ನಿಗಿ ನಿಗಿ ಕೆಂಡದ ಬಿಸಿಲು ಮತ್ತು ಒಣಗಿದ ಗಂಟಲಲಿ ಕರಿಮಣಿ ಮಾಲೀಕ ನೀನಲ್ಲ

Date: 18-03-2024

Location: ಬೆಂಗಳೂರು


""ಅನ್ವೇಷಣೆ" ಯಂತಹ ಸಾಹಿತ್ಯಕ್ಕೆ ಮೀಸಲಾದ ನಿಯತ ಕಾಲಿಕೆಯಲ್ಲಿ ಕವಿತೆಗಳನ್ನು ಪ್ರಕಟಿಸಿರುವ ಭಾಗ್ಯ ಭರವಸೆಯ ಕವಯತ್ರಿ. ಅಂದಹಾಗೆ ಕಾರ್ಯಕ್ರಮ ಮುಗಿದ ಮೇಲೆ ನಾನು ಅವರ ಕಾರಿನಲ್ಲೇ ಜೇವರ್ಗಿವರೆಗೂ ಪ್ರಯಾಣ ಬೆಳೆಸಿದೆ. ಕಲಬುರಗಿ ಕಡೆಗೆ ಹೋದಾಗೆಲ್ಲ ಹುಟ್ಟೂರಿಗೆ ಹೋಗಿ ಬರುವ ವಾಡಿಕೆ ನನ್ನದು," ಎನ್ನುತ್ತಾರೆ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ‘ರೊಟ್ಟಿ ಬುತ್ತಿ’ ಅಂಕಣಕ್ಕೆ ಬರೆದ ಲೇಖನವಿದು.

ಅವತ್ತು ಮುಂಜಾವಿನ ವೇಳೆ ಕಲಬುರಗಿ ರೈಲು ನಿಲ್ದಾಣದಲ್ಲಿ ಇಳಿದಾಗ ನಸುಕಿನ ನಾಲ್ಕೂವರೆ ಗಂಟೆ. ಬಸವ ಎಕ್ಸ್‌ಪ್ರೆಸ್‌ ಏಸಿ ವಾತಾನುಕೂಲಿಯ ಕುಳಿರು ಚಳಿಯಿಂದ ಕೆಳಗೆ ಇಳಿದೊಡನೆ ಕಲಬುರಗಿ ನೆಲದ ಬಿಸಿಗಾಳಿಯ ಸುಳಿಸೋಂಕು ಸೂಸಿ ಬಂದಂಗಿತ್ತು. ನೀಗಿಕೊಳ್ಳುವಂತೆ ಅಲ್ಲೇ ಸನಿಹದ ಡೈಮಂಡ್ ಹೊಟೆಲಿನ ಇರಾನಿ ಶೈಲಿಯ ಕೇಟಿ ಕುಡಿಯುವುದೇ ಖುಷಿ. ಇತರೆ ಹೊಟೆಲುಗಳಂತೆ ಗಲೀಜು ಗಿಲೀಜು ಅಲ್ಲಿಲ್ಲ. ಚಿಕ್ಕದಾದರೂ ಚೊಕ್ಕದಾದ ಚಹದ ದುಕಾನ್ ಅದು. ಅದಕ್ಕಂತಲೇ ಬೆಳಗಿನ ಜಾವದ ಅರ್ಧ ತಾಸು ಅಲ್ಲೇ ಕುಂತೆ. ಅಷ್ಟರಲ್ಲಿ ಎರಡು ಕಪ್ ಚಹ ಕುಡಿದೆನೆಂದರೆ ಚಹ ಅದೆಷ್ಟು ರುಚಿಕಟ್ಟಾಗಿತ್ತೆಂದು ಬಿಡಿಸಿ ಹೇಳಬೇಕಿಲ್ಲ.

ಅಂದಹಾಗೆ ಅಲ್ಲಿ ತರಹೇವಾರಿ ಚಹ ತಯಾರಿಸುತ್ತಾರೆ. ಇತ್ತೀಚಿಗೆ ಅಂತಹದೇ ರುಚಿ ಹೋಲುವ "ಬೆಲ್ಲದ ಚಹ" ಬಹುತೇಕ ಕಡೆಗೂ ದೊರಕುತ್ತಲಿದೆ. ಆದರೆ ಅವುಗಳಿಗೆ ಇರಾನಿ ಶೈಲಿಯ ಇಂತಹ ಕಮ್ಮನೆಯ ಸ್ವಾದ ಇರುವುದಿಲ್ಲ. ಡೈಮಂಡ್ ಹೊಟೆಲಿನ ಮೇಜುಗಳ ಮೇಲೆ ತಿಳಿನೀರು ತುಂಬಿದ ಪಾರದರ್ಶಕ ಗಾಜಿನ ಗಿಲಾಸುಗಳನ್ನು ಕಬ್ಬಿಣದ ಸ್ಟ್ಯಾಂಡುಗಳ ಮೇಲೆ ತುರುಕಿಡುವ ಪದ್ಧತಿ ಕಲಬುರಗಿ ಬಿಟ್ಟು ಬೇರೆ ಕಡೆಗೆ ನಾನಂತೂ ಕಂಡಿಲ್ಲ. ನೀರುತುಂಬಿದ ದುಂಡಗಿನ ಮತ್ತು ದಪ್ಪನೆಯ ಗಿಲಾಸುಗಳನ್ನು ನೋಡುತ್ತಿದ್ದರೆ ನೀರಡಿಕೆ ಹಿಂಗಿಸಿಕೊಳ್ಳುವ ಮುದ್ದಾದ ಹಂಬಲ. ಒಂದೊಂದು ಕಪ್ ಕೇಟಿ ಚಹಕ್ಕೆ ಮೊದಲು ತಲಾ ಒಂದೊಂದು ಗಿಲಾಸು ಅನೀರು ಕುಡಿದು ತೃಪ್ತಿ ಪಟ್ಟೆ.
* * * ‌‌‌
"ಮುಟ್ಟು" ಕಲಬುರಗಿಯ ಸಿದ್ಧಲಿಂಗೇಶ್ವರ ಪ್ರಕಾಶನ ಪ್ರಕಟಗೊಳಿಸಿದ ನನ್ನ ಮೊದಲ ಕಥಾಸಂಕಲನ. ಬೆಂಗಳೂರಲ್ಲಿ ಸಪ್ನಾ ಬುಕ್ ಹೌಸ್ ಇರುವಂತೆ ನಮ್ಮ ಕಲಬುರಗಿಯಲ್ಲಿ 'ಅಪ್ನಾ ಬುಕ್ ಹೌಸ್' ಇದೆ. ಅದುವೇ ಸಿದ್ಧಲಿಂಗೇಶ್ವರ ಪ್ರಕಾಶನದ ಪುಸ್ತಕಗಳ ಮಳಿಗೆ. ಈ ಮಾತನ್ನು ಕಲಬುರಗಿಯ ಕಾರ್ಯಕ್ರಮವೊಂದರಲ್ಲಿ ಹೇಳಿದ್ದು ಬಂಡಾಯ ಸಾಹಿತ್ಯದ ಜಗದ್ಗುರು ಚಂಪಾ. "ಮುಟ್ಟು" ಅತ್ಯುತ್ತಮ ಕಥಾಗ್ರಂಥ ಎಂದು ಅದಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ. ಅದು ಈಗಾಗಲೇ ಅವ್ವ‌ ಮತ್ತು ‌ಕನ್ನಡನಾಡು ಲೇಖಕರ ಬಳಗದ ಪ್ರಶಸ್ತಿಗೆ ಭಾಜನಗೊಂಡಿದೆ. ಇದೀಗ ಅದಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯದ ಅತ್ಯುತ್ತಮ ಕಥಾ ಪುಸ್ತಕ ಪ್ರಶಸ್ತಿ ಪ್ರಾಪ್ತಿ. ಈ ಹಿಂದೆ ನನ್ನ "ಯಡ್ರಾಮಿ ಸೀಮೆ ಕಥನಗಳು" ಕೃತಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಶಸ್ತಿ ದೊರಕಿದ ಪ್ರೀತಿ, ವಾತ್ಸಲ್ಯದ ನೆನಪಿನೊಂದಿಗೆ ಈಗ ಎರಡನೇ ಗೌರವ "ಮುಟ್ಟು" ಕತೆಗಳ ಮುಡಿಗೆ.

ಸಹಜವಾಗಿ ಸಂತಸ ಮತ್ತು ಸಂಭ್ರಮ. ಅವತ್ತಿನ ಸಮಾರಂಭದಲ್ಲಿ ಸೋದರಿ ಡಾ. ಮೀನಾಕ್ಷಿ ಬಾಳಿ ಮುಖ್ಯಅತಿಥಿ. ಮುಟ್ಟು ಕಥಾ ಸಂಕಲನಕ್ಕೆ ಅರ್ಥಪೂರ್ಣ ಬೆನ್ನುಡಿ ಬರೆದವರು ಬಾಳಿ ಮೀನಾಕ್ಷಿ. ಸಹಜವಾಗಿ ಅವರಿಗೆ 'ಮುಟ್ಟು' ಸಂಕಲನದ ಕತೆಗಳ ಕುರಿತು ಅಪರಿಮಿತ ಪ್ರೀತಿ, ಪರಾಮಳಿಕೆ. ಅದನ್ನು ಅವರು ಅಂದು ತಮ್ಮ ಭಾಷಣದಲ್ಲಿ ನಾಕೈದು ಬಾರಿ ಉಲ್ಲೇಖಿಸಿಯೂ ಬಿಟ್ಟರು. ಮತ್ತೊಂದು ಖುಷಿಯ ವಿಷಯವೆಂದರೆ ನಾಡಿನ ಹಿರಿಯ ಕಥೆಗಾರ ಡಾ. ಅಮರೇಶ ನುಗಡೋಣಿ ಅವರ ಪುಸ್ತಕಕ್ಕು ಅದೇ ದಿನ‌ ಪ್ರಶಸ್ತಿ ಪ್ರದಾನ. ಹೀಗೆ ನುಗಡೋಣಿ ಜತೆಯಾಗಿ ಪ್ರಶಸ್ತಿ ಪಡೆದ ಸಡಗರ.

ಶತಮಾನದ ಸ್ನೇಹಿತೆ ಶಿವಕಾಂತಿ ಅವತ್ತು ಪ್ರೇಕ್ಷಕರ ಸಾಲಲ್ಲಿ ಕುಂತದ್ದು ಕಂಡು ಹಾಲು ಹುಗ್ಗಿ ಉಂಡ ಖಂಡುಗ ಖುಷಿ ಉಕ್ಕಿಸಿತ್ತು. ಪಕ್ಕದ ಯಾದಗಿರಿ ಜಿಲ್ಲೆಯ ಸಗರನಾಡಿನಿಂದ ಯುವ ಕವಯತ್ರಿ 'ಭಾಗ್ಯದೊರೆ' ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಆಗಮಿಸಿ ಸಹೃದಯತೆ ತೋರಿದ್ದು ಅಕ್ಷರಶಃ ಸಂತಸ ತರಿಸಿತು. ನಮ್ಮ ಬಹುತೇಕ ಸಾಹಿತಿಗಳಿಗೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರಿದ್ದರೆ ಮಾತ್ರ ಕಾರ್ಯಕ್ರಮಕ್ಕೆ ಹೋಗುವ ಪ್ರತಿಷ್ಠೆಯ ಪರಿಪಾಠ. ಭಾಗ್ಯದೊರೆ ಅದಕ್ಕೆ ವ್ಯತಿರಿಕ್ತ. ಈ ಹಿಂದೆ ರಂಗಂಪೇಟೆಯಲ್ಲಿ ನಾನು ಅತಿಥಿಯಾಗಿ ಭಾಗವಹಿಸಿದ ಸಾಹಿತ್ಯ ಸಮಾರಂಭದಲ್ಲಿ ಭಾಗ್ಯ ಕವಿತೆ ಓದಿದ ನೆನಪು. "ಅನ್ವೇಷಣೆ" ಯಂತಹ ಸಾಹಿತ್ಯಕ್ಕೆ ಮೀಸಲಾದ ನಿಯತ ಕಾಲಿಕೆಯಲ್ಲಿ ಕವಿತೆಗಳನ್ನು ಪ್ರಕಟಿಸಿರುವ ಭಾಗ್ಯ ಭರವಸೆಯ ಕವಯತ್ರಿ. ಅಂದಹಾಗೆ ಕಾರ್ಯಕ್ರಮ ಮುಗಿದ ಮೇಲೆ ನಾನು ಅವರ ಕಾರಿನಲ್ಲೇ ಜೇವರ್ಗಿವರೆಗೂ ಪ್ರಯಾಣ ಬೆಳೆಸಿದೆ. ಕಲಬುರಗಿ ಕಡೆಗೆ ಹೋದಾಗೆಲ್ಲ ಹುಟ್ಟೂರಿಗೆ ಹೋಗಿ ಬರುವ ವಾಡಿಕೆ ನನ್ನದು. ಕಲಬುರಗಿ, ಸಗರನಾಡು, ಕಲ್ಯಾಣ ಕರ್ನಾಟಕದ ಸಾಹಿತ್ಯ, ಸಂಸ್ಕೃತಿ ಇತ್ಯಾದಿ ಚಟುವಟಿಕೆಗಳ ಕುರಿತು ಪ್ರಯಾಣದುದ್ದಕ್ಕೂ ನಮ್ಮ ಸಂವಾದ.
* * ‌‌ *
ಜೇವರ್ಗಿಯಿಂದ ಐವತ್ತು ಕಿ. ಮೀ. ದೂರದಲ್ಲಿ ನನ್ನ ಹುಟ್ಟೂರು ಕಡಕೋಳ. ತುಂಬಾ ವರುಷಗಳ ತರುವಾಯ ಕೆ.ಎಸ್.ಆರ್.ಟಿ.ಸಿ.ಯ ಕೆಂಪು ಬಸ್ಸಿನಲ್ಲಿ ಯಡ್ರಾಮಿಗೆ ಪ್ರಯಾಣಿಸುವ ಯೋಗ. ಅದಕ್ಕೆ ಮೊದಲು ಹೊರಟು ನಿಂತ ತುಂಬಿ ತುಳುಕುವ ಕೆಂಪು ಬಸ್ಸಿನ ಬಾಗಿಲಲ್ಲೇ ಹತ್ತಾರು ಯುವಕರು ಒಂಟಿಗಾಲು, ಒಂಟಿ ಕೈಯಲ್ಲಿ ಜೋತು ಬಿದ್ದಿದ್ದನ್ನು ಕಂಡು ಗಾಬರಿಗೊಂಡು ಮುಂದೆ ಬರುವ ಬಸ್ಸಿಗೆ ಕಾಯತೊಡಗಿದೆ. ಅದರ ಕತೆಯೂ ಹಾಗೇ ಇತ್ತು. ಹ್ಯಂಗ ಹ್ಯಂಗೋ ಹರಸಾಹಸ ಮಾಡಿ ಬಸ್ ಹತ್ತಿದೆ. ಕುಳಿತು ಕೊಳ್ಳುವ ಸೀಟಿರಲಿ, ನಿಂತು ಕೊಳ್ಳಲು ಜಾಗ ಸಿಕ್ಕರೆ ಸಾಕೆಂಬ ಸ್ವಯಂ ಸಮಾಧಾನ‌ ನನ್ನದಾಗಿತ್ತು. ಇಬ್ಬರು ಕೂಡಬೇಕಾದ ಸಾಮರ್ಥ್ಯದ ಸೀಟಲ್ಲಿ ಮೂವರು, ಮತ್ತು ಮೂವರು ಕೂಡಬೇಕಾದ ಸೀಟಲ್ಲಿ ನಾಲ್ವರು ಅಡ್ಜಸ್ಟ್ ಮಾಡಿಕೊಂಡು ಕೂಡುವುದು ಹಕ್ಕು ಎಂಬಂತೆ ಮತ್ತು ಅಘೋಷಿತ ಸಾರಿಗೆ ಕಾನೂನು ಪಾಲನೆಯಂತೆ ಕುಳಿತು ಕೊಂಡಿದ್ದರು.

ಕುಳಿತವರಿಗಿಂತ ಬಸ್ಸಲ್ಲಿ ನಿಂತವರ ಸಂಖ್ಯೆಯೇ ಅತ್ಯಧಿಕವಾಗಿತ್ತು. 'ಗ್ಯಾರಂಟಿ'ಯಾಗಿ ಹೇಳಬೇಕೆಂದರೆ ಎರಡರಲ್ಲೂ ಮಹಿಳೆಯರದೇ ಮೇಲುಗೈ. ಜೇವರ್ಗಿಯಿಂದ ಯಡ್ರಾಮಿಗೆ ಹೋಗುತ್ತಲಿದ್ದ ಆ ಕೆಂಪು ಬಸ್ಸಲ್ಲಿ ಏನಿಲ್ಲವೆಂದರೂ ನೂರು ಮಂದಿ ಪ್ರಯಾಣಿಕರನ್ನು ತುಂಬಲಾಗಿತ್ತು. ಆ ನೂರು ಮಂದಿಯಲ್ಲಿ ನಾನೂ ಒಬ್ಬ. ಸೆಕೆಂಡ್ ಪಿಯುಸಿ ಪರೀಕ್ಷೆ ಬರೆದು ಬಂದ ಹುಡುಗ ಹುಡುಗಿಯರು. ಕಂಡಕ್ಟರ್ ಮಹಾಶಯ ವೀಳ್ಯದ ಎಲೆಗಳನ್ನು ಹೊದಿಸಿದಂತೆ ಜನರನ್ನು ಹೊಂದಿಸಿಕೊಂಡು ಬರುತ್ತಿದ್ದುದು ಮಾತ್ರ ಪವಾಡ ಸದೃಶ ಸಂಗತಿಯೇ ಆಗಿತ್ತು.

ಅಲ್ಲಿ ಉಸಿರಾಡಲೂ ಜಾಗವಿರಲಿಲ್ಲ. ಉರಿಬಿಸಿಲಿನ ಧಗೆಗೆ ಮನುಷ್ಯರ ಥರಾವರಿ ಬೆವರು ವಾಸನೆ. ಊರೂರಿಗೆ ನಿಲ್ಲುವ ಆರ್ಡಿನರಿ ಬಸ್. ಹೆಚ್ಚೆಂದರೆ ಇಪ್ಪತ್ತು ಕಿಲೋಮೀಟರ್ ವೇಗ. ಬಸ್ಸು ನಿಂತಾಗಂತೂ ಉಸಿರುಗಟ್ಟಿಸುವ ಝಳದ ತಾಪ. ಮುಟ್ಟಿದಲ್ಲೆಲ್ಲ ಬಿಸಿಯ ಚುರುಕು. ಅಂತಹ ನಿಗಿನಿಗಿ ಕೆಂಡದ ಬಿಸಿಗಾಳಿಯಲ್ಲೂ ಸೀಟ್ ಮೇಲೆ ಕುಳಿತ ತರುಣಿಯರು ತಮ್ಮ ಅಂಡ್ರಾಯಿಡ್ ಸೆಲ್ಲುಗಳ ಸ್ಕ್ರೀನ್ ಟಚ್ಚುಗಳ ಲೋಕದಲ್ಲಿ ತನ್ಮಯಗೊಂಡಿದ್ದರು. ಕೆಲವರು ಇಯರ್ ಫೋನುಗಳಲ್ಲಿ ವಿವಶರಾಗಿದ್ದರು. ಕಡೆಯ ಪಕ್ಷ ಜೇವರ್ಗಿಯಿಂದ ಯಡ್ರಾಮಿಗೆ ತಾಸಿಗೊಂದು ಬಸ್ ಸೌಕರ್ಯ ಒದಗಿಸಿದರೆ ಇಷ್ಟೊಂದು ಸಂಕಟ ಅನುಭವಿಸುವ ಅಗತ್ಯ ಇರಲಾರದೆಂದು ನಿಂತು ಪ್ರಯಾಣಿಸುತ್ತಿದ್ದ ನನ್ನ ಸಂಕಟ. ಅಲ್ಲಿನ ಶಾಸಕ ಮತ್ತಿತರೆ ಜನಪ್ರತಿನಿಧಿ ಮಹಾಶಯರಿಗೆ ಇದು ಅರ್ಥವಾಗಬಾರದೇ!.? ನನಗೆ ಸಹಜವಾಗಿ ಬೇಸರ ಮತ್ತು ಖೇದ ಏಕಕಾಲಕ್ಕೆ. ಅದು ಬಡವನ ಸಿಟ್ಟು ದವಡೆಗೆ ಮೂಲ ಎಂಬಂತೆ ಅನಿಸುತ್ತಿತ್ತು.
* * *
ಸೀಟಲ್ಲಿ ಕುಳಿತಿದ್ದ ಯಜಮಾನರೊಬ್ಬರನು ಕೇಳಿದೆ. ಇದೆಲ್ಲ ಸಮಸ್ಯೆ ರಾಜಕಾರಣಿಗಳ ಗಮನ ಸೆಳೆದಿಲ್ಲವೇ ಅಂದುದಕ್ಕೆ ಇದೆಲ್ಲ ಸಮಸ್ಯೆಯೇ ಅಲ್ಲ ಎನ್ನುವಂತೆ "ನಮ್ಮ ಹಣೆಬರಹ ಪನ್ನಾಸ್ ವರ್ಷ ಹಿಂಗೇ ಕಳದೀವಿ. ನಮ್ ಅಪ್ಪನ ಕಾಲದಲ್ಲೂ ಹಿಂಗೇ ಇತ್ತು ಇನ್ಮುಂದೆಯೂ ಬಹುಶಃ ಹಿಂಗೇ ಇರುವುದು ಅನಿವಾರ್ಯ ಎಂಬಂತೆ ದೇವರೇ ನಮ್ಮನ್ನು ಕಾಪಾಡಬೇಕೆಂದು" ದೈನೇಸಿ ಮಾತುಗಳಲ್ಲೇ ಕೈ ತೊಳಕೊಂಡ ವಯಸ್ಸಾದ ಯಜಮಾನ. ನನ್ನ ಹಿಂದುಗಡೆ ಕಾಲೇಜು ಹುಡುಗರು" ಓನಲ್ಲ ಕರಿಮಣಿ ಮಾಲೀಕ ನೀನಲ್ಲ" ಎಂಬ ಹಾಡನ್ನು ಯಾವುದೋ ಪ್ರಸಂಗಕ್ಕೆ ಹೋಲಿಸಿ ಹೋಲಿಸಿ ಒಣಗಿದ ಗಂಟಲಲೇ ಲಯಬದ್ಧವಾಗಿ ಕಿರುಚುತಿದ್ದರು.‌ ಪ್ರಾಯಶಃ ಅದೇ ಬಸ್ಸಿನಲ್ಲಿದ್ದ ತಮ್ಮ ಕ್ಲಾಸ್ಮೇಟ್ ಯುವತಿಯರನ್ನು ಇಂಪ್ರೆಸ್ ಮಾಡಲು ಕಿಲಾಡಿತನದ ಕಾಮೆಡಿ ಪ್ರದರ್ಶನ ಅವರದ್ದು. ಪ್ರೌಢಾವಸ್ಥೆಗೆ ಕಾಲಿಟ್ಟ ಕಾಲೇಜು ಯುವಕರಿಗೆ ಬಸ್ ಸೌಕರ್ಯಗಳಂತಹ‌ ಮೂಲಭೂತ ಅಗತ್ಯಗಳನ್ನು ಹೋರಾಡಿ ಪಡೆಯುವ ದರ್ದಿಲ್ಲ. ಹಕ್ಕು ಮತ್ತು ಬಾಧ್ಯತೆಗಳ ಅರಿವು‌ ಅವರಲ್ಲಿ ಮೂಡುತ್ತಿಲ್ಲವೇಕೆ.? ಹಕ್ಕುಗಳ ಒಡೆತನದ ಅರಿವು ಮೂಡಿಸುವ ಅಧಿನಾಯಕ ಹುಟ್ಟಿಲ್ಲವೇಕೆ.!?

ಇನ್ನೂ ಏನೇನೋ ವಿವೇಕಯುತ ನಾಗರಿಕ ಪ್ರಜ್ಞೆಯ ಚುರುಕು ಆಲೋಚನೆಗಳು ನನ್ನ ಕೈಲಾಗದ ಮನದೊಳಗೆ ಮೂಡ ತೊಡಗಿದವು. ಬಸ್ಸು ಕಂಡ ಕಂಡ ಊರಿಗೆಲ್ಲ ನಿಲ್ಲುತ್ತಾ, ನಿಲ್ಲುತ್ತಾ ದಿನತುಂಬಿದ ಬಸುರಿಯಂತೆ ನಡೆಯುತ್ತಿತ್ತು. ನಲವತ್ತೈದು ಕಿ. ಮೀ. ದೂರದ ಯಡ್ರಾಮಿ ತಲುಪಲು ಎರಡು ತಾಸು ಪಡೆದಿತ್ತು. ಕೆಂಪು ಬಸ್ ಪ್ರಯಾಣದ ಕಹಿ ಬೆವರಿನ ನಿಟ್ಟುಸಿರುಗಳಿಗೆ ಈ ನನ್ನ ಬರಹದ ಪ್ರತ್ಯುಸಿರುಗಳು. ಚಾಕು ಚೂರಿಗಳೇ ನಾಟದ ಚರ್ಮಗಳಿಗೆ ಅಕ್ಷರಗಳು ನಾಟಬಲ್ಲವೇ ಎಂಬ ಲಂಕೇಶ್ ಮಾತುಗಳು ಅದೇಕೋ ಗಾಢವಾಗಿ ಕಾಡ ತೊಡಗಿದವು.

ಯಡ್ರಾಮಿಯಿಂದ ನಮ್ಮೂರು ಆರು ಕಿ. ಮೀ. ದೂರ. ಸಿಂದಗಿಗೆ ಹೋಗುವ ಇಂತಹದೇ ಕೆಂಪು ಬಸ್ ದಿನಕ್ಕೆ ‌ಒಂದೆರಡು ಬಾರಿ ನಮ್ಮೂರ ಮೇಲೆ ಹೀಗೆ ತಿರುಗಾಡುತ್ತದೆ. ಅದು ಬಿಟ್ಟರೆ ನಮ್ಮೂರಿಗೆ ನಡಕೊಂಡೇ ಹೋಗಬೇಕು. ನಾನು ಎಂಟು ವರ್ಷಗಳ ಕಾಲ ಪ್ರತಿನಿತ್ಯವೂ ನಮ‌್ಮೂರಿಂದ ಹನ್ನೆರಡು ಕಿ. ಮೀ. ಯಡ್ರಾಮಿಗೆ ಬರಿಗಾಲಲ್ಲೇ ಓಡಾಡಿ, ಹೈಸ್ಕೂಲ್ ವಿದ್ಯಾಭ್ಯಾಸ ಮಾಡಿದ ಬಾಲ್ಯದ ನೆನಪುಗಳು. ಈಗಲಾದರೂ ಅಪರೂಪಕ್ಕೆ ಒಂದೆರಡು ಆಟೋರಿಕ್ಷಾಗಳು ಸಿಕ್ಕರೂ ಸಿಗಬಹುದು. ಆದರೆ ಬಾಲ್ಯದ ಬರಿಗಾಲ ಮತ್ತು ಬರಗಾಲದ ಆ ನೆನಪುಗಳೇ ಹೇಳಲಾಗದ ಮತ್ತು ಹೇಳದಿರಲಾಗದ ಖುಷಿ ಕೊಡುತ್ತವೆ.

- ಮಲ್ಲಿಕಾರ್ಜುನ ಕಡಕೋಳ
9341010712

ಈ ಅಂಕಣದ ಹಿಂದಿನ ಬರಹಗಳು
ಬಾಡಿಗೆ ಮನೆಗಳು ಮತ್ತು ಜಾತಿ ಹುಡುಕಾಟದ ನೀಚ ಹುನ್ನಾರಗಳು
ಕಲಬುರಗಿಯ ಸಾಹಿತ್ಯ ಸಂಭ್ರಮ ಉಕ್ಕಿ ಹರಿದ ವಾತ್ಸಲ್ಯದ ಹೊನಲು

ಶಿವಕಾಂತಿ : ತಾವರೆಯ ಬಾಗಿಲು ತೆರೆದು ತೋರಿದಳು
ದಡ್ಡುಗಟ್ಟಿದ ಪ್ರಭುತ್ವ ಮತ್ತು ಕಲ್ಯಾಣ ಕರ್ನಾಟಕದ ಹಕೀಕತ್ತುಗಳು
ಬೋರಗಿ - ಪುರದಾಳದಲ್ಲಿ ತತ್ವಪದಗಳ ಅನುಸಂಧಾನ

ಜೇವರ್ಗಿಯಲ್ಲಿ ಕನ್ನಡ ತತ್ವಪದ ಸಾಹಿತ್ಯ ಸಮ್ಮೇಳನ
ಕಲ್ಯಾಣ ಕರ್ನಾಟಕದಲ್ಲಿ ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ, ವಿವಿಧ ಪ್ರತಿಷ್ಠಾನಗಳ ಸ್ಥಾಪನೆ ಆಗಲಿ
ಜೇವರ್ಗಿ ರಾಜಣ್ಣ ಮತ್ತು ವೃತ್ತಿರಂಗ ನಾಟಕಗಳು
ಸಾಧು ಮತ್ತು ಪೂಜೇರಿ ಎಂಬ ಜವಾರಿ ಜೋಡೆತ್ತುಗಳು
ಸಾಹಿತಿ ಸಣ್ಣಪ್ಪನ ಕತೆ ಸಣ್ಣದೇನಲ್ಲ
ಮುಖ್ಯಮಂತ್ರಿ ಜೊತೆಗೆ 'ಜನಮನ' ಸಂವಾದ
ಮೊದಲ ಮುಲಾಖತ್ತಿನ ಡಾವಣಗೇರಿ
ಬರೆಯುವ ನನ್ನ ಬಲಗೈಯೇ ಮುರಿದಿದೆ....
ಹೊಸ ಸರ್ಕಾರ : ಸಾಂಸ್ಕೃತಿಕ ಸೋಗಲಾಡಿಗಳ ಬಗ್ಗೆ ಇರಲಿ ಎಚ್ಚರ
ಜನಸಂಪರ್ಕ ಎಂಬ ಮಾಯಾವಿ ಮತ್ತು ಚುನಾವಣೆ ಕಾಲದ ವಾಸ್ತವಗಳು
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯುತ್ತಿರುವ ರಂಗಮೌಲ್ಯಗಳು
ಕಲಬುರ್ಗಿ ಸ್ಥಾನೀಯ ಸಮಾವೇಶದಲ್ಲಿ ಅನಾವರಣಗೊಂಡ ಕಥನಗಳು
ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಯಡ್ರಾಮಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ

ಮೊಟ್ಟಮೊದಲ ಕಥಾ ಸಂಕಲನ‌ 'ಮುಟ್ಟು' ಎಂದರೆ...
ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು
ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ

MORE NEWS

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...