ಕಾಲು ಜಾರಿ ಬಿದ್ದವನು ಹಲವರಿಗೆ ದಾರಿ ತೋರುವನು

Date: 02-11-2022

Location: ಬೆಂಗಳೂರು


ಭಾವಲೋಕವನ್ನು ನಾನು ಕಟ್ಟಿಕೊಳ್ಳುವಾಗ ಇದೆಲ್ಲಾ ಇಲ್ಲದಿದ್ದರೆ ಅನುಭವವೇ ದಕ್ಕುತ್ತಿರಲಿಲ್ಲ. ಇದನ್ನು ಖಾಯಿಲೆ ಎಂದು ಜಗತ್ತು ಕರೆದರೆ ನನಗೇನು? ಕರೆಯದಿದ್ದರೆ ನನಗೇನು? ಪ್ರತಿಯೊಬ್ಬರಿಗೂ ಲೋಕಾಂತದೊಳಗೆ ಏಕಾಂತವಿರುತ್ತದೆ ಎನ್ನುವುದನ್ನು ಎಲ್ಲರಿಗೂ ಹೇಗೆ ಅರ್ಥೈಸಲಿ ಎನ್ನುತ್ತಾರೆ ಲೇಖಕಿ ಪಿ. ಚಂದ್ರಿಕಾ. ಅವರು ತಮ್ಮ ತೇಲುವ ಪಾದಗಳು ಅಂಕಣದಲ್ಲಿ ಮುತ್ಯಾ ಕುರಿತ ಇನ್ನಷ್ಟು ಬೆರಗಿನೊಂದಿಗೆ ಕಥೆಯೊಂದನ್ನು ನೆನಪಿಸಿಕೊಂಡಿದ್ದಾರೆ.

ಜಗನ್ನಾಳುವ ಒಂದೇ ಒಂದು ಸಂಗತಿ ಎಂದರೆ ನನ್ನ ಮಟ್ಟಿಗೆ ಯಾವಾಗಲೂ ನಿದ್ದೆಯೆ. ಎಚ್ಚರದ ಸ್ಥಿತಿಯೊಂದು ದಕ್ಕಬೇಕಾದರೆ ನಿದ್ರಾ ಸ್ಥಿತಿಯೊಂದು ಬೇಕಲ್ಲಾ?! ಅದೊಂದು ಪ್ರತ್ಯೇಕ ಲೋಕ. ಅಲ್ಲಿನ ವ್ಯಾಪಾರಗಳು ನಮ್ಮ ನಿತ್ಯಗಳನ್ನೆ ಆಧಾರಿಸಿದ್ದರೂ ಅವಲಂಭಿಸಿರುವುದಿಲ್ಲ. ನನ್ನ ಜೀವನದಲ್ಲಿ ಹೀಗೇ ಏನೇನೋ ನಡೆದೇ ಹೋಯಿತು. ಯಾವತ್ತೋ ಒಂದು ದಿನ ನನಗೆ ಬಿದ್ದ ಕನಸುಗಳನ್ನು ಕೇಳುತ್ತಾ, ಕೇಳುತ್ತಾ ಅಪ್ಪ ಬೆಚ್ಚಿ ಬಿದ್ದಿದ್ದ. ನೀನು ಹಾಗಾದರೆ ಪಕ್ಷಿಯಾಗಿದ್ದೆಯಾ? ಎಂದರೆ, ಹೌದು ಹಿಂದಿನ ಜನ್ಮದಲ್ಲಿ ಎಂದಿದ್ದೆ. ನನ್ನ ಮಾತಿಗೆ ಯಾವ ಯಾವ ದೊಡ್ಡ ಅರ್ಥವೂ ಇರಲಿಲ್ಲ ಅಂತ ಈಗಲೂ ಅನ್ನಿಸುತ್ತೆ. ಹಿಂದಿನ ಜನ್ಮದಲ್ಲಿ ನಾನೇನಾಗಿದ್ದೆ ಎನ್ನುವುದನ್ನು ಈಗ ನಾನು ಹೇಳಲಿಕ್ಕೆ ಹೇಗೆ ಸಾಧ್ಯ? ಆದರೂ ಸುಮ್ಮನೆ ಏನೇನೋ ಕಲ್ಪನೆ. ಹೀಗೆಂದರೆ ನಾನು ಈಗ ಹಕ್ಕಿಯಂತೆ ಹಾರುತ್ತೇನೇನೋ ಎನ್ನುವ ಸುಖವನ್ನು ಕಲ್ಪಿಸಿಕೊಂಡು ಅಂದಿದ್ದೆ. ಹಕ್ಕಿ, ಮೀನು, ಹಾವು, ಹಲ್ಲಿ ಜೊತೆಗೆ ಕಳೆದು ಹೋದ ನಿದ್ದೆಯ ಹುಡುಕುವ ರಾಜಕುಮಾರಿ ಕೂಡಾ ಆಗಿದ್ದೆ. ಅಮ್ಮ ಅತ್ತಿದ್ದಳು, ಅಪ್ಪ ಕಂಗಾಲಾಗಿದ್ದ. ಅರೆ ಒಂದು ಸಣ್ಣ ಮಾತಿಗೆ ಇವರೆಲ್ಲಾ ಯಾಕಿಷ್ಟು ಕಂಗಾಲಾದರು ಗೊತ್ತಾಗಲಿಲ್ಲ! ನಾನು ಮುತ್ಯಾ ಇಂಥಾ ಎಷ್ಟು ಮಾತುಗಳನ್ನು ಆಡಿದ್ದೆವು. ಮುತ್ಯಾ ಎಂದೂ ಕಂಗಾಲಾಗಲಿಲ್ಲ. ಅವಳ ನಂತರ ನನಗೆ ಆ ಜಗತ್ತನ್ನು ಕಲ್ಪಿಸಿಕೊಳ್ಳಲಾಗದೆ ಹೋಯಿತು. ಸುಮ್ಮನೆ ಅನ್ನಿಸಿದ್ದನ್ನೆಲ್ಲಾ ಮಾತಾಡಿ ಕಷ್ಟಕ್ಕೆ ಸಿಕ್ಕಿಕೊಂಡಿದ್ದೆ. ಅದೊಂದು ದಿನ ನನ್ನನ್ನು ಸೈಕ್ರಿಯಾಟಿಸ್ಟ್ ಹತ್ತಿರ ಕರೆದೊಯ್ದರು. ಕೈಯ್ಯ ನರಕ್ಕೊಂದು ಇಂಜೆಕ್ಷನ್ ಕೊಟ್ಟು ಮಂಪರಿಗೆ ಎಳೆದೊಯ್ದು ಬಾಯಿ ಬಿಡಿಸುವ ಯತ್ನ ಅಂತ ಆಮೇಲೆ ಗೊತ್ತಾಯಿತಾದರೂ, ನನಗೇನಾಗಿದೆ? ಎಂದು ಗೊತ್ತಾಗಲಿಲ್ಲ. ನನ್ನ ಮಟ್ಟಿಗೆ ನಾನು ಸರಿಯಾಗೇ ಇದ್ದೆ. ಎಚ್ಚರಾದಾಗ ಸುಸ್ತಾಗಿದ್ದೆ. ಸುಸ್ತೆಂದರೆ ಜೀವ ಪೂರ್ಣವಾಗಿ ಬಸಿದು ಹೋಗಿ ಮತ್ತೆ ಚೂರು ಚೂರೇ ತುಂಬಿಕೊಳ್ಳುತ್ತದಲ್ಲ ಹಾಗೆ. ಡಾಕ್ಟರ್ ನನ್ನ ಹತ್ತಿರ ಮಾತನಾಡಿದರ, `ನಿನಗೆ ಸ್ಕಿಜೋಫ್ರೇನಿಯಾ ಆಗಿದೆ. ಪಾಪ ಹಾಗೆಂದರೇನೆಂದು ನಿನಗೆ ಗೊತ್ತಾಗುತ್ತಿಲ್ಲ, ನಿನ್ನ ಮನಸ್ಸು ಏನನ್ನೋ ನೆನೆಸಿಕೊಂಡು ಅದು ಆಗಬೇಕು ಅಂತ ಬಯಸುತ್ತಿದೆ. ಹೀಗಾಗಿ ಇದೆಲ್ಲಾ ಆಗುತ್ತಿದೆ’ ಎಂದರು. ಅವರು ಹೇಳಿದ್ದು ಸತ್ಯವಾ? ನನಗೆ ಅನ್ನಿಸಿದ್ದಾ? ಗೊತ್ತಾಗಲಿಲ್ಲ. ಅವರನ್ನು ನೋಡಿದೆ. ಅವರು ಕಣ್ಣುಗಳಲ್ಲಿ ನಿರ್ಲಿಪ್ತತೆ ಇತ್ತು. ಹದಿನೇಳು ವರ್ಷಗಳ ನನಗೆ ಐವತ್ತರ ಆಸುಪ್ಪಾಸಲ್ಲಿದ್ದ ಅವರ ಮೇಲೆ ಕರುಣೆ ಬಂತು- ಅವರ ಕಣ್ಣುಗಳು ಏನನ್ನೂ ಕಲ್ಪಿಸಿಕೊಳ್ಳಲಾಗದಷ್ಟು ಶುಷ್ಕ ಎನ್ನಿಸಿ. ಅದನ್ನು ಹಾಗೇ ಹೇಳಬೇಕೆಂದುಕೊಂಡೆ. ಆದರೆ ಮತ್ತೆ ಅದಕ್ಕೆ ಇನ್ನೇನಾದರೂ ಹೆಸರನ್ನು ಕೊಡಬಹುದೆಂದುಕೊಂಡು ಸುಮ್ಮನಾದೆ. ಎಲ್ಲರಿಗೂ ಖಾಯಿಲೆಯಾಗಿ ಕಾಣುವ ಇದು ನನ್ನ ಪಾಲಿನ ವರ. ಯಾಕೆಂದರೆ ಈಗಲೂ ನನ್ನ ಜಗತ್ತನ್ನು ನಾನು ಕಲ್ಪಿಸಿಕೊಳ್ಳಬಲ್ಲೆ, ಅಲ್ಲಿ ಇರಬಲ್ಲೆ, ಸುಖಿಸಬಲ್ಲೆ.

ಭಾವಲೋಕವನ್ನು ನಾನು ಕಟ್ಟಿಕೊಳ್ಳುವಾಗ ಇದೆಲ್ಲಾ ಇಲ್ಲದಿದ್ದರೆ ಅನುಭವವೇ ದಕ್ಕುತ್ತಿರಲಿಲ್ಲ. ಇದನ್ನು ಖಾಯಿಲೆ ಎಂದು ಜಗತ್ತು ಕರೆದರೆ ನನಗೇನು? ಕರೆಯದಿದ್ದರೆ ನನಗೇನು? ಪ್ರತಿಯೊಬ್ಬರಿಗೂ ಲೋಕಾಂತದೊಳಗೆ ಏಕಾಂತವಿರುತ್ತದೆ ಎನ್ನುವುದನ್ನು ಎಲ್ಲರಿಗೂ ಹೇಗೆ ಅರ್ಥೈಸಲಿ. ಎಲ್ಲಕ್ಕಿಂತ ಹೆಚ್ಚಾಗಿ ನನಗೆ ಇರುವುದು ಖಾಯಿಲೆ ಎನ್ನುವವರಿಗೆ ಹೇಗೆ ಉತ್ತರಿಸಲಿ. ಇರಲಿ ನನ್ನೊಳಗಿನ ನೆಮ್ಮದಿಗೆ ಹೊರಚಾಚುಗಳನ್ನು ಕೊಡುತ್ತಿರುವ ಇಂಥಾ ಖಾಯಿಲೆಗಳು ಒಳ್ಳೆಯದೇ ಅಲ್ಲವೇ? ಆದರೆ ನನ್ನನ್ನು ಹೆಚ್ಚು ಬಾಧಿಸಿದ್ದು ನಿದ್ದೆ ಬರುವ ಆ ಮಾತ್ರೆಗಳು ಒಳಗೊಳಗೇ ನನ್ನನ್ನು ಕುಗ್ಗಿಸಲು ನೋಡುತ್ತಿದ್ದುದು.

ಅದೊಂದು ಹಿಂಸೆ. ಮುತ್ಯಾ ನನ್ನೊಂದಿಗೇ ಇರುತ್ತಿದ್ದಿದ್ದರೆ ನನಗೆ ಈ ಕಷ್ಟಗಳು ಎದುರಾಗುತ್ತಲೆ ಇರಲಿಲ್ಲ. ಇರಲಿ ಭೂಮಿಯ ಮೇಲೆ ಶಾಶ್ವತವಾಗಿ ಯಾರೂ ಇರಲಾರರು. ಸಾವು ಕೂಡಾ ಜಗತ್ತಿನ ಎಲ್ಲ ಸಂಗತಿಗಳ ಹಾಗೆ ಒಂದಷ್ಟೆ. ಸ್ವೀಕರಿಸಬೇಕಾಗಿರುವುದು ನಮ್ಮ ಕರ್ತವ್ಯ.

ಅಂದು ರಾತ್ರಿ ಕಳೆದು ಬೆಳಗಾಗುವುದರೊಳಗೆ ಮುತ್ಯಾ ತನ್ನ ವಯಸ್ಸನ್ನು ಕಡಿಮೆ ಮಾಡಿಕೊಂಡರೆ, ನಾನು ನನ್ನ ವಯಸ್ಸನ್ನು ಹೆಚ್ಚಿಸಿಕೊಂಡಿದ್ದೆ. ಅವಳೇಕೆ ನನಗೆ ಮಗುವಿನಂತೆ ಕಂಡಳು? ಅವಳು ಒಂದು ಕ್ಷಣ ನನ್ನಿಂದ ದೂರ ಸರಿದರೂ ತಡಕೊಳ್ಳಲಾಗದೆ ಹೋದೆನಲ್ಲಾ ಇದೇನಿದು? ನನ್ನ ಅಂತರಂಗ ನನಗೆ ಮಾತ್ರ ಗೊತ್ತು. ಮುತ್ಯಾ ರಾತ್ರಿ ಜೋರಾಗಿ ಗೊರಕೆ ಹೊಡೆಯುತ್ತಿದ್ದಳು. ಆ ಗೊರಕೆಯೂ ನನ್ನಲ್ಲಿ ಅವಳಿಗೆ ಉಸಿರಾಟಕ್ಕೆ ತೊಂದರೆಯಾದೀತೇ ಎಂದೆಣಿಸಿ ಗಾಬರಿಯಾಗುತ್ತಿದ್ದೆ. `ಮುತ್ಯಾ ಪಕ್ಕಕ್ಕೆ ತಿರುಗಿ ಮಲಗು’ ಎನ್ನುತ್ತಿದ್ದೆ ಆಗೆಲ್ಲಾ ಅವಳು ತಿರುಗಿ ಮಲಗುತ್ತಿದಳು. ಮಂಚದ ಮೇಲೆ ಸರಿಯಾಗಿ ಜಾಗವಿಲ್ಲದ್ದರಿಂದ ಮತ್ತೆ ಅವಳು ಅಂಗಾತ ಮಲಗುತ್ತಿದ್ದಳು. ಜೋಲಿಯಲ್ಲಿ ಜೋಡಿ ಮಕ್ಕಳ ಹಾಗೆ ನಾವಿಬ್ಬರೂ ಇದ್ದೆವು.

ರಾತ್ರಿಗಳ ನಾಚಿಕೆಯ ಮರೆಯಲ್ಲಿ ಏನೂ ಆಗಬಹುದು ಹಗಲಿಗೆ ಮಾತ್ರ ಘನತೆ ಹೆಚ್ಚು. ರಾತ್ರಿ ಮುತ್ಯಾಳ ಎದುರು ಕೂತಿದ್ದ ಗಾಯತ್ರಿ ಸ್ವಾಮೀಜಿ ಬೆಳಗ್ಗೆ ಮತ್ತೆ ಪೂಜೆ ಪುನಸ್ಕಾರದಲ್ಲಿ ತೊಡಗಿದ್ದರು. ರಾತ್ರಿಯ ದೈನ್ಯತೆಯಾಗಲೀ, ಮುತ್ಯಾಳ ಬುದ್ಧಿ ಮಾತನ್ನು ಕೇಳದ ಹಠ ಹಿಡಿದ ಹುಡುಗನ ಲಕ್ಷಣವಾಗಲೀ ಅವರಲ್ಲಿ ಕಾಣುತ್ತಿರಲಿಲ್ಲ. ಹಿಂದಿನ ದಿನದ ಪ್ರಸನ್ನತೆಯೇ ಇನ್ನಷ್ಟು ಢಾಳಾಗಿ ಕಾಣುತ್ತಿತ್ತು. ಹಾಗಾದರೆ ಹಿಂದಿನ ದಿನ ನಡೆದದ್ದೇನು? ಎಂದು ಯೋಚಿಸುತ್ತಿದ್ದೆ. ಅಮ್ಮಮ್ಮ ನೈವೇದ್ಯಕ್ಕೆ ಹಸುವಿನ ಹಾಲು ಬಾಳೆ ಹಣ್ಣುಗಳನ್ನು ತಂದಿಟ್ಟಳು. ಚಿಕ್ಕಿ ಕಪಿಲೆ ಹಸುವಿನಲ್ಲಿ ಕರೆದ ಹಾಲನ್ನು ಕಾಯಿಸದೇ ತಂದಿಟ್ಟಿದ್ದಳು. ತುಸು ಹಳದಿ ಬಣ್ಣದ ನೊರೆ ಹಾಲನ್ನು ಗಾಢವಾಗಿ ಬಿಂಬಿಸಿತ್ತು. ಅದೇ ಹಾಲನ್ನು ಅಭಿಷೇಕಕ್ಕೆ ಬಳಸಿದ್ದರು. ಈ ಪುಟ್ಟ ವಿಗ್ರಹದಲ್ಲಿ ಜಗತ್ತನ್ನೇ ಆವರಿಸುವ ಶಕ್ತಿ ಇದ್ದೀತೇ ಎಂದುಕೊಳ್ಳುತ್ತಿದ್ದೆ. ಹಾಗೆಂದುಕೊಳ್ಳುವಾಗಲೆಲ್ಲಾ ನನ್ನೊಳಗೆ ಏನೇನೋ ಅಲುಗಾಡಿಬಿಡುತ್ತಿತ್ತು. ಗಾಯತ್ರಿ ಸ್ವಾಮಿಗಳು ಮಾತ್ರ ನಿಶ್ಚಲರಾಗಿ ತಮ್ಮ ಕಾರ್ಯದಲ್ಲಿ ತೊಡಗಿಕೊಂಡಿದ್ದರು.

ನಾನು ಮುತ್ಯಾ ಅಪರೂಪಕ್ಕೆ ಬಟ್ಟೆ ಒಗೆಯಲಿಕ್ಕೆ ಕಾಲುವೆಗೆ ಹೋಗುತ್ತಿದ್ದೆವು. ಕೆರೆಯ ನೀರನ್ನು ಜನರ ಉಪಯೋಗಕ್ಕೆಂದು ಕಾಲುವೆ ಮಾಡಿ ಹೊರಗೆ ಬಿಟ್ಟಿದ್ದರು. ಕೆರೆಯಲ್ಲಿನ ಕಮಲದ ಹೂಗಳ ಕಡೆಗೆ ನನ್ನ ಆಕರ್ಷಣೆ ಇದ್ದೇ ಇತ್ತು. ಆ ಹೂವುಗಳನ್ನು ನೋಡುವಾಗಲೆಲ್ಲಾ ನನಗೆ ಅಚ್ಚರಿ ಎನ್ನಿಸುತ್ತಿತ್ತು. ತಾತನ ಮನೆಯಲ್ಲಿ ದೊಡ್ಡ ದೊಡ್ಡ ಫೋಟೋಗಳು. ಎಲ್ಲಾ ಥರದ ದೇವರುಗಳದ್ದು. ಆಗೆಲ್ಲಾ ನಾನು ಕಮಲದ ಹೂಗಳು ತುಂಬಾ ದೊಡ್ಡವಿರಬೇಕೆಂದುಕೊಳ್ಳುತ್ತಿದ್ದೆ. ಯಾಕೆಂದರೆ ನನ್ನ ದೃಷ್ಟಿಯಲ್ಲಿ ದೇವರು ನಮ್ಮೆಲ್ಲರಿಗಿಂತ ದೊಡ್ಡವನಿದ್ದ. ಆದರೆ ಕೆರೆಯಲ್ಲಿ ಅರಳಿದ್ದ ಪುಟ್ಟ ಹೂಗಳನ್ನು ನೋಡಿದ ಮೇಲೆ ನಾನು ಊಹಿಸಿಕೊಂಡ ಕಮಲಕ್ಕಿಂತ ಇವು ತುಂಬಾ ಸಣ್ಣವೆಂದು.

`ಮುತ್ಯಾ ಇಷ್ಟು ಸಣ್ಣ ಹೂವಿನ ಮೇಲೆ ಅಷ್ಟು ದೊಡ್ಡ ದೇವರು ಹೇಗೆ ಕುಳಿತುಕೊಳ್ಳುತ್ತಾನೆ?’ ಎಂದು ನಾನು ಫೋಟೋದಲ್ಲಿ ನೋಡಿದ ದೇವರುಗಳನ್ನೆಲ್ಲಾ ನೆನೆಸಿಕೊಂಡು ಕೇಳಿದೆ. ಮುತ್ಯಾ ನಗುತ್ತಾ, `ಈಗ ಹೇಳು ನೀನು ನೋಡಿದ ಆ ದೇವರು ಅದೆಷ್ಟು ಚಿಕ್ಕವನು’ ಎಂದಿದ್ದಳು. ಅಲ್ಲಿಗೆ ನನ್ನ ಕಣ್ಣೊಳಗಿನ ದೇವರ ಬೃಹತ್ ಸ್ವರೂಪ ಒಡೆದು ಹೋಗಿ ಸಣ್ಣ ಕಮಲದ ಮೇಲೆ ಕುಳಿತುಕೊಳ್ಳುವಷ್ಟು ಕುಬ್ಜರೂಪ ತಳೆದುಬಿಟ್ಟಿತ್ತು. ಹಾಗಾದರೆ ದೇವರನ್ನು ನಾವ್ಯಾಕೆ ಪೂಜಿಸುತ್ತೇವೆ? ನನ್ನ ಪ್ರಶ್ನೆಗೆ ಮುತ್ಯಾಳ ಉತ್ತರ ಈಗಲೂ ನೆನಪಾಗುತ್ತದೆ. ಒಳಗೆ ಭಯ ಇದ್ದವರು ಶ್ಲೋಕವನ್ನು ಹೇಳಿಕೊಳ್ಳುತ್ತಾರೆ. ಭಯವಿಲ್ಲದವರಿದೆ ಧೈರ್ಯವೇ ದೇವರು. ನಾವು ಯಾವುದನ್ನು ದೇವರು ಅಂದುಕೊಂಡರೆ ಅದೇ ದೇವರಾಗುತ್ತೆ. ಮಾಗು ಅಂದುಕೊಂಡರೆ ಮನೆಯೊಳಗಾಡುತ್ತೆ. ಎತ್ತರದ ಶಕ್ತಿ ಅಂದುಕೊಂಡರೆ ಸೂರ್ಯನಂತೆ ಕೈಗೆ ಸಿಗೊಲ್ಲ. ಗಿಡ ಎಲೆಗಳನ್ನು ಕಳಚಿಕೊಳ್ಳುವ ಹಾಗೇ ಎಲ್ಲವನ್ನೂ ಕಳಚಿಕೊಂಡು ಹೊಸ ಚಿಗುರನ್ನು ಕಾಯಬೇಕು. ಯಾಕೆಂದರೆ ಜಾಗತ್ತಿನ ಇರುವಿಕೆಗೆ ಕಾರಣವಾಗವ ಅನ್ನವನ್ನು ಆ ಚಿಗಿರು ತನ್ನೊಳಗೆ ಇರಿಸಿಕೊಂಡಿರುತ್ತೆ. ಅದು ದೇವರಲ್ಲದೆ ಮತ್ತೇನು’ ಎಂದಿದ್ದಳು.

ಗಾಯತ್ರಿ ಸ್ವಾಮಿಗಳು ಮಾಡುತ್ತಿದ್ದ ಪೂಜೆಯನ್ನು ಕುತೂಹಲದಿಂದ ನೋಡುತ್ತಿದೆ. ಗಾಯಿತ್ರಿಯ ವಿಗ್ರಹವನ್ನು ಎದುರಿಗಿಟ್ಟುಕೊಂಡು ಅದಕ್ಕೆ ಅಭಿಷೇಕ, ಅರ್ಚನೆ, ಅಲಂಕಾರ ನೈವೇದ್ಯ ಎಲ್ಲದರ ಬಳಿಕ ಅಮ್ಮಾ ಭಗವತಿ ಎಂದು ತಮ್ಮ ಕೈಗಳನ್ನು ಎತ್ತಿ ಆವೇಶದಿಂದ ಮಿಂಚುತ್ತಿದ್ದ ಕಣ್ಣುಗಳಿಂದ ವಿಗ್ರಹವನ್ನೇ ತದೇಕಚಿತ್ತದಿಂದ ನೋಡತೊಡಗಿದರು. ಅವರ ಕಣ್ಣುಗಳಲ್ಲಿ ಯಾವುದೋ ಮಾರ್ಧವತೆ, ಉನ್ಮತ್ತತೆ ಇತ್ತೆಂದು ಕಾಣುತ್ತದೆ. ನಾನು ಹೆದರಿ ನಿಂತೆ. ಸ್ವಲ್ಪ ಹೊತ್ತು ಎಲ್ಲ ಸ್ಥಬ್ದವಾಗಿತ್ತು. ಮನೆಯ ಮಂದಿಯೆಲ್ಲಾ ಕೈಕಟ್ಟಿ ಅವ್ರ ಮುಂದೆ ನಿಂತಿದ್ದರು. ಗಾಳಿ ಬೀಸುವ ಸದ್ದು ಕೇಳುವಷ್ಟು ನಿಶ್ಯಬ್ದ ಇತ್ತು. ಮುತ್ಯಾ ಯಾವುದರ ಪರಿವೆಯೇ ಇಲ್ಲದೆ ಒಳಗೆ ತನ್ನ ಕೆಲಸದಲ್ಲಿ ತೊಡಗಿಕೊಂಡಿದ್ದಳು.

ಸ್ವಾಮಿಗಳನ್ನು ಎಷ್ಟು ಸಲ ಊಟಕ್ಕೆ ಕರೆದರೂ ಏಳಲಿಲ್ಲ. ಏನೋ ಯೋಚಿಸುತ್ತಲೇ ಕುಳಿತಿದ್ದರು. ನಾನು ಅಲ್ಲೇ ಓಡಾಡುತ್ತಿದ್ದೆ. ನನ್ನನ್ನೆ ದಿಟ್ಟಿಸುತ್ತಿದ್ದರು. ಇದ್ದಕ್ಕಿದ್ದ ಹಾಗೆ ನನ್ನ ಹತ್ತಿರಕ್ಕೆ ಬರುವಂತೆ ಕರೆದರು. ನನಗೆ ಅವರ ಹತ್ತಿರಕ್ಕೆ ಹೋಗಲಿಕ್ಕೆ ಸ್ವಲ್ಪ ಭಯ ಅನ್ನಿಸಿತು. ಅಮ್ಮಮ್ಮ `ಅಷ್ಟು ಕರೀತಾ ಇದ್ದಾರೆ ಹೋಗೆ’ಎಂದಳು. ನಾನು ಹಿಂಜರಿಯುತ್ತಲೇ ಹೋದೆ. ತಮ್ಮ ತೊಡೆಯ ಮೇಲೆ ಕೂರಿಸಿಕೊಂಡು `ಎಷ್ಟು ಮುದ್ದಾಗಿದ್ದೀಯ ಮಗೂ ಎನ್ನುತ್ತಾ, ನಮ್ಮ ಹರಿಗೆ ನಿನ್ನಂಥದ್ದೇ ಮಗು ಇದೆ’ ಎಂದರು. ನನಗೆ ಹರಿ ಎಂದರೆ ಯಾರೆಂದು ಅರ್ಥವಾಗಲಿಲ್ಲ. ನಾನು ಊಹಿಸಲೂ ಆಗದ ರೀತಿಯಲ್ಲಿ ನನ್ನ ಕಿವಿಯಲ್ಲಿ ಗಾಯತ್ರಿ ಮಂತ್ರಾವನ್ನು ಹೇಳುತ್ತಾ ನನ್ನ ಭುಜಕ್ಕೆ ಎಳೆಯೊಂದನ್ನು ತಾಕಿಸಿ ಬಿಟ್ಟರು. ಮೊದಲು ಅವರ ಈ ಕ್ರಿಯೆಯಿಂದ ಎಲ್ಲರಿಗೂ ಆಘಾತವಾಯಿತು. ಏನು ನಡಿತಾ ಇದೆ ಎನ್ನುವಂತೆ ಅಯ್ಯಯ್ಯೋ ಎಂದುಬಿಟ್ಟರು. ತಾತನಂತೂ ಅವರ ಎದುರು ಮಂಡಿಯೂರಿ `ಏನು ಮಾಡಿಬಿಟ್ಟೀರಿ ಹೆಣ್ಣು ಮಗುವಿಗೆ ಈ ಸಂಸ್ಕಾರ ಸರಿಯಾ?’ ಎಂದನು. ಸ್ವಾಮಿಗಳು ನಗುತ್ತಾ, `ಇರಲಿ ಸಂಸ್ಕಾರಕ್ಕೆ ಹೆಣ್ಣು ಗಂಡು ಅಂತ ಇಲ್ಲ. ಸ್ವತಃ ಗಾಯತ್ರಿಯೇ ಹೆಣ್ಣು ಅವಳನ್ನ ಹೇಳಲಿಕ್ಕೆ ಹೆಣ್ಣುಮಕ್ಕಳಿಗೆ ಯಾಕೆ ಅಧಿಕಾರವಿಲ್ಲ’ ಎಂದರು. ನನಗೋ ಏನಾಗುತ್ತಿದೆ ಎನ್ನುವ ಕಕ್ಕಾಬಿಕ್ಕಿ.

`ಈ ಹುಡುಗಿಯನ್ನು ನೋಡಿದ ತಕ್ಷಣ ಅಂದುಕೊಂಡೆ, ಏನೋ ಶಕ್ತಿ ಇದೆ ಅಂತ ಅದಕ್ಕೆ ಗಾಯತ್ರಿಯನ್ನು ಉಪದೇಶ ಮಾಡಿದೆ. ತಪ್ಪು ಖಂಡಿತಾ ಅಲ್ಲ’ ಎಂದರು. ಅಮ್ಮಮ್ಮನಿಗೆ ನನ್ನ ಅಪ್ಪ ಅಮ್ಮನಿಗೆ ಏನು ಉತ್ತರ ಹೇಳಬೇಕು ಎನ್ನುವ ಆತಂಕ. ಇದೆಲ್ಲಾ ಆಗುವಾಗ ಮುತ್ಯಾ ಒಳ ಮನೆಯಿಂದ ಓಡಿ ಬಂದಳು. ಕೈಲಿರುವ ಸೌಟಿನಿಂದ ಸಾರು ತೊಟಗುಡುತ್ತಿತ್ತು. ಅವಳ ಆವೇಶ ನಾನು ಯಾವತ್ತೂ ನೋಡಿರಲಿಲ್ಲ. ನನ್ನನ್ನು ಸ್ವಾಮಿಗಳ ತೊಡೆಯ ಮೇಲಿಂದ ಎಳೆದು ಹಾಕಿದಳು. ನಾನು ಅಳಲಿಕ್ಕೆ ಶುರು ಮಾಡಿದೆ. `ಏಯ್ ಸುಮ್ಮನಿರು’ ಎಂದು ನನ್ನ ಗದರಿ ನನ್ನ ಹೆಗಲಿಗೆ ಸ್ವಾಮಿಗಳು ತಗುಲಿಸಿದ್ದ ಜನಿವಾರವನ್ನು ಯಾವ ಅಳುಕೂ ಇಲ್ಲದೆ ತೆಗೆದು ಹಾಕಿದ್ದಳು. ಹಾಕಿದ್ದು ಒಂದು ಆಘಾತ ತೆಗೆದದ್ದು ಇನ್ನೊಂದು ಆಘಾತ. ಅತ್ತರೆ ಇನ್ನೆಲ್ಲಿ ಮುತ್ಯಾ ಬೈತಳೋ ಎಂದು ಆತಂಕದಿಂದ ನಿಂತಿದ್ದೆ. ತಾತ, `ಅಮ್ಮಾ ಏನಾಯ್ತು ಅಂತ ಅರ್ಥ ಮಾಡಿಕೊಳ್ಳದೆ ಆ ಎಳೆಯನ್ನ ತೆಗೆದು ಹಾಕಿದೆಯಲ್ಲಾ. ಈ ಪ್ರಸಂಗವೇ ತುಂಬಾ ಅಪರೂಪದ್ದು’ ಎಂದಾಗ, `ಸುಮ್ಮನಿರು ನಾರಾಯಣ ಇಲ್ಲದ ಭಾರವನ್ನೆಲ್ಲಾ ಮಗುವಿನ ಮೇಲೆ ಹಾಕುವುದರಲ್ಲಿ ಯಾವ ಅರ್ಥವಿದೆ? ನೀನೂ ಇವನ ತಾಳಕ್ಕೆ ಕುಣಿಯುತ್ತಿದ್ದೀಯಲ್ಲಾ’ ಎಂದು ತಾತನನ್ನು ಗದರುತ್ತಾ ಸ್ವಾಮಿಯ ಕಡೆಗೆ ತಿರುಗಿ, `ಇನ್ನು ನಿನ್ನ ಕೆಲಸ ಮುಗಿದಿದ್ದರೆ ಮನೆಗೆ ಹೋಗು’ ಎಂದಳು. `ಅಲ್ಲ ಹೆಣ್ಣು ಮಗು ಸಂಸ್ಕಾರಕ್ಕೆ ಬರಲ್ಲ ಅನ್ನುವ ಈ ಸಮಾಜದ ದೃಷ್ಟಿಯನ್ನು ಬದಲಿಸಬೇಕು’ ಎಂದು ಏನೋ ಹೇಳಲಿಕ್ಕೆ ಬಂದ ಆ ಸ್ವಾಮಿಯನ್ನು, `ನಿನ್ನ ಕೆಲಸ ನೀನು ನೋಡಿಕೋ, ಸಂಸ್ಕಾರ ಅನ್ನುವುದು ಹೆಣ್ಣಿಗಾಗಲಿ, ಗಂಡಿಗಾಗಲಿ ಹೊರಗಿನದ್ದಾಗಿರಬಾರದು. ಎಲ್ಲವೂ ಆಂತರೀಕ ಪಯಣವೇ. ಆಡಂಬರ ಮಾಡಿ ನಾಕು ಜನಕ್ಕೆ ತೋರಿಸೋದ್ರಿಂದಾ ಏನೂ ಸಿಕ್ಕಲ್ಲ. ನಿನಗೆ ಮಾಡಲಿಕ್ಕೆ ಕೆಲಸ ಇಲ್ಲ ಅಂದ್ರೆ ಸುಮ್ಮನೆ ಇದ್ದು ಬಿಡು. ಇಂಥಾ ಅರ್ಥಹೀನ ಕೆಲಸಗಳನ್ನು ಮಾಡಲಿಕ್ಕೆ ಹೋಗಬೇಡ. ಕೊಡುತ್ತೇನೆ ಎನ್ನುವ ಈ ಅಹಂ ನಿನ್ನ ಬೀಳಿಸಿರುವುದು, ನೀನೇ ಕಾಲು ಜಾರಿ ಬಿದ್ದವ, ಬಿದ್ದ ಜಾಗದಲ್ಲಿನ ಗುರುತಿನಿಂದ ಹತ್ತು ಜನರಿಗೆ ದಾರಿಯನ್ನು ತೋರುತ್ತೀಯ. ಇನ್ನೊಮ್ಮೆ ಬೀಳದಂತೆ ನೋಡಿಕೋ. ಅಷ್ಟು ಸಾಕು’ ಎಂದು ನನ್ನನ್ನು ಎಳೆದುಕೊಂಡೇ ಹೊರಟಳು.

ಮುತ್ಯಾ ಇಷ್ಟು ರೌದ್ರವಾಗಿ ಎಂದೂ ನಡಕೊಂಡಿರಲಿಲ್ಲ. ಅವಳ ಮುಖದಲ್ಲಿ ಸಿಟ್ಟು ಎದ್ದು ತೋರುತ್ತಿತ್ತು. ಅವಳ ಹಲ್ಲುಗಳನ್ನು ಮುಚ್ಚಲಾಗದ ತುಟಿಗಳು ನಡುಗುತ್ತಿದ್ದವು. `ಮುತ್ಯಾ’ ಎಂದೆ ಸಣ್ಣದಾಗಿ. ನನ್ನ ಕಡೆಗೆ ನೋಡಿಯೂ ಮಾತಾಡಲಿಲ್ಲ. ಆಕಾಶವನ್ನು ನೋಡುತ್ತಾ `ಸಂಸ್ಕಾರ ಅಂತೆ ಬುರಡೆ ಅಂತೆ. ಅವನು ಈ ಕಪಿಲೆಗೆ ಯಾವ ಸಂಸ್ಕಾರ ಕೊಡ್ತಾನೆ? ಇದು ಕೊಡುವ ಹಾಲೇ ಸಂಸ್ಕಾರ. ಇವಳಿಗೆ ಯಾವತ್ತಾದರೂ ಅಹಂಕಾರವಿದೆಯಾ? ಅಷ್ಟು ಕಾಯಿಕೊಡುವ ಈ ತೆಂಗಿನ ಮರ, ನೀರಿನಾಳವನ್ನು ಹುಡುಕಿ ಅದನ್ನು ತನ್ನ ಜೀವವನ್ನೇ ಫಣವಾಗಿಟ್ಟು ಮೇಲೆ ಹೊತ್ತೊಯ್ದು ಎಳೆನೀರಲ್ಲಿಟ್ಟು ನಮ್ಮ ದಾಹ ತೀರಿಸುತ್ತಲ್ಲ ಇದಕ್ಕೆ ಅಹಂಕಾರವಿದೆಯಾ? ನೆಲದ ಮೇಲೆ ನಡೆದಾಡುವ ನಮ್ಮ ಮೇಲೆ ಕರುಣೆ ಇಟ್ಟು ಮಳೆ ಸುರಿಸುತ್ತಲ್ಲಾ ಅದಕ್ಕೆ ಅಹಂ ಇದ್ಯಾ. ಇವೆಲ್ಲಾ ಸಂಸ್ಕಾರವೇ ಅಲ್ಲವೇ? ಬೀಸುವ ಗಾಳಿ, ಹರಿವ ನೀರು ಯಾವ ದೈವದ ಕೃಪೆ? ಇವಕ್ಕೆ ಬೇಕಿಲ್ಲದ ಸಂಸ್ಕಾರ ನಮಗ್ಯಾಕೋ? ಪ್ರಕೃತಿ ಹೇಳಿದಾ ಹಾಗೆ ಇರಲಿಕ್ಕೆ ಏನೋ’ ಎಂದು ರೇಗಿಕೊಂಡಿದ್ದಳು. ನಾನು ಅವಳ ಜೊತೆ ಮಾತಾಡದೆ ಸುಮ್ಮನೆ ನಿಂತಿದೆ.

ಇಷ್ಟೆಲ್ಲ ಆದ ಮೇಲೆ ಸ್ವಾಮಿಗಳು ಹೊರಟು ಬಿಟ್ಟರು. ಮುತ್ಯಾ ಸಮಾಧಾನವಾದ ನಂತರ ಕೇಳಿದ್ದೆ, `ಮುತ್ಯಾ ಯಾಕೆ ನೀನು ಕೋಪ ಮಾಡಿಕೊಂಡೆ’ ಎಂದು. `ಮಗೂ ಹೊರಗೆ ದೀಪ ಹಚ್ಚುವುದು ಮುಖ್ಯವಲ್ಲ. ಸಂಸ್ಕಾರವೆಂದರೆ ನಾನೇ ದೀಪವಾಗುವುದು. ಅದಕ್ಕೆ ಆಚರಣೆ ಯಾಕೆ ಬೇಕು? ದೀಪದಂತಾಗಲು ಧ್ಯಾನ ಬೇಕು. ಹಾಗಲ್ಲದೆ ಬೇರೆ ದಾರಿ ಏನಿದೆ? ಇಲ್ಲದಿದ್ದರೆ ಬರಿಯ ಮಾತು, ಬರಿಯ ಭಾರ. ಯಾವತ್ತೂ ತಿಳಿದುಕೋ ಇನ್ನೊಬ್ಬರಿಗೆ ನಾನು ಹೇಗೆ ಕಾಣುತ್ತೇನೆ ಅಂತಾ ಅಲ್ಲ ನಾನೇನಾಗಿದ್ದೇನೆ ಎನ್ನುವುದೇ ಮುಖ್ಯ’ ಎಂದಿದ್ದಳು.

ಮುತ್ಯಾಳ ಆ ಕೋಪದ ಹಿಂದಿನ ಉದ್ದೇಶ ನನಗೆ ಈಗೀಗ ಅರ್ಥವಾಗುತ್ತಿದೆ. ಅವಳ ಮಾತಿನ ಆಳ ನನ್ನ ಮುಟ್ಟುತ್ತಿದೆ. ಮುತ್ಯಾ ಆಕಾಶವಾ, ಅವಕಾಶವಾ ಗೊತ್ತಾಗದೆ ಒದ್ದಾಡಿದ್ದ ದಿನಗಳಲ್ಲಿ ನನಗವಳು ಯಾಕೆ ಸಾಮಾನ್ಯ ಹೆಂಗಸಿನ ಹಾಗೆ ಕಾಣಲಿಲ್ಲ. ಅಂದರೆ ಮನುಷ್ಯನ ಒಳಗಿನ ಶಕ್ತಿ ಧೈರ್ಯವೇನಾ? ಅದು ಮುತ್ಯಾಳಲ್ಲಿ ಇತ್ತು. ಅದಕ್ಕೆ ಅವಳು ನನ್ನೊಳಗೆ ಉಳಿದಳು ಬೆಳೆದಳು ಎಂದೇ ಅನ್ನಿಸುತ್ತೆ. ಯಾವಾಗಲಾದರೂ ನನ್ನ ಹೆಗಲನ್ನು ತಡಕಿದಾಗ ಅವಳು ಕಿತ್ತೆಸೆದ ರಭಸಕ್ಕೆ ಆದ ಗಾಯದ ಗುರುತು ಇನ್ನೂ ಬೆರಳುಗಳಿಗೆ ಸಿಗುತ್ತದೆ.

ಈ ಅಂಕಣದ ಹಿಂದಿನ ಬರೆಹಗಳು:
ಕಂದನಂತೆ ಚಂದಿರನ ಬಾನು ಎತ್ತಿ ಆಡಿಸುತಲಿಹುದು
ತೇಲಿಸು ಇಲ್ಲ ಮುಳುಗಿಸು
ಭಾವಶುದ್ಧಿಯೇ ಆಧ್ಯಾತ್ಮ
ಕಿರಿದನ್ನು ಕಿರಿದರಲ್ಲೇ ನೋಡು
ಅನುಭವದಲ್ಲಿ ಘನೀಭವಿಸುವ ವಿಶ್ವದ ರಹಸ್ಯಮಯ ಸಂಗತಿಗಳು

ಬಿಟ್ಟುಬಿಡುವುದೆಂದರೂ ಕಟ್ಟಿಕೊಳ್ಳುವುದೇ
ಗಾಳದ ದಾರ ದೂರಕ್ಕೆ ಬಿಡುವುದು ಮೀನಿನ ಆಸೆಗೆ
ಕಳಚಿಕೊಳ್ಳುವುದೂ ಆಟದ ಭಾಗವೇ.
ಸರಿದ ಸೆರಗಿನಲ್ಲಿ ಅಡಗಿದ್ದು ಸೂರ್ಯ ಚಂದ್ರ
ಪ್ರಾರ್ಥನೆ; ಪದಾರ್ಥವಲ್ಲ, ಪರಾರ್ಥ
ಜಗತ್ತಿನ ಮೇರು ತಾಯಿ
ನಿಧಿಯ ಕನವರಿಕೆ
ಅವಳ ಧ್ಯಾನಕ್ಕೆ ಒಳಿತೇ ಗುರಿ
ಅನುಬಂಧಗಳ ಲೀಲೆ
ಕನಸಿನೊಳಗಿನ ನನಸು
ನೀಲಿ ಕಣ್ಣುಗಳ ಮುತ್ತಜ್ಜಿ ಮತ್ತು ನಾನು

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...