ಪದ ರಚನೆಯ ಗಟಕಗಳು

Date: 15-10-2022

Location: ಬೆಂಗಳೂರು


“ಸ್ವರವು ಗಿಡ್ಡಸ್ವರವಾಗಲಿ ಉದ್ದಸ್ವರವಾಗಲಿ ಅದು ಒಂದು ಅಕ್ಶರವಾಗುತ್ತದೆ. ಸಾಮಾನ್ಯವಾಗಿ ಕನ್ನಡದಲ್ಲಿ ಒಂದು ಸ್ವರ ಒಂದು ವ್ಯಂಜನವನ್ನು ಹೊತ್ತುಕೊಳ್ಳುತ್ತದೆ. ಒತ್ತಕ್ಕರ ಬಂದಾಗ ಎರಡು ವ್ಯಂಜನಗಳನ್ನು ಅಂದರೆ ಹಿಂದಿನ ಒಂದು ಮತ್ತು ಮುಂದಿನ ಇನ್ನೊಂದು ವ್ಯಂಜನವನ್ನು ಹೊತ್ತುಕೊಳ್ಳುತ್ತದೆ” ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ಪದಗಳಲ್ಲಿನ ಘಟಕಗಳ ಬಗ್ಗೆ ವಿವರಿಸಿದ್ದಾರೆ.

ಪದವೊಂದನ್ನು ರಚಿಸುವುದಕ್ಕೆ ಮೂಲಬೂತವಾಗಿ ದ್ವನಿ ಗಟಕವಾಗಿರುತ್ತದೆ. ಸಾಮಾನ್ಯವಾಗಿ ಪದ ಎನ್ನುವುದು ದ್ವನಿಗಳ ನಿಯತ ಜೋಡಣೆಯಾಗಿರುತ್ತದೆ. ದ್ವನಿ ಎನ್ನುವುದು ಉಚ್ಚರಣೆಯ ಗಟಕ. ಹಾಗಾದರೆ ಪದಗಳನ್ನು ದ್ವನಿಗಳಾಗಿ ಒಡೆದು ನೋಡಲು ಸಾದ್ಯವಾಗುತ್ತದೆ. ಇದಲ್ಲದೆ ಬಾಶೆಯಲ್ಲಿ ದ್ವನಿಮಾ ಎಂಬ ಗಟಕವನ್ನೂ ಕಾಣಬಹುದು. ದ್ವನಿ ಉಚ್ಚರಿಸುವಂತದ್ದು ಮತ್ತು ಸಮಾನ ಗುಣಗಳ ದ್ವನಿಗಳ ಸಮೂಹದ ಪ್ರತಿನಿದಿಯಾಗಿರುವಂತದ್ದು ದ್ವನಿಮಾ. ಆದರೆ, ದ್ವನಿ ಮತ್ತು ದ್ವನಿಮಾ ಇವುಗಳ ವ್ಯತ್ಯಾಸ ಪದರಚನೆಯಲ್ಲಿ ಅಶ್ಟು ಮುಕ್ಯವಾಗಲಾರದು. ಪ್ರತಿ ಪದದಲ್ಲಿ ಮೂಲಬೂತವಾದ ಗಟಕಗಳು ದ್ವನಿಗಳೆ ಆಗಿವೆ.

ಮನಿ ಎಂಬ ಪದದಲ್ಲಿ ಮ್+ಅ+ನ್+ಇ ಎಂಬ ನಾಲ್ಕು ದ್ವನಿಗಳು ಇವೆ.

ಪದರಚನೆಯಲ್ಲಿ ಇನ್ನೊಂದು ಅತಿಮುಕ್ಯವಾದ ಗಟಕ ಅಕ್ಶರ. ಇಂಗ್ಲೀಶಿನಲ್ಲಿ ‘ಸಿಲಾಬಲ್’ ಎಂದು ಕರೆಯುತ್ತಾರೆ. ಈ ಮೇಲೆ ಹೇಳಿದಂತೆ ದ್ವನಿಗಳಲ್ಲಿ ಸ್ವರ-ವ್ಯಂಜನ ಎಂಬ ಮುಕ್ಯವಾದ ಪ್ರಕಾರಗಳು ಇರುತ್ತವೆ. ಸ್ವರ ಸ್ವತಂತ್ರವಾಗಿ ಉಚ್ಚರಿಸುವಂತದ್ದಾಗಿದೆ. ಆದರೆ ವ್ಯಂಜನ ಹೀಗೆ ಸ್ವತಂತ್ರವಾಗಿ ಉಚ್ಚರಿಸುವುದಕ್ಕೆ ಆಗದೆ ಮತ್ತು ಸ್ವರದ ಸಹಾಯದಿಂದ ಉಚ್ಚಾರವಾಗುವಂತದ್ದು. ಅಕ್ಶರ ಎಂಬ ಪರಿಕಲ್ಪನೆಯನ್ನು ತಿಳಿದುಕೊಳ್ಳುವುದಕ್ಕೆ ಈ ಸ್ವರ-ವ್ಯಂಜನಗಳನ್ನು ಮಾತಿಗೆ ತರಬೇಕು. ಸ್ವರವೊಂದು ತನ್ನಶ್ಟಕ್ಕೆ ಒಂದು ಅಕ್ಶರವಾಗುತ್ತದೆ. ವ್ಯಂಜನವು ಒಂದು ಸ್ವರದ ಸಹಾಯದಿಂದ ಅಂದರೆ ಒಂದು ಸ್ವರವನ್ನು ಅವಲಂಬಿಸಿ ಅಕ್ಶರವಾಗುತ್ತದೆ. ಈ ಪ್ರಕ್ರಿಯೆ ವಿಬಿನ್ನ ಬಗೆಯ ಅಕ್ಶರ ವಿನ್ಯಾಸಕ್ಕೆ ಕಾರಣವಾಗುತ್ತದೆ. ಕನ್ನಡದ ಪದಗಳ ರಚನೆ ಬಗೆಗೆ ತಿಳಿದುಕೊಳ್ಳುವುದಕ್ಕೆ ಈ ವಿಚಾರಗಳು ಅವಶ್ಯ. ಈ ಮೇಲೆ ಉದಾಹರಿಸಿದ ಮನಿ ಪದವನ್ನು ಅದರಲ್ಲಿರುವ ಅಕ್ಶರಗಳನ್ನಾಗಿ ಒಡೆದರೆ ಇದರಲ್ಲಿ ಎರಡು ಅಕ್ಶರಗಳು ಇವೆ. ಮ+ನಿ. ಇವುಗಳನ್ನು ಕ್ರಮವಾಗಿ ಮ್+ಇ ಮತ್ತು ನ್+ಇ ಎಂಬ ಎರಡು ಅಕ್ಶರಗಳಾಗಿ ತಿಳಿದುಕೊಳ್ಳಲು ಸಾದ್ಯ. ಇದು ತುಂಬಾ ಸರಳವಾಗಿರುವಂತೆ ಕಾಣಿಸುತ್ತದೆ. ಆದರೆ ಈ ಕೆಲವು ಪದಗಳ ರಚನೆಯನ್ನು ಗಮನಿಸಿ. ಕಲ್ಲು ಈ ಪದದಲ್ಲಿ ಕ್+ಅ+ಲ್+ಲ್+ಉ ಎಂದು ದ್ವನಿಗಳ ರಚನೆಯನ್ನು ಕಾಣಬಹುದು. ಇದನ್ನು ಅಕ್ಶರವಾಗಿ ಒಡೆದಾಗ ಈ ರೀತಿ ಕಾಣಿಸುತ್ತದೆ. ಕಲ್+ಲು ಎಂದಾಗುತ್ತದೆ. ಈ ಮೇಲಿನ ಮನಿ ಪದದಂತೆ ಬರವಣಿಗೆಯಲ್ಲಿ ಕಾಣುವ ಎರಡು ಅಕ್ಶರಗಳನ್ನು ಅಂದರೆ *ಕ+ಲ್ಲು ಬರೆಯಲು ಆಗುವುದಿಲ್ಲ. ಇದಕ್ಕೆ ಮುಕ್ಯವಾದ ಕಾರಣ ಪದರಚನೆಯಲ್ಲಿನ ಅಕ್ಶರ ರಚನೆ.

ಈ ಮೇಲೆ ಹೇಳಿದಂತೆ ಸ್ವರವೊಂದು ತನ್ನಶ್ಟಕ್ಕೆ ಅಕ್ಶರವಾಗುತ್ತದೆ. ಈ ಪದ ಗಮನಿಸಿ, ಆಳು ಈ ಪದದಲ್ಲಿ ಆ+ಳು ಎಂದು ಎರಡು ಅಕ್ಶರಗಳು. ಇದರಲ್ಲಿ ಮೊದಲಿಗೆ ಬಂದಿರುವ ದ್ವನಿ ಆ ಸ್ವರವಾಗಿದ್ದು ಅದು ತನ್ನಶ್ಟಕ್ಕೆ ಅಕ್ಶರವಾಗಿದೆ. ಆನಂತರ ಬಂದಿರುವ ಳ್ ಇದು ವ್ಯಂಜನವಾಗಿದ್ದು ತನ್ನ ಮುಂದಿನ ಸ್ವರವಾದ ಉ ಇದನ್ನು ಅವಲಂಬಿಸಿ ಳು ಎಂದಾಗಿ ಒಂದು ಅಕ್ಶರವಾಗುತ್ತದೆ. ಅಂದರೆ ವ್ಯಂಜನವೊಂದು ಸಾಮಾನ್ಯವಾಗಿ ತನ್ನ ಮುಂದಿನ ಸ್ವರವನ್ನು ಅವಲಂಬಿಸುತ್ತದೆ. ಆಳು ಪದದಲ್ಲಿ ಬಂದಿರುವ ಳ್ ದ್ವನಿಯ ಮುಂದೆ ಬಂದಿರುವ ಉ ಸ್ವರವನ್ನು ಅವಲಂಬಿಸಿ ಅಕ್ಶರವಾಗುತ್ತದೆ. ಆದರೆ, ತನ್ನ ಹಿಂದಿನ ಸ್ವರವಾದ ಆ ದ್ವನಿಯನ್ನು ಳ್ ಅವಲಂಬಿಸುವುದಿಲ್ಲ.

ಆದರೆ, ಮೇಲೆ ಕಲ್ಲು ಎಂಬ ಪದವನ್ನು ಕೊಟ್ಟು ಅದರಲ್ಲಿ ಎರಡು ಅಕ್ಶರಗಳನ್ನು ಒಡೆದು ಕ್+ಅ+ಲ್ ಮತ್ತು ಲ್+ಉ ಎಂದು ಒಡೆದಿದೆ. ಇದರಲ್ಲಿ ಪದದ ಮೊದಲಿಗೆ ಬಂದಿರುವ ಕ್ ಇದು ತನ್ನ ಮುಂದಿನ ಸ್ವರವಾದ ಅ ವನ್ನು ಅವಲಂಬಿಸಿದೆ. ಆದರೆ ಆನಂತರ ಅ ಸ್ವರದ ನಂತರ ಬಂದಿರುವ ಲ್ ವ್ಯಂಜನವು ತನ್ನ ಹಿಂದಿನ ಸ್ವರವನ್ನು ಅವಲಂಬಿಸಿದೆ. ಇದಕ್ಕೆ ಕಾರಣ ಎರಡು ವ್ಯಂಜನಗಳು ಒಟ್ಟಿಗೆ ಬಂದಿರುವುದು. ಎರಡರಲ್ಲಿ ಒಂದು ವ್ಯಂಜನ ತನ್ನ ಹಿಂದಿನ ಸ್ವರವನ್ನು ಅವಲಂಬಿಸಿದೆ.

ಸ್ವರವು ಗಿಡ್ಡಸ್ವರವಾಗಲಿ ಉದ್ದಸ್ವರವಾಗಲಿ ಅದು ಒಂದು ಅಕ್ಶರವಾಗುತ್ತದೆ. ಸಾಮಾನ್ಯವಾಗಿ ಕನ್ನಡದಲ್ಲಿ ಒಂದು ಸ್ವರ ಒಂದು ವ್ಯಂಜನವನ್ನು ಹೊತ್ತುಕೊಳ್ಳುತ್ತದೆ. ಒತ್ತಕ್ಕರ ಬಂದಾಗ ಮೇಲೆ ಕಲ್ಲು ಪದದ ಉದಾಹರಣೆಯಲ್ಲಿ ನೋಡಿದಂತೆ ಎರಡು ವ್ಯಂಜನಗಳನ್ನು ಅಂದರೆ ಹಿಂದಿನ ಒಂದು ಮತ್ತು ಮುಂದಿನ ಇನ್ನೊಂದು ವ್ಯಂಜನವನ್ನು ಹೊತ್ತುಕೊಳ್ಳುತ್ತದೆ. ಕನ್ನಡದಾಗ ಒತ್ತಕ್ಕರದಲ್ಲಿ ಸಾಮಾನ್ಯವಾಗಿ ಎರಡು ವ್ಯಂಜನಗಳು ಇರುತ್ತವೆ. ಹಾಗಾಗಿ ಸ್ವರವೊಂದು ಕನ್ನಡ ಪದದಲ್ಲಿ ಹೆಚ್ಚೆಂದರೆ ಎರಡು ವ್ಯಂಜನಗಳನ್ನು ಹೊತ್ತುಕೊಳ್ಳುತ್ತದೆ. ಬೇರೆ ಬಾಶೆಯಿಂದ ತೆಗೆದುಕೊಂಡ ಸ್ತ್ರೀ ಇಂತಾ ಪದಗಳಲ್ಲಿ ಸ್+ತ್+ರ್ ಎಂಬ ಮೂರು ವ್ಯಂಜನಗಳು ಬಂದಿವೆ, ಈ ಎಂಬ ಒಂದೆ ಸ್ವರ ಬಂದಿದೆ. ಇಲ್ಲಿ ಮೂರು ವ್ಯಂಜನಗಳನ್ನು ಒಂದು ಸ್ವರ ಹೊತ್ತುಕೊಂಡಿದೆ. ಆದರೆ ಇದು ಸಾಮಾನ್ಯ ಕೆಲವೆ ಕೆಲವು ಬೇರೆ ಬಾಶೆಗಳಿಂದ ತೆಗೆದುಕೊಂಡ ಪದಗಳಲ್ಲಿ. ಗಮನಿಸಬೇಕಾದ ಅಂಶವೆಂದರೆ ಎರಡಕ್ಕಿಂತ ಹೆಚ್ಚು ವ್ಯಂಜನಗಳು ಇರುವ ಸ್ತ್ರೀ ಇಂತ ಪದಗಳನ್ನು ಇಸ್ತ್ರಿ ಎಂದು ಪದಮೊದಲಲ್ಲಿ ಇನ್ನೊಂದು ಸ್ವರವನ್ನು ಸೇರಿಸುವ ಮೂಲಕ ಕನ್ನಡದಲ್ಲಿ ಉಚ್ಚರಿಸುವುದು ಸಾಮಾನ್ಯವಾಗಿ ಕೇಳಿಸುತ್ತದೆ. ಆಗ ಕಂಡುಬರುವ ಅಕ್ಶರಗಳ ರಚನೆ ಈ ರೀತಿ ಇರುತ್ತದೆ. ಇ+ಸ್ ಮತ್ತು ತ್+ರ್+ಇ. ಇಲ್ಲಿ ಗಮನಿಸಿ, ಮೊದಲ ಸ್ವರ ತನ್ನ ಮುಂದಿನ ಒಂದು ವ್ಯಂಜನವನ್ನು ಮಾತ್ರ ಹೊತ್ತುಕೊಂಡಿದೆ. ಆನಂತರ ಬರುವ ಎರಡನೆ ವ್ಯಂಜನ ತನ್ನ ಮುಂದಿನ ಇನ್ನೊಂದು ವ್ಯಂಜನದ ನಂತರ ಬರುವ ಸ್ವರದ ಮೇಲೆ ಅವಲಂಬಿಸಿದೆ. ಹಾಗಾದರೆ ಇಲ್ಲಿ ಇನ್ನೊಂದು ವಿಚಾರ ಕಾಣಿಸುತ್ತದೆ. ಸ್ವರವೊಂದು ತನ್ನ ಹಿಂದೆ ಇಲ್ಲವೆ ಮುಂದೆ ಬರುವ ಒಂದಕ್ಕಿಂತ ಹೆಚ್ಚು ವ್ಯಂಜನಗಳನ್ನು ಪಡೆದುಕೊಳ್ಳಬಲ್ಲದು. ಹಾಗಾದರೆ ಎಶ್ಟು ವ್ಯಂಜನಗಳನ್ನು ಹೊತ್ತುಕೊಳ್ಳಬಲ್ಲದು? ಎಂಬ ಪ್ರಶ್ನೆ ಬರಬಹುದು. ಕನ್ನಡದಲ್ಲಿ ಇದರಲ್ಲಿ ಹೆಚ್ಚು ವಿವಿದತೆ ಇಲ್ಲ. ಇಂಗ್ಲೀಶಿನಂತ ಬಾಶೆಗಳಲ್ಲಿ ಅಯ್ದಾರು ವ್ಯಂಜನಗಳನ್ನು ಒಂದು ಸ್ವರ ಹೊತ್ತುಕೊಳ್ಳುತ್ತದೆ. ಸ್ಟ್ರಿಕ್ಟ್ ಈ ಪದದಲ್ಲಿ ಸ್+ಟ್+ರ್+ಇ+ಕ್+ಟ್ ಎಂಬ ಆರು ದ್ವನಿಗಳಿವೆ. ಇದರಲ್ಲಿ ಒಂದೆ ಸ್ವರ ಬಂದಿದ್ದು ಈ ಒಂದು ಸ್ವರ ಅದರಲ್ಲಿರುವ ಅಯ್ದು ವ್ಯಂಜನಗಳನ್ನು ಹೊತ್ತುಕೊಂಡಿದೆ. ಅಂದರೆ ಈ ಪದದಲ್ಲಿ ಇರುವುದು ಒಂದೆ ಅಕ್ಶರ.

ಒಟ್ಟಾರೆ ಪದರಚನೆಯಲ್ಲಿ ಸ್ವರವು ಕೇಂದ್ರಸ್ತಾನವನ್ನು ಪಡೆದುಕೊಂಡಿರುತ್ತದೆ.

ಇಲ್ಲಿ ಒಂದೆರಡು ಬಿನ್ನ ರಚನೆಯ ಉದಾಹರಣೆಗಳನ್ನು ಗಮನಿಸಿ,

ಒಂದು ಅಕ್ಶರದ ಪದಗಳು:
ಒಂದು ಸ್ವರ: ಆ

ಒಂದು ಸ್ವರ+ಒಂದು ವ್ಯಂಜನ: ಆಳ್ ಇದು ಆ+ಳ್ ಎಂದು ಇದರ ರಚನೆ ಇದೆ. ಆದರೆ ಇಂತ ವ್ಯಂಜನಕೊನೆ ಪದಗಳು ಇಂದಿನ ಕನ್ನಡದಲ್ಲಿ ಇಲ್ಲದಿರುವುದರಿಂದ ಈ ರಚನೆ ಇಂದಿನ ಕನ್ನಡದಲ್ಲಿ ಕಾಣಿಸುವುದಿಲ್ಲ. ಹಳಗನ್ನಡದಲ್ಲಿ ಇವು ಸಹಜವಾಗಿ ಇದ್ದವು.

ಒಂದು ವ್ಯಂಜನ+ಒಂದು ಸ್ವರ: ತಾ ಇದರಲ್ಲಿ ತ್+ಆ ಎಂಬ ದ್ವನಿಗಳಿವೆ.

ಎರಡು ಅಕ್ಶರಗಳ ಪದಗಳು:

ಒಂದು ಸ್ವರ+ಒಂದು ವ್ಯಂಜನ+ಒಂದು ಸ್ವರ: ಉಳಿ. ಇದರ ಅಕ್ಶರ ರಚನೆ ಉ+ಳಿ ಎಂದಿದೆ. ಇದರಲ್ಲಿ ಉ+ಳ್+ಇ ಎಂಬ ಮೂರು ದ್ವನಿಗಳು ಇವೆ.

ಒಂದು ಸ್ವರ+ಎರಡು ವ್ಯಂಜನ+ಒಂದು ಸ್ವರ: ಅಣ್ಣ ಇದರಲ್ಲಿನ ಅಕ್ಶರಗಳು ಅಣ್+ಣ ಎಂದಾಗಿದ್ದು ಇದರಲ್ಲಿ ನಾಲ್ಕು ದ್ವನಿಗಳು ಇವೆ, ಅ+ಣ್+ಣ್+ಅ ಒಂದು ವ್ಯಂಜನ+ಒಂದು ಸ್ವರ+ಎರಡು ವ್ಯಂಜನ+ಒಂದು ಸ್ವರ: ಮಣ್ಣು ಇದರ ಅಕ್ಶರ ರಚನೆ ಮಣ್+ಣು ಎಂದಾಗಿದೆ. ಇದರಲ್ಲಿ ಮ್+ಅ+ಣ್+ಣ್+ಅ ಎಂಬ ದ್ವನಿಗಳು ಇವೆ.

ಮೂರು ಅಕ್ಶರದ ಪದಗಳು:
ಸ್ವರಮೊದಲಿನ: ಅದುರು, ಅರಳು, ಅಂಗಡಿ,
ವ್ಯಂಜನಮೊದಲಿನ: ಕನಸು, ಕರುಳು, ಕಂದರ

ಸಾಮಾನ್ಯವಾಗಿ ಹೆಚ್ಚಿನ ಪದಗಳು ಮೂಲ ಅಕ್ಶರ ರಚನೆಯೆ ಕಂಡುಬರುತ್ತದೆ. ಕನ್ನಡದ ಲಕ್ಶಾಂತರ ಪದಗಳ ರಚನೆಯಲ್ಲಿ ಮೂಲಬೂತವಾದ ಅಕ್ಶರದ ರಚನೆ ಕಂಡುಬರುತ್ತದೆ.

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ

MORE NEWS

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...