ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ

Date: 04-07-2022

Location: ಬೆಂಗಳೂರು.


“ಕಾಯಕವನ್ನು ಒಂದು ಮೌಲ್ಯವಾಗಿ ಬೆಳೆಸಿದ ಮೇಲೆ; ಮೊದಲಿದ್ದ ವೃತ್ತಿಯ ಅಪಮಾನ, ಜಾತಿನಿಂದನೆ ದೂರವಾದವು. ವಚನಚಳವಳಿಯು ಒಂದರ್ಥದಲ್ಲಿ ಕಾರ್ಮಿಕ ಚಳವಳಿಯೇ ಆಗಿತ್ತು” ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣರ ಸಾಮಾಜಿಕ ಸಿದ್ಧಾಂತ ಅಂಕಣದಲ್ಲಿ, ಎಲ್ಲರ ದುಡಿಮೆಯೂ ಅಂದು ಹೇಗೆ ಗೌರವ ಪಡೆದಿತ್ತು ಎಂಬುದನ್ನು ವಿಶ್ಲೇಷಿಸಿದ್ದಾರೆ.

3 ಅಗತ್ಯ ಸೇವೆಯ ಕಾಯಕಗಳು
ಉತ್ಪಾದನಾ ಮೂಲ ಕಾಯಕಗಳು ಹಾಗೂ ಕೌಶಲ್ಯ ಮೂಲ ಕಾಯಕಗಳು ಶರಣರ ಕಾಲಕ್ಕೆ ಹೊಸ ಸಾಧ್ಯತೆಗಳನ್ನು ಪಡೆದುಕೊಂಡವು. ವಚನಚಳವಳಿ ಆರ್ಥಿಕವಾಗಿ ಸಬಲವಾಗಲು, ಈ ಎರಡೂ ವರ್ಗದ ಕಾಯಕಜೀವಿಗಳು ಬಹುಮುಖ್ಯ ಕಾರಣರಾಗಿದ್ದಾರೆ. ಉಳಿದ ಕಾಯಕಗಳ ಬಗೆಗೆ ಸಂಕ್ಷಿಪ್ತ ಪರಿಚಯ ಕೊಡಲಾಗಿದೆ.

ಅಗತ್ಯಸೇವೆಯ ಕಾಯಕಗಳಲ್ಲಿ ಕ್ಷೌರಿಕ, ಅಗಸ, ಮಡಿವಾಳ, ಅಂಬಿಗ, ತುರುಗಾಹಿ, ತಳವಾರ, ಓಲೆಕಾರ, ಹೂಗಾರ, ಸಮಗಾರ (ಮಚಿಗಾರ), ಮಾಲೆಗಾರ, ಚರ್ಮಗಾರ (ಡೋಹರ), ಕೂಲಿಕಾರ, ಈ ಮುಂತಾದವುಗಳು ಪ್ರಮುಖವಾಗಿವೆ. ಈ ಎಲ್ಲ ಕಾಯಕಗಳನ್ನು ಶರಣರು ಮಾಡುತ್ತಿದ್ದರು. ಇಲ್ಲಿ ಸಂಕ್ಷಿಪ್ತವಾಗಿ ಅಗತ್ಯಸೇವೆಯ ಕಾಯಕಗಳನ್ನು ಮಾಡುತ್ತಿದ್ದ ಶರಣರ ಕೆಲವು ವಚನಗಳನ್ನು ಉಲ್ಲೇಖಿಸಿ, ತಮ್ಮ ವೃತ್ತಿ ಪ್ರತಿಮೆಗಳ ಮೂಲಕ ಅವರು ಆಧ್ಯಾತ್ಮಕ್ಷೇತ್ರವನ್ನು ಹೇಗೆ ಕಟ್ಟಿಕೊಂಡರೆಂಬುದನ್ನು ತಿಳಿಯಬಹುದಾಗಿದೆ.

ಕ್ಷೌರಿಕ ಅಥವಾ ಹಡಪಿಗ ಕಾಯಕವು ಅಗತ್ಯಸೇವೆಗಳಲ್ಲಿ ಒಂದಾಗಿದೆ. ಕ್ಷೌರಿಕ, ಕೆಲಸಿಗ, ಹಜಾಮ, ನಾವಿದ, ನಾವಿಂದ, ನಾಯಿಂದ, ನಾದಿಗ, ಹಡಪದ ಹೀಗೆ ಬೇರೆ ಬೇರೆ ಹೆಸರಿನಿಂದ ಈ ಕಾಯಕದವರನ್ನು ಕರೆಯುತ್ತಿದ್ದರು. ಕತ್ತಿ, ಕತ್ತರಿ, ಚಿಮ್ಮುಟಿಕೆ, ಬಾಚಣಿಕೆ, ಅಂಗುಲಸಂಗಿ, ಕಡಿಚಣ, ಕತ್ತಿ, ಮುಕುರ, ಹಲುಕಡ್ಡಿ, ನಖZಣಿ ಈ ಮೊದಲಾದ ಸಾಮಗ್ರಿಗಳು ಕ್ಷೌರಿಕ ಕಾಯಕ ಮಾಡಲು ಬೇಕಾಗುತ್ತವೆ.

12ನೇ ಶತಮಾನದ ಶರಣರಲ್ಲಿ ಹಡಪದ ರೇಚಣ್ಣ, ಕ್ಷೌರಿಕ ರೇಮಯ್ಯ, ಕನ್ನಡಿ ಕಾಯಕದ ಅಮುಗಿದೇವಯ್ಯ ಈ ಮೊದಲಾದ ಶರಣರು ಈ ಕಾಯಕವನ್ನು ಮಾಡುತ್ತಿದ್ದರೆಂದು ತಿಳಿದು ಬರುತ್ತದೆ.

``ಎನ್ನ ಕನ್ನಡಿ ಒಳಹೊರಗಿಲ್ಲ
ಎನ್ನ ಘಳಿಹ ಮುಟ್ಟನೊಳಕೊಂಡ
ಚಿರ ಹಡಪಕ್ಕೆ ಅಳವಲ್ಲ.....''
-ಕನ್ನಡಿಕಾಯಕದ ಅಮ್ಮಿದೇವಯ್ಯ (ಸ.ವ.ಸಂ.7, ವ-14)

ಈ ವಚನದಲ್ಲಿ ಅಮ್ಮಿದೇವಯ್ಯನು ತನ್ನ ವೃತ್ತಿ ಪ್ರತಿಮೆಯ ಮೂಲಕ ಅನೇಕ ಆಧ್ಯಾತ್ಮದ ವಿಷಯಗಳನ್ನು ತಿಳಿಸಿದ್ದಾನೆ. ಕತ್ತಿಯನ್ನು ಬಸವಣ್ಣ ಕೊಟ್ಟ, ಕತ್ತರಿಯನ್ನು ಚೆನ್ನಬಸವಣ್ಣ ಕೊಟ್ಟ, ಚಿಮ್ಮಟಿಕೆಯನ್ನು ಪ್ರಭುರಾಯ ಕೊಟ್ಟ ಉಳಿದವುಗಳನ್ನೆಲ್ಲ ಸತ್ಯಶರಣರು ಕೊಟ್ಟರೆಂದು ತನ್ನ ವಚನದಲ್ಲಿ ಹೇಳಿದ್ದಾನೆ. ಹಡಪದಪ್ಪಣ್ಣ ಮತ್ತು ಹಡಪದ ಲಿಂಗಮ್ಮ ಇವರ ವಚನಗಳಲ್ಲಿ ಕ್ಷೌರಿಕ ಕಾಯಕದ ಬಗ್ಗೆ ವಿವರಗಳಿಲ್ಲ; ಕನ್ನಡಿ ಕಾಯಕದ ರೇವಮ್ಮನ ವಚನಗಳಲ್ಲಿ ಈ ಕುರಿತ ಪ್ರಸ್ತಾಪವಿದೆ.

ಅಗಸನ ಕಾಯಕವೂ ಕೂಡ ಅಗತ್ಯಸೇವೆಯ ಕಾಯಕವೇ ಆಗಿದೆ. ಈತನಿಗೆ ಮಡಿವಾಳನೆಂದು ಕರೆಯಲಾಗುತ್ತದೆ. ಮಲಿನ ಬಟ್ಟೆಗಳನ್ನು ಶುಭ್ರಗೊಳಿಸುವುದೇ ಇವರ ಕಾಯಕವಾಗಿತ್ತು. ``ಊರ ಸೀರೆಗೆ ಅಸಗ ಬಡಿಹಡೆದಂತೆ ಹೊನ್ನೆನ್ನದು, ಹೆಣ್ಣೆನ್ನದು, ಮಣ್ಣೆನ್ನದು ಎಂದು ಮರುಳಾದೆ (ವ-310)'' ಎಂಬ ಬಸವಣ್ಣನ ಈ ನುಡಿಯಲ್ಲಿ ಆತ್ಮಶೋಧನೆಯಿದೆ. ತಮ್ಮ ಉಪಜೀವನಕ್ಕಾಗಿ ಅಗಸರು ಊರಿನ ಸೀರೆಗಳಿಗಾಗಿ ಬಡಿದಾಡುತ್ತಿದ್ದರೆಂಬ ಅರ್ಥ ಇಲ್ಲಿದೆ. ಅಂದರೆ ಆ ಕಾಲದಲ್ಲಿ ಈ ಕಾಯಕದಲ್ಲಿ ಸ್ಪರ್ಧೆ ಇದ್ದುದು ಕಂಡುಬರುತ್ತದೆ. ``ಉದಯದಲ್ಲಿ ಕಮ್ಮಾರನ ಮನೆಗೆ ಬಂದು ಬೇಸತ್ತೆ, ಮಧ್ಯಾಹ್ನದಲ್ಲಿ ಅಗಸನ ಮನೆಗೆ ಎಡತಾಕಿ ಬೇಸತ್ತೆ (ವ-1199)'' ಎಂದು ನಗೆಯಮಾರಿತಂದೆ ತನ್ನ ವಚನದಲ್ಲಿ ಹೇಳಿದ್ದಾನೆ. ಮಡಿವಾಳ ಮಾಚಿದೇವನು 12ನೇ ಶತಮಾನದಲ್ಲಿ ಈ ಕಾಯಕ ಮಾಡುತ್ತಿದ್ದ ಶರಣನಾಗಿದ್ದಾನೆ. ಆದರೆ ಈತನ ವಚನಗಳಲ್ಲಿ ಈ ಕಾಯಕಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳಿಲ್ಲ.

ಓಲೆಕಾರ ಕಾಯಕವೂ ಕೂಡ ಅಗತ್ಯ ಸೇವೆಗೆ ಸೇರುತ್ತದೆ. ಅಂಚೆ ಕಾಗದ ಪತ್ರಗಳನ್ನು ಅವರವರ ಮನೆಗಳಿಗೆ ವಿಲೇವಾರಿ ಮಾಡುವುದು ಓಲೆಕಾರನ ಕಾಯಕವಾಗಿತ್ತು. ಈಗಿನ ಹಾಗೆ ಆಗ ಅಂಚೆಕಚೇರಿ ಇರಲಿಲ್ಲ. ರಾಜರ ಸಂದೇಶಗಳನ್ನು ಓಲೆಕಾರ ತಲುಪಿಸುತ್ತಿದ್ದ. ಈತನನ್ನು ವಾಲಿಕಾರ, ವಾಲೇಕಾರ ಎಂದು ಕರೆಯಲಾಗಿದೆ. 12ನೇ ಶತಮಾನದ ಕಾಲಕ್ಕೆ ಓಲೆಕಾರ ಗೂಢಚಾರನೂ ಆಗಿದ್ದ. ಶರಣರಲ್ಲಿ ಓಲೆಯ ಶಾಂತಯ್ಯ, ನಿಜಲಿಂಗ ಚಿಕ್ಕಯ್ಯ, ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ, ರಾಯಸದ ಮಂಚಣ್ಣ ಈ ಮೊದಲಾದವರು ಈ ಕಾಯಕದಲ್ಲಿ ತೊಡಗಿದ್ದರೆಂದು ತಿಳಿದುಬರುತ್ತದೆ. ಊಳಿಗಮಾನ್ಯ ವ್ಯವಸ್ಥೆಯಲ್ಲಿ ಓಲೇಕಾರನು ಊರಿನ ಗೌಡನ ಸಹಾಯಕನಾಗಿದ್ದು ಪಂಚಾಯ್ತಿಯ ವಿಷಯಗಳನ್ನು, ನಿರ್ಣಯಗಳನ್ನು ಗ್ರಾಮಸ್ಥರಿಗೆ ತಲುಪಿಸುತ್ತಿದ್ದನೆಂದು ಹೇಳಲಾಗಿದೆ. ಅಂದು ಓಲೆಕಾಯಕ ಮುಖ್ಯವಾದುದಾಗಿತ್ತು.

ಹೂಗಾರ ಕಾಯಕವೂ ಕೂಡ ಅಗತ್ಯಸೇವೆಗೆ ಸಂಬಂಧಿಸಿದೆ. ಹೂಗಾರರಿಗೆ ಮಾಲೆಗಾರರೆಂದೂ ಕರೆಯುತ್ತಾರೆ. ದಿನನಿತ್ಯದ ಪೂಜೆಯಲ್ಲಿ ಹಬ್ಬ-ಉತ್ಸವಗಳಲ್ಲಿ ಹೂಗಳು ಬೇಕೇಬೇಕು. ಹೂ, ಪತ್ರಿ, ಬಾಸಿಂಗ, ಹೂವಿನದಂಡೆ ಇವುಗಳನ್ನು ಜನರಿಗೆ ಸರಬರಾಜು ಮಾಡುತ್ತಿದ್ದ ಹೂಗಾರರ ಕಾಯಕವು ಮಹತ್ವದ್ದಾಗಿದೆ. ಹೂಗಾರರನ್ನು ಜೀರರೆಂದು, ಗೊರವರೆಂದು ಕರೆಯಲಾಗುತ್ತದೆ. 1122ರ ಲಕ್ಷ್ಮೇಶ್ವರ ಶಾಸನದಲ್ಲಿ ``ಮಾಲೆಗಾರ ನಾಲ್ವತೊಕ್ಕಲು'' ಎಂದು ಹೇಳಲಾಗಿದೆ. ಶರಣರಲ್ಲಿ ಹೂಗಾರ ಮಾದಯ್ಯ, ಚಿಕ್ಕಮಾರಯ್ಯ ಮೊದಲಾದವರು ಇದೇ ಕಾಯಕ ಮಾಡುತ್ತಿದ್ದರೆಂದು ತಿಳಿದು ಬರುತ್ತದೆ.

ಗ್ರಾಮ ರಕ್ಷಣೆಗಾಗಿ ತಳವಾರರನ್ನು ನೇಮಿಸಲಾಗುತ್ತಿತ್ತು. ಹೀಗಾಗಿ ತಳವಾರ ಕಾಯಕವು ಮುಖ್ಯವಾದುದಾಗಿದೆ. ತಳವಾರ ಪದ ತಲವಾರ ಎಂಬ ಪದದಿಂದ ಬಂದಿದೆ. ತಲವಾರ ಎಂದರೆ ಖಡ್ಗ ಎಂದರ್ಥವಾಗುತ್ತದೆ. ಖಡ್ಗ-ಕತ್ತಿ ಹಿಡಿದು ತಳವಾರರು ಊರನ್ನು ರಕ್ಷಿಸುತ್ತಿದ್ದರು. 1135ರ ಧಾರವಾಡ ಜಿಲ್ಲೆಯ ಚಿಕ್ಕಹಂದಿಗೋಳದ ಶಾಸನದಲ್ಲಿ ಈತನನ್ನು ತಲವಾರಿ ಎಂದು ಕರೆಯಲಾಗಿದೆ. ತಳವಾರನು ಕೆಲಸಮಾಡುತ್ತಿದ್ದ ಸ್ಥಳವನ್ನು ತಳವಾರಗಟ್ಟಿ ಎಂದು ಕರೆಯಲಾಗುತ್ತಿತ್ತು. ತಳವಾರ ಊರೊಳಗಿದ್ದರೆ ಕಳ್ಳತನವಾಗುವುದಿಲ್ಲ ಕಳ್ಳ ತಪ್ಪಿಸಿಕೊಳ್ಳುವುದಿಲ್ಲವೆಂದು ಮೋಳಿಗೆ ಮಾರಯ್ಯ ಹೇಳಿದ್ದಾನೆ. ಈ ಕಾರ್ಯಕ್ಕೆ ಸಂಬಂಧಿಸಿದಂತೆ ಶರಣರಲ್ಲಿ ಅವಸರದ ರೇಕಣ್ಣ, ತಳವಾರ ಕಾಮಿದೇವಯ್ಯ ಪ್ರಮುಖರಾಗಿದ್ದಾರೆ. ಎಚ್ಚರಿಕೆ ಕಾಯಕದ ಮುಕ್ತಿನಾಥಯ್ಯನು ಸುದ್ದಿಗಳನ್ನು ಘೋಷಿಸುತ್ತಿದ್ದನೆಂದು ತಿಳಿದು ಬರುತ್ತದೆ. ಊರ ಬಾಗಿಲಲ್ಲಿ ಮಹಾರಾಜನು ದಾರಿ ಕಾಯುತ್ತಿದ್ದನೆಂದು, ಅವನು ತರುವ ಓಲಗದ ದಾರಿ ನೋಡುತ್ತಿದ್ದನೆಂದು ಕೋಲಶಾಂತಯ್ಯ ತನ್ನ ವಚನವೊಂದರಲ್ಲಿ ಹೇಳಿದ್ದಾನೆ. ``ಎತ್ತಾಗಿದ್ದು ಹೆಗಲ ಕೊಡೆನೆಂದಡೆ ನಿಶ್ಚಯವೆ? ತೊತ್ತಾಗಿದ್ದು ಹೇಳಿದುದ ಕೇಳೆನೆಂದಡೆ ಮೆಚ್ಚುವರೆ? (ವ-995)'' ಎಂದು ತನ್ನ ವಚನದಲ್ಲಿ ಹೇಳಿರುವ ತಳವಾರ ಕಾಮಿದೇವನು ತನ್ನ ಕಾಯಕಕ್ಕೆ ಬದ್ಧನಾಗಿದ್ದುದು ತಿಳಿದು ಬರುತ್ತದೆ.

ದನಗಳನ್ನು ಕಾಯುತ್ತಿದ್ದ ತುರುಗಾಹಿ ಕಾಯಕವು ಅವಶ್ಯಕ ಸೇವೆಗಳ ಸಾಲಿಗೆ ಸೇರುತ್ತದೆ. ತುರುಗಾಹಿಯು ರೈತ ಕುಟುಂಬಕ್ಕೆ ಹತ್ತಿರದವನಾಗಿದ್ದಾನೆ. ಪಶುಸಂಪತ್ತನ್ನು ರಕ್ಷಿಸುತ್ತಿದ್ದ ಗೋವಳಿಗನಿಗೆ ಗ್ರಾಮೀಣ ಬದುಕಿನಲ್ಲಿ ಮಹತ್ವದ ಸ್ಥಾನವಿದೆ. ದನಕಾಯುವ ಈ ವೃತ್ತಿ ಶರಣರ ಕಾಲಕ್ಕೆ ತುರುಗಾಹಿ ಕಾಯಕವಾಯಿತು. ತುರುಗಾಹಿ ರಾಮಣ್ಣ, ತೆಲುಗೇಶ ಮಸಣಯ್ಯ, ಗೋರಕ್ಷಕ ಈ ಮೊದಲಾದ ಶರಣರು ಇದೇ ವೃತ್ತಿಯನ್ನು ಮಾಡುತ್ತಿದ್ದರು.

``ನೆವದಿಂದ ಶರಣರ ಬಾಗಿಲಲ್ಲಿ ಹೋಗಿ
ಕಟ್ಟಿದ ಹಸು ಕೂಡಿದ ಎತ್ತು ಬಿಡಿರೊ ಎಂದು ಕೂಗುತ್ತಿದ್ದೇನೆ
ಎನ್ನ ಕೂಗಿನ ದನಿಯಿಂದ ಮಹಾಶರಣರ ಸತಿ ಬಂದು
ಕಟ್ಟಿದ ಹಸುವ ಬಿಟ್ಟು, ಕೂಡಿದ ಎತ್ತ ಕಳಹಿ.....''
-ತುರುಗಾಹಿ ರಾಮಣ್ಣ (ಸ.ವ.ಸಂ.7, ವ-1030)

ಈ ವಚನದಲ್ಲಿ ತುರುಗಾಹಿ ರಾಮಣ್ಣನು ತನ್ನ ಕಾಯಕದ ನಿತ್ಯಕ್ರಿಯೆ ಕುರಿತು ವಿವರಿಸಿದ್ದಾನೆ. ಎತ್ತು, ಹಸು, ಕರುಗಳ ಬಗೆಗೆ ಅಪಾರವಾಗಿ ತಿಳಿದುಕೊಂಡಿದ್ದ ಈ ವಚನಕಾರನು ``ಹಸುವಿಗೆ ಆರುಬಾಯಿ, ಎತ್ತಿಂಗೆ ಮೂರುಬಾಯಿ, ಕರುವಿಂಗೆ ಒಂದು ಬಾಯಿ (ವ-1046)'' ಎಂದು ಹೇಳಿದ್ದಾನೆ.

ಗ್ರಾಮೀಣ ಪ್ರದೇಶದಲ್ಲಿ ಅಂಬಿಗನ ಪಾತ್ರ ಮಹತ್ವದ್ದಾಗಿತ್ತು. ಅಂಬಿಗರನ್ನು ನೀರಗುಂಬಿ, ನೀರಂಬಿಗ, ಬಾರಿಕೇರ, ಬಾರಿಕಾರ, ಅಂಬಿಗ ಎಂದು ಕರೆಯುತ್ತಿದ್ದರು. ನೀರಂಬಿಗನು ಊರಿನ ಕೆರೆ, ಬಾವಿ ನೀರಿನ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದ. ಕೆರೆ ನೀರನ್ನು ಕಾಯುವುದು, ಕೆರೆಯ ತೂಬು ಮುಚ್ಚುವುದು, ತೆರೆಯುವುದು ಇತ್ಯಾದಿ ನೀರಾವರಿ ಕೃಷಿಗೆ ಸಂಬಂಧಿಸಿದ ಕಾಯಕಗಳನ್ನು ಮಾಡುತ್ತಿದ್ದ, ಅಂಬಿಗನು ಹೊಳೆ, ನದಿಗಳಲ್ಲಿ ತೆಪ್ಪ, ದೋಣಿಗಳ ಮೂಲಕ ಜನರನ್ನು ಈ ಕಡೆ ದಂಡೆಯಿಂದ ಆ ಕಡೆಗೆ, ಆಕಡೆ ದಂಡೆಯಿಂದ ಈಕಡೆಗೆ ಕರೆದೊಯ್ಯುತ್ತಿದ್ದ. ಹೀಗೆ ಅಂಬಿಗ ಎರಡೂ ರೀತಿಯ ಕಾಯಕಗಳನ್ನು ಮಾಡುತ್ತಿದ್ದ. ಹರಿಗೋಲು, ಹುಟ್ಟು ಈತನ ಪ್ರಮುಖ ಸಾಮಗ್ರಿಗಳಾಗಿದ್ದವು. ಶಿವಶರಣರಲ್ಲಿ ಅಂಬಿಗರ ಚೌಡಯ್ಯನೇ ಈ ಕಾಯಕದ ಪ್ರಮುಖ ಶರಣನಾಗಿದ್ದಾನೆ. ``ಹುಳ್ಳಿಯ ಹಗುರದಿಂದ ಹಳ್ಳವ ಹಾಯಬೇಕು. ಬಲ್ಲವರ ಸಂಗದಿಂದ ಸಂಸಾರದ ತಳ್ಳಿಯ ಹರಿಯಬೇಕು (ವ-2215)'' ಎಂದು ಮೋಳಿಗೆಯ ಮಾರಯ್ಯನು ಈ ಕಾಯಕದ ಮಹತ್ವವನ್ನು ಹೇಳಿದ್ದಾನೆ. ``ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು, ನಂಬಿದರೆ ಒಂದೆ ಹುಟ್ಟಲಿ ಕಡೆ ಹಾಯಿಸುವನಂಬಿಗರ ಚೌಡಯ್ಯ (ವ-17)'' ಎಂದು ಅಂಬಿಗರ ಚೌಡಯ್ಯ ತನ್ನ ವಚನದಲ್ಲಿ ತಿಳಿಸಿದ್ದಾನೆ.

ಕೂಲಿಗಾರಿಕೆ ಗ್ರಾಮೀಣ ಪ್ರದೇಶದ ಪ್ರಮುಖ ವೃತ್ತಿಯಾಗಿದೆ. ದಿನಗೂಲಿ ಮಾಡುವ ಈ ಕೂಲಿಕಾರರಿಗೆ ಯಾವುದೇ ಕೆಲಸದ ಭದ್ರತೆ ಇರಲಿಲ್ಲ. ಊಳಿಗ ವ್ಯವಸ್ಥೆಯಲ್ಲಿ ಜಮೀನ್ದಾರರು ತಮ್ಮ ಹೊಲಗಳಲ್ಲಿ ಕೆಲಸಕ್ಕೆ ಹಚ್ಚುವಾಗ ಕಡಿಮೆ ಕೂಲಿಕೊಡುತ್ತಿದ್ದರೆಂದು ತಿಳಿದುಬರುತ್ತದೆ. ದಿನಗೂಲಿಯನ್ನು ಅಕ್ಕಮ್ಮ ತನ್ನ ವಚನದಲ್ಲಿ ಕಂಬಳವೆಂದು ಕರೆದಿದ್ದಾಳೆ. ಕೂಲಿಕಾರರನ್ನು ಕಾಮಟಿ, ಕಾಮಟಿ ಎಂದು ಕರೆಯುತ್ತಿದ್ದರು. ನೀರು ಹಾಕುವುದು, ಮುಸರೆ ತಿಕ್ಕುವುದು, ಹೊಲಗೆಲಸ ಮಾಡುವುದು, ಚಾಕರಿ ಮಾಡುವುದು ಇವೆಲ್ಲ ಕೂಲಿ ಕೆಲಸಗಳೇ ಆಗಿದ್ದವು. ಜಮೀನ್ದಾರಿ ಪದ್ಧತಿಯಿದ್ದಾಗ ಕೂಲಿಕಾರರ ಶೋಷಣೆ ತೀವ್ರತರವಾಗಿತ್ತು. 12ನೇ ಶತಮಾನದಲ್ಲಿ ಶರಣರು ಕೂಲಿಕಾರರಿಗೆ ಪ್ರಾಮುಖ್ಯತೆ ನೀಡಿದರು. ಎಲ್ಲ ಕಾಯಕಗಳ ಜತೆಗೆ ಕೂಲಿ ಕಾರ್ಯದ ಗೌರವವನ್ನು ಹೆಚ್ಚಿಸಿದರು. ಕಾಮಾಟದ ಭೀಮಣ್ಣ, ಕೈಕೂಲಿ ಚಾಮಯ್ಯ, ಹೊಸಭಕ್ತಿಯ ಕೇಡಯ್ಯ, ಇವರೆಲ್ಲ ಕೂಲಿಕಾಯಕವ ಮಾಡುತ್ತಿದ್ದರು. ತಂಗಟೂರು ಮಾರಯ್ಯನು ಬಸವಣ್ಣನ ಮನೆಯಲ್ಲಿ ಮನೆಗೆಲಸಮಾಡುತ್ತಿದ್ದ, ಸತ್ಯಕ್ಕ ಎಂಬ ಶರಣೆ, ಶರಣರ ಮನೆಯಲ್ಲಿ ಕಸಗೂಡಿಸುವ ಕಾಯಕ ಮಾಡುತ್ತಿದ್ದಳು.

ಶರಣರ ಕಾಲದಲ್ಲಿ ಇನ್ನೂ ಅನೇಕ ಸೇವೆಗಳು, ಕಾಯಕಗಳಾಗಿ ಪರಿವರ್ತನೆಯಾದವು. ಉಗ್ಛಡಿಸುವ ಗಬ್ಬಿದೇವಯ್ಯ ಬಸವಣ್ಣನ ಮನೆ ಬಾಗಿಲ ಕಾಯುತ್ತಿದ್ದ. ಅರಮನೆಯವರಿಗೆ ಗುರುಮನೆಯವರಿಗೆ, ಸಮಾಜದ ಗಣ್ಯವ್ಯಕ್ತಿಗಳಿಗೆ ಕೆಲವರು ಛತ್ರಿ ಹಿಡಿಯುವ ಕಾಯಕ ಮಾಡುತ್ತಿದ್ದರು. ಇವರನ್ನು ಸತ್ತಿಗೆಯವರೆಂದು ಕರೆಯುತ್ತಿದ್ದರು, ಸತ್ತಿಗೆ ಕಾಯಕದ ಮಾರಯ್ಯನಂತವರು ಈ ಕಾಯಕವನ್ನು ಮಾಡುತ್ತಿದ್ದರು. ಸತ್ತಿಗೆಯ ಚಾಮಯ್ಯನೂ ಇದೇ ಕಾಯಕ ಮಾಡುತ್ತಿದ್ದ. ಓಲೆಯ ಶಾಂತಯ್ಯ, ನಿಜಲಿಂಗ ಚಿಕ್ಕಯ್ಯ ಈ ಮೊದಲಾದ ಶರಣರು ತಾಳೆಗರಿಗಳನ್ನು ಸಿದ್ಧಪಡಿಸುವ ಕಾಯಕ ಮಾಡುತ್ತಿದ್ದರು. ಇನ್ನು ಕೆಲವರು ಅರಮನೆಯ ಮಾವುತರಾಗಿ ದುಡಿಯುತ್ತಿದ್ದರು. ಗಜೇಶ ಮಸಣಯ್ಯ ಹಾಗೂ ಜೋದರ ಮಾಯಣ್ಣ ಈ ಮೊದಲಾದವರು ಬಿಜ್ಜಳನ ಅರಮನೆಯಲ್ಲಿ ಮಾವತಿಗರಾಗಿದ್ದರು. ಇನ್ನು ಕೆಲವರು ಸಾರ್ವಜನಿಕ ಕಾರ್ಯಕ್ರಮಗಳಾದಾಗ ರಾತ್ರಿವೇಳೆ ಪಂಜು, ದೀವಟಿಗೆ ಹಿಡಿಯುವ ಕಾಯಕ ಮಾಡುತ್ತಿದ್ದರು. ಗೋಣಿಯ ಮಲ್ಲಯ್ಯ, ಶಿವದೇವಯ್ಯ ಈ ಮೊದಲಾದ ಶರಣರು ಗೋಣಿಚೀಲಗಳನ್ನು ಹೊಲಿಯುತ್ತಿದ್ದರು. ಆಯ್ದಕ್ಕಿ ಮಾರಯ್ಯನಂತಹ ಶರಣರು ಬಿದ್ದ ಅಕ್ಕಿಯನ್ನು ಆಯುವ ಕೆಲಸಮಾಡುತ್ತಿದ್ದರು. ಕೂಗಿನ ಮಾರಯ್ಯನಂತಹ ಶರಣರು ಕಾವಲುಗಾರರಾಗಿದ್ದರು, ಹೀಗೆ ಇನ್ನೂ ಅನೇಕ ಕೆಲಸ-ಕಾರ್ಯಗಳನ್ನು ಕೂಲಿ ಕಾರ್ಮಿಕರು, ಬಡವರು ಮಾಡುತ್ತಿದ್ದರು. ಇವರೆಲ್ಲರ ದುಡಿಮೆಗೆ ಗೌರವ ನೀಡಿದ ವಚನಚಳವಳಿಯು ಒಂದರ್ಥದಲ್ಲಿ ಕಾರ್ಮಿಕ ಚಳವಳಿಯೇ ಆಗಿತ್ತು.

``ದೇವ ಸಹಿತ ಭಕ್ತ ಮನೆಗೆ ಬಂದಡೆ
ಕಾಯಕವಾವುದೆಂದು ಬೆಸಗೊಂಡೆನಾದಡೆ
ನಿಮ್ಮಾಣೆ | ನಿಮ್ಮ ಪುರಾತನರಾಣೆ | ತಲೆದಂಡ! ತಲೆದಂಡ!
ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಸಿದಡೆ
ನಿಮ್ಮರಾಣಿವಾಸದಾಣೆ''
-ಬಸವಣ್ಣ (ಸ.ವ.ಸಂ.1, ವ-453)

ಬಸವಣ್ಣನ ವಚನದಲ್ಲಿ ಕಾಯಕಕ್ಕೆ ಸಂಬಂಧಿಸಿದಂತೆ ಬಹುಮಹತ್ವದ ನುಡಿಗಳಿವೆ. ಕಾಯಕವನ್ನು ಒಂದು ಮೌಲ್ಯವಾಗಿ ಬೆಳೆಸಿದ ಮೇಲೆ; ಮೊದಲಿದ್ದ ವೃತ್ತಿಯ ಅಪಮಾನ, ಜಾತಿನಿಂದನೆ ದೂರವಾದವು. ಕಾಯಕವಾವುದೆಂದು ಕೇಳುವದೆಂದರೆ, ಜಾತಿಯಾವುದೆಂದು ಕೇಳಿದಂತೆ, ಅದಕ್ಕಾಗಿಯೇ ಬಸವಣ್ಣ ಆಣೆ-ಪ್ರಮಾಣ ಮಾಡಿದ್ದಾನೆ.

ಚಾತುರ್ವರ್ಣ ವ್ಯವಸ್ಥೆಯಲ್ಲಿ ಅಸ್ಪೃಶ್ಯರಿಗೆ ಸ್ಥಾನವೇ ಇರಲಿಲ್ಲ. ಅವರನ್ನು ಪಂಚಮರೆಂದು ಕರೆಯುತ್ತಿದ್ದರು. ಇಂತಹ ಅಸ್ಪೃಶ್ಯರ ಬದುಕು ಶೋಚನೀಯವಾಗಿತ್ತು. ಊರೊಳಗಿನ ಜನರ ಹಾಗೆ ಇವರಿಗೆ ತಮ್ಮದೇ ಆದ ವೃತ್ತಿಗಳಿರಲಿಲ್ಲ. ಅತ್ಯಂತ ಕೀಳೆಂದು ಪರಿಗಣಿಸಿದ್ದ ಕೆಲಸಗಳನ್ನೆಲ್ಲ ಇವರು ಮಾಡುತ್ತಿದ್ದರು. ಅಸ್ಪೃಶ್ಯರಲ್ಲಿ ಹೊಲೆಯ, ಮಾದಿಗ, ಸಮಗಾರ, ಡೋರ ಈ ಮೊದಲಾದ ಪಂಗಡಗಳಿವೆ. ಸಾಮಾನ್ಯವಾಗಿ ಇವರ ಉದ್ಯೋಗಗಳೆಲ್ಲಾ ಚರ್ಮಕ್ಕೆ ಸಂಬಂಧಿಸಿದವುಗಳಾಗಿದ್ದವು. ಚರ್ಮಗಾರಿಕೆಯ ಜತೆಗೆ ಸ್ಮಶಾನ ಕಾಯುವುದು, ಯಾರಾದರೂ ಊರಲ್ಲಿ ಸತ್ತರೆ ಕುಣಿತೋಡುವುದು, ಸತ್ತ ಸುದ್ದಿಗಳನ್ನು ತಲುಪಿಸಿ ಬರುವುದು, ಈ ಮೊದಲಾದ ಕೆಲಸಗಳನ್ನು ಅಸ್ಪೃಶ್ಯರು ಮಾಡುತ್ತಿದ್ದರು.

ಕನ್ನಡ ನಾಡಿನಲ್ಲಿ ಹೊಲೆಯರನ್ನು ಚಲವಾದಿಗಳೆಂದು ಕರೆದರೆ, ಮಹಾರಾಷ್ಟ್ರದಲ್ಲಿ ಮಹಾರ್ ಎಂದು ಕರೆಯುತ್ತಿದ್ದರು. ಊರುಗಳಲ್ಲಿ ದನ-ಕರುಗಳು ಸತ್ತರೆ ಅವುಗಳನ್ನು ಹೊತ್ತುಕೊಂಡು ಹೋಗಿ ಊರ ಹೊರಗೆ ಹಾಕುವುದೇ ಇವರ ವೃತ್ತಿಯಾಗಿತ್ತು. ಚರ್ಮವನ್ನು ಹದಮಾಡಿ ಚಪ್ಪಲಿ, ಜೋಡು, ಪಾದರಕ್ಷೆಗಳನ್ನು ಮಾದಿಗರು ಮಾಡುತ್ತಿದ್ದರು. ದನಕರುಗಳ ತೊಗಲಿನ ಶಕ್ತಿಸಾಧ್ಯತೆಗಳನ್ನು ಬಲ್ಲವರಾಗಿದ್ದ ಮಾದಿಗರು ಎಮ್ಮೆಯ ತೊಗಲಿನಿಂದ ಎಕ್ಕಡಗಳನ್ನು, ಎತ್ತು ಮತ್ತು ಹಸುವಿನ ತೊಗಲಿನಿಂದ ಜತ್ತಿಗೆ, ಬಾರು, ಗೆಜ್ಜೆಸರಗಳನ್ನು ಮಾಡುತ್ತಿದ್ದರು. ಕೋಣನ ತೊಗಲಿನಿಂದ ನೀರೆತ್ತುವ ಮೊಟ್ಟೆಗಳನ್ನು ತಯ್ಯಾರಿಸುತ್ತಿದ್ದರು. ಮಾದಿಗರು ತೊಗಲಿನ ಚೀಲ ತಯ್ಯಾರಿಸುತ್ತಿದ್ದರೆಂಬ ವಿಷಯ ಕಾಳವ್ವೆಯ ವಚನದಿಂದ ತಿಳಿದು ಬರುತ್ತದೆ (ವ-652). ಸಮಗಾರನಿಗೆ ಚರ್ಮಕಾರನೆಂದು ಕರೆಯುತ್ತಿದ್ದರು. ಎಮ್ಮೆ ಆಕಳುಗಳ ಚರ್ಮವನ್ನು ಇವರು ಹದಗೊಳಿಸುತ್ತಿರಲಿಲ್ಲ, ಬದಲಾಗಿ ಕುರಿಯ ಚರ್ಮವನ್ನು ಹದಗೊಳಿಸುತ್ತಿದ್ದರು. ಹಳೆಯ ಚಪ್ಪಲಿ, ಪಾದರಕ್ಷೆಗಳನ್ನು ಹೊಲಿದು ಕೊಡುವುದೂ ಕೂಡ ಇವರ ವೃತ್ತಿಯೇ ಆಗಿತ್ತು. ಚರ್ಮದಿಂದ ಚಮ್ಮಾವುಗೆಗಳನ್ನು ತಯ್ಯಾರಿಸುತ್ತಿದ್ದರು. ಡೋರರು ಚಮ್ಮಾರರ ಒಳಪಂಗಡಕ್ಕೆ ಸೇರಿದ್ದು ಚರ್ಮಕ್ಕೆ ಬಣ್ಣ ಕೊಡುವ ಕೆಲಸವನ್ನಿವರು ಮಾಡುತ್ತಿದ್ದರು. ಚರ್ಮವನ್ನು ಹದಗೊಳಿಸಿದ ಡೋರರು ಅದನ್ನು ಸಮಗಾರರಿಗೆ ಮಾರುತ್ತಿದ್ದರು. ಹೀಗೆ ಚರ್ಮಸಂಬಂಧಿತ ಈ ಅಸ್ಪೃಶ್ಯರ ವೃತ್ತಿಗಳನ್ನು ಕಾಯಕಗಳನ್ನಾಗಿ ಮಾಡಿದ ಶರಣರು, ಇವರ ಕಾಯಕಗಳನ್ನು ಗೌರವದಿಂದ ಕಂಡರು. ಸಮಗಾರ ಹರಳಯ್ಯ-ಕಲ್ಯಾಣಮ್ಮ ತಮ್ಮ ತೊಡೆಯ ಚರ್ಮದಿಂದ ಚಮ್ಮಾವುಗೆ ಮಾಡಿ ಬಸವಣ್ಣನಿಗೆ ಕೊಟ್ಟರೆ, ಬಸವಣ್ಣನು ಅವುಗಳನ್ನು ತಲೆಯ ಮೇಲೆ ಹೊತ್ತುಕೊಂಡು ಗೌರವ ಕೊಟ್ಟದ್ದು ಮುಖ್ಯವಾಗುತ್ತದೆ.

ಈ ಅಂಕಣದ ಹಿಂದಿನ ಬರಹಗಳು:
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು
ವಸುಮತಿ ಉಡುಪ ಅವರ –“ಮೃಗತೃಷ್ಣಾ”
ಜಯಶ್ರೀ ಕಂಬಾರ ಅವರ – “ಮಾಧವಿ”
ವಿಜಯಶ್ರೀ ಸಬರದ ಅವರ –“ಉರಿಲಿಂಗ”
ಲಲಿತಾ ಸಿದ್ಧಬಸವಯ್ಯನವರ “ಇನ್ನೊಂದು ಸಭಾಪರ್ವ”
ಎಂ. ಉಷಾ ಅವರ-“ಶೂಲಿ ಹಬ್ಬ” (2015)
ಪಿ. ಚಂದ್ರಿಕಾ ಅವರ “ಮೋದಾಳಿ”
ದು.ಸರಸ್ವತಿಯವರ-“ರಾಮಾಯ್ಣ”
ಮಹಿಳಾ ವೃತ್ತಿನಾಟಕಗಳ ಪ್ರಾಯೋಗಿಕ ವಿಮರ್ಶೆ
ಮಹಿಳಾ ರಂಗಭೂಮಿ ಪರಂಪರೆ

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...