ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ

Date: 16-12-2022

Location: ಬೆಂಗಳೂರು


“ಸಮಾಸ ಎನ್ನುವುದು ಬಹುದೊಡ್ಡ ಬಾಶಿಕ ಮತ್ತು ಸಾಮಾಜಿಕ ಪ್ರಕ್ರಿಯೆ. ಇದರಲ್ಲಿ ಬಾಶೆಯ ರಚನೆ ಮತ್ತು ಸಾಮಾಜಿಕ ಅವಶ್ಯಕತೆ ಬೆಸೆದುಕೊಂಡಿರುತ್ತವೆ'' ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ’ ವಿಚಾರದ ಕುರಿತು ಬರೆದಿದ್ದಾರೆ.

ಎರಡು ಪದಗಳು ಪರಸ್ಪರ ಬೆರೆತು ಹೊಸ ಪದವಾಗಿ ಬೆಳೆಯುವುದನ್ನು ಸಮಾಸ ಎಂದು ಕರೆಯಲಾಗುವುದು. ಇದು ಕನ್ನಡದಾಗ ಇಲ್ಲವೆ ಯಾವುದೆ ಬಾಶೆಯಲ್ಲಿ ಹೊಸ ಪದಗಳನ್ನು ಹುಟ್ಟಿಸುವ ಅತ್ಯಂತ ಮಹತ್ವದ ಉತ್ಪಾದಕ ಪ್ರಕ್ರಿಯೆಯಾಗಿದೆ. ಈ ಎರಡು ಪದಗಳು ಒಟ್ಟಾಗಿ ಮತ್ತೊಂದು ಹೊಸ ಪದ ಹುಟ್ಟುವ ಪ್ರಕ್ರಿಯೆ ಬಾಶೆಯಲ್ಲಿ ಬಹುಕಾಲದಿಂದ ಬಳಕೆಯಲ್ಲಿದೆ. ಇಲ್ಲಿ ಕನ್ನಡದಾಗ ಬಹುಕಾಲದ ಹಿಂದೆ ನಡೆದ ಇಂತ ಒಂದೆರಡು ಎತ್ತುಗೆಗಳನ್ನು ಮಾತಿಗೆ ತೆಗೆದುಕೊಂಡು ಹಿಂದಿನಿಂದಲೂ ಹೇಗೆ ಕನ್ನಡ ಬಾಶೆ, ಕನ್ನಡ ಸಮುದಾಯ ಹೊಸ ಪದಗಳನ್ನು ಹುಟ್ಟಿಸುತ್ತಿದೆ ಎಂಬುದನ್ನು ಅರಿತುಕೊಳ್ಳಬಹುದು. ನಾವಿಂದು ತುಂಬ ಸಹಜವಾಗಿ ಬಾಗಿಲು, ಹೊಸ್ತಿಲು ಮೊದಲಾದ ಪದಗಳನ್ನು ಬಳಸುತ್ತೇವೆ. ಇವು ಮೂಲಪದಗಳಲ್ಲ ಬದಲಿಗೆ ಸಮಾಸಪದಗಳು ಎಂಬುದು ಸಹಜವಾಗಿ ಯಾರಿಗೂ ಅನಿಸಿರಲಿಕ್ಕಿಲ್ಲ. ಈ ಪದಗಳು ಬಹುಹಿಂದೆ ಎರಡು ಪದಗಳು ಸೇರಿ ಆಗಿರುವ ಸಮಾಸಗಳು. ಇವುಗಳಲ್ಲಿ ಇರುವ ಎರಡು ಪದಗಳು ಮತ್ತು ಅವುಗಳ ರಚನೆಯನ್ನು ಇಲ್ಲಿ ತೋರಿಸಿದೆ.

ವಾಯ್ ‘ಬಾಯಿ’+ಇಲ್ ‘ಮನೆ’=ವಾಯಿಲ್ (‘ಮನೆಯ ಬಾಗಿಲು’)>ಬಾಗಿಲ್>ಬಾಗಿಲು
ಪೊಸನ್ ‘ಹೊಸತು/ದು’+ಇಲ್ ‘ಮನೆ’=ಪೊಸನ್ತಿಲ್ (‘ಮನೆಯ ಮೊದಲು’)>ಪೊಸ್ತಿಲ್>ಹೊಸ್ತಿಲ್>ಹೊಸ್ತಿಲು
ಇಂತ ಸಾವಿರಾರು ಪದಗಳನ್ನು ಕನ್ನಡದಲ್ಲಿ ಕಾಣಬಹುದು. ಕಡಲು, ಮುಗಿಲು ಇಂತ ಪದಗಳಲ್ಲಿ ಪದದ ಮೇಲೆ ಪ್ರತ್ಯಯ ಸೇರಿದ್ದರೆ, ಇಲ್ಲಿ ಮಾತಾಡಿದ ಬಾಗಿಲು, ಹೊಸ್ತಿಲು ಪದಗಳು ಸಮಾಸವಾಗಿವೆ.

ಕನ್ನಡದಾಗ ಹಲವು ಬಗೆಯ ಸಮಾಸ ಪ್ರಕ್ರಿಯೆಗಳು ಇವೆ. ಈ ಸಮಾಸ ಪ್ರಕ್ರಿಯೆಯಲ್ಲಿ ನಾಮಪದಗಳನ್ನು ಮತ್ತು ಕ್ರಿಯಾಪದಗಳನ್ನು ಹೀಗೆ ಸಾದಿಸಲು ಸಾದ್ಯವಿದೆ. ಯಾವ ಯಾವ ಬಗೆಯ ಪದಗಳನ್ನು ಹೀಗೆ ಸಮಾಸಗಳಲ್ಲಿ ಬೆಸೆಯಬಹುದು ಎಂಬುದನ್ನೂ ಅವಲೋಕಿಸಬಹುದು. ಎರಡು ನಾಮಪದಗಳು ಸಹಜವಾಗಿ ಬೆರೆತು ಸಮಾಸವಾಗಬಹುದು. ಇಂತ ಸಂದರ‍್ಬದಲ್ಲಿ ಸಾಮಾನ್ಯವಾಗಿ ಹೊಸ ಪದವು ನಾಮಪದವಾಗಿರುತ್ತದೆ. ಇಲ್ಲಿ ಕೆಲವು ಎತ್ತುಗೆಗಳನ್ನು ಕೊಟ್ಟಿದೆ.

ನಾಮಪದ+ನಾಮಪದ=ನಾಮಪದ
ಕಯ್+ಮಗ್ಗ=ಕಯ್ಮಗ್ಗ
ತವರು+ಮನೆ=ತವರ‍್ಮನೆ
ನೆಲ+ತಾಯಿ=ನೆಲದಾಯಿ
ಮೂಗು+ದಾರ=ಮುಗುದಾರ
ಕ್ರಿಯಾಪದ ಮತ್ತು ನಾಮಪದಗಳು ಸೇರಿ ಸಮಾಸವಾಗಿ ಹೊಸದೊಂದು ನಾಮಪದವನ್ನು ಪಡೆದುಕೊಳ್ಳಬಹುದು. ಇದರಲ್ಲಿ ಸಾಮಾನ್ಯವಾಗಿ ಕ್ರಿಯಾಪದ ಮೊದಲಿಗೆ ಮತ್ತು ನಾಮಪದ ನಂತರ ಬರುತ್ತವೆ. ಕೆಳಗೆ ಕೆಲವು ಪದಗಳನ್ನು ಪಟ್ಟಿಸಿದೆ.

ಕ್ರಿಯಾಪದ+ನಾಮಪದ=ನಾಮಪದ
ಕಡೆ+ಕೋಲು=ಕಡೆಗೋಲು
ಜಾರು+ಬಂಡಿ=ಜಾರುಬಂಡಿ
ಬೀಸು+ಕಲ್ಲು=ಬೀಸುಗಲ್ಲು
ಸುಳಿ+ಗಾಳಿ=ಸುಳಿಗಾಳಿ
ಕಾಡು+ಆಟ=ಕಾಡಾಟ
ನಾಮಪದಗಳನ್ನು ಹುಟ್ಟಿಸುವಲ್ಲಿ ವಿಶೇಶಣಕ್ಕೆ ನಾಮಪದವು ಸೇರಿ ಸಮಾಸವಾಗುವುದು ಇನ್ನೊಂದು ಪ್ರಕ್ರಿಯೆ. ಸಾಮಾನ್ಯವಾಗಿ ವಿಶೇಶಣ ಮೊದಲಿಗೆ ಬರುತ್ತದೆ ಮತ್ತು ನಾಮಪದ ನಂತರ ಬರುತ್ತದೆ.

ವಿಶೇಶಣ+ನಾಮಪದ=ನಾಮಪದ
ಳ+ಮಾವು=ಎಳಮಾವು
ತಣ್+ಗಾಳಿ=ತಂಗಾಳಿ
ಕರಿ+ನಾಲಿಗೆ=ಕರಿನಾಲಿಗೆ
ಒಳ+ಮಾತು=ಒಳಮಾತು

ನಾಮಪದಗಳಂತೆಯೆ ಕ್ರಿಯಾಪದಗಳನ್ನು ಕೂಡ ಸಮಾಸ ಪ್ರಕ್ರಿಯೆಯಲ್ಲಿ ಸಾದಿಸಬಹುದು. ಇಂತಲ್ಲಿ ಸಾಮಾನ್ಯವಾಗಿ ಮೊದಲಿಗೆ ನಾಮಪದ ಬರುತ್ತದೆ, ಆನಂತರ ಕ್ರಿಯಾಪದ ಬರುತ್ತದೆ. ಹೆಚ್ಚಾಗಿ ಇಂತ ಸಮಾಸಗಳಲ್ಲಿ ಆಗು, ಆಡು ಇಂತ ಕ್ರಿಯಾಪದಗಳು ಬಳಕೆಯಾಗುತ್ತವೆ. ಈ ಕೆಳಗಿನ ಪದಗಳನ್ನು ಗಮನಿಸಿ.

ನಾಮಪದ+ಕ್ರಿಯಾಪದ=ಕ್ರಿಯಾಪದ:
ಉಸಿರು+ಆಗು=ಉಸಿರಾಗು
ಕನಸು+ಆಗು=ಕನಸಾಗು
ಬೆರಗು+ಆಗು=ಬೆರಗಾಗು
ಉಸಿರು+ಆಡು=ಉಸಿರಾಡು
ಓಡು+ಆಡು=ಓಡಾಡು
ಸುಳ್ಳು+ಆಡು=ಸುಳ್ಳಾಡು
ಎರಡು ಕ್ರಿಯಾಪದಗಳು ಪರಸ್ಪರ ಸೇರಿ ಸಮಾಸವಾಗಿ ಇನ್ನೊಂದು ಕ್ರಿಯಾಪದ ಹುಟ್ಟಬಹುದು. ಕೆಳಗಿನ ಪಟ್ಟಿ ಗಮನಿಸಿ.

ಕ್ರಿಯಾಪದ+ಕ್ರಿಯಾಪದ=ಕ್ರಿಯಾಪದ:
ಓಡು+ಆಡು=ಓಡಾಡು
ಕೂಡು+ಆಡು=ಕೂಡಾಡು
ನಲಿ+-ದ್-+ಆಡು=ನಲಿದಾಡು
ಕುಣಿ+-ದ್-+ಆಡು=ಕುಣಿದಾಡು
ಸಮಾಸವಾಗುವಾಗ ಸೇರುವ ಎರಡು ಪದಗಳ ನಡುವೆ ಸಹಜವಾಗಿ ವಿಬಿನ್ನ ಸಂದಿ ಪ್ರಕ್ರಿಯೆ ನಡೆಯುತ್ತದೆ. ಸಂದಿ ಕುರಿತು ಬೇರೆ ಕಡೆ ಮಾತಾಡಬಹುದು.

ಸಾಮಾನ್ಯವಾಗಿ ಸಮಾಸ ಎಂದಾಗ ಎರಡು ಪದಗಳು ಸೇರಿ ಆಗಿರುತ್ತವೆ. ಆದರೆ, ಕೆಲವು ಸಂದರ‍್ಬಗಳಲ್ಲಿ ಎರಡಕ್ಕಿಂತ ಹೆಚ್ಚು ಪದಗಳು ಸೇರಿ ಸಮಾಸವಾಗಬಹುದು, ಮರಗಿಡಬಳ್ಳಿ ಇಂತ ಪದಗಳನ್ನು ಗಮನಿಸಬಹುದು.

ಸಾಮಾನ್ಯವಾಗಿ ಹೀಗೆ ಎರಡು ಪದಗಳು ಬೆರೆತು ಸಮಾಸವಾಗುವಾಗ ಅವೆರಡು ಪರಸ್ಪರ ಆಕ್ರುತಿಮಾತ್ಮಕವಾಗಿ ಮತ್ತು ಅರ‍್ತಾತ್ಮಕವಾಗಿ ಬೆರೆತುಕೊಂಡಿರುತ್ತವೆ. ಹೆಚ್ಚಿನ ಸಂದರ‍್ಬಗಳಲ್ಲಿ ಸಮಾಸದಲ್ಲಿ ಸೇರಿದ ಎರಡು ಪದಗಳಲ್ಲಿ ಎರಡನೆ ಪದದ ಅರ‍್ತಕ್ಕೆ ಹೆಚ್ಚಿನ ಅರ‍್ತಬಾರ ಇರುತ್ತದೆ. ಅಂದರೆ ಬಾಯ್ಮಾತು ಎಂಬ ಪದವನ್ನು ತೆಗೆದುಕೊಂಡರೆ ಇದರಲ್ಲಿ ಬಾಯಿ+ಮಾತು ಎಂಬ ಎರಡು ಪದಗಳಿವೆ ಮತ್ತು ಈ ಸಮಾಸದಲ್ಲಿ ಕೇಂದ್ರವಾಗಿರುವುದು ಮಾತು ಎಂಬ ಪದ. ಅಂದರೆ ಎಂತಾ ಮಾತು ಎಂಬುದನ್ನು ಈ ಸಮಾಸ ತಿಳಿಸುತ್ತದೆ. ಈ ಮಾತು ಎಂಬುದನ್ನು ವಿವರಿಸುವುದಕ್ಕೆ ಇಲ್ಲವೆ ಅದಕ್ಕೆ ಇರುವ ವಿಶಾಲ ಅರ‍್ತವನ್ನು ಮಿತಿಗೊಳಿಸುವುದಕ್ಕೆ ಬಾಯಿ ಎಂಬ ಪದ ಬಳಕೆಯಾಗುತ್ತದೆ. ಅಂದರೆ, ಮಾತು ಬೇಕಾದಶ್ಟು ಬಗೆಯವಾಗಿರಬಹುದು, ಆದರೆ ಇಲ್ಲಿ ಅದು ಬಾಯಿಮಾತು ಮಾತ್ರ ಆಗಿರುತ್ತದೆ. ಹೀಗೆ, ಸಮಾಸ ಪದದ ಅರ‍್ತ ಹೆಚ್ಚಾಗಿ ಉತ್ತರಪದ ಅಂದರೆ ಸಮಾಸದ ನಂತರದ ಪದದಲ್ಲಿ ಅಡಕವಾಗಿರುತ್ತದೆ. ಕೆಲವೊಮ್ಮೆ ಸಮಾಸದಲ್ಲಿ ಇರುವ ಎರಡೂ ಪದಗಳಲ್ಲಿ ಅರ‍್ತ ಇಲ್ಲವೆ ಸಮಾಸ ಪ್ರಕ್ರಿಯೆಯಲ್ಲಿ ಹೊರಗಿನಿಂದ ಬಂದು ಸೇರಿಕೊಳ್ಳಬಹುದು. ಮುಕ್ಕಣ್ಣ ಇಂತ ಪದದಲ್ಲಿ ಮೂ+ಕಣ್ಣ(<ಕಣ್ಣು+ಅ) ಎಂಬ ರಚನೆ ಇದೆ. ಇದು ಒಬ್ಬ ವ್ಯಕ್ತಿ, ಒಂದು ನಿರ‍್ದಿಶ್ಟ ಗುಣವನ್ನು ಹೊಂದಿರುವ ವ್ಯಕ್ತಿ, ಶಿವ ಎಂಬ ಅರ‍್ತವನ್ನು ಕೊಡುತ್ತದೆ. ಸಮಾಸದಲ್ಲಿ ಸೇರಿರುವ ಎರಡೂ ಪದಗಳಲ್ಲಿ ಈ ಅರ‍್ತ ಇಲ್ಲದಿರುವುದನ್ನು ಗಮನಿಸಬಹುದು.

ಸಮಾಸ ಎನ್ನುವುದು ಬಹುದೊಡ್ಡ ಬಾಶಿಕ ಮತ್ತು ಸಾಮಾಜಿಕ ಪ್ರಕ್ರಿಯೆ. ಇದರಲ್ಲಿ ಬಾಶೆಯ ರಚನೆ ಮತ್ತು ಸಾಮಾಜಿಕ ಅವಶ್ಯಕತೆ ಬೆಸೆದುಕೊಂಡಿರುತ್ತವೆ.

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...