ಆಚಾರವೇ ಲಿಂಗವಾಗುವ,, ಅನುಭಾವವೇ ಜಂಗಮವಾಗುವ ನಿಜ ದಾಸೋಹ

Date: 08-08-2022

Location: ಬೆಂಗಳೂರು


“ಶರಣರು ದಾಸೋಹ ತತ್ವದ ಮೂಲಕ ಬದುಕಿನ ಗೂಡಾರ್ಥವನ್ನು ಬಿಚ್ಚಿಟ್ಟಿದ್ಧಾರೆ. ಗುರು-ಲಿಂಗ-ಜಂಗಮಕ್ಕೆ ತನು-ಮನ-ಧನವನ್ನು ಸಮರ್ಪಿಸುವುದೆಂದರೆ ಇಲ್ಲಿ ಅನೇಕ ಅರ್ಥಗಳಿವೆ. ಅರಿವೇ ಗುರುವಾಗುವುದು, ಆಚಾರವೇ ಲಿಂಗವಾಗುವುದು, ಅನುಭಾವವೇ ಜಂಗಮವಾಗುವುದು ನಿಜವಾದ ದಾಸೋಹವಾಗುತ್ತದೆ” ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣರ ಸಾಮಾಜಿಕ ಸಿದ್ಧಾಂತಗಳು ಅಂಕಣದಲ್ಲಿ ಕಾಯಕದ ನಂತರದ ಮತ್ತೊಂದು ಮಹತ್ವದ ಮೌಲ್ಯವಾದ ದಾಸೋಹದ ಬಗ್ಗೆ ವಿವರಿಸಿದ್ದಾರೆ.

ದಾಸೋಹ

1. ಪ್ರಾಸ್ತಾವಿಕ:
ಶರಣರ ಸಾಮಾಜಿಕ ಸಿದ್ಧಾಂತಗಳಲ್ಲಿ ಕಾಯಕದಂತೆ ದಾಸೋಹವೂ ಒಂದು ಮಹತ್ವದ ಮೌಲ್ಯವಾಗಿದೆ. ಕಾಯಕ ಮತ್ತು ದಾಸೋಹ ಒಂದೇ ನಾಣ್ಯದ ಎರಡು ಮುಖಗಳಂತೆ ಒಂದಕ್ಕೊಂದು ಪೂರಕವಾಗಿವೆ. ಕಾಯಕಕ್ಕೆ ಹೇಗೆ ನಿಯಮಗಳಿವೆಯೋ ದಾಸೋಹಕ್ಕೂ ನಿಯಮಗಳಿವೆ. ಮೋಸಮಾಡಿ, ಕಳವುಮಾಡಿ ತಂದ ಧನವನ್ನು ದಾಸೋಹಕ್ಕೆ ಸ್ವೀಕರಿಸುವುದಿಲ್ಲ. ಶ್ರಮಪಟ್ಟು ದುಡಿದು, ಸದಾಚಾರದಿಂದ ಗಳಿಸಿ, ಅಹಂಕಾರ ತೊರೆದು ಸಮರ್ಪಣಾ ಭಾವದಿಂದ ಅರ್ಪಿಸಿದಾಗ ಮಾತ್ರ ಅಂತಹ ಧನವು, ದಾಸೋಹಕ್ಕೆ ವಿನಿಯೋಗವಾಗುತ್ತದೆ. ಅಲ್ಲಮಪ್ರಭು ದಾಸೋಹದ ವ್ಯಾಖ್ಯೆಯನ್ನು ಸೊಗಸಾಗಿ ಹೇಳಿದ್ದಾರೆ. ಪ್ರಣತೆಯೂ ಇದೆ, ಬತ್ತಿಯೂ ಇದೆ, ಜ್ಯೋತಿ ಬೆಳಗಬೇಕೆಂದರೆ ತೈಲವೇ ಇಲ್ಲ. ಅದೇ ರೀತಿ ಗುರುವಿದೆ, ಲಿಂಗವಿದೆ, ಶಿಷ್ಯನಲ್ಲಿ ಸುಜ್ಞಾನದ ಸುಳಿವೇ ಇಲ್ಲ. ಹೀಗಾದಾಗ ಭಕ್ತಿ ಎಲ್ಲಿಂದ ಸಾಧ್ಯವಾಗುತ್ತದೆ? ಎಂದು ಪ್ರಶ್ನಿಸಿರುವ ಪ್ರಭು “ಸೋಹಂ-ಎಂಬುದಕ್ಕೆ ದಾಸೋಹವ ಮಾಡದಿರ್ದಡೆ ಅತಿಗಳೆವೆ ನೋಡಾ ಗುಹೇಶ್ವರಾ (ವ:75)” ಎಂದು ಹೇಳಿದ್ದಾರೆ. ಇದೇ ವಿಷಯದ ಬಗೆಗೆ ಸಿದ್ಧರಾಮಯ್ಯ ತಮ್ಮ ವಚನವೊಂದರಲ್ಲಿ ದಾಸೋಹದ ವ್ಯಾಖ್ಯೆಯನ್ನು ಇನ್ನೂ ಸ್ಪಷ್ಟಪಡಿಸಿದ್ದಾರೆ. `ಸೋಹಂ’-ಎಂಬುದು ಅಂತರಂಗದ ಮದ ಮತ್ತು `ಶಿವೋಹಂ’- ಎಂಬುದು ಬಹಿರಂಗದ ಮದಗಳಾಗಿವೆ. “ಈ ದ್ವಂದ್ವವನಳಿದು `ದಾಸೋಹಂ’ ಎಂದೆನಿಸಯ್ಯಾ” ಎಂದು ಸಿದ್ಧರಾಮ ಶಿವಯೋಗಿಗಳು ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಕೇಳಿಕೊಂಡಿದ್ದಾರೆ.

ದಾಸೋಹವೆಂದರೆ, ಕೇವಲ ಅನ್ನದಾಸೋಹ ಮಾತ್ರವಲ್ಲ, ದಾಸೋಹದಲ್ಲಿ ಅನೇಕ ಪ್ರಕಾರಗಳಿವೆ. ಬಸವಣ್ಣನವರು ತಮ್ಮ ವಚನಗಳಲ್ಲಿ ವಿವಿಧ ದಾಸೋಹಗಳ ಪರಿಚಯ ನೀಡಿದ್ದಾರೆ. ಭಕ್ತಶ್ರೇಷ್ಠನಾದವನು ಭಕ್ತಿದಾಸೋಹ ಮಾಡಬಹುದು, ಯುಕ್ತನಾದವನು ಯುಕ್ತಿ ದಾಸೋಹವ ಮಾಡಬಹುದು. ಐಕ್ಯಸ್ಥಲವ ಸಾಧಿಸಿದವನು ಮಮಕಾರ ದಾಸೋಹವ ಮಾಡಬಹುದು. ಎಲ್ಲ ವಿಷಯದಲ್ಲಿಯೂ ದಾಸೋಹವಿದೆಯೆಂದು ಬಸವಣ್ಣನವರು ಉದಾಹರಣೆಗಳೊಂದಿಗೆ ವಿವರಿಸಿದ್ದಾರೆ.

2. ತ್ರಿವಿಧ ದಾಸೋಹ
ತನು-ಮನ-ಧನಗಳನ್ನು ಗುರು-ಲಿಂಗ-ಜಂಗಮಕ್ಕೆ ಅರ್ಪಿಸಬೇಕೆಂಬುದು ಶರಣರ ತ್ರಿವಿಧ ದಾಸೋಹದ ಸಿದ್ಧಾಂತವಾಗಿದೆ. ಈ ಮೊದಲೇ ಹೇಳಿದಂತೆ ದಾಸೋಹವೆಂದರೆ ಕೇವಲ ಅನ್ನದಾಸೋಹ ಮಾತ್ರವಲ್ಲ, ಇತರ ಅನೇಕ ದಾಸೋಹಗಳ ಪ್ರಸ್ತಾಪವನ್ನು ಶರಣರು ಮಾಡಿದ್ದಾರೆ. ಅವುಗಳಲ್ಲಿ ತ್ರಿವಿಧ ದಾಸೋಹ ತುಂಬ ಮುಖ್ಯವಾಗಿದೆ. ತನು-ಮನ-ಧನಗಳನ್ನು ಕ್ರಮವಾಗಿ ಗುರು-ಲಿಂಗ-ಜಂಗಮಕ್ಕರ್ಪಿಸಬೇಕೆಂಬುದು ತ್ರಿವಿಧ ದಾಸೋಹದ ಮೊದಲ ಹಂತವಾಗಿದೆ. ಆದರೆ ಇಲ್ಲಿ ಗುರು-ಲಿಂಗ-ಜಂಗಮರೆಂದರೆ ಯಾರು? ಎಂದು ಪ್ರಶ್ನಿಸಿಕೊಂಡಾಗ ಶರಣರ ವಚನಗಳಲ್ಲಿಯೇ ಇದಕ್ಕೆ ಉತ್ತರಗಳಿವೆ. ಅರಿವೇ ಗುರು, ಆಚಾರವೇ ಲಿಂಗ ಮತ್ತು ಅನುಭಾವವೇ ಜಂಗಮವೆಂಬುವುದು ಸ್ಪಷ್ಟವಾಗುತ್ತದೆ. ಮೂರ್ತರೂಪದ ಗುರು ಒಂದು ಕಡೆಯಿದ್ದರೆ ಅಮೂರ್ತರೂಪದ ಅರಿವು ಮತ್ತೊಂದು ಕಡೆಯಿದೆ. ಮೂರ್ತರೂಪದ ಇಷ್ಟಲಿಂಗ ಕಾಣಿಸಿದರೆ, ಅಮೂರ್ತರೂಪದ ಆಚಾರಲಿಂಗ ಕಾಣಿಸುವುದಿಲ್ಲ. ಅದೇ ರೀತಿ ಕಾವಿಧಾರಿ ಜಂಗಮ ಕಾಣಿಸಿಕೊಂಡರೆ, ಒಳಗಿರುವ ಅನುಭಾವದ ಜಂಗಮ ಕಾಣಿಸಿಕೊಳ್ಳುವುದಿಲ್ಲ.

ಶರಣರು ಈ ದಾಸೋಹ ತತ್ವದ ಮೂಲಕ ಬದುಕಿನ ಗೂಡಾರ್ಥವನ್ನು ಬಿಚ್ಚಿಟ್ಟಿದ್ಧಾರೆ. ಗುರು-ಲಿಂಗ-ಜಂಗಮಕ್ಕೆ ತನು-ಮನ-ಧನವನ್ನು ಸಮರ್ಪಿಸುವುದೆಂದರೆ ಇಲ್ಲಿ ಅನೇಕ ಅರ್ಥಗಳಿವೆ. ಅರಿವೇ ಗುರುವಾಗುವುದು, ಆಚಾರವೇ ಲಿಂಗವಾಗುವುದು, ಅನುಭಾವವೇ ಜಂಗಮವಾಗುವುದು ನಿಜವಾದ ದಾಸೋಹವಾಗುತ್ತದೆ.

“ಅಂಗದ ಲಿಂಗವೇ ಮನದ ಲಿಂಗ, ಮನದ ಲಿಂಗವೇ ಭಾವದ ಲಿಂಗ, ಭಾವದ ಲಿಂಗವೇ ಜಂಗಮ ದಾಸೋಹ (ವ:707)” ಎಂದು ಹೇಳಿರುವ ಅಲ್ಲಮಪ್ರಭುಗಳ ಈ ವಚನದಲ್ಲಿ ದಾಸೋಹದ ನಿಜವಾದ ಅರ್ಥ ಕಾಣಿಸುತ್ತದೆ. ದಾಸೋಹವೆಂಬುದು ನಿರಂತರ ಸತ್ಯವಾಗಿದೆ. ಇಲ್ಲಿ ಕೇವಲ ಕೊಡುವುದು-ಪಡೆಯುವುದು ಮುಖ್ಯವಾಗುವುದಿಲ್ಲ. ತಿಳಿಯುವುದು-ಹೊಳೆಯುವುದು ಮುಖ್ಯವಾಗುತ್ತದೆ. ಅಂಗದಲ್ಲಿ ಅಳವಟ್ಟಿರುವ ಆಚಾರವನ್ನೇ ಲಿಂಗವೆಂದರಿತಾಗ ಒಳಗಡೆ ಬೆಳಗುತ್ತಿರುವ ಅನುಭಾವವೇ ಜಂಗಮವಾಗುತ್ತದೆ. ಇಂತಹ ಅರಿವಿನ ಅಗಾಧತೆಯೇ ನಿಜವಾದ ತ್ರಿವಿಧ ದಾಸೋಹವಾಗುತ್ತದೆ,.

“ತನುವ ಗೆಲಲರಿಯದೆ, ಮನವ ಗೆಲಲರಿಯದೆ
ಧನವ ಗೆಲಲರಿಯದೆ, ಭ್ರಮೆಗೊಂಡಿತ್ತು ಲೋಕವೆಲ್ಲವು.
ತನುವ ದಾಸೋಹಕ್ಕೆ ಸವೆಸಿ, ಮನವ ಲಿಂಗಧ್ಯಾನದಲ್ಲಿ ಸವೆಸಿ
ಧನವ ಜಂಗಮದಲ್ಲಿ ಸವೆಸಿ ಗೆಲ್ಲಬಲ್ಲಡೆ,
ಸಂಗನಬಸವಣ್ಣನಲ್ಲದೆ ಮತ್ತಾರನೂ ಕಾಣೆ.
ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣಂಗೆ
ನಮೋ ನಮೋ ಎನುತಿರ್ದೆನು”

-ಅಲ್ಲಮಪ್ರಭು (ಸ.ವ.ಸಂ.2,ವ:1230)

ಅಲ್ಲಮಪ್ರಭುವಿನ ಈ ವಚನವು ದಾಸೋಹದ ಪರಿಕಲ್ಪನೆಯನ್ನು ಹೊಸ ರೀತಿಯಲ್ಲಿ ಕಟ್ಟಿಕೊಡುತ್ತದೆ. ವೈರಿಗಳನ್ನು ಗೆಲ್ಲಬಹುದು, ಸಾಮ್ರಾಜ್ಯವನ್ನು ಗೆಲ್ಲಬಹುದು. ಆದರೆ ತನು-ಮನ-ಧನಗಳನ್ನು ಗೆಲ್ಲುವುದು ಅಷ್ಟು ಸುಲಭವಲ್ಲ. ಹೀಗೆ ಗೆದ್ದವರು ಬಸವಣ್ಣನವರು ಮಾತ್ರ ಎಂದು ಹೇಳಿರುವ ಅಲ್ಲಮಪ್ರಭು, ಬಸವಣ್ಣನವರಿಗೆ ನಮೋ ನಮೋ ಎಂದು ನಮಿಸಿದ್ದಾರೆ. ದಾಸೋಹ ಮಾಡಲು ಧನವೇ ಬೇಕೆಂದೇನೂ ಇಲ್ಲ. ಸಮರ್ಪಣಾ ಭಾವದಿಂದ ತನ್ನ ತನುವನ್ನು ದಾಸೋಹಕ್ಕೆ ಸವೆಸುವುದು ಕೂಡಾ ನಿಜವಾದ ದಾಸೋಹವಾಗುತ್ತದೆಂದು ಪ್ರಭು ತಿಳಿಸಿದ್ದಾರೆ. ಅದೇರೀತಿ ಮನವನ್ನು ಲಿಂಗಧ್ಯಾನದಲ್ಲಿ, ಧನವನ್ನು ಜಂಗಮದಲ್ಲಿ ಸವೆಸುವುದು ದಾಸೋಹವಾಗುತ್ತದೆಂದು ಹೇಳಿದ್ದಾರೆ. ನಿಜವಾದ ತ್ರಿವಿಧ ದಾಸೋಹವ ಮಾಡಿದವರು ಸಂಗನಬಸವಣ್ಣ ಮಾತ್ರ ಎಂದು ತಿಳಿಸಿದ್ದಾರೆ.

ಚೆನ್ನಬಸವಣ್ಣನವರು ತಮ್ಮದೊಂದು ವಚನದಲ್ಲಿ ತ್ರಿವಿಧ ದಾಸೋಹಕ್ಕೆ ಸಂಬಂಧಿಸಿದಂತೆ, ತನು-ಮನ-ಧನದ ವಿಚಾರವನ್ನು ಪ್ರಸ್ತಾಪಿಸುತ್ತಾರೆ. ಆದರೆ ತನುವನ್ನು ಗುರುವಿಗರ್ಪಿಸಬೇಕೆಂದು ಹೇಳುವುದಿಲ್ಲ. ಬದಲಾಗಿ ಸದಾಚಾರಕ್ಕರ್ಪಿಸಬೇಕೆಂದು ಹೇಳಿದ್ದಾರೆ. ಧನವನ್ನು ಜಂಗಮಕ್ಕರ್ಪಿಸಬೇಕೆಂದು ಹೇಳಿಲ್ಲ. ಬದಲಾಗಿ ಶರಣರ ದಾಸೋಹಕ್ಕೆ ಸಲ್ಲಿಸಬೇಕೆಂದು ತಿಳಿಸಿದ್ದಾರೆ. ಹೀಗೆ ಮಾಡಿದರೆ ಭಕ್ತನ ತನು-ನಿರ್ಮಲವಾಗುತ್ತದೆ. ಮನ-ನಿಶ್ಚಿಂತವಾಗುತ್ತದೆ. ಮತ್ತು ಧನ-ನಿರ್ವಾಣವಾಗುತ್ತದೆಂದು ವಿವರಿಸಿದ್ದಾರೆ. ದಾಸೋಹಕ್ಕೆ ನೀಡುವಾಗ ಪೂರ್ಣಮನಸ್ಸಿನಿಂದ ನೀಡಬೇಕು. ದಾಸೋಹ ಮಾಡುವಾಗ ಸಮರ್ಪಣಾಭಾವದಿಂದ ಮಾಡಬೇಕೆಂದು ಶರಣರು ತಿಳಿಸಿದ್ದಾರೆ.

ದಾಸೋಹವೆಂದರೆ, ಅದು ತ್ರಿವಿಧ ದಾಸೋಹವೆಂದು ಹೇಳಿರುವ ಬಸವಣ್ಣನವರು ತನುವ ಕೊಟ್ಟು ಗುರುವನೊಲಿಸಬೇಕು, ಮನವ ಕೊಟ್ಟು ಲಿಂಗವನೊಲಿಸಬೇಕು, ಧನವ ಕೊಟ್ಟು ಜಂಗಮವನೊಲಿಸಬೇಕೆಂದು ತಿಳಿಸಿದ್ದಾರೆ. ತ್ರಿವಿಧ ದಾಸೋಹಕ್ಕೆ ದೇವರು ಒಲಿಯುತ್ತಾನೆಯೇ ಹೊರತು ಆಡುವುದರಿಂದ, ಹಾಡುವುದರಿಂದ, ಓದುವುದರಿಂದ ಒಲಿಯಲಾರನೆಂದು ಹೇಳಿದ್ದಾರೆ. ಆಡದೆ ನವಿಲು? ಹಾಡದೆ ತಂತಿ? ಓದದೆ ಗಿಳಿ? ಎಂದು ಕೇಳುತ್ತ ಭಕ್ತಿಯಿಲ್ಲದವರನೊಲ್ಲ ಕೂಡಲಸಂಗಮದೇವ ಎಂದು ಸ್ಪಷ್ಟಪಡಿಸಿದ್ದಾರೆ. ದಾಸೋಹದಿಂದ ಗುರು-ಲಿಂಗ-ಜಂಗಮರನ್ನು ಕಂಡೆನೆಂದು ಹೇಳಿದ್ದಾರೆ.

ಲಿಂಗಪೂಜೆ ಮತ್ತು ಜಂಗಮದಾಸೋಹಕ್ಕೆ ಪ್ರಾಮುಖ್ಯತೆ ನೀಡಿರುವ ಸಿದ್ಧರಾಮ, ಬಸವಣ್ಣನವರ ದಾಸೋಹ ತತ್ವವನ್ನು ಕಂಡು ಕೊಂಡಾಡಿದ್ದಾರೆ. ಬಸವಣ್ಣನವರು ತನುವಿಡಿದು ದಾಸೋಹವಮಾಡಿ ಗುರುಪ್ರಸಾದಿಯಾದರು, ಮನವಿಡಿದು ದಾಸೋಹವಮಾಡಿ ಲಿಂಗ ಪ್ರಸಾದಿಯಾದರು. ಧನವಿಡಿದು ದಾಸೋಹವಮಾಡಿ ಜಂಗಮಪ್ರಸಾದಿಯಾದರೆಂದು ತಿಳಿಸಿದ್ದಾರೆ. ಈ ತ್ರಿವಿಧ ದಾಸೋಹದಿಂದ ಬಸವಣ್ಣನವರು ಸ್ವಯಂ ಪ್ರಸಾದಿಯಾದರೆಂದು ಹೇಳಿದ್ದಾರೆ.

ಇದೇ ಮಾತನ್ನು ಸದ್ಗುರು ಚೆನ್ನಮಲ್ಲಿಕಾರ್ಜುನನೆಂಬ ವಚನಕಾರರು ಹೇಳಿದ್ದಾರೆ. ಚೆನ್ನಮಲ್ಲಿಕಾರ್ಜುನಯ್ಯಾ ಎಂಬ ಅಂಕಿತದಲ್ಲಿ ಇವರ ಎರಡು ವಚನಗಳಿವೆ. ಸಿದ್ಧರಾಮ ಶಿವಯೋಗಿಗಳು ಹೇಳಿದ ವಿಚಾರವನ್ನೇ ಇವರೂ ಹೇಳಿದ್ದಾರೆ. ಹೀಗೆ ತ್ರಿವಿಧ ದಾಸೋಹವನ್ನು ಕುರಿತು ಅನೇಕ ವಚನಕಾರರು ಪ್ರಸ್ತಾಪಿಸಿದ್ದಾರೆ.

ತ್ರಿವಿಧ ದಾಸೋಹದ ಜತೆಗೆ ಶರಣರು ತ್ರಿಕಾಲ ದಾಸೋಹವನ್ನು ಮಾಡಿದರು. ಬೆಳಿಗ್ಗೆ-ಮಧ್ಯಾಹ್ನ-ರಾತ್ರಿ ಇವು ಒಂದು ದಿನದ ಮೂರು ಹಂತಗಳು. ಈ ಮೂರು ಹಂತಗಳಲ್ಲಿಯೂ ದಾಸೋಹ ನಿರಂತರವಾಗಿ ನಡೆಯುತಿತ್ತು. ಇದು ಶರಣರು ದಾಸೋಹಕ್ಕೆ ನೀಡಿದ ಪ್ರಾಮುಖ್ಯತೆಯಾಗಿದೆ. ದಾನವನ್ನು ಮಾಡುವವರು ಯಾವಾಗಲೋ ಒಮ್ಮೆ ಮಾಡುತ್ತಾರೆ. ದಾಸೋಹ ಹಾಗಲ್ಲ, ಅದು ನಿತ್ಯ ನಿರಂತರ, ದಿನದ ಮೂರುಹೊತ್ತು ದಾಸೋಹ ನಡೆಯಬೇಕೆಂಬುದು ಶರಣರ ಸಂಕಲ್ಪವಾಗಿತ್ತು. ಅವರು ಹಾಗೆ ದಾಸೋಹ ಮಾಡಿದರು, ನುಡಿದಂತೆ ನಡೆದರು.

3. ಸದ್ಭಾವ-ಸದಾಚಾರದ ದಾಸೋಹ
ದಾಸೋಹದಲ್ಲಿ ಸಮರ್ಪಣಾ ಭಾವವಿರುವಂತೆ ಸದ್ಭಾವ-ಸದಾಚಾರವಿರಬೇಕೆಂದು ಶರಣರು ಹೇಳಿದ್ದಾರೆ. ಯಾರದೋ ಸಂಪತ್ತನ್ನು ತಂದು ದಾಸೋಹ ಮಾಡುವಂತಿಲ್ಲ. ದಾಸೋಹಕ್ಕೆ ಧನವನರ್ಪಿಸಿದರೆ, ಅದು ಸತ್ಯಶುದ್ಧ ಕಾಯಕದಿಂದ ಬಂದುದಾಗಿರಬೇಕು. ತನು-ಮನ ಬಳಲಿಸಿ, ಶ್ರಮಪಟ್ಟು ಗಳಿಸಿದ ಧನಮಾತ್ರ ದಾಸೋಹಕ್ಕೆ ಸಲ್ಲುತ್ತದೆಂದು ಚೆನ್ನಬಸವಣ್ಣ ಸ್ಪಷ್ಟಪಡಿಸಿದ್ದಾರೆ. ಇಂತಹ ಸದ್ಭಾವದ-ಸದಾಚಾರದ ಭಕ್ತರ ಪಾದಕ್ಕೆ ನಮೋ ನಮೋ ಎನ್ನುತ್ತೇನೆಂದು ಅವರು ತಿಳಿಸಿದ್ದಾರೆ.

“ತನುಮನ ಬಳಲದೆ ಉದ್ದಂಡ ವೃತ್ತಿಯಲ್ಲಿ ಧನವಗಳಿಸಿ ತಂದು
ಗುರುಲಿಂಗಜಂಗಮಕ್ಕೆವೆಚ್ಚಿಸಿ, ದಾಸೋಹವ ಮಾಡಿ
ಭಕ್ತರಾದೆವೆಂಬವರನೆನಗೆ ತೋರದಿರಯ್ಯಾ....”
-ಚೆನ್ನಬಸವಣ್ಣ (ಸ.ವ.ಸಂ.3, ವ:1296)

ಶ್ರಮದಿಂದ ಸದ್ಭಾವದಿಂದ ಗಳಿಸಿದ ಧನಮಾತ್ರ, ದಾಸೋಹಕ್ಕೆ ಸಲ್ಲುತ್ತದೆಂದು ಹೇಳಿರುವ ಚೆನ್ನಬಸವಣ್ಣನವರು ಪರಧನ ಚೋರಕರ, ಪಾಪಿಗಳ ಹಣ ಅದು ಸಲ್ಲದೆಂದು ತಿಳಿಸಿದ್ದಾರೆ.

ಸದ್ಭಾವ-ಸದಾಚಾರವೇ ಭಕ್ತನ ಲಕ್ಷಣವೆಂದು ಅನೇಕ ಶರಣರು ಹೇಳಿದ್ದಾರೆ. ದಾಸೋಹವೆಂಬುದು ಒಂದು ಸಮಾಜಸೇವೆಯೆಂದು ಆಯ್ದಕ್ಕಿ ಲಕ್ಕಮ್ಮ ಹೇಳಿದ್ದಾರೆ. ಇಂತಹ ದಾಸೋಹದಲ್ಲಿ ಸಿಗುವ ಆನಂದ ಕೈಲಾಸದಲ್ಲಿ ಸಿಗದೆಂದು ಈ ಶರಣೆ ತಿಳಿಸಿದ್ದಾರೆ. ಬಸವಣ್ಣನವರು ಭಕ್ತರಿಗೆ ಸದ್ಭಾವ-ಸದಾಚಾರವಿರಬೇಕೆಂದು ಹೇಳಿದರು. ಕಾಯಕ-ದಾಸೋಹದ ಮೂಲಕ ಹೊಸಹಾದಿ ತೋರಿಸಿದರೆಂದು ಅಕ್ಕನಾಗಮ್ಮ ತಮ್ಮ ವಚನವೊಂದರಲ್ಲಿ ಹೇಳಿದ್ದಾರೆ. ದಾಸೋಹದ ದಾರಿ ತೋರಿಸಿದ ಬಸವಣ್ಣನವರನ್ನು ಅನೇಕ ಶರಣರು ಪ್ರಶಂಸಿದ್ದಾರೆ.

ಬೇಡಿತಂದು ದಾಸೋಹ ಮಾಡುವುದು ಸೂಕ್ತವಲ್ಲವೆಂದು ಆಯ್ದಕ್ಕಿ ಮಾರಯ್ಯ ತಿಳಿಸಿದ್ದಾರೆ. ಬೇಡಿ ತರುವುದು ಭಿಕ್ಷೆಯಾಗುತ್ತದೆ ಇಂತಹ ಭಿಕ್ಷೆಯ ಹಣ ದಾಸೋಹಕ್ಕೆ ಸಲ್ಲದು. ಸದ್ಭಾವ-ಸದಾಚಾರದಿಂದ ದುಡಿದ ಧನ ಮಾತ್ರ ದಾಸೋಹಕ್ಕೆ ಸಲ್ಲುತ್ತದೆಂದವರು ತಿಳಿಸಿದ್ದಾರೆ.

ದಾಸೋಹ ಮಾಡುವುದೇ ಶಿವಾಚಾರವೆಂದು ಮಡಿವಾಳ ಮಾಚಿದೇವರು ತಮ್ಮ ವಚನದಲ್ಲಿ (ವ:452) ವಿವರಿಸಿದ್ದಾರೆ. ಸದಾಚಾರ, ಶಿವಾಚಾರ ಇವು ಪಂಚಾಚಾರಗಳಲ್ಲಿ ಮುಖ್ಯವಾದವುಗಳಾಗಿವೆ. ದಾಸೋಹಕ್ಕೂ-ಪಂಚಾಚಾರಗಳಿಗೂ ಸಂಬಂಧವಿದೆ. ದುರಾಚಾರದಿಂದ, ದುಷ್ಟತನದಿಂದ, ದುರ್ಬುದ್ಧಿಯಿಂದ ಮಾಡುವ ದಾಸೋಹ ಅದು ದಾಸೋಹವೇ ಅಲ್ಲವೆಂದು ಶರಣರು ಸ್ಪಷ್ಟಪಡಿಸಿದ್ದಾರೆ.

“ಮಾಡುವ ದಾಸೋಹದಿಂದ ಭಕ್ತಂಗೆ ಅವಗುಣಂಗಳಿಲ್ಲದಿರಬೇಕು
ಕೋಪದ ಕೆಚ್ಚಂ ಕಡಿದು, ಲೋಭಲಂಪಟಮಂ ಕೆದರಿ

ಮೋಹದ ಮುಳ್ಳುಮೊನೆಯ ತೆಗೆದು, ಮದದಚ್ಚಂ ಮುರಿದು,
ಮಚ್ಚರಿಪ ಸರ್ಪನಂ ಸಮತೆಯೆಂಬ ಗಾರುಡದಲಿ ್ಲಗಾರುಡಿಸಿ,
ಕರಣಾದಿ ಗುಣಂಗಳಿಚ್ಛೆಗೆ ಹರಿಯಲೀಯದೆ
ವಿಶ್ರಮಿಸಿಪ್ಪ ಭಕ್ತನ ಕಾಯವೆ ಕೈಲಾಸ.....”

- ಸೊಡ್ಡಳ ಬಾಚರಸ (ಸ.ವ.ಸಂ.9, ವ:807)

ಈ ವಚನದಲ್ಲಿ ಸೊಡ್ಡಳ ಬಾಚರಸ ಕಾಯಕ ಮತ್ತು ದಾಸೋಹದಂತಹ ಮೌಲ್ಯಗಳ ಬಗೆಗೆ ತುಂಬ ಗಂಭೀರವಾಗಿ ಚಿಂತನೆ ಮಾಡಿದ್ದಾರೆ. ಅವಗುಣಗಳಿಂದ ಮಾಡುವ ದಾಸೋಹವು ದಾಸೋಹವಾಗುವುದಿಲ್ಲವೆಂದು ಹೇಳಿರುವ ಈ ವಚನಕಾರರು ಭಕ್ತರಲ್ಲಿ ಸದ್ಭಾವ-ಸದಾಚಾರವಿರಬೇಕೆಂದು ಒತ್ತಿಹೇಳಿದ್ದಾರೆ. ಲೋಭ-ಮೋಹ-ಮದ-ಮತ್ಸರಗಳನ್ನಳಿದ ಭಕ್ತನಿಗೆ ಮಾತ್ರ ದಾಸೋಹ ಮಾಡಲು ಸಾಧ್ಯವಾಗುತ್ತದೆಂದು ತಿಳಿಸಿದ್ದಾರೆ. ಕರಣತ್ರಯಗಳ ಮಲತ್ರಯಗಳಿಚ್ಛೆಗೆ ಒಳಗಾಗದೆ, ಸದಾಚಾರದಿಂದ ಸಮರ್ಪಣಾಭಾವದಿಂದ ದಾಸೋಹ ಮಾಡಬೇಕೆಂದು ಹೇಳಿದ್ದಾರೆ.

ಉರಿಲಿಂಗದೇವರು ದಾಸೋಹದ ಬಗೆಗೆ ಪ್ರಸ್ತಾಪಿಸುತ್ತ ತಮ್ಮ ವಚನವೊಂದರಲ್ಲಿ ಆತ್ಮವಿಮರ್ಶೆ ಮಾಡಿಕೊಂಡಿದ್ದಾರೆ. ಅರಿದೊಡೆ ಶರಣ, ಮರೆದೊಡೆ ಮಾನವ ಎಂದು ಹೇಳಿರುವ ಅವರು, ಹೊತ್ತಿಗೊಂದು ಸಲ ಗೋಸುಂಬೆಯಂತೆ ಬಣ್ಣ ಬದಲಿಸಬಾರದೆಂದು ಹೇಳಿದ್ದಾರೆ. ಶರಣರ ಕಂಡು ಉದಾಸೀನವ ಮಾಡಬಾರದೆಂದು ತಿಳಿಸಿರುವ ಅವರು “ದಾಸೋಹವರಿಯದ ದೂಷಕನು ನಾನಯ್ಯ” ಎಂದು ಆತ್ಮಶೋಧನೆ ಮಾಡಿಕೊಂಡಿದ್ದಾರೆ. ದಾಸೋಹಿಯಾದವನಿಗೆ ಸದ್ಭಾವ-ಸಚ್ಚಾರಿತ್ರ್ಯ ಸದಾಚಾರ ಇರಬೇಕೆಂದು ಅನೇಕ ಶರಣರು ಹೇಳಿದ್ದಾರೆ.

ಸ್ವಾನ ಮಡಕೆಯನಿಳುಹಿ ಬೋನವನುಂಡು
ಮಡಕೆಯನೇರಿಸಲರಿಯದಂತೆ
ನಾನು ಷಟ್‍ಸ್ಥಲವನೋದಿ ಏನು ಮಾಡುವೆನಯ್ಯಾ
ಅವಗುಣಂಗಳೆನ್ನ ಬೆನ್ನ ಬಿಡದನ್ನಕ್ಕರ?
ಕಾರ್ಯವುಳ್ಳ ಕರ್ತ ಜಂಗಮಲಿಂಗದಲ್ಲಿ
ನಾನು ದಾಸೋಹವ ಮಾಡಲರಿಯದೆ ಕೆಟ್ಟೆನು,
ಕೂಡಲಸಂಗಮದೇವಾ”

-ಬಸವಣ್ಣ (ಸ.ವ.ಸಂ.1, ವ: 1375)

“ತ್ರಿವಿಧ ದಾಸೋಹಿ ಬಸವಣ್ಣನೊಬ್ಬನೇ” ಎಂದು ಅಲ್ಲಮಪ್ರಭು ಹೇಳಿದ್ದಾರೆ. ಆದರೆ ಬಸವಣ್ಣನವರು ಈ ವಚನದಲ್ಲಿ ಆತ್ಮಶೋಧನೆ ಮಾಡಿಕೊಂಡಿದ್ದಾರೆ. ಇದು ಅವರ ಆತ್ಮಶೋಧನೆ ಮಾತ್ರ ಆಗಿರದೆ ಎಲ್ಲರ ಆತ್ಮಶೋಧನೆಯೂ ಆಗಬೇಕಾಗಿದೆ. ಇಲ್ಲಿ ಅವರು ನಾಯಿಯ ಉದಾಹರಣೆಯ ಮೂಲಕ ವಿಷಯವನ್ನು ಪ್ರಾರಂಭಿಸಿದ್ದಾರೆ. ನಾಯಿಗೆ ಮಡಿಕೆಯಲ್ಲಿರುವ ಬೋನವನ್ನುಣ್ಣುವ ಆತುರ, ಹಾಗೆ ಅವಸರವಸರದಿಂದ ಅದು ಮಡಕೆಯಲ್ಲಿರುವ ಬೋನವನ್ನುಣ್ಣುತ್ತದೆ. ಆದರೆ ಆ ಮಡಕೆಯನ್ನು ಏರಿಸಿಡಲು ಅದಕ್ಕೆ ಬರುವುದಿಲ್ಲ. ಅದೇ ರೀತಿ ಮನುಷ್ಯನಾದವನು ಕಲಿಯುವುದು ಬಹಳಷ್ಟಿದೆಯೆಂದು ಬಸವಣ್ಣನವರು ಇಲ್ಲಿ ಹೇಳಿದ್ದಾರೆ. ಮನಸ್ಸಿನಲ್ಲಿ ಅವಗುಣಂಗಳನ್ನು ಇಟ್ಟುಕೊಂಡು ಷಟ್‍ಸ್ಥಲಗಳನ್ನೋದಿದರೇನು ಪ್ರಯೋಜನವೆಂದು ಪ್ರಶ್ನಿಸಿದ್ದಾರೆ. “ನಾನು ದಾಸೋಹವ ಮಾಡಲರಿಯದೆ ಕೆಟ್ಟೆನು” ಎಂದು ಬಸವಣ್ಣನವರೇ ಹೇಳಿದ್ದಾರೆ. ಅಂದರೆ ದಾಸೋಹ ಕಾರ್ಯ, ದಾನದಷ್ಟು ಸುಲಭವಲ್ಲವೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಉಳ್ಳವರು, ಇಲ್ಲದವರಿಗೆ ದಾನ ಮಾಡುವುದು ಸುಲಭ. ಆದರೆ ದಾಸೋಹ ಮಾಡುವದು ಅಷ್ಟು ಸುಲಭವಾಗಿಲ್ಲ. ದಾಸೋಹ ಮಾಡುವವರು ಸದ್ಭಕ್ತರಾಗಿರಬೇಕು. ಸದಾಚಾರಿಗಳಾಗಿರಬೇಕು, ಅವಗುಣಂಗಳ ತೊರೆದವರಾಗಿರಬೇಕು. ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರಗಳನ್ನು ಬಿಟ್ಟ ಸದಾಚಾರಿಗಳಾಗಿರಬೇಕು. ಆಗ ಮಾತ್ರ ಅದು ದಾಸೋಹವಾಗುತ್ತದೆಂದು ಶರಣರು ಸ್ಪಷ್ಟಪಡಿಸಿದ್ದಾರೆ.

4. ಅಹಂಕಾರ ನಿರಸನ
ದಾಸೋಹಕ್ಕೂ ಅಹಂಕಾರ ನಿರಸನಕ್ಕೂ ಸಂಬಂಧವಿದೆ. ದಾನಕ್ಕೂ-ದಾಸೋಹಕ್ಕೂ ಇರುವ ವ್ಯತ್ಯಾಸ ಇದೇ ಆಗಿದೆ. ದಾನಿಗಳಲ್ಲಿ ಅನೇಕರಿಗೆ ಅಹಂಕಾರವಿರುತ್ತದೆ. ತಾನು ಕೊಟ್ಟದ್ದು ಎಂಬ ಅಹಂಭಾವವಿರುತ್ತದೆ. ಆದರೆ ದಾಸೋಹದಲ್ಲಿ ಹಾಗಲ್ಲ; ಅಹಂಭಾವ ಕಳೆದುಕೊಂಡಾಗಲೇ ಅವನು ದಾಸೋಹ ಮಾಡಲು ಅರ್ಹನಾಗುತ್ತಾನೆ. ನಾನು ಗಳಿಸಿದ್ದು, ನನ್ನ ಸಂಪತ್ತು ಎಂಬ ಅಹಂಕಾರ ನಿರಸನಗೊಳ್ಳಬೇಕಾದರೆ ದಾಸೋಹ ಕಡ್ಡಾಯವೆಂದು ಶರಣರು ಹೇಳಿದ್ದಾರೆ.

ಮನುಷ್ಯನಿಗೆ ಬರುವ ಅಷ್ಟಮದಗಳನ್ನು ಕುರಿತು ಶರಣರು ವಿವರವಾಗಿ ಹೇಳಿದ್ದಾರೆ. ಯೌವನದ ಮದದಷ್ಟೇ ಹಣದ ಮದ ಅಪಾಯಕಾರಿಯಾದುದಾಗಿದೆ. ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರ ಇವು ಮನುಷ್ಯನ ಆರು ವೈರಿಗಳಾಗಿವೆ. ಇವುಗಳಲ್ಲಿ ಅಹಂಕಾರ ಅಥವಾ ಮದ ಅಳಿಯಬೇಕಾದರೆ ದಾಸೋಹ ಮಾಡಬೇಕೆಂದು ಶರಣರು ಹೇಳಿದ್ದಾರೆ. ಹೀಗಾಗಿ ಅರಿಷಡ್‍ವರ್ಗಗಳಿಗೂ ಮತ್ತು ದಾಸೋಹಕ್ಕೂ ಸಂಬಂಧವಿದೆ. ಹಿಂದೆ ಅರಸರು ತಾವು ಯಾರ್ಯಾರಿಗೆ ಎಷ್ಟೆಷ್ಟು ದಾನ ಮಾಡಿದ್ದರೆಂಬುದನ್ನು ಶಾಸನಗಳಲ್ಲಿ ಬರೆಸುತ್ತಿದ್ದರು. ದತ್ತಿ-ದಾನ ಶಾಸನಗಳ ಮೇಲೆ ಸೂರ್ಯ-ಚಂದ್ರರ ಚಿತ್ರಗಳಿವೆ. ಅಂದರೆ ತಾವು ಮಾಡಿದ ದಾನವು, ಸೂರ್ಯ-ಚಂದ್ರರಿರುವವರೆಗೂ ಇರುತ್ತದೆಂಬುದು ಅವರ ನಂಬಿಕೆಯಾಗಿತ್ತು. ಹಿಂದೆ ಅರಸರು ಮಾಡಿದ್ದನ್ನು ಇಂದಿನ ಆಳುವ ಸರಕಾರಗಳು ಮಾಡುತ್ತಲಿವೆ. ತಮ್ಮ ಅಧಿಕಾರವಧಿಯಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಸಹಾಯಧನ ನೀಡಿದೆವು, ಯಾವ್ಯಾವ ಯೋಜನೆಗಳಿಗೆ ಎಷ್ಟೆಷ್ಟು ಹಣ ಖರ್ಚು ಮಾಡಿದೆವೆಂಬುದನ್ನು ವಿವರವಾಗಿ ಬೋರ್ಡಗಳಲ್ಲಿ ಬರೆಯಿಸಿ ಸಾರ್ವಜನಿಕರು ಓಡಾಡುವ ರಸ್ತೆಗಳ ಬದಿಯಲ್ಲಿ ಹಾಕಿಸಿರುತ್ತಾರೆ. ಅರಸರು ನೀಡಿದ ದಾನದಲ್ಲಿ, ಕೆತ್ತಿನಿಲ್ಲಿಸಿದ ಶಾಸನಗಳಲ್ಲಿ ಅಹಂಭಾವ ಕಾಣಿಸಿಕೊಂಡರೆ, ಆಳುವ ಸರಕಾರದ ಬೋರ್ಡುಗಳಲ್ಲಿ ಪ್ರಚಾರ ಕಾಣಿಸುತ್ತದೆ.

ದಾನದ ಪರಂಪರೆ ಬಹುದೊಡ್ಡದು, ಹಿಂದಿನಿಂದಲೂ ಈ ದೇಶದಲ್ಲಿ ದಾನಪದ್ಧತಿ ಬೆಳೆದುಕೊಂಡು ಬಂದಿದೆ. ದಾನಧರ್ಮ ಮಾಡಬೇಕೆಂದು ಅನೇಕ ಧರ್ಮಗಳಲ್ಲಿ ಹೇಳಲಾಗಿದೆ. ಆದರೆ ದಾನವು ಅಹಂಕಾರಕ್ಕೆಡೆಮಾಡಿಕೊಡುವುದನ್ನು; ದಾನ ಪಡೆಯುವವನಲ್ಲಿ ಕೀಳರಿಮೆ ಉಂಟಾಗುವುದನ್ನು ಗಮನಿಸಿದ ಶರಣರು ದಾನಕ್ಕೆ ಬದಲಾಗಿ ದಾಸೋಹ ಸಂಸ್ಕೃತಿಯನ್ನು ಬೆಳೆಸಿದರು. ಇದು ಅಹಂಕಾರ ನಿರಸನ ಸಿದ್ಧಾಂತವಾಗಿದೆ.

“ದೇಹ ನಿರ್ದೇಹವೆಂದೆನುತ್ತಿಪ್ಪರಯ್ಯಾ
ದೇಹ ನಿರ್ದೇಹ(ದ) ಮರ್ಮವನರಿಯರು
ಅಹಮ್ಮೆಂಬುದೆ ದೇಹ ನೋಡಾ,
ದಾಸೋಹವೆಂಬುದೆ ನಿರ್ದೇಹನೋಡಾ
ಅಹಂಭಾವವಳಿದುಳಿದು ದಾಸೋಹಿಯಾದ
ಕೂಡಲಚೆನ್ನಸಂಗಾ ನಿಮ್ಮ ಶರಣ..”
- ಚೆನ್ನಬಸವಣ್ಣ (ಸ.ವ.ಸಂ.6,ವ:592)

ಈ ವಚನದಲ್ಲಿ ಚೆನ್ನಬಸವಣ್ಣನವರು, ದೇಹ-ನಿರ್ದೇಹದ ಪರಿಕಲ್ಪನೆಯನ್ನು ಹೊಸ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ದೇಹವು ನಿರ್ದೇಹವಾಗುವದೆಂದರೆ, ದೇಹದಲ್ಲಿರುವ ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರಗಳನ್ನು ಕಳೆದುಕೊಳ್ಳುವುದೆಂದರ್ಥವಾಗುತ್ತದೆ. ಅಹಂಕಾರ ನಿರಸನ ಮಾಡಿಕೊಳ್ಳುವುದೇ ನಿರ್ದೇಹ, ಇಂತಹ ನಿರ್ದೇಹ ದಾಸೋಹದಿಂದ ಸಾಧ್ಯವಾಗುತ್ತದೆಂದು ಚೆನ್ನಬಸವಣ್ಣನವರು ಸ್ಪಷ್ಟಪಡಿಸಿದ್ದಾರೆ. ಅಹಂಭಾವ ಅಳಿದಾಗಲೇ ದಾಸೋಹಿಯಾಗಲು ಸಾಧ್ಯವೆಂಬುದು ಶರಣರ ದೃಢವಾದ ನಂಬಿಕೆಯಾಗಿದೆ.

ಚೆನ್ನಬಸವಣ್ಣನವರು ತಮ್ಮ ಇನ್ನೊಂದು ವಚನದಲ್ಲಿ ಇದೇ ವಿಚಾರವನ್ನು ಮುಂದುವರಿಸಿ ಹೇಳಿದ್ದಾರೆ. ದೇಹಭಾವದಹಂಕಾರ ದಾಸೋಹಭಾವದೊಳಗಲ್ಲದೆ ಅಳಿಯದೆಂದು ತಿಳಿಸಿದ್ದಾರೆ. ಮರುಳಶಂಕರದೇವರು ಮಹಾದಾಸೋಹಿಯಾಗಿದ್ದರೆಂಬುದನ್ನು ಇದೇ ವಚನದಲ್ಲಿ ಹೇಳಿದ್ದಾರೆ. (ವ:881). ಅಂತಹ ದಾಸೋಹಿಯನ್ನು ನಿಮ್ಮಿಂದ ಕಾಣುವಂತಾಯಿತೆಂದು ಬಸವಣ್ಣನವರಿಗೆ ಹೇಳುತ್ತಾ, ದಾಸೋಹದ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ಅಂಗವನ್ನು ಆಚಾರಕ್ಕರ್ಪಿಸಿದಾಗ ಆಚಾರಲಿಂಗ ಪ್ರಸಾದಿಯಾಗುತ್ತಾನೆ. ಪ್ರಾಣವನ್ನು ಲಿಂಗಕ್ಕರ್ಪಿಸಿ, ಆ ಲಿಂಗವನು ಪ್ರಾಣಕ್ಕರ್ಪಿಸಿದಾಗ ಪ್ರಾಣಲಿಂಗ ಪ್ರಸಾದಿಯಾಗುತ್ತಾನೆ. ಹೀಗೆ ಎಲ್ಲವನ್ನೂ ಸಮರ್ಪಣೆ ಮಾಡಿಕೊಳ್ಳುವುದೇ ದಾಸೋಹದ ಪರಮಗುರಿಯಾಗಿದೆ. ದಾನದ ವಿಷಯದಲ್ಲಿ ಎಲ್ಲವನ್ನು ಸಮರ್ಪಿಸಿಕೊಳ್ಳುವುದಿಲ್ಲ. ಹೆಚ್ಚಾದುದನ್ನು ನೀಡಲಾಗುತ್ತದೆ. ಅನೇಕ ಸಲ ಪುಣ್ಯ ಬರುತ್ತದೆಂಬ ಕಾರಣಕ್ಕೆ ದಾನ ಮಾಡಲಾಗುತ್ತದೆ. ಆದರೆ ದಾಸೋಹದಲ್ಲಿ ಇಂತಹ ನಿರೀಕ್ಷೆಗಳಿಲ್ಲ. ಏನೋ ಸಿಗುತ್ತದೆಂಬ ಕಾರಣಕ್ಕೆ ಯಾವುದೋ ಆಗುತ್ತದೆಂಬ ಕಾರಣಕ್ಕೆ ದಾಸೋಹ ಮಾಡುವುದಿಲ್ಲ. ಹೀಗಾಗಿ ದಾನ ಮತ್ತು ದಾಸೋಹದ ಪರಿಕಲ್ಪನೆಗಳು ಬೇರೆ ಬೇರೆಯಾಗಿವೆ. ಅಹಂಕಾರವನ್ನು ಕಳೆದುಕೊಳ್ಳುವಲ್ಲಿ ದಾಸೋಹದ ಪಾತ್ರ ದೊಡ್ಡದಾಗಿದೆ.

“ಹೊನ್ನು ಹೆಣ್ಣು ಮಣ್ಣು ನಿಮ್ಮ ಸೊಮ್ಮು
ತನುವೆನಗಿಲ್ಲ ತನುವಿನಲ್ಲಿ ನೀವೆಡೆಗೊಂಡಿಪ್ಪಿರಾಗಿ
ಮನವೆನಗಿಲ್ಲ ನೆನಹಿನ ಕೊನೆಯಲ್ಲಿ ಬೆಳಗುತಿರ್ಪಿರಾಗಿ
ನೀವೇ ಪ್ರಾಣವಾಗಿಪ್ಪಿರಾಗಿ
ಆನೆಂಬ ಭಾವಕ್ಕೆ ತೆರಹಿಲ್ಲದೆ ನಿರಹಂಕಾರದಿಂ
ಮಾಡುವ ನೀಡುವ ಸಂದಳಿ
ದಾಸೋಹದ ನಿರಹಂಕೃತಿ ನಿಷ್ಪತ್ತಿಯಾಗಿ
ಸ್ವಾನುಭಾವದ ನಿಜಸುಖದಿಂದೆರಡರಿಯದಿರ್ಪರಯ್ಯಾ
ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು”

- ಆದಯ್ಯ (ಸ.ವ.ಸಂ:6, ವ: 1162)

ಆದಯ್ಯ ತಮ್ಮ ಈ ವಚನದಲ್ಲಿ ಅಹಂಕಾರ ನಿರಸನದ ಮತ್ತೊಂದು ಮುಖವನ್ನು ತೆರೆದುತೋರಿಸಿದ್ದಾರೆ. ದೇಹ-ನಿರ್ದೇಹವಾಗುವುದನ್ನು ಹಿಂದಿನ ವಚನದಲ್ಲಿ ಚೆನ್ನಬಸವಣ್ಣನವರು ಹೇಳಿದ್ದರೆ, ಇಲ್ಲಿಯ ಚಿಂತನೆ ಭಿನ್ನವಾಗಿದೆ. ದೇಹ ತನ್ನದೆಂದು ತಿಳಿದುಕೊಂಡಾಗ ನಿರ್ದೇಹವಾಗಬೇಕಾದ ಅನಿವಾರ್ಯತೆಯಿದೆ. ಆದರೆ ಇಲ್ಲಿ ಆದಯ್ಯ ಹೇಳಿರುವ ರೀತಿ ಮತ್ತೊಂದು ತೆರನಾದುದಾಗಿದೆ. ತನುವೆಂಬುದು ತನಗಿಲ್ಲವೆಂದು ಇಲ್ಲಿ ಭಕ್ತ ಮೊದಲೇ ಹೇಳಿಕೊಂಡಿದ್ದಾನೆ. ತನುವಿನಲ್ಲಿ ನೀವೇ ತುಂಬಿಕೊಂಡಾಗ ಆ ತನು ತನ್ನದಲ್ಲವೆಂಬುದು ಆತನ ನಂಬಿಕೆಯಾಗಿದೆ. ಯಾವಾಗ ತನುವೇ ತನ್ನದಲ್ಲವೆಂದು ತಿಳಿದುಕೊಂಡಾಗ ಅಲ್ಲಿ ನಿರ್ದೇಹವಾಗುವ ಸಂದರ್ಭವೇ ಬರುವುದಿಲ್ಲ. ತನು ನನ್ನದಲ್ಲ, ಪ್ರಾಣ ನನ್ನದಲ್ಲ, ಮನವೆಂಬುದೆನಗಿಲ್ಲ ಎಂಬಂತಹ ಭಕ್ತಿಭಾವ ಬೆಳೆದು, ಭಕ್ತನು ಶರಣನ ಹಂತ ತಲುಪಿದ ಮೇಲೆ ಅಲ್ಲಿ ದೇಹವು ಸಹಜವಾಗಿಯೇ ನಿರ್ದೇಹವಾಗಿಬಿಡುತ್ತದೆ. ಆಗ ಎರಡೆಂಬ ದ್ವಂದ್ವವಳಿದು ಒಂದಾಗಿ ಕಾಣುತ್ತದೆ. ಆಗ ಸಹಜವಾಗಿಯೇ ದಾಸೋಹದಲ್ಲಿ ನಿರಹಂಕೃತಿ ಕಾಣಿಸಿಕೊಳ್ಳುತ್ತದೆ. ಇದನ್ನೇ ಆದಯ್ಯನವರು “ಸ್ವಾನುಭಾವದ ನಿಜಸುಖದಿಂದೆರಡರಿಯದಿರ್ಪರಯ್ಯಾ” ಎಂದು ಹೇಳಿದ್ದಾರೆ. ಪ್ರಾರಂಭದ ಹಂತದಲ್ಲಿದ್ದ ತಾನು, ತನ್ನದೆಂಬ ಭಾವವಳಿದು ಹೋದಾಗ ಭಕ್ತ ನಿರ್ದೇಹಿಯಾಗುತ್ತಾನೆ. ನಿಜವಾದ ದಾಸೋಹಿಯಾಗುತ್ತಾನೆಂದು ಶರಣರು ತಿಳಿಸಿದ್ದಾರೆ.

ಈ ಅಂಕಣದ ಹಿಂದಿನ ಬರಹಗಳು:
ಶರಣರ ಪಾಲಿಗೆ ಕಡ್ಡಾಯ ಮಾತ್ರವಾಗಿರದೆ, ಕೈಲಾಸವೂ ಆಗಿದ್ದ ಕಾಯಕ
ಕಾಯಕವೇ ನಿಜ ವ್ರತವೆಂದು ನಂಬಿದ್ದ ಶರಣರು
ಶರಣರ ಕಾಲದ ಮನರಂಜನೆಯ ಕಾಯಕಗಳು
ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ

ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...