ವಿಮಾನ ಪ್ರಯಾಣವೊಂದು ರದ್ದಾಗುವ ಘಳಿಗೆ

Date: 28-06-2022

Location: ಬೆಂಗಳೂರು


“ವಿಮಾನವೊಂದು ತಿರುಗಾಟವನ್ನು ತಪ್ಪಿಸಿಕೊಂಡು ಆದಾಯ ಗಳಿಸದೆ ನಿಲ್ಲುವುದು, ಏರ್ಲೈನ್‌ಗಳು ಎಂದೂ ಅಪೇಕ್ಷಿಸದ ವಿಚಾರ. ಹಾಗಾಗಿ ನಾಗರಿಕ ವಿಮಾನದ ಪ್ರಯಾಣ ರದ್ದಾದಾಗ ಅಲ್ಲೊಂದು ತುರ್ತು ಪರಿಸ್ಥಿತಿ ಹುಟ್ಟಿ, ಅದರ ಕ್ಷಿಪ್ರ ಉಪಶಮನಕ್ಕೆ ಹಲವರನ್ನು ದುಡಿಸುತ್ತದೆ” ಎನ್ನುತ್ತಾರೆ ಯೋಗೀಂದ್ರ ಮರವಂತೆ. ಅವರು ತಮ್ಮ ಏರೋ ಪುರಾಣ ಅಂಕಣದಲ್ಲಿ, ಹಠಾತ್ತಾಗಿ ವಿಮಾನ ಹಾರಾಟ ರದ್ದಾಗುವ ಹೊತ್ತಿನ ಹಿನ್ನೆಲೆ ಮತ್ತು ಪರಿಣಾಮಗಳನ್ನು ವಿವರಿಸಿದ್ದಾರೆ.

ಮೊನ್ನೆ ಮೊನ್ನೆ ಬ್ರಿಟನ್ನಿನ ಸ್ಯಾಲಿಸ್ಬರಿ ನಿಲ್ದಾಣದಿಂದ, ಏಳು ಜನರನ್ನು ಹೊತ್ತು ಆಫ್ರಿಕಾದ ರುವಾಂಡಾ ತಲುಪಬೇಕಾಗಿದ್ದ ವಿಮಾನ, ಇನ್ನೇನು ಹಾರಬೇಕಿದ್ದ ಕೊನೆಯ ನಿಮಿಷಗಳಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ಬಂದು ಪ್ರಯಾಣವನ್ನು ನಿಲ್ಲಿಸಬೇಕಾಯಿತು. ಬ್ರಿಟನ್ನನ್ನು ಕಾನೂನುಬಾಹಿರ ಮಾರ್ಗಗಳಿಂದ ಒಳಹೊಕ್ಕಿ ಆಶ್ರಯ ಬಯಸುವವರಲ್ಲಿ ಆಯ್ದ ಕೆಲವರನ್ನು ರುವಾಂಡಾಗೆ ಕಳುಹಿಸುವ ಒಪ್ಪಂದ ಮಾಡಿಕೊಂಡು, ಹೀಗೊಂದು ವಿಮಾನದಲ್ಲಿ ಕೂರಿಸಿ ಕಳುಹಿಸುವ ತಯಾರಿಯಲ್ಲಿದ್ದ ಸರಕಾರ, ಈ ವಿವಾದಾತ್ಮಕ ಹೆಜ್ಜೆಗೆ ಒದಗಿದ ಹಲವು ಟೀಕೆ ವಿರೋಧಗಳ ಪರಿಣಾಮವಾಗಿ ಪ್ರಯಾಣ ಇನ್ನೇನು ಶುರು ಆಗುವ ಕೊನೆಯ ಕ್ಷಣಗಳಲ್ಲಿ ಒಂದು ಆತ್ಯಂತಿಕ ಹಂತ ತಲುಪಿ "ಮಾನವ ಸಾಗಾಟ"ವನ್ನು ರದ್ದು ಮಾಡಬೇಕಾಯಿತು. ಜಗತ್ತಿನ ಬೇರೆ ಬೇರೆ ದೇಶಗಳು, ತಮ್ಮ ದೇಶದ ಗಡಿಯನ್ನು ಅನುಮತಿ ಇಲ್ಲದೇ ಪ್ರವೇಶಿಸಿ ಆಶ್ರಯ ಕೋರುವವರನ್ನು ಆಫ್ರಿಕಾದ ಕೆಲವು ದೇಶಗಳಲ್ಲಿ ಹಣಕಾಸಿನ ಒಪ್ಪಂದ ಮಾಡಿಕೊಂಡು ಬಿಟ್ಟು ಬರುವುದು ಬಹಳ ಕಾಲದಿಂದ ನಡೆಯುತ್ತಿದೆ. ಉದ್ದೇಶಿತ ವಿಮಾನ ಪ್ರಯಾಣ ರದ್ದಾದ ಮೇಲೂ, ಬ್ರಿಟನ್ ಮೊದಲ ಬಾರಿಗೆ ನಿರಾಶ್ರಿತರನ್ನು ಒಮ್ಮುಖ (ಒನ್ ವೆ) ವಿಮಾನ ಹತ್ತಿಸಿ ದೂರದ ದೇಶವೊಂದರಲ್ಲಿ ಬಿಟ್ಟು ಕೈತೊಳೆದುಕೊಳ್ಳುವಲ್ಲಿ ತೊಡಗಿರುವ ವಿಷಯದ ಪರ ವಿರೋಧಗಳ ಚರ್ಚೆ ಇಲ್ಲಿ ನಡೆಯುತ್ತಿದೆ. ಹಾಗಂತ ಇಡೀ ಪ್ರಕರಣಕ್ಕೆ ಮೂಕ ಪ್ರೇಕ್ಷಕನಂತಿರುವ ವಿಮಾನ ಮಾತ್ರ " ರದ್ದಾದ ಪ್ರಯಾಣ"ಗಳ ಪಟ್ಟಿಯ ಇನ್ನೊಂದು ಉಲ್ಲೇಖವಾಗಿ ದಾಖಲಾಗಿದೆ.

ನಾಗರಿಕ ವಿಮಾನಗಳ ಮಟ್ಟಿಗೆ ಪ್ರಯಾಣವೊಂದರ ಪೂರ್ವದಲ್ಲಿ, ಹಂತಹಂತವಾಗಿ ನಿಲ್ದಾಣದದಲ್ಲಿ ತಯಾರಿ ನಡೆಯುವುದು ಮತ್ತೆ ಕೊನೆಯ ಕ್ಷಣಗಳಲ್ಲಿ ಪ್ರಯಾಣ ವಿಪರೀತ ತಡವಾಗುವುದು ಅಥವಾ ಪೂರ್ಣ ನಿಂತೇ ಹೋಗುವುದು ಸಾಮಾನ್ಯ ಅಲ್ಲದಿದ್ದರೂ ಹೊಸ ವಿಷಯವೇನೂ ಅಲ್ಲ. ನಿತ್ಯವೂ ಜಗತ್ತಿನ ಬೇರೆ ಬೇರೆ ನಿಲ್ದಾಣಗಳಲ್ಲಿ ಪ್ರಯಾಣ ತಡವಾಗುವ ಅಲ್ಲದಿದ್ದರೆ ರದ್ದಾಗುವ ಪ್ರಸಂಗಗಳು ನಡೆಯುತ್ತಿರುತ್ತವೆ. ಕೋವಿಡ್ ಬಾಧಿತ ಎರಡು ವರ್ಷಗಳಲ್ಲಿ ತೀವ್ರ ಸಂಕಷ್ಟದಲ್ಲಿದ್ದ ಯು.ಕೆ. ಯ ಏರ್ಲೈನ್‌ಗಳು ದೊಡ್ಡ ಸಂಖ್ಯೆಯಲ್ಲಿ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದಿದ್ದವು. ಈ ವರ್ಷದ ಮಾರ್ಚ್ ತಿಂಗಳ ನಂತರ ವಿಮಾನ ಪ್ರಯಾಣಿಕರ ಸಂಖ್ಯೆ ತುಂಬ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಏರ್ಲೈನ್‌ಗಳಲ್ಲಿ ,ನಿಲ್ದಾಣಗಳಲ್ಲಿ ಬೇಡಿಕೆಗೆ ಬೇಕಾದಷ್ಟು ಸಿಬ್ಬಂದಿಗಳು ಲಭ್ಯ ಇಲ್ಲದೇ, ವಿಮಾನಯಾನ ಸಂಬಂಧಿ ತಯಾರಿಗಳಿಗೆ ಅನನುಕೂಲವಾಗಿ ಪ್ರಯಾಣಗಳು ರದ್ದಾಗುತ್ತಿರುವುದು, ರಜೆಗೊ ಕೆಲಸಕ್ಕೊ ಹೋಗಬೇಕಾದವರು ಹೊರಡಲು ಆಗದ ಅಥವಾ ಈಗಾಗಲೇ ಗಮ್ಯವನ್ನು ತಲುಪಿದವರು ಸರಿಯಾದ ಸಮಯಕ್ಕೆ ಹಿಂತಿರುಗಲಾಗದ ಘಟನೆಗಳು ಹೆಚ್ಚಾಗಿವೆ. ಬ್ರಿಟನ್ನಿನ ಶಾಲಾ ಮಕ್ಕಳ ಬೇಸಿಗೆ ರಜೆಯ ಮಾಸಗಳಾದ ,ಜುಲೈ ಆಗಸ್ಟ್ ತಿಂಗಳುಗಳು ಪ್ರವಾಸದ ಉತ್ಸಾಹಕ್ಕಿಂತ ಹೆಚ್ಚು ವಿಮಾನ ಪ್ರಯಾಣ ರದ್ದಾಗುವುದಕ್ಕಾಗಿ ಸುದ್ದಿಯಲ್ಲಿರುವ ಸಾಧ್ಯತೆಯೇ ಕಾಣಿಸುತ್ತಿದೆ.

ಹನ್ನೆರಡು ವರ್ಷಗಳ ಹಿಂದೆ, ನಾನು ಕೆಲಸ ಮಾಡುತ್ತಿದ್ದ ಏರ್ಬಸ್‌ನ A380 ವಿಮಾನ ವಿನ್ಯಾಸದ ತಂಡದಲ್ಲಿದ್ದ ಒಬ್ಬ ಸಹೋದ್ಯೋಗಿ ಕುಟುಂಬ ಸಮೇತ ಪ್ರಯಾಣಿಸಲು ಲಂಡನ್‌ನ ಹೀತ್ರೋ ನಿಲ್ದಾಣ ತಲುಪಿದ್ದ. ಆತ ಏರಬೇಕಾಗಿದ್ದುದು ನಾವು ಕೆಲವು ವರ್ಷಗಳ ಕಾಲ ಕೆಲಸ ಮಾಡಿದ A380 ವಿಮಾನವನ್ನು. A380ಯ ಮೊದಮೊದಲ ಹಾರಾಟದ ದಿನಗಳಲ್ಲಿ ವಿಮಾನ ಹೋದಲ್ಲಿ ನಿಂತಲ್ಲಿ ಅದರ ಗಾತ್ರ ಮತ್ತು ವಿಶೇಷತೆಗಳ ಬಗ್ಗೆ ಮಾತಾನಾಡುವವರೇ ಹೆಚ್ಚಾಗಿದ್ದರು. ಆ ಸಹೋದ್ಯೋಗಿ, ಜೊತೆಗೆ ಪ್ರಯಾಣಿಸುತ್ತಿದ್ದ ತನ್ನ ಮಗುವಿಗೆ ತಾನೇ ಕೆಲಸ ಮಾಡಿದ ವಿಮಾನದ ಬಗ್ಗೆ ಹೆಮ್ಮೆಯಿಂದ ಸಾಕಷ್ಟು ಕುತೂಹಲಕರ ಮಾಹಿತಿ ನೀಡಿ ಕರೆದೊಯ್ದಿದ್ದ,ವಿಮಾನ ಹತ್ತಿ ಕುಳಿತ ಮೇಲೂ ಬ್ರಿಟನ್ನಿನಲ್ಲಿ ತಯಾರಾಗುವ ಅದರ ರೆಕ್ಕೆಯನ್ನು ಕಿಟಕಿಯ ಸೀಟಿನಲ್ಲಿ ಕುಳಿತು ತೋರಿಸುತ್ತ ವರ್ಣಿಸುತ್ತಿದ್ದ. ನಾವೇ ಕೆಲಸ ಮಾಡಿದ ವಿಮಾನದಲ್ಲಿ ಹಾರುವುದು ಒಂದು ವಿಶೇಷ ರೋಚಕ ಅನುಭವ. ಸೇವೆಗೆ ಇಳಿದು ಬಹಳ ಸಮಯವೇನೂ ಆಗಿರದ, ಆ ಕಾಲಕ್ಕೆ ಹೊಸದು ಎನ್ನಬಹುದಾದ ವಿಮಾನ ಅಂದು ಮಾತ್ರ ಸಮಯಕ್ಕೆ ಸರಿಯಾಗಿ ಲಂಡನ್‌ನಿಂದ ಹೊರಡಲೇ ಇಲ್ಲ. ಆಗಲೇ ಹತ್ತಿ ಕೂತಿದ್ದ ಯಾತ್ರಿಗಳು ಹಲವು ಗಂಟೆಗಳ ಕಾಲ ವಿಮಾನದೊಳಗೇ ಬಂಧಿಯಾಗಿ ಪ್ರಯಾಣವನ್ನು ತಡವಾಗಿ ಮುಂದುವರಿಸಬೇಕಾಯಿತು. ಕೆಲವೊಮ್ಮೆ ಹೊಚ್ಚ ಹೊಸ ವಿಮಾನಗಳಲ್ಲೂ ಹಾರಾಟ ವಿಳಂಬ ಆಗುವ ಅಥವಾ ರದ್ದು ಆಗುವ ಸಂದರ್ಭ ಎದುರಾಗಬಹುದು. ಮತ್ತೆ ವಿಮಾನ ಪ್ರಯಾಣ ರದ್ದಾಗುವ ಘಳಿಗೆಗಳ ವಿಭಿನ್ನ ಅನುಭವಗಳ ಸರಣಿ ಇನ್ನೂ ಮತ್ತೂ ಬೆಳೆಯುತ್ತಲೇ ಇರುವಂತಹದ್ದು.

ಈ ಮೂರು ಅನುಭವಗಳ ಹಿನ್ನೆಲೆಯಲ್ಲಿ ವಿಮಾನ ಪ್ರಯಾಣದಲ್ಲಿ ನೇರವಾಗಿ ಕಾಣಿಸದ ವಿಚಾರಗಳು ಮಾಹಿತಿಗಳು ಹುದುಗಿವೆ. ಇತ್ತೀಚೆಗೆ ಬ್ರಿಟನ್ನಿನಿಂದ ಆಫ್ರಿಕಾಕ್ಕೆ ಹಾರಬೇಕಿದ್ದ ವಿಮಾನ ರದ್ದಾದದ್ದು ಒಂದು ರಾಜತಾಂತ್ರಿಕ ಕಾರಣಕ್ಕೆ, ಇದೀಗ ಯುರೋಪಿನಲ್ಲಿ, ಮತ್ತೆ ಬ್ರಿಟನ್ನಿನಲ್ಲಿ ಹೆಚ್ಚಿನ ನಾಗರಿಕ ವಿಮಾನ ರದ್ದತಿಗಳು ಆಗುತ್ತಿರುವುದು ಸಿಬ್ಬಂದಿಗಳ ಕೊರತೆ ಇರುವುದಕ್ಕೆ . ಏರ್ಬಸ್ ಸಹೋದ್ಯೋಗಿಯ ಕುಟುಂಬ ಹತ್ತಿದ್ದ ಎ ೩೮೦ ವಿಮಾನ ತಡವಾಗಿ ಅಂದು ಹಾರಿದ್ದು ಕೊನೆಯ ಕ್ಷಣಗಳಲ್ಲಿ ತಿಳಿದು ಬಂದ ಎಂಜಿನ್ ಸಂಬಂಧಿ ತಾಂತ್ರಿಕ ವೈಫಲ್ಯದ ಕಾರಣಕ್ಕೆ. ನಾಗರಿಕ ವಿಮಾನವೊಂದು ಎಲ್ಲೂ ಹಾರದೇ ನೆಲದ ಮೇಲೆ ನಿಲ್ಲುವುದೆಂದರೆ ಅದು ವಿಮಾನ ಮಾಲಿಕರ ಅತ್ಯಂತ ಸಂಕಟದ ಸಮಯ. ಹಲವು ಕೋಟಿ ಖರ್ಚು ಮಾಡಿ ಖಾರೀದಿಸಿದ, ದೈನಂದಿನ ನಿರ್ವಹಣೆಗೆ ದುಬಾರಿ ವೆಚ್ಚ ಬೇಕಾಗುವ ವಿಮಾನ ಒಂದು ತಿರುಗಾಟವನ್ನು ತಪ್ಪಿಸಿಕೊಂಡು ಆದಾಯ ಗಳಿಸದೆ ನಿಲ್ಲುವುದು, ಏರ್ಲೈನ್‌ಗಳು ಎಂದೂ ಅಪೇಕ್ಷಿಸದ ವಿಚಾರ. ಹಾಗಾಗಿ ನಾಗರಿಕ ವಿಮಾನದ ಪ್ರಯಾಣ ರದ್ದಾದಾಗ ಅಲ್ಲೊಂದು ತುರ್ತು ಪರಿಸ್ಥಿತಿ ಹುಟ್ಟಿ, ಅದರ ಕ್ಷಿಪ್ರ ಉಪಶಮನಕ್ಕೆ ಹಲವರನ್ನು ದುಡಿಸುತ್ತದೆ.

ವಿಮಾನ ಪ್ರಯಾಣ ತಡವಾಗುವುದು ಹಾಗೂ ರದ್ದಾಗುವುದು ಎರಡೂ ಬೇರೆ ವಿಷಯಗಳಾದರೂ ಅವುಗಳ ಹಿಂದಿನ ಕಾರಣ ಕೆಲವೊಮ್ಮೆ ಒಂದೇ ಇರಬಹುದು. ವಿಮಾನಗಳ ಒಳಗಿನ ಯಾವುದೊ ತಂತ್ರಜ್ಞಾನ ಹಾಳಾಗುವುದು, ಸರಿಯಾಗಿ ಕೆಲಸ ಮಾಡದೇ ಇರುವುದು ಪ್ರತಿ ಹಾರಾಟದ ಮೊದಲಿನ ಕೆಲವು ನಿಯಮಿತ ಪರೀಕ್ಷೆಗಳ ಮೂಲಕ ಬೆಳಕಿಗೆ ಬಂದಿರಬಹುದು. ಅಥವಾ ಈಗಾಗಲೇ ತಿಳಿದಿರುವ ಮುಂದಿನ ನಿರ್ವಹಣೆಯ ಸಮಯಕ್ಕೆ ದುರಸ್ತಿ ಮಾಡಬಹುದು ಅನಿಸಿದ ಸಣ್ಣ ಸಮಸ್ಯೆಯೇ ಈಗ ದೊಡ್ಡದಾಗಿ ಹಾರಾಟ ನಡೆಸಿದರೆ ವಿಮಾನದ ಸುರಕ್ಷತೆಗೆ ಧಕ್ಕೆ ಇದೆ ಎಂದಾಗಬಹುದು. ಅಂತಹ ಅಸಮರ್ಪಕತೆಯನ್ನು ಸರಿ ಮಾಡದೆ ಹಾರಾಟ ಶುರು ಮಾಡುವುದು ಸಾಧ್ಯ ಆಗುವುದಿಲ್ಲ. ಇನ್ನು ನಿಮಿಷ ನಿಮಿಷಕ್ಕೂ ವಿಮಾನಗಳು ಹತ್ತುವ ಇಳಿಯುವ ಬಹಳ ದಟ್ಟಣೆಯ ನಿಲ್ದಾಣವಾದರೆ,"ರನ್‌ವೇ" ಸಕಾಲಕ್ಕೆ ಸಿಗದೆ ಉದ್ದದ ಸಾಲಿನಲ್ಲಿ ನಿಂತು ಕಾಯಬೇಕಾದ ಸಂದರ್ಭ ಇರಬಹುದು .ಮಳೆ,ವಿಪರೀತ ಗಾಳಿ, ರನ್‌ವೇ ಕಾಣದಂತಹ ದಟ್ಟ ಮಂಜಿನಂತಹ ಪ್ರತಿಕೂಲ ಹವಾಮಾನದ ಕಾರಣಕ್ಕೆ ಹಾರುವುದು ಅಸಾಧ್ಯ ಆಗಬಹುದು. ವಿಮಾನಗಳನ್ನು ನಿಯಮಿತವಾಗಿ ನಿರಂತರವಾಗಿ ಸೂಕ್ತ ಪರೀಕ್ಷೆ,ನಿರ್ವಹಣೆ ದುರಸ್ತಿ ಆರೈಕೆ ಮಾಡದ ಏರ್ಲೈನ್ ಹಠಾತ್ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಬಹುದು.

ಹಾರಬೇಕಾದ ವಿಮಾನವೊಂದು ಪ್ರಯಾಣ ಮಾಡಲಾಗದೇ ನೆಲದ ಮೇಲೆ ನಿಂತು ದುರಸ್ತಿಗಾಗಿ ಕಾಯುವುದನ್ನು ವಿಮಾನಗಳ ಪಾರಿಭಾಷಿಕದಲ್ಲಿ "ಎ ಓ ಜಿ ' (Aircraft on Ground ) ಎಂದು ಕರೆಯುತ್ತಾರೆ.. ಒಂದೆರಡು ಘಂಟೆಗಳ ಕಾಲ ಅಚಾನಕ್ ನಿಂತ ವಿಮಾನವೊಂದು, ಆಯಾ ಏರ್ಲೈನ್‌ಗೆ ಹಲವು ಲಕ್ಷ ರೂಪಾಯಿಗಳಿಂದ ಕೆಲವು ಕೋಟಿ ರೂಪಾಯಿಗಳ ನಷ್ಟವನ್ನು ತರಬಹುದು. ಹೀಗೆ ವಿಮಾನವೊಂದು ನಿಂತ ಸಂದರ್ಭದಲ್ಲಿ ವಿಮಾನ ಸೇವೆ ನೀಡುತ್ತಿರುವ ಏರ್ಲೈನ್ ಮತ್ತು ವಿಮಾನ ಮಾರಾಟ ಮಾಡಿ ದುರಸ್ತಿಯ ಮಾರ್ಗದರ್ಶನದ ಹೊಣೆ ಇರುವ ವಿಮಾನ ತಯಾರಕ ಕಂಪೆನಿಗಳು ತುರ್ತು ಪ್ರತಿಕ್ರಿಯೆ ಮತ್ತು ಪರಿಹಾರದಲ್ಲಿ ತೊಡಗುತ್ತವೆ. ವಿಮಾನ ತಯಾರಿಯ ಕಂಪೆನಿಯ ದುರಸ್ತಿ ವಿಭಾಗದಲ್ಲಿ "ನಿಂತ ವಿಮಾನ"ದ ಬಗೆಗಿನ ಕೋರಿಕೆ ಬಂತೆಂದರೆ ಉಳಿದೆಲ್ಲ ಕೆಲಸಗಳನ್ನೂ ಬದಿಗೊತ್ತಿ ,ಆ ವಿಮಾನವನ್ನು ಆದಷ್ಟು ಬೇಗ ಮರಳಿ ಆಕಾಶಕ್ಕೆ ಹಾರಿಸುವ ಎಲ್ಲ ಪ್ರಯತ್ನಗಳು ನಡೆಯುತ್ತವೆ. ವಿಮಾನ ತಯಾರಿಕೆ ಕಂಪೆನಿಯಲ್ಲಿ ಹಗಲು ರಾತ್ರಿ ವಿಮಾನಗಳ ರಿಪೇರಿ ನಿರ್ವಹಣೆಯ ಸಲಹೆ ನೀಡುವ ವಿಭಾಗವೇ ಇರುತ್ತದೆ. ವಿಮಾನ ಮಾರಾಟದ ನಂತರ ತಯಾರಿಕಾ ಸಂಸ್ಥೆ ನೀಡುವ ಸೇವೆಗಳಲ್ಲಿ ನಿರ್ವಹಣೆ,ದುರಸ್ತಿ ಹಾಗೂ ತುರ್ತು ಪರಿಸ್ಥಿತಿಗಳಲ್ಲಿ ನೀಡುವ ಪ್ರತಿಸ್ಪಂದನೆಗಳಿಗೆ ಬಹಳ ಮಹತ್ವ ಇದೆ. ವಿಮಾನಗಳ ಹಲವು ತಾಂತ್ರಿಕ ತೊಂದರೆಗಳನ್ನು ಏರ್ಲೈನ್‌ಗಳು ತಮಗೆ ಒದಗಿಸಿದ ದುರಸ್ತಿ ಕೈಪಿಡಿಯನ್ನು ನೋಡಿಕೊಂಡು ಸರಿಪಡಿಸಿಕೊಳ್ಳುತ್ತವೆ . ಕೈಪಿಡಿಯ ನಿರ್ದೇಶನದಲ್ಲಿ ಸರಿಪಡಿಸಲಾಗದ ಸಮಸ್ಯೆಗಳು ಮಾತ್ರ ವಿಮಾನ ತಯಾರಕ ಕಂಪೆನಿಯ ದುರಸ್ತಿ ವಿಭಾಗವನ್ನು ತಲುಪುತ್ತವೆ.

ವಿಮಾನ ಪ್ರಯಾಣ ತೀರ ತಡವಾಗುವದು ಅಲ್ಲದಿದ್ದರೆ ರದ್ದಾಗುವುದು ಪ್ರತಿ ವಿಮಾನಯಾತ್ರಿ ಎದುರಿಸುವ ಅನುಭವ ಅಲ್ಲದಿದ್ದರೂ ಜಗತ್ತಿನ ಮೂಲೆಮೂಲೆಗಳಲ್ಲಿ ನಿತ್ಯವೂ ನಡೆಯುವ ,ಮತ್ತೆ ಕೆಲವು ಯಾತ್ರಿಗಳ ಅನುಭವಕ್ಕಾದರೂ ಬರುವ ವಿದ್ಯಮಾನ. ಇನ್ನು ವಿಮಾನಗಳನ್ನು ನಡೆಸುವ ಏರ್ಲೈನ್‌ಗಳ ಮಟ್ಟಿಗೆ ಅವರ ಯಾವ ವಿಮಾನ ಎಷ್ಟು ತಡವಾಗಿ ಹೊರಟಿತು ಎನ್ನುವುದು, ವಿಮಾನಗಳನ್ನು ಏರ್ಲೈನ್‌ಗೆ ಮಾರಾಟ ಮಾಡಿದ ತಯಾರಕ ಕಂಪೆನಿಗೆ ತಾಂತ್ರಿಕ ದೋಷಗಳಿಂದ ತಮ್ಮ ಯಾವ ಮಾದರಿಯ ಎಷ್ಟು ವಿಮಾನಗಳು ತಡವಾದವು ಎನ್ನುವುದು ನಿತ್ಯವೂ ಗಮನಿಸಿ ದಾಖಲಿಸುವ ವಿಷಯಗಳು ಮತ್ತು ವಿಮಾನಗಳ ವಿಶ್ವಸನೀಯತೆಯ ಮಾನದಂಡಗಳು. ಇಡೀ ಜಗತ್ತಿನ ನಾಗರಿಕ ವಿಮಾನಗಳ ಅಂಕಿಅಂಶಗಳನ್ನು ಗಮನಿಸಿದರೆ, ದಿನವೂ ಸಾವಿರದಿಂದ ಎರಡು ಸಾವಿರ ವಿಮಾನ ಯಾನಗಳು ರದ್ದಾಗುವುದು ,ಹಲವು ಸಾವಿರ ವಿಮಾನಗಳು ವಿಳಂಬವಾಗುವುದು ತಿಳಿಯುತ್ತದೆ. ವಿಮಾನಗಳ ತಪಾಸಣೆ ನಿರ್ವಹಣೆಗಳ ಮಹತ್ವವನ್ನು ಮತ್ತೆ ಮತ್ತೆ ನೆನಪಿಸುತ್ತವೆ.

ಈ ಅಂಕಣದ ಹಿಂದಿನ ಬರಹಗಳು
ವಿಮಾನಯಾನದ ವಿದ್ರೋಹ ಪ್ರಕರಣ
ವಿಮಾನ ಪಯಣದ ವಿದಾಯ ಸಮಾರಂಭ
ವಿಮಾನ ಹಾರಾಟದಿಂದ ಹಸಿರು ಹೋರಾಟಕ್ಕೆ
ಬಿಡುವಿಲ್ಲದ ಆಗಸದಲ್ಲಿ ಏನೆಲ್ಲ ಎಷ್ಟೆಲ್ಲ..
ತುರ್ತು ನಿರ್ಗಮನದ ವಿಲಕ್ಷಣ ಕ್ಷಣಗಳು
ಮನೆಗೆ ಮರಳಿದ ಮಹಾರಾಜ
ಲೋಕೋಪಕಾರಿಯ ಪಾತ್ರದಲ್ಲಿ ಲೋಹದ ಹಕ್ಕಿ
ಆಕಾಶದ ರಾಣಿಯೂ ಕನಸಿನ ಹಕ್ಕಿಯೂ.....
ಅಸಲಿ ವಿಮಾನಗಳು ಮತ್ತು ನಕಲಿ ಹಕ್ಕಿಗಳು
ವಿಮಾನ ನಿಲ್ದಾಣಕ್ಕೆ ಸ್ವಾಗತ
ವಿಮಾನ ಸಂತತಿಯ ಶಬ್ದ ಬಣ್ಣ ಚಿತ್ರಗಳು
ಒಂದು ಆಕಾಶ ಹಲವು ಏಣಿಗಳು
ಆಗಸದ ಬಂಡಿಗಳ ಅಂಗರಚನಾಶಾಸ್ತ್ರ
ಕಟ್ಟಿಗೆಯ ಆಟಿಕೆಗಳು ಲೋಹದ ಹಕ್ಕಿಯಾದ ಅಧ್ಯಾಯ
ಗಗನಯಾನದ ದೈತ್ಯ ಹೆಜ್ಜೆಗಳು

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...