ದಿಟ್ಟ ಹೆಣ್ದನಿಯ ಕವಿತೆಗಳು ‘ನದಿಯ ವೃತ್ತಾಂತ’

Date: 24-02-2024

Location: ಬೆಂಗಳೂರು


"ಹೆಣ್ಣನ್ನು ಸಾಂಸಾರಿಕ ಬಂಧನದಲ್ಲಿ ಕಟ್ಟಿಹಾಕಿ ಸುತ್ತಲಿನ ಪ್ರಪಂಚಕ್ಕೆ ಅವಳು ತೆರೆದುಕೊಳ್ಳದಂತೆ ಮಾಡುವುದು ಲಾಗಾಯಿತ್ತಿನಿಂದಲೂ ನಡೆದುಬಂದಿದೆ. ಇತ್ತೀಚೆಗೆ ಹಿಂದಿನ ಎಲ್ಲವೂ ಶ್ರೇಷ್ಠ ಎಂಬ ಭಾವನೆಯನ್ನು ತಾವಾಗಿಯೇ ಅಳವಡಿಸಿಕೊಳ್ಳುತ್ತಿರುವ ಸ್ತ್ರೀವರ್ಗ ತನ್ನನ್ನು ತಾನು ಕಟ್ಟಿಹಾಕಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಈ ಕವನ ಸಂಕಲನ ಪ್ರಸ್ತುತತೆಗೆ ಚಾಟಿ ಏಟು ಕೊಟ್ಟು ಎಚ್ಚರಿಸುವಂತಿದೆ," ಎನ್ನುತ್ತಾರೆ ಲೇಖಕಿ ಶ್ರೀದೇವಿ ಕೆರೆಮನೆ. ಅವರು ತಮ್ಮ ‘ಸಿರಿ ಕಡಲು’ ಅಂಕಣದಲ್ಲಿ ಮಮತಾ ಶಂಕರ ಅವರ ‘ನದಿಯ ವೃತ್ತಾಂತ’ ಕೃತಿ ಕುರಿತು ಬರೆದ ಕೃತಿ ವಿಮರ್ಶೆ.

ದಿಟ್ಟ ಹೆಣ್ದನಿಯ ಕವಿತೆಗಳು
ಹುಟ್ಟು ದಂದೆಯೇ ಎಂದುಕೊಂಡೆ
ದುಡ್ಡಿಗೆ ಸಿಕ್ಕುತ್ತೆ ವೀರ್ಯ
ವೀರಗಂಡಸರ ಮಾನ ಉಳಿಸಿ ಅಪ್ಪನಾಗಿಸುತ್ತೆ

ಕವನವೆಂದರೆ ಮುಖ ತಿರುಗಿಸುವ ಪ್ರಸ್ತುತ ಸನ್ನಿವೇಶಗಳಲ್ಲಿ ಇಷ್ಟೊಂದು ಗಟ್ಟಿ ಧ್ವಿಯಲ್ಲಿ ಸಮಾಜಕ್ಕೆ ಮುಖಾಮುಖಿಯಾಗುವವರು ಇದ್ದಾರೆಂಬುದೇ ಕವಿತೆಯ ಪಾಲಿಗೆ ಭರವಸೆಯ ಆಶಾಕಿರಣ. ಹಗೆ ಕವಿತೆಗಳಲ್ಲಿ ತಮ್ಮ ಗಟ್ಟಿ ಛಾಪು ಮೂಡಿಸುತ್ತಿರುವವರು ಬೆಳಗಾವಿಯ ಮಮತಾ ಶಂಕರ. ಅವರ ನದಿಯ ವೃತ್ತಾಂತ ಇಂತಹ ಹಲವಾರು ಸ್ತ್ರೀಪರ ಧ್ವನಿಗಳಿಂದ ನಮ್ಮನ್ನು ಸೆಳೆಯುತ್ತದೆ.

ಹೆಣ್ಣನ್ನು ಸಾಂಸಾರಿಕ ಬಂಧನದಲ್ಲಿ ಕಟ್ಟಿಹಾಕಿ ಸುತ್ತಲಿನ ಪ್ರಪಂಚಕ್ಕೆ ಅವಳು ತೆರೆದುಕೊಳ್ಳದಂತೆ ಮಾಡುವುದು ಲಾಗಾಯಿತ್ತಿನಿಂದಲೂ ನಡೆದುಬಂದಿದೆ. ಇತ್ತೀಚೆಗೆ ಹಿಂದಿನ ಎಲ್ಲವೂ ಶ್ರೇಷ್ಠ ಎಂಬ ಭಾವನೆಯನ್ನು ತಾವಾಗಿಯೇ ಅಳವಡಿಸಿಕೊಳ್ಳುತ್ತಿರುವ ಸ್ತ್ರೀವರ್ಗ ತನ್ನನ್ನು ತಾನು ಕಟ್ಟಿಹಾಕಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಈ ಕವನ ಸಂಕಲನ ಪ್ರಸ್ತುತತೆಗೆ ಚಾಟಿ ಏಟು ಕೊಟ್ಟು ಎಚ್ಚರಿಸುವಂತಿದೆ.

ಹೆಸರಿರದ ಖಾಲಿ ಗೋಡೆಗಳಿಗೆ
ಅವಳು ಉಸಿರು ನೀಡಿದ ಹೊತ್ತು
ಪ್ರೇಮ ಸದನ ಬೆಚ್ಚನೆಯ ಗೂಡಾಯ್ತು

ಎನ್ನುವ ಆರಂಭಿಕ ಸಾಲುಗಳು ಇಡೀ ಸಂಕಲನದ ದಿಕ್ಕಿನ ಗುಟ್ಟನ್ನು ಬಿಟ್ಟುಕೊಡುತ್ತದೆ. ಹೆಣ್ಣು ಈ ಜಗದ ಜೀವ ಕೇಂದ್ರ ಅವಳಿಲ್ಲದಿದ್ದರೆ ಜಗತ್ತು ಜೀವವಿಲ್ಲದ ಬರೀ ನಿರ್ಜೀವ ಚಲನೆಯನ್ನು ಹೊತ್ತು ತಿರುಗುವ ಭೂಮಿ, ಸರ‍್ಯ ಹಾಗು ಉಳಿದ ಗ್ರಹಗಳನ್ನು ಒಳಗೊಂಡಿದ್ದು ಅಷ್ಟೆ. ಹೆಣ್ಣಿಲ್ಲದ ಮನೆ ಎಂದರೆ ಬರೀ ಕಟ್ಟಡ. ನಾಲ್ಕು ಗೋಡೆಗಳಿಂದ ಆವೃತ್ತವಾದ ಒಂದು ನಿರ್ಜೀವ ವಸ್ತು. ಆದರೆ ಆ ಮನೆಯೊಳಗೆ ಹೆಣ್ಣು ಉಸಿರಾಡಿದರೆ ಮಾತ್ರ ಅದೊಂದು ಪ್ರೇಮ ಸದನವಾಗುತ್ತದೆ ಎನ್ನುತ್ತಲೆ ತಮ್ಮೊಳಗಿನ ಹೆಣ್ತನದ ಒಂದೊಂದೇ ಪರಿಕರಗಳನ್ನು ತೆಗೆ ತಗೆದು ಕಾವ್ಯವಾಗಿಸುವಲ್ಲಿ ಮಮತಾ ಶಂಕರ ಯಶಸ್ಸು ಸಾಧಿಸಿದ್ದಾರೆ.

ವಠಾರದ ಅವಳು ಕವನ ಸಂಕಲನದಲ್ಲಿ ಗಮನ ಸೆಳೆಯುವ ಒಂದು ಕವಿತೆ.
ನೀವು ಹೇಗೋ ಗೊತ್ತಿಲ್ಲ
‘ಅವಳು’ ಮೂರು ಮನೆಯ ವಠಾರದ
ನಡುವೆ ಇರುವವಳು- ಸದ್ಗೃಹಿಣಿ

ಎಂದು ಪ್ರಾರಂಭವಾಗುವ ಕವಿತೆ ಆ ಸದ್ಗೃಹಿಣಿಯ ಪಾತ್ರಗಳನ್ನು ಹೇಳುತ್ತ ಹೋಗುತ್ತದೆ. ಬೆಳ್ಳಾನ ಬೆಳಿಗ್ಗೆ ಎದ್ದು ಚುಕ್ಕಿ ರಂಗೋಲಿ ಹಾಕುತ್ತಾಳೆ. ಮನೆಯೆದುರು ನಸುಗತ್ತಲಲ್ಲಿಯೇ ರಂಗೋಲಿ ಹಾಕುವುದು ಗ್ರಹಿಣಿಯ ಲಕ್ಷಣ ಎಂದು ನಮ್ಮನ್ನು ನಂಬಿಸಿಕೊಂಡು ಬರಲಾಗಿದೆ. ಅದೂ ಕೂಡ ಚುಕ್ಕಿ ರಂಗೋಲಿಯೇ ಆಗಬೇಕು. ಚುಕ್ಕಿಯ ಅಂತರ, ಚುಕ್ಕಿಗಳನ್ನು ಸೇರಿಸುವ ಗೆರೆಗಳನ್ನು ಎಳೆಯುವ ರೀತಿ ಹಾಗು ಅವುಗಳ ನೇರ ಎಲ್ಲವನ್ನೂ ಕಣ್ಣಲ್ಲೇ ಅಳತೆ ಮಾಡಿ ಆ ಮನೆಯ ಗೃಹಿಣಿ ಹೇಗೆ ಎಂದು ಹೇಳುತ್ತಿದ್ದರಂತೆ. ಹೀಗಾಗಿ ಮೂರು ಮನೆಗಳಿರುವ ವಠಾರದ ಆ ಸದ್ಗೃಹಿಣಿಯೂ ಚುಕ್ಕಿ ರಂಗೋಲಿ ಇಡುತ್ತಾಳೆ. ಎಲ್ಲರೂ ಏಳುವುದಕ್ಕೂ ಮೊದಲೇ ತಿಂಡಿ ಚಹಾ ಸಿದ್ಧ ಪಡಿಸುತ್ತಾಳೆ. ಮಧ್ಯಾಹ್ನದ ಊಟವನ್ನೂ ಸಿದ್ಧ ಮಾಡಿ ಡಬ್ಬಿಗೆ ಹಾಕಿ ಕೊಡುತ್ತಾಳೆ. ಗಂಡ ಮಕ್ಕಳು ಹೋದ ನಂತರ ತಳ್ಳುಗಾಡಿಯ ತರಕಾರಿಯವನ ಬಳಿ ಚೌಕಾಸಿ ಮಾಡಿ ಕಾಸು ಉಳಿಸಿ ಮಗಳಿಗೆ ಬೆಂಡೋಲೆ ಮಾಡಿಸುವ ಕನಸು

ಕಾಣುತ್ತಾಳೆ ಎನ್ನುವ ಕವಯತ್ರಿ ಇಲ್ಲಿ ಬಳಸಿರುವ ಭಾಷೆಯನ್ನು ತುಸು ಸೂಕ್ಷ್ಮವಾಗಿ ಗಮನಿಸಬೇಕು. ಮನೆಯ ಎಲ್ಲ ಕೆಲಸವನ್ನೂ ತಾನೊಬ್ಬಳೇ ಗಾಣದೆತ್ತಿನಂತೆ ದುಡಿಯುವುದನ್ನು ಕೆಲವೇ ಸಾಲುಗಳಲ್ಲಿ ಹೇಳುತ್ತಾರೆ. ತಳ್ಳುಗಾಡಿಯವನ ಬಳಿ ತರಕಾರಿ ಕೊಳ್ಳುವಾಗ ಚೌಕಾಸಿ ಮಾಡಿ ಆಕೆ ಉಳಿಸಬಹುದಾದ ಹಣವಾದರೂ ಎಷ್ಟು? ಹಾಗೆ ಉಳಿಸಿದ ಪುಡಿಗಾಸಿನಿಂದ ಚಿನ್ನ ಮಾಡಿಸುವುದಾದರೆ ಆಕೆ ಅದೆಷ್ಟು ವರ್ಷಗಳ ಕಾಲ ಕಾಯಬೇಕಾಗಬಹುದು? ಆದರೂ ತಾನು ಉಳಿಸಿದ ಚಿಲ್ಲರೆ ಕಾಸಿನಿಂದ ಮಗಳಿಗೆ ಚಿನ್ನ ಮಾಇಡಿಸುವ ಕನಸು ಕಾಣುತ್ತಿರುವ ಆ ಸದ್ಗೃಹಿಣಿ ಮೂರು ಮನೆಯ ವಠಾರದವಳು ಮಾತ್ರವಲ್ಲ. ನಮ್ಮ ದೇಶದ ಅಸಂಖ್ಯಾತ ಕೆಳಮಧ್ಯಮ ವರ್ಗವನ್ನು ಪ್ರತಿನಿಧಿಸುವವಳು. ಮಧ್ಯಾಹ್ನದ ಊಟವನ್ನು ಒಂಟಿಯಾಗಿ ಮಾಡುತ್ತಲೇ ಮಳೆಬಿಲ್ಲು, ಮೌನರಾಗಗಳಲ್ಲಿ ಬದುಕನ್ನು ಕಳೆಯುವವಳು. ಹಾಯಾಗಿದ್ದಾಳೆ ಆಕೆ ಹೊರಗಿನವರ ನೋಟಕ್ಕೆ. ಸಂತೃಪ್ತ ಜೀವನ ನಡೆಸುವವಳಾಗಿ ಕಾಣಿತ್ತಾಳೆ. ಆದರೆ ನಡುರಾತ್ರಿ ಎಚ್ಚರಾದರೆ ಒಂದು ಬದಿಯಲ್ಲಿ ಮಗಳು ಶಾಂತ ನಿದ್ರೆಯಲ್ಲಿದ್ದರೆ ಮತ್ತೊಂದು ಬದಿಗೆ ಗಂಡನ ತುಟಿಯಲ್ಲಿ ಸುಖದ ಸಂತೃಪ್ತ ನಗೆಯಿದೆ. ಆದರೆ ಇವಳಿಗೆ ಖಾಲಿತನ. ಏನನ್ನೋ ಕಳೆದುಕೊಂಡ ಭಾವ. ಆದರೆ ಕಳೆದುಕೊಂಡಿದ್ದು ಏನು ಎಂಬುದು ಅವಳಿಗೂ ತಿಳಿಯಲಾಗುತ್ತಿಲ್ಲ. ನಮ್ಮ ಸುತ್ತ ಇಂತಹ ಅದೆಷ್ಟು ಹೆಣ್ಣುಗಳಿದ್ದಾರೆ ಎಂದು ಗಮನಿಸಿದರೆ ಮುಕ್ಕಾಲು ಭಾಗ ಇದೇ ಗುಂಪಿಗೆ ಸೇರುತ್ತಾರೆ. ಹೀಗಾಗಿ ಇದು ನಮ್ಮೆಲ್ಲರ ಕವಿತೆ.

‘ಮೀಸಲು’ ಎಂಬ ಕವಿತೆ ಕೂಡ ಇದೇ ಧ್ವನಿಯನ್ನು ಹೊರಡಿಸುತ್ತದೆ. ಹೆಣ್ಣಿನ ಜನುಮವನ್ನು ಜಾನಪದರಾದಿಯಾಗಿ ನೋವಿನ ಕಡಲು ಎಂದಿದ್ದಾರೆ. ಮನುಸ್ಮೃತಿಯನ್ನು ಹೆಣ್ಣು ಸದಾ ಪರಾಧೀನ ಎಂದು ಫಾರ್ಮಾನು ಹೊರಡಿಸಿದೆ. ಹೀಗಾಗಿ ಹೆಣ್ಣು ಹೆತ್ತವರಿಗೆ ಋಣಿ, ‘ಬಾಳು ಕೊಟ್ಟ’ ನೆನಪಿರಲಿ ಇದು ಸಂಗಾತಿಯಾದ ಅಲ್ಲ, ‘ಬಾಳುಕೊಟ್ಟ ಗಂಡನಿಗಂತೂ ಚಿರ ಋಣಿ, ತನ್ನ ಹೊಟ್ಟೆಯಲ್ಲಿ ಹುಟ್ಟಿ ತನ್ನನ್ನು ತಾಯಿ ಮಾಡಿದ್ದಕ್ಕಾಗಿ ಮಕ್ಕಳಿಗೂ ಆಕೆ ಋಣಿಯಾಗಿರಬೇಕು. ಆದರೆ ಬಾಳಿನ ಸಂಜೆಯಲ್ಲಿ ಆಕೆಗೆ ಏನು ಉಳಿದಿದೆ? ಅವಳದ್ದು ಎನ್ನು ಯಾವ ವಸ್ತು ಅವಳ ಬಾಳಿನಲ್ಲಿದೆ? ಹಾಗೆ ಪ್ರಶ್ನಿಸಿಕೊಂಡರೆ ಉಳಿಯುವುದು ಎದೆಯೊಳಗೆ ಸದಾ ಏನೂ ತನ್ನದಲ್ಲದರ ಕುರಿತಾದ ವಿಷಾದದ ನೋವು. ಅದನ್ನು ಯಾರೂ ಆಕೆಯಿಂದ ಪಡೆಯುವುದಿಲ್ಲ. ಅದು ಅವಳೊಬ್ಬಳಿಗೇ ಮೀಸಲು ಎಂದು ಹೇಳುವ ಈ ಕವನ ಕೂಡ ತನ್ನ ಹೆಣಿಕೆಯಲ್ಲಿ ಗಮನ ಸೆಳೆಯುತ್ತದೆ.

ಆದರೂ ನಾವು ಹೆಣ್ಣುಗಳು ಎಲ್ಲವೂ ನನ್ನಿಂದಲೇ ಎನ್ನುವುದನ್ನು ಬಿಡುವುದಿಲ್ಲ. ಸತ್ತಂತೆ ಬಿದ್ದಪುಸ್ತಕದ ರಾಶಿ ಇವಳು ಓದಿದರೆ ಮಾತ್ರ ಜೀವಂತ. ಕಲ್ಲುಬಂಡೆಗಳೆದುರು ಇವಳು ಧೇನಿಸಿದರೆ ಮಾತ್ರ ದೇವರು, ಶಬ್ಧಕೋಶದಲ್ಲಿರುವ ಅರ್ಥಹೀನ ಶಬ್ಧಗಳನ್ನು ಇವಳು ಬಳಸಿದರಷ್ಟೇ ಕವಿತೆ. ಹೀಗಾಗಿಯೇ
ನನ್ನಿಂದಲೇ ನನ್ನಿಂದಲೇ
ಎಂದರೆ ಮುಜುಗರವಾಗಬಹುದು
ಉಳಿದಿರಲಿ ನಿಮಗೆ
ನಾನು
ಇಲ್ಲದಿದ್ದರೆ
ಈ ಜಗತ್ತೇ ಇಲ್ಲವಾಗುವ ಸತ್ಯ
ಎಂದು ಬಿಡುತ್ತಾರೆ. ಹೆಣ್ಣು ಗಂಡಸಿನ ಬಾಳಿನಲ್ಲಿ ತೀರಾ ನಗಣ್ಯ. ಆದರೆ ಅವಳಿಲ್ಲದಿದ್ದರೆ ಅವನ ಬದುಕು ಶೂನ್ಯ.

ಯಾರೋ ನೀಡಿದ ಉಸಿರುಯಾರೋ ಕೊಟ್ಟ ತುತ್ತು
ಯಾರೋ ತೊಡಿಸಿದ ಬಟ್ಟೆ
ಯಾರೋ ನೀಡಿದ ನೆರಳು
ಹೊತ್ತಿರುವುದೆಲ್ಲಪರರದೇ
ಆದರೂ ಬದುಕು ನನ್ನದೆನ್ನುತ್ತೇವೆ
ಎನ್ನು ವ ಎಚ್ಚರಿಕೆ ಕವಯತ್ರಿಗೆ ಇದೆ. ಈ ಕಾರಣಕ್ಕಾಗಿಯೆ ಕವಿತೆಗಳಲ್ಲಿ ಒಂದು ಸಂಯಮ ಮಡುಗಟ್ಟಿದೆ.

ನನ್ನದೆಂದು ಯಾರದ್ದೋ ಸಮಾಧಿಯ ಮೇಲೆ ನಿಂತು ಬೀಗುತ್ತೇವೆ, ಒಂದಾದಂತೆ ದೂರದವರಿಗೆ ಗೋಚರಿಸಿದರೂ ಭೂಮಿ ಮತ್ತು ಗಗನ ಎಂದೂ ಸೇರದ ಹಾಗೆ ಇರುತ್ತೇವೆ, ಆ ಕಾರಣಕ್ಕಾಗಿಯೇ ಹೆಣ್ಣಿಗೆ ಅದಮ್ಯ ಕುತೂಹಲ. ಅಂತೆಯೆ ಅವಳ ಕುರಿತಾಗಿ ಜಗತ್ತಿಗೂ. ಸೇವೆಗೆ ಮಾಡಿದ ಪ್ರತಿಫಲ ಎಂದು ಪ್ರಥೆಗೆ ಮಂತ್ರ ಬೀಜಗಳನ್ನು ಕೊಟ್ಟು ಅವಳೇನು ಮಾಡಬಹುದೆಂದು ಕುತೂಹಲ ತೋರಿದವರು ದುರ್ವಾಸರು. ಸಿಕ್ಕ ಮಂತ್ರವನ್ನು ಪರೀಕ್ಷಿಸದೆ ಉಳಿಯುವುದು ಹೆಣ್ಣಿನ ಲಕ್ಷಣವೇ ಅಲ್ಲವಲ್ಲ? ಪರೀಕ್ಷಿಸ ಹೋದವಳ ಕೈಗೆ ಸರ‍್ಯಬೀಜ. ಒಡಲ ಕುಡಿಯನ್ನು ತೇಲಿಬಿಟ್ಟರೂ ನೋವನ್ನು ತೇಲಿಬಿಡಲಾದೀತೆ?

ಈಗಲೂ ಅಲ್ಲಿ ಹರಿಯುತಿದೆ ಹೊಳೆ
ದಡದಲ್ಲಿ ಕುತೂಹಲ ಕಣ್ಣಿನ ಕುಂತಿಯರು
ಕೈಯಲ್ಲಿ ಸರ‍್ಯಫಲವ ಹೊತ್ತವರು
ಹೇಳೆ ಹೊಳೆಯೆ
ಅವರಿಗೂ ತೆರೆದಿದೆಯೇ ನಿನ್ನ ಮಡಿಲು
ಅಥವಾ ಬಡ ಬೆಸ್ತರ ಗುಡಿಸಲು

ಎಂದು ಕವಯತ್ರಿ ಪ್ರಶ್ನಿಸುತ್ತಾರೆ. ಕುಂತಿಯಂತೆ ಕುತೂಲ ತಾಳಲಾರದೆ ಸರ‍್ಯಬೀಜವನ್ನು ಪಡೆದ ಅದೆಷ್ಟು ಕನ್ಯೆಯರಿದ್ದಾರೆ. ಅವರ ನೋವಿಗೆ ಪರಿಹಾರ ಹೊಳೆಯೇ ಅಥವಾ ಯಾವುದಾದರೊಂದು ಗೂಡು ಸಿಕ್ಕಬಹುದೇ ಎಂಬ ನೋವು ಇಲ್ಲಿದೆ. ಎಂತಹ ಗೂಡು ಸಿಕ್ಕರೂ ಅದು ಕೃತ್ರಿಮವಾಗಬಹುದಾದ ಅಪಾಯ ಇಲ್ಲದಿಲ್ಲ. ಇಂದಿನ ಬದುಕಿನಲ್ಲಿ ನಮ್ಮೆದುರಿಗೆ ಚಂದದ ಮಾತನಾಡಿದವರೆಲ್ಲ ನಮ್ಮವರಾಗುವುದಿಲ್ಲ. ಬಹಳ ದಿನ ಆಯ್ತು ಮನೆಗೆ ಬನ್ನಿ ಎಂದು ಯಾರೋ ಕರೆದರೆಂದರೆ ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ಆದರೆ ನಾವೇನು ಕಡಿಮೆ, ಅವರ ನಾಟಕಕ್ಕೆ ತಕ್ಕಂತೆ ಮುಂದಿನ ಸಲ ಖಂಡಿತಾ ಬರುವುದಾಗಿ ಹೇಳಿ ಆ ಕ್ಷನದ ಮುಜುಗರದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತೇವೆ. ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತನಾಡದೆ ಬೆನ್ನು ತಿರುಗಿಸಿಕೊಳ್ಳುತ್ತೇವೆ. ಆದರೆ ಮುಖಕ್ಕೆ ಮುಖವಾಡ ಹಾಕಿದ ಸತ್ಯ ಬೆನ್ನಿಗೂ ಗೊತ್ತಿದೆ ಎಂದು ಬಹಳ ಮಾರ್ಮಿಕವಾಗಿ ಹೇಳುವ ‘ಬೆನ್ನುಡಿ’ ಕವನ ಈ ಸಂಕಲನದ ಅತ್ಯುತ್ತಮ ಕವನಗಳಲ್ಲಿ ಮೊದಲ ಸ್ಥಾನ ಪಡೆಯುತ್ತದೆ. ಆಧುನಿಕತೆಯ ಮುಖವಾಡದಲ್ಲಿ ನಾವು ಹೊಸ ಹೊಸ ಪಾಠಗಳನ್ನು ಕಲಿಯುತ್ತಿದ್ದೇವೆ.

ಹೀಗಾಗಿಯೇ
ನಾಜೂಕಿನ ಆಧುನೀಕತೆ
ತಣ್ಣನೆಯ ಕೈಮುಗಿದು ಹೇಳುತ್ತಿದೆ ಸತ್ತವರಿಗೆ
ಭಾವಪೂರ್ಣ ಶೃದ್ಧಾಂಜಲಿ
ಎಮದುಬಿಡುತ್ತಾರೆ. ಹೆಣ್ಣಿನ ಮನಸಿಗೆ ಅವಳ ಭಾವನೆಗಳಿಗೆ ತಮಗೆ ತಾವೇ ಭಾವಪೂರ್ಣ ಶೃದ್ಧಾಂಜಲಿ ಅರ್ಪಿಸಿಕೊಂಡ ಹೆಣ್ಣುಗಳ ಸಮುದಾಯದ ನೋವಿಗೆ ಉತ್ತರ ಸಿಗುತ್ತಿಲ್ಲ.

ಸಾಮಾನ್ಯವಾಗಿ ಕವನಗಳಲ್ಲಿ ಗಟ್ಟಿ ಹೆಣ್ಣಿನ ಧ್ವನಿ ಬಂದರೆ ಸಾಹಿತ್ಯಕ್ಷೇತ್ರದಲ್ಲಿ ಒಂದು ಕಂಡೂ ಕಾಣದಂತಹ ನಿರ್ಲಕ್ಷವಿರುತ್ತದೆ. ಆದರೆ ಈ ಸಂಕಲನ ಹೆಣ್ಣಿನ ದನಿಯನ್ನು ಎತ್ತರಿಸಿ ಹೇಳುವ ಪ್ರಯತ್ನ ಮಾಡಿದೆ. ನಮ್ಮ ನಡುವಿನ ವಸ್ತುಗಳೇ ಕವನಗಳಾಗಿವೆ. ನಮ್ಮ ಬದುಕೇ ರೂಪಕವಾಗಿ ಹರಳುಗಟ್ಟಿದೆ. ಆ ಕಾರಣಕ್ಕಾಗಿ ಕವಯತ್ರಿಯ ಮೊದಲ ಸಂಕಲನವಾದರೂ ಇದು ಮುಖ್ಯ ಎಂದೆನಿಸಿಕೊಳ್ಳುತ್ತದೆ.

ಈ ಅಂಕಣದ ಹಿಂದಿನ ಬರಹಗಳು:
ಕನ್ನಡದ ಓದುಗರ ಪಾಲಿಗೆ ಅರೆ ಆತ್ಮಚರಿತ್ರೆಯಂತಿರುವ ‘ರನ್ನಿಂಗ್ ನವೆಲಿಸ್ಟ್’

ಉದಯಿಸುತ್ತಿರುವ ಸೂರ್ಯನೊಂದಿಗೆ ಹೆಜ್ಜೆಯಿಡುವ ತವಕದಲ್ಲಿ
ನವಿರು ಹಾಸ್ಯದೊಳಗೆ ಚುಚ್ಚುವ ಮೊನಚಿದೆ
ಭೂತ ವರ್ತಮಾನಗಳ ಬೆಸೆಯುವ ಕಥಾನಕ
ನೆನಪಿನ ಕೋಶದೊಳಗೆ ಸಿಹಿ ತುಂಬುವ ಕೋಲ್ಜೇನು
ಆಂಗ್ಲ ಸಾಹಿತ್ಯದ ಓದಿಗೆ ಮೊದಲ ಮೆಟ್ಟಿಲಾಗಬಲ್ಲ ಅನುವಾದಿತ ಕತೆಗಳು
ಮಗುವಾಗಿಸುವ ಸುಂದರ ಹೂ ಮಾಲೆ
ಬಸವಳಿದ ಬಾಳಿಗೆ ಬೆಳಕು ನೀಡಬೇಕಿದೆ ಕಂದೀಲು
ಕಿರಿದರಲ್ಲೇ ಮೆರೆವ ಹಿರಿತನದ ಚುಟುಕುಗಳು
ಹಾಸ್ಯದ ಲೇಪನವಿಟ್ಟು ಮಕ್ಕಳ ಮನಸ್ಥಿತಿಯನ್ನು ಬಿಂಬಿಸುವ ಕಥೆಗಳು
ಭೂತ ವರ್ತಮಾನಗಳ ಬೆಸೆಯುವ ಕಥಾನಕ
ದೇಹದ ಹಂಗು ತೊರೆದು; ಹೊಸದನ್ನು ಹುಡುಕಿ
ತಣ್ಣಗೆ ಕಥೆಯಾಗಿ ಹರಿಯುವ ಗಂಗಾವಳಿ
ಬದಲಾವಣೆಗಾಗಿ ಆತ್ಮಾವಲೋಕನವೊಂದೇ ಮಾರ್ಗ
ವಿಸ್ತಾರ ವಿಷಯದ ಗುಟುಕು ನೀಡುವ ಮಾಯದ ಕಥೆಗಳು
ಅಚ್ಚರಿಗೆ ನೂಕುವ ಹೊಳಹುಗಳು
ಗಜಲ್ ಕಡಲಲ್ಲಿ ಹಾಯಿದೊಣಿಯಲ್ಲೊಂದು ಸುತ್ತು
ಹಲವು ಜಾತಿಯ ಹೂಗಳಿಂದಾದ ಮಾಲೆ
ನಮ್ಮೊಳಗೆ ಹೆಡೆಯಾಡುವ ಕಥೆಗಳು
ವೈಕಂ ಮಹಮ್ಮದ್ ಬಶೀರರ ’THE MAN’ - ಮನುಷ್ಯ ಸ್ವಭಾವಗಳಿಂದ ಹೊರತಾಗದ ಕೇವಲ ಮನುಷ್ಯ
ಜಲಾಲ್-ಅಲ್-ದಿನ್-ರೂಮಿಯ FOREST AND RIVER - ಅಸ್ತಿತ್ವದ ವೈರುದ್ಧ್ಯಗಳು
ಸಿಲ್ವಿಯಾ ಪ್ಲಾತ್ ಮತ್ತು ಜೂಲಿಯಾ ಡಿ ಬರ್ಗೋಸ್ ಕವಿತೆಗಳು

‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಗ್ಯಾಬ್ರಿಯಲ್ ಒಕಾರಾನ ’ONCE UPON A TIME’ : ಮುಖವಾಡದ ಜೊತೆ ಮುಖಾಮುಖಿ
ಆಕಸ್ಮಿಕಗಳನ್ನು ತೆರೆಯುವ ‘ದಿ ಗ್ರೀನ್ ಡೋರ್

MORE NEWS

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...