ಹೊಸಗನ್ನಡದ ಆದ್ಯ ಭಾಷಾಂತರಕಾರ- ಎಸ್.ಜಿ.ನರಸಿಂಹಾಚಾರ್ಯ(1862-1907)

Date: 11-01-2022

Location: ಬೆಂಗಳೂರು


‘ನರಸಿಂಹಾಚಾರ್ಯರು ಭಾಷಾಂತರಕಾರರಾಗಿ ನೇಮಕವಾಗಿ ವಿದ್ಯಾ ಇಲಾಖೆಯಲ್ಲಿನ ಪಠ್ಯಪುಸ್ತಕಗಳನ್ನು ನಿರೂಪಿಸುತ್ತಿದ್ದ ಸಂಗತಿ ಚಾರಿತ್ರಿಕವಾಗಿ ಮಹತ್ವದೆನಿಸುತ್ತದೆ’ ಎನ್ನುತ್ತಾರೆ ವಿಮರ್ಶಕಿ ತಾರಿಣಿ ಶುಭದಾಯಿನಿ ಅವರು ತಮ್ಮ ಅಕ್ಷರಸಖ್ಯ ಅಂಕಣದಲ್ಲಿ ಎಸ್.ಜಿ. ನರಸಿಂಹಾಚಾರ್ಯ ಅವರ ಭಾಷಾಂತರಗಳ ಕುರಿತು ವಿಶ್ಲೇಷಿಸಿದ್ದಾರೆ.

ಇದೀಗ ಇಪ್ಪತ್ತೊಂದನೇ ಶತಮಾನದ ಎರಡನೇ ದಶಕ ಮುಗಿದು ಮೂರನೇ ದಶಕ ಕಾಲಿಡುವ ಹೊತ್ತಿಗೆ ಸರಿಸುಮಾರು ಒಂದು ಶತಮಾನದ ಹಿಂದೆ ಕನ್ನಡಕ್ಕೆ ಆಧುನಿಕತೆಯ ಸ್ಪರ್ಶ ಹಾಗು ಪಾಂಡಿತ್ಯದ ಹರಹುಗಳನ್ನು ಪರಿಚಯಿಸಿದ ಮಹನೀಯ ಎಸ್.ಜಿ.ನರಸಿಂಹಾಚಾರ್ಯರು ನೆನಪಾದರು. ಇಂದು ಕನ್ನಡ ಕಾಣೆಯಾಗುವ ಆತಂಕದಲ್ಲಿ ಏನೇನನ್ನು ಮಾಡಬೇಕು ಎಂಬುದು ಹೊಳೆಯದೆ ದಿಕ್ಕುಗಾಣದಂತೆ ಇರುವ ಹೊತ್ತಿನಲ್ಲಿ ಎಸ್.ಜಿ ಅವರು ನೆನಪಾಗಿದ್ದು ಆಕಸ್ಮಿಕವಲ್ಲ. ಆಗ ತಾನೇ ಹಳಗನ್ನಡದ ಶೈಲಿ ಕಳೆದು ಹೊಸಗನ್ನಡ ಶೈಲಿಗೆ ಹೊರಳುತ್ತಿದ್ದ ಕನ್ನಡದ ಭಾಷೆ ಮತ್ತು ಸಾಹಿತ್ಯಗಳು ವಸಾಹತುಶಾಹಿ ಶಿಕ್ಷಣದ ಪ್ರಭಾವ, ಪ್ರೇರಣೆಗಳಿಂದ ಹಾಗು ಮುದ್ರಣಕ್ಕೆ ಒಳಪಡುವ ಒತ್ತಡದಿಂದ ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳಬೇಕಾದ ಸಂಕ್ರಮಣ ಸ್ಥಿತಿಯಲ್ಲಿದ್ದಾಗ ಎಸ್.ಜಿ.ನರಸಿಂಹಾಚಾರ್ಯರಂತಹ ವಿದ್ವಾಂಸರಿಗೆ ಸಂಧಿಕಾಲದ ತುರ್ತು ಅರ್ಥವಾಯಿತು. ಈ ವಿದ್ವಾಂಸರು ಕನ್ನಡಕ್ಕೆ ಏನೆಲ್ಲ ಬೇಕು ಎಂಬುದನ್ನು ಆಲೋಚಿಸಿ ಅದರ ರೂಪುರೇಶೆಗಳನ್ನು ಹಾಕಿಕೊಂಡು ದುಡಿಯಲಾರಂಭಿಸಿದವರು.

ಮಿಷನರಿಗಳು ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಆಮೂಲಾಗ್ರವಾಗಿ ಸಮೀಕ್ಷೆ ಮಾಡಿ, ಕನ್ನಡದ ಗ್ರಂಥಗಳನ್ನು ಸಂಪಾದಿಸಿಕೊಟ್ಟಿದ್ದರು. ಕಿಟೆಲ್ ಅವರಂತಹ ವಿದ್ವಾಂಸರು ಕನ್ನಡದ ನಿಘಂಟನ್ನು ಕೊಟ್ಟಿದ್ದರು. ಮುದ್ರಣಕ್ಕೆ ಒಗ್ಗಿಸುವ ಲಿಪಿಗಳನ್ನು ಆವಿಷ್ಕಾರ ಮಾಡಿದ್ದರು. ಅಲ್ಲದೆ ಹೊಸಗನ್ನಡದಲ್ಲಿ ಕ್ರೈಸ್ತ ಸಾಹಿತ್ಯವನ್ನು ರಚಿಸುವ ಮೂಲಕ ಹಳಗನ್ನಡ ಹಾಗು ಹೊಸಗನ್ನಡದ ನಡುವಿನ ಒಂದು ಕನ್ನಡವನ್ನು ಹುಟ್ಟುಹಾಕಿದ್ದರು. ಇಂತಹ ಕೊಂಡಿಯನ್ನು ಹಿಡಿದುಕೊಂಡು ಕನ್ನಡದ ಕೆಲಸಗಳನ್ನು ಮಾಡುವ ನಿಟ್ಟಿನಲ್ಲಿ ತಮ್ಮನ್ನು ತಾವು ಕ್ರಿಯಾಶೀಲರಾಗಿ ತೊಡಗಿಸಿಕೊಂಡವರು ಎಸ್.ಜಿ.ನರಸಿಂಹಾಚಾರ್ಯರು. ಮೈಸೂರು ಸಂಸ್ಥಾನದಲ್ಲಿ ವಸಾಹತುಶಾಹಿ ಶಿಕ್ಷಣವು ಹರಡುತ್ತಾ ಇದ್ದಾಗ ಅದಕ್ಕೆ ಪೂರಕವಾಗಿ ದುಡಿದ ಮಹನೀಯರಲ್ಲಿ ಒಬ್ಬರಾದ ಎಸ್.ಜಿ.ನರಸಿಂಹಾಚಾರ್ಯರು ಆದ್ಯ ಭಾಷಾಂತರಕಾರರೂ ಪಠ್ಯಪುಸ್ತಕ ರಚನೆಕಾರರೂ ಆಗಿದ್ದವರು. ಕನ್ನಡದ ಪಂಡಿತ ಪರಂಪರೆಯ ಹೆಸರು ಹೇಳುವುದಕ್ಕೆ ತಕ್ಕವರಂತೆ ಇದ್ದ ಎಸ್.ಜಿ.ನರಸಿಂಹಾಚಾರ್ಯರು ಹೊಸಗನ್ನಡದ ಉದಯಕ್ಕೆ ಬೇಕಾದ ಅಗತ್ಯ ಅಡಿಗಲ್ಲುಗಳನ್ನು ಹಾಕಿಕೊಟ್ಟವರು. ಭಾಷಾಂತರ, ಪ್ರಾಚೀನ ಗ್ರಂಥ ಸಂಪಾದನೆ, ನಾಟಕ, ಹೊಸಗನ್ನಡ ಕಾವ್ಯ, ಮಕ್ಕಳ ಸಾಹಿತ್ಯ, ಪಠ್ಯಪುಸ್ತಕ ರಚನೆ ಮತ್ತು ಸಂಪಾದನೆ ಹೀಗೆ ಹಲವಾರು ಕಾರ್ಯಕ್ಷೇತ್ರಗಳಲ್ಲಿ ಕೆಲಸ ಮಾಡಿದವರು.

ಎಸ್.ಜಿ. ನರಸಿಂಹಾಚಾರ್ಯರ ಅವರ ಕಾರ್ಯಕ್ಷೇತ್ರ ದೊಡ್ಡದಾದರೂ ಅವರು ಮಾಡಿರುವ ಕೆಲಸಗಳನ್ನು ದೃಢೀಕರಿಸಲು ಇರುವ ಆಧಾರಗಳೇ ಕಣ್ಮರೆಯಾಗಿವೆ. ಇಂದು ಅವರು ಮಾಡಿರುವ ಕೆಲಸಗಳು ಆ ಕಾಲದ ಪತ್ರಿಕೆಗಳಾದ ‘ವಿದ್ಯಾದಾಯಿನಿ’, ‘ವೃತ್ತಾಂತ’, ‘ಕನ್ನಡ ನುಡಿಗನ್ನಡಿ’, ‘ಸುವಾಸಿನಿ’ ಮುಂತಾದ ಪತ್ರಿಕೆಗಳ ಕೆಲವು ಉಲ್ಲೇಖಗಳು, ಪ್ರಚಾರ ತುಣುಕುಗಳಿಂದ ಅಂದಾಜಿಸಬಹುದೇ ವಿನಾ ಇಂದಿಗೂ ಎಸ್.ಜಿ.ಯವರ ಕೃತಿಗಳು ವಿದ್ವಾಂಸರಿಗೆ ಪೂರ್ಣಪ್ರಮಾಣದಲ್ಲಿ ದೊರೆತಿಲ್ಲ. ಸಾಹಿತ್ಯ ಚರಿತ್ರೆ ರಚಿಸುತ್ತಿದ್ದ ಕವಿಚರಿತೆಕಾರರಾದ ಇನ್ನೊಬ್ಬ ವಿದ್ವಾಂಸರಾದ ನರಸಿಂಹಾಚಾರ್ಯರ ಜೊತೆಗೆ ಹೆಗಲೆಣೆಯಾಗಿ ದುಡಿದ ಎಸ್.ಜಿ.ನರಸಿಂಹಾಚಾರ್ಯರ ಕೃತಿಗಳೇ ಇಲ್ಲವಾಗಿ ಅವರನ್ನು ಹೊಸಗನ್ನಡ ಸಾಹಿತ್ಯ ಚರಿತ್ರೆಯಲ್ಲಿ ಖಚಿತವಾಗಿ ಸ್ಥಾಪಿಸುವುದಕ್ಕೆ ಅಡಚಣೆಯುಂಟಾಗಿರುವುದು ಕಾಲದ ವ್ಯಂಗ್ಯವೇ ಸರಿ.

ಎಸ್.ಜಿ.ನರಸಿಂಹಾಚಾರ್ಯರ ಭಾಷಾಂತರ ಕೆಲಸಗಳಿಗೆ ಈ ಲೇಖನವನ್ನು ಸೀಮಿತಗೊಳಿಸಿಕೊಂಡಿದೆ. ನರಸಿಂಹಾಚಾರ್ಯರು ಭಾಷಾಂತರಕಾರರೆಂದು ಛಾಪು ಮೂಡಿಸುವುದಕ್ಕೆ ಮೂಲ ಕಾರಣ ಅವರೊಬ್ಬ ಸರ್ಕಾರಿ ಭಾಷಾಂತರಕಾರರಾಗಿ ನೇಮಕಗೊಂಡಿದ್ದು. ಕರ್ನಾಟಕ ಸರ್ಕಾರ ವಿದ್ಯಾ ಇಲಾಖೆಯಲ್ಲಿ 1892ರಲ್ಲಿ ಭಾಷಾಂತರಕಾರರಾಗಿ ಸೇವೆಗೆ ನೇಮಕವಾಗಿದ್ದರು. ಈ ಹಿನ್ನೆಲೆಯು ಅವರನ್ನು ಒಬ್ಬ ಭಾಷಾಂತರಕಾರರನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಇದಲ್ಲದೆ ಅವರು ಕನ್ನಡ, ಸಂಸ್ಕೃತ, ಇಂಗ್ಲಿಷ್, ತಮಿಳು ಬಲ್ಲ ಕೋವಿದರಾಗಿದ್ದರು. ಅವರ ಭಾಷಾಂತರಗಳು ಮುಖ್ಯವಾಗಿ ಪಠ್ಯಪುಸ್ತಕಗಳ ಸಲುವಾಗಿ ಆದವು. ಓದುಗರ ಅಭಿರುಚಿಯನ್ನು ಹುಟ್ಟುಹಾಕುವ ನಿಟ್ಟಿನಲ್ಲಿ ಇಂಗ್ಲಿಷಿನಿಂದ ಕನ್ನಡಕ್ಕೆ ಭಾಷಾಂತರಗಳನ್ನು ಮಾಡಿದರು. ಇನ್ನು ಪಂಡಿತ ಪರಂಪರೆಗೆ ರುಚಿಸುವ ಸಂಸ್ಕೃತದ ಭಾಷಾಂತರಗಳನ್ನು ಮಾಡಿದ್ದವರು. ಅಪಾರ ಕ್ರಿಯಾಶೀಲತೆಯನ್ನು ಹೊಂದಿದ್ದ ಎಸ್.ಜಿ.ಯವರ ಸ್ವಂತ ರಚನೆಗಳೂ ಕೂಡ ಮಹತ್ವದ್ದಾಗಿವೆ. ಈ ಎಲ್ಲಾ ಹಿನ್ನೆಲೆಯಲ್ಲಿ ಅವರ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಬಹುದು.

ಎಸ್.ಜಿ. ಅವರು ಒಬ್ಬ ಸಮರ್ಥ ಗ್ರಂಥ ಸಂಪಾದಕರೂ ಕವಿಗಳೂ ಭಾಷಾಂತರಕಾರರೂ ಆಗಿದ್ದವರು. ಅವರ ಈ ಮುಮ್ಮಡಿ ವ್ಯಕ್ತಿತ್ವಗಳಲ್ಲಿ ಈ ಲೇಖನ ಅವರ ಭಾಷಾಂತರ ಮುಖದ ಬಗ್ಗೆ ಮಾತ್ರವೇ ಕೇಂದ್ರೀಕರಿಸಲು ಉದ್ದೇಶಿಸಿದೆ. ಅವರ ಅನುವಾದಿತ ಕೃತಿಗಳಲ್ಲಿ ಇಂಗ್ಲಿಷ್, ಸಂಸ್ಕೃತಗಳ ಕೃತಿಗಳಿವೆ. ಕಾಳಿದಾಸನ ‘ರಘುವಂಶ’ದ ಹಲವು ಸರ್ಗಗಳು, ಭವಭೂತಿಯ ‘ಉತ್ತರರಾಮಚರಿತ’ ಸಂಸ್ಕೃತದಿಂದ ಕನ್ನಡಕ್ಕೆ ಬಂದ ಕೃತಿಗಳಾದರೆ, ‘ಪ್ರೋಷಿತ ಪ್ರಿಯಸಮಾಗಮ’(ಗೋಲ್ಡ್ ಸ್ಮಿತ್ ಕವಿಯ ‘ಹರ್ಮಿಟ್’ ಕವಿತೆಯ ಅನುವಾದ), ಗಯ್ಯಾಳಿಯನ್ನು ಸಾಧು ಮಾಡುವಿಕೆ(ಷೇಕ್ಸ್‍ಪಿಯರ್‍ನ ‘ಟೇಮಿಂಗ್ ಆಫ್ ದ ಶ್ರೂ’), ಗಲಿವರನ ದೇಶಸಂಚಾರ(ಜೊನಾದನ್ ಸ್ವಿಫ್ಟ್ ನ ‘ಗಲಿವರ್ಸ್ ಟ್ರಾವೆಲ್ಸ್’), ಅಲ್ಲಾವುದ್ದೀನ್ ಮತ್ತು ಅದ್ಭುತದೀಪ(ಬುಕ್ಸ್ ಫಾರ್ ಬೆಯರ್ನ್ಸ್ ಮಾಲೆಯಲ್ಲಿ ಪ್ರಕಟವಾಗಿದ್ದ ‘ಸ್ಟೋರಿ ಆಫ್ ಅಲಾವುದೀನ್ ಅಂಡ್ ದ ವಂಡರ್‍ಫುಲ್ ಲ್ಯಾಂಪ್’ ಕಥೆ), ಈಸೋಪನ ಕತೆಗಳು(ಇವು ಸಹ ಪ್ರಾಯಶಃ ಬೆಯರ್ನ್ಸ್ ಮಾಲೆಯ ಕತೆಗಳೇ ಇರಬೇಕು)-ಇವು ಹಾಗು ಇತರೆ ಬಿಡಿ ಪದ್ಯಗಳು ಇಂಗ್ಲಿಷಿನಿಂದ ಬಂದಿವೆ. ತಮಿಳಿನ ಕುಲಶೇಖರಾಳ್ವಾರ್ ರಚನೆಯಾದ ‘ಮುಕುಂದಮಾಲೆ’ಯನ್ನು ಕನ್ನಡಕ್ಕೆ ತಂದಿದ್ದಾರೆ. ಇವುಗಳಲ್ಲಿ ದೊರೆತಿರುವ ಕೃತಿಗಳು ಅಲ್ಪಮಾತ್ರವೇ.

ನರಸಿಂಹಾಚಾರ್ಯರು ಕಾವ್ಯ ಮತ್ತು ನಾಟಕಗಳ ಜಾನರ್‍ಗಳಲ್ಲಿ ಆಸಕ್ತಿ ತಳೆದಿದ್ದರಿಂದ ಅವರ ಭಾಷಾಂತರಗಳೂ ಸಹ ಈ ಪ್ರಕಾರಗಳಿಗೇ ಸಂಬಂಧ ಪಟ್ಟಿರುವುದು ಆಶ್ಚರ್ಯವಲ್ಲ. ಎಸ್.ಜಿ.ನರಸಿಂಹಾಚಾರ್ಯರು ಸ್ವಭಾವತಃ ಕವಿಗಳು. ಅವರು ತಮ್ಮ ಸ್ವಂತ ರಚನೆಗಳ ಜೊತೆಗೆ ಇತರ ಬಗೆಯ ಕಾವ್ಯ ರಚನೆಗಳಲ್ಲಿಯೂ ತೊಡಗಿಕೊಂಡಿದ್ದರು ಎನ್ನುವುದು ಕಂಡು ಬರುತ್ತದೆ. ವರದಾಚಾರ್ಯರೇ ಮುಂತಾದ ನಾಟಕ ಕಂಪನಿಗಳಿಗೆ ಬೇಕಾದ ಕಾವ್ಯ ಭಾಗಗಳನ್ನು ಬರೆದುಕೊಟ್ಟಿದ್ದಾರೆ ಎಂದು ದಾಖಲಾಗಿದೆ. ಪ್ರಾಯಶಃ ನಾಟಕ ರಚನೆ ಕಡೆಗೂ ಅವರ ಒಲವು ಇದ್ದಿರಬಹುದಾದರಿಂದ ಅವರು ನಾಟಕ ಕಂಪೆನಿಗಳ ನಾಟಕಗಳಲ್ಲಿ ಮಧ್ಯೆ ಬರುವ ಹಾಡುಗಳನ್ನು ಬರೆದುಕೊಟ್ಟಿರಲಿಕ್ಕೂ ಸಾಕು. ಹಳೆಯ ಮೈಸೂರು ಪ್ರಾಂತ್ಯದಲ್ಲಿ ಆಗ ತಾನೇ ಪ್ರವರ್ಧಮಾನಕ್ಕೆ ಬರುತ್ತಿದ್ದ ವೃತ್ತಿ ರಂಗಭೂಮಿಗಳ ಬಗೆಗೆ ಹೊಸ ಶಿಕ್ಷಿತ ಸಮುದಾಯ ಆಕರ್ಷಿತರಾಗುವುದು ಒಂದು ವಿದ್ಯಮಾನವೇ ಆಗಿತ್ತು. ಜಿಟಿಎ ಪ್ರೆಸ್ಸಿನ ಶ್ರೀಕಂಠೇಶಗೌಡ, ಆಸ್ಥಾನ ವಿದ್ವಾಂಸರಾದ ಬಸವಪ್ಪಶಾಸ್ತ್ರಿ ಮುಂತಾದವರಂತೆ ಎಸ್.ಜಿ.ನರಸಿಂಹಾಚಾರ್ಯರೂ ನಾಟಕ ರಚನೆಯಲ್ಲಿ, ಅದರ ಪ್ರಸ್ತುತಿಯಲ್ಲಿ ಆಸಕ್ತಿಯನ್ನು ಹೊಂದಿದ್ದವರಾಗಿರಬೇಕು. ನರಸಿಂಹಾಚಾರ್ಯರು ಸ್ವತಃ ನಾಟಕ ರಚನೆ ಮಾಡಿದ್ದರು ಎನ್ನಲಾಗಿದೆ(ಆದರೆ ಆ ಕೃತಿಗಳು ಇಂದು ಲಭ್ಯವಿಲ್ಲ. ಆದಕಾರಣ ಅದರ ಮೌಲ್ಯಮಾಪನವು ಕಠಿಣವಾಗಿದೆ ಎನ್ನುವುದು ಸಾಹಿತ್ಯಚರಿತ್ರೆಕಾರರ ಅಭಿಪ್ರಾಯ). ಹೀಗೆ ಬರೆದುಕೊಟ್ಟಿರುವ ಪ್ರಸಂಗ ಮಧ್ಯದ ಹಾಡುಗಳಲ್ಲಿ ಹಲವು ಜನಪ್ರಿಯವಾದ ಗೀತೆಗಳೂ ಇದ್ದವು. ಇದಲ್ಲದೆ ಎಸ್.ಜಿ. ಅವರು ತಮ್ಮ ಸಮಕಾಲೀನರ ಕೃತಿಗಳಿಗೆ ಬೇಕಾದ ಪದ್ಯಭಾಗಗಳನ್ನು ಬರೆದುಕೊಟ್ಟಿದ್ದಾರೆಂಬ ಪ್ರತೀತಿ ಇದೆ. ಬಿ.ವೆಂಕಟಾಚಾರ್ಯರ ‘ದುರ್ಗೇಶ ನಂದಿನಿ’ ಕೃತಿಯಲ್ಲಿ ಬರುವ ‘ಶರಣ ವಿಮಲೆಯ ಚರಣಕೆ’ ಎನ್ನುವ ಹಾಡು ಎಸ್.ಜಿ. ಅವರೇ ಬರೆದುಕೊಟ್ಟಿದ್ದು ಎಂಬ ಮಾತಿದೆ. ಇದಕ್ಕೆ ಪೂರಕವಾಗಿ ವೆಂಕಟಾಚಾರ್ಯರು ನರಸಿಂಹಾಚಾರ್ಯರನ್ನು ‘ಪಂಡಿತ ಪುಂಗವ’ ಎಂದು ಕರೆದು ಸಂತೋಷ ಪಟ್ಟಿರುವುದು ತಿಳಿದು ಬರುತ್ತದೆ. ಹೀಗೆ ಎಸ್.ಜಿ ಅವರು ಆ ಕಾಲದ ಅನೇಕ ಸಾಹಿತ್ಯ ಚೇತನಗಳ ಜೊತೆ ಕೈಗೆ ಕೈಹಚ್ಚಿ ಕೆಲಸ ಮಾಡಿದ್ದಾರೆಂಬುದು ಅನೇಕ ಉಲ್ಲೇಖಗಳ ಮೂಲಕ ತಿಳಿಯುತ್ತದೆ.

ನರಸಿಂಹಾಚಾರ್ಯರ ಭಾಷಾಂತರಗಳು ವೃತ್ತಿ ಮತ್ತು ಪ್ರವೃತ್ತಿಗಳಿಂದ ಮೇಳವಿಸಿದಂತವು. ಅವುಗಳಲ್ಲಿ ಒಂದು ಬಗೆಯ ವೃತ್ತಿಪರತೆಯೂ ಸ್ವಂತಿಕೆಯ ಛಾಪು ಹೊಳೆಯಿಸುವ ಪ್ರವೃತ್ತಿಯೂ ಒಟ್ಟಿಗೇ ಕಾಣುತ್ತದೆ. ಎಸ್.ಜಿ. ಅವರು ಸರ್ಕಾರದ ವಿದ್ಯಾ ಇಲಾಖೆಯಿಂದ ಭಾಷಾಂತರಕಾರರಾಗಿ ನೇಮಕಗೊಂಡಿದ್ದವರು. ಅವರ ಕಾಲದಲ್ಲಿ ಭಾಷಾಂತರಕಾರರ ಹುದ್ದೆ ಸರ್ಕಾರಿ ಹುದ್ದೆಯಾಗಿದ್ದು ಅದಕ್ಕೆ ಸರ್ಕಾರಿ ಇಲಾಖೆ ಹಾಗು ಜನಸಾಮಾನ್ಯರಲ್ಲಿ ಸರ್ವಥಾ ಮಾನ್ಯತೆ ಇರುವುದು ಚಾರಿತ್ರಿಕವಾಗಿ ದಾಖಲಾಗಿದೆ. ಇಂತಹ ವೃತ್ತಿಯಲ್ಲಿ ತೊಡಗಿಕೊಂಡಾಗ ಇಂಗ್ಲಿಷ್ ಭಾಷೆಯ ಸಂಪರ್ಕವು ಸಹಜವಾಗಿಯೇ ಒದಗಿ ಬಂದಿತ್ತು. ಬಹುಭಾಷಿಕ ಆಸಕ್ತಿ ಬೆಳೆಯಲು ಇಂಬುಕೊಟ್ಟಿದ್ದು ಅವರು ಕೈಗೊಂಡ ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾ ಸಂಸ್ಥೆಯ ಗ್ರಂಥಪಾಲಕರ ಕೆಲಸವೂ ಒಂದು. ಇದರಿಂದ ವಸಾಹತುಕಾಲೀನ ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗದಲ್ಲಿ ಪ್ರಚಲಿತವಾಗಿದ್ದ ಆಡಳಿತ ಭಾಷೆಯಾದ ಇಂಗ್ಲಿಷ್ ಎಸ್.ಜಿ. ಅವರ ಪಾಲಿಗೆ ಪ್ರಮುಖವಾಯಿತು. ಅಲ್ಲದೆ ಅವರ ವಿದ್ಯಾಗುರುಗಳಾದ ಬಿ.ಎಂ.ಶ್ರೀಕಂಠಯ್ಯನವರ ಶಿಷ್ಯವರ್ಗದವರಲ್ಲಿ ಒಬ್ಬರಾದ ಎಸ್.ಜಿ ಅವರ ಇಂಗ್ಲಿಷ್ ಭಾಷೆ ಮತ್ತು ಅಭಿರುಚಿ ಉತ್ಕೃಷ್ಟ ಮಟ್ಟದ್ದಾಗಿತ್ತು. ಅವರ ಪಾಂಡಿತ್ಯ ಮತ್ತು ಆಸಕ್ತಿಗಳು ಈ ಕಾರಣಕ್ಕಾಗಿಯೋ ಏನೋ ಅವರನ್ನು ತಮ್ಮ ಗುರುಗಳಾದ ಶ್ರೀಕಂಠಯ್ಯನವರಿಗಿಂತ ಪೂರ್ವದಲ್ಲಿಯೇ ಇಂಗ್ಲಿಷ್ ಕವಿತೆಗಳ ಭಾಷಾಂತರಕ್ಕೆ ತೊಡಗುವಂತೆ ಮಾಡಿತು ಎನ್ನಬಹುದು (‘ಶ್ರೀ ಅವರಿಗಿಂತ ಮೊದಲು ಇಂಗ್ಲಿಷ್ ಕಾವ್ಯಭಾಗಗಳನ್ನು ಅನುವಾದಿಸಿದ ಕೀರ್ತಿ ಎಸ್.ಜಿ. ನರಸಿಂಹಾಚಾರ್ಯರಿಗೆ ಸಲ್ಲುತ್ತದೆ. ಆದರೆ ಇದರ ಭಾಷಾಂತರಿತ ಕವನಗಳೆಲ್ಲ ಪಠ್ಯಪುಸ್ತಕಗಳಲ್ಲಿ ಚದುರಿ ಹೋಗಿವೆ’(ಗಂಗಾನಾಯಕ್, 65)ಎನ್ನುವ ಅಭಿಪ್ರಾಯವನ್ನು ಗಮನಿಸಬಹುದು). ಇದರಿಂದ ‘ಇಂಗ್ಲಿಷ್ ಗೀತಗಳು’ ಕೃತಿಗಿಂತ ಪೂರ್ವಕ್ಕೆ ನಡೆದ ಕಾವ್ಯದ ಭಾಷಾಂತರಗಳಲ್ಲಿ ಶಿಷ್ಯನೇ ಮುಂದಿದ್ದಂತಾಯಿತು. ನರಸಿಂಹಾಚಾರ್ಯರ ಕಾವ್ಯಾನುವಾದಗಳೂ ಹಟ್ಟಂಗಡಿ ನಾರಾಯಣರಾಯರ ಕಾವ್ಯಾನುವಾದಗಳೂ ಶ್ರೀ ಅನುವಾದಗಳಿಗೆ ಒಂದು ಪೂರ್ವಾಭ್ಯಾಸಗಳಂತೆ ಒದಗಿ ಬಂದುದರಿಂದ ಇಂಗ್ಲಿಷ್ ಗೀತಗಳು ಭಾವಗೀತೆಯ ಹೊಸಗನ್ನಡ ರೂಪಕ್ಕೆ ಹೊರಳಿಕೊಳುವುದಕ್ಕೆ ಸಾಧ್ಯವಾಯಿತು.

ಎಸ್.ಜಿ.ನರಸಿಂಹಾಚಾರ್ಯರ ಭಾಷಾಂತರಗಳು ಹೆಚ್ಚು ನೆರವಾಗಿದ್ದು ಆಗಿನ ಕಾಲದ ವಿದ್ಯಾ ಇಲಾಖೆಗೆ. ಆಗ ತಾನೇ ಹೊಸ ವಿದ್ಯಾಭ್ಯಾಸ ಸ್ಥಿರಗೊಳ್ಳುತ್ತಿದ್ದ ಕಾಲದಲ್ಲಿ ಪಠ್ಯಪುಸ್ತಕಗಳನ್ನು ರೂಪಿಸುವುದು ಬಹುಮುಖ್ಯವಾದ ಕೆಲಸವಾಗಿತ್ತು. ಸ್ಥಳೀಯ ಸಂಪ್ರದಾಯವನ್ನು ಬಿಟ್ಟುಕೊಡದೆ ವಸಾಹತುಶಾಹಿ ಶಿಕ್ಷಣದ ಉತ್ಕೃಷ್ಟ ಮಾದರಿಗಳನ್ನು ಮುಂದಿಟ್ಟುಕೊಂಡು ಪಠ್ಯಪುಸ್ತಕಗಳನ್ನು ರೂಪಿಸಿಕೊಡುವ ಸವಾಲನ್ನು ಎಸ್.ಜಿ.ಯವರು ಸ್ವೀಕರಿಸಿ ಮಕ್ಕಳಿಗೆ ಅವರ ವಾಚನಾಭಿರುಚಿಯನ್ನು ಬೆಳೆಸುವ ಪಠ್ಯಗಳನ್ನು ಆರಿಸಿ, ಶೋಧಿಸಿ ಅದನ್ನು ಕನ್ನಡದಲ್ಲಿ ನಿರೂಪಿಸಿದರು. ಇಲ್ಲಿ ಅವರ ಭಾಷಾಂತರ ಕೆಲಸವು ಮುನ್ನೆಲೆಗೆ ಬಂದಿತು ಎನ್ನಬಹುದು. ಇದನ್ನು ವೆಂಕಟಾಚಲಶಾಸ್ತ್ರಿಯವರು ಗುರುತಿಸಿ ಹೀಗೆ ಹೇಳುತ್ತಾರೆ, ‘ಹೊಸಗನ್ನಡ ಕಾಲದ ತೀರ ಮೊದಲಿನ ಭಾಷಾಂತರಕಾರರಲ್ಲಿ ಅವರದು ದೊಡ್ಡ ಹೆಸರು. ಅವರು ಸರ್ಕಾರದ ಭಾಷಂತರ ಇಲಾಖೆಯಲ್ಲಿ ಕನ್ನಡ ಭಾಷಾಂತರಕಾರರಾಗಿ ಸೇವೆ ಸಲ್ಲಿಸುತ್ತಿದ್ದುದರಿಂದ ಈ ಬಗೆಯ ಕೆಲಸ ಅವರಿಗೆ ಸಹಜವಾಗಿಯೇ ಅಪೇಕ್ಷಣೀಯವೂ ಅತ್ಯವಶ್ಯವೂ ಆಗಿ ತೋರಿದ್ದರಿಂದ ಅದರಲ್ಲಿ ಆಶ್ಚರ್ಯವೇನಿಲ್ಲ”(ವೆಂಕಟಾಚಲಶಾಸ್ತ್ರಿ, xi). ಮಕ್ಕಳ ಪ್ರಿಯವಾದ ಶಿಶುಗೀತೆ ಎನಿಸಿದ ‘ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್’ ಎನ್ನುವ ಪ್ರಾಸವನ್ನು ಕನ್ನಡದ ಮಕ್ಕಳಿಗೆಂದು ಎಸ್.ಜಿ. ‘ಮಿರುಗು ಮಿರುಗೆಲೆ ನಕ್ಷತ್ರ’ ಎಂಬುದಾಗಿ ಗುನುಗುವಂತಹ ಸಾಲುಗಳನ್ನು ಮಾಡಿಕೊಟ್ಟರು. ಮಕ್ಕಳಿಗೆ ಹಿತವಾಗುವಂತೆ ‘ಗೋವಿನ ಚರಿತ್ರೆ’ಯಂತಹ ಕವಿತೆಗಳನ್ನು ಬರೆದಿದ್ದ ಎಸ್.ಜಿ ಅವರಿಗೆ ಮಕ್ಕಳಿಗೆ ಭಾಷಾಂತರಿಸುವುದು ಅಷ್ಟೇನೂ ಕಷ್ಟವಾದ ಕೆಲಸವೆನಿಸಿರಲಿಲ್ಲ ಎನ್ನಿಸುತ್ತದೆ. ತೀನಂಶ್ರೀ ಅವರು ಅಭಿಪ್ರಾಯ ಪಡುವಂತೆ,’ಇಪ್ಪತ್ತನೆಯ ಶತಮಾನದ ಮೊದಲ ದಶಕಗಳಲ್ಲಿ ಪ್ರಚುರವಾಗಿದ್ದ ಕನ್ನಡ ಪಠ್ಯಪುಸ್ತಕಗಳಲ್ಲಿ ಸೇರಿದ್ದ ಇಂಗ್ಲಿಷ್ ಪದ್ಯಾನುವಾದಗಳೆಲ್ಲವೂ ನಮಗೆ ತಿಳಿದ ಮಟ್ಟಿಗೆ ಎಸ್.ಜಿ.ನರಸಿಂಹಾಚಾರ್ಯರವೇ ಎಂದು ತೋರುತ್ತದೆ’(ತೀನಂಶ್ರೀ, 65). ಬರಿಯ ಇಂಗ್ಲಿಷ್ ಮಾತ್ರವೇ ಅಲ್ಲ, ‘ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಉತ್ಕೃಷ್ಟ ಕಾವ್ಯಭಾಗಗಳೇನುಂಟೋ ಅವು ಕನ್ನಡ ಭಾಷೆಯ ಜನಸಾಮಾನ್ಯರಿಗೂ ಚಿಕ್ಕಮಕ್ಕಳಿಗೂ ತಿಳಿಯುವಂತಾಗಬೇಕು ಎಂಬ ದೃಷ್ಟಿ ಎಸ್.ಜಿ.ನ ಅವರದು’(ವೆಂಕಟಾಚಲ ಶಾಸ್ತ್ರಿ, xi). ಹೀಗಾಗಿ ಇಂಗ್ಲಿಷ್ ಮತ್ತು ಸಂಸ್ಕೃತ ಭಾಷಾಂತರಗಳೆರಡನ್ನೂ ಸಮನಾಗಿ ಎಸ್.ಜಿ ಅವರು ಮಾಡುತ್ತಾ ಬಂದಿದ್ದರು.

ನರಸಿಂಹಾಚಾರ್ಯರು ಭಾಷಾಂತರಕಾರರಾಗಿ ನೇಮಕವಾಗಿ ವಿದ್ಯಾ ಇಲಾಖೆಯಲ್ಲಿನ ಪಠ್ಯಪುಸ್ತಕಗಳನ್ನು ನಿರೂಪಿಸುತ್ತಿದ್ದ ಸಂಗತಿ ಚಾರಿತ್ರಿಕವಾಗಿ ಮಹತ್ವದೆನಿಸುತ್ತದೆ. ನರಸಿಂಹಾಚಾರ್ಯರು ಭಾಷಾಂತರ ಮಾಡಿರುವ ಪಠ್ಯಗಳು ಸಾಂಸ್ಕೃತಿಕವಾಗಿ ಯಾವ ಬಗೆಯ ಆಯ್ಕೆಯನ್ನು ಸಮರ್ಥಿಸುವಂತಿವೆ? ಎಂದು ಕೇಳಿಕೊಳ್ಳಬೇಕೆನಿಸುತ್ತದೆ. ಮೆಕಾಲೆ ಶಿಕ್ಷಣ ಜಾರಿಗೆ ಬಂದ ನಂತರ ಭಾರತೀಯ ವಿದ್ಯಾಭ್ಯಾಸದ ವೈಖರಿ ಬದಲಾಗಿ ಲೌಕಿಕ ಶಿಕ್ಷಣವು ಪಶ್ಚಿಮದಿಂದಲೂ ಆಧ್ಯಾತ್ಮಿಕ ಶಿಕ್ಷಣವು ಪೂರ್ವದಿಂದಲೂ ಬರುವ ಧಾರೆಗಳನ್ನಾಗಿ ಗುರುತಿಸಿಕೊಳ್ಳಲಾರಂಭಿಸಿತು. ಇಂಗ್ಲಿಷಿನಿಂದ ಬಂದ ಪಠ್ಯಗಳು ಸಾಮಾನ್ಯವಾಗಿ ಪಠ್ಯಪುಸ್ತಕಗಳು, ಲೌಕಿಕ ಜ್ಞಾನವನ್ನು ತಿಳಿಸಿಕೊಡುವ ಪಠ್ಯಗಳೂ ಆಗಿರುತ್ತಿದ್ದವು. ಇಂಗ್ಲಿಷ್ ಶಿಕ್ಷಣದ ವ್ಯಾಪ್ತಿ ಹರಡುತ್ತಿದ್ದಂತೆ ಸ್ಥಳೀಯವಾಗಿ ಅದಕ್ಕೆ ತಕ್ಕಂತೆ ಪಠ್ಯಗಳನ್ನು ದೇಶಭಾಷೆಗಳಲ್ಲಿ ಸೃಷ್ಟಿಸಿಕೊಳ್ಳುವುದಕ್ಕಾಗಿ ಭಾಷಾಂತರಗಳಿಗೆ ಮಹತ್ವ ಸಿಕ್ಕಿತು. ಇದರ ಅಂಗವಾಗಿಯೇ ವಿದ್ಯಾ ಇಲಾಖೆಯಲ್ಲಿ ಟ್ರಾನ್ಸ್ ಲೇಟರ್ ಎನ್ನುವ ಹುದ್ದೆ ಸೃಷ್ಟಿಯಾಗಿದ್ದು. ನರಸಿಂಹಾಚಾರ್ಯರು ಇದರ ಭಾಗವಾಗಿ ಭಾಷಾಂತರ ಪಠ್ಯಗಳನ್ನು ಸೃಷ್ಟಿಸಿಕೊಡುವ ಜವಾಬ್ದಾರಿಯನ್ನು ಹೊತ್ತಿದ್ದರು. ಇಲ್ಲಿ ಇದ್ದ ಮುಖ್ಯ ಒತ್ತಡ ಎಂದರೆ ಪಾಶ್ಚಾತ್ಯ ಪಠ್ಯಗಳನ್ನು ಸ್ಥಳೀಯ ಸಂಸ್ಕೃತಿಗೆ ಒಗ್ಗಿಸುವ ಕೆಲಸ ಮಾಡಬೇಕಾದುದು. ಶೈಕ್ಷಣಿಕ ಅವಶ್ಯಕತೆಯಿಂದ ಸೃಷ್ಟಿಯಾಗುತ್ತಿದ್ದ ಪಠ್ಯಗಳನ್ನು ಶಿಶಿರ್‍ಕುಮಾರ್ ದಾಸ್ ಅವರಂತಹ ವಿದ್ವಾಂಸರು ಗುರುತಿಸುವಂತೆ ಅಂತಹ ಗಂಭೀರ ಆಯ್ಕೆಗಳೇನೂ ಆಗಿರಲಿಲ್ಲ. ಓದುಗರು, ಮುದ್ರಕರು ಮತ್ತು ಪತ್ರಿಕಾ ಸಂಪಾದಕರು ಈ ಯಾರೂ ಭಾಷಾಂತರಗಳನ್ನು ಮುಖ್ಯ ಎಂದು ಭಾವಿಸಿ ಭಾಷಾಂತರದ ಚಟುವಟಿಕೆಯಲ್ಲಿ ತೊಡಗಿಕೊಂಡವರಾಗಿರಲಿಲ್ಲ. ಜೊತೆಗೆ ಈ ಭಾಷಾಂತರಗಳಿಗೆ ಯಾವ ಪಠ್ಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಬಗ್ಗೆಯೂ ಒಂದು ನಿರ್ದಿಷ್ಟ ನೀತಿ ಇರಲಿಲ್ಲ. ಒಟ್ಟಿನಲ್ಲಿ ಭಾಷಾಂತರ ಕ್ರಿಯೆಯು ಪ್ರಜ್ಞಾಪೂರ್ವಕವಾದ ಕ್ರಿಯೆ ಆಗಿರಲಿಲ್ಲ(ಶಿಶಿರ್‍ಕುಮಾರ್‍ದಾಸ್, 180). ಆದರೆ ಈ ಭಾಷಾಂತರಗಳು ವಾಚಾನಾಭಿರುಚಿಯ ಅಂಗವಾಗಿ ನಡೆಯುತ್ತಿದ್ದುದು ಮೇಲ್ನೋಟಕ್ಕೆ ವಿದಿತ.

ಕಾವ್ಯಪ್ರಕಾರವು ಆಧುನಿಕ ಕನ್ನಡ ಭಾಷೆಯಲ್ಲಿ ಕಾಣಿಸಿಕೊಳ್ಳತೊಡಗಿದ್ದು ಇಂಗ್ಲಿಷ್ ವಿದ್ಯಾಭ್ಯಾಸದ ಪಠ್ಯಪುಸ್ತಕಗಳಲ್ಲಿ. ಮುಖ್ಯವಾಗಿ ಇಲ್ಲಿ ನೈತಿಕ ಪಾಠಗಳು, ಪ್ರಕೃತಿ ಕವಿತೆಗಳು, ಸಚ್ಚಾರಿತ್ರದ ಸಂಗತಿಗಳನ್ನು ನಿರೂಪಿಸುವ ಸಂಗತಿಗಳಿಗೆ ಒತ್ತು ನೀಡುವ ಪಠ್ಯಗಳಿರುತ್ತಿದ್ದವು. ಮಕ್ಕಳಿಗೆಂದು ಶಿಶುಪ್ರಾಸಗಳನ್ನು ರಚಿಸುವಲ್ಲಿ ಎಸ್.ಜಿಯವರ ಹೆಸರು ಮುಂಚೂಣಿಯಲ್ಲಿದೆ. ಎಸ್.ಜಿ ಅವರು ಇಂಗ್ಲಿಷಿನ ‘ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್‘(ಜೇನ್ ಟೇಲರ್, ‘ದಿ ಸ್ಟಾರ್’) ಎಂಬ ಶಿಶುಪ್ರಾಸ ಗೀತೆಯನ್ನು ‘ಮಿರುಗು ಮಿರುಗೆಲೆ ನಕ್ಷತ್ರ’ ಎಂದು ಅನುವಾದಿಸಿದರು. ಇದೇ ಶಿಶುಗೀತೆಯ ಅನುವಾದವನ್ನು ಪಂಜೆಯವರು, ಕಡೇಕಾರು ರಾಜಗೋಪಾಲಕೃಷ್ಣರಾಯರು ಸಹ ಭಾಷಾಂತರಿಸಿದರು. ಈ ಎಲ್ಲ ಅಭ್ಯಾಸಗಳನ್ನು ಪಠ್ಯಪುಸ್ತಕಗಳಿಗಾಗಿ ನಡೆಸಿದ್ದು ಎಸ್.ಜಿ.ನರಸಿಂಹಾಚಾರ್ಯರು. ಅವರು ಸರ್ಕಾರದಲ್ಲಿ ಅನುವಾದಕರಾಗಿ ಕೆಲಸ ಮಾಡುತ್ತಿದ್ದ ಹೊತ್ತಿನಲ್ಲಿ ಕನ್ನಡ ಪಠ್ಯಪುಸ್ತಕಗಳಿಗೆಂದೇ ಕೆಲವು ಕವನಗಳನ್ನು ಇಂಗ್ಲಿಷ್‍ನಿಂದ ಆರಿಸಿ ಅನುವಾದ ಮಾಡಿದ್ದಾರೆ ಎನ್ನುವುದನ್ನು ಅವರ ಸಮಕಾಲೀನರು ಮತ್ತೆ ಮತ್ತೆ ಉಲ್ಲೇಖ ಮಾಡಿದ್ದಾರೆ. ಇಂಗ್ಲಿಷಿನಿಂದ ತಂದ ಕವಿತೆಗಳಲ್ಲಿ ಅನುಕರಣಶೀಲತೆಯನ್ನು ಕಾಣಬಹುದಾದರೂ ಅವುಗಳಲ್ಲಿ ಮರುಸೃಷ್ಟಿಯ ಕೆಲಸವನ್ನು ಕಾಣಬಹುದು. ಎಸ್.ಜಿ. ಅವರು ಬಳಸುತ್ತಿದ್ದ ಭಾಷೆ ಶಿಶುಗೀತೆಗಳಿಗೆ ತಕ್ಕನಾಗಿದೆ. ಅಲ್ಲದೆ ಅವರು ಅನುಕರಣ ಶಬ್ದಗಳನ್ನು ಬಳಸಿ ಚಿಣ್ಣರನ್ನು ಸುಲಭವಾಗಿ ಆಕರ್ಷಣೆಗೀಡು ಮಾಡುತ್ತಿದ್ದರು ಎನ್ನುವುದು ತಿಳಿಯುತ್ತದೆ. ಮಕ್ಕಳಿಗೆಂದೇ ‘ಅಲ್ಲಾವುದ್ದೀನ್ ಮತ್ತು ಅದ್ಭುತ ದೀಪ’ ಎಂಬುದನ್ನು ‘ಬುಕ್ಸ್ ಫಾರ್ ಬೆಯರ್ನ್ಸ್ ಮಾಲೆಯ ‘ಸ್ಟೋರಿ ಆಫ್ ಅಲಾಡೀನ್ ಅಂಡ್ ದಿ ವಂಡರ್‍ಫುಲ್ ಲ್ಯಾಂಪ್’ ಪುಸ್ತಕದ ಅನುವಾದ ಮಾಡಿದ್ದಾರೆ. ಅದೂ ಕೂಡ ಆ ಕಾಲದಲ್ಲಿ ಜನಪ್ರಿಯವಾದ ಪುಸ್ತಕವೇ.

ಎಸ್.ಜಿ. ನರಸಿಂಹಾಚಾರ್ಯರ ಇಂಗ್ಲಿಷ್ ಕಾವ್ಯಾನುವಾದಗಳು ಬಿಡಿ ಬಿಡಿ ಕವಿತೆಗಳನ್ನು ಕೇಂದ್ರೀಕರಿಸಿವೆ. ಮುಖ್ಯವಾಗಿ ಅವರು ಈ ಅನುವಾದಗಳನ್ನು ಮಾಡಿದ್ದು ಪಠ್ಯಪುಸ್ತಕಗಳಿಗೆ. ಇನ್ನು ಕೆಲವು ಕವಿತೆಗಳನ್ನು ಹೊಸ ಓದುಗರಿಗೆ ವಾಚಾನಾಭಿರುಚಿ ಹೆಚ್ಚಿಸಲೆಂದು ಭಾಷಾಂತರಿಸಿದ್ದಾರೆ. ಎಸ್.ಜಿ. ಅವರ ಅನುವಾದಿತ ಕವಿತೆಗಳಲ್ಲಿ ವಿಶ್ವಮಾನ್ಯವೆನಿಸುವ ಸಂಗತಿಗಳುಳ್ಳ ಕವಿತೆಗಳು ಅಡಕಗೊಂಡಿವೆ. ಇವನ್ನು ಬರೆದವರಲ್ಲಿ ಪ್ರಸಿದ್ಧರೂ ಇರುವಂತೆಯೇ ಅಷ್ಟೇನೂ ಜನಪ್ರಿಯವಲ್ಲದ ಕವಿಗಳೂ ಇದ್ದಾರೆ. ಒಟ್ಟಿನಲ್ಲಿ ತಮಗೆ ಪ್ರಿಯವೆನಿಸಿದ ಎಂದಷ್ಟೇ ಅಲ್ಲದೆ ಜನರಿಗೆ ಹಿತವಾಗುವಂತೆ ತೋರುವ ಕವಿತೆಗಳನ್ನು ತಮ್ಮ ಭಾಷಾಂತರಕ್ಕೆ ಆಯ್ಕೆ ಮಾಡಿಕೊಂಡಿರುವುದು ಇಲ್ಲಿ ವಿದಿತ. ಎಸ್.ಜಿ. ಅವರ ಇಂಗ್ಲಿಷ್ ಕವಿತೆಗಳ ಭಾಷಾಂತರಗಳಲ್ಲಿ ಹೆಚ್ಚು ಜನಪ್ರಿಯವಾಗಿರುವುದು ಗೋಲ್ಡ್ ಸ್ಮಿತ್ ಕವಿಯ ‘ಹರ್ಮಿಟ್’ ಎಂಬ ಸುದೀರ್ಘ ಕವಿತೆಯ ಭಾಷಾಂತರ. ಈ ಕವಿತೆ ಗೋಲ್ಡ್ ಸ್ಮಿತ್ ಕವಿಯ ‘ದ ವಿಕಾರ್ ಆಫ್ ದ ವೇಕ್‍ಫೀಲ್ಡ್’ ಕಾದಂಬರಿಯ ಒಂದು ಪಾತ್ರ ಹಾಡುವ ಲಾವಣಿ. ಈ ಲಾವಣಿ ಒಂದು ರಮ್ಯ ಬ್ಯಾಲೆಡ್ ಆಗಿದ್ದು 160 ಸಾಲುಗಳಲ್ಲಿ ರಚಿತವಾಗಿದೆ. ಪ್ರೇಮಿಗಳಿಬ್ಬರ ಸಮಾಗಮವನ್ನು ಚಿತ್ರಿಸುವ ಕಥನವನ್ನು ಅದು ಚಿತ್ರಿಸುತ್ತದೆ. ಇದನ್ನು ಎಸ್.ಜಿ ಅವರು ‘ಪ್ರೋಷಿತ ಪ್ರಿಯ ಸಮಾಗಮ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ. ಇದರ ಹೊರ ರೂಪ, ಶೈಲಿಗಳನ್ನು ನೋಡಿದರೆ ಇದನ್ನು ಮೇಲ್ನೋಟಕ್ಕೆ ಯಾರೂ ಇದನ್ನು ಅನುವಾದವೆಂದು ಗುರುತಿಸುವುದಕ್ಕೆ ಆಗುವುದಿಲ್ಲ. ಏಕೆಂದರೆ ಇದರ ರೂಪು ಶೈಲಿಗಳೆಲ್ಲ ಅಪ್ಪಟ ಕನ್ನಡ ಕಾವ್ಯಶೈಲಿಯನ್ನು ಅನುಸರಿಸಿಯೇ ಬರೆದಂತಿದೆ. ಈ ಕವಿತೆ ನಲ್ವತ್ತು ಪದ್ಯಗಳ ನಾಲ್ಕು ಸಾಲಿನ ಕಂದದಲ್ಲಿ ರಚಿತವಾಗಿದ್ದು ಕವಿತೆಯ ಕೊನೆಗೆ ಅಂದರೆ ನಲ್ವತ್ತೊಂದನೆಯ ಪದ್ಯವು ಫಲಶೃತಿಯನ್ನು ಹೇಳುವ ಸಾಂಪ್ರದಾಯಿಕ ಶೈಲಿಯದು. ಅದು ಹೀಗಿದೆ:

ಇಂತಿರಲಾ ಗೋಲ್ಡ್ ಸ್ಮಿತ್ ಕವಿ
ಮುಂತೊರೆದಿರ್ದೊಂದು ಕಿರಿಯ ಕೃತಿಗಿದು ನೆಳಲೆಂ-
ಬಂತಿರೆ ರಚಿಸಿದೆನೀ ಕೃತಿ
ಸಂತಸಮಂ ಕುಡುವುದಕ್ಕೆ ಕನ್ನಡಿಗರ್ಗಂ//

ಇಲ್ಲಿ ಎಸ್.ಜಿ.ಅವರು ಬಳಸಿದ ‘ನೆಳಲಂಬತಿರೆ’ ಎಂಬ ಪದಪ್ರಯೋಗ ಭಾಷಾಂತರದ ಹೊಸ ಅರ್ಥ, ವ್ಯಾಖ್ಯಾನವನ್ನೇ ನಿರೀಕ್ಷಿಸುವಂತದ್ದು. ಕನ್ನಡದ ಓದುಗರಿಗೆ ಓದಿನ ರಸಾನಂದವನ್ನು ನೀಡಲು ಕನ್ನಡದ್ದೇ ಆದ ಆವರಣವನ್ನು ಬಳಸಿ ಹೇಳುತ್ತಿದ್ದೇನೆ ಎನ್ನುವುದು ಅವರ ಇಂಗಿತವಾಗಿರಬಹುದೇ? ಮಧ್ಯಕಾಲೀನ ಕನ್ನಡ ಕಿರುಕಾವ್ಯಗಳನ್ನು ಹೋಲುವ ಧಾಟಿ ಬಳಸಿ ಕಥೆಯನ್ನು ನಿರೂಪಿಸುವುದು ಎಸ್.ಜಿ ಅವರು ಅನುಸರಿಸಿದ ಧಾಟಿ. ಸಾಹಿತ್ಯದ ಆತ್ಯಂತಿಕ ಪರಿಣಾಮಗಳಾದ ಆನಂದ, ಮೌಲ್ಯ ಸ್ಥಾಪನೆಗಳನ್ನು ಮಾಡುವುದು ಇದ್ದೇ ಇದೆ. ಇದೊಂದು ಬಗೆಯ ಕಾಂತಾ ಸಮ್ಮಿತಿಯ ಶೈಲಿ. ಇದನ್ನು ಅನುಸರಿಸಿ ಕನ್ನಡದ ವಾಚಕರಿಗೆ ಇತರೆ ಭಾಷೆಗಳ ಕಥಾವಿಷಯಗಳನ್ನು ತಿಳಿಯಪಡಿಸುವುದು ತಮ್ಮ ಉದ್ದೇಶ ಎಂದು ಈ ಭಾಷಾಂತರಕಾರರು ನಿರ್ಣಯಿಸಿ ಹೊರಟಂತಿದೆ.

ಎಸ್.ಜಿ. ನರಸಿಂಹಾಚಾರ್ಯರ ಭಾಷಾಂತರ ಕಣಜದಲ್ಲಿ ಹೆನ್ರಿ ವರ್ಡ್ಸ್ ವರ್ತ್ ಲಾಂಗ್‍ಫೆಲೊನ ‘ಎ ಝಾಲಮ್ ಆಫ್ ಲೈಫ್’ ಎಂಬ ಕವಿತೆಯ ಒಂದು ಭಾಗದ ಭಾಷಾಂತರವಾಗಿ ‘ಆರ್ಯ ಮಹಿಮಾದರ್ಶ’ ಎಂಬ ಕವಿತೆ, ಫೆಲಿಶಿಯಾ ಡೊರೊಥಿಯಾ ಹೀಮ್ಯಾನ್ಸ್ ಬರೆದ ‘ದ ಬೆಟರ್ ಲ್ಯಾಂಡ್’ ಕವಿತೆಯ ಅನುವಾದ-‘ಉತ್ತಮ ರಾಜ’, ಕೊಲಿ ಸಿಬ್ಬರ್‍ನ ‘ದ ಬಾಯ್ ಓವ್!’ ಅನುವಾದ-‘ಕುರುಡು ಹುಡುಗ’, ವರ್ಡ್ಸ್ ವರ್ತ್ ಕವಿಯ ‘ದ ಕಕೂ’ ಅನ್ನುವುದು ‘ಕೋಗಿಲೆ’ಯಾಗಿ, ಷೇಕ್ಸ್ ಪಿಯರ್‍ನ ‘ಟೆಂಪೆಸ್ಟ್’ ನಾಟಕದ ನಾಲ್ಕು ಪದ್ಯಗಳ ಅನುವಾದ, ಪಾಮರ್ ಕವಿಯ ‘ಟ್ರೈ ಟ್ರೈ ಅಗೈನ್’ ಕವಿತೆ ‘ಮರಳಿ ಯತ್ನವ ಮಾಡು’ ಎನ್ನುವುದಾಗಿ, ಜೇನ್ ಟೇಲರ್‍ಳ ‘ದ ಸ್ಟಾರ್’ ಕವಿತೆ ‘ನಕ್ಷತ್ರ’ವೆಂದಾಗಿ ಕನ್ನಡ ಕವಿತೆಗಳ ಯಾದಿಯನ್ನು ಸೇರಿವೆ. ಇವುಗಳ ಜೊತೆಗೆ ಮೂಲದ ಗುರುತಿಲ್ಲದ ‘ಮಕ್ಕಳು ಮಲಗುವ ಹೊತ್ತು’, ‘ಬಿಡುವು’ ಈ ಕವಿತೆಗಳನ್ನೂ ಸೇರಿಸಬಹುದು.

ಕನ್ನಡದ ಆರಂಭಿಕ ಭಾಷಾಂತರಕಾರರ ಸಮಸ್ಯೆ ಏನೆಂದರೆ ಒಂದು ಭಾಷೆಯಲ್ಲಿರುವ ಕಾವ್ಯದ ರಚನೆಯನ್ನು ತಮ್ಮ ಭಾಷೆಗೆ ಹೇಗೆ ಒಗ್ಗಿಸಬೇಕೆನ್ನುವುದು. ಈ ಸಂರಚನೆಯ ಆಲೋಚನೆಯು ಎಸ್.ಜಿಯವರನ್ನು ಬಾಧಿಸಿದೆ ಎನ್ನಿಸದು. ಏಕೆಂದರೆ ಅವರು ತಮ್ಮ ಕವಿತೆಗಳನ್ನು ಕನ್ನಡಿಸುತ್ತಿರುವ ಬಗ್ಗೆ ಖಚಿತವಾಗಿದ್ದಾರೆ. ಕನ್ನಡದ ಭಾಷಾಂತರಗಳಲ್ಲಿ ಕಾವ್ಯವನ್ನು ಕನ್ನಡಿಸುವ ಅನೇಕ ಮಾದರಿಗಳಿದ್ದು ಶಿವಾಜಿ ಜೋಯಿಸ್ ಅವರು ಗುರುತಿಸುವಂತೆ, ‘ಆಂಗ್ಲಕವನಗಳ ವಸ್ತು, ಭಾವ, ಭಾಷೆ, ಛಂದಸ್ಸು ಇವುಗಳಿಗೆ ಹೊಂದುವಂತೆ ಕನ್ನಡವನ್ನು ಸಜ್ಜುಗೊಳಿಸಿ ಭಾಷಾಂತರಿಸುವಲ್ಲಿ ವಿವಿಧ ಮಾದರಿಗಳು ದೊರೆಯುತ್ತವೆ. ಹಳಗನ್ನಡ ಮತ್ತು ವೃತ್ತ ಕಂದಗಳಂಥ ಛಂದಸ್ಸನ್ನು ಬಳಸಿದ ಮಾದರಿಗಳು; ನಡುಗನ್ನಡ ಮತ್ತು ಷಟ್ಪದಿ, ಚೌಪದಿ, ದ್ವಿಪದಿಗಳಂತವನ್ನು ಬಳಸಿದ ಮಾದರಿಗಳು; ಹಾಗು ಹೊಸಗನ್ನಡದಲ್ಲಿ ಷಟ್ಪದಿ, ಚೌಪದಿ ಮೊದಲಾದ ದೇಶೀಛಂದಸ್ಸಿನ ಗಣ, ಲಯಗಳನ್ನು ನಮ್ಯವಾಗಿಸಿ, ಶಿಥಿಲವಾಗಿಸಿ ಪ್ರಾಸನಿರ್ಬಂಧವನ್ನು ಸಡಿಲಿಸಿ ಹೊಸ ಛಂದೋಲಯಗಳನ್ನು ನಿರ್ಮಿಸಿದ ಮಾದರಿಗಳು’(ಶಿವಾಜಿ ಜೋಯಿಸ್, 316). ಕನ್ನಡ ಪಠ್ಯಪುಸ್ತಕಗಳಿಗೆಂದು ಭಾಷಾಂತರಿಸಿದ ಪದ್ಯಗಳಲ್ಲಿ ಈ ಮೊದಲಿನ ಭಾಮಿನೀ ಷಟ್ಪದಿ, ಕಂದ, ಸಾಂಗತ್ಯಗಳ ಮಾದರಿಗಳನ್ನು ಅನುಸರಿಸಿ ಮಾಡಿರುವುದು ಕಂಡು ಬರುತ್ತದೆ. ಮೊದಲಿಗ ಭಾಷಾಂತರಕಾರರಾದ ಎಸ್.ಜಿ.ನರಸಿಂಹಾಚಾರ್ಯರು ಮಾಡಿದ ಅನೇಕ ಭಾಷಾಂತರಗಳು ಛಂದಸ್ಸನ್ನು ಬಿಟ್ಟುಕೊಡದೇ ಮಾಡಿದಂತವು. ಎಸ್.ಜಿ ಅವರು ‘ಇಂಗ್ಲಿಷ್ ಕವಿತೆಗಳನ್ನು ಅನುವಾದಿಸಿದ್ದರೂ ಆ ಅನುವಾದಗಳ ಛಂದಸ್ಸು, ಬಹುಮಟ್ಟಿಗೆ ಹಳೆಯ ಛಂದೋರೂಪದಲ್ಲಿವೆ. ಅದರಲ್ಲೂ ಷಟ್ಪದಿ, ಸಾಂಗತ್ಯ, ಚೌಪದಿಗಳೂ ಪ್ರಮುಖವಾಗಿವೆ’(ಗಂಗಾನಾಯಕ್, 77). ಉದಾಹರಣೆಗೆ ವರ್ಡ್ಸ್ ವರ್ತನ ‘ಟು ದ ಕಕೂ’ ಪದ್ಯವನ್ನು ಎಸ್.ಜಿಯವರು ‘ಕೋಗಿಲೆ’ ಎಂದು ಸಾಂಗತ್ಯದಲ್ಲಿ ಅನುವಾದಿಸಿದ್ದಾರೆ(ಬಾರೊ ಬಸಂತದ ಕಂದ ಬಾ ಬಾ ಬಾರೋ/ಹಾರುವ ಹಕ್ಕಿ ನೀನಲ್ಲ....). ಜೇನ್ ಟೇಲರ್‍ಳ ‘ದಿ ಸ್ಟಾರ್’(ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್) ಪದ್ಯವನ್ನು ಅವರು ಶರಷಟ್ಪದಿಗೆ ಬಗ್ಗಿಸಿದ್ದಾರೆ. ಮಿರುಮಿರುಗುವೆ, ಹಾ ಕಿರು ತಾರಗೆಯೆ/ ಅರಿಯೆನು ನಾನೆಲೆ ನೀನಾರೊ ಧರೆಗಿಳಿಯದೆ ನೀನಿರುತಿಹ ದೂರದಿ/ನೆರೆ ಹೊಳೆಯುತಿರುವ ವಜ್ರದಿ ತೆರದಿ’. ಇಲ್ಲಿ ಎಸ್.ಜಿ ಅವರು ಬಿಗಿಯಾದ ಪ್ರಾಸ ನಿಯಮಗಳನ್ನು ಅನುಸರಿಸಿ ಹತ್ತೊಂಬತ್ತನೇ ಶತಮಾನದ ಪಂಡಿತ ಕನ್ನಡದಲ್ಲಿ ಅನುವಾದಿಸುತ್ತಾರೆ ಎನ್ನಿಸುತ್ತದೆ. ಆದರೆ ‘ಎಸ್.ಜಿ.ನ ಅವರವೇ ಅನುವಾದಗಳನ್ನು ಮೂಲದೊಂದಿಗೆ ತೌಲನಿಕವಾಗಿ ಹೋಲಿಸಿ ನೋಡಿದರೆ ಸಾಕಷ್ಟು ವ್ಯತ್ಯಾಸಗಳಿವೆಯೆಂಬುದು ಸ್ಪಷ್ಟವಾಗುತ್ತದೆ. ಎಸ್.ಜಿ.ನ ಅವರಲ್ಲಿ ಮೂಲ ಎನ್ನುವುದು ಇಡೀ ಅನುವಾದದ ಹಿಂದೆ ಪ್ರೇರಕಶಕ್ತಿಯಾಗಿ ನಿಲ್ಲುತ್ತದೆ. ಆದ್ದರಿಂದ ಮೂಲದ ಭಾವದಿಂದ ಪ್ರೇರಿತವಾದ ಕವಿತಾಶಕ್ತಿ ಸ್ವಂತರಚನೆಯೋ ಎಂಬಷ್ಟು ಮಟ್ಟಿಗೆ ಸ್ವತಂತ್ರ ವಹಿಸುತ್ತದೆ’(ಗಂಗಾನಾಯಕ್, 78) ಎನ್ನುವ ಮಾತು ಖಂಡಿತವಾಗಿ ಎಸ್.ಜಿ ಅವರಿಗೆ ಅನ್ವಯಿಸುತ್ತದೆ. ಅಲ್ಲದೆ ಎಸ್.ಜಿ ಅವರು ‘ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಯಿಂದ ಅನುವಾದ ಮಾಡುವಾಗಲೂ ಇವರು ಅಚ್ಚಗನ್ನಡ ಶಬ್ದಗಳನ್ನೇ ಬಳಸಿರುವುದನ್ನು ಕಾಣಬಹುದು’(ಗಂಗಾನಾಯಕ್, 77). ಆದುದರಿಂದ ಅವರ ಅನುವಾದಗಳಲ್ಲಿ ಮರುರಚನೆಯ ಹೊಳಹೂ ಭಾಷೆಯ ಸಾಂಪ್ರದಾಯಿಕ ಚೌಕಟ್ಟನ್ನು ಅನುಸರಿಸುವ ಮನೋಧರ್ಮವೂ ಒಟ್ಟೊಟ್ಟಿಗೇ ಕಾಣುವಂತದ್ದು.

ಎಸ್.ಜಿ ನರಸಿಂಹಾಚಾರ್ಯರು ಸಂಸ್ಕೃತದಿಂದ ಭಾಷಾಂತರಿಸಿದ ಕಾಳಿದಾಸನ ‘ರಘುವಂಶ’ದ ಆಂಶಿಕ ಭಾಗಗಳು ‘ದಿಲೀಪ ಚರಿತೆ’ ಹಾಗು ‘ಅಜನೃಪ ಚರಿತೆ’ಎನ್ನುವ ಹೆಸರಿನಲ್ಲಿ ಪ್ರಕಟಗೊಂಡಿವೆ. ಇವು ಪೂರ್ವದ ಕವಿಗಳ ಕವಿತಾ ಚಾತುರ್ಯವನ್ನು ನೆನಪಿಸುವಂತಿವೆ. ಸಂಸ್ಕೃತ ಪಂಡಿತರೂ ಆಗಿದ್ದ ಎಸ್.ಜಿ. ಅವರು ಈ ಭಾಷಾಂತರಗಳನ್ನು ಕನ್ನಡದ್ದೇ ಎಂಬಂತೆ ಮಾಡಿರುವುದು ಅವರ ಸ್ವತಂತ್ರ ಕವಿತ್ವಾ ಶಕ್ತಿಯ ದ್ಯೋತಕವಾಗಿಯೂ ಕಾಣುತ್ತದೆ. ಸಾಹಿತ್ಯ ಚರಿತ್ರೆಕಾರರು ಉಲ್ಲೇಖಿಸುವಂತೆ ಈ ಎರಡೂ ಕಾವ್ಯಭಾಗಗಳಲ್ಲಿನ ಪದ್ಯಗಳನ್ನು ಪಠ್ಯಪುಸ್ತಕಗಳಿಗೆ ಇಡುವುದು ಸಾಮಾನ್ಯ ಸಂಗತಿಯಾಗಿತ್ತು. ಈ ಪಠ್ಯಗಳನ್ನು ಓದಿ ಕನ್ನಡದಲ್ಲಿ ಕಾಳಿದಾಸನನ್ನು ಕಲ್ಪಿಸಿಕೊಂಡ ತಲೆಮಾರುಗಳು ಇವೆ. ಇದರಲ್ಲಿ ಮಾಸ್ತಿಯವರೂ ಸೇರಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿ.

ಎಸ್.ಜಿ.ನರಸಿಂಹಾಚಾರ್ಯರ ಖಾತೆಯಲ್ಲಿವೆ ಎನ್ನಲಾದ ಇನ್ನೆರೆಡು ಅಮೂಲ್ಯ ಭಾಷಾಂತರಗಳೆಂದರೆ ‘ಗಲಿವರನ ದೇಶಸಂಚಾರ’, ‘ಗಯ್ಯಾಳಿಯನ್ನು ಸಾಧು ಮಾಡುವಿಕೆ’, ‘ಈಸೋಪನ ಕತೆಗಳು’ ಮುಂತಾದವು ಈವರೆಗೂ ದೊರೆತಿಲ್ಲ. ಇವುಗಳ ಬಗ್ಗೆ ಆ ಕಾಲದ ಸಾಹಿತ್ಯ ಪತ್ರಿಕೆಗಳಾದ ‘ಸುವಾಸಿನಿ’, ‘ವಿದ್ಯಾದಾಯಿನಿ’ ಮುಂತಾದವುಗಳಲ್ಲಿ ಉಲ್ಲೇಖವಿರುವುದು ಕಂಡು ಬರುತ್ತದೆ. ನರಸಿಂಹಾಚಾರ್ಯರ ಸಾಹಿತ್ಯ ಸೇವೆಯನ್ನು ಈ ಪತ್ರಿಕೆಗಳು ಉಲ್ಲೇಖಿಸುವಾಗ ಮುಕ್ತಕಂಠದಲ್ಲಿ ಹೊಗಳುವುದನ್ನು ನೋಡಿದರೆ ಪ್ರಾಯಶಃ ಅವರ ಈ ಕೃತಿಗಳು ಉತ್ತಮ ಕೃತಿಗಳಾಗಿರಬಹುದು ಎಂದು ಊಹಿಸಬಹುದು. ‘ಗಯ್ಯಾಳಿಯನ್ನು ಸಾಧು ಮಾಡುವಿಕೆ’ ಎನ್ನುವುದು ಷೇಕ್ಸ್ ಪಿಯರ್‍ನ ‘ಟೇಮಿಂಗ್ ಆಫ್ ದ ಶ್ರೂ’ ನಾಟಕದ ಭಾಷಾಂತರವಾಗಿರಬಹುದು(ಅಥವಾ ರೂಪಾಂತರವಾಗಿರಬಹುದು). ಎಸ್.ಜಿ ಅವರ ಸಮಕಾಲೀನರನೇಕರು ಈ ನಾಟಕವನ್ನು ಅನುವಾದಕ್ಕೆ ಎತ್ತಿಕೊಂಡಿರುವುದನ್ನು ನೋಡಿದರೆ ಪ್ರಾಯಶಃ ಎಸ್.ಜಿ ಅವರೂ ಸಹ ಈ ನಾಟಕವನ್ನು ಅನುವಾದ ಮಾಡಿರಲಿಕ್ಕೆ ಸಾಕು. ಹಟಮಾರಿ ಸ್ತ್ರೀಯನ್ನು ತಿದ್ದಿ ಬುದ್ಧಿ ಕಲಿಸುವ ನಾಟಕವು ಹತ್ತೊಂಬತ್ತನೇ ಶತಮಾನದ ಭಾರತೀಯ ಸಮಾಜದಲ್ಲಿ ಬಹುಪ್ರಚಲಿತವಾಗಿತ್ತು ಎನ್ನುವುದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು. ಅದೇ ಉಮೇದಿನಲ್ಲಿಯೇ ಎಸ್.ಜಿ ಅವರೂ ಸಹ ಆ ನಾಟಕದ ಭಾಷಾಂತರಕ್ಕೆ ಕೈ ಹಾಕಿರಬಹುದು. ಅಲ್ಲದೆ ಇಂಗ್ಲಿಷ್ ಶಿಕ್ಷಣ ಪಡೆದ ವರ್ಗವು ಷೇಕ್ಸ್ ಪಿಯರ್‍ನನ್ನು ಒಂದು ಸಾಂಸ್ಕೃತಿಕ ಬಿಂಬವಾಗಿ ಕಾಣುವ ಹೊತ್ತಿನಲ್ಲಿ ಆ ಕಾಲದ ಭಾಷಾಂತರಕಾರರು ಷೇಕ್ಸ್ ಪಿಯರ್‍ಗೆ ಜಾಗ ಕೊಡಬೇಕಾದುದು ಅನಿವಾರ್ಯವಾಗಿತ್ತು. ರಂಗಭೂಮಿಯಲ್ಲಿ ಆಸಕ್ತಿಯುಳ್ಳ ನಾಟಕಕಾರರು, ನಾಟಕ ಮಂಡಳಿಗಳು, ಹವ್ಯಾಸಿ ರಂಗಭೂಮಿಗಳು ರಂಗಕ್ಕಾಗಿ ಷೇಕ್ಸ್ ಪಿಯರನನ್ನು ಭಾಷಾಂತರಿಸಿಕೊಳ್ಳುವ ಹೊತ್ತಿನಲ್ಲಿ ಎಸ್.ಜಿ. ಅವರು ಷೇಕ್ಸ್ ಪಿಯರ್‍ನನ್ನು ಎತ್ತಿಕೊಂಡಿರುವ ಸಾಧ್ಯತೆ ಇದೆ. ಇನ್ನು ‘ಗಲಿವರನ ದೇಶಸಂಚಾರ’ ಎನ್ನುವುದು ಹೆಸರೇ ಹೇಳುವಂತೆ ಜೊನಾದನ್ ಸ್ವಿಫ್ಟ್ ಬರೆದ ‘ಗಲಿವರ್ಸ್ ಟ್ರಾವೆಲ್ಸ್’ ಎನ್ನುವ ಕಾದಂಬರಿಯ ಭಾಷಾಂತರ ಇರಬಹುದೆಂದು ಊಹಿಸಬಹುದು. ಗಲಿವರನ ಯಾತ್ರೆಯು ಇಂಗ್ಲಿಷ್ ವಾಚನಾಭಿರುಚಿಯನ್ನು ಹೆಚ್ಚಿಸುವುದಕ್ಕೆಂದು ಭಾಷಾಂತರಿಸಿದ ಪುಸ್ತಕ ಎನ್ನಿಸುತ್ತದೆ. ಭಾಷಾಂತರಗಳು ಸಾಮಾನ್ಯವಾಗಿ ಓದುಗರನ್ನು ಗಮನದಲ್ಲಿಟ್ಟುಕೊಂಡೇ ರಚಿತವಾಗುವ ಪಠ್ಯಗಳಾದ್ದರಿಂದ ನರಸಿಂಹಾಚಾರ್ಯರು ಮಾಡಿದ ಭಾಷಾಂತರಗಳು ಸಮಾಜದ ಉನ್ನತ ವರ್ಗದ ವಿರಾಮದ ಓದಿಗೆಂದು ಮಾಡಿದ ಭಾಷಾಂತರಗಳಂತೆ ತೋರುತ್ತವೆ. ಈ ಎಲ್ಲಾ ಸಾಂಸ್ಕೃತಿಕ ಒತ್ತಾಸೆಗಳು ಎಸ್.ಜಿಯವರ ಭಾಷಾಂತರಗಳ ಮೇಲೆಯೂ ಇವೆ ಎನ್ನುವುದನ್ನು ಯುಗಧರ್ಮದ ದ್ಯೋತಕವಾಗಿ ನೋಡಬೇಕಿದೆ.

ಎಸ್.ಜಿ.ನರಸಿಂಹಾಚಾರ್ಯರ ಮಾಡಿರುವ ಭಾಷಾಂತರಗಳಲ್ಲಿ ಉಪಲಬ್ಧವಿರುವ ಕೃತಿಗಳನ್ನು ನೋಡಿ ಹೇಳುವುದಾದರೂ ಅವರ ಭಾಷಾಂತರದ ಕಾರ್ಯವು ಕನ್ನಡದ ಮಟ್ಟಿಗೆ ಮಹತ್ವದ್ದೇ ಆಗಿದೆ. ಆ ಕಾಲದ ಸಾಂಸ್ಕೃತಿಕ ರಾಜಕಾರಣವನ್ನು ಅವರು ಪ್ರಜ್ಞಾಪೂರ್ವಕವಾಗಿ ಗಮನಿಸಿದಂತಿಲ್ಲ. ತಮ್ಮ ವೃತ್ತಿಯ ಭಾಗವಾಗಿ ತಮ್ಮ ಆಸಕ್ತಿಯ ಭಾಗವಾಗಿ ಅವರು ಭಾಷಾಂತರವನ್ನು ಕೈಗೊಂಡಿದ್ದಾರೆ. ಅದರ ಹಿಂದೆ ಐಡಿಯಾಲಾಜಿಯ ಭಾರವಿಲ್ಲ. ದೇಶಭಾಷೆಯ ಪ್ರೀತಿಯಿಂದ ಅವರು ಕೈಗೊಂಡ ಕಾರ್ಯವು ಹೊಸಗನ್ನಡಕ್ಕೆ ಅವರ ಅರಿವಿಲ್ಲದೆ ಒಂದು ಅಡಿಗಲ್ಲನ್ನು ಹಾಕಿಕೊಟ್ಟಿತು. ವೆಂಕಟಾಚಲಶಾಸ್ತ್ರಿಯವರು ಹೇಳುವಂತೆ, ‘ಭಾಷಾಂತರ ಇಲಾಖೆಯಲ್ಲಿದ್ದುಕೊಂಡು ಅವರು ಯಾವ ರೀತಿಯಲ್ಲಿ ಆ ಕಛೇರಿಯ ಭಾಷಾಂತರ ಕಾರ್ಯಗಳನ್ನು ಕೈಗೊಂಡರೋ ಅವುಗಳ ವಸ್ತು, ಗುಣ, ಗಾತ್ರ, ಪ್ರಯೋಜನಗಳು ಯಾವ ರೀತಿಯವೋ ಇವನ್ನು ಗೊತ್ತು ಮಾಡುವುದು ಸಾಧ್ಯವಿದ್ದರೆ ಅದು ಅವಶ್ಯಕವಾಗಿ ಆಗಬೇಕಾದ ಕಾರ್ಯ. ಭಾಷಾಂತರ ವಿಜ್ಞಾನಕ್ಕೆ ಹಾಗು ಕನ್ನಡ ಭಾಷಾಂತರ ವಿಧಿವಿಧಾನಗಳ ತಿಳಿವಳಿಕೆಗೆ ಇದರಿಂದ ತುಂಬ ಪ್ರಯೋಜನವಾಗಬಹುದು’(ವೆಂಕಟಾಚಲಶಾಸ್ತ್ರಿ, xi). ಎಸ್.ಜಿ.ನರಸಿಂಹಾಚಾರ್ಯರ ಅನುವಾದಗಳು ಕನ್ನಡದ ಅಭಿರುಚಿಯನ್ನು ರೂಪಿಸಿದ್ದಲ್ಲದೆ ಒಂದು ವಾಚಕ ವರ್ಗವನ್ನು ನಿರ್ಮಾಣ ಮಾಡಿದವು. ಪಠ್ಯಪುಸ್ತಕಗಳಿಂದ ಚಿಣ್ಣರು ಹೊಸಗನ್ನಡದ ಉಲಿಗೆ ತೆರೆದುಕೊಳ್ಳುವುದಕ್ಕೆ ಅನುವು ಮಾಡಿಕೊಟ್ಟವು. ಇದೇ ಅವರ ಹಿರಿಮೆ.

ಆಕರಗಳು:
ಅನಂತನಾರಾಯಣ, ಎಸ್(1991) ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್ ಕಾವ್ಯದ ಪ್ರಭಾವ, ಮೈಸೂರು: ಗಂಗಾ ತರಂಗ, ಮೂರನೇ ಮುದ್ರಣ
ಗಂಗಾನಾಯಕ್, ಕೆ.ಎನ್. “ಅನುವಾದಕರಾಗಿ ಎಸ್.ಜಿ.ನರಸಿಂಹಾಚಾರ್(1862-1907)”. ಪ್ರಬುದ್ಧ ಕರ್ನಾಟಕ. ಸಂಪುಟ- 89.ಸಂಚಿಕೆ-347-8.ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, 2013
ಶಿವಾಜಿ ಜೋಯಿಸ್(2015)“ನವೋದಯ ಪೂರ್ವದ ಕನ್ನಡ ಕವಿತೆಗಳು”. ಮುಂಬೆಳಗು. ಎ.ವಿ.ನಾವಡ(ಸಂ). ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು
ವೆಂಕಟಾಚಲ ಶಾಸ್ತ್ರೀ, ಟಿ.ವಿ(ಸಂ). ಎಸ್.ಜಿ.ನರಸಿಂಹಾಚಾರ್ಯರ ಕವಿತೆಗಳು, ಬೆಂಗಳೂರು: ಐಬಿಎಚ್ ಪ್ರಕಾಶನ, 1986
Das, Sisirkumar. A History of Indian Literature. 1800-1910. Western Impact: Indian Response, New Delhi: Sahitya Akademi, 2008. 2nd

ಈ ಅಂಕಣದ ಹಿಂದಿನ ಬರೆಹಗಳು:
ಗೋಪಾಲಕೃಷ್ಣ ಅಡಿಗರ ಅನುವಾದಗಳ ನೋಟ
ಹಿಂದುತ್ವ ಮತ್ತು ಭಾಷಾಂತರ: ಕೆಲವು ಟಿಪ್ಪಣಿಗಳು
ಕುವೆಂಪು ಅನುವಾದಗಳ ಧೋರಣೆ…
ಕನ್ನಡದ ಕೆಲಸ ಮಾಡಿದ ಭಾಷಾಂತರಗಳು:
ಟಾಲ್‍ಸ್ಟಾಯ್ ಎಂಬ ಬೂರ್ಜ್ವಾ ವೃಕ್ಷದ ನೆರಳು- (ಟಾಲ್‍ಸ್ಟಾಯ್ ಕನ್ನಡಾನುವಾದಗಳು)
ಕನ್ನಡ ಬೌದ್ಧಸಾಹಿತ್ಯದ ಭಾಷಾಂತರಗಳ ಸ್ವರೂಪ ಹಾಗೂ ರಾಜರತ್ನಂ ಭಾಷಾಂತರಗಳು
ಶ್ರದ್ಧೆಯ ಬೆಸೆವ ಭಾಷಾಂತರ
ಎಂ.ಎಲ್.ಶ್ರೀಕಂಠೇಶಗೌಡರೆಂಬ ಅನುವಾದಕ
ಬೇಂದ್ರೆ ಅನುವಾದಗಳ ಅನುಸಂಧಾನ
ಕನ್ನಡ ಭಾಷಾಂತರ ಮತ್ತು ಪ್ರದೇಶಗಳು
‘ಕನ್ನಡ ಶಾಕುಂತಲ’ಗಳು: ಒಂದು ವಿಶ್ಲೇಷಣೆ
ಕನ್ನಡ ಭಾಷಾಂತರ ಮತ್ತು ಪ್ರದೇಶಗಳು
ಗಾಂಧಿ, ಅನುವಾದ ಮತ್ತು ಕನ್ನಡಾನುವಾದದೊಳಗೆ ಗಾಂಧಿ
ಇಂಗ್ಲಿಷ್ ಗೀತಗಳ ಪಯಣ
ಷೇಕ್ಸ್‌ಪಿಯರ್‌ ಮೊದಲ ಅನುವಾದಗಳು: ಕನ್ನಡಕ್ಕೆ ಹೊಲಿದುಕೊಂಡ ದಿರಿಸುಗಳು
ಸ್ತ್ರೀ ಮಲಯಾಳ ಹಾಗೂ ಸ್ತ್ರೀ ವಿವೇಕದ ಕಥನಗಳು

 

MORE NEWS

ಚರಿತ್ರೆ ಅಂದು-ಇಂದು...

18-01-2022 ಬೆಂಗಳೂರು

ಹಿರಿಯ ಲೇಖಕಿ ಡಾ.ವಿಜಯಶ್ರೀ ಸಬರದ ಅವರ ಮಹತ್ವದ ಕೃತಿ ‘ಶಿವಶರಣೆಯರ ಸಾಹಿತ್ಯ ಚರಿತ್ರೆ’. ಮೂವತ್ತೊಂಬತ್ತು ...

ಒಬ್ಬರಲ್ಲ ಮೂವರು : ರಾಕ್ಸ್ ಮೀಡಿಯಾ...

17-01-2022 ಬೆಂಗಳೂರು

ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ ...

ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ...

16-01-2022 ಬೆಂಗಳೂರು

‘ಬೇರೆ ಬೇರೆ ಧರ್ಮಗಳಿಗೆ ಅವುಗಳಿಗೆ ಸಂಬಂಧಿಸಿದ ಧರ್ಮಗ್ರಂಥಗಳಿವೆ. ಲಿಂಗಾಯತ ಧರ್ಮಕ್ಕೆ ಯಾವುದೇ ಒಂದು ನಿರ್ದಿಷ್ಟ...