ಅರಿವು-ಆಚಾರ

Date: 02-01-2023

Location: ಬೆಂಗಳೂರು


“ಅರಿವು ಸಾಧ್ಯವಾಯಿತ್ತೆಂದು ಗುರುಲಿಂಗ ಜಂಗಮವ ಬಿಡಬಹುದೆ?” ಎಂದು ಪ್ರಶ್ನಿಸುವ ಮಹಾದೇವಿಯಕ್ಕನ ವಚನದಲ್ಲಿ ಮಹತ್ವದ ವಿಚಾರವಡಗಿದೆ. ಅರಿವು ಅಹಂಕಾರವನ್ನು ತರಬಾರದೆಂಬುದು ಇದರ ಮೂಲ ಆಶಯವಾಗಿದೆ. ಶಿವಶರಣೆಯರ ಪ್ರಕಾರ ಅರಿವು ತುಂಬಾ ಮುಖ್ಯ. ಅರಿವು ಅಥವಾ ತಿಳುವಳಿಕೆಯ ಕಾರಣದಿಂದಲೇ ಮನುಷ್ಯನು ಪ್ರಾಣಿಗಿಂತ ಭಿನ್ನನಾಗಿದ್ದಾನೆ. ಅರಿವು ಇಲ್ಲದ ಮನುಷ್ಯ ಪ್ರಾಣಿ ಸಮಾನ. ಆದರೆ ಆ ಅರಿವು ಅಹಂಭಾವವಾಗಿ ಬರಬಾರದೆಂಬುದು ಅಕ್ಕನ ಅಭಿಮತವಾಗಿದೆ” ಎನ್ನುತ್ತಾರೆ ಲೇಖಕಿ ವಿಜಯಶ್ರೀ ಸಬರದ. ಅವರು ತಮ್ಮ ಶಿವಶರಣೆಯರ ಸಾಹಿತ್ಯ ಚರಿತ್ರೆ ಅಂಕಣದಲ್ಲಿ ವಚನಕಾರ್ತಿಯರ ‘ಅರಿವು-ಆಚಾರ’ದ ಕುರಿತು ತಿಳಿಸಿದ್ದಾರೆ.

ಅರಿವು-ಆಚಾರ:

ಶರಣ ಸಂಸ್ಕೃತಿಯಲ್ಲಿ ಅರಿವು-ಆಚಾರಕ್ಕೆ ಬಹಳ ಮಹತ್ವವಿದೆ. ಅರಿವುಯೆಂದರೆ ಜ್ಞಾನ, ಆಚಾರವೆಂದರೆ ಒಳ್ಳೆಯ ನಡತೆ, ಆಚರಣೆಯೆಂದರೆ ಕ್ರಿಯೆ. ಮನುಷ್ಯ ಒಳ್ಳೆಯ ನಡತೆಯಳ್ಳುವನಾಗಿದ್ದು ಅರಿವು ಆಚರಣೆಗಳ ಮೂಲಕ ಬೆಳೆದು ನಿಲ್ಲಬೇಕೆಂಬುದು ಶರಣರ ಆಶಯ. ಅರಿವು ಹೇಗಿರಬೇಕೆಂಬುದರ ಬಗೆಗೆ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ ಒಂದು ವಚನದಲ್ಲಿ ಹೀಗೆ ಹೇಳಿದ್ದಾಳೆ. “ಎನ್ನನರಿಯಿಸದಿರುವೆ, ಎನ್ನನರಿಯಿಸು, ನಿನ್ನನರಿಯಿಸಬೇಡ ಎನ್ನನರಿಯದವ ನಿನ್ನನರಿಯ ಎನ್ನನರಿಯಿಸದೆ ನಿನ್ನನರಿಯಿಸಿದಡೆ ನೀನೆನಗೆ ಗುರುವಲ್ಲ, ನಾನಿನಗೆ ಶಿಷ್ಯನಲ್ಲ ಎನ್ನನರಿಯಿಸಿದಡೆ ನೀನೆನಗೆ ಗುರು, ನಾ ನಿನಗೆ ಶಿಷ್ಯ ಮಸಣಯ್ಯ ಪ್ರಿಯ ಗಜೇಶ್ವರಾ”

- ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ (ಸ.ವ. ಸಂ. 5, ವ - 764)

ಇಲ್ಲಿ ಎನ್ನ-ನಿನ್ನ ಎಂಬೆರಡು ಪದಗಳು ಪ್ರತಿ ನುಡಿಯಲ್ಲಿಯೂ ಪ್ರಕಟವಾಗಿವೆ. ನಾನು-ನೀನುಯೆಂಬುದು ಇಲ್ಲಿ ಜೀವ-ದೇವನ ಸಂಕೇತವಾಗಿ, ವ್ಯಕ್ತಿ-ಸಮಾಜದ ಸಂಕೇತವಾಗಿ ಬಳಕೆಯಾಗಿದೆ. ವ್ಯಕ್ತಿ ಬೆಳೆಯದೆ ಸಮಾಜ ಸುಧಾರಿಸುವದಿಲ್ಲ. ನರಬೆಳೆಯದೆ ಹರನಾಗುವುದಿಲ್ಲ. ಆದುದರಿಂದ ಇಲ್ಲಿ ಕೇವಲ ಒಂದು ಕಡೆ ಅರಿವುಂಟಾದರೆ ಸಾಲದು, ಆ ಅರಿವು ಎರಡೂ ಕಡೆಯುತ್ಪತ್ತಿಯಾಗಬೇಕೆಂದು ಈ ಶರಣೆ ತಿಳಿಸಿದ್ದಾಳೆ. ವ್ಯಕ್ತಿಯನ್ನು ಬೆಳೆಸದೆ, ಆತನಿಗೆ ಸಂಸ್ಕಾರ ನೀಡದೆ, ಆತನಲ್ಲಿ ಅರಿವು ಮೂಡಿಸದೆ, ಆ ಅರಿವನ್ನು ಆಚರಣೆಗೆ ತರಿಸದೆ ಇದ್ದರೆ ಸಮಾಜ ಬೆಳೆಯುವುದಿಲ್ಲ. ಸಮುದಾಯ ಅಭಿವೃದ್ಧಿಯಾಗುವದಿಲ್ಲ. ಅಂತೆಯೇ ಈ ಶರಣೆ “ಎನ್ನನರಿಯಿಸದೆ, ನಿನ್ನನರಿಯಿಸಿದಡೆ ನೀನೆನಗೆ ಗುರುವಲ್ಲ”ವೆಂದು ಸ್ಪಷ್ಟಪಡಿಸಿದ್ದಾಳೆ. ಇನ್ನೊಬ್ಬರಿಗೆ ತಿಳಿಹೇಳುವುದೆಂದರೆ ತಾನು ತಿಳಿದುಕೊಳ್ಳುವದೆಂದು ಅರ್ಥ. ಹೀಗೆ ವ್ಯಕ್ತಿ-ಸಮುದಾಯ, ಶಿಷ್ಯ-ಗುರು, ಸತಿ-ಪತಿ ಇವರಿಬ್ಬರಲ್ಲಿಯೂ ಅರಿವು-ಆಚಾರವನ್ನುಂಟು ಮಾಡುವುದೇ ಅನುಭಾವವಾಗಿದೆ. ಮುಕ್ತಾಯಕ್ಕನ ಒಂದು ವಚನದಲ್ಲಿ ಅರಿವಿನ ಸಾಧ್ಯತೆಗಳ ಕುರಿತು ಮಹತ್ವದ ಚಿಂತನೆಯಿದೆ.

“ನುಡಿಯೆನೆಂಬಲ್ಲಿಯೆ ನುಡಿ ಅದೆ
ನಡೆಯೆನೆಂಬಲ್ಲಿಯೆ ನಡೆ ಅದೆ
ಭಾವಿಸೆನೆಂಬಲ್ಲಿಯೆ ಭಾವ ಅದೆ
ಅರಿದು ಮರೆದೆನೆಂಬಲ್ಲಿಯೆ ಅರಿವು ಮರವೆ ಅದೆ...”
- ಮುಕ್ತಾಯಕ್ಕ (ಸ.ವ. ಸಂ.5, ವ-1124)

ಎಂದು ಬೆಳೆಯುತ್ತ ಹೋಗುವ ಈ ವಚನದಲ್ಲಿ ನುಡಿ-ನಡೆಗಳ ಸಂಬಂಧದಬಗೆಗೆ ಹೊಸ ವ್ಯಾಖ್ಯಾನವಿದೆ. ನುಡಿದಂತೆ ನಡೆ ಇದೇ ಜನ್ಮ ಕಡೆಯೆಂಬುದು ಶರಣವಾಕ್ಯ. ಆದರೆ ನುಡಿಯೊಂದು ಪರಿ, ನಡೆಯೊಂದು ಪರಿಯಿರುವುದು ಡಾಂಭಿಕರ ಬದುಕಿನಲ್ಲಿ. ಒಮ್ಮಿಂದೊಮ್ಮೆಲೇ ನುಡಿ-ನಡೆಯಾಗುವುದಿಲ್ಲ; ಅರಿವು- ಆಚರಣೆಗೆ ಬರುವುದಿಲ್ಲ. ಇದೊಂದು ಪ್ರಕ್ರಿಯೆ (ಪ್ರೊಸೆಸ್). ನುಡಿಯುತ್ತ ನುಡಿಯುತ್ತ ಹೋದಂತೆಲ್ಲ ನಡೆ ಗಟ್ಟಿಯಾಗುತ್ತದೆ; ನಡೆಯುತ್ತ ನಡೆಯುತ್ತ ಹೋದಂತೆಲ್ಲ ನುಡಿ ಮೌನವಾಗುತ್ತದೆ. ವಾಸ್ತವ-ಆದರ್ಶಗಳ ನಡುವಿನ ಅಂತರ ಕಡಿಮೆಯಾಗಬೇಕಾದರೆ; ನಡೆ-ನುಡಿಗಳಲ್ಲಿ ಸಾಮ್ಯತೆಯುಂಟಾಗಬೆಕಾದರೆ ಸಾಧನೆ ಬಹಳ ಮುಖ್ಯ. ಇದು ಒಂದು ದಿನದ ನಡೆಯಲ್ಲ, ನಿರಂತರವಾದ ನಡೆ. ಇದು ಒಮ್ಮೆ ಹೇಳುವ ನುಡಿಯಲ್ಲ, ನಿರಂತರವಾದ ಜಾಗೃತಿ.

ಅಂತೆಯೇ ಇಲ್ಲಿ ಮುಕ್ತಾಯಕ್ಕ ತದ್ವಿರುದ್ಧವೆಂದು ಭಾವಿಸುವ ಪರಿಕಲ್ಪನೆ ಗಳಲ್ಲಿಯೇ ಸಮನ್ವಯದ ಸಾಧ್ಯತೆಯಿದೆಯೆಂದು ಸ್ಪಷ್ಟಪಡಿಸಿದ್ದಾಳೆ. ನುಡಿಯೆನು ಎಂಬಲ್ಲಿಯೇ ನುಡಿ ಇದೆಯೆಂದು ಹೇಳುವಲ್ಲಿ, ಯಾವುದನ್ನು ನಾವು ನೇತ್ಯಾತ್ಮಕ ವೆಂದು ಭಾವಿಸಿರುತ್ತೇವೆಯೋ ಅಲ್ಲಿಯೇ ಇತ್ಯಾತ್ಮಕ ಸಾಧ್ಯತೆಗಳಿವೆಯೆಂದು ತಿಳಿಸಿದ್ದಾಳೆ. ಅಂಗದಲ್ಲಿ ಲಿಂಗಲೀಯವಾಯಿತ್ತೆಂದಡೆ ಅಲ್ಲಿಯೇ ಅಂಗವಿದೆ, ನಾನೆ

ನಾನಾದೆನೆಂಬಲ್ಲಿಯೇ ನೀನೆಂಬುದಿದೆಯೆಂದು ಮುಂದಿನ ನುಡಿಯಲ್ಲಿ ವಿವರಿಸಿದ್ದಾಳೆ. ಅರಿಯದೇ ಮರೆಯುವುದು ಒಂದು ಹಂತವಾದರೆ, ಅರಿದು ಮರೆಯುವುದು ಮತ್ತೊಂದು ಹಂತ. ಅರಿದ ಅರಿವನ್ನು ಮರೆಯದೇ, ಮಾಡಿದೆನೆಂಬ ಅಹಂಕಾರವ ಅಳಿಸಿಹಾಕುವುದು ಅರಿವಿನ ನಿಜವಾದ ಸಾಕ್ಷಾತ್ಕಾರವಾಗುತ್ತದೆ.

“ಅರಿವು ಸಾಧ್ಯವಾಯಿತ್ತೆಂದು ಗುರುಲಿಂಗ ಜಂಗಮವ ಬಿಡಬಹುದೆ?” ಎಂದು ಪ್ರಶ್ನಿಸುವ ಮಹಾದೇವಿಯಕ್ಕನ ವಚನದಲ್ಲಿ ಮಹತ್ವದ ವಿಚಾರವಡಗಿದೆ. ಅರಿವು ಅಹಂಕಾರವನ್ನು ತರಬಾರದೆಂಬುದು ಇದರ ಮೂಲ ಆಶಯವಾಗಿದೆ. ಶಿವಶರಣೆಯರ ಪ್ರಕಾರ ಅರಿವು ತುಂಬಾ ಮುಖ್ಯ. ಅರಿವು ಅಥವಾ ತಿಳುವಳಿಕೆಯ ಕಾರಣದಿಂದಲೇ ಮನುಷ್ಯನು ಪ್ರಾಣಿಗಿಂತ ಭಿನ್ನನಾಗಿದ್ದಾನೆ. ಅರಿವು ಇಲ್ಲದ ಮನುಷ್ಯ ಪ್ರಾಣಿ ಸಮಾನ. ಆದರೆ ಆ ಅರಿವು ಅಹಂಭಾವವಾಗಿ ಬರಬಾರದೆಂಬುದು ಅಕ್ಕನ ಅಭಿಮತವಾಗಿದೆ. ಅನೇಕರಿಗೆ ತಾವು ತಿಳಿದವರು - ಪಂಡಿತರು ಎಂಬ ಭ್ರಮೆ ಇರುತ್ತದೆ. ಅಂತಹ ಭ್ರಮೆಯೇ ಪಾಂಡಿತ್ಯ ಪ್ರತಿಷ್ಠೆಗೆ ಕಾರಣವಾಗುತ್ತದೆ. ಆದುದರಿಂದಲೇ ಶರಣೆಯರು ಅರಿವಿನೊಂದಿಗೆ ವಿನಯವಿರಬೇಕೆಂದು ಹೇಳಿದ್ದಾರೆ. ಆದರೆ ಅರಿವು ಅಥವಾ ಜ್ಞಾನ ಅತ್ಯಂತ ಮುಖ್ಯವೆಂದು ಅವರು ಪ್ರತಿಪಾದಿಸಿದ್ದಾರೆ.

ಅಕ್ಕ ತನ್ನ ಇನ್ನೊಂದು ವಚನದಲ್ಲಿ ಜ್ಞಾನದ ಮಹತ್ವವನ್ನು ವಿವರಿಸಿದ್ದಾಳೆ. “ಮರವಿದ್ದು ಫಲವೇನು ನೆಳಲಿಲ್ಲದನ್ನಕ್ಕ? ಧನವಿದ್ದು ಫಲವೇನು ದಯವಿಲ್ಲದನ್ನಕ್ಕ?” ಎಂಬಂತಹ ವಚನದಲ್ಲಿ ಇದರ ಸ್ಪಷ್ಟತೆಯನ್ನು ಕಾಣಬಹುದಾಗಿದೆ. ವಚನದ ಕೊನೆಗೆ “ನಾನಿದ್ದು ಫಲವೇನು ಜ್ಞಾನವಿಲ್ಲದನ್ನಕ್ಕ?” ಎಂದು ಪ್ರಶ್ನಿಸಿದ್ದಾಳೆ. ನೆರಳು ಕೊಡದ ಮರ, ದಯವಿಲ್ಲದ ಧನ, ಹಯನಿಲ್ಲದ ಹಸು, ಗುಣವಿಲ್ಲದ ರೂಪ ಹೇಗೆ ವ್ಯರ್ಥವೊ ಹಾಗೆ ಜ್ಞಾನವಿಲ್ಲದ ಮನುಷ್ಯ ಎಂದು ವಿವರಿಸಿ ಹೇಳಿದ್ದಾಳೆ.

ಅರಿವಿನಷ್ಟೇ ಆಚಾರ ಮುಖ್ಯವೆಂದು ಹೇಳುವ ಅಕ್ಕಮ್ಮ, ತನ್ನ ವಚನಾಂಕಿತದಲ್ಲಿ “ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ” ಎಂದು ಸೇರಿಸಿಕೊಂಡಿದ್ದಾಳೆ. ಅಂದರೆ ಅಕ್ಕಮ್ಮ ಆಚಾರಕ್ಕೆ ಅತ್ಯಂತ ಪ್ರಮುಖಸ್ಥಾನ ನೀಡಿದ್ದಾಳೆ.

“ಆಚಾರ ತಪ್ಪಿದಲ್ಲಿ ಪ್ರಾಯಶ್ಚಿತ್ತ ಉಂಟೆಂಬ ಅನಾಚಾರಿಗಳ ಮುಖವ ನೋಡಬಹುದೆ?”
- ಅಕ್ಕಮ್ಮ (ಸ. ವ. ಸಂ.5, ವ-447)

ಎಂದು ಪ್ರಶ್ನಿಸುವ ಅಕ್ಕಮ್ಮ, ಆಚಾರವೆಂಬುದೇನು ಸಂತೆಯ ವ್ಯವಹಾರವೆ? ಜೂಜಿನ ಮಾತೆ? ಎಂದು ಪ್ರಶ್ನಿಸಿದ್ದಾಳೆ. ಅರಿವನ್ನು ಪಡೆಯುವುದು ಎಷ್ಟು ಮುಖ್ಯವೊ, ಅದನ್ನು ಆಚರಣೆಗೆ ತರುವದೂ ಅಷ್ಟೇ ಮುಖ್ಯ. ಅರಿವು ಆಚಾರವಾಗುವುದು ಮಹತ್ವದ ಸಾಧನೆ. ಪುಸ್ತಕಗಳಲ್ಲಿ, ಜ್ಞಾನಿಗಳಲ್ಲಿ ಅರಿವು ಇರುತ್ತದೆ. ಆದರೆ ಪುಸ್ತಕದಲ್ಲಿರುವ ಅರಿವು, ಆಚರಣೆಯಾಗಿ ಬರಬೇಕಾದರೆ ಅದಕ್ಕೆ ಕ್ರಿಯೆ ಮುಖ್ಯ. ಅರಿವು ಕ್ರಿಯಾರೂಪ ಪಡೆದಾಗಲೇ ಅದು ಆಚರಣೆಯಾಗುತ್ತದೆ. ಆದುದರಿಂದ ಅರಿವು-ಆಚಾರ ಒಂದು ನಾಣ್ಯದ ಎರಡುಮುಖಗಳಾಗಿವೆ. ಆಚಾರವಿಲ್ಲದ ಅರಿವು ಬರೀ ಬೊಗಳೆಯಾದರೆ, ಅರಿವಿಲ್ಲದ ಆಚಾರ ವ್ಯರ್ಥವಾಗುತ್ತದೆ. ಅನೇಕ ಆಧ್ಯಾತ್ಮವಾದಿಗಳು ಅರಿವಿನ ಬಗೆಗೆ ಅನುಭಾವದ ಬಗೆಗೆ ಮತನಾಡಿದ್ದಾರೆ. ಆದರೆ ಶರಣರು ಆಚಾರವಿಲ್ಲದ ಅರಿವು ವ್ಯರ್ಥವೆಂದು ತಿಳಿಸಿದ್ದಾರೆ. ಅರಿವಿಗೆ ಬೆಲೆ ಬರುವುದೇ ಆಚರಣೆಯಿಂದ ಎಂದು ಹೇಳಿದ ಶರಣೆಯರು ಜ್ಞಾನ ಮತ್ತು ಕ್ರಿಯೆ ಶರಣ ತತ್ವದ ಪ್ರಮುಖ ಸಿದ್ಧಾಂತಗಳಾಗಿವೆಯೆಂದು ತಿಳಿಸಿದ್ದಾರೆ. ಅಕ್ಕಮ್ಮ ತನ್ನ ವಚನದಲ್ಲಿ ಆಚಾರದ ಮಹತ್ವವನ್ನು ಕುರಿತು ಹೀಗೆ ಹೇಳಿದ್ದಾಳೆ.

“ಗುರುವಾದಡೂ ಆಚಾರ ಭ್ರಷ್ಟನಾದಡೆ ಅನುಸರಿಸಲಾಗದು ಲಿಂಗವಾದಡೂ ಆಚಾರ ದೋಹಳವಾದಲ್ಲಿ ಪೂಜಿಸಲಾಗದು ಜಂಗಮವಾದಡೂ ಆಚಾರ ಅನುಸರಣೆಯಾದಲ್ಲಿ ಕೂಡಲಾಗದು. ಆಚಾರವೆ ವಸ್ತು, ವ್ರತವೆ ಪ್ರಾಣ, ಕ್ರಿಯೆಯೆ ಜ್ಞಾನ, ಜ್ಞಾನವೇ ಆಚಾರ ಆಚಾರವೆ ಪ್ರಾಣವಾದ ರಾಮೇಶ್ವರ ಲಿಂಗವು ತಾನೆ. ”

- ಅಕ್ಕಮ್ಮ (ಸ.ವ.ಸಂ.5, ವ-481)

ಈ ವಚನ ಅರಿವು-ಆಚಾರಕ್ಕೆ, ಜ್ಞಾನ-ಕ್ರಿಯೆಗೆ ಬರೆದ ವ್ಯಾಖ್ಯಾನದಂತಿದೆ ಎಂಬುದನ್ನು ಗಮನಿಸಬೇಕಾಗಿದೆ.

“ಅರಿಯಬಲ್ಲಡೆ ವಿರಕ್ತನೆಂಬೆನು
ಆಚಾರವನರಿದಡೆ ಅಭೇದ್ಯನೆಂಬೆನು”
- ಅಮುಗೆ ರಾಯಮ್ಮ (ಸ.ವ.ಸಂ.5, ವ-596)

ಎನ್ನುವ ಅಮುಗೆ ರಾಯಮ್ಮ ಅರಿವು-ಆಚಾರ ಕುರಿತಂತೆ ಮಹತ್ವದ ಚರ್ಚೆಯನ್ನು ಪ್ರಾರಂಭಿಸಿದ್ದಾಳೆ. ಮುಂದಿನ ಸಾಲಿನಲ್ಲಿ ಹೇಳಿರುವ ಮಾತು ಅತ್ಯಂತ ಅರ್ಥಪೂರ್ಣವಾಗಿದೆ. “ಘನತತ್ವವನರಿದು ಶಿಶು ಕಂಡ ಕನಸಿನಂತೆ ಇದ್ದರೆ ಶಿವಜ್ಞಾನಿ ಎಂಬೆನಯ್ಯಾ ಅಮುಗೇಶ್ವರ” ಎಂಬ ರಾಯಮ್ಮನ ಈ ಮಾತು ಸಾಮಾನ್ಯವಾದುದಲ್ಲ. ಅರಿವುಳ್ಳವ ಜ್ಞಾನಿ-ಅರಿವಿಲ್ಲದವ ಅಜ್ಞಾನಿ ಈ ಸಂಗತಿ ಎಲ್ಲರಿಗೂ ಗೊತ್ತಿದೆ. ಆದರೆ ಅರಿದು, ಶಿಶುಕಂಡ ಕನಸಿನಂತಿದ್ದರೆ ಅವನೇ ಶಿವಜ್ಞಾನಿ ಎಂಬ ವಿಷಯ ಮಾತ್ರ ಹೊಸದು. ಜ್ಞಾನಿಗಿಂತ ಶಿವಜ್ಞಾನಿ ದೊಡ್ಡವ. ಏಕೆಂದರೆ ಶಿವಜ್ಞಾನಿಯ ಅರಿವು ಶಿಶುಕಂಡ ಕನಸಿನಂತಿರುತ್ತದೆ. ಅಲ್ಲಿ ಕಪಟ, ಸ್ವಾರ್ಥ, ಅಹಂಭಾವಗಳಿರುವುದಿಲ್ಲ. ಆದುದರಿಂದ ಜ್ಞಾನಿಯಾಗುವುದು ಸುಲಭ, ಶಿವಜ್ಞಾನಿಯಾಗುವುದು ತುಂಬಾ ಕಷ್ಟ. ರಾಯಮ್ಮ ಈ ವಚನದಲ್ಲಿ ಶಿವಜ್ಞಾನದ ಮಹತ್ವವನ್ನು ಕುರಿತು ಹೇಳಿದ್ದಾಳೆ.

“ಆಕಾಶಕ್ಕೆ ಹಾರುವಂಗೆ ದೋಟಿಯಕೋಲ ಹಂಗೇತಕಯ್ಯ?” ಎಂದು ಪ್ರಶ್ನಿಸಿರುವ ಅಮುಗೆ ರಾಯಮ್ಮ, “ತನ್ನ ತಾನರಿದವನಿಗೆ ಬಿನ್ನಾಣಿಗಳ ಮಾತೇಕಯ್ಯಾ?” ಎಂದು ಕೇಳಿದ್ದಾಳೆ. ಇತರರಿಗೆ ಬೋಧಿಸುವದಕ್ಕಿಂತ ಮೊದಲು ತನ್ನನ್ನು ತಾನು ತಿಳಿದುಕೊಳ್ಳಬೇಕೆಂಬ ನುಡಿ ಬಹುಮತ್ವದ್ದಾಗಿದೆ. ಹಾಗೆ ತನ್ನನ್ನು ತಾನು ತಿಳಿದುಕೊಂಡಾಗ ಯಾರು ಏನೇ ಅಂದರೂ, ಆತ ಶಿವಜ್ಞಾನಿಯಾಗಿರುತ್ತಾನೆ. ಶಿಶುಕಂಡ ಕನಸಿನಂತಿರುತ್ತಾನೆ. ಅರಿವು-ಆಚಾರ ಕುರಿತಂತೆ ಶಿವಶರಣೆಯರು ಅನೇಕ ಮಹತ್ವದ ವಿಚಾರಗಳನ್ನು ಹೇಳಿದ್ದಾರೆ. ಈ ರೀತಿಯ ಅವರ ಚಿಂತನೆಗಳು ಬದುಕಿಗೆ ಹೊಸ ಆಯಾಮ ನೀಡುವಂತವುಗಳಾಗಿವೆ.

ಈ ಅಂಕಣದ ಹಿಂದಿನ ಬರೆಹಗಳು:
ತ್ರಿಪುರಾಂತಕ ಕೆರೆಯ ನಿರ್ಮಾಣ ಕಾರ್ಯದಲ್ಲಿ ಶಿವಶರಣೆಯರು
ಸಾಮಾಜಿಕ ಪ್ರಜ್ಞೆ
ಆಗಮ ಮೋಹಿನಿ
ಬತ್ತಲೇಶ್ವರನ ಪುಣ್ಯಸ್ತ್ರೀ ಗುಡ್ಡವ್ವೆ
ಬೆಡಗಿನ ಭಾಷೆಯಲ್ಲಿ ವಚನಕಾರ್ತಿಯರು
ವಿಡಂಬನೆ
ಶರಣರ ಸಮಕಾಲೀನ ವಚನಕಾರ್ತಿ ‘ಸೂಳೆ ಸಂಕವ್ವೆ’
ಜಾತ್ಯಾತೀತ ಮನೋಭಾವ
ಗರತಿಯರ ಹಾಡಿನಲ್ಲೂ ನಲಿದಾಡುವ ಶಿವಶರಣೆಯರು

ಲೌಕಿಕದ ಮೂಲಕವೇ ಅಲೌಕಿಕದ ಹಾದಿ
ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ ಮತ್ತು ಕದಿರ ರೆಮ್ಮವ್ವೆ
ರಾಜವೈಭವ ತೊರೆದು ಜಾತಿಭೇದದ ವಿರುದ್ಧ ಮಾತನಾಡಿದ ಬೊಂತಾದೇವಿ
ಲೌಕಿಕದ ಮೂಲಕವೇ ಆಧ್ಯಾತ್ಮವನ್ನು ಹೇಳಿರುವ ಗೊಗ್ಗವ್ವೆ
ಶರಣಧರ್ಮ ರಕ್ಷಣೆಗೆ ನಿಂತಿದ್ದ ಗಂಗಾಂಬಿಕೆ
ಮಹತ್ವದ ವಚನಕಾರ್ತಿ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಶಿವಶರಣೆ ಅಕ್ಕನಾಗಮ್ಮ
ಶಿವಶರಣೆ ಆಯ್ದಕ್ಕಿ ಲಕ್ಕಮ್ಮ
ಶಿವಶರಣೆ ಸತ್ಯಕ್ಕ
ಮುಕ್ತಾಯಕ್ಕ
ಮೋಳಿಗೆ ಮಹಾದೇವಿ
ಹಡಪದಪ್ಪಣ್ಣಗಳ ಪುಣ್ಯಸ್ತ್ರಿ ಲಿಂಗಮ್ಮ

ಶಿವಶರಣೆ ಅಕ್ಕಮ್ಮ
ನೀಲಾಂಬಿಕೆ
ಅಕ್ಕಮಹಾದೇವಿ
ಚರಿತ್ರೆ ಅಂದು-ಇಂದ

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...