ವಿಮಾನ ಪಯಣದ ವಿದಾಯ ಸಮಾರಂಭ

Date: 16-03-2022

Location: ಬೆಂಗಳೂರು


ಹುಲುಮನುಷ್ಯರು ಲೋಹ ಯಂತ್ರ ತಂತ್ರಜ್ಞಾನ ವಿಜ್ಞಾನ ಲೆಕ್ಕಾಚಾರಗಳ ಜೊತೆಗೆ ತೀವ್ರ ಸಂಬಂಧ ಇರಿಸಿಕೊಂಡ ಹಾರಾಟದ ಲೋಕದಲ್ಲಿ, ವಿಮಾನಗಳ ಸುತ್ತಮುತ್ತ ಒಳಹೊರಗೆ ಮಾನವೀಯ ಸಂಬಂಧಗಳ ದೃಶ್ಯ ಚಿತ್ರಗಳೇ ತುಂಬಿರುವ ಅವಸರದ ಗಿಜಿಗಿಜಿಯ ಸ್ಥಳವೂ ಈ ನಿಲ್ದಾಣಗಳೇ ಇರಬೇಕು ಎನ್ನುತ್ತಾರೆ ಯೋಗೀಂದ್ರ ಮರವಂತೆ. ಅವರು ತಮ್ಮ ಏರೋ ಪುರಾಣ ಅಂಕಣದಲ್ಲಿ ವಿಮಾನ ನಿಲ್ದಾಣಗಳ ಕುರಿತು ಬರೆದಿದ್ದಾರೆ.

ಒಂದು ಇಳಿಯುವ ಪಥ ಅಥವಾ "ರನ್ ವೇ ", ಆ ಪಥಕ್ಕೆ ಕೆಲವು ಅಡ್ಡ ರಸ್ತೆಗಳು, ವಿಮಾನ ರನ್ವೇಯಲ್ಲಿ ಇಳಿದು ಅಡ್ಡ ರಸ್ತೆಗಳಿಗೆ ನಿಧಾನಕ್ಕೆ ತಿರುಗಿ ಚಲನೆ ನಿಲ್ಲಿಸಿ ತಂಗುವ ಸ್ಥಳ, ಪ್ರಯಾಣಿಕರನ್ನು ಸ್ವಾಗತಿಸಿ ವಿಮಾನದೊಳಗೆ ಹತ್ತಿಸುವ ತನಕದ ಎಲ್ಲ ಪ್ರಕ್ರಿಯೆಗಳೂ ನಡೆಯುವ ಒಂದು ಕಟ್ಟಡ, ಹಾರಾಟ ನಿಯಂತ್ರಣ ಕೊಠಡಿ, ವಿಮಾನ ದುರಸ್ತಿಗೆ ಒಂದು ಪ್ರತ್ಯೇಕ ವ್ಯವಸ್ಥೆ, ಇವೆಲ್ಲ ಇರುವ ಜಾಗಕ್ಕೆ ಒಂದು ಬೇಲಿ, ಮತ್ತೆ ಕೊನೆಯಲ್ಲಿ ಮೇಲೊಂದು ಖಾಲಿ ಆಕಾಶ ಇಷ್ಟಿದ್ದರೆ ಅದನ್ನೊಂದು ವಿಮಾನ ನಿಲ್ದಾಣ ಎಂದು ಕರೆಯಬಹುದೇನೋ. ಹುಲುಮನುಷ್ಯರು ಲೋಹ ಯಂತ್ರ ತಂತ್ರಜ್ಞಾನ ವಿಜ್ಞಾನ ಲೆಕ್ಕಾಚಾರಗಳ ಜೊತೆಗೆ ತೀವ್ರ ಸಂಬಂಧ ಇರಿಸಿಕೊಂಡ ಹಾರಾಟದ ಲೋಕದಲ್ಲಿ, ವಿಮಾನಗಳ ಸುತ್ತಮುತ್ತ ಒಳಹೊರಗೆ ಮಾನವೀಯ ಸಂಬಂಧಗಳ ದೃಶ್ಯ ಚಿತ್ರಗಳೇ ತುಂಬಿರುವ ಅವಸರದ ಗಿಜಿಗಿಜಿಯ ಸ್ಥಳವೂ ಈ ನಿಲ್ದಾಣಗಳೇ ಇರಬೇಕು. ಎಲ್ಲ ನಿಲ್ದಾಣಗಳಂತಹ ಒಂದು ನಿಲ್ದಾಣ ವಿಮಾನಗಳದ್ದೂ. ರೈಲು, ಬಸ್ಸು, ಕಾರು, ರಿಕ್ಷಾ, ಹಡಗುಗಳಿಗಿರುವಂತೆ. ವಿಮಾನಗಳಿಗಿಂತ ಹೆಚ್ಚು ಜನಸಾಗರವೇ ನೆರೆಯುವ ಮೊರೆಯುವ ತಾಣ. ನಿಂತಿರುವ ಒಂದೊಂದು ವಿಮಾನಕ್ಕೆ ನೂರು ಇನ್ನೂರು ಮುನ್ನೂರರ ಲೆಕ್ಕದಲ್ಲಿ ಪ್ರಯಾಣಿಕರು, ಅವರ ಜೊತೆಯ ಸಾಮಾನು ಸರಂಜಾಮುಗಳು. ಬ್ಯಾಗುಗಳ ಬಣ್ಣ ಆಕಾರ ಗಾತ್ರ ಅವುಗಳ ಮೇಲೆ ಬರೆದ ವಿಳಾಸ, ಬಿಗಿದ ದಾರದ ಕಟ್ಟು ಎಲ್ಲವೂ ಸೇರಿ ಆಯಾ ಪ್ರಯಾಣಿಕರ ಬಗ್ಗೆ ಅವರು ಹೊರಟ ದಿಕ್ಕು ದೆಸೆಯ ಬಗ್ಗೆ ಕತೆ ಹೇಳುತ್ತವೆ. ಇನ್ನು ಬೀಳ್ಕೊಡಲೆಂದು ಬಂದವರು ಕೂಡ ಆ ಕತೆಯ ಪ್ರಮುಖ ಪಾತ್ರಧಾರಿಗಳಾಗಿ ನಿಲ್ದಾಣದಲ್ಲಿರುತ್ತಾರೆ.

ಕಿಟಕಿಯಿಂದಲೇ ಕರವಸ್ತ್ರ ಬಿಸಾಡಿ ಸೀಟು ಹಿಡಿಯುವ, ಚಾಲಕನ ಬಳಿ ನಮ್ಮನೆಯ "ಲೇಡಿಸ್ ಹಾಗು ಮಕ್ಕಳನ್ನು" ಬೆಂಗಳೂರಿನ ಇಂತಹ ಸ್ಟಾಪಿನಲ್ಲಿ ಜಾಗ್ರತೆಯಲ್ಲಿ ಇಳಿಸು ಎನ್ನುವ ಕೋರಿಕೆ ಇಡುವ ಯಾವ ಘನ ಜವಾಬ್ದಾರಿಗಳು ಇರುವುದಿಲ್ಲವಾದರೂ ಬಿಡಲು ಬಂದವರನ್ನು ಪ್ರಯಾಣದ ತಯಾರಿಯ ಘಟ್ಟಗಳ ಕೊನೆಯ ಹಂತದವರೆಗೆ ಬಿಡಿ ನಡುಮಧ್ಯದಲ್ಲೆ ಕೈಬಿಟ್ಟು ಬರಬೇಕಾದ ಅನಿವಾರ್ಯತೆ ಈ ವಿಮಾನ ವಿದಾಯದ ಚಡಪಡಿಕೆಗಳಲ್ಲಿ ಒಂದು. ಆಗಷ್ಟೇ ಹೊರಡುತ್ತಿರುವ ಬಸ್ಸಿನ ಚಕ್ರಗಳು ಮೆತ್ತಗೆ ತಿರುಗಲು ಶುರು ಆಗುವವರೆಗೂ ಕಾದು ಕಿಟಕಿಯ ಚೌಕಟ್ಟಿನಲ್ಲಿ ಕಾಣಿಸುವ ನಮ್ಮ ಪೈಕಿಯ ಯಾತ್ರಿಗಳ ಅರೆಬರೆ ಕೈ ಮುಖಗಳು ಮರೆ ಆಗುವ ತನಕ ನೋಡಿ ಬಸ್ಸು ಎಬ್ಬಿಸಿದ ಧೂಳು ಕರಗಿ ಹೋಗುವ ತನಕ ಉಳಿದು ಮರಳುವ ಸುಖ ಸಂಪತ್ತು ವಿಮಾನ ಪ್ರಯಾಣದ ಭಾಗ್ಯದಲ್ಲಿ ಇಲ್ಲ. ಇಲ್ಲಂತೂ ಎಲ್ಲೆಲ್ಲೂ ತಪಾಸಣೆಗಳು ಸಂಶಯಗಳು ಪರಿಧಿಗಳು ಎಚ್ಚರಿಕೆಗಳು. ಮನುಕುಲದ ಉತ್ಥಾನದ ಉತ್ಕರ್ಷದ ಸಂಕೇತವಾದ ಗಗನ ಪ್ರಯಾಣ ಮಾಧ್ಯಮದಲ್ಲಿ ಇಷ್ಟಾದರೂ ಅಡೆತಡೆ ಗಡಿಬೇಲಿಗಳು ಇಲ್ಲದಿದ್ದರೆ ನಾವೆಷ್ಟು ಮುಂದೆ ಬಂದಿದ್ದೇವೆ ಮೇಲೆ ಏರಿದ್ದೇವೆ ಎಂದು ತಿಳಿಯುವುದಾದರೂ ಹೇಗೆ. ಪ್ರಯಾಣ ಮಾಡುವವರ ಮತ್ತು ಬಿಡಲು ಬಂದವರ ನಡುವೆ ಅಚಲ ಗಡಿಯಂತೆ ನಿಂತ ಬೇಲಿಗಳ ಹಿಂದಿನಿಂದ ಕೈ ಎತ್ತಿ ಟಾಟಾ ಮಾಡುವವರು. ಬಿಡಲು ಬಂದವರನ್ನ ತಿರುಗಿ ನೋಡುತ್ತಾ ಕಣ್ಣಿನ ಅಳತೆಯಿಂದ ಕಣ್ಮರೆ ಆಗುತ್ತಿರುವ ಹೊತ್ತಲ್ಲಿ ದೂರದಿಂದ ಎತ್ತಿ ಬೀಸುವ ಅದೆಷ್ಟೋ ಕೈಗಳು ಪಯಣಿಗರಿಗೆ ಕಾಣಿಸಬಹುದು ಗುರುತಿನದೋ ಅನಾಮಿಕವೊ ಯಾವುದೊ ಕೈಗೆ ಗುರಿ ಇಟ್ಟು ತಾವೂ ಕೈ ಎತ್ತಿ "ಬಾಯ್ " ಹೇಳಿ ಅವರು ಪಯಣ ಮುಂದುವರಿಸಬಹುದು.

ಊರೂರಿನ ಬಸ್ಸು ರೈಲು ವಿಮಾನ ನಿಲ್ದಾಣಗಳಲ್ಲಿ ವಿದಾಯ ಹೇಳಲೆಂದೇ ಬಂದು ಕಣ್ಮರೆಯಾಗುವ ಅನಾಮಿಕರ ಗುಂಪು ಇಲ್ಲೂ ಇರುತ್ತದೆ. ಬಸ್ಸೋ ರೈಲೋ ವಿಮಾನವೋ ಒಟ್ಟಾರೆ ತಗಡಿನ ಡಬ್ಬಿಯೊಳಗೆ ಕೂತು ಇನ್ನೊಂದು ಊರಿಗೆ ಹೊರಟವರ ಮಧ್ಯೆ ಸಣ್ಣ ಗೆಳೆತನ ನಗೆ ಕುಶಾಲು ಕ್ಯಾತೆ ಜಗಳ ಮೂಡಿ ಹೊಸ ಸಂಬಂಧ ಕುದುರುವಂತೆ ಬಿಡಲು ಬಂದವರ ನಡುವೆಯೂ ಅನಾಯಾಸದಲ್ಲಿ ಸೇತುವೆ ಕಟ್ಟಿಕೊಳ್ಳುವುದಿದೆ. ಮಾತಾಡದೆಯೂ ಕಣ್ಣೋಟದಲ್ಲೇ ಪರಿಚಯ ಸಾಂತ್ವನ ಆತಂಕ ಪ್ರಶ್ನೆ ಚೋದ್ಯ ಅದಲು ಬದಲಾಗುವುದಿದೆ. ಇಲ್ಲಿರುವವರ್ಯಾರೂ ಒಬ್ಬರಿಗೊಬ್ಬರು ಪರಿಚಯಸ್ಥರಲ್ಲ ರಕ್ತ ಸಂಬಂಧಿಗಳಲ್ಲ ಆದರೂ ಒಂದು ತರಹದ ನೆಂಟರು. ಒಂದು ಮದುವೆ ಮನೆಯಲ್ಲೋ ಇನ್ಯಾವುದೋ ಸಮಾರಂಭದಲ್ಲೂ ಬೇರೆ ಬೇರೆ ಹೇಳಿಕೆ ಕೇಳಿಕೆ ತೆಗೆದುಕೊಂಡು ಬಂದು ಅಂದಿನ ಸಭೆಯ ಗಿಜಿಗಿಜಿ ಸದ್ದು ಸೊಲ್ಲಿಗೆ ತಮ್ಮ ದನಿಯನ್ನೂ ಮೌನವನ್ನೂ ಸೇರಿಸಿ ಮರೆಯಾಗುವ ಅಜ್ಞಾತರಂತೆ ಇಲ್ಲಿ ಸಿಗುವ ಇವರು ಅವರು ಎಲ್ಲ.

ಬಿಡಲು ಬಂದ ನೆಂಟರಿಗೆಂದೇ ಕಟ್ಟಿಸಿದ ಬಿಡಾರದಂತೆ ಕಾಣುವ ನಿಲ್ದಾಣದ ಕಾಯುವ ಚಪ್ಪರದಡಿ ನೆರೆದ ಜನಮನ ಸಮೂಹದಲ್ಲಿ ಆ ದಿನದ ಆ ಘಳಿಗೆಯಲ್ಲಿ ಸೇರಿಹೋಗುವವರು. ಹೆತ್ತವರನ್ನು ಊರಿಗೆ ಕಳುಹಿಸುವ ಮಕ್ಕಳು, ಹೆಂಡತಿ ಮಕ್ಕಳನ್ನು ಬೀಳ್ಕೊಡುವ ಗಂಡ, ಗೆಳೆಯರನ್ನು ಬಿಟ್ಟು ಹೋಗಲು ಬಂದ ಇನ್ಯಾರೋ ಗೆಳೆಯ ಗೆಳತಿಯರು ಅಥವಾ ಯಾರೋ ಏನೋ ಎಲ್ಲೋ, ಗೊತ್ತಿರದ ಯಾತ್ರಿಗಳು ಮತ್ತವರ ಬ್ಯಾಗುಗಳನ್ನು ಮುಟ್ಟಿಸಿ ಕಾಸು ಇಸಕೊಳ್ಳುವ ತರಾತುರಿಯ ಚಾಲಕ ನಿರ್ವಾಹಕ ಬಂಧುಗಳು. ಹೀಗೆ ಇಹಪರದಲ್ಲಿ ಇರಬಹುದಾದ ತರಹತರಹದ ಸಂಬಂಧಗಳೆಲ್ಲ ಕ್ಷಣದ ಮಟ್ಟಿಗಾದರೂ ಕಣ್ಣಿಗೆ ಕಟ್ಟುವ ಜೀವಂತವಾಗುವ ವಿಮಾನ ಲೋಕದ ಮಾನವೀಯ ಸ್ಥಳ ಈ ನಿಲ್ದಾಣ. ಶುಭ ಕಾರ್ಯಕ್ಕೆ ನಗುತ್ತ ಹೊರಟವರು, ವಿಹಾರದ ಕನಸಿನಲ್ಲಿ ತೇಲುವವರು, ಹೊಸ ಮದುವೆಯ ಮತ್ತಿನಲ್ಲಿ ತೂಗುವವರು, ದೂರದಲ್ಲಿರುವ ಹಿರಿಯರ ಆತಂಕದ ದಿನಗಳಿಗೋ ಕೊನೆಯ ಯಾತ್ರೆಗೋ ಸಾಕ್ಷಿಗಳಾಗಲು ಗದ್ಗದಿತರಾಗಿ ತೆರಳುತ್ತಿರುವವರು ಎಲ್ಲರಿಗೂ ಅಲ್ಲಿ ಒಂದು ಅದ್ಧೂರಿಯ ನಿರ್ಗಮನ ಸಿಗುತ್ತದೆ. ಕಣ್ಣಿನ ಅಳತೆಯಿಂದ ಮರೆಯಾಗುವ ಪ್ರಯಾಣಿಕರು ಮತ್ತೆ ಅವರನ್ನು ಬಿಡಲು ಬಂದವರ ನಡುವಿನ ಕೊನೆಯ ಪದಗಳು ಚುರುಕಾಗುತ್ತವೆ. ಜಗತ್ತಿನ ಮೂಲೆ ಮೂಲೆಯ ಭಾಷೆ ಸಂಸ್ಕೃತಿಗಳ ವಿಧಿ ವಿಧಾನ ಶಾಸ್ತ್ರ ಸೂಕ್ತಗಳಿಗೆ ಅನುಸಾರವಾಗಿ ಅಲ್ಲಿ "ಬಿದಾಯಿ" "ಜುದಾಯಿ"ಗಳು ನಡೆಯುತ್ತವೆ. ಅಪ್ಪಿಕೊಳ್ಳುವವರು, ಬೆನ್ನು ನೇವರಿಸುವವರು, ಮುತ್ತು ಕೊಡುವವರು ಹಸ್ತ ಕುಲುಕುವವರು ಕಣ್ಸನ್ನೆ ಮಾಡುವವರು ತುಟಿಗಳಲ್ಲಿಯೇ ಹಲಬುವವರು ಮನಸ್ಸಿನಲ್ಲೇ ಕಳವಳ ಪಡುವವರು ಎಲ್ಲರೂ ಇಲ್ಲಿ ಜೊತೆಯಾಗುತ್ತಾರೆ.

ಇವೆಲ್ಲದರ ನಡುವೆಯೇ ತಮ್ಮ ಹಿಂದೆ ಮುಂದೆ ಯಾರನ್ನೂ ಕರೆದುಕೊಂಡು ಬರದೇ ತಮಗೆ ವಿದಾಯ ಹೇಳುವವರು ಯಾರೂ ಇಲ್ಲದವರು ತಾವು ತಮ್ಮೊಡನೆ ತಂದ ಬ್ಯಾಗು ಚೀಲಗಳ ಮೇಲೆ ಕಣ್ಣಿಡುತ್ತ ಅವುಗಳನ್ನೇ ಮಾತಾಡಿಸುತ್ತ ಅವುಗಳ ಜೊತೆಗೆ ತಮ್ಮ ಮುದ್ದು ಸಿಟ್ಟು ಬಹಿರಂಗಗೊಳಿಸುತ್ತ ಯಾವ ಗಡಿ ಬೇಲಿಯಲ್ಲೂ ಕತ್ತು ತಿರುಗಿಸಿ ನೋಡದೆ ಇಹಲೋಕದ ಬಂಧನಗಳನ್ನು ಕಡಿದು ಹೊರಟ ಸನ್ಯಾಸಿಗಳಂತೆ ಸಾಗಿ ಮರೆಯಾಗುತ್ತಿರುವ ಪಯಣಿಗರೂ ಕಾಣಿಸುತ್ತಾರೆ. ಬಿಡುವ ಕಳುಹಿಸಿ ಕೊಡುವ ಸುದೀರ್ಘ ಹಬ್ಬ ಕೊನೆಯೇ ಇರದ ಅವ್ಯಾಹತ ಮೆರವಣಿಗೆಯಂತೆ ನಡೆಯುತ್ತಿರುವಾಗ ಈಗಷ್ಟೇ ಬಂದವರು ಹೊಸತಾಗಿ ಸೇರಿಕೊಳ್ಳುವುದು ವಿದಾಯ ಸಮಾರಂಭ ಮುಗಿಸಿದವರು ಹೊರನಡೆಯುವುದು ಮುಂದುವರಿಯುತ್ತದೆ.

ಬಿಡುವವರನ್ನು ಬಿಟ್ಟು ಕಳುಹಿಸುವವರನ್ನು ಕಳುಹಿಸಿ ನಿಲ್ದಾಣದ ಹೊರ ಬಂದ ಮೇಲೂ ಮತ್ತೆ ಮತ್ತೆ ಕೇಳಿಸುವ ವಿಮಾನಗಳ ಹತ್ತಿಳಿಯುವಿಕೆ ಕರೆದು ಕೂಗಿದಂತೆ ಭಾಸವಾಗಿ ಕತ್ತೆತ್ತಿ ಆಗಸದ ಕಡೆಗೂ ನೋಡುತ್ತಾರೆ. ದಿಕ್ಕು ದೆಸೆಗಳ ಗಾಳಿಯನ್ನು ಸೀಳುತ್ತ ಹತ್ತಿ ಹಾರುವ ವಿಮಾನಗಳಲ್ಲಿ ಬೆಂಗಳೂರಿನ ಕಡೆಗೆ ಹೋಗುವುದೂ ಇರಬಹುದಲ್ಲ ಎಂದು ಮರಳುವ ದಾರಿಯುದ್ದಕ್ಕೂ ಕೆಲವರು ಆಕಾಶವನ್ನು ಹುಡುಕುತ್ತಾರೆ. ನೆಲದ ಮೇಲೆಯೇ ಯಾವ ಊರು ದಿಕ್ಕು ಸಂಬಂಧಗಳ ಗುರುತು ಹತ್ತದ ಇಲ್ಲಿ ಇನ್ನು ವಿಮಾನಗಳು ಇತ್ತ ಬರುತ್ತಿವೆಯೋ ಅತ್ತ ಸಾಗುತ್ತಿವೆಯೋ ಎಂದು ಬಾನನ್ನು ನೋಡಿ ಹೇಳುವುದು ಕಷ್ಟವೇ. ಲಂಡನ್ನಿನ ಹೀತ್ರೋ ದನಂತಹ ನಿಲಾದನ ಆಸುಪಾಸಿನ ಆಕಾಶವನ್ನು ತುಂಬುವ ವಿಮಾನಗಳನ್ನು ಕೇಳಿಸುವ ಸದ್ದುಗಳನ್ನು ಗಮನಿಸಿದರೆ ಈ ನಿಲ್ದಾಣವನ್ನು ವಿಮಾನ ನಿಲ್ಲುವ ತಾಣ ಎಂದು ಕರೆಯುವುದಕ್ಕಿಂತ ಹಾರುವ ತಾಣ ಎಂದು ಮರುನಾಮಕರಣ ಮಾಡಿದರೂ ವಿದಾಯ ಸಮಾರಂಭಕ್ಕೆ ಬಂದವರು ಆಕ್ಷೇಪ ಎತ್ತಲಿಕ್ಕಿಲ್ಲ. ಪ್ರತಿ ನಿಮಿಷಕ್ಕೂ ಆಕಾಶದ ಮೇಲೆ ಹತ್ತುವ ಇಳಿಯುವ ಲೋಹದ ಹಕ್ಕಿಗಳ ಸಾಲು ಸಾಲು. ಇಳಿದ ನಂತರ ಎಕರೆಗಟ್ಟಲೆ ನೆಲದಲ್ಲಿ ರೆಕ್ಕೆ ಹರಡಿಕೊಂಡು ಸೊಂಟಕ್ಕೆ ಕೈಕೊಟ್ಟುಕೊಂಡು ಸುಧಾರಿಸಿಕೊಳ್ಳುವವುಗಳು. ಮತ್ತು ಆ ಲೋಹದ ಹಕ್ಕಿಗಳೊಳಗೆ ಕುಳಿತ ನಿಂತ ತೂಕಡಿಸುವ ಓಲಾಡುವ ಆಗಷ್ಟೇ ವಿದಾಯ ಸ್ವೀಕರಿಸಿದ ಜೀವದಹಕ್ಕಿಗಳು.

ಸಣ್ಣ ಕಿರಾಣಿ ಅಂಗಡಿಯಿಂದ ಹಿಡಿದು ಅತಿ ದೊಡ್ಡ ಕಾರ್ಪರೇಟ್ ಸಂಸ್ಥೆಗಳವರೆಗೆ ದಿನದ ವ್ಯವಹಾರ, ತಿಂಗಳ ವಹಿವಾಟಿನ ಆಧಾರದ ಮೇಲೆ ತಮ್ಮ ತಮ್ಮ ಆರ್ಥಿಕ ಆರೋಗ್ಯವನ್ನು ಅಳೆದು ಕೊಳ್ಳುತ್ತವಲ್ಲ ಹಾಗೆ ವಿಮಾನ ನಿಲ್ದಾಣವೊಂದು ನಿಲ್ದಾಣದ ಹೇಗೆ ಎಷ್ಟು ಕಾರ್ಯನಿರತವಾಗಿದೆ ಎನ್ನುವುದನ್ನು ದಿನಕ್ಕೆ ಎಷ್ಟು ನೂರು ಸಾವಿರ ವಿಮಾನಗಳ ಚಲಾವಣೆ, ಎಷ್ಟು ಸಹಸ್ರ ಪ್ರಯಾಣಿಕರ ಯಾತ್ರೆ ಎಂದೆಲ್ಲ ಅಳೆದು ತೂಗಿ ಹೊಗಳಿ ಕೊಂಡಾಡುವ ಪದ್ಧತಿ ಇದೆ. ಹಾಗಂತ ವಿದಾಯ ಹೇಳಲು ಬಂದವರ ದೈನಂದಿನ ಲೆಕ್ಕ ಯಾರೂ ಇಟ್ಟಂತಿಲ್ಲ. ದಣಿಯುತ್ತ ಇಳಿದವು, ಇಳಿದು ಸುಧಾರಿಸಿಕೊಳ್ಳುತ್ತಿರುವವು, ದೊಡ್ಡ ಉಸಿರೊಂದನ್ನು ಸೆಳೆದು ಆಕಾಶಕ್ಕೆ ಮತ್ತೆ ನೆಗೆಯುವವು ಇವೆಲ್ಲವೂ ಸೇರಿ ಪಯಣಿಗರನ್ನು ಹತ್ತಿಸಿಕೊಂಡು ಬೀಳ್ಕೊಡುವವರನ್ನು ದೂರದಿಂದಲೇ ನೋಡಿ ತಮ್ಮ ದೈನಿಕದಲ್ಲಿ ನಿರತವಾಗಿವೆ. "ಕಾಯಕವೇ ಕೈಲಾಸ" ಎನ್ನುವ ವಿಮಾನಗಳು, ತಮ್ಮ ಮಾಲಿಕರು ತಮಗೆ ವಿಶ್ರಮಿಸುವ ಸಮಯ ನೀಡದೆ ಅಕ್ಕ ಪಕ್ಕದಲ್ಲಿ ಆಗಷ್ಟೇ ಬಂದು ನಿಂತ ತಮ್ಮ ಜಾತಿಯ ಹಕ್ಕಿಗಳ ಕುಶಲೋಪರಿ ವಿಚಾರಿಸುವ ಎಡೆ ಕೊಡದೇ ಕೆಲಸಮಾಡಿಸುತ್ತಾರೆ ಎಂದು ಗೊಣಗಬಹುದು . ಮತ್ತೆ ಈ ವಿಮಾನಗಳನ್ನು ಎಷ್ಟು ದುಡಿಸಿದರೂ ಲಾಭ ಮಾಡುವುದು ಅದೆಷ್ಟು ಕಠಿಣ ಎಂದು ಮಾಲಿಕರು ಆಡಿಕೊಳ್ಳಬಹುದು. ಇವರಿಬ್ಬರನ್ನು ನೋಡಿ ಕೇಳಿ, ಏನಾಗಿ ಹುಟ್ಟಿದರೂ ಈ ವಿಮಾನಗಳಾಗಿ ಹುಟ್ಟುವುದು ಬೇಡ ಎಂದು ಯಾತ್ರಿಗಳ, ಬಿಡುವವರ, ವಿಮಾನಗಳ, ಮಾಲಿಕರ ಯಾರ ಉಸಾಬರಿಗೂ ಇಲ್ಲದ ಇಲ್ಲಿನ ಹಕ್ಕಿಗಳೂ ಅಂದುಕೊಂಡಿರಬಹುದು.

ವಿಮಾನ ನಿಲ್ದಾಣದ ಆಸುಪಾಸಿನ ಬಾನಾಡಿ ಪಕ್ಷಿಗಳನ್ನು ಲೋಹದ ಹಕ್ಕಿಗಳನ್ನು ಅವುಗಳ ಯೋಚನೆ ಲಹರಿಗಳನ್ನು ಆಕಾಶದಲ್ಲಿಯೇ ಬಿಟ್ಟು ವಿದಾಯ ಹೇಳಿದವರು ತಮ್ಮ ಮನೆ ಹಾದಿ ಹಿಡಿಯುತ್ತಾರೆ. ಬಾನಿನ ತುಂಬಾ ವಿಮಾನ ಹಕ್ಕಿಗಳೇ ತುಂಬಿರುವ ಲಂಡನ್ ನಂತಹ ಊರಿನಲ್ಲಿ ಬೀಳ್ಕೊಡುವ ಕಾರ್ಯಕ್ರಮ ಮುಗಿಸಿ ಅಲ್ಲಿಂದ ನೂರಾರು ಮೈಲು ದೂರ ವಿಮಾನಗಳ ಸದ್ದುಗಳು ಕೇಳದ ತಮ್ಮ ಮನೆಗೆ ಮರಳುತ್ತಾರೆ. ಬೀಳ್ಕೊಡುವ ಮೆರವಣಿಗೆಯಲ್ಲಿ ನಡೆದು ದಣಿದು ಬಂದವರ ಬೆವರ ವಾಸನೆ ಇಡೀ ಮನೆಯನ್ನು ತುಂಬುತ್ತದೆ. ವಿಮಾನ ಪಯಣದ ವಿದಾಯ ಸಮಾರಂಭವೊಂದು ಮುಗಿಯುತ್ತದೆ.

ಈ ಅಂಕಣದ ಹಿಂದಿನ ಬರಹಗಳು
ವಿಮಾನ ಹಾರಾಟದಿಂದ ಹಸಿರು ಹೋರಾಟಕ್ಕೆ
ಬಿಡುವಿಲ್ಲದ ಆಗಸದಲ್ಲಿ ಏನೆಲ್ಲ ಎಷ್ಟೆಲ್ಲ..
ತುರ್ತು ನಿರ್ಗಮನದ ವಿಲಕ್ಷಣ ಕ್ಷಣಗಳು
ಮನೆಗೆ ಮರಳಿದ ಮಹಾರಾಜ
ಲೋಕೋಪಕಾರಿಯ ಪಾತ್ರದಲ್ಲಿ ಲೋಹದ ಹಕ್ಕಿ
ಆಕಾಶದ ರಾಣಿಯೂ ಕನಸಿನ ಹಕ್ಕಿಯೂ.....
ಅಸಲಿ ವಿಮಾನಗಳು ಮತ್ತು ನಕಲಿ ಹಕ್ಕಿಗಳು
ವಿಮಾನ ನಿಲ್ದಾಣಕ್ಕೆ ಸ್ವಾಗತ
ವಿಮಾನ ಸಂತತಿಯ ಶಬ್ದ ಬಣ್ಣ ಚಿತ್ರಗಳು
ಒಂದು ಆಕಾಶ ಹಲವು ಏಣಿಗಳು
ಆಗಸದ ಬಂಡಿಗಳ ಅಂಗರಚನಾಶಾಸ್ತ್ರ
ಕಟ್ಟಿಗೆಯ ಆಟಿಕೆಗಳು ಲೋಹದ ಹಕ್ಕಿಯಾದ ಅಧ್ಯಾಯ
ಗಗನಯಾನದ ದೈತ್ಯ ಹೆಜ್ಜೆಗಳು

MORE NEWS

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...