ಬಾಹ್ಯಾಕಾಶದ ಅದ್ಭುತಗಳು

Author : ಶ್ರೀನಿವಾಸಮೂರ್ತಿ ಎಸ್. ವಿ.

Pages 154

₹ 120.00




Year of Publication: 2016
Published by: Neelamegha Prakashana
Address: Menase Sringeri
Phone: 7411982346

Synopsys

ಭೌತಶಾಸ್ತ್ರ ಮತ್ತು ಗಣಿತಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ. ಗಣಿತದ ವಿಸ್ಮಯದ ಸಂಖ್ಯೆ ಪೈ, ಬೆಳಕಿನ ಮಾಲಿನ್ಯ ಎಂಬ ಗಂಭೀರ ಪರಿಸರ ಸಮಸ್ಯೆ, ಸಾಪೇಕ್ಷತಾ ಸಿದ್ಧಾಂತ, ಕ್ವಾಂಟಂ ಸಿದ್ಧಾಂತ ಇತ್ಯಾದಿಗಳ ಬಗ್ಗೆ ಸರಳವಾಗಿ ಕನ್ನಡದಲ್ಲಿ ವಿವರಿಸುವ ನನ್ನ ಪ್ರಯತ್ನವೇ ಈ ಪುಟ್ಟ ಪುಸ್ತಕ. ಇದರಲ್ಲಿ ವಿಜ್ಞಾನದ ವಿಷಯಗಳ ಜೊತೆಗೆ ವಿಜ್ಞಾನದ ಏಳಿಗೆಗಾಗಿ ಜೀವನಪೂರ್ತಿ ಒಂದಲ್ಲ ಒಂದು ರೀತಿ ಶ್ರಮಿಸಿದ ಮಹಾನ್ ವ್ಯಕ್ತಿಗಳ ಪರಿಚಯವೂ ಇದೆ. ಖ್ಯಾತ ವಿಜ್ಞಾನ ಬರಹಗಾರ ಜಾರ್ಜ್ ಗ್ಯಾಮೋ, ಸತ್ಯದ ಸಾಕ್ಷಾತ್ಕಾರಕ್ಕಾಗಿ ತನ್ನ ಜೀವವನ್ನೇ ತ್ಯಾಗಮಾಡಿದ ಜಿಯಾರ್ಡನೋ ಬ್ರೂನೋ ಮುಂತಾದ ಮಹಾನ್ ವ್ಯಕ್ತಿಗಳ ಸ್ಮರಣೆಯೂ ಇಲ್ಲಿದೆ. ಗುರುತ್ವ ಬಲ, ವಿದ್ಯುದಯಸ್ಕಾಂತೀಯ ಬಲದಂಥ ಪ್ರಕೃತಿಯ ಮೂಲಭೂತ ಬಲಗಳನ್ನು ವಿವರಿಸುವ ಪ್ರಯತ್ನವೂ ಇದೆ.

About the Author

ಶ್ರೀನಿವಾಸಮೂರ್ತಿ ಎಸ್. ವಿ.
(29 September 1987)

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ನಿವಾಸಿ. ವೃತ್ತಿಯಿಂದ ಬ್ಯಾಂಕ್ ಉದ್ಯೋಗಿ. ಆದರೆ ವಿಜ್ಞಾನ, ಗಣಿತ, ಪರಿಸರ, ಜೀವಜಗತ್ತು ಇತ್ಯಾದಿ ವಿಷಯಗಳ ಬಗ್ಗೆ ತೀರದ ದಾಹ, ಬತ್ತದ ಆಸಕ್ತಿ. ಕೃತಿಗಳು: ಬಾಹ್ಯಾಕಾಶದ ಅದ್ಭುತಗಳು ಮತ್ತು ಜೀವಜಾಲ ...

READ MORE

Excerpt / E-Books

ಗುರುತ್ವಬಲ: ಸಕಲವನ್ನೂ ಆಕರ್ಷಿಸುವ ಅಸೀಮ ವಿಸ್ಮಯದ ಬಲ “ಗುರುತ್ವಾಕರ್ಷಣ ಬಲ” ಹೆಸರೇ ಹೇಳುವಂತೆ ಅದೊಂದು ಆಕರ್ಷಣಾ ಬಲ. ಈ ವಿಶ್ವದ ಸಕಲವನ್ನೂ ಆಕರ್ಷಿಸುವ ಅನನ್ಯ ಬಲ. ಅದನ್ನು ಜಗತ್ತಿನ ಯಾವ ಕವಚವೂ, ಹೊದಿಕೆಯೂ ತಡೆಯಲಾರದು, ಏಕೆಂದರೆ ಸ್ವತಃ ಆ ಕವಚ ಮತ್ತು ಹೊದಿಕೆಯೂ ಸೇರಿದಂತೆ ಜಗತ್ತಿನ ಸಕಲ ವಸ್ತುಗಳೂ, ಅವು ಸಜೀವವಾಗಿರಲಿ ಅಥವಾ ನಿರ್ಜೀವವಾಗಿರಲಿ, ಈ ಬಲವನ್ನು ಹೊಂದಿರುತ್ತವೆ. ಅದು ಈ ವಿಶ್ವದಲ್ಲಿ ವರ್ತಿಸುತ್ತಿರುವ ನಾಲ್ಕು ಮೂಲಬಲಗಳಲ್ಲೊಂದು. ಆದರೆ ವಿಪರ್ಯಾಸವೆಂದರೆ ಬೇರೆಲ್ಲ ಬಲಗಳಿಗಿಂತ ಹೆಚ್ಚು ಸರ್ವವ್ಯಾಪಿಯಾಗಿದ್ದರೂ ಗುರುತ್ವಬಲವೇ ನಾಲ್ಕು ಬಲಗಳ ಪೈಕಿ ಅತ್ಯಂತ ಕ್ಷೀಣವಾದ ಬಲ! ಹೋಲಿಕೆಗಾಗಿ ಹೇಳಬೇಕೆಂದರೆ ಗುರುತ್ವ ಬಲ, ವಿದ್ಯುದಯಸ್ಕಾಂತೀಯ ಬಲಕ್ಕಿಂತ ಸುಮಾರು ಹತ್ತರ ಘಾತ ಮೂವತ್ತೇಳರಷ್ಟು (ಅಂದರೆ ಹತ್ತರ ಮುಂದೆ ಮೂವತ್ತೇಳು ಸೊನ್ನೆಗಳನ್ನು ಹಾಕಿದರೆ ಸಿಗುವ ಅಗಾಧವಾದ ಸಂಖ್ಯೆ!) ದುರ್ಬಲ! ನಮ್ಮ ಕಲ್ಪನೆಗೂ ಎಟುಕದ ಹೋಲಿಕೆ ಇದು. ಗುರುತ್ವಾಕರ್ಷಣ ಶಕ್ತಿಯ ಬಗೆಗೆ ನಾವೆಲ್ಲ ಒಂದು ಕಥೆಯನ್ನು ಓದಿರುತ್ತೇವೆ. ಅದೆಂದರೆ ಸೇಬಿನ ಮರದ ಕೆಳಗೆ ಕುಳಿತಿದ್ದ ನ್ಯೂಟನ್ ಗೆ ತಲೆಯ ಮೇಲೆ ಸೇಬಿನ ಹಣ್ಣು ಬಿದ್ದಾಗ ಗುರುತ್ವಾಕರ್ಷಣ ಬಲದ ಬಗೆಗೆ ಅವನಿಗೆ ಯೋಚನೆ ಬಂದಿತು ಎಂಬ ಕಥೆ. ಕೆಲವು ಕಿಡಿಗೇಡಿಗಳು ಅವನ ತಲೆಯ ಮೇಲೆ ಸೇಬಿನ ಬದಲು ತೆಂಗಿನಕಾಯಿ ಬೀಳಬಾರದಿತ್ತೆ ಎಂದು ಆಡಿಕೊಳ್ಳುತ್ತಿದ್ದುದೂ ಇತ್ತು. ಅದೇನೇ ಇರಲಿ, ಸೇಬು ಅವನ ತಲೆಯ ಮೇಲೆ ಬಿತ್ತೋ ಅಥವಾ ಎಲ್ಲೋ ಬೀಳುವುದನ್ನು ಅವನು ನೋಡಿದನೋ, ಒಟ್ಟಿನಲ್ಲಿ ಗುರುತ್ವ ಬಲದ ಬಗೆಗೆ ಅವನಿಗೆ ಯೋಚಿಸಲು ಕಾರಣವಾಯಿತು. ಅವನು ಇದರ ಬಗೆಗೆ ಒಂದು ಸಾರ್ವತ್ರಿಕವಾದ ನಿಯಮವನ್ನು ಪ್ರತಿಪಾದಿಸಿದ. ಅವನ ನಿಯಮದ ಪ್ರಕಾರ ಜಗತ್ತಿನ ಪ್ರತಿಯೊಂದು ವಸ್ತುವೂ ಇನ್ನೊಂದು ವಸ್ತುವನ್ನು ಆಕರ್ಷಿಸುತ್ತದೆ. ಆ ಆಕರ್ಷಣೆಯು ಅವುಗಳ ದ್ರವ್ಯರಾಶಿ ಹೆಚ್ಚಿದಂತೆಲ್ಲ ಹೆಚ್ಚುತ್ತ ಹೋಗುತ್ತದೆ ಮತ್ತು ಅವುಗಳ ನಡುವಿನ ದೂರ ಹೆಚ್ಚಿದಂತೆಲ್ಲ ಅದರ ಬಲವೂ ಕಡಿಮೆಯಾಗುತ್ತ ಹೋಗುತ್ತದೆ. ಅದು ದೂರದ ವರ್ಗಕ್ಕೆ ವಿಲೋಮವಾಗಿ ಕಡಿಮೆಯಾಗುತ್ತ ಹೋಗುತ್ತದೆ. ಉದಾಹರಣೆಗೆ ಎರಡು ವಸ್ತುಗಳ ನಡುವಿನ ದೂರ ಎರಡು ಪಟ್ಟು ಹೆಚ್ಚಿದರೆ ಗುರುತ್ವ ಬಲ ನಾಲ್ಕು ಪಟ್ಟು, ಮೂರು ಪಟ್ಟು ಹೆಚ್ಚಿದರೆ ಗುರುತ್ವ ಬಲ ಒಂಬತ್ತು ಪಟ್ಟು ಕಡಿಮೆಯಾಗುತ್ತದೆ. ಗುರುತ್ವದ ನಿಯತಾಂಕ ಗುರುತ್ವ ಬಲದ ಬಗೆಗೆ ಮಾತನಾಡುವಾಗ “ಜಿ” ಎಂಬ ಒಂದು ನಿಯತಾಂಕದ ಬಗೆಗೂ ಮಾತನಾಡಬೇಕಾಗುತ್ತದೆ. ಆಂಗ್ಲಭಾಷೆಯ ದೊಡ್ಡಕ್ಷರ “ಜಿ” ಯಿಂದ ಗುರುತಿಸಲ್ಪಡುವ ಈ ನಿಯತಾಂಕ ವಸ್ತುಗಳ ದ್ರವ್ಯರಾಶಿ ಮತ್ತು ಅವುಗಳ ನಡುವಿನ ದೂರಕ್ಕೆ ಸಂಬಂಧಿಸಿದಂತೆ ಗುರುತ್ವ ಬಲ ಹೇಗೆ ಬದಲಾಗುತ್ತದೆ ಎಂಬುದನ್ನು ವಿವರಿಸುವ ಸೂತ್ರವನ್ನು ಕೊಡುತ್ತದೆ. ಈ ಸೂತ್ರವನ್ನು F=GxM1xM2/R2 ಎಂದು ಬರೆಯಲಾಗುತ್ತದೆ. ಇಲ್ಲಿ G ಎಂದರೆ ಗುರುತ್ವದ ನಿಯತಾಂಕ. F ಎಂದರೆ ಗುರುತ್ವ ಬಲದ ಪ್ರಮಾಣ. M1 ಮತ್ತು M2 ಎಂದರೆ ಎರಡು ವಸ್ತುಗಳ ದ್ರವ್ಯರಾಶಿ. R ಎಂದರೆ ಅವುಗಳ ಕೇಂದ್ರಭಾಗಗಳ ನಡುವಿನ ದೂರ. ಈ “ಜಿ” ಯ ಬೆಲೆ ಎಷ್ಟು ಗೊತ್ತೆ? 0.00000000006674 Nm2/kg2 ಅಷ್ಟೆ! (ಇದರ ಅಳತೆಯ ಮಾನಗಳ ಬಗೆಗೆ ಭೌತಶಾಸ್ತ್ರದ ಜ್ಞಾನವಿಲ್ಲದವರಿಗೆ ಹೆಚ್ಚೇನೂ ಅರ್ಥವಾಗಲಿಕ್ಕಿಲ್ಲ, ಆದರೆ ಅತಿ ಚಿಕ್ಕದಾದ ಈ ಸಂಖ್ಯೆಯನ್ನು ನೋಡಿದಾಗ ಅದರ ಕ್ಷೀಣತೆಯ ಬಗೆಗೆ ಒಂದು ಕಲ್ಪನೆ ಉಂಟಾಗುತ್ತದೆ). ಹಾಗಾಗಿ ಯಾವುದೇ ಎರಡು ವಸ್ತುಗಳ ದ್ರವ್ಯರಾಶಿ ವಿಪರೀತ ಹೆಚ್ಚಿದ್ದರಷ್ಟೇ ಗುರುತ್ವ ಬಲ ಪರಿಣಾಮಕಾರಿಯಾಗಿ ಗುರುತಿಸಬಹುದಾದಷ್ಟು ಇರುತ್ತದೆ. ಇಲ್ಲವಾದರೆ ಅದು ಗೊತ್ತಾಗುವುದೇ ಇಲ್ಲ. ಉದಾಹರಣೆಗೆ ನಾವೆಲ್ಲರೂ ನಮ್ಮ ನಮ್ಮ ಗುರುತ್ವಬಲದಿಂದ ಒಬ್ಬರನ್ನೊಬ್ಬರು ಆಕರ್ಷಿಸುತ್ತೇವೆ. ಜೊತೆಗೆ ಭೂಮಿಯ ಮೇಲಿರುವ ಸಕಲ ವಸ್ತುಗಳು ಸಹ ನಮ್ಮನ್ನು ಆಕರ್ಷಿಸುತ್ತವೆ. ಆದರೆ ಆ ಬಲ ಎಂದಾದರೂ ನಮ್ಮ ಅನುಭವಕ್ಕೆ ಬಂದಿದೆಯೇ? ಯಾವುದೇ ಒಂದು ದೊಡ್ಡ ವಸ್ತುವಿನ ಬಳಿ ಹೋದಾಗ ನಿಮ್ಮನ್ನು ಯಾರೋ ಎಳೆಯುತ್ತಿರುವಂತೆ ಎಂದಾದರೂ ಭಾಸವಾಗಿದೆಯೇ? ಇಲ್ಲ, ಏಕೆಂದರೆ ಗುರುತ್ವ ಬಲ ಅತ್ಯಂತ ಕ್ಷೀಣ. ಆದರೆ ಒಂದು ಅಯಸ್ಕಾಂತದ ಬಳಿ ಕಬ್ಬಿಣದ ತುಂಡೊದನ್ನು ಹಿಡಿದು ನೋಡಿ. ಅಯಸ್ಕಾಂತವು ಕಬ್ಬಿಣವನ್ನು ಎಳೆಯುವುದು ನಿಮಗೆ ಚೆನ್ನಾಗಿ ಅನುಭವಕ್ಕೆ ಬರುತ್ತದೆ. ವಿದ್ಯುದಯಸ್ಕಾಂತೀಯ ಬಲವು ಗುರುತ್ವ ಬಲಕ್ಕಿಂತ ಎಷ್ಟೊಂದು ಪ್ರಬಲವಾದದ್ದು ಎಂಬುದನ್ನು ಅನುಭವದಿಂದ ತಿಳಿದುಕೊಳ್ಳಲು ಇದೊಂದು ಅತ್ಯುತ್ತಮ ಉದಾಹರಣೆ. ಗುರುತ್ವ ಬಲದ ಪರಿಣಾಮವಾಗಿಯೇ ಇಂದು ಭೂಮಿ ಮತ್ತು ಇತರೆಲ್ಲ ಗ್ರಹಗಳು ಸೂರ್ಯನ ಸುತ್ತ, ಚಂದ್ರ ಭೂಮಿಯ ಸುತ್ತ ಮತ್ತು ಇತರೆಲ್ಲ ಗ್ರಹಗಳ ಚಂದ್ರರು ಸಹ ತಮ್ಮ ಗ್ರಹಗಳ ಸುತ್ತ ಸುತ್ತುತ್ತವೆ. ಇಡೀ ವಿಶ್ವವನ್ನು ಇಂದು ಆಳುತ್ತಿರುವ ಪ್ರಧಾನವಾದ ಬಲವೇ ಗುರುತ್ವ ಬಲ. ಗುರುತ್ವ ಬಲದ ಪರಿಣಾಮದಿಂದಾಗಿಯೇ ಅನೇಕ ಆವಿಷ್ಕಾರಗಳು ಖಗೋಳ ವಿಜ್ಞಾನದಲ್ಲಿ ನಡೆದವು. ಅದರಲ್ಲಿ ಬಹಳ ಮುಖ್ಯವಾದದ್ದೆಂದರೆ ನೆಪ್ಚೂನ್ ಮತ್ತು ಪ್ಲೂಟೋಗಳ ಸಂಶೋಧನೆ. ಯುರೇನಸ್ ಗ್ರಹದ ಚಲನೆಯಲ್ಲಿ ಏನೋ ವ್ಯತ್ಯಾಸವನ್ನು ಕಂಡ ವಿಜ್ಞಾನಿಗಳು ಆ ವ್ಯತ್ಯಾಸಕ್ಕೆ ಕಾರಣವೇನೆಂದು ಹುಡುಕುತ್ತ ಹೋದಾಗ ಅದರ ಮೇಲೆ ಗುರುತ್ವ ಪ್ರಭಾವವನ್ನು ಬೀರುವ ಬೇರೊಂದು ಕಾಯ ಹೊರಗಡೆ ಇರಬಹುದೆಂಬ ಗುಮಾನಿ ಉಂಟಾಯಿತು. ಅದನ್ನು ಬೆನ್ನುಹತ್ತಿ ಹೊರಟ ಜೋಹಾನ್ ಗಾಲೆ ಎಂಬಾತ ಕೊನೆಗೆ 1846ರಲ್ಲಿ ನೆಪ್ಚೂನ್ ಗ್ರಹವನ್ನು ಕಂಡುಹಿಡಿದ. ಹಾಗೆಯೇ ನೆಪ್ಚೂನ್ ಗ್ರಹದ ಚಲನೆಯಲ್ಲಿನ ವ್ಯತ್ಯಾಸವನ್ನು ಬೆನ್ನುಹತ್ತಿ ಹೊರಟು 1930ರಲ್ಲಿ ಕ್ಲೈಡ್ ಟಾಂಬೋ ಪ್ಲೂಟೋವನ್ನು ಪತ್ತೆ ಹಚ್ಚಿದ. (2006ರ ನಂತರ ಪ್ಲೂಟೋವನ್ನು ಗ್ರಹಗಳ ಪಟ್ಟಿಯಿಂದ ತೆಗೆದು ಹಾಕಲಾಗಿದೆ). ಗುರುತ್ವ ಬಲವು ಎಷ್ಟೇ ಕ್ಷೀಣವಾಗಿದ್ದರೂ ವಿಶ್ವದಲ್ಲಿ ಅದರ ಪ್ರಾಮುಖ್ಯತೆಯನ್ನು ಯಾರೂ ಅಲ್ಲಗಳೆಯಲಾಗದು. ಏಕೆಂದರೆ ಒಂದು ವೇಳೆ ಸೂರ್ಯನನ್ನು ಈಗ ಇದ್ದಕ್ಕಿದ್ದಂತೆ ಮಾಯಮಾಡಿದರೆ, ಸೂರ್ಯನ ಗುರುತ್ವ ಸೆಳೆತ ಇಲ್ಲದೆ ಭೂಮಿಯು ಸೆಕೆಂಡಿಗೆ ಮೂವತ್ತು ಕಿಲೋಮೀಟರ್ ಗಳ ಅಗಾಧವಾದ ವೇಗದಲ್ಲಿ ಅಂತರಿಕ್ಷಕ್ಕೆ ಎಸೆಯಲ್ಪಡುತ್ತಿತ್ತು. ಏಕೆಂದರೆ ಭೂಮಿ ಇಂದು ಸೂರ್ಯನ ಸುತ್ತ ಅಷ್ಟು ವೇಗದಲ್ಲಿ ಸುತ್ತುತ್ತಿದೆ. ಹಾಗಾಗಿ ಮಧ್ಯದಿಂದ ಸೂರ್ಯನನ್ನು ತೆಗೆದುಬಿಟ್ಟರೆ ಭೂಮಿ ಅದೇ ವೇಗದಲ್ಲಿ ಆ ವೃತ್ತಾಕಾರದ ಕಕ್ಷೆಯ ಸ್ಪರ್ಶಕರೇಖೆಯಲ್ಲಿ ಕಕ್ಷೆಗೆ ಲಂಬವಾಗಿ ಎಸೆಯಲ್ಪಡುತ್ತದೆ. ಅಷ್ಟೊಂದು ಅಗಾಧವಾದ ವೇಗದಲ್ಲಿ ಭೂಮಿ ಸೂರ್ಯನ ಸುತ್ತ ಸುತ್ತುತ್ತಿರಬೇಕಾದರೆ ಭೂಮಿಯ ಮೇಲೆ ಸೂರ್ಯನ ಸೆಳೆತ ತೀರಾ ಅತ್ಯಲ್ಪವೇನೂ ಅಲ್ಲವೆಂದು ಮನದಟ್ಟಾಗುತ್ತದೆ. ಏಕೆಂದರೆ ಸೂರ್ಯನ ದ್ರವ್ಯರಾಶಿಯೇ ಅಷ್ಟೊಂದು ಅಗಾಧವಾದದ್ದು. ಅದು ಭೂಮಿಯ ದ್ರವ್ಯರಾಶಿಯ ಮೂರು ಲಕ್ಷ ಮೂವತ್ತು ಸಾವಿರ ಪಟ್ಟು ಹೆಚ್ಚಿದೆ. ಭೂಮಿಯ ಮೇಲೆ ಗುರುತ್ವದ ಬಹುಮುಖ್ಯ ಪ್ರಭಾವವೆಂದರೆ ಸಾಗರದಲೆಗಳ ಉಬ್ಬರ ಮತ್ತು ಇಳಿತಗಳು. ಹುಣ್ಣಿಮೆ ಮತ್ತು ಅಮಾವಾಸ್ಯೆಯ ಸಂದರ್ಭಗಳಲ್ಲೇ ನಾವು ಸಾಗರದಲ್ಲಿ ಉಬ್ಬರಗಳನ್ನು ಹೆಚ್ಚಾಗಿ ಕಾಣುವುದು. ಇದಕ್ಕೆ ಕಾರಣವೆಂದರೆ ಸೂರ್ಯ ಮತ್ತು ಚಂದ್ರರು ಅಮಾವಾಸ್ಯೆಯ ದಿನ ಭೂಮಿಯ ಒಂದೇ ಪಾರ್ಶ್ವದಲ್ಲಿರುವುದರಿಂದ ಎರಡರ ಸೆಳೆತವೂ ಸೇರಿ ಅತಿಹೆಚ್ಚು ಉಬ್ಬರ ಉಂಟಾಗುತ್ತದೆ. ಹಾಗೆಯೇ ಹುಣ್ಣಿಮೆಯಂದು ಎರಡೂ ಭೂಮಿಯ ಒಂದೊಂದು ಪಾರ್ಶ್ವದಿಂದ ಸೆಳೆಯುವ ಕಾರಣ ಎರಡು ಕಡೆಯೂ ಉಬ್ಬರ ಉಂಟಾಗುತ್ತದೆ. ಆದರೆ ಸೂರ್ಯ ಮತ್ತು ಚಂದ್ರರು ಭೂಮಿಗೆ ಲಂಬಕೋನದಲ್ಲಿ ಬಂದಾಗ ಒಂದರ ಸೆಳೆತವನ್ನು ಇನ್ನೊಂದರ ಸೆಳೆತವು ಕಡಿಮೆ ಮಾಡುವುದರಿಂದ ಉಬ್ಬರವು ಆಗ ಕನಿಷ್ಠ ಮಟ್ಟದಲ್ಲಿರುತ್ತದೆ. ಕಲ್ಲು ಭೂಮಿಯ ಮೇಲೆ ಬೀಳುತ್ತಿದೆ: ಅಥವಾ? ಭೂಮಿಯ ಮೇಲೆ ನಿಂತು ಒಂದು ಕಲ್ಲನ್ನು ಅಥವಾ ಯಾವುದೇ ವಸ್ತುವನ್ನು ಎಸೆದರೆ ಅದು ಸ್ವಲ್ಪ ಮೇಲಕ್ಕೆ ಹೋಗಿ ಆಮೇಲೆ ಮರಳಿ ಭೂಮಿಗೆ ಬೀಳುತ್ತದೆ ಎಂಬ ವಿಷಯ ಎಲ್ಲರಿಗೂ ಗೊತ್ತು. ಆದರೆ ವಾಸ್ತವ ಏನು ಗೊತ್ತೆ? ಕೇವಲ ಕಲ್ಲು ಭೂಮಿಯ ಕಡೆಗೆ ಬೀಳುತ್ತಿಲ್ಲ. ಕಲ್ಲು ಮತ್ತು ಭೂಮಿ ಎರಡೂ ಒಂದರ ಕಡೆಗೆ ಇನ್ನೊಂದು ಬೀಳುತ್ತಿವೆ! ಕೇಳಲು ಹಾಸ್ಯಾಸ್ಪದವೆನ್ನಿಸಿದರೂ ಇದು ಸತ್ಯಸ್ಯ ಸತ್ಯ. ಆದರೆ ನಮ್ಮ ಭೂಮಿ ಕಲ್ಲಿಗೆ ಹೋಲಿಸಿದರೆ ಎಷ್ಟು ಭಾರವಾದದ್ದೆಂದರೆ ಅದರ ಎದುರು ಕಲ್ಲಿನ ತೂಕ ಗಣನೆಗೇ ಬಾರದಷ್ಟು ಕಡಿಮೆ. ಆದ್ದರಿಂದ ಕಲ್ಲು ಭೂಮಿಯತ್ತ ಬೀಳುವ ವೇಗಕ್ಕೆ ಹೋಲಿಸಿದರೆ ಭೂಮಿ ಕಲ್ಲಿನತ್ತ ಬೀಳುವ ವೇಗ ತೀರಾ ಕಡಿಮೆ. ಎಷ್ಟು ಕಡಿಮೆ ಎಂದರೆ ಭೂಮಿ ಕಲ್ಲಿಗಿಂತ ಎಷ್ಟು ಪಟ್ಟು ಭಾರವೋ ಭೂಮಿ ಕಲ್ಲಿನತ್ತ ಬೀಳುವ ವೇಕ ಕಲ್ಲು ಭೂಮಿಯತ್ತ ಬೀಳುವ ವೇಗಕ್ಕಿಂತ ಅಷ್ಟು ಪಟ್ಟು ಕಡಿಮೆ. ಆದ್ದರಿಂದಲೇ ಆ ವ್ಯತ್ಯಾಸವನ್ನು ನಾವು ಗುರುತಿಸಲೂ ಸಾಧ್ಯವಿಲ್ಲ. ಸೂರ್ಯ-ಭೂಮಿ: ಯಾವುದು ಯಾವುದನ್ನು ಸುತ್ತುತ್ತಿದೆ? ಸಾಮಾನ್ಯವಾಗಿ ನಾವೆಲ್ಲ ಮಾತನಾಡುವಾಗ ಸೂರ್ಯನ ಸುತ್ತ ಭೂಮಿ ಸುತ್ತುತ್ತದೆ, ಭೂಮಿಯ ಸುತ್ತ ಚಂದ್ರ ಸುತ್ತುತ್ತದೆ ಎಂದೆಲ್ಲ ಹೇಳುತ್ತೇವೆ. ಆದರೆ ಅದು ಸಂಪೂರ್ಣವಾಗಿ ನಿಜವಲ್ಲ. ಏಕೆಂದರೆ ಭೂಮಿ ಮತ್ತು ಸೂರ್ಯರ ದ್ರವ್ಯರಾಶಿ ಮತ್ತು ಅವುಗಳ ನಡುವಿನ ದೂರವನ್ನು ತೆಗೆದುಕೊಂಡು ಗಣಿತ ಲೆಕ್ಕಾಚಾರದ ಮೂಲಕ ಎರಡರ ದ್ರವ್ಯರಾಶಿ ಕೇಂದ್ರ (ಸೆಂಟರ್ ಆಫ್ ಮಾಸ್) ಎಂಬ ಒಂದು ಕಾಲ್ಪನಿಕ ಬಿಂದುವನ್ನು ಗುರುತಿಸಬಹುದು. ಎರಡೂ ಕಾಯಗಳು ಈ ಕಾಲ್ಪನಿಕ ಕೇಂದ್ರಬಿಂದುವಿನ ಸುತ್ತ ಸುತ್ತುತ್ತವೆ. ಆದರೆ ಸೂರ್ಯ ಎಷ್ಟು ದೊಡ್ಡದಿದೆ ಎಂದರೆ ಈ ಕಾಲ್ಪನಿಕ ಬಿಂದು ಸೂರ್ಯನ ಒಳಗೇ ಇದೆ. ಹಾಗಾಗಿ ನಮಗೆ ಭೂಮಿ ಸೂರ್ಯನ ಸುತ್ತ ಸುತ್ತುತ್ತಿರುವಂತೆ ಕಾಣುತ್ತದೆ. ಇದೇ ಮಾತು ಭೂಮಿ-ಚಂದ್ರರಿಗೆ ಮತ್ತು ಇತರೆ ಯಾವುದೇ ಎರಡು ಕಾಯಗಳಿಗೆ ಕರಾರುವಾಕ್ಕಾಗಿ ಅನ್ವಯವಾಗುತ್ತದೆ. ಎರಡು ಕಾಯಗಳ ನಡುವಿನ ದ್ರವ್ಯರಾಶಿಯ ಮಧ್ಯೆ ಅಗಾಧವಾದ ಅಂತರವಿದ್ದರೆ ಈ ಕೇಂದ್ರಬಿಂದು ದೊಡ್ಡ ಕಾಯದ ಒಳಗೇ ಲೀನವಾಗುತ್ತದೆ. ಆದರೆ ಒಂದೊಮ್ಮೆ ಎರಡೂ ಅಗಾಧವಾದ ಮತ್ತು ಹೆಚ್ಚುಕಡಿಮೆ ಸಮಾನವಾದ ದ್ರವ್ಯರಾಶಿಯುಳ್ಳ ಕಾಯಗಳು ಸಮೀಪದಲ್ಲಿದ್ದರೆ ಈ ಕಾಲ್ಪನಿಕ ಕೇಂದ್ರಬಿಂದು ಎರಡೂ ಕಾಯಗಳ ಒಳಗೆ ಇರದೆ ಎರಡರ ನಡುವೆ ಬರುತ್ತದೆ. ಹಾಗಾದಾಗ ಎರಡೂ ಕಾಯಗಳು ಈ ಕೇಂದ್ರಬಿಂದುವನ್ನು ಸುತ್ತುತ್ತವೆ. ಆಗ ಅವು ಒಂದನ್ನೊಂದು ಸುತ್ತುತ್ತಿರುವಂತೆ ಭಾಸವಾಗುತ್ತದೆ. ವಿಶ್ವದಲ್ಲಿ ಅಂಥ ಅನೇಕ ನಕ್ಷತ್ರಯುಗ್ಮಗಳಿವೆ. ಅವುಗಳನ್ನು ಬೈನರಿ ಸ್ಟಾರ್ಸ್ ಎನ್ನುತ್ತಾರೆ. ಆಕಾಶದಲ್ಲಿ ಹಳ್ಳ? ಇಪ್ಪತ್ತನೇ ಶತಮಾನವನ್ನು ಭೌತವಿಜ್ಞಾನದ ಸುವರ್ಣ ಶತಮಾನವೆನ್ನಬಹುದು. ಈ ಶತಮಾನದ ಆದಿಯಲ್ಲೇ ಇಡೀ ಭೌತವಿಜ್ಞಾನದ ಪರಿಕಲ್ಪನೆಗಳನ್ನೇ ಬುಡಮೇಲು ಮಾಡಿದ ಎರಡು ಮಹಾನ್ ಸಿದ್ಧಾಂತಗಳ ಪ್ರತಿಪಾದನೆಯಾಯಿತು. ಒಂದು ಮ್ಯಾಕ್ಸ್ ಪ್ಲಾಂಕ್ ನ ಕ್ವಾಂಟಂ ಸಿದ್ಧಾಂತ, ಇನ್ನೊಂದು ಆಲ್ಬರ್ಟ್ ಐನ್ ಸ್ಟೀನ್ ನ ಸಾಪೇಕ್ಷತಾ ಸಿದ್ಧಾಂತ. ಈ ಎರಡು ಸಿದ್ಧಾಂತಗಳು ನಾವು ಈ ವಿಶ್ವವನ್ನು ನೋಡುವ ದೃಷ್ಟಿಯನ್ನೇ ಸಂಪೂರ್ಣವಾಗಿ ಬದಲಾಯಿಸಿಬಿಟ್ಟವು. 1915ರಲ್ಲಿ ಐನ್ ಸ್ಟೀನ್ ಪ್ರತಿಪಾದಿಸಿದ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತ ಗುರುತ್ವಾಕರ್ಷಣ ಬಲದ ಬಗೆಗೆ ನಮ್ಮ ಪರಿಕಲ್ಪನೆಯನ್ನೇ ಬದಲಾಯಿಸಿತು. ನ್ಯೂಟನ್ನನ ಪ್ರಕಾರ ಗುರುತ್ವ ಬಲವೆಂಬುದು ಎರಡು ವಸ್ತುಗಳ ನಡುವಿನ ಆಕರ್ಷಣಾ ಬಲ. ಆದರೆ ಐನ್ ಸ್ಟೀನ್ ಅದರ ಪರಿಕಲ್ಪನೆಯನ್ನು ಬದಲಾಯಿಸಿದ. ಅವನ ಪ್ರಕಾರ ಗುರುತ್ವವೆಂದರೆ ಅದು ಆಕಾಶದಲ್ಲಿ ಉಂಟಾಗುವ ಹಳ್ಳ ಎನ್ನಬಹುದು. ಒಂದು ಅಗಲವಾದ ಬಟ್ಟೆಯನ್ನು ಗಾಳಿಯಲ್ಲಿ ಹರಡಿ ಹಿಡಿದು ಅದರ ಮಧ್ಯದಲ್ಲಿ ಕಲ್ಲೊಂದನ್ನು ಇಟ್ಟರೆ ಅದರಲ್ಲಿ ಹಳ್ಳಬೀಳುತ್ತದೆ ತಾನೆ? ಹಾಗೆಯೇ ಭಾರವಾದ ವಸ್ತುವನ್ನು ಇಟ್ಟರೆ ಆಕಾಶದಲ್ಲಿ ಹಳ್ಳಬೀಳುತ್ತದೆ. ಹಾಗೆಯೇ ಬಟ್ಟೆಯಲ್ಲಿ ಆ ಹಳ್ಳದ ಇಳಿಜಾರಿನಲ್ಲಿ ಏನನ್ನಾದರೂ ಇಟ್ಟರೆ ಅದು ಇಳಿಜಾರಿನ ಕೇಂದ್ರಭಾಗದತ್ತ ಜಾರಿಹೋಗುತ್ತದೆ ತಾನೆ? ಹಾಗೆಯೇ ಆಕಾಶದಲ್ಲಿ ಸಹ ವಸ್ತುಗಳು ಆ ಗುರುತ್ವದ ಹಳ್ಳದ ಬಳಿ ಬಂದಾಗ ಅದರ ಕೇಂದ್ರದತ್ತ ಜಾರಿಬೀಳುತ್ತವೆ. ವಸ್ತುವಿನ ದ್ರವ್ಯರಾಶಿ ಹೆಚ್ಚಿದಷ್ಟೂ ಹಳ್ಳ ಆಳವಾಗಿರುತ್ತದೆ ಮತ್ತು ಅದರ ಪ್ರಕಾರ ಬೀಳುವ ವಸ್ತುವಿನ ವೇಗೋತ್ಕರ್ಷವೂ ಹೆಚ್ಚಿರುತ್ತದೆ. ಬಟ್ಟೆಯ ಮೇಲೆ ಇಡುವ ಕಲ್ಲಿನ ತೂಕ ಹೆಚ್ಚಾದಂತೆಲ್ಲ ಬಟ್ಟೆಯಲ್ಲಿ ಬೀಳುವ ಹಳ್ಳದ ಆಳವೂ ಹೆಚ್ಚುತ್ತದಲ್ಲವೇ? ಅದೇ ರೀತಿಯ ಪರಿಣಾಮವನ್ನು ಗುರುತ್ವ ಬಲದಲ್ಲೂ ಕಾಣಬಹುದು. ಅದೇ ರೀತಿ ವಸ್ತುವಿನ ತೂಕ ಹೆಚ್ಚಿದಂತೆಲ್ಲ ಒಂದು ಸಂದರ್ಭದಲ್ಲಿ ಬಟ್ಟೆಯೇ ಹರಿದು ಇಟ್ಟ ಕಲ್ಲು ಕೆಳಕ್ಕೆ ಬೀಳಬಹುದು. ಒಮ್ಮೆ ಕೆಳಕ್ಕೆ ಬಿದ್ದರೆ ಮತ್ತೆ ಅದನ್ನು ನಾವೇ ಎತ್ತಿ ಬಟ್ಟೆಯ ಮೇಲೆ ಇಡಬೇಕೇ ಹೊರತು ಮರಳಿ ಅದನ್ನು ಬಟ್ಟೆಯ ಮೇಲೆ ಬರುವಂತೆ ಮಾಡಲು ಬೇರೆ ಯಾವ ಉಪಾಯವೂ ಇಲ್ಲ. ಇದನ್ನೇ ಆಕಾಶಕ್ಕೆ ಅನ್ವಯಿಸಿದರೆ ಕೃಷ್ಣರಂಧ್ರ (ಬ್ಲ್ಯಾಕ್ ಹೋಲ್) ಎನ್ನಬಹುದು. ಕೃಷ್ಣರಂಧ್ರಕ್ಕೆ ಏನಾದರೂ ಬಿದ್ದರೆ ಮತ್ತೆ ಅದು ನಮ್ಮ ವಿಶ್ವಕ್ಕೆ ಹಿಂದಿರುಗುವ ಪ್ರಶ್ನೆಯೇ ಇಲ್ಲ. ಏಕೆಂದರೆ ಅದು ಆಕಾಶದಲ್ಲೇ ಇರುವ ರಂಧ್ರ. ತಮ್ಮ ಜೀವಿತಾವಧಿಯ ಕೊನೆಯಲ್ಲಿ ತಮ್ಮ ಗುರುತ್ವಕ್ಕೆ ತಾವೇ ಕುಸಿದು ಅಗಾಧ ಸಾಂದ್ರತೆಯ ಕಾಯಗಳಾಗಿ ಮಾರ್ಪಡುವ ನಕ್ಷತ್ರಗಳೇ ಕಪ್ಪುರಂಧ್ರಗಳು. ಇವು ಬೇರೊಂದು ವಿಶ್ವಕ್ಕೆ ಹೋಗಲು ಇರುವ ದಾರಿಗಳಾಗಿರಬಹುದು ಎಂಬ ಊಹೆಯಿದೆ. ಇದು ಕೇವಲ ಊಹೆಯಷ್ಟೇ. ಇವುಗಳು ಬೆಳಕನ್ನೂ ಸಹ ಹೊರಬಿಡದಿರುವುದರಿಂದ ಇವುಗಳನ್ನು ಯಾವುದೇ ಪ್ರಬಲ ದೂರದರ್ಶಕದಿಂದ ಸಹ ನೋಡುವ ಸಾಧ್ಯತೆಯೇ ಇಲ್ಲ. ಕೇವಲ ಪರೋಕ್ಷ ವಿಧಾನಗಳಿಂದ ಇವುಗಳನ್ನು ಪತ್ತೆಹಚ್ಚಬೇಕಷ್ಟೆ. ನಮ್ಮ ಸೂರ್ಯನ ದ್ರವ್ಯರಾಶಿಯ 1.4 ಪಟ್ಟು ಮತ್ತು ಅದಕ್ಕಿಂತ ಹೆಚ್ಚು ದ್ರವ್ಯರಾಶಿಯ ತಾರೆಗಳು ಮಾತ್ರ ಕೃಷ್ಣರಂಧ್ರಗಳಾಗುತ್ತವೆ. ಇದನ್ನು ಮೊದಲಬಾರಿಗೆ ಕಂಡುಹಿಡಿದಿದ್ದು ಭಾರತೀಯ ವಿಜ್ಞಾನಿ ಸುಬ್ರಮಣ್ಯನ್ ಚಂದ್ರಶೇಖರ್. ಆದ್ದರಿಂದ ಈ ಮಿತಿಗೆ ಚಂದ್ರಶೇಖರ್ ಮಿತಿ ಎಂದೇ ಕರೆಯುತ್ತಾರೆ. ಈ ರೀತಿ ಗುರುತ್ವದಿಂದಾಗಿ ಆಕಾಶದಲ್ಲಿ ಹಳ್ಳಬೀಳುವ ಪ್ರಕ್ರಿಯೆಗೆ ಆಂಗ್ಲಭಾಷೆಯಲ್ಲಿ ‘ವಾರ್ಪಿಂಗ್ ಆಫ್ ಸ್ಪೇಸ್ ಟೈಮ್’ ಎನ್ನುತ್ತಾರೆ. ಇದನ್ನು ಕನ್ನಡದಲ್ಲಿ ಆಕಾಶ-ಕಾಲದ ಬಾಗುವಿಕೆ ಎಂದೂ ತರ್ಜುಮೆ ಮಾಡಬಹುದು. ಏಕೆಂದರೆ ಸಾಪೇಕ್ಷತಾ ಸಿದ್ಧಾಂತದ ಪ್ರಕಾರ ಕಾಲ ಮತ್ತು ಆಕಾಶ ಎರಡೂ ಒಂದಕ್ಕೊಂದು ಸಂಬಂಧವಿರುವಂಥವು ಮತ್ತು ಕಾಲ ಕೂಡ ಆಕಾಶದ ಮೂರು ಆಯಾಮಗಳಂತೆ ವಿಶ್ವದ ನಾಲ್ಕನೆಯ ಆಯಾಮ. ಹಾಗಾಗಿ ಆಕಾಶದ ಮೇಲೆ ಗುರುತ್ವದ ಪರಿಣಾಮ ಉಂಟಾಗುವಂತೆ ಕಾಲದ ಮೇಲೂ ಆಗಲೇ ಬೇಕು. ಹಾಗಾಗಿ ಅತ್ಯಂತ ಪ್ರಬಲ ಗುರುತ್ವಾಕರ್ಷಣ ವಲಯಗಳ ಬಳಿ ಕಾಲ ನಿಧಾನವಾಗಿ ಚಲಿಸುತ್ತದೆ. ಕೃಷ್ಣರಂಧ್ರಗಳ ಬಳಿಯಂತೂ ಕಾಲ ನಿಂತೇ ಹೋದಂತೆ ಭಾಸವಾಗುತ್ತದೆ. ಭೂಮಿಯ ಮೇಲೆ ಸಹ ಗುರುತ್ವದ ಪರಿಣಾಮವಾಗಿ ಕಾಲ ನಿಧಾನವಾಗುತ್ತದೆ. ಆದರೆ ಈ ಮೊದಲೇ ಹೇಳಿದಂತೆ ಗುರುತ್ವ ಬಲ ಅತ್ಯಂತ ದುರ್ಬಲವಾದ ಬಲವಾದ್ದರಿಂದ ಭೂಮಿಯ ಅಪಾರವಾದ ದ್ರವ್ಯರಾಶಿಯ ಹೊರತಾಗಿಯೂ ಭೂಮಿಯಿಂದ ಉಂಟಾಗುವ ಗುರುತ್ವದ ಪರಿಣಾಮ ತೀರಾ ಅತ್ಯಲ್ಪ. ಹಾಗಾಗಿ ನಾವು ಈ ಬದಲಾವಣೆಯನ್ನು ಗುರುತಿಸಲೂ ಸಾಧ್ಯವಿಲ್ಲದಷ್ಟು ಅತ್ಯಲ್ಪವಾಗಿದೆ. ಸರಿ, ಆಕಾಶ ಬಾಗುತ್ತದೆ ಎಂಬುದನ್ನು ಸಾಬೀತುಪಡಿಸುವುದು ಹೇಗೆ? ಏಕೆಂದರೆ ಆಕಾಶವನ್ನು ಕಣ್ಣಿನಿಂದ ಕಾಣಲಾರೆವಾದ್ದರಿಂದ ಬಟ್ಟೆಯಲ್ಲಿ ಉಂಟಾದ ಹಳ್ಳವನ್ನು ನೋಡಿದಂತೆ ಅದನ್ನು ನೋಡಲಾಗುವುದಿಲ್ಲ. ಜೊತೆಗೆ ಆಕಾಶವೆಂದರೆ ಶೂನ್ಯವೆಂದು ನಾವೆಲ್ಲ ತಿಳಿದಿದ್ದೇವೆ. ಈ ಶೂನ್ಯದಲ್ಲಿ ಹಳ್ಳಬೀಳುವುದು ಎಂದರೇನು? ಈ ಪ್ರಶ್ನೆಯೇ ಅಸಂಬದ್ಧವಾಗಿ ಕೇಳಿಸುತ್ತದೆ. ಆದರೆ ನಾವು ಸಾಪೇಕ್ಷತಾ ಸಿದ್ಧಾಂತದ ನೆಲೆಗಟ್ಟಿನಲ್ಲಿ ಇದನ್ನು ನೋಡಹೊರಟರೆ ಇದನ್ನು ಅರ್ಥೈಸಿಕೊಳ್ಳಬಹುದು. ಆಕಾಶವೆಂದರೆ ಏನೂ ಇಲ್ಲದ ಶೂನ್ಯವಲ್ಲ. ಅದು ಆಕಾಶ ಮತ್ತು ಕಾಲದ ನಾಲ್ಕು ಆಯಾಮಗಳ ವಿಶ್ವ. ಆ ವಿಶ್ವದಲ್ಲಿಯೇ ಜಗತ್ತಿನ ಸಕಲ ತಾರೆಗಳೂ, ಗ್ಯಾಲಕ್ಸಿಗಳೂ, ಅಷ್ಟೇ ಏಕೆ ಬೇರೆಲ್ಲ ಅನಿಲ, ಧೂಳು ಇತ್ಯಾದಿ ಏನೇನಿದೆಯೋ ಎಲ್ಲವೂ ಇರುವುದು. ಆದ್ದರಿಂದ ಈ ವಿಶ್ವದಲ್ಲಿ ಹಳ್ಳಬೀಳುವುದು ಎಂದು ಇದನ್ನು ಅರ್ಥೈಸಿಕೊಳ್ಳಬಹುದು. ಇದನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುವುದು ಬಹಳ ಕಷ್ಟ. ಆದರೆ ಇದಕ್ಕೆ ಪ್ರಾಯೋಗಿಕ ಸಾಕ್ಷ್ಯಗಳು ಲಭ್ಯವಿವೆ. ಇದನ್ನು ಮೊದಲಬಾರಿಗೆ ನಿಖರವಾಗಿ ಸಾಬೀತುಪಡಿಸಿದ್ದು 1919ರ ಮೇ 29ರಂದು ಆದ ಖಗ್ರಾಸ ಸೂರ್ಯಗ್ರಹಣದಂದು. ಸೂರ್ಯ ಭೂಮಿಗಿಂತ ಬಹುದೊಡ್ಡ ಮತ್ತು ಬಹಳ ಹೆಚ್ಚು ದ್ರವ್ಯರಾಶಿ ಹೊಂದಿದ ಕಾಯವಾದ್ದರಿಂದ ಸೂರ್ಯನ ಗುರುತ್ವ ವಲಯವೂ ಸಹಜವಾಗಿಯೇ ಹೆಚ್ಚು ಪ್ರಬಲವಾಗಿರುತ್ತದೆ. ಹಾಗಾಗಿ ಸೂರ್ಯನ ಬಳಿ ಆಕಾಶ-ಕಾಲದ ಮೇಲೆ ಗುರುತ್ವದ ಪರಿಣಾಮವೂ ಅಧಿಕವಾಗಿಯೇ ಇರುತ್ತದೆ. ಆಕಾಶದ ಬಾಗುವಿಕೆಯ ಪ್ರಮಾಣವೂ ಹೆಚ್ಚಾಗಿಯೇ ಇರುತ್ತದೆ. ಇದನ್ನು ಕಂಡುಹಿಡಿಯಲು ಇರುವ ಒಂದು ಉಪಾಯವೆಂದರೆ ಬೆಳಕು ಈ ಆಕಾಶದಲ್ಲಿ ಹೇಗೆ ಚಲಿಸುತ್ತದೆ ಎಂದು ಕಂಡುಹಿಡಿಯುವುದು. ಬೆಳಕು ಆಕಾಶದಲ್ಲಿಯೇ ಚಲಿಸುವುದರಿಂದ ಆಕಾಶವು ಯಾವ ರೀತಿ ಬಾಗುತ್ತದೆಯೋ ಅದೇ ರೀತಿ ಬೆಳಕು ಚಲಿಸುತ್ತದೆ. ಇದನ್ನು ಕಂಡುಹಿಡಿದರೆ ಆಕಾಶ ಹೇಗೆ ಬಾಗಿದೆ ಎಂಬುದನ್ನೂ ತಿಳಿಯಬಹುದು. ನಾವು ನಮ್ಮ ಪ್ರಾಥಮಿಕ ಶಾಲಾದಿನಗಳಿಂದ ಬೆಳಕು ಸರಳರೇಖೆಯಲ್ಲಿ ಚಲಿಸುತ್ತದೆ ಎಂದು ಓದಿದ್ದೇವೆ. ಆದರೆ ಅದು ಕೇವಲ ಅರ್ಧಸತ್ಯ. ಈ ಸರಳರೇಖೆಯನ್ನು ಭೌತಶಾಸ್ತ್ರದ ಪರಿಭಾಷೆಯಲ್ಲಿ “ಜಿಯೋಡೆಸಿಕ್”ಎನ್ನುತ್ತಾರೆ. ಹಾಗೆಂದರೆ ಒಂದು ಕೊಟ್ಟ ಮಾಧ್ಯಮದಲ್ಲಿ ಎರಡು ಬಿಂದುಗಳ ನಡುವಿನ ಅತಿ ಕಡಿಮೆ ದೂರ. ಅದು ಎಲ್ಲ ಸಂದರ್ಭಗಳಲ್ಲೂ ಸರಳರೇಖೆಯೇ ಆಗಿರಬೇಕೆಂದಿಲ್ಲ. ನಮ್ಮ ಮೂಗಿನ ನೇರಕ್ಕೆ ಅದು ಸರಳರೇಖೆ ಆಗಿರಬಹುದು, ಆದರೆ ಅದು ಬೇರೊಂದು ಚೌಕಟ್ಟಿನಲ್ಲಿ ಸರಳರೇಖೆ ಆಗಿಲ್ಲದೆ ಇರಬಹುದು. ಉದಾಹರಣೆಗೆ ನೀವು ಭೂಮಿಯ ಮೇಲೆ ನಿಮ್ಮ ಮೂಗಿನ ನೇರಕ್ಕೆ ಸರಳರೇಖೆಯಲ್ಲಿ ನಡೆಯುತ್ತ ಹೋದರೆ ಕೊನೆಗೊಮ್ಮೆ ನೀವು ಹೊರಟ ಜಾಗಕ್ಕೇ ಮರಳಿ ಬರುತ್ತೀರಿ. ಆದರೆ ನೀವೆಲ್ಲೂ ಹಿಂತಿರುಗಿ ನಡೆದಿರುವುದಿಲ್ಲ. ನೇರವಾಗಿ ಮುಂದಕ್ಕೇ ನಡೆದಿರುತ್ತೀರಿ. ಆದರೂ ಹೊರಟ ಜಾಗಕ್ಕೇ ಮರಳಿ ಬರುವುದು ಹೇಗೆ? ಇದಕ್ಕೆ ಉತ್ತರ ಬಹಳ ಸರಳ. ನಮ್ಮ ಭೂಮಿಯೇ ಗೋಳಾಕಾರವಾಗಿದೆ! ಆದ್ದರಿಂದ ನೀವು ನಡೆದ ದಾರಿ ನಿಮ್ಮ ದೃಷ್ಟಿಯಲ್ಲಿ ಸರಳರೇಖೆಯೇ ಆದರೂ ವಾಸ್ತವವಾಗಿ ಅದು ಇಡೀ ಭೂಮಿಗೆ ಒಂದು ಸುತ್ತು ಬರುವ ವೃತ್ತವಾಗಿರುತ್ತದೆ. ಅದೇ ರೀತಿ ಬೆಳಕು ಸಹ ಆಕಾಶದಲ್ಲಿ ಸಂಚರಿಸುವುದರಿಂದ ಆಕಾಶ ಹೇಗೆ ಬಾಗಿರುತ್ತದೆಯೋ ಹಾಗೆಯೇ ಅದು ಸಂಚರಿಸಬೇಕಾಗುತ್ತದೆ. ಐನ್ ಸ್ಟೀನ್ ಅದೇ ತತ್ವದ ಆಧಾರದ ಮೇಲೆ ಸೂರ್ಯನ ಗುರುತ್ವಾಕರ್ಷಣ ಬಲವನ್ನು ಲೆಕ್ಕ ಹಾಕಿ, ಅದರಿಂದ ಸೂರ್ಯನ ಬಳಿ ಆಕಾಶದ ಬಾಗುವಿಕೆಯನ್ನೂ ಲೆಕ್ಕ ಹಾಕಿ, ಅದರ ಪ್ರಕಾರ ಸೂರ್ಯನ ಸಮೀಪದಿಂದ ಸಾಗುವ ಬೆಳಕಿನ ಕಿರಣಗಳು 1.75 ಆರ್ಕ್ ಸೆಕೆಂಡ್ ಗಳಷ್ಟು ಬಾಗುತ್ತವೆ ಎಂದು ತೋರಿಸಿದ. (ಒಂದು ಆರ್ಕ್ ಸೆಕೆಂಡ್ ಎಂದರೆ ಒಂದು ಡಿಗ್ರಿಯ ಮೂರು ಸಾವಿರದ ಆರುನೂರನೇ ಒಂದು ಭಾಗ, ಅಂದರೆ 1/3600). ಅದನ್ನು ಸೈದ್ಧಾಂತಿಕವಾಗಿ ತೋರಿಸಿದ್ದೇನೋ ಆಯಿತು, ಆದರೆ ಅದನ್ನು ಪ್ರಾಯೋಗಿಕವಾಗಿ ಸಾಬೀತುಪಡಿಸಬೇಕಲ್ಲ? ಅದಕ್ಕಿದ್ದ ಒಂದೇ ದಾರಿಯೆಂದರೆ ಸೂರ್ಯನ ಹಿಂದೆ ಇರುವ ನಕ್ಷತ್ರದ ಬೆಳಕು ಸೂರ್ಯ ಅಲ್ಲಿ ಇಲ್ಲದಾಗ ಹೇಗೆ ಚಲಿಸುತ್ತದೆ ಮತ್ತು ಸೂರ್ಯ ಇದ್ದಾಗ ಹೇಗೆ ಚಲಿಸುತ್ತದೆ ಎಂದು ತಿಳಿಯುವುದು. ಒಂದು ವೇಳೆ ಸೂರ್ಯ ಇದ್ದಾಗ ಬೆಳಕು ಐನ್ ಸ್ಟೀನ್ ಹೇಳಿದಂತೆಯೇ 1.75 ಆರ್ಕ್ ಸೆಕೆಂಡ್ ಗಳಷ್ಟು ಬಾಗಿದರೆ ಅದು ಸಾಪೇಕ್ಷತಾ ಸಿದ್ಧಾಂತದ ದಿಗ್ವಿಜಯವಾಗುತ್ತದೆ. ಆದರೆ ಸಮಸ್ಯೆ ಇದ್ದಿದ್ದೇ ಇಲ್ಲಿ. ಪ್ರಖರವಾಗಿ ಉರಿಯುವ ಸೂರ್ಯ ಇದ್ದಾಗ ಹಿಂದಿನಿಂದ ಬರುವ ನಕ್ಷತ್ರದ ಕ್ಷೀಣವಾದ ಬೆಳಕನ್ನು ಗುರುತಿಸುವುದೇ ಸಾಧ್ಯವಿಲ್ಲ. ಇನ್ನು ಅದರ ಬಾಗುವಿಕೆಯನ್ನು ಲೆಕ್ಕ ಹಾಕುವುದು ಹೇಗೆ? ಈ ಸಮಸ್ಯೆಗೆ ಪರಿಹಾರವೆಂದರೆ ಖಗ್ರಾಸ ಸೂರ್ಯಗ್ರಹಣ. ಆ ಸಂದರ್ಭದಲ್ಲಿ ಸೂರ್ಯನನ್ನು ಚಂದ್ರ ಸಂಪೂರ್ಣವಾಗಿ ಮರೆ ಮಾಡುವುದರಿಂದ ನಮಗೆ ಸೂರ್ಯನ ಹಿಂದಿನ ನಕ್ಷತ್ರದ ಬೆಳಕನ್ನು ಸಹ ಗುರುತಿಸಲು, ಅಳೆಯಲು ಸಾಧ್ಯವಾಗುತ್ತದೆ. 1919ರ ಮೇ 29ರಂದು ಜರುಗಿದ ಖಗ್ರಾಸ ಸೂರ್ಯಗ್ರಹಣದ ಸಂದರ್ಭದಲ್ಲಿ ವಿಜ್ಞಾನಿಗಳು ಅದನ್ನು ಕರಾರುವಾಕ್ಕಾಗಿ ಅಳೆದರು. ನಕ್ಷತ್ರದ ಬೆಳಕಿನ ಬಾಗುವಿಕೆ ಸರಿಯಾಗಿ ಐನ್ ಸ್ಟೀನ್ ಹೇಳಿದಷ್ಟೇ ಇತ್ತು. ಇದು ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತವನ್ನು ಸಂಶಯಕ್ಕೆಡೆಯಿಲ್ಲದಂತೆ ಸಾಬೀತುಪಡಿಸಿತು. ಗ್ರ್ಯಾವಿಟಾನ್: ಇದೆಯೇ? ಇಲ್ಲವೇ? ಗುರುತ್ವದ ಬಗೆಗೆ ಮಾತನಾಡುವಾಗ ನಾವು ಗ್ರ್ಯಾವಿಟಾನ್ ಎಂಬ ಕಣಗಳನ್ನು ನೆನಪಿಸಿಕೊಳ್ಳಬೇಕು. ಈ ಕಣಗಳ ಅಸ್ತಿತ್ವವನ್ನು ಇದುವರೆಗೂ ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಎರಡು ವಸ್ತುಗಳ ನಡುವೆ ಆಕರ್ಷಣೆ ಇರಬೇಕಾದರೆ ಅವುಗಳ ನಡುವೆ ಏನಾದರೊಂದು ಸಂವಹನ ಇರಲೇ ಬೇಕಲ್ಲ? ಆ ರೀತಿಯ ಸಂವಹನ ಗ್ರ್ಯಾವಿಟಾನ್ ಕಣಗಳ ಮೂಲಕ ನಡೆಯುತ್ತದೆ ಎಂಬುದೊಂದು ಊಹೆ. ಆದರೆ ನಾವು ಇದುವರೆಗೂ ಸುಮಾರು ಇನ್ನೂರಕ್ಕೂ ಹೆಚ್ಚು ಪರಮಾಣು ಉಪಕಣಗಳನ್ನು ಕಂಡುಹಿಡಿಯಲಾಗಿದ್ದರೂ ಗ್ರ್ಯಾವಿಟಾನ್ ಗಳನ್ನು ಮಾತ್ರ ಇದುವರೆಗೆ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಆ ಕಣಗಳು ಶೂನ್ಯ ದ್ರವ್ಯರಾಶಿಯ ಕಣಗಳಿರಬಹುದೆಂಬ ಊಹೆಯಿದೆ. ನಾವು ಎಂದಾದರೂ ಈ ಕಣಗಳನ್ನು ಕಂಡುಹಿಡಿಯಬಲ್ಲೆವೇ ಎಂಬ ಪ್ರಶ್ನೆಗೆ ಸದ್ಯಕ್ಕಂತೂ ಇಲ್ಲ ಎಂಬ ಉತ್ತರವೇ ಸರಿ. ಏಕೆಂದರೆ ಗುರುಗ್ರಹದಷ್ಟು ದೊಡ್ಡದಾದ ಸಾಧನವೊಂದನ್ನು ತಯಾರಿಸಿ ಬೃಹತ್ ನಕ್ಷತ್ರವೊಂದರ ಬಳಿ ಅದನ್ನು ಇರಿಸಿದರೂ ಅದು ಒಂದು ಗ್ರ್ಯಾವಿಟಾನ್ ಅನ್ನು ಪತ್ತೆಹಚ್ಚುವ ಸಾಧ್ಯತೆ ಹತ್ತು ವರ್ಷಗಳಲ್ಲಿ ಒಂದು ಮಾತ್ರ ಎಂಬುದು ಒಂದು ಲೆಕ್ಕಾಚಾರ. ಹಾಗಾಗಿ ಗ್ರ್ಯಾವಿಟಾನ್ ಗಳು ನಿಜಕ್ಕೂ ಇವೆಯೇ ಅಥವಾ ನಮ್ಮ ಕಲ್ಪನೆಯೇ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಸದ್ಯಕ್ಕೆ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತದ ಪ್ರಕಾರ ನೋಡಿದರೆ ಇಂಥ ಕಣವೊಂದು ಇರುವ ಸಾಧ್ಯತೆ ತೀರಾ ಕಡಿಮೆ. ನಮ್ಮ ಕಣ್ಣಿಗೆ ಕಾಣುವುದಷ್ಟೇ ವಿಶ್ವವೇ? ಗುರುತ್ವದ ಪರಿಕಲ್ಪನೆಯ ನೆರವಿನಿಂದ ಇನ್ನೊಂದು ಆಶ್ಚರ್ಯಕರ ವಿಷಯವನ್ನು ಸಹ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಡಾರ್ಕ್ ಮ್ಯಾಟರ್ ಮತ್ತು ಡಾರ್ಕ್ ಎನರ್ಜಿ (ಕನ್ನಡದಲ್ಲಿ ಇದನ್ನು ಕೃಷ್ಣದ್ರವ್ಯ ಮತ್ತು ಕೃಷ್ಣಶಕ್ತಿ ಎಂದು ಅನುವಾದಿಸಬಹುದು) ಎಂಬ ಅಗೋಚರ ದ್ರವ್ಯರಾಶಿ ಇಡೀ ವಿಶ್ವದಲ್ಲಿ ಹೇರಳವಾಗಿ ಹರಡಿದೆ ಎಂಬುದು ಇಂದು ತಿಳಿದುಬಂದಿದೆ. ಇದಕ್ಕೆ ಡಾರ್ಕ್ ಎಂಬ ಹೆಸರು ಏಕೆ ಬಂತೆಂದರೆ ಇದನ್ನು ಯಾರೂ ಕಾಣಲಾರರು. ಇದು ಯಾವುದೇ ರೀತಿಯ ಬೆಳಕನ್ನೂ ಹೊಮ್ಮಿಸದಿರುವುದರಿಂದ ಇದನ್ನು ನಮ್ಮ ಯಾವುದೇ ಪ್ರಬಲ ದೂರದರ್ಶಕಗಳನ್ನು ಬಳಸಿ ಸಹ ಪತ್ತೆಮಾಡಲು ಸಾಧ್ಯವಾಗುವುದಿಲ್ಲ. ಹಾಗಾದರೆ ಇದರ ಅಸ್ತಿತ್ವದ ಬಗೆಗೆ ತಿಳಿದಿದ್ದು ಹೇಗೆ ಎಂಬ ಪ್ರಶ್ನೆ ಬರುತ್ತದೆ. ಅದಕ್ಕೆ ಕೃಷ್ಣರಂಧ್ರಗಳನ್ನು ಪತ್ತೆ ಮಾಡಿದಂತೆಯೇ ಪರೋಕ್ಷ ವಿಧಾನಗಳಿವೆ. ಇದರ ಬಗೆಗೆ ಮೊದಲಿಗೆ ಗಮನಸೆಳೆದವನು ಜಾನ್ ಊರ್ಟ್. 1932ರಲ್ಲಿ ಅವನು ಕೆಲವು ಗ್ಯಾಲಕ್ಸಿಗಳ ಬಗೆಗೆ ಅಧ್ಯಯನ ಮಾಡುತ್ತಿದ್ದಾಗ ಅವುಗಳು ಸಮೀಪದ ಇತರೆ ಗ್ಯಾಲಕ್ಸಿಗಳ ಮೇಲೆ ಬೀರುತ್ತಿದ್ದ ಗುರುತ್ವ ಪ್ರಭಾವವನ್ನು ಅಳೆದಾಗ ಅವುಗಳ ದ್ರವ್ಯರಾಶಿ ನಮಗೆ ಗೋಚರವಾಗುವ ದ್ರವ್ಯಕ್ಕಿಂತ ಹೆಚ್ಚಿರಬೇಕೆಂದು ತಿಳಿದುಬಂದಿತು. ಆದರೆ ಅವನ ಲೆಕ್ಕಾಚಾರದಲ್ಲಿ ದೋಷಗಳಿದ್ದುದು ಆಮೇಲೆ ಬೆಳಕಿಗೆ ಬಂದಿತು. ಆ ದೋಷಗಳೇನೇ ಇದ್ದರೂ ಅವನು ಕೃಷ್ಣದ್ರವ್ಯದ ಬಗೆಗೆ ಮೊದಲಬಾರಿಗೆ ಜಗತ್ತಿನ ಗಮನಸೆಳೆಯುವಲ್ಲಿ ಯಶಸ್ವಿಯಾದ ಎನ್ನುವುದಂತೂ ನಿಜ. ನಂತರ ಮರುವರ್ಷವೇ ಕ್ಯಾಲಿಫೋರ್ನಿಯಾ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಇನ್ನೊಬ್ಬ ವಿಜ್ಞಾನಿ ಫ್ರಿಜ್ ವಿಕಿ ಕೆಲವು ಗ್ಯಾಲಕ್ಸಿ ಮತ್ತು ಗ್ಯಾಲಕ್ಸಿಯ ಗುಚ್ಛಗಳನ್ನು ಗಮನಿಸುತ್ತ ಗುಚ್ಛದ ಅಂಚಿನಲ್ಲಿರುವ ಗ್ಯಾಲಕ್ಸಿಗಳ ಚಲನೆಯನ್ನು ಗಮನಿಸಿದ. ಜೊತೆಗೆ ಅವುಗಳ ಪ್ರಕಾಶದ ಆಧಾರದ ಮೇಲೆ ಅವುಗಳ ದ್ರವ್ಯರಾಶಿಯನ್ನು ಅಳೆದ. ವಾಸ್ತವವಾಗಿ ಅವುಗಳ ಚಲನೆಯ ವೇಗದ ಜೊತೆಗೆ ಅವುಗಳ ದ್ರವ್ಯರಾಶಿಯನ್ನು ಹೋಲಿಸಿದಾಗ ಅಜಗಜಾಂತರ ವ್ಯತ್ಯಾಸ ಕಂಡುಬಂದಿತು. ಆ ಚಲನೆಯ ವೇಗ ಸಾಧ್ಯವಾಗಬೇಕಾದರೆ ನಾವು ಕಾಣಬಹುದಾದ್ದಕ್ಕಿಂತ ನಾಲ್ಕುನೂರು ಪಟ್ಟು ಹೆಚ್ಚಿನ ದ್ರವ್ಯರಾಶಿ ಇರುವುದು ಅಗತ್ಯ ಎಂದು ಅಂದಾಜಿಸಿದ. ಹೀಗೆ ಗುರುತ್ವ ಮತ್ತು ದ್ರವ್ಯರಾಶಿಯ ನಡುವಿನ ಈ ವ್ಯತ್ಯಾಸವೇ ಕೃಷ್ಣದ್ರವ್ಯದ ಆವಿಷ್ಕಾರಕ್ಕೆ ಮೂಲವಾಯಿತು. ಅವನ ಲೆಕ್ಕಾಚಾರವೂ ಸಂಪೂರ್ಣ ಸರಿಯಾಗಿಲ್ಲದಿದ್ದರೂ ಕೃಷ್ಣದ್ರವ್ಯದ ಬಗೆಗೆ ಅನೇಕ ಮಹತ್ವದ ಸುಳಿವುಗಳನ್ನು ಆತ ನೀಡಿದ್ದ. ಅವನು ಹೇಳಿದಷ್ಟು ಪ್ರಮಾಣದಲ್ಲಿ ಅಲ್ಲವಾದರೂ ಸಾಕಷ್ಟು ಪ್ರಮಾಣದಲ್ಲಿ ಕೃಷ್ಣದ್ರವ್ಯ ಇರುವುದು ನಿಜ ಎಂದು ಆಮೇಲೆ ದೃಢಪಟ್ಟಿತು. ಇವತ್ತು ನಮಗೆ ತಿಳಿದಿರುವಂತೆ ವಿಶ್ವದಲ್ಲಿ ಶೇಕಡಾ 68.3ರಷ್ಟು ಕೃಷ್ಣಶಕ್ತಿ (ಡಾರ್ಕ್ ಎನರ್ಜಿ) ಮತ್ತು ಶೇಕಡಾ 26.8ರಷ್ಟು ಕೃಷ್ಣದ್ರವ್ಯ (ಡಾರ್ಕ್ ಮ್ಯಾಟರ್) ಇದೆ. ಅಂದರೆ ಈ ವಿಶ್ವದಲ್ಲಿ ಶೇಕಡಾ 95.1ರಷ್ಟು ಅಗೋಚರ ದ್ರವ್ಯ ಮತ್ತು ಅಗೋಚರ ಶಕ್ತಿಯೇ ಇದೆ. ನಮಗೆ ದೃಗ್ಗೋಚರವಾದ ವಿಶ್ವ ಕೇವಲ ಶೇಕಡಾ ಐದಕ್ಕಿಂತ ಕಡಿಮೆ! ದೃಗ್ಗೋಚರವಾದ ವಿಶ್ವವೇ ಇಷ್ಟೊಂದು ಅಗಾಧವಾಗಿರುವಾಗ ಇನ್ನು ದೃಗ್ಗೋಚರವಲ್ಲದ ದ್ರವ್ಯವೂ ಸೇರಿದರೆ ಈ ವಿಶ್ವದ ಅಗಾಧತೆ ಎಷ್ಟಾಗಬಹದು? ಊಹಿಸಿಕೊಳ್ಳಲೂ ಅಸಾಧ್ಯ, ಅಲ್ಲವೇ? ಗುರುತ್ವ ಮಸೂರ ಗುರುತ್ವದ ಪರಿಣಾಮಗಳ ಪೈಕಿ ಅತ್ಯಂತ ಆಸಕ್ತಿದಾಯಕವಾದ ಇನ್ನೊಂದು ಪರಿಣಾಮವೆಂದರೆ ಗುರುತ್ವ ಮಸೂರ ಅಥವಾ ಗ್ರ್ಯಾವಿಟೇಶನ್ ಲೆನ್ಸ್. ಗಾಜಿನ ಮಸೂರ ನಮಗೆಲ್ಲರಿಗೂ ಗೊತ್ತೇ ಇದೆ. ಪೀನಮಸೂರ ಮತ್ತು ನಿಮ್ನಮಸೂರ ಎಂಬ ಎರಡು ವಿಧದ ಮಸೂರಗಳು ಮತ್ತು ಅವುಗಳ ಉಪಯೋಗಗಳ ಬಗೆಗೆ ಪ್ರತಿಯೊಬ್ಬರೂ ತಿಳಿದಿರುತ್ತಾರೆ. ದೂರದರ್ಶಕ ಮತ್ತು ಸೂಕ್ಷ್ಮದರ್ಶಕಗಳ ತಯಾರಿಕೆಯಲ್ಲಿ ಮಸೂರಗಳು ಅತ್ಯಗತ್ಯ. ಅದೇ ರೀತಿ ಆಕಾಶದಲ್ಲಿ ಸ್ವಾಭಾವಿಕವಾಗಿ ಗುರುತ್ವ ಮಸೂರಗಳು ಉಂಟಾಗುತ್ತವೆ. ಕೃಷ್ಣರಂಧ್ರಗಳ ಬಳಿ ಇಂಥ ಪರಿಣಾಮ ಕಂಡುಬರುತ್ತದೆ. ಜೊತೆಗೆ ಅಗಾಧ ದ್ರವ್ಯರಾಶಿಯ ನಕ್ಷತ್ರಗಳ ಬಳಿಯೂ ಇಂಥದೇ ಪರಿಣಾಮವನ್ನು ಕಾಣಬಹುದು. ಈ ಪರಿಣಾಮದಿಂದ ಅವುಗಳ ಹಿಂದಿನಿಂದ ಬರುವ ಬೆಳಕು ಮಸೂರದ ಮೂಲಕ ಸಾಗುವ ಬೆಳಕಿನಂತೆಯೇ ಬಾಗುತ್ತದೆ. ಆಕಾಶ ಆ ಕಾಯಗಳ ಗುರುತ್ವದಿಂದಾಗಿ ಹೇಗೆ ಬಾಗಿದೆಯೋ ಬೆಳಕು ಸಹ ಹಾಗೆಯೇ ಬಾಗುತ್ತದೆ. ಇಂಥ ಅನೇಕ ಗುರುತ್ವ ಮಸೂರಗಳನ್ನು ಪ್ರತಿಯೊಂದು ಗ್ಯಾಲಕ್ಸಿಯ ಕೇಂದ್ರದಲ್ಲೂ ಕಂಡುಹಿಡಿಯಲಾಗಿದೆ. ಹೀಗೆ ಗುರುತ್ವದ ಬಗೆಗೆ ಬರೆಯುತ್ತ ಹೋದರೆ ಅದನ್ನು ಬರೆದು ಮುಗಿಸಲು ಒಂದಿಡೀ ಪುಸ್ತಕವೂ ಸಾಲುವುದಿಲ್ಲ. ವಿಶ್ವದ ಉಗಮದಿಂದ ಅಂತ್ಯದವರಗೆ ಪ್ರತಿಯೊಂದು ಆಗುಹೋಗುಗಳನ್ನೂ ನಿಯಂತ್ರಿಸುವ ಈ ಗುರುತ್ವ ಬಲವೇ ವಿಶ್ವದ ಭವಿಷ್ಯವನ್ನೂ ನಿರ್ಧರಿಸಲಿದೆ. ವಿಶ್ವವು ಹೀಗೆ ಅನಂತಕಾಲದವರೆಗೂ ವಿಸ್ತರಿಸುತ್ತಲೇ ಹೋಗುತ್ತದೆಯೇ? ಅಥವಾ ಗುರುತ್ವಾಕರ್ಷಣೆಯ ಕೈ ಮೇಲಾಗಿ ಮುಂದೊಂದು ದಿನ ಈ ವಿಸ್ತರಣೆ ನಿಂತು, ವಿಶ್ವ ಕುಸಿಯತೊಡಗುತ್ತದೆಯೇ? ಕೊನೆಗೊಮ್ಮೆ ಆದಿಯಲ್ಲಿ ಇದ್ದಂತೆ ಅನಂತ ಸಾಂದ್ರತೆ ಮತ್ತು ಅನಂತ ಉಷ್ಣತೆಯ ಬಿಂದುವಿಗೆ ಕುಸಿಯಲಿದೆಯೇ? ಈ ಪ್ರಶ್ನೆಗಳಿಗೆ ಕರಾರುವಾಕ್ಕಾದ ಉತ್ತರ ನಮಗಿನ್ನೂ ಸಿಕ್ಕಿಲ್ಲ. ಸಿಕ್ಕಿದರೂ ಅದು ನಿಜವೇ ಅಲ್ಲವೇ ಎಂದು ಪರೀಕ್ಷಿಸಿ ನೋಡಲು ನಾವ್ಯಾರೂ ಬದುಕಿರುವುದಿಲ್ಲ. ಸದ್ಯಕ್ಕೆ ನಾವು ನಮ್ಮ ಸೀಮಿತ ಅರಿವಿಗೆ ಎಷ್ಟು ತಿಳಿಯುತ್ತದೋ ಅಷ್ಟನ್ನು ತಿಳಿದುಕೊಂಡು ಮಿಕ್ಕಿದ್ದನ್ನು ತಿಳಿಯಲು ಪ್ರಯತ್ನಿಸುತ್ತ ಇರಬೇಕು ಅಷ್ಟೆ. ಪ್ರಕೃತಿ ತನ್ನೆಲ್ಲ ರಹಸ್ಯಗಳನ್ನು ನಮಗೆ ಬಿಟ್ಟುಕೊಡಲಿಕ್ಕಿಲ್ಲ. ಆದರೆ ತಿಳಿದುಕೊಳ್ಳಲು ಪ್ರಯತ್ನಿಸುವುದರಲ್ಲಿ ಏನೂ ತಪ್ಪಿಲ್ಲ, ಅಲ್ಲವೇ?

Related Books