‘ಮನಿ’, ’ಮನೆ’, ‘ಮನ’, ‘ಮನಯ್’

Date: 26-05-2023

Location: ಬೆಂಗಳೂರು


''‘ಮನಯ್’ ಎಂಬ ಈ ರೂಪವು ಹೀಗೆ ನಾಲ್ಕು ರೂಪಗಳಾಗಿ ಒಡೆದುಕೊಂಡಿದೆ. ಅಂದರೆ, ಪದಕೊನೆಯಲ್ಲಿ ಸ್ವರದ ಬದಲಾವಣೆ ಆಗಿದೆ. ಹುಣಸೂರು ಪ್ರದೇಶದಲ್ಲಿ ‘ಮನಯ್’ ರೂಪ ಇಂದಿಗೂ ಬಳಕೆಯಲ್ಲಿದೆ. ಅಂದರೆ, ಬಹುಶಾ ಮೂಲದಲ್ಲಿ ಇದ್ದ ರೂಪವನ್ನು ಹುಣಸೂರು ಪರಿಸರದ ಕನ್ನಡ ಹಾಗೆಯೆ ಉಳಿಸಿಕೊಂಡಿದೆ,” ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ಮನಿ’, ’ಮನೆ’, ‘ಮನ’, ‘ಮನಯ್’ ವಿಚಾರದ ಕುರಿತು ಬರೆದಿದ್ದಾರೆ.

'ಮನೆ' ಮತ್ತು 'ಮನಿ' ಈ ಎರಡೂ ರೂಪಗಳು ಕನ್ನಡದಲ್ಲಿ ಬಳಕೆಯಲ್ಲಿವೆ. ಸಾಮಾನ್ಯವಾಗಿ ಈ ರೂಪಗಳ ಬಗೆಗೆ ಒಂದೆರಡು ಅನಿಸಿಕೆಗಳು ಸಮಾಜದಲ್ಲಿ ಮತ್ತು ವಿದ್ವಾಂಸರ ನಡುವೆಯೂ ಚಲನೆಯಲ್ಲಿವೆ. ಅದರಲ್ಲಿ ಒಂದು, 'ಮನೆ' ಎನ್ನುವ ರೂಪ ದಕ್ಶಿಣ ಕರ‍್ನಾಟಕದಲ್ಲಿ ಬಳಕೆಯಲ್ಲಿದೆ ಮತ್ತು 'ಮನಿ' ಎನ್ನುವ ರೂಪವು ಉತ್ತರ ಕರ‍್ನಾಟಕದಲ್ಲಿ ಬಳಕೆಯಲ್ಲಿದೆ ಎನ್ನುವುದು. ಇನ್ನೊಂದು ವಿಚಾರವೆಂದರೆ, ದಕ್ಶಿಣ ಕರ‍್ನಾಟಕ ಬಾಗದಲ್ಲಿ ಬಳಕೆಯಲ್ಲಿ ಇರುವ ರೂಪವನ್ನು ಶಿಶ್ಟಕನ್ನಡದಲ್ಲಿ ಬಳಸಲಾಗುತ್ತಿದೆ ಮತ್ತು ಶಿಶ್ಟಕನ್ನಡದಲ್ಲಿ ಬಳಸುತ್ತಿರುವ ಈ ರೂಪವು ಉತ್ತರ ಕರ‍್ನಾಟಕದಲ್ಲಿ 'ಮನಿ' ಎಂದು ಬದಲಾಗುತ್ತದೆ ಎಂಬುದು.

ಆದರೆ ಇದು ವಾಸ್ತವಕ್ಕೆ ತುಸು ಬಿನ್ನವಾಗಿದೆ. ಕನ್ನಡದಲ್ಲಿ ‘ಮನಿ’-‘ಮನೆ’ ಎಂಬ ಈ ರೂಪಗಳು ಎಲ್ಲೆಲ್ಲಿ ಬಳಕೆಯಲ್ಲಿವೆ ಎಂಬುದನ್ನು ತುಸು ನೋಡೋಣ. ‘ಮನಿ’ ಎಂಬ ರೂಪವು ಅಂದುಕೊಂಡಿರುವುದಕ್ಕಿಂತ ಹೆಚ್ಚಿನ ಪ್ರದೇಶಗಳಲ್ಲಿ ಬಳಕೆಯಲ್ಲಿದೆ. ಕರ‍್ನಾಟಕದ ನಡುಬಾಗ ದಾವಣಗೆರೆ ಮತ್ತು ಚಿತ್ರದುರ‍್ಗಗಳಲ್ಲಿ ‘ಮನಿ’ ಎಂಬ ರೂಪವೆ ಬಳಕೆಯಲ್ಲಿದೆ. ಅಲ್ಲಿಂದ ಕೆಳಗೆ ಒಂದೆಡೆ ತುಮಕೂರು ಮತ್ತು ಇನ್ನೂ ಕೆಳಗೆ ಕೋಲಾರದಲ್ಲಿ ‘ಮನಿ’ ರೂಪ ಬಳಕೆಯಲ್ಲಿದೆ. ಇನ್ನೊಂದೆಡೆ ಮಂಡ್ಯದಲ್ಲಿಯೂ ಈ ರೂಪ ಕೇಳಿಸುತ್ತದೆ. ಇನ್ನೊಂದೆಡೆ ಶಿವಮೊಗ್ಗದಲ್ಲಿಯೂ ಈ ರೂಪ ಕೇಳಿಸುತ್ತದೆ. ಹಳೆ ಮಯ್ಸೂರು ಬಾಗದ ಉಳಿದ ಪರಿಸರಗಳಲ್ಲಿ ‘ಮನೆ’ ಎಂಬ ರೂಪ ಬಳಕೆಯಲ್ಲಿದೆ. ಆದರೆ, ಈ ಎರಡು ರೂಪಗಳ ಸ್ಪಶ್ಟವಾದ ಹಂಚಿಕೆ ನಮಗೆ ಗೊತ್ತಿಲ್ಲ. ಈ ಬಗೆಯ ಅದ್ಯಯನಗಳು ಕನ್ನಡದಲ್ಲಿ ಆಗಿಲ್ಲ. ಈ ಮೇಲೆ ಹೆಸರಿಸಿದ ಪರಿಸರಗಳಲ್ಲಿ ಕೆಲವೆಡೆ ‘ಮನಿ’ ಮತ್ತು ‘ಮನೆ’ ಎಂಬ ಎರಡೂ ರೂಪಗಳು ಇರಬಹುದೆ ನೋಡಬೇಕು. ಇಂತಾ ಕನ್ನಡದ ಒಳನುಡಿಗಳ ಅದ್ಯಯನ ಆಗಿಲ್ಲ. ಇದರಿಂದ ಕನ್ನಡದ ಬಗೆಗೆ ಹೆಚ್ಚು ತಿಳುವಳಿಕೆ ನಮಗೆ ಇಲ್ಲ.

ಮುಂದುವರೆದು ಕೋಲಾರದಿಂದ ಕೆಳಗೆ ಸರಿದರೆ, ಚಾಮರಾಜನಗರ ಪರಿಸರದಲ್ಲಿ ಈ ಎರಡೂ ರೂಪಗಳು ಕೇಳಿಸುವುದಿಲ್ಲ. ಚಾಮರಾಜನಗರ ಮತ್ತು ಮಯ್ಸೂರಿನ ಹಲವು ಪರಿಸರಗಳಲ್ಲಿ ‘ಮನ’ ಎಂಬ ರೂಪ ಬಳಕೆಯಲ್ಲಿದೆ. ಚಾಮರಾಜನಗರದ ಹುಣಸೂರು ಪರಿಸರದಲ್ಲಿ ಇನ್ನೂ ಬಿನ್ನವಾದ ‘ಮನಯ್’ ಎಂಬ ರೂಪವೊಂದು ಕೇಳಿಸುತ್ತದೆ. ಹಾಗಾದರೆ, ‘ಮನಿ’-‘ಮನೆ’ ಎಂಬ ಶಬ್ದವೊಂದಕ್ಕೆ ಕನ್ನಡದಲ್ಲಿ ಸುಮಾರು ನಾಲ್ಕು ರೂಪಗಳು ಇವೆ ಎಂದಾಯಿತು. ಅವುಗಳೆಂದರೆ, ‘ಮನಯ್’-‘ಮನ’-‘ಮನಿ’-ಮನೆ’.

ಆದರೆ, ಶಿಶ್ಟಕನ್ನಡದಲ್ಲಿ ‘ಮನೆ’ ಎಂಬ ರೂಪವನ್ನು ಮಾನ್ಯವಾಗಿಸಿದೆ ಮತ್ತು ಇದು ದಕ್ಶಿಣ ಕರ‍್ನಾಟಕದಲ್ಲಿ ಬಳಕೆಯಲ್ಲಿದೆ ಎಂದು ಹೇಳಲಾಗುತ್ತಿದೆ. ಶಿಶ್ಟಕನ್ನಡಕ್ಕೆ ಅನವಶ್ಯಕವಾದ ಮಹತ್ವವನ್ನು ನಮ್ಮ ಸಮಾಜದಲ್ಲಿ ಕೊಟ್ಟಿರುವುದರಿಂದ ಯುವಜನಾಂಗ, ಶಿಕ್ಶಿತ ಸಮುದಾಯ ಶಿಶ್ಟಕನ್ನಡದ ರೂಪವನ್ನು ಬಳಸುವ ಕಡೆ ವಾಲುತ್ತಿರುವುದನ್ನು ಕಾಣಬಹುದು. ಹಳ್ಳಿ ಪರಿಸರದಲ್ಲಿ ದಕ್ಶಿಣ ಕರ‍್ನಾಟಕದಲ್ಲಿ ಇಂದಿಗೂ ‘ಮನಿ’ ಎಂಬ ರೂಪವು ಕೇಳಿಸುತ್ತದೆ. ಇರಲಿ.

ಇಲ್ಲಿ ಹಲವು ಪ್ರಶ್ನೆಗಳು ಬರುತ್ತವೆ. ಒಂದು ಬಾಶೆಯಲ್ಲಿ ಒಂದು ಶಬ್ದಕ್ಕೆ ಯಾಕೆ ಇಶ್ಟು ರೂಪಗಳು ಎಂಬುದು ಮುಕ್ಯವಾದ ಪ್ರಶ್ನೆ. ಸಾಮಾನ್ಯವಾಗಿ ಬೆಳವಣಿಗೆ ಬಾಶೆಯ ಸಹಜ ಲಕ್ಶಣ. ಬದಲಾವಣೆಯೆ ಬೆಳವಣಿಗೆ. ಹೀಗೆ, ಬಾಶೆಯೊಂದರಲ್ಲಿ ಕೆಲವು ಬದಲಾವಣೆಗಳನ್ನು ಕಾಣಬಹುದು. ಕನ್ನಡದಂತ ವ್ಯಾಪಕವಾಗಿ ಬಳಕೆಯಲ್ಲಿರುವ ಬಾಶೆಗಳಲ್ಲಿ ಜೊತೆಜೊತೆಗೆ ಹಲವು ಬದಲಾವಣೆಗಳು ಆಗುತ್ತಿರಬಹುದು. ಅಂದರೆ, ಒಂದೊಂದು ಒಳನುಡಿ ಬಿನ್ನವಾಗಿ ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಕನ್ನಡದಲ್ಲಿ ಒಳನುಡಿಗಳು ಸಾವಿರದಶ್ಟು ವರುಶಗಳಿಂದ ಬಿನ್ನವಾದ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿವೆ. ಈಗ ಮಾತನಾಡುತ್ತಿರುವ ‘ಮನಿ’-‘ಮನೆ’ ಎಂಬ ರೂಪವೂ ಇಂತವುಗಳಲ್ಲಿ ಒಂದು. ಈ ಒಂದು ಶಬ್ದದ ವಿಬಿನ್ನ ರೂಪಗಳ ಬಗೆಗೆ ಮಾತನಾಡುವುದು ಬರಿಯ ಇದೊಂದು ರೂಪದ ಬಗೆಗಿನ ವಿಚಾರವಾಗಿರದೆ ಕನ್ನಡ ಬಾಶೆಯ ಇತಿಹಾಸ-ಬೆಳವಣಿಗೆ, ಕನ್ನಡದ ಒಳನುಡಿಗಳು-ಹಂಚಿಕೆ, ಶಿಶ್ಟಕನ್ನಡ ಮತ್ತು ಕನ್ನಡ ಬಾಶೆಯ ಸಾಮಾಜಿಕತೆ ಮೊದಲಾದ ವಿಶಯಗಳಿಗೆ ಸಂಬಂದಿಸಿದೆ. ‘ಮನಿ’-‘ಮನೆ’ ಇಂತಾ ಇನ್ನೂ ಕೆಲವು ರೂಪಗಳನ್ನು ಇಲ್ಲಿ ಪಟ್ಟಿಸಬಹುದು.

ಎಲಯ್-ಎಲ-ಎಲಿ-ಎಲೆ
ಕಳಯ್-ಕಳ-ಕಳಿ-ಕಳೆ
ಎದಯ್-ಎದ-ಎದಿ-ಎದೆ

ಸರಿ, ಇಲ್ಲಿ ಕೆಲವು ವಿಚಾರಗಳನ್ನು ಮಾತಾಡಬಹುದು.

ಕನ್ನಡದಲ್ಲಿ ಒಂದು ಶಬ್ದಕ್ಕೆ ನಾಲ್ಕು ರೂಪಗಳು ಇರುವದಾದರೆ, ಅವು ಪರಸ್ಪರ ಸಂಬಂದಿತ ಆಗಿದ್ದರೆ ಇವುಗಳಲ್ಲಿ ಒಂದು ರೂಪ ಮೂಲದಲ್ಲಿ ಇದ್ದಿರಬಹುದು ಮತ್ತು ಅದರಿಂದ ಇನ್ನುಳಿದ ರೂಪಗಳು ಬೆಳೆದಿರಬಹುದು ಎಂಬುದನ್ನು ಸಹಜವಾಗಿ ಊಹಿಸಿಕೊಳ್ಳಬಹುದು. ಹಾಗಾದರೆ, ಯಾವುದು ಹಳೆಯ ರೂಪವಾಗಿರಬಹುದು? ಅದು ಯಾವಾಗ, ಹೇಗೆ ವಿಬಿನ್ನ ರೂಪಗಳಾಗಿ ಒಡೆದುಕೊಂಡಿರಬಹುದು? ಎಂಬ ಮೊದಲಾದ ಪ್ರಶ್ನೆಗಳು ಮೂಡುತ್ತವೆ. ಹೀಗೆ, ಇಂತಾ ರಚನೆ ಇರುವ ಪದಗಳಿಗೆ ಮೂಲದ್ರಾವಿಡಕ್ಕೆ ಮರುರೂಪಿಸಿಕೊಂಡಿರುವ ರೂಪವೆಂದರೆ ‘ಮನಯ್’ ಎಂಬುದಾಗಿದೆ. ಅಂದರೆ,

ಕನ್ನಡವು ಇನ್ನೂ ಬೇರೆಯಾಗಿರದೆ ದ್ರಾವಿಡವಾಗಿದ್ದ ಕಾಲದಲ್ಲಿ ಈ ಶಬ್ದಗಳಿಗೆ ಸಂಬಂದಿಸಿದ ‘ಮನಯ್’ ಎಂಬ ರೂಪ ಬಳಕೆಯಲ್ಲಿದ್ದಿತು ಎಂದಾಯಿತು. ಮೂಲಕನ್ನಡದಲ್ಲಿಯೂ ‘ಮನಯ್’ ಎಂಬ ಈ ರೂಪವೆ ಬಳಕೆಯಲ್ಲಿ ಇದ್ದಿರಬಹುದು. ಮೂಲದ್ರಾವಿಡ ಸುಮಾರು ಆರೆಂಟು ಸಾವಿರ ವರುಶಗಳಿಗಿಂತ ಹಿಂದೆ ಇದ್ದರೆ ಮೂಲಕನ್ನಡ ಮೂರ‍್ನಾಲ್ಕು ಸಾವಿರ ವರುಶಗಳ ಹಿಂದೆ ಬಳಕೆಯಲ್ಲಿದ್ದಿತು. ಸರಿ, ಹಾಗಾದರೆ, ‘ಮನಯ್’ ಎಂಬ ರೂಪವು ಮುಂದೆ ಹೇಗೆ ಬದಲಾಗಿದೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. ತಮಿಳಿನಲ್ಲಿ ಇಂತಾ ರೂಪಗಳು ‘-ಅಯ್’ ಇಂದ ಕೊನೆಯಾಗಿ ಬಳಕೆಯಲ್ಲಿವೆ. ಮಲಯಾಳಂ ಮತ್ತು ತೆಲುಗಿನಲ್ಲಿ ಇವು ‘-ಅ’ ಕಾರದಿಂದ ಕೊನೆಯಾಗುತ್ತವೆ. ಕನ್ನಡದಲ್ಲಿ ಇವು ಹೆಚ್ಚಾಗಿ ‘-ಇ’ ಕಾರದಿಂದ ಮತ್ತು ಕೆಲವೆಡೆ ‘-ಎ’ ಕಾರದಿಂದ ಇನ್ನೂ ಕೆಲವೆಡೆ ‘-ಅ’ ಮತ್ತು ‘-ಅಯ್’ ಇಂದ ಕೊನೆಯಾಗುತ್ತವೆ.

‘ಮನಯ್’ ಎಂಬ ರೂಪದಲ್ಲಿ ಇರುವ ದ್ವನಿರಚನೆಯನ್ನು ಅಂದರೆ ಈ ಶಬ್ದದಲ್ಲಿ ಇರುವ ದ್ವನಿಗಳನ್ನು ಗಮನಿಸಿದಾಗ ಇದು ಈ ಕೆಳಗಿನಂತೆ ರಚನೆಯನ್ನು ಹೊಂದಿರುವುದನ್ನು ಕಾಣಬಹುದು.

ಮ್+ಅ+ನ್+ಅ+ಇ

ಅಂದರೆ, ಅಇ ಎಂಬ ರಚನೆ ಈ ಶಬ್ದದಲ್ಲಿ ಇದೆ. ಇದನ್ನು –ಅಯ್ ಎಂದು ಯಾಕೆ ಬರೆಯಲಾಗುತ್ತದೆ ಎಂದರೆ, ಅ+ಇ ಎರಡು ದ್ವನಿಗಳನ್ನು ಕೂಡಿಸಿ ಒಟ್ಟಿಗೆ ಉಚ್ಚರಿಸುವಾಗ ಅವುಗಳ ನಡುವೆ ಒಂದು ವ್ಯಂಜನದ ಅವಶ್ಯಕತೆ ಬರುತ್ತದೆ. ಹಾಗಾಗಿ ಇಲ್ಲಿ ‘-ಅಯ್’ ಎಂಬ ರೂಪ ಕಾಣಿಸುತ್ತದೆ. ಅಂದರೆ ಮುಕ್ಯವಾಗಿ ಇಲ್ಲಿ ‘-ಅಇ’ ಎಂಬ ದ್ವನಿಗಳು ಇರುವುದು ಸ್ಪಶ್ಟ. ಸರಿ, ಇನ್ನು ನಾವು ಮಾತಾಡುತ್ತಿರುವ ಶಬ್ದದ ವಿವಿದ ರೂಪಗಳು ಹೇಗೆ ಬೆಳೆದವು ಎಂದು ನೋಡೋಣ.

ಮನಯ್
ಮನಯ್ ಮನ
ಮನಿ
ಮನೆ

‘ಮನಯ್’ ಎಂಬ ಈ ರೂಪವು ಹೀಗೆ ನಾಲ್ಕು ರೂಪಗಳಾಗಿ ಒಡೆದುಕೊಂಡಿದೆ. ಅಂದರೆ, ಪದಕೊನೆಯಲ್ಲಿ ಸ್ವರದ ಬದಲಾವಣೆ ಆಗಿದೆ. ಹುಣಸೂರು ಪ್ರದೇಶದಲ್ಲಿ ‘ಮನಯ್’ ರೂಪ ಇಂದಿಗೂ ಬಳಕೆಯಲ್ಲಿದೆ. ಅಂದರೆ, ಬಹುಶಾ ಮೂಲದಲ್ಲಿ ಇದ್ದ ರೂಪವನ್ನು ಹುಣಸೂರು ಪರಿಸರದ ಕನ್ನಡ ಹಾಗೆಯೆ ಉಳಿಸಿಕೊಂಡಿದೆ. ಇನ್ನುಳಿದ ಮೂರು ರೂಪಗಳು ಇದರಿಂದ ಬೆಳೆದಿವೆ. ಇವುಗಳ ಬೆಳವಣಿಗೆಯನ್ನು ಹೀಗೆ ನೋಡಬಹುದು.

‘-ಅಇ’ ಇದರಲ್ಲಿ ಕೊನೆಯಲ್ಲಿ ಇರುವ ‘ಇ’ ಇದು ಬಿದ್ದುಹೋಗಿ ‘ಅ’ ಮಾತ್ರ ಉಳಿದು ‘ಮನ’ ಎಂಬ ರೂಪ ಬೆಳೆದಿದೆ. ಅದರಂತೆಯೆ ಅವುಗಳಲ್ಲಿನ ‘ಅ’ ದ್ವನಿ ಕಳೆದುಹೋಗಿ ‘ಇ’ ಮಾತ್ರ ಉಳಿದು ‘ಮನಿ’ ಎಂಬ ರೂಪವು ಬೆಳೆದಿದೆ. ಇನ್ನು, ‘ಮನೆ’ ಎಂಬ ರೂಪವು ಬೆಳೆದ ಬಗೆಯನ್ನು ತುಸು ಸೂಕ್ಶ್ಮವಾಗಿ ಗಮನಿಸಬೇಕು. ‘ಅ’ ಮತ್ತು ‘ಇ’ ಸ್ವರಗಳನ್ನು ಉಚ್ಚರಿಸುವಾಗ ನಮ್ಮ ನಾಲಗೆಯಲ್ಲಿ ಯಾವ ಜಾಗದಲ್ಲಿ ಉಚ್ಚರಿಸುತ್ತೇವೆ ಎಂಬುದನ್ನು ಗಮನಿಸಬೇಕು. ‘ಅ’ ದ್ವನಿಯನ್ನು ಉಚ್ಚರಿಸುವಾಗ ನಾಲಗೆ ಕೆಳಗೆ ಇರುತ್ತದೆ ಮತ್ತು ‘ಇ’ ದ್ವನಿಯನ್ನು ಉಚ್ಚರಿಸುವಾಗ ನಾಲಗೆಯನ್ನು ತುಸು ಎತ್ತರಿಸುತ್ತೇವೆ. ‘ಅ’ ಮತ್ತು ‘ಇ’ ಎರಡೂ ದ್ವನಿಗಳನ್ನು ಒಂದರ ನಂತರ ಇನ್ನೊಂದನ್ನು ಉಚ್ಚರಿಸಿದರೆ ನಾಲಗೆ ಕೆಳಗಿಂದ ಮೇಲಕ್ಕೆ ಬರುವುದನ್ನು ಗಮನಿಸಬಹುದು. ಈ ಚಲನೆಯಲ್ಲಿ ನಾಲಗೆಯನ್ನು ಇನ್ನೂ ತುಸು ಎತ್ತರಿಸಿದರೆ ‘ಎ’ ದ್ವನಿ ಉಚ್ಚಾರವಾಗುತ್ತದೆ. ‘ಅ’’ಇ’’ಎ’ ಈ ಮೂರೂ ದ್ವನಿಗಳನ್ನು ಒಟ್ಟಿಗೆ, ಒಂದರ ನಂತರ ಇನ್ನೊಂದನ್ನು ಉಚ್ಚರಿಸದಾಗ ಇದನ್ನು ಗಮನಿಸಬಹುದು. ಹೀಗೆ, ‘ಮನಯ್’ ಶಬ್ದದ ಕೊನೆಯಲ್ಲಿ ಇರುವ ‘ಅಇ’ ದ್ವನಿಗಳ ಉಚ್ಚರಣೆಯಲ್ಲಿ ‘ಇ’ ದ್ವನಿಯ ಉಚ್ಚರಣೆಗಿಂತ ನಾಲಗೆ ತುಸು ಮೇಲಕ್ಕೆತ್ತಿದಾಗ ‘ಮನೆ’ ರೂಪವು ಬರುತ್ತದೆ.

ಹಾಗಾದರೆ, ಮೂಲದಲ್ಲಿ ‘ಅಯ್’ ಎಂಬುದಿತ್ತು ಮತ್ತು ಅದರಿಂದ ಉಳಿದ ಮೂರು ರೂಪಗಳು ಬೆಳೆದಿವೆ ಎಂಬುದನ್ನು ಕಂಡುಕೊಳ್ಳಬಹುದು. ಕೆಳಗಿನ ಚಿತ್ರವನ್ನು ಗಮನಿಸಿ.

-ಅಇ(ಅಯ್)
-ಅಇ(ಅಯ್) -ಅ
-ಇ
-ಎ

ಸರಿ, ಇನ್ನು ಇವತ್ತು ನಮ್ಮ ನಡುವೆ ಈ ರೂಪಗಳ ಬಗೆಗೆ ಇರುವ ‘ನಂಬಿಕೆ’ ಇಲ್ಲವೆ ‘ತಪ್ಪು’ತಿಳುವಳಿಕೆ ಬಗೆಗೆ ಮಾತಾಡೋಣ. ‘ಮನೆ’ ಎಂಬ ರೂಪವು ‘ಮನಿ’ ಎಂದಾಗುತ್ತದೆ ಎಂಬುದಕ್ಕೆ ಆದಾರಗಳು ಇಲ್ಲ ಮತ್ತು ಈ ಮೇಲಿನ ವಿವರಣೆಯನ್ನು ನೋಡಿದಾಗ ಆ ‘ತಿಳುವಳಿಕೆ’ ಬಿದ್ದುಹೋಗುತ್ತದೆ.

ಇನ್ನೊಂದು ‘ಅಪ’ನಂಬಿಕೆಯನ್ನೂ ಇಲ್ಲಿ ಮಾತಾಡಬೇಕು. ಮೂಲಬೂತವಾಗಿ ಯಾವುದೆ ರೂಪವನ್ನು ಶಿಶ್ಟಕನ್ನಡದಲ್ಲಿ ಬಳಸಿದರೂ ಅದಕ್ಕೆ ಹೆಚ್ಚುಗಾರಿಕೆ ಎಂಬ ವ್ಯಸನವನ್ನು ಅಂಟಿಸುವುದು ತಪ್ಪು. ಶಿಶ್ಟಕನ್ನಡ ಉಳಿದೆಲ್ಲ ಕನ್ನಡದ

ಒಳನುಡಿಗಳಂತೆಯೆ ಒಂದು ಮತ್ತು ತೀರಾ ಇತ್ತೀಚೆಗೆ ಕನ್ನಡ ಮಾತುಗ ಸಮುದಾಯದ ಸಾಮಾಜಿಕ-ರಾಜಕೀಯ ಅವಶ್ಯಕತೆಗಾಗಿ ಬೆಳೆಸಿಕೊಂಡ ಕ್ರುತ್ರಿಮ ವ್ಯವಸ್ತೆ.

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾ

 

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...