ಸಾಮಾಜಿಕ ಪ್ರಜ್ಞೆ

Date: 17-12-2022

Location: ಬೆಂಗಳೂರು


“ಪುರುಷನಂತೆ ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲಿ ಸಮರ್ಥವಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾಳೆ. ಆದರೂ ಶೈಕ್ಷಣಿಕ ಉನ್ನತ ಸ್ಥಾನಗಳಲ್ಲಿ ಮತ್ತು ರಾಜಕೀಯ ಕ್ಷೇತ್ರದಲ್ಲಿ ಕೆಲವು ಮಹಿಳೆಯರು ಮಾತ್ರ ಅವಕಾಶ ಪಡೆದುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಇಷ್ಟಾದರೂ ಲಿಂಗಸಮಾನತೆಯ ವಿಚಾರ ಬಂದಾಗ 12ನೇ ಶತಮಾನದ ಶರಣೆಯರಂತೆ ಇಂದಿನ ಮಹಿಳೆ ತನ್ನ ವ್ಯಕ್ತಿತ್ವವನ್ನು ಸ್ವತಂತ್ರವಾಗಿ ರೂಪಿಸಿಕೊಳ್ಳಲು ಸಾಧ್ಯವಾಗಿದೆಯೆ?” ಎನ್ನುತ್ತಾರೆ ಲೇಖಕಿ ವಿಜಯಶ್ರೀ ಸಬರದ. ಅವರು ತಮ್ಮ ಶಿವಶರಣೆಯರ ಸಾಹಿತ್ಯ ಚರಿತ್ರೆ ಅಂಕಣದಲ್ಲಿ ‘ಸಾಮಾಜಿಕ ಪ್ರಜ್ಞೆ’ ಬಗ್ಗೆ ಬರೆದಿದ್ದಾರೆ.

12ನೇ ಶತಮಾನದ ಬಸವಾದಿ ಶರಣರಂತೆ ಶರಣೆಯರು ನಡೆ-ನುಡಿ ಒಂದಾಗಿಸಿಕೊಂಡು ಬದುಕಿದರು. ತಮ್ಮ ಕಾಲದ ಸಾಮಾಜಿಕ ವ್ಯವಸ್ಥೆಯಲ್ಲಿರುವ ನ್ಯೂನತೆಗಳ ಕುರಿತು ಚಿಂತಿಸಿದರು. ಸಾಮಾಜಿಕ ಅಸಮಾನತೆಯನ್ನು ವಿರೋಧಿsಸಿದರು. ಹೆಣ್ಣಿನಲ್ಲಿರುವ ಶಕ್ತಿ-ಸಾಮಾಥ್ರ್ಯವನ್ನು ಗುರುತಿಸಿದ ಶರಣರು ಆಕೆಯನ್ನು ಸಾಕ್ಷಾತ್ ಕಪಿಲಸಿದ್ಧಮಲ್ಲಿಕಾರ್ಜುನ ಎಂದು ಗೌರವಿಸಿದರು; ಸಮಾನತೆಯಿಂದ ಕಂಡರು. ಹೀಗಾಗಿ ಅನೇಕ ಶರಣೆಯರು ವಚನಗಳನ್ನು ಬರೆದರು. ತಮ್ಮ ಅನುಭವಗಳನ್ನು ವಚನಗಳಲ್ಲಿ ಕಟ್ಟಿಕೊಟ್ಟರು. ಸಮಾಜದಲ್ಲಿರುವ ಮೂಢನಂಬಿಕೆ, ಜಾತೀಯತೆ, ಧಾರ್ಮಿಕ ಸೋಷಣೆ, ಲಿಂಗ ಅಸಮಾನತೆಯ ವಿರುದ್ಧ ಧ್ವನಿ ಎತ್ತಿದರು. ಜೀವವಿರೋಧಿ ಸಾಮಾಜಿಕ ನಿಲುವುಗಳನ್ನು ಪ್ರಶ್ನಿಸಿದರು. ಶರಣೆಯರು ಸಮಾಜದ ಬಗೆಗೆಯಿರುವ ತಮ್ಮ ಕಾಳಜಿ, ಕಳಕಳಿ, ಕಳವಳ, ನೋವು, ಹತಾಶೆ ಹಾಗೂ ತಮ್ಮ ಭಕ್ತಿ-ಭಾವವನ್ನು ವಚನಗಳಲ್ಲಿ ಅಭಿವ್ಯಕ್ತಿಸಿದ್ದಾರೆ. ಸಾಮಾಜಿಕ ನ್ಯಾಯದ ಕುರಿತು ಆಲೋಚಿಸಿದ್ದಾರೆ. ಅಂತರಂಗ- ಬಹಿರಂಗ ಪರಿಶುದ್ಧತೆಯ ಕುರಿತು ವಿಚಾರ ಮಾಡಿದ್ದಾರೆ. ನೈತಿಕ ಬದುಕಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಟ್ಟರು. ಆತ್ಮ-ಪರಮಾತ್ಮನ ಅನುಸಂಧಾನಕ್ಕಾಗಿ ಭಕ್ತಿಯ ಮಾರ್ಗವನ್ನು ಅನುಸರಿಸಿದರು. ಲೌಕಿಕ ಬದುಕಿನ ಮೂಲಕ ಅಲೌಕಿಕ ಬದುಕನ್ನು ರೂಪಿಸಿಕೊಂಡರು. ಇಂತಹ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿದ ಶರಣೆಯರ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ.

ಶರಣರ ಸಾಮಾಜಿಕ ನ್ಯಾಯದಲ್ಲಿ ವೈಜ್ಞಾನಿಕತೆಯಿದೆ ಮತ್ತು ಸಮಾನತೆಯಿದೆ. ಸಾಮಾಜಿಕ ನ್ಯಾಯವೆಂದರೆ ಎಲ್ಲರಿಗೂ ಸಮಾನ ಅವಕಾಶಗಳಿರಬೇಕು. ಲಿಂಗ- ವರ್ಣ-ವರ್ಗ-ಪ್ರಾದೇಶಿಕ ಅಸಮಾನತೆಯಿಂದ ಶೋಷಣೆಗೊಳಗಾದ ಶೋಷಿತರಿಗೆ ನ್ಯಾಯವನ್ನೊದಗಿಸುವುದೇ ಸಾಮಾಜಿಕ ನ್ಯಾಯ. ಈ ರೀತಿಯ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡುವುದೇ ವಚನ ಚಳವಳಿಯ ಉದ್ದೇಶವಾಗಿತ್ತು. ಆದರೆ ನಮ್ಮ ಇಂದಿನ ಪ್ರಜಾಪ್ರಭುತ್ವದ ಸಾಮಾಜಿಕ ನ್ಯಾಯದಲ್ಲಿ ಸಮಾನತೆಯಿದೆ, ಒಡೆದು ಆಳುವ ನೀತಿಯಿದೆ. ವೈಜ್ಞಾನಿಕತೆಯಿರದೆ ಸ್ವಾರ್ಥವಿದೆ. ಜಾತಿ ಪ್ರಾಬಲ್ಯವಿದೆ. ಇದರಿಂದ ಸಮಾಜ ಒಡೆದು ಹೋಳಾಗುತ್ತದೆ. ಇದನ್ನು ತಪ್ಪಿಸಲು ನಾವು ಶರಣರ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವುದು ತುಂಬ ಅಗತ್ಯವಿದೆ.

ಶರಣರ ಸಾಮಾಜಿಕ ನ್ಯಾಯದ ಪರಿಕಲ್ಪನೆಗೂ ಮತ್ತು ಶರಣೆಯರ ಸಾಮಾಜಿಕ ನ್ಯಾಯದ ಪರಿಕಲ್ಪನೆಗೂ ಯಾವ ವ್ಯತ್ಯಾಸವಿಲ್ಲ. ಇವರಿಬ್ಬರ ಸಾಮಾಜಿಕ ನ್ಯಾಯದ ಪರಿಕಲ್ಪನೆ ಮಾನವೀಯ ನೆಲೆಯುಳ್ಳದ್ದು. ಶರಣರು ಮತ್ತು ಶರಣೆಯರು ಲಿಂಗಭೇದ- ಜಾತಿಭೇದ-ವರ್ಗಭೇದ ನೀತಿಯನ್ನು ನಿರಾಕರಿಸಿದರು. ಲಿಂಗ ಅಸಮಾನತೆಯನ್ನು ಮೊಟ್ಟಮೊದಲು ಜೇಡರದಾಸಿಮಯ್ಯನು ವಿರೋಧಿಸಿದ್ದಾನೆ. ಹೆಣ್ಣು-ಗಂಡಿನ ಬಾಹ್ಯರೂಪವನ್ನು ಆಧರಿಸಿ ಲಿಂಗಭೇದ-ಮಾಡುವುದು ಸರಿಯಲ್ಲೆಂದು ಶರಣೆಯರು ತಿಳಿಸಿದರು. ಹೆಣ್ಣನ್ನು ಕೀಳಾಗಿ ಕಾಣುವುದು, ಪುರುಷನನ್ನು ಶ್ರೇಷ್ಠನೆಂದು ಪರಿಗಣಿಸುವುದು ಸರಿಯಲ್ಲ. ಹೆಣ್ಣು-ಗಂಡೆಂಬ ಭೇದದ ಪ್ರಮಾಣಕ್ಕೆ ಕೇವಲ ದೇಹದ ರಾಚನಿಕ ಸ್ಥಿತಿ ಮಾತ್ರ ಮಾನದಂಡವಾಗಲಾರದೆಂದು ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ. ಲಿಂಗ ಅಸಮಾನತೆಯ ಕುರಿತು ಗೊಗ್ಗವ್ವೆ, ಸತ್ಯಕ್ಕ, ಆಯ್ದಕ್ಕಿ ಲಕ್ಕಮ್ಮ ಪ್ರಶ್ನಿಸಿದ್ದಾರೆ. "ಮೊಲೆ ಮುಡಿ ಬಂದಡೆ ಹೆಣ್ಣೆಂಬರು, ಮೀಸೆ ಕಾಸೆ ಬಂದಡೆ ಗಂಡೆಂಬರು ಈ ಉಭಯದ ಜ್ಞಾನ ಹೆಣ್ಣೋ ಗಂಡೋ ನಾಸ್ತಿನಾಥ?"ಗೊಗ್ಗವ್ವೆಯ ಈ ವಚನದಲ್ಲಿ ಲಿಂಗಭೇದ ನೀತಿಯ ಸ್ಪಷ್ಟ ನಿರಾಕರಣೆ ಇದೆ. ಗಂಡು-ಹೆಣ್ಣು ಎಂಬ ಭೇದವಿರುವುದು ದೈಹಿಕ ಬೆಳವಣಿಗೆಯಲ್ಲಿಯೇ ಹೊರತು, ಇಬ್ಬರಲ್ಲೂ ಇರುವ ಮನಸ್ಸು ಮತ್ತು ಜ್ಞಾನಕ್ಕಲ್ಲವೆನ್ನುವ ಸತ್ಯವನ್ನು ಶರಣೆಯರು ಸ್ಪಷ್ಟಪಡಿಸಿದರು.

21ನೇ ಶತಮಾನವು ಜಾಗತೀಕರಣದ ಪ್ರಭಾವಕ್ಕೊಳಗಾಗಿ ಬದುಕುವಂತಹ ಸಂದರ್ಭವಾಗಿದೆ. ಇದು ವಿಜ್ಞಾನ-ತಂತ್ರಜ್ಞಾನದ ಯುಗ. ಮನುಷ್ಯ ಸಂಬಂಧಗಳಲ್ಲಿ, ಸಾಮಾಜಿಕ ಸಂಬಂಧಗಳಲ್ಲಿ ಎಲ್ಲವೂ ವ್ಯವಹಾರಿಕ ಲೆಕ್ಕಾಚಾರವಿದೆ. ಮನುಷ್ಯನು ಸರಕು ಆಗುವಂತಹ ಕಾಲಘಟ್ಟದಲ್ಲಿ ನಾವಿದ್ದೇವೆ. ಇಂದಿನ ಲಿಂಗಸಮಾನತೆಯ ವಿಚಾರವು ಕೂಡ ವ್ಯವಹಾರಿಕವಾದದ್ದಾಗಿದೆ. ಶರಣೆಯರ ಲಿಂಗ ಸಮಾನತೆಯ ವಿಚಾರದಲ್ಲಿ ನಿಸ್ವಾರ್ಥಭಾವವಿದೆ. ಪರಸ್ಪರ ಗೌರವದಿಂದ ಕಾಣುವ ಅಂತಃಕರಣದ ಭಾವವಿದೆ. ಇಂತಹ ಸಮಾನತೆಯ ವಿಚಾರದ ಕೊರತೆ ನಮ್ಮಲ್ಲಿದೆ. "ಗಂಡು ಮೋಹಿಸಿ ಹೆಣ್ಣ ಹಿಡಿದಡೆ ಅದು ಒಬ್ಬರ ಒಡವೆ ಎಂದು ಅರಿಯಬೇಕು, ಈ ಎರಡರ ಉಭಯವ ಕಳೆದು ಸುಖಿ ತಾನಾಗಬಲ್ಲಡೆ ನಾಸ್ತಿನಾಥ ಪರಿಪೂರ್ಣನೆಂಬೆ" ಎನ್ನುವ ಗೊಗ್ಗವ್ವೆ ಹೆಣ್ಣನ್ನು ಒಂದು ವಡವೆ-ವಸ್ತು ಎಂದು ಪರಿಗಣಿಸುವ ವ್ಯವಸ್ಥೆಗೆ ನೇರ ಪ್ರಶ್ನೆ ಕೇಳಿದ್ದಾಳೆ. ಇದೇ ಕೆಲಸವನ್ನು ಹೆಣ್ಣು ಮಾಡಿದರೆ ಗಂಡು ಅವಳ ಒಡವೆಯಾಗುವನೆ? ಇದಕ್ಕೇನು ಉತ್ತರ ಹೇಳುವಿರಿ ಎಂದು ಕೇಳುವ ಗೊಗ್ಗವ್ವೆಯ ಪ್ರಶ್ನೆಗೆ ಇಂದಿಗೂ ಉತ್ತರವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ, ನಾವು ಮಹಿಳೆಯರನ್ನು ಸಮಾನತೆಯಿಂದ ಕಾಣುವುದರಲ್ಲಿ ಸ್ವಲ್ಪಮಟ್ಟಿಗೆ ಉದಾರತೆಯನ್ನು ತೋರಿಸುವುದರಿಂದ ಇಂದು ಅನೇಕ ಮಹಿಳೆಯರು ಶಿಕ್ಷಣ ಪಡೆದು ವಿದ್ಯಾವಂತರಾಗಿದ್ದಾರೆ. ಉನ್ನತ ಶಿಕ್ಷಣವನ್ನು ಪಡೆದು ಪದವೀಧರರಾಗಿದ್ದಾರೆ, ಉದ್ಯೋಗಸ್ಥರಾಗಿದ್ದಾರೆ. ಮೇಲ್ನೋಟಕ್ಕೆ ಇವರು ಆರ್ಥಿಕವಾಗಿ ಸಬಲರಾಗಿ ಕಾಣುತ್ತಾರೆ. ಏಕೆಂದರೆ ಇವರ ದುಡಿಮೆಯ ಆದಾಯ ಕುಟುಂಬದ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸುವುದಕ್ಕೆ ಬಳಕೆಯಾಗುತ್ತಲಿದೆ.

ಪುರುಷನಂತೆ ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲಿ ಸಮರ್ಥವಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾಳೆ. ಆದರೂ ಶೈಕ್ಷಣಿಕ ಉನ್ನತ ಸ್ಥಾನಗಳಲ್ಲಿ ಮತ್ತು ರಾಜಕೀಯ ಕ್ಷೇತ್ರದಲ್ಲಿ ಕೆಲವು ಮಹಿಳೆಯರು ಮಾತ್ರ ಅವಕಾಶ ಪಡೆದುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಇಷ್ಟಾದರೂ ಲಿಂಗಸಮಾನತೆಯ ವಿಚಾರ ಬಂದಾಗ 12ನೇ ಶತಮಾನದ ಶರಣೆಯರಂತೆ ಇಂದಿನ ಮಹಿಳೆ ತನ್ನ ವ್ಯಕ್ತಿತ್ವವನ್ನು ಸ್ವತಂತ್ರವಾಗಿ ರೂಪಿಸಿಕೊಳ್ಳಲು ಸಾಧ್ಯವಾಗಿದೆಯೆ? ತನ್ನ ಅಸ್ಮಿತೆಯನ್ನು ಕಂಡುಕೊಳ್ಳಲು ಏಕೆ ವಿಫಲಳಾಗುತ್ತಿದ್ದಾಳೆ? ಹಾಗಾದರೆ ನಾವು ಅವಳಿಗೆ ಕೊಡುವ ಶಿಕ್ಷಣದ ಹಿಂದಿರುವ ಉದ್ದೇಶದಲ್ಲಿ, ಅವಳು ಉದ್ಯೋಗಸ್ಥಳಾಗಬೇಕೆಂದು ಬಯಸುವ ವಿಚಾರದಲ್ಲಿ ನಮ್ಮ ಸ್ವಾರ್ಥ, ಅಹಂಭಾವ ತುಂಬಿದೆಯೆ? ಯಜಮಾನ ಸಂಸ್ಕೃತಿಯ ವಾರುಸದಾರನಾದ ಪುರುಷನು ತನ್ನ ಹೆಂಡತಿ, ಸಹೋದರಿ ತನ್ನಂತೆ ವಿದ್ಯಾವಂತರಾದರೂ ಅವರೆಲ್ಲರೂ ತಾನು ಹೇಳಿದಂತೆ ಕೇಳಬೇಕೆಂದು ಏಕೆ ಬಯಸುತ್ತಾನೆ? ಹಾಗಾದರೆ ನಾವು ಹೆಣ್ಣನ್ನು ಕಾಣುವ ದೃಷ್ಟಿಯಲ್ಲಿ ಸಮಾನತೆ ಇಲ್ಲವೆ? ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೇಟಿ ಪಡಾವೊ ಬೇಟಿ ಬಚಾವೊ" ಎಂದು ಉದ್‍ಘೋಷಿಸಲು ಕಾರಣವೇನು? ವಚನಕಾರ್ತಿಯರ ಲಿಂಗಸಮಾನತೆಯ ವಿಚಾರಗಳು ಕೇವಲ ಓದುವದಕ್ಕೆ ಭಾಷಣಕ್ಕೆ ಮತ್ತು ಬರೆಯುವದಕ್ಕೆ ಮಾತ್ರ ಸೀಮಿತವಾಗಬೇಕೆ? ಶರಣರಂತೆ ಶರಣೆಯರು ಕಾಯಕ-ದಾಸೋಹ ತತ್ವವನ್ನು ನಂಬಿದವರು. ಪ್ರತಿಯೊಬ್ಬ ವ್ಯಕ್ತಿಯೂ ದುಡಿಯಬೇಕು, ತಾವು ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಶ್ರದ್ಧೆ, ನಿಷ್ಠೆಯಿಂದ ಮಾಡಬೇಕೆಂದು ಹೇಳಿದರು. ಪರಿಶುದ್ಧ ಮನಸ್ಸಿನಿಂದ ಮಾಡಿದ ಕಾಯಕದಿಂದ ಕೈಲಾಸ ಪ್ರಾಪ್ತಿಯಾಗುತ್ತದೆಂದು ಸ್ಪಷ್ಟವಾಗಿ ಹೇಳಿದರು. ಆದುದರಿಂದ ಆಯ್ದಕ್ಕಿ ಮಾರಯ್ಯನಿಗೆ ಕಾಯಕವೇ ಕೈಲಾಸವಾಗಿತ್ತು. ಕಾಯಕ-ದಾಸೋಹ ತತ್ವದ ಬಗೆಗೆ ಅಕ್ಕಮ್ಮ, ಆಯ್ದಕ್ಕಿ ಲಕ್ಕಮ್ಮ. ಬಾಚಿಕಾಯಕದ ಕಾಳವ್ವೆ, ಮಾರಯ್ಯನ ಪತ್ನಿ ಗಂಗಮ್ಮ ಮೊದಲಾದ ಶರಣೆಯರು ತಮ್ಮ ವಿಚಾರಗಳನ್ನು ತಿಳಿಸಿದ್ದಾರೆ. ಮಾಡುವ ಕಾಯಕದಲ್ಲಿ ಭೇದವನ್ನು ಎಣಿಸದೆ ಎಲ್ಲ ಕಾಯಕಗಳು ಸಮಾನವೆಂದು ಹೇಳಿದ್ದಾರೆ.

ಸೋಮಾರಿತನವೇ ಹೆಚ್ಚಾಗಿರುವ ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಶರಣೆಯರ ವಿಚಾರಗಳು ಪ್ರಸ್ತುತವಾಗಿವೆ. ಶರಣರಂತೆ ಶರಣೆಯರು ಕಾಯಕದಿಂದ ಬಂದ ಹಣವನ್ನು ದಾಸೋಹದ ಮೂಲಕ ಖರ್ಚಾಗಬೇಕೆಂದು ತಿಳಿಸಿದರು. ಸಂಗ್ರಹ ನಿರಾಕರಣೆಯ ಮೂಲಕ ನಿಸ್ವಾರ್ಥಿಗಳನ್ನಾಗಿ ಮಾಡುವ ಶರಣೆಯರ ನಡೆ-ನುಡಿ ನಮಗಿಂದು ಆದರ್ಶವಾಗಬೇಕಾಗಿದೆ. ಶರಣೆಯರಂತೆ ನಾವು ಮಾಡುವ ಕೆಲಸದಲ್ಲಿ ಭೇದಭಾವ ಮಾಡದೆ ನಮ್ಮ ಪಾಲಿಗೆ ಬಂದಂತಹ ಕೆಲಸ ದೇವರ ಕೆಲಸವೆಂದು ಭಾವಿಸಿ ಮಾಡಬೇಕು. ಆವಾಗ ವೃತ್ತಿಮೌಲ್ಯ ಹೆಚ್ಚಾಗುತ್ತದೆ. ನಿರೋದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ. ಕಾಯಕ-ದಾಸೋಹ ತತ್ವವನ್ನು ಅರ್ಥಮಾಡಿಕೊಂಡು ನಡೆದರೆ ವರ್ಗರಹಿತ ಸಮಾಜ ರೂಪಗೊಳ್ಳಲು ಸಾಧ್ಯವಿದೆ. ಶರಣರು ಬೌದ್ಧಿಕ ಮತ್ತು ಭೌತಿಕ ಶ್ರಮದಲ್ಲಾಗಲಿ ಅಥವಾ ಹೆಣ್ಣು- ಗಂಡಿನ ದೈಹಿಕ ಶ್ರಮದಲ್ಲಾಗಲಿ ಒಂದು ಹೆಚ್ಚು ಒಂದು ಕಡಿಮೆಯೆಂದು ಭೇದಭಾವ ಮಾಡಲಿಲ್ಲ. ಹೀಗಾಗಿ ಆ ಕಾಲದಲ್ಲಿ ಪ್ರತಿಯೊಂದು ವೃತ್ತಿಯೂ ಸಮಾನ ಗೌರವ ಪಡೆದು ವೃತ್ತಿಮೌಲ್ಯವಾಗಿ ಬೆಳೆಯಿತು. ಆದರೆ ಇಂದಿಗೂ ಕೂಡ ನಾವು ಮಹಿಳೆಯರ- ಪುರಷರ ದುಡಿಮೆಯ ಪರಿಶ್ರಮದಲ್ಲಿ ವ್ಯತ್ಯಾಸವನ್ನು ಕಾಣುತ್ತಿದ್ದೇವೆ. ಮಹಿಳೆಯರ ದುಡಿಮೆಯನ್ನು ಪುರುಷರ ದುಡಿಮೆಗೆ ಸಮಾನವೆಂದು ತಿಳಿಯುತ್ತಿಲ್ಲ. ವಿದ್ಯಾವಂತ ಮಹಿಳೆಯರು ಹೆಚ್ಚಿನ ವರಮಾನವನ್ನು ತೆಗೆದುಕೊಂಡು ದುಡಿಯುತ್ತಿದ್ದರೂ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳಲು ಪುರಷನನ್ನು ಅವಲಂಬಿತಳಾಗುತ್ತಿದ್ದಾಳೆ.

ಕೃಷಿ ವ್ಯವಸ್ಥೆಯಲ್ಲಿ ರೈತನಿಗಿಂತಲೂ ಹೆಚ್ಚು ಆತನ ಹೆಂಡತಿ ಹೊಲದಲ್ಲಿ ದುಡಿದರೂ ಆಕೆ ರೈತ ಎನಿಸಿಕೊಳ್ಳುವುದಿಲ್ಲ. ಬೌದ್ಧಿಕ ಮಟ್ಟದಲ್ಲಿ ದುಡಿಯುವ ಮಹಿಳೆಯ ಪರಿಶ್ರಮವನ್ನು ಸಮಾನವಾಗಿ ಪರಿಗಣಿಸಲಾಗುತ್ತಿದೆ. ಆದರೆ ಭೌತಿಕ ದುಡಿಮೆಯ ಪರಿಶ್ರಮವನ್ನು ಸಮಾನವಾಗಿ ಪರಿಗಣಿಸಲಾಗುತ್ತಿಲ್ಲ. ಹೀಗಾಗಿ ಮಹಿಳೆಯ ಪರಿಶ್ರಮವನ್ನು ಒಂದಿಲ್ಲ ಒಂದು ರೀತಿಯಲ್ಲಿ ಪೂರ್ವಗ್ರಹಪೀಡಿತ ದೃಷ್ಟಿಯಿಂದ ಕಾಣಲಾಗುತ್ತಿದೆ. ಶಿವಶರಣೆಯರು ಸತ್ಯ-ಅಹಿಂಸೆಯಂತಹ ಮೌಲ್ಯಗಳ ಕುರಿತು ಹೇಳಿದ್ದಾರೆ. ಇಂದು ಈ ಮೌಲ್ಯಗಳು ಅರ್ಥ ಕಳೆದುಕೊಳ್ಳತೊಡಗಿವೆ. ಸತ್ಯಕ್ಕೆ ಬದ್ಧರಾಗಿ ನಡೆಯುವುದೇ ಮಹಾಜ್ಞಾನದ ಆಚರಣೆ ಎಂದು ತಿಳಿಸಿದ್ದಾರೆ. ಉರಿಲಿಂಗ ಪೆದ್ದಿಯ ಪುಣ್ಯಸ್ತ್ರೀ ಕಾಳವ್ವೆ ಧರ್ಮದ ಹೆಸರಿನಲ್ಲಿ ನಡೆಸುವ ಹೋಮ; ಹೋಮದ ನಿಮಿತ್ತ ಪಶುಪ್ರಾಣಿಗಳು ಬಲಿಯಾಗುವ ಹಿಂಸಾಚಾರಣೆಯನ್ನು ವಿರೋಧಿಸಿದ್ದಾಳೆ. ಅಕ್ಕಮಹಾದೇವಿ ಜಾಲಗಾರನೊಬ್ಬನ ದೃಷ್ಟಾಂತ ಕೊಡುವುದರ ಮೂಲಕ ಜೀವಹಿಂಸೆ ಮಾಡಬಾರದೆಂದು ತನ್ನ ವಚನದಲ್ಲಿ ತಿಳಿಸಿದ್ದಾಳೆ. ಸಕಲ ಜೀವರಾಶಿಗಳ ಮೇಲೆ ನಡೆಯುವ ಹಿಂಸೆಯನ್ನು ವಿರೋಧಿಸಿ, ಅಹಿಂಸಾ ತತ್ವವನ್ನು ಎತ್ತಿಹಿಡಿದ ಶಿವಶರಣೆಯರ ನಿಲುವುಗಳು ಇಂದು ಅನಿವಾರ್ಯವಾಗುತ್ತವೆ.

ನಮ್ಮ ಮನಸ್ಸು ನಮ್ಮನ್ನು ಒಳ್ಳೆಯವರನ್ನಾಗಿ ಮತ್ತು ಕೆಟ್ಟವರನ್ನಾಗಿ ರೂಪಿಸುತ್ತದೆ. ಆದುದರಿಂದ ಶರಣೆಯರು ಮನಸ್ಸಿನ ಪರಿಶುದ್ಧತೆಗೆ ಹೆಚ್ಚಿನ ಮಹತ್ವವನ್ನು ಕೊಟ್ಟಿದ್ದಾರೆ. ನಮ್ಮೊಳಗಿರುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ-ಈ ಷಡ್‍ವರ್ಗಗಳೇ ನಮ್ಮ ವೈರಿಗಳಾಗಿವೆ. ನಮ್ಮೊಳಗಿರುವ ಈ ವೈರಿಗಳನ್ನು ಗೆದ್ದಾಗ ಮಾತ್ರ ಸುಖ-ಶಾಂತಿ ಪ್ರಾಪ್ತಿಯಾಗುತ್ತದೆ. ಇಲ್ಲದಿದ್ದರೆ ನೋವು, ಕಷ್ಟಗಳಿಗೆ ಸಿಲುಕಬೇಕಾಗುತ್ತದೆ. ಮಾನಸಿಕ ನೆಮ್ಮದಿ ಕಂಡುಕೊಳ್ಳಬೇಕಾದರೆ ಷಡ್‍ವರ್ಗಗಳಿಂದ ಮುಕ್ತರಾಗಬೇಕು. ಆದುದರಿಂದ ಲಿಂಗಮ್ಮ `ರೋಷ-ದ್ವೇಷ' ಮನಷ್ಯರನ್ನೇ ನಾಶಮಾಡುತ್ತವೆಂದು ವಿವರಿಸುತ್ತಾಳೆ. ಕಾಮವನ್ನು ತೊರೆದು ನಿಃಕಾಮಿಯಾಗುವ, ಲೋಭವನ್ನು ತೊರೆದು ಉದಾರಿಯಾಗುವ ಚಿತ್ತಶುದ್ಧಾತ್ಮನೇ ಮಹಾಭಕ್ತನೆಂದು ಸ್ಪಷ್ಟಪಡಿಸಿದ್ದಾಳೆ. ಮದ-ಮತ್ಸರಗಳನ್ನು ಬಿಡಲಾರದೆ ಘನವ ಕಾಣಲಾಗದೆಂದು ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮ ತಿಳಿಸಿದ್ದಾಳೆ. ಕಾಮ, ಮೋಹ, ಮದಗಳನ್ನು ತೊರೆಯದವರು ಎಷ್ಟು ಹಿರಿಯರಾದರೇನು? ಅವರು ಅನುಭಾವಿಗಳಲ್ಲವೆಂದು ಅಮುಗೆ ರಾಯಮ್ಮ ತಿಳಿಸುತ್ತಾಳೆ. ಮನುಷ್ಯರಲ್ಲಿ ಮೋಹವುಂಟಾಗಲು ಮನಸ್ಸಿನ ಚಂಚಲತೆಯೇ ಮುಖ್ಯ ಕಾರಣವೆಂದು ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ ಹೇಳುತ್ತಾಳೆ. ಮೋಹದ ಜಾಲದಲ್ಲಿ ಸಿಲುಕಿ ಗೊತ್ತು -ಗುರಿಗಳನ್ನೇ ಮರೆತ ಮನುಷ್ಯರ ಬಗೆಗೆ ಶರಣೆಯರು ವಿಡಂಬನೆ ಮಾಡಿದ್ದಾರೆ. ಮದದಿಂದ ಮೆರೆಯುವಂತಹ ಮನುಜರನ್ನು ಕಂಡು ಮರುಗಿದ್ದಾರೆ. ಷಡ್‍ವರ್ಗಗಳನ್ನು ಮೀರದ ಮನುಷ್ಯ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆಂದು ಎಚ್ಚರಿಸಿದ್ದಾರೆ. ಈ ಕಾರಣಕ್ಕಾಗಿಯೆ ಬಸವಣ್ಣನವರು ದೇಹವೆ ದೇಗುಲವಾಗಬೇಕೆನ್ನುತ್ತಾರೆ. ಅರ್ಥ, ಕಾಮದಂತಹ ಪುರಷಾರ್ಥಗಳಿಗೆ ಬೆನ್ನಹತ್ತಿದ ಮನುಷ್ಯನು ಧರ್ಮ, ಮೋಕ್ಷದಂತಹ ಪುರಷಾರ್ಥಗಳನ್ನು ಮರೆಯುತ್ತಿದ್ದಾನೆ. ವಾಮಮಾರ್ಗದಿಂದಾದರೂ ಮನುಷ್ಯ ತಾನು ಶ್ರೀಮಂತನಾಗಬೇಕೆಂದು ಬಯಸುತ್ತಾನೆ. ಇಂತಹ ಮನುಷ್ಯರಿಗೆ ನೀತಿ-ಅನೀತಿಯಲ್ಲಿ ವ್ಯತ್ಯಾಸ ಕಾಣುವುದಿಲ್ಲ. ಇಂದು ಸಮಾಜದಲ್ಲಿ ನಡೆಯುತ್ತಿರುವ ಲೈಂಗಿಕ ಅತ್ಯಾಚಾರ, ಅಪ್ರಾಪ್ತ ವಯಸ್ಸಿನ ಬಾಲಕಿಯರ ಮಾರಾಟ, ವಿವಾಹಿತ-ಅವಿವಾಹಿತ ಮಹಿಳೆಯರ ಮೇಲಿನ ದಬ್ಬಾಳಿಕೆ, ಕೌಟುಂಬಿಕ ಹಿಂಸೆ, ಅನಾಥ ಮತ್ತು ನಿರ್ಗತಿಕ ಹೆಣ್ಣುಮಕ್ಕಳ ಮತ್ತು ಹೆಂಗಸರ ಮೇಲೆ ನಡೆಯುತ್ತಿರುವ ಕೌರ್ಯ, ಹಿಂಸೆ ದಿನದಿನಕ್ಕೂ ಹೆಚ್ಚಾಗುತ್ತಲಿವೆ. ಇದಕ್ಕೆಲ್ಲಾ ಕಾರಣ ಮನುಷ್ಯನಲ್ಲಿರುವ ಕಾಮದ ಚಪಲತೆ ಮತ್ತು ಮೋಹವೆಂದು ಹೇಳಬಹುದು. ನೈತಿಕ ದುರ್ಬಲತೆಯಿಂದ ಬಳಲುತ್ತಿರುವ ಇಂದಿನ ಸಮಾಜಕ್ಕೆ ಶರಣೆಯರ ವಿಚಾರಗಳು ಪ್ರಸ್ತುತವಾಗುತ್ತವೆ.

ಶರಣರಂತೆ ಶರಣೆಯರ ದಾಂಪತ್ಯ ಪರಿಕಲ್ಪನೆ ಮಹತ್ವದ್ದಾಗಿದೆ. ಶರಣೆಯರು ಮದುವೆ ಎನ್ನುವುದು ಒಂದು ಪವಿತ್ರ ಬಂಧನವೆಂಬುದನ್ನು ನಂಬಿದರು. ಸತಿ-ಪತಿ ಒಂದಾಗಿ ಬದುಕಿದರೆ ಮಾತ್ರ ಆದರ್ಶ ದಂಪತಿಗಳಾಗಲು ಸಾಧ್ಯವೆಂದು ಭಾವಿಸಿದರು. ಗೊಗ್ಗವ್ವೆ ಸಾಮರಸ್ಯದಿಂದ ಕೂಡಿದ ದಾಂಪತ್ಯಕ್ಕೆ ಪ್ರಾಮುಖ್ಯತೆ ಕೊಡುತ್ತಾಳೆ. `ಗಾಳಿಗಂಧ ಬೆರತಂತೆ ಗಂಡ-ಹೆಂಡತಿ ಬೆರತಿರಬೇಕೆಂದು' ತಿಳಿಸಿದ್ದಾಳೆ. ಧರ್ಮಬಾಹಿರವಾದ ಕಾಮವನ್ನು ಶರಣೆಯರು ಒಪ್ಪುವುದಿಲ್ಲ. ಮದುವೆ ಚೌಕಟ್ಟಿನೊಳಗೆ ಗಂಡು-ಹೆಣ್ಣು ಕಾಮಸುಖವನ್ನು ಅನುಭವಿಸಬೇಕು. ಆಗ ಅವರಿಬ್ಬರ ಮಧ್ಯದ ಕಾಮ ಸಂಬಂಧ ನೈತಿಕವೆನಿಸಿಕೊಳ್ಳುತ್ತದೆ. ಮದುವೆ ಮಾಡಿಕೊಳ್ಳದೆ ಗಂಡು-ಹೆಣ್ಣು ದೈಹಿಕ ಸಂಬಂಧ ಬೆಳೆಸಿದರೆ ಅದು ಅನೈತಿಕ ಸಂಬಂಧವೆನಿಸುತ್ತದೆ. ಶರಣೆಯರಂತೆ ಶರಣರೂ ಕೂಡ ಇದೇ ವಿಚಾರವನ್ನು ಹೇಳಿದ್ದಾರೆ. ಲೈಂಗಿಕ ಅಪಾರಧಗಳಂತಹ ದುರಂತಗಳನ್ನು ತಡೆಗಟ್ಟುವುದಕ್ಕಾಗಿ ಶರಣರು ಪರಸತಿಯ ಸಂಗವನ್ನು ವಿರೋಧಿಸುತ್ತ, ಸತಿ-ಪತಿಗಳೊಂದಾದ ಭಕ್ತಿಯನ್ನು ಸ್ವಾಗತಿಸಿದ್ದಾರೆ. ಅಕ್ಕಮಹಾದೇವಿ ಮತ್ತು ಅಕ್ಕಮ್ಮ ಪರಸ್ತ್ರೀ ಸಂಗದ ವ್ಯಾಮೋಹ ಸಲ್ಲದೆಂದು ತಿಳಿಸಿದ್ದಾರೆ. ಮನುಷ್ಯ ತನ್ನಲ್ಲಿರುವ ಕಾಮಭಾವನೆಯನ್ನು ನೈತಿಕ ನೆಲೆಯಲ್ಲಿ ಅನುಭವಿಸದಿದ್ದರೆ ಗಂಡು-ಹೆಣ್ಣು ಇಬ್ಬರಿಗೂ ತೊಂದರೆ ತಪ್ಪಿದ್ದಲ್ಲ. ಆದರೂ ಅನೈತಿಕ ಸಂಬಂಧಗಳಿಂದ ಪುರಷನಿಗಿಂತಲೂ ಮಹಿಳೆ ಇಂದಿಗೂ ದೈಹಿಕ, ಮಾನಸಿಕ, ಆರ್ಥಿಕ, ಭಾವನಾತ್ಮಕ ಹಿಂಸೆಗೆ ಗುರಿಯಾಗುತ್ತಿದ್ದಾಳೆ. ಇದನ್ನು ತಪ್ಪಿಸಬೇಕಾದರೆ ದಾಂಪತ್ಯದೊಳಗಿನ ಕಾಮವನ್ನು ಒಪ್ಪುವ ಮತ್ತು ದಾಂಪತ್ಯದಾಚೆಗಿನ ಕಾಮವನ್ನು ವಿರೋಧಿಸುವ ಶರಣೆಯರ ನಿಲುವು ನಮ್ಮದಾಗಬೇಕು.

ಸಂಪ್ರದಾಯಬದ್ಧ ಮತ್ತು ಕಾನೂನುಬದ್ಧ ಮದುವೆಗಳನ್ನು ಸಮಾಜ ಒಪ್ಪುತ್ತದೆ. ಗಂಡ-ಹೆಂಡರಲ್ಲಿ ಪರಸ್ಪರ ನಿಸ್ವಾರ್ಥ-ಪ್ರೀತಿ-ತ್ಯಾಗ, ಸೌಹಾರ್ದತೆ-ಸಂಯಮ-ಸಮಾನತೆ ಭಾವವಿರದಿದ್ದರೆ ಅಂತಹ ದಾಂಪತ್ಯ ವಿರಸದಿಂದ ಕೊನೆಗೊಳ್ಳುತ್ತದೆ, ವಿವಾಹ ವಿಚ್ಛೇದನಕ್ಕೆ ಕಾರಣವಾಗುತ್ತದೆ. ಸಾಮಾನ್ಯವಾಗಿ ವಿವಾಹ ವಿಚ್ಛೇದನದಿಂದ ಪುರುಷನಗಿಂತ ಮಹಿಳೆ ಮಾನಸಿಕವಾಗಿ, ಸಾಮಾಜಿಕವಾಗಿ ಹೆಚ್ಚು ಹಿಂಸೆಗೊಳಗಾಗುತ್ತಿದ್ದಾಳೆ. ಪುರುಷಪ್ರಧಾನ ವ್ಯವಸ್ಥೆಯಲ್ಲಿ ಗಂಡಬಿಟ್ಟವಳನ್ನು ತುಚ್ಛವಾಗಿ ಕಾಣುತ್ತಾರೆ. ಆಕೆಯಲ್ಲಿಯೇ ನೂರೆಂಟು ದೋಷಗಳನ್ನು ಹುಡುಕುತ್ತಾರೆಯೇ ಹೊರತು ಆತನಲ್ಲಿರುವ ದೋಷಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಈ ವ್ಯವಸ್ಥೆಯ ದ್ವಿನೀತಿ ನಿಲುವಿನಿಂದ ಮುಕ್ತರಾಗಬೇಕಾದರೆ ಶರಣೆಯರ ಆದರ್ಶ ದಾಂಪತ್ಯ ನಮಗೆ ಪ್ರೇರಣೆಯಾಗಬೇಕು. ಆವಾಗ ವಿವಾಹ ವಿಚ್ಛೇದನಗಳ ಸಂಖ್ಯೆ ಕಡಿಮೆಯಾಗುತ್ತದೆ.

ಮನಸ್ಸಿನ ದೌರ್ಬಲ್ಯ, ಮನಸ್ಸಿನ ಚಂಚಲತೆ, ಸ್ವಚ್ಛಂದ ಕಾಮಪ್ರವೃತ್ತಿ ವಯಸ್ಸಿಗನುಗುಣವಾದ ದೈಹಿಕ ಆಕರ್ಷಣೆ, ವ್ಯಾಮೋಹ, ಸ್ವಾರ್ಥ, ಆರ್ಥಿಕ ಬಿಕ್ಕಟ್ಟು, ದುರಾಸೆ ಈ ಮೊದಲಾದ ಕಾರಣಗಳಿಂದಾಗಿ ವಿವಾಹಬಾಹಿರ ಸಂಬಂಧಗಳು ಹೆಚ್ಚುತ್ತಲಿವೆ. ಇದರಿಂದ ಕುಟುಂಬದ ಮೇಲೆ, ಸಮಾಜದ ಮೇಲೆ ದುಷ್ಪರಿಣಾಮವುಂಟಾಗುತ್ತಲಿದೆ. ಹೆಣ್ಣು-ಗಂಡು ಇಂತಹ ಸಂಬಂಧಗಳಿಂದ ಸುಖ-ಸಂತೃಪ್ತಿಯ ಬದಲಾಗಿ ನೋವು, ಹಿಂಸೆ, ಅವಮಾನ, ಬಗೆಹರಿಸಲಾಗದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪುರುಷ ಅಥವಾ ಮಹಿಳೆ ತನಗೆ ಮದುವೆಯಾದ ಗಂಡ ಅಥವಾ ಹೆಂಡತಿ, ಮಕ್ಕಳು, ಮೊಮ್ಮಕ್ಕಳು ಇದ್ದಾಗಲೂ ಪರಪುರುಷ ಅಥವಾ ಪರಸ್ತ್ರೀಯ ಸಂಬಂಧವನ್ನು ಹೊಂದಿರುತ್ತಾರೆ. ಸಂಸಾರವನ್ನು ಮಾಡುತ್ತಾರೆ. ಇಂತಹ ಅನೇಕ ಜನರು ವಿವಾಹಬಾಹಿರ ದಾಂಪತ್ಯದಿಂದ ಮತ್ತು ಬಹುಪತ್ನಿತ್ವ ದಾಂಪತ್ಯದಿಂದ ಮಾನಸಿಕ ಶಾಂತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಇನ್ನಷ್ಟು ದುರ್ಬಲರಾಗಿ ಅತಂತ್ರ ಸ್ಥಿತಿಯಲ್ಲಿ ತೊಳಲಾಡುತ್ತಿದ್ದಾರೆ. ಗಂಡ-ಹೆಂಡತಿ-ಮಕ್ಕಳ ಪರಸ್ಪರ ಸಂಬಂಧದಲ್ಲಿರುವ ಪ್ರೀತಿ-ವಿಶ್ವಾಸವನ್ನು ಕಳೆದುಕೊಂಡು ಬದುಕುತ್ತಿದ್ದಾರೆ. ಆದುದರಿಂದಲೇ ಇಂತಹ ದುರಂತಗಳನ್ನು ತಪ್ಪಿಸುವುದಕ್ಕಾಗಿ ಶರಣೆಯರು ಅನೈತಿಕ ಸಂಬಂಧಗಳನ್ನು ಮತ್ತು ಬಹುಪತ್ನಿತ್ವ ನೀತಿಯನ್ನು ವಿರೋಧಿಸಿದ್ದಾರೆ. ಈ ರೀತಿಯ ಶರಣೆಯರ ವಿಚಾರಗಳು ನಮಗೆ ಪುಸ್ತಕದ ಕಾನೂನಿಗಿಂತಲೂ ಪರಿಶುದ್ಧ ಮನಸ್ಸಿನ ಕಾನೂನು ದೊಡ್ಡದೆಂದು ತಿಳಿಸಿಕೊಡುತ್ತವೆ. ನೈತಿಕ ದುರ್ಬಲತೆಯಿಂದ ಬಳಲುತ್ತಿರುವ ಇಂದಿನ ಸಮಾಜಕ್ಕೆ, ಶರಣೆಯರು ತಿಳಿಸಿದ ವಿವಾಹ ಮತ್ತು ದಾಂಪತ್ಯದ ವಿಚಾರಗಳು ಪ್ರಸ್ತುತವಾಗಿವೆ.

ಈ ಅಂಕಣದ ಹಿಂದಿನ ಬರೆಹಗಳು:
ಆಗಮ ಮೋಹಿನಿ
ಬತ್ತಲೇಶ್ವರನ ಪುಣ್ಯಸ್ತ್ರೀ ಗುಡ್ಡವ್ವೆ
ಬೆಡಗಿನ ಭಾಷೆಯಲ್ಲಿ ವಚನಕಾರ್ತಿಯರು
ವಿಡಂಬನೆ
ಶರಣರ ಸಮಕಾಲೀನ ವಚನಕಾರ್ತಿ ‘ಸೂಳೆ ಸಂಕವ್ವೆ’
ಜಾತ್ಯಾತೀತ ಮನೋಭಾವ
ಗರತಿಯರ ಹಾಡಿನಲ್ಲೂ ನಲಿದಾಡುವ ಶಿವಶರಣೆಯರು

ಲೌಕಿಕದ ಮೂಲಕವೇ ಅಲೌಕಿಕದ ಹಾದಿ
ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ ಮತ್ತು ಕದಿರ ರೆಮ್ಮವ್ವೆ
ರಾಜವೈಭವ ತೊರೆದು ಜಾತಿಭೇದದ ವಿರುದ್ಧ ಮಾತನಾಡಿದ ಬೊಂತಾದೇವಿ
ಲೌಕಿಕದ ಮೂಲಕವೇ ಆಧ್ಯಾತ್ಮವನ್ನು ಹೇಳಿರುವ ಗೊಗ್ಗವ್ವೆ
ಶರಣಧರ್ಮ ರಕ್ಷಣೆಗೆ ನಿಂತಿದ್ದ ಗಂಗಾಂಬಿಕೆ
ಮಹತ್ವದ ವಚನಕಾರ್ತಿ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಶಿವಶರಣೆ ಅಕ್ಕನಾಗಮ್ಮ
ಶಿವಶರಣೆ ಆಯ್ದಕ್ಕಿ ಲಕ್ಕಮ್ಮ
ಶಿವಶರಣೆ ಸತ್ಯಕ್ಕ
ಮುಕ್ತಾಯಕ್ಕ
ಮೋಳಿಗೆ ಮಹಾದೇವಿ
ಹಡಪದಪ್ಪಣ್ಣಗಳ ಪುಣ್ಯಸ್ತ್ರಿ ಲಿಂಗಮ್ಮ

ಶಿವಶರಣೆ ಅಕ್ಕಮ್ಮ
ನೀಲಾಂಬಿಕೆ
ಅಕ್ಕಮಹಾದೇವಿ
ಚರಿತ್ರೆ ಅಂದು-ಇಂದ

 

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...