ಕಿರಿದನ್ನು ಕಿರಿದರಲ್ಲೇ ನೋಡು

Date: 13-09-2022

Location: ಬೆಂಗಳೂರು


ಮುತ್ಯಾ ಒಳ್ಳೆಯ ಮಾತುಗಾತಿ. ಅನೂಹ್ಯವಾದದ್ದನ್ನು ಊಹಾತ್ಮಕ ನೆಲೆಗೆ ತಂದು ನಿಲ್ಲಿಸುವಷ್ಟು ಅರ್ಥ ಮಾಡಿಸುವ ಸಾಮರ್ಥ್ಯವಿತ್ತು. ನೆಲಕ್ಕೆ ಬಿದ್ದ ದಾರವನ್ನು ತೆಗೆದುಕೊಂಡೆ. ಅದು ಸರ್‍ರೆಂದು ನನ್ನ ಮುತ್ಯಾನ ನಡುವೆ ಹೊಕ್ಕುಳು ಬಳ್ಳಿಯಂತೆ ಬೆಳೆದಂತೆಯೂ, ಬಿದ್ದ ಮರಗಳು ಎದ್ದು ಆಡಿದಂತೆಯೂ ಭಾಸವಾಯಿತು ಎನ್ನುತ್ತಾರೆ ಲೇಖಕಿ ಪಿ. ಚಂದ್ರಿಕಾ. ಅವರು ತಮ್ಮ ತೇಲುವ ಪಾದಗಳು ಅಂಕಣದಲ್ಲಿ ಕಾಣುವುದರ ಮರ್ಮವನ್ನು ಮುತ್ಯಾ ತನ್ನದೇ ಬಗೆಯಲ್ಲಿ ಅರ್ಥ ಮಾಡಿಸಿದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ.

ಇಷ್ಟೆಲ್ಲಾ ನಡೆಯುತ್ತಿದ್ದಾಗಲೂ ಮುತ್ಯಾ ತನ್ನ ಕೆಲಸಗಳನ್ನು ಮಾಡುತ್ತಲೇ ಇದ್ದಳು. ಅವಳಿಗೆ ಬೆಂಕಿಯ ಮುಂದೆ ಬೇಯುವುದನ್ನು ಬಿಟ್ಟರೆ ಬೇರೆ ಗತಿಯೇ ಇರಲಿಲ್ಲವಾ? ಅಥವಾ ಅಷ್ಟು ವರ್ಷಗಳ ಅಭ್ಯಾಸದಿಂದ ಹಿಂದೆ ಸರಿಯಲಿಕ್ಕೆ ಆಗಲಿಲ್ಲವಾ? ತನ್ನ ನಡುಗುವ ಕೈಗಳಿಂದ ಮುದ್ದೆ ಕಟ್ಟದಿದ್ದರೆ ಅವಳ ಕೈಗಳಿಗೆ ಹಿತವಾಗುತ್ತಿರಲಿಲ್ಲವಾ? ಮುತ್ಯಾಳ ಹಿಂದೆ ಅಸೀಮವಾದ ಯಾವುದೋ ಚೈತನ್ಯವಿತ್ತೆಂದು ಕಾಣುತ್ತದೆ. ತುಂಬು ಜೀವನದಲ್ಲಿ ಒಮ್ಮೆಯೂ ಬದುಕು ಬೇಸರವಾಗಿದೆ ಎನ್ನಲಿಲ್ಲ. ಇವತ್ತು ಉತ್ಸಾಹವಿಲ್ಲ ಎಂದುಕೊಳ್ಳಲಿಲ್ಲ. ನೋವಿನ ಮಧ್ಯೆಯೂ ಕರ್ತವ್ಯವನ್ನು ಮರೆಯಲಿಲ್ಲ, ಕಳೆಗುಂದಲಿಲ್ಲ. ಹಾಗೇನಾದರೂ ಆದರೂ ದಾಟಿಕೊಂಡು ಬಿಡುತ್ತಿದ್ದಳು. ಇದೆಲ್ಲಾ ಹೇಗೆ ಸಾಧ್ಯ? ಅದಮ್ಯವಾದ ಈ ಪ್ರೀತಿ ಎಲ್ಲಿಂದ ಕಂಡುಕೊಂಡಳು? ಅವತ್ತು ಅವಳನ್ನು ಇದೆಲ್ಲಾ ಕೇಳಬೇಕೆಂದು ಗೊತ್ತಾಗಲಿಲ್ಲ. ಅವಳಿದ್ದ ಕಾಲಕ್ಕೆ ನಾನು ಸ್ವಲ್ಪ ದೊಡ್ಡವಳಿರಬೇಕಿತ್ತು. ಇಲ್ಲ ಅವಳೇ ವಯಸ್ಸಿನಲ್ಲಿ ಸ್ವಲ್ಪ ಸಣ್ಣವಳಿರಬೇಕಿತ್ತು- ಈ ಜಗತ್ತನ್ನು ಅರ್ಥ ಮಾಡಿಸಲು ಎಂದು ಈಗಲೂ ಅನ್ನಿಸುತ್ತದೆ.

ಈ ಎಲ್ಲಾ ಘಟನೆಗಳ ಮಧ್ಯೆ ಜಿಜ್ಞಾಸೆಯೊಂದು ಕಾಡತೊಡಗಿತು. ನನಗೆ ಬಿದ್ದ ಕನಸು ಮತ್ತು ಅದು ನಿಜವಾದ ರೀತಿ ನನ್ನಲ್ಲಿ ಬೆರಗನ್ನು ಮೂಡಿಸಿತ್ತು. ಅಂದರೆ ಮುಂದಾಗುವುದು ತಿಳಿಯುತ್ತಿದೆಯಾ? ಇದೊಂದು ಶಕ್ತಿಯಾ? ಅಥವಾ ಆಕಸ್ಮಿಕವಾ? ಕಪಿಲೆ ದನ ಕಳೆದುಹೋದಾಗ ನಾನು ಚಿಕ್ಕಿ ಊರೆಲ್ಲಾ ಸುತ್ತಿ ಅವಳನ್ನು ಹುಡುಕಿದ್ದೇ ಹುಡುಕಿದ್ದು. ಹೊಲ, ಹಿತ್ತಲು, ತೋಟಗಳಿಗೆ ನುಗ್ಗುವ ತುಡುಗು ದನಗಳನ್ನು ಕಟ್ಟಿಹಾಕುವ ಜಾಗವೊಂದಿತ್ತು. ಅಲ್ಲಿಗೆ ಹೋಗಿ ಚಿಕ್ಕಿ ಕಾಡಿ ಬೇಡಿ ನಮ್ಮ ದನವನ್ನು ಬಿಟ್ಟುಬಿಡಿ ಎಂದು ಕೇಳಿದ್ದಳು. ಅವಳು ಕೇಳುತ್ತಿದ್ದ ರೀತಿಗೆ ನನಗೇ ಅಳು ಬಂದುಬಿಟ್ಟಿತ್ತು. ಇಲ್ಲದಿರುವ ದನವನ್ನು ಅವರಾದರೂ ಎಲ್ಲಿಂದ ಬಿಟ್ಟಾರು? ಕಡೆಗೆ ತಾತಾ ಅಂಜನ ಹಾಕುವವನನ್ನು ಕರೆದು ತಂದಿದ್ದ. ಮನೆಯಲ್ಲಿರುವ ಸಣ್ಣ ಮಗುವನ್ನು ಕರೆಯಿರಿ ಎಂದಾಗ ನನ್ನನ್ನು ಕರೆತಂದು ಕೂರಿಸಿದ್ದರು. ಹುತ್ತದ ಮೇಲಿನ ಅಂಕೋಲೆ ಗಿಡದ ಬೇರನ್ನು ಅಮಾವಾಸ್ಯೆಯಂದು ತಂದು ಕಪ್ಪನ್ನು ತಯಾರಿ ಮಾಡಿಕೊಳ್ಳುತ್ತಾರೆ. ಅದನ್ನು ವೀಳ್ಯದ ಎಲೆಯ ಮೇಲೂ, ನನ್ನ ಕಣ್ಣಿಗೂ ಹಚ್ಚಿ ಅದನ್ನು ನೋಡುವಂತೆ ಹೇಳಿದ್ದ. ನನಗೆ ಅದರಲ್ಲಿ ಕಪ್ಪಿನ ವಿನಾ ಏನೂ ಕಾಣಿಸಲಿಲ್ಲ. `ನೋಡು’ ಎಂದು ಬಲವಂತ ಮಾಡಿದಾಗಲೂ, ಇಂಥಾದ್ದು ಕಾಣುತ್ತಿಲ್ಲವೇ ಎಂದು ಸೂಚಿಸಿದಾಗಲೂ ನನಗೆ ಏನೂ ಕಾಣಲಿಲ್ಲ. ಕಾಣದಿರುವುದಕ್ಕೆ ಅಂಜನ ಕಾರಣವಲ್ಲ- ನನ್ನ ದೃಷ್ಟಿ ಕಾರಣ ಎಂದು ಅವನು ಬೈಯ್ಯತೊಡಗಿದ. ನನಗೆ ಅವ ಕೂಗಾಡುತ್ತಿದ್ದುದರಿಂದ ಅಳುವೇ ಬಂದುಬಿಟ್ಟಿತು. ಕೊನೆಗೆ ಶ್ಯಾನುಭೋಗರ ಮನೆಯ ಗಿರಿಯನ್ನು ಕರೆತಂದು ಅಂಜನ ನೋಡುವಂತೆ ಹೇಳಿದ. ಅವನು ಎಲ್ಲವೂ ಕಾಣುತ್ತಿರುವವನಂತೆ `ಗುಡ್ಡೆಯ ತಪ್ಪಲಲ್ಲಿ ಹಸು ಮೇಯ್ತಾ ಇದೆ. ಅದರ ಬಣ್ಣ ಹೀಗಿದೆ, ಈಗದು ಅಂಬಾ ಎಂದಿತು...’ ಎಂದೆಲ್ಲಾ ವಿವರಿಸುತ್ತಿದ್ದರೆ, ಅರೆ ನನಗೆ ಕಾಣದ್ದು ಇವನಿಗೆ ಕಂಡದ್ದಾದರೂ ಹೇಗೆ ಎಂದು ಅಚ್ಚರಿಗೊಳಗಾಗಿದ್ದೆ. ನನಗೆ ದೃಷ್ಟಿ ದೋಷವಿರುವುದು ಖಚಿತವಾಗಿಬಿಟ್ಟಿತ್ತು. ಅವನು ಹೇಳಿದ ಕಡೆ ಕಪಿಲೆಯನ್ನು ಹುಡುಕಿದರೂ ಸಿಗಲಿಲ್ಲ. ಅಂಜನ ಹಾಕುವವನನ್ನು ಕರೆತಂದದ್ದು ಸುಮ್ಮನೆ ದಂಡ ಎಂದು ತಾತ ಸಿಡಿಮಿಡಿಗೊಂಡಿದ್ದ. ಕಡೆಗೆ ಯಾರೋ ದಾರಿಹೋಕರು `ನಿಮ್ಮ ಹಸುವೊಂದನ್ನು ಅಟ್ಟಿಕೊಂಡು ಹೋಗುತ್ತಿದ್ದರು. ನೀವು ಮಾರಿದ್ದಿರಬೇಕೆಂದುಕೊಂಡೆವು’ ಎಂದು ದನ ಮೇಯಿಸುವವರು ಹೇಳಿದ ಮೇಲೆ ಖಚಿತವಾಗಿದ್ದು ಹಸುವನ್ನು ಕದ್ದೊಯ್ದಿದ್ದಾರೆ ಎಂದು. ಕಡೆಗೆ `ಗಿರಿ, ನಿಜ ಹೇಳು ನಿನಗೆ ಹಸು ಕಾಣಿಸಿತೇ?’ ಎಂದು ಕೇಳಿದಾಗ ಅವನು ಮೊದಲು ಹು ಎಂದ. `ಮತ್ತೇಕೆ ನೀನು ಹೇಳಿದ ಕಡೆ ಇರಲಿಲ್ಲ’ ಎಂದಾಗ, `ಅದು ಅಲ್ಲಿಂದ ಓಡಿ ಹೋಗಿದ್ದಿರಬೇಕು’ ಎಂದ. ಹೇಳಿದ ಸುಳ್ಳುಗಳ ಮೇಲೆ ಸುಳ್ಳನ್ನು ಜೋಡಿಸುವುದು ಕಷ್ಟವೇ -ಅದೂ ಆ ಸಣ್ಣ ವಯಸ್ಸಿನಲ್ಲಿ. ಯಾಕೆಂದರೆ ತರ್ಕಗಳು ಅಲ್ಲಿ ಬಿದ್ದು ಹೋಗುತ್ತವೆ. ಕಡೆಗೆ `ಹಾಗೆ ಕಂಡ ಹಾಗಾಯಿತು’ ಆಮೇಲೆ, `ಅಂಜನ ಹಾಕುವವನು ಹೇಳಿದ್ದನ್ನು ಹಿಡಿದು ಹೇಳಿದೆ ಅಷ್ಟೇ’ ಎಂದು ಒಪ್ಪಿಕೊಂಡಿದ್ದ. ಅಲ್ಲಿಗೆ ನನ್ನಕಣ್ಣಿನ ದೃಷ್ಟಿಯು ಸರಿಯಾಗೇ ಇದೆ ಎಂದು ನನಗೆ ಮನವರಿಕೆಯಾಗಿತ್ತು.

ನನ್ನ ಬಳಿಯೂ ಮಾತುಗಳನ್ನಾಡದೆ ಹಗ್ಗದ ಮಂಚದ ಮೇಲೆ ತನ್ನದೇ ಹರಿದ ಸೀರೆಯನ್ನು ಹಾಸಿ ಮುತ್ಯಾ ಜಂತೆಯನ್ನು ನೋಡುತ್ತಾ ಮಲಗಿದ್ದಳು. ಮೇಲೊಂದು ಬಾಲ ಕಳೆದುಕೊಂಡ ಹಲ್ಲಿ ಕೂತಿತ್ತು. ನಾನವಳ ಬಳಿಗೆ ಹೋದೆ. ಪೊರೆಬಿಟ್ಟ ಹಾವಿನ ಕಣ್ಣುಗಳಂತೆ ನೀಲಿಯಲ್ಲಿ ಕಡುನೀಲಿಯಾಗುತ್ತಿದ್ದ ಅವಳ ಕಣ್ಣುಗಳನ್ನು ನೋಡಿದೆ. ಪ್ರತಿಸಲ ನಿರುಕಿಸುವಾಗಲೂ ಒಳಸುಳಿಗಳಲ್ಲಿ ನನ್ನನ್ನೂ ಎಳೆದುಕೊಂಡಂತೆ ಮಂತ್ರಮುಗ್ಧವಾಗುತ್ತಿದ್ದೆ. ನಿಡುಸುಯ್ದು ಹಲ್ಲಿ ಕಡೆಯಿಂದ ನನ್ನೆಡೆ ತಿರುಗಿದಳು. ಆ ಹಲ್ಲಿಯಲ್ಲಿ ಮುತ್ಯಾ ಏನನ್ನು ಕಂಡಳು ಎನ್ನುವ ಕುತೂಹಲ ನನ್ನದು. ನನ್ನ ಮನಸ್ಸನ್ನು ಅವಳು ತುಂಬ ಚೆನ್ನಾಗಿ ಓದಬಲ್ಲವಳಾಗಿದ್ದಳು. ಹಲ್ಲಿಯನ್ನು ತೋರಿಸುತ್ತಾ, `ಹೋದ ಅದರ ಬಾಲ ಮತ್ತೆ ಹುಟ್ಟುತ್ತೆ ಮಗೂ, ಪ್ರಕೃತಿ ಎಷ್ಟು ವಿಚಿತ್ರಾಲ್ಲವಾ?’ ಎಂದಳು. ಅವಳು ಹೇಳಿದ್ದು ತನ್ನ ಬಗ್ಗೆಯಾ? ಪ್ರಕೃತಿಯ ವೈಚಿತ್ರದ ಬಗ್ಗೆಯಾ? ಅಥವಾ ಹೀಗೆ ಲೋಕಾಭಿರಾಮ ಮಾತು ಶುರು ಮಾಡಲಿಕ್ಕೆ ಬೇಕಾದ ಮಾತಾಗಿಯಾ? ತಿಳಿಯದೆ ಹೋಯಿತು. ಅವಳ ಹಣೆ ಸವರಿದೆ. ಸಣ್ಣಗೆ ಬೆಳೆದಿದ್ದ ಅವಳ ತಲೆಯ ಕೂದಲು ನನ್ನ ಎಳೆಯ ಕೈಗಳಿಗೆ ಚುಚ್ಚಿತು. ನನ್ನ ಮುಖದಲ್ಲಿನ ಕಸಿವಿಸಿಯನ್ನು ಗಮನಿಸಿ ಚುಚ್ಚಿತೇ ಎನ್ನುವಂತೆ ನನ್ನತ್ತ ನೋಡಿದಳು. `ಮುತ್ಯಾ ನೀನು ಹೀಗೆ ಬೇಸರದಲ್ಲಿ ಮಲಗಿರುವುದು ನನಗೆ ಬೇಸರವಾಗ್ತಾ ಇದೆ ನನ್ನ ಬಳಿಯೂ ಮಾತಾಡುತ್ತಿಲ್ಲ’ ಎಂದೆ. ಮಧ್ಯಾಹ್ನದ ಚುರುಕು ಸೂರ್ಯ ಮಾಡಿನಿಂದ ಬಿಸಿಲ ಕೋಲನ್ನಿಳಿಸಿದ್ದ. ಧೂಳಿನ ಕಣಗಳು ಸದಾ ಚಟುವಟಿಕೆಯಿಂದ ಮೇಲೆ ಕೆಳಗೆ ಆಡುತ್ತಿದ್ದುದು ಸ್ಪಷ್ಟವಾಗಿ ಕಾಣುತ್ತಿತ್ತು. ಈ ಬಿಸಿಲ ಕೋಲಿಲ್ಲದಿದ್ದರೆ ಒಳಗಾಡುವ ಧೂಳಿನ ಕಣಗಳು ಕಾಣುತ್ತಲೇ ಇರಲಿಲ್ಲವಲ್ಲ ಎನ್ನುವ ಸೋಜಿಗದಿಂದ ಧೂಳನ್ನು ಹಿಡಿಯ ಹೋದೆ. ಅದು ಕೈಗೂ ಹತ್ತಲಿಲ್ಲ- ಗಾಳಿಯ ಕದಡುವಿಕೆಯಲ್ಲಿ ಧೂಳು ತನ್ನ ಚಲನಶೀಲತೆಯನ್ನು ಹೆಚ್ಚಿಸಿಕೊಂಡಿದ್ದು ಸ್ಪಷ್ಟವಾಗಿತ್ತು. ಮುತ್ಯಾ ಗಂಭೀರವಾಗಿದ್ದಳು. ಬಲವಿಲ್ಲದ ತನ್ನ ಕಾಲನ್ನು ಗಾಳಿಯಲ್ಲಿ ಆಡಿಸಿ ಕುಣಿಯುತ್ತಿದ್ದ ಮುತ್ಯಾ ಇವಳೇನಾ ಅನ್ನಿಸಿತು.

`ನನಗೆ ಇದನ್ನು ಸಹಿಸಲಿಕ್ಕಾಗ್ತಾ ಇಲ್ಲ ನೀನು ಹೀಗೆ ಮಲಗಬೇಡ, ಏಳು ಎಂದೆ. ನನ್ನ ಕಣ್ಣಾಲಿಗಳು ತುಂಬಿ ಬಂದಿದ್ದವು. ಇದೇ ಕೊರಗಲ್ಲಿ ಮುತ್ಯಾ ಸತ್ತುಹೋದರೆ ಎನ್ನುವ ಭಯವೇ ನನ್ನನ್ನು ಹೆಚ್ಚು ಆವರಿಸಿತ್ತು. ಅವಳಿಗೆ ಏನನ್ನಿಸಿತೋ ಏನೋ? ಮೆಲುನಕ್ಕು, `ನಮ್ಮ ಕೈಯ್ಯಪ್ಪುಗೆಯ ಕೋಲು ನಮ್ಮ ಜೀವನದ ಆಧಾರ ಎಂದುಕೊಳ್ಳುತ್ತೇವೆ. ಅದು ಕಳೆದುಹೋದರೆ ದೇಹವೇ ಜೋಲಿಯಾಗುತ್ತೆ. ಹಾಗೇ ಘಾಸಿಯಾದ ಮನಸ್ಸಿಗೆ ಆಸರೆ ಪ್ರೀತಿಯೊಂದೇ. ನಾನೊಬ್ಬ ಹುಚ್ಚಿ, ಕಣ್ಣೆದುರಿನ ನಿನ್ನ ಬಿಟ್ಟು ಬೇರೆ ಏನನ್ನೋ ಎಲ್ಲೋ ಹುಡುಕಿದೆನಲ್ಲಾ’ ಎನ್ನುತ್ತಾ ಎದ್ದುಕೂತಳು. ನನಗೆ ನಿಜಕ್ಕೂ ಕುಣಿಯುವಷ್ಟು ಸಂತೋಷವಾಯಿತು. `ಮುತ್ಯಾ ನಿನಗೆ ಕೋಲು ಬೇಕೆಂದರೆ ತಂದುಕೊಡುವೆ’ ಎನ್ನುತ್ತಾ ತರಲು ಹೊರಟೆ. ಮುತ್ಯಾ ತಡೆದಳು `ಕೋಲೆಂದರೆ ಕೋಲಲ್ಲ ಮಗೂ ಜೀವನದಾಸರೆ. ಈ ಜೀವಕ್ಕೆ ದೇಹಕ್ಕೆ ತಗಲಿಕೊಳ್ಳುವ ಪದವಿಗಳು ಶಾಶ್ವತವಲ್ಲ. ಯಾವ ವೇಷವೇ ಆದರೆ ಅದನ್ನೂ ಅಂಜಿಕೆಯಿಲ್ಲದೆ ಕಳಚುವುದು ಅನಿವಾರ್ಯ. ಇಲ್ಲದಿದ್ದಲ್ಲಿ ನಾವೇನನ್ನು ಅಂದುಕೊಳ್ಳುತ್ತೇವೆಯೋ ಅದು ಕೊನೆಗೂ ನಾವಾಗದ ಸ್ಥಿತಿ ತಲುಪುತ್ತೇವೆ. ಬಿಡಿಸಿಕೊಳ್ಳುತ್ತೇನೆ ಎಂದುಕೊಳ್ಳುವುದು ಕರಾಳ ಮುಷ್ಟಿಯೇ. ಅದರಲ್ಲಿ ಸಿಕ್ಕು ಯಾರಿಗೂ ಸಹಜವಾಗುವ ಬೇನೆಯನ್ನೇ ಅನುಭವಿಸಿದೆ’ ಎಂದಳು. ಅವಳ ಮಾತುಗಳು ಸಹಜಸ್ಥಿತಿಗೆ ತಿರುಗುವ ಲಕ್ಷಣ ತೋರಿದ್ದವು. ಸಮಾಧಾನವಾಯಿತು.

ಅಮ್ಮಮ್ಮನಿಗೆ ಈ ಎಲ್ಲಾ ವಿದ್ಯಮಾನಗಳಿಂದ ಮುತ್ಯಾ ಏನಾಗುತ್ತಾಳೊ ಎನ್ನುವ ಆತಂಕ ಇತ್ತು. ಅವಳು ಹಾಗೆ ಮಂಕಾಗಿದ್ದನ್ನು ಯಾರೂ ನೋಡೇ ಇರಲಿಲ್ಲ. `ನೀವೇನನ್ನೂ ಮಾಡಬೇಡಿ’ ಎನ್ನುತ್ತಾ ಅವಳನ್ನು ಸುಮ್ಮನಿರಿಸುವ ಪ್ರಯತ್ನ ಮಾಡುತ್ತಿದ್ದಳು. ಇಡೀ ಘಟನೆಯಲ್ಲಿ ತಾನೇನನ್ನು ಮಾಡದಿದ್ದರೂ ಅವಳಲ್ಲಿ ಒಂದು ಪಾಪಪ್ರಜ್ಞೆ ಕಾಡುತ್ತಿತ್ತು ಎಂದುಕೊಳ್ಳುತ್ತೇನೆ. ತಾತಾ ಕೂಡ ಆಗೀಗ ಬಂದು ವಿಚಾರಿಸುತ್ತಿದ್ದ. ನಾನೂ ಬಲವಂತದಿಂದ ಅವಳಿಗೆ ತಿನ್ನಿಸುತ್ತಿದ್ದೆ.

ನಾಲ್ಕಾರು ದಿನಗಳು ಕಳೆದ ಮೇಲೆ, ಮುತ್ಯಾ ತನ್ನ ಉತ್ಸಾಹವನ್ನು ಇಮ್ಮಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಳು. ಒಲೆಯಲ್ಲಿನ ಕೆಂಡವನ್ನು ಹೊರಗೆಳೆದು ಇದ್ದಲನ್ನು ಮಾಡಲು ನೀರನ್ನು ಹಾಕುತ್ತಾ ಕುಳಿತಿದ್ದ ಮುತ್ಯಾಳಿಗೆ ನನ್ನೊಳಗಿನ ಬೇಗುದಿಯನ್ನು ದಾಟಿಸುವಂತೆ `ಮುತ್ಯಾ ನನಗೆ ಯಾಕೆ ಕನಸು ಬಿತ್ತು?’ ಎಂದೆ ಸಣ್ಣಗೆ. ಮುತ್ಯಾ ನಕ್ಕಳು `ಕನಸನ್ನು ಕೇಳೆಂದು. ಅವಳ ಮಾತಿನಲ್ಲಿನ ಚೇಷ್ಟೆ ಅರ್ಥವಾಯಿತು. ನಾನು ಆರ್ದ್ರವಾಗುತ್ತಾ, `ತಮಾಷಿಯಲ್ಲ ನನಗೆ ಆ ಕನಸು ಏಕೆ ಬಿತ್ತು, ಅದಕ್ಕೆ ಕಾರಣ ನಿನಗೆ ಗೊತ್ತಿರಲೇಬೇಕು’ ಎಂದೆ. ನನ್ನ ಧ್ವನಿಯ ಗಂಭೀರತೆಯನ್ನು ಗಮನಿಸುತ್ತಾ, ಅದೆಲ್ಲಾ ಈಗ ಯಾಕೆ? ಇಂಥದ್ದನ್ನೆಲ್ಲಾ ತಿಳಿಯಲಿಕ್ಕೆ ನಿನಗೆ ಇನ್ನೂ ಸಮಯ ಬೇಕು ಮಗೂ, ಹೇಳಿದರೂ ಅರ್ಥವಾಗುತ್ತೆ ಎನ್ನುವ ನಂಬಿಕೆಯಿಲ್ಲ’ ಎಂದಳು. ನಾನೂ ಪಟ್ಟು ಬಿಡಲಿಲ್ಲ. ಅವಳಿಗೆ ಹೇಗೆ ಹೇಳಬೇಕೆಂದು ತಿಳಿಯಲಿಲ್ಲ. ಅವಳ ಮಾತಿಗಾಗಿ ಕಾಯುತ್ತಾ ಕುಳಿತೆ.

ಏನನ್ನೋ ತಯಾರಿ ಮಾಡಿಕೊಂಡವಳಂತೆ ದೀರ್ಘವಾಗಿ ಉಸಿರೆಳೆದುಕೊಳ್ಳುತ್ತಾ, `ಮೊನ್ನೆ ನೀನು ಬಿಸಿಲು ಕೋಲಿನಲ್ಲಾಡುವ ಧೂಳಿನ ಕಣಗಳನ್ನು ಹಿಡಿಯಲು ಯತ್ನಿಸಿದೆಯಲ್ಲವಾ?’ ಎಂದಳು. ಅಂಥಾ ನೋವಿನಲ್ಲೂ ನನ್ನ ಮೇಲೆ ಅವಳ ಕಣ್ಣೊಂದು ಇದ್ದೇ ಇತ್ತು ಎನ್ನುವುದೇ ಅಚ್ಚರಿ. ಹಾಗೆ ಮಾಡಿದ್ದು ನನಗೇ ಗೊತ್ತಿಲ್ಲದ ಆದರೆ ತೀರಾ ಸಹಜವಾದ ಪ್ರಕ್ರಿಯೆಯಾಗಿತ್ತು. ತೀಕ್ಷ್ಣವಾದ ಬೆಳಕಿಗೆ ಸೂಕ್ಷ್ಮವಾದದ್ದನ್ನು ಕಂಡರಿಸುವ ಆಟವದು. ಆ ಬೆಳಕಿನಲ್ಲಿ ಕಣಗಳ ಗಾತ್ರಗಳೂ ಸ್ಪಷ್ಟವಾಗಿ ಕಾಣುತ್ತಿದ್ದವು ದೊಡ್ಡವು ಸಣ್ಣವು ಬಣ್ಣದವು... ಹೀಗೆ. ` ಹೌದು’ ಎಂದೆ. `ಬೆಳಕಿನಲ್ಲಿ ಕಂಡ ಆ ಕಣ ಈಗ ಇಲ್ಲಿ ಇಲ್ಲವಾ?’ ಎಂದಳು. `ಬಿಸಿಲೂ ಇಲ್ಲ, ಬಿಸಿಲ ಕೋಲೂ ಇಲ್ಲ, ಅದರಲ್ಲಾಡುವ ಕಣಗಳು ಕಾಣುತ್ತಿಲ್ಲ’ ಎಂದೆ. `ಇಲ್ಲ ಎಂದರೆ ನಿನಗೆ ಕಾಣುತ್ತಿಲ್ಲ ಎಂತಲೇ?’ ಎಂದಳು. ಇದೆ, ಇಲ್ಲ ಎನ್ನುವ ಗೊಂದಲವನ್ನು ಸೃಷ್ಟಿಸುವ ಅವಳ ಮಾತುಗಳಲ್ಲಿ ನಾನು ಉತ್ತರ ಹುಡುಕತೊಡಗಿದೆ. ಸಿಕ್ಕಲಿಲ್ಲ. `ಕಂಡಿದ್ದು ಇದೆಯೆಂತಲೂ ಕಾಣದಿದ್ದರೆ ಇಲ್ಲಎಂತಲೂ ಅಲ್ಲ. ಅದು ಒಳಗೇ ಕಾಯ್ದುಕೊಳ್ಳುವ ಸ್ಥಿತಿ. ಏಕಾಗ್ರತೆಯೊಂದಿಗೆ ನಿನ್ನ ಮನಸ್ಸು ಆ ಕಣಗಳೊಂದಿಗೆ ಕೂಡಬೇಕು ಆಗ ಕಾಣುವಿಕೆ ಸಾಧ್ಯವಾಗುತ್ತದೆ. ಹಾಲಿನಲ್ಲಿ ಉಕ್ಕುವ ಗುಣವಿರುವುದರಿಂದ ಮಾತ್ರ ಅದು ಉಕ್ಕುತ್ತದೆ. ಹಾಗೆ ನಿನ್ನಲ್ಲಿ ಕಾಣುವ ಗುಣವಿದ್ದರೆ ಕಾಣುವುದು ಅಸಹಜ ಅಲ್ಲವೇ ಅಲ್ಲ. ಒಂದೊಮ್ಮೆ ಅದು ಪ್ರಯತ್ನವಾದರೂ ಕಾಣದೆಯೇ ಹೋಗಬಹುದು’ ಎಂದಳು.

ನನಗೆ ಕನಸು ಬಿದ್ದಿದ್ದಕ್ಕೂ ಮರಗಳು ಉರುಳಿದ್ದಕ್ಕೂ ಒಂದು ಸಂಬಂಧವಿದೆಯಾ ಇಲ್ಲವಾ ಎನ್ನುವ ಜಿಜ್ಞಾಸೆಯೊಂದೇ ನನ್ನದು. ಮುತ್ಯಾ ಅದನ್ನು ಬಿಟ್ಟು ಎಲ್ಲವನ್ನೂ ಹೇಳುತ್ತಿದ್ದಾಳೆ ಎನ್ನಿಸಿ ತಳಮಳಗೊಂಡೆ. ಆರಿದ ಕೆಂಡ ಬಿಸಿ ಕಳೆದುಕೊಂಡಂತೆಲ್ಲಾ ಹೊಗೆಯನ್ನಿಲ್ಲವಾಗಿಸಿಕೊಂಡಿತ್ತು. ಅದನ್ನು ಪಕ್ಕದಲ್ಲಿದ್ದ ಅಗ್ಗಿಷ್ಟಿಕೆಗೆ ತೆಗೆದುಹಾಕುತ್ತಾ ನನ್ನ ಗಮನಿಸುತ್ತಿದ್ದ ಅವಳಿಗೆ ನನ್ನ ಒಳಗುದಿ ಅರ್ಥವಾಗಿತ್ತು. `ಜೀವದ ಹುಟ್ಟಿಗೆ ಒಂದು ಸಣ್ಣ ಕಣ ಕಾರಣ ಎಂದರೆ ನಂಬಲಿಕ್ಕಾಗುತ್ತಾ? ಒಂದರಿಂದ ಇನ್ನೊಂದು ಜೀವ ಒಳಗೆ ಉಳಿದ ಮೂಲ ಕಣ ಮಾತ್ರ ಎಲ್ಲರಲ್ಲೂ ಇದ್ಡೇ ಇರುತ್ತದೆ’ ಎಂದಳು. ನನಗೆ ಸ್ಪಷ್ಟವಾಗಲಿಲ್ಲ. ಅದು ಅವಳಿಗೂ ಅರ್ಥವಾಯಿತು. `ಕಿರಿದಾಗದೆ ಕಿರಿಯದರೊಳಗಣ ಗುಟ್ಟನ್ನು ಕಂಡುಕೊಳ್ಳಲಾರೆ. ಕಿರಿದನ್ನು ಕಿರಿದರಲ್ಲೇ ನೋಡು ಬೃಹತ್ತು ಗೋಚರಿಸುತ್ತದೆ. ಮರದ ಹುಟ್ಟಿಗೆ ಒಂದು ಸಣ್ಣ ಬೀಜ ಕಾರಣ ಎಂದರೆ ನಂಬಲಿಕ್ಕಾಗುತ್ತಾ? ಗಾಳಿಯಲ್ಲಿನ ತೇವಕ್ಕೆ ಖುಷಿಯಿಂದ ಕಣ್ಣಾಗುವ ಸಣ್ಣ ಮೊಳಕೆಯಲ್ಲಿ ಬೃಹತ್ ವೃಕ್ಷವನ್ನು ಊಹಿಸುವುದು ಸಾಧ್ಯವಾ? ಇಲ್ಲ ಅಲ್ಲವಾ? ಆದರೆ ಅಂಥಾ ಕಣಗಳು ಸೇರಿ... ಸೇರಿ ಸೃಷ್ಟಿಯಾಗಿದೆ. ಆ ಕಣ ಸುಂದರವಾ? ಅದನ್ನು ಕಂಡಿದ್ದವರಿದ್ದಾರಾ? ಅದರ ಬಣ್ಣ ಏನು ಎಂದೆಲ್ಲಾ ಪ್ರಶ್ನೆಮಾಡಿದರೆ ಅದಕ್ಕೆ ಉತ್ತರವಿಲ್ಲ. ಅದು ಎಲ್ಲ ಕಡೆಗೂ ಹರಡುತ್ತದೆ, ಚಂದ ಚಂದವಾಗಿ ಇನ್ನೊಂದರೊಳಗೆ ಕೂಡಿ ಮತ್ತೇನನ್ನೋ ಸೃಷ್ಟಿಸುತ್ತದೆ. ಮಳೆ ಬರುವ ಸೂಚನೆ ಸಿಕ್ಕ ತಕ್ಷಣ ಪಕ್ಷಿಗಳು ಗೂಡನ್ನರಸಿ ಹೊರಡುತ್ತವೆ ಅಲ್ಲವೇ ಹಾಗೇ ಯಾವುದೋ ಸೂಚನೆ ಸಿಕ್ಕಾಗ ತನ್ನ ಮೂಲನೆಲೆಗೆ ತಿರುಗಲು ಆ ಕಣ ಸಿದ್ಧವಾಗುತ್ತದೆ- ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಯಾವ ಸಂದೇಶವನ್ನೊ ಹೊತ್ತು. ಹಾಗೇ ನಿನಗೆ ಕನಸು ಬಿದ್ದಿರುವುದು’.

ಅರ್ಥೈಸುವುದೂ ಸಂಕಟದ ಸಂಗತಿಯೇ. ಅಲ್ಲೇ ಇದ್ದ ದಾರವನ್ನು ಕೈಗೆತ್ತಿಕೊಂಡ ಮುತ್ಯಾ, `ಮಗೂ ಈ ದಾರದ ತುದಿಯನ್ನು ಹಿಡಿದುಕೋ’ ಎಂದಳು. ನಾನು ಒಂದು ತುದಿಯನ್ನು ಅವಳೊಂದು ತುದಿಯನ್ನು ಹಿಡಿದೆವು. ಇಬ್ಬರ ಮಧ್ಯೆ ಸಂಬಂಧ ಸಾಧಿಸುವ ಹಾಗೆ ದಾರ ನಿಂತಿತ್ತು. `ನಿರಾಧಾರವಾಗಿ ನೆಲದಲ್ಲಿ ಬಿದ್ದಿದ್ದ ಈ ದಾರಕ್ಕೆ ನಾನು ನೀನು ಇಬ್ಬರೂ ತುದಿಗಳೆ. ಇಬ್ಬರ ಶಕ್ತಿಯಿಂದ ನಿಂತಿದೆ. ಒಂದೇ ಚೈತನ್ಯದ ಬಿಂದು ಸೃಷ್ಟಿಯಲ್ಲಿ ಈ ಶಕ್ತಿ ಕಾಣದಂತೆ ಈ ದಾರದ ಹಾಗೆ ಸಂಬಂಧವನ್ನು ಹೊಂದಿರುತ್ತದೆ. ಇದು ಯಾವ ಹೊತ್ತಿನಲ್ಲಿ ಯಾವ ಸಂದೇಶವನ್ನು ದಾಟಿಸುತ್ತದೋ ಯಾರಿಗೆ ಗೊತ್ತು. ಅದು ತನ್ನರಿವೆ ತನಗಿಲ್ಲದಂತೆ, ಇದ್ದೂ ಇಲ್ಲದಂತೆ ಇರುತ್ತದೆ. ಸಮಯ ಬಂದಾಗ ತಾನೇ ತಾನಾಗಿ ಸಂಗತಿಗಳನ್ನು ತನ್ನ ಮೂಲಕ್ಕೆ ಸಂವಹಿಸುತ್ತವೆ. ನಿನ್ನ ಮೂಲಕ್ಕೂ ಆ ಮರಗಳಿಗೂ ಇರುವ ಸಂಬಂಧವೇ ಕನಸು ಬೀಳುವಂತೆ ಮಾಡಿದ್ದು. ಕನಸು ಬಿದ್ದಿದ್ದರಿಂದಲೇ ನಿನ್ನ ಮೂಲ ಅರಿವಿಗೆ ಬಂದಿದ್ದು’ ಎಂದಳು.

ಇನ್ನೂ ಉಳಿದ ಪ್ರಶ್ನೆ ಹಾಗಾದರೆ ಮುಂದಾಗುವ ಎಲ್ಲವೂ ನನಗೆ ತಿಳಿಯುವುದೇ ಎನ್ನುವುದು. ಮುತ್ಯಾ ತಲೆ ಅಲ್ಲಾಡಿಸಿದಳು. `ಸಂಬಂಧಪಡದ ಯಾವುದೋ ನಿನಗೆ ಮುನ್ಸೂಚನೆಯನ್ನು ನೀಡಲಾರದು. ಅದನ್ನು ನಿನ್ನ ಚೈತನ್ಯವೂ ಸ್ವೀಕರಿಸಲಾರದು’. ನಿಜ ನಾನು ಮುತ್ಯಾಳ ಕೂಸು ಆ ಮರಗಳು ಕೂಡಾ. ಸಂಬಂಧವಿದ್ದಾಗಲೇ ಮುಂಬರುವ ಆಪತ್ತುಗಳಿಗೆ ಮನಸ್ಸನ್ನು ಸಜ್ಜುಗೊಳಿಸುವುದಾಗುತ್ತದೆ. ಬಿದ್ದ ಕನಸೂ ಅಷ್ಟೇ ನನ್ನನ್ನು ಅಣಿ ಮಾಡುವುದೇ ಆಗಿತ್ತು. ಕಾರ್ಯ ಕಾರಣವಿಲ್ಲದೆ ಸಣ್ಣ ಸಂಗತಿಗೂ ಇಲ್ಲಿ ಎಡೆಯಿಲ್ಲ.

ಮುತ್ಯಾ ಹೇಳುತ್ತಲೇ ಇದ್ದಳು, ಅವಳೊಬ್ಬ ಒಳ್ಳೆಯ ಮಾತುಗಾತಿ. ಅನೂಹ್ಯವಾದದ್ದನ್ನು ಊಹಾತ್ಮಕ ನೆಲೆಗೆ ತಂದು ನಿಲ್ಲಿಸುವಷ್ಟು ಅರ್ಥ ಮಾಡಿಸುವ ಸಾಮರ್ಥ್ಯವಿತ್ತು. ನೆಲಕ್ಕೆ ಬಿದ್ದ ದಾರವನ್ನು ತೆಗೆದುಕೊಂಡೆ. ಅದು ಸರ್‍ರೆಂದು ನನ್ನ ಮುತ್ಯಾನ ನಡುವೆ ಹೊಕ್ಕುಳು ಬಳ್ಳಿಯಂತೆ ಬೆಳೆದಂತೆಯೂ, ಬಿದ್ದ ಮರಗಳು ಎದ್ದು ಆಡಿದಂತೆಯೂ ಭಾಸವಾಯಿತು.

ಈ ಅಂಕಣದ ಹಿಂದಿನ ಬರೆಹಗಳು:
ಅನುಭವದಲ್ಲಿ ಘನೀಭವಿಸುವ ವಿಶ್ವದ ರಹಸ್ಯಮಯ ಸಂಗತಿಗಳು

ಬಿಟ್ಟುಬಿಡುವುದೆಂದರೂ ಕಟ್ಟಿಕೊಳ್ಳುವುದೇ
ಗಾಳದ ದಾರ ದೂರಕ್ಕೆ ಬಿಡುವುದು ಮೀನಿನ ಆಸೆಗೆ
ಕಳಚಿಕೊಳ್ಳುವುದೂ ಆಟದ ಭಾಗವೇ.
ಸರಿದ ಸೆರಗಿನಲ್ಲಿ ಅಡಗಿದ್ದು ಸೂರ್ಯ ಚಂದ್ರ
ಪ್ರಾರ್ಥನೆ; ಪದಾರ್ಥವಲ್ಲ, ಪರಾರ್ಥ
ಜಗತ್ತಿನ ಮೇರು ತಾಯಿ
ನಿಧಿಯ ಕನವರಿಕೆ
ಅವಳ ಧ್ಯಾನಕ್ಕೆ ಒಳಿತೇ ಗುರಿ
ಅನುಬಂಧಗಳ ಲೀಲೆ
ಕನಸಿನೊಳಗಿನ ನನಸು
ನೀಲಿ ಕಣ್ಣುಗಳ ಮುತ್ತಜ್ಜಿ ಮತ್ತು ನಾನು

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...