ನಿನ್ನೆದೆಯ ಮೇಲೆ ನಾನೊಂದು ಪುಟ್ಟ ಗೆರೆ ಸರಿ ರಾತ್ರಿಯಲಿ ಕಂಡ ಕನಸೇ

Date: 30-05-2023

Location: ಬೆಂಗಳೂರು


“ಬೇಡವೆಂದು ಬಿಡುವುದು ಆದರೆ ಮತ್ತೆ ಮತ್ತೆ ನಾವೇ ಬಂಧನಕ್ಕೆ ಸಿಕ್ಕಿಕೊಳ್ಳುವುದು ಯಾಕೋ ಗೊತ್ತಾಗುತ್ತಿಲ್ಲ. ಬರಿಯ ಚಂದ್ರ ಮಾತ್ರವಲ್ಲ ಶ್ಯಾಮು ಮತ್ತು ನಿಹಾರಿಕಾಳ ಮಧ್ಯೆಯೂ ಅದೇ ಆಗಿದ್ದು. ನಾನು ಚಂದ್ರನನ್ನು ಶ್ಯಾಮುವಿಗೆ ಹತ್ತಿರ ಮಾಡಲಿಕ್ಕೆಂದು ಹೋಗಿ ನಿಹಾರಿಕಾಳನ್ನು ಹತ್ತಿರವಾಗಿಸಿದ್ದೆ,” ಎನ್ನುತ್ತಾರೆ ಅಂಕಣಗಾರ್ತಿ ಪಿ. ಚಂದ್ರಿಕಾ. ಅವರು ತಮ್ಮ ‘ನಡೆಯದ ಬಟ್ಟೆ’ ಅಂಕಣದಲ್ಲಿ ‘ನಿನ್ನೆದೆಯ ಮೇಲೆ ನಾನೊಂದು ಪುಟ್ಟ ಗೆರೆ ಸರಿ ರಾತ್ರಿಯಲಿ ಕಂಡ ಕನಸೇ’ ಕುರಿತ ವಿಚಾರವನ್ನು ಕಟ್ಟಿಕೊಟ್ಟಿದ್ದಾರೆ.

ಶ್ಯಾಮು ಚಂದ್ರನ ಜೊತೆ ನಿಹಾರಿಕಾಳ ಬಗ್ಗೆ ಒಂದೂ ಮಾತಾಡಲಿಲ್ಲ. ಚಂದ್ರನಿಗೂ ಅನವಶ್ಯಕವಾದ ಸಿಕ್ಕಲ್ಲಿ ಸಿಕ್ಕಿಕೊಳ್ಳುವುದು ಬೇಕಿರಲಿಲ್ಲ, ಅದಕ್ಕೆ ಅವನೂ ಏನೂ ಕೇಳಲಿಲ್ಲ. ಅವನಿಗೆ ನಿಹಾರಿಕಾಳಿಂದ ಎಲ್ಲವೂ ಗೊತ್ತೇ ಆಗಿರುತ್ತದೆ. ಎಲ್ಲರೂ ಬಯಸುವುದೂ ಸ್ವತಂತ್ರವನ್ನೇ ತಾನೆ? ಸಂಬಂಧ ಕಟ್ಟಿಕೊಳ್ಳುವಾಗ ಪ್ರಜ್ಞಾಪೂರ್ವಕವಾಗಿ ಎಲ್ಲವೂ ನಡೆಯಿತು ಎಂದು ಹೇಳುವಂತಿರುವುದಿಲ್ಲವಲ್ಲ. ಹಾಗಾಗಿ ಬಿಡುಗಡೆ ಕೂಡಾ ಸುಲಭದ್ದಲ್ಲ. ಶ್ಯಾಮು ಯಾಕೋ ಅವನಿಗೆ ಯಾವುದನ್ನೂ ಹೇಳುವ ಉತ್ಸಾಹ ಉಳಿಸಿಕೊಂಡಿರಲಿಲ್ಲ. ಸಂಬಂಧಗಳೇ ಹೀಗೆೆ ಬರಿಯ ವೈರುಧ್ಯಗಳೇ. ಒಂದನ್ನು ಬೇಡ ಎಂದು ಇನ್ನೊಂದಕ್ಕೆ ಆತುಕೊಳ್ಳುತ್ತೇವೆ. ಅರ್ಪಿಸಿಕೊಳ್ಳುತ್ತೇವೆ. ಅದನ್ನೂ ಮರೆತು ಮತ್ತೆ ತಪ್ಪುಗಳ ಲೆಕ್ಕ ಇಡುತ್ತೇವೆ. ಇದ್ಯಾವ ಅರ್ಪಣೆ? ಇದ್ಯಾವ ಅವಲಂಬನೆ? ಚಂದ್ರನ ಜಗತ್ತಿನಲ್ಲಿ ಇದ್ದ ಎಲ್ಲವೂ ಒಮ್ಮೆಲೆ ಅಳಿಸಿ ಮತ್ತೊಂದೇ ಚಿತ್ರ ಬರೆದುಕೊಳ್ಳಲಿಕ್ಕೆ ಕ್ಯಾನ್ವಾಸ್ ಉತ್ಸಹದಿಂದ ಖಾಲಿ ಆದಂತೆ ಇತ್ತು. ಅದರೆ ಶ್ಯಾಮು ಮಾತ್ರ ತನ್ನ ಕ್ಯಾನ್ವಾಸಿನಲ್ಲಿ ಇನ್ನೂ ಉಳಿದಿರುವ ಬಣ್ಣಗಳನ್ನು ಕಾಣದಂತೆ ಅದರ ಮೇಲೆ ಬಿಳಿಯ ಬಣ್ಣವನ್ನು ಹಚ್ಚತೊಡಗಿದ್ದಳು. ಪ್ರಖರವಾದ ಯಾವ ಬಣ್ಣವೂ ಮರೆಯಾಗಲಿಲ್ಲ. ಶ್ಯಾಮು ಗೊಣಗಿದ್ದಳು, `ಎದೆಯಿಂದ ಜಾರಿಹೋದ ಸುಖವೂ ಈಗ ದುಃಖವೇ, ಇನ್ನೂ ಗಾಢವಾದ ಬಣ್ಣಗಳನ್ನು ಹಚ್ಚಬೇಕು ಎಲ್ಲವೂ ಮರೆಯಾಗಲು’.

ಬೇಡವೆಂದು ಬಿಡುವುದು ಆದರೆ ಮತ್ತೆ ಮತ್ತೆ ನಾವೇ ಬಂಧನಕ್ಕೆ ಸಿಕ್ಕಿಕೊಳ್ಳುವುದು ಯಾಕೋ ಗೊತ್ತಾಗುತ್ತಿಲ್ಲ. ಬರಿಯ ಚಂದ್ರ ಮಾತ್ರವಲ್ಲ ಶ್ಯಾಮು ಮತ್ತು ನಿಹಾರಿಕಾಳ ಮಧ್ಯೆಯೂ ಅದೇ ಆಗಿದ್ದು. ನಾನು ಚಂದ್ರನನ್ನು ಶ್ಯಾಮುವಿಗೆ ಹತ್ತಿರ ಮಾಡಲಿಕ್ಕೆಂದು ಹೋಗಿ ನಿಹಾರಿಕಾಳನ್ನು ಹತ್ತಿರವಾಗಿಸಿದ್ದೆ. ಶ್ಯಾಮು ನಿಹಾರಿಕಾಳನ್ನು ಪದೇ ಪದೇ ಭೇಟಿ ಮಾಡಿದ್ದಳು. ಅವರಿಬ್ಬರ ಮಧ್ಯೆ ಜಗತ್ತಿಗೆ ಅರ್ಥವಾಗದ ಒಂದು ಬಂಧ ಬೆಳೆದುಬಿಟ್ಟಿತ್ತು. ಅವಳಲ್ಲಿ ಅಂಥಾ ಆಕರ್ಷಣೆಯಾದರೂ ಏನು? ತನ್ನ ಸ್ಥಾನವನ್ನು ತುಂಬುವ ಅವಳ ಬಗ್ಗೆ ಕುತೂಹಲವೇ? ಕೇಳಿದ್ದಕ್ಕೆ, `ಊಹುಂ ಹುಟ್ಟಿದ ಮಗುವಿಗೆ ಹಸಿವಿನ ಅನುಭವ ಹೇಗಾಗುತ್ತೆ? ಗೊತ್ತಿಲ್ಲ. ಮಗು ಹಸಿವಿಗೆ ಅಳುತ್ತೆ ಅಂತ ತಾಯಿಗೆ ಗೊತ್ತಾಗುತ್ತೆ. ಆದರೆ ಮೊಲೆಯ ಕಲ್ಪನೆಯೂ ಇಲ್ಲದ ಕರುವು ಹುಟ್ಟಿದ ಸ್ವಲ್ಪ ಹೊತ್ತಿಗೇ ಎದ್ದು ಮೊಲೆಯನ್ನು ಹುಡುಕಿ ಹೊರಟೇ ಬಿಡುತ್ತಲ್ಲ. ಇದೇ ಕಣೇ ಸಂಬಂಧ ಎಂದರೆ. ನಿಹಾರಿಕಾಳ ಬಗ್ಗೆ ನನಗಿರುವುದು ಅನುಕಂಪ ಖಂಡಿತಾ ಅಲ್ಲ, ನನ್ನ ನಾನು ಕಂಡುಕೊಳ್ಳುವ ಪ್ರಯತ್ನದಲ್ಲಿ ಅವಳೂ ಒಂದು ಮೆಟ್ಟಿಲಾದಳಲ್ಲಾ ಅದು ಕೃತಜ್ಞತೆ’ ಎಂದಿದ್ದಳು. ನಾನು ಸ್ವಲ್ಪ ವ್ಯಂಗ್ಯವಾಗೇ, `ಆಯ್ತು ಬಿಡು ನಭೋ ವ್ಯೂಹ ಅಂತಾನೇ ನಕ್ಷತ್ರ ಯಾತ್ರೆ ಅಂತಾನೋ ಒಂದು ಸೀರೀಸ್ ಬರೆದುಬಿಡು’ ಎಂದೆ. ಖೇದದಿಂದ `ಅನುಭವಕ್ಕಾಗೇ ನಾನಿದೆಲ್ಲಾ ಮಾಡ್ತಾ ಇದೀನಿ ಅಂದುಕೊಳ್ತಾ ಇದೀಯಾ ತೇಜೂ? ಇಲ್ಲ ಕಣೆ ಮನುಷ್ಯನಿಗೆ ಮಾತ್ರ ಎಲ್ಲ ಅನುಭವಗಳನ್ನೂ ಹೇಳಿಕೊಳ್ಳಲಿಕ್ಕೆ ನೇಚರ್ ಅವಕಾಶ ಕೊಡುತ್ತೆ. ಅದು ಮನುಷ್ಯನಿಗೆ ಮಾತ್ರ ಕೊಟ್ಟಿದೆ ಎನ್ನುವುದು ಸುಳ್ಳು. ಮಾತು, ಬಣ್ಣ, ಹೀಗೆ ಕಲೆ ಇದೆಯಲ್ಲ ಇದರಿಂದ ನಾವು ದೊಡ್ಡವರಾಗುತ್ತೇವೆ ಎಂದುಕೊಂಡು ಬಿಡುತ್ತೇವೆ. ಮರವೊಂದು ತಾನಿರುವ ತನಕ ತನ್ನೆದೆಯ ಮೇಲೆ ಹೂವರಳಿಸುತ್ತಲೇ ಇರುತ್ತದಲ್ಲಾ! ಅದ್ಯಾಕೆ ಅಹಂಕಾರ ಪಡಲ್ಲ. ನನ್ನ ನಡೆ ವಿಚಿತ್ರ ಅನ್ನಿಸಿದ್ರೆ ಗೊತ್ತಿಲ್ಲ. ಅಷ್ಟಕ್ಕೂ ಎಲ್ಲವನ್ನೂ ನಾನು ಚಿತ್ರ ಮಾಡ್ತೀನಿ ಅಂತ ಯಾಕಂದುಕೊಳ್ತೀಯ? ಕಂಡ ಯಾವುದೋ ದುರ್ಘಟನೆ ನನ್ನ ಚಿತ್ರಕ್ಕೆ ವಸ್ತುವಾಗಲಿ ಎಂದು ನೋಡಿದಾಗ ನನಗೆ ನಾಚಿಕೆಯಾಗುತ್ತೆ. ಯಾಕೆ ಅವೆಲ್ಲ ಚಿತ್ರವಾಗಿ ಮಾರ್ಪಾಡಾಗಬೇಕು ನಾನು ಹಾಗೆ ನೋಡಬೇಕು? ಅಲ್ಲಿಗೆ ಎಲ್ಲವೂ ಕರಗಿ ಆಂತರಂಗಿಕವಾಗಿ ಅರಳುವ ಶಕ್ತಿಯನ್ನೇ ಮರೆತು, ಡಿಫರೆಂಟ್ ಎನ್ನುವ ಸಮ್ಮೋಹಕ ಪದದ ಹಿಂದೆ ಬೀಳುತ್ತೇವೆ. ಹಾಗಾದಗಲೇ ಶುರುವಾಗುತ್ತೆ ನೋಡು ವ್ಯರ್ಥ ಪ್ರಯತ್ನ.

ಕೆಲವು ಸಲ ಎಲ್ಲಾ ಕಲಾವಿದರೂ ಹೀಗೆ ಸ್ಥಗಿತಗೊಳ್ಳುತ್ತೇವೆ. ಯಾಕೆಂದರೆ, ನಾನು ಜಗತ್ತಿನ ಅತ್ಯಂತ ಅದ್ಭುತ ನಿರ್ಮಾತೃ ಎಂದು ಭಾವಿಸಿಬಿಡುತ್ತೇವೆ. ವಿಶಾವಾದದ್ದನ್ನು ಹಿಡಿದೆ, ಹಿಡಿದೆ ಎನ್ನುತ್ತಾ ಬೇರಿಗೆ ಕತ್ತರಿಯನ್ನಿಕ್ಕಿ ಬೃಹತ್ ಆಗಿ ಬೆಳೆಯುವ ಶಕ್ತಿಯ ಆಲದ ಮರವನ್ನು ಕೂಡಾ ಪಾಟಿನಲ್ಲಿ ತಂದು ನೆಟ್ಟು ಅಲ್ಲೇ ಬಿಳಲು ಬಿಡುವುದನ್ನು ತೋರಿಸುವ ಹುನ್ನಾರಕ್ಕೆ ಬೀಳುತ್ತೇವೆ. ಅಗಾಧವಾದದ್ದನ್ನು ಅಪರಿಮಿತವಾಗೇ ಹೇಳಬೇಕು. ಆದರೆ ಮುರಿದು ಕಟ್ಟಲಿಕ್ಕೆ ಹೊರಟುಬಿಡುತ್ತೇನೆ. ಅದು ಮತ್ತೆ ಕಟ್ಟಾಗುತ್ತದೆಯೇ? ಗೊತ್ತಿಲ್ಲ ಆದರೆ ನಾವೆಲ್ಲಾ ಅಂದುಕೊಳ್ಳುತ್ತೇವೆ ಸಂಗಮದ ಸಾಮ್ರಾಜ್ಯವನ್ನು ಹೀಗೆ ಕಟ್ಟಿಬಿಡುತ್ತೇವೆ ಎಂದು. ಕಟ್ಟಿದ್ದೇವೆ ಎಂದ ಮೇಲೆ ಬಿಚ್ಚುವುದು ಸಾಧ್ಯತೆಯೇ ತಾನೆ. ನಿನಗೆ ನೆನಪಿದೆಯ ನಾವು ಸಣ್ಣವರಿದ್ದಾಗ ಪೇಪರ್ ಮತ್ತು ಕತ್ತರಿ ಸಿಕ್ಕರೆ ಮನಸೋ ಇಚ್ಚೆ ಕತ್ತರಿಸುತ್ತಿದ್ದುದು. ಕತ್ತರಿಸಿದ ಮೇಲೆ ನಮಗನ್ನಿಸುತ್ತಿತ್ತು ಇದನ್ನು ಮೊದಲಿನ ಹಾಗೆ ಮಾಡಬೇಕೆಂದು ಅಲ್ಲಿಂದ ಶುರುವಾಗುತ್ತಿತ್ತಲ್ಲವೇ ನಮ್ಮ ಸರ್ಕಸ್. ಕತ್ತರಿಸುವುದು ಸುಲಭವೇ. ಆದರೆ ಅದನ್ನು ಮತ್ತೆ ಮೊದಲಿನ ಹಾಗೆ ಮಾಡುವುದು ಅದು ಸ್ವತಃ ಬ್ರಹ್ಮನಿಂದಲೂ ಸಾಧ್ಯವಿಲ್ಲ. ಈಗ ನಮ್ಮ ಸಾಧನೆ ನೋಡಿದ್ದೀಯಾ? ಇಲ್ಲಿ ಮುರಿದ ಮನಸ್ಸುಗಳದ್ದೇ ಕೊಲಾಜು. ಮುರಿದಿದೆ ಎಂದು ಗೊತ್ತಾದ ತಕ್ಷಣ ಅದು ಕಾಣದಿರುವ ಹಾಗೆ ಅಂಟಿಸಲು ನೋಡುತ್ತೇವೆ, ಆಗಲಿಲ್ಲ ಎಂದರೆ ವಿನ್ಯಾಸ ಮಾಡುವುದಕ್ಕೆ ಇಳಿಯುತ್ತೇವೆ. ಅದನ್ನೇ ಆಕರ್ಷಕವಾಗಿ ಜೋಡಿಸಲು ತೊಡಗುತ್ತೇವೆ, ಗೋಡೆಗಳ ಮೇಲೆ ಮುರಿದ ಟೈಲುಗಳ ಕೊಲಾಜು, ಯಾರೋ ಕಳಿಸುವ ಗ್ರೀಟಿಂಗ್ಸ್, ವೆಡ್ಡಿಂಗ್ ಕಾರ್ಡ್ ಹೀಗೆ ಎಲ್ಲದರ ಮೇಲೆ ಇರುವ ಗಣಪತಿ ಕೂಡಾ ಮುರುಕನೇ. ಇಂಥಾದ್ದನ್ನು ನೋಡಿದಾಗಲೇ ಕಣೆ ಯಾವ ಭಾವಕ್ಕೋ ಎದೆಯೊಡ್ಡಿನಿಂತ ಗುಲಾಮೀತನ ನನ್ನ ಕಾಡುವುದು. ಸ್ವಲ್ಪ ವರ್ಷಗಳ ಹಿಂದಿನ ವರೆಗೂ ಎಲ್ಲವನ್ನೂ ಕತ್ತರಿಸುತ್ತಿದ್ದೆ, ಅಂಟಿಸುತ್ತಿದ್ದೆ. ಅದೊಂದು ಆಟವಾಗಿಬಿಟ್ಟಿತ್ತು. ಅದರಲ್ಲಿ ಏನೂ ಇರಲಿಲ್ಲ. ಆದರೆ ನಾನು ಪ್ರೂವ್ ಮಾಡಿಬಿಟ್ಟಿದ್ದೆನಲ್ಲಾ ಕಲಾವಿದೆ ಅಂತ, ಜಗತ್ತಿನ ಹುಚ್ಚು ನೋಡು, ಏನೂ ಇಲ್ಲದ ಕಡೆಯಲ್ಲಿಯೂ ನನ್ನನ್ನು ಕಲಾವಿದೆ ಎಂದೇ ಕಾಣಿಸುತ್ತಿತ್ತು, ಆಹಾ ಎಂದು ಕೊಂಡಾಡಿಬಿಟ್ಟಿತ್ತು.

ಯಂತ್ರದ ಪಕ್ಕದಲ್ಲಿ ಒಂದು ಜೀವಂತ ಕಣ್ಣು, ಕೈಕಾಲು ಬಡೆಯುವ ಮಗುವಿನ ಪಕ್ಕದಲ್ಲೊಂದು ಸೈಕಲ್ಲು, ಫ್ರಿಜ್‌ನಲ್ಲಿ ಬಾಡದ ಯಾವುದೋ ಸೊಪ್ಪು... ಹೀಗೇ ಏನೇನೋ ಚಿತ್ರಗಳನ್ನು ಮಾಡಿದ್ದೆ. ಅದಕ್ಕೆ ಕೊಲಾಜ್ ಅಂತಲೂ ಹೆಸರುಕೊಟ್ಟಿದ್ದೆ. ಪತ್ರಿಕೆಯೊಂದರಲ್ಲಿ ಹೆಣ್ತನದ ವಿಕ್ಷಿಪ್ತ ಜೋಡಣೆ ಎಂದೆಲ್ಲಾ ಬರೆದರು. ಇರಬಹುದೋ ಏನೋ ಜೋಡಿಸುವುದೂ ಒಂದು ಕಲೆ. ನನ್ನ ಇಂಟರ್ವೂ್ಯ ಮಾಡಿದಾಗ ಅದಕ್ಕೆ ನಾನೂ ಇನ್ನೊಂದು ಇಂಟಪ್ರಿಟೇಷನ್ ಕೊಟ್ಟ್ಟೂಬಿಟ್ಟಿದ್ದೆ. ಸುಳ್ಳು ಹೇಳುವುದರಲ್ಲಿ ಒಂದು ರೋಚಕತೆ ಇದೆ ತೇಜೂ. ನನಗೆ ನನ್ನ ಚಿತ್ರಗಳು ಹೆಚ್ಚು ಆಪ್ತವೂ ಪ್ರಿಯವೂ ಆಗಿ ಕಂಡಿದ್ದವು. ಈಗ ಅದೆಲ್ಲಾ ಹುಚ್ಚಾಟ ಅನ್ನಿಸುತ್ತೆ, ಹುಟ್ಟಿಸಲಾಗದೇ ಇದ್ದಾಗ ಇದೂ ಕಸರತ್ತು ಮುಂದೆ ಬರಬಹುದೇನೋ. ಅಂಥಾದ್ದು ಒಂದು ಸ್ಥಿತಿ ನನಗೆ ಬಂದದ್ದು ಜಗತ್ತು ನನ್ನನ್ನು ಕಾಣಲೇ ಬೇಕು ಎನ್ನುವ ಹಟಕ್ಕೆ ಬಿದ್ದಾಗ. ನನ್ನದಲ್ಲದ ಜಾಗದಲ್ಲಿ, ನನ್ನದಲ್ಲದ ಕನಸಿನಲ್ಲಿ ಎಷ್ಟು ಹೊತ್ತು ವಿಹರಿಸಲಿ ಹೇಳು? ನನ್ನದಲ್ಲ ಅಂತ ಗೊತ್ತಾದ ಮೇಲೆ ಅದು ನರಕವಾಗುತ್ತದೆ. ಅಸಂಭವವಾದದ್ದನ್ನು ಸಂಭವಿಸಿದೆ ಎಂದು ನಂಬಿಸಬಹುದು ನಂಬಿಸಿದರೆ ಯುದ್ಧ ಗೆದ್ದಹಾಗೆ. ನಾನು ಹಾಗೆ ತುಂಬಾ ಸಲ ಗೆದ್ದಿದ್ದೇನೆ... ಇತರರು ಮಂಕಾಗುವ ಹಾಗೆ ನೋಡುಗರ ಕಣ್ಣಿಗೆ ಪರದೆಯನ್ನೆಳೆದು ಗೆದ್ದಿದ್ದೇನೆ. ಆದರೆ ನನ್ನ ಆಂತರ್ಯಕ್ಕೆ ತಿಳಿಯದೆ ಇರುತ್ತದೆಯೇ ನೀನೇ ಹೇಳು? ಚಂದ್ರ ಇದರ ಬಗ್ಗೆ ಎಚ್ಚರಿಸಿದ್ದ, `ಜಾಡಿಗೆ ಬಿದ್ದು ಬರೆಯುತ್ತಿದ್ದೀಯೇ ಇದು ಬಹು ಕಾಲ ಉಳಿಯಲಾಗದು’ ಎಂದು. ಈಗಲೂ ನನ್ನ ಬಗ್ಗೆ ನನಗೆ ಅಸಹ್ಯ ಹುಟ್ಟುತ್ತದೆ; ಅಂದು ಚಂದ್ರನಿಗೆ ತನಗಿಂತ ನನಗೆ ಹೆಚ್ಚು ಪ್ರಚಾರ, ಪ್ರಸಿದ್ಧಿ ಸಿಕ್ಕುತ್ತಿದೆ ಎನ್ನುವ ಹೊಟ್ಟೆಕಿಚ್ಚು ಎಂದುಕೊಂಡಿದ್ದೆ. ಅದನ್ನು ಮಾತುಗಳಲ್ಲಿ ಹೇಳಲಿಲ್ಲ, ಆದರೆ ನನ್ನ ವರ್ತನೆ ಅದನ್ನೇ ಕಾಣಿಸಿತ್ತು. ನನಗೂ ಅಹಂಕಾರ ಬಂದಿತ್ತು. ತಪ್ಪು ನಾನೂ ಮಾಡಿದ್ದೇನೆ

ತೇಜೂ, ತಿಳಿದೂ, ತಿಳಿಯದೆಯೂ ಚಂದ್ರನನ್ನು ನೋಯಿಸಿದ್ದೇನೆ. ಆದರೆ ಚಂದ್ರ ಅದನ್ನು ಒಮ್ಮೆಯೂ ಹಾಗೆ ಹೇಳಲಿಲ್ಲ. ಹೀಯಾಳಿಸಲಿಲ್ಲ. ಅರ್ಥವಾಯಿತು ಎಲ್ಲವೂ, ಅರ್ಥ ಮಾಡಿಕೊಂಡೆ. ಹನಿ ಮಗುವಿದ್ದಾಗ ನಾನು ಎಷ್ಟು ಸಲ ಯೋಚಿಸಿದ್ದೆ ಗೊತ್ತಾ? ಜಗತ್ತನ್ನು ಇವಳು ಹೇಗೆ ಅರ್ಥ ಮಾಡಿಕೊಳ್ಳುತ್ತಾಳೆ, ಅವಳ ಮನಸ್ಸಿನಲ್ಲಿ ಹೇಗೆ ಯೋಚನೆ ಬರುತ್ತದೆ ಎನ್ನುವುದೇ ನನಗೆ ಸೋಜಿಗವಾಗಿತ್ತು. ಮಗುವಿನ ಎದೆಯಲ್ಲಿ ಮೂಡುವ ಎಲ್ಲ ಕಲ್ಪನೆಗಳೂ ನಮ್ಮೆದೆಯ ಬೆರಗಿನ ಅನಂತಕ್ಕೆ ತೆರೆದುಬಿಡುತ್ತದೆ. ಯಾಕೆಂದರೆ ಅದು ಘಟಿಸುವುದು, ಅಂಟಿಸುವುದಲ್ಲ. ಕಟ್ಟಳೆಗಳ ಅರಿವಿಲ್ಲದ, ಕಟ್ಟಳೆಗಳೇ ಇಲ್ಲದ ಮಕ್ಕಳು ಮಾತ್ರ ನಮ್ಮನ್ನು ಮುನ್ನಡೆಸುತ್ತಾರೆ ಅಲ್ಲವೇನೇ? ನಮಗೆ ಗೊತ್ತಿರುವ ಅದಕ್ಕೆ ಗೊತ್ತಿಲ್ಲದ ಕೆಲಸವನ್ನು ಅದು ಮಾಡ ಹೊರಟಾಗ ತಿಳಿಹೇಳುವಂತೆ, `ದಡ್ಡ ಮುಂಡೇದೇ’ ಎನ್ನುತ್ತಾ ಖುಷಿಯಿಂದ ನೋಡುತ್ತೇವೆ. ಹರಿದಾಡುವ ಯಾವುದರ ಹಿಂದಾದರೂ ಸರಿ ಅದರ ಗಮನ, ಉರಿವ ದೀಪಕ್ಕೆ ಕೈ ಹಚ್ಚಿ÷ ಸುಟ್ಟ ನಂತರವೇ ಮುಟ್ಟದ ಎಚ್ಚರಿಕೆ, ದಿನವೂ ಕಲಿಕೆಯ ಪಾಠಗಳು ಒಂದೆ ಎರಡೇ ಎಂಥಾ ಹುಷಾರಿ ಎಂದರೆ ಮತ್ತೆ ಆ ಕೆಲಸವನ್ನು ಅವು ಮಾಡಿದ್ದರೆ ಕೇಳು ಅಂಥಾ ನೆನಪು. ಹನಿ ನನ್ನ ಪಾಲಿನ ಬಹು ದೊಡ್ದ ಗುರುವಾಗಿದ್ದು ಹೀಗೆ. ಅವಳಿಂದ ಕಲಿತಿದ್ದೇನೆ ಈಗ ಅವಳಿಗೆ ಏನು ಹೇಳಲೇ?

ಅಷ್ಟೆಲ್ಲಾ ಪ್ರಶಂಸೆಯ ಮಧ್ಯೆಯೂ ಮತ್ಯಾಕೆ ನಾನು ಕೊಲಾಜ್ ಮಾದರಿಯ ಚಿತ್ರವನ್ನು ಬರೆಯಲಿಲ್ಲ! ನಿಜಕ್ಕೂ ನಾನು ಕಂಗಾಲಾಗಿದ್ದೆ. ಹಣ್ಣು, ಕಾಯಿ, ಬಣ್ಣದೆಲೆ ಎಲ್ಲವೂ ಬಾಡಿದವು, ಝಳ ಯಾವುದರದ್ದೆ? ಒರಳ ಮೇಲಿದ್ದ ತೆಗೆದಿಟ್ಟ ರುಬ್ಬು ಗುಂಡು, ಮುಸ್ಸಂಜೆ ಹೊಸ್ತಿಲ ಮೇಲೆ ಆಪಾದ ಮಸ್ತಕ ಗೋಳಿಡುತ ಕುಳಿತ ಮಗು, ಸಾವಿರ ಸಾವಿರ ನೆನಪುಗಳ ನುಂಗು ಕುಳಿತ ಕಾಲಕ್ಕೆ ಏನೆಂದು ಕರೆಯಲೇ? ಶಬ್ದಗಳೆಲ್ಲಾ ನಿಘಂಟುಗಳನ್ನು ಹರಿದು ಮಾಯವಾಗುವಾಗ ನಾನು ಯಾವ ಪದಕ್ಕೆ ಹುಡುಕಾಟ ನಡೆಸಿದ್ದೆ? ಯಾವ ಗೆರೆಯನ್ನೆಳೆದು ಯಾವ ಬಣ್ಣವನ್ನು ಹಚ್ಚಿ ಜೀವಂತಗೊಳಿಸಿದ್ದೆ?

ಬಹುಶಃ ನನಗೆ ಸಾವಯವತೆಯ ಬಗ್ಗೆ ಇದ್ದ ನಂಬಿಕೆ ಅಂಥಾದ್ದಿದ್ದೀತು. ಅದಕ್ಕೆ ಮತ್ತೆಂದೂ ಮುರಿಯುವ ಗೋಜಿಗೆ ಹೋಗಬಾರದೆಂದು ನಿರ್ಧಾರ ಮಾಡಿಬಿಟ್ಟಿತ್ತೇನೋ ಮನಸ್ಸು. ಕೊನೆಗೂ ಅನ್ನಿಸಿದ್ದು ಇವೆಲ್ಲಾ ಹೊರೆಯೋ ಏನೋ? ಸುಮ್ಮನಿರಬೇಕು ಅಂದುಕೊಂಡಾಲಆದರೆ ಸನ್ನಿವೇಶಗಳು ನನ್ನ ಸುಮ್ಮನೆ ಬಿಟ್ಟಿಲ್ಲ. ಖಾಲಿಯಾದೆ ಬರೆಯಲು ಇನ್ನೇನೂ ಇಲ್ಲ ಅಂದುಕೊಳ್ಳುವಾಗ ಒಂದರ ಹಿಂದೆ ಸಾಲಿಟ್ಟುಕೊಂಡು ಕೂತ ಮಕ್ಕಳಂತೆ ಅನುಭವಗಳು ನಾನಿಲ್ಲವೇನೇ, ನನ್ನೇನು ಮಾಡುತ್ತೀಯ? ಎಂದು ನಕ್ಕು ಬಿಡುತ್ತವೆ. ನಾನು ಬರೆಯುವವರೆಗೂ ಸುಮ್ಮನೆ ಪಕ್ಕಕ್ಕಿರಿ ಎಂದು ಹೇಳಿದ್ದರೂ, ಇಣುಕಿ ನೋಡಿ ನಾನಿದ್ದೇನೆ ಎಂದು ಆಗಾಗ ಮುಖ ತೋರಿಸುತ್ತವಲ್ಲ ತರಲೆಗಳು. ಆದರೆ ಅವುಗಳದ್ದೂ ಒಂದೊಂದು ಪಯಣವಿರುತ್ತದೆ. ಅವು ನಮಗೆ ಸನ್ನಿವೇಶದಲ್ಲಿ ಗೋಚರಿಸಿದ್ದರೂ ನಾವು ಅವುಗಳಿಗೆ ಸನ್ನಿವೇಶವಾಗಬೇಕಲ್ಲ, ಅಲ್ಲಿಯವರೆಗೂ ಕಾಯಲೇಬೇಕು. ಆದರೆ ಅವು ಅಲ್ಲಿವೆ ಎನ್ನುವುದು ಎಂಥಾ ದೊಡ್ಡ ಸಮಾಧಾನ ಗೊತ್ತಾ? ಅವು ನನ್ನನ್ನು ಸರಿರಾತ್ರಿಯಲ್ಲಿ ಕಂಡ ಕನಸಿನ ಎದೆಯ ಮೇಲೆ ಸಣ್ಣ ಗೆರೆಗಳಾಗಿಸುತ್ತವೆ’

ಶ್ಯಾಮು ತನ್ನ ಗಾಳಿಪಟ ಮೇಲೆ ಹೋಗಬೇಕು ಎಂದು ಹಠಮಾರಿಯಂತೆ ಏರಿಸುತ್ತಲೆ ಇರುತ್ತಿದ್ದಳು. ಹಾಕಿದ್ದ ಲಂಗ ಗುಂಬಸ್ಸಾಗಿ ಅದನ್ನು ಒತ್ತಿ ಹಿಡಿಯಲಾ? ಹಿಡಿದ ದಾರವನ್ನು ಸ್ವಲ್ಪ ಸ್ವಲ್ಪವೇ ಸಡಿಲ ಬಿಡಲಾ? ಎಂದು ಇಬ್ಬಂದಿತನದಲ್ಲಿ ಒದ್ದಾಡುವ ಹಾಗೆ ಕಾಣುತ್ತಿದ್ದಳು. ಎಲ್ಲದರ ನಡುವೆ ಅವಳ ಆತಂಕ ಹನಿಯದ್ದಾಗಿತ್ತು. ಅವಳನ್ನು ಒಪ್ಪಿಸುವುದು ಹೇಗೆ? ಹನಿ ಸಣ್ಣ ಹುಡುಗಿಯೇನಲ್ಲ ಪ್ರಪಂಚ ಅರ್ಥ ಮಾಡಿಕೊಳ್ಳುವುದು ಅವಳಿಗೆ ಸಾಧ್ಯವಿತ್ತು. ಆದರೂ ನಿನ್ನಪ್ಪ ಹೀಗೆಂದು ಹೇಗೆ ಹೇಳುವುದು? ಗಂಡಸಿನ ಬಗ್ಗೆ ಅವಳಲ್ಲಿ ಮೂಡುವ ಅಭಿಪ್ರಾಯವಾದರೂ ಎಂಥಾದ್ದಾಗುತ್ತದೆ? ಅಪ್ಪ ಅವಳ ಪಾಲಿಗೆ ಅಪ್ಪನಾಗೇ ಉಳಿಯಬೇಕಲ್ಲವೇ ತೇಜೂ, ಎಂದೂ ಗಂಡಸಿನ ಹಾಗೆ ಆಗಬಾರದು. ಅದಕ್ಕೆ ಇದೇ ಆತ್ಯಂತಿಕ ಸತ್ಯ ಎಂದು ಚಂದ್ರ ಹೇಳುತ್ತಿದ್ದರೂ ನಾನು ಮೊಳಕಾಲು ಊರಿದ್ದೇನೆ ನನ್ನ ಪಾರ್ಥನೆ ನಿಜವಾಗಲಿ ಎಂದು’.

ನಿಜ ಶ್ಯಾಮು ಬದುಕನ್ನು ಸೀಳಿ ಹುಟ್ಟಿಕೊಂಡ ಭಾವಗಳ ಜೊತೆ ಹೆಜ್ಜೆ ಹಾಕುವಷ್ಟು ಪಳಗಿಬಿಟ್ಟಿದ್ದಳು. ನಡು ಹಗಲುಗಳು, ನಡು ರಾತ್ರಿಗಳು ಒಂದೇ ಆಗಿ ಬದುಕಬೇಕೆಂದುಕೊಮಡೇ ನಿಹಾರಿಕ ಕೊಟ್ಟ ಚಿತ್ರವನ್ನು ಜೋಪಾನವಾಗಿ ಮನೆಗೆ ತಂದಿದ್ದಳು. `ನಾಳೆ ಇದಕ್ಕೆ ಫ್ರೇಂ ಹಾಕಿಸಬೇಕು’ ಎಂದು ಹೇಳಿಕೊಂಡಿದ್ದಳು. `ಅದೇನು ಅಮೂಲ್ಯವಾದ ವಸ್ತುವೇ ಶ್ಯಾಮು, ನಿನಗೆ ನಿಜಕ್ಕೂ ತಲೆ ಕೆಟ್ಟಿದೆ. ಆಯ್ತು ಬೇಡಾಂತ ಚಂದ್ರನನ್ನು ಬಿಟ್ಟುಕೊಟ್ಟ ಮೇಲೂ ನಿಹಾರಿಕಾಳ ಮೇಲೆ ಯಾಕೆ ಮೋಹ? ಅವಳನ್ನು ನಿನ್ನ ಮನಸ್ಸಿನಿಂದ ಎತ್ತಿ÷ ಎಸೆದು ಬಿಡುವುದನ್ನು ಬಿಟ್ಟು, ಶಾಶ್ವತವಾಗಿಸುವ ಹಾಗೆ ಫ್ರೇಂ ಹಾಕಿ ಎಲ್ಲಿ ಹಾಕಿಕೊಳ್ಳುತ್ತೀಯ?’ ಎಂದು ರೇಗಿದ್ದೆ. `ಎಳವೆಗಳೇ ಹೀಗೆ ನಮ್ಮನ್ನು ಸೆಳೆಯುತ್ತಲೇ ಇರುತ್ತದೆ. ಯಾಕೋ ನಿಹಾರಿಕಾಳನ್ನ ನೋಡಿದರೆ ಚಿಕ್ಕ ವಯಸ್ಸಿನ ನಾನೇ ನೆನಪಾಗುತ್ತಿದ್ದೇನೆ ತೇಜೂ. ಅಷ್ಟಕ್ಕೂ ಅದಲ್ಲವೇ ನನ್ನ ಸಮಸ್ಯೆ. ಬ್ರಹ್ಮಾಂಡದಲ್ಲಿ ಒಂದೊಂದು ವಸ್ತುವಿಗೂ ನಡುವೆ ಬಿಡಿಸಲಾಗದ ಬಂಧನ ಇರುತ್ತದೆ. ಅದನ್ನು ನಾನೂ ನೀನೂ ನಿರ್ಧರಿಸುವುದಲ್ಲ, ಪ್ರಕೃತಿ ನಿರ್ಧರಿಸಿಬಿಟ್ಟಿರುತ್ತದೆ. ನಿಹಾ ನನಗೆ ಇಷ್ಟವಾಗಿದ್ದು ಅವಳ ಮಾತು ನಡೆನುಡಿಗಳಿಂದ ಎಂದುಕೊಂಡರೆ ಅದು ನಿನ್ನ ತಪ್ಪು. ಅನುಭವದ ಬಟ್ಟಲಿಗೆ ನಮ್ಮದೇ ಪಾಕ, ಅದನ್ನು ನಾವೇ ಕುಡಿಯಬೇಕು. ಬಾ ಇಲ್ಲಿ’ ಎನ್ನುತ್ತಾ ಅವಳು ನಿಹಾರಿಕಾಳ ಚಿತ್ರವನ್ನು ನನ್ನಿದಿರು ಹರಡಿಟ್ಟಳು.

ಅದೊಂದು ವಿಕ್ಷಿಪ್ತವಾದ ಚಿತ್ರವಾಗಿತ್ತು. ಆ ಚಿತ್ರದಲ್ಲಿ ವಿಚಿತ್ರವಾದ ಜಿಗಿದಾಟ ಇತ್ತು. ಅದು ಮಾವಿನ ಕಾಯಿಗೋ ಹುಣಸೆಯ ಕಾಯಿಗೋ ಸಣ್ಣ ವಯಸ್ಸಿನಲ್ಲಿ ನಾಲಿಗೆಯಲ್ಲಿ ನೀರೂರಿಸಿಕೊಂಡ ನಾವು ನಮ್ಮ ಕೈಗೆ ಸಿಗದಿದ್ದರೂ ಸಿಕ್ಕಿಸಿಕೊಳ್ಳುವ ಹಠದಲ್ಲಿ ಜಿಗಿಯುತ್ತಿದ್ದೆವಲ್ಲಾ ಅದು. ಹಾಗೆ ಜಿಗಿದಾಗ ಹೆಜ್ಜೆಯ ಒಳಗೆ ಬೆಳಕು ತುಂಬಿ ಅದೇ ರೆಕ್ಕೆಗಳಾಗಿ ಆ ಪಾದವನ್ನೆ ಮೇಲೆಕ್ಕೆ ಹೊತ್ತೊಯ್ಯುವ ಅಸಾಧಾರಣವಾದ ಕ್ರಿಯೆಯೊಂದು ಜರುಗುತ್ತಲ್ಲ ಆ ಅದು ಚಿತ್ರದಲ್ಲಿತ್ತು. ಎಂಥಾ ಕನಸುಕಂಗಳ ಹುಡುಗಿ ಇವಳು ಎಂದಿದ್ದೆ ಅಯಾಚಿತವಾಗಿ. ಮಾತಾಡಿದ ಮೇಲೆ ನಾನು ಶ್ಯಾಮುವನ್ನು ವಿರೋಧಿಸುವುದನ್ನು ಬಿಟ್ಟು ಸಪೋರ್ಟ್ ಮಾಡುವ ಹಾಗೆ ಮಾತಾಡುತ್ತಿದ್ಡೇನಲ್ಲ ಅನ್ನಿಸಿತ್ತು. ಅವಳಿಗೆ ಎಲ್ಲವೂ ಗೊತ್ತಾಗುತ್ತಿತ್ತು. `ಎಲ್ಲವೂ ಅಷ್ಟೇ ಕಣೆ ಅಯಾಚಿತವಾಗೇ ಬರುವುದು’ ಎಂದಿದ್ದಳು. ನಾನು ಭಾವಿಸಿದ್ದೆ ಅದು ನನ್ನ ಮಾತಿಗೆ ಪ್ರತಿಕ್ರಿಯೆ ಎಂದು, ಅಲ್ಲ ಅದು ನಿಹಾರಿಕಾಳ ಪೇಂಟಿಂಗ್‌ನ ಮೇಲಿನ ಕಮೆಂಟ್ ಆಗಿತ್ತು. ತನ್ನಷ್ಟಕ್ಕೆ ಆಗುವ ಪ್ರಕ್ರಿಯೆಯನ್ನು ಅವಳ ಚಿತ್ರಗಳಲ್ಲಿ ಶ್ಯಾಮು ಕಂಡುಕೊಂಡಿದ್ದಳು. ಅದು ಹೇಗೆಂದು ನನಗೂ ವಿವರಿಸಿದ್ದಳು. ಯಾವುದನ್ನೂ ನಿಯಂತ್ರಿಸದ ನಿಹಾಳ ಅಪರೂಪದ ವ್ಯಕ್ತಿತ್ವ ಅವಳ ಚಿತ್ರಗಳಲ್ಲಿ ಫಲಿಸಿತ್ತು. `ಅಬ್ಬಾ ಹುಡುಗಿ’ ಎಂದು ಮತ್ತೆ ಮತ್ತೆ ಶ್ಯಾಮು ಅಸೂಯೆಯ ಛಾಯೆಯೂ ಇಲ್ಲದಂತೆ ಉದ್ಗಾರ ತೆಗೆದಿದ್ದಳು. ಚಂದ್ರ ಅವಳ ಎಳವೆಗೆ ಅಲ್ಲ ಸೋತಿರುವುದು, ಅವಳ ಚಿತ್ರಕ್ಕೆ ಎಂದು ಮತ್ತೆ ಮತ್ತೆ ಹೇಳಿದಾಗ, `ಫಲಿತಾಂಶವನ್ನು ಹೀಗೂ ತಿರುಗಿಸಿಕೊಳ್ಳುವುದೇ ಶ್ಯಾಮೂ’ ಎಂದಿದ್ದೆ. `ಇರಲಿ ಏನೀಗ, ಯಾವುದರಿಂದ ಏನೂ ವ್ಯತ್ಯಾಸವಿಲ್ಲ’ ಎಂದ ಅವಳ ಮುಖದಲ್ಲಿ ನಿರ್ದಿಷ್ಟ ಗುರಿ ಕಂಡುಬಿಟ್ಟಿತ್ತು.

ರೂಪಗಳೆಲ್ಲಾ ಬರಿಯ ಬಾಹ್ಯವಾದರೆ ಉಳಿಯುವುದು ಅತೃಪ್ತಿ ಮಾತ್ರ. ಎಲ್ಲವನ್ನೂ ಹುಡುಕಾಟದಲ್ಲೇ ಕಂಡುಕೊಳ್ಳಬೇಕು, ಪರಿಸ್ಥಿತಿಯನ್ನು ಅದು ಬಂದ ಹಾಗೆ ತೆಗೆದುಕೊಳ್ಳುವ ಆ ತುದಿಯಲ್ಲಿ ನಿಲ್ಲಬೇಕು. ಬೇಕು ಕಾಲ ಬಳಿ ತಳ್ಳಿದರೂ ಛಕ್ಕನೆದ್ದು ನಿಲ್ಲುವ, ಸೋಲನ್ನೂ ಗೆಲುವಾಗಿಸಿಕೊಳ್ಳುವ ತಾಕತ್ತು. ನಾನೆಲ್ಲೇ ಸೋತಿದ್ದೇನೆ, ಸೋತಿದ್ದೇನೆ ಎನ್ನುವುದು ಬರಿಯ ಭಾವನೆಯಷ್ಟೇ ಎಂದು ಬದುಕಿಬಿಡಬೇಕು’.

ಸೋಲೋ, ಗೆಲುವೋ ಅವಳಿಗದರ ಗೊಡವೆ ಇಲ್ಲ. ಕೈಹಿಡಿದು ನಡೆಸಿದ ಅಪ್ಪ ನಾಳೆಯಿಂದ ಇನ್ನೊಂದು ಹೆಣ್ಣಿನ ಜೊತೆ ಇನ್ನೊಂದು ಸಂಸಾರ ಮಾಡುತ್ತಾನೆ, ಹಾಗಾದರೆ ಇಷ್ಟು ದಿನಗಳ ಭರವಸೆ ಎಲ್ಲಿ ಹೋಯಿತು? ಅರ್ಥಕ್ಕೆ ಜೋತುಬಿದ್ದ ಹನಿಯ ಮನಸ್ಸಿನ ಮೇಲೆ ಆಗುವ ಆಘಾತ ಯೋಚಿಸಿದಳೇ ವಿನಃ ತನ್ನ ಬದುಕಿನ ಬಗ್ಗೆ ಅಲ್ಲ. ಒಂದು ರೀತಿಯಲ್ಲಿ ಅದು ಸರಿಯೇ ಕಷ್ಟ ಸುಖ ಕಂಡು ಉಂಡ ನಮಗೆ ಯಾವುದೂ ಸಹಿಸಿಕೊಳ್ಳುವ ಶಕ್ತಿ ಇದೆ. ಆದರೆ ಎಷ್ಟು ದಿವಸಗಳು ಸತ್ಯವನು ಮರೆಮಾಚುವುದು, ಹೇಳದಿದ್ದರೆ ಬೇರೆ ದಾರಿಯಾದರೂ ಯಾವುದು? ಸಂಘರ್ಷಗಳು ಅವೂ ಕೂಡಾ ಒಳಗೇ ಬಲಿಯಬೇಕಲ್ಲವೆ? ಎಲ್ಲವೂ ಎಲೆಮರೆಯಲ್ಲಿ ಹೂವಾಗುವ ಕ್ರಿಯೆ. ಘಮಲು ಮೂಗಿಗೆ ಬಡೆಯುವಾಗ ಹುಡುಕಾಟ ಶುರುವಾಗುತ್ತದೆ. ನಾವು ಅದನ್ನು ಕಾಣುವಷ್ಟರಲ್ಲಿ ಅದು ಬಾಡಿಹೋದರೂ ಆಶ್ಚರ್ಯವಿಲ್ಲ. ಅವಳನ್ನು ನೋಡಿದರೆ ನನಗೆ ಇನ್ನೊಂದೇ ಹೆಜ್ಜೆ, ಮುಕ್ತಿ ಸಿಕ್ಕು ಬುದ್ಧನ ಜೊತೆ ಹೊರಟೇ ಬಿಡುತ್ತಳೇನೋ ಅನ್ನಿಸಿಬಿಟ್ಟಿತ್ತು. `ಮನಸ್ಸನ್ನು ಕಠೋರ ಮಾಡಿಕೊಳ್ಳುವುದು ಕಷ್ಟದ ಕೆಲಸ ಶ್ಯಾಮು, ನಿನಗೆ ದುಃಖ ಅನ್ನಿಸುತ್ತಿಲ್ಲವೆ’ ಎಂದೆ. ನನ್ನ ಕಡೆಗೆ ನಿಗೂಢವಾಗಿ ನೋಡುತ್ತಾ `ತೇಜೂ ನಾನು ಪದೇ ಪದೇ ಹೇಳುತ್ತಲೇ ಇದ್ಡೇನೆ, ಈಚೆಗೆ ಹೆಚ್ಚು ಮನುಷ್ಯಳಾಗುತ್ತಿದ್ದೇನೆ. ಗೋಚರವಾಗಲ್ಲ ಅಂದ ಮಾತ್ರಕ್ಕೆ ಯಾವುದೂ ಇಲ್ಲ ಎಂದಲ್ಲ. ಎಲ್ಲವೂ ಇರುತ್ತದೆ. ಆದರೆ ಅವುಗಳ ಜೊತೆ ನಾವು ನಮ್ಮನ್ನು ಹೇಗೆ ಹೊಂದಿಸಿಕೊಳ್ಳಬೇಕು ಎನ್ನುವುದಷ್ಟೆ ಅಲ್ಲವೇನೇ? ಅಂತರಾಳವನ್ನು ಎಲ್ಲವೂ ನಿಗೂಢವಾಗೇ ಇಟ್ಟುಕೊಳ್ಳುತ್ತವೆ ಅಗೆಯದೆ ಚಿನ್ನವೂ ಸಿಗದು ಕಲ್ಲಿದ್ದಲೂ ಕೂಡಾ. ಆಳದಲ್ಲಿ ತನ್ನಿರುವನ್ನು ಮರೆ ಮಾಚಿದ್ದಾಗಳು ಮನುಷ್ಯ ಹೇಗೆ ಕಾಣುತ್ತಾನೆ? ಹಾಗೆ ದುಃಖವೂ ಕೂಡಾ. ಮೇಲೆ ಶಾಂತವಾಗಿ ಕಂಡರೂ ಒಳಗೆ ತಳಮಳಿಸುವುದನ್ನು ಜಗತ್ತಿಗೆ ತೋರುವುದಿಲ್ಲ ಅಲ್ಲವೇನೆ’ ಎಂದಳು. ಅವಳ ಮಾತೆಲ್ಲವೂ ಸತ್ಯವೇ. ಆದ್ರೆ ಈಗ ಹನಿಗೆ ಹೇಗೆ ಹೇಳುತ್ತಾಳೆ, ಈ ಎಲ್ಲಾ ಸಂಗತಿಗಳನ್ನೂ?

ಗೋಡೆಯ ಮೇಲೆ ನಿಹಾರಿಕಾಳ ಚಿತ್ರವನ್ನು ಫ್ರೇಂ ಹಾಕಿಸಿ ನೇತು ಹಾಕಿದ್ದಳು ಶ್ಯಾಮು. ಒಳಗೆ ಬಂದ ಹನಿ ಅದನ್ನೆ ಕಣ್ಣರಳಿಸಿ, `ಅಮ್ಮ ತುಂಬಾ ಚೆನ್ನಾಗಿದೆ. ಯಾವಾಗ ಬರೆದೆ ಇದನ್ನು’ ಎಂದಿದ್ದಳು. `ಇದನ್ನು ನಾನೆಲ್ಲಿ ಬರೆದೆ ಮಗಳೇ, ಇದನ್ನು ಬರೆದದ್ದು ನಮ್ಮ ಫ್ಯಾಮಿಲಿಗೆ ಸೇರಿಕೊಳ್ಳಲಿರುವ ಇನ್ನೊಬ್ಬ ವ್ಯಕ್ತಿ’ ಎಂದಿದ್ದಳು. ಕಣ್ಣನ್ನು ಕಿರಿದಾಗಿಸುತ್ತಾ, `ನಮ್ಮ ಫ್ಯಾಮಿಲಿ? ಯಾರದು?’ ಎಂದಳು. ತುಂಬು ಸಮಾಧಾನ ತೆಗೆದುಕೊಂಡ ಶ್ಯಾಮು `ನಿನಗೊಂದು ಕಥೆ ಹೇಳುತ್ತೇನೆ’ ಎಂದಳು. `ಸುತ್ತಿ ಬಳಸಿ ಹೇಳುವುದು ನನಗಿಷ್ಟವಿಲ್ಲ ಅದ್ಯಾರು ಅನ್ನುವುದನ್ನು ಹೇಳಿಬಿಡು’ ಎಂದಳು ಹನಿ ತೀಕ್ಷ್ಣವಾಗಿ. ಚಂದ್ರನಿರದ ಆಕಾಶದಲ್ಲಿ ನಕ್ಷತ್ರಗಳ ತೋರುಬೆಳಕಲ್ಲಿ ಹೆಜ್ಜೆ ಹಾಕುವವಳಂತೆ ನಿಧಾನಕ್ಕೆ, `ಮಗಳೇ ಇದು ನಿನ್ನ ಅಪ್ಪನ ಹೊಸ ಪಾರ್ಟ್ನರ್’ ಎಂದಳು. `ಅಮ್ಮಾ ಮತ್ತೆ ಯಾಮಾರಿಸುವಂತೆ ಮಾತಾಡುತ್ತೀಯ, ನನಗೆ ಗೊತ್ತು ಅಪ್ಪ ಅವಳನ್ನು ಮದುವೆ ಆಗ್ತಾ ಇದಾರೆ ಅಲ್ಲವಾ?’ ಶ್ಯಾಮು ಯಾವುದನ್ನು ಹೇಳಲಾಗದೆ ಒದ್ದಾಡುತ್ತಿದ್ದಳೋ, ಅದನ್ನು ಸಲೀಸಾಗಿ ಹೇಳಿ ಮುಗಿಸಿದ್ದಳು ಹನಿ. ಶ್ಯಾಮುವಿಗೆ ಮಾತುಗಳು ಇಲ್ಲವಾದವು. ಬಣ್ಣಗಳ ಅನುಪಸ್ಥಿತಿಯಲ್ಲಿ ಬರಿಯ ಕಪ್ಪೊಂದೇ ಎಲ್ಲವನ್ನೂ ತೂಗಿಸುವ ಹಾಗಿತ್ತು ಅವಳ ಸ್ಥಿತಿ. ಪೇಲವಗೊಂಡ ಅವಳನ್ನು ನೋಡುತ್ತಾ `ನಿನಗಂತೂ ಅಪ್ಪನನ್ನು ಸರಿದಾರಿಗೆ ತರಲಿಕ್ಕೆ ಆಗಲಿಲ್ಲ’ ಎಂದು ಎದ್ದವಳೇ ಗೋಡೆಗೆ ನೇತು ಹಾಕಿದ್ದ ಚಿತ್ರವನ್ನು ಎಳೆದು ನೆಲಕ್ಕೆ ಎಸೆದಳು. ಶ್ಯಾಮು ಬೇಡ ಎಂದು ಕೂಗುತ್ತಲೇ ಇದ್ದಳು. ಹನಿ ಯಾವ ಮಾತುಗಳಿಗೂ ಕಿವಿಗೊಡದವಳಾಗಿದ್ದಳು. `ಅಮ್ಮಾ, ಅಪ್ಪ ನಿನಗೆ ಮೋಸ ಮಾಡಿದ್ರೆ ಮಾಡಿಸ್ಕೋ. ಆದ್ರೆ ನನಗೆ ಮೋಸಕ್ಕೆ ಒಳಗಾಗು ಅಂತ ಮಾತ್ರ ಹೇಳ್ಬೇಡ’ ಎಂದಿದ್ದಳು. ಶ್ಯಾಮು ಅವಳಿಗೆ ತುಂಬಾ ತಿಳಿಹೇಳಲಿಕ್ಕೆ ಪ್ರಯತ್ನ ಪಟ್ಟಳು. ಅದನ್ನು ಕೇಳುವ ಸ್ಥಿತಿಯಲ್ಲಿಲ್ಲದ ಹನಿ, `ಇದೇನಾದ್ರೂ ಹೀಗೇ ಆದರೆ ನಾನು ಅಪ್ಪನನ್ನಲ್ಲ ನಿನ್ನನ್ನೂ ಕ್ಷಮಿಸಲ್ಲ’ ಎಂದು ಅಳುತ್ತಾ ಒಳಗೆ ಹೋದಳು. ಶ್ಯಾಮು ನೆಲಕ್ಕೆ ಬಿದ್ದ ನಿಹಾಳ ಚಿತ್ರಕಟ್ಟು ಕಳಚಿ ಬಿದ್ದಿದ್ದನ್ನು ಜೋಡಿಸಲು ಯತ್ನಿಸುತ್ತಿದ್ದಳು. ಯಾಕೋ ಸಮಾಧಾನ ನನ್ನ ಮುಖದ ತುಂಬಾ ನಗುವಾಗಿ ತಾನಾಗೆ ಉಕ್ಕುವಂತೆ ತುಂಬಿಕೊಂಡಿತು. ಶ್ಯಾಮು ಹನಿಯನ್ನು ಹೇಗೆ ಸಮಾಧಾನ ಮಾಡುವುದು ಎನ್ನುವ ಗೊಂದಲಕ್ಕೆ ಬಿದ್ದಳು. ನಿಜಕ್ಕೂ ಜೋರಾಗಿ ನಗಬೇಕು ಅನ್ನಿಸ್ಬಿಟ್ಟಿತು. ಅನ್ನಿಸಿದ್ದೇನು ನಕ್ಕೆ. ಶ್ಯಾಮು ನನ್ನೆಡೆಗೆ ಅಸಹಾಯಕವಾಗಿ ನೋಡಿದಳು. ನನಗೆ ಗೊತ್ತು ಅವಳ ಮನಸ್ಸಿನಲ್ಲಿ ಏನು ತುಂಬಿದೆ ಎಂದು. ತುಂಬು ನಗೆಯನ್ನು ತುಳುಕಿಸುತ್ತಾ `ಯಾವಾಗ್ಲೂ ಹೇಳ್ತಾ ಇದ್ಯಲ್ಲಾ ನಾನು ಅಪ್ಪಟ ಮನುಷ್ಯಳಾಗಿದ್ದೀನಿ ಅಂತ. ನಿಜವಾಗಲೂ ಅಪ್ಪಟ ಮನುಷ್ಯಳು ಹನಿ ಮಾತ್ರ’ ಎಂದೆ. ಶ್ಯಾಮುವಿನ ಭೀತವಾದ ಅಗಲ ಕಣ್ಣುಗಳಲ್ಲಿ ಗೆರೆಯೊಂದು ಮೂಡಿ ವಾಸ್ತವಕ್ಕೆ ಬರಲು ಸಾಹಸ ಪಡುವಂತೆ ತೇಲುತ್ತಿತ್ತು.

ಈ ಅಂಕಣದ ಹಿಂದಿನ ಬರಹಗಳು:
ಚೂರಾದರೂ ಕಾಣಿಸುವ ನಿಷ್ಠೆಯನ್ನು ಕನ್ನಡಿ ಕಳಕೊಳ್ಳದು
ಜಂಗು ಹಿಡಿದ ಹಳೆಯ ಡಬ್ಬ ಗುರುತಿಲ್ಲದಂತೆ ಕರಗುವುದು
ಮಗುವ ತುಟಿಯಿಂದ ಜಾರಿದ ಜೊಲ್ಲು ಹರಳುಗಟ್ಟಿ ವಜ್ರಗಳಾಗಿದ್ದವು
ದಾರ ಕಟ್ಟಿಸಿಕೊಂಡ ಪೇಪರ್ ಹಕ್ಕಿಗಳೂ ಗಾಳಿಗೆದುರು ಹಾರುವವು.
ಮರೆವೆಯೇ ದಂಡೆಯನ್ನು ರೂಪಿಸುತ್ತಿರುತ್ತದೆ.
ಅಂಕೆ ಮೀರುವ ನೆರಳುಗಳು ಕಾಯುವುದು ಬೆಳಕಿಗಾಗೇ
ಕೊಳದ ಮೇಲೆ ಬಿದ್ದ ಬೆಳಕು ಕೊಳವನೆಂದೂ ಕಲಕದು
ತೆರೆದುಹೋದ ಅರಿಯದ ಸಮ್ಮೋಹಕ ಲೋಕ
ತತ್ತಿಯೊಡೆದ ಪುಟ್ಟ ಕೀಟದ ಕಣ್ಣಲ್ಲಿ ಫಲಿಸಿದ ಬೆಳಕು
ಪದದೂಳಿಗೆ ಮುತ್ತಿಟ್ಟವನ ಜೀವದ ಗುರುತು ಎದೆ ಮೇಲೆ
ನೆತ್ತರಲೂ ರತ್ನವಾಗುವ ಗುಣ

ಅಘಟಿತ ಘಟನೆಗಳು
ಪ್ರಪಂಚ ಒಂದು ಸುಂದರ ಕನಸು
ನಮ್ಮನ್ನು ಕಾಣಿಸಲು ನಡುಹಗಲೇ ಬೇಕಿಲ್ಲ!

 

MORE NEWS

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...