ಅನುಭವದಲ್ಲಿ ಘನೀಭವಿಸುವ ವಿಶ್ವದ ರಹಸ್ಯಮಯ ಸಂಗತಿಗಳು

Date: 30-08-2022

Location: ಬೆಂಗಳೂರು


“ಮುತ್ಯಾ ಮರಗಳನ್ನು ತೆಗೆಯುವಾಗ ಅದರ ಬುಡಕ್ಕೆ ಹಾಲನ್ನು ಹಾಕಿ ಮಣ್ಣನ್ನು ಹಣೆಗೆ ಹಚ್ಚಿದ್ದಳು. ಕೊನೆಯದಾಗಿ ಕಂದನ ಕೆನ್ನೆಯನ್ನು ಸವರುವಷ್ಟೇ ಮೃದುವಾಗಿ ಆ ಮರಗಳನ್ನು ನೇವರಿಸಿದ್ದಳು. `ಆ ಮರಗಳನ್ನು ಯಾರಿಗಾದರೂ ಕೊಟ್ಟುಬಿಡು, ಈ ಮನೆಯಲ್ಲಿ ಉರಿಯುವುದು ಬೇಡ’ ಎಂದು ತಾತನಿಗೆ ಖಡಾ ಖಂಡಿತವಾಗಿ ಹೇಳಿಬಿಟ್ಟಿದ್ದಳು” ಎಂದು ನೆನಪು ಬಿಡಿಸಿಡುತ್ತಾರೆ ಲೇಖಕಿ ಪಿ.ಚಂದ್ರಿಕಾ. ಅವರು ತಮ್ಮ ತೇಲುವ ಪಾದಗಳು ಅಂಕಣದಲ್ಲಿ ಜೀವ ಕಳೆದುಕೊಂಡಿದ್ದ ತನ್ನ ಮಕ್ಕಳನ್ನು ಹೂತ ಜಾಗದಲ್ಲಿ ಬೆಳೆದ ಮರಗಳು ಬಿದ್ದಾಗಿನ ಮುತ್ಯಾನ ಭಾವನೆಗಳನ್ನು ಚಿತ್ರಿಸಿದ್ದಾರೆ.

ಅಂದಿನಿಂದ ನನಗೆ ಮೂರನೆ ಕಣ್ಣೊಂದು ಇದೆ ಎನ್ನುವಂತೆ ಭಾಸವಾಗತೊಡಗಿತ್ತು. ಜಗತ್ತಿನ ಕಣ್ಣಿಗೆ ಕಾಣದ ಯಾವುದೋ ನನಗೆ ಗೋಚರಿಸುತ್ತಿತ್ತು. `ಅಲ್ಲಿದೆ’ ಎಂದು ಯಾರಾದರೂ ಹೇಳಿದರೆ ನನಗೆ ಅದು ಅಲ್ಲಿ ಕಾಣುತ್ತಿರಲಿಲ್ಲ. `ಅಲ್ಲಿಲ್ಲ’ ಎಂದರೂ ನನಗೆ ಕಾಣುತ್ತಿದ್ದುದನ್ನು ವಿವರಿಸಲಾಗುತ್ತಿರಲಿಲ್ಲ. ನಾನು ಮುತ್ಯಾಳಿಗೆ ಇದೆಲ್ಲಾ ಏಕೆಂದು ಕೇಳಿದ್ದೆ. ಮುತ್ಯಾ `ಯಾರು ಅವರ ಹಣೆಯಲ್ಲಿ ಏನನ್ನು ಬರೆದುಕೊಂಡು ಬಂದಿರುತ್ತಾರೋ ಅದೇ ಸಿಗುವುದು ನೋಡುವ ಕಣ್ಣಿರದಿದ್ದರೂ ಎದುರಿಗಿರುವುದೂ ಕತ್ತಲೆ ಮಾತ್ರವೇ’ ಎಂದಿದ್ದಳು. ನಮ್ಮ ಸಂಭಾಷಣೆಯನ್ನು ಕೇಳಿದ ಪದ್ದಿ ಚಿಕ್ಕಿ ತನಗೆ ಇಂತಲ್ಲೆಲ್ಲಾ ದೆವ್ವ ಕಂಡಿತು ಎಂದು ತೋರಿಸುತ್ತಿದ್ದಳು. ನನಗೆ ಅಲ್ಲಿ ಏನೂ ಕಾಣಲಿಲ್ಲ. ನಾನು ಏನೂ ಕಾಣುತ್ತಿಲ್ಲ ಎಂದೆ. ನೋಡು ನೋಡು ಅಲ್ಲಿ ಬಾಗಿದ ಬೆನ್ನಿನ ಮುದುಕಿಯೊಬ್ಬಳು ಕೂತಿದ್ದಾಳೆ ಎನ್ನುವಳು ನಾನು ಇಲ್ಲ ಎಂದು ಅವಳಿಗೆ ವಿವರಿಸಿದರೂ ಅವಳ ಕಣ್ಣಿನಲ್ಲಿನ ಭಯ ಹೋಗಲಿಲ್ಲ. ಬದಲಿಗೆ ನನಗೆ ಭಯ ಅಂಟಿಸಲಿಕ್ಕೆ ನೋಡಿದಳು. ಯಾರೋ ಎಲ್ಲೋ ಸತ್ತರೆ ಸ್ನಾನ ಮಾಡಲಿಕ್ಕೂ ಅವಳಿಗೆ ಕಾವಲಿಗೆ ಅಮ್ಮಮ್ಮ ಇರಬೇಕಿತ್ತು. ಮುತ್ಯಾ ಅವಳನ್ನು ಕೂಡಿಸಿಕೊಂಡು ಭಯ ಪಡಬೇಡ ಪಂಚಭೂತಗಳಿಂದಾದ ದೇಹ ಪಂಚಭೂತಗಳಲ್ಲೇ ಲೀನವಾಗುತ್ತದೆ. ಉಸಿರು ವಾಯುಲೀನವಾದ ಮೇಲೆ ಅದು ಅದರಲ್ಲಿ ಒಂದೇ ಹೊರತು ಮತ್ತೆ ಪ್ರತ್ಯೇಕ ಮಾಡಲಿಕ್ಕಾಗುವುದಿಲ್ಲ ಎಂದು ಹೇಳಿದರೂ ಅವಳು ಕೇಳುತ್ತಿರಲಿಲ್ಲ. ಮಾನಸಿಕವಾಗಿ ಅವಳಿಗೆ ತುಂಬಾ ಸಮಸ್ಯೆಗಳಿದ್ದವು ಎನ್ನಿಸುತ್ತೆ. ಅದು ಆಗ ಗೊತ್ತಾಗುತ್ತಿರಲಿಲ್ಲವಲ್ಲ.

`ಗಾಳಿಯಲ್ಲಿ ಗಾಳಿಯಾಗಿ ಲೀನವಾದ ಮೇಲೆ ದೇವರ ಹತ್ತಿರ ಹೋಗುವುದಾದರೂ ಹೇಗೆ?’ ನನ್ನ ಪ್ರಶ್ನೆಗೆ ಮುತ್ಯಾ ನಕ್ಕಿದ್ದಳು, `ಸತ್ತ ಮನುಷ್ಯರೆಲ್ಲಾ ದೆವ್ವಗಳಾಗುತ್ತವೆ ಎಂದರೆ, ಮನುಷ್ಯನಿಗೆ ಭೂಮಿಯ ಮೇಲೆ ಇರಲಿಕ್ಕೆ ಜಾಗವೇ ಇರುತ್ತಿರಲಿಲ್ಲ. ಅಥವಾ ಮನುಷ್ಯ ಸಂಖ್ಯೆಗಿಂತ ಅವುಗಳ ಸಂಖ್ಯೆಯೇ ಹೆಚ್ಚಾಗಿರುತ್ತಿದ್ದವು. ನೀನು ಮನುಷ್ಯ ಸತ್ತು ದೆವ್ವವಾಗುವುದರ ಬಗ್ಗೆ ಮಾತಾಡುತ್ತೀಯ ಒಂದು ಇರುವೆ ಸತ್ತರೆ, ಒಂದು ಹಸು ಅಥವಾ ಸಿಂಹ ಹುಲಿ ಸತ್ತರೆ ಅವು ದೆವ್ವಗಳಾಗುವುದಿಲ್ಲವಾ?’ ಎಂದಳು ನನ್ನ ಹತ್ತಿರ ಉತ್ತರವಿರಲಿಲ್ಲ.

ತಾತನಿಗೆ ದೊಡ್ಡ ಸಮಸ್ಯೆ ಕಾಡುತ್ತಿತ್ತು. ಆಯುಷ್ಯ ಮುಗಿದ ಮನೆಯಲ್ಲಿ ದುಷ್ಟ ಶಕ್ತಿಗಳು ಸಂಚರಿಸುತ್ತಿರುವುದರಿಂದ ಮನೆ ಕಟ್ಟಿದ ನಂತರ ಪೂಜೆ ಮಾಡಿಸಿಬಿಡುವುದಾಗಿ ನಿರ್ಧಾರ ಮಾಡಿದ್ದ. ಬಾಳಿ ಬದುಕಿದ ಮನೆ ನಮ್ಮ ಏಳು ಬೀಳುಗಳಿಗೆ ಕಾರಣವಾಗುತ್ತೆ ಎಂದರೆ ಅದನ್ನು ನಂಬಲಿಕ್ಕೆ ಮುತ್ಯಾ ತಯಾರಿರಲಿಲ್ಲ. ಮನೆಗಿರುವ ಜೀವ, ಜೀವನ ಎರಡನ್ನೂ ಒಪ್ಪಿಕೊಳ್ಳಬೇಕು ಎಂದು ರಾಮುಡೂವಿನ ಹತ್ತಿರ ಹೇಳುತ್ತಿದ್ದಳು.

ಮನೆಯನ್ನು ಸಣ್ಣದಾಗಿ ವಿಸ್ತಾರಮಾಡಿದ ಮೇಲೆ ದೇವೀ ಭಾಗವತ ಪಾರಣೆ ನಡೆಸಿ ಮನೆಗೆ ಶಾಂತಿಯನ್ನು ಮಾಡಿದ್ದರು. ರಾಕ್ಷಸರನ್ನು ದೇವಿ ಸಂಹಾರ ಮಾಡಿದ ಹಾಗೆ ಅಗೋಚರವಾಗಿ ಕಾಡುವ ದುಷ್ಟ ಶಕ್ತಿಗಳನ್ನು ದೇವಿ ಸಂಹಾರ ಮಾಡಲಿ ಎನ್ನುವ ಆಶಯವದಾಗಿತ್ತು. ನಾನೂ ನಿಷ್ಠೆಯಿಂದ ಆ ಕಥೆಗಳನ್ನು ಕೇಳಿಸಿಕೊಂಡಿದ್ದೆ. `ಹುಟ್ಟಿಸುವವಳೂ, ಕೊಲ್ಲುವವಳೂ ಅವಳೇ ಆದರೆ ಅಂಥಾ ಕೆಡುಕುಗಳನ್ನು ಹುಟ್ಟಿಸುವುದಾದರೂ ಯಾಕೆ?’. ಅಮ್ಮಮ್ಮ, `ಎಷ್ಟು ಪ್ರಶ್ನೆಗಳು’ ನಿನ್ನದು ಎಂದಳು. `ಈ ಮನೆಯಲ್ಲಿ ಇನ್ನು ಯಾವ ದೆವ್ವಗಳೂ ಕಾಣಲ್ಲ’ ಎಂದಳು ಚಿಕ್ಕಿ.

`ಮಗೂ ದೇವಿಯನ್ನು ಚಿಚ್ಚಕ್ತಿ ಅಂತ ಹೇಳುತ್ತಾರೆ. ಅವಳಿಗೆ ಹುಟ್ಟೂ ಇಲ್ಲ ಸಾವೂ ಇಲ್ಲ. ಬ್ರಹ್ಮಾಂಡ ಆಗುವ ಮೊದಲು ನಾದ ರೂಪದಲ್ಲಿದ್ದವಳು ಅವಳೇ. ನಿಶಾಂತವಾಗಿದ್ದ ಆ ನಾದರೂಪದಲ್ಲಿ ಸಣ್ಣ ಕದಲಿಕೆಯಿಂದ ಹುಟ್ಟಿದ್ದು ಅವೇ ಈ ಒಳಿತು ಕೆಡುಕು. ಎರಡು ದೈವ ಸೃಷ್ಟಿಗಳೇ. ಅವಳು ಒಂದು ತಕ್ಕಡಿಯನ್ನು ಮಾಡಿ ಒಳಿತು ಕೆಡುಕುಗಳನ್ನು ಇಟ್ಟು ತೂಗುತ್ತಾ, ತೂಗುತ್ತಾ, ಮಾನವ ಜೀವಕ್ಕಿರುವ ಸಂಸ್ಕಾರವನ್ನು ಮತ್ತಷ್ಟು ಒರೆಗೆ ಹಚ್ಚುತ್ತಾಳೆ. ದೇವಿ ಕೊಂದಳು ಎಂದರೆ ಅಂಥಾ ಕೆಡುಕನ್ನು ಮಾಡಬೇಡ ಎಂದು ಮತ್ತೆ ಮತ್ತೆ ಕೊಂದಳು ಎಂದರೆ ನೀನು ಕೆಡುಕನ್ನು ಮಾಡಿದರೆ ನಿನ್ನನ್ನೂ ಕೊಲ್ಲುತ್ತಾಳೆ ಎನ್ನುವುದು ಅರ್ಥ. ಕೊಲ್ಲುವುದು ಕೆಡುಕನ್ನಲ್ಲ ಕೆಟ್ಟ ವ್ಯಕ್ತಿಗಳನ್ನು ಮಾತ್ರ. ಹಾಗೆ ನೋಡಿದರೆ ಕೆಡುಕೂ ಕೂಡಾ ಒಳ್ಳೆಯದೇ, ಮನುಷ್ಯ ಜೀವವನ್ನು ಮತ್ತಷ್ಟು ಸ್ವಚ್ಚಮಾಡುತ್ತದೆ. ಅದಿರುವುದರಿಂದಲೇ ಒಳಿತಿನ ಬಗ್ಗೆ ದೊಡ್ದ ಎಚ್ಚರಿಕೆ ನಮಗಿರುತ್ತದೆ’ ಎಂದಳು. `ಹಾಗಾದರೆ ಕೆಟ್ಟದ್ದು ಈ ಜಗತ್ತಿನಿಂದ ಹೋಗುವುದೇ ಇಲ್ಲವಾ?’ ಎಂದೆ ಚಿಂತೆಯಿಂದ. ನನಗೆ ಒಳಿತು ಮಾತ್ರ ಜಗತ್ತಿನಲ್ಲಿದ್ದರೆ ಸರ್ವ ಜೀವಕ್ಕೂ ಕ್ಷೇಮ ಎನ್ನುವ ಯೋಚನೆ. `ಭೂಮಿ ಆಗಿರುವುದೇ ಹೀಗೆ ಅದರ್ಧ ಇದರ್ಧ. ಕತ್ತಲೆ ಬೆಳಕು ಇದ್ದ ಹಾಗೆ. ಒಂದಿಲ್ಲದೆ ಇನ್ನೊಂದಿಲ್ಲ ಇನ್ನೊಂದಿಲ್ಲದೆ ಮತ್ತೊಂದಕ್ಕೆ ಮಹತ್ವವಿಲ್ಲ’ ಎಂದಿದ್ದಳು ಮುತ್ಯಾ.

ಮುತ್ಯಾಳ ಮಾತುಗಳು ನನ್ನ ತಲೆಯಲ್ಲಿ ಗುಯ್ಗುಡುತ್ತಲೆ ಇತ್ತು. `ಮತ್ತೆಈ ಅವಿನಾಶಿಯಾದ ಕೆಡುಕು ನನ್ನನ್ನು ಏನೂ ಮಾಡುವುದಿಲ್ಲವಾ?’ ಎಂದೆ ಕಳವಳದಿಂದ. `ಮಾಡುತ್ತದೆ ನೀನು ಅದರ ಹತ್ತಿರ ಹೋದಾಗ. ದೂರವಿಡು. ನಿನ್ನ ನೋಡಿ ಅದು ಸುಮ್ಮನೆ ಹೋಗಲೂ ಬಹುದು. ಕೆಲವೊಮ್ಮೆ ನಿನ್ನನ್ನೆ ಹುಡುಕಿಯೂ ಹತ್ತಿರ ಬರಬಹುದು’ ಎಂದಳು. `ಮುತ್ಯಾ ನೀನು ಹೇಳುವುದನ್ನು ನಾನು ಹೇಗೆ ಅರ್ಥ ಮಾಡಿಕೊಳ್ಳಲಿ?’ `ಅರ್ಥ ಮಾಡಿಕೊಳ್ಳುವುದಲ್ಲ ಮಗೂ ಆಗುವುದು. ನೋಡು ಹಾವಿನಲ್ಲಿ ವಿಷವಿದೆ. ಅದು ಒಳಗಿದ್ದಾಗ ಯಾವ ಅಪಾಯವೂ ಇಲ್ಲ. ಅದರ ಪಾಡಿಗೆ ಅದಿರುತ್ತದೆ. ಆದರೆ ಅದೇ ಅದು ಕಚ್ಚಿದವರಿಗೆ ಮಾತ್ರ ವಿಷವೇರುತ್ತದೆ. ಅದು ಪ್ರಕೃತಿ ಧರ್ಮ ಇದನ್ನು ಮನುಷ್ಯನಿಗೂ ಅನ್ವಯಿಸಿ ನೋಡು’ ಎಂದಳು. `ಮುತ್ಯಾ ನಾವ್ಯಾಕೆ ಎಲ್ಲರೂ ಒಳಿತಿನ ಕಡೆಗೇ ಹೋಗಬಾರದು?’ ಎಂದೆ. `ಅದು ನಮಗೇ ಗೊತ್ತಿಲ್ಲ. ಯಾವ ನಿಯಾಮಕ ಶಕ್ತಿಯು ಪ್ರೇರೇಪಣೆಯೋ ಯಾಕೆ ನಾವು ಹೀಗೆಲ್ಲಾ ಆಡುತ್ತೇವೋ ತಿಳಿಯದು. ಆದರೆ ನಮ್ಮ ತಿಳುವಳಿಕೆ ಮಾತ್ರ ತನ್ನ ದಾರಿಗಳ ಹುಡುಕಾಟದಲ್ಲೇ ಇರುತ್ತದೆ’ ಎಂದಳು ಮುತ್ಯಾ.

ಸಾಯಂಕಾಲವಾಗುತ್ತಾ ಬಂದು ಮನೆಯಲ್ಲಿ ಹೋಮ ಹವನ ಎಲ್ಲಾ ಶುರುವಾಗಿತ್ತು. ಗೋಧೂಳಿ ಲಗ್ನ ಮತ್ತು ಉಷಾ ಕಾಲ ತುಂಬಾ ಶ್ರೇಷ್ಠ ಎನ್ನುವ ಕಲ್ಪನೆ ಇದೆ. ಅದು ಸಂಧಿಕಾಲ ಒಳಿತು ಕೆಡುಕೂ ಎರಡು ತಟ್ತಸ್ಥ ಆಗಿರುತ್ತದೆ ಅಲ್ಲಿ. ಆಗ ನಾವು ಯಾವುದನ್ನು ಪ್ರಾರ್ಥಿಸುತ್ತೇವೋ ಅದು ಎಚ್ಚೆತ್ತುಕೊಳ್ಳುತ್ತದೆ ಎನ್ನುತ್ತಾರೆ. ಮುತ್ಯಾ ಮಾತ್ರ ಪ್ರತಿ ಕ್ಷಣವೂ ಸಂಧಿಕಾಲವೆ ಎಂದಿದ್ದಳು.

ನಿಜ ಅರಿತುಕೊಂಡರೆ ಎಲ್ಲವೂ ಸರಳ. ಇನ್ನೊಬ್ಬರಿಗೆ ಗಾಯ ಮಾಡುವುದರಲ್ಲಿ ಯಾವ ಸಂತೋಷವೂ ಇಲ್ಲ. ಹದ್ದು ಕುಕ್ಕಿದ ಗಿಳಿಯ ಮರಿಗೆ ಮುತ್ಯಾ ಚೂರು ಚೂರೇ ನೀರು ಕುಡಿಸಿದ್ದಳು. ಅದು ಹುಷಾರಾದಾಗ ಸಮಾಧಾನಿಯಾಗಿದ್ದಳು, ಅದು ಹಾರಿದಾಗ ಸಂತೋಷದಿಂದ ಚಪ್ಪಾಳೆ ತಟ್ಟಿದ್ದಳು. ಅವಳು ನನಗೆ ಪ್ರಕೃತಿಯ ಹಾಗೆ ಕಂಡಳು- ಸಹಜವಾಗಿ, ಸುಂದರವಾಗಿ.

ಒಪ್ಪವಾದ ಮಣ್ಣಿನ ಮನೆಯಲ್ಲಿ ಒಂದು ಕಡೆ ಅಡುಗೆ ಮತ್ತೊಂದು ಕಡೆಗೆ ಮಲಗಲಿಕ್ಕೆ ಒಂದು ಕೋಣೆ. ಅದರಲ್ಲಿ ಒಂದು ಹಗ್ಗದ ಮಂಚ. ಬಸಿರು ಬಾಣಂತನಗಳಿಗೆ ಆಗುತ್ತೆ ಎನ್ನುತ್ತಿದ್ದಳು ಅಮ್ಮಮ್ಮ. ಬಾಣಂತಿಯಾಗಿದ್ದ ಚಿಕ್ಕಮ್ಮ ಸ್ನಾನ ಮಾಡಿ ಹಗ್ಗದ ಮಂಚದ ಮೇಲೆ ಮಲಗಿದರೆ ಕೆಳಗೆ ಮೈ ಕಾಯಿಸಲಿಕ್ಕೆ ಅಗ್ಗಷ್ಟಿಕೆ ಅದಕ್ಕೊಂದಿಷ್ಟು ಸಾಂಬ್ರಾಣಿ ಪುಡಿ ಮಾಡಿ ಹಾಕುತ್ತಿದ್ದರು. ಚಿಕ್ಕಿಗೆ ಎದೆಹಾಲು ಜಾಸ್ತಿಯಾಗಿ ಒಳಗೇ ಗಟ್ಟಿಯಾಗಿ, ನೋವು ತಾಳದೆ ಹೋದಾಗ, ಮುತ್ಯಾ ಅವಳನ್ನು ಬಾರಲು ಮಲಗಿಸಿ ಬೆನ್ನನ್ನು ಒತ್ತುತ್ತಾ ಹಾಲನ್ನು ತೆಗೆದಿದ್ದಳು. ಕೆಲದಿನ ನಿತ್ಯ ಅದವಳ ಕಾಯಕವಾಗಿತ್ತು. ಸೋರಿ ಹೋದ ಹಾಲು ಚಿಕ್ಕಿಯ ಎದೆಯ ಭಾರವನ್ನು ಕಡಿಮೆ ಮಾಡುತ್ತಿತ್ತು. ಒಮ್ಮೆಮ್ಮೆ ಹಾಯಾಗಿರುತ್ತೆ ಅಂತ ಚಿಕ್ಕಿ ಸುಮ್ಮನೆಯಾದರೂ ಹಾಗೆ ಮಾಡಿಸಿಕೊಳ್ಳುತ್ತಿದ್ದಳು.

ಇಷ್ಟೆಲ್ಲಾ ಆದ ಮೇಲೆ ತಾತನೂ ಸಮಾಧಾನವಾಗೇ ಇದ್ದ. ಲಾಭ ನಷ್ಟಗಳ ದೊಡ್ಡ ಲೆಕ್ಕಾಚಾರಕ್ಕೆ ಬೀಳದೆ ಸಣ್ಣ ಪುಟ್ಟ ಪೂಜೆಗಳನ್ನು ಮಾಡಿಸುತ್ತಾ ಬಂದದ್ದರಲ್ಲಿ ಹೊಟ್ಟೆ ಬಟ್ಟೆಗೆ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದ. ಮೈಕೊಡವದ ಅಭೀಪ್ಸೆಗಳು ಒಳಗೇ ಇದ್ದು ಚುಟುಕು ಮುಳ್ಳಾಡಿಸುತ್ತವೆ. ಅವುಗಳನ್ನು ತೆಗೆಯಲಿಕ್ಕೆ ಸೂಜಿ, ಚಿಮ್ಮಟಗಳು ಎಷ್ಟು ಅನಿವಾರ್ಯ. ಈಗಲೂ ಒಮ್ಮೊಮ್ಮೆ ಅನ್ನಿಸುತ್ತೆ ಬಾಹ್ಯ ನೆರವುಗಳು ಅಂತರಾಳಕ್ಕೆ ತಲುಪಲಾರವು. ಸೂಜಿಗೂ ಚಿಮ್ಮಟಕ್ಕೂ ಸಿಗದ ಆ ತುದಿ ಮುರಿದ ಮುಳ್ಳು ಕೀವು ಕಟ್ಟಿಕೊಂಡು ಹೊರಬರಲಿಕ್ಕೆ ಧ್ಯಾನಿಸುತ್ತಾ ಇದೆಯೇನೋ ಎನ್ನುವಂತೆ ಎಷ್ಟು ಒತ್ತಿದರೂ ಬಾರದ ಅದು ಪಚಕ್ಕೆಂದು ಹೊರಗೆ ಕೀವು ರಕ್ತದ ಸಮೇತ ಚಿಮ್ಮಿ ಬರುತ್ತದೆ. ದೇಹ ಎಂಥಾ ಅದ್ಭುತ ಅಲ್ಲವಾ? ತನಗೆ ಬೇಡದ ಒಂದು ಸಣ್ಣ ಮುಳ್ಳನ್ನು ಕೂಡಾ ಒಳಗೆ ಇರಿಸಿಕೊಳ್ಳುವುದಿಲ್ಲ, ಬೇಕಾಗಿದ್ದನ್ನು ಹೇಗೆ ಬೇಕಾದರೂ ತೆಗೆದುಕೊಳ್ಳುತ್ತದೆ. ನಾವು ಮಾತ್ರ ಏನು ಬೇಕೋ ಏನು ಬೇಡವೋ ಎಲ್ಲವನ್ನೂ ಒಳಗೆ ಇರಿಸಿಕೊಳ್ಳುತ್ತೇವೆ. ನರಳುತ್ತಲೇ ಇರುತ್ತೇವೆ.

ಅಂದು ಜೋರು ಮಳೆ. ಮುತ್ಯಾ ನನ್ನನ್ನು ಪಕ್ಕದಲ್ಲಿ ಮಲಗಿಸಿಕೊಂಡು ಇದೆಲ್ಲವನ್ನೂ ಹೇಳುತ್ತಲೇ ಇದ್ದಳು. ಅವಳು ನನಗೆ ಹೇಳುತ್ತಿದ್ದಾಳೋ ಅಥವಾ ಅವಳಿಗೆ ಅವಳೇ ಹೇಳಿಕೊಳ್ಳುತ್ತಿದ್ದಾಳೋ ತಿಳಿಯಲಿಲ್ಲ. ಜಗತ್ತೆ ನೆನೆಯುತ್ತಿದ್ದ ಮಳೆಯ ಸದ್ದು ಮಾತ್ರ ಕಿವಿಗಪ್ಪಳಿಸಿ ಎದೆ ಝಲ್ಲೆನ್ನಿಸುತ್ತಿತ್ತು. ಮುತ್ಯ ಅದರ ಅನುಭವ ನನಗಾಗದಂತೆ ಹಣೆಯನ್ನು ಸವರುತ್ತಾ ಸವರುತ್ತಾ ನನ್ನ ಗಮನವನ್ನು ಬೇರೆಡೆಗೆ ತಿರುಗಿಸುತ್ತಿದ್ದಳು.

ಅವಳ ಸ್ಪರ್ಷದ ಮೃದುತ್ವಕ್ಕೆ ನನಗೆ ನಿದ್ದೆ ಆವರಿಸಿತು. ತೇಲುತ್ತಾ ತೇಲುತ್ತಾ ಮೋಡಗಳ ಜೊತೆ ಮೋಡವಾಗಿ ಆಡುತ್ತಿರುವ ಅನುಭವ. ಹಾರುವ ಹಕ್ಕಿಗಳ ಹಿಂಡೇ ಅಲ್ಲಿ ಬಂತು. ಅವು ರೆಕ್ಕೆ ಬಡೆಯುವ ಚಂದಕ್ಕೆ ನಾನೂ ರೆಕ್ಕೆ ಬಡೆಯುತ್ತಾ ಅವುಗಳ ಜೊತೆಗೆ ಹೋಗಲು ಪ್ರಯತ್ನಿಸುತ್ತಿದ್ದೆ. ಆ ಹಕ್ಕಿಗಳು ನನ್ನ `ಬಾ’ ಎಂದು ಕರೆಯುತ್ತಾ ಮುಂದೆ ಮುಂದಕ್ಕೆ ಹಾರುತ್ತಿದ್ದವು. ವ್ಯಾಕುಲವಿಲ್ಲದ ಗಾಳಿ. ಮನಕ್ಕೆ ಮುದ ನೀಡುವ ಹಾಗೆ ಬೀಸುತ್ತಾ ಹಿತವನ್ನನುಭವಿಸುವ ಹಾಗೆ ಮಾಡುತ್ತಿತ್ತು. ಬಳಿಗೆ ಬರುವುದಿಲ್ಲವೇನು ಎನ್ನುವಂತೆ ಕೆಳಗೆ ಮರಗಳು ತಮ್ಮ ಕೈ ಆಡಿಸುತ್ತಾ ಕರೆಯುತ್ತಿದ್ದವು. ನಾನು ಕೈಗಳನ್ನು ಗಾಳಿಯಲ್ಲಿ ಜೋಡಿಸಿ ಚಪ್ಪಾಳೆ ತಟ್ಟಲು ಯತ್ನಿಸಿದೆ ಭಾವಾವಿಷ್ಟಳಾಗಿ. ಕೈ ಒಂದಕ್ಕೊಂದು ತಾಕಿದರೂ ಸದ್ದು ಮಾತ್ರ ಬರಲೇ ಇಲ್ಲ. ಮತ್ತೆ ಮತ್ತೆ ಪ್ರಯತ್ನಿಸಿದೆ ನೀರೊಳಗಿನ ಸೆಳವಿನಂತೆ ಶಬ್ದ ಹುಟ್ಟದೆ ಕೈ ದಣಿಯತೊಡಗಿತು. ಕ್ಷಣ ಕಾಲ ನಾನು ಇರುವುದು ನೀರಲ್ಲಾ ಆಕಾಶದಲ್ಲಾ ಗೊತ್ತಾಗಲಿಲ್ಲ. ಯಾಕೆಂದರೆ ವಾಸ್ತವವಾಗಿ ನನಗೆ ಎರಡರ ಅನುಭವವೂ ಇರಲಿಲ್ಲ.

ಇದ್ದಕ್ಕಿದ್ದಂತೆ ಆಕಾಶವೆಲ್ಲಾ ಉರಿವ ಕೆಂಡದಂತಾಗಿಬಿಟ್ಟಿತು. ಕ್ಷಣ ಕಾಲದ ಹಿಂದೆ ಇದ್ದ ಪ್ರಸನ್ನತೆ ಕರಗಿ ಇಡೀ ಆಕಾಶ ರವರವ ಎನ್ನಿಸತೊಡಗಿತು. ನನಗೆ ಏನಾಗುತ್ತಿದೆ ಎನ್ನುವ ಭೀತಿ ಸಹಜವಾಗೆ ಆವರಿಸಿ ಆಸರೆಗಾಗಿ ಹುಡುಕಾಡತೊಡಗಿದೆ. ಯಾವ ಆಸರೆಯೂ ಸಿಗದೆ ನೆಲಕ್ಕೆ ದೊಪ್ಪೆಂದು ಬಿದ್ದೆ. ಮೇಲೆ ನೋಡುತ್ತೇನೆ ಚಕ್ರಾಕಾರವಾಗಿ ತಿರುಗುತ್ತಾ ಬೆಂಕಿಯಂಥ ಚೆಂಡೊಂದು ಆಕಾಶದಿಂದ ಉರುಳುರುಳಿ ಭೂಮಿಯ ಕಡೆಗೆ ಬಂದು ದಬ್ಬೆಂದು ನೆಲಕ್ಕಪ್ಪಳಿಸಿತ್ತು. ಭಯದಿಂದ ಮುಚ್ಚಿದ್ದ ಕಣ್ಣನ್ನು ತೆರೆದು ನೋಡಿದರೆ, ನನ್ನನ್ನು ಕರೆಯುತ್ತಿದ್ದ ಮರಗಳ ನೆತ್ತಿ ಸೀಳಿತ್ತು. ಇಷ್ಟು ಹೊತ್ತಿನ ತನಕ ನನ್ನ ಖುಷಿಯಿಂದ ಕೈಬೀಸಿ ಕರೆದವು ಇವೇನಾ? ಎಂದು ನೋಡುವಾಗಲೇ, ಜೋಲುತ್ತಾ ದಬಾರೆಂದು ನೆಲಕ್ಕೆ ಬಿದ್ದವು. ಬಿದ್ದ ರಭಸಕ್ಕೆ ನೆಲ ನಡುಗಿದಂತೆನ್ನಿಸಿತ್ತು. ಭಯದಿಂದ ಜೋರಾಗಿ ಕೂಗುತ್ತಾ ಎಚ್ಚರಗೊಂಡೆ. ಮುತ್ಯಾಳ ಸ್ಪರ್ಷ ಸುಖದ ಅನುಭವದ ನಡುವೆಯೇ ಇದೆಂಥಾ ವಿಚ್ಚಿದ್ರಕಾರಿ ಅನುಭವ! ಮುತ್ಯಾಗಾಗಿ ಹುಡುಕಾಟ ನಡೆಸಿದೆ. ಪಕ್ಕದಲ್ಲಿದ್ದ ಅವಳು ನಿದ್ದೆ ಮಾಡಿರಲಿಲ್ಲ. ಯಾಕೋ ಅವಳು ಅಳುತ್ತಿದ್ದಾಳೆ ಅನ್ನಿಸಿ, ಕೈಗಳನ್ನು ಅವಳ ಕಣ್ಣುಗಳ ಮೇಲೆ ಆಡಿಸಿದೆ. ಮೊದಲೇ ಕನಸಿನಿಂದ ಆಘಾತಗೊಂಡು ನಡುಗುತ್ತಿದ್ದ ನನ್ನ ಕೈ ಬೆರಳುಗಳ ತುದಿ ಹಸಿಯಾಯಿತು. ಕೈಗಳನ್ನು ಸರಕ್ಕೆಂದು ಹಿಂತೆಗೆದುಕೊಂಡೆ.

ಹೌದು ಮುತ್ಯಾ ಅಳುತ್ತಿದ್ದಾಳೆ. ಇದು ನನಗೆ ಇನ್ನೂ ಆಘಾತಕಾರಿ, `ಮುತ್ಯಾ ನೀನು ಅಳ್ತಾ ಇದೀಯಾ?’ ನನ್ನ ಧ್ವನಿಯಲ್ಲಿನ ಆಘಾತಕ್ಕೆ ಮುತ್ಯಾ ನನ್ನೆಡೆಗೆ ತಿರುಗುತ್ತಾ ಕೈಗಳನ್ನು ಹಣೆಗೆ ಒತ್ತಿಕೊಂಡಳು. `ಮುತ್ಯಾ ಹೇಳು ಏನಾಯ್ತು? ನನಗೆ ಬಿದ್ದ ಕನಸಿಗೂ ನಿನ್ನ ಅಳುವಿಗೂ ಏನೋ ಸಂಬಂಧವಿರಬೇಕು’ ಎಂದೆ. ಮುತ್ಯಾ ಮಾತಾಡಲಿಲ್ಲ. ಅವಳ ಕಣ್ಣಿಂದ ಧಾರಾಕಾರ ನೀರು ಹರಿಯುವುದೂ ನಿಲ್ಲಲಿಲ್ಲ. ಇಬ್ಬರೂ ನೋವು ಒಬ್ಬರಿಂದೊಬ್ಬರಿಗೆ ಹರಿವಂತೆ ತಬ್ಬಿಕೊಂಡೆವು. ಅದು ಸಮಾಧಾನ ತಂದಿತಾ ಎಂದರೆ ಉತ್ತರವಿಲ್ಲ.

ಕಣ್ಣಿಗೆ ಹಿತವಲ್ಲದ ಬೆಳಗು. ಮನಸ್ಸಿಗೆ ಮುದವಲ್ಲದ ಹಗಲು. ಕಣ್ಣುಜ್ಜಿಕೊಳ್ಳುತ್ತಾ ಪಕ್ಕದಲ್ಲಿ ನೋಡಿದರೆ ಮುತ್ಯಾ ಇಲ್ಲ. ಮುತ್ಯಾಳನ್ನ ಹುಡುಕುತ್ತಾ ಹೊರಗೆ ಬಂದೆ. `ಅಂತೂ ಪೂಜೆ ಮಾಡಿಸಿದ್ದಕ್ಕೆ ಒಂದು ಪೀಡೆ ಕಳೆದ ಹಾಗಾಯ್ತು. ಆ ಇನ್ನೆರಡು ಹೋಗಿದ್ದರೆ ಈ ಮನೆ ಉದ್ಧಾರ ಆಗ್ತಾ ಇತ್ತೋ ಏನೋ’ ಎನ್ನುತ್ತಿದ್ದಳು ಅಮ್ಮಮ್ಮ. ಅವಳ ಗೋದಿಗಪ್ಪಿನ ಮುಖದಲ್ಲಿ ಆನಂದವೊಂದು ತೇಲುತ್ತಿರುವಂತೆ ಭಾಸವಾಯಿತು. ಮುತ್ಯಾಗೇನಾದರೂ ಆಗಿರಬಹುದೇ ಎಂದು ಕ್ಷಣಕಾಲ ಗಾಬರಿಯಾಯಿತು. ನನ್ನ ನೋಡಿ, `ಎದ್ಯಾ? ಇವತ್ತು ನಿಮ್ಮ ಮುತ್ಯಾಗೆ ತಲೆಮೇಲೆ ಆಕಾಶವೇ ಬಿದ್ದಿದೆ. ನಡಿ ಮೊದ್ಲು ಹಾಲು ಕುಡೀವಂತೆ’ ಎಂದಳು. ಅಮ್ಮಮ್ಮ ಸಾಮಾನ್ಯವಾಗಿ ಬೆಳಗಿನಲ್ಲಿ ಇಷ್ಟು ಚಟುವಟಿಕೆಯಿಂದ ಇರುತ್ತಿರಲಿಲ್ಲ. `ಮುತ್ಯಾ ಎಲ್ಲಿ?’ ಎಂದೆ. `ಹಿತ್ತಲಲ್ಲಿ ಬಿದ್ದು ಹೋಗಿರುವ ಮರದ ಹತ್ತಿರ ನಿಂತಿದ್ದಾಳೆ’ ಎಂದು ಉಡಾಫೆಯ ಉತ್ತರ ಕೊಟ್ಟು ಒಳಗೆ ಹೊರಟಳು. ಮರಗಳಿಗೇನಾಯಿತು? ಎನ್ನುವ ಸಮ್ಮಿಶ್ರಭಾವದಲ್ಲಿ ಹೊರಗೆ ಓಡಿದೆ. ರಾಮುಡೂ ಕಟ್ಟೆಗೆ ಒರಗಿ ಕೂತವನು ನನ್ನ ನೋಡಿ, `ಪಾಪಾ’ ಎಂದ. ಅವನ ಧ್ವನಿಯಲ್ಲಿ ಆಳವಾದ ನೋವಿತ್ತು. ನಾನು ನಿಶ್ಚೇತಳಾದೆ, ನನ್ನ ಕೈಹಿಡಿದು ಸಾವಕಾಶ ನಡೆಯುತ್ತಾ ಹಿತ್ತಲಿಗೆ ಕರೆದೊಯ್ದ. ನನ್ನ ಕಾಲುಗಳು ಸೋಲುತ್ತಿತ್ತು.

ಮುತ್ಯಾ ಸಿಡಿಲಿಗೆ ಸೀಳಿ ಹೋದ ಮರಗಳನ್ನು ನೋಡುತ್ತಾ ಕುಳಿತಿದ್ದಳು. ತನ್ನ ಹೊಟ್ಟೆಯಲ್ಲಿ ಬೆಳೆದು ಭೂಮಿಗೆ ಬರುವಾಗಲೆ ಜೀವ ಕಳೆದುಕೊಂಡಿದ್ದ ಮಕ್ಕಳನ್ನು ತನ್ನ ಗಂಡನಿಗೆ ಕೊಟ್ಟು ಹೂವಿನಂಥ ಮೈಯ್ಯ ಮಕ್ಕಳನ್ನು ಬೀಜಗಳನ್ನಾಗಿ ಮಾಡಿ ಅವು ಬೆಳೆಯುವುದನ್ನು ನೋಡಿ ಆನಂದ ಪಟ್ಟಳಲ್ಲಾ! ಆ ಮರಗಳಲ್ಲಿ ಎರಡು ನಿರ್ಜೀವವಾಗಿ ನೆಲಕ್ಕುರುಳಿವೆ. ಆತುಕೊಂಡಂತಿದ್ದ ಕಾಂಪೌಂಡ್ ಗೋಡೆ ಕುಸಿದಿದೆ. ಜೀವದ ತುಣುಕುಗಳು ಕಣ್ಣುದುರೇ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಯಾವ ತಾಯಿಯೂ ಸಹಿಸಲಾರಳು. ಅಂಥಾದ್ದೇ ನೋವು ಮುತ್ಯಾ ಅನುಭವಿಸುತ್ತಿದ್ದಳು.

ಹಿತ್ತಲಿನ ಅರ್ಧ ಆವರಿಸಿದ್ದ ಬಿದ್ದ ಮರಗಳನ್ನು ತಾತ ತೆರವು ಮಾಡಿಸುವಾಗ ಅಮ್ಮಮ್ಮ ಅದರ ಕೆಳಗೆ ಮೂಳೆಗಳೇನಾದರೂ ಉಳಿದಿದೆಯಾ ಎಂದು ನೋಡುತ್ತಿದ್ದಳು. ಭೂಮಿಯ ಜೀರ್ಣಶಕ್ತಿ ದೊಡ್ದದು. ಏನೂ ಉಳಿದಿಲ್ಲ ಎಂದು ಮರ ತೆಗೆಯುವವ ಹೇಳುತ್ತಲಿದ್ದ.

ಮುತ್ಯಾ ಮರಗಳನ್ನು ತೆಗೆಯುವಾಗ ಅದರ ಬುಡಕ್ಕೆ ಹಾಲನ್ನು ಹಾಕಿ ಮಣ್ಣನ್ನು ಹಣೆಗೆ ಹಚ್ಚಿದ್ದಳು. ಕೊನೆಯದಾಗಿ ಕಂದನ ಕೆನ್ನೆಯನ್ನು ಸವರುವಷ್ಟೇ ಮೃದುವಾಗಿ ಆ ಮರಗಳನ್ನು ನೇವರಿಸಿದ್ದಳು. `ಆ ಮರಗಳನ್ನು ಯಾರಿಗಾದರೂ ಕೊಟ್ಟು ಬಿಡು ಈ ಮನೆಯಲ್ಲಿ ಉರಿಯುವುದು ಬೇಡ’ ಎಂದು ತಾತನಿಗೆ ಖಡಾ ಖಂಡಿತವಾಗಿ ಹೇಳಿಬಿಟ್ಟಿದ್ದಳು. ಅಮ್ಮಮ್ಮ ಈ ವಿಷಯಕ್ಕೆ ಏನೂ ಮಾತಾಡಲಿಲ್ಲ.

ಮುತ್ಯಾ ಅದೆಲ್ಲಾ ಕೆಲಸ ಮುಗಿಯುವವರೆಗೆ ಹಿತ್ತಲಿಗೆ ಹೋಗಲಿಲ್ಲ. ನನ್ನ ಬಲವಂತಕ್ಕೆ ಎರಡು ತುತ್ತು ತಿನ್ನುತ್ತಿದ್ದಳು. ಮೊದಲೇ ಕೃಶವಾಗಿದ್ದ ಅವಳ ದೇಹ ಮತ್ತಷ್ಟು ಕೃಶಿಸಿತು. ಶ್ರುತಿಗೊಂಡ ಬ್ರಹ್ಮಾಂಡ ತನಗೆ ಏನು ಬೇಕೋ ಅದನ್ನೇ ಮಾಡಿಕೊಳ್ಳುತ್ತದೆ. ನಿಂತ ಮರ ಅದಕ್ಕೇನು ಮಾಡಿತೋ ಎಂದರೆ ಉತ್ತರವಿಲ್ಲ. ನೂರಾರು ವರ್ಷಗಳು ಬದುಕಬಹುದಾದ ಅವಕ್ಕೂ ಮನುಷ್ಯರ ಹಾಗೆ ಅಕಾಲಿಕ ಮರಣವೇ? ನಿಜ ನಾವು ಹುಡುಕುವ ಶೋಧನೆಗೆ ಒಳಗು ಮಾಡುವ ಎಲ್ಲಕ್ಕೂ ಯಾವ ಅರ್ಥವೂ ಇರುವುದಿಲ್ಲ. ಅದರೆದುರು ಅಸಮ್ಮತಿ ನಮ್ಮ ಹಕ್ಕೇ ಅಲ್ಲ. ಯಾಕೆ ಏನು ಎನ್ನುವ ನಮ್ಮ ತರ್ಕ ಕೆಲಸಕ್ಕೆ ಬರುವುದಿಲ್ಲ. ಹೀಗೇ ವಿಶ್ವದ ರಹಸ್ಯಮಯ ಸಂಗತಿಗಳು ನಮ್ಮ ಅನುಭವದಲ್ಲಿ ಕರಗಿ ಹರಳುಗಟ್ಟುತ್ತಲೇ ಇರುತ್ತವೆ.

ಈ ಅಂಕಣದ ಹಿಂದಿನ ಬರೆಹಗಳು:
ಬಿಟ್ಟುಬಿಡುವುದೆಂದರೂ ಕಟ್ಟಿಕೊಳ್ಳುವುದೇ
ಗಾಳದ ದಾರ ದೂರಕ್ಕೆ ಬಿಡುವುದು ಮೀನಿನ ಆಸೆಗೆ
ಕಳಚಿಕೊಳ್ಳುವುದೂ ಆಟದ ಭಾಗವೇ.
ಸರಿದ ಸೆರಗಿನಲ್ಲಿ ಅಡಗಿದ್ದು ಸೂರ್ಯ ಚಂದ್ರ
ಪ್ರಾರ್ಥನೆ; ಪದಾರ್ಥವಲ್ಲ, ಪರಾರ್ಥ
ಜಗತ್ತಿನ ಮೇರು ತಾಯಿ
ನಿಧಿಯ ಕನವರಿಕೆ
ಅವಳ ಧ್ಯಾನಕ್ಕೆ ಒಳಿತೇ ಗುರಿ
ಅನುಬಂಧಗಳ ಲೀಲೆ
ಕನಸಿನೊಳಗಿನ ನನಸು
ನೀಲಿ ಕಣ್ಣುಗಳ ಮುತ್ತಜ್ಜಿ ಮತ್ತು ನಾನು

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...