ಖ್ಯಾಲ್ ಗಾಯನದ ಫಕೀರ ಮಲ್ಲಿಕಾರ್ಜುನ ಮನ್ಸೂರ್

Date: 28-03-2021

Location: .


ಹಿಂದೂಸ್ತಾನಿ ಸಂಗೀತಕ್ಕೆ ಹೊಸ ಆಯಾಮ ನೀಡಿ, ತಮ್ಮ ಸ್ವರಮಾಧುರ್ಯದಿಂದ ಸಂಗೀತ ಲೋಕದ ಉದಾತ್ತ ಧ್ಯೇಯಗಳನ್ನು ಎತ್ತಿ ಹಿಡಿದ ಗಾಯಕ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ . ಅವರ ಸಂಗೀತ ಪ್ರೇಮ ಹಾಗೂ ಬದುಕನ್ನು ಕುರಿತು ಸಾಹಿತಿ ಜಗದೀಶ ಕೊಪ್ಪ ಅವರು ತಮ್ಮ ‘ಗಾನಲೋಕದ ಗಂಧರ್ವರು’ ಅಂಕಣದಲ್ಲಿ ಪರಿಚಯಿಸಿದ್ದಾರೆ.

ಭಾರತೀಯ ಸಂಗೀತ ಕ್ಷೇತ್ರದ ಇತಿಹಾಸದಲ್ಲಿ ರಾಷ್ಟ್ರ ಮಟ್ಟದ ಪ್ರಸಿದ್ಧಿ ಹಾಗೂ ಗೌರವಗಳನ್ನು ಪಡೆದರೂ ಸಹ ಏನನ್ನೂ ಮನಸ್ಸಿಗೆ ಹಚ್ಚಿಕೊಳ್ಳದೆ ಜನಸಾಮಾನ್ಯರಂತೆ ನಮ್ಮ ನಡುವೆ ಬದುಕಿದ ಮುಖ್ಯ ಕಲಾವಿದರಲ್ಲಿ ಖ್ಯಾತ ಶಹನಾಯ್ ವಾದಕ ಬಿಸ್ಮಿಲ್ಲಾ ಖಾನ್ ಹಾಗೂ ಜೈಪುರ್ ಘರಾಣೆಯ ಗಾಯಕ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಮುಖ್ಯರಾದವರು. ಈ ಇಬ್ಬರು ಮಹನೀಯರು ತಮ್ಮ ತುಟಿಗೆ ಅಟಿಸಿಕೊಂಡಿದ್ದ ಬೀಡಿ ಅಥವಾ ಸಿಗರೇಟಿನ ಹೊಗೆಯನ್ನು ಬಿಡುತ್ತಾ, ಜಗತ್ತಿನ ಯಾವ ಪ್ರಶಸ್ತಿ ಅಥವಾ ಗೌರವ ಸನ್ಮಾನಗಳಿಗೆ ಹಂಬಲಿಸದೆ ಸಂಗೀತವನ್ನು ಉಸಿರಿನಂತೆ ಧ್ಯಾನಿಸಿದವರು. ಇವರ ಈ ಸಂತನ ಗುಣದಿಂದಾಗಿ ಇಬ್ಬರೂ ಭಾರತೀಯ ಹಿಂದೂಸ್ತಾನಿ ಸಂಗೀತದಲ್ಲಿ ಉನ್ನತ ಶಿಖರಕ್ಕೇರಿ ಪ್ರಾತಃಸ್ಮರಣೀಯರಾಗಿದ್ದಾರೆ.
ನಮ್ಮ ಕನ್ನಡದ ಅಪ್ಪಟ ಪ್ರತಿಭೆ ಮಲ್ಲಿಕಾರ್ಜುನ ಮನ್ಸೂರರ ಗಾಯನದ ಪ್ರತಿಭೆ ಹೊರ ಜಗತ್ತಿಗೆ ತಲುಪಲು ಅವರು ಸುದೀರ್ಘ ಅರವತ್ತು ವರ್ಷಗಳ ಕಾಲ ಕಾಯಬೇಕಾಯಿತು. ಎಂಬತ್ತೆರೆಡು ವರ್ಷಗಳ ಕಾಲ ಜೀವಿಸಿದ್ದ ಮನ್ಸೂರರಿಗೆ ತಮ್ಮ ಜೀವಿತದ ಕೊನೆಯ ಇಪ್ಪತ್ತು ವರ್ಷಗಳಲ್ಲಿ ಮೂರು ಪದ್ಮ ಪ್ರಶಸ್ತಿಗಳು ಸೇರಿದಂತೆ ಎಲ್ಲಾ ರಾಷ್ಟ್ರೀಯ ಪುರಸ್ಕಾರಗಳು ದೊರೆತವು. ಇದಕ್ಕೂ ಮುನ್ನ, ಸುಮಾರು ಐವತ್ತು ವರ್ಷಗಳ ಸುದೀರ್ಘ ಕಾಲ ಸಂಗೀತದಲ್ಲಿ ತಾವು ನಡೆಸಿದ ಸಾಧನೆ ಕುರಿತು ಎಂದೂ ಬೇಸರ ಪಟ್ಟುಕೊಳ್ಳಲಿಲ್ಲ. ‘ಆ ಶಿವಾ ನನಗ ಹೀಂಗ ಬದಕಲಿಕ್ಕ ಹೇಳ್ಯಾನ’ ಎಂಬಂತೆ ನಗು ನಗುತ್ತಾ ಧಾರವಾಡದಂತಹ ಸಾಂಸ್ಕೃತಿಕ ನಗರದಲ್ಲಿ ಬದುಕಿದರು. ಧಾರವಾಡದ ಮುರುಘಾಮಠದ ಶರಣರು ಮತ್ತು ಮಹಾತ್ಮಗಾಂಧೀಜಿಯವರಿಂದ ಪ್ರಭಾವಿತರಾಗಿದ್ದ ಅವರು ಸರಳತೆಯನ್ನು ಮೈಗೂಡಿಸಿಕೊಂಡಿದ್ದರು.

ಸುಮಾರು ಇಪ್ಪತ್ತು ವರ್ಷಗಳ ಕಾಲ ಅವಳಿನಗರಗಳಲ್ಲಿ ಉದ್ಯೋಗದ ನಿಮಿತ್ತ ಧಾರವಾಡದಲ್ಲಿ ವಾಸವಾಗಿದ್ದ ನನಗೂ ಮತ್ತು ಅಲ್ಲಿನ ಆಕಾಶವಾಣಿ ಕೇಂದ್ರಕ್ಕೂ ಅವಿನಾಭಾವ ಸಂಬಂಧ. ಅಲ್ಲಿನ ನಿರ್ದೆಶಕರಾಗಿದ್ದ ಸಿ.ಯು.ಬೆಳ್ಳಕ್ಕಿ, ಕಾರ್ಯಕ್ರಮ ನಿರ್ದೇಶಕರಾಗಿದ್ದ ಅನಿಲ್‌ದೇಸಾಯಿ, ದಿವಾಕರ್ ಹೆಗ್ಡೆ ಮುಂತಾದ ಸ್ನೇಹಿತರನ್ನು ಕಾಣಲು ಹೋಗುತ್ತಿದ್ದೆ. ಆಕಾಶವಾಣಿ ಕೇಂದ್ರದ ಮುಖ್ಯದ್ವಾರದ ಎದುರಿನಲ್ಲಿ ಅನತಿ ದೂರದಲ್ಲಿ ಮಲ್ಲಿಕಾರ್ಜುನ ಮನ್ಸೂರ್ ಅವರ ನಿವಾಸವಿದೆ. ಅದನ್ನು ನೋಡಿದಾಗ ನನ್ನ ಪಾಲಿಗೆ ಗುರುಗಳಂತಿದ್ದ ಡಾ.ಎಂ.ಎಂ. ಕಲ್ಬುರ್ಗಿಯವರು ಹೇಳುತ್ತಿದ್ದ ದ.ರಾ.ಬೇಂದ್ರೆ ಮತ್ತು ಮನ್ಸೂರ್ ಮಾತುಕತೆ ಕುರಿತಾದ ಜೋಕ್ ನೆನಪಾಗುತ್ತದೆ. ಹೌದು, ಸಾಹಿತ್ಯ ಮತ್ತು ಸಂಗೀತ ಲೋಕದಲ್ಲಿ ದಿಗ್ಗಜರಾಗಿದ್ದ ಬೇಂದ್ರೆ ಮತ್ತು ಮನ್ಸೂರ್ ಇಬ್ಬರೂ ನಿಜ ಜೀವನದಲ್ಲಿ ಮಾತ್ರ ಬರಿಗೈ ಫಕೀರರಾಗಿದ್ದರು. ಇಬ್ಬರಿಗೂ ಕೆಲವು ವರ್ಷಗಳ ಕಾಲ ಧಾರವಾಡದ ಆಕಾಶವಾಣಿ ಕೇಂದ್ರವು ಜೀವನಕ್ಕೆ ಆಸರೆಯಾಗಿತ್ತು. ಮನ್ಸೂರರು ಸಂಗೀತ ವಿಷಯಕ್ಕೆ ಮತ್ತು ಬೇಂದ್ರೆಯವರು ನಾಟಕ, ಭಾವಗೀತೆ ಹಾಗೂ ಜನಪದ ಗೀತೆಗಳು ವಿಭಾಗಕ್ಕೆ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು.

1960ರ ದಶಕದ ದಿನಗಳವು. ಕಲ್ಬುರ್ಗಿಯವರು ಆಗತಾನೆ ಧಾರವಾಡದ ಕರ್ನಾಟಕ ಕಾಲೇಜಿಗೆ ಕನ್ನಡ ಉಪನ್ಯಾಸಕರಾಗಿ ಸೇರ್ಪಡೆಯಾಗಿದ್ದರು. ಕೆ.ಸಿ.ಡಿ. ಅಥವಾ ಕರ್ನಾಟಕ ಕಾಲೇಜಿನ ಎದುರಿಗೆ ಇರುವ ಮುಖ್ಯ ರಸ್ತೆಯಲ್ಲಿ ಎಡಭಾಗಕ್ಕೆ ಆಕಾಶವಾಣಿ ಮತ್ತು ಬಲಭಾಗದಲ್ಲಿ ಮನ್ಸೂರು ನಿವಾಸಗಳಿದ್ದವು. ಬೆಳಿಗ್ಗೆ ಹತ್ತು ಗಂಟೆ ಸಮಯದಲ್ಲಿ ಸಂಗೀತ ಕಾರ್ಯಕ್ರಮದ ಧ್ವನಿ ಮುದ್ರಣ ಮುಗಿಸಿ ಹೊರಬಂದ ಮನ್ಸೂರರು, ಆಗತಾನೆ ಆಕಾಶವಾಣಿ ಕೇಂದ್ರಕ್ಕೆ ಬರುತ್ತಿದ್ದ ಬೇಂದ್ರೆಯವರನ್ನು ನಡು ರಸ್ತೆಯಲ್ಲಿ ಭೇಟಿ ಯಾಗಿ ಮಾತುಕತೆಗೆ ನಿಂತರು. ಕೈಯಲ್ಲಿದ್ದ ಕೊಡೆ ಬಿಚ್ಚಿದ ಬೇಂದ್ರೆಯವರು ಇಬ್ಬರ ತಲೆಯ ಮೇಲೆ ನೆರಳು ಬರುವಂತೆ ಬಿಸಿಲಿಗೆ ಕೊಡೆ ಹಿಡಿದು ಮುಖಕ್ಕ ಮುಖ ಕೊಟ್ಟು ಮಾತನಾಡತೊಡಗಿದರು. ಕಾಲೇಜಿಗೆ ಹೊರಟ್ಟಿದ್ದ ಕಲ್ಬುರ್ಗಿಯವರು ಹಿರಿಯ ಜೀವಗಳಿಗೆ ನಮಸ್ಕರಿಸಿ ಕಾಲೇಜಿನತ್ತ ಹೊರಟರು. ಕಾಲೇಜಿನಲ್ಲಿ ಮೂರು ಗಂಟೆಗಳ ಕಾಲ ಪಾಠ ಮಾಡಿ ಮಧ್ಯಾಹ್ನದ ಭೋಜನಕ್ಕೆ ಮನೆಗೆ ಹಿಂತಿರುಗುವಾಗ ರಸ್ತೆ ಮಧ್ಯಭಾಗದಲ್ಲಿ ಬಿಚ್ಚಿದ ಕೊಡೆ ಕೆಳಗೆ ಮಾತನಾಡುತ್ತಾ ನಿಂತಿದ್ದ ಬೇಂದ್ರೆ, ಮನ್ಸೂರ್ ಅವರನ್ನು ಕಂಡು ಅಚ್ಚರಿಯಾಯಿತು. ಮತ್ತೇ ನಮಸ್ಕರಿಸಿದರು. ಮಾತು ತುಂಡರಿಸಿದ ಬೇಂದ್ರೆಯವರು ‘ಓ ಮಲ್ಲಪ್ಪಾ ನೀ ಆಗಲೇ ಶಾಲಿ ಮುಗಿಸಿ ಮನಿ ಕಡಿ ಹೊಂಟಿದ್ದಿ. ಆದರೆ, ನಮ್ಮ ಮಾತು ಇನ್ನೂ ಮುಗಿವಲ್ದು ನೋಡು’ ಎಂದು ಹೇಳುತ್ತಾ ನಕ್ಕರಂತೆ. (ಎಂ.ಎಂ. ಕಲ್ಬುರ್ಗಿಯವರ ಮೂಲ ಹೆಸರು ಮಲ್ಲಪ್ಪ)
ಎಂ.ಎಂ. ಕಲ್ಬುರ್ಗಿಯವರು ಬೇಂದ್ರೆ ಕುರಿತಾಗಿ ಹಲವಾರು ಸ್ವಾರಸ್ಯಕರ ಘಟನೆಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು. ಅವುಗಳಲ್ಲಿ ಯಾವುದೇ ಅತಿಶಯವಿರಲಿಲ್ಲ. ಏಕೆಂದರೆ, ಬೇಂದ್ರೆ ಮತ್ತು ಮನ್ಸೂರ್ ಇಬ್ಬರೂ ದಾಂಪತ್ಯ ಜೀವನದ ಬಂಡಿಯನ್ನು ಎಳೆಯುತ್ತಾ ಹೈರಾಣಾದವರು ಆದರೆ, ಎಂದಿಗೂ ಜೀವನೋತ್ಸಾಹವನ್ನು ಬತ್ತದಂತೆ ನೋಡಿಕೊಂಡವರು. ಬೇಂದ್ರೆಯವರಿಗೆ ಒಂಬತ್ತು ಮಕ್ಕಳು. ಹುಟ್ಟಿದ ಮಕ್ಕಳಲ್ಲಿ ಬದುಕಿದವರಿಗಿಂತ ಮೃತಪಟ್ಟು ಹೆತ್ತ ಜೀವಗಳಿಗೆ ನೋವು ತಂದಿತ್ತವರೇ ಹೆಚ್ಚು. ಮಲ್ಲಿಕಾರ್ಜುನ ಮನ್ಸೂರು ಅವರಿಗೆ ಏಳು ಜನ ಹೆಣ್ಣುಮಕ್ಕಳು, ಓರ್ವ ಪುತ್ರ. ಜೊತೆಗೆ ತಾಯಿ, ಪತ್ನಿ ಹೀಗೆ ಹನ್ನೊಂದು ಜನರ ತುಂಬು ಸಂಸಾರ. ಇವರೆಲ್ಲರ ತುತ್ತಿನ ಚೀಲಗಳನ್ನು ಸಂಗೀತದ ಮೂಲಕ ತುಂಬಿಸಬೇಕಿತ್ತು. ಬೇಂದ್ರೆಯವರು ಸಾಹಿತ್ಯದ ಮೂಲಕ ತುಂಬಿಸಬೇಕಿತ್ತು. ಈ ಕಾರಣಕ್ಕಾಗಿ, ಧಾರವಾಡ ಆಕಾಶವಾಣಿ ಕೇಂದ್ರವು ಎರಡು ಕನ್ನಡದ ಹಿರಿಯ ಜೀವಗಳಿಗೆ ಪರೋಕ್ಷವಾಗಿ ಆಸರೆಯಾಗಿತ್ತು. ಬೇಂದ್ರೆಯವರು ತಮ್ಮ ಒಂದು ಕವಿತೆಯಲ್ಲಿ ಹೇಳುವ ಒಲವೇ ನಮ್ಮ ಬದುಕು/ ಬಳಸಿಕೊಂಡೆವದನೆ ನಾವು/ ಅದನ್ನು ಅದಕು, ಇದಕೂ, ಎದಕೂ ಎಂಬಂತೆ ಇಬ್ಬರೂ ಮಹನೀಯರು ಬಡತನದ ನಡುವೆ ಸರಳವಾಗಿ ಬದುಕುತ್ತಾ ಸಂಗೀತ ಮತ್ತು ಸಾಹಿತ್ಯದ ಮೂಲಕ ಮನದ ಬೇಸರಕ್ಕೆ ಪರಿಹಾರ ಕಂಡುಕೊಂಡಿದ್ದರು.

ಪಂಡಿತ್ ಮಲ್ಲಿಕಾರ್ಜುನ ಮನ್ಸೂರರು ಧಾರವಾಡ ಪಟ್ಟಣದಿಂದ ಕೇವಲ ಎಂಟು ಕಿಲೊಮೀಟರ್ ದೂರವಿರುವ ಮನ್ಸೂರು ಎಂಬ ಗ್ರಾಮದಲ್ಲಿ 1910ರಲ್ಲಿ ( ಡಿಸೆಂಬರ್ 31)ಜನಿಸಿದರು. ಅವರ ತಂದೆ ಭೀಮರಾಯಪ್ಪ ಊರಿನ ಮುಖಂಡರು ಜೊತೆಗೆ ಸಾಕಷ್ಟು ಜಮೀನು ಇದ್ದ ಜಮೀನ್ದಾರರಾಗಿದ್ದರು. ಅವರಿಗೆ ಸಂಗೀತ ಹಾಗೂ ನಾಟಕಗಳಲ್ಲಿ ಅಪಾರ ಆಸಕ್ತಿ ಇದ್ದ ಕಾರಣ ತಮ್ಮ ಹಿರಿಯ ಪುತ್ರ ಬಸವರಾಜ ಮನ್ಸೂರ್ ಅವರನ್ನು ವಾಮನ ಮಾಸ್ತರ ವಿಶ್ವ ಗುಣಾದರ್ಶ ನಾಟಕ ಕಂಪನಿಯಲ್ಲಿ ನಟನಾಗಿ ಬದುಕು ಕಟ್ಟಿಕೊಳ್ಳಲು ಪ್ರೊತ್ಸಾಹಿಸಿದ್ದರು. (ಮುಂದೆ ಬಸವರಾಜ ಮನ್ಸೂರರು ಸ್ವಂತ ನಾಟಕ ಕಂಪನಿ ಆರಂಭಿಸಿದ್ದರು) ಆ ಕಾಲದಲ್ಲಿ ಸಂಗೀತ ಮತ್ತು ನಾಟ್ಯ ಪ್ರಧಾನವಾಗಿದ್ದ ಯಕ್ಷಗಾನ ಮಾದರಿಯ ನಾಟಕಗಳು ಹೆಚ್ಚು ಪ್ರಚಲಿತವಾಗಿದ್ದವು. ಉತ್ತರ ಕರ್ನಾಟಕದಲ್ಲಿ ನಿರಂತರವಾಗಿ ನಡೆಯುವ ಜಾತ್ರೆಯಿಂದಾಗಿ ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದವು. ತಮ್ಮ ಎಂಟನೆಯ ವಯಸ್ಸಿನವರೆಗೆ ಧಾರವಾಡದ ಅಜ್ಜಿಯ ಮನೆಯಲ್ಲಿ ಇದ್ದುಕೊಂಡು ನಾಲ್ಕನೇ ತರಗತಿಯವರೆಗೆ ಓದಿದ್ದ ಮಲ್ಲಿಕಾರ್ಜುನ ಮನ್ಸೂರ್ ಶಿಕ್ಷಣವನ್ನು ನಿಲ್ಲಿಸಿದ ತಾವೂ ಕೂಡ ಅಣ್ಣನ ನಾಟಕ ಕಂಪನಿ ಸೇರಿದರು. ಭಕ್ತ ಪ್ರಹ್ಲಾದ, ಧ್ರುವ, ಚಂದ್ರಹಾಸ ಮುಂತಾದ ಬಾಲ ಕಲಾವಿದನ ಪಾತ್ರಗಳನ್ನು ಮಾಡುತ್ತಾ ರಂಗಗೀತೆಗಳನ್ನು ಹಾಡುವುದನ್ನು ಅಭ್ಯಾಸ ಮಾಡಿಕೊಂಡರು. ಅವರಿಗೆ ಆರಂಭದಲ್ಲಿ ನಾಟಕ ಕಂಪನಿಯಲ್ಲಿ ಅಕ್ಕೂರ್ ಮಠ ಎಂಬ ಪಿಟಿಲು ಕಲಾವಿದರಿಂದ ಕನಾಟಕ ಸಂಗೀತದ ಪ್ರಾಥಮಿಕ ಶಿಕ್ಷಣ ದೊರೆಯಿತು. ನಂತರ ಮೀರಜ್ ನಿಂದ ಬಾಗಲಕೋಟೆಗೆ ಬಂದಿದ್ದ ಹಿಂದೂಸ್ತಾನಿ ಕಲಾವಿದರಾದ ಹಾಗೂ ಗ್ವಾಲಿಯರ್ ಘರಾಣೆಯ ನೀಲಕಂಠ ಬುವಾ .ಎಂಬ ವಿದ್ವಾಂಸರಿಂದ ಆರು ವರ್ಷಗಳ ಕಾಲ ಹಿಂದೂಸ್ತಾನಿ ಅಭ್ಯಾಸ ನಡೆಯಿತು. ಈ ಅವಧಿಯಲ್ಲಿ ಪ್ರತಿ ದಿನ ಬೆಳಿಗ್ಗೆ ಮೂರು ತಾಸುಗಳ ಕಾಲ ಸಂಗೀತಾಭ್ಯಾಸ ನಡೆಯುತ್ತಿತ್ತು. ಸ್ವರ ಮತ್ತು ಅಲಂಕಾರಗಳ ಉಪಾಸನೆಯ ನಂತರ ಛೋಟಾ ಖ್ಯಾಲ್ ‌ಅನ್ನು ಕಲಿಯುತ್ತಿದ್ದರು. ನಂತರ ಬಡಾ ಖ್ಯಾಲ್‌ಗಳ ಅಭ್ಯಾಸ, .ರಾಗಗಳನ್ನು ವಿಸ್ತರಿಸುವ ವಿಧಾನ ಇವೆಲ್ಲವನ್ನೂ ಅಭ್ಯಾಸ ಮಾಡತೊಡಗಿದರು.

ನಿರಂತರ ಆರು ವರ್ಷಗಳ ಕಾಲ ಗುರುವಿನ ಬಳಿ ಶ್ರದ್ಧೆಯಿಂದ ಕಲಿತ ಫಲವಾಗಿ ಮನ್ಸೂರರು ತಮ್ಮ ಹದಿನೆಂಟನೆಯ ವಯಸ್ಸಿಗೆ ಬಿಹಾಗ್, ಮಾಲಕಂಸ, ಭೂಪ, ಕಾಮೋದ, ತೋಡಿ, ಹಮೀರ, ದರಬಾರಿ, ಯಮುನ, ಕೇದಾರ, ಪೂರಿಯಾ, ಮಾರವ, ಬಿಲಾವಲ, ಲಲಿತ ಹೀಗೆ ಐವತ್ತು ರಾಗಗಳಲ್ಲಿ ಪರಿಣತಿ ಸಾಧಿಸಿ ಉದಯೋನ್ಮುಖ ಗಾಯಕನಾಗಿ ಹೊರಹೊಮ್ಮಿದರು. ಇದಕ್ಕಾಗಿ ನಾಟಕ ಕಂಪನಿಯ ಮಾಲಿಕರು ಸಂಗೀತ ಶಿಕ್ಷಕರಿಗೆ ಪ್ರತಿ ತಿಂಗಳು ಹತ್ತು ರೂಪಾಯಿ ವೇತನ ಪಾವತಿಸುತ್ತಿದ್ದರು. ಇದೇ ಅವಧಿಯಲ್ಲಿ ಮಲ್ಲಿಕಾರ್ಜುನ ಮನ್ಸೂರ್ ಅವರ ಎರಡು ಧ್ವನಿ ಮುದ್ರಿಕೆಗಳು ಬಿಡುಗಡೆಯಾಗಿ ಜನಪ್ರಿಯವಾದವು.ಅಠಾಣ ರಾಗದ ಕಂಗನವಾ ನೋರಾ ಹಾತ್ ಮತ್ತು ಗೌಡ ಸಾರಂಗ ರಾಗದ ಸುರಂಗ ಸುನೇರಿಯಾ ಧ್ವನಿಮುದ್ರಿಕೆಗಳು ಮಲ್ಲಿಕಾರ್ಜುನ ಮನ್ಸೂರ್ ಅವರ ಹೆಸರು ಕರ್ನಾಟಕವನ್ನು ದಾಟಿ, ನೆರೆಯ ಮಹಾರಾಷ್ಟ್ರದಲ್ಲಿ ಪ್ರಸಿದ್ಧಿಯಾಗುವಂತೆ ಮಾಡಿದವು. ಸಂಗೀತ ಕುರಿತಂತೆ ಆಸಕ್ತಿ ಬೆಳೆಯುತ್ತಿದ್ದಂತೆ ನಾಟಕ ಕಂಪನಿಯನ್ನು ತ್ಯೆಜಿಸಿ, ಹೆಚ್ಚಿನ ಶಿಕ್ಷಣಕ್ಕಾಗಿ ಗುರುವಿನ ಹುಟುಕಾಟದಲ್ಲಿ ತೊಡಗಿದರು.

ಮಲ್ಲಿಕಾರ್ಜುನ ಮನ್ಸೂರ್‌ರವರು ಮುಂಬೈ ನಗರದಲ್ಲಿ ಆ ಕಾಲದಲ್ಲಿ ಶ್ರೀಮಂತರ ಮನೆಗಳಲ್ಲಿ ಸಿಗುತ್ತಿದ್ದ ಸಣ್ಣಪುಟ್ಟ ಸಂಗೀತ ಕಚೇರಿಗಳು, ಮುಂಬೈ ಆಕಾಶವಾಣಿಯ ಕಾರ್ಯಕ್ರಮಗಳು ಹಾಗೂ ಧ್ವನಿಮುದ್ರಿಕೆಗಳ ಸಂಭಾವನೆಯನ್ನು ನಂಬಿ ಹೆಚ್ಚಿನ ಸಂಗೀತಾಭ್ಯಾಸಕ್ಕಾಗಿ ಮುಂಬೈಗೆ ಆಗಮಿಸಿದರು. ಆ ಸಂದರ್ಭದಲ್ಲಿ ಅವರಿಗೆ ದೊರೆತ ಗುರುಗಳೆಂದರೆ, ಜೈಪುರ್ ಅತ್ರೋಳಿ ಘರಾಣೆಯ ಅಲ್ಲಾದಿಯಾ ಖಾನ್ ಮತ್ತು ಅವರ ಕುಟುಂಬದ ಸದಸ್ಯರು. ಅಲ್ಲಾದಿಯಾ ಖಾನ್ ರವರಿಗೆ ವಯಸ್ಸಾಗಿದ್ದ ಕಾರಣ ತಮ್ಮ ಪುತ್ರರಾದ ಮಂಜಿಖಾನ್ ಬಳಿ ಕಳುಹಿಸಿದರು. ಮನ್ಸೂರ್ ಅವರ ಧ್ವನಿಮುದ್ರಿಕೆಯನ್ನು ಆಲಿಸಿದ ಮಮಜಿಖಾನ್ ರವರು ಜೈಪುರ್ ಘರಾಣೆಯ ದ್ರುಪದ್ ಮತ್ತು ಖ್ಯಾಲ್ ಗಾಯನದಲ್ಲಿ ಹೆಸರಾಗಿದ್ದವರು. ಅವರು ಕೂಡಲೇ ಮನ್ಸೂರರನ್ನು ಶಿಷ್ಯರನ್ನಾಗಿ ಸ್ವೀಕರಿಸಿದರು. ಆದರೆ, ಕೇವಲ ಎರಡು ವರ್ಷದ ಅವಧಿಯಲ್ಲಿ ಮಂಜಿಖಾನ್ ಅಕಾಲಿಕ ಮರಣಕ್ಕೆ ತುತ್ತಾದರು. ನಂತರ ಮಲ್ಲಿಕಾರ್ಜುನ ಮನ್ಸೂರ್ ಮಂಜಿಖಾನ್ ಸಹೋದರ ಬುರ್ಜಿಖಾನ್ ಬಳಿ ಅಭ್ಯಾಸ ಮಾಡಿದರು. .
ಹತ್ತು ವರ್ಷಗಳ ಕಾಲದ ಕಠಿಣ ತಾಲೀಮಿನ ಮೂಲಕ ಮನ್ಸೂರರು ಜೈಪುರ ಘರಾಣೆಯ ಪ್ರಮುಖ ಗಾಯಕರಾಗಿ ಹೊರ ಹೊಮ್ಮಿದರು. ಜೈಪುರ್ ಘರಾಣೆಯ ಸಂಗೀತವು ಮನ್ಸೂರರ ಪಾಲಿಗೆ ಅಕ್ಷಯ ಪಾತ್ರೆಯಂತೆ ಭಾಸವಾಯಿತು. ಬಾಯಾರಿದವನಿಗೆ ಕಾಲಿನ ಬಳಿ ಹರಿಯುತ್ತಿರುವ ಸಿಹಿನೀರಿನ ನದಿಯಂತೆ ಕಾಣಿಸಿತು. ಸಿಕ್ಕ ಅವಕಾಶವನ್ನು ಶ್ರದ್ಧೆಯಿಂದ ಒಲಸಿಕೊಂಡರು. ಮುಂಬೈ ನಗರದಲ್ಲಿ ದೊರೆಯುತ್ತಿದ್ದ ಅಲ್ಪ ಆದಾಯದಲ್ಲಿ ಧಾರವಾಡದ ಕುಟುಂಬಕ್ಕೆ ಕಳುಹಿಸಿ, ಗುರುಗಳ ಮಾಸಿಕ ಶುಲ್ಕ ಪಾವತಿಸಿ, ಉಳಿದ ಹಣದಲ್ಲಿ ಜೀವನ ನಿರ್ವಹಣೆ ಮಾಡಬೇಕಿತ್ತು. ಎಷ್ಟೋ ಬಾರಿ ದಿನಕ್ಕೆ ಎರಡು ಚಪಾತಿ ತಿಂದು, ನೀರು ಕುಡಿದು ಬದುಕು ದೂಡಿದ್ದುಂಟು. ಜೈಪುರ ಘರಾಣೆಯಲ್ಲಿ ಅಲ್ಲಾದಿಯಾ ಖಾನ್ ಮತ್ತು ಅವರ ಸಹೋದರ ಹೈದರ್ ಖಾನ್ ಹಾಗೂ ಪುತ್ರರಾದ ಮಂಜಿಖಾನ್ ಮತ್ತು ಬುರ್ಜಿಖಾನ್ ಹೊರತು ಪಡಿಸಿದರೆ, ಹುಟುಂಬದ ಹೊರಗಿನ ಸದಸ್ಯರಲ್ಲಿ ಮಲ್ಲಿಕಾರ್ಜುನ ಮನ್ಸೂರ್ ಮುಖ್ಯ ಗಾಯಕರಾಗಿದ್ದರು. ಅಲ್ಲಾದಿಯಾ ಖಾನ್ ರವರಿಂದ ತರಬೇತಿ ಪಡೆದ ಕೇಸರಿಬಾಯಿ ಕೇರ್‍ಕರ್, ಮೋಗುಬಾಯಿ ಕುರ್ಡಿಕರ್ ಮತ್ತು ಹೈದರ್ ಖಾನ್ ರವರಿಂದ ಶಿಕ್ಷಣ ಪಡೆದಿದ್ದ ಲಕ್ಷ್ಮಿಬಾಯಿ ಜಾದವ್ ಇವರೆಲ್ಲಾ ಮಹಿಳಾ ಗಾಯಕಿಯಾಗಿದ್ದರು. ಈ ಮೊದಲು ಗ್ವಾಲಿಯರ್ ಘರಾಣದಲ್ಲಿ ತರಬೇತಿ ಪಡೆದಿದ್ದ ಮನ್ಸೂರ್ ರವರು ಜೈಪುರ್ ಘರಾಣೆಯಲ್ಲಿ ಕೂಡ ಆದಿಪತ್ಯ ಸ್ಥಾಪಿಸಿದ್ದರು. ಒಮ್ಮೆ ಮನ್ಸೂರ್ ಗಾಯನ ಕೇಳಿದ ಅಲ್ಲಾದಿಯಾ ಖಾನ್ ಕಣ್ಣೀರು ಹಾಕುತ್ತಾ ‘ಬೆಟಾ, ಇನ್ನು ಮುಂದೆ ನೀನು ನನ್ನೆದುರು ಹಾಡಬೇಡ. ನಿನ್ನ ಗಾಯನ ಕೇಳುವಾಗ ನನ್ನ ಪುತ್ರ ಮಂಜಿಖಾನ್ ನನ್ನೆದುರು ಬಂದಂತೆ ಭಾಸವಾಗುತ್ತದೆ ’ ಎಂದು ನುಡಿದಿದ್ದರು. ಮನ್ಸೂರ್ ರವರಿಗೆ ಜೈಪುರ್ ಘರಾಣೆಯ ಸಂಸ್ಥಾಪಕರೆನಿಸಿದ ಮಹಾಗುರುವಿನಿಂದ ದೊರೆತ ಈ ಪ್ರಶಂಸೆಯ ನುಡಿ ಅವರ ಸಂಗೀತ ಕುರಿತ ಬದ್ಧತೆಗೆ ಸಿಕ್ಕ ಅತಿ ದೊಡ್ಡ ಪ್ರತಿಫಲವಾಗಿತ್ತು.

ಹಿಂದೂಸ್ತಾನಿ ಸಂಗೀತದ ವಿವಿಧ ಪ್ರಕಾರ ಶೈಲಿಗಳ ಶಾಲೆಗಳು ಎನಿಸಿಕೊಂಡ ಘರಾಣೆಗಳಲ್ಲಿ ಜೈಪುರ್ ಅತ್ರೋಳಿ ಮತ್ತು ಕಿರಾನ ಘರಾನ ಘರಾಣೆ) ವಿಶಿಷ್ಟವಾದವುಗಳು. ಜೈಪುರ್ ಘರಾಣೆಯಲ್ಲಿ ಗಾಯನದ ಪ್ರತಿಯೊಂದು ಅಂಶವು ಸಂಕೀರ್ಣವಾಗಿದ್ದು ಮತ್ತು ಸೂಕ್ಷ್ಮವಾಗಿರುವುದು ವಿಶೇಷ. ಈ ಘರಾಣೆಯಲ್ಲಿ ಸ್ವರಗಳ ಜೋಡಣೆಯು ಕಲಾತ್ಮಕತೆಯಿಂದ ಕೂಡಿರುವುದು ವಿಶೇಷ. ರಾಗದ ಅಭಿವ್ಯಕ್ತಿಗೆ ಸ್ವರವನ್ನು ಪರಿಣಾಮಕಾರಿ ಬಳಸುವುದರ ಜೊತೆಗೆ ರಾಗದ ಲಕ್ಷಣಗಳು ಹಾಗೂ ಸ್ವರದ ಸೌಂದರ್ಯ ಏಕಕಾಲಕ್ಕೆ ಅನಾವರಣಗೊಳ್ಳುವುದರಿಂದ ಸಂಗೀತದ ಮಾಧುರ್ಯವು ಕೇಳುಗರಿಗೆ ಹಿತವೆನಿಸುತ್ತದೆ. ಜೊತೆಗೆ, ಈ ಘರಾಣೆಯಲ್ಲಿ ಆಲಾಪನೆ ಅಥವಾ ಆಲಾಪ್ ಮಧ್ಯಮ ವೇಗದಲ್ಲಿ ಇದ್ದು, ಸಂಗೀತದ ಲಯಕ್ಕೆ ಹೇಳಿ ಮಾಡಿಸಿದಂತಿದೆ. ಹಾಗಾಗಿ ಜೈಪುರ್ ಅತ್ರೊಳಿ ಘರಾಣೆಯ ಸಂಗೀತವು ಕಲಾವಿದರಿಂದ ಏಕಕಾಲಕ್ಕೆ ಏಕಾಗ್ರತೆ, ಬದ್ಧತೆ ಮತ್ತು ನೈಪುಣ್ಯತೆ ಇವೆಲ್ಲವನ್ನೂ ಬಯಸುತ್ತದೆ. ಈ ಕಾರಣದಿಂದಾಗಿ ಭಾರತೀಯ ಹಿಂದೂಸ್ತಾನಿ ಸಂಗೀತದಲ್ಲಿ ಕಿರಾನ ಘರಾಣ ಮತ್ತು ಜೈಪುರ್ ಘರಾಣಾ ಶಾಲೆಗಳಿಂದ ಹೊರಬಂದ ಬಹುತೇಕ ಕಲಾವಿದರು ಹೊಸ ಇತಿಹಾಸವನ್ನು ಸೃಷ್ಟಿ ಮಾಡಿದರು.

ಮಲ್ಲಿಕಾರ್ಜುನ ಮನ್ಸೂರ್ ಬಾಲ್ಯದಲ್ಲಿ ಕರ್ನಾಟಕ ಸಂಗೀತ, ಆನಂತರ ಹರೆಯದಲ್ಲಿ ಗ್ವಾಲಿಯರ್ ಘರಾಣದಲ್ಲಿ ಅಭ್ಯಾಸ ಮಾಡಿದ್ದರ ಫಲವಾಗಿ ಜೈಪುರ್ ಘರಾಣದಲ್ಲಿ ನಿಪುಣ ಕಲಾವಿದರಾಗಿ ಹೊರಹೊಮ್ಮಿದ್ದರು. ದ್ರುಪದ್ ಮತ್ತು ಖ್ಯಾಲ್ ಪ್ರಕಾರಗಳ ಸಂಗೀತದಲ್ಲಿ ಮನ್ಸೂರ್ ಖ್ಯಾಲ್ ಗಾಯನದಲ್ಲಿ ಪರಿಣಿತಿ ಸಾಧಿಸುವುದರ ಜೊತೆಗೆ 125 ರಾಗಗಳನ್ನು ಅಭ್ಯಾಸ ಮಾಡಿದ್ದರಲ್ಲದೆ. ಅಪರೂಪದ ರಾಗಗಳು ಎನಿಸಿಕೊಂಡ ಶುದ್ದನಾಟ್, ಅಸಾ ಜೋಜಿಯಾ, ಕಭೀರ್ ಭೈರವಿ, ಬಿಹಾರಿ, ಬಹುದ್ದೋರ್ ತೋಡಿ , ಹೇಮ್, ನಾಟ್ ಏಕ್ ನಿಶಾದ್, ಸೇರಿದಂತೆ ಹಲವು ರಾಗಗಳಲ್ಲಿ ನೈಪುಣ್ಯತೆ ಸಾಧಿಸಿದ್ದರು. ಈ ಕಾರಣದಿಂದಾಗಿ ಅಲ್ಲಾದಿಯಾ ಖಾನ್ ಕುಟುಂಬ ಮತ್ತು ಅವರ ನೇರ ಶಿಷ್ಯವರ್ಗವನ್ನು ಹೊರತು ಪಡಿಸಿದರೆ, ಜೈಪುರ್ ಅತ್ರ್ರೋಳಿ ಘರಾಣೆ ಪರಂಪರೆಯನ್ನು ಎರಡನೆಯ ಪೀಳಿಗೆಯಲ್ಲಿ ಮುಂದುವರಿಸಿದ ಪ್ರತಿಭಾವಂತ ಸಂಗೀತಗಾರ ಎಂಬ ಬಿರುದಿಗೆ ಅವರು ಪಾತ್ರರಾದರು. ಮೋಗುಬಾಯಿ ಕುರ್ಡಿಕರ್ ಅವರ ಪುತ್ರಿ ಕಿಶೋರಿ ಅಮೋಣ್ಕರ್ ( ಅಮೋನ್ಕರ್) ಸಹ ಇದೇ ಪರಂಪರೆಯ ಮತ್ತೋರ್ವ ಮಹಾನ್ ಗಾಯಕಿ. ( ಮನ್ಸೂರ್ ರವರು ದೆಹಲಿಯ ದೂರದರ್ಶನಕ್ಕಾಗಿ ತಮ್ಮ ಪುತ್ರ ರಾಜಶೇಖರ್ ಮನ್ಸೂರ್ ಜೊತೆ ಶುದ್ದನಾಟ್ ರಾಗದಲ್ಲಿ ಹಾಡಿರುವ ಸಂಗೀತವನ್ನು ಆಸಕ್ತರು ಯೂ ಟ್ಯೂಬ್ ನಲ್ಲಿ ಆಲಿಸಬಹುದು)
ತಮ್ಮ ಒಂದು ದಶಕದ ಶಿಷ್ಯವೃತ್ತಿ ಮುಗಿಸಿ ಸ್ವತಂತ್ರ ಸಂಗೀತಗಾರನಾಗುವ ಸ್ವಾತಂತ್ರ್ಯವಿದ್ದರೂ ಸಹ ಮಲ್ಲಿಕಾರ್ಜುನ ಮನ್ಸೂರರಿಗೆ ಹೆಳಿಕೊಳ್ಳುವಂತಹ ಅವಕಾಶಗಳು ಹುಡುಕಿಕೊಂಡು ಬರಲಿಲ್ಲ. ಖ್ಯಾತ ಸಂಗೀತ ವಿದ್ವಾಂಸ ದೀಪಕ್ ಎಸ್.ರಾಜ ಎಂಬುವವರು ಮನ್ಸೂರರ ಸಂಗೀತ ಮತ್ತು ಅವರ ಪ್ರತಿಭೆಯನ್ನು ವ್ಯಾಖ್ಯಾನಿಸುತ್ತಾ ಮಲ್ಲಿಕಾರ್ಜುನ ಮನ್ಸೂರ್ ಅವರದು ಆಕರ್ಷಣೆಯ ವ್ಯಕ್ತಿತ್ವವಲ್ಲ ಅಥವಾ ಆಕರ್ಷಣೆಯ ದೇಹದ ಅಂಗಸೌಷ್ಠವವಾಗಲಿ ಅಥವಾ ವಾಕ್ ಚಾತುರ್ಯ ಅವರ ಬಳಿ ಇರಲಿಲ್ಲ. ಸುದ್ದಿ ಮತ್ತು ಪ್ರಚಾರದ ಹುಚ್ಚು ಹೊಳೆಯಲ್ಲಿ ತೇಲಿ ಹೋಗಲು ಬಯಸದ ಅವರು ಓರ್ವ ಫಕೀರನಂತೆ, ಎಲೆ ಮರೆಯ ಕಾಯಿಯಂತೆ ತಾವು ಕಲಿತ ಸಂಗೀತವನ್ನು ಧ್ಯಾನಿಸುತ್ತಾ ಬದುಕಿಬಿಟ್ಟರು ಎಂದು ಹೇಳಿರುವ ಮಾತು ಅರ್ಥಪೂರ್ಣವಾಗಿದೆ. ಮುಂಬೈ ನಗರದಿಂದ ಹಿಂತಿರುಗಿದ ಮನ್ಸೂರರು ಧಾರವಾಡ ನಗರ ಮತ್ತು ಸುತ್ತ ಮುತ್ತಲಿನ ಪ್ರದೇಶಗಳನ್ನು ತಮ್ಮ ಭೌಗೋಳಿಕ ಎಲ್ಲೆಯನ್ನಾಗಿ ಮಾಡಿಕೊಂಡು ಜೀವಿಸತೊಡಗಿದರು. ಹೆಚ್.ಎಂ.ವಿ. ಗ್ರಾಮೋಪೋನ್ ಕಂಪನಿಯು ಬೆಳಗಾವಿ ನಗರದಲ್ಲಿ ಕಛೇರಿ ತೆರೆದು ಸುತ್ತಮುತ್ತಲಿನ ಸಂಗೀತಗಾರರು ಮತ್ತು ಪ್ರಸಿದ್ಧ ನಾಟಕಗಳನ್ನು ಧ್ವನಿ ಮುದ್ರಿಕೊಳ್ಳಲು ಮುಂದಾದಾಗ ಕಂಪನಿಗೆ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದರು. ಧಾರವಾಡದಲ್ಲಿ ತುಂಬು ಸಂಸಾರವನ್ನು ನಿಭಾಯಿಸುವ ದೃಷ್ಟಿಯಿಂದ ಆಕಾಶವಾಣಿ ಕೇಂದ್ರಕ್ಕೆ ಸಲಹೆಗಾರರಾಗಿ ಕಾರ್ಯನಿರ್ವಹಿಸಿದರು. ಇವುಗಳ ನಡುವೆಯೂ ತಾವು ಕಲಿತ ಸಂಗೀತವನ್ನು ಮರೆಯಲಿಲ್ಲ. ಸುತ್ತಮುತ್ತಲಿನ ಜಾತ್ರೆಗಳ ವಿಶೇಷ ಸಂದರ್ಭಗಳಲ್ಲಿ ಹಾಡುತ್ತಾ ತಮ್ಮೊಳಗಿನ ಎಲ್ಲಾ ರಾಗಗಳನ್ನು ಜೀವಂತವಿಡುವುದರ ಜೊತೆಗೆ ಕನ್ನಡದ ಶರಣರ ವಚನಗಳನ್ನು ಹಾಗೂ ಮರಾಠಿಯ ಭಜನೆಗಳನ್ನು ಹಿಂದೂಸ್ತಾನಿ ಸಂಗೀತಕ್ಕೆ ಅಳವಡಿಸಿ ಜನಪ್ರಿಯ ಗೊಳಿಸಿದರು. ತಮ್ಮ ಸಹೋದರ ಬಸವರಾಜ ಮನ್ಸೂರರ ನಾಟಕ ಕಂಪನಿಯ ಹೊಸ ನಾಟಕ ಕಂಪನಿಗೆ ರಂಗಗೀತೆಗಳನ್ನು ರಚಿಸಿಕೊಡುತ್ತಿದ್ದರು. ಜೊತೆಗೆ 1943ರಲ್ಲಿ ನಿರ್ಮಾಣವಾದ ಚಂದ್ರಹಾಸ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದರು. ಧಾರವಾಡದ ಮುರುಘಾಮಠದ ಶ್ರೀ ಮೃತ್ಯುಂಜಯ ಸ್ವಾಮಿಗಳ ಸಲಹೆ ಮೇರೆಗೆ ಶರಣರ ವಚನಗಳನ್ನು ವಿಶೇಷವಾಗಿ ಬಸವಣ್ಣ ಮತ್ತು ಅಕ್ಕಮಹಾದೇವಿಯವರ ವಚನಗಳನ್ನು ಬಸವನಾಳರ ಸಹಾಯದಿಂದ ಲಘು ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸಿ ಜನಪ್ರಿಯಗೊಳಿಸಿದರು. ಅಕ್ಕ ಮಹಾದೇವಿಯ ‘ಅಕ್ಕ ಕೇಳವ್ವಾ ನಾನೊಂದು ಕನಸ ಕಂಡೆ’ ವಚನವನ್ನು ಕೇಳಿದ ಕುವೆಂಪುರವರು ಮನ್ಸೂರ್ ಅವರನ್ನು ಅಭಿನಂದಿಸಿದ್ದರು. ‘ಆ ವಚನದ ಸೊಗಸಾದ ಗಾಯನದ ಮೂಲಕ ಮಹಾದೇವಿಯಕ್ಕನ ಮಧುರವಾದ ಆಧ್ಯಾತ್ಮಿಕ ಮನೊಲೋಕವನ್ನು ಪ್ರವೇಶಿಸಿದ ಅನುಭವ ನನಗಾಯಿತು’ ಎಂದು ಕುವೆಂಪುರವರು ಮನ್ಸೂರ್ ಅವರ ಗಾಯನವನ್ನು ಕೊಂಡಾಡಿದ್ದರು. ಅದೇ ರೀತಿ ಶಿಶುನಾಳ ಷರೀಪರ ‘ತೇರನೆಳುಯುತ್ತಾರೆ ತಂಗಿ’ ಎಂಬ ತತ್ವ ಪದ ಮತ್ತು ಬಸವಣ್ಣನವರ ‘ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯ ’ ಎಂಬ ವಚನ ಕೂಡ ಜನಪ್ರಿಯವಾಗಿದ್ದವು.

ಒಂದು ರೀತಿಯ ಸಂಪ್ರದಾಯ ನಿಷ್ಟ ಹಾಗೂ ಆಧ್ಯಾತ್ಮಿಕ ಹಿನ್ನಲೆಯಿಂದ ಬಂದಿದ್ದ ಮಲ್ಲಿಕಾರ್ಜುನ ಮನ್ಸೂರರು ಸಂಗೀತಕ್ಕಾಗಿ ತಮ್ಮ ಕುಟುಂಬವನ್ನು ನಗರಗಳಿಗೆ ಕರೆದೊಯ್ದು ಸಂಕಷ್ಟಕ್ಕೆ ಗುರಿಮಾಡಬಾರದು ಎಂಬ ದೃಷ್ಟಿಕೋನದಿಂದ ಧಾರವಾಡ ನಗರದಲ್ಲಿ ಜನಸಾಮಾನ್ಯರಂತೆ ಬದುಕಿದರು. ತಾವು ಹುಟ್ಟಿದ ಹಳ್ಳಿಯಿಂದ ಬರುತ್ತಿದ್ದ ದವಸ ಧಾನ್ಯಗಳು ಮತ್ತು ತಮ್ಮ ಸೀಮಿತ ಆದಾಯದ ಮೂಲಕ ಪತ್ನಿ, ಮಕ್ಕಳ ಜೊತೆ ಪರಿಸ್ಥಿತಿಯ ಕೂಸಿನಂತೆ ಮೂರು ದಶಕಗಳ ಕಾಲ ತಣ್ಣಗೆ ಬದುಕಿದರು. 1981 ರಲ್ಲಿ ಅವರಿಗೆ ಮಧ್ಯಪ್ರದೇಶದ ಪ್ರತಿಷ್ಟಿತ ಪ್ರಶಸ್ತಿ ಕಾಳಿದಾಸ್ ಸಮ್ಮಾನ್ ದೊರೆತಾಗ, ಅಂದಿನ ಪ್ರಧಾನಿ ಇಂದಿರಾಗಾಂಧಿಯವರಿಂದ ಪ್ರಶಸ್ತಿ ಸ್ವೀಕರಿಸಿ, ತಾವು ಸರಳವಾಗಿ ಬದುಕಿದ ಬಗೆಯನ್ನು ಸಭಿಕರ ಮುಂದೆ ತೆರದಿಟ್ಟಿದ್ದರು. ಅವರ ಆತ್ಮ ಆಕಥೆ `ನನ್ನ ರಸಯಾತ್ರೆ ' ಕೃತಿಯಲ್ಲಿಯೂ ಸಹ ಈ ಸಂಗತಿಯನ್ನು ದಾಖಲಿಸಿದ್ದಾರೆ. ಕೊನೆಗೂ ಅವರ ಪ್ರತಿಭೆ ಹೊರಜಗತ್ತಿಗೆ ಅನಾವರಣಗೊಂಡಿತು. ಮನ್ಸೂರರು ತಮ್ಮ ಅರವತ್ತನೆಯ ವಯಸ್ಸಿನಿಂದಾಚೆಗೆ ಯಶಸ್ವಿನ ಶಿಖರವನ್ನೇರುತ್ತಾ ಹೋಗುತ್ತಿದ್ದಂತೆ ದೇಶವೂ ಸೇರಿದಂತೆ ನಾಡಿನ ಸಮಗ್ರ ಪ್ರಶಸ್ತಿ ಹಾಗೂ ಪುರಸ್ಕಾರಗಳು ಅವರನ್ನು ಅರಸಿಕೊಂಡು ಬಂದವು.

1969ರಲ್ಲಿ ಅವರ ಮಿತ್ರ ಹಾಗೂ ಖ್ಯಾತ ಗಜಲ್ ಹಾಗೂ ಠುಮ್ರಿ ಗಾಯಕರಾದ ಕಮಲ್ ಸಿಂಗ್ ಎಂಬುವರು ಮುಂಬೈ ನಗರದಲ್ಲಿ ಮಲ್ಲಿಕಾರ್ಜುನ ಮನ್ಸೂರ್ ರವರ ಸಂಗೀತ ಕಚೇರಿಯನ್ನು ಏರ್ಪಡಿಸಿ, ಎಲ್ಲಾ ಸಂಗೀತ ಕಲಾವಿದರು ಮತ್ತು ವಿದ್ವಾಂಸರನ್ನು ಆಹ್ವಾನಿಸಿದ್ದರು. ಅಂದು ಮನ್ಸೂರರ ಗಾಯನ ಕೇಳಿದ ಮುಂಬೈನ ಸಂಗೀತದ ಜಗತ್ತು ಅಶ್ಚರ್ಯಪಟ್ಟಿತು. ಇಷ್ಟೊಂದು ಸುಶ್ರಾವ್ಯವಾಗಿ ತುಂಬುಕಂಠದಿಂದ ಹಾಡುವ ಅಪರೂಪದ ಖ್ಯಾಲ್ ಗಾಯಕ ಈವರೆಗೆ ಎಲ್ಲಿದ್ದರು? ಎಂದು ಪ್ರಶ್ನೆ ಮಾಡತೊಡಗಿತು. ಏಕೆಂದರೆ, ಮನ್ಸೂರರು ಸಾರ್ವಜನಿಕ ಸಂಗೀತ ಕಚೇರಿಗೆ ಪ್ರವೇಶ ಮಾಡಿದ ಆ ದಿನಗಳಲ್ಲಿ ಖ್ಯಾಲ್ ಗಾಯಕರ ಕೊರತೆ ಇತ್ತು. ಶ್ರೇಷ್ಟ ಗಾಯಕರು ಎನಿಸಿಕೊಂಡ ಬಡೇ ಗುಲಾಂ ಆಲಿಖಾನ್, ಕೇಸರಿಬಾಯಿ ಮುಂತಾದವರು ವೃದ್ಧಾಪ್ಯದಿಂದ ಹಿನ್ನಲೆಗೆ ಸರಿದ್ದರು. ಜೊತೆಗೆ ಮುಂಚೂಣಿಯಲ್ಲಿದ್ದ ಅಮೀರ್ ಖಾನ್ ಎಪ್ಪತ್ತರ ದಶಕದಲ್ಲಿ ಆಕಸ್ಮಿಕ ಅಪಘಾತದಲ್ಲಿ ಮೃತಪಟ್ಟಿದ್ದರು. ಪಳಗಿದ ಸಿಂಹದ ಧ್ವನಿಯಂತಿದ್ದ ನಮ್ಮ ಕನ್ನಡಿಗರಾದ ಪಂಡಿತ ಭೀಮಸೇನ ಜೋಷಿ ಹಾಗೂ ಕುಮಾರ ಗಂದರ್ವ ಹೊರತು ಪಡಿಸಿದರೆ, ಪುರುಷ ಗಾಯಕರ ಕೊರತೆ ಇತ್ತು.
ಮನ್ಸೂರ್ ರವರಿಗೆ ಪ್ರಭಾವಶಾಲಿಯಾದ ಕಂಠ ಇರಲಿಲ್ಲ ನಿಜ. ಆದರೆ, ಅವರದು ಎತ್ತರದ ಶ್ರುತಿಯನ್ನು ಒಳಗೊಂಡ ಕಂಠ. ವಿಲಂಬಿತ ಅಥವಾ ಮಂದ್ರ ಹಾಗೂ ಮದ್ಯಮ ವೇಗದಲ್ಲಿ ಖ್ಯಾಲ್ ಅಥವಾ ಖಯಾಲ್ ಗಾಯನದ ರಾಗಗಳು, ಮರಾಠಿ ರಂಗಗೀತೆಗಳು ಮತ್ತು ಅಭಂಗ್ ಅಥವಾ ಭಜನೆಗಳನ್ನು ಅತ್ಯಂತ ಶುದ್ಧವಾದ ಶಾಸ್ತ್ರೀಯ ಶೈಲಿಯಲ್ಲಿ ಹಾಡುತ್ತಿದ್ದ ರೀತಿಯಿಂದಾಗಿ ಇಡೀ ದೇಶದ ಗಮನ ಸೆಳೆದರು. ಜೊತೆಗೆ ಸಂಗೀತ ಲೋಕಕ್ಕೆ ಅಪರಿಚಿತವಾಗಿದ್ದ ಕೆಲವು ರಾಗಗಳನ್ನು ಹಾಡುವುದರಲ್ಲಿ ಅವರು ನಿಪುಣರಾಗಿದ್ದರು. ಜೈಪುರ್ ಘರಾಣೆಯ ಜನಪ್ರಿಯ ರಾಗಗಳನ್ನು ಅವರು ಮಧ್ಯಮ ವೇಗದಲ್ಲಿ ಕೇಳುಗರ ಮನಮುಟ್ಟುವಂತೆ ಅವರು ಹಾಡುತ್ತಿದ್ದರು. ಬಾಲ್ಯದಲ್ಲಿ ಅವರು ರಂಗಭೂಮಿಯಲ್ಲಿ ಹಾಡುತ್ತಿದ್ದ ರಂಗಗೀತೆಗಳ ಶೈಲಿ ಇಲ್ಲಿ ಅವರಿಗೆ ನೆರವಾಗಿತ್ತು. ಮನ್ಸೂರರು ಸಾಮಾನ್ಯವಾಗಿ ತಮ್ಮ ಸಂಗೀತ ಕಚೇರಿಯ ಕೊನೆಯ ಭಾಗದಲ್ಲಿ ಭೈರವಿ ರಾಗದಲ್ಲಿ ಹಾಡುತ್ತಿದ್ದ ‘ಪಾವ ಪಡೂ ಮೈತೇರಿ ಜೋಗಿ ಮತ ಜಾ’ ಎಂಬ ಹಾಡಿಗೆ ಇಡೀ ಕಚೇರಿಯ ಶ್ರೋತ್ರುಗಳು ರೋಮಾಂಚನಗೊಳ್ಳುತ್ತಿದ್ದರು.
ಮನ್ಸೂರ್ ಅವರಿಗೆ ಅರವತ್ತೇರಡನೆಯ ವಯಸ್ಸಿನಿಂದ ತಮ್ಮ ಎಂಬತ್ತೇರೆಡು ವಯಸ್ಸಿನವರೆಗೆ ಅಂದರೆ, ಕೊನೆಯ ಇಪ್ಪತ್ತು ವರ್ಷಗಳಲ್ಲಿ ಪದ್ಮಶ್ರೀ, (1970) ಪದ್ಮಭೂಷಣ, (1976) ಪದ್ಮವಿಭೂಷಣ (1992) ಕೇಂದ್ರ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಪ್ರಶಸ್ತಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಹಾಗೂ ಮಧ್ಯಪ್ರದೇಶದ ಕಾಳಿದಾಸ್ ಸಮ್ಮಾನ್ ಪ್ರಶಸ್ತಿಗಳು ಅರೆಸಿಕೊಂಡು ತಮ್ಮ ಗೌರವ ಹೆಚ್ಚಿಸಿಕೊಂಡವು. ಕರ್ನಾಟಕ ಸರ್ಕಾರ ಅವರನ್ನು ವಿಧಾನ ಪರಿಷತ್ತಿಗೆ ನಾಮಕರಣ ಮಾಡಿ ಗೌರವ ಸೂಚಿಸಿತು. ಇಷ್ಟೆಲ್ಲಾ ಗೌರವ ಮತ್ತು ಪ್ರಶಸ್ತಿಗಳು ಬಂದರೂ ಸಹ ಮಲ್ಲಿಕಾರ್ಜುನ ಮನ್ಸೂರರ ಜೀವನದ ದೃಷ್ಟಿಕೋನ ಎಂದಿಗೂ ಬದಲಾಗಲಿಲ್ಲ. ಓರ್ವ ಸಂತನಂತೆ ಫಕೀರನಂತೆ ಬದುಕಿದರು. ತಮ್ಮ ಪುತ್ರ ರಾಜಶೇಖರ ಮನ್ಸೂರ್ ಹಾಗೂ ಪುತ್ರಿ ಸುಶೀಲಾ ಕೊಡ್ಲಿ ಸೇರಿದಂತೆ ಸೇರಿದಂತೆ ಹಲವು ಶಿಷ್ಯರನ್ನು ಜೈಪುರ್ ಘರಾಣೆ ಪರಂಪರೆಯಲ್ಲಿ ತಯಾರು ಮಾಡಿದ ಮನ್ಸೂರರು 1992 ಸೆಪ್ಟಂಬರ್ ತಿಂಗಳಲ್ಲಿ ತಮ್ಮ 82ನೇ ವಯಸ್ಸಿನಲ್ಲಿ ಧಾರವಾಡದಲ್ಲಿ ನಿಧನ ಹೊಂದಿದರು.

ಧಾರವಾಡದ ಅವರ ನಿವಾಸವನ್ನು ಈಗ ಸ್ಮಾರಕ ಮಾಡಲಾಗಿದ್ದು, ಕರ್ನಾಟಕ ಸರ್ಕಾರವು ಅವರ ಹೆಸರಿನಲ್ಲಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸ್ಥಾಪಿಸಿದೆ. ಪ್ರತಿವರ್ಷ ಡಿಸೆಂಬರ್ 31 ರಂದು ಮಲ್ಲಿಕಾರ್ಜುನ ಮನ್ಸೂರ್ ಹೆಸರಿನಲ್ಲಿ ದೇಶದ ಪ್ರಸಿದ್ಧ ಸಂಗೀತ ಕಲಾವಿದರಿಗೆ ರಾಷ್ಡ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.

ಈ ಅಂಕಣದ ಹಿಂದಿನ ಬರಹಗಳು:

ಸ್ವರ ಮಾಧುರ್ಯದ ರಾಣಿ: ಕೇಸರಿಬಾಯಿ ಕೇರ್‍ಕರ್

ಸ್ವರಸಾಮ್ರಾಟ್ ಪಂಡಿತ್ ಬಸವರಾಜ ರಾಜಗುರು

ಹಿಂದೂಸ್ತಾನಿ ಸಂಗೀತಕ್ಕೆ ಕನ್ನಡದ ಘಮಲು ಹರಡಿದ ಸವಾಯಿ ಗಂಧರ್ವರು

ಸಂಗೀತ ಲೋಕದ ತಾನ್ ಸೇನ್ ಬಡೇ ಗುಲಾಂ ಆಲಿಖಾನ್

ಅಪ್ರತಿಮ ಗುರು ಅಲ್ಲಾದಿಯಾಖಾನ್

ಕೇಳದೇ ಉಳಿದ ಸ್ವರ ಮಾಧುರ್ಯ

ಶುದ್ದ ಸಂಗೀತದ ಪ್ರತಿಪಾದಕ: ಪಂಡಿತ್ ವಿಷ್ಣು ದಿಗಂಬರ್ ಪಲುಸ್ಕರ್

ಹಿಂದೂಸ್ತಾನಿ ಸಂಗೀತದ ಆಧುನಿಕ ಪಿತಾಮಹ- ವಿಷ್ಣು ನಾರಾಯಣ ಭಾತಖಾಂಡೆ

ಕಿರಾನಾ ಘರಾಣದ ಉಸ್ತಾದ್ ಅಬ್ದುಲ್ ಕರೀಂ ಖಾನ್

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...