ಕನ್ನಡದ ವಿಬಕ್ತಿಗಳು

Date: 22-05-2023

Location: ಬೆಂಗಳೂರು


ಕನ್ನಡದಲ್ಲಿ ಬಳಕೆಯಾಗುವ ವಿಬಕ್ತಿ ಪ್ರತ್ಯಯಗಳ ಕುರಿತು ಈ ಸಾರಿ ಅರ‍್ತ ಮಾಡಿಕೊಳ್ಳುವ ಪ್ರಯತ್ನ ಮಾಡೋಣ ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ಕನ್ನಡದ ವಿಬಕ್ತಿಗಳು' ಎಂಬ ವಿಚಾರ ಕುರಿತು ಬರೆದಿದ್ದಾರೆ.

ಕರ‍್ತ್ರು ಕಾರಕ: ವಾಕ್ಯದಲ್ಲಿ ಒಂದು ಕೆಲಸ ಇರುತ್ತದೆ, ಈ ಕೆಲಸವನ್ನು ಮಾಡುವ ಗಟಕವು ಕರ‍್ತ್ರು ಕಾರಕದಲ್ಲಿ ಇರುತ್ತದೆ. ‘ಅವಳು ಕಚೇರಿಗೆ ಹೋದಳು’ ಈ ವಾಕ್ಯದಲ್ಲಿ ‘ಹೋಗುವ’ ಕೆಲಸ ನಡೆಯುತ್ತಿದೆ. ಈ ಕೆಲಸವನ್ನು ಮಾಡುವಂತದ್ದು ಕರ‍್ತ್ರು. ಈ ವಾಕ್ಯದಲ್ಲಿ ಕರ‍್ತ್ರು ‘ಅವಳು’ ಎಂಬುದಾಗಿದೆ. ವಾಕ್ಯದಲ್ಲಿನ ಕೆಲಸದ ಮೇಲೆ ಇದು ನಿಯಂತ್ರಣವನ್ನು ಹೊಂದಿರುತ್ತದೆ. ಕನ್ನಡದಲ್ಲಿ ಕರ‍್ತ್ರು ಕಾರಕಕ್ಕೆ ಬೇರೆ ಪ್ರತ್ಯಯ ಇಲ್ಲ. ನಾಮಪದದ ರೂಪದಲ್ಲಿಯೆ ಅದು ಅಬಿವ್ಯಕ್ತಿಯನ್ನು ಪಡೆದುಕೊಳ್ಳುತ್ತದೆ.

ಕರ‍್ತ್ರು ಕಾರಕವನ್ನು ಪ್ರತಮಾ ವಿಬಕ್ತಿ ಎಂದು ಕರೆಯಲಾಗುವುದು. ಹಳಗನ್ನಡದಲ್ಲಿ –ಅಂ ಎಂಬುದನ್ನೂ ಹೊಸಗನ್ನಡದಲ್ಲಿ –ಉ ಎಂಬುದನ್ನೂ ಪ್ರತಮಾ ವಿಬಕ್ತಿ ಎಂದು ಹಲವು ವ್ಯಾಕರಣಗಳು ಹೇಳುತ್ತವೆ. ವಾಸ್ತವದಲ್ಲಿ ಹೀಗೆ ಕರ‍್ತ್ರು ಕಾರಕವನ್ನು ಅಬಿವ್ಯಕ್ತಿಸುವುದಕ್ಕೆ ಯಾವುದೆ ಪ್ರತ್ಯಯ ಕನ್ನಡದಲ್ಲಿ ಬಳಕೆಯಲ್ಲಿಲ್ಲ. ಈ ಮೇಲಿನ ಬಳಕೆಯಲ್ಲಿ ಅವಳು ಎಂಬ ಪದದ ಮೇಲೆ ಯಾವುದೆ ಪ್ರತ್ಯಯ ಬಂದಿಲ್ಲ. ಪದದ ಕೊನೆಯಲ್ಲಿ ಕಂಡುಬರುವ ‘ಉ’ ದ್ವನಿಯು ಪದದ ಬಾಗವಾಗಿಯೆ ಇದೆ, ಅದು ಪದದ ಮೇಲೆ ಬಂದು ಸೇರಿಲ್ಲ.

ಕರ‍್ಮ ಕಾರಕ: ಇದು ವಾಕ್ಯದಲ್ಲಿ ನಡೆಯುವ ಕೆಲಸದ ಪರಿಣಾಮಕ್ಕೆ ಒಳಗಾಗುವಂತದ್ದು. ‘ಅವಳು ಮನೆ ಕಟ್ಟಿದಳು’ ಎಂಬ ವಾಕ್ಯದಲ್ಲಿ ಕಟ್ಟುವ ಕೆಲಸ ನಡೆಯುತ್ತಿದೆ. ಈ ಕಟ್ಟುವ ಕೆಲಸದ ಪರಿಣಾಮವು ‘ಮನೆ’ ಎಂಬ ಗಟಕದ ಮೇಲೆ ಆಗುತ್ತಿದೆ. ಅಂದರೆ, ಕಟ್ಟುವ ಕೆಲಸದಿಂದ ಮನೆ ರೂಪುಗೊಳ್ಳುತ್ತಿದೆ. ಕರ‍್ಮವು ವಾಕ್ಯದಲ್ಲಿನ ಕೆಲಸದ ಪರಿಣಾಮಕ್ಕೆ ಒಳಗಾಗುವುದರಿಂದ, ಇಲ್ಲವೆ ಅದರಿಂದ ರೂಪುಗೊಳ್ಳುವುದರಿಂದ ಸಹಜವಾಗಿ ಇದು ವಾಕ್ಯದಲ್ಲಿನ ಕೆಲಸದ ಮೇಲೆ ನಿಯಂತ್ರಣವನ್ನು ಹೊಂದಿರುವುದಿಲ್ಲ.

ಕರ‍್ಮ ಕಾರಕವನ್ನು ಅಬಿವ್ಯಕ್ತಿಸುವುದಕ್ಕೆ -ಅನ್ನು ಎಂಬ ರೂಪವು ಬಳಕೆಯಾಗುತ್ತದೆ. ಹಳಗನ್ನಡದಲ್ಲಿ–ಅನ್ ಮತ್ತು –ಆನ್ ರೂಪಗಳು ಬಳಕೆಯಲ್ಲಿದ್ದವು.

ಅವಳು ಮಗುವನ್ನು ಕರೆದಳು
ಕರ‍್ಮ ಕಾರಕವನ್ನು ದ್ವಿತಿಯಾ ವಿಬಕ್ತಿ ಎನ್ನಲಾಗುವುದು. ಕನ್ನಡದಾಗ ದ್ವಿತಿಯಾ ವಿಬಕ್ತಿಯು ಮನುಶ್ಯದ ಮೇಲೆ ಕಡ್ಡಾಯ ಮತ್ತು ಮನುಶ್ಯರಲ್ಲದ ನಾಮಪದಗಳ ಮೇಲೆ ಇದು ಕಡ್ಡಾಯ ಅಲ್ಲ. ಕೆಳಗಿನ ವಾಕ್ಯಗಳನ್ನು ಗಮನಿಸಿ,

ಅವಳು ದನವನ್ನು ಕಟ್ಟಿದಳು
ಅವಳು ದನ ಕಟ್ಟಿದಳು

ಕರಣ ಕಾರಕ: ಒಂದು ವಾಕ್ಯದಲ್ಲಿ ನಡೆಯುವ ಕೆಲಸಕ್ಕೆ ಸಾದನವಾಗಿ ಬಳಕೆಯಾಗುವುದು ಕರಣ ಕಾರಕದಲ್ಲಿ ಇರುತ್ತದೆ. ’ಅವಳು ಚಾಕಿನಿಂದ ಹಣ್ಣನ್ನು ಕೊಯ್ದಳು’. ಈ ವಾಕ್ಯದಲ್ಲಿ ಹಣ್ಣನ್ನು ಕೊಯ್ಯುವ ಕ್ರಿಯೆ ನಡೆದಿದೆ. ಈ ಕ್ರಿಯೆಯಲ್ಲಿ ಸಾದನವಾಗಿ ಬಳಕೆಯಾಗಿರುವುದು ‘ಚಾಕು’. ಹಾಗಾಗಿ ಇದು ಕರಣ ಕಾರಕ ಎನ್ನಬಹುದು. ಇದಕ್ಕೆ ತ್ರುತಿಯಾ ವಿಬಕ್ತಿ ಎನ್ನಲಾಗುವುದು. ತ್ರುತಿಯಾ ವಿಬಕ್ತಿಗೆ –ಇಂದ ಎಂಬ ರೂಪವು ಬಳಕೆಯಲ್ಲಿದೆ. ಹಳಗನ್ನಡದಲ್ಲಿ –ಇನ್ ಎಂಬ ರೂಪವು ಬಳಕೆಯಲ್ಲಿದ್ದು ಹೊಸಗನ್ನಡ ಕಾಲಕ್ಕೆ ಅದು –ಇಂದ ಎಂದು ಬೆಳೆದಿದೆ.

ಚಾಕಿನಿಂದ ಹಣ್ಣನ್ನು ಕೊಯ್ದಳು
ಕರಣ ಕಾರಕವನ್ನ ಹೇಳುವುದಕ್ಕೆ ಕೆಲವೊಮ್ಮೆ ಪ್ರತ್ಯಯದ ಬದಲು ಪದೋತ್ತರ ರೂಪವನ್ನ ಬಳಸಲು ಸಾದ್ಯವಿದೆ.

ಚಾಕು ತಗೊಂಡು ಹಣ್ಣನ್ನು ಕೊಯ್ದಳು
ಚಾಕು ತೆಗೆದುಕೊಂಡು ಹಣ್ಣನ್ನು ಕೊಯ್ದಳು

ಪ್ರತ್ಯಯ ನಾಮಪದದ ಮೇಲೆ ಬಂದು ಅದಕ್ಕೆ ಅಂಟಿಕೊಂಡರೆ ಪದೋತ್ತರ ರೂಪ ಹಾಗೆ ಅಂಟಿಕೊಳ್ಳದೆ ಬೇರೆಯಾಗಿ ನಿಲ್ಲುತ್ತದೆ. ಇದುವೆ ಪ್ರತ್ಯಯ ಮತ್ತು ಪದೋತ್ತರ ರೂಪ ಇವುಗಳ ನಡುವಿನ ವ್ಯತ್ಯಾಸ.

ಸಂಪ್ರದಾನ ಕಾರಕ: ವಾಕ್ಯದಲ್ಲಿ ಇರುವ ಕೆಲಸಕ್ಕೆ ಯಾವುದು ಗುರಿಯಾಗಿರುತ್ತದೆಯೊ ಅದು ಸಂಪ್ರದಾನ ಕಾರಕ. ‘ಅವಳು ಕಚೇರಿಗೆ ಹೋದಳು’ ಎನ್ನುವ ವಾಕ್ಯದಲ್ಲಿ ಹೋಗುವ ಕೆಲಸ ಇದೆ. ಈ ಕೆಲಸದ ಗುರಿಯು ‘ಕಚೇರಿ’ ಆಗಿದೆ. ಇದುವೆ ಸಂಪ್ರದಾನ ಕಾರಕ. ಇದನ್ನು ಚತುರ‍್ತಿ ವಿಬಕ್ತಿ ಎನ್ನಲಾಗುವುದು. ಕನ್ನಡದಲ್ಲಿ ಇದಕ್ಕೆ –ಕೆ, -ಗೆ ಎಂಬ ರೂಪಗಳು ಬಳಕೆಯಾಗುತ್ತವೆ. ಹಳಗನ್ನಡದಾಗ –ಅಕಂ, -ಅಗಂ, -ಕೆ ಮೊದಲಾದ ರೂಪಗಳು ಬಳಕೆಯಲ್ಲಿದ್ದವು.

ಅವಳು ಹೊಲಕ್ಕೆ ಹೋದಳು
ಅವಳು ಅಂಗಡಿಗೆ ಹೋದಳು

ಮೇಲಿನ ಎರಡು ವಾಕ್ಯಗಳಲ್ಲಿ ಮೊದಲನೆಯದರಲ್ಲಿ –ಕ್ಕೆ ರೂಪ ಬಂದಿದ್ದರೆ ಎರಡನೆಯದರಲ್ಲಿ –ಗೆ ಬಂದಿದೆ. ಇವುಗಳನ್ನು ಪರಸ್ಪರ ಬದಲಿಸಿ ಪ್ರಯೋಗಿಸಲು ಬಾರದು. ಯಾಕೆ? ಯಾವ ನಿಯಮ ಎಂಬುದನ್ನು ಗಮನಿಸಿದಾಗ, ನಾಮಪದಗಳು ‘ಅ’ದಿಂದ ಕೊನೆಯಾಗುತ್ತಿದ್ದರೆ ಅವುಗಳ ಮೇಲೆ –ಕ್ಕೆ ಎಂಬ ರೂಪವು ಬರುತ್ತದೆ ಮತ್ತು ಉಳಿದ ನಾಮಪದಗಳು ಅಂದರೆ ‘ಇ’, ‘ಎ’, ‘ಉ’ ಸ್ವರಗಳಿಂದ ಕೊನೆಯಾಗುತ್ತಿದ್ದರೆ ಅವುಗಳ ಮೇಲೆ –ಗೆ ರೂಪವು ಬರುತ್ತದೆ. ‘ಅ’ಕೊನೆ ನಾಮಪದಗಳು: ಹೊಲಕ್ಕೆ, ನೆಲಕ್ಕೆ, ಕುಲಕ್ಕೆ, ‘ಇ’, ‘ಎ’, ‘ಉ’ಕೊನೆ ನಾಮಪದಗಳು: ರೊಟ್ಟಿಗೆ, ಮನೆಗೆ, ಹಾಲಿಗೆ. ಇವುಗಳಲ್ಲಿ ಮಗು, ಗುರು ಇಂತ ಕೆಲವು ನಾಮಪದಗಳಿಗೆ ಪ್ರತ್ಯಯ ಸೇರುವ ಮೊದಲು ಆಗಮವೊಂದು ಬಂದು ಸೇರುತ್ತದೆ, ಮಗುವಿಗೆ, ಗುರುವಿಗೆ.

ಅಪಾದಾನ ಕಾರಕ: ಅಪಾದನ ಎಂದರೆ ಬಿಡುಗಡೆ. ವಾಕ್ಯದಲ್ಲಿ ಇರುವ ಕೆಲಸವೊಂದು ಒಂದು ಮೂಲದಿಂದ ಆರಂಬವಾಗುವ, ಬಿಡುಗಡೆಗೊಳ್ಳುವ ಕೆಲಸವನ್ನು ಹೇಳುವಂತದ್ದು. ‘ಅವಳು ಕಚೇರಿಯಿಂದ ಬಂದಳು’ ಎನ್ನುವ ವಾಕ್ಯದಲ್ಲಿ ಬರುವ ಕೆಲಸ ನಡೆಯುತ್ತಿದೆ ಮತ್ತು ಈ ಕೆಲಸದ ಮೂಲವು ‘ಕಚೇರಿಯಾಗಿದೆ’ ಇಲ್ಲವೆ ಕೆಲಸವು ‘ಕಚೇರಿಯಿಂದ’ ಶುರುವಾಗುತ್ತದೆ. ಅಪಾದಾನ ಕಾರಕವನ್ನು ಅಬಿವ್ಯಕ್ತಿಸುವ ಪ್ರತ್ಯಯಕ್ಕೆ ಪಂಚಮಿ ವಿಬಕ್ತಿ ಎನ್ನಲಾಗುತ್ತದೆ. ಇದಕ್ಕೆ ಹಳಗನ್ನಡದಲ್ಲಿ –ಇನ್ ಎಂಬ ರೂಪ ಮತ್ತು ಹೊಸಗನ್ನಡದಲ್ಲಿ –ಇಂದ ಎಂಬ ರೂಪವು ಬಳಕೆಯಲ್ಲಿವೆ.

ಅವಳು ಮನೆಯಿಂದ ಹೊರಟಳು
-ಇಂದ ಎಂಬ ರೂಪವು ತ್ರುತಿಯಾ ವಿಬಕ್ತಿಗೆ ಬಳಕೆಯಾಗುತ್ತದೆ ಎಂದು ಮೇಲೆ ವಿವರಿಸಿದೆ. ಹಾಗಾಗಿ, ಹಲವರಿಗೆ ಇದು ಗೊಂದಲವೆನಿಸಬಹುದು. ವಾಸ್ತವದಲ್ಲಿ ಇದರಲ್ಲಿ ಗೊಂದಲವೇನೂ ಇಲ್ಲ. –ಇಂದ ಎಂಬ ರೂಪವು ಈ ಎರಡೂ ಕಾರಕ ಸಂಬಂದಗಳನ್ನು ಅಬಿವ್ಯಕ್ತಿಸಲು ಬಳಕೆಯಾಗುತ್ತದೆ. ಹಾಗಾದರೆ, ಇವುಗಳ ನಡುವಿನ ಕಾರಕ ಬಿನ್ನತೆಯನ್ನು ಹೇಗೆ ಅರಿತುಕೊಳ್ಳುವುದು ಎಂಬುದು ಪ್ರಶ್ನೆಯಾಗಬಹುದು. ಬಾಶೆಯಲ್ಲಿ ರೂಪಕ್ಕಿಂತ ಅದು ಕೊಡುವ ಅರ‍್ತವು ಮುಕ್ಯವಾಗುತ್ತದೆ. ಪದಗಳ ಸಂದರ‍್ಬದಲ್ಲಿ ಅರ‍್ತ ಮತ್ತು ಪ್ರತ್ಯಯಗಳ ಸಂದರ‍್ಬದಲ್ಲಿ ಅದರ ಕೆಲಸ ಇವುಗಳನ್ನು ಗಮನಿಸಬೇಕು. –ಇಂದ ರೂಪವು ಬಳಕೆಯಾಗಿರುವ ಎರಡು ವಾಕ್ಯಗಳನ್ನು ಇಲ್ಲಿ ಮತ್ತೊಮ್ಮೆ ಕೊಟ್ಟಿದೆ,

ಚಾಕಿನಿಂದ ಹಣ್ಣನ್ನು ಕೊಯ್ದಳು
ಅವಳು ಮನೆಯಿಂದ ಹೊರಟಳು

ಇವುಗಳಲ್ಲಿ ಮೊದಲ ವಾಕ್ಯದಲ್ಲಿ –ಇಂದ ಎಂಬ ರೂಪವು ಬಳಕೆಯಾಗುವ ಮೂಲಕ ವಾಕ್ಯದಲ್ಲಿರುವ ಕೆಲಸವು ಯಾವ ಸಾದನದಿಂದ ಇಲ್ಲವೆ ಯಾವ ಸಾದನದ ಸಹಾಯದಿಂದ ಆಯಿತು, ನಡೆಯಿತು ಎಂಬುದು ಗೊತ್ತಾದರೆ, ಎರಡನೆ ವಾಕ್ಯದಲ್ಲಿ ವಾಕ್ಯದಲ್ಲಿ ಇರುವ ಕೆಲಸವು ಎಲ್ಲಿಂದ ಮೊದಲಾಯಿತು, ಆರಂಬವಾಯಿತು ಇಲ್ಲವೆ ಎಲ್ಲಿಂದ ಬಿಡುಗಡೆ ಹೊಂದಿತು ಎಂಬುದು ತಿಳಿಯುತ್ತದೆ. ಹಾಗಾಗಿ, ಬಳಕೆಯಲ್ಲಿ ಇವುಗಳ ಅರ‍್ತ, ಕೆಲಸ ತುಂಬಾ ಸ್ಪಶ್ಟವಾಗಿರುವುದರಿಂದ ಇಲ್ಲಿ ಯಾವುದೆ ಗೊಂದಲ ಇಲ್ಲ. ಪುಸ್ತಕದ ಅರಿವನ್ನ ಬದುಕಿನ ಅರಿವಿನಿಂದ ಹೊರತೆಗೆದು ನೋಡಹೊರಟಾಗ ಇವೆಲ್ಲ ಗೊಂದಲ ಎಂದು ಅನಿಸುತ್ತವೆ.

ಪಂಚಮಿ ವಿಬಕ್ತಿ ಬಗೆಗೆ ಕನ್ನಡ ವ್ಯಾಕರಣಗಳು, ವಯ್ಯಾಕರಣಿಗಳು ಅನವಶ್ಯಕವಾದ ಗೊಂದಲವನ್ನು ಮಾಡಿಕೊಂಡಿವೆ. ಈ ಗೊಂದಲ ನೋಡಿದರೆ ಅದೊಂದು ಮೋಜೆನಿಸಿ ನಗೆ ಬಾರದಿರದು. ಹಳಗನ್ನಡದ ವಯ್ಯಾಕರಣಿಗಳು ಅತ್ತಣಿಂ ಎಂಬ ಶಬ್ದವನ್ನು ಪಂಚಮಿ ವಿಬಕ್ತಿ ಎಂದು ವಿವರಿಸಿದರೆ ಹೊಸಗನ್ನಡದವರು ದೆಸೆಯಿಂದ ಎಂಬ ಶಬ್ದವನ್ನು ಪಂಚಮಿ ವಿಬಕ್ತಿ ಎಂದು ಹೇಳುತ್ತಾರೆ. ಇಂತಾ ರೂಪಗಳು ಪಂಚಮಿಗೆ ಕನ್ನಡದಲ್ಲಿ ಬಳಕೆಯಾಗುವುದಿಲ್ಲ. ಕೇಶಿರಾಜ ಹೀಗೆ ಹೇಳಿಯೂ -ಇನ್ ಮೊದಲಾದ ರೂಪಗಳು ಪಂಚಮಿಗೆ ಬಳಕೆಯಾಗುತ್ತವೆ ಎಂದು ಹೇಳುತ್ತಾನೆ. ಸಂಸ್ಕ್ರುತದ ವ್ಯಾಕರಣಗಳಲ್ಲಿ ಇರುವ ವಿಬಕ್ತಿ ವಿವರಣೆ ಪ್ರಬಾವದಿಂದ ಹಳಗನ್ನಡದ ವಯ್ಯಾಕರಣಿಗಳು ಎಡವಿದರೆ, ಈ ಹಳಗನ್ನಡ ವಯ್ಯಾಕರಣಿಗಳನ್ನು ಅನುಸರಿಸಿ ಹೊಸಗನ್ನಡದ ವಯ್ಯಾಕರಣಿಗಳು ಎಡವಿದ್ದಾರೆ. ಆದರೆ, ಆದುನಿಕ ಬಾಶಾವಿಗ್ನಾನ ಹಿನ್ನೆಲೆಯಲ್ಲಿ ಬರೆದ ಬಹುತೇಕರು ಈ ತಪ್ಪನ್ನು ಮಾಡಿಲ್ಲ.

ಅದಿಕರಣ ಕಾರಕ: ಅದಿಕರಣ ಎಂದರೆ ನೆಲೆ, ಜಾಗ. ವಾಕ್ಯದಲ್ಲಿ ಇರುವ ಕೆಲಸವು ನಡೆಯವ ಜಾಗವನ್ನು ಇದು ಹೇಳುತ್ತದೆ. ಇದಕ್ಕೆ ಸಪ್ತಮಿ ವಿಬಕ್ತಿ ಎಂದು ಹೇಳಲಾಗುತ್ತದೆ. ‘ಅವಳು ಕಚೇರಿಯಲ್ಲಿ ಕೂತಿದ್ದಾಳೆ’. ಈ ವಾಕ್ಯದಲ್ಲಿ ಕೂತಿರುವ ಕೆಲಸವು ಕಚೇರಿಯಲ್ಲಿ ನಡೆಯುತ್ತಿದೆ. ಸಪ್ತಮಿಗೆ ಹಳಗನ್ನಡ ವ್ಯಾಕರಣಗಳು –ಅಲ್, -ಒಳ್ ಮೊದಲಾದ ಪ್ರತ್ಯಯಗಳನ್ನು ಮತ್ತು ಹಲವು ಪದೋತ್ತರ ರೂಪಗಳನ್ನು ವಿವರಿಸಿವೆ. ಹೊಸಗನ್ನಡದಲ್ಲಿ –ಅಲ್ಲಿ ಎಂಬ ರೂಪವನ್ನು ಬಹುಶಾ ಹಳಗನ್ನಡ ವ್ಯಾಕರಣಗಳ ಪ್ರಬಾವದಿಂದ ವಿವರಿಸಲಾಗಿದೆ. ಇದರೊಟ್ಟಿಗೆ –ಒಳಗೆ ಎಂಬ ರೂಪವನ್ನೂ ವಿವರಿಸುತ್ತವೆ. ಕೆಳಗಿನ ಬಳಕೆಗಳನ್ನು ಗಮನಿಸಿ,

ಅವಳು ಕಚೇರಿಯಲ್ಲಿ ಇದ್ದಾಳೆ
ಅವಳು ಕಚೇರಿಯೊಳಗೆ ಇದ್ದಾಳೆ

ಕುತೂಹಲವೆಂದರೆ ನೆಲೆಯನ್ನು ಹೇಳುವುದಕ್ಕೆ ಕನ್ನಡದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ರೂಪ –ಆಗ. ಇದು ಕನ್ನಡದ ಕೆಲವು ಒಳನುಡಿಗಳನ್ನು ಹೊರತುಪಡಿಸಿ ಬಹುತೇಕ ಕಡೆ ಬಳಕೆಯಲ್ಲಿದೆ. ಆದರೆ, ಈ ರೂಪವನ್ನು ವ್ಯಾಕರಣಗಳು ವಿವರಿಸುವುದಿಲ್ಲ. ವರ‍್ಣನಾತ್ಮಕ ವ್ಯಾಕರಣಗಳು ಈ ತಪ್ಪನ್ನು ಮಾಡುವುದಿಲ್ಲ. ಇದರೊಟ್ಟಿಗೆ, ನೆಲೆಯನ್ನು ಹೇಳುವುದಕ್ಕೆ ಹಲವು ವಿಬಕ್ತಿ ರೂಪಗಳು ಬಳಕೆಯಲ್ಲಿವೆ, ಕೆಲವು ಬಳಕೆ ಗಮನಿಸಿ

-ಆಗ: ಅವಳು ಮನ್ಯಾಗ ಇದಾಳೆ
-ಲಿ: ಅವಳು ಮನೇಲಿ ಇದಾಳೆ
-ಇ: ಅವಳು ಮನದಿ ಇದಾಳೆ

ಇದರೊಟ್ಟಿಗೆ, ನೆಲೆಯನ್ನು ಹೇಳುವುದಕ್ಕೆ ಹಲವು ಪದೋತ್ತರ ರೂಪಗಳೂ ಬಳಕೆಯಲ್ಲಿವೆ. ಒಳಗೆ, ಹೊರಗೆ, ಮೇಲೆ, ಕೆಳಗೆ, ಪಕ್ಕ ಮೊದಲಾಗಿ ಹಲವಾರು ರೂಪಗಳು ಬಳಕೆಯಾಗುತ್ತವೆ. ಒಂದೆರಡು ಬಳಕೆಗಳನ್ನು ಇಲ್ಲಿ ಕೊಟ್ಟಿದೆ.

ಅವಳು ಕಚೇರಿ ಒಳಗೆ ಇದ್ದಾಳೆ
ಅವಳು ಗಾಡಿಯ ಮೇಲೆ ಇದ್ದಾಳೆ

ಸಂಬಂದ: ಎರಡು ನಾಮಪದಗಳ ನಡುವೆ ಇರುವ ಸಂಬಂದವನ್ನು ಹೇಳುವಂತದ್ದು ಸಂಬಂದ. ಸಂಬಂದವನ್ನು ಶಶ್ಟಿವಿಬಕ್ತಿ ಎಂದು ಹೇಳಲಾಗುವುದು. ‘ಅವಳ ಮನೆ’. ಇದರಲ್ಲಿ ‘ಅವಳು’ ಮತ್ತು ‘ಮನೆ’ ಇವುಗಳ ನಡುವೆ ಸಂಬಂದ ಇರುವಂತದ್ದು ಕಾಣಿಸುತ್ತದೆ. ಎರಡು ನಾಮಪದಗಳ ನಡುವೆ ಇರುವ ಸಂಬಂದವನ್ನು ಹೇಳುವುದಕ್ಕೆ –ಅ ಎಂಬ ರೂಪವು ಬಳಕೆಯಲ್ಲಿದೆ. ಹಳಗನ್ನಡದಲ್ಲಿ –ಅ ಇದರ ಜೊತೆಗೆ –ಆ ಎಂಬ ರೂಪವೂ ಬಳಕೆಯಲ್ಲಿದ್ದಿತು.

ನನ್ನ ಪುಸ್ತಕ

ಕೆಳಗೆ ಕನ್ನಡದ ವಿಬಕ್ತಿಗಳನ್ನು ಪಟ್ಟಿ ಮಾಡಿ ತೋರಿಸಿದೆ. ಈ ವಿಬಕ್ತಿಗಳನ್ನು ಗುರುತಿಸುವುದಕ್ಕೆ ಕೆಲವು ಸರಳ ಪ್ರಶ್ನೆಗಳನ್ನು ಹಾಕಿಕೊಳ್ಳಬಹುದು. ಈ ಪ್ರಶ್ನೆಗಳನ್ನು ಹಾಕಿದಾಗ ಬರುವ ಉತ್ತರವು ಆ ಕಾರಕ ಸಂಬಂದವಾಗಿರುತ್ತದೆ. ಅಂದರೆ, ‘ಅವಳು ಕೆಲಸ ಮಾಡಿದಳು’ ಎಂಬ ವಾಕ್ಯದ ಮೇಲೆ ಯಾರು ಎಂಬ ಪ್ರಶ್ನೆ ಹಾಕಿದರೆ ಬರುವ ಉತ್ತರವು ಕರ‍್ತ್ರು ಕಾರಕವಾಗಿರುತ್ತದೆ. ಉಳಿದ ಕಾರಕ ಸಂಬಂದಗಳನ್ನು ತಿಳಿದುಕೊಳ್ಳುವುದಕ್ಕೆ ಇಂತದೆ ಪ್ರಶ್ನೆಗಳನ್ನು ಹಾಕಿಕೊಳ್ಳಬಹುದು. ಕೆಳಗಿನ ಪಟ್ಟಿಯನ್ನು ಗಮನಿಸಿ.

ಕರ‍್ತ್ರು ಕಾರಕ ಮಾಡುಗ ಪ್ರತಮಾ ವಿಬಕ್ತಿ -0 ಯಾರು?
ಕರ‍್ಮ ಕಾರಕ ಆಗುಗ ದ್ವಿತಿಯಾ ವಿಬಕ್ತಿ -ಅನ್ನು ಯಾರನ್ನು?
ಕರಣ ಕಾರಕ ಸಾದನ ತ್ರುತಿಯಾ ವಿಬಕ್ತಿ -ಇಂದ ಯಾರಿಂದ/ಯಾವುದರಿಂದ?
ಸಂಪ್ರದಾನ ಕಾರಕ ಗುರಿ ಚತುರ‍್ತಿ ವಿಬಕ್ತಿ -ಗೆ, -ಕ್ಕೆ ಯಾರಿಗೆ/ಎಲ್ಲಿಗೆ?
ಅಪಾದಾನ ಕಾರಕ ಮೂಲ/ಬಿಡುಗಡೆ ಪಂಚಮಿ ವಿಬಕ್ತಿ -ಇಂದ ಯಾರಿಂದ?
ಸಂಬಂದ ಸಂಬಂದ ಶಶ್ಟಿ ವಿಬಕ್ತಿ -ಅ ಯಾರ?
ಅದಿಕರಣ ಕಾರಕ ನೆಲೆ ಸಪ್ತಮಿ ವಿಬಕ್ತಿ -ಅಲ್ಲಿ ಎಲ್ಲಿ?

- ಬಸವರಾಜ ಕೋಡಗುಂಟಿ

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾ

MORE NEWS

ಇಂಗ್ಲೀಶೆಂಬ ಜಗತ್ತು ಕನ್ನಡ ಜಗತ್ತಿನೊಳಗೆ

24-06-2024 ಬೆಂಗಳೂರು

"ಇಂಗ್ಲೀಶು ವ್ಯಾಪಾರದ ಮೂಲಕ ಮೊದಲಿಗೆ ಕನ್ನಡ ಸಮಾಜದೊಳಗೆ ಸೇರಿಕೊಳ್ಳುತ್ತದೆ. ಆನಂತರ ಇದು ಆಡಳಿತದ ದಾರಿಯನ್ನು ಬಳಸ...

ಆತ್ಮ ಸಂದರ್ಶನ...

21-06-2024 ಬೆಂಗಳೂರು

"ಯೋಗವೆಂದರೆ ಆತ್ಮವನ್ನು ಪರಮಾತ್ಮನಲ್ಲಿ ಲೀನಗೊಳಿಸುವುದು ಅಂತಲೆ ಅರ್ಥ. ಅದಾಗಿಯೂ ಯೋಗಕ್ಕೆ ಬೇರೆ ಬೇರೆ ರೀತಿಯ ಆಯಾ...

ಆದಿಪುರಾಣ – ವೈಭೋಗ ಮತ್ತು ವೈರಾಗ್ಯದ ತಾತ್ವಿಕತೆ 

21-06-2024 ಬೆಂಗಳೂರು

"ಲೋಕ ನೀತಿಗಳು ಬದುಕನ್ನು ವಿಕರ್ಷಣೆಗೆ ಒಡ್ಡಿದಾಗ ಉಂಟಾಗುವ ಸಂಬಂಧಗಳ ಕಂದರ ಪ್ರತ್ಯೇಕತೆಯನ್ನುಂಟು ಮಾಡುತ್ತದೆ. ರಾ...