ತುರ್ತು ನಿರ್ಗಮನದ ವಿಲಕ್ಷಣ ಕ್ಷಣಗಳು

Date: 13-11-2021

Location: ಬೆಂಗಳೂರು


‘ಹೊಸ ವಿಮಾನವೊಂದು ಸಾವಿರಗಟ್ಟಲೆ ಭಾಗಗಳನ್ನು ಜೋಡಿಸಿಕೊಂಡು ರೆಕ್ಕೆ ಪುಕ್ಕ ಬಡಿದು  ಆಕಾಶಕ್ಕೇರುವ ಮೊದಲು ವಿಧ ವಿಧದ ಪರೀಕ್ಷೆಗೊಳಪಟ್ಟು ಉತ್ತೀರ್ಣವಾಗಿ ಪರವಾನಿಗೆ ಪಡೆಯಬೇಕಾಗುತ್ತದೆ’ ಎನ್ನುತ್ತಾರೆ ವಿಮಾನಶಾಸ್ತ್ರ ತಂತ್ರಜ್ಞ ಯೋಗೀಂದ್ರ ಮರವಂತೆ. ಅವರು ತಮ್ಮ ಏರೋ ಪುರಾಣ ಅಂಕಣದಲ್ಲಿ ತುರ್ತು ನಿರ್ಗಮನದ ಕುರಿತು ವಿಶ್ಲೇಷಿಸಿದ್ದಾರೆ. 

ಇದೀಗ ನಾವು ಕಚೇರಿ, ಶಾಲೆ, ಆಸ್ಪತ್ರೆ, ಮನೆ ಅಥವಾ ವಾಹನ ಹೀಗೆ ಎಲ್ಲೇ ಇರುವವರಾದರೂ ಅಲ್ಲೊಂದು "ತುರ್ತು ನಿರ್ಗಮನ"ದ ಸನ್ನೆ ಸೂಚನೆ ಕಾಣಿಸಬಹುದು. ಅಂತಹ ನಿರ್ಗಮನಕ್ಕೆಂದೇ ಇರುವ ಬಾಗಿಲು, ಮಾರ್ಗ, ಮತ್ತೆ ಅದನ್ನು ಬಳಸಬೇಕಾದ ತುರ್ತಿನ ಹೊತ್ತಿನಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗರೂಕತೆಗಳು ನಿರ್ದೇಶನಗಳ ಬಗ್ಗೆ ವಿಶೇಷ ಸಲಹೆ ಟಿಪ್ಪಣಿಗಳೂ ಅಲ್ಲೇ ಗೋಡೆಯ ಮೇಲೆ ಇರಬಹುದು ಅಥವಾ ಇನ್ಯಾರಿಂದಲೋ ಕೇಳಿರಬಹುದು. "ತುರ್ತು ನಿರ್ಗಮನ" ಎನ್ನುವ ಜೋಡಿ ಪದಗಳ ಬಳಕೆ ಬೇರೆ ಬೇರೆ  ಸಂದರ್ಭದಲ್ಲಿ ಬೇರೆ ಬೇರೆ  ಅರ್ಥ ಕಲ್ಪನೆ ಹುಟ್ಟಿಸಬಹುದಾದರೂ ವಿಮಾನಗಳ ಮಟ್ಟಿಗೆ  ಅವು ಬಹುತೇಕ ಸಾವು ಬದುಕಿನ ಆಯ್ಕೆಯಾಗಿಯೇ ಎದುರು ಬರುತ್ತವೆ. ತುರ್ತು ನಿರ್ಗಮನ ಹೇಗೆ ಯಾಕೆ ಎನ್ನುವ ನಿರ್ದೇಶನಗಳನ್ನು ತಿಳಿದು ವಿಮಾನಗಳನ್ನು ವಿನ್ಯಾಸಗೊಳಿಸುವುದು ತಯಾರಕರ ಜವಾಬ್ದಾರಿ, ಅಂತಹ ಮಾರ್ಗಗಳನ್ನು ಪ್ರಕ್ರಿಯೆಯನ್ನು ಹೇಗೆ ಎಂದು ಬಳಸಬಹುದು ತಿಳಿದುಕೊಂಡು ಪ್ರಯಾಣಿಕರಿಗೆ ಮನದಟ್ಟು ಮಾಡುವುದು ವಿಮಾನವನ್ನು ಕೊಂಡು ನಡೆಸುವ ಏರ್ಲೈನ್ ಗಳ ಅದರ ಸಿಬ್ಬಂದಿಗಳ ಹೊಣೆ ಮತ್ತೆ ವಿಮಾನದ ಒಳಗೆ ಹೇಳಿಸಿಕೊಂಡ ಸುರಕ್ಷತೆಯ ಪಾಠಗಳನ್ನು ಕೇಳಿ ಸಂದರ್ಭ ಬಂದರೆ ಪಾಲಿಸಿ ತುರ್ತು ಮಾರ್ಗಗಳ ಮೂಲಕ ಪಾರಾಗುವ ಪ್ರಯತ್ನ ಯಾತ್ರಿಗಳದು. ಹೀಗೆ ಯಾವುದೇ ವಿಮಾನದಲ್ಲಿ ಆಕಸ್ಮಿಕವಾಗಿ ಜರುಗುವ ತುರ್ತು ನಿರ್ಗಮನ ಯಶಸ್ವಿಯಾಗಬೇಕಾದರೆ ಹಲವು ಪಾಲುದಾರರು ಸಮರ್ಪಕವಾಗಿ ಸಮಯೋಚಿತವಾಗಿ ವರ್ತಿಸಬೇಕು.

ತುರ್ತು ನಿರ್ಗಮನದ ಬಗೆಗಿನ ತೀರ ಹಳೆಯದಲ್ಲದ ಘಟನೆ  2016ರ ಆಗಸ್ಟ್ 3ರಂದು ತಿರುವನಂತಪುರದಿಂದ ಹೊರಟು ದುಬೈ ನಿಲ್ದಾಣವನ್ನು ತಲುಪಿದ ವಿಮಾನದ್ದು. ಅಂದು ಆ ವಿಮಾನ ತನ್ನ ಯೋಜಿತ ಅವರೋಹಣವನ್ನು ಅಪಘಾತದೊಂದಿಗೆ ಮುಗಿಸಿತ್ತು.  ಆ ವಿಮಾನದ ಪ್ರಯಾಣಿಕರು ಮತ್ತೆ ಅವರ ಮನೆಯವರು ಅಂದಿನ ದುಸ್ವಪ್ನವನ್ನು ಈಗ ಮರೆಯುತ್ತಿರಬಹುದು; ಪ್ರಯಾಣಿಕರು ಹಾಗು ವಿಮಾನ ಸಿಬ್ಬಂದಿಗಳನ್ನು ಸೇರಿ ಎಲ್ಲ 300 ಜನರೂ ಜೀವಾಪಾಯದಿಂದ ಪಾರಾಗಿ  ಹೊರಬಂದರೆಂದು, ವಿಮಾನಕ್ಕೆ ಅಪಘಾತದ ನಂತರ ತಗುಲಿದ ಬೆಂಕಿಯನ್ನು ಆರಿಸುವಾಗ ಅಗ್ನಿಶಾಮಕ ಸಿಬ್ಬಂದಿ ಜೀವತೆತ್ತನೆಂದು ವಿಮಾನ ದುರಂತಗಳ ವಿವರ ಕಲೆಹಾಕುವ ಇತಿಹಾಸಕಾರರು ವಿಮಾನಯಾನ ಚರಿತ್ರೆಗೆ ಇನ್ನೊಂದು ಪುಟ ಈಗಾಗಲೇ ಸೇರಿಸಿಯಾಗಿದೆ. "ಸೈಕಲ್ಲು ಸವಾರಿಗಿಂತ ವಿಮಾನಯಾನ ಸುರಕ್ಷಿತ" ಎಂದು ಬೀಗುವ, " ಜಗತ್ತಿನಲ್ಲಿ ಪ್ರತಿ ವರ್ಷವೂ ಸೈಕಲು ಅಪಘಾತದಲ್ಲಿ ಸಾಯುವವರಿಗಿಂತ ಕಡಿಮೆ ಜನರು ವಿಮಾನ ದುರಂತದಲ್ಲಿ ಸಾಯುತ್ತಾರೆ " ಎನ್ನುವ ಬಗ್ಗೆ ಪುರಾವೆಗಳನ್ನು ಕೊಟ್ಟು ಮಾತನಾಡುವ   ವಿಮಾನ ತಯಾರಿಸುವ ಕಚೇರಿಯಲ್ಲಿ ನಾನು ಕೆಲಸ ಮಾಡುತ್ತೇನೆ. ಕೆಲವು ವಿಷಯಗಳ ಮಟ್ಟಿಗೆ ಮನುಷ್ಯರಿಗಿಂತ ವಿಮಾನಗಳ ಜೊತೆ ಹತ್ತಿರವಾದ ಸಂಬಂಧ ಇರಿಸಿಕೊಂಡ ವಿಚಿತ್ರ ಜೀವಿಗಳು ನಾವು. ಜಗತ್ತಿನ ಯಾವ ಮೂಲೆಯಲ್ಲಿ ವಿಮಾನ ಅಪಘಾತ ಆದರೂ ನಮ್ಮನ್ನು ಕಳವಳ ಆವರಿಸುತ್ತದೆ. ಇದು ನಮ್ಮ ಏರ್ಬಸ್ ಕಂಪೆನಿಯ ವಿಮಾನವೇ ಅಥವಾ ನಮ್ಮ ಬದ್ಧ ಸ್ಪರ್ಧಿ  ಅಮೆರಿಕದ ಬೋಯಿಂಗ್ ಕಂಪೆನಿಯದೆ ಎನ್ನುವಲ್ಲಿಂದ  ಈ ದುರಂತ ನಮಗೆ ಯಾವ ಪಾಠವನ್ನು ನೀಡಬಹುದು ಎನ್ನುವ ತನಕ  ಚರ್ಚೆಗಳು ಹೊರಗೆಲ್ಲೂ ಸುದ್ದಿ ಆಗದೆ ತಣ್ಣಗೆ ನಡೆಯುತ್ತವೆ.  ಹಾಗೆಯೇ ವಿಮಾನವೊಂದು  ಅಪಘಾತದಿಂದ ಪಾರಾದರೆ ವಿಮಾನ ವಿಜ್ಞಾನಕ್ಕೆ ಮತ್ತು ವಿನ್ಯಾಸಕ್ಕೆ ದೊರೆತ ಜಯ ಎಂದು ಬಗೆದು ಅತೀವ ಸಂತಸವನ್ನೂ ಪಡುತ್ತೇವೆ.

ದುಬೈಯಲ್ಲಿ ಅಂದು ವಿಮಾನದಲ್ಲಿ ಪ್ರಯಾಣಿಸಿದವರಿಗೆ ಮರುಜನ್ಮವನ್ನೂ, ವಿಮಾನ ತಯಾರಿಸಿದವರಿಗೆ ಹೆಮ್ಮೆಯನ್ನೂ ಮೂಡಿಸಿದ ಈ ವಿಮಾನ ಅವಗಢ ವಿಮಾನ ವಲಯದಲ್ಲೊಂದು ಕಲರವವನ್ನು ಹುಟ್ಟಿಸಿ ಹೊಸ ಚರ್ಚೆಗೆ ನಾಂದಿಯಾಗಿತ್ತು. ಇದಕ್ಕೆ ಕಾರಣ ಪ್ರಯಾಣಿಕನೊಬ್ಬ ವಿಮಾನದಿಂದ ತುರ್ತು ನಿರ್ಗಮಿಸ ಬೇಕಾದ ಕೊನೆಯ ಹೊತ್ತಲ್ಲಿ ತೆಗೆದ 83 ಸೆಕೆಂಡ್ ಗಳ ವಿಡಿಯೋ ಚಿತ್ರೀಕರಣ. ತ್ವರಿತವಾಗಿ ವಿಮಾನದಿಂದ ಹೊರಬೀಳಬೇಕಾದ ಸಂದರ್ಭದಲ್ಲಿ ತನ್ನ ಜೀವಕ್ಕೆ ಅಪಾಯ ಇದೆ ಎಂದು ತಿಳಿದೋ ಅಥವಾ  ತಿಳಿಯದೆಯೋ ವಿಮಾನದ ಒಳಗೇನು ನಡೆಯುತ್ತಿದೆ ವಿಮಾನ ಕಿಟಕಿಯ ಹೊರಗೆ ಏನು ಕಾಣುತ್ತಿದೆ ಎಂದು  ವಿಡಿಯೋ ಚಿತ್ರೀಕರಿಸುವ ಮನೋಸ್ಥಿತಿ ಚರ್ಚೆಯ ಒಂದು ವಿಷಯ. ಗಗನ ಸಖಿಯರು ವಿಮಾನ ಸಿಬ್ಬಂದಿಗಳು ಪ್ರಯಾಣಿಕರ ಬಳಿ "ತುರ್ತಾಗಿ ನಿರ್ಗಮಿಸಿ" ಎಂದು ಗಂಟಲು ಬಿರಿಯುವಂತೆ ಕೂಗುವ ಹೊತ್ತಲ್ಲಿ ಹಲವು ಪ್ರಯಾಣಿಕರು ತಮ್ಮ ಬ್ಯಾಗ್ ಎಲ್ಲಿದೆ, ಲ್ಯಾಪ್ಟಾಪ್ ಎಲ್ಲಿದೆ ಎಂದು ಅರಸುತ್ತಿದ್ದರು, ಸ್ವಲ್ಪ ತಡ ಆದರೂ ಅಡ್ಡಿಲ್ಲ ತಮ್ಮ ಸಾಮಾನುಗಳನ್ನು ಹಿಡಿದುಕೊಂಡೇ  ಹೊರಬೀಳುವ ಯೋಚನೆಯಲ್ಲಿ ;   ಹೀಗೆ ತಮ್ಮ ಸ್ವತ್ತನ್ನು ತೆಗೆಯುವ ಭರಾಟೆಯಲ್ಲಿ ತಮ್ಮ ಜೀವದೊಂದಿಗೆ ಆಟವಾಡುವುದರ ಜೊತೆಗೆ, ವಿಮಾನದಿಂದ ಅತಿ ಬೇಗದಲ್ಲಿ  ಹೊರ ನಡೆಯಬೇಕಾದ ಇತರ ಪ್ರಯಾಣಿಕರಿಗೂ ಅಡ್ಡಿಪಡಿಸುವ ನಿರ್ಲಕ್ಷ್ಯತನ  ಜೊತೆಗೆ ಬೇಜವಾಬ್ದಾರಿತನ ಚರ್ಚೆಯ ಇನ್ನೊಂದು ವಿಷಯ. ಪ್ರಯಾಣಿಕರ ಇಂತಹ ವರ್ತನೆ ಅಂದಿನ ವಿಮಾನ ಅಪಘಾತದಲ್ಲಿ ಮಾತ್ರ ಗಮನಕ್ಕೆ ಬಂದಿದ್ದರೆ ವಿಶೇಷವಾಗಿ ಆ ವಿಮಾನವನ್ನು ತುಂಬಿದ್ದ ಭಾರತೀಯ ಪ್ರಯಾಣಿಕರ  ಮೇಲೆ ಟೀಕೆಯ ಪ್ರಹಾರ ಜಗತ್ತಿನ ಎಲ್ಲ ಕಡೆಯಿಂದ ಹರಿದು ಬರುತ್ತಿತ್ತೇನೋ. 2013ರಲ್ಲಿ ದಕ್ಷಿಣ ಕೊರಿಯಾದಿಂದ ಹೊರಟ ವಿಮಾನವೊಂದು ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿ ಇಂತಹದೇ ಅಪಘಾತಕ್ಕೊಳಗಾದಾಗ ಪ್ರಯಾಣಿಕರ ಇದೇ ಬಗೆಯ ವರ್ತನೆ ಕಂಡು ಬಂದಿತ್ತು. ಹೇಗೋ ಸಾವರಿಸಿಕೊಂಡು ನಿಂತ ವಿಮಾನದಿಂದ ತ್ವರಿತವಾಗಿ ನಿರ್ಗಮಿಸಬೇಕಾದ ಹೊತ್ತಲ್ಲಿ ತಮ್ಮ ಸೊತ್ತುಗಳಿಗಾಗಿ ಗಡಿಬಿಡಿಯಲ್ಲಿ ತಡಕಾಡುತ್ತಿದ್ದರು. ಈ ಅಪಘಾತದಲ್ಲಿ ಕೊನೆಯ ಆಸನದಲ್ಲಿ ಕುಳಿತು ಪ್ರಯಾಣಿಸಿದ ಇಬ್ಬರು ಚೀನೀಯರು ಸರಿಯಾದ ಸಮಯದೊಳಗೆ ವಿಮಾನದಿಂದ ಹೊರಬರಲಾಗದೆ ಬೆಂಕಿಗೆ ತುತ್ತಾಗಿ ಮೃತರಾಗಿದ್ದರು.  

ದುಬಾಯಿಯಲ್ಲಿ 2016ರಲ್ಲಿ  ನಡೆದ ತರಹದ ಅಪಘಾತಕ್ಕೆ "ಕುಸಿದಿಳಿಯುವ ಅಪಘಾತ" ಅಥವಾ "ಅವರೋಹಣ ವೈಫಲ್ಯದ ಅಪಘಾತ "ಎಂದು ಹೇಳಬಹುದು ( Crash Landing). ವಿಮಾನ ಕೆಳಗಿಳಿಯುವ ಸಿದ್ಧತೆಯಲ್ಲಿ ನಿಲ್ದಾಣದ ಹತ್ತಿರ ಬರುತ್ತಿದ್ದಂತೆ  ಹಾರುವಾಗ ಮಡಚಿ ಒಳಗಿಟ್ಟುಕೊಂಡ ತನ್ನ ಚಕ್ರಗಳನ್ನು (Landing Gear ) ಹೊರ ಚಾಚುತ್ತದೆ. ವಿಮಾನದ  ರೆಕ್ಕೆಗಳು, ದೇಹ, ಮೂಗಿನ ಕೆಳಗಿರುವ ಎಲ್ಲ ಚಕ್ರಗಳು ಸೇರಿ ನೆಲಮುಟ್ಟಿದಾಗ ವಿಮಾನವನ್ನು ಆಧರಿಸುತ್ತವೆ. ಬಹಳ ಅಂದರೆ ಬಹಳ ಅಪೂರ್ವಕ್ಕೆ  ತಾಂತ್ರಿಕ ಕಾರಣಗಳಿಂದ ಈ ಚಕ್ರಗಳು ಹೊರಗೆ ಚಾಚಿಕೊಳ್ಳದಿದ್ದರೆ ವಿಮಾನದ ನೀಳ  ಹೊಟ್ಟೆಯನ್ನೇ ಆಧರಿಸಿ ಇಳಿಸಬೇಕಾಗುತ್ತದೆ (belly landing );  ಮತ್ತೆ ಹಾಗೆ ನೆಲಮುಟ್ಟಿದ ವಿಮಾನ ಇಳಿಯುವ ಪಥಕ್ಕೆ (runway ) ದೇಹವನ್ನು  ಉಜ್ಜುತ್ತಾ ಒಂದಷ್ಟು ದೂರ ಸಾಗಿ ನಿಲ್ಲುತ್ತದೆ. ಈ ಪ್ರಕ್ರಿಯೆಯಲ್ಲಿ, ವಿಮಾನದ ದೇಹಕ್ಕೂ ನೆಲಕ್ಕೂ ಆಗುವ  ಘರ್ಷಣೆ, ಆಘಾತದಿಂದ ಮುರಿದ ರೆಕ್ಕೆಗಳು, ರೆಕ್ಕೆಯೊಳಗೆ ಇರುವ ಇಂಧನ ಸಂಗ್ರಹಕ್ಕೆ (fuel tank ) ಬಿಸಿ ಹತ್ತಿ ಇಡೀ ವಿಮಾನಕ್ಕೆ ಒಂದೆರಡು  ನಿಮಿಷದಲ್ಲಿ ಬೆಂಕಿ ಹಿಡಿಯುವ ಸಂಭವನೀಯತೆ ಹೆಚ್ಚಿರುತ್ತದೆ. ಹಾಗಾಗಿಯೇ ಅಂತಹ ಸಂದರ್ಭಗಳಲ್ಲಿ ವಿಮಾನದಿಂದ ಅತಿ ಶೀಘ್ರವಾಗಿ ಗಗನಸಖ ಸಖಿಯರ ಆದೇಶದಂತೆ ಹೊರ ಬೀಳುವುದು ಅಗತ್ಯ ಅನಿವಾರ್ಯ ಆಗಿರುತ್ತದೆ. 

ಹೊಸ ವಿಮಾನವೊಂದು ಸಾವಿರಗಟ್ಟಲೆ ಭಾಗಗಳನ್ನು ಜೋಡಿಸಿಕೊಂಡು ರೆಕ್ಕೆ ಪುಕ್ಕ ಬಡಿದು  ಆಕಾಶಕ್ಕೇರುವ ಮೊದಲು ವಿಧ ವಿಧದ ಪರೀಕ್ಷೆಗೊಳಪಟ್ಟು ಉತ್ತೀರ್ಣವಾಗಿ ಪರವಾನಿಗೆ ಪಡೆಯಬೇಕಾಗುತ್ತದೆ. ಪರೀಕ್ಷೆಗಳಿಗೆ ತಯಾರಾಗುವುದು ಮತ್ತೆ ಪಾಸು ಫೈಲ್ ನ ಭಯ ಬರೇ  ಮನುಷ್ಯರಿಗೆ ಮಾತ್ರ ಅಲ್ಲ!  ಈ ಪರೀಕ್ಷೆಗಳಲ್ಲಿ ಒಂದು ಪರೀಕ್ಷೆ ಪ್ರಯಾಣಿಕರ ತುರ್ತು ನಿರ್ಗಮನಕ್ಕೆ ಸಂಬಂಧ ಪಟ್ಟದ್ದು. ಅಕಾಸ್ಮಾತ್ ಎಲ್ಲೋ ಒಂದು ಯಾನದಲ್ಲಿ ಅವರೋಹಣ ವೈಫಲ್ಯದ  ಘಟನೆಯನ್ನು ಊಹಿಸಿ, ವಿಮಾನಕ್ಕೆ ಆ ಸಮಯದಲ್ಲಿ ಬೆಂಕಿ ಹಿಡಿತೀತೆಂದು ಭಾವಿಸಿ, ನಿಂತ ವಿಮಾನದಿಂದ   90 ಸೆಕೆಂಡ್ ಗಳಲ್ಲಿ ಆ ವಿಮಾನದಲ್ಲಿ ಕೂರಬಹುದಾದ ಎಲ್ಲ ಪ್ರಯಾಣಿಕರ ತುರ್ತು ನಿರ್ಗಮನ ಸಾಧ್ಯ ಎಂದು ರುಜುವಾತು ಪಡಿಸಬೇಕು. ಪರೀಕ್ಷಾರ್ಥವಾಗಿ ವಿಮಾನದ ಎಲ್ಲ ಆಸನಗಳನ್ನು  ಜನರಿಂದ  ಭರ್ತಿ  ಮಾಡಿಸಿ, ವಿಮಾನದೊಳಗೆ ಎಷ್ಟು ತುರ್ತು ನಿರ್ಗಮನ ದ್ವಾರಗಳಿವೆಯೋ ಅವುಗಳಲ್ಲಿ ಅರ್ಧದಷ್ಟು ದ್ವಾರಗಳನ್ನು  ಮಾತ್ರ ತೆರೆದು, ಅಷ್ಟೂ ಪ್ರಯಾಣಿಕರು 90 ಸೆಕೆಂಡ್ ಗಳಲ್ಲಿ ಹೊರ ಬರುವುದು ಸಾಧ್ಯವೇ ಎಂದು ನೋಡುತ್ತಾರೆ. ವಿಮಾನ ಸಿಬ್ಬಂದಿಗಳಿಗೂ ಪ್ರಯಾಣಿಕರನ್ನು ಆದಷ್ಟು ಬೇಗ ಹೊರ ಕಳುಹಿಸುವ ಬಗ್ಗೆ ತರಬೇತಿ ನೀಡಿರುತ್ತಾರೆ. 90ಸೆಂಕೆಂಡ್ ಗಳ   ತುರ್ತು ನಿರ್ಗಮನ ವಿಮಾನ ಸಿಬ್ಬಂದಿಗಳಿಗೂ ಮತ್ತೆ ವಿಮಾನ ವಿನ್ಯಾಸಕ್ಕೂ ಜೊತೆಯಾಗಿ ಒಂದು ಸವಾಲು. ಈ ಪರೀಕ್ಷೆಯಲ್ಲಿ  ಗೆದ್ದರೆ ಮಾತ್ರವೇ ವಿಮಾನಕ್ಕೆ ಆಕಾಶಕ್ಕೇರುವ  ಪರವಾನಿಗೆ ಪತ್ರ  ಸಿಗುತ್ತದೆ. ವಿಮಾನ ಕುಸಿದಿಳಿದು ನಿಂತ ಕೆಲವು ಕ್ಷಣದಲ್ಲಿ ವಿಮಾನಕ್ಕೆ ಬೆಂಕಿ ಹಿಡಿಯುವುದು ಬಹುತೇಕ ಖಚಿತ, ಹಾಗಾಗಿ 90 ಸೆಕೆಂಡ್ ಒಳಗೆ ಪ್ರಯಾಣಿಕರೆಲ್ಲರೂ ಹೊರಬೀಳಬೇಕಾದ್ದು ಅತ್ಯಂತ ಅನಿವಾರ್ಯ. ಇಂತಹ ತುರ್ತು ಪರಿಸ್ಥಿತಿಯಲ್ಲಿ, ವಿಮಾನದ ಒಳಗೆ ತಮ್ಮೊಟ್ಟಿಗೆ ತಂದ  ಬ್ಯಾಗುಗಗಲ್ಲಿ ಎಷ್ಟೇ ಅಮೂಲ್ಯವಾದ ವಸ್ತು ಇದ್ದರೂ ಅವನ್ನು ಅಲ್ಲೇ ಮರೆತು ಶೀಘ್ರವಾಗಿ ತುರ್ತು ನಿರ್ಗಮನ ಬಾಗಿಲಿಂದ ಹೊರಬೀಳುವುದು ಬಹಳ  ಅಗತ್ಯ.

2013 ರಿಂದ 2016ರ ನಡುವೆ ನಡೆದ ಕೆಲವು ವಿಮಾನ ಅವರೋಹಣ ವೈಫಲ್ಯದ ಈ ಎರಡು ಘಟನೆಗಳಲ್ಲಿ ಗಮನಕ್ಕೆ ಬಂದ ಸಾಮಾನ್ಯ ವರ್ತನೆಗಳು ವಿಮಾನ ಪ್ರಯಾಣದ ಸುರಕ್ಷತೆಯ ದೃಷ್ಟಿಯಿಂದ ಹೊಸ ಅವಶ್ಯಕತೆಗಳನ್ನು ತೋರಿಸಿಕೊಟ್ಟವು. ವಿಮಾನ ಸುರಕ್ಷತೆಯ ಬಗ್ಗೆ ಜಂಭ ಪಡುವ ವಿಮಾನಲೋಕ ಯೋಚನೆ ಸಮಾಲೋಚನೆಯಲ್ಲಿ ತೊಡಗುವಂತೆ ಮಾಡಿದವು. 90 ಸೆಕೆಂಡ್ ತುರ್ತು ನಿರ್ಗಮನ ಪರೀಕ್ಷೆಯಲ್ಲಿ ಭಾಗವಹಿಸುವ ಜನರು ಮತ್ತೆ ವಿಮಾನದ ದೈನಂದಿನ ಹಾರಾಟದಲ್ಲಿ ಪ್ರಯಾಣಿಸುವ ಜನರ ಮನೋಸ್ಥಿತಿ ಹಾಗು ವರ್ತನೆ ಒಂದೇ ಆಗಿರುವುದಿಲ್ಲ ಎಂದು ಈ ಎರಡು ಉದಾಹರಣೆಗಳು ತಿಳಿಸಿದವು; ಸುರಕ್ಷತೆಯ ಸಿದ್ಧಾಂತವನ್ನು ಚೆನ್ನಾಗಿ ಅರಿತ ಜನರ ಸಹಕಾರದಿಂದ ಪರೀಕ್ಷೆಯಲ್ಲಿ ಉತ್ತೀರ್ಣವಾದ ವಿಮಾನ ವ್ಯವಸ್ಥೆ ಪ್ರಾಯೋಗಿಕ ಜಗತ್ತಿನಲ್ಲಿ ಹೇಗೆ ಅನುತ್ತೀರ್ಣವಾಗಿ ದುರಂತವೊಂದು ನಡೆದು ಹೋಗುವ ಸಾಧ್ಯತೆ ಇದೆ ಎಂದೂ ವಿಮಾನ ಪಂಡಿತರಿಗೆ ತೋರಿಸಿಕೊಟ್ಟವು.  ವಿಮಾನದೊಳಗೆ ಸಾವು ಬದುಕಿನ ನಡುವೆ ಕೆಲವೇ ಕ್ಷಣಗಳ ಅಂತರ ಇರುವ ಹೊತ್ತಲ್ಲೂ ವಿಡಿಯೋ ತೆಗೆಯುವ ವಿಲಕ್ಷಣ ಚಾಳಿಯನ್ನು ಮುಂದುವರಿಸಿದ ಪ್ರಯಾಣಿಕರ ಬಗ್ಗೆ ಆಕ್ರೋಶ ತಾತ್ಸಾರಗಳು ವ್ಯಕ್ತವಾಗಿದ್ದರೂ ನಂತರ ಅದೇ ವಿಡಿಯೋವನ್ನು ಮುಂದೆ ಇಟ್ಟುಕೊಂಡು ವಿಮಾನ ತಯಾರಕರು, ವಿಮಾನ ಸುರಕ್ಷತಾ ಸಂಸ್ಥೆಗಳು, ಮನಃಶಾಸ್ತ್ರಜ್ಞರು ಎಲ್ಲ ಸೇರಿ ಗಂಭೀರವಾಗಿ ಅಭ್ಯಾಸ ಮಾಡಿದರು. ತುರ್ತು ನಿರ್ಗಮನದ ಅಗತ್ಯವನ್ನು, ಆ ಸಂದರ್ಭದಲ್ಲಿ ಕಡ್ಡಾಯವಾಗಿ ಅನುಸರಿಸಬೇಕಾದ ಹೆಜ್ಜೆಗಳನ್ನು ,  ಅಲ್ಲಿಯತನಕ ಬಳಕೆಯಲ್ಲಿದ್ದ ಸೂಚನೆಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ದಿನವೂ ಬದಲಾಗುವ ಹೊಸ ಹೊಸ ಪ್ರಯಾಣಿಕರಿಗೆ ಹೇಗೆ ಮನದಟ್ಟು ಮಾಡಬಹುದು ಎಂದು ಚಿಂತಿಸಿ ಚರ್ಚಿಸಿದರು; ಕಳೆದ ನೂರು ವರ್ಷಗಳ ಹಾರಾಟದ ಇತಿಹಾಸದಲ್ಲಿ ಪ್ರತಿ  ಅಪಘಾತದಿಂದ ಪಾಠ ಕಲಿತು, ಕಾಲಕ್ರಮೇಣ ಸುರಕ್ಷತೆಯನ್ನು ಹೆಚ್ಚಿಸಿಕೊಳ್ಳುತ್ತಾ ಬಂದ ವಿಮಾನಯಾನದ  ಕಲಿಕೆಯ ಪುಸ್ತಕಕ್ಕೆ ಇನ್ನೊಂದು ಹಾಳೆಯನ್ನು ಸೇರಿಸಿದರು. 

ಈ ಅಂಕಣದ ಹಿಂದಿನ ಬರಹಗಳು
ಮನೆಗೆ ಮರಳಿದ ಮಹಾರಾಜ
ಲೋಕೋಪಕಾರಿಯ ಪಾತ್ರದಲ್ಲಿ ಲೋಹದ ಹಕ್ಕಿ
ಆಕಾಶದ ರಾಣಿಯೂ ಕನಸಿನ ಹಕ್ಕಿಯೂ.....
ಅಸಲಿ ವಿಮಾನಗಳು ಮತ್ತು ನಕಲಿ ಹಕ್ಕಿಗಳು
ವಿಮಾನ ನಿಲ್ದಾಣಕ್ಕೆ ಸ್ವಾಗತ
ವಿಮಾನ ಸಂತತಿಯ ಶಬ್ದ ಬಣ್ಣ ಚಿತ್ರಗಳು
ಒಂದು ಆಕಾಶ ಹಲವು ಏಣಿಗಳು
ಆಗಸದ ಬಂಡಿಗಳ ಅಂಗರಚನಾಶಾಸ್ತ್ರ
ಕಟ್ಟಿಗೆಯ ಆಟಿಕೆಗಳು ಲೋಹದ ಹಕ್ಕಿಯಾದ ಅಧ್ಯಾಯ
ಗಗನಯಾನದ ದೈತ್ಯ ಹೆಜ್ಜೆಗಳು

MORE NEWS

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...