ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ

Date: 24-04-2022

Location: ಬೆಂಗಳೂರು


'ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಬೇಕೆಂದು ಗಣಾಚಾರ ಹೇಳುತ್ತದೆ. ಹೀಗಾಗಿ ಗಣಾಚಾರದ ಮೂಲಕ ಬಂಡಾಯವೆಂಬುದು ಶರಣಸಿದ್ಧಾಂತದಲ್ಲಿ ಸೇರಿಕೊಂಡಿದೆ' ಎನ್ನುತ್ತಾರೆ ಲೇಖಕ ಬಸವರಾಜ ಸಬರದ ಅವರು ತಮ್ಮ ‘ಶರಣಧರ್ಮ’ ಅಂಕಣದಲ್ಲಿ ಶರಣಧರ್ಮದ ಪ್ರಾಣವಾದ ಪಾಂಚಾಚಾರಗಳಲ್ಲಿ ಮತ್ತೊಂದು ಮುಖ್ಯ ಅಂಶವಾದ ಗಣಾಚಾರದ ಕುರಿತು ವಿಶ್ಲೇಷಿಸಿದ್ದಾರೆ.

ಗಣಾಚಾರವು ಪಂಚಾಚಾರಗಳಲ್ಲಿಯೇ ವಿಶಿಷ್ಟವಾದುದಾಗಿದೆ. ಸಮಾಜವ್ಯವಸ್ಥೆಯಲ್ಲಿ ನಡೆಯುವ ಅನ್ಯಾಯ, ಅತ್ಯಾಚಾರದ ವಿರುದ್ಧ ಎದ್ದುನಿಲ್ಲುವುದೇ ಗಣಾಚಾರವಾಗಿದೆ. ಶರಣಸಿದ್ಧಾಂತಗಳ ವಿರುದ್ಧ ನಡೆದಾಗ, ಶರಣರಿಗೆ ಅನ್ಯಾಯವಾದಾಗ, ಶರಣರ ಹತ್ಯೆಗಳಾದಾಗ ಭಕ್ತರು ಸುಮ್ಮನೆ ಕೂಡಬಾರದು, ಅಂತಹ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಬೇಕೆಂದು ಗಣಾಚಾರ ಹೇಳುತ್ತದೆ. ಹೀಗಾಗಿ ಗಣಾಚಾರದ ಮೂಲಕ ಬಂಡಾಯವೆಂಬುದು ಶರಣಸಿದ್ಧಾಂತದಲ್ಲಿ ಸೇರಿಕೊಂಡಿದೆ. 

ಗಣಾಚಾರದಲ್ಲಿ ಎರಡು ಬಗೆ, ಒಂದು ತನ್ನೊಳಗಡೆ ನಡೆಯುವ ಗಣಾಚಾರ; ಮತ್ತೊಂದು ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ದ ನಡೆಯುವ ಗಣಾಚಾರ. ತಾನು ತಪ್ಪು ಮಾಡಿದಾಗ, ತನ್ನನ್ನೇ ತಿದ್ದಿಕೊಳ್ಳಲು ನಡೆಸುವ ಉಪವಾಸ, ದೇಹದಂಡನೆ ಮೊದಲಾದವುಗಳು ಒಂದು ರೀತಿಯವಾದರೆ, ಸಮಾಜವ್ಯವಸ್ಥೆಯಲ್ಲಿ ನಡೆಯುವ ಅನ್ಯಾಯ-ಅತ್ಯಾಚಾರದ ವಿರುದ್ಧದ ಪ್ರತಿಭಟನೆಗಳು ಸಾಮಾಜಿಕ ಗಣಾಚಾರವಾಗಿವೆ. ತೆಕ್ಕೆಕಾಯಕದವರು, ಮುಳ್ಳಾವಿಗೆಯವರು, ಶಸ್ತ್ರಕಾಯಕದವರು ಈ ರೀತಿಯ ಗಣಾಚಾರಿಗಳಾಗಿದ್ದರು. ದುಶ್ಚಟಕ್ಕೊಳಗಾದವರ ಮನೆಯ ಕಂಬಕ್ಕೆ ಹಾಯ್ದುಕೊಂಡು ಪ್ರತಿಭಟಿಸುತ್ತಿದ್ದರು. ದುರ್ನಡತೆ ಬಿಡುವವರೆಗೆ ನ್ಯಾಯ ಸಿಗುವವರೆಗೆ ಮುಳ್ಳಾವಿಗೆಯ ಮೇಲೆ ನಿಂತು, ಕಾಲಲ್ಲಿ ರಕ್ತ ಬಂದರೂ ಪ್ರತಿಭಟಿಸುತ್ತಿದ್ದರು. ಇವೆಲ್ಲವುಗಳು ಗಣಾಚಾರದ ಭಾಗಗಳೇ ಆಗಿವೆ. 

              “ಲಿಂಗಮುಖದಿಂದ ಬಂದ ಪ್ರಸಾದವಲ್ಲದೆ ಕೊಂಡೆನಾದಡೆ
               ನಿಮ್ಮಾಣೆ, ನಿಮ್ಮ ಪ್ರಮಥರಾಣೆ,
               ಲಿಂಗಾರ್ಪಿತವಲ್ಲದ ಉದಕವ ಮುಕ್ಕುಳಿಸಿದಡೆ 
               ಸಲ್ಲೆನು ನಿಮ್ಮ ಗಣಾಚಾರಕ್ಕಯ್ಯಾ.
               ಲಿಂಗಾರ್ಪಿತವಲ್ಲದೆ ಹುಲ್ಲು ಕಡ್ಡಿಯ ಕೊಂಡಡೆ ಬಲ್ಲೆ, 
               ಮುಂದೆ ಭವ ಘೋರ ನರಕವೆಂಬುದ. 
              ನಿಮಗೆತ್ತಿದ ಕರದಲ್ಲಿ ಮತ್ತೊಂದಕ್ಕೆ ಕೈಯಾನೆನು
              ಅಳವರಿಯದೆ ನುಡಿದೆನು
              ಕಡೆಮುಟ್ಟಿ ಸಲೆಸದಿದ್ದಡೆ, ತಲೆದಂಡ, ತಲೆದಂಡ 
              ಕೂಡಲಸಂಗಮದೇವಾ.”
             -ಬಸವಣ್ಣ(ಸ.ವ.ಸಂ.1.ವ:786)

ಈ ವಚನದಲ್ಲಿ ಬಸವಣ್ಣನವರು ಗಣಾಚಾರದ ಸ್ಪಷ್ಟ ಚಿತ್ರಣವನ್ನು ಕೊಟ್ಟಿದ್ದಾರೆ. ಲಿಂಗಾರ್ಪಿತವಲ್ಲದ ನೀರನ್ನು ಮುಕ್ಕಳಿಸಿದರೂ ಅದು ಗಣಾಚಾರಕ್ಕೆ ಒಳಗಾಗುತ್ತದೆಂದು ಹೇಳಿದ್ದಾರೆ. ಶರಣರ ಸಿದ್ಧಾಂತದ ಪ್ರಕಾರ ನಡೆಯದಿದ್ದರೆ ತಲೆದಂಡ, ತಲೆದಂಡವೆಂದು ಹೇಳಿದ್ದಾರೆ. ಗಣಾಚಾರವು ತಾನು ತಪ್ಪುಮಾಡಿದರೆ, ತನ್ನಷ್ಟಕ್ಕೆ ತಾನೇ ಹಾಕಿಕೊಳ್ಳಬಹುದಾದ ನಿರ್ಬಂಧವಾಗಿದೆ ಮತ್ತು ತನ್ನನ್ನು ತಾನೇ ಶಿಕ್ಷೆಗೊಳ ಪಡಿಸಿಕೊಳ್ಳುವ ವಿಧಾನವಾಗಿದೆ.

'ಎಲ್ಲ ಜನವಹುದೆಂಬುದೆ ಸದಾಚಾರ, ಹಿಡಿದ ವ್ರತ ನಿಯಮವ ಬಿಡದಿರುವದೆ ನಿಯತಾಚಾರ, ಶಿವನಿಂದೆಯ ಕೇಳದಿಹುದೆ ಗಣಾಚಾರ’ (ಏ:987) ಎಂದು ಚೆನ್ನಬಸವಣ್ಣನವರು ಹೇಳಿದ್ದಾರೆ. ಅವರು ಮುಂದುವರೆದು ಕೇವಲ ಶಿವನಿಂದೆ ಮಾತ್ರವಲ್ಲ, ಶಿವಶರಣರ ನಿಂದೆಯನ್ನು ಕೇಳಲಾಗದೆಂದು ತಿಳಿಸಿದ್ದಾರೆ. ‘ಮಡಿವಾಳಯ್ಯ ತನ್ನ ದೇಹವ ಕೊಟ್ಟು, ಗಣಾಚಾರದ ಶಕ್ತಿ ಪ್ರಸಾದವ ಪಡೆದ(ವ:887)’ ಎಂದು ಹೇಳಿರುವ ಸಿದ್ಧರಾಮ ಶಿವಯೋಗಿಗಳು ಗಣಾಚಾರದ ಶಕ್ತಿ ಬಹುದೊಡ್ಡದೆಂದು ತಿಳಿಸಿದ್ದಾರೆ. ಮಡಿವಾಳ ಮಾಚಿದೇವರು ಮತ್ತು ಹಡಪದಪ್ಪಣ್ಣನಂತವರು ವೀರ ಗಣಾಚಾರಗಳಾಗಿದ್ದರು.

ಸದ್ಭಕ್ತಿ, ಸಮ್ಯಜ್ಞಾನ, ಷಟ್‍ಸ್ಥಲ ಮಾರ್ಗವ ಹಿಡಿದು ನಿಜಾಚರಣೆಯಲ್ಲಿ ಆಚರಿಸುವವರೇ ಶಿವಭಕ್ತರು, ಇಂತಹ ಶಿವಭಕ್ತರಿಗೆ ಯಾರಾದರೂ ಅನ್ಯಾಯ ಮಾಡಿದರೆ ತಾನು ಸಹಿಸುವುದಿಲ್ಲವೆಂದು ಅಂಬಿಗರ ಚೌಡಯ್ಯ ಹೇಳಿದ್ದಾರೆ, ದರ್ಪ ತೋರಿಸುವವರನ್ನು, ದುರಾಚಾರಿಗಳನ್ನು ಸುಮ್ಮನೆ ಬಿಡಬಾರದೆಂದು ಚೌಡಯ್ಯನವರು ತಿಳಿಸಿದ್ದಾರೆ.

                       “...ಗುರುಲಿಂಗಜಂಗಮ ಪಾದೋದಕ ಪ್ರಸಾದ 
                         ಭಸ್ಮ ರುದ್ರಾಕ್ಷಿ ಮಂತ್ರಗಳೆಂಬ ಅಷ್ಟಾವರಣಗಳು
                         ತನ್ನ ಪ್ರಣವ ಸ್ವರೂಪವಾಗಿ ಅವುಗಳ ನಿಂದೆಯನ್ನು ಕೇಳಿ ಸೈರಿಸದೆ
                         ಶಿಕ್ಷಿಸುವೆನೆಂಬ ನಿಷ್ಠೆಗೊಂಡುದೇ ಗಣಾಚಾರ ನೋಡಯ್ಯ”
                        -ಅಕ್ಕಮಹಾದೇವಿ(ಸ.ವ.ಸಂ.5,ವ:314)

ಅಕ್ಕಮಹಾದೇವಿ ಈ ವಚನದಲ್ಲಿ ಗಣಾಚಾರದ ಸ್ಪಷ್ಟಕಲ್ಪನೆಯನ್ನು ನೀಡಿದ್ದಾರೆ. ಅಷ್ಟಾವರಣಗಳು ಶಿವಭಕ್ತನ ಅಂಗವಾಗಿವೆ. ಇಂತಹ ಅಷ್ಟಾವರಣಗಳ ಕುರಿತು ಯಾರಾದರೂ ತುಚ್ಛವಾಗಿ ಮಾತನಾಡಿದರೆ, ನಿಂದಿಸಿದರೆ, ಅಂತಹ ನಿಂದೆಯನ್ನು ಕೇಳಿ ಸೈರಿಸಬಾರದು ಅಂತವರನ್ನು ಶಿಕ್ಷೆಗೊಳಪಡಿಸಬೇಕು, ಅದೇ ಗಣಾಚಾರವೆಂದು ಸ್ಪಷ್ಟಪಡಿಸಿದ್ದಾರೆ. ಹೀಗೆ ಅನೇಕ ವಚನಕಾರರು ತಮ್ಮ ವಚನಗಳಲ್ಲಿ ಗಣಾಚಾರದ ಬಗೆಗೆ ಚರ್ಚಿಸಿದ್ದಾರೆ.

ಡಾ. ಬಸವರಾಜ ಸಬರದ
ಮೊಬೈಲ್ ನಂ: 9886619220

ಈ ಅಂಕಣದ ಹಿಂದಿನ ಬರಹಗಳು:
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು
ವಸುಮತಿ ಉಡುಪ ಅವರ –“ಮೃಗತೃಷ್ಣಾ”
ಜಯಶ್ರೀ ಕಂಬಾರ ಅವರ – “ಮಾಧವಿ”
ವಿಜಯಶ್ರೀ ಸಬರದ ಅವರ –“ಉರಿಲಿಂಗ”
ಲಲಿತಾ ಸಿದ್ಧಬಸವಯ್ಯನವರ “ಇನ್ನೊಂದು ಸಭಾಪರ್ವ”
ಎಂ. ಉಷಾ ಅವರ-“ಶೂಲಿ ಹಬ್ಬ” (2015)
ಪಿ. ಚಂದ್ರಿಕಾ ಅವರ “ಮೋದಾಳಿ”
ದು.ಸರಸ್ವತಿಯವರ-“ರಾಮಾಯ್ಣ”
ಮಹಿಳಾ ವೃತ್ತಿನಾಟಕಗಳ ಪ್ರಾಯೋಗಿಕ ವಿಮರ್ಶೆ
ಮಹಿಳಾ ರಂಗಭೂಮಿ ಪರಂಪರೆ

 

MORE NEWS

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...