ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

Date: 15-04-2024

Location: ಬೆಂಗಳೂರು


"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗೆ ನಿತ್ಯ ಹೊಸತು ಹೊಸತು ವಿಷಯಗಳ ಸುದ್ದಿ ಭಂಡಾರ. ವಿದ್ಯುನ್ಮಾನ ಮಾಧ್ಯಮಗಳಿಗಂತೂ ಟಿ.ಆರ್.ಪಿ. ಹೆಚ್ಚಿಸಿಕೊಳ್ಳುವ ಸದವಕಾಶ. ಅದಕ್ಕೆಂದೇ ಎಲೆಕ್ಟ್ರಾನಿಕ್ ಮಾಧ್ಯಮಗಳು ಹೊಸ ಹೊಸ ಹೆಸರಿನ ಎಲೆಕ್ಷನ್ ಸ್ಟೋರಿಗಳನ್ನೇ ಮಾಡಿ ಹಣ ಕಮಾಯಿಸುತ್ತವೆ," ಎನ್ನುತ್ತಾರೆ ಅಂಕಣಕಾರ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ‘ರೊಟ್ಟಿ ಬುತ್ತಿ’ ಅಂಕಣಕ್ಕೆ ಬರೆದ ಲೇಖನವಿದು.

ಹಣ, ಮದ್ಯ, ಕುಕ್ಕರ್, ಮತ್ತಿತರೆ ಅಕ್ರಮ ಸಂಗ್ರಹಣೆ ಮತ್ತು ಸಾಗಣೆ ಸಂದರ್ಭದಲ್ಲಿ ಸಿಕ್ಕಿಬಿದ್ದ ಮಾಮೂಲಿ ಪೇಲವದ ಸುದ್ದಿಗಳು. ಇಂಥವೆಲ್ಲ ಪ್ರತಿ ಬಾರಿ ಸಾರ್ವತ್ರಿಕ ಚುನಾವಣೆಗಳ ಸಂದರ್ಭೋಚಿತ ಪೊಲೀಸ್ ವರದಿಗಳು. ಆದರೆ ಮೊನ್ನೆಯಷ್ಟೇ ಸಂಜೆಹೊತ್ತು ಹೊಳೆನರಸೀಪುರದಲ್ಲಿ ಐನೂರಕ್ಕೂ ಹೆಚ್ಚು ಜನರಿಗಾಗಿ ಸಿದ್ದಗೊಳಿಸಿದ್ದ ಮಾಂಸದ ಬಿರಿಯಾನಿ ವಾಸನೆಯನ್ನೇ ಬೆನ್ನುಹತ್ತಿದ ಪೋಲೀಸರು ಬಿಸಿ ಬಿಸಿ ಬಿರಿಯಾನಿಯನ್ನೇ 'ಜಪ್ತಿ' ಮಾಡಿದ ಬಿಸಿ ಬಿಸಿಯಾದ ಸುದ್ದಿ ಬಂದಿದೆ. ಅಂದಹಾಗೆ ಜಪ್ತಿ ಮಾಡಿದ ಬಿಸಿ ಬಿಸಿ ಬಿರಿಯಾನಿ ಯಾರು ತಿಂದರು.? ಇಲ್ಲವೇ ಏನು ಮಾಡಿದರೆಂಬುದು ತಿಳಿಯದು. ಹೀಗೆ ಇರುವುದರಲ್ಲೇ ಕೆಲವು ತುಂಬಾ ಇಂಟರೆಸ್ಟಿಂಗ್ ಸಂಗತಿಗಳು ಹೆಚ್ಚು ಸುದ್ದಿಯಾಗುವುದಿಲ್ಲ. ಅಂಥವು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಹರಿದಾಡುತ್ತವೆ.

ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗೆ ನಿತ್ಯ ಹೊಸತು ಹೊಸತು ವಿಷಯಗಳ ಸುದ್ದಿ ಭಂಡಾರ. ವಿದ್ಯುನ್ಮಾನ ಮಾಧ್ಯಮಗಳಿಗಂತೂ ಟಿ.ಆರ್.ಪಿ. ಹೆಚ್ಚಿಸಿಕೊಳ್ಳುವ ಸದವಕಾಶ. ಅದಕ್ಕೆಂದೇ ಎಲೆಕ್ಟ್ರಾನಿಕ್ ಮಾಧ್ಯಮಗಳು ಹೊಸ ಹೊಸ ಹೆಸರಿನ ಎಲೆಕ್ಷನ್ ಸ್ಟೋರಿಗಳನ್ನೇ ಮಾಡಿ ಹಣ ಕಮಾಯಿಸುತ್ತವೆ. ವಿಶೇಷವಾಗಿ ಹಳ್ಳಿಗಾಡು ಸೀಮೆಗಳಲ್ಲಂತೂ ಪಕ್ಕಾ ಜವಾರಿತನದ ಭಯಂಕರ ಬಿರುಸಿನ ಕಾಳಗದ ಮಾತುಕತೆಗಳು. "ತಿನ್ನೋದು ಸಿದ್ರಾಮಯ್ಯಂದು ಓಟು ಹಾಕೋದು ಸುಳ್ಳುಗಾರ, ಮೋಸಗಾರ ಮೋದಿಗಾ" ಎಂಬ ಚುರುಕಿನ ಜಗಳಗಳು. ಇದು ಮೊನ್ನೆ ಮೊನ್ನೆ ಘಟಿಸಿದ ಇಬ್ಬರು ಮುದುಕಿಯರ ನಡುವಿನ ಮಾತಿನ ಚಕಮಕಿ. ರೋಚಕ ಜಗಳಾಟದ ವಾಟ್ಸ್ಯಾಪ್ ವೀಡಿಯೋ ವರದಿಗಳದ್ದೇ ಮಹಾ ಮಜಾ.

ಕಲಬುರ್ಗಿಯ ಆಳಂದ ತಾಲ್ಲೂಕಿನ ಹಳ್ಳಿಯೊಂದರಲ್ಲಿ ದಾರಿ ತುಂಬಾ ಸರ್ಕಾರಿ ಜಾಲಿಮುಳ್ಳು ಹಚ್ಚಿ ರಸ್ತೆ ಬಂದ್ ಮಾಡಿ ಸ್ಥಳೀಯರಿಂದ ಪ್ರತಿಭಟನೆ. ಇನ್ನು ಕೆಲವೆಡೆ ಚುನಾವಣೆ ಬಹಿಷ್ಕಾರದ ಬೆದರಿಕೆ. ಜನರಿಗೆ ಹಿತವನ್ನುಂಟು ಮಾಡುವ ಉತ್ತಮ ರಾಜಕೀಯ ಪಕ್ಷವೇ ಇಲ್ಲವೆಂಬ ಆತಂಕ ಮತ್ತೆ ಕೆಲವರದು. ಹೀಗಾಗಿ ಯಾರು ಆರಿಸಿ ಬಂದರೂ ತಮಗೆ ಒಳಿತು ಮಾಡುವವರು ಇದುವರೆಗೆ ಆರಿಸಿ ಬಂದಿಲ್ಲವೆಂಬ ದೂರು. ಯುದ್ಧದೇವನು ಬಂದ/ ಬುದ್ಧದೇವನು ಬಂದ/ ಅನ್ನದೇವ ಇನ್ನೂ ಬರಲಿಲ್ಲೋ/ ಇನ್ನೂ ಬರಲಿಲ್ಲ ಎನ್ನುವ ವರಕವಿ ದ. ರಾ. ಬೇಂದ್ರೆ ಕವಿತೆಯ ಈ ಸಾಲುಗಳು ಇಂಥವರ ದೂರುಗಳ ಸಂದರ್ಭಗಳನ್ನು ಸಾಕ್ಷೀಕರಿಸುವಂತೆ ನೆನಪಿಸುತ್ತವೆ.

ಇನ್ನು ಸಾವಿರಾರು ಊರುಗಳಲ್ಲಿ ಕುಡಿಯಲು ನೀರಿಲ್ಲದೇ ಮೂಕ ಪ್ರಾಣಿ ಪಕ್ಷಿಗಳದ್ದಂತೂ ನರಕ ಸದೃಶ ಸಂಕಟ. ಆಯಾ ಜಿಲ್ಲಾಧಿಕಾರಿಗೆ ಕುಡಿಯುವ ನೀರಿನ ವಿಷಯದಲ್ಲಿ ಪರಮಾಧಿಕಾರ ನೀಡಿದ್ದೇವೆಂಬ ಸರಕಾರದ ಆದೇಶಗಳು ಕಾಗದದಲ್ಲೇ ಕೊಳೆತು, ಕುಡಿಯುವ ನೀರಿನ ಸಮಸ್ಯೆ ನೀಗುತ್ತಿಲ್ಲ. ಚುನಾವಣಾ ರಾಜಕಾರಣ ಕಲಬುರಗಿಯ ನಲವತ್ತೈದು ಡಿಗ್ರಿ ಸೆಲ್ಸಿಯಸ್ ಬೆಂಕಿ ಬಿಸಿಲನ್ನೇ ಮೀರಿಸಿ ದಿನೇ ದಿನೇ ಹಸಿ ಹಸಿಯಾದ ಹುಸಿ ಭರವಸೆಗಳ ಮಹಾಪೂರವನ್ನು ಹರಿಗಡಿಯದೇ ಹರಿಸುತ್ತಲಿದೆ. ರಾಜಕೀಯ ಪಕ್ಷಗಳು ಬುದ್ದಿವಂತಿಕೆಯ ಪ್ರದರ್ಶನ ಎಂಬಂತೆ ಪರಸ್ಪರ ಚರ್ಚೆಗಳಲ್ಲಿ ತೊಡಗಿ ಮಾತುಗಳ ಸೋಲು ಗೆಲುವಿನ ಫಲಿತಾಂಶ ಕೊಡುತ್ತಿವೆ. ಕೆಲಸಗೇಡಿ ಚರ್ಚೆ, ಶ್ಯಾಣೇತನ ಪ್ರದರ್ಶನ, ಪಂಥಾಹ್ವಾನದ ಬಹಿರಂಗ ಚರ್ಚೆಗಳಲ್ಲೇ ಸಮಾಧಾನ ಒದಗಿಸುತ್ತಿವೆ. ಕೆಲವರಂತು ಆತ್ಮರತಿ, ತೆಗಳಿಕೆ, ರೊಕ್ಕದ, ತೋಳ್ಬಲಗಳ ತಾಕತ್ತು, ಗಂಡಸುತನ ಪ್ರದರ್ಶನದ ಸವಾಲುಗಳನ್ನೇ ಹಾಕುತ್ತಾರೆ.

ವಾಸ್ತವವಾಗಿ ಸುಡುವ ಬಿಸಿಲು ಬವಣೆ ನೀಗಿಸಲು ಜನರಿಗೆ ತಾಯ್ತನದ ಪ್ರೀತಿ ಬೇಕಿದೆ. ರಾಜಕಾರಣಿಗಳು ಮನುಷ್ಯತ್ವದ ಜೀವಪರ ಸೂಕ್ಷ್ಮ ಸಂವೇದನೆಗಳನ್ನು ‌ಕಳೆದುಕೊಂಡಿದ್ದಾರೆ. ಆದರೆ ಇತ್ತೀಚೆಗೆ ಕೆಲವು ರಾಜಕಾರಣಿಗಳು ಯಾವುದೇ ಪ್ರಗತಿಪರ ಸಾಹಿತಿಗಿಂತ ಸೊಗಸಾಗಿ ಮಾತಾಡುವ ಕಲೆಯ ಮೂಲಕ ಹುಸಿ ಮಾನವೀಯತೆ ಪ್ರದರ್ಶನ ‌ಮಾಡುವುದನ್ನು ಕಲಿತಿದ್ದಾರೆ. ಇದು ಅಕ್ಷರಶಃ ಅಕ್ಷಮ್ಯ ಬೆಳವಣಿಗೆ. ಅವರವು ಕಾನ್ವೆಂಟ್ ಕಲಿಕೆಯ ಮಾತಿನ ಕಲೆಗಳು. ಏನೆಂದರೆ : ಇಷ್ಟು ಸಣ್ಣ ವಯಸ್ಸಿಗೆ ಬುದ್ದ, ಬಸವಣ್ಣ, ಬಾಬಾಸಾಹೇಬ, ಲೋಹಿಯಾ, ಫುಲೆ, ಮಾರ್ಕ್ಸ್ ಮೊದಲಾದವರನ್ನು "ಎಷ್ಟು ಪಸಂದಾಗಿ ಓದಿಕೊಂಡಿದ್ದಾನಲ್ಲ" ಎಂದು ಜನರು ಅಚ್ಚರಿ ಪಡುವಂತೆ ಪಪೆಟ್ ಶೋ ಮಾತುಗಳ ಪ್ರದರ್ಶನ. ಅದೊಂದು ಬಗೆಯ ಮಾತಿನ ಬುಡುಬುಡಿಕೆತನ. ಹಾಗೆ ಮಾತಾಡುತ್ತಲೇ ಕನ್ನಡದ ಕಗ್ಗೊಲೆ‌ ಕೂಡಾ ಮಾಡುತ್ತಾರೆ. ಇತ್ತೀಚಿಗೆ ಓರ್ವ ಮಹಾಶಯ‌ "ಕಲುಷಿತ" ಎಂಬ ಕನ್ನಡ ಪದವನ್ನು‌ ಪದೇ ಪದೇ ಕುಲುಶತ ಕುಲುಶತ ಎಂದು ಉಚ್ಛರಿಸುತ್ತಲೇ ಕಸ್ತೂರಿ ಕನ್ನಡದ ಪದಗಳನ್ನು ಕುಲಗೆಡಿಸಿ ಬಿಟ್ಟರು. ಪ್ರಾಯಶಃ ಮಾಧ್ಯಮಗಳಿಗೂ ಅದು ಅರ್ಥವಾಯ್ತಿಲ್ಲೋ ಗೊತ್ತಿಲ್ಲ. ಅಷ್ಟಕ್ಕೂ ಕೆಲವು ಮಾಧ್ಯಮಗಳೇನು ಅವನಾಡುವ ಮಾತಿಗೆ ಹೊರತಿಲ್ಲ. ಮಾಧ್ಯಮಗಳ ಕೆಲ ಬೃಹಸ್ಪತಿಗಳು ಅವನಂಥವರೇ.

ಅಂದಹಾಗೆ ಅಂಥವರೆಲ್ಲ ಬೆಂಗಳೂರು ಕಾನ್ವೆಂಟ್ ಉತ್ಪನ್ನಗಳು. ಹೀಗಾಗಿ ಮಾತಿಗೊಮ್ಮೆ ಹೋಗ್ ಬಿಟ್ಟಿ, ಬಂದ್ ಬಿಟ್ಟಿ ಎಂಬ ಬಿಟ್ಟಿ ಕನ್ನಡದ ಪ್ರಯೋಗ. ಬೆಂಗಳೂರಿ ಪ್ರಭಾವದ ''ಬಿಟ್ಟೀ ಕನ್ನಡ" ಮಾತಾಡುವುದನ್ನು ಇವರು ಬಿಡುವುದು ಯಾವಾಗ.? ಇಂತಹ ಪಿ.ಯು. ಡ್ರಾಪೌಟ್ ಕನ್ನಡಿಗ ರಾಜಕಾರಣಿಗಳಿಗೆ ತಾವು ಪಸಂದಾಗಿ ಇಂಗ್ಲಿಷ್ ಮಾತಾಡುತ್ತೇವಲ್ಲ ಎಂಬ ಅಹಮಿಕೆ ಬೇರೆ. ಇಂಥವರ ಇಂಗ್ಲಿಷ್ ಭಾಷಾ ಜ್ಞಾನದ ಅಪಸವ್ಯಗಳ ಬಗ್ಗೆ ಇನ್ನೊಮ್ಮೆ ಬರೆಯುವೆ. ದುರಹಂಕಾರದ ''ಸರ್ವಜ್ಞ ಪಿತ್ತ" ನೆತ್ತಿಗೇರಿಸಿಕೊಂಡ ಇಂಥವರಿಂದ ಲೋಕ ಕಲ್ಯಾಣದ ಜೀವಪ್ರೀತಿ, ಅಂತಃಕರಣ ನಿರೀಕ್ಷಿಸುವುದುಂಟೇ.? ಇವರೇನು ಹೊಲದಲ್ಲಿ ಕಷ್ಟಪಟ್ಟು ನಟ್ಟು ಕಡೆದು ಕಟ್ಟೆ ಹಾಕಿ ಶ್ರಮಪಟ್ಟವರಲ್ಲ. ಅಪ್ಪ ಅಮ್ಮ ಮಾಡಿಟ್ಟ ಆಸ್ತಿ ಪಾಸ್ತಿಗಳ ಮೇಲೆ ತಮ್ಮ ರಾಜಕಾರಣದ ಬೇಳೆ ಬೇಯಿಸಿಕೊಳ್ಳುವರು. ಇವರಿಂದ ಬಡ ಬಗ್ಗರು, ನೊಂದ, ದಮನಿತ ಸಮುದಾಯಗಳಿಗೆ ಯಾವ ರೀತಿಯ ನ್ಯಾಯ ದೊರಕಬಲ್ಲದು.? ಸೋಜಿಗವೆಂದರೆ ಮತ ಯಾಚನೆಯ ಚುನಾವಣಾ ಸಂದರ್ಭದಲ್ಲಿ ಮಾತ್ರ ಇಂಥವರ ಅಹಂಕಾರ, ಸೊಕ್ಕಿನ ನಡವಳಿಕೆ ತುಸು ತಣ್ಣಗಿರುತ್ತದೆ.

ಪ್ರಸ್ತುತ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗಳ ಕುರಿತು ತರಹೇವಾರಿ ಸುದ್ದಿ ಸಮಾಚಾರಗಳು. ಮುದ್ರಣ ಮಾಧ್ಯಮ ಮತ್ತಿತರೆ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಚಣ, ಗಳಿಗೆ ಪುರುಸೊತ್ತಿಲ್ಲದೇ ಪ್ರಚುರಗೊಳ್ಳುತ್ತಲೇ ಇವೆ. ಚುನಾವಣೆ ಎಂದರೆ ಮಾಧ್ಯಮಗಳಿಗೆ ಹಣ ಕಮಾಯಿಸುವ ಬಹುದೊಡ್ಡ ಹಬ್ಬ. ಮಧ್ಯವರ್ತಿಗಳಿಗೆ ಸಂಭ್ರಮದ ಪರಿಷೆ‌. ನಿಸ್ಸಂಶಯವಾಗಿ ರಾಜಕೀಯ ಪಕ್ಷಗಳ ಪರಸ್ಪರ ವಿರುದ್ಧದ ಅಲೆ ಸೃಷ್ಟಿಸುವ ಕರತಲಾಮಲಕ ಹೋರಾಟ. ಮತ್ತೊಂದು ಕಡೆ "ಹ್ಯಂಗಾದರೂ, ಏನಾದರೂ ಮಾಡಿ ಗೆಲ್ಲಲೇ ಬೇಕೆಂಬ" ಅನಾರೋಗ್ಯದ ಹುಮ್ಮಸ್ಸು. ಸಾರ್ವತ್ರಿಕ
ಚುನಾವಣೆಗಳನ್ನು ಪ್ರಜಾಪ್ರಭುತ್ವದ ಹಬ್ಬ ಅಥವಾ ಜಾತ್ರೆ ಎಂದು ಕರೆಯಲಾಗುತ್ತದೆ. ಇದು ಯಾರಿಗೆ ಹಬ್ಬ, ಯಾರಿಗೆ ಜಾತ್ರೆ ಎಂಬುದು ನನಗಂತೂ ತಿಳಿದಿಲ್ಲ. ಈ ಜಾತ್ರೆಯಲ್ಲಿ ಸಾಮಾನ್ಯ ಪ್ರಜೆ ಮಾತ್ರ ಕಾಣುತ್ತಿಲ್ಲ. ಚಣ ಚಣಕ್ಕೂ ಭಣಗುಡುವ ಭಂಗುರದ ಕಥಾವಳಿಗಳು. ಥರಾವರಿ ಸವಾಲುಗಳ ಕಥೆಗಳದ್ದೇ ನಿತ್ಯಕಥನ.

ದೀಡು ತಿಂಗಳ ಕೆಳಗೆ ನನಗೆ ಫೋನಲ್ಲಿ ಮಾತಾಡಿದ ನಂಬರ್ ಒನ್ ಪ್ರಗತಿಪರ ಎಂದು ಗುರುತಿಸಿಕೊಂಡ ಮತ್ತು ಮುಖ್ಯಮಂತ್ರಿಗೆ ತೀರ ಹತ್ತಿರದವರಾದ ಹಿರಿಯ ಚಿಂತಕರೊಬ್ಬರು ಹೇಳಿದ ಮಾತುಗಳನ್ನು ನಾನು ಮರೆತಿಲ್ಲ. ಆ ಮಾತುಗಳೆಂದರೆ "ನೋಡಪಾ ಕಡಕೋಳ ನಿನ್ನ ಪ್ರಕಾರ ಕರ್ನಾಟಕದ ಇಪ್ಪತ್ತೆಂಟಕ್ಕೆ ಇಪ್ಪತ್ತೆಂಟೂ ಲೋಕಸಭಾ ಸೀಟುಗಳನ್ನು ಕಾಂಗ್ರೆಸ್ಸೇ ಗೆದ್ದು ದೆಹಲಿ ಪಾರ್ಲಿಮೆಂಟ್ ಪ್ರವೇಶ ಮಾಡಿತೆಂದಿಟ್ಟುಕೋ. ಐನೂರಾ ನಲವತ್ಮೂರರಲ್ಲಿ ನೀನು ಇಷ್ಟ ಪಡುವ ಈ ಇಪ್ಪತ್ತೆಂಟು ಅಲ್ಲಿ ಯಾವ ಲೆಕ್ಕ ಮಾರಾಯ.!? ದಿಲ್ಲಿಯಲ್ಲಿ ಬೀಜೇಪಿ ಮಹಾಪ್ರಭುವಿನದೇ ಭಯಂಕರ ಹವಾ. ಎಂದು ಮಹಾಪ್ರಭು ಪರ ತುಡುಗುಪ್ರೀತಿ" ತೋರಿದರು. ಅಕ್ಷರಶಃ ಅವರ ಅಭಿಪ್ರಾಯದಲ್ಲಿ ಮತ್ತು ಅವರ ವಸ್ತುನಿಷ್ಠ ದನಿಯಲ್ಲಿ ಅನುಮಾನವೇನಿರಲಿಲ್ಲ.

ಅಚ್ಚರಿಯೇನೆಂದರೆ ಹಾಗೆ ನನ್ನೊಂದಿಗೆ ಮಾತಾಡಿದ ಚಿಂತಕ ಮಹಾಶಯ ಉಲ್ಟಾ ಹೊಡೆದು ಈಗ ಕೇಂದ್ರ ಸರಕಾರದ ವಿರುದ್ದ ಮಾತಾಡುತ್ತಾರೆ. ಚುನಾವಣೆಯ ಈ ಸಂದರ್ಭದಲ್ಲಿ ಮುಖ್ಯಮಂತ್ರಿಯನ್ನು ಮೆಚ್ಚಿಸುವಂತೆ ಪತ್ರಿಕಾಗೋಷ್ಠಿ‌ ಮಾಡಿ ಕೇಂದ್ರದ ವಿರುದ್ದ ಬೊಗಳೆ ಬಿಡುತ್ತಾರೆ. ಇಂತಹ ಸೋಗಲಾಡಿಗಳು ಮತ್ತು ಎಡಬಿಡಂಗಿಗಳಿಗೆ ಬದಲು ಮುಖ್ಯಮಂತ್ರಿಯ ಹೋರಾಟಕ್ಕೆ ಯಶಸ್ಸು ದೊರಕಿಸಲು ಸಾಮಾನ್ಯರ ದಿಟ್ಟ ಮತ್ತು ಸ್ಪಷ್ಟ ‌ನಿಲುವಿನಿಂದ ಮಾತ್ರ ಸಾಧ್ಯ. ಮುಖ್ಯಮಂತ್ರಿಯವರಿಗೆ ಇಂಥ ನಕಲಿ ಚಿಂತಕರ ಸೋಗಲಾಡಿತನ ಯಾಕೆ ಅರ್ಥವಾಗುವುದಿಲ್ಲ.? ನಿಕಷಕ್ಕೊಡ್ಡಿದರೇ ಇಂತಹ ಚಿಂತಕರಲ್ಲಿ ನಕಲಿತನದ ಇನ್ನೂ ಅನೇಕ ಸಂಗತಿಗಳು ದೊರಕಬಲ್ಲವು.

ನೇರ ಚುನಾವಣಾ ಕಣಕ್ಕೆ ಬರುವುದಾದರೆ : ಜನತಂತ್ರವನ್ನೇ ಅಣಕಿಸುವ ಮತ್ತು ಅಲುಗಾಡಿಸುವ ಬಹುದೊಡ್ಡ ಹಗರಣ ಚುನಾವಣಾ ಬಾಂಡ್ ಹಗರಣ. ಧ್ರುವ ರಾಠಿ ಬಯಲುಗೊಳಿಸಿದ ಈ ಹಗರಣದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಪಾಲು. ಕಡೆಯಪಕ್ಷ ಚುನಾವಣೋತ್ತರ ಈ ಕುರಿತು ಗಹನ ಚರ್ಚೆಗಳು ಜರುಗಬೇಕಿದೆ. ಲೋಕ ಚುನಾವಣಾ ಕಣದ ಸ್ಪರ್ಧಾಳುಗಳ ಬಗ್ಗೆ ಈ ಸಲ ಅಸಮಾಧಾನದ ಅತಿದೊಡ್ಡ ಅಲೆಯೇ ಎದುರಾಗಿದೆ. ಅಧಿಕಾರಸ್ಥ ರಾಜಕಾರಣಿಗಳ ಹೆಂಡತಿ, ಸೊಸೆ, ಮಕ್ಕಳು, ಅಣ್ಣ ತಮ್ಮ, ಅಳಿಯ, ಮೊಮ್ಮಕ್ಕಳನ್ನೇ ಅಭ್ಯರ್ಥಿಗಳಾಗಿಸಿರುವ ಎಲ್ಲಾ ಪಕ್ಷಗಳ ರಾಜಕಾರಣದ ಸ್ವಾರ್ಥವು ಪರಾಕಾಷ್ಠೆ ತಲುಪಿದೆ. ಈ ಬಗ್ಗೆ ಜನ ಸಾಮಾನ್ಯರು‌ ಮಾತಾಡಿ ಕೊಳ್ಳುವಷ್ಟು ಅಸಮಾಧಾನದ ಬುಗ್ಗೆ ಬಹಿರಂಗವಾಗಿದೆ.

ಅಧಿಕಾರದಲ್ಲಿದ್ದಾಗ ಕ್ಷೇತ್ರದ ಭೆಟ್ಟಿ ಮತ್ತು ಜನರ ನಡುವೆ ಜನಪ್ರತಿನಿಧಿ ಕಾಣಿಸಿಕೊಳ್ಳುವ ಕುರಿತು ಅರ್ಥಹೀನ ಪ್ರಸ್ತಾಪಗಳಾಗುವುದೇ ಅಧಿಕ. ನನಗೆ ಪರಿಚಿತರಿರುವ ಓರ್ವ ಶಾಸಕ ಮಹಾಶಯ ಇದ್ದಾನೆ. ಒಡೆದು ಆಳುವ ನೀತಿ ಅವನದು. ಆ ಮೂಲಕ ಶೋಷಿತ ಸಮುದಾಯಗಳ ಐಕ್ಯತೆಯ ಹೋರಾಟಕ್ಕೆ ಧಕ್ಕೆ ತರುವ ಒಳಹುನ್ನಾರ ಅವನದು. ದಕ್ಷಾಡಳಿತದ ಕಿಂಚಿತ್ತೂ ಖಬರಿಲ್ಲ. ಅವನ ಕ್ಷೇತ್ರದಲ್ಲಿ ಅಧಿಕಾರಶಾಹಿಯದೇ ಅಂದಾದುಂಧಿ. ಕ್ಷೇತ್ರದ ಕೆಲವು ಸರಕಾರಿ ಪ್ರೌಢ ಶಾಲೆಗಳಿಗೆ ಕಳೆದ ಹದಿನೇಳು ವರ್ಷಗಳಿಂದ ವಿದ್ಯುಚ್ಛಕ್ತಿಯ ಸಂಪರ್ಕವೇ ಇಲ್ಲ. ಅನೇಕ ಹಳ್ಳಿಗಳಿಗೆ ಕುಡಿಯುವ ನೀರಿಲ್ಲ. ಇಂತಹ ಹಲವು ಮೂಲಭೂತ ಅಗತ್ಯದ ಇಲ್ಲಗಳ ಹತ್ತಾರು ಹಳ್ಳಿಗಳು ಅಲ್ಲಿವೆ. ಆದರೆ ಅವನು ಮಾತ್ರ ಕ್ಷೇತ್ರದ ಜನಗಳ ಭಾರಿ ಒಡನಾಟದ ಸುದ್ದಿಗಳನ್ನು ದಿನನಿತ್ಯವೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಾನೆ.

ಇಂತಹ ಸೋಗಲಾಡಿ ಕ್ಷೇತ್ರ ಸಂಪರ್ಕಗಳಿಂದ ಜನಕ್ಕೇನು ಪ್ರಯೋಜನ.? ಅದೇನೆಂದರೆ ತನಗೆ ಬೇಕಾದ ತನ್ನ ಕಾರ್ಯಕರ್ತರ ಯಾನೆ ಮರಿ ಪುಢಾರಿಗಳ ಊರು, ಮನೆತನಗಳಲ್ಲಿ ‌ಜರುಗುವ ಮದುವೆ ಮುಂಜಿ, ಜರುಗುವ ಸಾವುಗಳ ಸಂದರ್ಭದಲ್ಲಿ ಇಲ್ಲವೇ ಆ ನೆಪದಲ್ಲಿ‌ ಅವರ ಮನೆಗಳಿಗೆ ಭೆಟ್ಟಿ ಕೊಟ್ಟು ಜನಸ್ನೇಹಿ ಹೆಸರಿನ ಲಾಭ ಪಡಕೊಳ್ಳುತ್ತಾನೆ. ಆ ಮೂಲಕ ತಾನು ಸದಾ ಕ್ಷೇತ್ರ ಸಂಪರ್ಕವಾಸಿ ಎಂದು ಫೋಜ್ ಕೊಡುತ್ತಾನೆ. ಅದರಿಂದ ಸಾರ್ವಜನಿಕವಾಗಿ ಯಾವ ಲೋಕೋಪಯುಕ್ತ ಕೆಲಸಗಳು ಆಗುವುದಿಲ್ಲ. ಅದೊಂದು ಪಕ್ಕಾ ತೋರಿಕೆ, ರಾಜಕೀಯ ಸ್ಟಂಟ್ ಮತ್ತು ವಯಕ್ತಿಕ ದುರ್ಲಾಭ. ‌

ಅಷ್ಟಾಗಿ ಕ್ಷೇತ್ರದ ಭೇಟಿಯ ಸಂದರ್ಭದಲ್ಲಿ ತನ್ನ ಸುತ್ತಮುತ್ತ ಕಿಥ್ ಅಂಡ್ ಕಿನ್ ಆಗಿರುವಂತಹ ಮತ್ತು ತನ್ನ ಪಕ್ಷದ ಕಾರ್ಯಕರ್ತರ ವಯಕ್ತಿಕ ಆಕಾಂಕ್ಷೆಗಳಿಗೆ ಸ್ಪಂದಿಸುವುದೇ ಅಧಿಕ. ಸಾರ್ವಜನಿಕವಾಗಿ ನೆರವಾಗಬಲ್ಲ ಕೆಲಸ ಕೈಗೊಳ್ಳುವುದೇ ದುರ್ಲಭ. ಹೀಗಾಗಿ ಕ್ಷೇತ್ರದ ಅಭಿವೃದ್ಧಿ ಅಂದರೆ ಕೆಲಸಗೇಡಿ ಕೆಲಸಗಳಿಗಾಗಿ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವದಲ್ಲ. ಅದರಲ್ಲೂ ಪಕ್ಷದ ಕಾರ್ಯಕರ್ತರ ಜನ್ಮ ದಿನಾಚರಣೆಗಳಲ್ಲಿ ಮತ್ತು ಇತರೆ ಖಾಸಗಿ ಮೋಜು ಮಸ್ತಿಗಳಲ್ಲಿ ಭಾಗವಹಿಸುವುದಂತೂ ಅಲ್ಲವೇ ಅಲ್ಲ. ಜನರ ಮೂಲಭೂತ ಅಗತ್ಯಗಳಿಗೆ ಹೃತ್ಪೂರ್ವಕವಾಗಿ ಸ್ಪಂದಿಸಿ, ಅಗತ್ಯಗಳನ್ನು ಒದಗಿಸುವಲ್ಲಿ ಕಾರ್ಯೋನ್ಮುಖರಾಗುವುದು.

ವರ್ತಮಾನದಲ್ಲಿ ಸಂಸದೀಯ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬರುತ್ತಿರುವ ದಿನಗಳನ್ನು ಎದುರಿಸುವಂತಾಗಿದೆ. ಸಂವಿಧಾನ ಬದಲಾವಣೆ ಮಾಡುತ್ತೇವೆಂಬ ಮಾತುಗಳು ಮತ್ತೆ ಮತ್ತೆ ಕೇಳಿ ಬರುತ್ತಿವೆ. ಬಹುಪಾಲು ಲೋಕ ಅಭ್ಯರ್ಥಿಗಳು ತಮಗಾಗಿ ಓಟು ಕೇಳದೇ 'ಮೋದಿಗಾಗಿ ಮತ' ಹಾಕಿರೆಂದು ಕೇಳುತ್ತಿದ್ದಾರೆ. ಹಾಗಿದ್ದರೆ ಇವರು ಯಾಕೆ ಸ್ಪರ್ಧಿಸಿದರು.? ಮೋದಿ ಮುಖ ನೋಡಿ ಮತ ಹಾಕಿರೆಂದು ಕೇಳುವ ಮೂಲಕ ತಾನು ಯೋಗ್ಯನಲ್ಲ ಎಂಬುದನ್ನು ಅನೇಕರು ಸಾಬೀತು ಮಾಡುತ್ತಿದ್ದಾರೆ. ಚುನಾವಣೆಗೆ ಮುನ್ನವೇ "ಮೋದಿ ಪ್ರಧಾನಿ" ಎಂದು ಘೋಷಣೆ ಮಾಡುವುದು ಪ್ರಜಾಪ್ರಭುತ್ವಕ್ಕೆ ಮಾಡುವ ಘೋರ ಅಪಚಾರ. ಇಂಥದನ್ನೆಲ್ಲ ಕೇಂದ್ರ ಚುನಾವಣೆ ಆಯೋಗ ಸೂಕ್ಷ್ಮವಾಗಿ ಗಮನಿಸಿ ಸೂಕ್ತವಾದ ಕ್ರಮ ಮತ್ತು ಮಾರ್ಗದರ್ಶನಕ್ಕೆ ಮುಂದಾಗಬೇಕಿದೆ.

- ಮಲ್ಲಿಕಾರ್ಜುನ ಕಡಕೋಳ
9341010712

ಈ ಅಂಕಣದ ಹಿಂದಿನ ಬರಹಗಳು
ಜೇನುಕಂಠದ ಹುಡುಗಿ ಹಾಡಿದ `ಹಿತ್ತಲಕ ಕರಿಬ್ಯಾಡ ಮಾವ'
ನಿಗಿ ನಿಗಿ ಕೆಂಡದ ಬಿಸಿಲು ಮತ್ತು ಒಣಗಿದ ಗಂಟಲಲಿ ಕರಿಮಣಿ ಮಾಲೀಕ ನೀನಲ್ಲ

ಕಲಬುರಗಿಯ ಸಾಹಿತ್ಯ ಸಂಭ್ರಮ ಉಕ್ಕಿ ಹರಿದ ವಾತ್ಸಲ್ಯದ ಹೊನಲು
ಶಿವಕಾಂತಿ : ತಾವರೆಯ ಬಾಗಿಲು ತೆರೆದು ತೋರಿದಳು
ದಡ್ಡುಗಟ್ಟಿದ ಪ್ರಭುತ್ವ ಮತ್ತು ಕಲ್ಯಾಣ ಕರ್ನಾಟಕದ ಹಕೀಕತ್ತುಗಳು
ಬೋರಗಿ - ಪುರದಾಳದಲ್ಲಿ ತತ್ವಪದಗಳ ಅನುಸಂಧಾನ

ಜೇವರ್ಗಿಯಲ್ಲಿ ಕನ್ನಡ ತತ್ವಪದ ಸಾಹಿತ್ಯ ಸಮ್ಮೇಳನ
ಕಲ್ಯಾಣ ಕರ್ನಾಟಕದಲ್ಲಿ ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ, ವಿವಿಧ ಪ್ರತಿಷ್ಠಾನಗಳ ಸ್ಥಾಪನೆ ಆಗಲಿ
ಜೇವರ್ಗಿ ರಾಜಣ್ಣ ಮತ್ತು ವೃತ್ತಿರಂಗ ನಾಟಕಗಳು
ಸಾಧು ಮತ್ತು ಪೂಜೇರಿ ಎಂಬ ಜವಾರಿ ಜೋಡೆತ್ತುಗಳು
ಸಾಹಿತಿ ಸಣ್ಣಪ್ಪನ ಕತೆ ಸಣ್ಣದೇನಲ್ಲ
ಮುಖ್ಯಮಂತ್ರಿ ಜೊತೆಗೆ 'ಜನಮನ' ಸಂವಾದ
ಮೊದಲ ಮುಲಾಖತ್ತಿನ ಡಾವಣಗೇರಿ
ಬರೆಯುವ ನನ್ನ ಬಲಗೈಯೇ ಮುರಿದಿದೆ....
ಹೊಸ ಸರ್ಕಾರ : ಸಾಂಸ್ಕೃತಿಕ ಸೋಗಲಾಡಿಗಳ ಬಗ್ಗೆ ಇರಲಿ ಎಚ್ಚರ
ಜನಸಂಪರ್ಕ ಎಂಬ ಮಾಯಾವಿ ಮತ್ತು ಚುನಾವಣೆ ಕಾಲದ ವಾಸ್ತವಗಳು
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯುತ್ತಿರುವ ರಂಗಮೌಲ್ಯಗಳು
ಕಲಬುರ್ಗಿ ಸ್ಥಾನೀಯ ಸಮಾವೇಶದಲ್ಲಿ ಅನಾವರಣಗೊಂಡ ಕಥನಗಳು
ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಯಡ್ರಾಮಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ

ಮೊಟ್ಟಮೊದಲ ಕಥಾ ಸಂಕಲನ‌ 'ಮುಟ್ಟು' ಎಂದರೆ...
ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು
ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ

 

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...