ತೇಲಿಸು ಇಲ್ಲ ಮುಳುಗಿಸು

Date: 11-10-2022

Location: ಬೆಂಗಳೂರು


ಅಂದು ರಾತ್ರಿ ಮುತ್ಯಾ ನನ್ನನ್ನು ಅವಳ ಪಕ್ಕ ಮಲಗಿಸಿಕೊಳ್ಳಲಿಲ್ಲ. `ಮಗೂ ನೀನು ಒಳಗೇ ಮಲಗು’ ಎಂದಳು. ಯಾವತ್ತೂ ಅನ್ನದವಳು ಇಂದ್ಯಾಕೆ ಅಂದಳು? ಎನ್ನುವ ಕುತೂಹಲ ಮತ್ತವಳ ಬೆಚ್ಚನೆಯ ಆಸರೆ ತಪ್ಪಿದ್ದಕ್ಕೆ ಬೇಸರವೂ ಇತ್ತು. `ನಿನ್ನ ಮುತ್ಯಾನ ಜೊತೆ ಸ್ವಾಮಿಗಳು ಮಾತಾಡಬೇಕಂತೆ’ ಎಂದು ಚಿಕ್ಕಿ ನನ್ನನ್ನು ಒಳಗೆ ಕರೆದೊಯ್ದಳು ಎಂದು ನೆನಪಿನ ಸುರುಳಿ ಬಿಚ್ಚುತ್ತಾರೆ ಲೇಖಕಿ ಪಿ. ಚಂದ್ರಿಕಾ. ಅವರು ತಮ್ಮ ತೇಲುವ ಪಾದಗಳು ಅಂಕಣದಲ್ಲಿ, ಮುತ್ಯಾಳ ತಾಕತ್ತಿನ ಮತ್ತೊಂದು ಮುಖವನ್ನು ಕಾಣಿಸಿದ್ದಾರೆ.

ಸಂಜೆ ಇಚ್ಚಾ ಶಕ್ತಿ ಕುಂದಿಸುವ ಹೊತ್ತೆಂದು ಅಮ್ಮಮ್ಮ ಹೇಳುತ್ತಿದ್ದಳು. `ಆ ಹೊತ್ತಲ್ಲಿ ಯಾರೂ ಏನೂ ಕೆಲಸ ಮಾಡಬಾರದು ಅದು ಬರಿಯ ದೇವರ ದೀಪವನ್ನು ಹಚ್ಚಿ ಹೊರಗಿನ ಕತ್ತಲೆ ನಮ್ಮ ಮನೆಯ ಒಳಗೆ ಪ್ರವೇಶಿಸದಿರಲಿ ಎಂದು ಪ್ರಾರ್ಥಿಸುವ ಹೊತ್ತೆಂದು’ ಅವಳಿಗೆ ಅವಳ ಹಿರಿಯರು ಹೇಳಿದ್ದರೆಂದು ತಿಳಿಸಿದ್ದಳು. ಹಾಗಾಗಿ ಮುಸ್ಸಂಜೆ ಕವಿಯುವ ಹೊತ್ತಿಗೆ ಆಟದಿಂದ ಮರಳಿ ಮನೆಗೆ ಬಂದು ಜಗುಲಿಯ ಮೇಲೆ ಕೂತರೆ ಹಕ್ಕಿಗಳೆಲ್ಲಾ ಗೂಡು ಸೇರುವ ಮುನ್ನದ ಕಲರವದ ಹಾಗಿರುತ್ತಿತ್ತು.

ಊರ ಮಧ್ಯದ ರಾಮನ ಗುಡಿಯಲ್ಲಿ ಕೆಲ ಶನಿವಾರಗಳು ಹೊರಗಿನಿಂದ ಬಂದ ಭಕ್ತಾದಿಗಳು ಭಜನೆ ಮಾಡುತ್ತಿದ್ದರು. ನಾವು ಅದನ್ನು ನೋಡಲು ಹೋಗುತ್ತಿದ್ದೆವು. ಊರೆಂದರೆ ಎಲ್ಲವೂ ಕೂಗಳತೆಯೇ. ಹಾಗಾಗೇ ಎಲ್ಲಾ ಹತ್ತಿರದವರು ಎನ್ನಿಸುತ್ತಿತ್ತು. ಹಾಗೆ ಗುಡಿಯಲ್ಲಿ ಭಜನೆಯ ದಿನ ಸಂಜೆ ಭಕ್ತಾದಿಗಳು ತಮ್ಮ ಊರಿಂದ ಊಟ ತರದೆ ಬರುತ್ತಿದ್ದರು. ಪ್ರತಿ ಮನೆಯ ಮುಂದೆ ನಿಂತು ಬೇಡಿದರೆ ಊಟಕ್ಕೆ ಆಗುವಷ್ಟು ಸಿಕ್ಕಿಬಿಡುತ್ತಿತ್ತು. ಅವಲಕ್ಕಿ, ಬಾಳೇಹಣ್ಣು, ಬೆಲ್ಲ, ಕಾಯಿ ಎಲ್ಲಾ ಒಬ್ಬೊಬ್ಬರ ಮನೆಯಿಂದ ಹೋಗುತ್ತಿದ್ದುದರಿಂದ ಸಂಜೆ ಚರ್ಪಿಗೆ ಊರ ಹುಡುಗರದ್ದು ಹಕ್ಕಿನ ಪಾಲಿರುತ್ತಿತ್ತು. ಅಂಥದ್ದೇ ಒಂದು ಶನಿವಾರ ಭಜನಾ ತಂಡವೊಂದು ಊರಿಗೆ ಬಂದಿತ್ತು. ಅಮ್ಮಮ್ಮನಿಗೆ ನಾವು ಅಲ್ಲಿ ಹೋಗುವುದು ಇಷ್ಟವಿರಲಿಲ್ಲ. ಶೂದ್ರರು ಮುಟ್ಟಿದ್ದನ್ನು ತಿನ್ನುವುದು ಅವಳಿಗೆ ನೆನೆಸಿಕೊಳ್ಳುವುದೂ ಕಷ್ಟವಾಗುತ್ತಿತ್ತು. ಕೆಲವೊಮ್ಮೆ ನಾವು ಹೋಗದೇ ಇದ್ದಾಗಲೂ ಅವರೇ ಚರ್ಪನ್ನು ತಂದು ಮನೆಗೆ ಕೊಡುತ್ತಿದ್ದುದೂ ಉಂಟು. ಆಗೆಲ್ಲಾ ಬಹುಪಾಲು ಅದನ್ನು ಎಮ್ಮೆ ಹಸುಗಳಿಗೆ ಹಾಕಿಬಿಡುತ್ತಿದ್ದಳು. ನಾನು ತಿನ್ನುವ ಆಸೆಯನ್ನು ವ್ಯಕ್ತಪಡಿಸಿದಾಗಲೂ ಬೇಡ ಎಂದಷ್ಟೇ ಹೇಳಿಬಿಡುತ್ತಿದ್ದಳು. ಒಮ್ಮೆ ನಾನು ಹಠ ಹಿಡಿದಾಗ `ಮನಸ್ಸಿಗೊಂದೇ ಮೈಲಿಗೆ ಇರೋದು ಮಗೂ ಕೇಳುವಾಗ ಕೊಡಬಾರದೇ ನಾಗೂ’ ಎಂದು ಮುತ್ಯಾ ನನ್ನ ಪರವಾಗಿ ವಾದಿಸಿದ್ದಳು. `ಮಡಿಸೀರೆಯನ್ನು ಉಟ್ಟು ಈ ಮಾತನ್ನ ಹೇಗೆ ಹೇಳುತ್ತಾರೋ’ ಎಂದು ಅಮ್ಮಮ್ಮ ಕೋಪಗೊಂಡಿದ್ದಳು. ಮುತ್ಯಾ ತುತ್ತನ್ನು ಮಾಡಿ ನನಗೆ ತಿನ್ನಿಸಿದ್ದಳು. ಚರ್ಪು ರುಚಿಯಾಗಿತ್ತು. `ಹು ಅವನು ತಿಂದು ಮಿಕ್ಕಿದ್ದಲ್ಲವಾ?’ ಎಂದು ನಕ್ಕಿದ್ದಳು ಮುತ್ಯಾ. `ಥೂ ಎಂಜಲಾ?’ ಎಂದಿದ್ದೆ ನಾನು. `ಯಾವುದು ಎಂಜಲಲ್ಲ? ಜಗತ್ತಿನಲ್ಲಿ ಸಕಲ ಜೀವಕೋಟಿಗಳೂ ತಿಂದು ಮಿಕ್ಕಿದ್ದನ್ನು ಒಕ್ಕು ಮಾಡಿ ತಿನ್ನುವವನು ಮನುಷ್ಯ. ಅದು ನಮಗೆ ಗೊತ್ತು ಆದ್ದರಿಂದಲೇ ಎಂಜಲಿನ ಬಗ್ಗೆ ಅಷ್ಟೊಂದು ಮಡಿವಂತಿಕೆ’ ಎಂದು ನಕ್ಕಿದ್ದಳು ಮುತ್ಯಾ. ಅವಳ ಮಾತುಗಳು ಕೇಳುವುದೇ ಚಂದ. ನನಗಂತೂ ಅದರ ಗುಂಗು ಈಗಲೂ ಇದೆ ಎನ್ನಿಸುತ್ತೆ. ಅಮ್ಮಮ್ಮನಿಗೆ ಕೋಪ ಸರ್‍ರೆಂದು ನೆತ್ತಿಗೇರಿತ್ತು. `ನಿಮ್ಮ ಮಾತು ಕಬ್ಬಿಣ ನೀರಲ್ಲಿ ತೇಲುತ್ತೆ ಅನ್ನುವ ಹಾಗಿದೆ’ ಎನ್ನುತ್ತಾ ಮುತ್ಯಾಳ ಕೈಲಿ ಬಾಳೆಯ ಎಲೆಯಲ್ಲಿದ್ದ ಚರ್ಪನ್ನು ಅಕ್ಷರಶಃ ಕಿತ್ತೊಯ್ದಿದ್ದಳು. ಮುತ್ಯಾ ಅವತ್ತು ಮತ್ತೆ ಅದೇ ಥರದ ಚರ್ಪನ್ನು ಮಾಡಿಕೊಟ್ಟಿದ್ದಳು. `ಅದು ಚೆನ್ನಾಗಿತ್ತು’ ಎಂದು ಅಳುತ್ತಲೇ ತಿಂದಿದ್ದೆ. ಆಗೆಲ್ಲಾ ನನಗೆ, `ಅಮ್ಮಮ್ಮನಿಗೆ ಬುದ್ಧಿ ಕಲಿಸಬೇಕು ಕಬ್ಬಿಣವನ್ನು ನೀರಲ್ಲಿ ತೇಲಿಸಿ’ ಎಂದೆನ್ನಿಸಿತ್ತು. ಮುತ್ಯಾಳಿಗೆ ಕೇಳಿದಾಗ, `ಬಾ ತೇಲುವುದನ್ನು ಹೇಳಿಕೊಡುತ್ತೇನೆ’ ಎಂದು ನನ್ನ ಕರೆದೊಯ್ದಿದ್ದಳು. ದನ ನೀರು ಕುಡಿಯುವ ಬಾನಿಯ ಎದುರು ಇಬ್ಬರೂ ಕುಳಿತೆವು. ಒಬ್ಬರಿಗಿಂತ ಒಬ್ಬರದ್ದು ಹುಡುಗು ಬುದ್ಧಿ. ಮುತ್ಯಾ, `ಈಗ ನೀನು ಮ್ಯಾಜಿಕ್ ಮಾಡಿ ಕಬ್ಬಿಣಾನ ತೇಲಿಸು ನಾನು ಅಮ್ಮಮ್ಮನ್ನ ಕರೆದು ತರುತ್ತೇನೆ’ ಎಂದು. `ಅಲ್ಲವಾ?’ ಎಂದು ನಗುತ್ತಾ ಮುತ್ಯಾ ಹೇಳಿದಳು. `ಬೇಡ’ ಎನ್ನುವ ಅವಳ ಮಾತನ್ನೂ ಲೆಕ್ಕಿಸದೆ ಅಮ್ಮಮ್ಮನಿಗೆ ಓಡಿ ಹೋಗಿ ಹೇಳಿಯೂ ಬಂದೆ. `ಮುತ್ಯಾ ಮ್ಯಾಜಿಕ್ ಮಾಡಿ ಕಬ್ಬಿಣಾನ ತೇಲಿಸುತ್ತಾಳೆ, ನೀನು ಬಂದು ನೋಡು’ ಎಂದು. ಏನು ನಡೆಯುತ್ತಿದೆ? ಎನ್ನುವ ಕುತೂಹಲಕ್ಕೆ ಬಿದ್ದು ಚಿಕ್ಕಮ್ಮ ಅಮ್ಮಮ್ಮನನ್ನು ಕರೆದು ತಂದಿದ್ದಳು. ಮುತ್ಯಾ ತನಗೂ ಇದಕ್ಕೂ ಸಂಬಂಧ ಇಲ್ಲ ಎನ್ನುವ ಹಾಗೆ ಮರದ ತುಂಡಿನ ಮೇಲೆ ಕಬ್ಬಿಣದ ಚೂರನ್ನು ಇಟ್ಟು ತೇಲಿಬಿಟ್ಟಿದ್ದಳು. `ನೋಡು ಕಬ್ಬಿಣದ ಚೂರು ನೀರಿನ ಮೇಲೆ ತೇಲುತ್ತಿದೆ ಎಂದು ನಾನೇ ಗೆದ್ದೆ’ ಎನ್ನುವ ಹಾಗೆ ಅಮ್ಮಮ್ಮನಿಗೆ ತೋರಿಸಿದೆ. `ನೀನೆಂಥಾ ದಡ್ಡಿಯೇ ನಿನಗಿಂತ ಸಣ್ಣ ಮಕ್ಕಳಿಗೂ ಮರದ ತುಂಡು ನೀರಲ್ಲಿ ತೇಲುತ್ತೆ ಅಂತ ಗೊತ್ತಿದೆ’ ಎನ್ನುತ್ತಾ ಹೋದಳು. ನನಗೆ ಪಿಚ್ಚೆನ್ನಿಸಿತು. ಮುತ್ಯಾ ಜಗತ್ತಿನ ಅದ್ಭುತ ಅನ್ನುವ ಹಾಗೇ ಅದನ್ನು ನೋಡುತ್ತಿದ್ದಳು. ನಾನು ಮುನಿಸು ತೋರುತ್ತಾ, `ನಿನ್ನಿಂದ ಅಮ್ಮಮ್ಮನ ಹತ್ತಿರ ಬೈಸಿಕೊಂಡೆ’ ಎಂದಿದ್ದೆ. ಮುತ್ಯಾ ಗಂಭೀರಳಾಗಿದ್ದಳು, `ಸುಮ್ಮನೆ ಯೋಚನೆ ಮಾಡು ಮಗೂ ಇದು ಅದ್ಭುತ ಅಲ್ಲವೋ? ಯಾವುದು ನೀರಲ್ಲಿ ಮುಳುಗುತ್ತದೆಯೋ ಅದನ್ನು ತೇಲಿಸಲು ಇನ್ನೊಂದು ಸಹಾಯ ಮಾಡುತ್ತೆ ಅಂದರೆ ಅರಿಯಬೇಕಿರುವ ಅರ್ಥ ಒಳಗೆ ಬೇರೆಯದೇ ಇದೆಯೆಂದಲ್ಲವೇ?’ ಎಂದಳು. ನಾನೋ ಕ್ಷಣ ಚಿತ್ತ ಕ್ಷಣ ಪಿತ್ತ. ಪ್ರಲೋಭನೆಗೆ ಪಕ್ಕನೆ ಸಿಕ್ಕುವವಳು. ಮುತ್ಯಾನ ಮಾತಿನ ಪ್ರಲೋಭನೆಗೆ ಬಿದ್ದು ಅದುವರೆಗೂ ಅಮ್ಮಮ್ಮನಿಂದ ಆದ ಅವಮಾನವನ್ನು ಮರೆತೇ ಬಿಟ್ಟೆ.

ಮುತ್ಯಾ ತೇಲುವ ಮರದ ತುಂಡಿನ ಮೇಲಿಂದ ಕಬ್ಬಿಣದ ಚೂರನ್ನು ತೆಗೆದು ನೀರಲ್ಲಿ ಹಾಕಿದಳು. ಅದು ಮುಳುಗಿತು ಮತ್ತೆ ತೆಗೆದು ಮರದ ತುಂಡಿನ ಮೇಲಿಟ್ಟಳು. ಅದು ಮರದ ತುಂಡಿನ ಮೇಲೆ ಹಾಯಾಗಿ ತೇಲಿತು. ಇಬ್ಬರೂ ಸುಮಾರು ಹೊತ್ತಿನ ತನಕ ಇದೇ ಆಡುತ್ತಿದ್ದೆವು. ಇಷ್ಟಾಗಿಯೂ ಮುತ್ಯಾ ಹೇಳಿದ ಆ ಒಂದು ಮಾತು ನನ್ನ ಮತ್ತಷ್ಟು ದೃಢವಾಗಿಸಿತು. `ತೇಲುವುದೋ ಇಲ್ಲ ಮುಳುಗುವುದೋ ಆ ವಸ್ತುವಿನ ಗುಣ ಮಾತ್ರ. ತೇಲುವುದು ತೇಲಲಿ ಮುಳುಗುವುದರ ಗೊಡವೆ ಅದಕ್ಕಿಲ್ಲ. ಆದರೆ ಮುಳುಗುವವರಿಗೇ ತೇಲುವ ಆಸೆ. ಯಾಕೆಂದರೆ ಆಳಕ್ಕೆ ಯಾವತ್ತೂ ಭಯವೇ. ಯಾಕೆಂದರೆ ಅದು ಇಳಿಯುವ ಜಗತ್ತು. ಈ ಕಬ್ಬಿಣಕ್ಕೆ ತನ್ನ ಗತಕಾಲದ ನೆನಪು ಮಾಸುವುದೇ ಇಲ್ಲ. ಮರದ ಮೇಲೆ ಇರುವವರೆಗೆ ಮಾತ್ರ ಅದು ತನ್ನತನವನ್ನು ಮರೆಯುತ್ತದೆ. ಮಾರದ ತುಂಡಿಂದ ಇಳಿದ ತಕ್ಷಣ ಅದು ತಾನೇ ತಾನಾಗುತ್ತದೆ. ಆಗಲೇ ಬೇಕು. ಇದೇ ನನಗೆ ವಿಚಿತ್ರ ಅನ್ನಿಸುವುದು. ಹಾಗಾದರೆ ನಾನು ಈ ಭವದಲ್ಲಿ ತೇಲುತ್ತಿರುವೆ ಎಂದುಕೊಳ್ಳುತ್ತೇನಲ್ಲ! ಅಪ್ಪ, ಅಮ್ಮ, ಮಗ, ಗಂಡ ಹೀಗೆ ಯಾವ ಯಾವ ಬಂಧಗಳಲ್ಲೋ, ಅದೆಲ್ಲಾ ತಪ್ಪಿಬಿಟ್ಟರೆ ಮತ್ತೆ ನಾನು ತಲುಪುವುದು ಆಳಕ್ಕೆ ಮೂಲದಲ್ಲಿ ನಾನೇನಾಗಿದ್ದೆನೋ ಅಲ್ಲಿಗೇ ತಲುಪುವೆ ಎಂದುಕೊಳ್ಳುತ್ತೇನೆ. ಅದನ್ನು ದೈವ ಮತ್ತೇನೋ ಇನ್ನೇನೋ ಹೆಸರುಗಳಿಂದ ಹೇಳುತ್ತೇವೆ. ಸಂಸಾರದಲ್ಲಿ ತೇಲುವವರು ಸುಖದಲ್ಲಿ ಮುಳುಗಿಸು ಎನ್ನುತ್ತಾರೆ. ಕಷ್ಟದಲ್ಲಿ ಮುಳುಗಿರುವವರು ಇದರಿಂದ ಪಾರು ಮಾಡಿ ತೇಲಿಸು ಎನ್ನುತ್ತಾರೆ. ಇದೇ ಮಗೂ ಮನುಷ್ಯನ ಗುಣ’ ಎಂದಳು. ಆಕಾಶದಲ್ಲಿ ಹಕ್ಕಿ ಹಾರಿ ಹೋಯಿತು. ಅದನ್ನು ನೋಡಿ ನನ್ನ ಬಾಲ ಬುದ್ಧಿಗೆ ಎಟುಕುವ ಹಾಗೆ `ಹಾರುವುದು ಹಕ್ಕಿಯ ಗುಣ’ ಎಂದೆ ಗೂಢವಾದದ್ದನ್ನು ಹಿಡಿದೆ ಎನ್ನುವ ಹಾಗೆ. `ಅಂತೂ ನನ್ನ ಮಾತುಗಳನ್ನೆಲ್ಲಾ ನೀನು ಕಲಿಯುತ್ತಿದ್ದೀಯ’ ಎನ್ನುತ್ತಾ ಮುತ್ಯಾ ತುಂಟತನದಲಿ ನಗುತ್ತಾ ನನ್ನ ಮೇಲೆ ತನ್ನ ಕೈಗಳಲ್ಲಿನ ನೀರನ್ನು ಎರಚಿದಳು.

ಆಮೇಲೆ ನಡೆದದ್ದು ಜಲಕ್ರೀಡೆ. ಮುತ್ಯಾ ನಾನೂ ಇಬ್ಬರೂ ನೀರಲ್ಲಿ ಆಟ ಆಡುತ್ತಾ ಆಡುತ್ತಾ ಬಟ್ಟೆಯನ್ನೆಲ್ಲಾ ಒದ್ದೆ ಮಾಡಿಕೊಂಡೆವು. ನೀರಲ್ಲಾಡುವ ನಾನು ಮಾತ್ರ ಕಂಡಿದ್ದರಿಂದ ತಾತ, `ದನ ಕುಡಿಯುವ ನೀರನ್ನು ಹಾಳು ಮಾಡುತ್ತಿದ್ದೀಯಾ?’ ಎಂದು ಕೂಗಿದ. ನಾನು ಸ್ವಲ್ಪ ಗಾಬರಿಯಾದದ್ದನ್ನು ನೋಡಿ, `ನಾನೂ ಕಣೋ ನಾರಾಯಣ ಮಗು ಅಲ್ಲ’ ಎಂದಳು ಮುತ್ಯಾ. `ಇದೇನು ನಿನ್ನ ಹುಚ್ಚೇ’ ಎನ್ನುವ ಹಾಗೆ ತಲೆ ಆಡಿಸಿ ತಾತ ಹೊರಟು ಹೋದ. ಇಬ್ಬರೂ ಮನಸೋ ಇಚ್ಛೆ ನೀರಲ್ಲಿ ಆಡಿದೆವು. ನಮ್ಮ ಒದ್ದೆಯಾದ ಬಟ್ಟೆಗಳು ನಮ್ಮ ತುಂಟತನಕ್ಕೆ ನಾಚಿ ಮೈಗೆ ಮತ್ತಷ್ಟು ಅಂಟಿಕೊಂಡವು. `ಇನ್ನು ಶೀತ ಆದೀತು’ ಎಂದು ಅವಸರಿಸಿ ಮುತ್ಯಾ ಆಟ ನಿಲ್ಲಿಸಿ ಒಳಗೆ ಕರೆದೊಯ್ದಳು. ಚಿಕ್ಕಿ ಮುತ್ಯಳಿಗೆ `ಮೈ ಮುದಿ ಬಿದ್ದರೂ ನಿನ್ನ ಮನಸ್ಸು ಮಾತ್ರ ಹುಡುಗಾಗಿದೆ. ಈ ಹುಡುಗೀನೂ ಹಾಕಿಕೊಂಡು ಏನು ನಿನ್ನ ಆಟ’ ಎಂದು ಬೈದಳು. ಮುತ್ಯಾ ಮುಸಿ ಮುಸಿ ನಗುತ್ತಾ ಮಾತು ಆಡದೆ ಒಳ ಸಾಗಿದಳು. ನನ್ನ ಬೆನ್ನಿನ ಮೇಲೆ ಗುದ್ದಿದ ಚಿಕ್ಕಿ, `ನಾಳೆ ಏನಾದರೂ ಆದರೆ ನಿನ್ನ ಅಪ್ಪ ಅಮ್ಮ ನಮ್ಮನ್ನ ಸುಮ್ಮನೆ ಬಿಡುತ್ತಾರಾ?’ ಎಂದಳು ಒಣ ಬಟ್ಟೆಯಿಂದ ನನ್ನ ತಲೆ ಒರಸುತ್ತಾ.

ಜಗುಲಿಯಲ್ಲಿ ಕೂತ ನನಗೆ ನೆಗಡಿಯಾಗದ ಹಾಗೆ ಸುಡುವ ಬಿಸಿ ಹಾಲಿಗೆ ಅರಿಸಿನವನ್ನು ಹಾಕಿ ಚಿಕ್ಕಿ ತಂದುಕೊಟ್ಟಳು. ಹಸುವಿನ ಹಾಲಿನ ಘಮಲೇ ಬೇರೆ. ಸ್ವಲ್ಪ ಹೊತ್ತಿಗೆ ಕೆನೆಕಟ್ಟುತ್ತಾ ಹಾಕಿದ ಅರಿಸಿನವನ್ನು ಮತ್ತಷ್ಟು ಗಾಢವಾಗಿಸುತ್ತಾ, ಕೈಗೂ ಹದವಾದ ಬಿಸಿಯನ್ನು ತಾಕಿಸುತ್ತಿತ್ತು. ಕುಡಿವಾಗ ಹಬೆ ಕಣ್ಣಿನ ಮುಂದೆ ಆಡಿ, ಕೆಲ ಸಲ ಕಣ್ಣ ಪಸೆಯ ಒಳಗೂ ಸೇರಿ ಮುಂದಿನದನ್ನು ಮಂಜಾಗಿಸುತ್ತಾ ವಿಚಿತ್ರವಾದ ಯಾವುದೋ ಭಾವವನ್ನು ಹುಟ್ಟು ಹಾಕುತ್ತಿತ್ತು.

ಕಣ್ಣುಬಿಟ್ಟು ನೋಡುವಾಗ, ಸ್ವಲ್ಪ ದೂರದಲ್ಲಿ ಯಾರೋ ಬರುತ್ತಿರುವ ಹಾಗೆ ಅನ್ನಿಸಿತು. ಮಂಜು ಮಂಜಾಗುವ ಕಣ್ಣನ್ನು ಅಗಲಿಸಿ ನೋಡಿದೆ. ಶುಭ್ರ ಕಚ್ಚೆ ಪಂಚೆ ಮೇಲೊಂದು ಶಲ್ಯ ಹೊದ್ದ, ಅಂಗಿಯನ್ನು ಧರಿಸಿದ ಕೃಶವಾದ ಶರೀರ. ತಲೆಯ ಮೇಲೆ ಒತ್ತಾದ ಬಿಳಿ, ಕಡಿಮೆ ಕಪ್ಪು ಕೂದಲಿನ ಜಟೆಯನ್ನು ಹೊಂದಿದ್ದರು. ಬಗಲಲ್ಲಿ ಬಟ್ಟೆಯದ್ದೇ ಜೋಳಿಗೆ. ನಾನು ಯಾರೋ ಭಜನೆಯವರು ಭಿಕ್ಷೆಗಾಗಿ ಬಂದಿರಬೇಕೆಂದುಕೊಂಡು, `ಅಮ್ಮಮ್ಮಾ ಯಾರೋ ಬಂದಿದ್ದಾರೆ’ ಎಂದು ಕೂಗಿದೆ. ಕೈಲಿ ಭಿಕ್ಷೆಗೆ ಅನ್ನವನ್ನು ಹಿಡಿದು ಬಂದ ಅಮ್ಮಮ್ಮನಿಗೆ ಎದುರಿಗೆ ನಿಂತಿರುವ ವ್ಯಕ್ತಿಯನ್ನು ನೋಡಿ ಆಘಾತ.

ಅವಳ ಆ ಆಘಾತವನ್ನು ಮೀರಿ ನಗುತ್ತಾ ಬಂದವರು `ಹೇಗಿದ್ದೀಯ ನಾಗಮ್ಮಾ?’ ಎಂದಾಗ ಕೈಲಿರುವ ಅನ್ನದ ಪಾತ್ರೆಯನ್ನು ಪಕ್ಕಕ್ಕೆ ಇಟ್ಟು ಅವರ ಕಾಲಿಗೆ ದೂರದಿಂದಲೇ ನಮಸ್ಕರಿಸಿ `ನಾನು ಚೆನ್ನಾಗಿದ್ದೇನೆ. ನೀವು?’ ಎಂದಳು ಅಮ್ಮಮ್ಮ. `ಎಲ್ಲ ಬಿಟ್ಟವನಿಗೆ ಸೌಖ್ಯವೂ ಒಂದೇ ಅಸೌಖ್ಯವೂ ಒಂದೇ’ ಎನ್ನುವ ಅವರ ಮಾತಿಗೆ ತಲೆದೂಗುತ್ತಾ, ಓಡಿ ಹೋಗಿ ನೀರನ್ನು ತೆಗೆದುಕೊಂಡು ಬಾ ಎಂದಳು. ನೀರನ್ನು ಯಾವುದರಲ್ಲಿ ತರಲಿ ಎಂದು ಯೋಚಿಸುತ್ತಾ ನಿಂತಾಗ, `ಅಯ್ಯೋ ಎಷ್ಟು ಹೊತ್ತು ಇವರನ್ನು ಹೊರಗೆ ನಿಲ್ಲಿಸುವುದು ಕಾಲು ತೊಳೆಯಲಿಕ್ಕೆ ನೀರನ್ನು ತಂದುಕೊಡು’ ಎಂದಳು. ನಾನು ಓಡಿ ಹೋಗಿ ಒಂದು ತಂಬಿಗೆಯಲ್ಲಿ ನೀರನ್ನು ತಂದೆ. ತರುವಾಗ `ಏನಾಯಿತು’ ಎನ್ನುತ್ತಾ ತಾತನೂ ಹೊರಗೆ ಬಂದ. ಅಮ್ಮಮ್ಮ ತಾತ ಸೇರಿಕೊಂಡು ಅವರ ಕಾಲನ್ನು ತೊಳೆದರು. ತೊಳೆದ ನೀರನ್ನು ತಲೆಯ ಮೇಲೆ ಹಾಕಿಕೊಂಡರು. ಇಷ್ಟೆಲ್ಲಾ ನಡೆಯುವಾಗ ಬಂದ ಆ ವ್ಯಕ್ತಿಯ ಮುಖದಲ್ಲಿ ಒಂದು ನಿರ್ವಿಕಲ್ಪ ಸ್ಥಿತಿ ಎದ್ದು ಕಾಣುತ್ತಿತ್ತು. ಎಲ್ಲವನ್ನೂ ಸುಮ್ಮನೆ ನೋಡುತ್ತಾ ನಿಂತೆ. `ತಾಯಿಯವರು ಹೇಗಿದ್ದಾರೆ’ ಎಂದರು ತಾತನನ್ನು ಕುರಿತು. `ಒಳಗಿದ್ದಾರೆ’ ಎಂದ ತಾತ. ಏನು ನಡೀತಾ ಇದೆ ಅನ್ನುವುದು ನನಗೂ ಗೊತ್ತಾಗಲಿಲ್ಲ. ಅರಳುತ್ತಿದ್ದ ಪುಟ್ಟಮನಸ್ಸು ಹೊಸದೊಂದನ್ನು ನೋಡುವ ಕಾತರದಿಂದ ಕಾಯುತ್ತಿತ್ತು. ನನ್ನ ತಲೆಯನ್ನು ಸವರಿ, `ಈ ಮಗು ಯಾರು?’ ಎಂದರು. ಅಮ್ಮಮ್ಮ `ನಮ್ಮ ಪುಷ್ಪನ ಮಗಳು’ ಎಂದರು. `ಒಳ್ಳೆಯದು’ ಎನ್ನುತ್ತಾ ಒಳಗೆ ನಡೆದರು.

ಬಂದವರ ಹೆಸರು ಗಾಯಿತ್ರಿ ಸ್ವಾಮಿಗಳು ಅಂತ ಎಲ್ಲರ ಮಾತುಗಳಿಂದ ಅರ್ಥವಾಯ್ತು. ಆದರೆ ಅಂಥ ಹೆಸರನ್ನು ಯಾರಾದರೂ ಇರಿಸಿಕೊಳ್ಳುತ್ತಾರಾ? ನನಗೆ ಗೊತ್ತಾಗಲಿಲ್ಲ. `ಅವರ ಹೆಸರು ಬೇರೆ ಏನೋ ಇದೆ ಪುಟ್ಟ. ಅವರು ಗಾಯಿತ್ರಿಯ ಉಪಾಸಕರಾದ್ದರಿಂದ ಅವರನ್ನ ಎಲ್ಲರೂ ಗಾಯಿತ್ರಿ ಸ್ವಾಮಿ ಎನ್ನುತ್ತಾರೆ’ ಮುತ್ಯಾ ಹೇಳಿದಾಗಲೇ ನನಗೆ ಅರ್ಥವಾಗಿದ್ದು. ಅವರು ಮದುವೆಯಾಗಿದ್ದರು, ಮಕ್ಕಳಿದ್ದರು. ಹಾಗಿದ್ದೂ ವೈರಾಗ್ಯತತ್ವ ಅವರನ್ನು ಬಹುವಾಗಿ ಸೆಳೆದಿತ್ತು. ಸಂಸಾರದಲ್ಲಿದ್ದೂ ಸಂನ್ಯಾಸ ದೀಕ್ಷೆಯನ್ನು ತೆಗೆದುಕೊಂಡಿದ್ದರು. ಎಲ್ಲವನ್ನೂ ನಿರ್ವಿಕಲ್ಪವಾಗಿ ನೋಡುತ್ತಿದ್ದ ಅವರ ಬಾಯಿಂದ ಬರುತ್ತಿದ್ದುದು ಒಂದೇ ಮಾತು ಒಳ್ಳೆಯದ್ದು.

ಸ್ನಾನ ಸಂಧ್ಯಾವಂದನೆ ನಂತರ ಗಾಯತ್ರಿಯ ವಿಗ್ರಹವನ್ನು ತಮ್ಮ ಜೋಳಿಗೆಯಿಂದ ತೆಗೆದು ಅದಕ್ಕೆ ಅಭಿಷೇಕ ಪೂಜೆ ಸಕಲ ಸೇವೆಯ ಜೊತೆಗೆ ನೈವೇದ್ಯ ಮಾಡಿದರು. ಅಭಿಷೇಕದ ಹಾಲನ್ನು ನನ್ನ ಕರೆದು `ಕುಡಿದುಕೋ’ ಎಂದು ಕೊಟ್ಟರು.

ಊರು ಸಣ್ಣದಾದ್ದರಿಂದ ಸ್ವಾಮಿಗಳು ಬಂದದ್ದು ಎಲ್ಲರಿಗೂ ಗೊತ್ತಾಗಿಬಿಟ್ಟಿತ್ತು. ಊರ ಜನರೆಲ್ಲಾ ಮನೆಗೆ ಬಂದು ಅವರನ್ನು ಮಾತಾಡಿಸಿಕೊಂಡು ಹೋದರು. ಸುಖ ದುಃಖ ಹೇಳಿಕೊಂಡರು, ನಕ್ಕರು ಅತ್ತರು. ಒಬ್ಬಳಿಗಂತೂ ಮೈಮೇಲಿದ್ದದ್ದು ಹೊರಗೆ ಬಂದೇ ಬಿಟ್ಟಿತ್ತು. ಅವಳ ಹಣೆಗೆ ಕೈ ಹಚ್ಚಿ ಅದನ್ನು ಅಲ್ಲೇ ಸುಮ್ಮನಾಗಿಸಿದರು. ಚಂಡಿ ಹಿಡಿದ ಮಗುವಿಗೆ ಚಂದಿ ಬಿಡಿಸಿದರು... ಹೀಗೆ ಏನೇನೋ. ಆದರೆ `ಒಳ್ಳೆಯದು’ ಎನ್ನುವ ಶಬ್ದ ಬಿಟ್ಟರೆ ಬೇರೆ ಏನೂ ಸ್ವಾಮಿಗಳ ಬಾಯಿಂದ ಬರಲೇ ಇಲ್ಲ. ಕೆಲವರಿಗೆ ಮಂತ್ರಾಕ್ಷತೆ, ಕೆಲವರಿಗೆ ಕುಂಕುಮ ಕೊಡುತ್ತಾ ನನ್ನ ಕುತೂಹಲ ಕೆರಳಿಸುತ್ತಾ ಕೂತಿದ್ದರು. ಅವರ ಈ ಎಲ್ಲಾ ಕ್ರಿಯೆಯಲ್ಲಿ ಅವರು ಶಕ್ತಿವಂತರು ಎನ್ನುವುದು ಸಾಬೀತಾಗುತ್ತಿತ್ತು.

ಅಂದು ರಾತ್ರಿ ಮುತ್ಯಾ ನನ್ನನ್ನು ಅವಳ ಪಕ್ಕ ಮಲಗಿಸಿಕೊಳ್ಳಲಿಲ್ಲ. `ಮಗೂ ನೀನು ಒಳಗೇ ಮಲಗು’ ಎಂದಳು. ಯಾವತ್ತೂ ಅನ್ನದವಳು ಇಂದ್ಯಾಕೆ ಅಂದಳು? ಎನ್ನುವ ಕುತೂಹಲ ಮತ್ತವಳ ಬೆಚ್ಚನೆಯ ಆಸರೆ ತಪ್ಪಿದ್ದಕ್ಕೆ ಬೇಸರವೂ ಇತ್ತು. `ನಿನ್ನ ಮುತ್ಯಾನ ಜೊತೆ ಸ್ವಾಮಿಗಳು ಮಾತಾಡಬೇಕಂತೆ’ ಎಂದು ಚಿಕ್ಕಿ ನನ್ನನ್ನು ಒಳಗೆ ಕರೆದೊಯ್ದಳು.

ಊಟ ಮುಗಿಸಿ ಮಿನುಗುವ ನಕ್ಷತ್ರಗಳ ಅಡಿಯಲ್ಲಿ ಇಬ್ಬರೂ ಕೂತು ಮಾತಾಡುತ್ತಲೇ ಇದ್ದದ್ದು ಆ ರಾತ್ರಿಯಾಲ್ಲೂ ಕಿಟಕಿಯಿಂದ ನೋಡಿದ್ದೆ. ಯಾಕೋ ಅವತ್ತು ಮಾತ್ರ ನನಗೆ ಮುತ್ಯಾ ನನ್ನವಳು ಮಾತ್ರ ಅನ್ನಿಸಲಿಕ್ಕೆ ಶುರುವಾಯಿತು. ಮನಸ್ಸು ತಡೆಯಲಿಲ್ಲ, ಪಕ್ಕದಲ್ಲಿ ಮಲಗಿದ್ದ ಚಿಕ್ಕಿಯನ್ನು ಎಬ್ಬಿಸಿ, `ಚಿಕ್ಕಿ ಬಚ್ಚಲಿಗೆ ಹೋಗಬೇಕು’ ಎಂದೆ. ಅವಳು ಗಾಢ ನಿದ್ರೆಯಿಂದ ಎಚ್ಚೆತ್ತು ಕೊಸರಾಡುತ್ತಾ, `ಇಲ್ಲೇ ಹೊರಗೆ ಹೋಗಿ ಬಾ’ ಎಂದಳು. ನಾನು ಅವಕಾಶ ಸಿಕ್ಕಿದ್ದೆ ಸಾಕು ಎನ್ನುವಂತೆ ಓಡಿ ಮುತ್ಯಾನ ಬಳಿಗೆ ಸೇರಿಕೊಂಡೆ. `ನಿದ್ದೆ ಬರಲಿಲ್ಲವೇ?’ ಎಂದವಳಿಗೆ ಒತ್ತಿಕೊಳ್ಳುತ್ತಾ ಬೆಚ್ಚಗಾದೆ. ನಾನು ಅಲ್ಲಿಗೆ ಹೋಗಿದ್ದು ಅವರ ಮಾತಿಗೆ ತಡೆ ಆದಂತಿತ್ತು. ಮುತ್ಯಾನ ಮುಖದಲ್ಲಿನ ಅಸಮಾಧಾನ, ಅವರ ಮಧ್ಯೆ ನಡೆಯುತ್ತಿದ್ದ ಮಾತುಕಥೆಯ ಗಂಭೀರ ಸ್ವರೂಪವನ್ನು ಅರ್ಥ ಮಾಡಿಸಿತ್ತು. ನನ್ನನ್ನು ಮಲಗಿಸುವಂತಿದ್ದ ಎಲೆಯಂಥಾ ಅವಳ ಕೈಗಳ ತಟ್ಟುವಿಕೆ ಹಿತವೆನ್ನಿಸುತ್ತಿತ್ತು. ಸ್ವಾಮಿಗಳು `ಸಾಧನೆ ದೊಡ್ಡದಲ್ಲವಾ? ಮಡದಿ ಮಕ್ಕಳು ಎಲ್ಲಾ ಬಂಧಗಳೇ’ ಎಂದರು. `ಮಡದಿ ಮಕ್ಕಳು ಎಲ್ಲವನ್ನು ಭ್ರಮೆ ಎಂದು ಅರ್ಥವಾಗುವುದು ಸಂಸಾರದ ಕಷ್ಟವನ್ನು ಎದುರಿಸಲಾಗದೇ ಹೋದಾಗ ಅಲ್ಲವಾ?’ ಎಂದಾಗ ಸ್ವಾಮಿಗಳು ಮುಖವನ್ನು ಕೆಳಕ್ಕೆ ಹಾಕಿ, `ಹಾಗೇನೂ ಇಲ್ಲ ಕಷ್ಟ ಅಂತ ಅಲ್ಲ ಆತ್ಮದ ಉನ್ನತಿ ಅಂತ ಇದೆಲ್ಲಾ ಮಾಡುತ್ತಿರುವುದು’ ಎಂದರು. ಆತ್ಮ ಉನ್ನತಿ ಈ ಪದಗಳೆಲ್ಲಾ ಸಂಸಾರ ಬಿಟ್ಟು ಓಡಿಹೋಗಲಿಕ್ಕೆ ಮಾಡಿಕೊಂಡಿರುವ ದಾರಿಗಳು. ಇದ್ದು ಸಾಧಿಸದವನು ಓಡಿ ಹೋಗಿ ಸಾಧಿಸುವುದೇನು ಜೀವನವೇ ಆಧ್ಯಾತ್ಮ ಅಲ್ಲದಿದ್ದರೆ ಆ ಭಗವಂತ ಸಂಸಾರವನ್ನು ಮಾಡಿರುವುದಾದರೂ ಯಾಕೆ? ನಿನ್ನ ಹಾಗೆ ನಿನ್ನ ಹೆಂಡತಿಯೂ ಅಂದುಕೊಂಡಿದ್ದರೆ ಇವತ್ತೇನಾಗುತ್ತಿತ್ತು. ನಿನ್ನ ಮಕ್ಕಳು ಬೀದಿಗೆ ಬೀಳುತ್ತಿದ್ದರು. ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳು ಸತ್ಯ ಅನ್ನಿಸದಿದ್ದರೆ ಇನ್ಯಾವುದು ಸತ್ಯ ಅನ್ನಿಸುತ್ತದೆ?’ ಅರೇ! ಇದೇನಿದು ಮುತ್ಯಾ ಸ್ವಾಮಿಗಳಿಗೆ ಬೈಯ್ಯುವುದಾ? ಇವಳಿಗೆ ಇಷ್ಟೊಂದು ಧೈರ್ಯವಾ? ಸ್ವಾಮಿಗಳು ಶಾಪ ಕೊಡುವುದಿಲ್ಲವಾ? ಅನ್ನಿಸಿಬಿಟ್ಟಿತು. ಮುತ್ಯಾ ಬಿಡಲಿಲ್ಲ, `ನೀನು ತಪ್ಪು ಮಾಡಿರುವೆ ಸಾಧನೆ ಮಾಡಲಿಕ್ಕೆ ಸಂಸಾರ ಅಡ್ಡಿ ಎಂದು ನಿನಗೆ ಹೇಳಿದವರ್ಯಾರು? ಗಂಡಸಿಗೆ ಹೆಣ್ಣು ಮಾಯೆಯೆ. ಆದರೆ ಹೆಂಗಸಿಗೆ ಯಾಕಪ್ಪಾ ಗಂಡಸು ಮಾಯೆ ಅಲ್ಲ. ನಿಮಗಿರುವ ಕಠೋರತೆ ನಮಗಿರೊಲ್ಲ. ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳು ಹಸಿವಿಂದ ಅತ್ತರೆ ದೈವವೇ ಅತ್ತಂತೆ ಅನ್ನಿಸುತ್ತೆ. ಸುಮ್ಮನೆ ಭಗವಂತನನ್ನು ಮಕ್ಕಳಲ್ಲಿ ಕಾಣುವುದನ್ನು ಹೇಳಿಕೊಟ್ಟಿರುವುದು. ಬಿಟ್ಟು ಹೋಗುವುದು ಸುಲಭ ಅದಕ್ಕೆ ಬಿಟ್ಟು ಹೋದೆ ಅವಳಿಗೆ ಕಟ್ಟಿಕೊಂಡು ಪೊರೆಯುವುದೇ ಕೆಲಸ ಪೊರೆಯುತ್ತಿದ್ದಾಳೆ. ಈಗ ನಿನ್ನ ಹೆಂಡತಿಗೆ ಹುಷಾರಿಲ್ಲ, ಮಕ್ಕಳಿಗೆ ಅವರದ್ದೇ ಕೆಲಸ. ಈಗ ನೀನು ಅಲ್ಲಿರಬೇಕು. ನೀನಿಲ್ಲದೆಯೂ ಸಂಸಾರವನ್ನು ಪೊರೆದದ್ದಕ್ಕೆ ಕೃತಜ್ಞತೆಯನ್ನಾದರೂ ಹೇಳುವುದು ಬೇಡವೇ? ಈಗಲೂ ನಿನ್ನ ಜವಾಬ್ದಾರಿ ನಿಭಾಯಿಸಲಿಲ್ಲ ಅಂದಮೇಲೆ ಯಾವ ಸಾಧನೆ ತೆಗೆದುಕೊಂಡು ಏನು ಮಾಡಬೇಕು? ಗೊತ್ತಲ್ಲಾ ಅಹಂಕಾರ ತೋರಿಸೋಕ್ಕೆ ಹತ್ತುವರ್ಷ ತಪಸ್ಸು ಮಾಡಿ ನೀರಿನ ಮೇಲೆ ನಡೆಯೋದನ್ನ ಕಲಿತವನ ಕತೆ ಏನಾಯಿತು ಅಂತ? ಒಬ್ಬ ದೋಣಿಯವ ತಾನು ಮಾತ್ರ ಅಲ್ಲ ತನ್ನೊಂದಿಗೆ ಹತ್ತು ಜನರನ್ನೂ ಕರೆದೊಯ್ಯಬಲ್ಲ ಎನ್ನುವ ಸತ್ಯ ಅರ್ಥ ಆಗುವಷ್ಟರಲ್ಲಿ ಅನಾವಶ್ಯ ಹತ್ತುವರ್ಷಗಳ ಆಯಸ್ಸು ಕಳೆದು ಹೋಗಿತ್ತು. ಈ ಅಹಂ ಬಿಟ್ಟು ಮೊದಲು ಊರಿಗೆ ಹೋಗು’ ಎಂದಳು. `ಇಲ್ಲ ಹೋಗುವುದಿಲ್ಲ ನಾನು ಅಲ್ಲಿ ಮುಳುಗುವುದು ಖಚಿತ’ ಎಂದರು ಸ್ವಾಮಿಗಳು. `ಆಳದಲ್ಲಿರುವ ಮುತ್ತು ರತ್ನ ವಜ್ರಗಳನ್ನು ತರಲು ಮುಳುಗುವುದೇ ದಾರಿ. ನಿನ್ನ ಹಾದಿಯಲ್ಲಿನ ಅಮೂಲ್ಯವಾದದ್ದು ನನ್ನ ಮಟ್ಟಿಗೆ ನಿನ್ನ ಹೆಂಡತಿ. ನಿನ್ನೆಲ್ಲಾ ಕರ್ತವ್ಯಗಳನ್ನು ನಿಭಾಯಿಸಿದ ನಿನ್ನ ಹೆಂಡತಿ ಈಗ ನಿನ್ನ ಜವಾಬ್ದಾರಿ ಹೋಗು ಎಂದು ಹೇಳುತ್ತಿದ್ದೇನೆ. ಮೈಮೇಲಿನ ಭಾರ ಇಳಿಸಿಕೊಂಡರೆ ಭಾರ ಇಳಿದ ಹಾಗಲ್ಲ. ಭಗವಂತ ನಮ್ಮನ್ನು ಹೀಗಿಲ್ಲಿ ಕಳಿಸಿದ್ದಾನೆ ಎಂದರೆ ಉದ್ದೇಶಗಳನ್ನು ಇಟ್ಟೇ ಕಳಿಸುತ್ತಾನೆ’ ಎಂದಳು ಕಟ್ಟ ಕಡೆಯಾದಾಗಿ ಹೇಳುತ್ತಿರುವೆ ಎನ್ನುವಂತೆ. ಮಾತು ಇಲ್ಲದಂತಾಗಿ ಸ್ವಾಮಿಗಳು ಅವಳ ಕಾಲಿಗೆ ನಮಸ್ಕರಿಸಿ ಒಳನಡೆದರು. ಮುತ್ಯಾ ಕುಳಿತೇ ಇದ್ದಳು. ಹಳ್ಳಿಯ ಜನಕ್ಕೂ, ಶಕ್ತಿಯನ್ನು ಸಾಧಿಸಿಕೊಂಡ ಈ ಸ್ವಾಮಿಗೂ ಒಂದೇ ಸಮನಾಗಿ ಹೇಳುವ ತಾಕತ್ತು ನನ್ನ ಮುತ್ಯಾನದ್ದು ಎನ್ನಿಸಿ ಅವಳ ಬಗ್ಗೆ ಹೆಮ್ಮೆ ಅನ್ನಿಸಿತು. `ಮುತ್ಯಾ ಮಲಗಿಕೋ ನಾಳೆ ಬೆಳಗ್ಗೆ ಬೇಗ ಏಳಬೇಕಲ್ಲಾ’ ಎಂದೆ. ಸಣ್ಣ ಮಗುವಿನ ಹಾಗೆ ನನ್ನ ಮಾತನ್ನು ಕೇಳಿ ಮಲಗಿಯೇ ಬಿಟ್ಟಳು. ನಾನವಳನ್ನು ನನಗೆ ಅರಿವಿಲ್ಲದೆ ತಟ್ಟುತ್ತಲಿದ್ದೆ. ನಿದ್ದೆ ನಮ್ಮಿಬ್ಬರಿಗಾಗಿ ಕಾಯುತ್ತಲಿತ್ತು.

ಈ ಅಂಕಣದ ಹಿಂದಿನ ಬರೆಹಗಳು:
ಭಾವಶುದ್ಧಿಯೇ ಆಧ್ಯಾತ್ಮ
ಕಿರಿದನ್ನು ಕಿರಿದರಲ್ಲೇ ನೋಡು
ಅನುಭವದಲ್ಲಿ ಘನೀಭವಿಸುವ ವಿಶ್ವದ ರಹಸ್ಯಮಯ ಸಂಗತಿಗಳು

ಬಿಟ್ಟುಬಿಡುವುದೆಂದರೂ ಕಟ್ಟಿಕೊಳ್ಳುವುದೇ
ಗಾಳದ ದಾರ ದೂರಕ್ಕೆ ಬಿಡುವುದು ಮೀನಿನ ಆಸೆಗೆ
ಕಳಚಿಕೊಳ್ಳುವುದೂ ಆಟದ ಭಾಗವೇ.
ಸರಿದ ಸೆರಗಿನಲ್ಲಿ ಅಡಗಿದ್ದು ಸೂರ್ಯ ಚಂದ್ರ
ಪ್ರಾರ್ಥನೆ; ಪದಾರ್ಥವಲ್ಲ, ಪರಾರ್ಥ
ಜಗತ್ತಿನ ಮೇರು ತಾಯಿ
ನಿಧಿಯ ಕನವರಿಕೆ
ಅವಳ ಧ್ಯಾನಕ್ಕೆ ಒಳಿತೇ ಗುರಿ
ಅನುಬಂಧಗಳ ಲೀಲೆ
ಕನಸಿನೊಳಗಿನ ನನಸು
ನೀಲಿ ಕಣ್ಣುಗಳ ಮುತ್ತಜ್ಜಿ ಮತ್ತು ನಾನು

 

 

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...