ಮುಖ್ಯಮಂತ್ರಿ ಜೊತೆಗೆ 'ಜನಮನ' ಸಂವಾದ

Date: 14-07-2023

Location: ಬೆಂಗಳೂರು


''ಸಿದ್ಧರಾಮಯ್ಯನವರದು ಸಿನೆಮಾ ಸೆಲೆಬ್ರಿಟಿಗಳನ್ನು ಮೀರಿಸುವ ವರ್ಣಮಯ ಆಕರ್ಷಣೆ. ಅಂತೆಯೇ ಅವರು ಇವತ್ತಿನ ಯುವ ಜನಾಂಗದ ಕಣ್ಮಣಿ. ಅಷ್ಟಕ್ಕೂ ಯುವಮನಸುಗಳಿಗೆ ನಾಡಪ್ರಭುವಿನೆದುರು ಮುಖಾಮುಖಿಯಾದ ಸಂಭ್ರಮ. ಅವರ ಅಂತರಾಳದ ತುಂಬಾ ಮೌನ ಸಂಕಟಗಳ ಸಮ್ಮಿಲನ ಏನೆಲ್ಲ. ಹೀಗೆಂದೇ ಕೆಲವರಿಗೆ ತಮ್ಮೊಳಗಿನ ಅಮೂರ್ತ ತಬ್ಬಲಿತನ ಹಿಮ್ಮೆಟ್ಟಿಸಿಕೊಳ್ಳುವ ತವಕ,'' ಎನ್ನುತ್ತಾರೆ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ `ರೊಟ್ಟಿಬುತ್ತಿ' ಅಂಕಣದಲ್ಲಿ, “ಮುಖ್ಯಮಂತ್ರಿ ಜೊತೆಗೆ ಜನಮನ' ಸಂವಾದ” ಕುರಿತು ಲೇಖನವನ್ನು ಬರೆದಿದ್ದಾರೆ.

ಅದರ ಹಿಂದಿನ ದಿನ ನಿರಂತರ ಮೂರು ತಾಸುಗಳಿಗೂ ಹೆಚ್ಚುಕಾಲ ನಿಂತುಕೊಂಡೇ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಧಾನಸಭೆಯಲ್ಲಿ ಲೀಲಾಜಾಲವಾಗಿ ಜನಪರ 'ಆಯವ್ಯಯ' ಸಾದರ ಪಡಿಸಿದರು. ಅದರ ಮರುದಿನ ಅವರು ಮೇಲ್ನೋಟದಲ್ಲಿ ತುಸು ದಣಿದಂತೆ ಕಾಣುತ್ತಿದ್ದರು. ಮೇಲಿಂದ ಮೇಲೆ ತೂರಿಬರುವ ಕಫಭರಿತ ಕೆಮ್ಮು. ಮಾತು ಸಂವಾದಗಳ ನಡುನಡುವೆ ಬಿಸಿನೀರು ಸೇವನೆ. ಕಡೆಯಪಕ್ಷ ಒಂದು ದಿನದ ಮಟ್ಟಿಗಾದರೂ ಅವರು ವಿಶ್ರಾಂತಿ ಪಡೆಯಬಹುದಿತ್ತು. ಅಂತಹದರಲ್ಲಿ ಅವರು ಈ ಮೊದಲೇ ಒಪ್ಪಿಕೊಂಡ "ಪ್ರಬುದ್ಧ ಕರ್ನಾಟಕ : ಜನಮನ ಸಮಾವೇಶ" ಸಂವಾದದಲ್ಲಿ ಪಾಲ್ಗೊಳ್ಳಲು ಅವಧಿಗೆ ಮೊದಲೇ ಬಂದರು. ಬೇರೊಬ್ಬ ಮುಖ್ಯಮಂತ್ರಿ ಅಲ್ಲ, ಕ್ಯಾಬಿನೆಟ್ ಮಂತ್ರಿಯೇ ಆಗಿದ್ದರೂ ಕಾರ್ಯಕ್ರಮ ತಪ್ಪಿಸಿ ವಿಶ್ರಾಂತಿ ಪಡೆಯುತ್ತಿದ್ದರು. ಸಿದ್ಧರಾಮಯ್ಯ ಹಾಗೆ ಮಾಡುವವರಲ್ಲ.

ಅವರು ಯಾವತ್ತೂ ಸಾಹಿತಿ, ಕಲಾವಿದರು ಮತ್ತು ವಿದ್ಯಾರ್ಥಿಗಳ ಕುರಿತು ಅಪಾರ ಆಸ್ಥೆ ಉಳ್ಳವರು. ಹೀಗಾಗಿ ಅವರೆಲ್ಲರ ಜತೆಗಿನ ಸಂವಾದದ ಪ್ರೀತಿ ಕಕ್ಷೆಯಿಂದ ಅದ್ಹೇಗೆ ತಪ್ಪಿಸಿಕೊಳ್ಳಬಲ್ಲರು.? ಅವರು ಬಡ್ಜೆಟ್ ಮಂಡನೆ ಮಾಡಿದ ಮರುದಿನ ಶನಿವಾರ, ಬೆಂಗಳೂರಿನ ವಸಂತ ನಗರದ ದೇವರಾಜ ಅರಸು ಸಭಾಂಗಣದಲ್ಲಿ ಜರುಗಿದ ಜನಮನ ಸಮಾವೇಶಕ್ಕೆ ನಿಗದಿತ ಸಮಯಕ್ಕೆ ಅರ್ಧತಾಸು ಮೊದಲೇ ಬಂದರು. ಹಾಗೆ ಬಂದವರು ಮೂರು ತಾಸುಗಳಿಗೂ ಹೆಚ್ಚುಕಾಲ ಕಫಸಹಿತ ಸೀತ ಕೆಮ್ಮಿನ ಅನಾರೋಗ್ಯದ ನಡುವೆಯೂ ಸ್ವಾಸ್ಥ್ಯಭರಿತ ಸಂವಾದದಲ್ಲಿ ಉಲ್ಲಾಸದಿಂದಲೇ ಪಾಲ್ಗೊಂಡರು.

ಅಷ್ಟು ಸುದೀರ್ಘ ತಾಸುಗಳ ಕಾಲ ಮುಖ್ಯಮಂತ್ರಿಯೊಬ್ಬರು ಅನಾರೋಗ್ಯದ ನಡುವೆಯೂ ಜನಸಾಮಾನ್ಯರ ಜತೆ ಸಹಸ್ಪಂದನ ಮಾಡಿದ್ದು ಲೋಕೋಪಯೋಗಿ ಪ್ರಜಾಪ್ರಭುತ್ವದ ಲಾಲಿತ್ಯವೇ ಹೌದು. ಅಂತಹದ್ದೊಂದು ಸಸ್ನೇಹದ ಸಂಯಮ ಸಮಾಜವಾದಿ ರಾಜಕಾರಣಿಯಾಗಿದ್ದ ಕೆ.ಎಚ್. ರಂಗನಾಥ ಅವರಿಗಿತ್ತು. ಹಾಗಂತ ಅದನ್ನು ಜನಮನ ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಸಂಸ್ಕೃತಿ ಚಿಂತಕ ಡಾ.ಜಿ.ರಾಮಕೃಷ್ಣ ಅವರು ಅಂದು ಸಭೆಯಲ್ಲಿ ಹೃತ್ಪೂರ್ವಕವಾಗಿ ಹೇಳಿದ್ದು.

ಹಾಗೆ ಮಾಡುವ ಮೂಲಕ ಅಂದು ಸಿದ್ಧರಾಮಯ್ಯನವರು ಕರ್ನಾಟಕದ ಎಲ್ಲ ಮೂಲೆ ಮೂಲೆಗಳಿಂದ ಆಗಮಿಸಿದ ಸಾಹಿತಿ, ಕಲಾವಿದರು ಸೇರಿದಂತೆ ನೂರಾರು ವಿದ್ಯಾರ್ಥಿಗಳ ಹೃನ್ಮನಗಳನ್ನು ಗೆದ್ದರು. ಕಾರ್ಯಕ್ರಮದ ನಂತರ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ತರುಣಿಯರ ದಂಡೇ ಮುಕುರಿತ್ತು. ಎಪ್ಪತ್ತಾರರ ಏರುಪ್ರಾಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಯುವ ಮನಸುಗಳನ್ನು ಪ್ರಾಣಮಿತ್ರನಂತೆ ಗೆಲ್ಲುವುದೇ ಭಳಾರೇ ಚಿತ್ತಪುಳಕ.

ಸಿದ್ಧರಾಮಯ್ಯನವರದು ಸಿನೆಮಾ ಸೆಲೆಬ್ರಿಟಿಗಳನ್ನು ಮೀರಿಸುವ ವರ್ಣಮಯ ಆಕರ್ಷಣೆ. ಅಂತೆಯೇ ಅವರು ಇವತ್ತಿನ ಯುವ ಜನಾಂಗದ ಕಣ್ಮಣಿ. ಅಷ್ಟಕ್ಕೂ ಯುವಮನಸುಗಳಿಗೆ ನಾಡಪ್ರಭುವಿನೆದುರು ಮುಖಾಮುಖಿಯಾದ ಸಂಭ್ರಮ. ಅವರ ಅಂತರಾಳದ ತುಂಬಾ ಮೌನ ಸಂಕಟಗಳ ಸಮ್ಮಿಲನ ಏನೆಲ್ಲ . ಹೀಗೆಂದೇ ಕೆಲವರಿಗೆ ತಮ್ಮೊಳಗಿನ ಅಮೂರ್ತ ತಬ್ಬಲಿತನ ಹಿಮ್ಮೆಟ್ಟಿಸಿಕೊಳ್ಳುವ ತವಕ. ಅಷ್ಟು ಮಾತ್ರವಲ್ಲ ಜನರ ಬಿನ್ನಪ ಆಲಿಸುವ ಸರಕಾರದಲ್ಲಿನ ತಾಯ್ತನ ಮತ್ತು ಋಜುತ್ವದ ಹುಡುಕಾಟ.

ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಜೊತೆಗೆ ಸಾಹಿತಿ, ಕಲಾವಿದರು ಮತ್ತು ವಿದ್ಯಾರ್ಥಿಗಳ ಸಂವಾದಕ್ಕೆ ಮುನ್ನ ಅಂದು ಬೆಳಗ್ಗೆ ಆರುಜನ ವಿದ್ವಾಂಸರು ವಿವಿಧ ವಿಷಯಗಳ ಕುರಿತು ತುಂಬಾ ಅರ್ಥಪೂರ್ಣ ವಿಚಾರಗಳನ್ನು ಮಂಡಿಸಿದರು. ಜಯಪ್ರಕಾಶ್ ಶೆಟ್ಟಿ, ಪುರುಷೋತ್ತಮ ಬಿಳಿಮಲೆ, ದು. ಸರಸ್ವತಿ, ನಿರಂಜನಾರಾಧ್ಯ, ರಾಜೇಂದ್ರ ಪೋದ್ದಾರ, ಟಿ.ಆರ್. ಚಂದ್ರಶೇಖರ ಹೀಗೆ ಆರುಮಂದಿ ವಿಷಯ ತಜ್ಞರು ಸಮಸಮಾಜದ ನಾಳಿನ ಕರ್ನಾಟಕ ಕಟ್ಟುವ ನಿಟ್ಟಿನಲ್ಲಿ ಬೇರುಬೀಜದ ವಿಚಾರಗಳನ್ನೇ ಪ್ರಸ್ತುತ ಪಡಿಸಿದರು.

ಬಹುತ್ವ ಕರ್ನಾಟಕದ ಭಾಷೆಗಳು, ಕಲೆ, ಸಾಹಿತ್ಯ, ರಂಗಭೂಮಿ, ಸಂಸ್ಕೃತಿ, ಆರ್ಥಿಕ ಮತ್ತು ಸಾಮಾಜಿಕ, ಶೈಕ್ಷಣಿಕ ಬದುಕಿನ ಸ್ಥಿತಿಗತಿ, ಉದ್ಯೋಗ, ಉದ್ಯಮ ಹೀಗೆ ಎಲ್ಲವನ್ನೂ ಚಿಕಿತ್ಸಕ ಕಣ್ಮನಗಳಲ್ಲಿ ತೆರೆದು ತೋರಿದರು. ಬಹುತೇಕರು ಹತ್ತಾರು ಸುಡುಸುಡುವ ಸತ್ಯಗಳ ಜೀವಾಳಗಳನ್ನೇ ಬಯಲು ಮಾಡಿದರು. ಆದರೆ 'ಜನಾರೋಗ್ಯ' ಕುರಿತು ಅಂದು ವಿಷಯ ವಿಚಾರ ಮಂಡನೆಯಾಗಬೇಕಿದ್ದ ತೀವ್ರವಾದ ಕೊರತೆಯೊಂದು ಢಾಳಾಗಿ ಎದ್ದುಕಾಣುತ್ತಲಿತ್ತು. ಉಪಸ್ಥಿತರಿದ್ದ ಅಧ್ಯಯನಶೀಲ ವಿದ್ಯಾರ್ಥಿಗಳಲ್ಲಿ ಐ.ಎ.ಎಸ್. ಮತ್ತು ಕೆ.ಎ.ಎಸ್. ಪ್ರಶಿಕ್ಷಣಾರ್ಥಿಗಳು ಸೇರಿದಂತೆ ವಿವಿಧ ಜ್ಞಾನಶಾಖೆಯ ನೂರಿನ್ನೂರು ವಿದ್ಯಾರ್ಥಿಗಳು ಸಮಾವೇಶದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಸಂವಾದದಲ್ಲಿಯೂ ಅನೇಕ ವಿದ್ಯಾರ್ಥಿಗಳು ಕ್ರಿಯಾತ್ಮಕವಾಗಿ ಪಾಲ್ಗೊಂಡರು.

ಸಮಾವೇಶದ ಸಂಘಟಕರು ತಾವು ಆಯ್ಕೆ ಮಾಡಿದ ಇಪ್ಪತ್ತೈದು ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳಿಂದ ಸೂಕ್ತ ಉತ್ತರ ದೊರಕಿದವು. ಆದರೆ ಉತ್ತರ ದೊರಕದ ಹತ್ತು ಹಲವು ಮಹತ್ವದ ಪ್ರಶ್ನೆಗಳು ಸಂಘಟಕರ ಬಳಿಯೇ ಉಳಿದುಕೊಂಡವು. ಅದರಲ್ಲಿ ನನ್ನವು ಎರಡು ಪ್ರಶ್ನೆಗಳಿದ್ದವು. ಅವು ಹೀಗಿದ್ದವು : ಸನ್ಮಾನ್ಯರೆ, ಕರ್ನಾಟಕದಲ್ಲಿ ಕುಲ, ಜಾತಿ ಹಾಗೂ ಧರ್ಮಾತೀತವಾದ ಐನೂರಕ್ಕೂ ಹೆಚ್ಚು ಮಂದಿ ತತ್ವಪದಕಾರರು ಆಗಿ ಹೋಗಿದ್ದಾರೆ. ಲಿಂಗಾತೀತವಾಗಿ ಅವರು ಸಹಸ್ರಾರು ತತ್ವಪದಗಳ 'ಬಾಳು' ಬದುಕಿದ್ದಾರೆ. ಕಡಕೋಳ ಮಡಿವಾಳಪ್ಪನಂಥವರು ತತ್ವಪದಗಳ ಅಲ್ಲಮನೇ ಆಗಿದ್ದಾರೆ. ನೀವು ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಸಮಗ್ರ ತತ್ವಪದಗಳ ಸಂಗ್ರಹ ಕಾರ್ಯ ಜರುಗಿದ್ದು ಸ್ವಾಗತಾರ್ಹ.

ಆದರೆ ಅವುಗಳ ಕುರಿತು ವಿವಿಧ ಜ್ಞಾನಶಿಸ್ತುಗಳ ಅಧ್ಯಯನ, ಸಂಶೋಧನೆ ಹಾಗೂ ಇತರೆ ಅಗತ್ಯ ಕಾರ್ಯಗಳು ಜರುಗಲು "ತತ್ವಪದಗಳು ಮತ್ತು ಸೂಫಿ ಸಾಹಿತ್ಯ ಅಭಿವೃದ್ಧಿ ಪ್ರಾಧಿಕಾರ" ರಚನೆ ಆಗಬೇಕಿದೆ. ಇಂತಹ ಪ್ರಾಧಿಕಾರ ರಚನೆ ಕುರಿತು ನೂತನ ಸರ್ಕಾರದ ಕ್ರಮಗಳೇನು.? ಎರಡನೇ ಪ್ರಶ್ನೆ : ದಾವಣಗೆರೆಯಲ್ಲಿ ಜರುಗಲಿರುವ ಮೂರನೇ ವಿಶ್ವ ಕನ್ನಡ ಸಮ್ಮೇಳನ ಕುರಿತು ಮೊನ್ನೆಯ ಮುಂಗಡಪತ್ರದಲ್ಲಿ ಪ್ರಸ್ತಾಪವೇ ಇಲ್ಲ ಯಾಕೆ.?

ಈ ಎರಡೂ ಪ್ರಶ್ನೆಗಳು ಮುಖ್ಯಮಂತ್ರಿ ಅವರ ಗಮನಕ್ಕೆ ಸಂಘಟಕರು ತರಲಿಲ್ಲ ಯಾಕೆ.? ಯಾಕಂತಲೂ ನನಗೆ ಈಗಲೂ ತಿಳಿದಿಲ್ಲ. ಕಾಲ ಮಿಂಚಿ ಮರೆಯಾಗಿಲ್ಲ. ಈಗಲಾದರೂ ಸಂಘಟಕರು ಮುಖ್ಯಮಂತ್ರಿ ಅವರ ಗಮನಕ್ಕೆ ತರಲಿ. ಸೂಕ್ತ ಉತ್ತರಗಳು ದೊರಕಲಿ. ತತ್ವಪದಗಳು ಮತ್ತು ಸೂಫಿ ಸಾಹಿತ್ಯದ ಪ್ರಾಧಿಕಾರ ರಚನೆಯಾಗಲಿ. ಹಾಗೆಯೇ ಉದ್ದೇಶಿತ ದಾವಣಗೆರೆಯ ಮೂರನೇ ವಿಶ್ವಕನ್ನಡ ಸಮ್ಮೇಳನಕ್ಕೆ ಹಣ ಮುಡಿಪಾಗಿಡಲಿ. ದಾವಣಗೆರೆಯಲ್ಲಿ ಅದ್ಧೂರಿಯಾಗಿ ವಿಶ್ವಕನ್ನಡ ಸಮ್ಮೇಳನ ಮುಖ್ಯಮಂತ್ರಿಗಳ ಸಾರಥ್ಯದಲ್ಲಿ ಜರುಗಲಿ.

ಮುಖ್ಯಮಂತ್ರಿ ಜತೆಗಿನ ಜನಮನ ಸಂವಾದ ಮತ್ತು ಅಂದು ಬೆಳಗಿನ ವಿಚಾರ ಸಂಕಿರಣದ ವಿಷಯಗಳ ಕುರಿತು ಈಗಾಗಲೇ ಸಾಮಾಜಿಕ ಜಾಲತಾಣಗಳು ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಸವಿವರವಾದ ಸುದ್ದಿ ವರದಿಗಳು ಪ್ರಕಟಗೊಂಡಿವೆ. ಅವುಗಳು ಅನೇಕರನ್ನು ತಲುಪಿ ಕೆಲವರು ಆ ಕುರಿತು ಚರ್ಚೆಕೂಡಾ ನಡೆದಿವೆ. ಹೀಗಿರುವುದರಿಂದ ಪುನಃ ಅವುಗಳನ್ನು ನಾನು ರಿಪೀಟ್ ಮಾಡುವುದಿಲ್ಲ. ಒಟ್ಟಿನಲ್ಲಿ ಸರ್ಕಾರದ ಗ್ಯಾರಂಟಿಗಳಿಗೆ ಬಲಿಷ್ಠ ಬಲ ನೀಡುವಲ್ಲಿ ಸಮಾವೇಶ ಹೆಚ್ಚು ಪೂರಕವಾಗಿತ್ತು.

ಅಂದಿನ ಸಮಾವೇಶದಲ್ಲಿ ಪ್ರಮುಖವಾಗಿ ಕನ್ನಡದ ಎರಡು ಬಾವುಟಗಳು ಬಿಡುಗಡೆಯಾದವು. ರಾಜ್ಯಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮ ಆರಂಭಕ್ಕೆ ''ಸರ್ವ ಜನಾಂಗದ ಶಾಂತಿಯ ತೋಟ'' ಹೆಸರಿನ ಕನ್ನಡ ಬಾವುಟವನ್ನು ಡಾ.ಜಿ.ರಾಮಕೃಷ್ಣ ಬಿಡುಗಡೆ ಮಾಡಿದರು. ಮಧ್ಯಾಹ್ನದ ಸಂವಾದ ಕಾರ್ಯಕ್ರಮ ಆರಂಭಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ''ಮಾನವ ಜಾತಿ ತಾನೊಂದೆ ವಲಂ'' ಹೆಸರಿನ ಕನ್ನಡ ಬಾವುಟ ಬಿಡುಗಡೆ ಮಾಡಿದರು. ಸಮಾವೇಶದ ಮತ್ತೊಂದು ಉಲ್ಲೇಖನೀಯ ಸಂಗತಿಯೆಂದರೆ., ಕಡಬಗೆರೆ ಮುನಿರಾಜು ಮತ್ತು ಅವನ ಮಗಳು ಚಿತ್ರಶ್ರೀ ಗಾಯನ. ಕಾರ್ಯಕ್ರಮದ ನಡು ನಡುವೆ ಅವರು ಹಾಡಿದ ಮಂಟೇಸ್ವಾಮಿ, ಮಲೆಮಹದೇಶ್ವರ ಮತ್ತು ಶಿಶುನಾಳ ಶರೀಫರ ಅನುಭಾವದ ಅಮಲು ಭರಿಸುವ ನಾದಮಾಧುರ್ಯದ ಗೀತೆಗಳು.

ಸಂವಾದ ಕಾರ್ಯಕ್ರಮ ಮುಗಿಯುವವರೆಗೂ ಶಾಂತಚಿತ್ತದಿಂದ ಕುಂತು ಸಂವಾದ ಸವಿದ ಹಿರಿಯಜೀವ ಅಲ್ಲಿತ್ತು. ಅವರೇ ನಮ್ಮ ನಡುವಿನ ತೊಂಬತ್ತೆರಡರ ಹಿರಿಯ ಸಾಹಿತ್ಯ ಚೇತನ ಗೊ.ರು.ಚನ್ನಬಸಪ್ಪ. ಅವರು ಪ್ರೇಕ್ಷಕರ ಮೊದಲ ಸಾಲಲ್ಲಿ ಕುಂತು ಸಂವಾದಕ್ಕೊಂದು ಸಾತ್ವಿಕ ಮೆರಗು ತಂದುಕೊಟ್ಟರು. ಸಂವಾದ ಶುರುವಾಗುವ ಮೊದಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಗೊ.ರು.ಚ. ಅವರನ್ನು ಪ್ರೀತಿಯಿಂದ ಮಾತಾಡಿಸಿದರು. ಬೆಂಗಳೂರಿನ ಜನಮನ ಪ್ರತಿಷ್ಠಾನ ಮತ್ತು ಮೈಸೂರಿನ ಸಮತಾ ಅಧ್ಯಯನ ಕೇಂದ್ರದವರು ಸಮಾವೇಶವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

ಮಲ್ಲಿಕಾರ್ಜುನ ಕಡಕೋಳ
9341010712

ಈ ಅಂಕಣದ ಹಿಂದಿನ ಬರಹಗಳು:
ಮೊದಲ ಮುಲಾಖತ್ತಿನ ಡಾವಣಗೇರಿ
ಬರೆಯುವ ನನ್ನ ಬಲಗೈಯೇ ಮುರಿದಿದೆ....
ಹೊಸ ಸರ್ಕಾರ : ಸಾಂಸ್ಕೃತಿಕ ಸೋಗಲಾಡಿಗಳ ಬಗ್ಗೆ ಇರಲಿ ಎಚ್ಚರ
ಜನಸಂಪರ್ಕ ಎಂಬ ಮಾಯಾವಿ ಮತ್ತು ಚುನಾವಣೆ ಕಾಲದ ವಾಸ್ತವಗಳು
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯುತ್ತಿರುವ ರಂಗಮೌಲ್ಯಗಳು
ಕಲಬುರ್ಗಿ ಸ್ಥಾನೀಯ ಸಮಾವೇಶದಲ್ಲಿ ಅನಾವರಣಗೊಂಡ ಕಥನಗಳು
ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಯಡ್ರಾಮಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ

ಮೊಟ್ಟಮೊದಲ ಕಥಾ ಸಂಕಲನ‌ 'ಮುಟ್ಟು' ಎಂದರೆ...
ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು
ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ

MORE NEWS

ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ

12-05-2024 ಬೆಂಗಳೂರು

"ಕನ್ನಡಕ್ಕೆ ಒದಗಿದ ಪಾಗದ ಯಾವುದು ಎಂಬುದು ಅಸ್ಪಶ್ಟ. ಅಂದರೆ, ಉತ್ತರದಲ್ಲಿ ಹಲವು ಪ್ರಾಕ್ರುತಗಳು ಇದ್ದವು. ಇವುಗಳಲ...

ಅಕಟಕಟಾ ಎರಡು ಸಾವಿರದಾ ಎಂಟುನೂರು ಸೆಕ್ಸ್ ವಿಡಿಯೋಗಳಂತೆ!?

10-05-2024 ಬೆಂಗಳೂರು

"ವಿಷಯ ಏನೆಂದರೆ ಬಯಲಿಗೆ ಬಂದುದು ಮತ್ತು ಮೂರು ಅತ್ಯಾಚಾರದ ಎಫ್. ಐ. ಆರ್. ಪ್ರಕರಣಗಳು ದಾಖಲೆ ಆಗಿರುವುದು. ಹಾಸನ ಗ...

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...