ಭಾವಶುದ್ಧಿಯೇ ಆಧ್ಯಾತ್ಮ 

Date: 28-09-2022

Location: ಬೆಂಗಳೂರು


ತಾತ ಊಟ ಮಾಡುವಾಗ ಮುತ್ಯಾ ಅವನನ್ನೆ ನೋಡುತ್ತಾ ಕೂತಿದ್ದಳು. ಆಗವಳು ನನಗೆ ಅಪ್ಪಟ ತಾಯಂತೆ ಮಾತ್ರ ಕಂಡಳು. ಅವಳ ಕಣ್ಣುಗಳು ಪ್ರಜ್ವಲಗೊಂಡವು ಪ್ರೀತಿ ಉಕ್ಕಿತು. ಹೃದಯದಲ್ಲಿ ಜ್ವಲಿಸುವ ಪ್ರೀತಿ ಮುಖದಲ್ಲಿ ಕಾಣುವುದು ಅನ್ನುವುದನ್ನು ಅವತ್ತು ಕಂಡೆ ಎಂದು ನೆನಪಿನ ಸುರುಳಿ ಬಿಚ್ಚಿಡುತ್ತಾರೆ ಲೇಖಕಿ ಪಿ. ಚಂದ್ರಿಕಾ. ಅವರು ತಮ್ಮ ತೇಲುವ ಪಾದಗಳು ಅಂಕಣದಲ್ಲಿ ಮುತ್ಯಾಳ ಪ್ರಕೃತಿಸಹಜ ವಿನಯವನ್ನು ಕಾಣಿಸುವ ಚಿತ್ರಗಳನ್ನು ಕೊಟ್ಟಿದ್ದಾರೆ.

ತಾತ ಬದುಕನ್ನು ಕಟ್ಟಿಕೊಳ್ಳಲಿಕ್ಕೆ ಹರಸಾಹಸ ಮಾಡುತ್ತಿದ್ದ. ಸಾಲಕ್ಕೆ ಬಸ್ಸು ಮಾರಿದ ದುಡ್ಡು ಸರಿ ಹೋಗಿಬಿಟ್ಟಿತ್ತು. ಅಷ್ಟಾದರೂ ಪುಣ್ಯ ಅವನದಿತ್ತು. ಈಗ ಮತ್ತೆ ಬರಿ ಕೈ ದಾಸಯ್ಯನಾಗಿದ್ದ. ಚಿಕ್ಕಿಯ ಮದುವೆ ವೇದನೆಯಾಗಿ ಕಾಡತೊಡಗಿತ್ತು. ತನ್ನ ತಪ್ಪುಗಳ ಲೆಕ್ಕಕ್ಕೆ ಸಿಕ್ಕು ಒದ್ದಾಡುತ್ತಿದ್ದ. ವಯಸ್ಸು ಅರವತ್ತಕ್ಕೆ ಬಂದರೂ ಇನ್ನೂ ಬದುಕಿನಲ್ಲಿ ಸರಿಯಾಗಿ ನೆಲೆ ಕಂಡುಕೊಳ್ಳಲಾಗದೆ ಹೋದ ತನ್ನ ಅಸಹಾಯಕತೆಗೆ ಕಾರಣವನ್ನು ಹುಡುಕತ್ತಲೇ ಇದ್ದ. ಯಾವ ಮನುಷ್ಯನೂ ಅಷ್ಟೆ ತಪ್ಪು ತನ್ನದೇ ಎಂದು ಒಪ್ಪಿಕೊಳ್ಳುವುದಕ್ಕೆ ಮುಂದಾಗಲಾರ. ಹಾಗಾದರೆ ಅವನು ಮನುಷ್ಯ ಎನಿಸಿಕೊಳ್ಳಲಾರ. ಅದಕ್ಕಿಂತ ಸ್ವಲ್ಪ ಮುಂದಕ್ಕೆ ಹೋಗಿಬಿಡುತ್ತಾನೆ. ಆದರೆ ತಾತನಿಗೆ ನರಳಿಕೆ ಬೆನ್ನಿಗೆ ಹತ್ತಿದ ಭೂತದ ಹಾಗೆ ಅಂಟಿಕೊಂಡೆ ಇತ್ತು. ಕೆಲವೊಮ್ಮೆ ಆರ್ದ್ರವಾಗುತ್ತಿದ್ದ. ಮತ್ತೆ ಕೆಲವೊಮ್ಮೆ ಕೋಪಗೊಳ್ಳುತ್ತಿದ್ದ. ತನ್ನ ಅಸಹಾಯಕತೆಗೆ ಅಳುತ್ತಿದ್ದ. ಮಡಿಯಲ್ಲಿದ್ದ ತನ್ನನ್ನು ಸ್ವಾನ ಮಾಡದ ಅಮ್ಮಮ್ಮ ತಗುಲಿಸಿದ್ದಕ್ಕೆ ಹೊಡೆದೇ ಬಿಟ್ಟಿದ್ದ. ಹೊಲಿಗೆ ಬಿಟ್ಟು ಹೋಗಿದ್ದ ತನ್ನ ಒಳ ಲಂಗಕ್ಕೆ ಹೊಲಿಯುತ್ತಾ ಕೂತಿದ್ದ ಅಮ್ಮಮ್ಮ ಸ್ನಾನವನ್ನೂ ಮಾಡಿರಲಿಲ್ಲ. ಅವಳಿಗೂ ಮಾನಸಿಕವಾಗಿ ನೋವುಗಳಿದ್ದವಲ್ಲ. ಲೋಕದ ಕಣ್ಣಿನಲ್ಲಿ ಸಾಹುಕಾರ್ತಿಯಾಗಿದ್ದವಳು ಅದೇ ಲೋಕದ ಕಣ್ಣಿಗೆ ಏನೂ ಇಲ್ಲದವಳಾಗಿ ಕಾಣಬೇಕಾಯಿತೆನ್ನುವುದು ಅವಳ ಸಂಕಟಕ್ಕೆ ಕೊನೆಯೇ ಇಲ್ಲವಾಗಿತ್ತು. ಇಂಥಾ ಹೊತ್ತಲ್ಲಿ ಆಕಸ್ಮಿಕವಾಗಿ ಸ್ನಾನ ಮುಗಿಸಿ ಬಂದ ತಾತನಿಗೆ ಮೈಲಿಗೆ ಬಟ್ಟೆ ತಾಕಿಯೇ ಬಿಟ್ಟಿತು. ಅದು ಅವಳ ತಪ್ಪಲ್ಲ. ಹೊಲಿಗೆ ಮಿಷನ್ ಇಟ್ಟುಕೊಳ್ಳಲು ಬೇರೆ ಜಾಗವೂ ಇರಲಿಲ್ಲವಾದ್ದರಿಂದ ದಾರಿಗೆ ಕೂತಿದ್ದಳು. ಮಡಿಯುಟ್ಟ ತನಗೆ ಮತ್ತೆ ಮೈಲಿಗೆಯಾಯಿತೆಂದು ಕ್ಯಾತೆ ತೆಗೆದು ಅವಳಿಗೆ ಹೊಡೆದಿದ್ದ. ಪರಿಣಾಮ ಹೊಲಿಗೆ ಬಟ್ಟೆಗೆ ತಪ್ಪಿ ಅವಳ ಅಂಗೈ ಮೇಲೆ ಹರಿದು ಸೂಜಿ ಮುರಿದು ಅವಳ ಕೈ ಒಳಗೇ ಸೇರಿಕೊಂಡು ಬಿಟ್ಟಿತ್ತು. ತಣ್ಣಗೆ ನೋಡುತ್ತಿದ್ದ ಮುತ್ಯಾ ತಾತನ ಕೈಗಳನ್ನು ಹಿಡಿದು, `ತಪ್ಪು ಮಾಡುತ್ತಿರುವೆ ನಾರಾಯಣ, ಹೆಣ್ಣು ಪ್ರತಿ ಮನೆಯ ಅನ್ನಪೂರ್ಣೆ, ಅವಳ ಕೈಲಿ ಸಾಕ್ಷಾತ್ತು ಅಗ್ನಿದೇವ ನೆಲೆಸಿದ್ದಾನೆ. ಅವಳು ಪವಿತ್ರ. ಅವಳಿಗೆ ಮಡಿಯೂ ಇಲ್ಲ ಮೈಲಿಗೆಯೂ ಇಲ್ಲ. ನಿನಗೂ ಅಂಥಾ ಶಕ್ತಿ ಇಲ್ಲವೋ, ಪೊರೆಯುವವಳು ಅವಳೇ. ವಿವೇಕ ಇಲ್ಲದೆ ಅವಳ ಮೇಲೆ ಕೈ ಮಾಡಬಾರದಿತ್ತು. ಈ ತಪ್ಪನ್ನು ಮಾತ್ರ ಯಾವತ್ತು ಕ್ಷಮಿಸಲ್ಲ’ ಎಂದಿದ್ದಳು. ತನ್ನ ಗಂದ ತನ್ನ ಮೇಲೆ ಕೈ ಮಾಡಬಹುದೆಂದು ಊಹೆ ಕೂಡಾ ಮಾಡದಿದ್ದ ಅಮ್ಮಮ್ಮ ದಿಗ್ಭ್ರಾಂತಿಗೊಂಡು ಕೂತಿದ್ದಳು. ಅವಳ ಕೈ ಸೇರಿದ ಸೂಜಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಓಡಾಡತೊಡಗಿತ್ತು. ದಿಕ್ಕು ತೋಚದ ಸ್ಥಿತಿ. ತಪ್ಪುಗಳು ಸುಮ್ಮನೆ ಆದರೆ ಪರವಾಗಿಲ್ಲ. ಅಮ್ಮಮ್ಮನಿಗೆ ಅದರಿಂದ ತೊಂದರೆಯಾಯಿತು. ಮುರಿದ ಸೂಜಿಯ ಮೊನೆ ರಕ್ತನಾಳಕ್ಕೆ ಸಿಕ್ಕು ರಕ್ತದ ಜೊತೆ ಹರಿಯಲಾರಂಭಿಸಿತು. ಅಮ್ಮಮ್ಮನಿಗೆ ನೋವಾಗತೊಡಗಿತ್ತು. ಅದನ್ನು ತಡೆಯಲಾಗದೆ ಚೀರುತ್ತಿದ್ದಳು. ಅವಳ ಕಣ್ಣುಗಳಲ್ಲಿ ನೀರು ದಳದಳನೆ ಹರಿಯುತ್ತಿತ್ತು. ಮುತ್ಯಾಗೂ ಗಾಬರಿಯಾಯಿತು. ತಕ್ಷಣವೇ ರಾಮುಡೂಗೆ ಗಾಡಿಗಾಗಿ ಹೇಳಿಕಳಿಸಿದ್ದಳು. ರಾಮುಡೂ ಮಗ ಅಪ್ಪನ ಒಂದೇ ಮಾತಿಗೆ ಗಾಡಿಯನ್ನು ತಂದು ಮನೆಯ ಮುಂದೆ ನಿಲ್ಲಿಸಿದ್ದ. ಮುತ್ಯಾ ತಾತನಿಗೆ ಅಮ್ಮನನ್ನು ಕರೆದೊಯ್ಯುವಂತೆ ಖಡಕ್ಕಾಗಿ ಹೇಳಿದ್ದಳು. ಜಿಲ್ಲಾಸ್ಪತ್ರೆಯಲ್ಲಿ ಆ ಜಾಗವನ್ನು ಕುಯ್ದು ಸೂಜಿಯನ್ನು ಹೊರತೆಯಲಾಯಿತು. ಅಮ್ಮಮ್ಮನಿಗಾದ ಸ್ಥಿತಿಯಿಂದ ತಾತನಿಗೆ ಪಶ್ಚಾತ್ತಾಪ ಆಗಿತ್ತು ಎನ್ನುವುದು ಅವನ ವರ್ತನೆಯಲ್ಲೇ ಗೊತ್ತಾಗುತ್ತಿತ್ತು. ಆದರೆ ಅದನ್ನು ಹೇಳಲಾಗದ ಏನೋ ಹಮ್ಮು ಅವನನ್ನು ಕಾಡುತ್ತಿತ್ತು. ಮನೆಗೆ ಬರುವವರೆಗೂ ಇಬ್ಬರ ಮಧ್ಯೆ ಮಾತು ಕತೆ ಇರಲಿಲ್ಲ.

ತಾತನ ತಪ್ಪು ಅವನಿಗೂ ಗೊತ್ತಾಗಿತ್ತಾದ್ದರಿಂದ ಮನೆಯೊಳಗೆ ಬಂದವನೇ ಮುತ್ಯಾಳ ಮಡಿಲಿನಲ್ಲಿ ಮಗುವಿನ ಹಾಗೆ ಮಲಗಿಬಿಟ್ಟಿದ್ದ. ತಾಯ್ತನದ ಅಪೂರ್ವ ಕ್ಷಣಗಳನ್ನು ಅನುಭವಿಸುವ ಹಾಗೆ ಮುತ್ಯಾ ಕೂಡಾ ಭಾವುಕಳಾಗಿದ್ದಳು. ತಾತನಿಗೆ ಸಮಾಧಾನ ಮಾಡುವ ಹಾಗೆ ಅವನ ತಲೆಯನ್ನು ನೇವರಿಸುತ್ತಲಿದ್ದಳು. ಅಷ್ಟರಲ್ಲಿ ಪಾಲೇರಮ್ಮ ಎನ್ನುವ ಹೆಂಗಸು ಅಜ್ಜಿಯನ್ನು ಹುಡುಕಿ ಬಂದಿದ್ದಳು. ಅವಳದ್ದೊಂದು ದೊಡ್ಡ ಗೋಳು. ಮಗಳು ಮೈನೆರೆತೇ ಇರಲಿಲ್ಲ. ಆದರೆ ಮದುವೆ ವಯಸ್ಸು ಬಂತೆಂದು ಮದುವೆಯನ್ನೂ ಮಾಡಿಬಿಟ್ಟಿದ್ದಳು. ಈಗ ಅಳಿಯ ಮಗಳನ್ನು ಕರೆತಂದು ಮನೆಗೆ ಬಿಟ್ಟು ಹೋಗಲು ಬಂದಿದ್ದ. ಅದನ್ನು ತಡೆಯಬೇಕಿತ್ತು. ಇದೇನು ಊರಲ್ಲಿ ಗುಟ್ಟಾಗಿದ್ದ ವಿಷಯವಿರಲಿಲ್ಲ. ಅವಳನ್ನು ನೋಡಿದ ಚಿಕ್ಕಿ ಈಗ ಮನೆಯಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ. ವಾಪಾಸು ಹೋಗುವಂತೆ ಹೇಳಿದ್ದಳು. ಪಾಲೇರಮ್ಮ `ಮನೆ ಮುಳುಗುತ್ತಿದೆ. ಯಾವುದೇ ಕಾರಣಕ್ಕೂ ನಾನು ವಾಪಾಸು ಹೋಗಲ್ಲ. ದೊಡ್ಡವ್ವನನ್ನು ನೋಡಲೇಬೇಕು’ ಎಂದು ಹಟ ಹಿಡಿದಿದ್ದಳು. ಮುತ್ಯಾಗೆ ವಿಷಯ ಗೊತ್ತಾಗಿ ತಾನೇ ಎದ್ದು ಬಂದಿದ್ದಳು. ಅವಳನ್ನು ನೋಡಿದರೆ ಮನೆಯಲ್ಲಿ ಏನೂ ನಡೆದೇ ಇಲ್ಲ ಎನ್ನುವಂತಿತ್ತು. `ಏನು ಮಾಡಲಿ ಅದನ್ನು ವಿಧಿ ಅನ್ನಬೇಕೋ ಅಥವಾ ಐಬನ್ನಬೇಕೋ ತಿಳಿಯದು. ಪ್ರಕೃತಿಯೇ ಕೆಲವನ್ನು ನಿರ್ಧರಿಸುತ್ತದೆ. ಅದರ ನಿರ್ಧಾರವನ್ನು ನಾನಾಗಲೀ ನೀನಾಗಲಿ ಇಲ್ಲ ಎನ್ನಬಾರದು. ಮುಂಚೆಯೇ ವಿಷಯವನ್ನು ತಿಳಿಸಿದ್ದಿದ್ದರೆ ಇವತ್ತಿನ ಈ ಸ್ಥಿತಿ ಎದುರಾಗುತ್ತಿರಲಿಲ್ಲ’ ಎಂದಳು. ಪಾಲೇರಮ್ಮ ಅವಳ ಮಾತನ್ನು ಕೇಳಲಿಕ್ಕೆ ಸಿದ್ಧ ಇರಲಿಲ್ಲ. `ಹೆತ್ತವರ ಸಂಕಟ ಹೆತ್ತವರಿಗೇ ಗೊತ್ತು. ದೇವರೇ ನನಗೆ ಮೋಸವನ್ನು ಮಾಡಿದ. ನನ್ನ ಮಗಳನ್ನು ಕಾಪಾಡಲು ಯಾರೂ ಇಲ್ಲವಾ? ನೀನೇ ಹೀಗೆಂದರೆ ಹೇಗೆ? ಏನಾದರೂ ಸರಿ ಔಷಧಿ ಕೊಡು, ನಿನ್ನ ನಾನು ನಂಬಿ ಬಂದಿದ್ದೇನೆ’ ಎಂದು ಬೇಡಿಕೊಳ್ಳಲಾರಂಭಿಸಿದಳು. ಮುತ್ಯಾಗೆ ಅವಳ ಸಂಕಟದ ಎದುರು ಏನೂ ಮಾಡಲಿಕ್ಕೆ ತೋಚಲಿಲ್ಲ. `ನಾನು ಯೋಗಿನಿಯಲ್ಲ, ವೈದ್ಯಳೂ ಅಲ್ಲ, ನನ್ನ ಕೈಲಿ ಮಾಯಾ ಮಂತ್ರ ಮಾಡಲಿಕ್ಕೆ ಬರೋದಿಲ್ಲ ನಾನೇನು ಮಾಡಬಲ್ಲೆ’ ಎಂದು ಅವಳನ್ನು ಕೇಳುತ್ತಿದ್ದಳೋ ಅಥವಾ ತನಗೆ ತಾನೇ ಹೇಳಿಕೊಳ್ಳುತ್ತಿದ್ದಳೋ ಗೊತ್ತಾಗಲಿಲ್ಲ. ತಾತ ಹೊರಗೆ ಬಂದವನು ಸುಮ್ಮನೆ ದಿಟ್ಟಿಸಿ ನೋಡುತ್ತಾ ನಿಂತ.

ಸ್ವಲ್ಪ ಹೊತ್ತಿನ ನಂತರ ಮುತ್ಯಾ ಹಟಕ್ಕೆ ಬಿದ್ದಿದ್ದ ಪಾಲೇರಮ್ಮನ ಕೈ ಹಿಡಿದು ಹಿತ್ತಲಿಗೆ ಕರೆದೊಯ್ದಳು. ಮೋಟು ಗೋಡೆಗೆ ಹೇಳುವಂತೆ ಹೇಳುತ್ತಾಳೋ? ಎಂದು ನಾನೂ ಹಿಂದೇ ಹೋದೆ. ಹೂಗಳು ಅರಳಿದ್ದರಿಂದ ಜೇನ್ನೊಣಗಳು ಝೇಂಕರಿಸುತ್ತಿದ್ದವು. ನೆಲವನ್ನೇ ದಿಟ್ಟಿಸುತ್ತಾ ನಿಂತ ಮುತ್ಯಾ ಇದ್ದಕ್ಕಿದ್ದ ಹಾಗೆ, `ಪಾಲೇರಮ್ಮಾ ಬಾ ಇಲ್ಲಿ’ ಎಂದಳು. ಒಂದು ತಿಪ್ಪೆ ಹುಳು ಸೆಗಣಿಯನ್ನು ತೆಗೆದುಕೊಂಡು ಹೋಗುತ್ತಿತ್ತು. ಅದನ್ನು ತೋರಿಸಿ `ಏನಿದು?’ ಎಂದಳು. `ಅದರ ಊಟವನ್ನು ಅದು ತೆಗೆದುಕೊಂಡು ಹೋಗುತ್ತಿದೆ’ ಎಂದಳು ಪಾಲೇರಮ್ಮ. ಹಾಗೇ ಜೇನ್ನೊಣವನ್ನು ತೋರಿಸಿ `ಇದೇನಿದು?’ ಎಂದಳು. `ಹೂವಿನ ಜೇನನ್ನು ಹೀರಿ ತಮ್ಮ ಊಟವನ್ನು ತಯಾರು ಮಾಡಿಕೊಳ್ಳುತ್ತಿವೆ’ ಎಂದಳು. `ಸರಿ ಹಾಗಾದರೆ ಸೆಗಣಿ ಹುಳು ಯಾಕೆ ಜೇನ್ನೊಣದ ಹಾಗೆ ಹೂವಿನ ಮಕರಂದ ಹೀರುತ್ತಿಲ್ಲ’ ಎಂದು ಕೇಳಿದ ಮುತ್ಯಾನ ಮಾತಿಗೆ, `ದೊಡ್ಡವ್ವ ನಿಂದೊಳ್ಳೆ ರಗಳೆ ಆಯ್ತಲ್ಲಾ? ಜೇನು ಹುಳ ಸೆಗಣಿ ಹುಳ ಒಂದೇನಾ?’ ಎಂದಳು ಪಾಲೇರಮ್ಮ. `ಒಂದೊಂದಕ್ಕೆ ಒಂದೊಂದು. ಹಾಗಾದರೆ ಸೆಗಣಿ ಒಯ್ಯುವ ಹುಳಕ್ಕೆ ಜೀವನ ಸಾರ್ಥಕ್ಯ ಇರುವುದಿಲ್ಲವೇ? ಜೇನು ಶ್ರೇಷ್ಠ ಎಂದರೆ ಉಳಿದವೇನು ಮಾಡಬೇಕು? ಎಲ್ಲರ ಬದುಕಿಗೂ ಒಂದೊಂದು ಸಾರ್ಥಕತೆ ಇದ್ದೇ ಇದೆ. ಇದನ್ನು ಮೊದಲು ನಿನ್ನ ಮಗಳಿಗೆ ತಿಳಿ ಹೇಳು ನಂತರ ನಿನ್ನ ಅಳಿಯನಿಗೆ’ ಎಂದಳು ಮುತ್ಯ ಮತ್ತೆ. ಪಾಲೇರಮ್ಮನಿಗೆ ರೇಗಿ ಹೋಯ್ತು, `ಇದೆಲ್ಲಾ ಇರಲಿ ದೊಡ್ಡವ್ವ ನನ್ನ ಮಗಳ ಭವಿಷ್ಯ ಏನು ಅದನ್ನಾದ್ರೂ ಹೇಳಿಬಿಡು’ ಎಂದಳು. `ನಿನ್ನ ಮಗಳ ವಿಚಾರದಲ್ಲೂ ಸತ್ಯಗಳನ್ನು ಒಪ್ಪಿಕೋ. ನೀನೇ ಒಪ್ಪದಿದ್ದ ಮೇಲೆ ಬೇರೆಯವರನ್ನು ಹೇಗೆ ಒಪ್ಪಿಸುತ್ತೀಯಾ?’ ಎಂದಳು. ಪಾಲೇರಮ್ಮ ಅತ್ತು ರಂಪ ಮಾಡುತ್ತಾ, `ನಿನ್ನ ಬಗ್ಗೆ ಎಲ್ಲಾ ಏನೆಲ್ಲಾ ಹೇಳ್ತಾರೆ. ನನ್ನ ವಿಷಯಕ್ಕೆ ಮಾತ್ರ ನೀನು ಕಠೋರವಾಗಿ ನಡೆದುಕೊಳ್ಳುವುದು ಸರಿಯಾ?’ ಎಂದಳು. `ನನ್ನನ್ನು ಅಸಹಾಯಕತೆಗೆ ದೂಡುತ್ತಿದ್ದೀಯ? ಅವಳಿಗೆ ನಾನು ಹೇಗೆ ಔಷಧಿ ಕೊಡಲಿ? ಪ್ರಕೃತಿಯೇ ಸರಿ ಮಾಡಲಾಗದ ತಪ್ಪನ್ನು ಮಾಡಿದೆ. ಅದನ್ನು ಸರಿ ಮಾಡಬಲ್ಲೆನೆಂಬ ದಾರ್ಷ್ಟ್ಯ ನನಗಿಲ್ಲ’ ಎಂದಳು ಮುತ್ಯಾ. ಕಡೆಗೆ ಅಳೆದೂ ಕರೆದು ತೂಗಿ ಬಾಗಿ, `ಆಗಿದ್ದೆಲ್ಲಾ ಆಗಿ ಹೋಗಿದೆ. ನನ್ನ ಮಗಳನ್ನು ಕರೆದೊಯ್ಯುವಂತಾದರೂ ಅಳಿಯನಿಗೆ ಹೇಳು ಬಾ’ ಎಂದಳು ಪಾಲೇರಮ್ಮ. `ಮುದುಕಿಯ ಮಾತು ನಡೆಯುತ್ತೆ ಅಂದರೆ ಯಾಕೆ ಬೇಡ ಅನ್ನಲಿ ನಡೀ’ ಎನ್ನುತ್ತಾ ಮುತ್ಯಾ ಹೊರಟಳು. ಅಲ್ಲೇನಾಯಿತು ಗೊತ್ತಿಲ್ಲ. ಗೆಲುವಿಲ್ಲದ ಮುಖದಲ್ಲಿ ಮುತ್ಯಾ ವಾಪಾಸು ಬಂದಳು.

ತಾತ `ಏನಾಯಿತು?’ ಎಂದ. ಅವಳ ಕಣ್ಣುಗಳು ದೀರ್ಘವಾದ ನೋಟವನ್ನು ಬೀರಿದ್ದವು. ಅವಳ ಕಣ್ಣುಗಳಿಗೆ ಸಮ್ಮೋಹನಗೊಳಿಸುವ ಶಕ್ತಿ ಇತ್ತೆಂದುಕೊಂಡೆ. ತಾತ ಮತ್ತೆ ಕೇಳಿದ, `ಅವನು ಮಾತುಗಳನ್ನು ಕೇಳಿದನೇ?’ ನಕ್ಕಳು, ನಗುವಾಗಲೇ ಅವಳ ಜೋತುಬಿದ್ದ ಕಿವಿಗಳು ಅಲುಗಾಡಿದವು. ತಾತ ಮತ್ತೆ ಕೇಳಿದ, `ನಾನು ತಪ್ಪು ಕೇಳಿದೆನಾ?’ ಎಂದು. ತಲೆ ಆಡಿಸುತ್ತಾ, `ಇಲ್ಲ ನೀನು ತಪ್ಪು ಕೇಳಲಿಲ್ಲ. ಅವನು ನನ್ನ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿಯೂ ಇರಲಿಲ್ಲ. ನಿಜ ಅವನಾದರೂ ನನ್ನ ಮಾತುಗಳನ್ನು ಯಾಕೆ ಕೇಳಬೇಕು? ಕೇಳಲಿ ಎನ್ನುವುದೂ ನನ್ನ ಅಹಂಕಾರವೇ ಆದರೆ ಅದನ್ನೂ ಬಿಡಬೇಕು. ಹೇಳುವೆ ಎನ್ನುವ ಹಮ್ಮೇ ಆದರೆ ಅದೂ ಅಳಿಯಬೇಕು. ನನ್ನ ಮಗನೇ ಮಾತು ಕೇಳಲ್ಲ ಅಂದಮೇಲೆ ಬೇರೆಯವರ ಮಕ್ಕಳು ಯಾಕೆ ಕೇಳಬೇಕು? ನಿಜ ಹೇಳಬೇಕೆಂದರೆ ಜಗತ್ತಿನಲ್ಲಿರುವ ಎಲ್ಲರೂ ಕಿವುಡರೇ. ಯಾರಿಗೂ ಕೇಳುವ ವ್ಯವಧಾನ ಇಲ್ಲ. ಮಾತಾಡುವ ಹುಕಿ ಮಾತ್ರ ಎಲ್ಲರಿಗೂ. ಅವನಿಗೆ ಮಗು ಬೇಕು, ಇವಳಿಗೆ ಕೊಡಲಿಕ್ಕೆ ಆಗುವುದಿಲ್ಲ. ಹಡೆಯದ ಹೆಣ್ಣು ಹೆಣ್ಣೆ ಅಲ್ಲ ಎನ್ನುವ ತೀರ್ಮಾನ ಅವನದ್ದು. ಅಂದ ಮೇಲೆ ಅವಳು ಅವನಿಗೆ ಬೇಡ ಎಂತಲೇ ಲೆಕ್ಕ ಅಲ್ಲವೇ’ ಎಂದಳು. ಅವಳು ಹೇಳುತ್ತಿರುವುದು ತನಗೇನಾ? ತಾತನಿಗೆ ತಾನು ಮುತ್ಯಾಳ ಮಾತನ್ನು ಕೇಳದೇ ಹೋಗಿದ್ದಕ್ಕೆ ಪಶ್ಚಾತ್ತಾಪವಾಗುತ್ತಿತ್ತು. `ನಿನಗೆ ಬೆಲೆ ಕೊಡಬೇಕಿತ್ತು’ ಎಂತ ತಾತ. ಯಾರಿಗೆ ಎನ್ನುವುದನ್ನು ಮಾತ್ರ ಹೇಳಲಿಲ್ಲ. `ಮಗೂ ಬೆಲೆ ಇರೋದು ಮಾತಿಗಲ್ಲ ಹಣಕ್ಕೆ, ವಡವೆಗೆ, ಬಟ್ಟೆಗೆ. ಅದು ನನ್ನಲ್ಲಿ ಇಲ್ಲ ಲೋಕದ ಕಣ್ಣಿಗೆ ಚಿಂದಿ ಉಟ್ಟವ ಬಿಕಾರಿಯೇ’ ಎಂದಳು. ತಾತನಿಗೆ ಅವಳ ಮಾತಿಗೆ ಉತ್ತರಿಸಲಾಗಲಿಲ್ಲ. ಅವನಿಗೂ ಗೊತ್ತು ತನ್ನ ತಾಯಿಯ ಸಾತ್ವಿಕತೆ. ಅವಳ ಒಳ್ಳೆಯತನವನ್ನು ತಾನು ಹೇಗೆ ಹೇಗೋ ಬಳಸಿಕೊಂಡಿದ್ದೇನೆ ಎನ್ನುವುದು ಗೊತ್ತು. ಆದರೆ ಅದನ್ನು ಹೇಳಲಾರ. ಅದನ್ನು ಹೇಳುವ ಧೈರ್ಯ ಅವನಿಗೆ ಇರಲಿಲ್ಲ ಎನ್ನುವುದು ನನ್ನ ಈಗಿನ ತಿಳುವಳಿಕೆ. ಅದಕ್ಕೆ `ಬಿದ್ದಿದ್ದೇನೆ ಏಳುವ ಪ್ರಯತ್ನ ಮಾಡುವೆ’ ಎಂದ. ಮಗನಿಗೆ ನೋಯಿಸುವುದು ಬೇಕಿರದ ಮುತ್ಯಾ ನಕ್ಕಳು, `ಬೀಳುವುದೆಂದರೇನು? ಮಳೆ ನೆಲಕ್ಕೆ ಬೀಳದೆ ಭೂಮಿ ಬೆಳೆ ಬೆಳೆಯುವುದಿಲ್ಲ ಅಲ್ಲವಾ. ಬೀಳುವುದೂ ಒಂದು ಥರದಲ್ಲಿ ಒಳ್ಳೆಯದೇ’ ಎಂದಳು. ಎಲ್ಲದರಲ್ಲೂ ಗುಣಾತ್ಮಕವಾದ ನೋಟಕ್ಕಾಗಿ ಹಂಬಲಿಸುತ್ತಿದ್ದ ಅವಳಲ್ಲಿ ಇಂಥಾ ಮಾತಲ್ಲದೆ ಮತ್ತೇನು ಮಾರ್ನುಡಿಯುತ್ತಿತ್ತು?! `ಬಿದ್ದಿದ್ದು ಅರ್ಥವಾಗಿಬಿಟ್ಟರೆ ಮತ್ತು ಯಾವುದಕ್ಕೇ ಬೀಳಲಿ ಏಳಬೇಕಾದವನು ನಾನೇ ಎನ್ನುವ ಸತ್ಯ ಅರ್ಥವಾಗಿಬಿಟ್ಟರೆ ಅದಕ್ಕಿಂತ ದೊಡ್ಡದು ಯಾವುದಿದೆ?’ ಎಂದಳು ಮಾರ್ಮಿಕವಾಗಿ. ಅಷ್ಟರಲ್ಲಿ ಚಿಕ್ಕಿ ಕಾಫಿ ತಂದಳು. `ಅಮ್ಮನಿಗೆ ಕೊಟ್ಟೆಯಾ?’ ಎಂದು ಸೊಸೆಯ ಬಗ್ಗೆ ವಿಚಾರಿಸಿಕೊಂಡಳು.

ಎದ್ದು ಹೋಗುವಾಗ ಮುತ್ಯಾಳ ಸೆರಗಿನ ನವೆದು ಪಿಸಿದ ದಾರದ ಎಳೆಗಳು ತಾತನ ಬೆರಳಿಗೆ ಸಿಕ್ಕಿಕೊಂಡಿತು. ತಾಯಿಯೇ ತನ್ನ ಕೈ ಹಿಡಿದಳೇನೋ ಎಂದು ತಿರುಗಿ ನೋಡಿದ. `ಸೀರೆ ನಿನ್ನ ಕೈ ಹಿಡಿಯಿತು, ನಾನಲ್ಲ’ ಎಂದು ನಕ್ಕಳು. ತಾತನಿಗೆ ಏನನ್ನಿಸಿತೋ ಕಾಣೆ ಮುಂದಿನ ದಿನಗಳಲ್ಲಿ ರೇಶ್ಮೆ ಸೀರೆಯ ವ್ಯಾಪಾರಕ್ಕೆ ತೊಡಗಿದ. ಅವನ ಜೀವಮಾನದಲ್ಲಿ ಹಿಂದೆಂದೂ ಕಾಣದ ಯಶಸ್ಸನ್ನು ಕಂಡ. ತಾಯಿ ತನ್ನ ದಾರಿಯನ್ನು ತೋರಿದ್ದು ಎಂದು ಹೇಳಿಕೊಳ್ಳುತ್ತಿದ್ದ. ಮುತ್ಯಾ ಮಾತ್ರ ನಗುತ್ತಿದ್ದಳು. ಅವನ ಶ್ರಮ ಕೈಹಿಡಿದಾಗಲೂ ಆ ಯಶಸ್ಸನ್ನೂ ಕೂಡಾ ತನ್ನಮೇಲೆ ಎತ್ತಿ ಹಾಕುತ್ತಿದ್ದಾನೆ ಎಂದು.

ಅಂದು ಬೆಳಗ್ಗೆ ಸೆಗಣಿ ನೀರನ್ನು ಚೆಲ್ಲಲು ಬಂದ ರಾಮುಡೂಗೆ ಕಾಫಿ ಕೊಟ್ಟ ಮುತ್ಯಾ, `ನಿನ್ನ ಮನಸ್ಸಿನ ಗೊಂದಲ ಅರ್ಥವಾಗುತ್ತೆ. ಉಸಿರನ್ನು ಹಂಚಿದವಳು ಒಡಲನ್ನೂ ಹಂಚಬಹುದಲ್ಲಾ ಅಂತ ಯೋಚಿಸುತ್ತಿದ್ದೀಯಾ ಅಲ್ಲವಾ ರಾಮುಡೂ? ಉಸಿರು ಅಮೂರ್ತ, ಆದರೆ ಒಡಲು ಹಾಗಲ್ಲ ಅದು ಸತ್ಯ. ನೀನೂ ಎಲ್ಲರ ಹಾಗೆ ಯೋಚಿಸುತ್ತಿದ್ದೀಯಲ್ಲಾ ನನಗೆ ದಿವ್ಯ ಶಕ್ತಿಗಳಿಲ್ಲ. ನನ್ನ ಅಂತಃಸತ್ವವೇ ಶಕ್ತಿ’ ಎಂದಿದ್ದಳು.

ನನಗೆ ನಿಜಕ್ಕೂ ಮುತ್ಯಾ ಅರ್ಥ ಆಗಿರಲಿಲ್ಲ. ಅವಳನ್ನು ಕಿರೀಟವಿಲ್ಲದ ದೇವತೆ ಎಂದು ಜಗತ್ತು ನೋಡುವಾಗ ತಾನು ಏನೂ ಅಲ್ಲ ಎನ್ನುವುದನ್ನು ಸಲೀಸಾಗಿ ಹೇಳಬಲ್ಲ ತಾಕತ್ತು ಅವಳಿಗೆ ಮಾತ್ರ ಇತ್ತೆಂದು ಭಾವಿಸುತ್ತೇನೆ. ಕೇಳಿದರೆ ಅದನ್ನು ಅವಳು ಒಪ್ಪುವುದಿಲ್ಲವೆಂದು ನನಗೆ ಅರ್ಥವಾಗತೊಡಗಿದ್ದರಿಂದ ನಾನವಳನ್ನು ಕೇಳಲಾರದೆ ಹೋದೆ. ಎಲ್ಲ ಘಟನೆಗಳಿಂದ ತಾತನಿಗೆ ಏನನ್ನಿಸಿತೋ ಗೊತ್ತಿಲ್ಲ. ಅಮ್ಮಮ್ಮನಿಗೆ ಕೈ ಊತ ಇನ್ನೂ ಇಳಿಯದ ಕಾರಣ ಮುತ್ಯಾಳೇ ಊಟ ಬಡಿಸಿ, ತಾತ ಊಟ ಮಾಡುವಾಗ ಅವನನ್ನೆ ನೋಡುತ್ತಾ ಕೂತಿದ್ದಳು. ಆಗವಳು ನನಗೆ ಅಪ್ಪಟ ತಾಯಂತೆ ಮಾತ್ರ ಕಂಡಳು. ಅವಳ ಕಣ್ಣುಗಳು ಪ್ರಜ್ವಲಗೊಂಡವು ಪ್ರೀತಿ ಉಕ್ಕಿತು. ಹೃದಯದಲ್ಲಿ ಜ್ವಲಿಸುವ ಪ್ರೀತಿ ಮುಖದಲ್ಲಿ ಕಾಣುವುದು ಅನ್ನುವುದನ್ನು ಅವತ್ತು ಕಂಡೆ.

ಊಟ ಮುಗಿದ ಮೇಲೆ ತಾತ ಮುತ್ಯಾಳನ್ನು ಹುಡುಕಿ ಬಂದ ಅವಳು ಜಗ್ಗಿದ ಹಗ್ಗದ ಮಂಚದ ಮೇಲೆ ಸೀರೆಯನ್ನು ಹಾಕುತ್ತಿದ್ದಳು. ನಾನೂ ಅವಳ ಪಕ್ಕ ಮಲಗಿಕೊಳ್ಳಲು ಶುರು ಮಾಡಿದಾಗಿನಿಂದ ಆ ಹಗ್ಗದ ಮಂಚ ಭಾರವನ್ನು ತಾಳುತ್ತಾ ಅಕ್ಷರಶಃ ಜೋಲಿಯೇ ಆಗಿಬಿಟ್ಟಿತ್ತು. ಬಂದ ತಾತನನ್ನು ನೋಡಿ, `ಇವತ್ತು ನೀನು ನಿನ್ನ ಹೆಂಡತಿಯ ಹತ್ತಿರವೇ ಮಲಗು. ನಿಜವಾಗಲೂ ಇವತ್ತು ಅವಳಿಗೆ ನಿನ್ನ ಆಸರೆ ಬೇಕು. ರಾತ್ರಿ ಜ್ವರ ಹೆಚ್ಚಲೂ ಬಹುದು, ಹೋಗಿ ಮಲಗಿಕೋ’ ಎಂದಳು. ತಾತ ತಡಬಡಾಯಿಸುತ್ತಾ. `ನಾನು ಸೀರೆಯ ವ್ಯಾಪಾರ ಮಾಡಬೇಕೆಂದಿದ್ದೇನೆ’ ಎಂದ. `ಉದರನಿಮಿತ್ತಂ ಬಹುಕೃತ ವೇಷಂ’ ಎಂದಳು. `ನೀನು ಮನಃಪೂರ್ವಕವಾಗಿ ಆಶೀರ್ವಾದ ಮಾಡು’ ಎಂದ ತಾತನಿಗೆ `ಆಶೀರ್ವಾದ, ಆಜ್ಞೆ ಇಂಥಾ ಪದಗಳಿಗೆ ಅರ್ಥ ಇಲ್ಲ ನಾರಾಯಣ. ನೀನು ಒಳ್ಳೆಯ ಮನಸಿನಿಂದ ಕೆಲಸ ಮಾಡು ಫಲಾಫಲಗಳ ಯೋಚನೆ ಮಾಡಬೇಡ. ಒಳಿತನ್ನೇ ಬಯಸು ನಿನಗೆ ಏನು ಸಿಗುತ್ತದೋ ಅದರಿಂದ ತೃಪ್ತನಾಗು’ ಎಂದಳು. ತಾತ ಏನನ್ನೋ ಹೇಳುವಂತೆ ನಿಂತೇ ಇದ್ದ. `ನಾರಾಯಣ ನನಗೆ ನಿದ್ದೆ ಮಾಡಬೇಕಿದೆ, ನಿನ್ನ ಕಷ್ಟವನ್ನು ನೀಗಿಸಿಕೊಳ್ಳಲು ನೀನೇ ದಾರಿಗಳನ್ನು ಕಂಡುಕೋ ನಿನ್ನ ಮೇಲೆ ಭರವಸೆ ಇಡು ಯಾರದೋ ಮೇಲಲ್ಲ. ಹೇಳುವವನ ಭವಿಷ್ಯ ಗೊತ್ತಿದ್ದರೆ ಅವನ್ಯಾಕೆ ಭವಿಷ್ಯ ಹೇಳಿಕೊಂಡು ಸಂಪಾದನೆ ಮಾಡುತ್ತಾನೆ? ಸೀರೆ ಎನ್ನುವುದು ನಿನಗೆ ಸಿಕ್ಕ ತಾಯಾಸರೆ ಎಂದುಕೊಂಡರೆ ನಿನ್ನ ಪೊರೆಯುತ್ತದೆ’ ಎಂದಳು. ತಾತ ಏನನ್ನೋ ನಿರ್ಧರಿಸಿದವನಂತೆ ಅಲ್ಲಿಂದ ಎದ್ದು ಹೋದ- ಮಿಡಿ ನಾಗರ ಮರಿಯೊಂದು ತತ್ತಿಯಿಂದ ಹೊರಬಂದು ವಾತಾವರಣಕ್ಕೆ ಹೊಂದಿಕೊಳ್ಳಲು ಯತ್ನಿಸಿದಂತೆ.

ಮುತ್ಯಾ ತಾತನನ್ನು ಕಳಿಸಿದ ಮೇಲೆ ಮಲಗಲಿಲ್ಲ. ನನಗೆ ಅವಳು ನಿದ್ದೆ ಮಾಡಬೇಕಿದೆ ಎಂದವಳು ಯಾಕೆ ಎದ್ದಿದ್ದಾಳೆ ಎನ್ನುವ ಕುತೂಹಲ. ಆದರೆ ಮನಸ್ಸು ಇದ್ದಕ್ಕಿದ್ದ ಹಾಗೆ ತಾತನ ಬಗ್ಗೆ ಯೋಚಿಸಲಾರಂಭಿಸಿತು. `ಮುತ್ಯಾ ತಾತ ಸೀರೆ ವ್ಯಾಪಾರ ಮಾಡಿದರೆ ದುಡ್ಡು ಬರುತ್ತಾ?’ ಎಂದೆ. `ಅವನು ನಿರ್ಧರಿಸಿದ ಗಳಿಕೆ ಅದೇ ಆದರೆ ಬರಲೂ ಬಹುದು’ ಎಂದಳು. ನನಗೆ ಈಗ ಹಟಬಂತು `ಮುತ್ಯಾ ನಿಜ ಹೇಳು ನಿನಗೆ ಸರಿ ಮಾಡುವ ಶಕ್ತಿಗಳಿಲ್ಲವೇ? ಮೂರನೆಯ ಕಣ್ಣು ತೆರೆಯಲಿಲ್ಲವೆ?’ ಎಂದು. ಇಲ್ಲ ಎನ್ನುವಂತೆ ತಲೆ ಆಡಿಸಿ, `ನಿನಗೊಂದು ಕಥೆ ಹೇಳಲಾ?’ ಎಂದಳು. ಕಥೆ ಎಂದ ತಕ್ಷಣ ನಾನು ಪ್ರಫುಲ್ಲಿತಳಾದೆ. ಮನಸ್ಸು ತಾನೇ ತಾನಾಗಿ ಕಥೆ ಕೇಳಲು ಅಣಿಯಾಗಿಬಿಟ್ಟಿತು. `ದಾನ ಧರ್ಮದಲ್ಲಿ ನಿರತನಾಗಿದ್ದ ಒಬ್ಬ ಸಾಹುಕಾರನ ಹತ್ತಿರ ಒಬ್ಬ ಭಿಕಾರಿ ಬರುತ್ತಾನೆ. ಅವನ ಮನೆಯಲ್ಲಿ ಮಕ್ಕಳು ಹಸಿವಿಂದ ಇದ್ದಾರೆ. ಈತನಲ್ಲಿ ಏನನ್ನಾದರೂ ಕೇಳೋಣ ಎಂದು. ಆಗ ಆ ಸಾಹುಕಾರ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತಿರುತ್ತಾನೆ. ದೇವರೇ, ನನಗೆ ಧನ ಕನಕಗಳನ್ನು ನೀಡು, ನನ್ನ ಐಶ್ವರ್ಯ ಸಂಪತ್ತನ್ನು ಹೆಚ್ಚು ಮಾಡು ಎಂದು. ಅದನ್ನು ಕೇಳಿ ಭಿಕ್ಷೆ ಕೇಳಲು ಬಂದವ ಹೊರಟು ನಿಲ್ಲುತ್ತಾನೆ ಅವನನ್ನು ತಡೆವ ಸಾಹುಕಾರ ಯಾಕೆ ಹೊರಟೆ ಎನ್ನುತ್ತಾನೆ. ನೀನು ಸಾಹುಕಾರ ಎಂದು ಬಂದೆ ಆದರೆ ನೀನೂ ಭಿಕ್ಷೆ ಬೇಡುವವನೆ ಪಾಪ ನಿನ್ನ ಆಸ್ತಿ ನನ್ನಿಂದ ಕರಗುವುದು ಬೇಡ ಎನ್ನುತ್ತಾನೆ. ಅದಕ್ಕೆ ಸಾಹುಕಾರ ನನ್ನ ಬಳಿ ದಿನಕ್ಕೆ ಕಷ್ಟದಲ್ಲಿರುವವರು ನೂರಾರು ಜನ ಬರುತ್ತಾನೆ ಅವರನ್ನು ಪೊರೆಯಲು ನಾನ್ಯಾರು ಅಂಥಾ ಜನರ ಕಷ್ಟವನ್ನು ಪರಿಹರಿಸುವ ಖಜಾನೆಯನ್ನು ನನ್ನ ಮನೆಯಲ್ಲಿ ಇಡು ಬಂದವರಿಗೆ ನೀನೇ ಕೊಡು ಎಂದು ಅವನಲ್ಲಿ ಬೇಡುತ್ತೇನೆ ಅದು ತಪ್ಪೇ ಎಂದ. ಆಗ ಆ ಭಿಕಾರಿ ನಿಜ ನಿನ್ನ ಈ ಸದ್ಬುದ್ಧಿಯನ್ನು ನೋಡೇ ಭಗವಂತ ನಿನ್ನ ಮನೆಯಲ್ಲಿ ಖಜಾನೆಯನ್ನಿಟ್ಟಿರುವುದು ಬೇರೆ ಯಾರೇ ಆದರೂ ತನಗೇ ಎಲ್ಲ ಹಣ ಇರಲಿ ಎಂದುಕೊಳ್ಳುತ್ತಿದ್ದರು ಎನ್ನುತ್ತಾನೆ. ಆ ಮಾತುಗಳಿಗೆ ನಗುವ ಸಾಹುಕಾರ ಇರಲಿ ಎಂದು ಇಟ್ಟುಕೊಳ್ಳಲಿಕ್ಕೆ ಇದು ನನ್ನ ಆಸ್ತಿಯಲ್ಲ. ಇಡೀ ಜಗತ್ತಿನಲ್ಲಿ ನನ್ನದು ಎನ್ನುವುದು ಇಲ್ಲದಿರುವಾಗ ಇದಾದರೂ ನನ್ನದು ಹೇಗಾಗುತ್ತದೆ? ಎನ್ನುತ್ತಾ ಅವನಿಗೆ ಹಣವನ್ನು ಕೊಟ್ಟು ಕಳಿಸುತ್ತಾನೆ’ ಎಂದು ಕಥೆಯನ್ನು ಮುಗಿಸಿದಳು. ನಾನು ಕಥೆಯ ಗುಂಗಿಗೆ ಬಿದ್ದೆ. ಮುತ್ಯಾ ಮಾತನ್ನು ಮುಂದುವರೆಸಿ `ನನಗೆ ಯಾವ ಶಕ್ತಿಗಳೂ ಇಲ್ಲ, ನಿನ್ನ ಮುತ್ಯಾ ನಿನ್ನ ಹಾಗೆ ರಕ್ತ ಮಾಂಸಗಳಿಂದ ತುಂಬಿದ ದೇಹ. ಈ ದೇಹಕ್ಕೆ ದೇಹ ಸಹಜವಾದ ಎಲ್ಲವೂ ಇತ್ತು, ಇದೆ. ಭಗವಂತ ನಮಗೆ ಒಳಿತನ್ನು ಯೋಚಿಸುವ ಬುದ್ಧಿ ಕೊಟ್ಟಿದ್ದಾನೆ. ಅದನ್ನು ಮಾಡೋಣ ಅದೇ ನಮ್ಮ ಶಕ್ತಿಯಾಗುವುದಾದರೆ ತಪ್ಪಾದರೂ ಏನು?’ ಎಂದಳು.

ನನ್ನ ಹಣೆಯನ್ನು ಸವರುತ್ತಾ, `ಮಗೂ ದೇವರು ಆಧ್ಯಾತ್ಮ, ಅತೀತವಾದ ಶಕ್ತಿಗಳು, ಅಲೌಕಿಕವಾದ ಸೌಂದರ್ಯಗಳು ಮನುಷ್ಯನಲ್ಲದ ಎಲ್ಲಾ ಜೀವಗಳಿಗೂ ತಾನೇ ತಾನಾಗಿ ಒದಗಿರುತ್ತವೆ. ಆದರೆ ಮನುಷ್ಯ ಮಾತ್ರ ಅದನ್ನು ಸಾಧನೆಯಿಂದ ತನ್ನದನ್ನಾಗಿಸಿಕೊಳ್ಳಬೇಕು. ಅದು ಮನುಷ್ಯನಿಗೆ ದಕ್ಕುವುದು ಸಂಗತಿಗಳನ್ನು ಶುದ್ಧತೆಯಿಂದ ಮುಟ್ಟಿದಾಗ ಮಾತ್ರ. ಅದೇ ದೇವರು, ಸತ್ಯ, ಅಂತಿಮ, ಅದೇ ಶಕ್ತಿ ಎಲ್ಲ. ನನ್ನಲ್ಲಿ ಶಕ್ತಿ ಇದೆ ಎಂದು ನಂಬುವುದಾದರೆ ಅದು ಬರೀ ಒಳಿತು ಮಾತ್ರ, ನನ್ನಲ್ಲಿ ಎಲ್ಲಕ್ಕೂ ಮದ್ದಿದೆ ಎಂದು ನೀನು ಭಾವಿಸುವುದಾದರೆ ಅದು ಕೆಡುಕಿಲ್ಲದ ಸ್ಥಿತಿ ಮಾತ್ರ. ಇದರಿಂದ ಜಗತ್ತು ಬದಲಾಗುತ್ತೆ ಎನ್ನುವ ನಂಬಿಕೆ ನನಗಿಲ್ಲ. ಅದು ಕೇವಲ ಮನೆಯ ಒಳಗೆ ಸ್ವಚ್ಛ ಮಾಡಿಕೊಳ್ಳುವ ಕ್ರಿಯೆ ಮಾತ್ರ. ಅದೇ ಆಧ್ಯಾತ್ಮ’ ಅಂದಳು. ನನ್ನ ಕಣ್ಣುಗಳು ತುಂಬಿ ಬಂದವು. ಬೀಸುವ ಗಾಳಿಯೂ ಯಾಕೋ ಸ್ಥಿರತೆಯನ್ನು ಪಡೆದುಕೊಂಡೇ ಬೀಸುತ್ತಿದೆ ಎನ್ನಿಸಿತು.

ಈ ಅಂಕಣದ ಹಿಂದಿನ ಬರೆಹಗಳು:
ಕಿರಿದನ್ನು ಕಿರಿದರಲ್ಲೇ ನೋಡು
ಅನುಭವದಲ್ಲಿ ಘನೀಭವಿಸುವ ವಿಶ್ವದ ರಹಸ್ಯಮಯ ಸಂಗತಿಗಳು

ಬಿಟ್ಟುಬಿಡುವುದೆಂದರೂ ಕಟ್ಟಿಕೊಳ್ಳುವುದೇ
ಗಾಳದ ದಾರ ದೂರಕ್ಕೆ ಬಿಡುವುದು ಮೀನಿನ ಆಸೆಗೆ
ಕಳಚಿಕೊಳ್ಳುವುದೂ ಆಟದ ಭಾಗವೇ.
ಸರಿದ ಸೆರಗಿನಲ್ಲಿ ಅಡಗಿದ್ದು ಸೂರ್ಯ ಚಂದ್ರ
ಪ್ರಾರ್ಥನೆ; ಪದಾರ್ಥವಲ್ಲ, ಪರಾರ್ಥ
ಜಗತ್ತಿನ ಮೇರು ತಾಯಿ
ನಿಧಿಯ ಕನವರಿಕೆ
ಅವಳ ಧ್ಯಾನಕ್ಕೆ ಒಳಿತೇ ಗುರಿ
ಅನುಬಂಧಗಳ ಲೀಲೆ
ಕನಸಿನೊಳಗಿನ ನನಸು
ನೀಲಿ ಕಣ್ಣುಗಳ ಮುತ್ತಜ್ಜಿ ಮತ್ತು ನಾನು

 

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...