ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ

Date: 27-06-2022

Location: ಬೆಂಗಳೂರು


“ಶರಣರು 12ನೇ ಶತಮಾನದಲ್ಲಿ ಕಾಯಕಗಳ ಮಹತ್ವವನ್ನರಿತುಕೊಂಡು ಕಾಯಕಗಳನ್ನು ಬೆಳೆಸಿದರೆ, ಇಂದು ಕೌಶಲ್ಯಮೂಲ ಕಾಯಕಗಳು ದೂರ ಸರಿದಿವೆ. ಶರಣರ ದೇಸೀಕರಣಕ್ಕೂ ಇಂದಿನ ಜಾಗತೀಕರಣಕ್ಕೂ ಬಹುದೊಡ್ಡ ಅಂತರವಿದೆ” ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣರ ಸಾಮಾಜಿಕ ಸಿದ್ಧಾಂತಗಳು ಅಂಕಣದಲ್ಲಿ ಕೌಶಲ್ಯಮೂಲ ಕಾಯಕಗಳ ಬಗ್ಗೆ ವಿವರಿಸುತ್ತ, ಶರಣರ ಪಾಲಿಗೆ ವೃತ್ತಿಯು ಆಧ್ಯಾತ್ಮದ ಮಾರ್ಗವಾಗಿದ್ದ ಬಗೆಯನ್ನು ವಿಶ್ಲೇ಼ಷಿಸಿದ್ದಾರೆ.

2. ಕೌಶಲ್ಯಮೂಲ ಕಾಯಕಗಳು
ಕೌಶಲ್ಯಮೂಲ ಕಾಯಕಗಳು, ಉತ್ಪಾದನಾ ಮೂಲ ಕಾಯಕಗಳಷ್ಟೇ ಮುಖ್ಯವಾಗಿವೆ. ಕೃಷಿಕಾಯಕದಲ್ಲಿ ರೈತನು ಆಯಗಾರರ ಸಹಕಾರದೊಂದಿಗೆ ಆಹಾರ ವಸ್ತುಗಳನ್ನು ಬೆಳೆದು ನಾಡಿಗೆ ಕೊಟ್ಟರೆ, ಕೌಶಲ್ಯಮೂಲ ಕಾಯಕಗಳ ಮುಖಾಂತರ ಕುಶಲಕರ್ಮಿಗಳು ಕಚ್ಚಾ ವಸ್ತುಗಳನ್ನು ಪಕ್ಕಾವಸ್ತುಗಳನ್ನಾಗಿ ಸಿದ್ಧಪಡಿಸಿಕೊಡುತ್ತಾರೆ. ಕುಶಲಕರ್ಮಿಗಳು ಹೆಚ್ಚು ಸೃಜನಶೀಲರಾಗಿರುತಾರೆ. ರೈತ ಹತ್ತಿಯನ್ನು ಬೆಳೆಯುತ್ತಾನೆ. ಹತ್ತಿಯು, ಬಟ್ಟೆ ಸಿದ್ಧಪಡಿಸಲು ಮೂಲ ಸಾಮಗ್ರಿಯಾಗಿದೆ. ಹಾಗೆಂದು ಹತ್ತಿಯನ್ನೇ ಮೈಗೆ ಸುತ್ತಿಕೊಳ್ಳಲಿಕ್ಕಾಗುವುದಿಲ್ಲ. ಹತ್ತಿಯಿಂದ ನೂಲು ತೆಗೆದು, ಆ ನೂಲಿನಿಂದ ಬಟ್ಟೆಯನ್ನು ಮಾಡುವ ನೇಕಾರ ಪ್ರಮುಖ ಕುಶಲಕರ್ಮಿಯಾಗಿದ್ದಾನೆ. ಇದೇ ರೀತಿ ಮಣ್ಣಿನಿಂದ ಮಡಕೆ ಮಾಡುವ ಕುಂಬಾರ, ಕಬ್ಬಿಣದಿಂದ ಕೃಷಿ ಸಲಕರಣೆಗಳನ್ನು ಮಾಡುವ ಕಮ್ಮಾರ, ನಾರಿನಿಂದ ನುಲಿ ಮಾಡಿ ಹಗ್ಗ-ಕಣ್ಣಿಗಳನ್ನು ಮಾಡುವ ನುಲಿಕಾರ, ತೊಗಲಿನಿಂದ ಪಾದರಕ್ಷೆ ಮಾಡುವ ಸಮಗಾರ ಇವರೆಲ್ಲ ಮಹತ್ವದ ಕುಶಲ ಕರ್ಮಿಗಳಾಗಿದ್ದಾರೆ. ಕೃಷಿಕಾಯಕದಲ್ಲಿ ಮೂಲವಸ್ತು ಬಂದರೆ, ಇಲ್ಲಿ ಸಿದ್ಧ ವಸ್ತುಗಳು ಹೊರಬರುತ್ತವೆ. ಮೂಲದಲ್ಲಿದ್ದ ಕಚ್ಚಾ ವಸ್ತುವಿನ ರೂಪ ಹೊರಟ್ಹೋಗಿ, ಪಕ್ಕಾ ವಸ್ತುವಿನಲ್ಲಿ ಹೊಸ ರೂಪ ವಿನ್ಯಾಸಗಳು ಕಾಣಿಸಿಕೊಳ್ಳುತ್ತವೆ. ತಳವರ್ಗದಿಂದ ಬಂದ ಕುಶಲಕರ್ಮಿಗಳ ಕಾಯಕಗಳು ತುಂಬ ಮಹತ್ವದವುಗಳಾಗಿವೆ. ಬ್ರಿಟೀಷ್ ವಸಾಹತು ಮೂಲಕ ದೊಡ್ಡ ದೊಡ್ಡ ಕೈಗಾರಿಕೆಗಳು ಪ್ರಾರಂಭವಾದ ನಂತರ, ಕುಶಲಕರ್ಮಿಗಳು ತೊಂದರೆಗೊಳಗಾದರು. ಎಂ.ಎನ್.ಸಿ. ಕಂಪನಿಗಳು ಈ ಕೆಲಸ ಮಾಡಲು ತೊಡಗಿದಾಗಿನಿಂದ ಕುಶಲ ಕಾರ್ಮಿಕರು ಇಂದು ಬೀದಿ ಪಾಲಾಗಿದ್ದಾರೆ. ಶರಣರು 12ನೇ ಶತಮಾನದಲ್ಲಿ ಇಂತಹ ಕಾಯಕಗಳ ಮಹತ್ವವನ್ನರಿತುಕೊಂಡು ಆ ಕಾಯಕಗಳನ್ನು ಬೆಳೆಸಿದರೆ, ಇಂದು ಕೌಶಲ್ಯಮೂಲ ಕಾಯಕಗಳು ದೂರ ಸರಿದಿವೆ. ಶರಣರ ದೇಸೀಕರಣಕ್ಕೂ ಇಂದಿನ ಜಾಗತೀಕರಣಕ್ಕೂ ಬಹುದೊಡ್ಡ ಅಂತರವಿದೆ. ಹೀಗಾಗಿ ಹಿಂದಿಗಿಂತ ಇಂದು ಶರಣರ ಕಾಯಕಸಂಬಂಧಿ ವಿಚಾರಗಳು ಪ್ರಸ್ತುತವೆನಿಸುತ್ತವೆ. ಜಾತಿಯಿಂದ ವೃತ್ತಿಯಿಂದ ಕೀಳಾದವರನ್ನು ಹಾಗೂ ಅಸಹಾಯಕರನ್ನು ಕಾಯಕತತ್ವದ ಮೂಲಕ ಮೇಲೆತ್ತಿದ ವಚನಚಳವಳಿ, ಕುಶಲಕರ್ಮಿಗಳಿಗೆ ಪ್ರಾಮುಖ್ಯತೆ ನೀಡಿತು. ಅವರನ್ನು ಜಾಣರೆಂದು, ಕುಶಲರೆಂದು ಭಾವಿಸುವಂತೆ ಮಾಡಿತು. ಮಣ್ಣು ಮಡಕೆಯಾದಂತೆ, ಈ ಕಾಯಕಜೀವಿಗಳ ದೇಹ-ದೇವಾಲಯವಾಯಿತು. ನೂಲು ಬಟ್ಟೆಯಾದಂತೆ, ಅವರ ಆತ್ಮ-ಪರಮಾತ್ಮನ ಸ್ವರೂಪ ಪಡೆದುಕೊಂಡಿತು. ಇಂತಹ ಕ್ರಾಂತಿಕಾರಿಗುಣ ಈ ಕಾಯಕಗಳಲ್ಲಿದೆ.

i) ನೇಕಾರಿಕೆ
ಆದಿಮಾನವ ಎಲೆ, ಚರ್ಮಗಳಿಂದ ಮೈಮುಚ್ಚಿಕೊಳ್ಳುತ್ತಿದ್ದ. ನಾಗರಿಕತೆ ಬೆಳೆದಂತೆ ನೂಲಿನಿಂದ ಬಟ್ಟೆಯನ್ನು ಸಿದ್ಧಪಡಿಸಿ ಉಡತೊಡಗಿದ. 12ನೇ ಶತಮಾನದ ಹೊತ್ತಿಗೆ ನೇಕಾರಿಕೆ ವೃತ್ತಿ ಬೆಳೆದುನಿಂತಿತ್ತು. ಈ ವೃತ್ತಿಯನ್ನು ಕಾಯಕವನ್ನಾಗಿ ಮಾಡಿದ ಶರಣರು ಈ ಕಾಯಕಕ್ಕೆ ಗೌರವ ತಂದುಕೊಟ್ಟರು. ``ಹಾಸನಿಕ್ಕಿ ಸಾಲಿಗನಾದ’’ ಎಂಬ ಬಸವಣ್ಣನ ಮಾತು ನೇಕಾರಿಕೆಯ ಪ್ರಸ್ತಾಪ ಮಾಡುತ್ತದೆ. ಕ್ರಿ. ಶ. 1148 ರ ಗೊಬ್ಬೂರು ಶಾಸನದಲ್ಲಿ ``ಜಾಡ ಕುಲತಿಲಕ ದಾಸಿಮಯ್ಯ’’ ಎಂದು ಜೇಡರ ದಾಸಿಮಯ್ಯ ಮತ್ತು ಆತನ ಮಕ್ಕಳ ಪ್ರಸ್ತಾಪವಿದೆ.

ಅಮುಗಿ ದೇವಯ್ಯನೂ ನೇಕಾರಿಕೆಯ ಕಾಯಕ ಮಾಡುತ್ತಿದ್ದ ಅಮುಗಿದೇವಯ್ಯನ ಪತ್ನಿ ವರದಾನಿ, ಕದಿರ ಕಾಯಕದ ರೆಮ್ಮವ್ವೆ ಇವರೆಲ್ಲಾ ಇದೇ ಕಾಯಕವನ್ನು ಮಾಡುತ್ತಿದ್ದರು

``ಉಂಕೆಯ ನಿಗುಚಿ ಸರಿಗೆಯ ಸಮಗೊಳಿಸಿ
ಸಮಗಾಲನಿಕ್ಕಿ ಅಣಿಮೇಳ ಮುಟ್ಟದೆ
ಹಿಡಿದ ಲಾಳಿಯ ಮುಳ್ಳು ಕಂಡಿಕೆಯ ನುಂಗಿತ್ತು
ಈ ಸೀರೆಯ ನೆಯ್ದವ ನಾನೊ ನೀನೋ ರಾಮನಾಥ’’
- ಜೇಡರ ದಾಸಿಮಯ್ಯ (ಸ.ವ.ಸಂ. 7, ವ : 746)

ಈ ವಚನದಲ್ಲಿ ಜೇಡರದಾಸಿಮಯ್ಯನು ವೃತ್ತಿ ಪ್ರತಿಮೆಯ ಮೂಲಕ ನೆಯ್ಗೆಯ ಮಹತ್ವವನ್ನು ಹೇಳಿದ್ದಾನೆ. ನೂಲಿನ ಹಾಸಿಗೆಗೆ ಉಂಕೆಯೆಂದು ಕರೆಯುತ್ತಾರೆ. ಇಂತಹ ನೂಲಿನ ಹಾಸನ್ನು ಅಗಲಮಾಡಿ ಹರಡಿ (ಸರಿಗೆ) ದಾರವನ್ನು ಸರಿಮಾಡಿ ಸೀರೆಯನ್ನು ಸಿದ್ಧಪಡಿಸುವ ವಿಧಾನವನ್ನು ಹೇಳುತ್ತಲೇ ಸೀರೆನೇಯ್ದವನ ಮಹತ್ವವನ್ನು ಹೇಳಲಾಗಿದೆ.

``ನಾ ತಿರುಹುವ ರಾಟೆಯ ಕುಲಜಾತಿಯ ಕೇಳಿರಣ್ಣಾ
ಅಡಿಯ ಹಲಗೆ ಬ್ರಹ್ಮ, ತೋರಣ ವಿಷ್ಣು
ನಿಂದ ಬೊಂಬೆ ಮಹಾರುದ್ರ....’’
- ಕದಿರ ರೆಮ್ಮವ್ವೆ (ಸ. ವ. ಸಂ. 5. ವ : 747)

ಈ ವಚನದಲ್ಲಿ ಕದಿರ ರೆಮ್ಮವ್ವೆ ನೆಯ್ಗೆಯ ವಿವರಗಳನ್ನು ಹೇಳುತ್ತ ಆಧ್ಯಾತ್ಮದ ಪರಿಭಾಷೆಯಲ್ಲಿ ಈ ಕಾಯಕದ ಮಹತ್ವವನ್ನು ಹೇಳಿದ್ದಾಳೆ. ಇಲ್ಲಿ ಅರಿವೆಂಬುದೇ ಕದಿರಾಗಿದೆ. ತಿರುಗುವ ಕ್ರಿಯೆಯೇ ಭಕ್ತಿಯಾಗಿದೆ. ಹೀಗೆ ಅನೇಕ ವಚನಗಳಲ್ಲಿ ನೇಕಾರಿಕೆಯ ಕಾಯಕದ ಮಹತ್ವವನ್ನು ವಚನಕಾರರು ಹೇಳಿದ್ದಾರೆ.

ii) ಕುಂಬಾರಿಕೆ
ಕುಂಬಾರನು ಆಯಗಾರನೂ ಹೌದು, ಕೌಶಲ್ಯ ಕಾಯಕದವನೂ ಹೌದು ಮಣ್ಣಿನಿಂದ ಮಡಿಕೆ, ಕುಡಿಕೆ, ಪಾತ್ರೆಗಳನ್ನು ಮಾಡುವ ಕುಂಬಾರನು ಕೃಷಿಕ ಕುಟುಂಬಕ್ಕೆ ನೆರವಾಗುವ ಮಹತ್ವದ ಆಯಗಾರನೂ ಆಗಿದ್ದಾನೆ. ಕುಂಬಾರ ಎಂಬುದು ಕುಂಭಕಾರ ಪದದತದ್ಭವವಾಗಿದೆ. ಕುಂಬಾರನನ್ನು ಕುಲಾಲ, ಚಕ್ರಸಾಲಿ, ಗುನಗ, ದಂಡಧರ, ಕುಂಭಕಾರ ಈ ಮೊದಲಾದ ಹೆಸರುಗಳಿಂದ ಕರೆಯಲಾಗುತ್ತದೆ. ಶರಣರಲ್ಲಿ ಕುಂಬಾರ ಗುಂಡಯ್ಯ ಪ್ರಸಿದ್ಧಿ ಪಡೆದಿದ್ದಾನೆ. ಕ್ರಿ.ಶ. 1225 ರ ತೇರದಾಳ ಶಾಸನದಲ್ಲಿ ಕುಂಬಾರನ ಉಲ್ಲೇಖವಿದೆ.

``ಮಡಕೆಯ ಮಾಡುವಡೆ ಮಣ್ಣೆಮೊದಲು’’ (ವ. 70) ಎಂದು ಹೇಳುರುವ ಬಸವಣ್ಣ ಮಡಿಕೆಯ ಮೂಲಕ ಮಣ್ಣಿನ ಮಹತ್ವವನ್ನು ಹೇಳಿದ್ದಾನೆ. `ನಿನ್ನಾಳಿ ಕುಂಬಾರನ ಕೆಲಸದಂತೆ (ವ. 1258)’’ ಎಂದು ಬಸವಣ್ಣ ಕೂಡಲಸಂಗಮನನ್ನು ಕುರಿತು ಹೇಳಿದ್ದಾನೆ. ಅಂಬಿಗರ ಚೌಡಯ್ಯನು ತನ್ನ ವಚನವೊಂದರಲ್ಲಿ ಕುಂಬಾರ ಗುಂಡಯ್ಯನ ಮನೆಯ ಕತ್ತೆಯ ಪ್ರಸ್ತಾಪ ಮಾಡಿದ್ದಾನೆ.

``ಆವ ಮಡಕೆಯಾಗಲಿ ಸ್ವಾದ ಸಾಕಾರದಲ್ಲಿ ಭೇದವಿಲ್ಲ
ಮಣ್ಣಮಡಕೆ ಒಕ್ಕಲಿಗನಲ್ಲಿ
ಚಿನ್ನದ ಮಡಕೆ ಅರಮನೆಯಲ್ಲಿ...’’
- ಕಿನ್ನರಿ ಬ್ರಹ್ಮಯ್ಯ (ಸ.ವ.ಸಂ. 7, ವ. 49)

``ಆಡುವ ಮಡಕೆಯ ತೋರಿ ಶಿಶುವಿನ ಹಸುವ ಅಡಗಿಸುವವಳಂತೆ
ಬರಿದೆ ಗುಮ್ಮನಿದೆಯೆಂದು ಶಿಶುವ ಬೆದರಿಸಿ
ಹಸುಳೆಯ ಅಡಗಿಸುವವಳಂತೆ...’’
- ದಾಸೋಹದ ಸಂಗಣ್ಣ (ಸ.ವ.ಸಂ. 7, ವ. 1074)

ಈ ಎರಡು ವಚನಗಳಲ್ಲಿ ಕುಂಬಾರನ ಮಡಕೆಯ ಮಹತ್ವವನ್ನು ಹೇಳಲಾಗಿದೆ. ಒಕ್ಕಲಿಗನಲ್ಲಿರುವ ಮಣ್ಣಿನ ಮಡಕೆ, ಅರಮನೆಯಲ್ಲಿರುವ ಚಿನ್ನದ ಮಡಕೆಗಿಂತಲೂ ಮಹತ್ವದ್ದೆಂದು ಕಿನ್ನರಿಬ್ರಹ್ಮಯ್ಯ ಹೇಳಿದ್ದಾನೆ. ಮಣ್ಣಿನಿಂದ ಆಟಿಕೆ ಸಾಮಾನು ತಯಾರಿಸಿ, ಅದನ್ನು ಮಕ್ಕಳಿಗೆ ತೋರಿಸಿದಾಗ ಅವು ಹಸಿವನ್ನೇ ಮರೆತು ಕುಂಬಾರನ ಆಟಿಕೆಗಳಿಗೆ ಆಕರ್ಷಿತವಾಗುತ್ತಿದ್ದವೆಂದು ದಾಸೋಹದ ಸಂಗಣ್ಣ ಹೇಳಿದ್ದಾನೆ. ಕುಂಬಾರಿಕೆಯು ಮಹತ್ವದ ಕಾಯಕವಾಗಿದ್ದು. ಅನೇಕ ಶರಣರು, ಈ ಕಾಯಕದ ವಿಶಿಷ್ಟತೆಗಳನ್ನು ಕುರಿತು ವಚನಗಳಲ್ಲಿ ಪ್ರಸ್ತಾಪಿಸಿದ್ದಾರೆ.

iii) ಮೇದಾರಿಕೆ
ಬಿದಿರಿನಿಂದ ಅನೇಕ ಸಾಮಾನುಗಳನ್ನು ಸಿದ್ಧಪಡಿಸುವ ಕಾಯಕವೇ ಮೇದಾರಿಕೆಯಾಗಿದೆ. ಬಿದಿರಿನಿಂದ ಸಿದ್ಧಪಡಿಸಿದ ಆಟಿಕೆಗಳು ಮಕ್ಕಳ ಮನಸ್ಸನ್ನು ಸೆಳೆದರೆ, ನಿಚ್ಚಣಿಕೆ, ಬೊಂಬು, ನಂದಿಕೋಲು, ರೈತರ ಸಾಮಗ್ರಿಗಳು ಇವೆಲ್ಲ ಮೇದಾರನಿಂದಲೇ ಮಾಡಲ್ಪಡುತ್ತವೆ. ಮೇದಾರಿಕೆ ಕೌಶಲ್ಯ ಕಾಯಕವಾಗಿರುವುದರ ಜತೆಗೆ ಅಗತ್ಯ ವಸ್ತುಗಳ ತಯಾರಿಕೆಯ ಕಾಯಕವೂ ಆಗಿದೆ. ಎಲ್ಲದಕ್ಕೂ ಬಿದಿರು ಬೇಕು. ಆದರೆ ಆ ಬಿದಿರನ್ನು ಹಾಗೆಯೇ ಉಪಯೋಗಿಸಲಿಕ್ಕಾಗುವುದಿಲ್ಲ. ಅದು ಮೇದಾರನ ಕೈಯಲ್ಲಿ ಕರಕುಶಲ ಕಲೆಯಾಗಿ ಅರಳಿ, ದಿನನಿತ್ಯದ ವಸ್ತುಗಳ ಬೇಡಿಕೆಯಾಗಿ ಮಹತ್ವ ಪಡೆದಿದೆ.

``ಬಿದಿರಲಂದಣವಕ್ಕು, ಬಿದಿರೆ ಸತ್ತಿಗೆಯಕ್ಕು,
ಬಿದಿರಲ್ಲಿ ಗುಡಿಯು ಗೂಡಾರವಕ್ಕು,
ಬಿದಿರಲ್ಲಿ ಸಕಲ ಸಂಪದವೆಲ್ಲವು
ಬಿದಿರದವರ ಮೆಚ್ಚ ಕೂಡಲಸಂಗಮದೇವ.’’
- ಬಸವಣ್ಣ (ಸ.ವ.ಸಂ. ವ : 221)

ಬಸವಣ್ಣ ಬಿದಿರಿನ ಮಹತ್ವವನ್ನು ಈ ವಚನದಲ್ಲಿ ಹೇಳಿದ್ದಾನೆ. ಮೇದಾರರು ಬಿದಿರಿನಿಂದ ಅಂದಣ (ಪಲ್ಲಕ್ಕಿ), ಸತ್ತಿಗೆ (ಛತ್ರಿ) ಹಾಗೂ ಗುಡಿಯ ಬಾಗಿಲು, ಗುಡಿಸಲಿನ ಚಾಪೆ, ತಡಿಕೆ ಈ ಮೊದಲಾದವುಗಳನ್ನು ಮಾಡಿಕೊಡುತ್ತಿದ್ದರೆಂದು ಈ ವಚನದಲ್ಲಿ ಹೇಳಿದ್ದಾನೆ. ಹೀಗಾಗಿ ಬಿದಿರಲ್ಲಿ ಸಕಲ ಸಂಪದವಿದೆಯೆಂದು ತಿಳಿಸಿದ್ದಾನೆ.

``ಒಂದು ಬಿದಿರಿಂಗೆ ಕವೆ ಮೂರು, ಆ ಕವೆಯ ಒಳಗೆ ಲಕ್ಕ ಸಿಬಿರು
ಮೂರು ಕವೆಯ ಕೊಚ್ಚಿಸಿ, ಬಿಲ್ಲ ಸಿಕ್ಕ ಬಿಡಿಸಿ. ಸೀಳಿದ ಬಿದಿರ
ಹೊರೆ ಹೊರೆಯಲ್ಲಿ ನೆಯಿದೆ, ತೊಟ್ಟಿಲಸಂದ ಕಾಣದಂತೆ
ನಾಲ್ಕು ಕಾಲನಿಕ್ಕಿ, ಅಂದವಾದ ತೊಟ್ಟಿಲ ದಂಡೆಯನಿಕ್ಕಿ,
ಕಟ್ಟುವದಕ್ಕೆ ಶ್ರುತ ದೃಷ್ಟವೆಂಬೆರಡು, ದಾರದಲ್ಲಿ ತೊಟ್ಟಿಲಕಟ್ಟಿ
ಗವರೇಶ್ವರ ಲಿಂಗಕ್ಕೆ ಹುಟ್ಟುಗೆಟ್ಟು ಹೋಗೊ ಎಂದು ಜೋಗುಳವಾಡಿದೆ.’’
- ಮೇದರ ಕೇತಯ್ಯ (ಸ.ವ.ಸಂ. 8, ವ : 1403)

ಈ ವಚನದಲ್ಲಿ ಮೇದರ ಕೇತಯ್ಯನು ಬಿದಿರಿನಿಂದ ಸಿದ್ಧಪಡಿಸುವ ಸಲಕರಣೆಗಳನ್ನೆಲ್ಲ ವಿವರಿಸಿ, ಕೊನೆಗೆ ಅದಕ್ಕೆ ಆಧ್ಯಾತ್ಮದ ಆಯಾಮ ನೀಡಿದ್ದಾನೆ. ಕವೆಯೆಂದರೆ ಕವಲು, ಬಿದಿರನ್ನು ಮೂರು ಕವಲುಗಳನ್ನಾಗಿ ಮಾಡಿ ಅದರಲ್ಲಿ ಸಿಬಿರಿನ ಮೂರು ಕವಲುಗಳನ್ನು ಸೇರಿಸಿ ಬಿದಿರಿನ ತೊಟ್ಟಿಲನ್ನು ಮಾಡುವ ವಿಧಾನ ಕುರಿತು ಹೇಳಿದ್ದಾನೆ. ಮೇದಾರಿಕೆಯ ಕಾಯಕದ ಬಗೆಗೆ ಇನ್ನೂ ಕೆಲವು ವಚನಗಳಲ್ಲಿ ಉಲ್ಲೇಖಿಸಲಾಗಿದೆ.

iv) ಅಕ್ಕಸಾಲಿಗ
ಅಕ್ಕಸಾಲಿಗ ಕಾಯಕ ಕೂಡಾ ಕೌಶಲ್ಯಪ್ರಧಾನ ಕಾಯಕವೇ ಆಗಿದೆ. ಅಕ್ಕಸಾಲಿಗರು ಬೆಳ್ಳಿ ಬಂಗಾರದ ಆಭರಣಗಳನ್ನು ತಯಾರಿಸುತ್ತಾರೆ. ಇವರನ್ನು ಚಿನಿವಾರ, ಪತ್ತಾರ, ಸೊನ್ನಗಾರ, ಚಿನಿಪಾಲಿ, ಆಚಾರಿ, ವಿಶ್ವಕರ್ಮ ಈ ಮೊದಲಾದ ಹೆಸರುಗಳಿಂದ ಕರೆಯುತ್ತಾರೆ. ನೈಪುಣ್ಯತೆ, ಕುಶಲಗಾರಿಕೆ ಈ ಕಾಯಕದಲ್ಲಿ ಮುಖ್ಯವಾದವುಗಳಾಗಿವೆ. ಅಕ್ಕಸಾಲಿಗರ ಮೂಲ ಪುರುಷನೇ ವಿಶ್ವಕರ್ಮನಾಗಿದ್ದಾನೆ. ಅರ್ಕ ಎಂಬ ಪದದಿಂದ ಅಕ್ಕಸಾಲಿಗ ಪದ ಹುಟ್ಟಿಕೊಂಡಿದೆ. ಅರ್ಕ ಎಂದರೆ ಅರಗು, ಅರಗು ಕೂಡಿಸಿ ಆಭರಣ ಮಾಡುವ ಶಾಲೆಯೇ ಅರ್ಕಶಾಲೆ, 11ನೇ ಶತಮಾನದ ಶಾಸನಗಳಲ್ಲಿ ಅಕ್ಕಸಾಲೆಯೆಂಬ ಪದ ಕಾಣಿಸಿಕೊಂಡಿದೆ.

12ನೇ ಶತಮಾನದ ಶರಣರಲ್ಲಿ ಕಿನ್ನರಿ ಬ್ರಹ್ಮಯ್ಯ ಮೊದಲು ಅಕ್ಕಸಾಲಿಗನಾಗಿದ್ದ. ಆಂಧ್ರದ ಪೊಡೂರು ಗ್ರಾಮದಲ್ಲಿ ಅಕ್ಕಸಾಲಿಗನಾಗಿದ್ದ ಬ್ರಹ್ಮಯ್ಯ, ಗುರುವಿನ ಆಭರಣದಲ್ಲಿ ತೂಕ ಕಡಿಮೆಯಾಗಿದ್ದಕ್ಕೆ ಮನನೊಂದು ಆ ವೃತ್ತಿಯನ್ನೇ ಬಿಟ್ಟು ಕಲ್ಯಾಣಕ್ಕೆ ಬಂದು ಕಿನ್ನರಿ ನುಡಿಸುವ ಕಾಯಕ ಮಾಡತೊಡಗಿದ. ಹೊನ್ನ ಕಾಯಕದ ಬೊಮ್ಮಯ್ಯ, ಕನಕದ ನಾಚಯ್ಯ, ಮೌಕ್ತಿಕದ ಸಂಗಯ್ಯ, ರತ್ನದ ರಾಚಯ್ಯ ಹಾವಿನಹಾಳ ಕಲ್ಲಯ್ಯ ಇವರೆಲ್ಲ ಅಕ್ಕಸಾಲಿಗ ಕಾಯಕದ ಶರಣರೆಂದು ತಿಳಿದುಬರುತ್ತದೆ.

``ಚಿನಿಪಾಲ ಚಿನ್ನದ ಹರಿವಾಣದಲ್ಲಿ ಭೋಗಿಪುದು ಭೂಷಣವಲ್ಲದೆ
ಮಣ್ಣ ಹರಿವಾಣದಲ್ಲಿ ಭೂಷಣವೆ ?....’’
- ಕಿನ್ನರಿ ಬ್ರಹ್ಮಯ್ಯ (ಸ.ವ.ಸಂ. 7, ವ : 55)

ಚಿನಿಪಾಲನ ಚಿನ್ನದ ಹರಿವಾಣಕ್ಕೆ ಪ್ರಾಮುಖ್ಯತೆ ನೀಡಿದ್ದ ಕಿನ್ನರಿ ಬ್ರಹ್ಮಯ್ಯ, ಅಕ್ಕಸಾಲಿಗನ ವೃತ್ತಿಯನ್ನು ಬಿಟ್ಟು, ಕಲ್ಯಾಣದಲ್ಲಿ ಕಿನ್ನರಿ ಕಾಯಕ ಮಾಡತೊಡಗಿದಾಗ ಮಣ್ಣಹರಿವಾಣವೇ ಶ್ರೇಷ್ಠವೆನಿಸಿತು. ಹಾವಿನಹಾಳ ಕಲ್ಲಯ್ಯನ ವಚನಗಳಲ್ಲಿ ಅಕ್ಕಸಾಲಿಗ ವೃತ್ತಿಗೆ ಸಂಬಂಧಿಸಿದ ವಿವರಗಳಿಲ್ಲ. ಅಕ್ಕಸಾಲಿಗ ವೃತ್ತಿಯಲ್ಲಿ ಮೋಸವಾಗುತ್ತಿತ್ತು. ಬಂಗಾರಕ್ಕೆ ಹೆಚ್ಚು ಪ್ರಮಾಣದಲ್ಲಿ ಸೀಸ ಕೂಡಿಸಿ ಬಂಗಾರ ಕದಿಯುತ್ತಿದ್ದ ಅಕ್ಕಸಾಲಿಗರಿಗೆ ಸಮಾಜದಲ್ಲಿ ಗೌರವವಿರಲಿಲ್ಲ. ಇದನ್ನೇ ಜೇಡರ ದಾಸಿಮಯ್ಯ, ಚೆನ್ನಬಸವಣ್ಣ ಮೊದಲಾದ ವಚನಕಾರರು ತಮ್ಮ ವಚನಗಳಲ್ಲಿ ಪ್ರಸ್ತಾಪಿಸಿದ್ದಾರೆ. ಆ ಎಲ್ಲ ಮೋಸಗಳನ್ನು ಬಿಟ್ಟು ಸತ್ಯಶುದ್ಧ ಕಾಯಕ ಮಾಡಬೇಕೆಂದು ಹೇಳಿದ್ದಾರೆ. ಹಾವಿನಹಾಳ ಕಲ್ಲಯ್ಯನಂತಹ ಅಕ್ಕಸಾಲಿಗ ಕಾಯಕದ ಶರಣರು ಈ ಕಾಯಕಕ್ಕೆ ಪಾವಿತ್ರತೆಯನ್ನು ತಂದು ಕೊಟ್ಟಿದ್ದಾರೆ.

v) ಬಡಿಗ
ಬಡಿಗ ಆಯಗಾರನೂ ಹೌದು, ಕುಶಲ ಕರ್ಮಿಯೂ ಹೌದು ರೈತನ ಕೃಷಿ ಸಾಮಗ್ರಿಗಳಾದ ಕುಂಟಿ, ನೇಗಿಲು, ಬುಕ್ಕಾ, ಚಕ್ಕಡಿ ಈ ಮೊದಲಾದವುಗಳನ್ನು ಸಿದ್ಧಪಡಿಸುತ್ತಿದ್ದ ಬಡಿಗನು, ಕಟ್ಟಿಗೆಯಿಂದ ಮಾಡುತ್ತಿದ್ದ ಬೊಂಬೆಗಳಲ್ಲಿ ತನ್ನ ಕೌಶಲ್ಯವನ್ನು ತೋರಿಸುತ್ತಿದ್ದ. ಬಡಗಿ, ಬಡಿಗ, ಬಡಿಗೇರ, ಮರಗೆಲಸದವನೆಂದು ಈತನನ್ನು ಕರೆಯಲಾಗುತಿತ್ತು. ವರ್ಧಕಿಯೆಂದರೆ ಕತ್ತರಿಸು, ಕಡಿಯೆಂಬ ಅರ್ಥಗಳಿವೆ. ವರ್ಧಕಿ ಪದವೇ ಬಡ್ಡಕಿಯಾಗಿ, ಅದೇ ಮುಂದೆ ಬಡಗಿಯಾಗಿರಬಹುದಾಗಿದೆ. ಅರೆಕುಶಲಕರ್ಮಿ ಬಡಿಗರು ಆಯಗಾರರಾಗಿ ರೈತರ ಕೃಷಿ ಸಲಕರಣೆಗಳನ್ನು ಮಾಡಿಕೊಡುತ್ತಿದ್ದರೆ, ಕುಶಲಕರ್ಮಿ ಬಡಿಗರು ದೇವಾಲಯಗಳ ಕಂಬ, ಬಾಗಿಲು ಪಲ್ಲಕ್ಕಿ ರಥಗಳನ್ನು ಮಾಡಿ ತಮ್ಮ ಕೌಶಲ್ಯವನ್ನು ತೋರಿಸಿದ್ದಾರೆ. ಕಟ್ಟಿಗೆಯಲ್ಲಿ ಕೆತ್ತಲ್ಪಟ್ಟ ಅನೇಕ ಗ್ರಾಮ ದೇವತೆಗಳ ಶಿಲ್ಪಿಯೂ ಬಡಿಗನೇ ಆಗಿದ್ದಾನೆ. ಧಾರವಾಡ ಜಿಲ್ಲೆಯ ಚಿಕ್ಕಹಂದಿಗೋಳದ ಕ್ರಿ.ಶ. 1135 ರ ಶಾಸನದಲ್ಲಿ ಬಡಗಿಯ ಪ್ರಸ್ತಾಪವಿದೆ.

12ನೇ ಶತಮಾನದ ಶರಣರು ಬಡಗಿಯನ್ನು ಬಾಚಿಕಾಯಕದ ಶರಣನೆಂದು ಕರೆದರು. ಬಾಚಿಯು ಬಡಗಿಯ ಪ್ರಮುಖ ಸಲಕರಣೆಯಾಗಿದ್ದರಿಂದ ಬಾಚಿಕಾಯಕವೆಂಬ ಹೆಸರು ಪ್ರಚಲಿತಕ್ಕೆ ಬಂದಿರಬೇಕು. 12ನೇ ಶತಮಾನದ ಶರಣರಲ್ಲಿ ಬಾಚಿಕಾಯಕದ ಬಸವಣ್ಣನು ಹೆಸರು ವಾಸಿಯಾಗಿದ್ದಾನೆ. ಈತ ತನ್ನ ವಚನದಲ್ಲಿ ಬಾಚಿಕಾಯಕದ ವಿವರಗಳನ್ನು ನೀಡಿದ್ದು, ಈತ ರಚಿಸಿದ ವಚನಗಳೆಲ್ಲ ಗಾತ್ರದಲ್ಲಿ ದೀರ್ಘವಾಗಿವೆ. ಬಡಗಿ ಮಾಚಲ ದೇವಿಯ ಪ್ರಸ್ತಾಪವು ಬೇರೆ ವಚನಗಳಲ್ಲಿ ಬರುವುದನ್ನು ನೋಡಿದರೆ ಮಾಚಲದೇವಿಯೂ ಇದೇ ವೃತ್ತಿಯ ಮನೆತನಕ್ಕೆ ಸೇರಿರಬೇಕೆಂದು ತಿಳಿದು ಬರುತ್ತದೆ.

``ಆರು ದರ್ಶನವೆಲ್ಲ ಎನ್ನ ಬಾಚಿಯ ಕಲೆ,
ಮಿಕ್ಕಾದ ಮೀರಿದ ಅವಧೂತರುಗಳೆಲ್ಲ
ಎನ್ನ ಉಳಿಯೊಳಗಣ ಉಡುಪು
ಇಂತಿವ ಮೀರಿ ವೇಧಿಸಿ ಭೇದಿಸಿಹೆನೆಂಬವರೆಲ್ಲ
ಎನ್ನ ಕೊಡತಿಯಡಿಯಲ್ಲಿ ಬಡೆಯಿಸಿಕೊಂಬ ಬಡಿಹೋರಿಗಳು....’’
- ಬಾಚಿಕಾಯಕದ ಬಸವಣ್ಣ (ಸ.ವ.ಸಂ 8. ವ : 205)

ಈ ವಚನದಲ್ಲಿ ಬಾಚಿಕಾಯಕದ ಬಸವಣ್ಣನು ತನ್ನ ವೃತ್ತಿ ಪ್ರತಿಮೆಯ ಮೂಲಕ ಮಾತನಾಡಿದ್ದಾನೆ. ಷಡ್‍ದರ್ಶನಗಳೆಲ್ಲ ಬಾಚಿ ಕಾಯಕದ ಕಲೆಯೆಂದು ಈ ಶರಣ ಹೇಳಿದ್ದಾನೆ.

vi) ಕಂಚುಗಾರ :
ಕಂಚುಗಾರಿಕೆ ಸ್ವತಂತ್ರ ಕಾಯಕವಾಗಿರುವಂತೆ, ಕೌಶಲ್ಯಮೂಲ ಕಾಯಕವೂ ಆಗಿದೆ. ಕಂಚುಗಾರರನ್ನು ಶಾಸನಗಳಲ್ಲಿ ಕಂಚಗಾರ ಎಂದು ಪ್ರಸ್ತಾಪಿಸಲಾಗಿದೆ. ಕಂಚು, ಹಿತ್ತಾಳೆ, ತಾಮ್ರ, ಸೀಸ ಈ ಮೊದಲಾದ ಲೋಹಗಳನ್ನು ತಂದು ಕಾಯಿಸಿ ಚರಿಗೆ, ಪಾತ್ರೆ, ಗಿಂಡಿ, ಬಟ್ಟಲು, ತಾಟು, ಹಂಚು ಈ ಮೊದಲಾದ ಲೋಹದ ಪಾತ್ರೆಗಳನ್ನು ಇವರು ಸಿದ್ಧಪಡಿಸುತ್ತಿದ್ದರು. ಇವುಗಳ ಜತೆಗೆ ದೇವತಾ ವಿಗ್ರಹಗಳನ್ನು ಇವರು ತಯಾರಿಸುತ್ತಿದ್ದರು. ದೇವತಾ ಮೂರ್ತಿಗಳನ್ನು ಮಾಡುವಾಗ ಹೆಚ್ಚಿನ ಕೌಶಲ ಬೇಕಾಗುತ್ತದೆ. ಲೋಹಕ್ಕೆ ಮೂರ್ತಿರೂಪ ಕೊಟ್ಟು, ಆ ಮೂರ್ತಿಗಳು ಸುಂದರವಾಗಿ ಕಾಣಬೇಕಾದರೆ ಕಂಚುಗಾರರಲ್ಲಿ ಜಾಣ್ಮೆ, ಕುಶಲಗಾರಿಕೆ ಇರಬೇಕಾಗುತ್ತದೆ. ಇವರು ಪಾಂಚಾಳರ ಉಪವರ್ಗಕ್ಕೆ ಸೇರುತ್ತಾರೆ. ಕಾಳಿಕಾದೇವಿಯ ಭಕ್ತರಾಗಿದ್ದ ಇವರು 12ನೇ ಶತಮಾನದಲ್ಲಿ ಬಸವಣ್ಣ ಮೊದಲಾದ ಶರಣರ ಪ್ರಭಾವಕ್ಕೊಳಗಾಗಿ, ಲಿಂಗದೀಕ್ಷೆ ಪಡೆದು ಶರಣರಾದರು. ಕಂಚುಗಾರರನ್ನು ಮಲಹರ ಎಂದೂ ಕರೆಯಲಾಗುತ್ತಿತ್ತು.

ಶರಣರಲ್ಲಿ ಮಲಹರ ಕಾಯಕದ ಚಿಕ್ಕದೇವಯ್ಯ ಪ್ರಮುಖನಾಗಿದ್ದಾನೆ. ಈ ಶರಣನು ಕಂಚುಗಾರಿಕೆಯಲ್ಲಿ ನಿಪುಣನಾಗಿದ್ದನೆಂದು ತಿಳಿದುಬರುತ್ತದೆ. ``ಕಂಚುಗಾರನೇಸು ಭಕ್ತನಾದಡೆಯೂ ಕಾಳಿಕಾದೇವಿಯ ಹಂಗ ಬಿಡ (ವ-451)'' ಎಂದು ಹೇಳಿದ ಬಸವಣ್ಣನು ಉಣ್ಣುವ ಬಟ್ಟಲು, ನೋಡುವ ದರ್ಪಣ ಒಂದೇ ಕಂಚಿನಿಂದ ಮಾಡಲಾಗಿದೆಯೆಂದು ಹೇಳುತ್ತ ``ಅರಿದಡೆ ಶರಣ, ಮರೆದಡೆ ಮಾನವ'' ಎಂದು ಈ ಶರಣನ ಮಹತ್ವವನ್ನು ತಿಳಿಸಿದ್ದಾನೆ. ದಾಸಿಮಯ್ಯ ತನ್ನ ವಚನವೊಂದರಲ್ಲಿ ಅಕ್ಕಸಾಲಿಗರನ್ನು, ಕಂಚುಗಾರರನ್ನು ವಿಡಂಬಿಸಿದ್ದಾನೆ (ವ-825). ``ಸಂಚವ ಕಂಚುಗಾರ ಬಲ್ಲ'' ನೆಂದು ಮೋಳಿಗೆ ಮಾರಯ್ಯ ಹೇಳಿದ್ದಾನೆ.

``ಮುರಿಗಂಚು ತವರ ಹಿತ್ತಾಳೆ ತಾಮ್ರ
ಇವು ಮೊದಲಾದ ಲೋಹವ ತನ್ನಿ
ಕಳ್ಳವಣ, ಕಂದುವೆಳ್ಳ ಮೊದಲಾದ ರೊಕ್ಕವ ತನ್ನಿ
ನಿಮಗಲ್ಲದ ಒಡವೆ ಎನಗೆ
ನಿಮಗೆ ಒಳ್ಳಿಹ ಒಡವೆಯ ಕೊಡುವೆ....''
ಮಲಹರ ಕಾಯಕದ ಚಿಕ್ಕದೇವಯ್ಯ (ಸ.ವ.ಸಂ.8,ವ-1142)

ಹೀಗೆ ವೃತ್ತಿ ಪ್ರತಿಮೆಯ ಮೂಲಕ ಮಲಹರದ ಚಿಕ್ಕದೇವಯ್ಯನು ತನ್ನ ಅನೇಕ ವಚನಗಳಲ್ಲಿ ಆಧ್ಯಾತ್ಮದ ವಿಕಾಸವನ್ನು ಕಂಡುಕೊಂಡಿದ್ದಾನೆ. ಕಂಚು, ತಾಮ್ರ, ಹಿತ್ತಾಳೆ ಇವು ಮೂರು ಸೀಸದಂಗದ ಭೇದವೆಂದು ಹೇಳಿ, ಮನ, ಬುದ್ಧಿ, ಚಿತ್ತ ಇವು ಮೂರೂ ಅಹಂಕಾರದಂಗದೊಡಲು ಎಂದು ತಿಳಿಸಿದ್ದಾನೆ.

vii) ಸಿಂಪಿಗ :
ಸಿಂಪಿಗ ವೃತ್ತಿಯು ಸ್ವತಂತ್ರ ಕಾಯಕವಾಗಿರುವಂತೆ, ಕೌಶಲ್ಯದ ಕಾಯಕವೂ ಆಗಿದೆ. ಸಿಂಪಿಗನನ್ನು ಚಿಪ್ಪಿಗ ಎಂದೂ ಕರೆಯಲಾಗುತ್ತಿತ್ತು. ಇವರನ್ನು ಸಿಂಪಿಗ, ಚಿಪ್ಪಿಗ, ದರ್ಜಿ ಎಂದು ಕರೆಯುವ ವಾಡಿಕೆಯಿದೆ. ಶರಣರ ಕಾಲಕ್ಕೆ ಇವರನ್ನು ಸೂಜಿಕಾಯಕದವರೆಂದು ಕರೆಯುತ್ತಿದ್ದರು. ಕ್ರಿ.ಶ. 1139ರ ಶಾಸನವೊಂದರಲ್ಲಿ ಚಿಪ್ಪಿಗ ಎಂದು ಪ್ರಸ್ತಾಪಿಸಲಾಗಿದೆ. ಸೂಜಿ, ದಾರ ಬಳಸಿ ಬಟ್ಟೆ ಹೊಲಿದು ಕೊಡುವುದು ಸಿಂಪಿಗರ ಪ್ರಮುಖ ಕಾಯಕವಾಗಿತ್ತು. ಜತೆಗೆ ಮಕ್ಕಳ ಕುಲಾಯಿ, ಟೋಪಿ, ಹೆಣ್ಣುಮಕ್ಕಳ ಸೀರೆಗಳಿಗೆ ಜರಿ ಹಚ್ಚಿಕೊಡುವುದು ಸೀರೆಗೆ ಕಸೂತಿ ಹಾಕಿಕೊಡುವುದು. ಇಲ್ಲೆಲ್ಲಾ ಕೌಶಲ್ಯವನ್ನು ಕಾಣಬಹುದಾಗಿದೆ. ಸೂಜಿಕಾಯಕದ ಮಾರಿತಂದೆ, ಶಿವದಾಸಿಮಯ್ಯ ಈ ಮೊದಲಾದ ಶರಣರು ಸಿಂಪಿಗ ಕಾಯಕ ಮಾಡುತ್ತಿದ್ದರೆಂದು ತಿಳಿದು ಬರುತ್ತದೆ.

``ಸೂಜಿಯ ಹಿನ್ನಿಯಲ್ಲಿ ಮುಗಿಲ ತೋರದ ದಾರ ಹಿಡಿಯಿತ್ತು
ಸೂಜಿಯ ಮೊನೆ ಹಳೆಯ ಅರಿವೆಯ ಚುಚ್ಚಲಾರದು...''
-ಸುಂಕದ ಬಂಕಣ್ಣ (ಸ.ವ.ಸಂ.9, ವ-695)

``ಸೂಜಿಯ ಪೋಣಿಸಿ ದಾರವ ಮರೆದಡೆ
ಹೊಲಿಗೆ ಬಿಚ್ಚಿತ್ತು ಗುಹೇಶ್ವರಾ''
-ಅಲ್ಲಮಪ್ರಭು (ಸ.ವ.ಸಂ.2, ವ-1374)

ಶರಣರ ಈ ಎರಡು ವಚನಗಳಲ್ಲಿ ಸೂಜಿಕಾಯದ ಪ್ರಸ್ತಾಪವಿದೆ. ಇಲ್ಲಿ ಬಂದಿರುವ ವಿಷಯವು ಆಧ್ಯಾತ್ಮದ ಪರಿಭಾಷೆಯಲ್ಲಿ ಸಾಗಿರುವುದನ್ನು ಕಾಣಬಹುದಾಗಿದೆ. ಸೂಜಿ ಕಾಯಕದ ಶರಣರ ಬಗೆಗೆ, ಮತ್ತು ಅವರ ಕಾಯಕದ ಬಗೆಗೆ ಇನ್ನೂ ಕೆಲವು ವಚನಗಳಲ್ಲಿ ಪ್ರಸ್ತಾಪ ಬಂದಿದೆ. 12ನೇ ಶತಮಾನಕ್ಕೆ ಸೂಜಿಕಾಯಕ ದೊಡ್ಡದಾಗಿ ಬೆಳೆದಿತ್ತೆಂದು ಭಾವಿಸಬಹುದಾಗಿದೆ.

``ಕಾಲ ಕುಪ್ಪಸವ ಮೇಲಾಗಿ ಹೊಲಿದೆ, ಅಂಗದ ಕುಪ್ಪಸವ ಮಂಡೆಗೆ ಹೊಲಿದೆ (ವ-721)'' ಎಂದು ಹೇಳಿರುವ ಸೂಜಿಕಾಯಕದ ರಾಮಿತಂದೆಯು ``ತಲೆಗೆ ಮೂರು ಚಿಪ್ಪು, ಅಂಗಕ್ಕೆ ಆರು ಚಿಪ್ಪು, ಮಿಕ್ಕಾದ ಸರ್ವಾಂಗಕ್ಕೆಲ್ಲಕ್ಕೂ ಒಂದೆ ಚಿಪ್ಪಿನ ಕುಪ್ಪಸ (ವ-722)'' ಎಂದು ಕುಪ್ಪಸದ ರೂಪಕದ ಮೂಲಕ ಆಧ್ಯಾತ್ಮದೆತ್ತರವನ್ನು ಕಟ್ಟಿಕೊಟ್ಟಿದ್ದಾನೆ.

``ಮೊನೆಮೂರು, ಹಿನ್ನೆ ಒಂದು
ಆ ಸೂಜಿಯಲ್ಲಿ ಹೊಲಿದಿಹೆನೆಂದಡೆ
ಕುಪ್ಪಸಕ್ಕೆ ಚಿಪ್ಪು ಒಡಗೂಡವು ನೋಡಾ.
ಮೊನೆಯೊಂದು ಹಿನ್ನೆ ಮೂರಾಗಿ ಹೊಲಿದಡೆ
ಹಿನ್ನೆಯ ಮೂರುದಾರ ಮೊನೆಯನಾಳದಲ್ಲಿ ಅಡಗಿದವು ನೋಡಾ...''
-ಸೂಜಿಕಾಯಕದ ರಾಮಿತಂದೆ (ಸ.ವ.ಸಂ.9, ವ-725)

ಈ ವಚನದಲ್ಲಿ ರಾಮಿತಂದೆಯು ತನ್ನ ವೃತ್ತಿ ಪ್ರತಿಮೆಯ ಮೂಲಕ ಆಧ್ಯಾತ್ಮದ ಮಾರ್ಗವನ್ನು ತೋರಿಸಿದ್ದಾನೆ.

ಮುಂದುವರಿಯುವುದು…

ಈ ಅಂಕಣದ ಹಿಂದಿನ ಬರಹಗಳು:
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು
ವಸುಮತಿ ಉಡುಪ ಅವರ –“ಮೃಗತೃಷ್ಣಾ”
ಜಯಶ್ರೀ ಕಂಬಾರ ಅವರ – “ಮಾಧವಿ”
ವಿಜಯಶ್ರೀ ಸಬರದ ಅವರ –“ಉರಿಲಿಂಗ”
ಲಲಿತಾ ಸಿದ್ಧಬಸವಯ್ಯನವರ “ಇನ್ನೊಂದು ಸಭಾಪರ್ವ”
ಎಂ. ಉಷಾ ಅವರ-“ಶೂಲಿ ಹಬ್ಬ” (2015)
ಪಿ. ಚಂದ್ರಿಕಾ ಅವರ “ಮೋದಾಳಿ”
ದು.ಸರಸ್ವತಿಯವರ-“ರಾಮಾಯ್ಣ”
ಮಹಿಳಾ ವೃತ್ತಿನಾಟಕಗಳ ಪ್ರಾಯೋಗಿಕ ವಿಮರ್ಶೆ
ಮಹಿಳಾ ರಂಗಭೂಮಿ ಪರಂಪರೆ

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...