನಿರಾಕರಿಸುತ್ತಿದ್ದಾನೆ. ದೈವಾದಿ-ಬ್ರಹ್ಮವಾದಿ ಪ್ರಮಾಣಗಳನ್ನು ನಿರಾಕರಿಸುತ್ತಿದ್ದಾನೆ. ಹರಿಹರ ಬ್ರಹ್ಮರ ಉಸ್ತುವಾರಿ ಸಚಿವಾಲಯವಾದ ಸೃಷ್ಟಿ ಸ್ಥತಿ ಲಯ ಪ್ರಮಾಣವನ್ನು ನಿರಾಕರಿಸುತ್ತಿದ್ದಾನೆ. ಹರಿ ಹರ ಬ್ರಹ್ಮ ಇತ್ಯಾದಿ ಸಕಲೆಂಬತ್ತು ಕೋಟಿ ದೇವತೆಗಳೂ ಆ ದೇವತೆಗಳ ಹಂದಿ, ಮೊಸಳೆ, ಆಮೆ ಇತ್ಯಾದಿ ಅವತಾರಗಳೂ ಎಲ್ಲವೂ ಕವಿಸೃಷ್ಟಿ ಮಾತ್ರ. ಇಂತಹ ಸೃಷ್ಟಿಗಳನ್ನು ಮಾಡಿದ ಕವಿ ಬ್ರಹ್ಮರೆಲ್ಲರೂ ನನ್ನ ತೊತ್ತುಗಳು, ಲೆಂಕ ಡಿಂಗರಿರು, ಕರುಣೆಯ ಕಂದಗಳು ಎಂದು ಅಲ್ಲಮ ಕರೆಯುತ್ತಾನೆ.

ಈ ಲೋಕಸೃಷ್ಟಿ ಪ್ರಮಾಣವೇ ಕಾವ್ಯ ಸೃಷ್ಟಿಯನ್ನು ದೈವೀಕರಿಸಿ, ಪವಿತ್ರೀಕರಿಸಿ ಪ್ರಮಾಣೀಕರಿಸಿದೆ. ವೇದ-ಉಪನಿಷತ್ತು-ಪುರಾಣ=ರಾಮಾಯಣ-ಮಹಾಭಾರತಗಳೆಲ್ಲ ಅಪೌರುಷೇಯಗಳು; ದೈವವಾಣಿಗಳು; ಪ್ರಶ್ನಾತೀತ ಪಠ್ಯಗಳು ಎಂಬ ಪ್ರಠ್ಯದ ಪ್ರಮಾಣೀಕರಣವನ್ನೂ ಪವಿತ್ರೀಕರಣವನ್ನೂ ನಿರಂತರ ನಮ್ಮ ಪರಂಪರೆಯ ಅಲ್ಲಮಪ್ರಜ್ಞೆಗಳು ನಿರಾಕರಿಸುತ್ತ ಬಂದಿವೆ. ಇವತ್ತು ಪರಿವಾರ ಮಂದಿ ತಲೆ ಮೇಲೆ ಹೊತ್ತು ಮೆರೆಯುತ್ತಿರುವ ಭಗವದ್ಗೀತೆ ಕೂಡ ಕೃಷ್ಣ ಪರಮಾತ್ಮನ ವಾಣಿಯಲ್ಲ. ಅದೂ ಕೂಡ ಒಂದು ಕವಿರಚನೆ-ನುಡಿರಚನೆ ಅಷ್ಟೆ. ಶಬ್ದ ಪ್ರಮಾಣ ಅಷ್ಟೆ. ಅದನ್ನು ದೈವವಾಣಿ-ಪ್ರಶ್ನಾತೀತ ಎಂದರೆ ಯಾರು ಕೇಳುತ್ತಾರೆ? ಯಾಕೆ ಹೀಗೆ ಕೆಲವೇ ಪಠ್ಯಗಳು ಪವಿತ್ರೀಕರಣಕ್ಕು-ಪ್ರಮಾಣೀಕರಣಕ್ಕು ಗುರಿಯಾಗಿರುತ್ತವೆ? ಇವುಗಳ ಹಿಂದೆ ವರ್ಗಹಿತಾಸಕ್ತಿಯೇ ಮುಖ್ಯವಾಗಿರುತ್ತದೆ.

ನಮ್ಮಲ್ಲಿ ಭೂಸುರ ಎಂಬ ಒಂದು ಶಬ್ದ ಇದೆ. ಸುರ ಅಂದರೆ ದೇವತೆ. ಭೂಸುರ ಎಂದರೆ ಭೂಮಿಯ ಮೇಲಿನ ದೇವತೆ; ಅಂದರೆ ಬ್ರಾಹ್ಮಣ. ಇಂತಹ ನಿಘಂಟುಶಾಸ್ತ್ರದ ಶಬ್ದ ಪ್ರಮಾಣಗಳನ್ನು ಮತ್ತೆ ಮತ್ತೆ ಬಳಸುವ ಮತ್ತು ಅಪ್ರಜ್ಞಾ ಪೂರ್ವಕವಾಗಿ ಆ ಪ್ರಮಾಣಗಳನ್ನು ಅಮಾಯಕರು ನಂಬುವಂತೆ ಮಾಡುವ ಸಾಂಸ್ಕೃತಿಕ ರಾಜಕಾರಣ ಇದು. ನರಕಾಸುರ, ಕಾಕಾಸುರ, ಬಕಾಸುರ, ಇಂತಹ ಕಡೆ ಇರುವ ಸುರ ಎಂಬ ಶಬ್ದ ಸುರ ಅಲ್ಲವಂತೆ ಅಸುರ ಅಂತೆ. ಭೂಸುರ ಎಂಬ ಶಬ್ದದಲ್ಲಿ ಇರುವುದು ಮಾತ್ರ ಸುರ ಅಂತೆ. ಹೇಗಿದೆ ನೋಡಿ ಶಬ್ದ ಶಾಸ್ತ್ರ? ರಾಕ್ಷಸ-ದಾನವ-ರಾಕ್ಷಸಿ-ಪಿಶಾಚಿ ಇವೆಲ್ಲವೂ ಶಬ್ದ ಪ್ರಮಾಣಗಳಷ್ಟೆ. ಇವೆಲ್ಲ ಎಲ್ಲೋ ಕಾಣದ ಲೋಕದಲ್ಲಿ ಇರುವ ಸ್ಥಿತಿಗಳಲ್ಲ. ನಮ್ಮ ಲೋಕವನ್ನೇ ವಿಹರಿಸುವ ಶಬ್ದ ಪ್ರಮಾಣಗಳಿವು. ಇಲ್ಲಿನ ಜನರನ್ನು ಅಸಮಾನವಾಗಿ ನಿರ್ವಚಿಸುವ ಶಬ್ದ ಪ್ರಮಾಣಗಳಿವು. ಇವೆಲ್ಲವೂ ನಿರಾಕರಣಯೋಗ್ಯ ಎಂಬುದು ತಿಳಿದರೆ ಸಾಕು. ರಾವಣನ ಉದಾತ್ತೀಕರಣ-ದರ‍್ಯೋಧನನ ಉದಾತ್ತೀಕರಣ ಪರಂಪರೆಯನ್ನು ಇಂತಹ ಪ್ರಮಾಣ ನಿರಾಕರಣೆಯ ಉದಾಹರಣೆಯಾಗಿ ನಾವು ನೋಡಬಹುದು. ರನ್ನನ ಸಾಹಸಭೀಮ ವಿಜಯದ ಧರ‍್ಯೋಧನ ಪಾತ್ರ; ನಾಗಚಂದ್ರನ ರಾಮಚಂದ್ರ ಚರಿತ ಪುರಾಣದ ರಾವಣನ ಪಾತ್ರ; ಕುವೆಂಪು ಅವರ ಶ್ರೀರಾಮಾಯಣದರ್ಶನಂ ಕಾವ್ಯದ ಮಂಥರೆ ಶೂರ್ಪನಖಿ ಮತ್ತು ರಾವಣನ ಪಾತ್ರಗಳನ್ನು ಈ ಹಿನ್ನೆಲೆಯಲ್ಲಿ ನೋಡಬಹುದು.

ಯಾವುದೇ ಸ್ತ್ರೀ ಅಥವಾ ಪುರುಷ ಪಾತ್ರಗಳನ್ನು ಹಾಗೆ ವಿಲನಿಕ್ಕಾಗಿ ಅಥವಾ ರಾಕ್ಷಸರೂಪಿಯಾಗಿ ಇಲ್ಲವೆ ರ‍್ಯಾದಾ ಪುರುಷೋತ್ತಮ; ಪರಿಪೂರ್ಣ ದೈವ ಪಾತ್ರ ಆಗಿ ನೋಡುವ ಪ್ರಮಾಣವೇ ಅಪ್ರಮಾಣದೃಷ್ಟಿ. ವಾಸ್ತವ ಎಂದೂ ಹೀಗಿರುವುದಿಲ್ಲ. ಇಂತಹ ಪಾತ್ರ ಪ್ರಮಾಣಗಳಲ್ಲಿ ಶ್ರೀರಾಮ; ಶ್ರೀಕೃಷ್ಣ; ವಿವೇಕಾನಂದ, ಕೃಷ್ಣದೇವರಾಯ ಮೊದಲಾದವರನ್ನು ಮುಖ್ಯವಾಗಿ ಗಮನಿಸಬಹುದು. ನಿರಂತರವಾಗಿ ಇಂತಹ ಪಾತ್ರ ಪ್ರಮಾಣಗಳನ್ನು ಹೇರುವ ಪ್ರಕ್ರಿಯೆ ಮತ್ತು ಸ್ವೀಕರಿಸಿ ವೈಭವೀಕರಿಸುವ ಪ್ರಕ್ರಿಯೆ ನಮ್ಮಲ್ಲಿ ನಡೆಯುತ್ತಲೇ ಇದೆ. ಇದಕ್ಕೆ ತಕ್ಕಮಟ್ಟಿಗಿನ ಪ್ರತಿರೋಧವೂ ನಮ್ಮಲ್ಲಿ ವ್ಯಕ್ತವಾಗಿದೆ.

ರ‍್ಯಾದಾ ಪುರುಷೋತ್ತಮ; ಪರಿಪೂರ್ಣ ಗಂಡುದೇವರು ಶ್ರೀರಾಮನ ಪಾತ್ರ ಪ್ರಮಾಣವನ್ನು ಶಶಿಕಲಾ ವೀರಯ್ಯಸ್ವಾಮಿ ಅವರ ‘ಬೆಲ್ಲ ಮತ್ತು ಕಲ್ಲು’ ಕವಿತೆ ಲಿಂಗನ್ಯಾಯದ ನೆಲೆಯಲ್ಲಿ ಬಹು ಲೇವಡಿ ಪೂರ್ಣವಾಗಿ ನಿರಾಕರಿಸುತ್ತದೆ. ನೋಡಿ;

ಅದೊಂದು ದಿನ ಗೆಳತಿ ಅಂದಳು, ಕಲ್ಲಾದ ಅಹಲ್ಯೆಯ ಮಯ್ಯ ನೇವರಿಸಿ
ಜೀವಸೆಲೆಯೊಡೆಸಿ ಬದುಕನುದ್ಧರಿಸಿದನು, ಶ್ರೀರಾಮ ಕರುಣಾಸಾಗರ ಸದ್ಗುಣದಾಗರ
ಉಘೇ ಉಘೇ ಎಂದಿತು ಜನಸಾಗರ, ಜಗಕೆಲ್ಲಾ ಹೆಮ್ಮೆಯೋ ಹೆಮ್ಮೆ
ಆದರಿನೊಮ್ಮೆ, ಇದೇ ಮಹಾತುಮ ಉಕ್ಕುವ ಜೀವಗಳು ಹೊತ್ತ
ಗರ್ಭಸ್ಥೆ ಮಂದಸ್ಮಿತೆ, ಸತಿ ಸೀತೆಯನ್ನು ಕಾಡುಪಾಲಾಗಿಸಿ
ಕೈತೊಳೆದನೀ ಸೀತಾರಾಮ, ಕರುಣಾಳು ರಾಘವನಲಿ ತಪ್ಪಿಲ್ಲ
ಎಂದತ್ತಳು ಮಾತೆ ಸೀತೆ ಅಲ್ಲವೇನೇ?
ಈ ರಾಮಣ್ಣರೇ ಹೀಗೆ ಕಣೆ, ನಿಜ ಸತಿಗೆ ಕಲ್ಲಾಗುವ ಇವರು
ಪರಸತಿಗೆ ಮಾತ್ರ ಬೆಲ್ಲವಾಗುತ್ತಾರೆ, ಹೌದಲ್ಲ ವೇನೇ? ಎಂದಳು ಗೆಳತಿ
ಏನ ಹೇಳಲಿ ನಾನು? ಹೇಗೆ ಹೇಳಲಿ ನಾನು?
ಎದುರಿಗೇ ಕುಳಿತಿದ್ದಾನೆ ಗಂಡ
ನನಗೊಂದು ಮುಖ, ತನ್ನ ಕಚೇರಿ ಕನ್ನೆಗೊಂದು ಮುಖ ಹೊತ್ತ ಗಂಡ ಬೇರುಂಡ!

ಪಾತ್ರಗಳನ್ನು ಹೀರೋ ಮತ್ತು ವಿಲನ್ ಎಂಬಂತೆ ಬ್ಲಾಕ್ ಅಂಡ್ ವೈಟಾಗಿ ನೋಡುವ ಪ್ರಮಾಣಗಳನ್ನು ಈ ಕವಿತೆ ನಿರಾಕರಿಸುತ್ತದೆ. ಅಷ್ಟೇ ಅಲ್ಲ. ರಾಮತ್ವ ಮತ್ತು ರಾವಣತ್ವ ಎರಡೂ ಬೇರೆ ಬೇರೆ ವ್ಯಕ್ತಿಗಳ ವ್ಯಕ್ತಿತ್ವ ಅಲ್ಲ; ಅದು ಒಂದೇ ವ್ಯಕ್ತಿಯೊಳಗೆ ಇರಬಹುದಾದ ಇಬ್ಬಗೆ ಗುಣಮೊತ್ತ ಎಂದೂ ಈ ಕವಿತೆ ಹೇಳುತ್ತದೆ.

ಆಧುನಿಕ ಸ್ತ್ರೀವಾದ-ಮಹಿಳಾ ಸಾಹಿತ್ಯಗಳು ನಮ್ಮ ಸ್ಥಾಪಿತ ಗಂಡು ಪಾತ್ರಗಳನ್ನೆಲ್ಲ ಕುಟ್ಟಿ ಪುಡಿ ಮಾಡುತ್ತವೆ. ನಿರಾಕರಿಸುತ್ತವೆ. ಹಾಗೆಯೇ ಪುರಾಣಗಳನ್ನೆ ಸಾರಾಸಗಟು ತಿರಸ್ಕರಿಸುತ್ತವೆ. ಇದೇ ಹಿನ್ನೆಲೆಯಲ್ಲಿ ಎಕ್ಕುಂಡಿಯವರ ಇಬ್ಬರು ರೈತರು ಕವಿತೆ ಕಾಳಿದಾಸನ ಪಾತ್ರ ಪ್ರಮಾಣವನ್ನು ಒಡೆಯುವುದನ್ನು ನೋಡಬಹುದು. ಹಾಗೆಯೇ ‘ಅಕ್ಷಯಾಂಬರವನೀವ ಕೈಗೆ ವಸ್ತ್ರಾಪಹರಣಲೀಲೆ’ ಎಂಬ ಇವರದ್ದೇ ಶ್ರೀಕೃಷ್ಣನ ಪಾತ್ರದ ಕುರಿತ ಮಾತನ್ನು ನೋಡಬಹುದು. ನಮ್ಮ ಸಾಕವ್ವ, ಶೂದ್ರ ತಪಸ್ವಿ, ಜಲಗಾರ, ಮಂದಣ್ಣ ಇವೆಲ್ಲವೂ ಇಂಥ ಸಂಕಥನಗಳೇ. ಇಂಥವರೆಲ್ಲರೂ ನಮ್ಮ ಸಮಾಜದಲ್ಲಿ ಇರುವ ಮೂರ್ಖ ಪಾತ್ರ ಪ್ರಮಾಣಗಳನ್ನು ನಿರಾಕರಿಸುವ ಮತ್ತು ತಮ್ಮದೇ ರ‍್ಯಾಯ ಪಾತ್ರ ಪ್ರಮಾಣಗಳನ್ನು ಮತ್ತು ಪಾತ್ರ ಸಾಧ್ಯತೆಗಳನ್ನು ಪ್ರತಿಪಾದಿಸುವ ಸಂಕಥನಗಳಾಗಿವೆ.

ಸುಕುಮಾರ ಚರಿತೆಯಲ್ಲಿ ಶಾಂತಿನಾಥ ಒಂದೊಳ್ಳೆ ಉಪಮೆಯಿಂದ ಕೃತಿಯನ್ನು ಹೇಗೆ ಸ್ವೀಕರಿಸಬೇಕೆಂಬ ಬಗ್ಗೆ ಹೇಳುತ್ತಾನೆ.

ಅಮಳ ಕೃತಿ ತಾಯೆತ್ತ ಭ್ರಮಸಮಾ ಅಲ್ಪಮತಿಯೆತ್ತ ಪೇಳ್ದೆ ನಾಮ್ ಗಡಂ ಏಂ ಚಿ
ತ್ರಮೋ ಬಹುಲ ಗಗನ ಪ್ರಮಾಣಮಂ ತಳದೊಳಳೆದು ಕಂಡರು ಒಳರೇ (ಸು.ಚ. ೧-೫೮) ಶಾಂತಿನಾಥ
ಇದೇ ರೀತಿಯಲ್ಲಿ ನೇಮಿಚಂದ್ರ ತನ್ನ ಅರ್ಧನೇಮಿ ಪುರಾಣದಲ್ಲಿ ಒಂದು ಪದ್ಯ ಬರೆದಿದ್ದಾನೆ ನೋಡಿ;
ಕಡುಕಂಪಂ ಪಿಡಿಕೆಯ್ಸಬರ್ಕುಮೆ ಬಳಲ್ದೈತಂದ ತಂಗಾಳಿಯಂ

ಪಿಡಿಯಲ್ ಬರ್ಕುಮೆ ತೃಷ್ಣೆಗೊರ್ಕುಡಿತೆಯಿಂ ಕೊಂಡಚ್ಚವೆಳ್ದಿಂಗಳಂ
ಕುಡಿಯಲ್ ಬರ್ಕುಮೆ ಕೊರ್ವಿತೆಂದು ತರುಣೀ ಸಂಭೋಗ ಸೌಖ್ಯಂಗಳಂ
ನುಡಿಯಲ್ ಬರ್ಕುಮೆ ಬಾರದಿಂತುಟೆ ಮುಂ ಕಾವ್ಯಾಮೃತಾಸ್ವಾದನಂ.
(ಕಡುಕಂಪನ್ನು ಹಿಡಿಯಲು ಬರುವುದೇ? ಸುಳಿಯುವ ತಂಗಾಳಿಯನ್ನು ಹಿಡಿದಿಡಲು ಬರುವುದೇ? ಬಾಯಾರಿಕೆಗೆ ಬೆಳದಿಂಗಳನ್ನು ಕುಡಿಯಲು ಬರುವುದೇ? ಶಕ್ತಿಯುಂಟೆಂದು ತರುಣಿಯೊಡನ ಸಂಭೋಗ ಸೌಖ್ಯವನ್ನು ವರ್ಣಿಸಲು ಬರುವುದೇ? ಬಾರದು. ಹೀಗೆಯೇ ಕಾವ್ಯವೆಂಬ ಅಮೃತದ ಆಸ್ವಾದನೆಯೂ ಸಹ (ಅ. ನೇ. ಪು. 1-31. ನೇಮಿಚಂದ್ರ)

ಕಾವ್ಯವೆಂದರೆ ಅದು ಸಾಮಾನ್ಯವಲ್ಲ. ಅಮೃತ. ಅದನ್ನು ಆಸ್ವಾದಿಸಬೇಕು ಅಷ್ಟೆ. ಕಾವ್ಯದ ಓದು ತರುಣಿಯೊಡನ ಸಂಭೋಗ ಸೌಖ್ಯದಂತೆ ಭಾಷೆಯನ್ನು ಮೀರಿದ ಒಂದು ಅನುಭವ. ಆದ್ದರಿಂದ ಕಾವ್ಯದ ಓದನ್ನು ವಿವರಿಸಲಾಗಲೀ, ವಿಮರ್ಶಿಸಲಾಗಲೀ ಬಾರದು. ಕಾವ್ಯದ ಪರಿಣಾಮ ಅಥವಾ ಅದರ ತಾತ್ವಿಕತೆಗಳು ವಿವರಿಸಲಾಗದ ಆಸ್ವಾದಗಳು ಮಾತ್ರ. ಗಗನ ಪ್ರಮಾಣವನ್ನು ಯಾರಾದರೂ ತಳದಿಂದ ಅಳೆಯಲು ಸಾಧ್ಯವೇ. ಕಾವ್ಯನ್ನೂ ಹಾಗೆಯೇ ಅಳೆಯಲಾಗುವುದಿಲ್ಲ.

ಸೌಂರ‍್ಯಾತ್ಮಕ ನೆಲೆಯಿಂದ ಕಾವ್ಯವನ್ನು ನಾವು ಭಲೆ ಭೇಷ್ ಎನ್ನುವ ಹಾಗೆ ಬರೆದು ನಾವು ಅದರ ಜೀವನದರ್ಶನವನ್ನು ಒಪ್ಪಿ ಬಾಳುವಂತೆ ಪರಂಪರೆಯುದ್ದಕ್ಕು ಮಾಡುತ್ತ ಬರಲಾಗಿದೆ. ಕಾವ್ಯವೆಂಬುದು ಆಸ್ವಾದನಕ್ಕೆ, ಮನನಕ್ಕೆ, ಬಾಳಲಿಕ್ಕೆ ಪ್ರಶ್ನಿಸಲಿಕ್ಕಲ್ಲ ಎಂಬ ಪ್ರಮಾಣಗಳೇ ನಮ್ಮ ಪರಂಪರೆಯುದ್ದಕ್ಕು ಇವೆ. ಆದರೆ ಇಂತಹ ಪ್ರಮಾಣಗಳನ್ನು ನಿರಾಕರಿಸಲೆಂದೇ ಕಾವ್ಯವನ್ನು ಅಸ್ತ್ರವಾಗಿ ಬಳಸಲಾಗಿದೆ. ಎಂಬುದೂ ನಿಜ.

ಪಠ್ಯಪ್ರಮಾಣದ ನಿರಾಕರಣೆ

ಕುಮಾರವ್ಯಾಸ “ತಿಳಿಯ ಹೇಳುವೆ ಕೃಷ್ಣ ಕತೆಯನು ಎನ್ನುತ್ತಾನೆ. ಹಾಗೆ ಹೇಳುತ್ತಲೇ ‘ವೀರನಾರಾಯಣನೆ ಕವಿ ಲಿಪಿಕಾರ ಕುಮಾರವ್ಯಾಸ’ ಎನ್ನುತ್ತಾನೆ. ‘ಗುರು ಹಂಸನಾಥನಾಜ್ಞೆಯೊಳು ಕಾವ್ಯವಿದನು ಬರೆದೆನು ಸುಖಿಗಳಾಲಿಪುದು’ ಎಂದು ರತ್ನಾಕರವರ್ಣಿ ತನ್ನ ಭರತೇಶ ವೈಭವದಲ್ಲಿ ಹೇಳುತ್ತಾನೆ. ಶ್ರೀವಿಜಯ ತನ್ನ ಅಲಂಕಾರ ಗ್ರಂಥವನ್ನು ‘ನೃಪತುಂಗ ದೇವಾನುಮತಮಪ್ಪ ಕವಿಮಾರ್ಗಂ’ ಎನ್ನುತ್ತಾನೆ. ರಾಘವಾಂಕ ತನ್ನ ಕಾವ್ಯವನ್ನು ‘ಸುಳಿವ ಶಾಸನ’ ಎಂದು ಕರೆದುಕೊಳ್ಳುತ್ತಾನೆ. ಅಂದರೆ ನಮ್ಮಲ್ಲಿ ಕಾವ್ಯಸೃಷ್ಟಿ ಎಂಬುದು ಸಾಮಾನ್ಯವಾದದ್ದಲ್ಲ. ಅದು ದೈವಪ್ರೇರಣೆಯಿಂದ ಆಗುವಂಥದ್ದು. ಅಲ್ಲಿನ ಮಾತುಗಳೆಲ್ಲ ನಮ್ಮ ನಿಮ್ಮಂತೆ ಸಾಮಾನ್ಯವಾದ ಮನುಷ್ಯೆ ಮಾತುಗಳಲ್ಲ. ಅವು ದೈವವಾಣಿಗಳು ಎಂದೆಲ್ಲ ನಮ್ಮಲ್ಲಿ ಬುರುಡೆ ಬಿಡಲಾಗಿದೆ. ಇದೆಲ್ಲ ಪೊಳ್ಳು ಶಬ್ದ ಪ್ರಮಾಣ ಎಂದು ವಚನಕಾರರು, ತತ್ವಪದಕಾರರು ನಿರಾಕರಿಸಿದ್ದಾರೆ. ಕಾವ್ಯ ಸೃಷ್ಟಿಯನ್ನು ದೈವಪ್ರೇರಿತ, ಪವಿತ್ರ, ಪಾರಮಾರ್ಥಿಕ ಎಂದು ಅದಕ್ಕೊಂದು ಅಲೌಕಿಕ-ಪೂಜ್ಯಾರ್ಹ ಅಂತಸ್ತನ್ನು ಕಟ್ಟಿಕೊಡುವುದನ್ನು ನಾವು ನಂಬಬೇಕಿಲ್ಲ.

ಪಠ್ಯಗಳು ಪೂಜ್ಯಾರ್ಹ ಅಲ್ಲ. ಜೈನ ಅನೇಕಾಂತವಾದ ಇಂತಹ ಸೃಷ್ಟಿ ಪ್ರಮಾಣಗಳನ್ನು ಚೆನ್ನಾಗಿ ನಿರಾಕರಿಸುತ್ತದೆ. ತನ್ನ ತಾತ್ವಿಕತೆಯಲ್ಲಿ ಇದು ಪಠ್ಯವನ್ನು ಓದುಗನ ನೆಲೆಯಿಂದ ನೋಡುತ್ತದೆ. ಪ್ರತ್ಯಕ್ಷ ಪ್ರಮಾಣವನ್ನು (ಶಬ್ದ) ಪರೋಕ್ಷವಾಗಿ ನಿರಾಕರಿಸುವ ಅನೇಕಾಂತವಾದವು ವಸ್ತು ಪ್ರಪಂಚದ ವಿವರಣೆಯನ್ನು ಭಿನ್ನ ಭಿನ್ನ ಕೋನಗಳಿಂದ ನೋಡಿ ಭಿನ್ನ ಭಿನ್ನ ನಿಲುವುಗಳಿಗೆ ತಲುಪಬಹುದಾದ ನೆಲೆಯನ್ನು ಹೇಳುತ್ತದೆ. ಪಠ್ಯಕ್ಕೆ ಒಂದೇ ಅರ್ಥ ಇರುತ್ತದೆ. ಎಂಬ ಏಕಾರ್ಥವಾದವನ್ನು, ಒಂದೇ ನೈತಿಕ ನೆಲೆಗಟ್ಟು ಇರುತ್ತದೆ ಎಂಬ ಏಕಕೇಂದ್ರಿತ ವಾದವನ್ನು ಅನೇಕಾಂತವಾದವು ನಿರಾಕರಿಸುತ್ತದೆ. ಚಿಂತಕ ಎಡ್ವರ್ಡ್ ಸೈದನ ಕಾಂಟ್ರಾಪ್ಯುಂಟಲ್ ಅಪ್ರೋಚು ಸರಿಸುಮಾರು ಈ ಅನೇಕಾಂತವಾದವನ್ನೇ ಹೋಲುತ್ತದೆ. ಪಠ್ಯಕ್ಕೆ ಒಂದು ಅರ್ಥ, ಒಂದು ಕೇಂದ್ರ ಪ್ರಜ್ಞೆ, ಒಂದು ನೈತಿಕತೆ ಇತ್ಯಾದಿಗಳಿಂದ ಬಿಡುಗಡೆ ಕೊಡುತ್ತದೆ. ನಮ್ಮ ಅಲ್ಲಮನ ವಚನಗಳು, ತತ್ವಪದಗಳು, ಬೆಡಗು-ಕಾಲಜ್ಞಾನ ವಚನಗಳು ನಮ್ಮನ್ನು ಇಂತಹ ಭಿನ್ನ ಓದುಗಳಿಗೆ ಒತ್ತಾಯಿಸುತ್ತವೆ.

ಹರಿಹರ ವಚನಗಳನ್ನು ಓದಿರುವ ಕ್ರಮಕ್ಕು, ಚಾಮರಸ ವಚನಗಳನ್ನು ಓದಿರುವ ಕ್ರಮಕ್ಕು, ಹಲಗೆಯರ‍್ಯ ಓದಿರುವ ಕ್ರಮಕ್ಕು, ಕಲ್ಲು ಮಠದ ಪ್ರಭುದೇವ ಓದಿರುವ ಕ್ರಮಕ್ಕು, ಟೀಕಿನ ಮಠಗಳು ಓದಿರುವ ಕ್ರಮಕ್ಕು, ತತ್ವಕ್ಕೆ ಹಾಕುವ ಬೈರಾಗಿಗಳು ಕೊಡುವ ಹಲವು ರೀಡಿಂಗುಗಳಿಗು, ಆಧುನಿಕರಾದ ಉತ್ತಂಗಿ, ಕಪಟರಾಳ, ಎಂ.ಆರ್. ಶ್ರೀನಿವಾಸಮೂರ್ತಿ, ಹಳಕಟ್ಟಿ, ಚಿದಾನಂದಮೂರ್ತಿ, ಡಿ.ಆರ್. ನಾಗರಾಜ, ನಂಗಲಿ, ಎಲ್. ಬಸವರಾಜು, ಇಮ್ಮಡಿ ಶಿವಬಸವಸ್ವಾಮಿ, ಜನಪದ ನಾಟಕಕಾರ ಚೆನ್ನಪ್ಪಕವಿ, ಬೂದಾಳು ಹೀಗೆ ಹಲವರು ಓದಿರುವ ಓದಿನ ಕ್ರಮಗಳಿಗು ಒಂದಕ್ಕೊಂದಕ್ಕೆ ಸಾಕಷ್ಟು ವ್ಯತ್ಯಾಸಗಳಿವೆ. ಈ ಹಲವು ಓದುಗಳನ್ನು ಒಟ್ಟಿಗೆ ಇರಿಸಿಕೊಂಡು ನೋಡಿದಾಗ ಅನೇಕಾಂತವಾದವೆ ಅಭಿನಯಗೊಂಡಿರುವುದು ತಿಳಿಯುತ್ತದೆ. ವಚನಗಳ ಅನುಸಂಧಾನಕ್ಕೆ ನಮ್ಮ ಪರಂಪರೆಯಲ್ಲಿ ಒಂದು ಅರ್ಥ, ಒಂದು ಕೇಂದ್ರ, ಒಂದು ಮೂಲ, ಒಂದು ನೈತುಕತೆ, ಒಂದು ಸ್ಥಲ ಯಾವುದೂ ಇಲ್ಲ. ಎಲ್ಲ ಪ್ರಮಾಣಗಳೂ ನುಚ್ಚು ನುರಿಯಾಗಿವೆ.

ಈ ಅನೇಕಾಂತವಾದದ ಅಭಿನಯ ಕೇವಲ ವಚನಗಳಿಗೆ ಮಾತ್ರ ಸಾಧ್ಯವಾಗಿದೆ ಎಂದೇನೂ ಅಲ್ಲ. ಪಂಪನಿಗೂ ಸಾಧ್ಯವಾಗಿದೆ. ಜನ್ನನಿಗೂ ಸಾಧ್ಯವಾಗಿದೆ, ಹರಿಹರನಿಗೂ ಸಾಧ್ಯವಾಗಿದೆ. ಅಕ್ಕನಿಗೂ ಸಾಧ್ಯವಾಗಿದೆ, ಷರೀಫನಿಗೂ ಸಾಧ್ಯವಾಗಿದೆ. ಷರೀಫಜ್ಜನ ಬಿದಿರಿನ ಹಾಡನ್ನು ಶವದ ಮುಂದೆ ಹಾಡಿರುವುದನ್ನು ಕೇಳಿದ್ದೇನೆ. ಪಿಚ್ಚಳ್ಳಿ ಹಾಡಿರುವುದನ್ನು, ಭಿಕ್ಷುಕರು ಹಾಡಿರುವುದನ್ನು, ಚಿಟ್‌ಮೇಳದವರು ಹಾಡಿರುವುದನ್ನು, ಯುವಜನೋತ್ಸವದಲ್ಲಿ ಫ್ಯೂಶನ್ ಸಂಗೀತದೊಂದಿಗೆ ಹಾಡಿರುವುದನ್ನು ಕೇಳಿದ್ದೇನೆ. ಇದೆಲ್ಲ ಅನೇಕಾಂತವಾದದ ಅಭಿನಯವಲ್ಲದೆ ಮತ್ತೇನು? ಕೆಲವು ಸಾರಿ ನಮ್ಮ ಕಣ್ಣೆದುರೆ ಇದ್ದರೂ ಕೆಲಸಂಗತಿಗಳು ಕಾಣುತ್ತಿರುವುದಿಲ್ಲ. ಕಾಣುವ ಕಣ್ಣು ಬೇಕಷ್ಟೆ.

ಪ್ರಮಾಣ ನಿರಾಕರಣೆಯನ್ನು ಮಾತನಾಡುವಾಗ ಇಂದಿನ ಸ್ತ್ರೀವಾದ-ಸ್ತ್ರೀಪಂಥವನ್ನು ಕಡೆಗಣಿಸುವಂತಿಲ್ಲ. ಸ್ತ್ರೀವಾದವು ನಮ್ಮ ಹಳೆಯ ಪ್ರಮಾಣಗಳನ್ನು ಸಂಪೂರ್ಣವಾಗಿ ಗಂಡಿನ ಯಜಮಾನಿಕೆಗೆ ದುಡಿದಿರುವ ಸಾಧನಗಳು ಎಂದೇ ಭಾವಿಸುತ್ತದೆ ಮತ್ತು ನಿರಾಕರಿಸುತ್ತದೆ. ವೇದ-ಉಪನಿಷತ್ತು, ಪುರಾಣ, ಮಹಾಕಾವ್ಯದ ನುಡಿರಚನೆಗಳು ನಿರಂತರವಾಗಿ ಜೀವಿಯಾಗಿ ಹುಟ್ಟುವ ಹೆಣ್ಣನ್ನು ಹೆಂಗಸಾಗಿ ರೂಡಿಸುತ್ತ ಬಂದಿವೆ ಎಂದು ಸ್ತ್ರೀವಾದವು ಬಲವಾಗಿ ಸಾಧಿಸಿದೆ. ಎಲ್ಲ ಶಬ್ದ ಪ್ರಮಾಣಗಳನ್ನು-ಪರಂಪರೆಯ ನುಡಿರಚನೆಗಳನ್ನು ಮಹಿಳಾ ಸಾಹಿತ್ಯವು ನಿರಾಕರಿಸಿದೆ. ವಚನ ಸಾಹಿತ್ಯವು ಹೇಗೆ ತನ್ನ ಹಿಂದಣ ಚರಿತ್ರೆ-ಪುರಾಣ-ವೇದ -ಉಪನಿಷತ್ತು-ತರ್ಕಗಳನ್ನೆಲ್ಲ ನಿರಾಕರಿಸಿತೋ ಹಾಗೆ ಸ್ತ್ರೀವಾದವೂ ನಿರಾಕರಿಸಿದೆ.

ವಿಜ್ಞಾನದ ನಡೆ

ಇನ್ನು ವಿಜ್ಞಾನವು ನಮ್ಮ ಶಬ್ದ ಪ್ರಮಾಣಗಳನ್ನು ನಿರಾಕರಿಸುವ ಬಗೆಯನ್ನು ಸ್ವಲ್ಪ ನೋಡಬಹುದು. ವಿಜ್ಞಾನವು ನಂಬುವುದು ಪ್ರತ್ಯಕ್ಷ ಪ್ರಮಾಣ ಮತ್ತು ಅನುಮಾನ ಪ್ರಮಾಣ ಅಥವಾ ತರ್ಕ ಪ್ರಮಾಣಗಳನ್ನು ಮಾತ್ರ. ಅದು ಎಂದಿಗೂ ಶಬ್ದ ಪ್ರಮಾಣಗಳನ್ನು ನಂಬುವುದಿಲ್ಲ. ಧರ್ಮಪ್ರಭುತ್ವ - ರಾಜಪ್ರಭುತ್ವಗಳು ಜೊತೆಯಾಗಿ ವಿಜ್ಞಾನದ ಆವಿಷ್ಕಾರಗಳನ್ನು ಹತ್ತಿಕ್ಕುತ್ತ ಬಂದಿರುವ ದೊಡ್ಡ ಚರಿತ್ರೆಯೇ ನಮ್ಮೆದುರಿಗೆ ಇದೆ. ಕ್ರಿ.ಪೂ. ೫೮೫ರಲ್ಲಿ ಟರ್ಕಿಯಲ್ಲಿ ಬದುಕಿದ್ದ ಪ್ರಪಂಚದ ಪ್ರಾಚೀನ ವಿಜ್ಞಾನಿ ಖ್ಯಾಲಿಸ್, ಕ್ರಿ.ಪೂ. ೫೦೦ರಲ್ಲಿ ಗ್ರೀಸಿನಲ್ಲಿ ಬದುಕಿದ್ದ ವಿಜ್ಞಾನಿ ಹೆಕ್ಡ್ಯೂಸ್, ಕ್ರಿ.ಪೂ. 500ರ ಕಾಲದಿಂದಲು ಬಹುಕಾಲ ಭಾರತದಲ್ಲಿದ್ದ ವೈಜ್ಞಾನಿಕ ಮನೋಭಾವದ ಲೋಕಾಯತ-ನಿರೀಶ್ವರವಾದಿ-ಚಾರ್ವಾಕ ಪಂಥೀಯರು, ಕ್ರಿ.ಪೂ.385ರ ಸುಮಾರಿನಲ್ಲಿದ್ದ ಗ್ರೀಸ್ ದೇಶದ ಅರಿಸ್ಟಾಟಲ್, ಸುಮಾರು ಕ್ರಿ.ಶ. 100ರಲ್ಲಿ ಈಜಿಪ್ಟಿನಲ್ಲಿ ಇದ್ದ ಹಿಪಾಟಿಯಾ, ಕ್ರಿ.ಶ. 129-216ರಲ್ಲಿದ್ದ ರೋಮ್ ಸಾಮ್ರಾಜ್ಯದಲ್ಲಿ (ರ‍್ಗಮಾ-ಟರ್ಕಿಯಲ್ಲಿ) ಬದುಕಿದ್ದ-ಆಗಿನ ಕಾಲದ ಗ್ಲಾಡಿಯೇಟರುಗಳಿಗೆ ಡಾಕ್ಟರಾಗಿದ್ದ, ಅನಾಟಮಿಯ ಜನಕನಾದ ಗ್ಯಾಲನ್, 1540ರ ಕಾಲದಲ್ಲಿ ರೋಮಿನಲ್ಲಿದ್ದ ವಿಚಾರವಾದಿ-ವಿಜ್ಞಾನಿ ವೆಸಿಲ್ಯೂಸ್, 1543-50ರ ಕಾಲದಲ್ಲಿದ್ದ ಕೋಪರ್ನಿಕಸ್, 1564ರ ಕಾಲದಲ್ಲಿದ್ದ ಇಟಲಿಯ ವಿಜ್ಞಾನಿ ಗೆಲಿಲಿಯೋ ಹೀಗೆ ಸಾಲು ಸಾಲು ವಿಜ್ಞಾನಿಗಳು ಧರ‍್ಮಿಕ ಪುರೋಹಿತಶಾಹಿಗಳ ಪುರಾಣ ಶಬ್ದಪ್ರಮಾಣಗಳನ್ನು ಧರ್ಮಗ್ರಂಥ-ಪವಿತ್ರ ಪಠ್ಯಗಳ ಶಬ್ದಪ್ರಮಾಣಗಳನ್ನು ನಿರಂತರ ನಿರಾಕರಿಸುತ್ತ ಬಂದಿದ್ದಾರೆ. ಬರೀ ಈ ಚರಿತ್ರೆಯೇ ಒಂದು ದೊಡ್ಡ ಸಂಶೋಧನೆಯ ವಲಯ. ಈ ಮೊದಲು ಹೆಸರಿಸಿದ ವಿಜ್ಞಾನಿಗಳು-ವಿಚಾರವಾದಿಗಳೆಲ್ಲರೂ ಹಿಂಸೆ-ಪ್ರಾಣ ಬೆದರಿಕೆಗೆ-ವಿಷಪ್ರಾಶನ, ಮರಣದಂಡನೆಗೆ ಗುರಿಯಾಗುತ್ತ ಬಂದಿದ್ದಾರೆ.

ಇಲ್ಲೆ ಇನ್ನೊಂದು ಅಂಶವನ್ನು ನಾವು ಗಮನಿಸಬೇಕು. ವಿಜ್ಞಾನದ ಸಂಶೋಧನೆಗಳು ನಿರಂತರವಾಗಿ ನಮ್ಮ ಬ್ರಹ್ಮವಾದ, ಸ್ವರ್ಗ-ನರಕ, ಪಾತಾಳ-ದೇವಲೋಕ, ಪುನರ್ಜನ್ಮ-ರ‍್ಮಫಲ ಹಣೆಬರಹ ಇತ್ಯಾದಿಗಳನ್ನು ನಿರ್ದಾಕ್ಷಿಣ್ಯವಾಗಿ ನಿರಾಕರಿಸಿವೆ. ಹಾಗೆಯೇ ಭೂಮಿಯ ಸೃಷ್ಟಿ-ಲೋಕಸೃಷ್ಟಿ ಮತ್ತು ಬ್ರಹ್ಮಾಂಡದ ತಿಳುವಳಿಕೆಗೆ ಸಂಬಂಧಿಸಿದ ವಿಜ್ಞಾನದ ಪ್ರಮಾಣಗಳು ಕಾಲಕಾಲಕ್ಕೆ ನಿರಾಕರಣೆ ಮತ್ತು ನವನಿರ್ಮಾಣಗಳಿಗೆ ಗುರಿಯಾಗುತ್ತ ಬಂದಿವೆ. ವಿಜ್ಞಾನವೂ ಕೂಡ ನಿತ್ಯವೂ ಅರೆತಿಳಿವಿನಿಂದ ಇನ್ನೊಂದಷ್ಟು ತಿಳಿವಿನ ಕಡೆಗೆ ಹರಿಯುತ್ತಿದೆ. (ಹೆಚ್ಚಿನ ವಿವರಗಳಿಗೆ ನೋಡಿ; ಸಂಶೋಧನೆಯ ಹಾದಿ; ದೇವಿಪ್ರಸಾದ್ ಚಟ್ಟೋಪಾಧ್ಯಾಯ)

ಪ್ರಮಾಣ ನಿರಾಕರಣೆ-ಮೀಮಾಂಸೆಯೆಂಬುದು ಪ್ರಮಾಣ

ನಮ್ಮಲ್ಲಿ ಕಾವ್ಯಮೀಮಾಂಸೆ ಎಂಬ ಪ್ರತ್ಯೇಕ ಶಾಖೆಯೊಂದು ಆಧುನಿಕ ಪೂರ್ವ ಸಂದರ್ಭದಲ್ಲಿ ಬೆಳೆದಿಲ್ಲ. ಭಾಷಾಚಿಂತನೆ, ಪದಕೋಶ ಚಿಂತನೆ, ಅಲಂಕಾರ-ರಸ ಚರ್ಚೆ, ಗುಣದೋಷ ಚರ್ಚೆ, ವ್ಯಾಕರಣಗಳ ಚರ್ಚೆ ಹೀಗೆ ಇವುಗಳನ್ನೆಲ್ಲ ಒಟ್ಟಿಗೆ ಮತ್ತು ಛಂದಸ್ಸನ್ನು ಬಿಡಿಯಾಗಿ ಶಾಸ್ತ್ರ-ಕಾವ್ಯ ರೂಪದಲ್ಲಿ ಚರ್ಚಿಸುವ ರೂಢಿ ನಮ್ಮಲ್ಲಿದೆ. ಉದಯಾದಿತ್ಯಾಲಂಕಾರ, ಮಾಧವಾಲಂಕಾರ, ಅಪ್ರತಿಮವೀರಚರಿತೆ, ನರಪತಿಚರಿತೆ ಇಂಥವು ಅಲಂಕಾರವನ್ನು ಚರ್ಚಿಸಿದರೆ; ಕವಿಕಾಮನ ಶೃಂಗಾರ ರತ್ನಾಕರ, ಸಾಳ್ವನ ರಸರತ್ನಾಕರ ಇಂತಹವು ರಸಚರ್ಚೆಯನ್ನು ತಮ್ಮ ವಸ್ತುವಾಗಿಸಿಕೊಂಡಿವೆ. ಶಬ್ದಮಣಿದರ್ಪಣ ಶಬ್ದ, ಭಾಷೆ ಮತ್ತು ವ್ಯಾಕರಣಗಳನ್ನು ಚರ್ಚಿಸಿದರೆ ಕಾವ್ಯಾವಲೋಕನ, ಛಂದೋಂಬುಧಿಗಳು ಮೀಮಾಂಸೆ, ಛಂದಸ್ಸನ್ನು ಪ್ರಧಾನವಾಗಿ ಚರ್ಚಿಸುತ್ತದೆ. ಅಭಿದಾನ ವಸ್ತುಕೋಶ, ರನ್ನಕಂದ, ಕರ್ನಾಟಕ ಶಬ್ದಮಂಜರಿ, ಕರ್ನಾಟಕ ಸಂಜೀವನ, ಕವಿಕಂಠಹಾರ ಮೊದಲಾದುವು ಶಬ್ದಶಾಸತ್ರ-ನಿಘಂಟು ಗ್ರಂಥಗಳಾಗಿವೆ. ಶ್ರೀವಿಜಯನ ಕವಿರಾಜಮಾರ್ಗ ಭಾಷೆ-ದೇಶ ಮತ್ತು ಕಾವ್ಯ ಮೀಮಾಂಸೆ, ವ್ಯಾಕರಣಗಳನ್ನೆಲ್ಲ ಕಲಸಿ ಚರ್ಚಿಸುತ್ತದೆ.

ಅಭಿದಾನ ವಸ್ತುಕೋಶ: ಕನ್ನಡ ಕಾವ್ಯಗಳಲ್ಲಿ ಬಳಕೆಯಾಗಿರುವ ಸಂಸ್ಕೃತ ಶಬ್ದಗಳಿಗೆ ಕನ್ನಡದ ಅರ್ಥಗಳನ್ನು ಕಂದಪದ್ಯ ಮತ್ತು ವೃತ್ತಗಳಲ್ಲಿ ಹೇಳಿರುವ ಕೃತಿ. (ನಾಗವರ್ಮ 1145). ಅಭಿದಾನ ರತ್ನಮಾಲಾ ಕರ್ನಾಟಕ ಟೀಕು: ಇದು ಎರಡನೇ ನಾಗವರ್ಮ (1145) ಬರೆದಿರುವ ಟೀಕು. ಸಂಸ್ಕೃತದಲ್ಲಿ ಭಟ್ಟ ಹಲಾಯುಧ ಬರೆದ ಅಭಿದಾನ ರತ್ನಮಾಲಾ ಎಂಬ ನಿಘಂಟಿಗೆ ಕನ್ನಡದಲ್ಲಿ ಟೀಕು ಬರೆಯಲಾಗಿದೆ. ಆಕಾರಾದಿ ವೈದ್ಯನಿಘಂಟು: ಇಲ್ಲಿ ಸಂಸ್ಕೃತದ ವೈದ್ಯ ಶಬ್ದಗಳಿಗೆ ಕನ್ನಡದ ರ‍್ಯಾಯಶಬ್ದಗಳನ್ನು ನೀಡಲಾಗಿದೆ. ಅಮೃತನಂದಿಯಿಂದ ಇದು ರಚಿತವಾಗಿದೆ. ಇದರ ಕಾಲ ಸು.1300. ಕರ್ನಾಟಕ ಶಬ್ದಮಂಜರಿ: ಇದಕ್ಕೆ ನಾಲ್ಕೈದು ಟೀಕುಗಳಿವೆ. ಸುಮಾರು 1560ರಲ್ಲಿದ್ದ ವಿರಕ್ತ ತೋಂಟದರ‍್ಯ ವಾರ್ಧಕ ಷಟ್ಪದಿಯಲ್ಲಿ ಈ ನಿಘಂಟು ರಚಿಸಿದ್ದಾನೆ. ಹೀಗೆ 19ನೆ ಶತಮಾದವರೆಗೆ 60ಕ್ಕೂ ಹೆಚ್ಚು ನಿಘಂಟುಗಳು ರಚನೆಯಾಗಿವೆ.

ಈ ಎಲ್ಲ ಶಾಸ್ತ್ರಕಾವ್ಯಗಳಲ್ಲಿ ಮೀಮಾಂಸೆ ಹರಡಿಕೊಂಡಿದೆ. ಇಲ್ಲಿನ ಮೀಮಾಂಸೆ ಕನ್ನಡ ಕಾವ್ಯವನ್ನು ಸಮಗ್ರವಾಗಿ ತೆಕ್ಕೆಗೆ ತೆಗೆದುಕೊಂಡಿಲ್ಲ. ನಾವು ಇಂದು ಕಾವ್ಯಮೀಮಾಂಸೆ ಎಂದು ಏನು ಕಲ್ಪಿಸಿಕೊಂಡಿದ್ದೇವೋ ಆ ಕಲ್ಪನೆ ನಮ್ಮ ಪ್ರಾಚೀನ ಶಾಸ್ತ್ರಕಾರರಿಗೆ-ಮೀಮಾಂಸಕರಿಗೆ ಇರಲಿಲ್ಲ. ಇವರ ಎಲ್ಲ ಶಾಸ್ತ್ರಗಳಿಗೆ ಮಾದರಿಯಾಗಿ ಇದ್ದದ್ದು ಸಂಸ್ಕೃತ ಪಠ್ಯಗಳು. ಸಂಸ್ಕೃತ ಶಾಸ್ತ್ರ ಪಠ್ಯಗಳನ್ನು ಮಾದರಿಯಾಗಿ ಅಂದರೆ ಪ್ರಮಾಣವಾಗಿ ಇರಿಸಿಕೊಂಡೇ ಇವರು ತಮ್ಮ ಶಾಸ್ತ್ರಗಳನ್ನು ನಿರ್ಮಿಸಿದ್ದಾರೆ.

ಈ ಶಾಸ್ತ್ರಗಳಲ್ಲಿ ನಿರೂಪಿತವಾಗಿರುವ ಅಲಂಕಾರ ಚರ್ಚೆ, ರಸಚರ್ಚೆ, ಛಂದಸ್ಸಿನ ಚರ್ಚೆ, ಭಾಷೆ, ವ್ಯಾಕರಣ, ಪದಕೋಶ ಚರ್ಚೆಗಳೆಲ್ಲವೂ ಕನ್ನಡ ಸಾಹಿತ್ಯದ ಬಹು ಮುಖ್ಯವಾದ ಭಾಗವನ್ನು ಹೊರೆಗೇ ಇಟ್ಟಿವೆ. ವಚನ, ಕೀರ್ತನ, ತತ್ವಪದ, ಸ್ವರಪದ, ಅನುಭಾವೀ ಹಾಡುಗಳು, ಮುಂಡಿಗೆ, ಕಾಲಜ್ಞಾನ, ತಾರಾವಳಿ, ಬೆಡಗು, ಆಚರಣೆಯ ಹಾಡುಗಳು, ವೃತ್ತಿಗಾಯಕ ಕಾವ್ಯಗಳು, ಮೌಖಿಕ ಮಹಾಕಥನಗಳು ಮೊದಲಾದ ಎಲ್ಲ ಧಾರೆಗಳನ್ನು ನಮ್ಮ ಮೀಮಾಂಸೆ ಹೊರಗೇ ಇಟ್ಟಿದೆ. ಇವುಗಳೆಲ್ಲವೂ ಕೇವಲ ಪ್ರಕಾರಗಳಲ್ಲ ಒಂದೊಂದು ಭಿನ್ನ ಪರಂಪರೆಗಳು. ಆದರೂ ಇವನ್ನೆಲ್ಲ ನಮ್ಮ ಕಾವ್ಯ ಶಾಸ್ತ್ರವು ಹೊರಗೇ ಇಟ್ಟಿದೆ. ಯಾಕೆಂದರೆ ಇವೆಲ್ಲವೂ ನಮ್ಮಲ್ಲಿ ಶಿಷ್ಟ ಮತ್ತು ಮೌಖಿಕ, ಪ್ರತಿಷ್ಠಿತ ಮತ್ತು ಅಲಕ್ಷಿತ ಹೀಗೆ ಸಮಾನ ಪಾತಳಿ ಇಲ್ಲದ ಭಿನ್ನ ಜಗತ್ತುಗಳೆ ಆಗಿದ್ದುವು.

ರಸ, ಧ್ವನಿ. ಔಚಿತ್ಯ, ಅಲಂಕಾರಗಳೆಲ್ಲ ಪ್ರಮಾಣ ಪ್ರಸ್ಥಾನಗಳಾಗಿ ರೂಪಗೊಂಡಿರುವುದು; ಕಾವ್ಯ ಮೀಮಾಂಸೆಯಾಗಿ ರೂಪಗೊಂಡಿರುವುದು ಆಧುನಿಕ ವಿದ್ಯಾಭ್ಯಾಸ ಹುಟ್ಟಿಕೊಂಡ ನಂತರದಲ್ಲೆ. ಕನ್ನಡ ಸಾಹಿತ್ಯದ ಉನ್ನತ ಶಿಕ್ಷಣ ರಂಗಕ್ಕೆ ಮೀಮಾಂಸಾ ಪಠ್ಯವೊಂದನ್ನು ನಿರ್ಮಿಸಿಕೊಡುವ ಅಗತ್ಯಕ್ಕಾಗಿ ಭಾರತೀಯ ಕಾವ್ಯ ಮೀಮಾಂಸೆ ಹುಟ್ಟಿಕೊಂಡಿದೆ. ಕನ್ನಡ ವಿದ್ವತ್ ವಲಯ ಭಾರತೀಯ ಕಾವ್ಯಮೀಮಾಂಸೆಯನ್ನೆ ಕನ್ನಡ ಕಾವ್ಯಮೀಮಾಂಸೆಗೂ ಮಾದರಿಯಾಗಿ ಇಟ್ಟುಕೊಳ್ಳಲು ಮುಖ್ಯ ಕಾರಣ ಅರ್ಥವಾದಿ-ಆನಂದವಾದಿ-ಬ್ರಹ್ಮವಾದಿ ನೆಲೆಯಲ್ಲೆ ಕಾವ್ಯವನ್ನು ಓದಬೇಕು ಎಂಬ ಪ್ರಮಾಣಗಳನ್ನು ಕಟ್ಟಿಕೊಟ್ಟ ನಮ್ಮ ಶಾಸ್ತ್ರ ಪರಂಪರೆ. ಈ ಪರಂಪರೆಯನ್ನು ನಿರಾಕರಿಸಿದ ಭಿನ್ನ ಕಾವ್ಯದ ಅನುಸಂಧಾನಗಳು. ಓದುಗಳು ನಮ್ಮಲ್ಲಿ ಜರುಗಿವೆ. ಆದರೂ ಅವುಗಳನ್ನು ನಗಣ್ಯವೆಂಬಂತೆ ಕಾಣಲಾಗಿದೆ. ಅವುಗಳನ್ನು ಮೀಮಾಂಸೆ ವಲಯ ಮಾನ್ಯ ಮಾಡಿಲ್ಲ. ನಮ್ಮ ಪರಂಪರೆಯಲ್ಲಿದ್ದ ತತ್ವಕ್ಕೆ ಹಾಕುವುದು ಇಂತಹ ಒಂದು ಮಾದರಿಗೆ ಉದಾಹರಣೆ.

ಸಾಹಿತ್ಯದ ಓದಿನ ದಾರಿಗಳನ್ನು ಕುರಿತು ಚರ್ಚಿಸುವಾಗ ಪ್ರಾಚೀನ ಕಾವ್ಯಗಳಿಗೆ ಸಂಸ್ಕೃತ ಮೀಮಾಂಸೆಯನ್ನೆ ಮಾದರಿಯಾಗಿಯೂ ಆಧುನಿಕ ಸಾಹಿತ್ಯಕ್ಕೆ ಪಾಶ್ಚಾತ್ಯ (ಇಂಗ್ಲಿಷ್) ಸಿದ್ಧಾಂತಗಳನ್ನೆ ಮಾದರಿಯಾಗಿಯೂ ಬಳಸಲಾಗಿದೆ. ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾಗಿರುವ ಒದಿನ ದಾರಿಗಳು ಎಂಬ ಪುಸ್ತಕವೇ ಇದಕ್ಕೆ ಸಾಕ್ಷಿ.

ಇಪ್ಪತ್ತನೆ ಶತಮಾನದ ಆರಂಭದಲ್ಲಿ ಕನ್ನಡ ಕಾವ್ಯಮೀಮಾಂಸೆಯನ್ನು ಮತ್ತು ಕಾವ್ಯ ತತ್ವಗಳನ್ನು ಕ್ರೋಢೀಕರಿಸಲು ವಿ. ಸೀತಾರಾಮಯ್ಯ, ಡಾ. ಕೆ. ಕೃಷ್ಣಮೂರ್ತಿ, ಜಿ.ಎಸ್.ಶಿವರುದ್ರಪ್ಪ, ತೀನಂಶ್ರೀ ಮೊದಲಾದವರು ಯತ್ನಿಸಿದ್ದಾರೆ. ಇವರೂ ಕೂಡ ನಮ್ಮ ಪ್ರಾಚೀನ ಶಾಸ್ತ್ರಕಾರರು ಮಾಡಿದ ತಪ್ಪುಗಳನ್ನೆ ಮಾಡಿದ್ದಾರೆ. ವಿ.ಎಂ.ಇನಾಂದಾರ್, ಎಚ್.ತಿಪ್ಪೇರುದ್ರಸ್ವಾಮಿ ಮೊದಲಾದವರು ಸಂಸ್ಕೃತ ಮಾತ್ರವೇ ಏಕೆ ಜಾಗತಿಕ ತುಲನೆಯನ್ನು ಒಳಗೊಳ್ಳೋಣ ಎಂದು ಇಂಗ್ಲಿಷ್ ಪ್ರಣೀತ ತೌಲನಿಕ ಕಾವ್ಯಮೀಮಾಂಸೆಯನ್ನು ಮಂಡಿಸಿದ್ದಾರೆ. ಇವರೆಲ್ಲರ ಪ್ರಯತ್ನಗಳೂ ಹೊಸ ಹೊಸ ಪ್ರಮಾಣಗಳ ನಿರ್ಮಾಣಗಳ ದಿರಿಸಿನಲ್ಲಿರುವ ಹಳೆಯ ಪ್ರಮಾಣಗಳ ಮುಂದುವರಿಕೆಗಳೇ ಆಗಿವೆ. ಆಧುನಿಕೋತ್ತರ ಸಂದರ್ಭದಲ್ಲಿ ರಹಮತ್ ತರೀಕೆರೆ, ಎಸ್.ಎಂ.ಹಿರೇಮಠ, ವೀರಣ್ಣ ದಂಡೆ, ಎಸ್.ಎಸ್.ಹಿರೇಮಠ, ಗಿರಡ್ಡಿ-ಆಮೂರ-ಓ.ಎಲ್.ಎನ್., ಸಿಎನ್ನಾರ್, ನಟರಾಜ ಬೂದಾಳು ಮೊದಲಾದವರು ಕನ್ನಡ ಕಾವ್ಯಮೀಮಾಂಸೆಯ ಮತ್ತು ದರ್ಶನದ ನೆಲೆಗಳನ್ನು ಗುರ್ತಿಸಲು ಯತ್ನಿಸಿದ್ದಾರೆ. ಇಲ್ಲಿ ಮೂರು ರೀತೀಯ ಬೆಳವಣಿಗೆಗಳು ಘಟಿಸಿವೆ.

1. ಕಾವ್ಯಮೀಮಾಂಸೆಯನ್ನು ಸಾಹಿತ್ಯ ಮೀಮಾಂಸೆಯಾಗಿ ಭಾವಿಸಲಾಗಿದೆ. (ರಹಮತ್ ಬಳಕೆ ಮತ್ತು ಗಿರಡ್ಡಿ-ಆಮೂರ-ಸಿಎನ್ನಾರ್)

2. ಒಂದು ಸಮಗ್ರ ಕಾವ್ಯಮೀಮಾಂಸೆ ಕನ್ನಡದಲ್ಲಿ ಇಲ್ಲ. ಅದು ಹಲವಾಗಿ ಇದೆ ಎಂದು ಭಾವಿಸಲಾಗಿದೆ. ಶರಣ ಕಾವ್ಯಮೀಮಾಂಸೆ, ಜನಪದ ಕಾವ್ಯಮೀಮಂಸೆ, ಕೀರ್ತನ ಕಾವ್ಯ ಮೀಮಾಂಸೆ, ಮಹಿಳಾ ಕಾವ್ಯ ಮೀಮಾಂಸೆ, ಶ್ರಮಣ ಕಾವ್ಯಮೀಮಾಂಸೆ, ವೈದಿಕ ಕಾವ್ಯಮೀಮಾಂಸೆ ಇತ್ಯಾದಿ.

3. ಕಾವ್ಯ ಮೀಮಾಂಸೆ ಮತ್ತು ಜೀವನ ಮೀಮಾಂಸೆ-ಜೀವನದರ್ಶನಗಳು ಅಭಿನ್ನ ಎಂದು ಭಾವಿಸಲಾಗಿದೆ. (ಶ್ರಮಣ ಧಾರೆ)

ಇದರ ಮುಂದುವರಿದ ಪ್ರಸ್ಥಾನ ಅಥವಾ ಸಹಪ್ರಸ್ಥಾನ ಎಂಬಂತೆ ನಮ್ಮಲ್ಲಿ ವಿಮರ್ಶೆಯ ತತ್ವ ಮತ್ತು ವಿಮರ್ಶೆಯ ಪಾಂಥಿಕತೆಗಳು ಚರ್ಚೆಗೆ ಗುರಿಯಾಗಿವೆ. ಮೀಮಾಂಸೆ ಮತ್ತು ವಿಮರ್ಶೆಯ ನಡುವಿನ ಅಂತಃಸಂಬಂಧಗಳು ಚರ್ಚೆಗೆ ಗುರಿಯಾಗಿವೆ. ಬಂಡಾಯೋತ್ತರದಲ್ಲಿ ಚಳುವಳಿಗಳು ಸೊರಗಿವೆ. ಸಾಹಿತ್ಯವೂ ಚಳಚಳಿಯಾಗಿ ನರ‍್ವಚನ ಆಗಿಲ್ಲ. ಆಧುನಿಕ ಸಾಹಿತ್ಯಕ್ಕೆ (ಕಾವ್ಯಕ್ಕೆ) ಬಂಡಾಯೋತ್ತರ ಕಾಲದಲ್ಲಿ ಒಂದು ಮುಖವೇ ಇಲ್ಲ ಎಂಬಂತಹ ನಿಲುವುಗಳು ಪ್ರಕಟವಾಗಿದೆ. ಹಾಗೆ ನೋಡಿದರೆ ಮೀಮಾಂಸೆ ಮತ್ತು ವಿಮರ್ಶೆಗಳನ್ನೆಲ್ಲ ಕಲಸಿದ ಸಾಹಿತ್ಯ ಚಿಂತನೆ, ಸಾಹಿತ್ಯ ವಿಶ್ಲೇಷಣೆಯೆ, ಸಂಸ್ಕೃತಿ ಕಥನವೇ ಒಂದು ಪ್ರಮುಖ ಉಪಕ್ರಮವಾಗಿ 80ರ ದಶಕದಿಂದೀಚೆಗೆ ರೂಪಗೊಂಡಿದೆ. ಸಾಹಿತ್ಯ ವಿಮರ್ಶೆ ಮತ್ತು ಸಾಹಿತ್ಯತತ್ವಗಳೇ ಒಂದು ಆಂದೋಲನವೆಂಬಂತೆ ಇಲ್ಲೆಲ್ಲ ರೂಪಗೊಂಡಿವೆ. ಇದು ಸಾಹಿತ್ಯ ವಿಮರ್ಶೆ ಮತ್ತು ಸಾಹಿತ್ಯತತ್ವ ಹಾಗೂ ಸಂಸ್ಕೃತಿ ಕಥನಗಳ ಕಾಲ. ಸಂಶೋಧನೆಯೂ ವಿಮರ್ಶೆಯಾಗಿ ಹೊರಳಿಕೊಳ್ಳುತ್ತಿರುವ ಕಾಲವಿದು.

ಕಿರಂ, ಡಿ.ಆರ್, ಗಿರಡ್ಡಿ, ಆಮೂರ, ಚೆನ್ನಿ, ಕಲಬುರ್ಗಿ, ಹಂಪನಾ, ಕೆ.ವಿ.ನಾರಾಯಣ, ಕಲ್ಗುಡಿ, ಓ.ಎಲ್.ಎನ್, ಸಿ. ಎನ್ನಾರ್, ಹುಳಿಯಾರ್, ವಿವೇಕ್ ರೈ, ಬಳಿಮಲೆ, ರಹಮತ್, ಟಿ.ಆರ್.ಸಿ, ಪುಟ್ಟಯ್ಯ, ತಾರಕೇಶ್, ಡಿ.ಎಸ್.ನಾಗಭೂಷಣ, ಡಿ. ವಿ. ರಾಜಶೇಖರ, ಟಿ.ಪಿ. ಆಶೋಕ, ಬಿ.ಎನ್. ಸುಮಿತ್ರಾಬಾಯಿ, ವಿಜಯಾ ದಬ್ಬೆ, ಎಂ.ಎಸ್. ಆಶಾದೇವಿ, ತಾರಿಣಿ, ಬೂದಾಳು, (ಬೇಗೂರು) ವರೆಗೆ ವಿಮರ್ಶಕರ ಪಡೆಯೇ ನಮ್ಮೆದುರು ಇದೆ. ಈಗೀಗ ಈ ವಿಮರ್ಶೆಗು ಇಳಿಗಾಲ-ಕೂಳೆಕಾಲ ಶುರುವಾದಂತೆ ಕಾಣುತ್ತಿದೆ. ಇದೇ ಬಂಡಾಯೋತ್ತರ ಕಾಲದಲ್ಲಿ ಲಂಕೇಶ್, ತೇಜಸ್ವಿ, ಅನಂತಮೂರ್ತಿ ಇಂಥವರೆಲ್ಲ ವಿಮರ್ಶೆಯನ್ನು ಸಾಕಷ್ಟು ಪ್ರಯೋಗಿಸಿದ್ದಾರೆ. ವಿಮರ್ಶೆ, ಸಂಶೋಧನೆ ಮತ್ತು ಮೀಮಾಂಸೆಗಳು ಫ್ಯೂಶನ್ನಿಗೆ ಗುರಿಯಾದ ಕಾಲ ಇದು. ಕಾವ್ಯಮೀಮಂಸೆಯು ಸಾಹಿತ್ಯ ತತ್ವವಾಗಿ ಪರಿಣಮಿಸಿರುವ ಕಾಲ ಇದು. ಇರಲಿ ಇಲ್ಲಿ ಇನ್ನೊಂದು ಅಂಶ ಗಮನಿಸಬೇಕು. ಡಿ.ಎನ್.ಶಂಕರಭಟ್ಟರ ಚಿಂತನೆಗಳು, ಕೆ.ವಿ.ನಾರಾಯಣರ; ಷ.ಶೆಟ್ಟರ್, ಶೆಲ್ಡನ್ ಪೊಲಾಕ್, ಕೆ.ವಿ.ಸುಬ್ಬಣ್ಣನವರ ಚಿಂತನೆಗಳು, ಎಂ. ಎಂ. ಕಲಬುರ್ಗಿಯವರ ಚಿಂತನೆಗಳು ಇವೆಲ್ಲವನ್ನು ನಾವಿಂದು ಭಾಷೆ, ವ್ಯಾಕರಣ, ಸಮಶೋಧನೆ, ವಿಮರ್ಶೆ, ಚರಿತ್ರೆರಚನೆ ಇತ್ಯಾದಿ ಕಂಪಾರ್ಟ್ಮೆಂಟುಗಳಲ್ಲಿ ಇರಿಸದೆ ಇವೆಲ್ಲವನ್ನು ಕಾವ್ಯಮೀಮಾಂಸೆಯ ಅಂಗವಾಗಿಯೇ ನೋಡಬೇಕಾಗಿದೆ. ಸ್ಥಾಪಿತ ಪ್ರಮಾಣಗಳನ್ನು ಮುರಿಯುವ ಕೆಲಸಗಳನ್ನು ಇವರ ಚಿಂತನೆಗಳು ಮಾಡುತ್ತಿವೆ. ಹೀಗಾಗಿ ನಮ್ಮ ಆಚಾರದಲ್ಲಿ ಸಾಹಿತ್ಯದ ಅನುಸಂಧಾನದ ಬಗೆಗಳು; ಮೀಮಾಂಸೆಯ ಪರಿಕಲ್ಪನೆ ಮತ್ತು ಪರಿಧಿಗಳು ಇಂದು ಬದಲಾಗಿವೆ. ಇದೊಂದು ನಿರಂತರ ಪ್ರಕ್ರಿಯೆ ಎಂಬುದನ್ನು ನಾವು ತಿಳಿಯಬೇಕಾಗಿದೆ. ಸಾಹಿತ್ಯವು ನಿರಂತರವಾಗಿ ಬದಲಾಗುತ್ತದೆ. ಹೊಸ ಹೊಸದಾಗಿ ಆಗುತ್ತದೆ ಎಂಬುದಾದರೆ ಮೀಮಾಂಸೆ ಯಾಕಾಗುವುದಿಲ್ಲ? ಅದೂ ಆಗುತ್ತದೆ.

ಸಾಹಿತ್ಯದಲ್ಲಿ ದಲಿತ ಬಂಡಾಯ ಚಳುವಳಿ ಮತ್ತು ಸ್ತ್ರೀವಾದಿ ಪಂಥಗಳು ತಮ್ಮದೇ ಚರಿತ್ರೆಗಳ ಕಟ್ಟಾಣಿಕೆಗೆ ತೊಡಗಿವೆ. ಶರಣರು, ಹರಿಹರ ರಾಘವಾಂಕಾದಿಗಳು ತಮ್ಮ ಪರಂಪರೆಗೆ ಯಾವ ಹೊಡೆತವನ್ನು ಕೊಟ್ಟರೋ ಅದಕ್ಕಿಂತ ಜೋರಾದ ಹೊಡೆತವನ್ನು ದಲಿತ ಬಂಡಾಯ ಮತ್ತು ಸ್ತ್ರೀ ಪಂಥಗಳು ನೀಡಿವೆ. ಪರಂಪರೆಯ ಮರುರಚನೆ ಮತ್ತು ಚರಿತ್ರೆಯ ಮರುವ್ಯಾಖ್ಯಾನ ಇವರಲ್ಲಿನ ಒಂದು ಮುಖ್ಯ ಉಪಕ್ರವiವಾಗಿದೆ. ಆಧುನಿಕ ಸಾಹಿತ್ಯದ ಸಂದರ್ಭದಲ್ಲಿ ಕುವೆಂಪುವನ್ನು ಹೊರತುಪಡಿಸಿದರೆ ಮಿಕ್ಕವರು ಮಂಡಿಸಿದ ಜೀವನದರ್ಶನಕ್ಕು ಮತ್ತು ದಲಿತ-ಸ್ತ್ರೀ ಪಂಥಗಳು ಮಂಡಿಸಿದ ಜೀವನಕ್ರಮಕ್ಕು ಬಹಳ ವ್ಯತ್ಯಾಸವಿದೆ. ಹಾಗೆಯೇ ಇವರು ಮಂಡಿಸುತ್ತಿರುವ ಸಾಹಿತ್ಯ ಮೀಮಾಂಸೆಯೂ ಹಿಂದೆ ಮಂಡಿಸಿರುವ ಸಾಹಿತ್ಯಮೀಮಾಂಸೆಯೂ ಬೇರೆ ಬೇರೆಯೇ ಆಗಿವೆ.

ದಲಿತ ಬಂಡಾಯವು ಸಾಮಾಜಿಕ ಮತ್ತು ರ‍್ಥಿಕ ನ್ಯಾಯದ ನೆಲೆಯಲ್ಲಿ ಹಿಂದಣ ಪ್ರಮಾಣಗಳನ್ನೆಲ್ಲ ನಿರಾಕರಿಸಿದರೆ ಸ್ತ್ರೀ ಪಂಥವು ಲಿಂಗನ್ಯಾಯದ ನೆಲೆಯಿಂದ ಹಿಂದಣ ಪ್ರಮಾಣಗಳನ್ನೆಲ್ಲ ನಿರಾಕರಿಸುತ್ತದೆ. ದಲಿತಪಂಥವು ರಾಮಾಯಣ ಭಾರತಗಳನ್ನು ಶಿವಸಂಸ್ಕೃತಿಯ ದಮನದ ಕಥನ ಎಂದೇ ವ್ಯಖ್ಯಾನಿಸುತ್ತದೆ (ಲಕ್ಷ್ಮೀಪತಿ-ಕಾಲುದಾರಿ); ಸಾಹಿತ್ಯ ಕಥನಗಳನ್ನು ನಿರ್ದಿಷ್ಟ ಜಾತಿ ರ‍್ಮ ಮತ್ತು ನಿರ್ಧಿಷ್ಟ ವರ್ಗಗಳಿಗೆ ಅಧಿಕಾರವನ್ನು ಒದಗಿಸಿಕೊಡುವ ಸಾಧನವಾಗಿ ಗ್ರಹಿಸುತ್ತದೆ. ಸಾಮಾಜಿಕ ಅಸಮಾನತೆಯನ್ನು ಸ್ಥೀರೀಕರಿಸುತ್ತ ಬಂದ ಮತ್ತು ಸಾಮಾಜಿಕ ನ್ಯಾಯವನ್ನು ನಿರಾಕರಿಸುತ್ತ ಬಂದ ಕಥನವನ್ನಾಗಿ ವ್ಯಾಖ್ಯಾನಿಸುತ್ತದೆ. ಸ್ತ್ರೀ ಪಂಥವಾದರೋ ಸಾಹಿತ್ಯ ಕಥನ ಮತ್ತು ಬದುಕುಗಳನ್ನು ಬೇರೆ ಬೇರೆ ಅಲ್ಲ; ಎರಡೂ ಒಂದೇ ಎನ್ನುತ್ತದೆ. ಗಂಡು ಸಮುದಾಯಕ್ಕೆ ಅಧಿಕಾರವನ್ನು ನಿರಂತರವಾಗಿ ಒದಗಿಸಿಕೊಡುವ ಲಿಂಗರಾಜಕಾರಣವನ್ನೆ ಸಾಹಿತ್ಯಕಥನವು ಮಾಡುತ್ತ ಬಂದಿದೆ ಎಂಬುದು ಸ್ತ್ರೀಪಂಥದ ದರ್ಶನವಾಗಿದೆ.

ಗಂಡು ಅಂಕೆ ಮತ್ತು ಶಂಕೆಗಳಲ್ಲಿಟ್ಟು ಹೆಣ್ಣು ಸಮುದಾಯವನ್ನು ಆಳುತ್ತ ಬಂದದ್ದೆ ನಮ್ಮ ಚರಿತ್ರೆ ಎಂದು ಚರಿತ್ರೆಯನ್ನಿದು ಲಿಂಗನೆಲೆಯಿಂದ ವ್ಯಾಖ್ಯಾನಿಸುತ್ತದೆ. ಗಂಡು ಹೆಣ್ಣನ್ನು ನಿರಂತರವಾಗಿ ಶಂಕಿಸುತ್ತ ಬಂದಿದ್ದಾನೆ. ಹಾಗಾಗಿಯೆ ಆಕೆಯನ್ನು ಅಂಕೆಯಲ್ಲಿ ಇಟ್ಟುಕೊಳ್ಳಲು ಬಗೆಬಗೆಯ ಮೌಲ್ಯ-ನೀತಿ ನಿಯಮ-ಕಟ್ಟುಪಾಡು-ಆಚಾರಗಳನ್ನು ಚಾಲ್ತಿಗೆ ತರುತ್ತ ಬಂದಿದ್ದಾನೆ. ಇಂತಹ ಬದುಕನ್ನೆ ಸಾಹಿತ್ಯ ಮಾಡುತ್ತಲೂ ಬಂದಿದ್ದಾನೆ. ಸಾಹಿತ್ಯ ಕಥನವು ಇಂತಹ ಬದುಕನ್ನು ಮತ್ತೆ ಮತ್ತೆ ಪುರಾಣ-ಚಾರಿತ್ಯ್ರ-ವಿಜಯ-ಕಲ್ಯಾಣ ಇತ್ಯಾದಿ ಹೆಸರುಗಳಲ್ಲಿ ಕಥಿಸುತ್ತ ಹೆಣ್ಣನ್ನು ಗಂಡಿಗೆ ಅಸಮಾನವಾಗಿ ಮತ್ತು ಅಧೀನವಾಗಿ ಇರಿಸುವ ಕೆಲಸವನ್ನು ಚೆನ್ನಾಗಿ ನಿರ್ವಹಿಸಿದೆ ಎಂದೇ ಸಾಹಿತ್ಯ ಪರಂಪರೆಯನ್ನಿದು ವ್ಯಾಖ್ಯಾನಿಸುತ್ತದೆ.

ಯಾವುದನ್ನು ನಮ್ಮ ಪರಂಪರೆಯಲ್ಲಿ ಸೋದರ ವಧೆ ಎಂದು ಕರೆದು ನಿರಾಕರಿಸಲಾಗಿದೆಯೋ; ಯಾವುದನ್ನು ಹಾದರದ ಕಥೆ ಎಂದು ಕರೆದು ನಿರಾಕರಿಸಲಾಗಿದೆಯೋ ಅವನ್ನು ದಲಿತ-ಸ್ತ್ರೀಪಂಥಗಳು ಜಾತಿ-ವರ್ಗ-ಅಸ್ಪೃಶ್ಯತೆ ಮತ್ತು ಲಿಂಗತಾರತಮ್ಯಗಳ ನೆಲೆಯಲ್ಲಿ ನಿರಾಕರಿಸಿವೆ. ಇದಕ್ಕು ಪ್ರಮಾಣ ನಿರಾಕರಣೆಗು ನೇರ ಸಂಬಂಧ ಇದೆ.

ಯಾವ ಜೀವನಕ್ರಮವನ್ನು ಸಾಹಿತ್ಯವು ಪ್ರತಿಪಾದಿಸುತ್ತ ಬಂದಿತೋ ಆ ಜೀವನಕ್ರಮವನ್ನಷ್ಟೆ ಅಲ್ಲ; ಆ ಸಾಹಿತ್ಯ ಕಥನಕ್ರಮ ಮತ್ತು ತಾತ್ವಿಕತೆಗಳನ್ನು ದಲಿತ- ಸ್ತ್ರೀಪಂಥಗಳು ನಿರಾಕರಿಸಿವೆ. ಆ ಮೂಲಕ ಸಾಹಿತ್ಯ ಮೀಮಾಂಸೆ ಮತ್ತು ಬದುಕು ಎರಡರಲ್ಲು ಸಾಮಾಜಿಕ ನ್ಯಾಯದ-ಲಿಂಗನ್ಯಾಯದ ಪ್ರಶ್ನೆಗಳನ್ನು ಎತ್ತಿವೆ. ಪರಂಪರೆಯ ಪ್ರಮಾಣಗಳು, ಸಾಮಾಜಿಕ ಮೌಲ್ಯ ಪ್ರಮಾಣಗಳು ಅರ್ಥಾತ್ ಆಚಾರ ಪ್ರಮಾಣಗಳು ಸಾಹಿತ್ಯ ಮತ್ತು ಬದುಕು ಈ ಎರಡೂ ನೆಲೆಯಲ್ಲಿ ಇಲ್ಲಿ ನಿರಾಕರಣೆಗೆ ಗುರಿಯಾಗಿವೆ. ದೇವನೂರರ ಕ¸

ಉತ್ತಮ ಉದಾಹರಣೆಯಾಗಿದೆ; ಸಿದ್ಧಲಿಂಗಯ್ಯನವರ ಉರಿಕಂಡಾಯ ಸಾಹಿತ್ಯ ‘ಪರಂಪರೆ’ಯ ಪ್ರಮಾಣ ನಿರಾಕರಣೆಗೆ ಉತ್ತಮ ಉದಾಹರಣೆಯಾಗಿದೆ. ವೈದೇಹಿಯವರ ಶಕುಂತಲೆಯೊಂದಿಗೆ ಕಳೆದ ಒಂದು ಅಪರಾಹ್ನ ಕತೆ ಗಂಡು ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಮತ್ತು ಅದೇ ಸರಿಯೆಂದು ನಂಬಿಸಲು ಹೇಗೆ ಕತೆ ಕಟ್ಟುತ್ತಾನೆ ಎಂಬುದನ್ನು ವಿವರಿಸುವ ಉದಾಹರಣೆಯಾದರೆ. ಪ್ರತಿಭಾ ಅವರ ನೈನಾಸಾಹ್ನಿ ಕವಿತೆ ದಾಂಪತ್ಯ-ಕುಟುಂಬಗಳ ಹಿಂಸೆಯ ರೂಪ ಮತ್ತು ಹೆಣ್ಣಿನ ರಕ್ಷಣೆ-ಭಕ್ಷಣೆಗಳನ್ನು ಕಥಿಸುವುದಕ್ಕೆ ಉದಾಹರಣೆಯಾಗಿದೆ. ಇಲ್ಲಿ ವೈದೇಹಿ ಅವರ ಕತೆ ಮಾಸ್ತಿಯವರ ಕತೆಯು ಕಟ್ಟಿಕೊಡುವ ಮೌಲ್ಯ ಪ್ರಮಾಣವನ್ನು ಪ್ರತಿಭಾ ಅವರ ಪದ್ಯ ನರಸಿಂಹಸ್ವಾಮಿಯವರ ರೈಲ್ವೆ ನಿಲ್ದಾಣದಲ್ಲಿ ಕವಿತೆ ಕಟ್ಟಿಕೊಡುವ ನವಿರು ದಾಂಪತ್ಯದ ಪ್ರಮಾಣವನ್ನು ನಿರಾಕರಿಸುತ್ತವೆ. ಇದು ಸಾಹಿತ್ಯ ತಾತ್ವಿಕತೆ ಮತ್ತು ಜೀವನ ಮೌಲ್ಯಗಳ ಪ್ರಮಾಣೀಕರಣದ ನಿರಾಕರಣೆಯೂ ಹೌದು. ಹಾಗೇ ಹೇಗೆ ಸಾಹಿತ್ಯ ಬರೆಯಬೇಕೆಂಬ ಮೀಮಾಂಸೆಯ ಪ್ರಮಾಣದ ನಿರಾಕರಣೆಯೂ ಹೌದು.

ಹೀಗೆ ನಮ್ಮ ಚರಿತ್ರೆಯಲ್ಲಿ ಸಾಹಿತ್ಯ ಪ್ರಮಾಣಗಳ ನರ‍್ಮಾಣ ಮತ್ತು ನಿರಾಕರಣೆ ಒಂದು ನಿರಂತರ ಪ್ರಕ್ರಿಯೆ ಆಗಿದೆ.

ಡಾ. ರಾಮಲಿಂಗಪ್ಪ ಟಿ. ಬೇಗೂರು

ಈ ಅಂಕಣದ ಹಿಂದಿನ ಬರೆಹಗಳು:
ಕಾಕಾಸುರ, ವಿರಾಧ ಪ್ರಸಂಗಗಳ ರಾಜಕಾರಣ
ರಾಮಾಯಣ ಸಂಕಥನ -03
ರಾಮಾಯಣ ಸಂಕಥನ 2
ರಾಮಾಯಣ ಸಂಕಥನ-1
ಕೆರೆಯ ನೀರನು ಕೆರೆಗೆ ಚೆಲ್ಲಿ
ಕೊಂಡಿ ಎಲ್ಲಿ ಕಳಚಿದೆ?
ಯಾರದೊ ಅಜೆಂಡಾ ಮಾರಮ್ಮನ ಜಾತ್ರೆ

ಹೊಸಕಾವ್ಯದ ಭಾಷೆ, ಗಾತ್ರ, ಹೂರಣ
ಗೌರಿಯರು: ಕುಟುಂಬ - ದಾಂಪತ್ಯ ಸಂಕಥನ
ರಾಷ್ಟ್ರೀಯತೆಯ ಆಚರಣೆಯ ಸುತ್ತ
ನೆನ್ನೆ ಮನ್ನೆ-1
ನಿನಗೇ ಬರೆದ ಪತ್ರ
ಆಯ್ದಕ್ಕಿ ಕಾಯಕ ಎಂದರೇನು?
ಐದು ಕೃಷಿ ಸಂಬಂಧಿ ಪುಸ್ತಕಗಳು
ಅಮೃತ ಮಹೋತ್ಸವದ ಹೊತ್ತಿಗೆ ಸಂವಿಧಾನದ ಪೀಠಿಕೆಯನ್ನಾದರೂ ಸಾಧಿಸಿದೆವಾ?
ವ್ಯಕ್ತಿ ಪೂಜೆ, ಸ್ಥಾನ ಪೂಜೆ

ವೇಶಾಂತರದ ಸಿಟ್ಟು ದೇಶಾಂತರದ ದ್ವೇಶ
ಕನಸಲ್ಲಿ ಬರುವ ಛೂಮಂತ್ರಯ್ಯ
ವಸ್ತ್ರ ಸಂಹಿತೆಯ ಸುತ್ತ
‘ಉರಿವ ಉದಕ’: ಕನ್ನಡದ ಕಥನ ಜಗತ್ತಿನ ಅನುಭವ ಲೋಕವನ್ನು ವಿಸ್ತರಿಸುವಂತಹ ಕತೆಗಳು
ಲೇಖನ ಚಿಹ್ನೆಗಳು
ಆತಂಕ, ಸಂಭ್ರಮಗಳು ಒಟ್ಟಿಗೇ ಕುದಿಯುತ್ತವೆ
ಪದವಿ ಪೂರ್ವ ಕನ್ನಡ ಪಠ್ಯ ಮತ್ತು ಕಲಿಕೆಯ ಅನುವಿನ ಉಪಕ್ರಮಗಳು:
ದೇಶ ಕಟ್ಟುವ ಕನಸು: ‘ಹಿಂದ್ ಸ್ವರಾಜ್’
ಬಂಡಾಯ ಕತೆಗಳ ನೋಟ ನಿಲುವು
ವ್ಯಕ್ತಿಹೆಸರುಗಳ ಸುತ್ತ ಮುತ್ತ
ಪ್ರೀತಿಯೆ ಲೋಕನೀತಿ ಆದ ಬಳಗಪ್ರಜ್ಞೆಯ ಪದ್ಯಗಳು....!
ಪೋಸ್ಟ್ ಬಾಕ್ಸ್ ನಂ.9
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -2
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -1
ಹರಿಭಕ್ತಿ ಸಾರ ಎಂಬ ಗಿಳಿಪಾಠ
ಕಲ್ಲು ದೈವ, ಮೊರ ದೈವ?
ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳು: ಕೆಲ ಟಿಪ್ಪಣಿಗಳು
ಲೋಕಸೌಂದರ್ಯವೇ ತಿರುಳಾದ ಸಾಹಿತ್ಯ ಸದಾ ಚಲನಶೀಲ

MORE NEWS

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...