About the Author

ಸಂಗಮೇಶ ತಮ್ಮನಗೌಡ್ರ (ಎಸ್.ವಿ. ತಮ್ಮನಗೌಡ್ರ) ಮೂಲತಃ ಗದಗ ಜಿಲ್ಲೆಯ ಗುಜಮಾಗಡಿ ಗ್ರಾಮದವರು. (ಜನನ: 15-01-1970) ಸದ್ಯ, ರೋಣ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಹಾರಾಷ್ಟ್ರದ ಕೊಲ್ಹಾಪುರ ವಿ.ವಿ.ಯಿಂದ ಎಂ.ಎ, ಮಧುರೈ ಕಾಮರಾಜ ವಿವಿಯಿಂದ ಎಂ.ಫಿಲ್ ಹಾಗೂ ಮುಂಬೈ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ಕನ್ನಡದಲ್ಲಿ ಏಕಾಂಕಗಳು: ಒಂದು ಅಧ್ಯಯನ-1975-95) ಪದವಿ ಪಡೆದರು. ದ.ರಾ. ಬೇಂದ್ರೆ ವೇದಿಕೆ ಸ್ಥಾಪಿಸಿ (2000) ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.

ಕೃತಿಗಳು: ಹಂಸ, ಸ್ಫೂರ್ತಿ-ಕವನ ಸಂಕಲನಗಳು, ಮತ್ತೆ ಹುಟ್ಟಿತು ಕವನ-ಭಾವಗೀತೆಗಳ ಸಂಕಲನ, ಪಶ್ಚಾತ್ತಾಪ, ಕರುಳಿನ ಬೆಲೆ, ಖಳನಾಯಕನ ಕರ್ಮದಾಟ, ಗುಲಾಬಿಯ ಗುಟ್ಟು, ನಾನೇಕೆ ಗುಲಾಮನಾದೆ?-ನಾಟಕ ಕೃತಿಗಳು, ಪ್ರೇಮಪಂಜರ, ಬದುಕೆಂಬ ಬವಣೆಯಲ್ಲಿ-ಕಾದಂಬರಿಗಳು, ಉಳ್ಳವರ ಉಗಾದಿ-ಕಥಾ ಸಂಕಲನ, ನೋಡು ಬಾ ನೇಪಾಳ-ಪ್ರವಾಸ ಕಥನ, ಬೇಂದ್ರೆ ಸಾಹಿತ್ಯ ಅವಲೋಕನ, ಗ್ರಾಮನಾಮ ಸಂಸ್ಕೃತಿ, ಮಹಾತ್ಮ ಗಾಂಧೀಜಿ, ನೆಹರೂ ಹಾಗೂ ವಿಶ್ವೇಶ್ವರಯ್ಯ ಕುರಿತು ಪ್ರತ್ಯೇಕ ವ್ಯಕ್ತಿ ಚಿತ್ರಣಗಳು, ವರಕವಿ ಬೇಂದ್ರೆ ಹಿಂಗತಾರ-ಅಂಕಣಗಳ ಬರಹ ಹೀಗೆ ಸಾಹಿತ್ಯದ 13 ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಗದಗ ಜಿಲ್ಲಾ ಗೌರವ ಕಾರ್ಯದರ್ಶಿ ಹಾಗೂ ಕನ್ನಡ ಗಮಕ ಕಲಾ ಪರಿಷತ್ತಿನ ಗದಗ ಜಿಲ್ಲಾ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿದ್ದಾರೆ. 

ಪ್ರಶಸ್ತಿ-ಗೌರವಗಳು: ಗೊರೂರು ಸಾಹಿತ್ಯ ಪ್ರಶಸ್ತಿ (1999), ಚೆನ್ನಬಸಪ್ಪ ಕಲಕೋಟಿ ದತ್ತಿ ಬಹುಮಾನ (ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗೀಯ ಮಟ್ಟದ ಪ್ರಶಸ್ತಿ-2000), ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ-2004, ರುಕ್ಮಿಣಿ ಸಾಹಿತ್ಯ ಪ್ರಶಸ್ತಿ-2010, ಆಜೂರು ಪುಸ್ತಕ ಪ್ರತಿಷ್ಠಾನ ಪ್ರಶಸ್ತಿ-2011, ಅಲ್ಲದೇ, ಇವರ ಸಾಹಿತ್ಯ ಸೇವೆ ಹಿನ್ನೆಲೆಯಲ್ಲಿ ವಿವಿಧ ಸಂಘ-ಸಂಸ್ಥೆಗಳು  ಗೌರವಿಸಿವೆ.

ಸಂಗಮೇಶ ತಮ್ಮನಗೌಡ್ರ

(15 Jan 1970)

Books by Author