ಅಸಮಾನತೆಯ ವಿರುದ್ಧದ ಚಳವಳಿಯಾದ ಬಸವಧರ್ಮ

Date: 22-08-2022

Location: ಬೆಂಗಳೂರು


“ಸಮಾಜವ್ಯವಸ್ಥೆಯಲ್ಲಿ ಸಾಮಾಜಿಕ ನ್ಯಾಯ ಸಿಗಬೇಕಾದರೆ, ಹೋರಾಟಗಾರರಿಗೆ ಸೈದ್ಧಾಂತಿಕ ಸ್ಪಷ್ಟತೆ, ಮತ್ತು ನಿಷ್ಠುರತೆಯ ಗುಣವಿರಬೇಕಾಗುತ್ತದೆ. ಇದನ್ನೇ ಬಸವಣ್ಣನವರು ನ್ಯಾಯನಿಷ್ಠುರಿ, ದಾಕ್ಷಿಣ್ಯಪರ ನಾನಲ್ಲ, ಲೋಕವಿರೋಧಿ, ಶರಣನಾರಿಗಂಜುವನಲ್ಲವೆಂದು ಹೇಳಿರುವುದು” ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣರ ಸಾಮಾಜಿಕ ಸಿದ್ಧಾಂತಗಳು ಅಂಕಣದಲ್ಲಿ ಶರಣರ ಕಾಲದ ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನು ಚರ್ಚಿಸಿದ್ದಾರೆ.

ದೇಶದಲ್ಲಿ ಇದುವರೆಗೆ ಯಾವುದೇ ಧರ್ಮವು ಸಾಮಾಜಿಕ ಕ್ರಾಂತಿ ಮಾಡಿಲ್ಲ. ಧರ್ಮಕ್ಕೂ-ಕ್ರಾಂತಿಗೂ ಆಗುವುದೇ ಇಲ್ಲ. ಆದರೆ 12ನೇ ಶತಮಾನದಲ್ಲಿ ಶಿವಶರಣರು ಕನ್ನಡ ನಾಡಿನಲ್ಲಿ ಅಂತಹ ಸಾಮಾಜಿಕ ಕ್ರಾಂತಿಗೆ ಕೈಹಾಕಿದರು. ಕ್ರಾಂತಿ ವಿಫಲವಾದರೂ ಕೂಡ ಅವರ ಸಾಮಾಜಿಕ ಸಿದ್ಧಾಂತಗಳು ಇಂದಿಗೂ ಪ್ರಸ್ತುತವಾಗಿವೆ.

`ನ್ಯಾಯ’ ಪದಕ್ಕೆ ಹಲವು ಅರ್ಥಗಳಿವೆ. ನ್ಯಾಯವೆಂದರೆ ಸತ್ಯ, ನ್ಯಾಯವೆಂದರೆ ಸಮಾನತೆ, ನ್ಯಾಯವೆಂದರೆ-ಅನ್ಯಾಯದ ಮೇಲಿನ ಜಯ, ನ್ಯಾಯವೆಂದರೆ ದೇವರು ಹೀಗೆ ಈ ಪದದ ಅರ್ಥಗಳು ಬಿಚ್ಚಿಕೊಳ್ಳುತ್ತ ಹೋಗುತ್ತವೆ ನ್ಯಾಯಕ್ಕೆ ದೇವತೆಯೆಂತಲೂ ಹೆಸರಿದೆ. ನ್ಯಾಯಕ್ಕೆ ಧಾರ್ಮಿಕ ಲೇಪವಿದೆ. ಶರಣರು ಅದನ್ನು ಸಾಮಾಜಿಕಕ್ಕೆ ಅನ್ವಯಿಸಿ ಹೇಳಿದ್ದಾರೆ.

ಸಾಮಾಜಿಕ ನ್ಯಾಯವೆಂದರೆ, ಸಾಮಾಜಿಕ ಸಮಾನತೆಯೆಂದೇ ಅರ್ಥ. ಈ ದೇಶದ ಸಾಮಾಜಿಕ ವ್ಯವಸ್ಥೆಯಲ್ಲಿ ಶತಮಾನಗಳಿಂದ ಅಸಮಾನತೆಯೇ ಕಾಣಿಸಿಕೊಂಡಿದೆ. ಈ ಅಸಮಾನತೆಗೆ ಚಾತುರ್ವರ್ಣ ವ್ಯವಸ್ಥೆಯೇ ಮುಖ್ಯ ಕಾರಣವಾಗಿದೆ. ಈ ಕಾರಣಕ್ಕಾಗಿಯೇ ಶರಣರು ಪ್ರಥಮವಾಗಿ ವರ್ಣವ್ಯವಸ್ಥೆಯನ್ನು ವಿರೋಧಿಸಿದ್ದಾರೆ. ಈ ಅಸಮಾನತೆಗೆ ಊಳಿಗಮಾನ್ಯ ವ್ಯವಸ್ಥೆಯೇ ಕಾರಣವಾಗಿದೆ. ಅಂತೆಯೇ ಶರಣರು ವರ್ಗಹೋರಾಟವನ್ನು ಹುಟ್ಟುಹಾಕಿದ್ದಾರೆ. ಈ ಅಸಮಾನತೆಗೆ ಲಿಂಗರಾಜಕಾರಣವೇ ಪ್ರಮುಖ ವೈರಿಯಾಗಿ ಕಾಣಿಸಿಕೊಂಡಿದೆ. ಆದುದರಿಂದ ಶರಣರು ಲಿಂಗಸಮಾನತೆಗಾಗಿ ಚಳವಳಿ ಮಾಡಿದ್ದಾರೆ. ಸಮಾಜವ್ಯವಸ್ಥೆಯಲ್ಲಿ ಇನ್ನೂ ಕೆಲವು ಅಸಮಾನತೆಗಳಿದ್ದರೂ ಪ್ರಮುಖವಾಗಿ ಜಾತಿ-ವರ್ಗ-ಲಿಂಗ ಅಸಮಾನತೆಗಳು ತೀವ್ರತರವಾದವುಗಳಾಗಿವೆ. ಅವು ಇಂದಿಗೂ ಕಾಡುತ್ತಲೇ ಇವೆ.

ಸಾಮಾಜಿಕನ್ಯಾಯದ ಕುರಿತು ಭಾರತದಂತಹ ದೇಶದಲ್ಲಿ ಅನೇಕ ಸಂತರು-ಸಾಧುಗಳು-ಧರ್ಮಸಂಸ್ಥಾಪಕರು ಮಾತನಾಡಿದ್ದಾರೆ, ಉಪದೇಶ ನೀಡಿದ್ದಾರೆ. ಆದರೆ ಅವರು ಈ ಅಸಮಾನತೆಗೆ ಕಾರಣವಾವುದೆಂಬುದನ್ನು ಕಂಡುಕೊಳ್ಳಲಿಲ್ಲ. ವರ್ಣ-ವರ್ಗ-ಲಿಂಗವ್ಯವಸ್ಥೆಯ ವಿರುದ್ಧ ಅವರ್ಯಾರೂ ಪ್ರತಿಭಟಿಸಲಿಲ್ಲ. ಬಂಡಾಯವೇಳಲಿಲ್ಲ, ಚಳವಳಿ ಮಾಡಲಿಲ್ಲ. ಹೀಗಾಗಿ ಅವರ ಮಾತುಗಳು ಉಪದೇಶಕ್ಕಾಗಿ ಮಾತ್ರ ಬಳಕೆಯಾಗಿವೆ. `ಸರ್ವೇಜನಃ ಸುಖಿನೋಭವಂತಿ” ಎಂಬಂತಹ ಶ್ಲೋಕಗಳು ಕೇವಲ ನಾಲಿಗೆಯಲ್ಲಿಯೇ ನಿಂತುಬಿಟ್ಟಿವೆ.

ಸಮಾಜವ್ಯವಸ್ಥೆಯಲ್ಲಿ ಸಮಾನತೆಯೆಂಬುದು ಸುಮ್ಮನೇ ಬಂದುಬಿಡುವುದಿಲ್ಲ. ಮಂತ್ರದಿಂದ ಮಾವಿನಕಾಯಿ ಉದುರುವುದಿಲ್ಲ. ಇದನ್ನು ತಿಳಿದುಕೊಂಡಿದ್ದ ಶರಣರು ಈ ಸಮಾನತೆಗೆ ಕಾರಣಗಳನ್ನು ಕಂಡುಕೊಳ್ಳುತ್ತಾರೆ. ಹಿಂದಿನಿಂದ ಬಂದಿದ್ದ ವೇದ-ಉಪನಿಷತ್ತು-ಆಗಮ-ಶೃತಿ-ಸ್ಮೃತಿಗಳನ್ನು ಅಧ್ಯಯನ ಮಾಡುತ್ತಾರೆ. ಇಂತಹ ಅಧ್ಯಯನಗಳ ಬಲದಿಂದ ಸಿದ್ಧಾಂತಗಳನ್ನು ಕಟ್ಟಿಕೊಂಡು ಜನಸಾಮಾನ್ಯರಲ್ಲಿ ಅರಿವು ಮೂಡಿಸುತ್ತಾರೆ. ನಂತರದಲ್ಲಿ ಅಸಮಾನತೆಯ ವ್ಯವಸ್ಥೆಯ ವಿರುದ್ಧ ಚಳವಳಿ ಕಟ್ಟುತ್ತಾರೆ. ಈ ಕಾರಣಕ್ಕಾಗಿಯೇ ಬಸವಧರ್ಮವು ಉಳಿದ ಧರ್ಮಗಳಿಗಿಂತ ಭಿನ್ನವಾಗಿ ಕಾಣುತ್ತದೆ. ಇಲ್ಲಿ ನಡೆ-ನುಡಿ, ಸಿದ್ಧಾಂತ-ಹೋರಾಟ, ಶಾಂತಿ-ಕ್ರಾಂತಿ ಏಕಕಾಲಕ್ಕೆ ಕಾಣಿಸಿಕೊಂಡಿವೆ, ಸಮನ್ವಯವನ್ನು ಸಾಧಿಸಿವೆ.

“ಲಿಂಗವ ಪೂಜಿಸಿ ಫಲವೇನಯ್ಯಾ, ಸಮರತಿ-ಸಮಕಳೆ ಸಮಸುಖವನರಿಯದನ್ನಕ್ಕ?” ಎಂಬ ಬಸವಣ್ಣನವರ ಈ ವಚನದಲ್ಲಿ ಪೂಜೆಗೆ ಫಲವನ್ನು ಹೇಳುವ ಸಿದ್ಧಾಂತವಿದೆ. “ಕರ್ಮಣ್ಯೇವಾದಿಕಾüರಸ್ತೆ”ಗೆ ಈ ಸಿದ್ಧಾಂತ ವಿರುದ್ಧವಾದುದಾಗಿದೆ. ಪ್ರತಿಫಲ ಬಯಸದೆ ಕರ್ಮ ಮಾಡೆಂದು ಭಗವದ್ಗೀತೆ ಹೇಳಿದರೆ, ಫಲವಿಲ್ಲದಿದ್ದರೆ ಯಾಕೆ ಪೂಜಿಸಬೇಕು ಯಾಕೆ ಕರ್ಮಮಾಡಬೇಕೆಂದು ವಚನಸಾಹಿತ್ಯ ಕೇಳುತ್ತದೆ. ಶರಣರು ಬಯಸಿದ ಪ್ರತಿಫಲವು ಸ್ವಾರ್ಥಕ್ಕಾಗಿ ಅಲ್ಲ, ಸಮಾಜಕ್ಕಾಗಿ ಎಂಬ ವಿಷಯ ತಿಳಿದಾಗ ಇದೊಂದು ವೈಚಾರಿಕ ಧರ್ಮವಾಗಿ ಕಾಣಿಸುತ್ತದೆ.

ಸಮರತಿ, ಸಮಕಳೆ, ಸಮಸುಖ ಎಂಬ ಮೂರು ಪದಗಳಲ್ಲಿ `ಸಮ’ವೆಂಬುದು ಕಡ್ಡಾಯವಾಗಿ ಬಂದಿದೆ. ಎಲ್ಲರ ಬಯಕೆಗಳನ್ನು ಸಮಾನವಾಗಿ ಈಡೇರಿಸುವಂತಾಗಬೇಕು; ಎಲ್ಲರ ಮುಖದಲ್ಲಿಯೂ ಸಮಾನ ಕಳೆ ಇರಬೇಕು. ಎಲ್ಲರಿಗೂ ಸುಖವನ್ನು ಸಮಾನವಾಗಿ ಹಂಚಬೇಕು, ಇದು ಶರಣಸಿದ್ಧಾಂತವಾಗಿದೆ. ಲಿಂಗಪೂಜೆ ಮಾಡುವುದು ದೇವರನೊಲಿಸಿಕೊಳ್ಳುವದಕ್ಕಲ್ಲ, ಮೋಕ್ಷ ಪಡೆಯುವದಕ್ಕಲ್ಲ; ಲಿಂಗಪೂಜೆ ಮಾಡುವುದು ಸಮಾನತೆಗಾಗಿಯೆಂಬ ಬಸವಣ್ಣನವರ ಈ ನುಡಿ ಈ ಧರ್ಮದ ಧ್ಯೇಯವಾಕ್ಯವಾಗಿದೆ.

ಪುರುಷಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ಭೋಗದ ವಸ್ತುವಾದರೆ, ಶರಣಚಳವಳಿಯ ಹೆಣ್ಣು ಸಮರತಿ ಹೊಂದಿದ್ದಾಳೆ. ರತಿಸುಖವೆಂಬುದು ಗಂಡಿಗೆ ಸಿಗುವಂತೆ ಹೆಣ್ಣಿಗೂ ಸಿಗಬೇಕು. ರತಿಸುಖದಲ್ಲಿ ಸಮಾನತೆ ಇರಬೇಕೇ ಹೊರತು ಸ್ವಾರ್ಥವಿರಬಾರದೆಂದು ಶರಣರು ಹೇಳಿದ್ದಾರೆ. ಮುಖಲಕ್ಷಣ ನೋಡಿ ಭವಿಷ್ಯ ಹೇಳುವ ಜ್ಯೋತಿಷಗಳ ಬಾಯಿಯಲ್ಲಿ ಯಾವಾಗಲೂ ರಾಜಕಳೆ ಎಂಬ ಮಾತು ಕೇಳಿಬರುತ್ತದೆ. ಇಂತಹ ರಾಜಕಳೆ ಶ್ರೀಮಂತರ ಮುಖದ ಮೇಲಿರುವ ಹಾಗೆ ಬಡವರ ಮುಖದ ಮೇಲೂ ಕಾಣಿಸಿಕೊಳ್ಳಬೇಕೆಂದು ಶರಣರು ಹೇಳಿದ್ದಾರೆ.

ಬಸವಣ್ಣನವರ ಈ ವಚನದ ಉತ್ತರಾರ್ಧವು ತುಂಬ ಮುಖ್ಯವಾದುದಾಗಿದೆ. “ಲಿಂಗವ ಪೂಜಿಸಿ ಫಲವೇನಯ್ಯಾ, ನದಿಯೊಳಗೆ ನದಿ ಬೆರಸಿದಂತಾಗದನ್ನಕ್ಕ?” ಎನ್ನುವ ಈ ನುಡಿ ಸಾಮಾಜಿಕ ನ್ಯಾಯಕ್ಕೆ ಬರೆದ ವ್ಯಾಖ್ಯೆಯಂತಿದೆ. ನದಿಯೊಳಗೆ ನದಿ ಬೆರೆಯುವ ಕ್ರಿಯೆ ಅದ್ಭುತವಾದುದು. ಹಲವು ನದಿಗಳ ಸಂಗಮವೇ ಕೂಡಲಸಂಗಮವಾಗಿದೆ. ನದಿಯೊಳಗೆ ನದಿ ಬೆರೆತಾಗ; ನದಿಯ ಮೊದಲಿನ ಹೆಸರು ಹೋಗಿ ಅದು ಸಂಗಮವಾಗಿ ಬಿಡುತ್ತದೆ. ಮೇಲುಜಾತಿ-ಕೆಳಜಾತಿ, ಶ್ರೀಮಂತ-ಬಡವ, ಗಂಡು-ಹೆಣ್ಣು ಈ ಎಲ್ಲವೂ ನದಿಯಲ್ಲಿ ನದಿ ಬೆರೆತಂತಾದರೆ ನಿಜವಾದ ಸಾಮಾಜಿಕನ್ಯಾಯ ಕಾಣಿಸಿಕೊಳ್ಳುತ್ತದೆಂಬುದು ಶರಣ ಸಿದ್ಧಾಂತವಾಗಿದೆ. ಹಲವು ಭೇದಗಳು ಅಳಿಸಿಹೋಗಿ ಒಂದಾಗುವುದು, ದ್ವಂದ್ವವಳಿದು ಎಲ್ಲವೂ ಒಂದೇಯಾಗಿ ಕಾಣಿಸುವುದು, ದ್ವೈತವಳಿದು-ಅದ್ವೈತವಾಗಿ ಕಾಣಿಸಿಕೊಳ್ಳುವುದು ಸಮಾನತೆಯ ಲಕ್ಷಣವಾಗಿದೆ. ಶರಣರು ಇಂತಹ ಸಮಾನತೆಗಾಗಿ ಲಿಂಗಪೂಜೆ ಮಾಡಿದರು. ಇಂತಹ ಸಮಾನತೆಗಾಗಿ ಜಂಗಮಪೂಜೆ ಮಾಡಿದರು. ಇಂತಹ ಸಮಾನತೆಗಾಗಿ ಚಳವಳಿ ಮಾಡಿದರು. ಹೀಗಾಗಿ “ಸಾಮಾಜಿಕನ್ಯಾಯ” ವೆಂಬುದು ಶರಣರ ನಿಜವಾದ ಸಿದ್ಧಾಂತವಾಗಿದೆ. ಬಸವಣ್ಣನವರ ಈ ವಚನದ ಮೊದಲೆರಡು ಸಾಲುಗಳು ಸಾಮಾಜಿಕ ನ್ಯಾಯದ ತಾತ್ವಿಕನೆಲೆಯನ್ನು ರೂಪಿಸಿದರೆ, ಕೊನೆಯ ಎರಡು ಸಾಲು, ಎಲ್ಲವೂ ಕೂಡಿಕೊಂಡು ಒಂದಾಗುವ ಸಮನ್ವಯ ಸಿದ್ಧಾಂತವನ್ನು ಹೇಳುತ್ತವೆ. ಬಸವಣ್ಣನವರ ಕೂಡಲಸಂಗಮವು ಇಂದು ಒಂದು ಪುಣ್ಯಕ್ಷೇತ್ರವಾಗಿದೆ, ಅದು ಮೂರ್ತರೂಪದಲ್ಲಿದೆ. ಸಮರತಿ-ಸಮಕಳೆ-ಸಮಸುಖ ಹೊಂದಿದ ಅವರ ಸಾಮಾಜಿಕನ್ಯಾಯದ ಪರಿಕಲ್ಪನೆ ನಿಜವಾದ ಕೂಡಲಸಂಗಮವಾಗಿದೆ. ಅದು ಅಮೂರ್ತ ರೂಪದಲ್ಲಿದೆ “ಸಮರತಿ” ಪದವು ಲಿಂಗಭೇದವನ್ನು ಅಳಿಸಿಹಾಕಿದರೆ, “ಸಮಕಳೆ” ಪದವು ಜಾತಿಭೇದವನ್ನು ಕೊನೆಗಾಣಿಸುತ್ತದೆ. ಕಳೆ ಎಂದರೆ ತೇಜಸ್ಸು ಎಂಬರ್ಥವಿದೆ. ಈ ವ್ಯವಸ್ಥೆಯಲ್ಲಿ ಕೆಲವರಿಗೆ ಹುಟ್ಟಿನಿಂದಲೇ ಬ್ರಹ್ಮತೇಜಸ್ಸು, ಕ್ಷಾತ್ರ ತೇಜಸ್ಸು ಬಂದಿರುತ್ತದೆಂಬ ಭ್ರಮೆಯಿದೆ. ಈ ಭ್ರಮೆಯನ್ನಳಿಸಿ ಹಾಕಿದ ಬಸವಣ್ಣನವರು ಎಲ್ಲರಿಗೂ ಒಂದೇ ತೇಜಸ್ಸು, ಒಂದೇ ಕಳೆ ಇರಬೇಕೆಂದು ಪ್ರತಿಪಾದಿಸುವ ಮೂಲಕ ಜಾತಿಸಮಾನತೆಗಾಗಿ ಹೋರಾಡಿದ್ದಾರೆ. `ಸಮಸುಖ’ ದಲ್ಲಿ ಶ್ರೀಮಂತ-ಬಡವನೆಂಬ ಭೇದವನ್ನು ಅಳಿಸಿ ಹಾಕಿ, ಎಲ್ಲರಿಗೂ ಸಮಾನವಾದ ಸುಖಸಿಗಬೇಕೆಂದು ಹೇಳಿದ್ದಾರೆ. ಈ ವಚನದಲ್ಲಿ ಬರುವ ಲಿಂಗಸಮಾನತೆ, ಜಾತಿಸಮಾನತೆ, ವರ್ಗಸಮಾನತೆಗಳು ಶರಣರು ಕಟ್ಟಿಕೊಟ್ಟ ಸಾಮಾಜಿಕನ್ಯಾಯದ ಮಹತ್ವದ ಪರಿಕಲ್ಪನೆಗಳಾಗಿವೆ.

ಸಮಾಜವ್ಯವಸ್ಥೆಯಲ್ಲಿ ಇಂತಹ ಸಾಮಾಜಿಕನ್ಯಾಯ ಸಿಗಬೇಕಾದರೆ, ಹೋರಾಟಗಾರರಿಗೆ ಸೈದ್ಧಾಂತಿಕ ಸ್ಪಷ್ಟತೆ, ಮತ್ತು ನಿಷ್ಠುರತೆಯ ಗುಣವಿರಬೇಕಾಗುತ್ತದೆ. ಇದನ್ನೇ ಬಸವಣ್ಣನವರು “ನ್ಯಾಯನಿಷ್ಠುರಿ, ದಾಕ್ಷಿಣ್ಯಪರ ನಾನಲ್ಲ, ಲೋಕವಿರೋಧಿ, ಶರಣನಾರಿಗಂಜುವನಲ್ಲ” ವೆಂದು ತಮ್ಮ ವಚನದಲ್ಲಿ ಸ್ಪಷ್ಟಪಡಿಸಿದ್ದಾರೆ.

“ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ,
ಹರದ ಕುಳ್ಳಿರ್ದ ನಮ್ಮ ಮಹಾದೇವಸೆಟ್ಟಿ,
ಒಮ್ಮನವಾದಡೆ ಒಡನೆ ನುಡಿವನು,
ಇಮ್ಮನವಾದಡೆ ನುಡಿಯನು
ಕಾಣಿಯಸೋಲ, ಅರ್ಧಗಾಣೆಯಗೆಲ್ಲ
ಜಾಣ ನೋಡವ್ವಾ, ನಮ್ಮ ಕೂಡಲಸಂಗಮದೇವ”

-ಬಸವಣ್ಣ (ಸ.ವ.ಸಂ.1, ವ: 115)

ಬಸವಣ್ಣನವರ ಈ ವಚನವು ಸಾಮಾಜಿಕನ್ಯಾಯದ ಪರಿಕಲ್ಪನೆಗೆ ಸೂತ್ರರೂಪದಂತಿದೆ. ಸೆಟ್ಟಿಯೊಬ್ಬನ ವೃತ್ತಿಪ್ರತಿಮೆಯನ್ನು ಬಳಸಿಕೊಂಡ; ಈ ವಚನವು ಇಹದ ಮೂಲಕ ಪರದ ಚಿತ್ರಣವನ್ನು ಕಟ್ಟಿಕೊಡುತ್ತದೆ. ಇಲ್ಲಿಯ ಹರದ ಕೇವಲ ಒಬ್ಬ ಸಾಮಾನ್ಯ ವ್ಯಾಪಾರಿಯಲ್ಲ. ಅವನು ಸ್ವತಃ ಮಹಾದೇವಸೆಟ್ಟಿ. ಏಕಮನಸ್ಸಿನಿಂದ ಕರೆದರೆ ಮಾತನಾಡುತ್ತಾನೆ. ಒಳಗೊಂದು-ಹೊರಗೊಂದು ಮನಸ್ಸು ಕಾಣಿಸಿಕೊಂಡರೆ ಆತ ಮಾತನಾಡುವುದೇ ಇಲ್ಲ. ಒಂದು ರೂಪಾಯಿ ಸೋಲುವುದಿಲ್ಲ. ಒಂದು ರೂಪಾಯಿ ಗೆಲ್ಲುವುದಿಲ್ಲ. ಅಂತಹ ಜಾಣನೇ ಕೂಡಲಸಂಗಮನಾಗಿ ಕಾಣಿಸಿಕೊಂಡಿದ್ದಾನೆ. ವ್ಯಾಪಾರದ ವೃತ್ತಿಪ್ರತಿಮೆಯ ಮೂಲಕ ಪಾರಮಾರ್ಥಿಕ ಅರ್ಥಗಳನ್ನು ಒಳಗೊಂಡಿರುವ ಈ ವಚನದಲ್ಲಿ ಸಮಾನತೆಯ ಸಿದ್ಧಾಂತವಿದೆ, ಸಾಮಾಜಿಕನ್ಯಾಯದ ತತ್ವವಿದೆ. ಈ ವಚನ ಸಾಮಾಜಿಕನ್ಯಾಯದ ಅರ್ಥವಿಶ್ಲೇಷಣೆಗೆ ಒಂದು ಮಾರ್ಗಸೂಚಿಯಂತಿದೆ. ವರ್ಣಸಮಾನತೆ-ವರ್ಗಸಮಾನತೆ-ಲಿಂಗಸಮಾನತೆ ತರಲು ಶರಣರು ಮಾಡಿದ ಹೋರಾಟ ಇಂದಿಗೂ ಸ್ಫೂರ್ತಿದಾಯಕವಾಗಿದೆ. ಸಾಮಾಜಿಕನ್ಯಾಯದ ಅವರ ಸಿದ್ಧಾಂತ ಇಂದಿಗೂ ಪ್ರಸ್ತುತವಾಗಿದೆ.

ಈ ಅಂಕಣದ ಹಿಂದಿನ ಬರಹಗಳು:
ಶರಣರ ದಾಸೋಹ ತತ್ವ - ಹಲವು ಆಯಾಮಗಳು
ಆಚಾರವೇ ಲಿಂಗವಾಗುವ,, ಅನುಭಾವವೇ ಜಂಗಮವಾಗುವ ನಿಜ ದಾಸೋಹ
ಶರಣರ ಪಾಲಿಗೆ ಕಡ್ಡಾಯ ಮಾತ್ರವಾಗಿರದೆ, ಕೈಲಾಸವೂ ಆಗಿದ್ದ ಕಾಯಕ
ಕಾಯಕವೇ ನಿಜ ವ್ರತವೆಂದು ನಂಬಿದ್ದ ಶರಣರು
ಶರಣರ ಕಾಲದ ಮನರಂಜನೆಯ ಕಾಯಕಗಳು
ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ

ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...