ವಿಭಿನ್ನ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಕಲೆಗಾರ

Date: 14-05-2023

Location: ಬೆಂಗಳೂರು


“ಜನರ ಬದಲಾವಣೆಗಾಗಿ ಜನರ ನಡುವೆ ಯಾರಿಗೋ ಅನ್ಯಾಯವಾದಲ್ಲಿ ಅವರು ಹಾಡುಗಳನ್ನು ಹಾಡುತ್ತಾರೆ. ದಲಿತ ಸಮುದಾಯದಲ್ಲಿ ಹುಟ್ಟಿ ಮೌಢ್ಯತೆ, ಮನುವಾದ, ಮೌಢ್ಯವನ್ನು ಮೀರಿ ಸಮ ಸಮಾಜದ ಕಡೆಗೆ ಹೆಜ್ಜೆ ಇಡುತ್ತಿದ್ದಾರೆ. ತಮ್ಮ ಸಮೃದ್ಧ ಕಂಠಸಿರಿಯಿಂದ ಅರಿವಿನ ಹಾಡುಗಳ ಸಾಮಾಜಿಕ ಜಾಗೃತಿ, ವೈಚಾರಿಕತೆಯನ್ನು ಪಸರಿಸುತ್ತಿದ್ದಾರೆ,” ಎನ್ನುತ್ತಾರೆ ಅಂಕಣಗಾರ್ತಿ ಜ್ಯೋತಿ ಎಸ್. ತಮ್ಮ ‘ಹೆಜ್ಜೆಯ ಜಾಡು ಹಿಡಿದು’ ಅಂಕಣದಲ್ಲಿ ‘ವಿಭಿನ್ನ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ ಸೋರಪ್ಪಲ್ಲಿ ಚಂದ್ರಶೇಖರ್’ ಅವರ ಬದುಕಿನ ಚಿತ್ರಣವನ್ನು ತೆರೆದಿಟ್ಟಿದ್ದಾರೆ.

ಮನುಷ್ಯ ಬದಲಾಗುವುದು ಸಹಜ. ಆದರೆ ತಾನು ನಂಬಿದ್ದ, ಒಳಗಿಳಿಸಿಕೊಂಡಿದ್ದ ಆಚರಣೆಗಳಿಗೆ ವೈರುಧ್ಯವಾಗಿ ಬದುಕುವುದು ಬೆಳೆಯುವುದು ಪ್ರಸ್ತುತ ಸಮಾಜದಲ್ಲಿ ಸವಾಲು. ಒಂದು ಹಂತದವರೆಗೆ ತನಗೆ ಬಹುವಾಗಿ ಒಗ್ಗಿಕೊಂಡಿದ್ದ ದೇವರು, ದೈವತ್ವ ಎಂಬ ಸಿದ್ಧಾಂತವನ್ನು ಸಾರಾಸಗಟಾಗಿ ತಿರಸ್ಕರಿಸಿ ಸಂಪೂರ್ಣ ಬದಲಾಯಿಸಿಕೊಂಡ ಚಂದ್ರಶೇಖರ್ ಅವರ ಬದುಕಿನ ಪ್ರಯಾಣ ಇಂದಿನ ನಿಮ್ಮ ಓದಿಗೆ ತಂದಿದ್ದೇನೆ. ಜನಪರ ಹಾಡುಗಾರ, ಹಸಿರು ಪದಕಾರ, ಜಾನಪದ ಕಲಾವಿದ, ಹಾಸ್ಯ ಕಲಾವಿದ, ನಾಟಕಕಾರ ಸೋರಪ್ಪಲ್ಲಿ ಚಂದ್ರಶೇಖರ್ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಸೋರಪ್ಪಲ್ಲಿ ಗ್ರಾಮದವರು. ತಂದೆ ಮುನಿಗಂಗಪ್ಪ ತಾಯಿ ಮೇಲೂರಮ್ಮ.

ತಮ್ಮ ಈವರಗಿನ ಜೀವನ ಮತ್ತು ಬದಲಾವಣೆಯ ಬಗ್ಗೆ ನನ್ನೊಂದಿಗೆ ಮಾತಿಗಿಳಿದ ಚಂದ್ರಶೇಖರ್ 'ನಮ್ಮಲ್ಲಿ ಐದು ತಲೆಮಾರುಗಳಿಂದ ನಡೆದುಕೊಂಡು ಬಂದ ಒಂದು ಪದ್ಧತಿ ಇದೆ. ಮನೆಯಲ್ಲಿ ಮೊದಲನೇ ಮಗ ಅಥವಾ ಕೊನೆಯ ಮಗನನ್ನು ದೇವರ ಪೂಜೆಗೆ ಅಂತ ಉಳಿಸುತ್ತಾರೆ. ಆ ಪದ್ಧತಿ ನಮ್ಮ ಮನೆಯಲ್ಲೂ ಇತ್ತು. ನಾನು ಕೊನೆಯ ಮಗನಾದ್ದರಿಂದ ನನ್ನನ್ನು ಗಂಗಮ್ಮನ ಪೂಜೆಗೆ ಮೀಸಲಿಟ್ಟರು. ಅಪ್ಪ ಅಮ್ಮ ನಮ್ಮ ಕುಟುಂಬ ಬೆಂಗಳೂರಿನಲ್ಲಿ ವಾಸವಿದ್ದರೂ ಅಜ್ಜಿಯನ್ನು ನೋಡಿಕೊಳ್ಳುವ ಸಲುವಾಗಿ ನನ್ನನ್ನು ಸೋರಪ್ಪಲ್ಲಿಯಲ್ಲಿ ಬಿಟ್ಟಿದ್ದರು. ಪೂಜೆ ಆಯ್ತು, ಮನೆ ಆಯ್ತು ನನ್ನ ಬದುಕು ಹೀಗೆ ಪ್ರಾರಂಭವಾಯಿತು... ಭಕ್ತಿಯ ಸ್ವರೂಪ ಬರು ಬರುತ್ತಾ ದೇವರು ಮೈಮೇಲೆ ಬರುತ್ತಾನೆ ಎನ್ನುವಷ್ಟು ಗಾಢವಾಗಿತ್ತು. ಆಗಿನ್ನೂ ನಾನು ಐದನೇ ತರಗತಿಯಲ್ಲಿ ಓದುತ್ತಿದ್ದೆ. ದೇವರು ನನ್ನ ಮೈಮೇಲೆ ಬರುತ್ತಾನೆ ಅಂತ ಎಲ್ಲಾ ಕಡೆ ಪ್ರಚಾರವಾಗಿ ಹೋಯ್ತು. ಆಗಿನ್ನೂ ಶಿಕ್ಷಣ ಇರಲಿಲ್ಲ ತಿಳುವಳಿಕೆ ಕಡಿಮೆ. ಈ ಮಾಧ್ಯಮಗಳು, ಭಕ್ತಿ ಸಿನಿಮಾಗಳು ನನ್ನ ಮೇಲೆ ತುಂಬ ಪ್ರಭಾವ ಬೀರಿದ್ದವು. ಪೂಜೆ ಮಾಡ್ತಾ ಮಾಡ್ತಾ ದೇವರು ಆಹ್ವಾನ ಆಗಿದ್ದಾನೆ ಅಂತ ಅರೆಪ್ರಜ್ಞೆಯಲ್ಲಿ, ಒಂದಷ್ಟು ಜನ ಬರೋದು ನನ್ನ ಹಿಡಿದುಕೊಳ್ಳುವುದು ಅವರೇನೋ ಪ್ರಶ್ನೆ ಕೇಳೋದು ನಾನೇನೋ ಉತ್ತರ ಹೇಳೋದು ಹೀಗೆಲ್ಲಾ ಆಗ್ತಾ ಇತ್ತು. ಅಲ್ಲಿಗೆ ಚಂದ್ರಶೇಖರ್ ಎನ್ನುವ ಹೆಸರು ಮರೆತುಹೋಗಿತ್ತು. ಎಲ್ಲರೂ ನನ್ನ ಸ್ವಾಮಿ ಸ್ವಾಮಿ ಅಂತ ಕರೆಯಲು ಶುರು ಮಾಡಿದ್ರು. ನಾನು ಸ್ನಾತಕೋತ್ತರ ಪದವಿಗೆ ಬರುವ ತನಕ ಒಂದು ಮೊಟ್ಟೆಯ ರುಚಿಯನ್ನು ಸಹ ನೋಡಿರಲಿಲ್ಲ. ಹಾಗೆ ಸನ್ಯಾಸಿ ತರಹ ಬದುಕಿಬಿಟ್ಟೆ. ಅಪ್ಪ ಒಂದು ದಿನ ದೇವರು ನನ್ನ ಮೈಮೇಲೆ ಬಂದಾಗ ನನ್ನ ಮಗನ ಶಿಕ್ಷಣ ಮುಗಿಯುವವರೆಗೂ ಮೈಮೇಲೆ ಬರಬೇಡ ಅಂತ ಕೇಳಿದ್ರಂತೆ. ದೇವರು ಹೂಂ ಅಂದಿದ್ರಂತೆ. ಆಗ ಶಾಲೆಗೆ ಸೇರಿಸಲು ಪಕ್ಕದ ಕೋನಂಪಲ್ಲಿಯಲ್ಲಿ ಶಾಲೆಗೆ ಸೇರಿಸೋಕೆ ಹೋದರೆ ದೇವರು ನನಗೆ ಮೈಮೇಲೆ ಬರತ್ತೆ ಅಂತ ಅವರು ಸೇರಿಸಿಕೊಳ್ಳಲಿಲ್ಲ. ಅಪ್ಪ ಚಿಂತಾಮಣಿಗೆ ಕರೆದುಕೊಂಡು ಬಂದರು ಆ ಶಾಲೆಯಲ್ಲೂ ವಿಚಾರ ಗೊತ್ತಾಗಿ ಒಂದು ವಾರಕ್ಕೆ ಅವರೂ ಓಡಿಸಿದ್ರು. ಅಪ್ಪನಿಗೆ ಆತಂಕ ಶುರುವಾಯಿತು. ತಿಮ್ಮಸಂದ್ರದಲ್ಲಿ ಒಂದು ಶಾಲೆ ಇತ್ತು. ಅವರಿಗೆ ನಾವು ಯಾರಂತ ಗೊತ್ತಿರಲಿಲ್ಲ ಮಗುವಿನ ಭವಿಷ್ಯ ಮುಖ್ಯ ಅಂತ ನನ್ನನ್ನು ಶಾಲೆಗೆ ದಾಖಲಾತಿ ಮಾಡಿಕೊಂಡರು. ಯಾವಾಗಲಾದರೂ ಹೋಂ ವರ್ಕ್ ಬರೆದಿಲ್ಲ ಅಂದ್ರೆ ಮೈಮೇಲೆ ದೇವರು ಬಂದಿದ್ದಾನೆ ಅಂತ ಭ್ರಮಿಸುತ್ತಿದ್ದೆ. ಪ್ರಿನ್ಸಿಪಾಲರು ಹಿಂದಿನಿಂದ ಬಂದು ಬೆತ್ತದಿಂದ ಒಂದು ಬಾರಿಸುತ್ತಿದ್ದರು ಆಗ ದೇವರು ಎಲ್ಲಿಗೆ ಹೋಗಿ ಬಿಡುತ್ತಿದ್ದನೋ!? ಹತ್ತನೇ ತರಗತಿ ಪರೀಕ್ಷೆ ಬರೆದಿದ್ದೆ. ದುರಂತವೋ... ಕಾಕತಾಳೀಯವೋ ಎಂಬಂತೆ ಎಲ್ಲರೂ ಫೇಲ್ ನಾನೊಬ್ಬನೇ ಪಾಸ್ ಅದೂ ಜಸ್ಟ್ ಪಾಸ್. ಆಗ ನಮ್ಮೂರಲ್ಲಿ ಎಲ್ಲರೂ ಸ್ವಾಮಿ ಪೂಜೆ ಮಾಡ್ತಾನೆ ದೇವರನ್ನು ನಂಬುತ್ತಾನೆ ಅದಕ್ಕೆ ಪಾಸ್ ಆಗಿದ್ದಾನೆ. ಉಳಿದವರು ಪೂಜೆ ಮಾಡಲ್ಲ ಅದಕ್ಕೆ ಫೇಲ್ ಆಗಿದ್ದಾರೆ ಅಂತ ವಿವಾದ ಶುರುಮಾಡಿದರು. ಆಗ ಫೇಲ್ ಆದವರೆಲ್ಲ ನನ್ನ ಹತ್ತಿರ ಬರೋದು ಅವರವರ ಹೆಸರಲ್ಲಿ ಪೂಜೆ ಮಾಡಿಕೊಡಿ ಅನ್ನೋದು ಮಾಡುತ್ತಿದ್ದರು. ಆಗ ಆ ನಂಬಿಕೆಯ ಸಂಭ್ರಮವೇ ಬೇರೆ. ನಂತರದಲ್ಲಿ ಅವರೆಲ್ಲ ಸಪ್ಲಿಮೆಂಟರಿ ಎಕ್ಸಾಮ್ ಕಟ್ಟಿ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆದರೂ ಊರ ಜನರಿಗೆ ಅದು ಲೆಕ್ಕಕ್ಕಿರಲ್ಲ ಸ್ವಾಮಿ ನೋಡಿ ಒಂದೇ ಸಲಕ್ಕೆ ಪಾಸ್ ಆಗಿದ್ದಾನೆ ಎನ್ನುತ್ತಿದ್ದರು. ನಂತರ ಪಿ. ಯು. ಸಿ. ಗೆ ಬಂದ ಮೇಲೆ ಒಂದಷ್ಟು ವಿಚಾರಗಳು, ಪುಸ್ತಕಗಳು ನನ್ನನ್ನು ನಾನು ತೆರೆದುಕೊಳ್ಳಲು ಸಹಾಯ ಮಾಡಿದವು. ಅಲ್ಲಿಯವರೆಗೆ ಮೌಢ್ಯತೆಯಲ್ಲೇ ಬದುಕಿದ ನನ್ನನ್ನು ನಾನೆ ಪ್ರಶ್ನೆ ಮಾಡಿಕೊಳ್ಳಲಾರಾಂಭಿಸಿದೆ. ಒಂಭತ್ತನೇ ತರಗತಿಯಲ್ಲಿ ಕೃಷ್ಣಪ್ಪ ಎನ್ನುವ ಮೇಷ್ಟ್ರು ಹಾಡುಗಳನ್ನು ಹೇಳಿಕೊಡುತ್ತಿದ್ದರು. ಅಲ್ಲಿಂದ ಹಾಡುಗಾರಿಕೆಗೆ ಒಂದು ತಿರುವು ಬಂದಿತು'.

'ಅಷ್ಟೊತ್ತಿಗೆ ನಾನು 28 ಸಲ ಶಬರಿಮಲೆ ಯಾತ್ರೆಗೆ ಹೋಗಿದ್ದೆ. ಗುರುಸ್ವಾಮಿ ಅಂತ ಬೇರೆಯವರಿಗೆ ಮಾಲೆ ಹಾಕೋದು. ನನ್ನ ಮಾರ್ಗದರ್ಶನದಲ್ಲಿ ಅವರನ್ನು ಕರೆದುಕೊಂಡು ಹೋಗುವುದು ಮಾಡುತ್ತಿದ್ದೆ. ಡಿಗ್ರಿಗೆ ಬಂದಮೇಲೆ NSS ಶಿಬಿರ ಪ್ರಾರಂಭವಾಯಿತು. NSS ಶಿಬಿರದಲ್ಲಿ ಪ್ರತಿಯೊಬ್ಬರೂ ಅಭಿನಯ, ಹಾಡು, ನಾಟಕ ಏನಾದರೊಂದು ಮಾಡಲೇಬೇಕಿತ್ತು. ಕೆಲವರು ನಾಟಕ ಮಾಡಿ, ಡೈಲಾಗ್ ಹೇಳಿದ್ರು. ನಾನು ಹೆದರಿಕೆಯಿಂದ ಹಾಡು ಹಾಡಿ ಕ್ಷಮೆ ಯಾಚಿಸಿದಾಗ ಬಾಲಾಜಿ ಸರ್ ನನ್ನ ಪ್ರೋತ್ಸಾಹಿಸಿದರು. ಇಲ್ಲಿ ಯಾರೂ ಪಂಡಿತರಿಲ್ಲ. ಎಲ್ಲರೂ ಕಲಿಯಲು ಬಂದಿರೋದು ಅಂತ ಧೈರ್ಯ ತುಂಬಿದರು ನಂತರ ನಾಟಕ, ಅಭಿನಯ, ಜಾನಪದ ಗೀತೆ, ಭಾವಗೀತೆಗಳನ್ನು ಹಾಡುತ್ತ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಕೊನೆಗೆ ಶಿಭಿರ ಮುಗಿಸುವ ಹೊತ್ತಿಗೆ ಬೆಸ್ಟ್ ಸ್ಟೂಡೆಂಟ್ ಅವಾರ್ಡ್ ಬಂತು. ನಂತರ ಬೊಮ್ಮೆಕಲ್ ವೆಂಕಟೇಶ್ ನಮ್ಮ ಕನ್ನಡ ಮೇಷ್ಟ್ರು ನನ್ನನ್ನು ಸಿದ್ಧಾರ್ಥ ಕಲಾ ತಂಡಕ್ಕೆ ನನ್ನ ಪರಿಚಯಿಸಿದರು. ಅಲ್ಲಿ ಹಾಡುಗಳು ಹಾಡೋದನ್ನು ಕಲಿತೆ.

2011ರಲ್ಲಿ ಗೆಳೆಯ ಅಂಬರೀಷ್ ಅವರು ಹೋರಾಟಗಾರ, ಕವಿ, ಸಾಮಾಜಿಕ ಕಾರ್ಯಕರ್ತರಾದ ಶಶಿರಾಜ್ ಹರತಲೆ ಎನ್ನುವವರನ್ನು ಪರಿಚಯಿಸಿದರು. ಅವರ ಪರಿಚಯ ನನ್ನ ಬದುಕಿಗೆ ಮಹತ್ತರ ತಿರುವನ್ನು ತಂದುಕೊಟ್ಟಿತು. ಹೋರಾಟದ ಹಾಡುಗಳನ್ನು ಕಲಿತು ರಾಗ ಸಂಯೋಜನೆ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಡುತ್ತಾ ಬಂದೆ. ಹೋರಾಟದ ಹಾಡುಗಳು, ಚಳುವಳಿಯ ಹಾಡುಗಳನ್ನು ಹಾಡಲು ಪ್ರಾರಂಭಿಸಿದ ಮೇಲೆ ಬದುಕನ್ನು ನೋಡುವ ದೃಷ್ಟಿಕೋನ ಬದಲಾಯಿತು. ಆಗ ಶಶಿರಾಜ್ ಸರ್ ಚರ್ಚೆಗೆ ಸಿಕ್ಕಿದರು. ಆಟೋಮ್ಯಾಟಿಕ್ ಆಗಿ ಕೈಗೆ ಕಟ್ಟಿದ್ದ ದಾರ, ಕುಂಕುಮ, ಡಾಲರ್ ಎಲ್ಲ ಒಂದೊಂದಾಗಿ ಕಳಚಿಕೊಂಡವು. ಹೋರಾಟದ ಹಾಡುಗಳು, ಅರಿವಿನ ಹಾಡುಗಳು ಮಾನಸಿಕವಾಗಿ ಅಂತರಂಗದಲ್ಲಿ ಅರಿವು ಮೂಡಿಸಲು ಪ್ರೇರಣೆಯಾದವು. ಎಷ್ಟೋ ವರ್ಷಗಳ ಕಾಲ ಮೌಢ್ಯಕ್ಕೆ ಒಳಗಾಗಿದ್ದ ನಾನು ನನ್ನ ಇಪ್ಪತ್ತಾರನೇ ವಯಸ್ಸಿನಲ್ಲಿ ಮೊದಲು ಮೊಟ್ಟೆ ತಿಂದೆ. ಬದಲಾವಣೆ ನಮ್ಮಿಂದಲೇ ಆಗಬೇಕು ಎನ್ನುವ ವಿಚಾರದಿಂದ ಎಲ್ಲರನ್ನು ಒಪ್ಪಿಸಿ ಅಣ್ಣನ ಮದುವೆಯನ್ನು ಪುರೋಹಿತರು ಇಲ್ಲದೆಯೇ ನಮ್ಮ ಹೊಲದಲ್ಲಿ ಮಂತ್ರ ಮಾಂಗಲ್ಯ ಮಾಡುವ ಮುಖೇನ ಬದಲಾವಣೆಯತ್ತ ಹೆಜ್ಜೆ ಇಟ್ಟದ್ದಾಯ್ತು. ಸರಳ ವಿವಾಹ ಎಲ್ಲರ ಕೂತೂಹಲದೊಂದಿಗೆ ಅದ್ದೂರಿಯಾಗಿ ನಡೆಯಿತು. ಕೊನೆಗೆ ಅದು ದೊಡ್ಡ ಸುದ್ದಿಯಾಗಿ ಪತ್ರಿಕೆಗಳಲ್ಲಿ ಕೂಡ ಬಂತು. ಮಾಂಸಾಹಾರ ಸೇವನೆ ಮಾಡದ ನಾನು, ದೇವರನ್ನು ಬಹುವಾಗಿ ನಂಬಿದ್ದ ನಾನು, ಬಹಳಷ್ಟು ಮೌಢ್ಯತೆಗೆ ಬದ್ಧವಾಗಿದ್ದ ನಾನು, ಸ್ವಾಮಿ ಅಂತ ಕರೆಸಿಕೊಳ್ಳುತ್ತಿದ್ದ ನಾನು, ಶಶಿರಾಜ್ ಸರ್ ಹಾಗೂ ಇತರೆ ಸಮಾನ ಮನಸ್ಕರೊಂದಿಗೆ ಹೋರಾಟ, ಚಳುವಳಿಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದೆ. ನಾನು "ಈ ಮಣ್ಣಿನ ರೈತ ಮಕ್ಕಳ ಪಡೆ.. ನಾವು ಹೆಜ್ಜೆ ಇಡುವುದು ಊರ ಕಟ್ಟುವ ಕಡೆ'' ಎನ್ನುವ ಶಶಿರಾಜ್ ಸರ್ ಅವರ ಹಾಡಿಗೆ ಮೊದಲನೆಯದಾಗಿ ರಾಗ ಸಂಯೋಜನೆ ಮಾಡಿ ಹಾಡಿದೆ. ಶಶಿರಾಜ್ ಸರ್ ಬರೆದಂತಹ ಅರಿವು, ಹೋರಾಟ, ಹಸಿರು, ಪರಿಸರಕ್ಕೆ ಸಂಬಂಧಿಸಿದಂತೆ ಮೂವತ್ತೈದು ಹಾಡುಗಳಿಗೆ ರಾಗ ಸಂಯೋಜನೆ ಮಾಡಿ ಹಾಡಿದ್ದೇನೆ. ಈವರೆಗೆ ಲಕ್ಷ್ಮಿ ನಾರಾಯಣಸ್ವಾಮಿ, ಕಳೀರ ಶೆಟ್ಟಿ, ಸುನಿಲ್, ಮುರುಳಿ ಹೊಸಕೋಟೆ, ಎಲ್ ಹನುಮಂತಯ್ಯ ಸರ್, ಬೊಮ್ಮೆಕಲ್ ವೆಂಕಟೇಶ್, ನಾಗತಿ ವೆಂಕಟರತ್ನಂ, ಕೆ. ಎಸ್. ನೂರುಲ್ಲಾ ಇತರೆ ಸಾಹಿತಿಗಳು ಬರೆದ ಎಪ್ಪತ್ತಕ್ಕೂ ಹೆಚ್ಚು ಹಾಡುಗಳಿಗೆ ರಾಗ ಸಂಯೋಜನೆ ಮಾಡಿ ಹಾಡಿದ್ದೇನೆ. ಶಶಿರಾಜ್ ಸರ್ 'ಬದುಕು ಹೋರಾಟವಾದಾಗ ಹೋರಾಡಿ ಬದುಕು', ಚೆಗುವೇರಾ ಅವರ 'ಪ್ರಪಂಚದ ಯಾವುದೇ ಮೂಲೆಯಲ್ಲಿ ಅನ್ಯಾಯವಾದರೂ ನಾನು ನಿನ್ನಯ ಸಂಗಾತಿ' ಇತ್ಯಾದಿ ಸ್ಲೋಗನ್ ಗಳನ್ನು ಮರದ ತುಂಡುಗಳಲ್ಲಿ ಬರೆಸಿ ಇಟ್ಟಿದ್ದರು. ನಾನು ಅದರ ಬಗ್ಗೆ ಕೇಳುತ್ತಿದ್ದೆ. ಅಂಬೇಡ್ಕರ್, ಚೆಗುವೆರಾ, ಲೂಹಿಯ, ಸಮಾಜವಾದ ಇದರ ಬಗ್ಗೆ ಶಶಿರಾಜ್ ಸರ್ ಜೊತೆ ಮಾತಾಡ್ತಾ ವಿಚಾರ ವಿಮರ್ಶೆ ಮಾಡ್ತಾ ಮಾಡ್ತಾ ವೈಚಾರಿಕತೆಯತ್ತ ಹೊರಳಿದೆ'.

'NSS ಕ್ಯಾಂಪ್ ನನ್ನನ್ನು ಒಬ್ಬ ಹಾಡುಗಾರನನ್ನಾಗಿ ರೂಪಿಸಿದ್ದು. . ಶಶಿರಾಜ್ ಹರತಲೆ ಅವರು ಜೊತೆಯಾದ ಮೇಲೆ ಮೊದಲ ಹಾಡಿಗೆ ರಾಗ ಸಂಯೋಜನೆ ಮಾಡಿದ ಘಳಿಗೆ ನನ್ನ ಬದುಕಿಗೆ ಹೊಸ ತಿರುವು. ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟದಲ್ಲಿ ಹಾಡ್ತಾ ಬೀದಿ ನಾಟಕಗಳನ್ನು ಮಾಡುತ್ತ ಇದ್ದ ನನ್ನನ್ನು 'ಈ ಮಣ್ಣಿನ ರೈತ ಮಕ್ಕಳ ಪಡೆ' ಎನ್ನುವ ಅವರ ಗೀತೆ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿತು. ರಾಜಸ್ಥಾನದ ಮೌಂಟ್ ಅಬು ಕ್ಷೇತ್ರದಲ್ಲಿ ಕವಿಸಂಗಮ ಎಂಬ ದೊಡ್ಡ ಸಮ್ಮೇಳನದಲ್ಲಿ ಕರ್ನಾಟಕದಿಂದ ಕನ್ನಡದ ಈ ಗೀತೆ ಆಯ್ಕೆಯಾಗಿ ಹೋಗಿತ್ತು. ಅಲ್ಲಿಂದ ಎಲ್ಲ ಕಾರ್ಯಕ್ರಮಗಳು, ಸಾಮಾಜಿಕ ಚಳುವಳಿಗಳು, ಹೋರಾಟಗಳು ಸೈದ್ಧಾಂತಿಕ ನೆಲೆಯಲ್ಲಿ ನನ್ನನ್ನು ಇನ್ನಷ್ಟು ಗಟ್ಟಿಯಾಗಿ ನೆಲೆಯೂರಲು ನೆರವಾದವು. ಸಾಮಾಜಿಕತೆ, ನೈತಿಕತೆ ನನ್ನ ಬದುಕಿಗೆ ಹೊಸ ತಿರುವುಗಳಾದವು. ನನ್ನ ಹುಡುಕಾಟದ ಹಾದಿಯಲ್ಲಿ ಸಾಕಷ್ಟು ಜನರು ಸಿಕ್ಕಿದ್ದಾರೆ. ಮೇಧಾ ಪಾಟ್ಕರ್, ಕವಿತಾ ಪುರಗಂಟಿ, ಇತರೆ ಹೋರಾಟಗಾರರು ಹಾಗೂ ಪುಸ್ತಕಗಳು ನೆರವಾಗಿವೆ. ಯಾವುದೇ ಸ್ವಪ್ರತಿಷ್ಠೆ ಇಲ್ಲದೇ ಯಾವುದೇ ಚಳುವಳಿಯಲ್ಲೂ ಹೋಗಿ ಹಾಡಿ ಬರುತ್ತೇನೆ. ಕಲಿಕಾ ಹಾದಿಯಲ್ಲಿ ನಡೆವ ನಮ್ಮ ಜೊತೆಗಾರರೆ ನಮ್ಮ ಗುರುಗಳು. ನಾವು ಗಳಿಸಿಕೊಂಡ ಜ್ಞಾನವ ನಾವೆಲ್ಲ ಹಂಚಿಕೊಂಡು ನಡೆವೆವು ಪರಸ್ಪರ ನಾವೆಲ್ಲ ಗುರುಗಳು' ಎನ್ನುತ್ತಾರೆ.

ತಾವೂ ಮಂತ್ರ ಮಾಂಗಲ್ಯ ಮೂಲಕ ಮದುವೆ ಮಾಡಿಕೊಂಡಿದ್ದಾರೆ. ವಿಶ್ವ ಮಾನವ ಪ್ರಶಸ್ತಿ, ಜನಪದ ಕಲಾ ರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಇವರನ್ನು ಅರಸಿ ಬಂದಿವೆ. ಭಾರತದ ಸಂವಿಧಾನ ಉಳಿಸಿ ಅಭಿಯಾನ, ಉಡುಪಿ ಚಲೋ, ರೈತ ಸಂಘದ ಹೋರಾಟಗಳು, ದಲಿತರ ಹೋರಾಟಗಳಲ್ಲಿ ಕೆಲಸ ಮಾಡಿದ್ದಾರೆ. ಪರಿಸರದ ಪುನರ್ ನಿರ್ಮಾಣ ಮಾಡುವುದಕ್ಕಾಗಿ ಬೇರು ಬೆವರು ಕಲಾ ಬಳಗ ಎಂಬ ತಂಡವನ್ನು ಕಟ್ಟಿ 2019ರಲ್ಲಿ ಹಸಿರು ಪದ ಎನ್ನುವ ಮಣ್ಣು, ಪರಿಸರ, ಗಿಡ ಮರಕ್ಕೆ ಸಂಬಂಧಿಸಿದ ಗೀತೆಗಳನ್ನು ಹಾಡುತ್ತಾರೆ. ಹಸಿರು ಪದದ ಜೊತೆಗೆ ಚಂದ್ರು ಸಮಾಜದ ಮುನ್ನೆಲೆಗೆ ಬರುತ್ತಾರೆ. ಅಲ್ಲಿಂದ ರಾಜಸ್ತಾನ್, ದೆಹಲಿ, ಮಹಾರಾಷ್ಟ್ರ ಬೇರೆ ಬೇರೆ ರಾಜ್ಯಗಳಿಗೂ ಹೋಗಿ ಹಾಡನ್ನು ಹಾಡುತ್ತಾರೆ. ಜನರ ಬದಲಾವಣೆಗಾಗಿ ಜನರ ನಡುವೆ ಯಾರಿಗೋ ಅನ್ಯಾಯವಾದಲ್ಲಿ ಅವರು ಹಾಡುಗಳನ್ನು ಹಾಡುತ್ತಾರೆ. ದಲಿತ ಸಮುದಾಯದಲ್ಲಿ ಹುಟ್ಟಿ ಮೌಢ್ಯತೆ, ಮನುವಾದ, ಮೌಢ್ಯವನ್ನು ಮೀರಿ ಸಮ ಸಮಾಜದ ಕಡೆಗೆ ಹೆಜ್ಜೆ ಇಡುತ್ತಿದ್ದಾರೆ. ತಮ್ಮ ಸಮೃದ್ಧ ಕಂಠಸಿರಿಯಿಂದ ಅರಿವಿನ ಹಾಡುಗಳ ಸಾಮಾಜಿಕ ಜಾಗೃತಿ, ವೈಚಾರಿಕತೆಯನ್ನು ಪಸರಿಸುತ್ತಿದ್ದಾರೆ.

ಧನ್ಯವಾದಗಳೊಂದಿಗೆ...
ನಿರೂಪಣೆ : ಜ್ಯೋತಿ. ಎಸ್

ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ಯೋಗ ತಂದ ಯೋಗ...
ಅಂಗವೈಕಲ್ಯದ ಅಡೆತಡೆಯ ನಡುವೆಯು ಸಾಧನೆಯ ಗರಿ
ಕರ್ನಾಟಕದ ಜನತೆಯಿಂದ ನಡೆಯುತ್ತಿರುವ ಸಂಸ್ಥೆ ನಮ್ಮದು
ನಿರೀಕ್ಷೆಯಿಲ್ಲದೇ ರೋಗಿಗಳ ಸೇವೆ ಮಾಡುವ ‘ಕರುಣಾಶ್ರಯ’
ಓದಿನಲ್ಲಿ ಹಿಂದೆ ಬಿದ್ದರೂ ಜೀವನದಲ್ಲಿ ಮುಂದೆ ಬರಬಹುದು : ಜ್ಯೋತಿ ಎಸ್.
ಅರಸನಿಗೆ ರಾಜ್ಯವಿಲ್ಲ ಅರಮನೆಯಿಲ್ಲ.
ಹಿರಿಯರ ಕಲೆಗೆ ಹೊಸ ವಿನ್ಯಾಸ ನೀಡುವ ಗಜಾನನ ಮರಾಠೆ
ಕಿನ್ನಾಳ ಎಂಬ ಚಂದದ ಕಲೆಯ ಕಲಾವಿದ ಅಶೋಕ್ ಚಿತ್ರಗಾರ್
ಹರಿದ ಬಟ್ಟೆಯಲ್ಲೂ ಚೆಂದನೆಯ ಚಿತ್ತಾರ ಮೂಡಿಸುವ ನೇಕಾರ
ಕಲೆಯನ್ನೇ ಉಸಿರಾಗಿಸಿರುವ ಅಲೆಮಾರಿ ಸಮುದಾಯಗಳ ಚಿತ್ರಣ
ಸಕಲಕಲಾವಲ್ಲಭ ಪಂಚಾಕ್ಷರಿ​​​ ಜೀವನ ಗಾಥೆ
ವಿರಳ ವಿಶಿಷ್ಟ ಗಜಲ್ ರಚನೆಕಾರ ‘ವಾಯ್. ಜೆ. ಮಹಿಬೂಬ’
ಕಾಡಿನ ನೆಂಟ ವೆಂಕಟಗಿರಿ ನಾಯಕನ ಚಾರಣ ಪಯಣ
ಗಂಡಿರಲಿ ಹೆಣ್ಣಿರಲಿ ತೃತೀಯ ಲಿಂಗಿಯಿರಲಿ ಎಲ್ಲರೂ ಇಲ್ಲಿ ಸಮಾನರು...
ನಿಸ್ವಾರ್ಥವಾಗಿ ಕನ್ನಡ ಸೇವೆಯನ್ನು ಮಾಡುವ ಮಲ್ಲಿಕಾರ್ಜುನ ಖಂಡಮ್ಮನವರ
ಸಾಧನೆ ಹಾದಿಯಲ್ಲಿ ಕಲಾವಿದ ಅನಂತ ಚಿಂಚನಸೂರ

‘ಬದ್ದಿ ಸಹೋದರರ’ ಕಲಾಯಾನ
ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ

ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್

ಅನುಭವ ಜಗತ್ತಿನ ವಿಸ್ತಾರವೇ ‘ಓದು’: ಎಚ್.ಎಸ್. ಸತ್ಯನಾರಾಯಣ

MORE NEWS

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...