ಬಿಟ್ಟುಬಿಡುವುದೆಂದರೂ ಕಟ್ಟಿಕೊಳ್ಳುವುದೇ 

Date: 16-08-2022

Location: ಬೆಂಗಳೂರು


“ಹಂಚಿಕೊಳ್ಳುವುದೆಂದರೆ ಅದು ಅಮೂರ್ತ. ಮಳೆಗರೆದ ಮೇಲೆ ಉಳಿವ ನೀಲಿ ಆಕಾಶ ಮಳೆಯ ಅನುಭವವನ್ನು ಹೇಗೆ ಬಿಚ್ಚಿಡಬಲ್ಲದು?! ಅಂಥಾ ಅದ್ಭುತವನ್ನೇ ನನಗೆ ರಾಮುಡೂ ತೋರಿಸಿದ್ದು!” ಎನ್ನುತ್ತಾರೆ ಲೇಖಕಿ ಪಿ. ಚಂದ್ರಿಕಾ. ಅವರು ತಮ್ಮ ತೇಲುವ ಪಾದಗಳು ಅಂಕಣದಲ್ಲಿ, ರಾಮುಡು ಮತ್ತು ಮುತ್ಯಾ ಮೂಲಕ ತಾವು ಕಂಡ ಹೊಸದೇ ಜಗತ್ತಿನ ಅನುಭವಗಳನ್ನು ದಾಖಲಿಸಿದ್ದಾರೆ.

ನಮಗೆಲ್ಲಾ ಗಟ್ಟಿ ಹಾಲು ಕಾಫಿಯನ್ನು ಕೊಡುತ್ತಿದ್ದ ಅಮ್ಮಮ್ಮ ರಾಮುಡೂಗೆ ಮಾತ್ರ ನೀರನ್ನು ಬೆರೆಸುತ್ತಿದ್ದಳು. ಒಲೆಯ ಪಕ್ಕದಲ್ಲಿ ಬಿಸಿಯಾಗಲೆಂದು ಸಣ್ಣ ಗಿಂಡಿಯಲ್ಲಿ ನೀರನ್ನು ಇಡುತ್ತಿದ್ದಳು. ಎಲ್ಲರಿಗೂ ಕೊಟ್ಟಾದ ಮೇಲೆ ಆ ನೀರಿಗೆ ಬಟ್ಟೆಯಲ್ಲಿ ಹಿಂಡಿ ತೆಗೆದ ಮೇಲೆ ಉಳಿದ ಕಾಫಿ ಪುಡಿಯನ್ನು ಹಾಕಿ ಮತ್ತೆ ಸೋಸುತ್ತಿದ್ದಳು. ಆ ಡಿಕಾಕ್ಷನ್ನಿಗೆ ಹಾಲನ್ನು ಬೆರೆಸಿ ಒಂದಿಷ್ಟು ಬೆಲ್ಲವನ್ನು ಸೇರಿಸಿದರೆ ರಾಮುಡೂಗೆ ಕೊಡುವ ಕಾಫಿ ಸಿದ್ಧವಾಗುತ್ತಿತ್ತು. ತುಟ್ಟಿ ಎನ್ನುವ ಕಾರಣಕ್ಕೆ ಹೀಗೆ ಮಾಡುತ್ತಿದ್ದಳೋ, ಕೆಲಸದನಿಗೆ ಏನು ಕೊಟ್ಟರೂ ಆದೀತು, ಅವನಿಗೆ ಇದನ್ನು ಕೊಡುತ್ತಿರುವುದೇ ಹೆಚ್ಚು ಎನ್ನುವ ಭಾವವೋ ತಿಳಿಯದು. `ನಿನ್ನ ಸಾಹುಕಾರಿಕೆಯನ್ನು ಇಲ್ಲಿ ತೋರಿಸು. ಅವನು ಬರುವುದು ನಮ್ಮ ಮನೆಯಲ್ಲಿ ಕಾಫಿ ಕುಡಿಯಲು ಅಲ್ಲ. ಬೇಕೆಂದರೆ ಅವನಿಗೆ ಮನೆಯಲ್ಲೇ ಎಲ್ಲಾ ಸಿಗುತ್ತದೆ’ ಎಂದು ಮುತ್ಯಾ ಹೇಳುತ್ತಿದ್ದಳು. ಅಮ್ಮಮ್ಮನಿಗೆ ನಾನು ಮಾಡಿದ್ದೇ ಸರಿ ಎನ್ನುವ ಹಠ. `ನಿಮ್ಮ ಹಾಗೆ ಯೋಚಿಸಿದರೆ ಮನೆ ಗುಡಿಸಿ ಗುಂಡಾಂತರ ಆಗುವುದು ಖಂಡಿತಾ. ಮನೆಯಲ್ಲೇ ಎಲ್ಲಾ ಇರೋನು ಇಲ್ಯಾಕೆ ಬರ್ತಾ ಇದ್ದ’ ಎಂದು ಮಾತಿಗಿಳಿಯುತ್ತಿದ್ದಳು. ಅವಳಿಗೆ ರಾಮುಡೂಗೆ ಕೊಡ್ತಾ ಇರೋದು ಲಕ್ಸುರಿ ಎನ್ನುವ ಭಾವ. ಆಗೆಲ್ಲಾ ಮುತ್ಯಾಗೂ ಅಮ್ಮಮ್ಮನಿಗೂ ಜಗಳ ಆಗುತ್ತಿತ್ತು. ನಮಗೆ ಇಂಥಾ ಸಂಗತಿಗಳು ತೀರಾ ಸಹಜವಾಗಿರುತ್ತಿತ್ತು. ಅಮ್ಮಮ್ಮ ಮುಂದೆ ಮಕ್ಕಳಲ್ಲಿ ಕೂಡ ಇದೇ ಭೇದ ಭಾವವನ್ನು ಮಾಡುತ್ತಾ ಬಂದಿದ್ದಳು. ಹಣವಿರುವ ಗೀತೂ ಚಿಕ್ಕಿಗೆ ಪ್ರಾಮುಖ್ಯತೆಯನ್ನು ಕೊಟ್ಟು, ಹಣವಿಲ್ಲದ ಅಮ್ಮನಿಗೆ ನೋವಾಗುವ ಹಾಗೆ, `ನಿನ್ನ ಹಣೇಬರವೇ ಇಷ್ಟು’ ಎನ್ನುತ್ತಿದ್ದಳು. ಅಳುತ್ತಲೇ ಅಮ್ಮ ಅಮ್ಮಮ್ಮನ ಹತ್ತಿರವಿದ್ದ ಬ್ಲೌಸ್ಪೀಸುಗಳಿಂದ ನಮಗೆ ಲಂಗ ಹೊಲಿದುಕೊಳ್ಳುತ್ತಿದ್ದಳು.

ರಾಮುಡೂವಿನ ಕಡ್ಡಿಯಂಥಾ ದೇಹ ದಣಿದಿದ್ದನ್ನು ನಾನು ನೋಡಲೇ ಇಲ್ಲ. ಮಂಡಿಯ ಮೇಲಕ್ಕಿದ್ದ ಕಚ್ಚೆಪಂಚೆ ಮೈಮೇಲಿನ ಹತ್ತಿಯ ಅರ್ಧ ಮುಂಡದ ಅಂಗಿ, ಬಿಳಿತನವನ್ನು ಕಳೆದುಕೊಂಡಿರುತ್ತಿತ್ತು. ಹಲ್ಲುಗಳೆ ಇಲ್ಲದ ಅವನ ಬಾಯಲ್ಲಿ ಪಾಪಾ ಎನ್ನುವ ಶಬ್ದ ಬಿಟ್ಟರೆ ಗಂಟಲು ನಾಲಿಗೆಯಿಂದ ಬರುವ ಯಾವ ಶಬ್ದಕ್ಕೂ ಗಾಳಿಯೆ ಮುಂದಾಗಿ ಪುಸ್ಸೆಂಬ ಶಬ್ದದ ಜೊತೆಗೆ ಹೊಮ್ಮುತ್ತಿತ್ತು. ನನಗೆ ಅವನು ಹಾಗೆ ಮಾತಾಡಿದಾಗಲೆಲ್ಲಾ ನಗು ಬರುತ್ತಿತ್ತು. ಎಲ್ಲಿ ಇನ್ನೊಮ್ಮೆ ಹೇಳು ಎಂದು ಅವನನ್ನು ಪೀಡಿಸುತ್ತಿದ್ದೆ. ಅವನಿಗೆ ಮನೆಯ ಒಳಗೆ ನಡೆಯುವುದು ಗೊತ್ತಿಲ್ಲ ಎಂದಲ್ಲ, ಗೊತ್ತಿತ್ತು. ಅದು ಅವನಿಗೆ ಸಂಗತಿಯೇ ಆಗಿರುತ್ತಿರಲಿಲ್ಲ. ಮುತ್ಯಾಳ ಜೊತೆಗೆ ಅವನಿಗಿದ್ದ ಬಾಂಧವ್ಯಕ್ಕೆ ಇವ್ಯಾವೂ ಎರವೂ ಆಗುತ್ತಿರಲಿಲ್ಲ. ಮುತ್ಯಾಗೂ ಇದನ್ನೇ ಹೇಳುತ್ತಿದ್ದ. ತಾನು ಮಾಡುವ ಕೆಲಸ ತಪ್ಪೆಂದು ಯಾರಾದರೂ ಹೇಳಿದರೆ ಅದನ್ನು ಸರಿ ಮಾಡಿಕೊಳ್ಳಲು ಸಾಧ್ಯ ಎನ್ನುವುದು ಮುತ್ಯಾಳ ಮಾತಾದರೆ- ತಾನು ಮಾಡಿದ ಕೆಲಸ ತಪ್ಪೆಂದು ತನಗನ್ನಿಸದೇ ಹೋದರೆ ಪರಿವರ್ತನೆ ಸಾಧ್ಯವಾಗುವುದಿಲ್ಲ ಎನ್ನುವುದು ರಾಮುಡೂನ ಮಾತು. ಹೂರಣವಿಲ್ಲದೆ ಕಡುಬು ತನ್ನ ಮೇಲ್ಪದರದಿಂದ ಹೇಗೆ ಸಿಹಿಯನ್ನು ರುಚಿಯಾಗಿಸಬಲ್ಲದು. ಬರಿಯ ಮೇಲಿನ ಪದರವನ್ನು ಮಾತ್ರ ರುಚಿನೋಡಿ ಕಡುಬು ಚೆನ್ನಾಗಿಲ್ಲ ಎಂದರೆ ಹೇಗೆ ಎನ್ನುತ್ತಿದ್ದಳು ಮುತ್ಯಾ. ಎಷ್ಟೋ ಸಲ ಅವರಿಬ್ಬರ ಮಾತುಗಳು ಒಂದಕ್ಕೊಂದು ಮುಂದುವರಿಕೆಯಾ! ಅನ್ನಿಸುತ್ತಿತ್ತು.

ತಾತ ಹಠಬಿಡದ ತ್ರಿವಿಕ್ರಮ. ತನ್ನ ಈ ಗತಿಗೆ ಕಾರಣ ಏನು? ಎತ್ತ? ಎಂದೆಲ್ಲಾ ಹತ್ತು ಕಡೆ ವಿಚಾರಿಸಿದ. ಇಷ್ಟೆಲ್ಲಾ ಆದ ಮೇಲೆ ಅವನು ನಾಗಪ್ಪ ಶಾಸ್ತ್ರಿಗಳ ಬಗ್ಗೆ ಸ್ವಲ್ಪ ವಿಶ್ವಾಸ ಕಳಕೊಂಡ ಹಾಗಿತ್ತು. ಅವರನ್ನು ಮತ್ತೆ ತನ್ನ ಭವಿಷ್ಯದ ಬಗ್ಗೆ ಕೇಳಲು ಹೋಗದೆ, ಹೊಸಬರನ್ನು ಹುಡುಕಿ ಹೋಗುತ್ತಿದ್ದ. ಹೇಳುವವರಿಗೆ ಏನು ಬರ. ಅವನೂ ಯಾರೋ ಏನೋ ಹೇಳಿದ್ದನ್ನ ಕೇಳಿ ಇನ್ನೇನೋ ಮಾಡುತ್ತಿದ್ದ.

ಹೀಗೇ ಭವಿಷ್ಯವನ್ನು ನುಡಿದವನೊಬ್ಬ, `ನೀನು ಈಗಿರುವ ಮನೆಕಟ್ಟಿ ಇನ್ನೂರು ವರ್ಷಗಳೇ ಕಳೆದಿದೆ. ದೇವರಿಗೇ ಆಯುಷ್ಯವಿರುತ್ತೆ ಇನ್ನು ಮನೆಗಿರುವುದಿಲ್ಲವಾ? ಆಯುಷ್ಯ ಮುಗಿದ ದೇಹ ಕೊಳೆಯುತ್ತೆ ಕೋಟೆಕೊತ್ತಲಗಳು ಇಲಿ, ಹಾವುಗಳ ಬಿಲವಾಗುತ್ತದೆ. ಹಾಗೆ ಆಯುಷ್ಯ ಮುಗಿದ ಮನೆಯು ದುಷ್ಟ ಶಕ್ತಿಗಳು ಸಲೀಸಾಗಿ ಸೇರಿಕೊಳ್ಳುವ ಜಾಗವಾಗುತ್ತದೆ. ಅದಕ್ಕೆ ಆ ಮನೆಯಲ್ಲಿ ನಿನಗೆ ಏಳಿಗೆ ಇಲ್ಲ’ ಎಂದುಬಿಟ್ಟಿದ್ದ. ಸೋಲನ್ನು ಒಪ್ಪಿಕೊಳ್ಳದೆ ಅಸಹಾಯಕನಾದಾಗ ಇಂಥಾ ಮಾತುಗಳು ಊರುಗೋಲಾಗುತ್ತವೆ. ಈ ಸೋಲಿಗೆ ನನ್ನ ನಿರ್ಧಾರಗಳಲ್ಲ, ನನ್ನನ್ನು ಮೀರಿದ ಯಾವುದೋ ಶಕ್ತಿಯೇ ಕಾರಣ ಎನ್ನುವ ನಿರ್ಧಾರಕ್ಕೆ ಬಂದುಬಿಟ್ಟಿದ್ದ. ಈ ಒಂದು ಮಾತು ಅವನ ದೌರ್ಬಲ್ಯಗಳನ್ನು ಒಮ್ಮೆಲೆ ತೊಡೆದು ಹಾಕಿದ ಹಾಗನ್ನಿಸಿಬಿಟ್ಟಿತ್ತು. ರಾತ್ರಿಗಳು ಕತ್ತಲೆಯೇ ಸತ್ಯ ಎನ್ನುವಾಗ ಸೂರ್ಯ ಬೆಳಕಿನ ಸತ್ಯ ಹೇಳುತ್ತಾನಲ್ಲಾ ಹಾಗೆ. ಮುತ್ಯಾ ಮಗನ ಇಂಥಾ ಮಾತುಗಳಿಗೆ ಉತ್ತರವನ್ನೇ ಕೊಡಲಿಲ್ಲ. ಹಾಲಲ್ಲಿ ಅದ್ದಿ ಎರಡು ಬೆರಳುಗಳ ನಡುವೆ ಹತ್ತಿಯನ್ನಿಟ್ಟು ಹೂಬತ್ತಿ ಹೊಸೆಯುತ್ತಾ ಕುಳಿತಿದ್ದಳು. `ನಾನು ಹೇಳಿದ್ದು ನಿನಗೆ ಅರ್ಥವಾಯಿತೋ?’ ಎಂದು ಕೇಳಿದ್ದಕ್ಕೆ, `ಈಗೇನು ಮಾಡಬೇಕೆಂದಿರುವಿ? ಈ ಮನೆಯನ್ನು ಕೆಡವಿ ಹೊಸದಾಗಿ ಕಟ್ಟಿಕೊಳ್ಳಬೇಕೆಂದೇ?’ ಎಂದು ಪ್ರಶ್ನಿಸಿದ್ದಳು. `ಏನಾದರೂ ಹೇಳಿದರೆ ಹೀಗೆ ಬರೀ ಎಡವಟ್ಟಿನ ಮಾತೇ. ಇಡೀ ಮನೆಯನ್ನು ಕೆಡವಿ ಕಟ್ಟಲಾದೀತೇ ಪರಿಹಾರವೇನೋ ಇರುತ್ತೆ. ಊರವರಿಗೆಲ್ಲಾ ಹೇಳುತ್ತೀರಾ? ಮನೆಯ ಜನಕ್ಕೆ ಮಾತ್ರ ಹೀಗೆ. ಮಗ ಎನ್ನುವ ಅಭಿಮಾನ ಇದ್ದರಲ್ಲವಾ?’ ಎಂದು ಅಮ್ಮಮ್ಮ ವಟಗುಟ್ಟಿದ್ದಳು.

ತಾತ ಮನೆಯ ಪಕ್ಕಕ್ಕೆ ಇದ್ದ ಪುಟ್ಟ ಜಾಗದಲ್ಲಿ ಹೊಸದಾಗಿ ಕೋಣೆಯನ್ನು ನಿರ್ಮಿಸುವ ನಿರ್ಧಾರಕ್ಕೆ ಬಂದಿದ್ದ. ತಾತನ ಹತ್ತಿರ ಹಣವಿರಲಿಲ್ಲ. ಕಾರಣ ಮಣ್ಣಿನ ಗೋಡೆ ಕಟ್ಟಿ ಅದರ ಮೇಲೆ ತೆಂಗಿನ ಸೋಗೆಯನ್ನು ಹಾಕಿ ಮನೆಯನ್ನು ವಿಸ್ತರಿಸಿದ್ದ. ಸುಣ್ಣ ಬಳಿದ ಮಣಣ್ಣಿನ ಗೋಡೆಗಳಿಗೆ ಚಿಕ್ಕಿ ಕೆಮ್ಮಣ್ಣಿನ ಚಿತ್ತಾರವನ್ನು ಬರೆದಿದ್ದಳು. ಒಳಗೆ ಹೋದರೆ ಹೊಸಮಣ್ಣಿನ ಘಮಲು, ನೆಲ ಸಾರಿಸಿದ್ದ ಸೆಗಣಿಯ ವಾಸನೆಯ ಜೊತೆ ಬೆರೆತು ಇಷ್ಟವಾಗುತ್ತಿತ್ತು. ನಾನು ಅಮ್ಮನ ಹೊಟ್ಟೆಯಲ್ಲಿ ಇದ್ದಾಗ ಮಣ್ಣಿನ ಹೆಂಟೆಗಳನ್ನು ತಂದಿಟ್ಟುಕೊಳ್ಳುತ್ತಿದ್ದಳಂತೆ. ಊಟ ಆದ ಮೇಲೆ ಯಾರಿಗೂ ಗೊತ್ತಾಗದ ಹಾಗೆ ಅದನ್ನು ತಿನ್ನುತ್ತಿದ್ದಳಂತೆ. ಮುತ್ಯಾ `ನಿನ್ನ ಮಗುವಿನ ತಲೆ ಮೇಲೆ ಬರೀಮಣ್ಣೆ ಇರುತ್ತೆ, ಹಾಗೆ ತಿನ್ನ ಬೇಡವೇ’ ಎಂದು ಹೇಳುದರೂ ಅವಳು ಕೇಳುತ್ತಿರಲಿಲ್ಲವಂತೆ. `ಅದಕ್ಕೆ ನಿನಗೆ ಮಣ್ಣಿನ ವಾಸನೆ ಇಷ್ಟವಾಗುತ್ತಿದೆ’ ಎನ್ನುತ್ತಿದ್ದಳು ಮುತ್ಯಾ. ಇರಲೂ ಬಹುದು- ಆ ಸೆಳೆತವೇ ಇವತ್ತು ನಾನು ಜಮೀನು ಮಾಡಿಕೊಂಡಿರಲಿಕ್ಕೆ ಕಾರಣವೂ ಆಗಿರಬಹುದು.

ವಯಸ್ಸಾಗುತ್ತಾ ಆಗುತ್ತಾ ಯಾಕೋ ರಾಮುಡೂನ ಕಾಲುಗಳು ಊದಿಕೊಳ್ಳಲು ಆರಂಭಿಸಿತ್ತು. ಮುತ್ಯಾ ಹಿತ್ತಲಿನ ಸೊಪ್ಪು ಸೆದೆಗಳನ್ನು ತಂದು ಅರೆದು, ಅದನ್ನು ಬಿಸಿಮಾಡಿ ಬಟ್ಟೆಯಲ್ಲಿಟ್ಟು ಅವನ ಕಾಲಿಗೆ ಕಟ್ಟುತ್ತಿದ್ದಳು. ಆಗೆಲ್ಲಾ ಅವನು ಬೇಡ ನಾನು ಕಟ್ಟಿಕೊಳ್ಳುತ್ತೇನೆ ಎನ್ನುತ್ತಿದ್ದ. ಆದರೆ ಮುತ್ಯಾ ಬಿಡುತ್ತಿರಲಿಲ್ಲ. ಮಗುವನ್ನು ಗದರುವ ಹಾಗೆ ಅವನನ್ನು ಗದರುತ್ತಿದ್ದಳು. ಕಟ್ಟಿಯಾದ ಮೇಲೆ ಗಂಟೆಯ ತನಕ ಬಿಚ್ಚಬೇಡ ಎನ್ನುವ ಎಚ್ಚರಿಕೆಯನ್ನೂ ಕೊಡುತ್ತಿದ್ದಳು. ರಾಮುಡೂ ಹಿತ್ತಲಲ್ಲಿ ದನದ ಕೊಟ್ಟಿಗೆಯ ಮುಂದಿನ ಚಪ್ಪಡಿ ಕಲ್ಲಿನ ಮೇಲೆ ಕಾಲುಗಳನ್ನು ನೀವಿಕೊಳ್ಳುತ್ತಾ ಕೂರುತ್ತಿದ್ದ. ಒಮ್ಮೆ ಮುತ್ಯಾ ನಾಳಿನ ಪೂಜೆಗಾಗಿ ಹೂಗಳನ್ನು ಬಿಡಿಸುತ್ತಾ ಮಾತಾಡಿಕೊಳ್ಳುತ್ತಿದ್ದಳು. ನಾನು ಮುತ್ಯಾ ಯಾರ ಜೊತೆ ಮಾತಾಡುತ್ತಿದ್ದಾಳೆ ಎಂದು ಬಗ್ಗಿ ನೋಡಿದೆ. ಯಾರೂ ಕಾಣಲಿಲ್ಲ. ಅದೇ ಧ್ಯಾನದಲ್ಲಿ ಇದ್ದ ನಾನು ಅಲ್ಲೇ ಅರಳಿದ್ದ ಹಳದಿ ಹೂವನ್ನು ಕೀಳಲು ಹೋದೆ. ಹೂವಿನ ಮೇಲೆ ಹೂವಾಗಿ ಕೂತಿದ್ದ ಚಿಟ್ಟೆಯೊಂದು ಹಾರಿತು. ಹೂವು ಹಾರಿತೋ ಎನ್ನುವ ಭ್ರಮೆಗೆ ಬಿದ್ದ ನಾನು ಕ್ಷಣ ಕಾಲ ಸುಮ್ಮನೆ ನಿಂತು ಬಿಟ್ಟೆ. ಒಮ್ಮೆ ಜೋರಾಗಿ ಗಾಳಿ ಬೀಸಿತು. ಸುಮಾರು ಚಿಟ್ಟೆಗಳು ಒಮ್ಮೆಲೆ ಹೂವನ್ನು ಬಿಟ್ಟು ಹಾರಿದವು. ಈಗ ನನಗೆ ಚಿಟ್ಟೆ ಹೂಗಳ ಸಂಬಂಧ ಸ್ಪಷ್ಟವಾಗಿತ್ತು. ಇದನ್ನೆಲ್ಲಾ ಗಮನಿಸುತ್ತಿದ್ದ ರಾಮುಡೂ, `ಬಾ ಪಾಪ’ ಎಂದು ಕರೆದ. ಈಚೀಚೆಗೆ ಅವನು ಪಾಪ ಎಂದು ಕರೆದರೆ ನನಗೆ ಒಳಗೆ ಮುನಿಸಾಗುತ್ತಿತ್ತು. `ನಾನು ಪಾಪ ಅಲ್ಲ’ ಎಂದು ಕೆನ್ನೆಯುಬ್ಬಿಸಿ ಅವನ ಬಳಿಗೆ ಹೋದೆ. ತನ್ನ ಕೈಗಳನ್ನು ಮೇಲೆಕ್ಕೆ ಎತ್ತಿ, `ನೀನು ಅಷ್ಟು ದೊಡ್ಡವಳಾದರೂ ನನಗೆ ಪಾಪಾನೇ’ ಎಂದು ನಕ್ಕ. ನಾನು ಅವನ ಕಾಲನ್ನು ನೋಡುತ್ತಾ ತುಂಬಾ ನೋವುತ್ತಾ?’ ಎಂದೆ. ಅವನು ಇಲ್ಲ ಎಂಬಂತೆ ತಲೆ ಆಡಿಸಿ, `ನಿನ್ನ ಮುತ್ಯಾ ಪಟ್ಟು ಹಾಕಿದ್ದಾಳಲ್ಲಾ ನನಗ್ಯಾವ ನೋವು’ ಎಂದ. ನಾನವನ ಪಕ್ಕಕ್ಕೆ ಕೂರುತ್ತಾ, `ರಾಮುಡೂ ಈ ಮುತ್ಯಾ ಯಾರ ಜೊತೆಗೋ ಮಾತಾಡುತ್ತಿದ್ದಾಳಲ್ಲಾ ಅದ್ಯಾರು?’ ಎಂದೆ. ರಾಮುಡೂ ನನ್ನ ನೋಡಿ ನಗುತ್ತಾ, `ಮುತ್ಯಾನ್ನೆ ಕೇಳು’ ಎಂದ. `ನನಗೆ ಕೆಲವೊಮ್ಮೆ ಮುತ್ಯಾ ವಿಚಿತ್ರಾನ್ನಿಸುತ್ತದೆ ಅವಳ ಮಾತೂ ಅರ್ಥವಾಗುವುದಿಲ್ಲ. ಗಿಡ ಮರ ಕೊನೆಗೆ ಗೋಡೆಯ ಜೊತೆಗೂ ಮಾತಾಡಿಬಿಡುತ್ತಾಳೆ ಅದ್ಯಾಕೆ ಅಂತ?’ ಎಂದೆ. ನನ್ನ ನೋಡುತ್ತಾ, `ನಿನಗೆ ಚಿಟ್ಟೆ ಏನನ್ನಾದರೂ ಹೇಳಿತೇ?’ ಎಂದ. ನಾನು `ಇಲ್ಲ’ ಎಂದೆ. `ಮತ್ತೆ ಹೂವೇನಾದರೂ ಹೇಳಿತಾ?’ ಎಂದ. ಅದಕ್ಕೂ ನಾನು `ಇಲ್ಲ’ ಎಂದೆ. `ಅವೆರಡು ಇಷ್ಟು ಹೊತ್ತಿನ ತನಕ ಮಾತಾಡಿದವಲ್ಲಾ? ನಿನ್ನ ಮುತ್ಯಾನ ಜೊತೆ ಅವು ಅದನ್ನೇ ಹೇಳುತ್ತಿವೆ’ ಎಂದ. ನನಗೆ ಕೋಪ ಬಂತು, `ಬಾಯಿಲ್ಲದ ಅವು ಹೇಗೆ ಮಾತಾಡುತ್ತವೆ’ ಎಂದೆ. `ಬಾ ಇಲ್ಲಿ’ ಎನ್ನುತ್ತಾ ನನ್ನ ಕೈ ಹಿಡಿದು ಗಿಡದ ಬಳಿ ಕರೆದೊಯ್ದ. ಗಿಡದ ತುಂಬಾ ಹೂವರಳಿತ್ತು. `ಈ ಗಿಡದ ಬಳಿ ಮಾತಾಡು’ ಎಂದ. ಅವನ ಧ್ವನಿಯಲ್ಲಿದ್ದುದು ಆಜ್ಞೆಯೋ, ಪ್ರೀತಿಯೋ ತಿಳಿಯದಾಯಿತು. ನನಗೆ ನಿಜಕ್ಕೂ ಅಳು ಬಂತು. ಗಿಡದ ಹತ್ತಿರ ಮಾತಾಡುವುದು ಹೇಗೆ? ಮುತ್ಯಾ ತಿರುಗಿ ನೋಡಿ, `ಏನದು ರಾಮುಡೂ?’ ಎಂದಳು. `ಪಾಪನಿಗೆ ಗಿಡದ ಹತ್ತಿರ ಮಾತಾಡೋದನ್ನ ಕಲಿಸುತ್ತಿದ್ದೇನೆ’ ಎಂದ. ಮುತ್ಯಾ, `ಓಹ್ ಹೌದಾ?’ ಎಂದು ತನ್ನ ಪಾಡಿಗೆ ತಾನು ಹೂ ಬಿಡಿಸುತ್ತಿದ್ದಳು.

ರಾಮು ನನ್ನ ನೋಡುತ್ತಾ ಮಾತಾಡುವಂತೆ ಕಣ್ಣಲ್ಲೇ ಒತ್ತಾಯಿಸುತ್ತಿದ್ದ. ಸಂಜೆಯ ಸೂರ್ಯ ಇಳಿಮುಖನಾಗುತ್ತಿದ್ದ. ಕೆಂಬಣ್ಣ ಎಲ್ಲಾ ಕಡೆಗೂ ಹರಡಿ ಮೋಹಕತೆ ಆವರಿಸಿತ್ತು. ಗಿಡವನ್ನೇ ದಿಟ್ಟಿಸಿ ನಾನು ದೀನಳಾಗಿ ರಾಮುಡೂ ಕಡೆ ನೋಡುತ್ತಾ, `ಗಿಡ ಮಾತಾಡುತ್ತಿಲ್ಲ’ ಎಂದೆ. `ಪಾಪ ನೋಡುವುದು ಹಾಗಲ್ಲ. ಮೊದಲು ಅದನ್ನ ಗಿಡ ಅನ್ನುವುದನ್ನು ಮರೆ, ಇಲ್ಲ ನೀನು ಪಾಪ ಎನ್ನುವುದನ್ನು ಮರೆ’ ಎಂದ. ನನಗೆ ಇದ್ದಿದ್ದೂ ಸಂಕಟವಾಯಿತು. `ಇದು ಹೇಗೆ ಸಾಧ್ಯ?’ ಎಂದೆ. `ಬಾಯಿಲ್ಲಿ ಬಗ್ಗು’ ಎಂದು ಹೂವಿನ ಗಿಡದ ಬಳಿ ನನ್ನನ್ನು ಬಗ್ಗಿಸಿದ. `ಕಣ ್ಣಟ್ಟು ನೋಡು, ಈಗ ನೀನು ಪಾಪ ಅಲ್ಲ ಹೂವಿನ ಗಿಡ’ ಎಂದ. ಗಿಡವನ್ನು ದಿಟ್ಟಿಸಿದೆ. ಗಿಡದ ಮೇಲೆ ಪ್ರೀತಿ ಬಂತು. ನೋಡುತ್ತಾ ನೋಡುತ್ತಾ ಅದನ್ನು ಮೃದುವಾಗಿ ನೇವರಿಸಿದೆ. ಹೂವಿನ ಪರಾಗ ನನ್ನ ಕೈಗೆ ಅಂಟಿತು. ಕೈಗಳು ಪರಾಗದ ಬಣ್ಣವನ್ನೇ ಹೊಂದಿದವು. ನನ್ನ ಕೈಗಳನ್ನು ಹೂವಿನ ಪಕ್ಕ ಇರಿಸಿದೆ. ಅದೂ ಹೂವಾಯಿತು. ಮತ್ತೂ ದಿಟ್ಟಿಸಿದೆ. ಹೂವು ನಕ್ಕಿತು. ಬೀಸಿದ ಗಾಳಿಗೆ ನನ್ನ ಮೈ ತೊನೆದಾಡಿತು. ತೆಳ್ಳನೆಯ ಗಾಳಿ ಮೈ ಸೋಕಿ ಉತ್ಸಾಹ ಉಂಟಾಯಿತು. ಬೆಳಕೊಂದು ನಮ್ಮ ನಡುವೆ ಹಚ್ಚಿಟ್ಟಂತೆ ಆಪ್ಯಾಯವಾದ ಹದವಾದ ಬಿಸುಪು ತಾಕಿತು. ಗಿಡವನ್ನೆ ನೋಡುತ್ತಿದ್ದೆ. ಎಲೆಯೊಂದು ನನ್ನ ಕೆನ್ನೆಯನ್ನು ಸವರಿ ಹಾಯೆನ್ನಿಸಿತು. ನಾನು ಗಿಡವನ್ನು ನೋಡಿ ನಕ್ಕೆ. ಗಿಡ ನನ್ನ ಜೊತೆ ಮಾತಾಡತೊಡಗಿತು! ಖುಷಿಯೊಂದು ಉದಯಿಸಿ ಪರಿಣಾಮಗಳೆ ಇಲ್ಲದ ಬಂಧವೊಂದು ಇಬ್ಬರ ಮಧ್ಯೆ ಹಬ್ಬಿತ್ತು.

ಕಾಲದ ಪರಿವೆ ನನಗೂ ಗಿಡಕ್ಕೂ ರಾಮುಡೂಗೂ ಮುತ್ಯಾಗೂ ಯಾರಿಗೂ ಇರಲಿಲ್ಲ. ಮುತ್ಯಾಗೂ ಖುಷಿಯಾಗಿತ್ತು. `ಗಿಡ ಮಾತನಾಡಿತೇ ಹುಡುಗಿ? ನೀನು ನನ್ನ ಜಗತ್ತಿನ ಒಳಗೆ ಬಂದುಬಿಟ್ಟೆಯಾ? ಪ್ರಸನ್ನವಾದ ಪ್ರೀತಿಗೆ ನಿನ್ನ ಮನಸ್ಸು ತೆರೆಯಿತೇ?’ ಎಂದೆಲ್ಲಾ ನನ್ನ ಕೆನ್ನೆ ಸವರಿ ಮುತ್ತಿಕ್ಕಿದಳು. ಅವಳು ಯಾವತ್ತೂ ಹಾಗೆ ನನ್ನ ಮುದ್ದಾಡಿರಲಿಲ್ಲ. ಅತ್ಯಂತ ಆನಂದಿತವಾದ ಕ್ಷಣಗಳನ್ನು ನಾನು ಕಳೆದಿದ್ದೆ. ಈಗಲೂ ಜಗತ್ತು ಮಾತನಾಡಲಾಗದು ಎಂದು ಭಾವಿಸಿದ ಯಾವುದರ ಜೊತೆಗೂ ಮಾತಾಡುವುದು ನನಗೆ ಸಾಧ್ಯವಿದೆ. ಅದು ಶಕ್ತಿಯಲ್ಲ ಅದರೊಂದಿಗೆ ನಾನು ಸಾಧಿಸಬಹುದಾದ ಪ್ರೀತಿ. ಪರಿಣಾಮ ಅಂದು ಅಪ್ಪ ಗಾಬರಿಯಾಗಿದ್ದ ಅಮ್ಮ ಅತ್ತಿದ್ದಳು, `ನಿನ್ನ ಮುತ್ಯಾನ ಜೊತೆ ಕಳಿಸಿ ತಪ್ಪು ಮಾಡಿದೆವು’ ಎಂದು. ಮುಂದೊಂದು ದಿನ ನನ್ನ ಈ ಮನಃಸ್ಥಿತಿಗೆ ಸ್ಕಿಜೋಫ್ರೇನಿಯ ಎನ್ನುವ ಹೆಸರನ್ನಿಟ್ಟರು. ಮುತ್ಯಾ ಆಗಲೂ ಅಂದಿದ್ದು ಒಂದೆ ಮಾತು, `ಹೊರಜಗತ್ತು ಕಾಣಲಾಗದ ಸತ್ಯವನ್ನು ನೀನು ಕಂಡರೆ ಅದನ್ನು ಖಾಯಿಲೆ ಎಂತಲೆ ಕರೆಯುತ್ತಾರೆ ಮಗೂ. ಹಾಗೆಂದು ನಾವು ಅವರು ಹೇಳಿದ ಹಾಗೆ ಕೇಳಬೇಕಿಲ್ಲ. ನಮ್ಮ ಜಗತ್ತನ್ನು ನಾವೇ ಕಟ್ಟಿಕೊಳ್ಳಬೇಕು. ಕಟ್ಟಿಕೊಳ್ಳುವುದು ಎಂದರೆ ಅದು ಒಳಗೊಳ್ಳುವುದು. ಆದರೆ ಬಿಟ್ಟುಕೊಡುವುದೆಂದರೂ ಕಟ್ಟಿಕೊಳ್ಳುವುದೇ. ಗರಿಗಳನ್ನು ಕಳಚಿಕೊಳ್ಳುವ ತೆಂಗಿನಮರ ಫಲವನ್ನು ಕೊಡುತ್ತಲ್ಲ ಹಾಗೆ. ಇದನ್ನು ಯಾರಿಗೆ ಅರ್ಥ ಮಾಡಿಸಲಿ ಹೇಗೆ ಅರ್ಥ ಮಾಡಿಸಲಿ. ಈಗ ನಿನ್ನ ಸ್ಥಿತಿಯೂ ಇದೇ’ ಎಂದಿದ್ದಳು.

ಈಗಲೂ ಒಂದೇ ಮಳೆಗೆ ಚಿಗರೊಡೆಯುವ ಗಿಡ, ಹುಟ್ಟಿಕೊಳ್ಳುವ ಕ್ರಿಮಿಕೀಟಗಳು, ಧ್ಯಾನಸ್ಥವಾಗುವ ಜಗತ್ತು ಯಾವುದಕ್ಕೋ ಕಾಯುತ್ತಿತ್ತು ಎನ್ನುವ ಹಾಗೆ ಮಣ್ಣಿನಿಂದ ಎದ್ದು ಬರುವ ಸಂಭ್ರಮ ಪ್ರತಿಕ್ಷಣವೂ ನನ್ನ ಆವರಿಸಿಕೊಳ್ಳುತ್ತದೆ. ಮನುಷ್ಯನಿಗೆ ಮಾತ್ರವೇ ಬುದ್ಧಿ ಇರುವುದು? ಎಲ್ಲಿಂದಲೋ ಬಂದು ಇಲ್ಲಿ ಮರಿ ಮಾಡಿ ಮತ್ತೆ ಸಮುದ್ರಗಳನ್ನು ದಾಟಿ ಹೋಗುವ ಪಕ್ಷಿಗಳೂ, ಮೊಟ್ಟೆಯಿಟ್ಟು ವಾಪಾಸು ಸಾವಿರಾರು ಮೈಲುಗಳನ್ನು ಕ್ರಮಿಸಿ ತಮ್ಮ ಜಾಗಕ್ಕೆ ಹೋಗುವ ಮೀನುಗಳು, ಆ ಮೊಟ್ಟೆಯೊಡೆದು ಮತ್ತೆ ತಮ್ಮ ನೆಲೆಗಳಿಗೆ ವಾಪಾಸಾಗುವ ಮರಿಗಳೂ, ಸಿಕ್ಕ ಕಡೆಗೆ ಬಟ್ಟೆಗೆ ಹತ್ತಿಕೊಳ್ಳುವ ಊಬಿನ ಗಿಡಗಳು ಇನ್ನೊಂದು ಗಿಡದ ಕನಸನ್ನು ಕಾಣುತ್ತವೆ ಎಂದರೆ ಯಾರು ನಂಬುತ್ತಾರೆ. ಪ್ರಕೃತಿಯಲ್ಲಿರುವ ಎಲ್ಲಕ್ಕೂ ಬುದ್ಧಿ ಇದೆ. ಬದುಕುವ ಪ್ರೀತಿಯಿದೆ, ಕನಸಿದೆ. ನಾನತ್ವವನ್ನು ಬಿಟ್ಟು ನೋಡುವ ಕಣ್ಣುಗಳನ್ನು ತೆರೆದುಬಿಟ್ಟರೆ ಅದ್ಭುತಗಳನ್ನೆ ಎದುರು ಮಾಡಿಕೊಳ್ಳಬಹುದು.

ಕಡೆಗೂ ನಮ್ಮ ಜಗತ್ತು ಎಲ್ಲಿದೆ ಎನ್ನುವುದನ್ನು ನಾವೇ ಕಂಡುಕೊಳ್ಳಬೇಕಲ್ಲವೇ? ಪಯಣದ ಅನುಭವ ಜೀವವನ್ನೇ ಒತ್ತೆಯಿಟ್ಟ ಮುತ್ಯಾ ಕಂಡ ಜಗತ್ತು ನನಗೆ ಕಂಡಿತಾ ಇಲ್ಲವಾ ಗೊತ್ತಿಲ್ಲ. ಹೇಳಲಿಕ್ಕೆ ಪದಗಳೂ ಇಲ್ಲ. ಆದ ಅನುಭವಕ್ಕೆ ಸಾಕ್ಷಿಗಳು ಇಲ್ಲ. ಹಂಚಿಕೊಳ್ಳುವುದೆಂದರೆ ಅದು ಅಮೂರ್ತ. ಮಳೆಗರೆದ ಮೇಲೆ ಉಳಿವ ನೀಲಿ ಆಕಾಶ ಮಳೆಯ ಅನುಭವವನ್ನು ಹೇಗೆ ಬಿಚ್ಚಿಡಬಲ್ಲದು?! ಅಂಥಾ ಅದ್ಭುತವನ್ನೇ ನನಗೆ ರಾಮುಡೂ ತೋರಿಸಿದ್ದು!

ಈ ಅಂಕಣದ ಹಿಂದಿನ ಬರೆಹಗಳು:
ಗಾಳದ ದಾರ ದೂರಕ್ಕೆ ಬಿಡುವುದು ಮೀನಿನ ಆಸೆಗೆ
ಕಳಚಿಕೊಳ್ಳುವುದೂ ಆಟದ ಭಾಗವೇ.
ಸರಿದ ಸೆರಗಿನಲ್ಲಿ ಅಡಗಿದ್ದು ಸೂರ್ಯ ಚಂದ್ರ
ಪ್ರಾರ್ಥನೆ; ಪದಾರ್ಥವಲ್ಲ, ಪರಾರ್ಥ
ಜಗತ್ತಿನ ಮೇರು ತಾಯಿ
ನಿಧಿಯ ಕನವರಿಕೆ
ಅವಳ ಧ್ಯಾನಕ್ಕೆ ಒಳಿತೇ ಗುರಿ
ಅನುಬಂಧಗಳ ಲೀಲೆ
ಕನಸಿನೊಳಗಿನ ನನಸು
ನೀಲಿ ಕಣ್ಣುಗಳ ಮುತ್ತಜ್ಜಿ ಮತ್ತು ನಾನು

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...