ಧಮ್ಮ ಗುಮ್ಮನ ನಂಬಿ ಕೆಟ್ಟರೆ ಎಲ್ಲರೂ ?

Date: 15-07-2021

Location: ಬೆಂಗಳೂರು


‘ಭಾರತೀಯರಿಗೆ ವಿವಿಧ ಕೋನಗಳಿಂದ ಚಿಂತಿಸುವ, ತರ್ಕಿಸುವ, ಕಾರ್ಯ ಪ್ರವೃತ್ತರಾಗುವ ಅದ್ಭುತದ ಜೊತೆಗೆ, ವಿವಿಧ ಧರ್ಮಗಳಲ್ಲಿ ನಂಬಿಕೆಯನ್ನು ಇರಿಸಿಕೊಳ್ಳುವ ಅವಕಾಶ, ಸಾಮರ್ಥ್ಯವೂ ಇದೆ ಎನ್ನುತ್ತಾರೆ ಲೇಖಕ ಸಂತೋಷ ಅನಂತಪುರ. ಅವರು ತಮ್ಮ ‘ಅನಂತಯಾನ’ ಅಂಕಣದಲ್ಲಿ ಭಾರತದ ವೈವಿಧ್ಯತೆಗಳಲ್ಲಿನ ಏಕತೆಯ ಕುರಿತು ವಿಶ್ಲೇಷಿಸಿದ್ದಾರೆ.

‘ನಾವೇ ಶ್ರೇಷ್ಠರು’ ಎಂಬ ಭಾವನೆ ಅದೆಷ್ಟು ಸಂಬಂಧಗಳನ್ನು ಹರಿದು ಮುಕ್ಕಿಲ್ಲ? ನಂಬಿಕೆ-ವಿಶ್ವಾಸಗಳೇ ಬದುಕಿನ ಜೀವಾಳಗಳೆಂದು ಮತ್ತೇ ಮತ್ತೆ ಹೇಳುತ್ತಿದ್ದೇನೆ. ಭಾರತದಂತಹ ಬಹು ಧರ್ಮೀಯರ ನಾಡಿನಲ್ಲಿ ನಂಬಿಕೆಗಳಿಗೆ ಬರವಿಲ್ಲ. ಅಡಿಗಡಿಗೂ ನಂಬಿಕೊಂಡೇ ಜಟಕಾ ಬಂಡಿ ಸಾಗಿಸುವ ನಮ್ಮ ಆಯುಷ್ಯ ನಿಂತಿರುವುದೇ ನಂಬಿಕೆಯ ಮೇಲೆ. ತುಸು ಘಾಸಿಗೊಂಡರೂ ಬದುಕಿನ ಪಾಯ ಅಲುಗಾಡಲಾರಂಭಿಸುತ್ತದೆ. ಭಾರತೀಯ ಜಾತ್ಯತೀತ ಮನಸ್ಸೆನ್ನುವುದು ಸಹಿಷ್ಣುತೆಯಿಂದ ಕೂಡಿದ್ದು.

‘ದಿವಾಲಿಯಲ್ಲಿ ‘ಆಲಿ’ಯನ್ನೂ, ‘ರಾಂದಾನ್’ನಲ್ಲಿ‘ರಾಮ’ನನ್ನೂ ಕಂಡ ನಾಡಿದು. ಗಣೇಶ ಗುರುನಾನಕನಿಗೆ ನಮಿಸುವ ಕೈಗಳು, ಬಾಗುವ ಶಿರಗಳು, ಅಹುರ, ಅಲ್ಲಾಹು ಮತ್ತು ಸಂತ ಆಂಟೋನಿಗೂ ನಮಿಸಿ ಬಾಗುತ್ತವೆ. ಭಾರತೀಯರಿಗೆ ವಿವಿಧ ಕೋನಗಳಿಂದ ಚಿಂತಿಸುವ, ತರ್ಕಿಸುವ, ಕಾರ್ಯ ಪ್ರವೃತ್ತರಾಗುವ ಅದ್ಭುತದ ಜೊತೆಗೆ, ವಿವಿಧ ಧರ್ಮಗಳಲ್ಲಿ ನಂಬಿಕೆಯನ್ನು ಇರಿಸಿಕೊಳ್ಳುವ ಅವಕಾಶ, ಸಾಮರ್ಥ್ಯವೂ ಇದೆ.

ಕೇವಲ ಒಂದು ಧರ್ಮದಲ್ಲಿ ಹುಟ್ಟಿದ ಮಾತ್ರಕ್ಕೆ ಮತ್ತೊಂದು ಧರ್ಮವನ್ನು ನಂಬಬಾರದೆಂಬ ನಿರ್ಬಂಧನೆ ಇಲ್ಲಿಲ್ಲ. ಅಲ್ಲಾಹುವಿನಲ್ಲಿ ನಂಬಿಕೆಯಿಟ್ಟವನು ಬಾಲಾಜಿಯಲ್ಲೂ, ಗಣೇಶನನ್ನು ಪೂಜಿಸುವವನು ಖ್ವಾಜಾ ಮೊಯಿನುದ್ದೀನ್ ಚಿಸ್ತಿಯನ್ನು, ಸಂತ ಆಂತೋನಿಗೆ ಮೇಣದಬತ್ತಿ ಹಚ್ಚುವವನು ಕೃಷ್ಣನಿಗೆ ಆರತಿಯನ್ನೂ ಬೆಳಗಬಹುದು. ನಂಬಿಕೆ ಅವರವರದ್ದು. ಆಚರಣೆಯೂ ಅವರದ್ದೇ. ಇದು ಸೌಹಾರ್ದ ಬದುಕಿಗಿರುವ ದಾರಿಯಷ್ಟೆ. ಬೆಳೆದಂತೆಲ್ಲಾ ಚಿಂತನೆಯೂ ಬೆಳೆಯಬೇಕು ಮತ್ತು ತಾರ್ಕಿಕವಾಗಿ ಯೋಚಿಸುವತ್ತಲೂ ವಾಲಬೇಕು. ಒಂದಲ್ಲ ಒಂದು ವಿಧದಲ್ಲಿ ನಾವೆಲ್ಲರೂ ಚೌಕಟ್ಟು, ಸಂಪ್ರದಾಯಗಳಿಗೆ ಕಟ್ಟು ಬಿದ್ದಿದ್ದೇವೆ ನಿಜ. ಆದರವುಗಳು ನಮ್ಮನ್ನು ತಾರ್ಕಿಕವಾಗಿ ಬೆಳೆಸುವಂತಿರಬೇಕು. ನಿತ್ಯದ ಬದುಕಿಗೆ ಪೂರಕವಾಗುವಂತಹ ನಂಬಿಕೆ, ವಿಶ್ವಾಸಗಳನ್ನಿವು ತುಂಬಬೇಕು. ಕಾಲಾನುಕಾಲಕ್ಕೆ ಒಂದಿಷ್ಟು ಬದಲಾವಣೆಯನ್ನೂ ತರಬೇಕು. ಬಾಳುವ ರೀತಿಗೆ ಪೂರಕವಾಗಿದ್ದುಕೊಂಡೇ ಇವುಗಳು ಜೊತೆಯಲ್ಲೂ ಇರಬೇಕು. ಚೌಕಟ್ಟುಗಳು ಬಂಧಿಸಿತೆಂದರೆ ಅದರಿಂದ ಹೊರಕ್ಕೆ ಚಾಚಿಕೊಳ್ಳುವ ಶಕ್ತಿ ನಮ್ಮಲ್ಲಿರಬೇಕು. ಅಂತಹ ಚಾಚುವಿಕೆಯ ಗುಣವನ್ನು ಹೊಂದಬೇಕು. ಜನ್ಮ ಹೇಗೆ ರೂಪಾಂತರಗೊಂಡಿತೋ, ಹಾಗೆಯೇ ಜೀವನ ಕ್ರಮ, ಆಹಾರ ಪದ್ಧತಿ, ನಂಬಿಕೆ-ಆಚರಣೆಗಳೆಲ್ಲವೂ ಮಾರ್ಪಾಡುಗೊಂಡವು. ಆರೋಗ್ಯಕರ ಬದಲಾವಣೆಯು ಆಗಬೇಕಾದುದು ಪ್ರಸಕ್ತ ಕಾಲಧರ್ಮದ ಅಗತ್ಯ.

ರೀವೈಂಡ್ ಮೋಡಿಗೆ ಹೋಗೋಣ-ನಮ್ಮ ಸುತ್ತ-ಮುತ್ತ ಎಲ್ಲ ವರ್ಗ-ಧರ್ಮದ ಜನರಿರುತ್ತಿದ್ದರು. ಕಷ್ಟ-ಸುಖಗಳಿಗೆ ಒಬ್ಬರಿಗೊಬ್ಬರು ಭಾಗಿಯಾಗುತ್ತಿದ್ದರು. ಯಾರೂ ಮೇಲು-ಕೀಳೆಂದು, ಆ ಧರ್ಮ ಈ ಧರ್ಮವೆಂಬ ಅಧರ್ಮದ ಮಾತುಗಳನ್ನಾಡಿ, ಅದನ್ನೇ ನಂಬಿಕೊಂಡು ಬದುಕನ್ನು ಕಟ್ಟುತ್ತಿರಲಿಲ್ಲ. ಸಮಾಜದಲ್ಲಿ ಬದುಕನ್ನು ಕುಟುಂಬ ವ್ಯವಸ್ಥೆಯಂತೆ ಕಟ್ಟಿಕೊಳ್ಳುತ್ತಿದ್ದೇವು. ಹೊಟ್ಟೆ ಪೊರೆಯುವುದೇ ಮೂಲ ಉದ್ದೇಶವೂ ಆಗಿತ್ತು. ಅದಕ್ಕಾಗಿ, ಸಣ್ಣಪುಟ್ಟ ಕೊಡು-ಕೊಳ್ಳುವಿಕೆಯನ್ನು ಮಾಡಿಕೊಂಡಿದ್ದೆವು. ನಮ್ಮ ಧರ್ಮ-ನೇಮ ಕಾರ್ಯಕ್ಕೆ ಅವರು ಹೊರೆ ತರುವುದು, ಅವರ ಧರ್ಮಕಾರ್ಯಕ್ಕೆ ನಾವು ಕಾಣಿಕೆ ಹಾಕುವ ನಂಬಿಕೆಗಳು ಬಹಳ ನೈಜವಾಗಿಯೇ ನಡೆದುಕೊಂಡು ಬರುತ್ತಿದ್ದವು.

ಭಾನುವಾರ ಚರ್ಚಿಗೆ ಯಾಕೆ ಹೋಗಿಲ್ಲವೆಂದು ನೆರೆಮನೆಯ ಉಸ್ಮಾನ್ ಸಾಬರು ಯುವಕ ಕಾರ್ಲೋಸ್ನನ್ನು ಬಹಳ ಸಹಜವಾಗಿ ಕೇಳುತ್ತಿದ್ದರೆ, ಅಷ್ಟೇ ಸಹಜವಾಗಿ ರಾಮಣ್ಣ ರೈಗಳು ಲತೀಫ್ ನನ್ನು ಶುಕ್ರವಾರ ಮಸೀದಿಗೆ ಯಾಕೆ ಹೋಗಲಿಲ್ಲವೆಂದು ಗದರಿಸಿದ್ದರು. ಅನಂತನಿಗೆ ನಿತ್ಯಪೂಜೆ ಮಾಡೆಂದು, ದೇವಸ್ಥಾನಕ್ಕೆ ಹೋಗಬೇಕೆಂದು ಫೆರ್ನಾಂಡೀಸರು ಹೇಳಿ, ಪರಸ್ಪರರ ನಂಬಿಕೆಯನ್ನು ಪೋಷಿಸಿ, ಕಾಪಾಡಿಕೊಂಡು ಬರುತ್ತಿದ್ದರು. ನಡೆ-ನುಡಿಯಲ್ಲಿ,ಬಾಳುವ ರೀತಿಯಲ್ಲಿ, ಜೀವನ ಕ್ರಮದಲ್ಲಿ ಸಹಜವಾಗಿಯೇ ಜಾತ್ಯತೀತತೆಯು ಮಿಳಿತಗೊಂಡಿತ್ತು. ಶ್ರೇಷ್ಠತೆಯ ಅಮಲು ತಲೆಗೇರಿರಲಿಲ್ಲ. ಆದರೆ ಇಂದು, ನಮ್ಮದೇ ಶ್ರೇಷ್ಠವೆಂಬ ಒಂದೇ ಒಂದು ಭಾವನೆಯು ಅದೆಷ್ಟು ಸಂಬಂಧಗಳನ್ನು ಹರಿದು ಮುಕ್ಕಿಲ್ಲ? ಸಾವು, ಯಾವ ಧರ್ಮ-ಜಾತಿಯನ್ನೂ ನೋಡದೆ ತನ್ನ ಸೃಷ್ಟಿ ನಿಯಮವನ್ನು ನಿಷ್ಠೆಯಿಂದ ಪಾಲಿಸುತ್ತಿರುತ್ತದೆ. ಹಾಗೇನೇ ಹುಟ್ಟೂ ಕೂಡ.

ನಮಗಿಂದು ಬೇಕಾಗಿರುವುದು ಎಲ್ಲರನ್ನೂ ಒಟ್ಟಾಗಿಸುವ ಸಮಾನ ದು:ಖ. ಒಟ್ಟಾಗುವಿಕೆ, ಪಾಲ್ಗೊಳ್ಳುವಿಕೆ, ಮತ್ತದಕ್ಕೆ ವೇದಿಕೆ ಆಗಬಲ್ಲಂತಹ ಕಾಮನ್ ಇಶ್ಯೂಗಳೇ. ಧರ್ಮವಿಂದು ವ್ಯಾಪಾರ, ಅಧಿಕಾರದ ಅಸ್ತ್ರವಾಗಿ ಪರಿವರ್ತನೆಗೊಂಡಿದೆ. ನದಿ-ಋಷಿ-ಸ್ತ್ರೀ ಮೂಲವನ್ನು ಹುಡುಕಬಾರದಂತೆ. ಆದರಿಂದು ಮೂಲವನ್ನು ಕೆದಕಿ-ಬೆದಕಿ ಮೈ ಎಲ್ಲ ಕಜ್ಜಿಯಾಗಿಸಿಕೊಂಡು, ನಾಳಿನ ಪೀಳಿಗೆಗೂ ಅದೇ ತುರಿಕೆಯನ್ನು, ವಾಸಿಯಾಗದ ಕಜ್ಜಿಯನ್ನು ಅಂಟಿಸಿಬಿಟ್ಟು ಹೋಗುವ ನಿಟ್ಟಿನಲ್ಲಿ ನಾವಿದ್ದೇವೆ. ಅಷ್ಟಕ್ಕೂ, ಈ ‘ಧರ್ಮ ಶ್ರೇಷ್ಠತೆ’ ಎಂಬ ಗುಮ್ಮವು ಬದುಕಿಗೆ ಪೂರಕವಾಗಿ, ಸಮಾಜಮುಖಿಯಾಗಿ ಸ್ಪಂದಿಸಿ, ಸಾಮರಸ್ಯವನ್ನು ಕಾಪಿಡುವಲ್ಲಿ ಸ್ಪರ್ಧೆಗಿಳಿದಿದ್ದರೆ ಮೆಚ್ಚಬಹುದಿತ್ತು. ಈ ಹೊತ್ತಿನ ನಮ್ಮ ನಡುವಿನ ಸಂಕುಚಿತ ಮನಸ್ಸುಗಳು ತಮ್ಮ ಅಸ್ತಿತ್ವಕ್ಕಾಗಿ ಧಾರ್ಮಿಕ ಅಫೀಮನ್ನು ನೆತ್ತಿಗೇರಿಸ್ಕೊಂಡು ಸೃಸ್ಟಿಸುವ ಅವಾಂತರಗಳತ್ತ ನೋಡಿದರೆ ಅರ್ಥವಾದೀತು ‘ನಂಬಿಕೆ’ಎಂಬ ಬೆಣ್ಣೆ ಅದ್ಹೇಗೆ ಅನಾಯಾಸವಾಗಿ ಧರ್ಮರಾಜಕಾರಣ ಎಂಬ ತೋಳದ ಬಾಯಿಗೆ ಜಾರಿ ಬಿದ್ದಿದೆಯೆಂದು!

ನಂಬಿಕೆಯನ್ನು ಅಸ್ತ್ರವಾಗಿಸಿಕೊಂಡೇ ರಾಜಕೀಯ ಪಗಡೆಯಾಡುವ ರಾಜಕಾರಣಿಗಳು ಒಂದು ಕಡೆಯಾದ್ರೆ, ಅದಕ್ಕೆ ಧಾರ್ಮಿಕ ಬಣ್ಣ ಹಚ್ಚಿ ಭಯೋತ್ಪಾದನೆಯಂತಹ ಹೀನ ಕೃತ್ಯವನ್ನೆಸಗುವ ಮತಾಂಧರಿಂದಾಗಿ ನಂಬಿಕೆಯ ಅರ್ಥವೇ ಕಳೆದು ಹೋಗಿಬಿಟ್ಟಿದೆ. ಭಗವಂತನಲ್ಲಿ ಅಚಲ ನಂಬಿಕೆಯಿರಿಸಿ ಕಾಶ್ಮೀರ ಕಣಿವೆಯಿಂದ ಕನ್ಯಾಕುಮಾರಿಯವರೆಗೆ ದೇಶದಾದ್ಯಂತ ರಕ್ತವನ್ನೇ ಹರಿಸುತ್ತಿರುವವರ ನಂಬಿಕೆ ಒಂದೆಡೆಯಾದರೆ, ಅದೇ ನಂಬಿಕೆಯನ್ನು ರಾಜಕೀಯ ದಾಳವಾಗಿಸಿಕೊಳ್ಳುವ ವಿವಿಧ ರಂಗುಗಳ ಮನಸ್ಸುಳ್ಳವರು ಇನ್ನೊಂದೆಡೆ. ಪುನರ್ಜನ್ಮವಿದ್ದರೆ ಅನ್ಯಧರ್ಮದಲ್ಲಿ ಹುಟ್ಟುವುದಾಗಿ ಹೇಳಿ ಓಲೈಸುವ, ಸಮಾಜದೆದುರು ನಂಬಿಕೆಯನ್ನು, ದೇವರು-ಧರ್ಮವನ್ನು ಕೀಳಾಗಿ ಬಿಂಬಿಸಿ ಗುಟ್ಟಿನಲ್ಲಿ ಮನೆಯೊಳಗೆ ಗಣಹೋಮ ನಡೆಸುವ, ಹೀನವಾಗಿ ಬೊಬ್ಬಿರಿಯುವ ರಾಜಕಾರಣಿಗಳು, ಸುಡೋ ಜಾತ್ಯತೀತವಾದಿಗಳೆಲ್ಲಾ ಧರ್ಮ ಸಹಿಷ್ಣುತೆಯ ಈ ನಾಡಿನ ಯಾವ ನಂಬಿಕೆಗೆ ಅರ್ಹರು ನೀವೇ ಹೇಳಿ?

ನಾಯಕರ ಮೂಗಿನ ನೇರಕ್ಕೆ ಅನುಗುಣವಾಗಿ ಕಾಲಾನುಕಾಲಕ್ಕೆ ಜಾತ್ಯತೀತತೆಯು ಬದಲಾಗುತ್ತಾ ಹೋಗುತ್ತದೆ. ಇಂದು ‘ಪೊಲಿಟಿಕಲ್ ಕರೆಕ್ಟ್ ನೆಸ್’ ಎನ್ನುವುದು ಅನುಕೂಲಕ್ಕಾಗಿ ಬಳಸಿಕೊಳ್ಳುವ ಸರಕಾಗಿ ಬಿಟ್ಟಿದೆ. ಅಧಿಕಾರದ ಹಪಾಹಪಿಯು ಯಾವ ಮಟ್ಟಕ್ಕೆ ಹೋಗುತ್ತದೆಂದರೆ ಮತದಾರರೇ ಕಂಗಾಲಾಗಿ ಬಿಡಬೇಕು. ತೊಡೆ ತಟ್ಟಿದವರು, ಭುಜ ಕುಟ್ಟಿದವರು, ರಾಜ್ಯ ಸುತ್ತಿದವರು, ದೇಶ ಕಟ್ಟಿದವರು ಒಬ್ಬರೋ ಇಬ್ಬರೋ.. ಮತದಾರನಿಗೆ ಮಂಕುಬೂದಿ ಎರಚಿ, ಅಧಿಕಾರವನ್ನು ಅನುಭವಿಸುವ ಇವರು, ತಳಮಟ್ಟದ ಕಾರ್ಯಕರ್ತರ ನೋವನ್ನು ಅರಿತವರೆಂದು ತಿಳಿದಿರೇನು? ತಿಳಿದಿರುತ್ತಿದ್ದರೆ ಪರಸ್ಪರ ಬಡಿದಾಡಿಕೊಂಡು ಸಂಸಾರ, ಸಮಾಜದಿಂದ ಕಾರ್ಯಕರ್ತರು ದೂರವಾಗುತ್ತಿರಲಿಲ್ಲ. ಹೀಗಿರುವಾಗ ಅಧಿಕಾರವನ್ನು ಅನುಭವಿಸುತ್ತಾ ಮತದಾರರ ಮೂತಿಗೆ ಬೆಣ್ಣೆ ಸವರುವ ನಾಯಕರ ವಿಶ್ವಾಸಾರ್ಹತೆಯೇನು? ಪ್ರಜಾಪ್ರಭುತ್ವದ ಬಹುದೊಡ್ಡ ಅಣಕವಿದು. ಧರ್ಮ-ಜಾತಿಗಳು, ಪೀಠ-ಮಠಗಳು ಪಕ್ಷವನ್ನು ಬೆಂಬಲಿಸುವುದು ಹಾಗೂ ವಿರೋಧಿಸುವುದು, ಅದೇ ರೀತಿ ಪಕ್ಷಗಳು ಅವುಗಳ ಆಶ್ರಯವನ್ನು ಪಡೆಯುವುದು ಮತ್ತವುಗಳನ್ನು ಓಲೈಸುವುದು ಕೂಡ ಪ್ರಜಾಪ್ರಭುತ್ವಕ್ಕೆ ಮಾರಕ. ಗಣಿತಕ್ಕಿಂತಲೂ ಮಿಗಿಲಾದ ಕೆಮೆಸ್ಟ್ರಿಯೊಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏರ್ಪಟ್ಟರೆ ದಾಳ-ಪ್ರತಿದಾಳ, ಜಾತಿ-ಮತ-ಧರ್ಮಗಳನ್ನೊಳಗೊಂಡ ವ್ಯೂಹಗಳು ಮತ್ತು ನಂಬಿಕೆಗಳೆಲ್ಲಾ ಪಕ್ಕಾ ತಲೆ ಕೆಳಗಾಗಿ ಬಿಡುತ್ತವೆ. ಅಂತಹ ಅಚ್ಚರಿಯ ಕೆಮೆಸ್ಟ್ರಿಯು ಜರುಗಬೇಕಿದೆ.

ನಮ್ಮ ಸುತ್ತಲಿನ ನಮ್ಮದೇ ಚಿತ್ತ ಹುತ್ತಗಟ್ಟಬೇಕು. ನಮ್ಮದೆನ್ನುವ ಸಮಗ್ರ ಅಸ್ಮಿತೆ, ಗೌರವ, ಹೆಮ್ಮೆಗಳು ನಮ್ಮೆಲ್ಲರದ್ದಾಗಬೇಕು. ನಂಬಿಕೆಯು ದಿನ ನಿತ್ಯದ ಬದುಕಲ್ಲಿ ನಿರಂತರವಾಗಿ ಬಂದು-ಹೋಗಿ-ಬಂದು ಮಾಡುವ, ಎಲ್ಲವನ್ನೂ ಕಳೆದುಕೊಂಡೆ ಎನ್ನುವ ಹೊತ್ತಿಗೆ ಅಲ್ಲೆಲ್ಲೋ ಮೂಲೆಯಲ್ಲಿ ಅವಿತಿದ್ದ ಚಿಗರೆಯಂತೆ ಚಿಮ್ಮನೆ ಜಿಗಿಯುವ, ಇನ್ನೆಲ್ಲಿಂದಲೋ ಹಾರಿ ಬಂದು ನಮ್ಮಲ್ಲಿ ಬಲ ತುಂಬುವ ಕಾರ್ಯವನ್ನು ನಂಬಿಕೆಯು ನೆರವೇರಿಸುತ್ತಿರುತ್ತದೆ. ಈ ನಂಬಿಕೆಯೇ ಹೀಗೆ ಅವರವರು ನಂಬಿದ ಹಾಗೆ. ನಂಬಿ ನಂಬಿ ಎಂದು ಗೋಗರೆಯುವ ಕಾಲದಲ್ಲಿ ನಮ್ಮನ್ನು-ನಿಮ್ಮನ್ನು ಹಾಗೆ ಎಲ್ಲವನ್ನೂ ಮನದೊಳಗಿನ ಸಣ್ಣ ಭಯದ ಜೊತೆಗೆ ನಂಬುವವರಿದ್ದಾರೆ.

ಮನೆಯೊಳಗೇ ಗೆದ್ದಲು ಮನೆ ಮಾಡಿದೆ. ಅಕ್ಕ-ಪಕ್ಕದಲ್ಲಿ ಸಂಶಯದ ಹುತ್ತಗಳು. ಅಡಿಗಡಿಗೆ ಖೆಡ್ಡಾಗಳು. ಟೋಪಿ, ಶಿಲುಬೆ, ಕುಂಕುಮವನ್ನು ಕಂಡರೆ ಅದೇನೋ ಹೊಟ್ಟೆಯಲ್ಲಿ ತಳಮಳ. ನಂಬಿ ಕೆಟ್ಟೆವನೋ ಎಂಬ ಭಯ! ನಂಬಿಕೆಯು ಪ್ರಜ್ಞೆಯಲ್ಲಿ ಉಳಿದು-ಬೆಳೆದು ಮಹತ್ತಾಗಬೇಕು. ನಂಬಿಕೆಯೆಂಬುದು ಭಾವುಕತೆಯಿಂದ ಕೂಡಿರಬಾರದು. ಅದು ಮನಸ್ಸು-ಹೃದಯಗಳೆರಡನ್ನೂ ಬೆಸದುಕೊಂಡಿರಬೇಕು. ತನ್ನ ಉದ್ಧಾರ ತನ್ನಿಂದಲೇ ಎಂಬ ಸತ್ಯವನ್ನು ಅರಿತಿರುವುದು ಬಹಳ ಮುಖ್ಯ. ಇದ್ದುದನ್ನು ಕೆಡವಿದಾಗಲೇ ಹೊಸದನ್ನು ಕಟ್ಟಲು ಸಾಧ್ಯ. ಸಾಗರವುಕ್ಕಿ ಭೇದವಿಲ್ಲದೆ ಎಲ್ಲವನ್ನೂ ತನ್ನ ಗರ್ಭದೊಳಗೆ ಸೆಳೆದುಕೊಳ್ಳುತ್ತದೆ ನೋಡಿ, ಅಂತಹದ್ದೊಂದು ಮಂಥನದ ತುರ್ತಿದೆ. ಆಗಲೇ ಹೊಸತೊಂದು ಹುಟ್ಟಲು, ಮತ್ತದನ್ನು ಕಟ್ಟಲು ಜೊತೆಗೆ ಬೆಳಕೊಂದನ್ನು ಹಚ್ಚಲೂ ಸಾಧ್ಯವಾಗುವುದು.

ಈ ಅಂಕಣದ ಹಿಂದಿನ ಬರೆಹಗಳು:
ಭರವಸೆಯ ಜೊತೆ ಹೆಜ್ಜೆ ಹಾಕೋಣ..
ಚಾದರದೊಳಗಿನ ಕಥೆ, ವ್ಯಥೆ...
'ಚಂದ್ರಗಿರಿ ತೀರದಲ್ಲಿ' ತೀರದ ಬವಣೆ..
‘ಬಯಲರಸಿ ಹೊರಟವಳು’- ಇಟ್ಟ ಹೆಜ್ಜೆಯ ಜಾಡು
ಬೆಳಕ ದಾಟಿಸುವ ಹಣತೆ- ಎಸ್.ದಿವಾಕರ್
ಅನುಭವಿಸಿ ಬರೆಯುವ ಜಯಂತ ಕಾಯ್ಕಿಣಿ
ಜೀವ ಜೀವಗಳ ಅಳು…
ಹನಿ ಹನಿಸಿದ ಚೊಕ್ಕಾಡಿ
ಶಾಂತ ಕಡಲೊಳು ಬೀಸಿದ ಬಿರುಗಾಳಿ
ರಂಗದ ಮೇಲಿನ ಬಣ್ಣದ ಭಾವಗಳು
ಬೆಳಕ ದಾಟಿಸುವ ಹಣತೆಯೂ...ಒಳ್ಳೆಯವರಾಗುವ ವ್ಯಸನವೂ...
ಟ್ಯಾಗ್ ಹಾಕಿ ನೋಡುವ ಮನಸ್ಸುಗಳ ನಡುವೆ
ಸಖನೂ ಸುಖವೂ ಒಂದೇ ಆಗುವ ಕ್ಷಣ

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...