ವಿಮಾನ ಹಾರಾಟದಿಂದ ಹಸಿರು ಹೋರಾಟಕ್ಕೆ

Date: 17-02-2022

Location: ಬೆಂಗಳೂರು


'ಪರಿಸರದ ಮೇಲೆ, ಹವಾಮಾನ ಬದಲಾವಣೆಯ ಮೇಲೆ ವಿಮಾನಯಾನದ ಪರಿಣಾಮಗಳ ಬಗೆಗಿನ ಚರ್ಚೆಗಳು ಟಾಡ್ ಸ್ಮಿತ್ ನ ಹಾಗೆ ಇನ್ನೂ ಕೆಲವು ವಿಮಾನ ಪೈಲಟ್ ಗಳು ಉದ್ಯೋಗಿಗಗಳು ಬದಲಿ ನೌಕರಿಯನ್ನು ಹೊಡುಕಿಕೊಂಡು ಚಳವಳಿಯಲ್ಲಿ ಭಾಗವಹಿಸುವಂತೆ ಮಾಡಿದೆ' ಎನ್ನುತ್ತಾರೆ ವಿಮಾನಶಾಸ್ತ್ರ ತಂತ್ರಜ್ಞ ಯೋಗೀಂದ್ರ ಮರವಂತೆ. ಅವರು ತಮ್ಮ ಏರೋ ಪುರಾಣ ಅಂಕಣದಲ್ಲಿ ವಿಮಾನ ಹಾರಾಟದಿಂದ ಪರಿಸರ ಮೇಲೆ ಆಗುವ ಪರಿಣಾಮಗಳು ಈ ಪರಿಣಾಮಗಳಿಂದಾಗಿ ಪರಿಸರ ಹೋರಾಟಕ್ಕೆ ಇಳಿದ ಪೈಲಟ್ ಗಳ ಕುರಿತು ವಿಶ್ಲೇಷಿಸಿದ್ದಾರೆ. 

ಲಂಡನ್ ನ ಬೀದಿಗಳಲ್ಲಿ ಹವಾಮಾನ ವೈಪರೀತ್ಯದ ಬಗ್ಗೆ 2020ರ ಮಾರ್ಚ್ ತಿಂಗಳಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಚಳವಳಿಕಾರರ ನಡುವೆ ಪೈಲಟ್ ಪೋಷಾಕಿನಲ್ಲಿ ಯುವಕನೊಬ್ಬ ಕಾಣಿಸಿಕೊಂಡಿದ್ದ. ಉದ್ದ ತೋಳಿನ ಬಿಳಿ ಅಂಗಿ, ಕಪ್ಪು ಪ್ಯಾಂಟ್, ಟೈ, ಕೋಟ್, ಟೊಪ್ಪಿ. ದೂರದಿಂದ ನೋಡಿದವರೂ ಇಲ್ಲೊಬ್ಬ ಪೈಲಟ್ ನ ಉಪಸ್ಥಿತಿಯನ್ನು ಗಮನಿಸದಿರುವಂತಿಲ್ಲ. ಚಳವಳಿಯಲ್ಲಿ ಉಡುಗೆ ತೊಡುಗೆಯ ವೈವಿಧ್ಯತೆ ಇರಲಿ ಎಂದು ಛದ್ಮವೇಷಧಾರಿಯಾಗಿ ಯಾವುದೊ ಬಾಡಿಗೆ ಪೋಷಾಕು ತೊಟ್ಟು ಬಂದವನು ಅವನಾಗಿರಲಿಲ್ಲ. ಆತ, ಇಂಗ್ಲೆಂಡ್ ನ ಟಾಡ್ ಸ್ಮಿತ್, 2019ರ ಸೆಪ್ಟೆಂಬರ್ ತನಕವೂ ವಿಮಾನ ಕಂಪೆನಿಯಲ್ಲಿ ಪೈಲಟ್ ಆಗಿಯೇ ದುಡಿಯುತ್ತಿದ್ದವನು, ಚಳವಳಿಯಲ್ಲಿ ಭಾಗವಹಿಸಲೆಂದೇ ಬಂದವನು.

ಪೈಲಟ್ ಗಳು ವಿಮಾನ ನಿಲ್ದಾಣದಲ್ಲಿ ಸಮವಸ್ತ್ರಧಾರಿಗಳಾಗಿ ಇತರ ಪೈಲಟ್ ಗಳ ಗಗನ ಸಖ-ಸಖಿಯರ ತಮ್ಮದೇ ಗುಂಪಿನಲ್ಲಿ ಕಣ್ಣಿಗೆ ಬೀಳಬಹುದೇ ವಿನಹ ವಿಮಾನದ ಒಳಗೆ ಕುಳಿತ ಯಾತ್ರಿಗಳಿಗೆ ಅವರ ದರ್ಶನ ಒದಗಿಬರುವುದು ವಿರಳ. ಅವರ ವೃತ್ತಿ ಕಾಯಕದಲ್ಲಿ, ಪ್ರಯಾಣಿಕರು ಏರುವ ಮುನ್ನವೇ ತಮ್ಮ"ಚಾಲಕ ಕುರ್ಚಿ"ಯಲ್ಲಿ ಕುಳಿತು ಎಲ್ಲರನ್ನೂ ಗುರಿ ಮುಟ್ಟಿಸಿ ಇಳಿಸಿದ ಮೇಲೆಯೇ  ವಿಮಾನವನ್ನು ಬಿಟ್ಟು ಇಳಿಯುವವರು."ಕಾಕ್ಪಿಟ್" ಎನ್ನುವ ಚಿಕ್ಕ ನಿಯಂತ್ರಣ ಕೊಠಡಿಯಲ್ಲಿ ಆಸೀನರಾಗಿ ವಿಮಾನದ ಪ್ರತಿ ಓಟ ಚಲನೆ ಅಲುಗಾಟ, ವಾತಾವರಣದ ಉಷ್ಣತೆ ಗಾಳಿ ಮಳೆ ಗುಡುಗು ಮಿಂಚುಗಳ ಮೇಲೆ ಸೂಕ್ಷ್ಮ ನಿಗಾ ಇಡುತ್ತ,  ಆಕಾಶವನ್ನು ಏರಿ ಮೋಡವನ್ನು ಮೀರಿ  ತೇಲುತ್ತ ನೆಲ ಜಲ, ಪರ್ವತ ಕಣಿವೆ, ರಸ್ತೆ ಬಯಲು, ಕಾಡು ಮರಳುಗಾಡು ಎಲ್ಲವುದರ ಹಕ್ಕಿನೋಟವನ್ನು ಆಸ್ವಾದಿಸುತ್ತ ವಿಹರಿಸುವವರು. ಎಚ್ಚರದಲ್ಲಿರುವ ಬಹುತೇಕ ವೇಳೆಯನ್ನು ನೆಲದಿಂದ ಹತ್ತು ಕಿಲೋಮೀಟರು ಎತ್ತರದಲ್ಲಿ ಹಗಲು ರಾತ್ರಿ, ಸೂರ್ಯ ಚಂದ್ರ, ಆಕಾಶಕಾಯ ನಕ್ಷತ್ರಗಳ ವಿಚಿತ್ರ ವಿಹಂಗಮ ಚಿತ್ರ ನೋಡುತ್ತಾ ಕಳೆಯುವವರು.  ಎಂತಹ ಸಂಕಷ್ಟದ ಬಿಕ್ಕಟ್ಟಿನ ಸಮಯ ಬಂದರೂ ದೃತಿಗೆಡದೆ ವಿಮಾನ ಮತ್ತು ಯಾತ್ರಿಗಳ ಸುರಕ್ಷತೆಗೆ ತಮ್ಮ  ಸರ್ವಸ್ವವನ್ನೂ ಪಣಕ್ಕಿಟ್ಟು ದುಡಿಯುವವರು. ವಿಮಾನದ ಚಾಲಕರಾಗ  ಬಯಸುವವರಿಗೆ ಹೊಟ್ಟೆ ತುಂಬಿಸುವ ವೃತ್ತಿಗಿಂತ ಮಿಗಿಲಾಗಿ  ಕನಸು ಸಾಹಸ ಪ್ರತಿಷ್ಠೆ ವಿಹಾರ ಎಲ್ಲವೂ ಆಗಿರುತ್ತದೆ.

ಇಂತಹದೇ ಕಾರಣಕ್ಕೆ ಅಂದು ಚಳವಳಿಯಲ್ಲಿ ಪೈಲಟ್ ಉಡುಪಿನಲ್ಲಿ ಕಾಣಿಸಿದ ಟಾಡ್ ಸ್ಮಿತ್ 2008ರಲ್ಲಿ ವಿಮಾನ ಚಲಾಯಿಸುವ  ತರಬೇತಿಗೆ ಸೇರಿದವನು. ಒಂದು ಕೋಟಿ ನಲವತ್ತು ಲಕ್ಷ ರೂಪಾಯಿ ಖರ್ಚು ಮಾಡಿ, ಏಳು ವರ್ಷಗಳ ತರಬೇತಿ ಮುಗಿಸಿದವನು. ಕಲಿಕೆ ಪೂರ್ಣಗೊಂಡು ವಿಮಾನ ಹಾರಿಸುವ ಪರವಾನಿಗೆ ಪಡೆದ ಮೇಲೆ ಮುಂದಿನ ಎರಡು ವರ್ಷ ತರೆಬೇತುದಾರನಾಗಿ ಕೆಲಸ ಮಾಡಿದ. ನಂತರ ನಾಗರಿಕ ವಿಮಾನದ ಪೈಲಟ್ ಆಗಿ ಕೆಲಸ ಆರಂಭಿಸಿದ. ಅಲ್ಲಿಂದ 2019ರ ಸೆಪ್ಟೆಂಬರ್ ತನಕವೂ ಬ್ರಿಟನ್ ಹಾಗು ಯೂರೋಪಿನಲ್ಲಿ ಬೇರೆ ಬೇರೆ ಮಾರ್ಗಗಳಲ್ಲಿ ವಿಮಾನ ಚಾಲಕನಾಗಿದ್ದವನು. 2019ರ ಸೆಪ್ಟೆಂಬರ್ ಅಲ್ಲಿ ಆತ ಕೆಲಸ ಮಾಡುತ್ತಿದ್ದ ವಿಮಾನ ಕಂಪೆನಿ ನಷ್ಟ ಅನುಭವಿಸಿ ಮುಚ್ಚಿತು. ಅದೇ ವರ್ಷ ಆತ ಬ್ಯಾಕ್ಟೀರಿಯಾ ಸೋಂಕಿನಿಂದ ಅಸ್ವಸ್ಥನಾದ. ಪರಿಣಾಮವಾಗಿ ವಿಮಾನ ಚಾಲಕನಾಗಲು ಬೇಕಾದ ಆರೋಗ್ಯ ಪ್ರಮಾಣ ಪತ್ರ ತಾತ್ಕಾಲಿಕವಾಗಿ ರದ್ದಾಯಿತು. ಆರೋಗ್ಯ ಸುಧಾರಿಸಿದ ಮೇಲೆ ಪೈಲಟ್ ಆಗಿ ಮರಳಬಹುದಾಗಿದ್ದ ಟಾಡ್, ವಿಮಾನ ಉದ್ಯೋಗವನ್ನು ತ್ಯಜಿಸಲು ನಿರ್ಧರಿಸಿದ. ವಿಮಾನ ಉದ್ಯೋಗಿಯಾಗಿ ಬ್ರಹತ್ ಜನಸಮೂಹದ ಬಿಡುವಿಲ್ಲದ ತಿರುಗಾಟ ಪ್ರವಾಸಗಳನ್ನು ಹತ್ತಿರದಿಂದ ಕಂಡಿದ್ದ ಅವನು ಕೋವಿಡ್ ಶುರು ಆದಾಗ ಪರಿಸರ ಚಳವಳಿಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ. ವಾಯು ಮಾಲಿನ್ಯಕ್ಕೆ ಪೂರಕವಾಗುವ ಹಲವು ವಿಷಯಗಳಲ್ಲಿ ವಿಮಾನ ಯಾನವೂ ಒಂದು ಎಂದು ತಿಳಿದು, ವಿಮಾನ ಲೋಕದ ಒಳಗಿನವನಾಗಿ ಆತ ಕಂಡ ಕೇಳಿದ ಓದಿದ ಅನುಭವಿಸಿದ ವಿಷಯಗಳನ್ನು ಹಂಚಿಕೊಳ್ಳಲು ಶುರು ಮಾಡಿದ. 2020ರಲ್ಲಿ ಲಂಡನ್ ಅಲ್ಲಿ ನಡೆದ ಹವಾಮಾನ ಬದಲಾವಣೆಯ ಚಳವಳಿಯಲ್ಲಿ ಆತ ಧರಿಸಿದ್ದ ಪೈಲಟ್ ಪೋಷಾಕು ಪರಿಸರ ಮಾಲಿನ್ಯದಲ್ಲಿ ವಿಮಾನ ಯಾನದ ನೇರವಾದ ಪಾಲನ್ನು ಕಣ್ಣಿಗೆ ಕಟ್ಟುವಂತೆ ಮೌನವಾಗಿ ಸಾರಿ ಹೇಳುತ್ತಿತ್ತು. ಚಳವಳಿಯನ್ನು ಹತ್ತಿರದಿಂದ ಗಮನಿಸುವವರಿಗೂ ದೂರದಲ್ಲಿದ್ದ ವಿಮಾನ ತಯಾರಿಸುವವರಿಗೂ, ವಿಮಾನಯಾನ ಸೇವೆಯನ್ನು ನಿಭಾಯಿಸುವವರಿಗೂ, ಮತ್ತೆ ಪ್ರಯಾಣಿಸುವವರಿಗೂ, ವಿಮಾನ ಲೋಕದ ಸಮಸ್ತ ಭಾಗೀದಾರರಿಗೂ ಒಂದು ಸಂದೇಶ ರವಾನಿಸುವ ಯತ್ನವಾಗಿತ್ತು. 

"ಹೆಚ್ಚಿನ ಜನರಿಗೆ ಪರಿಸರ ಮಾಲಿನ್ಯ, ಹವಾಮಾನ ಬದಲಾವಣೆ ಮತ್ತು ಪರಿಣಾಮಗಳ ಬಗ್ಗೆ ಸ್ವಲ್ಪವೂ ಮಾಹಿತಿ ಎಚ್ಚರ ಇಲ್ಲ" ಎಂದು ಟಾಡ್ ಹೇಳುತ್ತಾನೆ. 32 ವರ್ಷ ಪ್ರಾಯದ ಈತ, ಹವಾಮಾನ ಬದಲಾವಣೆಯನ್ನು ತನ್ನ ಮೂರು ದಶಕಗಳ ಸಣ್ಣ ಬದುಕಿನಲ್ಲಿ ಈಗಾಗಲೇ ಅನುಭವಿಸಿದ್ದೇನೆ, ಪ್ರವಾಸಗಳ ಪರಿಣಾಮವನ್ನು ಗಮನಿಸಿದ್ದೇನೆ, ಆಗಿರುವ ಅನಾಹುತಗಳಿಗೆ ಪರಿಹಾರ ಹುಡುಕುವಲ್ಲಿ ಪಾಲ್ಗೊಳ್ಳಬೇಕಾಗಿದೆ ಎನ್ನುತ್ತಾನೆ.

ನಾವು ನಾವು ಇರುವ ಊರುಗಳಲ್ಲಿ  ಚಳಿ ಬೇಸಿಗೆ ಗಾಳಿ ಮಳೆ ನೆರೆಗಳ ಹದ ತಪ್ಪಿ ಹವಾಮಾನ ಬದಲಾವಣೆಗೆ ನಿತ್ಯಪುರಾವೆ  ಒದಗಿಸುತ್ತಿರುವುದು ಟಾಡ್ ಗೆ ಎಂದರೇನು, ಎಲ್ಲರಿಗೂ ಗೊತ್ತಿರುವಂತಹದ್ದು. ಆದರೆ ಇಂತಹ ಬದಲಾವಣೆ  "ಜಾಗತಿಕ ತುರ್ತು" ಎನ್ನುವುದು ಜಗತ್ತಿನ ಬಹುತೇಕ ಮನೆ ಮನಗಳನ್ನು ಇನ್ನೂ ತಲುಪದ ಸತ್ಯ ಎಂದು ಟಾಡ್  ಹೇಳುತ್ತಾನೆ. ವಿಮಾನ ಹಾರಾಟದಲ್ಲಿ ಬಳಕೆಯಾಗುವ ಇಂಧನ ಎಂಜಿನ್ ಮೂಲಕ ಸುಟ್ಟಾಗ ವಿಮಾನವೇನೋ ಮುಂದುವರಿಯಲು ಅಗತ್ಯವಾದ ಅದಮ್ಯ ಶಕ್ತಿ ಉತ್ಪನ್ನವಾಗುತ್ತದೆ ಆದರೆ, ಜೊತೆಜೊತೆಗೇ  ಪರಿಸರಕ್ಕೆ ಮಾರಕವಾಗುವ ಕಾರ್ಬನ್ ಡೈ ಆಕ್ಸೈಡ್ ಕೂಡ ತಯಾರಾಗುತ್ತದೆ .ಸ್ವಚ್ಛ ಶುಭ್ರ ನೀಲಿ ಆಕಾಶದಲ್ಲಿ ವಿಮಾನದಿಂದ ಹೊರಬಿದ್ದ  ಬಿಳಿ ಗೆರೆಯ ನೀಳ ಸುಂದರ ಜಾಡು ವಾತಾವರಣವನ್ನು ಮಲಿನ ಮಾಡುವ ಅನಿಲ. ಜಾಗತಿಕ ತಾಪಮಾನವನ್ನು ಹೆಚ್ಚಿಸುವುದರಲ್ಲಿ ವಾತಾವರಣದಲ್ಲಿ ಬೇರೆ ಬೇರೆ ಮೂಲಗಳಿಂದ ಕಾರಣಗಳಿಂದ ತುಂಬಿಕೊಳ್ಳುವ ಕಾರ್ಬನ್ ಡೈ ಆಕ್ಸೈಡ್ ನ ದೊಡ್ಡ ಕೊಡುಗೆ ಇದೆ. ವಿಮಾನ ಉದ್ಯಮ, ಜಗತ್ತಿನ ಒಟ್ಟು ಕಾರ್ಬನ್ ಉಗುಳುವಿಕೆಯಲ್ಲಿ ಎರಡರಿಂದ ಮೂರು ಶೇಕಡ ಪಾಲುದಾರ. ಒಂದು ಅಂದಾಜಿನಂತೆ, ಎಕಾನಮಿ ಸೀಟಿನ ಲಂಡನ್- ನ್ಯೂಯಾರ್ಕ್ ನಡುವೆ ಹೋಗಿ ಬರುವ ಯಾನ, ಒಬ್ಬ ಯಾತ್ರಿಯ ಲೆಕ್ಕಕ್ಕೆ 0.67 ಟನ್ ಕಾರ್ಬನ್ ಡೈ ಆಕ್ಸೈಡ್ ಅನ್ನು ಉಗುಳುತ್ತದೆ.    ಇದು ಯುನೈಟೆಡ್ ಕಿಂಗ್ಡಮ್ ನಂತಹ ಅಭಿವೃದ್ಧಿ ಹೊಂದಿದ ಸಿರಿವಂತ ದೇಶದಲ್ಲಿ ವಾಸಿಸುವ, ಆದರೆ ವಿಮಾನ ಪ್ರಯಾಣ ಮಾಡದ ಒಬ್ಬ ವ್ಯಕ್ತಿಯಿಂದ ಇಡೀ ಒಂದು ವರ್ಷದಲ್ಲಿ ಉತ್ಪಾದಿಸಲ್ಪಡುವ ಕಾರ್ಬನ್ ನ ಹನ್ನೊಂದು ಶೇಕಡದಷ್ಟು. ಅಥವಾ, ಆಫ್ರಿಕಾದ ಘಾನದಂತಹ ಬಡ ದೇಶದ ಸಾಮಾನ್ಯ ನಾಗರಿಕ ತನ್ನ ಜೀವನ ಶೈಲಿಯಿಂದ ವರ್ಷವಿಡೀ ಉತ್ಪಾದಿಸುವ ಕಾರ್ಬನ್ ಹೊರಸೂಸುವಿಕೆಗೆ ಸಮನಾದದ್ದು. ಕಾರ್ಬನ್ ಹೊರಸೂಸುವಿಕೆಯ ಪ್ರಮಾಣದಲ್ಲಿ ದೇಶ ದೇಶಗಳ ನಡುವೆ ಯಾರ ಪಾಲು ಎಷ್ಟು ಎನ್ನುವ ಜಿಜ್ಞಾಸೆಯಲ್ಲಿ ಅಭಿವೃದ್ಧಿ ಹೊಂದಿದ ದೇಶಗಳು ಒಟ್ಟು ದೇಶದ ಕಾರ್ಬನ್ ಉತ್ಪಾದನೆಯನ್ನು ಎತ್ತಿ ಹೇಳಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳನ್ನು ಟೀಕಿಸಿದರೆ, ಅಭಿವೃದ್ಧಿ  ಹೊಂದುತ್ತಿರುವ ಮತ್ತು ಬಡ ದೇಶಗಳು ಸಿರಿವಂತ ದೇಶದ ವ್ಯಕ್ತಿಯೊಬ್ಬ ಉತ್ಪಾದಿಸುವ ದೊಡ್ಡ ಪ್ರಮಾಣದ ಕಾರ್ಬನ್ ಬಗ್ಗೆ ಪ್ರಶ್ನಿಸುತ್ತಾರೆ. ಅಭಿವೃದ್ಧಿ ಬೆಳೆವಣಿಗೆ ಐಷಾರಾಮ ಎಲ್ಲವೂ ದೊರಕುವುದು ವಾತಾವರಣವನ್ನು ಹೆಚ್ಚು ಹೆಚ್ಚು ಕಲುಷಿತಗೊಳಿಸುವ ಜಾಗತಿಕ ತಾಪಮಾನವನ್ನು ನಿರಂತರ ಹೆಚ್ಚಿಸುವ ಕಾರ್ಬನ್ ನ ಹೆಚ್ಚುವರಿ ಉತ್ಪಾದನೆಯೊಂದಿಗೆ. ಎಲ್ಲ ಸುಖ ಭೋಗಗಳ  ಅನಿವಾರ್ಯ ಭೀಕರ ಉಪಪದಾರ್ಥ ಕಾರ್ಬನ್ ಇರಬೇಕು. ವಿಮಾನ ಯಾನದಿಂದ ಹುಟ್ಟುವ ಸೇರುವ ಕಾರ್ಬನ್  ಜಗತ್ತಿನ ಒಟ್ಟು ಕಾರ್ಬನ್ ಪ್ರಮಾಣದಲ್ಲಿ ಕಡಿಮೆ ಎಂದು ವಾದಿಸಬಹುದಾದರೂ ವರ್ಷ ವರ್ಷವೂ ಹೆಚ್ಚುತ್ತಿರುವ ವಿಮಾನಗಳ ಯಾತ್ರಿಗಳ ಸಂಖ್ಯೆ ಪರಿಸರ ಚಿಂತಕರನ್ನು ಕಳವಳಕ್ಕೆ ಒಡ್ಡುತ್ತದೆ. 2019ರಲ್ಲಿ ಕೋವಿಡ್ ಸೋಂಕು ಶುರು ಆಗುವ ಮೊದಲಿನ ಅಂದಾಜಿನಂತೆ 2020 ಹಾಗು 2050ರ ನಡುವೆ ವಿಮಾನಯಾನ ಮೂರು ಪಟ್ಟು ಹೆಚ್ಚಲಿದೆ ಎಂದು ಒಂದು ಸಮೀಕ್ಷೆ ಹೇಳುತ್ತದೆ. ಅದರರ್ಥ ವಿಮಾನ ಯಾನದಿಂದ ಹೊರಹೊಮ್ಮುವ ಕಾರ್ಬನ್ ಉಗುಳುವಿಕೆ ಕೂಡ. 

ಪರಿಸರದ ಮೇಲೆ, ಹವಾಮಾನ ಬದಲಾವಣೆಯ ಮೇಲೆ ವಿಮಾನಯಾನದ ಪರಿಣಾಮಗಳ ಬಗೆಗಿನ ಚರ್ಚೆಗಳು ಟಾಡ್ ಸ್ಮಿತ್ ನ ಹಾಗೆ ಇನ್ನೂ ಕೆಲವು ವಿಮಾನ ಪೈಲಟ್ ಗಳು ಉದ್ಯೋಗಿಗಗಳು ಬದಲಿ ನೌಕರಿಯನ್ನು ಹೊಡುಕಿಕೊಂಡು ಚಳವಳಿಯಲ್ಲಿ ಭಾಗವಹಿಸುವಂತೆ ಮಾಡಿದೆ. ಬ್ರಿಟಿಷ್ ಏರ್ವೇಸ್ ಅಲ್ಲಿ ಪೈಲಟ್ ಆಗಿದ್ದ ನಾಥನ್ ರಾಬ್ , 2019ರಲ್ಲಿ ತನ್ನ ಕೆಲಸ ಬಿಟ್ಟು ಮರ ಗಿಡಗಳನ್ನು ನೆಡುವ ಉದ್ಯೋಗ ಶುರು ಮಾಡಿದ. 2021ರ ಮಾರ್ಚ್ ಗೆ ಮೂವತ್ತು ಸಾವಿರಕ್ಕಿಂತ ಹೆಚ್ಚು ಗಿಡಗಳನ್ನು ಆತನ ಕಂಪೆನಿ ನೆಟ್ಟಿತ್ತು. ಕೋವಿಡ್ ಕಾಲದಲ್ಲಿ ಕೆಲಸ ಕಳೆದುಕೊಂಡು ನಾಲ್ವರು ಈ ಕಂಪೆನಿಯಲ್ಲಿ ಈಗಲೂ ಕೆಲಸ ಮಾಡುತ್ತಿದ್ದಾರೆ, ಗಿಡ  ನೆಟ್ಟು ಬದುಕುತ್ತಾರೆ. ಡ್ಯಾನ್ ಟಿಪ್ನೆ ಎನ್ನುವ ಮತ್ತೊಬ್ಬ  ಪೈಲಟ್ ಹತ್ತು ವರ್ಷಗಳ ಸೇವೆಯ ನಂತರ ಉದ್ಯೋಗ ಬಿಟ್ಟು ಪರಿಸರ ಸ್ನೇಹಿ ಹೊಸ ಉದ್ಯಮ ಆರಂಭಿಸಿದ. ವಿಮಾನಯಾನದ  "ಪರಿಸರ ಹೊಣೆಗಾರಿಕೆ"ಯನ್ನು ಹೆಚ್ಚಿಸಲು ಅಲ್ಲದಿದ್ದರೆ  ಎಚ್ಚರ ನೀಡಲು ಇಂತಹ ಕೆಲವು ಹೆಜ್ಜೆಗಳು ಸಹಾಯ ಆದೀತಾದರೂ, ನಿಜವಾದ ಬದಲಾವಣೆ ಆಗಬೇಕಿದ್ದರೆ  ವಿಮಾನ ತಯಾರಕರಿಂದ ಹಿಡಿದು ಬಳಕೆದಾರರವರೆಗೆ  ಎಲ್ಲರ ಚಿಂತನೆ ಹಾಗು ಕ್ರಮಗಳಿಂದ.  ದೊಡ್ಡ ಪ್ರಮಾಣದ ಇಂಧನ ವ್ಯಯಿಸುವ ಆಪಾದನೆ ಇರುವ  ವಿಮಾನಯಾನವನ್ನು  ಜಗತ್ತಿನ  80% ಜನರು ಪ್ರಯಾಣಕ್ಕೆಂದು ಬಳಸುವುದೇ  ಇಲ್ಲ. ಮತ್ತೆ ಖಾಯಂ ವಿಮಾನದಲ್ಲೇ ಓಡಾಡುವ ಜಗತ್ತಿನ 1 ಶೇಕಡಾ ಜನರು 50 ಪ್ರತಿಶತ ವಿಮಾನದಿಂದ ಉಂಟಾಗುವ ಮಾಲಿನ್ಯಕ್ಕೆ ಕಾರಣರು.ಅಪರಾಧಿ ಪ್ರಜ್ಞೆಯಿಂದ ವಿಮಾನ ಸಂಬಂಧಿ ಕೆಲಸವನ್ನು  ತೊರೆದು ಪರಿಸರ ಚಳವಳಿಯಲ್ಲಿ  ಭಾಗವಹಿಸುತ್ತಿರುವ  ಮಾಜಿ ಪೈಲಟ್ ಗಳ ಅಭಿಪ್ರಾಯದಂತೆ ಎಲ್ಲರ ಜೀವನ ಶೈಲಿಯಲ್ಲಿ ಮಾರ್ಪಾಡಾಗಬೇಕು , ಪ್ರಯಾಣದ ರೀತಿ ಅಭ್ಯಾಸ  ಬದಲಾಗಬೇಕು ,ಸಾಂಪ್ರದಾಯಿಕ ಇಂಧನ ಚಾಲಿತ  ವಿಮಾನಗಳ ಬದಲಿಗೆ ಕಾರ್ಬನ್ ಹೊರಸೂಸದ ವಿಮಾನಗಳು ಆದಷ್ಟು ಬೇಗ ಸೇವೆಯಲ್ಲಿ ತೊಡಗಬೇಕು .ಕಾರ್ಬನ್ ಮುಕ್ತ ಅಥವಾ ಕಡಿಮೆ ಕಾರ್ಬನ್ ಬಳಸುವ ಬದಲಿ ಮಾಧ್ಯಮಗಳಲ್ಲಿ  ಪ್ರಯಾಣಿಸುವವರಿಗೆ ವಿಶೇಷ ಪ್ರೋತ್ಸಾಹ ಸಿಗಬೇಕು.

ವಿಮಾನಗಳಿಂದ ಪರಿಸರದ ಮೇಲಾಗುವ ಪರಿಣಾಮ ಮತ್ತು  ಉದ್ಯಮವೊಂದರ ಸಾಮಾಜಿಕ ಜವಾಬ್ದಾರಿ, ಇತ್ತೀಚಿನ ವರ್ಷಗಳಲ್ಲಿ ಎಲ್ಲ ವಿಮಾನ ತಯಾರಕರೂ ನಿತ್ಯ ಮಾತನಾಡುವ ವಿಷಯಗಳು. ಜೊತೆಗೆ ವಿಮಾನಯಾನವನ್ನು ವಿರೋಧಿಸುವ ಚಳವಳಿಗಾರರ ಟೀಕೆಯ ವಸ್ತುಗಳು. ಜಗತ್ತಿನ ಅತಿ ದೊಡ್ಡ ವಿಮಾನ ತಯಾರಕರಲ್ಲಿ ಒಂದಾದ ಯೂರೋಪಿನ "ಏರ್ಬಸ್" ಸಂಸ್ಥೆ ಶೂನ್ಯ ಕಾರ್ಬನ್ ಹೊರಸೂಸುವಿಕೆಯ ವಿಮಾನದ ತಯಾರಿಯಲ್ಲಿ ಹಣ ತೊಡಗಿಸಿ ಸಂಶೋಧನೆ ಪರೀಕ್ಷೆ ನಡೆಸುತ್ತಿದೆ. 2020ರ ನಂತರ ವಿಮಾನಗಳ ಸಂಖ್ಯೆ ಹೆಚ್ಚಾದರೂ ಅವೆಲ್ಲವುಗಳಿಂದ ಹೊರಸೂಸಲ್ಪಡುವ ಇಂಗಾಲದ ಪ್ರಮಾಣ ಹೆಚ್ಚಾಗದಂತೆ ಉಪಶಮನಗೊಳಿಸವ ಯೋಜನೆ ರೂಪಿಸಲಾಗಿದೆ. ಕಲ್ಲಿದ್ದಲು ಆಧಾರಿತ ಸಾಂಪ್ರದಾಯಿಕ ಇಂಧನದ ಬದಲಿಗೆ ಹೈಡ್ರೋಜನ್, ವಿದ್ಯುತ್, ಸೌರಶಕ್ತಿಯನ್ನು ಬಳಸಿ ಹಾರುವ ವಿಮಾನಗಳನ್ನು ತಯಾರಿಸುವ ಪ್ರಯತ್ನ ತೀವ್ರವಾಗಿ ನಡೆದಿದೆ. ಜೈವಿಕ ಇಂಧನಗಳ ಪರೀಕ್ಷೆಗಳೂ ನಡೆಯುತ್ತಿವೆ. ಪರಿಣಾಮವಾಗಿ ಮುಂದಿನ ಹತ್ತು ಹದಿನೈದು ವರ್ಷಗಳಲ್ಲಿ ಪರ್ಯಾಯ ಹಾಗು ಪರಿಸರ ಸ್ನೇಹಿ ಇಂಧನವನ್ನು ಬಳಸಿ ಹಾರುವ ಸಣ್ಣ ವಿಮಾನಗಳಾದರೂ ಆಕಾಶದಲ್ಲಿ ಕಾಣಿಸಲು ಆರಂಭಿಸಬಹುದು. ಅಮೆರಿಕದ ಬೋಯಿಂಗ್ ನ  ಪ್ರತಿ ಹೊಸ ಮಾದರಿಯ ವಿಮಾನವೂ ಹಿಂದಿಗಿಂತ ಕಡಿಮೆ ಇಂಧನ ವ್ಯಯಿಸುವ ಗುರಿ ಇಟ್ಟುಕೊಂಡಿರುತ್ತದೆ. ಇಂಧನ ಇಳುವರಿಯನ್ನು ಅಧಿಕಗೊಳಿಸುವ ಕಡಿಮೆ ಇಂಗಾಲ ಉಗುಳುವ ತಂತ್ರಜ್ಞಾನಗಳನ್ನು ಅನುಸರಿಸುತ್ತಿದೆ. ವಿಮಾನ ತಯಾರಾಗುವ ತನ್ನ ಕಾರ್ಖಾನೆಗಳಲ್ಲಿ ಜಲ, ಸೌರ, ವಾಯುವಿದ್ಯುತ್ ಗಳನ್ನು ಖರೀದಿಸಿ ಬಳಸುತ್ತಿದೆ. ಇಂತಹ ಪ್ರಯತ್ನಗಳೆಲ್ಲವೂ ತುರ್ತಾಗಿ ವಿಮಾನಯಾನ ಉಗುಳುವ ಕಾರ್ಬನ್ ಪ್ರಮಾಣವನ್ನು ತಕ್ಷಣಕ್ಕೆ ಕಡಿಮೆ ಮಾಡದಿದ್ದರೂ ಅತಿ ಅಗತ್ಯವಾದ ಬದಲಾವಣೆಯ ದಿಕ್ಕಿನಲ್ಲಿ ಸಮರ್ಪಕ ಹೆಜ್ಜೆಗಳಾಗಿ ಕಾಣಿಸುತ್ತಿವೆ.

ವಿಮಾನ ತಯಾರಕರು ಹವಾಮಾನ ವೈಪರೀತ್ಯದ ಚರ್ಚೆಯ ಕೇಂದ್ರದಲ್ಲಿರುವ ಕಾರ್ಬನ್ ಉತ್ಪಾದನೆಯನ್ನು ತಗ್ಗಿಸುವಲ್ಲಿ ಮಾಡುತ್ತಿರುವ ಪ್ರಯತ್ನವನ್ನು ಮಾಜಿ  ಪೈಲಟ್ ಗಳು ಸ್ವಾಗತಿಸಿದರೂ ತಮ್ಮ"ಹಸಿರು ಹೋರಾಟ"ವನ್ನು ಮುಂದುವರಿಸುವ ಇರಾದೆಯಲ್ಲಿದ್ದಾರೆ. ತಾವು ಪೈಲಟ್ ನೌಕರಿಯನ್ನು ಬಿಟ್ಟರೆ, ಖಾಲಿಯಾದ ತಮ್ಮ ಸ್ಥಾನವನ್ನು ಇನ್ನೊಬ್ಬರು ತುಂಬುತ್ತಾರೆ, ಇನ್ಯಾರೋ ವಿಮಾನ ಚಲಾಯಿಸುತ್ತಾರೆ, ಪ್ರಯಾಣ ಎಂದಿನಂತೆಯೇ ಮುಂದುವರಿಯುತ್ತದೆ ಎನ್ನುವುದನ್ನೂ ತಿಳಿದಿದ್ದಾರೆ. ಅಲ್ಪಾವಧಿಯಲ್ಲಿ ತಮ್ಮ ದಿಟ್ಟ ಹೆಜ್ಜೆಗಳು ಕ್ಷಿಪ್ರ ನೇರ ಬದಲಾವಣೆಯನ್ನು ತರದಿದ್ದರೂ ದೀರ್ಘಾವಧಿಯಲ್ಲಿ "ವಿಮಾನ ಮನೆ"ಯ ಒಳಗಿನಿಂದಲೇ ಹುಟ್ಟುತ್ತಿರುವ  ಹೋರಾಟ ಗಂಭೀರ ಪ್ರಭಾವವನ್ನು ಬೀರಬಹುದು ಎನ್ನುವ ನೀರಿಕ್ಷೆಯಲ್ಲಿ ಇದ್ದಾರೆ.

ಈ ಅಂಕಣದ ಹಿಂದಿನ ಬರಹಗಳು
ಬಿಡುವಿಲ್ಲದ ಆಗಸದಲ್ಲಿ ಏನೆಲ್ಲ ಎಷ್ಟೆಲ್ಲ..
ತುರ್ತು ನಿರ್ಗಮನದ ವಿಲಕ್ಷಣ ಕ್ಷಣಗಳು
ಮನೆಗೆ ಮರಳಿದ ಮಹಾರಾಜ
ಲೋಕೋಪಕಾರಿಯ ಪಾತ್ರದಲ್ಲಿ ಲೋಹದ ಹಕ್ಕಿ
ಆಕಾಶದ ರಾಣಿಯೂ ಕನಸಿನ ಹಕ್ಕಿಯೂ.....
ಅಸಲಿ ವಿಮಾನಗಳು ಮತ್ತು ನಕಲಿ ಹಕ್ಕಿಗಳು
ವಿಮಾನ ನಿಲ್ದಾಣಕ್ಕೆ ಸ್ವಾಗತ
ವಿಮಾನ ಸಂತತಿಯ ಶಬ್ದ ಬಣ್ಣ ಚಿತ್ರಗಳು
ಒಂದು ಆಕಾಶ ಹಲವು ಏಣಿಗಳು
ಆಗಸದ ಬಂಡಿಗಳ ಅಂಗರಚನಾಶಾಸ್ತ್ರ
ಕಟ್ಟಿಗೆಯ ಆಟಿಕೆಗಳು ಲೋಹದ ಹಕ್ಕಿಯಾದ ಅಧ್ಯಾಯ
ಗಗನಯಾನದ ದೈತ್ಯ ಹೆಜ್ಜೆಗಳು

MORE NEWS

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...