ಕಂದನಂತೆ ಚಂದಿರನ ಬಾನು ಎತ್ತಿ ಆಡಿಸುತಲಿಹುದು

Date: 24-10-2022

Location: ಬೆಂಗಳೂರು


ಈಗಲೂ ನನಗೆ ಕಥೆ ಪೂರ್ತಿ ಅರ್ಥ ಆಗಿಲ್ಲ. ಆದರೆ ಅವಳು ಕಥೆ ಹೇಳಿದ ಚಂದ ಮಾತ್ರ ನನ್ನೊಳಗೆ ಅಚ್ಚಳಿಯದೆ ಉಳಿದಿದೆ, ಬಾನು ಚಂದಿರನನ್ನು ಕಂದನಂತೆ ಎತ್ತಾಡಿಸಿದ ಆ ರಾತ್ರಿ ಕೂಡಾ ಎನ್ನುತ್ತಾರೆ ಲೇಖಕಿ ಪಿ. ಚಂದ್ರಿಕಾ. ಅವರು ತಮ್ಮ ತೇಲುವ ಪಾದಗಳು ಅಂಕಣದಲ್ಲಿ ಮುತ್ಯಾ ಕುರಿತ ಇನ್ನಷ್ಟು ಬೆರಗಿನೊಂದಿಗೆ ಕಥೆಯೊಂದನ್ನು ನೆನಪಿಸಿಕೊಂಡಿದ್ದಾರೆ.

ನಿದ್ರೆ ಕಾಯುತ್ತಿತ್ತು ನಿಜ, ಆಕಾಶದಲ್ಲಿ ಚಂದ್ರನನ್ನು ಸುತ್ತುವರೆದ ಮೋಡ ತಾಯ ಸೆರಗಂತೆ ಭಾಸವಾಯಿತು. ಕಾಯುವಿಕೆಗೂ ಮಿಗಿಲಾದ ಎಚ್ಚರದ ಮಾತುಗಳು ನಮ್ಮನ್ನು ಪೊರೆಯುವಂತೆ ಸುತ್ತುತ್ತಲಿದ್ದವು. ನನಗೆ ಕುತೂಹಲ, `ಮುತ್ಯಾ ಸಾಧನೆ ಎಂದರೇನು? ನೀನು ಹೇಳಿದ್ಯಲ್ಲಾ ನೀರ ಮೇಲೆ ನಡೆಯುವುದಾ?’ ಎಂದೆ. `ಮಲಗಿಕೋ ಎಂದು ನೀನೇ ಹೇಳಿದ ಮೇಲೂ, ಮತ್ತೆ ಎಬ್ಬಿಸಿ ಕೇಳ್ತಾ ಇದೀಯಲ್ಲಾ?’ ಎಂದಳು ಮುತ್ಯಾ. `ಹಾಗಲ್ಲ ಮುತ್ಯಾ, ಸ್ವಾಮೀಜಿಗೆ ದೊಡ್ಡ ಶಕ್ತಿ ಇದೆ ಅಂತ ಬಂದವರೆಲ್ಲಾ ಮಾತಾಡುತ್ತಿದ್ದರು. ಚಿಕ್ಕಿ ಕೂಡಾ ಹೇಳಿದಳು, ನೀನು ಮಾತ್ರ ಅವರನ್ನು ಅಷ್ಟು ಬೈತಾ ಇದ್ದೆ’ ಎಂದೆ. `ನಾನು ಹೇಳಿದ್ದು ನಿನಗೆ ಬೈಗುಳದ ಹಾಗೆ ಕಂಡಿತಾ? ಹಾಗಾದರೆ ಸ್ವಾಮೀಜಿಗೂ ಹಾಗೇ ಅನ್ನಿಸಿರಲಿಕ್ಕೂ ಸಾಕು’ ಎಂದಳು. ನಾನು ಬಿಡಲಿಲ್ಲ ಮುತ್ಯಾ ಉತ್ತರ ಹೇಳು ಎಂದು ದುಂಬಾಲು ಬಿದ್ದೆ. `ನನ್ನ ಗುರಿ ಯಾವುದೋ ಇದೆ ಎಂದು ಮುನ್ನಡೆಯುತ್ತೇವೆಯೋ ಅದನ್ನು ದೊರಕಿಸಿಕೊಳ್ಳುವುದೇ ಸಾಧನೆ ಅಂತ ಈ ಜಗತ್ತು ನಂಬಿಬಿಟ್ಟಿದೆ’ ಎಂದಳು. `ಸಾಧನೆ ಮಾಡಿದವರು ದೊಡ್ಡವರಾಗುತ್ತಾರಾ?’ ಎಂದೆ ಮತ್ತಷ್ಟು ಕುತೂಹಲದಿಂದ. ನಿಟ್ಟುಸಿರಿಟ್ಟಳು ಮುತ್ಯಾ, `ಮನುಷ್ಯನ ಸಾಧನೆ ಏನು ಅಂತ ಹೇಗೆ ಹೇಳುವುದು? ಹುಟ್ಟಿ ಸಾಯುವ ಮಧ್ಯದಲ್ಲಿ ತನಗೇನೋ ಅಪರೂಪಕ್ಕೆ ಕಂಡಿತು ಎಂದುಕೊಂಡು ಬಿಡುತ್ತಾನೆ. ಹಾಗನ್ನಿಸಿದ ತಕ್ಷಣ ಅವನಿಗೊಂದು ಪದವಿ ಸಿಕ್ಕಿಬಿಡುತ್ತದೆ. ವಿಚಿತ್ರ ಎಂದರೆ ಈ ಭೂಮಿಯ ಮೇಲೆ ಹೀಗಂದುಕೊಂಡವರು ಎಷ್ಟು ಜನವೋ. ನಮ್ಮನ್ನು ಕಂಡ ಭೂಮಿ ಮಾತ್ರ ಹಾಗೇ ಇದೆ. ಏನೋ ಕಂಡ ತಕ್ಷಣ ಅದೇ ಸಾಧನೆ ಎಂದುಕೊಳ್ಳುತ್ತೇವೆ. ಅದು ನನಗೆ ಕಂಡಿದ್ದು ಅಲ್ಲ. ಅದೇ ನಮ್ಮನ್ನು ನೋಡಿದೆ ಎಂದು ಯಾಕೆ ಅಂದುಕೊಳ್ಳುವುದಿಲ್ಲ, ಹಾಗಂದುಕೊಂಡರೆ ಮದ ತಲೆಗೆ ಹತ್ತುವುದಿಲ್ಲ’ ಎಂದಳು. `ಅದು ಎಂದರೆ ಯಾವುದು?’ ಎಂದೆ. `ನಿನಗೆ ಒಂದು ಕಥೆ ಹೇಳುವೆ ಕೇಳು’ ಎಂದಳು ಮುತ್ಯಾ. ರಾತ್ರಿಯ ನೀರವತೆಯಲ್ಲಿ ಅವಳು ನನಗೆ ಕಥೆ ಹೇಳುವುದು ನಾನು ಕೇಳುವುದು ಎರಡು ಹೊಸದಲ್ಲ. ಆದರೆ ಹೇಳುವ, ಕೇಳುವ ನಮ್ಮ ಉತ್ಸಾಹ ಎರಡು ಹೊಸದೇ. ನನ್ನ ಎಳೆಯ ಕೈಗಳನ್ನು ತನ್ನ ಕೆನ್ನೆಗೆ ಒತ್ತಿಕೊಂಡಳು.

ಆಗ ತಾನೆ ತಾಯ ಮಡಿಲಿಂದ ಸಿಡಿದ ಹುಲ್ಲಿನ ಬೀಜ ನೆಲಕ್ಕೆ ಬಿದ್ದು ಸುತ್ತಲೂ ನೋಡಿತು. ಜಗತ್ತು ಎಂಥಾ ಸುಂದರ! ತಲೆ ಎತ್ತಿದರೆ ಕಣ್ಣ ತುಂಬುವಷ್ಟು ಆಕಾಶ, ಹಗಲಲ್ಲಿ ಥಳ ಥಳ ಹೊಳೆಯುತ್ತಿತ್ತು. ಹೊಳೆವ ಆಕಾಶ ಹುಲ್ಲಿನ ಬೀಜದ ಕಣ್ಣನ್ನು ತುಂಬಿ ಅಚ್ಚರಿಯಿಂದ ನೋಡಿತು. ಆಕಾಶ ಅದರ ಅಚ್ಚರಿಯನ್ನು ನೋಡಿ ನಕ್ಕಿತು. ಸಣ್ಣ ತೇವದ ಖುಷಿಯ ಮೈಗೆ ಹತ್ತಿಸಿಕೊಂಡು ಕಣ್ಣ ತೆರೆಯುತ್ತಾ ಮೈ ಮುರಿದು ಬೀಜ ಹಾಯೆಂದಿತು. ನಿಶ್ಚಲವಾದ ಆಕಾಶ ನೀಲಿಯಲ್ಲಿ ತನ್ನ ಪಾಡಿಗೆ ತಾನಿತ್ತು.

ಕಣ್ಣೊಡೆದು ನಿಂತ ಬೀಜ ಬೆಚ್ಚನೆಯ ಮಣ್ಣೊಳಗೆ ನೀರ ತಂಪನ್ನು ಹುಡುಕುತ್ತಾ ಬೇರ ಕೈಗಳನ್ನ ಅರಳಿಸುತ್ತಾ ಸಮನಾಗಿ ಗರಿಗಳನ್ನು ಅರಳಿಸಿತು, ತನ್ನ ಚಂದಕ್ಕೆ ತಾನೇ ಆನಂದಪಡುತ್ತಾ. `ಹೀಗೆ ಈ ದಿಕ್ಕಿಗೆ ಗರಿಯ ಚಾಚು ಹೀಗೆ ಕುಡಿಯೊಡೆಯಲು ನನಗ್ಯಾರು ಹೇಳಿಕೊಟ್ಟರು? ನೋಡು ನನ್ನ ಪಾಡಿಗೆ ನಾನು ಹೇಗೆ ಅರಳುತ್ತಿದ್ದೇನೆ?’ ಹುಲ್ಲ ಬೀಜಕ್ಕೆ ಗರಿಯ ಹೆಮ್ಮೆಯು ಮೂಡಿ ಎದೆ ಸೆಟೆಸಿ ನಿಂತಾಗ ಆಕಾಶ ಮತ್ತೆ ನಕ್ಕಿತು. `ಅರೆ ಆಕಾಶ ನೀನು ನನ್ನ ನೋಡಿ ನಗುತ್ತೀಯಾ?’ ಅಚ್ಚರಿಯಿಂದ ಕೇಳಿತು. ಆಕಾಶಕ್ಕೆ ಈಗ ಹುಲ್ಲ ಗರಿಯ ಜೊತೆ ಮಾತಾಡಲೇ ಬೇಕೆನ್ನಿಸಿತು.

`ಏ ಹುಲ್ಲೇ ನಿನ್ನ ಉತ್ಸಾಹಕ್ಕೆ ನಗು ಬಂತು. ನಿಜಕ್ಕೂ ನೀನು, ನಿನ್ನೊಳಗಿನ ಉತ್ಸಾಹ ಎರಡೂ ಅದ್ಭುತ’. ಹುಲ್ಲಿಗೆ ನೂರ್ಮಡಿಸಿದ ಉತ್ಸಾಹ. `ಆಕಾಶ ನಿಜ ಹೇಳ್ತಾ ಇದೀಯಾ? ನಾನು ಇಷ್ಟೇ ಇಷ್ಟು ನೀನೋ ಅಷ್ಟು. ನಾನು ನಿಂಗೆ ಕಂಡಿದ್ದಾದ್ರೂ ಹೇಗೆ?’ ಆಕಾಶ ಉಲಿಯಿತು, `ನಿಜ ಎಳೆಯ ಹುಲ್ಲೆ ನಿನ್ನ ಉತ್ಸಾಹವನ್ನು ನಾನು ಎದೆಯಲ್ಲಿ ತುಂಬಿಕೊಂಡೆ. ಅದು ನನ್ನೆದೆಗೆ ಹಿಗ್ಗನ್ನ ತಂದಿದೆ. ಅದಕ್ಕೆ ನೀನು ನನಗೆ ಕಾಣಿಸಿದ್ದು’. ಹುಲ್ಲಿಗೆ ಹೆಮ್ಮೆ ಎನ್ನಿಸಿತು. ಹುಲ್ಲಗರಿ ತನ್ನ ಜೊತೆಗಾರರನ್ನು ಕೇಳಿತು. `ನಿನ್ನೊಂದಿಗೆ ಆಕಾಶ ಯಾವತ್ತಾದರೂ ಮಾತಾಡಿದೆಯಾ?’ ಮಿಕ್ಕ ಹುಲ್ಲುಗಳಿಗೆ ಆಶ್ಚರ್ಯ, `ನಮ್ಮ ಜೊತೆ ಮಾತಾಡದ ಆಕಾಶ ನಿನ್ನೊಂದಿಗೆ ಮಾತ್ರ ಹೇಗೆ ಮಾತಾಡಿತು?’

ಹುಲ್ಲು ಆಕಾಶ ಮತ್ತೆ ಮತ್ತೆ ಮಾತಾಡತೊಡಗಿದವು. ಮುಗಿದರೂ ಮುಗಿಯದ ಉಳಿದರೂ ಉಳಿಯದ ಕೊನೆಯೇ ಕಾಣದ ಆ ಮಾತುಗಳ ಗುಂಗಿನೊಳಗೆ ಹುಲ್ಲೂ ಸೇರಿಹೋಯಿತು. ಆಕಾಶವೂ ಕರಗಿಹೋಯಿತು. ಮಾತು ಮರೆಯುವ ಮುನ್ನ ಮಾತಾಡಿ ಮುಗಿಸುವ ಹುಮ್ಮಸ್ಸು ಇಬ್ಬರದ್ದೂ. ಹಗಲ ಬೆಳಕಲ್ಲಿ ಸಂಜೆಯ ಮಬ್ಬಿನಲ್ಲಿ ಇರುಳ ನೆರಳಲ್ಲಿ ಮುಂಬೆಳಗಿನ ಉತ್ಸಾಹದಲ್ಲಿ ಆಡಿದ ಮಾತುಗಳಿಗೆ ಲೆಕ್ಕವಿಲ್ಲ ಕಳಿಸಿದ ಸಂದೇಶಕ್ಕೆ ಕೊನೆಯಿಲ್ಲ. ಹುಲ್ಲು ಇಬ್ಬನಿಯ ಮೈಗೆ ಹೊದ್ದು ಒದ್ದೆಯಾಗಿ ನಡುಗುವಾಗ ನಿಶ್ಚಲವಾಗಿತ್ತು ಆಕಾಶ. ಹುಲ್ಲಿಗೋ ಕೊನೆಯಿಲ್ಲದ ಹೆಮ್ಮೆ, ಅನಂತ ಆಕಾಶದ ಎದೆಯಲ್ಲಿ ತಾನು ಶಾಶ್ವತವಾಗಿ ನಿಂತು ಬಿಟ್ಟೆ ಎಂದು. ಇಬ್ಬರ ನಡುವೆ ಅಂತರ ಕಳೆಯಿತು. ಆಕಾಶದ ಅಂಗೈಯ ಬಿಸಿಗೆ ಕರಗುವ ಹುಮ್ಮಸ್ಸು ಹುಲ್ಲಿಗೆ. `ಜಗತ್ತಿನ ಅದ್ಭುತವೊಂದು ಘಟಿಸಲಿ’ ಹುಲ್ಲು ಆಕಾಶಕ್ಕೆ ಕೇಳಿತು. ಹುಚ್ಚುಗಾಳಿಗೆ ಮದವೇರಿ ಸುಮ್ಮನೆ ಬೀಸಿ ಬಿಟ್ಟಿತು. ಹುಲ್ಲಗರಿ ಹೇಳಿದ್ದು ಆಕಾಶಕ್ಕೆ ಕೇಳಲಿಲ್ಲ. ಆಕಾಶ ಉತ್ತರ ಹೇಳಲಿಲ್ಲ.

ಹುಲ್ಲಿಗೆ ಮುನಿಸು ಮೂಡಿತು. ರಾತ್ರಿಯೆಲ್ಲಾ ಕಾದು ಹಗಲು ಮೂಡುವಾಗ ಆಕಾಶದೊಂದಿಗೆ ಹೇಳಿತು, `ನೀನು ಕೆಟ್ಟವನು’. ಆಕಾಶಕ್ಕೆ ಅಚ್ಚರಿ `ಯಾಕೆ?’ `ನಾನು ನಿನ್ನ ಏನೋ ಕೇಳಿದೆ ನೀನು ಉತ್ತರ ಹೇಳಲಿಲ್ಲ’. `ಪ್ರಶ್ನೆಯೇ ಕೇಳಲಿಲ್ಲ ಅಂದರೆ ಉತ್ತರ ಎಲ್ಲಿ ಹೇಳಲಿ? ಇವತ್ತು ಜಗದ ಪರಿಭ್ರಮಣದ ಬಗ್ಗೆ, ಮಾತುಕಥೆ ಇದೆ. ಅದನ್ನ ಮುಗಿಸಿಕೊಳ್ಳುವೆ ಸಂಜೆ ಮತ್ತೆ ನಿನ್ನ ಜೊತೆ ಮಾತಾಡುವೆ, ಆಮೇಲೆ ನಿನ್ನ ಪ್ರಶ್ನೆ ಕೇಳು’.

ಸಂಜೆ ಹೀಗೆ ಹುಲ್ಲು ಮತ್ತೆ ಕೇಳುವಾಗ ಕೆಟ್ಟ ಮಳೆಗೆ ಹೊಟ್ಟೆ ಕಿಚ್ಚು ಬಂದು ಜೋರಾಗಿ ಸುರಿದು ನೆಲಕ್ಕೆ ಮುಳುಗಿಸಿ ಬಿಟ್ಟಿತು. ಹುಲ್ಲಗರಿ ತನ್ನ ಕೇಳಬಹುದಾದ ಪ್ರಶ್ನೆ ತನ್ನಲ್ಲೇ ಉಳಿದಿದ್ದಕ್ಕೆ ನೊಂದುಕೊಂಡಿತು. ಮಳೆ ಮುಗಿದ ಮೇಲೆ ಹುಲ್ಲು ಮಾತಾಡಲಿಕ್ಕೆ ನೋಡಿತು. ಆಕಾಶಕ್ಕೆ ಬಿಡುವಿಲ್ಲದ ಕೆಲಸವಿತ್ತು.

ಕತ್ತಲನ್ನು ಸೀಳಿ ಬರುವ ಬೆಳಗಿಗೆ ಕಾದುಕೂತ ಗರಿಗೆ ಮೈಲಿ ಎಂಥದ್ದೋ ಆಯಾಸ. ತಾನು ಸ್ಪಷ್ಟವಾಗೇ ಕೇಳಿದೆನಲ್ಲವೇ ಯಾಕೆ ಮಾತನಾಡಲಿಲ್ಲ ಆಕಾಶ? ಬೆಳಕನ್ನು ಬೆಳಕಿನಿಂದಲೇ ಅಳೆಯಬೇಕಲ್ಲವೇ! ಕಾದುಕೂತ ಹುಲ್ಲಿಗೆ ಸುಮ್ಮನೆ ಚಡಪಡಿಕೆ. ತನ್ನ ಅಂಗೈಲಿ ಆಕಾಶ ಏಕಿಲ್ಲ? ಇರಬೇಕಿತ್ತು ಅದರಲ್ಲಿ ಸರಿದಾಡುವ ಮೋಡ, ಹಾರಾಡುವ ಹಕ್ಕಿ, ಚುಕ್ಕಿ, ಸೂರ್ಯ, ಚಂದ್ರ ಎಲ್ಲ ಎಲ್ಲಾ. . . .

ಮಳೆ, ಚಳಿ, ಗಾಳಿ ಹೀಗೆ ಕಾರಣಗಳು ಸಾವಿರ ಹುಲ್ಲಿನೊಂದಿಗೆ ಆಕಾಶ ಮಾತಾಡಲು ಆಗಲೇ ಇಲ್ಲ. ಕಾರಣ ಏನೇ ಇದ್ದರೂ ಹುಲ್ಲು ಮಂಕಾಯಿತು. ಆಕಾಶಕ್ಕೆ ಬಿಡುವಿಲ್ಲದ ಕೆಲಸ. ಪರಿಭ್ರಮಿಸುವ ಸೂರ್ಯಚಂದ್ರರನ್ನು ಮಾತಾಡಿಸಬೇಕು ಓಡಾಡುವ ಮೋಡಕ್ಕೆ ಸೂಚನೆ ಕೊಡಬೇಕು, ಹಾರಾಡುವ ಹಕ್ಕಿಗೆ ಎಚ್ಚರಿಕೆ... ಹೀಗೆ ನಿರಂತರ ಕೆಲಸಕ್ಕೆ ತೊಡಗಿಕೊಂಡಿತ್ತು. ನಡುವೆ ಹುಲ್ಲ ಗರಿಗೆ ಎಂದಿತ್ತು, `ಸ್ವಲ್ಪ ಇರು ನಿನ್ನ ಜೊತೆ ಮಾತಾಡುವ ಹಂಬಲ ನನ್ನದು ಆದರೆ ಏನು ಮಾಡಲಿ? ಅರ್ಥ ಮಾಡಿಕೋ ನನ್ನ’.

ಹುಲ್ಲಗರಿಯ ಒಡಲಲ್ಲಿ ಹೂವರಳುವ ಸಂಭ್ರಮ. ಎಲ್ಲಿಂದಲೋ ಮಕರಂದ ಪಾತ್ರಗಳ ಹೊತ್ತ ಗಾಳಿಗೆ ತಾಕಿ ಹೋಗುವ ಹುಚ್ಚು. ಬಯಲಲ್ಲಿ ಸುಮ್ಮನೆ ನಿಂತ ಹುಲ್ಲನ್ನೂ ತಾಕಿ ಹೋಯಿತು. ಅಣುರೇಣುವಾಗಿದ್ದ ಪರಾಗ ಹುಲ್ಲ ಒಡಲನು ತಾಕಿ ಹೂವು ಬೀಜವಾಗಿ ತೆನೆ ತೂಗಿತು. `ನೋಡು ನಾನು ಹೀಗೆ ಹಣ್ಣಾಗಿದ್ದೇನೆ, ಹೆಣ್ಣಾಗಿದ್ದೇನೆ’ ಆಕಾಶಕ್ಕೆ ಹುಲ್ಲು ಹೇಳಿತು. ಆಕಾಶಕ್ಕೆ ಬಿಡುವಿಲ್ಲದ ಕೆಲಸ. ಅಲ್ಲಿಂದಲೇ ಕಣ್ಣರಳಿಸಿ ಹುಲ್ಲ ಹರಸಿತು. ತನ್ನ ಸಂಭ್ರಮದಲ್ಲಿ ಆಕಾಶಕ್ಕೆ ಆಸಕ್ತಿಯಿಲ್ಲ ಎಂದು ಆಕಳಿಸಿತು.

ಇಬ್ಬನಿಯ ಚಳಿಗೆ ನಡುಗಿ ಸೂರ್ಯನ ಶಾಖಕ್ಕೆ ನಲುಗಿದ ಗರಿ ತನ್ನ ಎಳವೆಯನ್ನು ಕಳೆದುಕೊಂಡು ಕಡು ಹಸಿರಾಗುತ್ತಿತ್ತು. ಸುತ್ತಲಿನ ಹೊಸ ಹುಲ್ಲುಗಳು ನಲಿಯುತ್ತಿದ್ದವು. ಅವಕ್ಕೆ ಯಾವ ಹಂಗೂ ಇರಲಿಲ್ಲ. ಕೊರಗೂ ಇರಲಿಲ್ಲ. ಈ ಹುಲ್ಲು ಮಾತ್ರ `ನಾನು ಆಕಾಶದ ಜೊತೆ ಮಾತಾಡಬಾರದಿತ್ತು. ಮಾತಾಡಿದ್ದರಿಂದಲೇ ಎಲ್ಲರಿಗಿಂತ ನಾನು ಬೇರೆ ಅನ್ನಿಸಿತು. ಆದರೆ ಇವರೆಲ್ಲರಿಗಿಂತ ನಾನು ಹೇಗೆ ಬೇರೆ?’ ಹುಲ್ಲು ಯೋಚಿಸಿತು. ಒಡಲ ಫಲಕೆ ಬಾಗುತ್ತಾ ಚೆಲುವ ಚೆಲ್ಲುತ್ತಿದ್ದ ಆ ಹುಲ್ಲಗಿಡಕೆ ಈಗ ಮೈಯ್ಯಲ್ಲಿ ಆಲಸ್ಯ.

ಕೆಲಸಕ್ಕೆ ಬಿಡುವು ಸಿಕ್ಕಂತೆ ಮತ್ತೆ ಆಕಾಶ ಮಾತಾಡಿಸಿತು, `ಹುಲ್ಲೇ ನಾನು ಮಾತಾಡಿದಾಗ ನೀನು ಮಾತಾಡಬೇಕು. ನನ್ನ ನಿರ್ಬಂಧಿಸಬೇಡ ಇದು ನನ್ನ ಅನಿವಾರ್ಯ. ನಿನಗೆ ಬೇಕಾಗಿದ್ದ ನಾನು ಕೊಡುವೆ. ನಿನ್ನ ನಾನು ಮರೆಯೊಲ್ಲ. ನಿನ್ನೊಳಗೆ ಮೂಡಿದ್ದ ಪುಳಕಗಳ ಅಲೆಯ ನನ್ನ ಎದೆಯಲ್ಲಿ ಅಡಗಿಸಿಟ್ಟುಕೊಂಡಿದ್ದೇನೆ. ಅದು ನನ್ನೆದೆಯಲ್ಲಿ ಅಲೆದಾಡುತ್ತಿದೆ. ಅಚ್ಚರಿಯಿಂದ ಬೊಗಸೆಗೆ ಒಪ್ಪಿಸಿಕೊಂಡಿದ್ದೇನೆ.’ ಆಕಾಶದ ಮಾತಿಗೆ ಹುಲ್ಲಿಗೊಂದಿಷ್ಟು ಸಮಾಧಾನ. ಇಬ್ಬರೆದೆಯೂ ಈಗ ಹಗುರ. ಆಕಾಶ ಮತ್ತೆ ಕೇಳಿತು, `ಈಗ ಹೇಳು ಯಾರೂ ನಮ್ಮನ್ನು ಅಡ್ಡಿಪಡಿಸಲಾರರು ನಿನ್ನ ಮನದಾಳದ ಮಾತೇನು?’ ಹುಲ್ಲಗರಿಗೆ ಮತ್ತೆ ಚಿಲುಮೆ ಚಿಮ್ಮುವ ಉತ್ಸಾಹ. `ಆಕಾಶವೇ ನಾನು ಎಷ್ಟು ದಿನ ಬದುಕಿರಬಲ್ಲೆ ನನ್ನ ಮಡಿಲಲ್ಲಿ ಫಲ ತೂಗುತ್ತಿದೆ ಇನ್ನು ಕೆಲವೇ ದಿನಗಳಷ್ಟೇ. ಅಷ್ಟರಲ್ಲಿ ಜಗತ್ತು ಮರೆಯದ ಒಂದು ಅದ್ಭುತ ನನ್ನ ನಿನ್ನ ನಡುವೆ ಘಟಿಸಬೇಕು. ಅದನ್ನು ಜಗತ್ತು ಮತ್ತೆ ಮತ್ತೆ ನೆನೆಸಿಕೊಳ್ಳುತಿರಬೇಕು. ನೀನು ನನ್ನೊಳಗೆ ಇಳಿಯಬೇಕು ಫಲತುಂಬಿದ ನನ್ನ ಒಡಲಲ್ಲಿ ನೀನು ಪ್ರತಿಫಲಿಸಬೇಕು ಆಗುವುದೇ?’ ಆಕಾಶಕ್ಕೆ ಏನು ಹೇಳಬೇಕೆಂದು ತಿಳಿಯದ ಗೊಂದಲ. ಸುಮ್ಮನೆ ಉಳಿಯಿತು. ಹುಲ್ಲಿಗೆ ತಾನು ಕೇಳಿದ್ದನ್ನ ಆಕಾಶಕ್ಕೆ ಕೊಡಲು ಸಾಧ್ಯವೋ ಇಲ್ಲವೋ ಎನ್ನುವ ಸಂದೇಹ ಶುರುವಾಯಿತು. ಆಕಾಶದಲ್ಲಿ ಕೆಂಪಿನೋಕಳಿ. ಮೆಲ್ಲಗೆ ಕಣ್ಣುತೆರೆಯುತ್ತಿದ್ದ ನಕ್ಷತ್ರಗಳ ಮುಖಕ್ಕೆ ಮುದ್ದಿಡುವ ಚಂದ್ರ ತೇಲುತ್ತಾ ಬಂದ. ಗರಿಗೆ ಆಕಾಶ ಇವತ್ತೂ ಏನೂ ಹೇಳದೆಯೇ ಹೋಗುತ್ತದಾ? ಸಂಜೆ ಸಮರಾತ್ರಿಗಳಿಗೆ ಹಾದಿ ತೆರೆಯುತ್ತಿದ್ದಂತೆ ಅದರ ಎಲ್ಲ ಗೊಂದಲವನ್ನು ಮೆಟ್ಟುವಂತೆ ಹುಲ್ಲಿಗೆ ಹೇಳಿತು ಆಕಾಶ, `ಏ ಹುಲ್ಲೇ ಬೆಳಗು ರಾತ್ರಿಗಳು ಒಂದಾಗುವ ಸಮಯಕ್ಕೆ ನಿನ್ನ ಮೇಲೆ ನಾನು ಬಾಗುತ್ತೇನೆ ಆಯಿತೆ?’ ಹುಲ್ಲಗರಿ ತನ್ನ ಪುಟ್ಟ ಕಣ್ಣುಗಳನ್ನ ಬಿಟ್ಟು ಅಲೆಯಲೆಯಾದ ತನ್ನ ಗರಿಯನ್ನು ಆಡಿಸಿ ನಕ್ಕಿತು. ಆಕಾಶಕ್ಕೆ ಈಗ ಒಂದೇ ಚಿಂತೆ ಹುಲ್ಲ ಮೇಲೆ ನಾನು ಹೇಗೆ ಬಾಗಲಿ?

ರಾತ್ರಿಯೆಲ್ಲಾ ಹುಲ್ಲಿಗೆ ಎಲ್ಲ ಗೆಳೆಯರ ಜೊತೆ ಮಾತೇ ಮಾತು. ಆಕಾಶದ ಸಂಭ್ರಮವನ್ನು ತನ್ನ ಒಡಲಿಗೆ ತಂದುಕೊಳ್ಳುವ ಧ್ಯಾನ. ಆಡಿಕೊಂಡವರಿಗೆ ನಾಳೆ ಬೆಳಗಿಗೆ ಕಾಯುವ ತಾಕೀತು. ಕೊಟ್ಟ ಮಾತಿಗೆ ಆಕಾಶ ತಪ್ಪಲ್ಲ.

ಸಣ್ಣ ಹುಲ್ಲಾದರೇನು ಆ ಭಗವಂತ ಅದನ್ನು ತನ್ನ ಸುಪರ್ದಿಗೆ ಬಿಟ್ಟಿದ್ದು ತಾನೆ? ತಾನೇ ಅದಕ್ಕೆ ಜವಾಬ್ದಾರಿ, ಅದರ ಸಂತಸವನ್ನು ಉತ್ಸಾಹವನ್ನು ಕಣ್ಣಲ್ಲಿ ತುಂಬಿಕೊಂಡಿದ್ದು ತಾನೇ ಅಲ್ಲವೇ? ಅದಕ್ಕಾಗಿಯಾದರೂ ತಾನದರ ಮಾತನ್ನು ನಡೆಸಿಕೊಡಬೇಕು. ಆಕಾಶ ನಿರ್ಧಾರಕ್ಕೆ ಬಂತು.

ಬೆಳಕ ಕಿರಣಗಳಿಗೆ ಆಕಾಶ ಬಣ್ಣ ತುಂಬುವುದಕ್ಕೆ ಹೇಳಿತು. ಬಣ್ಣ ಗೋಲಗಳಲ್ಲಿ ಭ್ರಮೆಯನ್ನು ತುಂಬಿತು. ಆಕಾಶದ ವರ್ಣಮಯ ಆರ್ಣವದ ಮಾತುಗಳು ಹುಲ್ಲ ಕಿವಿದೆರೆಗೆ ಬೀಳುವಾಗ ಹುಲ್ಲೆಂಬ ಹುಲ್ಲು ತಾನು ಹುಲ್ಲೆಂಬುದನ್ನೂ ಮರೆತು ಬೆಳಕಲ್ಲಿ ಒಂದಾಯಿತು. ತನ್ನ ಮೇಲೆ ಬಣ್ಣಗಳು ಬಾಗಿದ್ದೋ ಆಕಾಶವೇ ಬಾಗಿದ್ದೋ ತಿಳಿಯಲಿಲ್ಲ. ಮತ್ತೆ ತಿಳಿಬೆಳಕ ಸುಳಿಯಲ್ಲಿ ಮೀಯುವಾಗ ಆಕಾಶ ಹುಲ್ಲಿನೆಸಳನ್ನು ಕೇಳಿತು, `ಹುಲ್ಲೆ ಹುಲ್ಲೆ ನಿನ್ನ ಮಾತನ್ನು ನಾನು ನಡೆಸಿಕೊಟ್ಟಿದ್ದೇನೆ’. `ನಿಜ ಆಕಾಶವೆಂಬ ನೀನು ಘನವಂತ, ಹುಲ್ಲ ಎಸಳೆಂಬ ನನ್ನ ಕಿರಿಮೆಗೆ ಇಷ್ಟು ಪ್ರೀತಿಯನ್ನು ತೋರಿಸಿದೆ. ಅಷ್ಟು ಸಾಕಲ್ಲವೇ ನನಗೆ. ಇಡೀ ಸೃಷ್ಟಿಯ ಸಮಸ್ತಕ್ಕೂ ನಾನು ವಿಶೇಷವಲ್ಲವೇ?’ ಹುಲ್ಲು ಉಲಿಯಿತು.

ಹಸಿರು ಹಳದಿಯಾಗಿ ಹಳದಿ ಬಿಳುಪಾಗಿ ಒಡಲಿನಲಿಟ್ಟುಕೊಂಡ ಬೀಜಗಳ ನೆಲಕ್ಕೆ ಚೆಲ್ಲಿ ಶೂನ್ಯದಲಿ ಶೂನ್ಯವಾಗುತ್ತಾ ಹುಲ್ಲು ಆಕಾಶವನ್ನು ತುಂಬಿಕೊಂಡಿತು. ಆಕಾಶಕ್ಕೆ ಸಣ್ಣ ದುಃಖ. ಒರೆಸಿಕೊಂಡ ತನ್ನ ಕಣ್ಣನ್ನು ಮತ್ತೆ ತಿರುಗಿಸಿ ನೋಡಿತು. ಹುಲ್ಲ ಜಾಗದಲ್ಲಿ ಖಾಲಿತನ ಎದ್ದು ಕಂಡಿತು. ಅದನ್ನು ತುಂಬಿಕೊಳ್ಳುವುದು ಹೇಗೆ? ಹಾಗೆ ಯೋಚಿಸುವಾಗಲೇ ಯಾವುದೋ ಒಡಲಿಂದ ಸಿಡಿದು ಬಿದ್ದು ಒದ್ದೆ ತೇವದ ಹಂಗಿಗೆ ಗರಿಯನ್ನು ಅರಳಿಸುತ್ತಾ ಮಾಟವಾದ ತನ್ನ ಕಣ್ಣನ್ನು ತಿರುಗಿಸಿತು ಇನ್ನೊಂದು ಹುಲ್ಲ ಎಸಳು. ಎಳೆಯ ಮಿಂಚಲ್ಲಿ ಸಂಚಾದ ಹಸಿರಿನಲಿ ಗಾಳಿಗೆ ತಲೆ ತೂಗಿತು. ಆಕಾಶಕ್ಕೆ ಮತ್ತೆ ಕುತೂಹಲ. ಅದನ್ನು ನೋಡಿ ನಕ್ಕಿತು. ಎಳೆ ಹುಲ್ಲು ಕೇಳಿತು `ಏಯ್ ಆಕಾಶ ಯಾಕೆ ನನ್ನ ನೋಡಿ ನಗುತ್ತೀಯಾ?...’

ಮಾತನ್ನು ಮುಗಿಸಿ ಮುತ್ಯಾ ಮಲಗಲು ತಿರುಗಿದಳು. ನಾನು ಅವಳನ್ನು ನನ್ನಡೆಗೆ ತಿರುಗಿಸಿಕೊಳ್ಳುತ್ತಾ ಕೇಳಿದೆ, `ಆ ಹುಲ್ಲಿನ ಜೊತೆಗೆ ಮಾತಾಡಿದ್ದು ಯಾರು? ಆಕಾಶ ಅಂದರೆ ಆಕಾಶವಾ? ಅದರೊಂದಿಗೆ ಮಾತನಾಡುವುದೇ ಸಾಧನೆಯಾ?’ ಎಂದು. ನಕ್ಕಳು, `ಅದು ನಾವು ನೋಡಬೇಕೆಂದು ಬಯಸುವ, ನಮ್ಮೊಳಗನ್ನೂ ಮೀರಿದ ಅರಿವು ಮತ್ತು ಜಗತ್ತು ಯಾವುದಕ್ಕೆ ಕಾತರದಿಂದ ಕಾಯುತ್ತದೆಯೋ ಆ ಅಪ್ರಮೇಯವಾದ ಶಕ್ತಿ. ಅದಕ್ಕೆ ನಮ್ಮಂಥವರು ಎಷ್ಟು ಜನವೋ. ಸಣ್ಣ ದುಃಖಕ್ಕೆ ಸಣ್ಣ ಸುಖಕ್ಕೆ ದೊಡ್ಡ ಚೌಕಟ್ಟನ್ನು ಹಾಕುವ ನಮಗೆ, ಅದು ನೋಡಿತು ಅನ್ನುವುದೇ ಸಾಧನೆ. ನನ್ನಂಥವರೆಷ್ಟು ಜನ ಎನ್ನುವ ಅರಿವೇ ಇಲ್ಲ. ಅದು ಅವನ ಕರುಣೆ ಎಂದು ಮಾತ್ರ ಒಪ್ಪಿಕೊಳ್ಳುವುದಿಲ್ಲ. ಆ ನೋಟ ನಮ್ಮೊಳಗಿನ ಅಹಂಕಾರ ಕರಗಿಸಬೇಕು. ಇಲ್ಲವಾದಲ್ಲಿ ಅದು ನೋಡಿದ್ದಕ್ಕೂ ಫಲವಿಲ್ಲ. ಅದರಲ್ಲಿ ಒಂದಾಗದೆ ಬೇರೆ ದಾರಿಯಿಲ್ಲ, ಮಗೂ ಅವನಿಂದ ಬಂದದ್ದು ಅವನಲ್ಲೇ ಹೋಗಬೇಕು. ಅಷ್ಟಾಗದೆ ವಿಧಿ ಇಲ್ಲ’ ಎಂದಳು. ಈಗಲೂ ನನಗೆ ಕಥೆ ಪೂರ್ತಿ ಅರ್ಥ ಆಗಿಲ್ಲ. ಆದರೆ ಅವಳು ಕಥೆ ಹೇಳಿದ ಚಂದ ಮಾತ್ರ ನನ್ನೊಳಗೆ ಅಚ್ಚಳಿಯದೆ ಉಳಿದಿದೆ, ಬಾನು ಚಂದಿರನನ್ನು ಕಂದನಂತೆ ಎತ್ತಾಡಿಸಿದ ಆ ರಾತ್ರಿ ಕೂಡಾ.

ಈ ಅಂಕಣದ ಹಿಂದಿನ ಬರೆಹಗಳು:
ತೇಲಿಸು ಇಲ್ಲ ಮುಳುಗಿಸು
ಭಾವಶುದ್ಧಿಯೇ ಆಧ್ಯಾತ್ಮ
ಕಿರಿದನ್ನು ಕಿರಿದರಲ್ಲೇ ನೋಡು
ಅನುಭವದಲ್ಲಿ ಘನೀಭವಿಸುವ ವಿಶ್ವದ ರಹಸ್ಯಮಯ ಸಂಗತಿಗಳು

ಬಿಟ್ಟುಬಿಡುವುದೆಂದರೂ ಕಟ್ಟಿಕೊಳ್ಳುವುದೇ
ಗಾಳದ ದಾರ ದೂರಕ್ಕೆ ಬಿಡುವುದು ಮೀನಿನ ಆಸೆಗೆ
ಕಳಚಿಕೊಳ್ಳುವುದೂ ಆಟದ ಭಾಗವೇ.
ಸರಿದ ಸೆರಗಿನಲ್ಲಿ ಅಡಗಿದ್ದು ಸೂರ್ಯ ಚಂದ್ರ
ಪ್ರಾರ್ಥನೆ; ಪದಾರ್ಥವಲ್ಲ, ಪರಾರ್ಥ
ಜಗತ್ತಿನ ಮೇರು ತಾಯಿ
ನಿಧಿಯ ಕನವರಿಕೆ
ಅವಳ ಧ್ಯಾನಕ್ಕೆ ಒಳಿತೇ ಗುರಿ
ಅನುಬಂಧಗಳ ಲೀಲೆ
ಕನಸಿನೊಳಗಿನ ನನಸು
ನೀಲಿ ಕಣ್ಣುಗಳ ಮುತ್ತಜ್ಜಿ ಮತ್ತು ನಾನು

MORE NEWS

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...