ಸಂದಿಯ ಕೂಟ

Date: 09-06-2023

Location: ಬೆಂಗಳೂರು


''ಬಾಶೆಯ ರಚನೆ ಒಂದು ಮಾಂತ್ರಿಕತೆ ಇದ್ದ ಹಾಗೆ, ಇನ್ನೂ ಮುಂದುವರೆದು ಸಾಹಿತ್ಯ ಬಾಶೆಯಲ್ಲಿ ಇದನ್ನು ಕಣ್ಕಟ್ಟು ಎಂದರೂ ಸರಿಯೆ. ಬಾಶೆಯಲ್ಲಿ ಯಾವ ಯಾವ ಗಟಕಗಳನ್ನು ಕೂಡಿಸಿ ಉಚ್ಚರಿಸಬಹುದು ಎಂಬುದಕ್ಕೆ ನಿರ‍್ದಿಶ್ಟವಾಗಿ ನಿಯಮಗಳಿರುತ್ತದೆ. ಪ್ರತಿಯೊಂದು ಬಾಶೆಗೂ ವಿಬಿನ್ನವಾದ ಮತ್ತು ನಿರ‍್ದಿಶ್ಟವಾದ ನಿಯಮಗಳು ಇರುತ್ತವೆ,'' ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ಸಂದಿಯ ಕೂಟ’ ವಿಚಾರದ ಕುರಿತು ಬರೆದಿದ್ದಾರೆ.

ಬಾಶೆಗಳಲ್ಲಿ ವಾಕ್ಯವನ್ನು ತಯಾರಿಸುವಲ್ಲಿ ಮೂಲಬೂತ ಗಟಕಗಳು ಎಂದರೆ ಪದಗಳು ಮತ್ತು ಪ್ರತ್ಯಯಗಳು. ಇವನ್ನು ಇಡಿಯಾಗಿ ಆದುನಿಕ ಬಾಶಾವಿಗ್ನಾನದಲ್ಲಿ ಆಕ್ರುತಿಮಾ ಎಂದು ಕರೆಯಲಾಗುತ್ತದೆ. ಇನ್ನೊಂದೆಡೆ ಈ ಆಕ್ರುತಿಮಾಗಳು ತಯಾರಾಗಿರುವುದು ದ್ವನಿಗಳ ಕೂಡಣದಿಂದ. ಪರಸ್ಪರ ಆಕ್ರುತಿಮಾಗಳನ್ನು ಕೂಡಿಸಿ ಉಚ್ಚರಿಸುವಾಗ ಅವುಗಳನ್ನು ಬಿಡಬಿಡಿಯಾಗಿ ಗುರುತಿಸುವುದು ಆಗುವುದಿಲ್ಲ, ಸಹಜವಾಗಿ ಮಾತನಾಡುವಾಗ ಪದ-ಪ್ರತ್ಯಯಗಳನ್ನು, ಪದ-ಪದಗಳನ್ನು ಮಾತ್ರವಲ್ಲದೆ, ಪದಪುಂಜಗಳನ್ನು, ವಾಕ್ಯಗಳನ್ನು ಹೀಗೆ ಎಡೆಬಿಡದಂತೆ ಕೋದು, ಅಂದರೆ ಪರಸ್ಪರ ಪದಗಳ‌ ನಡುವೆ ಉಚ್ಚರಣೆಯಲ್ಲಿ ಸಮಯವನ್ನು ಕೊಡದೆ ಉಚ್ಚರಿಸಲಾಗುವುದು. ಗೊತ್ತಿಲ್ಲದ ಒಂದು ಬಾಶೆಯನ್ನು ಕೇಳುವಾಗ ವಾಕ್ಯ ಎಲ್ಲಿ ಮುಗಿಯುತು, ಎಲ್ಲಿ ಹೊಸ ವಾಕ್ಯ ಮೊದಲಾಯಿತು ಎಂಬುದಾವುದೂ ತಿಳಿಯುವುದಿಲ್ಲ. ಇಡಿಯ ವಾಕ್ಯ ಒಂದೆ ಪದವಾಗಿದ್ದಿತೆ ಎಂಬ ಬ್ರಮೆಯನ್ನೂ ಕೊಡಬಹುದು.

ಅದಕ್ಕೆ ಮುಕ್ಯವಾದ ಕಾರಣವೆಂದರೆ ಬಾಶೆಯ ಗಟಕಗಳನ್ನ ಪರಸ್ಪರ ಬೆಸೆದು ಉಚ್ಚರಿಸುವುದು. ಇದರಲ್ಲಿ ಬಳಕೆಗೆ ಅನುವಾಗುವುದು ಮತ್ತು ಆರ‍್ತಿಕತೆಯೊಂದೂ ಇದೆ. ಆರ‍್ತಿಕತೆಯೆಂದರೆ ಉಳಿತಾಯ ಸಿದ್ದಾಂತ. ಬಾಶೆಯ ಉಚ್ಚರಣೆಯಲ್ಲಿ ಪದವೊಂದರ ಉಚ್ಚರಣೆಗೆ ಕೆಲವು ಮಿಲಿಸೆಕೆಂಡುಗಳು ಮಾತ್ರ ಬೇಕಿರುವುದು ಸ್ಪಶ್ಟ. ಇದರಲ್ಲಿ ಒಂದು ಮಿಲಿಸೆಕೆಂಡನ್ನು ಉಳಿಸುವ ಸಾದ್ಯವಿರುವ ಕಡೆ ಮನುಶ್ಯ ಬಾಶೆ ಆ ಕ್ಶಣವನ್ನು ಉಳಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತದೆ. ಹಾಗಾಗಿ, ಉಚ್ಚರಣೆಯಲ್ಲಿ ಬಾಶೆಯ ಯಾವುದೆ ಗಟಕಗಳ ನಡುವೆ ಸಮಯವನ್ನು ಕೊಡುವುದಿಲ್ಲ. ಆದರೆ, ಸೂಕ್ಶ್ಮ ಅವಲೋಕನೆ, ಅದ್ಯಯನ ಇದನ್ನು ಗುರುತಿಸುತ್ತದೆ, ಅದು ಬೇರೆ ವಿಚಾರ. ಹೀಗೆ ಸಮಯವನ್ನು ಕೊಡದೆ ಉಚ್ಚರಿಸುವವುಗಳಲ್ಲಿ ಸಂಕತನದ ಬಾಗವಾಗಿ ಬರುವಂತವು ಕೆಲವು. ಇದರಲ್ಲಿ ಪದಗಳನ್ನು, ಪದಪುಂಜಗಳನ್ನು, ವಾಕ್ಯಗಳನ್ನು ಹೀಗೆ ಪರಸ್ಪರ ಜೋಡಿಸಿ ಉಚ್ಚರಿಸಲಾಗುತ್ತದೆ. ಆದರೆ ಇಲ್ಲೆಲ್ಲಿಯೂ ಈ ಪೋಣಿಕೆ ರಾಚನಿಕತೆಗೆ ಬಾದಿಸುವುದಿಲ್ಲ. ಹಾಗಾಗಿ ಈ ಕೂಡಿಸಿ ಉಚ್ಚರಿಸುವುದನ್ನು ಬಾಶೆಯ ಅದ್ಯಯನದಲ್ಲಿ, ವ್ಯಾಕರಣದಲ್ಲಿ ಮಹತ್ವದ್ದಾಗಿ ಪರಿಗಣಿಸುವುದಿಲ್ಲ. ಅಲ್ಲದೆ, ಇದು ಅನಂತ ಅವಕಾಶದ, ಮಿತಿಯಿಲ್ಲದ ಪೋಣಿಕೆಯಾಗಿ ಕಾಣಿಸುತ್ತದೆ. ಅಲ್ಲದೆ, ಈ ಕೂಡಿಸುವಿಕೆ ಬಾಶೆಯನ್ನು ರಾಚನಿಕವಾಗಿ ಬಾದಿಸುವುದಿಲ್ಲವಾದುದರಿಂದ ಇದರ ಅದ್ಯಯನ ಬಾಶೆಯ ತಿಳುವಳಿಕೆಯನ್ನು ಮತ್ತು ಮನುಶ್ಯರ ತಿಳುವಳಿಕೆಯನ್ನು ವಿಸ್ತರಿಸುವುದಿಲ್ಲ. ಹಾಗಾಗಿ ವ್ಯಾಕರಣದಲ್ಲಿ ಇದನ್ನು ಅದ್ಯಯನಕ್ಕೆ ಒಳಪಡಿಸುವುದಿಲ್ಲ. ಆದರೆ, ಬಾಶೆಯ ರಚನೆಯನ್ನು ಬಾದಿಸುವ ಕೆಲವು ಕೂಡಣಗಳು ಬಾಶೆಯಲ್ಲಿ, ಬಾಶೆಯ ಬಳಕೆಯಲ್ಲಿ ಕಾಣಿಸುತ್ತವೆ. ಇವುಗಳನ್ನು ವ್ಯಾಕರಣದಲ್ಲಿ ಮೊದಲಿನಿಂದಲೂ ಅದ್ಯಯನ ಮಾಡುತ್ತ ಬರಲಾಗಿದೆ. ಬಾಶೆಯ ಉಚ್ಚರಣೆಯನ್ನು ಅವಲೋಕಿಸಿದ ಬಾಶಾದ್ಯಯನದ ಹಿರಿಗರು ಈ ಆಕ್ರುತಿಮಾಗಳ ಕೂಡಣವು ಬಾಶೆಯನ್ನು ರಾಚನಿಕವಾಗಿ ತಾಕುತ್ತದೆ ಎಂಬುದನ್ನ ಮನಗಂಡಿದ್ದರು. ಹಾಗಾಗಿ, ಬಾಶೆಯ ಅದ್ಯಯನದಲ್ಲಿ ‘ಸಂದಿ’ ಎಂಬ ವಿಶೇಶ ಪಾರಿಬಾಶಿಕವನ್ನು ಬಳಸಿ ಈ ಪ್ರಕ್ರಿಯೆಯನ್ನು ಅದ್ಯಯನಕ್ಕೆ ಒಳಗು ಮಾಡಿದ್ದಾರೆ. ಸಂದಿ ಎಂಬ ಪ್ರಕ್ರಿಯೆ ಮುಕ್ಯವಾಗಿ ಬಾರತೀಯ ವ್ಯಾಕರಣ ಪರಂಪರೆಯ ಕೊಡುಗೆಯಾಗಿದೆ.

ಈ ಮೇಲೆ ಹೇಳಿದಂತೆ ಬಾಶೆಯಲ್ಲಿ ನಿರ‍್ದಿಶ್ಟವಾದ ಸಂದಿ ಪ್ರಕ್ರಿಯೆಯನ್ನು ಮಾತ್ರ ಅದ್ಯಯನ ಮಾಡಲಾಗುವುದು. ಯಾವ ಬಗೆಯ ಕೂಡಣವನ್ನು ಇಲ್ಲಿ ಅದ್ಯಯನ ಮಾಡಲಾಗುವುದು ಮತ್ತು ಯಾಕೆ, ಅದು ಹೇಗೆ ಬಾಶೆಯ ರಚನೆಯನ್ನು ತಾಕುತ್ತದೆ ಎಂಬುದನ್ನು ಇಲ್ಲಿ ತುಸು ಮಾತಾಡಬಹುದು.

ಬಾಶೆಯ ರಚನೆ ಒಂದು ಮಾಂತ್ರಿಕತೆ ಇದ್ದ ಹಾಗೆ, ಇನ್ನೂ ಮುಂದುವರೆದು ಸಾಹಿತ್ಯ ಬಾಶೆಯಲ್ಲಿ ಇದನ್ನು ಕಣ್ಕಟ್ಟು ಎಂದರೂ ಸರಿಯೆ. ಬಾಶೆಯಲ್ಲಿ ಯಾವ ಯಾವ ಗಟಕಗಳನ್ನು ಕೂಡಿಸಿ ಉಚ್ಚರಿಸಬಹುದು ಎಂಬುದಕ್ಕೆ ನಿರ‍್ದಿಶ್ಟವಾಗಿ ನಿಯಮಗಳಿರುತ್ತದೆ. ಪ್ರತಿಯೊಂದು ಬಾಶೆಗೂ ವಿಬಿನ್ನವಾದ ಮತ್ತು ನಿರ‍್ದಿಶ್ಟವಾದ ನಿಯಮಗಳು ಇರುತ್ತವೆ. ಇದಕ್ಕೆ ಮುಕ್ಯವಾಗಿ ಪ್ರತಿಯೊಂದು ಬಾಶೆಯ ರಚನೆ ಬಿನ್ನವಾಗಿರುವುದೆ ಕಾರಣ. ಬಾಶೆಯ ಸ್ತೂಲ ರಚನೆಯನ್ನು ಗಮನದಲ್ಲಿಟ್ಟುಕೊಂಡು ಯಾವ ಯಾವ ಬಗೆಯ ಸಂದಿ ಸಾದ್ಯತೆಗಳು ಇರಬಹುದು ಎಂಬುದನ್ನು ಇಲ್ಲಿ ನೋಡೋಣ.

ಎರಡು ಪದಗಳು ಪರಸ್ಪರ ಕೂಡಿ ಸಂದಿಯಾವುದು ಒಂದು ಬಗೆ. ಇದು ಜಗತ್ತಿನ ಹೆಚ್ಚಿನ ಬಾಶೆಗಳಲ್ಲಿ ಕಂಡುಬರುತ್ತದೆ. ಮೇಲೆ ಹೇಳಿದಂತೆ ಪರಸ್ಪರ ಪದಗಳನ್ನು ಕೂಡಿಸಿ ಉಚ್ಚರಿಸುವುದು ಸಾಮಾನ್ಯವಾದರೂ ಎಲ್ಲ ಬಗೆಯ ಕೂಡಣವನ್ನು ಸಂದಿಯ ಒಳಗೆ ಪರಿಗಣಿಸುವುದಿಲ್ಲ. ಬದಲಿಗೆ, ಎರಡು ಪದಗಳು ಕೂಡಿ ಪದದ ರಚನೆ ಮತ್ತು ಮುಕ್ಯವಾಗಿ ಅರ‍್ತದ ಸ್ವರೂಪವನ್ನು ಬದಲಿಸುವಂತವನ್ನು ಸಂದಿಯ ಒಳಗೆ ಅದ್ಯಯನ ಮಾಡಲಾಗುವುದು. ಅಂದರೆ, ‘ನಾಮನಿಗೆಬರ‍್ತಿನಿ’. ಎಂಬುದು ಒಂದು ವಾಕ್ಯ. ವಾಸ್ತವದಲ್ಲಿ ಇದರಲ್ಲಿ ಮೂರು ಪದಗಳಿವೆ, ‘ನಾ-ಮನಿಗೆ-ಬರ‍್ತಿನಿ’. ಸಾಮಾನ್ಯವಾಗಿ ಉಚ್ಚರಣೆಯಲ್ಲಿ ಈ ಪದಗಳನ್ನು ಕೂಡಿಸಿ ಉಚ್ಚರಿಸಲಾಗುವುದು. ಈಗ ಇನ್ನೊಂದು ಬಗೆಯ ಕೂಡಣವನ್ನು ನೋಡೋಣ, ‘ಮನೆಮಗಳು’. ಇದರಲ್ಲಿ ಎರಡು ಪದಗಳು ಇವೆ, ‘ಮನೆ-ಮಗಳು’. ಈ ಮೇಲೆ ‘ನಾಮನಿಗೆ ಬರ‍್ತಿನಿ’ ಇದರಲ್ಲಿ ಮೂರು ಪದಗಳಿದ್ದು, ಈ ಮೂರೂ ಪದಗಳು ತಮ್ಮ ಅರ‍್ತವನ್ನು ಪಡೆದುಕೊಂಡು ಇಲ್ಲಿ ಬಳಕೆಯಾಗುತ್ತಿವೆ. ಆದರೆ, ‘ಮನೆಮಗಳು’ ಎಂಬ ಪದದಲ್ಲಿ ಎರಡು ಪದಗಳಿವೆ ಮತ್ತು ಆ ಎರಡೂ ಪದಗಳಿಗೆ ಅವುಗಳದೆ ಆದ ಅರ‍್ತ ಇದೆ. ಆದರೆ, ಅವೆರಡನ್ನೂ ಕೂಡಿಸಿ ಒಟ್ಟಿಗೆ ಉಚ್ಚರಿಸಿದಾಗ ಆ ಪದದ ಅರ‍್ತ ಬೇರೆಯಾಗುತ್ತದೆ. ಈ ರೀತಿಯಲ್ಲಿ ಆ ಎರಡು ಪದಗಳನ್ನು ಕೂಡಿಸಿ ಉಚ್ಚರಿಸುವುದು ಬಾಶೆಯನ್ನು ಅರ‍್ತಾತ್ಮಕವಾಗಿ ಬಾದಿಸುತ್ತದೆ. ಈ ಎರಡು ಪದಗಳನ್ನು ಕೂಡಿಸಿ ಉಚ್ಚರಿಸಿದಾಗ ಹೊಸದೊಂದು ಪದ ಹುಟ್ಟಿದೆ. ಹೀಗೆ ಬಾಶೆಯ ರಚನೆಯನ್ನು ಬಾದಿಸುವಂತ ಸಂದಿ ಪ್ರಕ್ರಿಯೆಗಳನ್ನು ಮಾತ್ರ ಅದ್ಯಯನ ವ್ಯಾಕರಣದೊಳಗೆ ಮಾಡಲಾಗುವುದು. ಅಂದರೆ, ಪದಗಳನ್ನು ಸೇರಿಸಿ ಇನ್ನೊಂದು ಹೊಸ ಪದವನ್ನು ಹುಟ್ಟಿಸುವ ಪ್ರಕ್ರಿಯೆಯಲ್ಲಿ ನಡೆಯುವ ಸಂದಿ ಪ್ರಕ್ರಿಯೆಯಂತೆಯೆ ಹೊಸಪದಗಳನ್ನು ಹುಟ್ಟಿಸುವ ಸಂದರ‍್ಬದಲ್ಲಿಯೂ ಸಂದಿ ಪ್ರಕ್ರಿಯೆ ನಡೆಯುತ್ತದೆ. ಉದಾ. ‘ಕುಡುಕ’ ಎನ್ನುವ ಪದವನ್ನು ತೆಗೆದುಕೊಳ್ಳೋಣ. ಇದರಲ್ಲಿ ಮೂಲದಲ್ಲಿ ಇರುವ ಪದ ‘ಕುಡಿ’ ಎಂಬ ಪದವಾಗಿದೆ. ಇದಕ್ಕೆ –ಕ ಎಂಬ ಹೊಸ ಪದ ಸಾದಿಸಲು ಬಳಕೆಯಾಗುವ ಪದಪ್ರತ್ಯಯವೊಂದು ಸೇರಿ ‘ಕುಡುಕ’ ಎಂಬ ಪದ ಬೆಳೆದಿದೆ. ಇಲ್ಲಿ ದ್ವನಿ ಬದಲಾವಣೆ ಆಗುವುದನ್ನು ಕಾಣಬಹುದು. ಈ ಬಗೆಯ ಸಂದಿ ಪ್ರಕ್ರಿಯೆಗಳನ್ನು ಸಂದಿ ಎಂಬ ಹೆಸರಿನಲ್ಲಿ ವ್ಯಾಕರಣದಲ್ಲಿ ಅದ್ಯಯನ ಮಾಡಲಾಗುವುದು. ಹೀಗೆ ಹೊಸ ಪದಗಳನ್ನು ಹುಟ್ಟಿಸುವ ಸಂದರ‍್ಬದಲ್ಲಿ, ಸಮಾಸವಾಗುವ ಸಂದರ‍್ಬದಲ್ಲಿ ಆಗುವ ದ್ವನಿಗಳು ಕೂಡಿಕೆಯನ್ನು ವ್ಯಾಕರಣದಲ್ಲಿ ಅದ್ಯಯನ ಮಾಡಲಾಗುವುದು. ಈ ಸಂದಿಯನ್ನು ಹೊರಸಂದಿ ಎನ್ನಲಾಗುವುದು. ಅಂದರೆ ಪದವ್ಯಾಪ್ತಿಯ ಹೊರಗೆ ನಡೆಯುವ ಸಂದಿ, ಹೊರಸಂದಿ.

ಇನ್ನೊಂದು ಬಗೆಯ ಮಹತ್ವದ ಸಂದಿ ಪ್ರಕ್ರಿಯೆ ಜಗತ್ತಿನ ಬಹುತೇಕ ಬಾಶೆಗಳಲ್ಲಿ ಕಂಡುಬರುತ್ತದೆ. ವಿವಿಕ್ತ ಬಾಶೆಗಳಾದ ಚೀನಿಯಂತ ಪ್ರತ್ಯಯಗಳು ಇಲ್ಲದ ಬಾಶೆಗಳಲ್ಲಿ ಇದು ಕಡಿಮೆ ಇರಬಹುದು. ಅದೆಂದರೆ, ಪದ ಮತ್ತು ಪ್ರತ್ಯಯ ಇವುಗಳು ಸೇರುವಾಗ ಆಗುವ ಸಂದಿ. ಅಂದರೆ, ‘ಕಾಲಿಗೆ’ ಎನ್ನುವ ಪದವನ್ನು ತೆಗೆದುಕೊಳ್ಳೋಣ. ಇಲ್ಲಿ ‘ಕಾಲು+-ಗೆ’ ಎಂಬ ರಚನೆ ಇದೆ. ‘ಕಾಲು’ ಎಂಬ ಪದದ ಮೇಲೆ ಚತುರ‍್ತಿ ವಿಬಕ್ತಿಯಾದ ‘-ಗೆ’ ಇದು ಸೇರಿದೆ. ಇಲ್ಲಿ ದ್ವನಿ ಬದಲಾವಣೆ ಆಗಿರುವುದನ್ನು ಕಾಣಬಹುದು. ಹೀಗೆ ಪದದ ವ್ಯಾಪ್ತಿಯ ಒಳಗೆ ಅಂದರೆ, ಪದ ಮತ್ತು ಪ್ರತ್ಯಯಗಳು ಸೇರುವ ಹೊತ್ತಿನಲ್ಲಿ ನಡೆಯುವ ಸಂದಿಯನ್ನು ವ್ಯಾಕರಣವು ಅದ್ಯಯನ ಮಾಡುತ್ತದೆ. ಇದಕ್ಕೆ ಒಳಸಂದಿ ಎಂದು ಹೆಸರು. ಅಂದರೆ, ಪದವ್ಯಾಪ್ತಿಯ ಒಳಗೆ ನಡೆಯುವ ಸಂದಿಪ್ರಕ್ರಿಯೆಯನ್ನು ಒಳಸಂದಿ ಎನ್ನಲಾಗುವುದು.

ಹೀಗೆ, ಬಾಶೆಯಲ್ಲಿ ಪದಗಳ ನಡುವೆ ನಡೆಯುವ ಹೊರಸಂದಿ ಮತ್ತು ಪದವೊಂದರ ಒಳಗೆ ನಡೆಯುವ ಒಳಸಂದಿ ಎಂಬ ಎರಡು ಬಗೆಯ ಸಂದಿ ಪ್ರಕ್ರಿಯೆಗಳು ಪ್ರದಾನವಾಗಿ ಕಂಡುಬರುತ್ತವೆ. ಈ ವಿಶಾಲ ನೆಲೆಯ ಒಳಗೆ ಪ್ರತಿಯೊಂದು ಬಾಶೆಯಲ್ಲಿ ನಡೆಯುವ ಸಂದಿಪ್ರಕ್ರಿಯೆಗಳು ಬಲು ವಯಿವಿದ್ಯ. ಹಲವು ಬಗೆಯ ಸಂದಿಪ್ರಕ್ರಿಯೆಗಳು ನಡೆಯುತ್ತಿರುವೆ. ಕನ್ನಡದಲ್ಲಿಯೂ ವಿದವಿದದ ಸಂದಿಗಳು ಕಂಡುಬರುತ್ತವೆ. ಮುಂದಿನ ಬರಹದಲ್ಲಿ ಕನ್ನಡದಲ್ಲಿ ನಡೆಯುವ ಮುಕ್ಯವಾದ ಸಂದಿ ಪ್ರಕ್ರಿಯೆಗಳನ್ನು ಮಾತಾಡಬಹುದು.

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾ

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...