ದ್ವೇಷವೆಂಬ ವಿಷವೃಕ್ಷ- The Poison Tree

Date: 19-11-2023

Location: ಬೆಂಗಳೂರು


''ಹೊರಗಿನ ಪ್ರಕೃತಿಯ ಸುಂದರ ದೃಶ್ಯಾವಳಿಗಳು ಕಣ್ಣನ್ನು ತಂಪಾಗಿಡಬಲ್ಲವಾದರೂ ಎದೆಯೊಳಗೆ ಅವಿತ ಕಿಚ್ಚಿನ ಹೊಗೆಯಿಂದ ಕಣ್ಣಿಗೆ ಎಲ್ಲವೂ ಕಪ್ಪಾಗಿಯೇ ಕಾಣುಬಹುದು. ಇದರಿಂದ ಯಾರಿಗೂ ಒಳಿತಿಲ್ಲ. ಇದನ್ನು ಆಂಗ್ಲ ಕವಿ ವಿಲಿಯಂ ಬ್ಲೇಕ್ “ದಿ ಪಾಯಿಸನ್ ಟ್ರೀ” ಎಂಬ ಕವಿತೆಯಲ್ಲಿ ಸರಳವಾದ ರೀತಿಯಲ್ಲಿ ಅಷ್ಟೇ ಸಂಕೀರ್ಣ ವಿಚಾರಗಳ ಮುಂದಿಡುತ್ತಾ ದ್ವೇಷದ ಫಲವನ್ನು, ಅದರ ಋಣಾತ್ಮಕ ಗುಣಸ್ವಭಾವವನ್ನು, ನಾಲ್ಕು ನುಡಿಗಳಲ್ಲಿ ಕಟ್ಟಿಕೊಡುತ್ತಾನೆ,'' ಎನ್ನುತ್ತಾರೆ ಅಂಕಣಗಾರ್ತಿ ನಾಗರೇಖಾ ಗಾಂವಕರ. ಅವರು ತಮ್ಮ ಪಶ್ಚಿಮಾಭಿಮುಖ ಅಂಕಣದಲ್ಲಿ ಕವಿ ವಿಲಿಯಂ ಬ್ಲೇಕ್ ಅವರ “ದಿ ಪಾಯಿಸನ್ ಟ್ರೀ” ಕವಿತೆಯನ್ನು ‘ದ್ವೇಷವೆಂಬ ವಿಷವೃಕ್ಷ’ ಶೀರ್ಷಿಕೆ ರೂಪದಲ್ಲಿ ಹೀಗೆ ಕಟ್ಟಿಕೊಟ್ಟಿದ್ದಾರೆ.

ನೈಸರ್ಗಿಕ ಜಗತ್ತಿನ ಉತ್ಕೃಷ್ಟ ಸೃಷ್ಟಿ ಮನುಷ್ಯ. ಆ ನೈಸರ್ಗಿಕ ಜಗತ್ತಿನ ಹಂದರರೊಳಗೆ ತನ್ನದೇ ಆದ ಮನುಷ್ಯ ಜಗತ್ತೆಂಬ ಸಾಮಾಜಿಕ ಪರಂಪರೆಯನ್ನು ಬೆಳಸಿ, ವಿಸ್ತಾರಿಸಿದ ಮನುಷ್ಯ. ಹಾಗೇ ಈ ಸಾಮಾಜಿಕ ವ್ಯವಸ್ಥೆಯೊಳಗೆ ಸ್ಪರ್ಧೆಯನ್ನು ಅರಿವಿಲ್ಲದಂತೆ ಬೆಳೆಸಿದ. ಅದರಿಂದ ಚಿಗಿತುಕೊಂಡ ದ್ವೇಷವೆಂಬ ಫಲವನ್ನು ತನ್ನ ಕೈಯಾರೆ ನಿತ್ಯವೂ ಉಣ್ಣುತ್ತಾ, ಸಕಲಜನ ಸುಖಿನೋಭವಂತು ಎಂಬ ಹಿತನುಡಿಯಲ್ಲಿ ತನ್ನೊಳಗಿನ ಉರಿಯ ಕಿಡಿಗೆ ತಂಪು ಮಾಡುತ್ತಾ ಹೋದರೂ ಈ ರೋಷ, ದ್ವೇಷಗಳು ಆತನ ಜನ್ಮಬಂಧುಗಳಂತೆ ಬೆನ್ನಿಗೇ ಬಿದ್ದಿರುತ್ತವೆ. ದ್ವೇಷ ಎಂಬುದು ಅಪಾಯಕಾರಿಯೋ, ಉಪಕಾರಿಯೋ ಎಂಬುದನ್ನು ದ್ವೇಷಕ್ಕೆ ಗುರಿಯಾದ ವ್ಯಕ್ತಿ ಮತ್ತು ದ್ವೇಷಿಸುವ ವ್ಯಕ್ತಿ ಇಬ್ಬರೂ ಬಹುಮಟ್ಟಿಗೆ ಅದರ ಫಲವನ್ನು ಅನುಭವಿಸಿರುತ್ತಾರೆ. ಅದೊಂದು ರೀತಿಯ ಲಂಟಾನ ಕಳೆ ಇದ್ದ ಹಾಗೇ. ಒಮ್ಮೆ ಈ ಗುಣ ಬೆಳೆದು ಬಂತೆಂದರೆ ಮನುಷ್ಯ ಅದರ ಮುಷ್ಟಿಯಲ್ಲಿ ತನ್ನ ಒಳಿತಿಗಿಂತ ಇನ್ನೊಬ್ಬರಿಗೆ ಕೇಡು ಬಯಸುವುದನ್ನು, ದ್ವೇಷಿಸುವುದನ್ನು, ಮತ್ಸರದಿಂದ ನೋಡುವುದನ್ನು ಚಟವಾಗಿಸಿಕೊಳ್ಳುತ್ತಾನೆ. ಅನಗತ್ಯವಾಗಿ ಇನ್ನೊಬ್ಬರನ್ನು ತಮ್ಮ ದ್ವೇಷಿಗಳೆಂದು ಪರಿಗಣಿಸಿ, ಅವರ ತೇಜೋವಧೆ ಮಾಡಲು, ಅನ್ಯಾಯ ಮಾಡಲು ಅಥವಾ ಕೊಲೆಗೂ ಪ್ರಯತ್ನಿಸಬಹುದು. ಅದೊಂದು ವಿಷವೃಕ್ಷವಿದ್ದಂತೆ. ವಿಷವೃಕ್ಷ, ವಿಷಜಂತು ಇತ್ಯಾದಿ ಶಬ್ದಗಳನ್ನು ದುಷ್ಟತನಕ್ಕೆ, ದ್ವೇಷಕ್ಕೆ, ಅಸೂಯೆಗೆ ರೂಪಕವಾಗಿ ಬಳಸುತ್ತೇವಲ್ಲವೇ? ನಾವೆಲ್ಲರೂ ಕೂಡಾ ವಿಷಜಂತುವನ್ನು ಸಾಕಲು ಅಂಜುತ್ತೇವೆ ಹಾಗೇ ವಿಷದ ಮರವನ್ನು ನೆಟ್ಟು ಬೆಳೆಸಲು ಅಂಜುತ್ತೇವೆ. ಅವು ಅಪಾಯಕಾರಿ. ಅವುಗಳ ಸಹವಾಸದಿಂದ ದೂರವಿರುವುದು ಮನುಷ್ಯ ಅಥವಾ ಪ್ರಾಣಿಗೇ ಆದರೂ ಹಿತ. ಆದರೆ ನಾವು ನಮಗೇ ಗೊತ್ತೇ ಆಗದಂತೆ ಇಂತಹ ದ್ವೇಷ ಎಂಬ ವಿಷದ ವೃಕ್ಷವನ್ನು ನಿತ್ಯವೂ ನೀರೆರೆದು ನಮ್ಮೊಳಗೆ ಬೆಳೆಸುತ್ತಲೇ ಇರುತ್ತೇವೆ. ಅದು ಹೆಮ್ಮರವಾದಾಗಲೇ ಅದರ ಪರಿಣಾಮಗಳ ಅರಿವು ಮೂಡತೊಡಗುತ್ತದೆ. ಆಗ ನಮ್ಮ ಕೈ ಮೀರಿ ಅದರ ರಕ್ಕಸರೂ ರೂಪ ವಿಜೃಂಬಿಸುತ್ತಿರುತ್ತದೆ.ನಮ್ಮ ಆತ್ಮಬಲವನ್ನು ಕುಗ್ಗಿಸುವ, ಅಂತಃಚಕ್ಷವನ್ನು ದುರ್ಬಲಗೊಳಿಸುವ ಈ ದ್ವೇಷ ಕಣ್ಣಿಗೆ ಪೊರೆಗಟ್ಟಿಸುತ್ತದೆ. ಹೃದಯಕ್ಕೆ ವಿಷಗಾಳಿಯನ್ನೇ ತುಂಬುತ್ತದೆ.

ಹೊರಗಿನ ಪ್ರಕೃತಿಯ ಸುಂದರ ದೃಶ್ಯಾವಳಿಗಳು ಕಣ್ಣನ್ನು ತಂಪಾಗಿಡಬಲ್ಲವಾದರೂ ಎದೆಯೊಳಗೆ ಅವಿತ ಕಿಚ್ಚಿನ ಹೊಗೆಯಿಂದ ಕಣ್ಣಿಗೆ ಎಲ್ಲವೂ ಕಪ್ಪಾಗಿಯೇ ಕಾಣುಬಹುದು. ಇದರಿಂದ ಯಾರಿಗೂ ಒಳಿತಿಲ್ಲ. ಇದನ್ನು ಆಂಗ್ಲ ಕವಿ ವಿಲಿಯಂ ಬ್ಲೇಕ್ “ದಿ ಪಾಯಸನ್ ಟ್ರೀ” ಎಂಬ ಕವಿತೆಯಲ್ಲಿ ಸರಳವಾದ ರೀತಿಯಲ್ಲಿ ಅಷ್ಟೇ ಸಂಕೀರ್ಣ ವಿಚಾರಗಳ ಮುಂದಿಡುತ್ತಾ ದ್ವೇಷದ ಫಲವನ್ನು, ಅದರ ಋಣಾತ್ಮಕ ಗುಣಸ್ವಭಾವವನ್ನು, ನಾಲ್ಕು ನುಡಿಗಳಲ್ಲಿ ಕಟ್ಟಿಕೊಡುತ್ತಾನೆ.

I was angry with my friend:
I told my wrath, my wrath did end
I was angry with my foe:
I told it not, my wrath did grow.

And i water’d it in fears,
Night and morning with my tears:
And i sunned it with smiles,
And with soft deceitful wiles.

And it grew both day and night,
Till it bore an apple bright:
And my foe beheld it shine,
And he knew that it was mine.

And into my garden stole
When the night had veil’d the pole:
In the morning glad I see
My foe outstrech’d beneath the tree.

1794ರಲ್ಲಿ ಪ್ರಕಟವಾದ ಬ್ಲೇಕ್‌ನ ಸಂಕಲನ “ದಿ ಸಾಂಗ್ಸ ಆಫ್ ಎಕ್ಸಪೀರಿಂಯನ್ಸ್” ನಲ್ಲಿ ಇರುವ ಈ ಕವಿತೆ ನರ್ಸರಿ ಮಕ್ಕಳ ಪ್ರಾಸಗೀತೆಗಳ ರೀತಿಯಲ್ಲೆ ಸರಳವಾಗಿ ಕಂಡರೂ ಅದರೊಳಗೆ ಅಡಗಿದ ವಸ್ತು ಮನುಷ್ಯನ ಸ್ವಭಾವ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಸಂತಸಮಯ ಬದುಕನ್ನು ನಡೆಸಬೇಕಾದಲ್ಲಿ ಇರಲೇಬೇಕಾದ ಗುಣ ಮತ್ತು ವ್ಯರ್ಜಿಸಬೇಕಾದ ಅವಗುಣಗಳ ಎದುರಿಗಿಡುತ್ತದೆ.

ತನ್ನ ಗೆಳೆಯನೊಬ್ಬನ ಬಗ್ಗೆೆ ತನ್ನಲ್ಲಿ ಬೆಳೆದ ಅಸಮಾಧಾನವನ್ನು ಕವಿ ಆ ಗೆಳೆಯನಿಗೆ ವಿಷದಪಡಿಸುತ್ತಾನೆ. ಮತ್ತು ಆ ಅಸಮಾಧಾನ ಅಲ್ಲಿಗೆ ಕೊನೆಗೊಳ್ಳುತ್ತದೆ. ಕವಿಯೂ ಸಮಾಧಾನಿಯಾಗುತ್ತಾನೆ. ಪ್ರಾಮಾಣಿಕವಾಗಿರುವುದು ಮತ್ತು ನೇರಾನೇರ ಸ್ವಭಾವದ ಪರಿಣಾಮವನ್ನು ಈ ಸಾಲುಗಳು ಕಟ್ಟಿಕೊಡುತ್ತವೆ. ಆದರೆ ಅದೇ ಕವಿ ತನ್ನ ಶತ್ರುವಿನ ಬಗ್ಗೆ ಕೋಪಗೊಳ್ಳುತ್ತಾನೆ. ಆದರೆ ಆ ಕೋಪವನ್ನು ನೇರವಾಗಿ ಆಭಿವ್ಯಕ್ತಿಸಲಾಗದೇ ಹೋದದ್ದರಿಂದ ಆ ಕೋಪ ದ್ವೇಷವಾಗಿ ಇನ್ನಷ್ಟು ಬೆಳೆಯುತ್ತಾ ಹೋಗುತ್ತದೆ. ಈ ದ್ವೇಷಕ್ಕೆ ದಿನದಿನವೂ ಬೆಳೆಯುವ ಹಿಗ್ಗುವ ಗುಣವಿದೆ ಎಂಬುದನ್ನು ಕವಿ ಮಾರ್ಮಿಕವಾಗಿ ಗಿಡದ ರೂಪಕದೊಂದಿಗೆ ಹೇಳುತ್ತಾನೆ. ತೋಟವೊಂದರಲ್ಲಿ ನೆಟ್ಟ ಗಿಡ ಸರಿಯಾದ ನೀರು ಗೊಬ್ಬರ ಬೆರೆತು ಬೆಳೆದರೆ ಹೇಗೆ ಹುಲುಸಾಗಿ ಬೆಳೆಯುವುದೋ ಹಾಗೇ ಈ ದ್ವೇಷದ ಮರ ಕೂಡಾ ಶತ್ರುವಿನ ಬಗ್ಗೆ ಇರುವ ಭಯ ಮತ್ತು ದ್ವೇಷದಿಂದ ಉಕ್ಕಿದ ಕಣ್ಣೀರಿನ ನೆನೆಕೆಗಳಿಂದ ಇನ್ನಷ್ಟು ಗೊಬ್ಬರ ಪಡೆದು ಹುಲುಸಾಗಿ ಬೆಳೆಯುತ್ತಾ ಹೋಗುತ್ತದೆ. ತನ್ನ ಶತ್ರುವನ್ನು ನೋಡಿದಾಗಲೆಲ್ಲಾ ಕವಿ ಹೊರಮುಖದಲ್ಲಿ ತುಳುಕಿಸುವ ನಗು ಒಳಗೊಳಗೆ ಕ್ರೋಧದ ಸಂಚನ್ನು ಹರಳುಗಟ್ಟಿಸುತ್ತಲೇ ಹೋಗುತ್ತದೆ. ವಂಚನೆಯ ನೋಟದಿಂದ ಆ ಮರವನ್ನು ಪುಷ್ಟಿಗೊಳಿಸುತ್ತಾನೆ. ಹೀಗೆ ಬೆಳೆದಂತೆ ಆ ಮರ ಹಣ್ಣು ಬಿಡಲಾರಂಭಿಸುತ್ತದೆ. ಫಲ ಬಿಟ್ಟ ಹೊಳೆವ ಸೇಬು ಹಣ್ಣನ್ನು ಕವಿಯ ವೈರಿ ನೋಡುತ್ತಾನೆ.ಅದು ಕವಿಗೆ ಸೇರಿದ್ದೆಂದು ತಿಳಿಯುತ್ತಲೇ ಆತ ಗೌಪ್ಯವಾಗಿ ಹೊಂಚು ಹಾಕಿ ಕವಿಯ ತೋಟ ಪ್ರವೇಶಿಸಿ ಆ ಹಣ್ಣನ್ನು ಕದ್ದು ತಿನ್ನುತ್ತಾನೆ. ಮರುದಿನ ಮುಂಜಾನೆ ಕವಿ ತನ್ನ ಶತ್ರು ಸತ್ತು ಬಿದಿದ್ದಿರುವುದನ್ನು ಕಂಡು ಖುಷಿಗೊಳ್ಳುತ್ತಾನೆ. ಈ ಕೋಪ ಮತ್ತು ದ್ವೇಷ ನಮ್ಮನ್ನು ಒಳಗೊಳಗೆ ತಿನ್ನಲಾರಂಭಿಸುತ್ತವೆ. ನಾವು ದ್ವೇಷಿಸುವ ವ್ಯಕ್ತಿಯನ್ನಷ್ಟೇ ಇವು ತೊಂದರೆಗೊಳಪಡಿಸುತ್ತದೆ ಎಂದರೆ ಅದು ಸುಳ್ಳು. ಸ್ವಯಂ ನಮ್ಮಲ್ಲಿಯ ಮನುಷ್ಯತ್ವವನ್ನು ಕೊಲ್ಲುತ್ತದೆ. ತನ್ನ ಶತ್ರುವಿನ ಸಾವನ್ನು ತನ್ನ ವಿಜಯವೆಂಬಂತೆ ಕವಿ ಅನುಭವಿಸುತ್ತಾನೆ. ಇದು ಮನುಷ್ಯತ್ವದ ಕಗ್ಗೊಲೆ.

ಕವಿತೆಯ ಉದ್ದಕ್ಕೂ ಅದುಮಿಟ್ಟುಕೊಂಡ ಒಳಗೋಪದ ದುಷ್ಟಫಲ ಏನಾಗುವುದು ಎಂಬುದನ್ನು ಕವಿ ಕಟ್ಟಿಕೊಡುತ್ತಾನೆ. ಕೋಪ ಮನುಷ್ಯನ ಸಹಜ ಗುಣ. ಅದಕ್ಕೆ ತತಕ್ಷಣದಲ್ಲಿ ಒಂದು ಸಮಾಧಾನ ಸಿಕ್ಕರೆ ಅಷ್ಟೇ ಬೇಗ ಮಾಯವಾಗುವುದು ಆದರೆ ವ್ಯಕ್ತಪಡಿಸದೇ ಒಳಗೇ ಇದ್ದು, ಒಳಗು ಬೆಂದು ದಿನಗಳೆದಂತೆ ಆ ಕೋಪ ದ್ವೇಷವಾಗುತ್ತಾ ಹೋಗುವುದು. ಹಾಗಾಗಿ ಇಂತಹ ಅಪಾಯಕಾರಿ ನಕಾರಾತ್ಮಕ ಗುಣವನ್ನು ಇಟ್ಟುಕೊಳ್ಳುವುದರ ಪರಿಣಾಮವನ್ನು ಕವಿ ಹೇಳುತ್ತಾನೆ. ಅಪರಾಧಿಗುಣವನ್ನು, ನೀಚ ಸ್ವಭಾವವನ್ನು ಈ ಗುಣ ಉದ್ದೀಪಿಸುತ್ತಾ ಹೋಗುತ್ತದೆ.

ಸ್ನೇಹ ಮತ್ತು ವೈರತ್ವ ಇವೆರಡೂ ನಮ್ಮಲ್ಲಿಯೇ ಸಹಜವಾಗಿಯೇ ಇರುವ ಭಾವಗಳು, ಗುಣಗಳು. ಜೈವಿಕ ನೆಲೆಯೇ ಆಗಿರಲಿ, ಸಾಮಾಜಿಕ ಬದುಕಿನಲ್ಲೇ ಆಗಿರಲೀ ಎಲ್ಲ ಪ್ರಾಣಿಗಳಲ್ಲಿ ಇರುವ ಸಾಮಾನ್ಯ ಗುಣಗಳು. ಸ್ನೇಹಕ್ಕೆ ಮನಸ್ಸನ್ನು ಹಗುರಗೊಳಿಸಿ, ಸಂತಸವಾಗಿಡುವ ಗುಣವಿದ್ದರೆ, ದ್ವೇಷಕ್ಕೆ ಆ ಸಡಗರವನ್ನು, ಸಂಭ್ರಮವನ್ನು ನಾಶಮಾಡುವ ಇರಾದೆ. ಮನುಷ್ಯ ಮನುಷ್ಯರ ನಡುವಿನ ಸೌಹಾರ್ದತೆಯನ್ನು ಆತ್ಮೀಯತೆಯನ್ನು ವಿಶ್ವಸನೀಯತೆಯನ್ನು ಈ ದ್ವೇಷ ಕಬಳಿಸುತ್ತದೆ. ಸಂತೋಷದ ಬದುಕಿಗೆ ಎರವಾಗುತ್ತದೆ. ಇದು ಎಲ್ಲರ ಅನುಭವಕ್ಕೂ ದಿನವೂ ಬರುತ್ತಲೇ ಇರುತ್ತದೆ. ಪ್ರಜ್ಞಾವಂತ ಅದರ ಇರುವಿಕೆಯನ್ನು ಅಲ್ಲಗಳೆಯಲು ಆಗದೇ ಇದ್ದರೂ ಆ ಭಾವವನ್ನು ಗುಣಸ್ವಭಾವನನ್ನು ನಿಯಂತ್ರಿಸಿಕೊಳ್ಳುತ್ತಾ ಸಾಧ್ಯವಾದಷ್ಟು ಮಟ್ಟಿಗೆ ಸಹಬದುಕಿನ ಸಾರವನ್ನು, ಖುಷಿಯನ್ನು ಅನುಭವಿಸುತ್ತಾನೆ. ದುರುಳರು ಈ ಗುಣವನ್ನೇ ಶ್ರೇಷ್ಟವೆಂದು ಹಿಗ್ಗುತ್ತಾ, ಅದನ್ನೇ ಬಲದಂತೆ ಪ್ರದರ್ಶಿಸುತ್ತಾ, ಆಗಾಗ ಪ್ರಯೋಗಿಸುತ್ತಾ, ಬದುಕನ್ನು ನರಕವನ್ನಾಗಿಸಿಕೊಳ್ಳುತ್ತಾರೆ. ದ್ವೇಷದ ಬುಡದಿಂದಲೂ ಸ್ನೇಹದ ಕುಡಿಗಳು ಮೂಡಿ ಬರುವಂತಿದ್ದರೆ ಬದುಕು ಎಷ್ಟು ಸುಂದರವಾಗಿರುತ್ತಿತ್ತು.

- ನಾಗರೇಖಾ ಗಾಂವಕರ

ಈ ಅಂಕಣದ ಹಿಂದಿನ ಬರಹಗಳು:
ಬದುಕಿನ ಕ್ಷಣ ಭಂಗುರತೆ ಹಾಗೂ ಸಾವಿನ ಅನಿವಾರ್ಯತೆ
ರಾಬರ್ಟ ಫ್ರಾಸ್ಟನ “MENDING WALL”
ಆಕ್ರಮಣಕಾರಿ ನಿಲುವನ್ನು ವಿಡಂಬಿಸುವ ಕವಿತೆ “THE ROBIN AND THE WORM”
ಯೇಟ್ಸ್ ನ “THE INDIAN UPON THE GOD”- ದೇವರ ಕುರಿತಾದ ಭಾರತೀಯ ಚಿಂತನೆ
ಕವಿ ವಿಲಿಯಂ ವರ್ಡ್ಸ್‌ವರ್ತ್ ಸಾಹಿತ್ಯ ಪ್ರೇಮ
ಸ್ತ್ರೀತ್ವದ ಹಿರಿಮೆ ಸಾರುವ ಕಿಶ್ವರ ನಹೀದ ಕವಿತೆ “THE GRASS IS REALLY LIKE ME”
ಸಿಡಿಮದ್ದಿನ ದನಿ ಮಾಯಾ ಎಂಜೆಲ್ಲೋರ “I KNOW WHY THE CAGE BIRD SINGS''
ಆಧುನಿಕತೆ ಸೃಷ್ಟಿಸುವ ಸಾಮಾಜಿಕ ವಿಪ್ಲವಗಳು- ಹಕಲ್ಬರಿ ಫಿನ್
ಜನರೇಶನ್ ಗ್ಯಾಪ್‌ನ ಮೇಲೊಂದು ಟಿಪ್ಪಣಿ “ಫಾದರ್ ವಿಲಿಯಮ್” ಕವಿತೆ.
ಬ್ರೆಕ್ಟ್‌ನ ’THE CRUTCHES’ - ಪರಾವಲಂಬಿ ಬದುಕಿಗೆ ಒಂದು ಪಾಠ
ಬದಲಾಗುವ ನೈತಿಕ ನಿಲುವುಗಳ ಕುರಿತು ಲಿಂಡಾ ಪ್ಯಾಸ್ಟನ್ ಬರೆದ ''ETHICS”
ಓ ಹೆನ್ರಿಯ “AFTER TWENTY YEARS” - ಪ್ರಯತ್ನಿಸಿದ್ದಲ್ಲಿ ಭೌತಿಕ ಚಹರೆ ಗುರುತಿಸಬಹುದು, ಆದರೆ ಸ್ವಭಾವ ಸ್ಥಿತಿ?
‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಜಲಾಲ್-ಅಲ್-ದಿನ್-ರೂಮಿಯ FOREST AND RIVER - ಅಸ್ತಿತ್ವದ ವೈರುದ್ಧ್ಯಗಳು
ಸಿಲ್ವಿಯಾ ಪ್ಲಾತ್ ಮತ್ತು ಜೂಲಿಯಾ ಡಿ ಬರ್ಗೋಸ್ ಕವಿತೆಗಳು

‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಗ್ಯಾಬ್ರಿಯಲ್ ಒಕಾರಾನ ’ONCE UPON A TIME’ : ಮುಖವಾಡದ ಜೊತೆ ಮುಖಾಮುಖಿ
ಆಕಸ್ಮಿಕಗಳನ್ನು ತೆರೆಯುವ ‘ದಿ ಗ್ರೀನ್ ಡೋರ್’

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...