ಮಳೆಗಾಲದಲ್ಲಿ ಹಾಲ್ನೊರೆಯಾಗಿ ಧುಮ್ಮಿಕ್ಕುವ ಮಾಗೋಡು ಜಲಪಾತ

Date: 23-11-2022

Location: ಬೆಂಗಳೂರು


''ಮಾಗೋಡು ಜಲಪಾತದ ಅಡಿಗಿಳಿಯುವ ಕಡಿದಾದ ಸುಮಾರು 200-250 ಮೀಟರ್ ಎತ್ತರದಿಂದಾದ ಈ ಪ್ರಪಾತವನ್ನು ಕೇವಲ ನದಿ ಪಾತ್ರದಿಂದ ಇಳಿಯಬಹುದು ಇಲ್ಲವೆಂದರೆ ಕೆಳಗಿನಿಂದ ಮೇಲೆ ಹತ್ತುತ್ತಾ ನದಿ ಜಲಪಾತವಾಗಿ ಧುಮ್ಮಿಕ್ಕಿ, ಕಡಿದಾದ ಕಣಿವೆಯಲ್ಲಿ ಬಸವಳಿದು ಹೋಗುವ ಪಾತ್ರದಿಂದ ತಲುಪಬಹುದು'' ಎನ್ನುತ್ತಾರೆ ಲೇಖಕ ಮೌನೇಶ ಕನಸುಗಾರ. ಅವರು ತಮ್ಮ ಅಲೆಮಾರಿಯ ಅನುಭವಗಳು ಅಂಕಣದಲ್ಲಿ `ಮಾಗೋಡು ಜಲಪಾತ' ಚಿತ್ರಣವನ್ನೂ ಕಟ್ಟಿಕೊಟ್ಟಿದ್ದಾರೆ.

ಬದುಕಿನಲ್ಲಿ ಒಂದೊಂದು ದಾರಿಯೂ ಒಂದೊಂದು ಅನುಭವವನ್ನು ಎದೆಗಿಳಿಸುತ್ತವೆ.! ದಟ್ಟ ಕಾಡು - ಸ್ವಚ್ಛ ಹಸಿರು - ಹಾರುವ ಹದ್ದು - ಕೂಗುವ ಕೋಗಿಲೆ - ಮಳೆ ನಿಂತ ಮಧ್ಯಾಹ್ನ - ಆಗೊಮ್ಮೆ ಈಗೊಮ್ಮೆ ಇಣುಕುವ ನೇಸರ - ಒಣಗಿದೆಲೆಗಳುದುರಿ ಬಿದ್ದ ತಿರುವುಗಳೇ ತುಂಬಿದ ರಸ್ತೆ - ಎಲೆಯ ತುದಿಗೆ ತೊಟ್ಟಿಕ್ಕುವ ಹನಿ - ಮಳೆಗಾಲದಲ್ಲಿ ಹಾಲ್ನೊರೆಯಾಗಿ ಧುಮ್ಮಿಕ್ಕುವ ಜಲಪಾತಗಳನ್ನು ನೋಡುತ್ತ ನಿಂತರೆ ಮೈಮರೆತುಬಿಡುತ್ತೇವೆ. ಅಂತಹ ಸುಂದರ ಜಲಪಾತಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸಮೀಪವಿರುವ ಮಾಗೋಡು ಜಲಪಾತವೂ ಒಂದು.

ಹಸಿರು ವನಸಿರಿಯ ಮಧ್ಯೆ ಹರಿದು ಬರುವ ಬೇಡ್ತಿ ನದಿಯ ಒಟ್ಟು ನೀರಿನ ಸಂಕಲನ ಮೈಮುರಿದುಕೊಂಡು ಬಿದ್ದು ಮತ್ತೆ ಸಂಗ್ರಹಗೊಳ್ಳುತ್ತಲೆ ಅಲ್ಲೊಂದಿಷ್ಟು ಮಂಜಿನ ಮುಸುಕನ್ನು ಶರವೇಗದಲ್ಲಿ ಸೃಷ್ಟಿಸಿ ತನ್ನ ಇಡೀ ಮೈ ತೆವಳಿಕೊಂಡು ಮತ್ತೊಂದು ಪ್ರಪಾತಕ್ಕೆ ದೂಡಿಕೊಂಡು ರಪರಪನೆ ಬೀಳುವಾಗ ಕಾಣುವ ದೃಶ್ಯವಿದೆಯಲ್ಲ ನೋಡಲೆರಡು ಕಣ್ಣು ಸಾಲದು! ಪೂರಾ ಸಮುದ್ರ ಮಟ್ಟದ ನೆಲಮುಟ್ಟಿದಾಗ ಬೇಡ್ತಿ ನದಿಯು ಕಲ್ಲು ಇಕ್ಕೆಲಗಳನ್ನೆಲ್ಲಾ ಎಡವಿಕೊಂಡು ಸಾಗುತ್ತದೆ. ಇದು ಹುಬ್ಬಳ್ಳಿಯ ಉಣಕಲ್‌ನಿಂದ ಜನ್ಮಪಡೆದು ಕಲಘಟಗಿ, ಮುಂಡಗೋಡ, ಯಲ್ಲಾಪುರ ತಾಲೂಕಿನಲ್ಲಿ ಹರಿದು ಬಂದು ಮುಂದೆ ಮಾಗೋಡು ಜಲಪಾತವಾಗಿ ಭೋರ್ಗರೆಯುತ್ತದೆ. ಎರಡು ಹಸಿರು ವನಸಿರಿಯ ಮಧ್ಯೆ ರಭಸದಿಂದ ನುಗ್ಗುವ ಜಲಧಾರೆ ಮೂರು ಸ್ಥರಗಳಲ್ಲಿ ಎತ್ತರದಿಂದ ಕಣಿವೆ ಸೇರುತ್ತವೆ. ಸೌಮ್ಯ, ರಮ್ಯ ಮತ್ತು ಭವ್ಯ ಎಂಬ ಹೆಸರಿನಿಂದ ಕರೆಯುವ ಧಾರೆಗಳು ತಮ್ಮ ಸೊಬಗಿನಿಂದ ನಿಜಕ್ಕೂ ಹೆಸರಿಗೆ ಅನ್ವರ್ಥಕವೆನಿಸುತ್ತವೆ. ಹಚ್ಚ ಹಸಿರು ವನಸಿರಿಯ ಹೊದಿಕೆ ಹೊದ್ದುಕೊಂಡಿರುವ ಬೆಟ್ಟಗಳ ಸಂದಿನಲ್ಲಿ ಶಾಂತವಾಗಿ ಹರಿಯುವ ಮೊದಲ ಹಂತವನ್ನು ‘ಸೌಮ್ಯ’ವೆಂದು ನಂತರ ಬಂಡೆಗಳ ನಡುವೆ ಬೆಳ್ನೊರೆಯಾಗಿ ಧುಮ್ಮಿಕ್ಕುವ ರಮಣೀಯ ದೃಶ್ಯವನ್ನು ‘ರಮ್ಯ’ವೆಂದು ಬಳಿಕ ಭೋರ್ಗರೆಯುತ್ತ ಸಾಗುವುದನ್ನು ‘ಭವ್ಯ’ವೆಂದೂ ವರ್ಣಿಸಲಾಗಿದೆ.

ಎತ್ತರದಿಂದ ಧುಮ್ಮಿಕ್ಕುವ ಜಲಪಾತದ ಸೌಂದರ್ಯವನ್ನು ಎದುರಿನ ಬೆಟ್ಟದ ಮೇಲೆ ನಿಂತು ನೋಡುವುದೇ ಸೊಬಗು. ಸೂರ್ಯನ ಕಿರಣಗಳು ಜಲಧಾರೆಯ ಮೇಲೆ ಬಿದ್ದಾಗ ಉಂಟಾಗುವ ಸೃಷ್ಟಿಯ ಅದ್ಬುತ ಲೀಲೆಯನ್ನು ಕಣ್ಣಾರೆ ನೋಡಿಯೇ ಸಂಭ್ರಮಿಸಬೇಕು. ಶುಭ್ರವಾಗಿ ಕಂಗೊಳಿಸುತ್ತಾ ನೀರಿನ ಹನಿಗಳಿಂದ ಕೂಡಿ ಹೊಗೆಯಂತೆ ಮೇಲೇಳುವ ನೋಟ ನಯನ ಮನೋಹರ. ಜಲಪಾತವನ್ನು ವೀಕ್ಷಿಸಲು ಅನುಕೂಲಕ್ಕೆಂದು ನಾನಾ ದಿಕ್ಕುಗಳಲ್ಲಿ ವೀಕ್ಷಣಾ ಗೋಪುರಗಳನ್ನು ನಿರ್ಮಿಸಲಾಗಿದೆ. ಹತ್ತಿ ಇಳಿಯಲು ವ್ಯವಸ್ಥಿತವಾದ ಮೆಟ್ಟಿಲುಗಳಿವೆ. ಪ್ರವಾಸಿ ತಾಣವನ್ನು ಅರಣ್ಯ ಇಲಾಖೆ ಅಚ್ಚುಕಟ್ಟಾಗಿ ನಿರ್ವಹಿಸಿದ್ದು, ಸುಂದರ ತೋಟ ಹಾಗೂ ನೀರಿನ ವ್ಯವಸ್ಥೆ ಇದೆ. ವಿರಮಿಸಲು ಅಲ್ಲಲ್ಲಿ ನಿಲುವು ತಾಣಗಳನ್ನು ನಿರ್ಮಿಸಲಾಗಿದೆ. ಮಳೆಗಾಲದುದ್ದಕ್ಕೂ ಹಸಿರು ಕಾವ್ಯ ಮೈದಳೆಯುತ್ತದೆ.

ಇದೆ ಬೆಟ್ಟದ ಮೇಲೆ ನಿಂತು ಬೆನ್ನ ದಿಕ್ಕಿಗೆ ಕತ್ತು ತಿರುಗಿಸಿದರೆ ಗಣಪತಿ ಜಲಪಾತ. ಸಹಸ್ರ ಲಿಂಗಗಳ ಮೈ ತೊಳೆದು ಮುಟ್ಟಿದ ಹನಿ ಹನಿಯೂ ಸಹಸ್ರ ವನ್ಯ ರಾಶಿಯ ಬೇರುಗಳ ತುದಿ ಮುಟ್ಟಿ ಸೃಷ್ಟಿಯಾದ ನಯನಮನೋಹರ ಜಲಧಾರೆ!

ಮಾಗೋಡು ಜಲಪಾತದ ಅಡಿಗಿಳಿಯುವ ಕಡಿದಾದ ಸುಮಾರು 200-250 ಮೀಟರ್ ಎತ್ತರದಿಂದಾದ ಈ ಪ್ರಪಾತವನ್ನು ಕೇವಲ ನದಿ ಪಾತ್ರದಿಂದ ಇಳಿಯಬಹುದು ಇಲ್ಲವೆಂದರೆ ಕೆಳಗಿನಿಂದ ಮೇಲೆ ಹತ್ತುತ್ತಾ ನದಿ ಜಲಪಾತವಾಗಿ ಧುಮ್ಮಿಕ್ಕಿ, ಕಡಿದಾದ ಕಣಿವೆಯಲ್ಲಿ ಬಸವಳಿದು ಹೋಗುವ ಪಾತ್ರದಿಂದ ತಲುಪಬಹುದು. ದೂರದಲ್ಲಿ ನಿಂತು ನೋಡಿದರೆ ಸಾಕೆನ್ನುವವರು ನಾನು ಮೇಲೆ ಹೇಳಿದ ಹಾದಿಯಲ್ಲಿ ಹೋದರೆ ಅರಣ್ಯ ಇಲಾಖೆ ಮಾಡಿರುವ ಎದುರು ಗುಡ್ಡದ ಪ್ರವಾಸಿ ತಾಣದಿಂದ ನೋಡಬಹುದು. ಆದರೆ ಈ ಭಾಗದಿಂದ ಪ್ರಪಾತಕ್ಕೆ ಇಳಿಯಲು ಅಸಾಧ್ಯ. ಆದರೆ ರಮಣೀಯ ನಯನ ಮನೋಹರ ಜಲಪಾತವನ್ನು ವೀಕ್ಷಿಸಬಹುದು. ನಿರ್ಜನ ಕಾಡಲ್ಲಿ ಭಯ ಹುಟ್ಟುತ್ತೆ. ಆದರೆ ಜಲಪಾತ ತಲುಪಿದಾಗ ಭಯ ಮರೆಯಾಗಿ ಪ್ರಕೃತಿಯ ಮೇಲೆ ಪ್ರೀತಿ ಮೆರೆಯುತ್ತೆ.

ಹುಬ್ಬಳ್ಳಿಯಿಂದ ಯಲ್ಲಾಪುರ ಕೇವಲ 70ಕಿ.ಮಿ. ಅಲ್ಲಿಂದ ಜಲಪಾತ 18 ಕಿ.ಮಿ. ದೂರದಲ್ಲಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿಂದ ಅಂಕೋಲಾಕ್ಕೆ ರಾಷ್ಟ್ರೀಯ ಹೆದ್ದಾರಿ-63 ರಲ್ಲಿ ಹೋಗುವಾಗ, ಯಲ್ಲಾಪುರ ಬಿಟ್ಟು 3 ಕಿ.ಮೀ. ಕ್ರಮಿಸಿದ ನಂತರ ಎಡಬದಿಗೊಂದು ಮಾಗೋಡಿಗೆ ಹೊರಳುವ ರಸ್ತೆ ಬರುತ್ತದೆ. ಅಲ್ಲಿ ಮಾಗೋಡು ಜಲಪಾತದ ದಾರಿ ಎಂಬ ಫಲಕವು ಕಾಣುತ್ತೆ. ಸಣ್ಣ ಕಿರಿದಾದ ಟಾರ್ ಮಾಡಿದ ಒಳ್ಳೆಯದೆನ್ನಲಾಗದ ರಸ್ತೆ. ದಾರಿಯುದ್ದಕ್ಕೂ ಹಸಿರಿನ ಬೆಡಗು. ೧೫ ಕಿ.ಮೀ. ಸಾಗಿದ ನಂತರ ಆ ಹಸಿರಿನ ಮಡಿಲೊಳು ಸುತ್ತ ಬೆಟ್ಟದ ನಡುವೆ ಒಂದು ಪ್ರಪಾತ ಹಾಗೂ ಒಂದು ಮೂಲೆಯಲ್ಲಿ ಕಡಿದಾದ ಕಣಿವೆ. ಈ ಪ್ರಪಾತದಲ್ಲಿ ಎರಡು ಭಾಗಗಳಲ್ಲಿ ಬೇಡ್ತಿ ನದಿ ಧುಮ್ಮಿಕ್ಕುವ ನೈಸರ್ಗಿಕ ಸೋಜಿಗವೆ ಮಾಗೋಡು ಜಲಪಾತ.! ಸುಮಾರು 650 ಅಡಿ ಎತ್ತರದಿಂದ ಹಚ್ಚಹಸುರಿನ ದಟ್ಟ ಬೆಟ್ಟಗಳೆರಡರ ಮಧ್ಯದಿಂದ ಧುಮ್ಮಿಕ್ಕುವ ದೃಶ್ಯವೈಭವ ವರ್ಣನಾತೀತ. ಇದು ಮುಂದೆ ಗಂಗಾವಳಿ ನದಿಯಾಗಿ ಕಾಡಿನ ಮಧ್ಯೆ ಹರಿದು ಅಂಕೋಲ ಮಾರ್ಗವಾಗಿ ಅರಬ್ಬಿ ಸಮುದ್ರ ಸೇರುತ್ತದೆ.

ಮೌನೇಶ ಕನಸುಗಾರ
mouneshkanasugara01@gmail.com

ಈ ಅಂಕಣದ ಹಿಂದಿನ ಬರೆಹಗಳು:
ಸ್ಕಂದಗಿರಿಯ ಚಾರಣದ ಸುತ್ತ
ರಾಷ್ಟ್ರಕೂಟರ ರಾಜಧಾನಿಯಲ್ಲಿ ಇತಿಹಾಸವನ್ನು ನೆನೆಯುತ್ತ…
ಜಟಿಲ ಕಾನನದ ಕುಟಿಲ ಪಥಗಳಲಿ…
ಕಡಲ ಕಿನಾರೆಯ ಸಡಗರದ ಚಿತ್ರಗಳು
ಮೌನಕಣಿವೆಯ ದಟ್ಟ ಕಾನನದೊಳಗೆ...
ಸಾವನದುರ್ಗದ ನೆತ್ತಿಯ ಮೇಲೆ…
ಕುಮಾರಪರ್ವತದ ಚಾರಣ
ವಿಭೂತಿ ಜಲಪಾತದ ವೈಭವ
ಸಿರಿಮನೆ ಜಲಪಾತದ ಸಿರಿಯಲ್ಲಿ ನೆನೆದು…
ಪಶ್ಚಿಮಘಟ್ಟದ ನಿಗೂಢಗಳೊಳಗೆ ಬೆರಗುಗೊಳ್ಳುತ್ತಾ…
ಕೊಡಚಾದ್ರಿಯ ಕುತೂಹಲಗಳ ಕೆದಕುತ್ತಾ…
ಗ್ರೀನ್ ವ್ಯಾಲಿ ಮತ್ತು ಜಲಪಾತಗಳು
ಕವಲೇದುರ್ಗದ ಕೌತುಕಗಳು
ಕಾನನದ ಒಳಹೊಕ್ಕಷ್ಟು ಮೈ ಪುಳಕಿತಗೊಳ್ಳುತ್ತದೆ
ನಿತ್ಯ ವಿನೂತನ ಅಚ್ಚರಿಗಳ ಮಡಿಲಿನಲ್ಲಿ
ಹಸಿ ಕಾಡುಗಳ ಹಾದಿಯಲ್ಲಿ ಅನಂತ ಸುಖವನ್ನರಸಿ…
ಅಲೆಮಾರಿಯ ಅನುಭವಗಳು

MORE NEWS

ಆಧುನಿಕತೆ ಸೃಷ್ಟಿಸುವ ಸಾಮಾಜಿಕ ವಿಪ...

06-12-2022 ಬೆಂಗಳೂರು

“ಜಾಗತಿಕ ನೆಲೆಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿಯ ಯುವ ಪೀಳಿಗೆ ಎತ್ತ ಸಾಗುತ್ತಿದೆ. ಅದಕ್ಕೆ ಕಾರಣವಾಗ...

ರುದ್ರಾಕ್ಷಿ ಮಹತ್ವ...

05-12-2022 ಬೆಂಗಳೂರು

“ರುದ್ರಾಕ್ಷಿ ಧಾರಣೆಯಿಂದ ಹುಟ್ಟು-ಸಾವುಗಳನ್ನು ಗೆಲ್ಲಬಹುದೆಂದು ಕೆಲವು ವಚನಕಾರರು ಹೇಳಿದ್ದಾರೆ. ರುದ್ರಾಕ್ಷಿ ಧಾ...

ಶಶಿರೇಖಾ ಅವರ ಬದುಕಿನ ಯಾನ...

04-12-2022 ಬೆಂಗಳೂರು

“'ನನಗೆ ನನ್ನ ಮನೆಯಲ್ಲಿ ಚಿಕ್ಕ ಲೈಬ್ರರಿ ಮಾಡಬೇಕು ಎನ್ನುವ ಪುಟ್ಟ ಕನಸಿದೆ. ನಾನು ಕಲಿತಿರುವ ಎಲ್ಲ ಕೆಲಸಗಳನ...