ಬದುಕಿನ ಕ್ಷಣ ಭಂಗುರತೆ ಹಾಗೂ ಸಾವಿನ ಅನಿವಾರ್ಯತೆ

Date: 16-09-2023

Location: ಬೆಂಗಳೂರು


“ಕವಿತೆಯ ಪ್ರಾರಂಭದ ಸಾಲುಗಳು ನಿತ್ಯದ ಯಾಂತ್ರಿಕ ಜೀವನದ ಸಾಮಾನ್ಯ ಸಂಗತಿಗಳನ್ನು ಎದುರಿಗಿಡುತ್ತವೆ. ಉತ್ಪ್ರೇಕ್ಷೆಯನ್ನು ಮಾಡದೇ, ಬದುಕನ್ನು ರಮಣೀಯವೆನ್ನದೇ, ಅದರ ಸಹಜತೆಯನ್ನು ಕಾಣಿಸುತ್ತಾನೆ ಕವಿ. ತಂಬಾಕು ಎಲೆಗಳಿಂದ ಸಿಗಾರ್ ಕಟ್ಟುವ ಕಟ್ಟುಮಸ್ತಾದ ಗಂಡಸನ್ನು ಐಸ್ಕ್ರೀಮ್ ಸಿದ್ಧಮಾಡಲು ಕರೆಯಲಾಗಿದೆ,” ಎನ್ನುತ್ತಾರೆ ಅಂಕಣಗಾರ್ತಿ ನಾಗರೇಖಾ ಗಾಂವಕರ. ಅವರು ತಮ್ಮ ಪಶ್ಚಿಮಾಭಿಮುಖ ಅಂಕಣದಲ್ಲಿ “ಬದುಕಿನ ಕ್ಷಣ ಭಂಗುರತೆ ಹಾಗೂ ಸಾವಿನ ಅನಿವಾರ್ಯತೆ” ಕುರಿತು ಕಟ್ಟಿಕೊಟ್ಟಿದ್ದಾರೆ.

ಅಸ್ಪಷ್ಟ ಹಾಗೂ ಸಂಕೀರ್ಣ ಕವಿತೆ ಎಂದು ಕರೆಯಿಸಿಕೊಳ್ಳುವ ಆದರೆ ತೆರೆದಷ್ಟು ಅರ್ಥ ಸಾಧ್ಯತೆಗಳನ್ನು ಹೊಳೆಯಿಸುವ ಕವಿತೆ “The Emperor of Icecream”. ಕೇವಲ 16 ಸಾಲುಗಳ ಈ ಕವಿತೆ ಎರಡು ನುಡಿಗಳಲ್ಲಿ ಹೆಣೆಯಲ್ಪಟ್ಟಿದೆ. ಈ ಕವಿತೆಯ ಮೊದಲರ್ಧ ಭಾಗದ ಎಂಟು ಸಾಲುಗಳಲ್ಲಿ ಬದುಕನ್ನು ಪ್ರತಿನಿಧಿಸುವ ಸಮಾರಂಭವೊಂದರ ಸಿದ್ಧತೆಯನ್ನು ಕುರಿತ ವರ್ಣನೆ ಇದೆ. ಆದರೆ ಆ ನುಡಿಯ ಉದ್ದಕ್ಕೂ ಆ ಸಮಾರಂಭ ಯಾವುದೆಂಬ ಸ್ಪಷ್ಟತೆ ದೊರೆಯುವುದಿಲ್ಲ. ಎರಡನೆ ನುಡಿಯ ಎಂಟುಸಾಲುಗಳಲ್ಲಿ ಅದೊಂದು ಸಾವಿನ ಸಂದರ್ಭವೆಂದು ತಿಳಿಯುತ್ತದೆ. ಅದು ಬದುಕಿನ ಕೊನೆಯ ಸತ್ಯವಾದ ಸಾವನ್ನು ಕುರಿತು ಮಾತನಾಡುತ್ತದೆ. ಹಾಗೆ ಬದುಕಿನ ಚಿತ್ರಣ ಮತ್ತು ಸಾವಿನ ಚಿತ್ರಣ ಎರಡರ ಕೊನೆಯಲ್ಲೂ ಕವಿ The only Emperor is the emperor of Ice-cream ಎಂಬ ಪಲ್ಲವಿಯನ್ನಿಟ್ಟು ಐಸಕ್ರೀಮನ್ನು ರೂಪಕವಾಗಿಟ್ಟುಕೊಂಡು ಅಸ್ಥಿರವಾದ ಪ್ರಾಪಂಚಿಕ ಜಗತ್ತನ್ನು ಮತ್ತು ಸಾವಿನ ಸಾರ್ವತ್ರಿಕತೆ ಸತ್ಯವನ್ನು ಮನಗಾಣಿಸತ್ತಾನೆ ಕವಿ ವ್ಯಾಲೇಸ್ ಸ್ಟಿವನ್.

‘The only Emperor is the emperor of Ice-cream’ ಈ ಪಲ್ಲವಿಗೆ ಕವಿ ಸ್ಟೀವನ್‌ಗೆ ಶೇಕ್ಸಪಿಯರನ ‘ಹ್ಯಾಮ್ಲೆಟ್’ ನಾಟಕದ “The worm is the only emperor of the diet” ಸಾಲು ಪ್ರೇರಣೆಯಾಗಿರಬಹುದು. ತನ್ನ ತಂದೆ ಡೆನ್ಮಾರ್ಕನ ರಾಜ ಹ್ಯಾಮ್ಲೆಟ್‌ನನ್ನು ಕೊಂದು ರಾಜ್ಯವನ್ನು ದೋಚಿದ ಚಿಕ್ಕಪ್ಪ ಕ್ಲಾಡಿಯಸ್‌ನನ್ನು ಪ್ರಿನ್ಸ್ ಹ್ಯಾಮ್ಲೆಟ್ ನಾಶಮಾಡಬಯಸುತ್ತಾನೆ. ಈ ಹಂತದಲ್ಲಿ ಕ್ಲಾಡಿಯಸ್‌ನ ಗೆಳೆಯ ನೆರೆರಾಜ್ಯದ ಲಾರ್ಡ ಚೆಂಬರ್ಲಿನ್ Poಟoಟಿiusನ ಕೊಲೆಯಾಗುತ್ತದೆ. ಈ ಕೊಲೆಯು ತನ್ನಿಂದಲೇ ಆಗಿದ್ದರೂ ಇದರ ದೋಷಾರೋಪವನ್ನು ಹ್ಯಾಮ್ಲೆಟ್‌ನ ಮೇಲೆ ಹೊರೆಸುವ ಸಲುವಾಗಿ ಕ್ಲಾಡಿಯಸ್ ಪ್ರಿನ್ಸ್ ಹ್ಯಾಮ್ಲೆಟ್‌ನಿಗೆ ಪೊಲೊನಿಯಸ್‌ನ ಕುರಿತಾಗಿ ಕೇಳುತ್ತಾನೆ. ಆಗ ಹ್ಯಾಮ್ಲೆಟ್ ಈ ಮಾತು ಹೇಳುತ್ತಾನೆ. “he is at supper. Not where he eats but where he is eaten.... your worm is the only emperor of diet” ಎಂಬ ಮಾತನ್ನು ಹೇಳುತ್ತಾನೆ. ವ್ಯಂಗ್ಯ, ವಿಡಂಬನೆಯ ಮೊನಚುಗಳ ಹೊತ್ತ ಈ ಸಾಲನ್ನು ಮಾರ್ಪಾಡಿನೊಂದಿಗೆ ಸ್ಟೀವನ್ ಬಳಸಿಕೊಂಡಿದ್ದಾನೆ.

Call the roller of big cigars,
The muscular one, and bid him whip
In kitchen cups,concupiscent curds.
Let the wenches dawdle in such dress
As they are used to wear, and let the boys
Bring the flowers in last month’s newspapers.
Let be be finale of seem
The only emperor is the emperor of ice cream

ಕವಿತೆಯ ಪ್ರಾರಂಭದ ಸಾಲುಗಳು ನಿತ್ಯದ ಯಾಂತ್ರಿಕ ಜೀವನದ ಸಾಮಾನ್ಯ ಸಂಗತಿಗಳನ್ನು ಎದುರಿಗಿಡುತ್ತವೆ. ಉತ್ಪ್ರೇಕ್ಷೆಯನ್ನು ಮಾಡದೇ, ಬದುಕನ್ನು ರಮಣೀಯವೆನ್ನದೇ, ಅದರ ಸಹಜತೆಯನ್ನು ಕಾಣಿಸುತ್ತಾನೆ ಕವಿ. ತಂಬಾಕು ಎಲೆಗಳಿಂದ ಸಿಗಾರ್ ಕಟ್ಟುವ ಕಟ್ಟುಮಸ್ತಾದ ಗಂಡಸನ್ನು ಐಸ್ಕ್ರೀಮ್ ಸಿದ್ಧಮಾಡಲು ಕರೆಯಲಾಗಿದೆ. ನಿರೂಪಕನ ಪ್ರಕಾರ ಬಹಳ ಕೌಶಲ್ಯದಿಂದ ಸಿಗಾರ ಸಿದ್ದಮಾಡುವ ವ್ಯಕ್ತಿಯೇ ಐಸ್ ಕ್ರೀಮ ತಯಾರಿಸಲು ಯೋಗ್ಯ. ಹಾಗೇ ನಿರೂಪಕ ಅಲ್ಲಿಗೆ ಆಹ್ವಾನಿತರಾದ ಎಲ್ಲ ಹೆಂಗಸರು, ಸೇವಕಿಯರು ಸರಳವಾದ ಬಟ್ಟೆಗಳಲ್ಲಿ ಬರುವಂತೆ ತಿಳಿಸುತ್ತಿದ್ದಾನೆ. ಹಳೆಯ ತಿಂಗಳ ವೃತ್ತ ಪತ್ರಿಕೆಗಳಲ್ಲಿಯೇ ಹೂಗಳನ್ನು ಸುತ್ತಿ ತರುವಂತೆ ಹುಡುಗರಿಗೆ ತಿಳಿಸಲು ಹೇಳುತ್ತಿದ್ದಾನೆ. ಇವೆಲ್ಲವೂ ನಿತ್ಯದ ಚಟುವಟಿಕೆಯಂತೆ. ಸಮಾರಂಭದಲ್ಲಿ ಎಲ್ಲಿಯೂ ಆಡಂಬರವಿಲ್ಲ.

Let be be finale of seem

The only emperor is the emperor of ice cream. ಈ ಸಾಲುಗಳಲ್ಲಿ ನಮ್ಮೆಲ್ಲರ ಅಸ್ತಿತ್ವದ ಕೊನೆಯ ಸತ್ಯವಾದ ಸಾವು ಮತ್ತು ಬದುಕಿನ ನಶ್ವರತೆಯನ್ನು ಅಮೋಘವಾಗಿ ಕಟ್ಟಿಕೊಡುತ್ತಾನೆ.

ಎರಡನೆ ನುಡಿಯಲ್ಲಿ ಓದುಗನಿಗೆ ಅಲ್ಲೊಂದು ಮಹಿಳೆಯ ಸಾವಿನ ಸಂಗತಿ ಅರಿವಿಗೆ ಬರುತ್ತದೆ. ಎಲ್ಲರಂತೆ ಆಕೆಯೂ ಸತ್ತ ನಂತರ ಸುದೀರ್ಘ ವಿಶ್ರಾಂತಿಗೆ ತೆರಳಿದ್ದಾಳೆ. ನಿರೂಪಕ ಆ ಮಹಿಳೆಯ ದೇಹವನ್ನು ಕಸೂತಿಮಾಡಿದ ಬಟ್ಟೆಯಿಂದ ಮುಚ್ಚುವಂತೆ ಹೇಳುತ್ತಾನೆ. ಒಂದೊಮ್ಮೆ ಆ ಬಟ್ಟೆ ಆಕೆಯ ಪೂರ್ಣ ದೇಹವನ್ನು ಮುಚ್ಚುವಲ್ಲಿ ವಿಫಲವಾಗಿ ಆಕೆಯ ಪಾದಗಳು ಹೊರಗೆ ಕಂಡರೆ ಅದೇನೂ ತೊಂದರೆಯಲ್ಲವೆನ್ನುತ್ತಾನೆ. ಕಾರಣ ಆಕೆ ಈಗಾಗಲೆ ಸತ್ತಿದ್ದಾಳೆ. ಈ ಜಗತ್ತಿನ ಯಾವುದಕ್ಕೂ ಆಕೆ ಈಗ ಕಿವುಡಾಗಿದ್ದಾಳೆ. ಸಾವಿನ ಕಟು ವಾಸ್ತವವದು. ಎರಡನೆ ನುಡಿಯ ಕೊನೆಯ ಸಾಲುಗಳಲ್ಲಿ ತನ್ನ ಪ್ರಭೆಯನ್ನು ಬೀರುವ ದೀಪವನ್ನು ಹಚ್ಚುವಂತೆ ಹೇಳಲಾಗಿದೆ. ವಾಸ್ತವವನ್ನು ಮನಗಾಣಿಸಲು ಈ ಬೆಳಕಿನ ಜರೂರತ್ತಿದೆ.

Take from the dresser of deal
Lacking the three glass knobs, that sheet
On which she embroidered fantails once
And spread it so as to cover her face
If her horney feet protrude, they come
To show how cold she is , and dumb
Let the lamp affix its beam
The only emperor is the emperor of ice-cream.

ಎರಡೂ ನುಡಿಗಳ ಕೊನೆಯಲ್ಲಿ ಬರುವ The only Emperor is the emperor of Ice-cream ಈ ಸಾಲು ಒಂದು ಅದ್ಭುತ ರೂಪಕ. ತಣ್ಣಗಿನ ಸ್ವಾದದ ಕರಗುವ ಗುಣವುಳ್ಳ ಐಸಕ್ರೀಮ ಜೀವನದ ಕ್ಷಣಭಂಗುರತೆಗೆ, ಅನಿಶ್ಚಿತತೆಗೆ ರೂಪಕವಾಗಿದೆ. ಈ ಖುಷಿ ಎನ್ನುವ ಐಸಕ್ರೀಮ ರಾಜ ಐಸಕ್ರೀಮನಂತೆ ಯಾವಾಗ ಕರಗಿ ಹೋಗುವನೋ ತಿಳಿಯದು. ಈ ಕವಿತೆ ವಾಸ್ತವದ ಸಂಗತಿಗಳು ಮತ್ತು ಬಾಹ್ಯದ ತೋರಿಕೆಗಳನ್ನು ಪರಸ್ಪರ ಅಕ್ಕಪಕ್ಕದಲ್ಲಿಟ್ಟು ನೋಡುವಂತೆ ಮಾಡುತ್ತದೆ. . ವಾಸ್ತವ ಎಂದುಕೊಂಡಿರುವ ಈ ಬದುಕು ಕೇವಲ ಭ್ರಮೆ ಮತ್ತು ಬದುಕಿನ ನೈಜ ವಾಸ್ತವ ಎಂದರೆ ಅದು ಸಾವು ಎಂಬ ಸತ್ಯದ ಅರಿವು ಕವಿತೆಯಲ್ಲಿ ಬಹು ಸೂಚ್ಯವಾಗಿ ನಿರೂಪಿಸಲ್ಪಟ್ಟಿದೆ..

ವಾಸ್ತವ ಅಹಿತಕರವಾಗಿದ್ದರೆ ಅರಗಿಸಿಕೊಳ್ಳುವುದು ಕಷ್ಟವೆನ್ನುವ ನಾವು ವಾಸ್ತವದ ಹಿತಕರ ಸುಖದ ಕ್ಷಣಗಳನ್ನು ಬಹಳಷ್ಟು ಖುಷಿಯಿಂದ, ಸಂಭ್ರಮದಿಂದ ಅನುಭವಿಸುತ್ತೇವೆ. ಕೆಲವೊಮ್ಮೆ ಅಹಿತವಾದ ವಾಸ್ತವವನ್ನು ಮರೆಮಾಚಿ ಸುಖವನ್ನು, ಖುಷಿಯ ಮುಖವಾಡವನ್ನೂ ಹಾಕುತ್ತೇವೆ. ಇನ್ನು ಕೆಲವೊಮ್ಮೆ ವಾಸ್ತವವೇ ಭಯದ ನೆರಳಾಗಿ ಕಲ್ಪನೆಯಲ್ಲಿಯೇ ಬದುಕುತ್ತೇವೆ. ಬದುಕಿನ ನಿಜ ವಾಸ್ತವ ಗೊತ್ತಿದ್ದು, ಐಷಾರಾಮ, ಸಂಭ್ರಮ, ಮೋಜು ಮಸ್ತಿ ಇವುಗಳೇ ಸತ್ಯವೆಂಬ ಭ್ರಮೆಯ ಬದುಕು ನಮ್ಮೆಲ್ಲರ ಅನುಭವೂ ಆಗಿದೆ. ಬದುಕು ಮತ್ತು ಸಾವು ಹೇಗೆ ಕ್ಷಣಿಕವೋ ಹಾಗೇ ಸುಖ ಮತ್ತು ದುಃಖದ ಕಟು ವಾಸ್ತವಗಳು ಕ್ಷಣಿಕ. ನಿತ್ಯದ ಏರಿಳಿತಗಳ ನಡುವೆಯೇ ಸಂತೋಷವನ್ನು ಆಸ್ವಾದಿಸುವ ಉಪಾಯವನ್ನು ಕವಿ ಹೇಳುತ್ತಾನೆ. ಹಾಗೇ ಬಂದಂತೆ ಬಾಳನ್ನು ಸ್ವೀಕರಿಸುವ ಕಲೆಯನ್ನು ಸಾವು ಬಂದಾಗ ಅದನ್ನೂ ಮನುಷ್ಯನ ಬದುಕಿನ ಒಂದು ಅನುಭವವೆಂದು ಸ್ವೀಕರಿಸಬೇಕೆಂಬ ಕರೆ ನೀಡುತ್ತಾನೆ. ಬದುಕು ಮತ್ತು ಸಾವಿನ ಕುರಿತಾಗಿ ಸೂಕ್ಷ್ಮ ಚಿಂತನೆಗೆ ಮತ್ತು ಆತ್ಮಾವಲೋಕನಕ್ಕೆ ಈ ಕವಿತೆ ಪ್ರೇರೆಪಿಸುತ್ತದೆ.

ಮೂರ್ತ ಸಾಧ್ಯತೆಗಳ ಮೂಸೆಯಿಂದಲೇ ಅಮೂರ್ತ ಸಾಧ್ಯತೆಗೆಳೆಡೆಗೆ ಕವಿತೆ ಸಾಗಬೇಕು ಎಂಬುದು ಸ್ಟೀವನ್‌ನ ನಿಲುವು. ಅದನ್ನಿಲ್ಲಿ ಐಸ್ ಕ್ರೀಮನ

ಮೂಲಕ ಅಭಿವ್ಯಕ್ತಗೊಳಿಸಿದ್ದಾನೆ. ಹಾಲು, ಸಕ್ಕರೆ ಇತ್ಯಾದಿ ಮೂರ್ತವಾದ ಸಾಮಾನುಗಳಿಂದ ತಯಾರಾಗುವ ಐಸ ಕ್ರೀಮ ನಂತರ ತನ್ನ ತಂಪಿನ ಅಮೂರ್ತಗುಣದಿಂದಾಗಿ ಭಿನ್ನವಾಗಿ ನಿಲ್ಲುತ್ತದೆ. ಅಷ್ಟೇ ಅಲ್ಲದೇ ಬಹುತೇಕ ಎಲ್ಲ ಔತಣ ಕೂಟಗಳಲ್ಲಿ ಎಲ್ಲಾ ಖಾದ್ಯಗಳ ಸೇವನೆಯ ನಂತರ ಕೊನೆಯಲ್ಲಿ ನೀಡುವ ಖಾದ್ಯವೇ ಐಸ್ ಕ್ರೀಮ್. ಅದರ ತಂಪಿನ ಗುಣದಿಂದಾಗಿ ಪಾರ್ಟಿಗಳಲ್ಲಿ ಒಂದು ವಿಶಿಷ್ಟವಾದ ಬೆಚ್ಚಗಿನ ಸುಖವನ್ನು ಅನುಭವಿಸುವಂತೆ ಮಾಡುತ್ತದೆ. ಆದರೆ ಅದರ ಇನ್ನೊಂದು ಗುಣ ಶೀರ್ಘವಾಗಿ ಕರುಗುವಿಕೆ. ಹಾಗೇ ನಮ್ಮ ಬದುಕು ಕ್ಷಣಿಕವಾದದ್ದು. ಚಕ್ರವರ್ತಿಗಳು, ಶ್ರೀಮಂತರು ಮತ್ತು ಬಡಜನರ ನಡುವಿನ ತಾರತಮ್ಯ ಈ ಸಾವಿನ ವಿಚಾರದಲ್ಲಿ ಮಾತ್ರ ಒಂದೇ ರೀತಿ. ನಿತ್ಯದ ಜೀವನದ ರಸಹೀನತೆಯನ್ನು, ನಶ್ವರತೆಯ ಅನಿವಾರ್ಯತೆಯನ್ನು ನಾವೆಲ್ಲ ಒಪ್ಪಿಕೊಳ್ಳಲೇಬೇಕು.

- ನಾಗರೇಖಾ ಗಾಂವಕರ

ಈ ಅಂಕಣದ ಹಿಂದಿನ ಬರಹಗಳು:
ರಾಬರ್ಟ ಫ್ರಾಸ್ಟನ “MENDING WALL”
ಆಕ್ರಮಣಕಾರಿ ನಿಲುವನ್ನು ವಿಡಂಬಿಸುವ ಕವಿತೆ “THE ROBIN AND THE WORM”
ಯೇಟ್ಸ್ ನ “THE INDIAN UPON THE GOD”- ದೇವರ ಕುರಿತಾದ ಭಾರತೀಯ ಚಿಂತನೆ
ಕವಿ ವಿಲಿಯಂ ವರ್ಡ್ಸ್‌ವರ್ತ್ ಸಾಹಿತ್ಯ ಪ್ರೇಮ
ಸ್ತ್ರೀತ್ವದ ಹಿರಿಮೆ ಸಾರುವ ಕಿಶ್ವರ ನಹೀದ ಕವಿತೆ “THE GRASS IS REALLY LIKE ME”
ಸಿಡಿಮದ್ದಿನ ದನಿ ಮಾಯಾ ಎಂಜೆಲ್ಲೋರ “I KNOW WHY THE CAGE BIRD SINGS''
ಆಧುನಿಕತೆ ಸೃಷ್ಟಿಸುವ ಸಾಮಾಜಿಕ ವಿಪ್ಲವಗಳು- ಹಕಲ್ಬರಿ ಫಿನ್
ಜನರೇಶನ್ ಗ್ಯಾಪ್‌ನ ಮೇಲೊಂದು ಟಿಪ್ಪಣಿ “ಫಾದರ್ ವಿಲಿಯಮ್” ಕವಿತೆ.
ಬ್ರೆಕ್ಟ್‌ನ ’THE CRUTCHES’ - ಪರಾವಲಂಬಿ ಬದುಕಿಗೆ ಒಂದು ಪಾಠ
ಬದಲಾಗುವ ನೈತಿಕ ನಿಲುವುಗಳ ಕುರಿತು ಲಿಂಡಾ ಪ್ಯಾಸ್ಟನ್ ಬರೆದ ''ETHICS”
ಓ ಹೆನ್ರಿಯ “AFTER TWENTY YEARS” - ಪ್ರಯತ್ನಿಸಿದ್ದಲ್ಲಿ ಭೌತಿಕ ಚಹರೆ ಗುರುತಿಸಬಹುದು, ಆದರೆ ಸ್ವಭಾವ ಸ್ಥಿತಿ?
‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಜಲಾಲ್-ಅಲ್-ದಿನ್-ರೂಮಿಯ FOREST AND RIVER - ಅಸ್ತಿತ್ವದ ವೈರುದ್ಧ್ಯಗಳು
ಸಿಲ್ವಿಯಾ ಪ್ಲಾತ್ ಮತ್ತು ಜೂಲಿಯಾ ಡಿ ಬರ್ಗೋಸ್ ಕವಿತೆಗಳು

‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಗ್ಯಾಬ್ರಿಯಲ್ ಒಕಾರಾನ ’ONCE UPON A TIME’ : ಮುಖವಾಡದ ಜೊತೆ ಮುಖಾಮುಖಿ
ಆಕಸ್ಮಿಕಗಳನ್ನು ತೆರೆಯುವ ‘ದಿ ಗ್ರೀನ್ ಡೋರ್’

MORE NEWS

ಕಲ್ಯಾಣ ಕರ್ನಾಟಕದಲ್ಲಿ ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ, ವಿವಿಧ ಪ್ರತಿಷ್ಠಾನಗಳ ಸ್ಥಾಪನೆ ಆಗಲಿ

27-09-2023 ಬೆಂಗಳೂರು

''ಉರ್ದುವಿನ ಗಂಧಗಾಳಿಯೇ ಇಲ್ಲದ ಬೆಂಗಳೂರಿನಲ್ಲಿ ಅದಕ್ಕೇನು ಕೆಲಸ.? ಹೀಗೆ‌ ಇನ್ನೂ ಅನೇಕ ಅಕಾಡೆಮಿಗಳ ವಿಕ...

ಪಾದಹಸ್ತಾಸನ ಮತ್ತು ಶಶಾಂಕಾಸನ

26-09-2023 ಬೆಂಗಳೂರು

''ಶಶಾಂಕಾಸನವು ಸರಳವಾದ ಕ್ರಿಯಾತ್ಮಕ ಮುಂದಕ್ಕೆ ಬಾಗುವ ಭಂಗಿಯಾಗಿದ್ದು ಅದು ದೇಹ ಮತ್ತು ಮನಸ್ಸನ್ನು ವಿಶ್ರಾಂತಿ...

ರವಿ ನವಲಹಳ್ಳಿ ಅವರ ಅಂಬೇಡ್ಕರ್ ಅರಿವಿನ ಶಾಲೆ

25-09-2023 ಬೆಂಗಳೂರು

''ಬಡತನ, ಹಸಿವು, ಅನಕ್ಷರತೆ ಸ್ವಾನುಭಾವವಾದ ಮೇಲೆ ಅದನ್ನು ಹೋಗಲಾಡಿಸಲು ಪ್ರಯತ್ನಿಸುವುದು ಒಳ್ಳೆಯ ಕೆಲಸ ಆದರೆ ...