ಜನಪದ ಮಹಿಳೆಯ ಜೀವಪರ ಧ್ವನಿ

Author : ಶಕುಂತಲಾ ಸಿದ್ಧರಾಮ ದುರಗಿ

Pages 162

₹ 150.00




Year of Publication: 2018
Published by: ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ
Address: ಕಲಬುರಗಿ

Synopsys

ಲೇಖಕಿ ಡಾ. ಶಕುಂತಲಾ ಸಿ. ದುರಗಿ ಅವರ ಸಂಪಾದಿತ ಕೃತಿ-ಜನಪದ ಮಹಿಳೆಯ ಜೀವಪರ ಧ್ವನಿ. ಜನಪದ ಮಹಿಳೆಯರ ಸಮಗ್ರ ಜೀವನದ ಜೀವಂತ ಮಿಡಿತಕ್ಕೆ, ಸಂವೇದನೆಗೆ ಕನ್ನಡಿಯಂತಿರುವ ಈ ಕೃತಿಯು ಬೀಸುವ ಮತ್ತು ಕುಟ್ಟುವ ಪದಗಳ ಸಂಗ್ರಹವಾಗಿದೆ. ಬಿಡಿ ಬಿಡಿ ವಿಚಾರಗಳನ್ನು, ಭಾವಗಳನ್ನು ಬಿಚ್ಚಿಟ್ಟಿರುವ ಬೀಸುವ ಪದಗಳನ್ನು, ತ್ರಿಪದಿಗಳನ್ನು, ನಿರೂಪಣೆಯ ಸೌಲಭ್ಯಕ್ಕಾಗಿ ವಿಷಯಾನುಸರ ಪ್ರಮುಖ ಭಾಗಗಳಲ್ಲಿ ವಿಂಗಡಿಸಿ, ಸ್ಥೂಲವಾಗಿ ವಿವೇಚಿಸಲಾಗಿದೆ.

ನಾಗರಿಕತೆಗೆ ಕಾಲಿಡುವ ಮೊದಲು ಅಂದರೆ ಕುಟ್ಟುವ - ಬೀಸುವ ಯಂತ್ರಗಳು ಬರುವ ಮುನ್ನ ಜನಪದ ಮಹಿಳೆಯರ ದೈನಂದಿನ ಕೆಲಸಗಳು ಆರಂಭವಾಗುವುದೇ ಬೀಸುವುದು, ಕುಟ್ಟುವುದು ಮತ್ತು ಅಟ್ಟುವುದರೊಂದಿಗೆ. ಕೋಳಿ ಕೂಗುವ ಮುನ್ನವೆ 'ಒಂಟಿ ಕೋಡಿನ ಎಮ್ಮೆ' ಓಣಿಗಳಲ್ಲಿ ಒದುರುತ್ತಿತ್ತು, ಅದರ ಗುರು ಗುರು ನಾದದೊಂದಿಗೆ ಮಹಿಳೆಯರ ಹಾಡಿನ ಮಂಜುಳ ನಿನಾದವು ಸೇರಿಕೊಳ್ಳುತ್ತಿತ್ತು. ನಸುಬೆಳಕಿನ ಆ ಪ್ರಶಾಂತ ವಾತಾವರಣದಲ್ಲಿ ವೃಷ್ಟಿ ಮತ್ತು ಸಮಷ್ಟಿ ಬದುಕಿನ ವಿಷಯ ವೈವಿಧ್ಯವನ್ನು ಒಳಗೊಂಡ ಪದಗಳು ರಚನೆಯಾಗುತ್ತಿದ್ದವು. ಅವು ಸ್ವಯಂಪ್ರೇರಿತವಾದವು, ಅನುಭವ ಜನ್ಯವಾದವು. ಅದರಲ್ಲಿ ಬೌದ್ಧಿಕ ಚಾಕಚಕ್ಯತೆಯಿಂದ ಭಾವನೆಯೇ ಪ್ರಧಾನವಾಗಿರುವುದು, ಅವುಗಳಲ್ಲಿ ಮಾನವೀಯ ಅಂತಃಕರಣ ಸಹನೆ ಸಹಬಾಳ್ವೆ, ತ್ಯಾಗ, ಔದಾರ್ಯ, ನೋವು ನುಂಗಿ ನಗಬಲ್ಲ ಅನಿವಾರ್ಯತೆಯ ಗುಣಗಳಿಂದ ಸಹ್ಯವಾಗಿಸುವ, ಶ್ರೀಮಂತಗೊಳಿಸಲು ಜೀವನದೃಷ್ಟಿಯನ್ನುಕಾಣುತ್ತೇವೆ.

ಜೀವನಾನುಭವ, ಲೋಕಾನುಭವದ ತ್ರಿಪದಿಗಳು ರಾಗ- ಲಯದೊಂದಿಗೆ ಕಿವಿಯಿಂದ ಕಿವಿಗೆ, ಬಾಯಿಯಿಂದ ಬಾಯಿಗೆ ಕೇಳುತ್ತಾ, ಹಾಡುತ್ತಾ ಕಂಠಸ್ಥವಾಗಿ ಉಳಿದುಕೊಂಡು ಬಂದು ಜನಪದ ಸಾಹಿತ್ಯವಾಗಿದೆ. ಗ್ರಾಮೀಣರ ಬದುಕು ಬೇರೆಯಲ್ಲ ಹಾಡು ಬೇರೆಯಲ್ಲ, ಯಾರ ಯಾರ ಮುಂದೆಯೂ ಈ ಜೀವ, ತನ್ನ ಜೀವನದ ಭಾರ- ಸಾರವನ್ನೆಲ್ಲ ಹಾಡಿನ ಮೂಲಕವೇ ಸಂವೇದಿಸಿ ಅಭಿವ್ಯಕ್ತಿಸಿದೆ. ಹಾಗೆಯೇ ಬೀಸುವ ಕುಟ್ಟುವ ಪದಗಳಲ್ಲಿ ಮಕ್ಕಳ ಮೊಮ್ಮಕ್ಕಳ ಇತ್ಯಾದಿ ಕುಟುಂಬದವರ ಹೆಸರುಗಳು ಮತ್ತು ಮನೆ ಗುರು,ಕುಲ ದೇವರು, ಗ್ರಾಮದೇವರು,ಶರಣರು, ಸಾಧು-ಸಂತರು,ಇತ್ಯಾದಿ ಹೆಸರು ಹೇಳಿಕೊಂಡಿದ್ದು ಕಡಿಮೆ. ತೀರಾ ವಿರಳ. ಅನಾಮಧೇಯ ಕವಿಯತ್ರಿಯರ ಸಂಖ್ಯೆಯೇ ಅಧಿಕ,

ಜಾನಪದ ಸಾಹಿತ್ಯದ ಬಗ್ಗೆ ಒಲವುಳ್ಳವರು, ಅಧ್ಯಯನಾಸಕ್ತರು ಕ್ಷೇತ್ರಕಾರ್ಯಕ್ಕೆ ಅಡಿಯಿಟ್ಟರೆ, ಕಷ್ಟಪಟ್ಟರೆ ಸಿಗುತ್ತಾರೆ. ಜನಪದ ಸಾಹಿತ್ಯದ ಇಂದಿನ ಅಗತ್ಯತೆ ಉದ್ದೇಶ ಫಲಶೃತಿ ಇತ್ಯಾದಿ ಕುರಿತು ಮನವರಿಕೆ ಮಾಡಿಕೊಟ್ಟರೆ ಖುಷಿಯಿಂದ ಮನ ದಣಿಯುವಂತೆ ಹಾಡುತ್ತಾರೆ.ಅದನ್ನು ಕೇಳುವುದಕ್ಕೆ ಬರೆದುಕೊಳ್ಳುವುದಕ್ಕೆ ಸಮಯ, ಆಸಕ್ತಿ ಇದ್ದರೆ ಸಾಕು ಯಾವುದೂ ಅಸಾಧ್ಯವೆನ್ನುವ ಮಾತು ಇಲ್ಲ. ಅನ್ನುವುದಕ್ಕೆ ಈ ಕೃತಿಯಲ್ಲಿನ ಪದಗಳ ಸಂಗ್ರಹವೇ ಸಾಕ್ಷಿ. 

ಡಾ.ದುರಗಿಯವರು ಈ ಕೃತಿಯಲ್ಲಿ, ಸಂಗ್ರಹಿಸಿದ ಹಾಡುಗಳನ್ನು ನಾಲ್ಕು ಭಾಗವಾಗಿ ವಿಂಗಡಿಸಿದ್ದಾರೆ. 'ಬೀಸುವ ಪದಗಳು', 'ಬಾಂಧವ್ಯದ ರಸ ಬಳ್ಳಿ', 'ಕುಟ್ಟುವ ಪದಗಳು' ಮತ್ತು 'ಅನುಬಂಧ'. 

ಆರಂಭದ ಅರ್ಥಪೂರ್ಣ ಪ್ರಸ್ತಾವನೆಯಲ್ಲಿ ಪದ್ಯದ ಸುತ್ತಮುತ್ತಲಿನ ವಿಶ್ಲೇಷಣೆ ಇರುವುದು ವಿಶೇಷ. ಮೊದಲ ಭಾಗ 'ಬೀಸುವ ಪದಗಳು', ಇದರಲ್ಲಿ ಪ್ರಾರ್ಥನೆಯ ಹಾಡಿದೆ, ಮಕ್ಕಳಿಗೆ ಸಂಬಂಧಿಸಿದ ಪದಗಳು, ಬದುಕಿಗೆ ಆಧಾರ ಒಲವು ಎನ್ನುವ ಅರ್ಥದಲ್ಲಿ, ವಿಭಿನ್ನ ಪ್ರೀತಿಯ ಹಾಡುಗಳು ಇರುವುದನ್ನು ಗಮನಿಸುತ್ತೇವೆ. 

'ಬಾಂಧವ್ಯದ ರಸ ಬಳ್ಳಿ' ಇದು ಎರಡನೇ ಭಾಗ. ಇದರಲ್ಲಿ ತಾಯಿ, ತವರು, ಹೆಣ್ಣು ತವರಿಗೆ ಹರಸುವುದು, ಅಣ್ಣ - ತಮ್ಮ, ಹಬ್ಬ ಮುಂತಾದವುಗಳ ಕುರಿತ ತ್ರಿಪದಿ ಹಾಡುಗಳಿವೆ. ಮೂರನೇ ಭಾಗದಲ್ಲಿ 'ಕುಟ್ಟುವ ಪದಗಳು' ಹೇರಳವಾಗಿವೆ. ಜೋಳ ಕುಟ್ಟುವುದು, ಒರಳು, ಅಕ್ಕಿ, ಕನ್ಯೆಯರು, ಮುಕ್ಕಣ್ಣ, ಭೀಮ, ಚನ್ನಮ್ಮ, ಕೂಡಲಸಂಗಮ, ಮಹಾದೇವಿ, ಮುತ್ತೈದೆಯರು, ಗುರುತಾಯಿ ಮುಂತಾದವುಗಳ ಸುತ್ತ ಕುಟ್ಟುವ ಪದಗಳಿವೆ. 

ನಾಲ್ಕನೇ ಭಾಗ ಅನುಬಂಧದಲ್ಲಿ ಕಠಿಣ ಶಬ್ದಗಳಿಗಾಗಿ ಪ್ರಾದೇಶಿಕ ಶಬ್ದಾರ್ಥಕೋಶವಿದೆ. ಹಾಡು ಸಂಪಾದಿಸಲು ಕಾರಣರಾದ ಹದಿನೇಳು ಮಹಿಳೆಯರ ಹೆಸರು ಮತ್ತು ಸಂಕ್ಷಿಪ್ತ ವಿವರಣೆಯಿದೆ. ಒಟ್ಟು ಐದು ಸಹಾಯಕ ಗ್ರಂಥಗಳ ಪಟ್ಟಿಯನ್ನೂ ನೀಡಿದ್ದಾರೆ. ಈ ಕೃತಿಯಲ್ಲಿರುವ  ಜನಪದ ತ್ರಿಪದಿಗಳು, ಜನಪದ ಮಹಿಳೆಯ ಜೀವಧ್ವನಿಯಾಗುವುದರ ಜೊತೆಗೆ, ಅವರ ಜೀವನ ಧರ್ಮವೂ ಆಗಿರುವ ಕಾಣ್ಕೆ ಇದೆ.

About the Author

ಶಕುಂತಲಾ ಸಿದ್ಧರಾಮ ದುರಗಿ
(11 April 1943)

ಲೇಖಕಿ ಡಾ. ಶಕುಂತಲಾ ಸಿದ್ಧರಾಮ. ದುರಗಿ ಅವರು ಮೂಲತಃ ಬಾಗಲಕೋಟೆಯವರು. ತಂದೆ ಶಿವಲಿಂಗಪ್ಪ ನಾವಲಗಿ, ತಾಯಿ ಪಾರ್ವತಮ್ಮ.ನಾವಲಗಿ. ಪ್ರಾಥಮಿಕ ಶಿಕ್ಷಣದಿಂದ ಪದವಿ ವರೆಗೆ ಬಾಗಲಕೊಟೆಯಲ್ಲಿ ಶಿಕ್ಷಣ ಪಡೆದು ನಂತರ, ಧಾರವಾಡದಿಂದ ಕರ್ನಾಟಕ ವಿವಿ  ಯಿಂದ ಎಂ.ಎ, ನಂತರ ಗುಲಬರ್ಗಾ ವಿವಿಗೆ ‘ಆಧುನಿಕ ಕನ್ನಡ ಮಹಿಳಾ ಸಾಹಿತ್ಯ’ ವಿಷಯವಾಗಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್ ಡಿ ಲಭಿಸಿದೆ. ಕಲಬುರಗಿಯಲ್ಲಿಯ  ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗ ಮುಖ್ಯಸ್ಥೆಯಾಗಿ, ಬೀದರನ ಬಿ.ವಿ. ಭೂಮರೆಡ್ಡಿ ಕಾಲೇಜು ಪ್ರಾಂಶುಪಾಲರಾಗಿ, ಈಗ (2001) ನಿವೃತ್ತರು, .ಗುಲಬರ್ಗಾ ವಿವಿ ಪಠ್ಯಪುಸ್ತಕ ಸಮಿತಿ ಸದಸ್ಯೆಯಾಗಿದ್ದರು.  ಕೃತಿಗಳು-ಪ್ರಶಸ್ತಿಗಳು:  ಮಗ್ಗಲು ಮನೆ ಅತಿಥಿ ...

READ MORE

Related Books