ಮುಸ್ಸಂಜೆಯ ಒಳಗೊಂದು ಅರ್ಥ

Date: 07-08-2021

Location: ಬೆಂಗಳೂರು


‘ಗೆಲುವಿನ ದಡಕ್ಕೆ ಸೇರುವ ಉತ್ಸುಕತೆ ಮಾನವನ ದೌರ್ಬಲ್ಯಗಳಲ್ಲಿ ಅತ್ಯಂತ ಪ್ರಬಲವಾದದ್ದು. ಗೆಲುವಿನ ಮೆಟ್ಟಿಲನ್ನು ಏರುತ್ತಲೇ ಇರಬೇಕೆನ್ನುವ ಅದಮ್ಯ ಮೋಹವು ನಿತ್ಯವೂ ಜಯದ ಹಂಬಲದ ಬಲೆಯೊಳಗೆ ಸಿಲುಕಿಸಿ ಬಿಡುತ್ತದೆ’ ಎನ್ನುತ್ತಾರೆ ಲೇಖಕ ಸಂತೋಷ ಅನಂತಪುರ. ತಮ್ಮ ಅನಂತಯಾನ ಅಂಕಣದಲ್ಲಿ ಬದುಕಿನ ಹಲವು ಮಜಲುಗಳ ಕುರಿತು ವಿಶ್ಲೇಷಿಸಿದ್ದಾರೆ.

ಬೆಳವಣಿಗೆ ನಿರಂತರ. ನಮ್ಮದು ಎನ್ನುವುದರಿಂದ ತೊಡಗಿ ನಮ್ಮದ್ದಲ್ಲದ್ದರವರೆಗಿನ ಅಷ್ಟನ್ನೂ ಕೊನೆಯಿಲ್ಲದ ಯಾತ್ರೆಯಲ್ಲಿ ಕಲಿಯುತ್ತೇವೆ. ಆಗಬಾರದ ಕೆಲವೊಂದು ಘಟನೆಗಳು ಆ ಹೊತ್ತಲ್ಲಿ ಘಟಿಸುವುದಿದೆ. ಅಂತಹವುಗಳಲ್ಲಿ ವೈಯಕ್ತಿಕ ವೈರಾಗ್ಯಗಳನ್ನು ಅನ್ಯ ಮನಸ್ಸಲ್ಲಿ ಬಿತ್ತಿ ಉತ್ತುವುದು ಒಂದು. ಸಿಹಿಯು ಕಹಿಯಾಗಿಯೂ, ಕಹಿಯು ಸಿಹಿಯಾಗಿಯೂ ರುಚಿಸುವುದು ಕೂಡ ಇಲ್ಲೇ. ಯಾವುದೇ ಕಟ್ಟುಪಾಡುಗಳಿಲ್ಲದೆ ಅರಳಬೇಕಾದ ಮೊಗ್ಗುಗಳು ಹತ್ತಲವು ವೈರಾಗ್ಯಗಳನ್ನು ಸಾರಗಳನ್ನಾಗಿಸಿಕೊಂಡು ಚಿಗುರಿ ಅರಳುತ್ತವೆ. ಪರಿಣಾಮ ನೋಡುವ ದೃಷ್ಟಿ, ಚಿಂತಿಸುವ ರೀತಿ, ಬೆಸೆಯುವ ಬಂಧ ಎಲ್ಲವೂ ವ್ಯತ್ಯಸ್ತಗೊಂಡು ಒಂದಷ್ಟು ಬಂಧಗಳಿಗೆ ಬ್ಲ್ಯಾಕ್ ಲಿಸ್ಟ್ ನಲ್ಲಿ ಸೇರಿಕೊಳ್ಳುವ ಸೌಭಾಗ್ಯ. ವ್ಯಕ್ತಿಗತ ನೆಲೆಯನ್ನು ಭದ್ರಗೊಳಿಸಲು ಮತ್ತು ವಿಸ್ತರಿಸಿಕೊಳ್ಳಲು ನಡೆಸುವ ವ್ಯವಹಾರವು ಮುಂದೊಮ್ಮೆ ಬಿಡದೇ ಕಾಲಿಗಡರಿ ಕಾಡಲಿದೆಯೆಂಬ ಪ್ರಜ್ಞೆಯೂ ಆ ಹೊತ್ತಲ್ಲಿ ಕಾಣಿಸದೆ ಮನಸ್ಸು ಆಟವಾಡುತ್ತದೆ. ಈ ನೋಟ-ಆಟವೆಲ್ಲವೂ ನಮ್ಮತ್ತ ತಿರುಗುವುದಿಲ್ಲ ಎಂಬ ಗ್ಯಾರಂಟಿ ಖಂಡಿತಾ ಇಲ್ಲ. ಮರದ ಕೇಡನ್ನು ಮರವೇ ತಿನ್ನುತ್ತದೆಂಬ ಕಾಡಿನ ನಿಯಮ ನಾಡಿಗೂ ಅನ್ವಯ.

ಗೆಲುವಿನ ದಡಕ್ಕೆ ಸೇರುವ ಉತ್ಸುಕತೆ ಮಾನವನ ದೌರ್ಬಲ್ಯಗಳಲ್ಲಿ ಅತ್ಯಂತ ಪ್ರಬಲವಾದದ್ದು. ಗೆಲುವಿನ ಮೆಟ್ಟಿಲನ್ನು ಏರುತ್ತಲೇ ಇರಬೇಕೆನ್ನುವ ಅದಮ್ಯ ಮೋಹವು ನಿತ್ಯವೂ ಜಯದ ಹಂಬಲದ ಬಲೆಯೊಳಗೆ ಸಿಲುಕಿಸಿ ಬಿಡುತ್ತದೆ. ಇದು ಏರ ಬಲ್ಲೆನೆನ್ನುವ ಆಶಾವಾದ ಎನಿಸಿಕೊಂಡು, ವಿಶ್ವಾಸವು ಚಿರಂತನಗೊಳ್ಳುವ ಬಗೆಯೆನಿಸಿ ಕೊಳ್ಳುತ್ತದೆ. ಆಶಾವಾದಗಳ ಜೊತೆಗೆ ಬದುಕನ್ನು ಕಟ್ಟುವ ಕಾಯಕದಲ್ಲಿ-ಹತ್ತಿರವಿರುವವರು ಯಾವತ್ತೂ ಬಳಿಯೇ ಇರುತ್ತಾರೆಂದು ನಂಬಿ ದೂರವಿರುವವರನ್ನು ಸಮೀಪಕ್ಕೆ ಸ್ವಾಗತಿಸುತ್ತೇವೆ. ಆದರೆ ಹತ್ತಿರವನ್ನು ದೂರವಾಗಿಸಿ ದೂರವನ್ನು ಹತ್ತಿರವನ್ನಾಗಿಸುವ ವಿಶ್ವಾಸಗಳು ಹೊಸದೊಂದು ಅರ್ಥವನ್ನು ಬದುಕಿಗೆ ಬರೆಯಲು ತೊಡಗುತ್ತವೆ. ಹೃದಯ ಘಾಸಿಗೊಂಡಾಗ ಬದುಕಿನ ಅತ್ಯಂತ ಸುಂದರ ಬಂಧಗಳನ್ನು ಕೂಡ ಗುರುತಿಸದೆ ಹೋಗಿ ಬಿಡುತ್ತೇವೆ. ಕೆಲವೊಂದು ಸಂಬಂಧಗಳನ್ನು ನಿಭಾಯಿಸೋದು ಸುಲಭವಾಗಿರುವುದಿಲ್ಲವಲ್ಲ. ಸಂಪೂರ್ಣ ಖುಷಿಯ ಜೊತೆಗೆ ಪ್ರೀತಿಯು ಎಂದಿಗೂ ಬರುವುದಿಲ್ಲ. ಒಂದು ವೇಳೆ ಬಂದರೂ ಆ ಖುಶಿಗಳನ್ನು ಅನುಭವಿಸಲು ಅಲ್ಲಿ ಪ್ರೀತಿಯೇ ಇರುವುದಿಲ್ಲ. ಅಷ್ಟಕ್ಕೇ ಮೆಹರ್ಬಾನಿಗಳು ಕುರುಬಾನಿಗಳಾಗಿ ಬಿಡುವುದಿದೆ.

ದೋಷಪೂರ್ಣ ಗ್ರಹಿಕೆಯಲ್ಲಿ ದುಃಖಗಳ ಬೇರಿರುವುದು. ನಮ್ಮ ಗ್ರಹಿಕೆಗಳೇ ಬಹುಪಾಲು ಸಮಸ್ಯೆಗಳಿಗೆ ಕಾರಣ. ಕೆಲವೊಮ್ಮೆ ಗ್ರಹಿಕೆಗಳು ತಪ್ಪಾಗುವುದೂ ಇದೆ. ಗ್ರಹಿಕೆಯೊಳಗೂ ನಿಜದ ಒಂದಂಶ ಇರುತ್ತದೆಯಲ್ಲ, ಅದೇನಾದರೂ ಪ್ರಕಟವಾಯಿತೆಂದರೆ ಗ್ರಹಿಕೆಗಳಿಗೆ ಮರುಜೀವ ಬಂದಂತೆ. ಹೀಗೆ ಉದ್ದಕ್ಕೂ ಗ್ರಹಿಕೆಗಳ ಮೂಲಕ ಬದುಕನ್ನು ಕಟ್ಟಿಕೊಳ್ಳುವ ಪಾಡು ಕೆಲವರದ್ದು. ಅಗತ್ಯಕ್ಕಿಂತ ಹೆಚ್ಚೇ ಕೆಲಸವನ್ನು ಮಿದುಳಿಗೆ ಕೊಟ್ಟಿರುತ್ತೇವೆ ನೋಡಿ ಹಾಗಾಗಿ ಹೊತ್ತಲ್ಲದ ಹೊತ್ತಲ್ಲಿ ಇಲ್ಲಸಲ್ಲದ ಗ್ರಹಿಕೆಗಳು ಎದ್ದು ಬಂದು ಕಾಡುತ್ತಿರುತ್ತವೆ. ಕಾಡುವಿಕೆಯಲ್ಲೂ ಒಳ್ಳೆಯ ಹಾಗೂ ಕೆಟ್ಟ ಎಂಬ ಭೇದವಿದೆ. ಆಯಾ ಮನಸ್ಸಿನ ಯೋಚನೆ, ಅರಿತುಕೊಳ್ಳುವ ವಿಧಾನ, ತಿಳುವಳಿಕಾ ಕ್ರಮಗಳೆಲ್ಲವೂ ಸೇರಿ ಹುಟ್ಟುವ ಗ್ರಹಿಕೆಗಳನ್ನು ಸುಂದರ ಮತ್ತು ಕುರೂಪದಂತಹ ಮುಖವಾಡಗಳು ಒಪ್ಪಿ ಅಪ್ಪಿಕೊಂಡು ಬಿಡುತ್ತವೆ.

ಕಾಲಾನುಕಾಲಕ್ಕೆ ಒತ್ತರಿಸಿಕೊಂಡು ಬರುವ ಸಂಕಟ, ಬೇನೆಗಳನ್ನು ಅನುಭವಿಸುವ ಪಕ್ವಗೊಂಡ ದೇಹ-ಮನಸ್ಸಿಗೆ ಹಂತವೊಂದು ಮೀರಿದ ಮೇಲೆ ನೋವುಗಳು ಖುಶಿಯಾಗಿಯೂ ಮಾರ್ಪಡುವುದಿದೆ. ಆ ಕ್ಷಣಗಳಲ್ಲಿ ನೋವುಗಳನ್ನು ನಲಿವುಗಳನ್ನಾಗಿ ಪರಿವರ್ತಿಸುವ ಗುಣ ಸಿದ್ಧಿಸಿರುತ್ತದೆ. ಅಂತಹ ಮನಸ್ಥಿತಿಯೊಂದು ಅರಿವಿಲ್ಲದೆಯೇ ನಮ್ಮೊಳಗೆ ಮೊಳೆತು ಚಿಗುರಿರುತ್ತದೆ ಕೂಡಾ. ಅದನ್ನು ಮನಗಾಣಬೇಕಷ್ಟೆ. ಪ್ರೀತಿಯಿಂದ ಕೊಡುವ ವಸ್ತುಗಳು ಯಾವತ್ತಿಗೂ ಆಮಿಷದ್ದಾಗಿರುವುದಿಲ್ಲ. ಅದು ಪ್ರೀತಿಯನ್ನು ಹಂಚುವ ವಿಧಾನವಷ್ಟೆ. ಹಾಗೊಂದು ವೇಳೆ ಕೊಟ್ಟು ಪಡೆಯುವಂತಿದ್ದರೆ ಬಾಳಲ್ಲಿ ಗಾಯಗಳೇ ಇರುತ್ತಿರಲಿಲ್ಲ. ಆಪ್ತ ಜೀವವದು ಎಂಬ ವಿಶ್ವಾಸದೊಂದಿಗೆ, ಕೊಂಕು ಮಾತುಗಳನ್ನು ಕೇಳಿಸಿಕೊಂಡರೂ ಯಾವುದೇ ಫಲಾಪೇಕ್ಷೆಯಿಲ್ಲದೆ ಮತ್ತೆಮತ್ತೆ ಪ್ರೀತಿಯನ್ನು ಹಂಚುತ್ತಲೂ, ಮಿಡಿಯುತ್ತಲೂ ಇರುತ್ತೇವೆ. ತನ್ನ ಹಾಗೂ ತನ್ನ ಯೋಚನೆಯ ಆಚೆ ನೋಡದ ಮನಸ್ಥಿತಿಯು ಯಾವತ್ತಿಗೂ ಅಪಾಯವನ್ನು ತರುವುದೇ ಹೆಚ್ಚು.

***
ಆಯಾ ಬದುಕಿನ ಪಠ್ಯ ಆಯಾಯ ಬದುಕಿಗೆ ಮಾತ್ರ ಸೀಮಿತ. ಅದಕ್ಕಾಗಿ ವಿಧಿಯನ್ನು ಹಳಿದೊ, ಕರ್ಮವನ್ನು ಬಳಿದೊ ಅಸಂಗತರೆನಿಸಿಕೊಂಡು ಜೀವಿಸಿವುದು ಬಾಳ್ವೆ ಎನಿಸಿಕೊಳ್ಳುವುದಿಲ್ಲ. ವಿಧಿಲಿಖಿತ ಹೀಗೇ ಎಂದು ಬರೆದಿದ್ದರೆ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಹಾಗಂತ ಕೈ ಕಟ್ಟಿ ಕುಳಿತುಕೊಳ್ಳುವ ಮೂರ್ಖರಾಗಬಾರದಷ್ಟೆ. ಜರಗುವುದೆಲ್ಲವೂ ಒಳಿತಿಗೇ ಎಂಬ ನಂಬಿಕೆಯು ಬಹಳಷ್ಟು ಕಷ್ಟಗಳಿಂದ ಮೇಲಕ್ಕೆತ್ತಲು ಸಹಕಾರಿ. ಹೀಗಿದೆ ಹೀಗಿರಬೇಕೆನ್ನುವ, ಹೀಗಿತ್ತು ಹೀಗಿರಬಾರದೆನ್ನುವ ಮನಸ್ಥಿತಿಗಳ ನಡುವಿನ ದ್ವಂಧ್ವಗಳು ಎಬ್ಬಿಸುವ ಅಲೆಗಳು ಮನಸ್ಸು-ಹೃದಯವನ್ನು ಕಲಕಿ ಅಲ್ಲೋಲ ಕಲ್ಲೋಲ ಮಾಡಿ ಬಿಡುವುದಿದೆ. ಹಾಗಿರಲು ದೃಢಚಿತ್ತ, ಸಂಕಲ್ಪ, ನಂಬಿಕೆಗಳೇ ಬಾಳಿಗೆ ರಹದಾರಿ. ಇಷ್ಟರ ಮಧ್ಯೆ ಮಾಗಿಯಲ್ಲಿ ಕೂಗುವ ಕೋಗಿಲೆ ಕುತರ್ಕಿಗಳಿಗೇನೂ ಕಮ್ಮಿಯಿಲ್ಲ.

ಬದುಕಲ್ಲಿ ಆಗ್ರಹಗಳೇ ಇಲ್ಲದ ಜೀವಗಳಿಲ್ಲ. ಒಂದೊಂದರದ್ದು ಒಂದೊಂದು ರೀತಿಯ ಬೇಡಿಕೆಗಳು. ಕೆಲವೊಂದು ಆಗ್ರಹಗಳಿಗೆ ಅರ್ಹತೆಯು ಮಾನದಂಡವಾಗಿರುತ್ತದೆ. ಅಂತಹವುಗಳು ಬರಿದೇ ಆಗ್ರಹಗಳಾಗಿ ಉಳಿದು ಅನುಗ್ರಹಿತಗೊಳ್ಳುವುದಿಲ್ಲ. ಆ ಸತ್ಯವನ್ನು ಅರಿಯುವ ಸಮಯವು ನಿಜಾರ್ಥದ ಸಮಯವಾಗಿರುವುದಿಲ್ಲ. ಅಷ್ಟೇ ಹಾಗಾಗಿ ಕಂಡ ಕನಸುಗಳಿರಬಹುದು, ಇರಿಸಿಕೊಂಡ ಆಗ್ರಹಗಳಿರಬಹುದು ಫಲಿಸದೆ ಹೋದುದ್ದಕ್ಕೆ ಕೊರಗಿ ಕಮರುವ ಅವಶ್ಯವಿಲ್ಲ. ತೀರಕ್ಕೆ ಅಪ್ಪಳಿಸಿ ಹಿಂತಿರುಗಿ ಮತ್ತೆ-ಮತ್ತೆ ಹೊರಳುತ್ತಾ ದಡಕ್ಕೆ ಅಪ್ಪಳಿಸುವ ಅಲೆಗಳಂತೆ- ಫಲಿಸದ ಆಗ್ರಹಗಳು ಫಲಿಸುವ ಅಲೆಗಳಾಗಿ ದಡಕ್ಕೆ ಮುತ್ತಿಕ್ಕುತ್ತಲೇ ಇರುತ್ತವೆ.

ಪ್ರಜ್ಞೆಯ ಅನಂತ ಆಯಾಮಗಳಲ್ಲಿರುವ ಅಗಾಧ ಅನುಭೂತಿಗಳು ನಮ್ಮ ಅಂತರಂಗದಲ್ಲೇ ಇರುತ್ತವೆ. ನೋಡಬೇಕು ಮತ್ತವುಗಳನ್ನು ಅನುಭವಿಸಬೇಕು. ನೋಡದೆ ಅನುಭವಿಸದೆ ಯಾವುದೂ ದಕ್ಕುವುದಿಲ್ಲ. ಬಾಳಿಗೆ ಮಹತ್ತನ್ನು ತಂದು ಕೊಡುವುದು- ಬದುಕು ತೋರುವ ತನ್ನ ಅಸ್ಥಿತ್ವದಿಂದ. ಮಹತ್ತಿಗೆ ಪ್ರಚಾರದ ಅಗತ್ಯವಿರುವುದಿಲ್ಲ ಎನ್ನುವುದು ಅಂತಹವರನ್ನು ಸಮೀಪಿಸಿದವರಿಗೆ ಮಾತ್ರ ಗೊತ್ತಾಗುತ್ತದೆ. ಮೂರು ಮತ್ತೊಂದು ಉತ್ತರದ ಗಣಿತ ವ್ಯಾಖ್ಯಾನದ ಮೂಲಕ ತಾನು ನಿಂತ ನೆಲ, ಯೋಚಿಸುವ ರೀತಿ, ಪರಂಪರೆ, ಸಂಪ್ರದಾಯಗಳು ಸೋಗಲಾಡಿತನದಿಂದ ಕೂಡಿದವು..ಎಲ್ಲವನ್ನೂ ಕಡಲಿಗೆ ಎಸೆ ಎಂಬ ನಂಬಿಕೆಯು ತಾನು ಚಿಂತಿಸುವ ವಿಧಾನವೇ ಶ್ರೇಷ್ಠವೆಂದು ಸಾರುತ್ತವೆ. ಮಹತ್ತಿನ ಮೇಲೆ ಬದುಕನ್ನು ಕಟ್ಟಿ ಕೊಳ್ಳುವವರಿಗೆ ಪ್ರಚಾರದ ಅಗತ್ಯವಿದೆ. ಮಹತ್ತಲ್ಲದ್ದು ಸದ್ದನ್ನೆಬ್ಬಿಸುವುದೇ ಹೆಚ್ಚು. ಮಹತ್ತಿಗಾಗಿಯೇ ಆಗಾಗ ಸದ್ದನ್ನೆಬ್ಬಿಸುತ್ತಲಿರುವ ಹೊತ್ತಲ್ಲಿ-ಸದ್ದು ಮಾಡದ್ದು ಯಾವತ್ತಿಗೂ ಮಹತ್ತೇ ಆಗಿರುತ್ತದೆ ಎಂಬ ವಿವೇಚನೆಯು ಹೊಳೆದಿರುವುದಿಲ್ಲ. ಹಾಗೊಮ್ಮೆ ಹೊಳೆಯ ಬೇಕಿದ್ದರೆ, ಉದ್ದಕ್ಕೂ ಅಭ್ಯಾಸಿ ಎಂದೇ ತಿಳಿದು ಕಲಿಯುತ್ತಲೇ ಇರಬೇಕು. ಕ್ರಿಯೆಗಳಲ್ಲಿ ಸಂಚರಿಸುವಾಗ ದೊರಕುವ ಕಲಿಕೆಯು ಬದುಕಿನ ನಿಯಮದ ಮಹತ್ತನ್ನು ತಿಳಿಸಿಕೊಡುತ್ತದೆ. ಜೊತೆಗೆ ಹತ್ತಲವು ಅನುಭವ ವೇದ್ಯಗಳೂ ನಮ್ಮನ್ನು ತಬ್ಬಿಕೊಂಡು ಬಿಡುತ್ತವೆ.

ಅರಳುವುದು ಮತ್ತು ಕಮರುವುದು ಎರಡೂ ಜರಗುವುದು ನಮ್ಮೊಳಗೇ. ಅರಳಲು ಬೇಕಾದ ಪರಿಕರಗಳೇ ಕಮರಲೂ ಕಾರಣವಾಗುತ್ತವೆ. ವಿಷಯದ ಗ್ರಹಿಕೆ, ವಸ್ತುವಿನ ಕುರಿತಾದ ಚಿಂತನೆಯು ವಸ್ತುನಿಷ್ಠವಾಗಿ ನೋಡಲು ಸಹಕಾರಿಯಾಗುತ್ತವೆ. ಕೆಲವೊಂದು ಜೀವಗಳು ಬಹುತೇಕರಿಗೆ ಅರ್ಥವಾಗದೆ ಹೋಗಿ ಬಿಡುತ್ತವೆ. ಹಾಗಿರಲು ಅರ್ಥ ಮಾಡಿಕೊಳ್ಳುವ ಬಗೆ ಎಂತು? ಎಂಬ ಪ್ರಶ್ನೆ ಸಹಜ. ನಮ್ಮನ್ನು ಇನ್ನೊಬ್ಬರು ಅರ್ಥ ಮಾಡಿಕೊಳ್ಳಲಿ ಬಿಡಲಿ. ಆದರೆ ನಮ್ಮ ಬದುಕಿಗೊಂದು ಅರ್ಥವಿರಬೇಕು ಎಂಬ ನಂಬಿಕೆ ಇರಬೇಕಾದುದು ಮುಖ್ಯ. ನಮ್ಮವರು ಎನಿಸಿಕೊಂಡ ಬೆರಳೆಣಿಕೆಯ ಜೀವಗಳು ಬೆನ್ನಿಗಿದ್ದಾವಲ್ಲ… ಎನ್ನುವ ಧೈರ್ಯ, ನೆಮ್ಮದಿಯು ಅರ್ಥಪೂರ್ಣವಾಗಿ ಬದುಕಿದ್ದೇನೆ ಎಂಬ ಸಂತೋಷದ ಹುಟ್ಟಿಗೆ ಕಾರಣವಾಗುತ್ತದೆ. ಮಧುರ ಸಂಗೀತ ಒದಗಿಸುವ ಸಂತಸ ಭರಿತ ವಿಶ್ರಾಮವು ಮುಸ್ಸಂಜೆ ಹೊತ್ತಲ್ಲಿ ಸಿಕ್ಕಿತೆಂದಾದರೆ ಅದಕ್ಕಿಂದ ಮಿಗಿಲಾದದ್ದು ಇನ್ಯಾವುದಿದೆ? ಯಾವುದಕ್ಕೂ 'ಅರ್ಥ'ವಾದೀತು ಬೆಳೆದಾಗ ಹೊಲ ತುಂಬಾ ಹೊನ್ನ ಕದಿರು ಎಂಬುದಂತೂ ನಿತ್ಯ ಸತ್ಯ.

ಈ ಅಂಕಣದ ಹಿಂದಿನ ಬರೆಹಗಳು:
ಧಮ್ಮ ಗುಮ್ಮನ ನಂಬಿ ಕೆಟ್ಟರೆ ಎಲ್ಲರೂ ?
ಭರವಸೆಯ ಜೊತೆ ಹೆಜ್ಜೆ ಹಾಕೋಣ..
ಚಾದರದೊಳಗಿನ ಕಥೆ, ವ್ಯಥೆ...
'ಚಂದ್ರಗಿರಿ ತೀರದಲ್ಲಿ' ತೀರದ ಬವಣೆ..
‘ಬಯಲರಸಿ ಹೊರಟವಳು’- ಇಟ್ಟ ಹೆಜ್ಜೆಯ ಜಾಡು
ಬೆಳಕ ದಾಟಿಸುವ ಹಣತೆ- ಎಸ್.ದಿವಾಕರ್
ಅನುಭವಿಸಿ ಬರೆಯುವ ಜಯಂತ ಕಾಯ್ಕಿಣಿ
ಜೀವ ಜೀವಗಳ ಅಳು…
ಹನಿ ಹನಿಸಿದ ಚೊಕ್ಕಾಡಿ
ಶಾಂತ ಕಡಲೊಳು ಬೀಸಿದ ಬಿರುಗಾಳಿ
ರಂಗದ ಮೇಲಿನ ಬಣ್ಣದ ಭಾವಗಳು
ಬೆಳಕ ದಾಟಿಸುವ ಹಣತೆಯೂ...ಒಳ್ಳೆಯವರಾಗುವ ವ್ಯಸನವೂ...
ಟ್ಯಾಗ್ ಹಾಕಿ ನೋಡುವ ಮನಸ್ಸುಗಳ ನಡುವೆ
ಸಖನೂ ಸುಖವೂ ಒಂದೇ ಆಗುವ ಕ್ಷಣ

 

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...