ವಿಮಾನಯಾನದ ವಿದ್ರೋಹ ಪ್ರಕರಣ

Date: 11-04-2022

Location: ಬೆಂಗಳೂರು


‘ನಾಗರಿಕ ವಿಮಾನಯಾನ ಮಾರುಕಟ್ಟೆಯ ಅತಿ ದೊಡ್ಡ ಹೆಸರುಗಳು, ಅಮೆರಿಕದ ಬೋಯಿಂಗ್ ಹಾಗು ಯೂರೋಪಿನ ಏರ್ಬಸ್ ಎನ್ನುವ ವಿಮಾನ ತಯಾರಕ ಸಂಸ್ಥೆಗಳು. ಪ್ರತಿ ನಮೂನೆಯ ವಿಮಾನದಲ್ಲೂ ಈ ಎರಡು ಸಂಸ್ಥೆಗಳು ಒಂದರೊಡನೊಂದು ಸೆಣಸುತ್ತವೆ’ ಎನ್ನುತ್ತಾರೆ ಯೋಗೀಂದ್ರ ಮರವಂತೆ. ಅವರು ತಮ್ಮ ಏರೋ ಪುರಾಣ ಅಂಕಣದಲ್ಲಿ ವಿಮಾನಯಾನದ ವಿದ್ರೋಹ ಪ್ರಕರಣಗಳ ಕುರಿತು ವಿಶ್ಲೇಷಿಸಿದ್ದಾರೆ.

2018ರ ಅಕ್ಟೋಬರ್ 29ರಂದು, ಇಂಡೋನೇಶಿಯಾದ "ಲಯನ್ ಏರ್ " ವಿಮಾನ ಎಂದಿನಂತೆ ಬೆಳಗಿನ 6.20ಕ್ಕೆ ಜಕಾರ್ತಾದ ಅಂತರಾಷ್ಟ್ರೀಯ ನಿಲ್ದಾಣದಿಂದ ಹಾರಿತು. ಆದರೆ ಆಕಾಶವನ್ನು ತಲುಪಿದ ಹದಿಮೂರು ನಿಮಿಷಗಳಲ್ಲಿ ಜಾವಾ ಸಮುದ್ರಕ್ಕೆ ಬಿದ್ದು, ಯಾತ್ರಿಗಳು ಮತ್ತು ವಿಮಾನ ಸಿಬ್ಬಂದಿಗಳು ಸೇರಿ ಎಲ್ಲ 189 ಜನರು ಸಾವಿಗೀಡಾದರು. ಕೆಲವರು ಮೊದಲ ಪ್ರತಿಕ್ರಿಯೆಯಾಗಿ ಇಂಡೋನೇಶಿಯಾ ಏರ್ಲೈನರ್ ನ ವಿಮಾನ ನಿರ್ವಹಣೆ, ಸುರಕ್ಷತೆಯ ವ್ಯವಸ್ಥೆಗಳನ್ನು ಟೀಕಿಸಿದರು, ಪೈಲಟ್ ಗಳ ಅನುಭವ ತರಬೇತಿಗಳನ್ನು ಪ್ರಶ್ನೆ ಮಾಡಿದರು. ಇದಾದ ನಾಲ್ಕು ತಿಂಗಳು ಹತ್ತು ದಿನಗಳ ನಂತರ ಇಥಿಯೋಪಿಯನ್ ಏರ್ಲೈನರ್ ನ ಅದೇ ಮಾದರಿಯ ವಿಮಾನ, ಅಂತಹದೇ ಪರಿಸ್ಥಿತಿಗಳಲ್ಲಿ ಅಂತಹದೇ ಅಪಘಾತಕ್ಕೊಳಗಾಗಿ ಎಲ್ಲ ಪ್ರಯಾಣಿಕರೂ ಜೀವತೆತ್ತರು.

ಒಟ್ಟು 346 ಜನರನ್ನು ಬಲಿ ತೆಗೆದುಕೊಂಡ ದಾರುಣ ಅಪಘಾತಗಳು ಇವೆರಡು ಅನ್ನುವುದನ್ನು ಹೊರತು ಪಡಿಸಿ ಇನ್ನೂ ಕೆಲವು ಸಮಾನ ಮತ್ತು ಆಘಾತಕಾರಿ ಅಂಶಗಳು ತನಿಖೆಯಿಂದ ಬೆಳಕಿಗೆ ಬಂದದ್ದು, ಆ ಮೂಲಕ ವಿಮಾನಯಾನ ಶತಮಾನದಿಂದ ಶ್ರಮ ಆಸ್ಥೆಯಲ್ಲಿ ಕಟ್ಟಿ ಬೆಳೆಸಿದ ಸುರಕ್ಷತಾ ಭರವಸೆಯ ಹೆಮ್ಮೆಯ ಕೋಟೆಯಲ್ಲಿ ಬಿರುಕು ಮೂಡಿದ್ದು ಎಲ್ಲವೂ ಈಗ ಕರಾಳ ಇತಿಹಾಸ. ವಿಮಾನ ಲೋಕದ ಒಳ ಹೊರಗಿನವರ ವಿಶ್ವಾಸಕ್ಕೆ ಏಟು ನೀಡಿದ ಜೋಡಿ ಅಪಘಾತಗಳು ಆ ವಿಮಾನ ಮಾದರಿ ಮತ್ತೆ ಅದನ್ನು ತಯಾರಿಸಿದ ಸಂಸ್ಥೆಯ ಸತಕೀರ್ತಿಯನ್ನು ಹಾಳುಗೆಡವಿದವು. ವಿಮಾನ ಉತ್ಪಾದಕ ಕಂಪೆನಿಗೆ ಅವೆರಡು ಅಪಘಾತಗಳು ಎಂತಹ ಕೆಟ್ಟ ಹೆಸರನ್ನೇ ತಂದಿದ್ದರೂ, ಅವುಗಳಲ್ಲಿ ಮಡಿದ ವ್ಯಕ್ತಿಗಳ ಜೀವ ಹಾಗು ಅವರ ಕೌಟುಂಬಿಕರ ಮೊದಲಿನ ಜೀವನ ಮರಳುವುದು ಸಾಧ್ಯ ಇಲ್ಲ.

ಅಪಘಾತದಲ್ಲಿ ಕೆಳಕ್ಕೆ ಬಿದ್ದ ಅವೆರಡೂ ವಿಮಾನಗಳು ಅಮೆರಿಕದ ಬೋಯಿಂಗ್ ಸಂಸ್ಥೆ ನಿರ್ಮಿಸಿದ, ಆ ಕಾಲಕ್ಕೆ ಹೊಸತಾಗಿದ್ದ "737 ಮ್ಯಾಕ್ಸ್" ಮಾಡೆಲ್ ಗಳು. ಜಗತ್ತಿನಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ನಾಗರಿಕ ವಿಮಾನ ಎನ್ನುವ ಪ್ರಸಿದ್ಧಿ ಇರುವ, 150-200 ಪ್ರಯಾಣಿಕರನ್ನು ಸಾಗಿಸುವ, ಮೊಟ್ಟಮೊದಲಿಗೆ 1967ರಲ್ಲಿ ಹಾರಾಟ ಆರಂಭಿಸಿದ 737 ಸಂತತಿಯ ಹೊಚ್ಚಹೊಸ ತಳಿ " 737 ಮ್ಯಾಕ್ಸ್ ". ಹೆಸರೇ ಸೂಚಿಸುವಂತೆ, ಹಿಂದಿನ 737ಗಳಿಗಿಂತ ದೂರ ಹಾರಬಲ್ಲ ಸಾಮರ್ಥ್ಯ ಇರುವ ವಿಮಾನ, ಹಾಗಾಗಿಯೇ ಅದು ಮ್ಯಾಕ್ಸ್. ವಿಮಾನ ತಯಾರಿಯಲ್ಲಿ ನೂರು ವರ್ಷಗಳಿಗಿಂತ ಹೆಚ್ಚು ಇತಿಹಾಸ ಇರುವ ಅಮೆರಿಕದ ಬೋಯಿಂಗ್, ವಿಮಾನಗಳ ಗುಣಮಟ್ಟದ ಮಟ್ಟಿಗೆ ಅದ್ವಿತೀಯ ಎನ್ನುವ ಹೆಸರು ಪಡೆದದ್ದನ್ನು ಬೋಯಿಂಗ್ ನ ಪ್ರತಿಸ್ಪರ್ಧಿಗಳೂ ಒಪ್ಪುವ ವಿಷಯ. ಬೋಯಿಂಗ್ ನ ನಂತರ ಜಗತ್ತಿನಲ್ಲಿ ಆರಂಭಗೊಂಡ ವಿಮಾನ ಉತ್ಪಾದಕ ಕಂಪೆನಿಗಳೆಲ್ಲ ಬೋಯಿಂಗ್ ನ ಬೆಳವಣಿಗೆಯನ್ನು ಕುತೂಹಲದಿಂದ ಅಭ್ಯಾಸ ಮಾಡಿರುತ್ತವೆ, ಏನೋ ಒಂದು ಹೊಸತನ್ನು ಕಲಿತಿರುತ್ತವೆ. 1958ರಲ್ಲಿ ಅಮೆರಿಕದಿಂದ 707 ಎನ್ನುವ ಜೆಟ್ ಎಂಜಿನ್ ಬಳಸುವ ಮೊದಮೊದಲ ನಾಗರಿಕ ವಿಮಾನ ಆಕಾಶಕ್ಕೆ ನೆಗೆದಾಗಿನಿಂದಲೂ "If its not Boeing ,I am not going " ಎನ್ನುವ ಹೇಳಿಕೆ ಪಶ್ಚಿಮ ಜಗತ್ತಿನ ವಿಮಾನ ಪ್ರಯಾಣಿಕರಲ್ಲಿ ಜನಪ್ರಿಯವಾಗಿತ್ತು. ಬೋಯಿಂಗ್ ವಿಮಾನಗಳ ಬಗ್ಗೆ ಇದ್ದ ಲೋಕಪ್ರಿಯತೆ ಹಾಗು ವಿಶ್ವಾಸಾರ್ಹತೆ ಅದು. ಆದರೆ 2018ರಲ್ಲಿ ಎರಡನೆಯ 737 ಮ್ಯಾಕ್ಸ್ ಕೆಳಗೆ ಬಿದ್ದಾಗ, ಬೋಯಿಂಗ್ ನ ಪ್ರತಿಷ್ಠೆಯೂ ವಿಮಾನದಷ್ಟೇ ವೇಗವಾಗಿ ಕೆಳಗೆ ಬಿದ್ದಿತ್ತು. 2019ರ ಮಾರ್ಚ್ ಹತ್ತರಂದು ಇಥಿಯೋಪಿಯನ್ ಏರ್ಲಿನರ್ ನ 737 ಮ್ಯಾಕ್ಸ್ ನಿಗೂಢ ಕಾರಣಗಳಿಗೆ ಅಪಘಾತವಾದ ದಿನವೇ, ತನ್ನ ಬಳಿ ಇರುವ ಇತರ ಮ್ಯಾಕ್ಸ್ ಗಳ ವಿಮಾನ ಯಾನ ಸೇವೆಯನ್ನು ನಿಲ್ಲಿಸಿತು. ಚೈನಾದ ನಾಗರಿಕ ವಿಮಾನಯಾನ ನಿಯಂತ್ರಣ ಸಂಸ್ಥೆ ಮಾರ್ಚ್ 11ರಂದು ತನ್ನ ದೇಶದ ಎಲ್ಲ 737 ಮ್ಯಾಕ್ಸ್ ಗಳ ಹಾರಾಟವನ್ನು ನಿಲ್ಲಿಸಿತು. ಅಮೆರಿಕದ ವಿಮಾನಯಾನ ನಿಯಂತ್ರಣ ಸಂಸ್ಥೆ ಮಾರ್ಚ್ 13ರಂದು 737 ಮ್ಯಾಕ್ಸ್ ಗಳನ್ನು ಹಾರಿಸುವ ಅನುಮತಿಯನ್ನು ರದ್ದು ಪಡಿಸಿತು. ಮುಂದಿನ 619ದಿನಗಳ ಕಾಲ ಜಗತ್ತಿನಲ್ಲಿದ್ದ ಯಾವುದೇ 737 ಮ್ಯಾಕ್ಸ್ ಹಾರಲೇ ಇಲ್ಲ. ಜೋಡಿ ಅಪಘಾತಗಳ ತನಿಖೆ, ಕಾರಣ, ಅನಾವರಣ, ತೀರ್ಪು, ದಂಡ ಮತ್ತೆ ಒಂದು ವೇಳೆ ವಿಮಾನ ವಿನ್ಯಾಸದ ತಪ್ಪಿನಿಂದ ಅಪಘಾತ ನಡೆದದಿದ್ದರೆ ಅಂತಹ ವಿಮಾನಗಳಲ್ಲಿ ಆಗಬೇಕಾದ ಬದಲಾವಣೆಗಳು ಆ 619 ದಿನಗಳನ್ನು ತುಂಬಿದ್ದವು.

ನಾಗರಿಕ ವಿಮಾನಯಾನ ಮಾರುಕಟ್ಟೆಯ ಅತಿ ದೊಡ್ಡ ಹೆಸರುಗಳು, ಅಮೆರಿಕದ ಬೋಯಿಂಗ್ ಹಾಗು ಯೂರೋಪಿನ ಏರ್ಬಸ್ ಎನ್ನುವ ವಿಮಾನ ತಯಾರಕ ಸಂಸ್ಥೆಗಳು. ಪ್ರತಿ ನಮೂನೆಯ ವಿಮಾನದಲ್ಲೂ ಈ ಎರಡು ಸಂಸ್ಥೆಗಳು ಒಂದರೊಡನೊಂದು ಸೆಣಸುತ್ತವೆ. ಹತ್ತಿರ ಹಾರುವ, ದೂರ ಸಾಗುವ, ನೂರೈವತ್ತು ಜನರನ್ನು ಹೊತ್ತೊಯ್ಯುವ, ನಾಲ್ಕುನೂರು ಜನರನ್ನು ಕರೆದೊಯ್ಯುವ, ಸಂಪೂರ್ಣ ಲೋಹದಿಂದ ತಯಾರಾದ ಅಥವಾ ತೀರಾ ಇತ್ತೀಚಿನ ಪ್ಲಾಸ್ಟಿಕ್ ರೆಕ್ಕೆ ಮತ್ತು ದೇಹವನ್ನು ಹೊಂದಿದ, ಹೀಗೆ ಪ್ರತಿ ಬಗೆಯ ವಿಮಾನಗಳಲ್ಲೂ ಇವೆರಡೂ ಕಂಪೆನಿಗಳು ಜಿದ್ದಾಜಿದ್ದಿಯಾಗಿ ತಮ್ಮ ತಮ್ಮ ವಿಮಾನ ಮಾದರಿಗಳನ್ನು ಆದಷ್ಟು ಬೇಗ ಮಾರುಕಟ್ಟೆಗೆ ಬಿಡುಗಡೆ ಮಾಡಿ ಹೆಚ್ಚು ಹೆಚ್ಚು ಮಾರಾಟ ಆಗುವುದಕ್ಕೆ ಪ್ರಯಾಸ ಪಡುತ್ತವೆ. ತಮ್ಮ ಕಂಪೆನಿಗಳಲ್ಲಿ ಬಂಡವಾಳ ಹೂಡಿದ ಷೇರುಗ್ರಾಹಕರಿಗೆ ಹೆಚ್ಚಿನ ಲಾಭವನ್ನು ಮರಳಿಸುವ ಯತ್ನ ಮಾಡುತ್ತವೆ. ಬೋಯಿಂಗ್ ಸಂಸ್ಥೆ ಮಾರುಕಟ್ಟೆಯನ್ನು ಅಧ್ಯಯನ ಮಾಡಿ ಒಂದು ಹೊಸ ಮಾದರಿಯನ್ನು ವಿನ್ಯಾಸಗೊಳಿಸುವ ನಿರ್ಧಾರ ಘೋಷಿಸಿದರೆ, ಏರ್ಬಸ್ ಕೂಡ ಬೋಯಿಂಗ್ ನ ಮಾದರಿಗೆ ಪ್ರತಿಸ್ಪರ್ಧಿಯಾದ ಮಾಡೆಲ್ ಅನ್ನು ತಯಾರಿಸುತ್ತದೆ. ಬೋಯಿಂಗ್ ನ 737 ಹಾಗು ಏರ್ಬಸ್ ನ ಎ320 ಸಂತತಿಯ ವಿಮಾನಗಳು ಕಳೆದ ಮೂರ್ನಾಲ್ಕು ದಶಕಗಳಿಂದ ಒಂದಕ್ಕೊಂದು ಬದ್ಧ ಸ್ಪರ್ಧಿಗಳು ಮತ್ತೆ ಜಗತ್ತಿನಲ್ಲಿ ಅತಿ ಹೆಚ್ಚು ಬಳಸಲ್ಪಡುವ, ನೂರೈವತ್ತರಿಂದ್ ಇನ್ನೂರು ಜನರನ್ನು , ಒಂದರಿಂದ ನಾಲ್ಕು ಗಂಟೆಗಳ ದೂರಪ್ರಯಾಣ ಮಾಡಿಸುವ ಅತಿ ಬೇಡಿಕೆಯ ಮಾರುಕಟ್ಟೆಯ ಪ್ರಧಾನ ಪಾಲುದಾರರು. ಈ ವಿಮಾನ ನಮೂನೆಗಳಲ್ಲಿಯೇ ಅಲ್ಪಸ್ವಲ್ಪ ಬದಲಾವಣೆ ಮಾಡುತ್ತಾ ಐದೋ ಹತ್ತೋ ವರ್ಷಗಳಿಗೆ ಬದಲಾಗುವ ಮಾರುಕಟ್ಟೆಯ ಬೇಡಿಕೆಯನ್ನು ಇಲ್ಲಿಯ ತನಕ ಬೋಯಿಂಗ್ ಹಾಗು ಏರ್ಬಸ್ ಗಳು ಪೂರೈಸುತ್ತಾ ಬಂದಿವೆ. ಮೂಲಭೂತವಾಗಿ ಅದೇ ಹಂದರವನ್ನು ಇಟ್ಟುಕೊಂಡು, ಹೊಸ ಎಂಜಿನ್, ಮತ್ತೆ ರೆಕ್ಕೆಯ ತುದಿಗೆ ಅಳವಡಿಸುವ ಜೋಡಣೆಯನ್ನು ಬದಲಿಸಿ ಇನ್ನೂ ಹೆಚ್ಚು ದೂರ ಹಾರುವಂತೆ, ವಿಮಾನದ ದೇಹವನ್ನು ತುಸು ಉದ್ದ ಮಾಡಿ ಇನ್ನೂ ಕೆಲವು ಸೀಟುಗಳನ್ನು ಕೂಡಿಸುವಂತೆ ಮಾಡಿದ ಹಲವು ಬೋಯಿಂಗ್ ನ 737 ಮಾದರಿಗಳು ಹಾಗು ಏರ್ಬಸ್ ನ ಎ320 ಸಂತತಿಯ ವಿಮಾನಗಳು ಆಕಾಶದಲ್ಲಿ, ನಿಲ್ದಾಣಗಳಲ್ಲಿ ಎಲ್ಲೆಲ್ಲೂ ಕಾಣ ಸಿಗುತ್ತವೆ. ಏರ್ಬಸ್ ನ ಹತ್ತಿರದ ತಿರುಗಾಟದ ಮಾರುಕಟ್ಟೆಯ ಇತ್ತೀಚಿನ ವಿಮಾನಗಳು ಎ320ನಿಯೋ (New Engine Option or NEO) ಹಾಗು ಎ321ನಿಯೋ ಗಳು. ಹೆಚ್ಚು ಇಂಧನ ಇಳುವರಿ ನೀಡುವ ಹೊಸ ಎಂಜಿನ್ ನೊಡನೆ, ಇದೇ ಸಂತತಿಯ ಈ ಹಿಂದಿನ ಏರ್ಬಸ್ ವಿಮಾನಗಳಿಗಿಂತ ದೂರ ಹಾರುವ ವಿಮಾನಗಳು ಅವು. ಏರ್ಬಸ್ ನ ಎ320ನಿಯೋಗಳ ಸ್ಪರ್ಧಿಯಾಗಿ , ದೊಡ್ಡ ಬದಲಾವಣೆ ಮಾಡದೇ ಇರುವ ಮಿತಿಗಳನ್ನೇ ಹಿಗ್ಗಿಸುತ್ತ ತಯಾರಾದ ಬೋಯಿಂಗ್ ಕಂಪೆನಿಯ ಹೊಸ ವಿಮಾನ 737 ಮ್ಯಾಕ್ಸ್. ಮತ್ತೆ 737 ಮ್ಯಾಕ್ಸ್ ನ ಎರಡೂ ಅಪಘಾತಗಳಿಗೆ ಕಾರಣವಾದದ್ದು ಅವಸರದಲ್ಲಿ ಆದಷ್ಟು ಬೇಗ ಮಾರುಕಟ್ಟೆಯನ್ನು ತಲುಪಿ ಸೇವೆ ಆರಂಭಿಸುವ ತರಾತುರಿಯಲ್ಲಿ, ಕಡಿಮೆ ಖರ್ಚಿನಲ್ಲಿ, ಹೆಚ್ಚು ಲಾಭ ತರಿಸುವ ಅಂದಾಜಿನಲ್ಲಿ ಮಾಡಲ್ಪಟ್ಟ ವಿಮಾನ ವಿನ್ಯಾಸದ ಭಾಗವಾದ ಚಾಲನಾ ನಿಯಂತ್ರಣಕ್ಕೆ ಸಂಬಂಧಿಸಿದ ಕೆಲವು ತಪ್ಪುಗಳು.

ವಿಮಾನಗಳು ಆಕಾಶದಲ್ಲಿ ಹಾರುತ್ತಿರುವಾಗ ಸಮತೋಲನದ ಹಾರಾಟವನ್ನು ಕಳೆದುಕೊಂಡು ಕೆಳಗೆ ಕುಸಿಯುವ ಸಂದರ್ಭಗಳು ಇರುತ್ತವೆ. ಅಂತಹ ಸಂದರ್ಭಗಳನ್ನು ಸ್ವಯಂಚಾಲಿತವಾಗಿ ತಪ್ಪಿಸುವ ( anti stall) ಹೊಸ ವ್ಯವಸ್ಥೆಯಾದ, MCAS (Maneuvering Characteristics Augmentation System) ಅನ್ನು 737ಮ್ಯಾಕ್ಸ್ ಅಲ್ಲಿ ಅಳವಡಿಸಲಾಗಿತ್ತು. ಹೊಸ ವ್ಯವಸ್ಥೆಗೆ ಪೂರಕವಾಗಿ, ಒಂದು ಸಂವೇದಕವನ್ನು (Sensor) ಗಾಳಿ ಮತ್ತು ವಿಮಾನದ ರೆಕ್ಕೆಯ ನಡುವಿನ ಕೋನವನ್ನು (angle of attack ), ವಿಮಾನದ ವೇಗವನ್ನು ಅಳೆದು ತಿಳಿಸಲು ರೂಪಿಸಲಾಗಿತ್ತು. ಅಪಘಾತ ನಡೆದ ಎರಡೂ ವಿಮಾನಗಳಲ್ಲಿ, ಗಾಳಿ ಮತ್ತು ವಿಮಾನದ ರೆಕ್ಕೆಯ ನಡುವಿನ ಕೋನವನ್ನು ಅಳೆದು ತಿಳಿಸಬೇಕಾದ ಸಂವೇದಕದ ಸರಿಯಾಗಿ ಕೆಲಸ ನಿರ್ವಹಿಸದೆ, ವಿಮಾನ ಮೂತಿ ಮೇಲೆ ಮಾಡಿ, ಸಮತೋಲನ ಕಳೆದುಕೊಂಡು ಕುಸಿಯುತ್ತಿದೆ ಎಂದು ತಪ್ಪು ಸಂದೇಶ ಕಳುಹಿಸಲಾರಂಭಿಸಿದಾಗ, MCAS ವ್ಯವಸ್ಥೆಯೂ ನಿಜವಾದ ಸ್ಥಿತಿಯನ್ನು ತಿಳಿಯಲು ವಿಫಲವಾಗಿ, ಮೂತಿ ಮೇಲೆ ಮಾಡಿ ಕುಸಿಯುತ್ತಿರಬಹುದಾದ ವಿಮಾನವನ್ನು ಸಮತೋಲನಕ್ಕೆ ತರಲು ವಿಮಾನವನ್ನು ಕೆಳಮುಖ ಮಾಡುವ ಪ್ರಯತ್ನ ಮಾಡಿದೆ. ಚಾಲಕನ ಹತೋಟಿಯನ್ನೂ ಮೀರಿ ಪದೇ ಪದೇ ವಿಮಾನದ ಮೂತಿಯನ್ನು ಕೆಳಮಾಡಿ ಧುಮುಕುವಂತೆ ಮಾಡಿದೆ. ಎಷ್ಟು ಬಾರಿ ಪೈಲಟ್ ವಿಮಾನವನ್ನು ಸಮಸ್ಥಿತಿಗೆ ತರುವ ಯತ್ನ ಮಾಡಿದರೂ ತುಸು ಹೊತ್ತಿನಲ್ಲಿ ಮತ್ತೆ ಹೊಸ ನಿಯಂತ್ರಣ ವ್ಯವಸ್ಥೆ ವಿಮಾನ ಕೆಳಮುಖವಾಗಿಸುವ ಸಂದೇಶ ನೀಡುತ್ತಿದೆ. ಪ್ರತಿ ಬಾರಿ MCAS ಸಾಫ್ಟ್ವೇರ್ ವ್ಯವಸ್ಥೆ ಹಾಗು ಚಾಲಕರ ನಡುವೆ ವಿಮಾನವನ್ನು ತಮ್ಮ ನಿಯಂತ್ರಣಕ್ಕೆ ತಂದುಕೊಳ್ಳುವ ಹೋರಾಟ ನಡೆದಾಗ ವಿಮಾನವು ಹಾರಾಟದ ಎತ್ತರವನ್ನು ಕಳೆದುಕೊಳ್ಳುತ್ತಾ ಇನ್ನಷ್ಟು ನೆಲಕ್ಕೆ ಹತ್ತಿರ ಆಗುತ್ತಿದೆ. ವಿಮಾನ ಸಮತೋಲನವನ್ನು ಪುನರ್ಸ್ಥಾಪಿಸಿ ಪ್ರಯಾಣ ಮುಂದುವರಿಸುವ ಪ್ರಯತ್ನದಲ್ಲಿಯೇ ಕೆಳಕೆಳಗೆ ಇಳಿಯುತ್ತ ಕೊನೆಗೆ ನೆಲಕ್ಕೆ ಅಥವಾ ನೀರಿಗೆ ಅಪ್ಪಳಿಸಿದೆ.

ಅಪಘಾತದ ನಂತರ ನಡೆದ ತನಿಖೆಗಳು , 737 ಮ್ಯಾಕ್ಸ್ ಅಲ್ಲಿ MCAS ವ್ಯವಸ್ಥೆಗೆ ಇರುವ ಬಗ್ಗೆ, ಚಾಲಕನ ಹತೋಟಿಯನ್ನು ಮೀರುವ ಶಕ್ತಿ, ಹೊಸ ನಿಯಂತ್ರಣ ವ್ಯವಸ್ಥೆಗೆ ಇರುವ ಕುರಿತು ಯಾವುದೇ ಮಾಹಿತಿ, ತರಬೇತಿಗಳನ್ನು ಪೈಲಟ್ ಗಳಿಗೆ ನೀಡಿರಲಿಲ್ಲ ಎನ್ನುವ ಆಘಾತಕಾರಿ ಅಂಶಗಳನ್ನು ತಿಳಿಸುತ್ತವೆ. ಕಾಕ್ಪಿಟ್ ಅಲ್ಲಿರುವ " ಪೈಲಟ್ ಕೈಪಿಡಿ" ಯಲ್ಲಿಯಲ್ಲಿಯೂ ಈ ಕುರಿತಾದ ಉಲ್ಲೇಖ ಅಥವಾ ಸಲಹೆ ಇರಲಿಲ್ಲ. ವಿಮಾನ ಹಾರಾಟದ ಪರವಾನಿಗೆ ನೀಡುವ ಸಂಸ್ಥೆಗಳಿಗೂ ಹೊಸ MCAS ವ್ಯವಸ್ಥೆಯ ಮಹತ್ವವನ್ನು ತಿಳಿಸಿರಲಿಲ್ಲ. ವಿಮಾನ ವಿನ್ಯಾಸ, ತಪಾಸಣೆ, ಸುರಕ್ಷೆಯ ಪರೀಕ್ಷೆಗಳ ಹಲವು ಹಂತಗಳನ್ನು ಅತ್ಯಂತ ಚುರುಕುಗೊಳಿಸಿ ಒಳದಾರಿಗಳನ್ನು ಬಳಸಿಕೊಂಡು ವೇಗವಾಗಿ 737 ಮ್ಯಾಕ್ಸ್ ವಿಮಾನವನ್ನು ಮಾರುಕಟ್ಟೆಗೆ ದೂಡುವುದೇ ಬೋಯಿಂಗ್ ನ ಗುರಿಯಾಗಿತ್ತು ಎನ್ನುವುದು ಬಯಲಾಗಿದೆ. ಹೊಸ ವ್ಯವಸ್ಥೆಯನ್ನು ವಿಮಾನಯಾನ ನಿಯಂತ್ರಣ ಸಂಸ್ಥೆಗಳಿಗೆ ಪರವಾನಿಗೆ ಪಡೆಯುವ ಹಂತದಲ್ಲಿ ವಿವರವಾಗಿ ತಿಳಿಸಬೇಕೇ ಬೇಡವೇ ಎನ್ನುವ ಬಗ್ಗಿನ ಈಮೈಲ್ ಚರ್ಚೆಗಳು ಬೋಯಿಂಗ್ ಕಂಪೆನಿಯ ಸಹೋದ್ಯೋಗಿಗಳ ನಡುವೆ ನಡೆದಿದ್ದವು ಎನ್ನುವುದೂ ತನಿಖೆಯಿಂದ ತಿಳಿದಿದೆ. ವಿನ್ಯಾಸದ ಪ್ರತಿ ಹಂತದದಲ್ಲೂ ಸುರಕ್ಷತೆಯೇ ಆದ್ಯತೆಯಾಗಬೇಕಿರುವಾಗ, ಒಂದು ಮಹತ್ವದ ನಿರ್ಣಾಯಕ ಹೊಸ ವ್ಯವಸ್ಥೆಯ ಬಗೆಗಿನ ವಿವರಗಳನ್ನು ವಿಮಾನಯಾನ ನಿಯಂತ್ರಣ ಮಂಡಳಿಯಿಂದ ಹಿಡಿದು ಪೈಲಟ್ ಗಳ ತನಕ , ಎಲ್ಲರಿಂದ ಮುಚ್ಚಿಟ್ಟದ್ದು ಅಕ್ಷಮ್ಯ ಅಪರಾಧ ಎಂದೂ ತನಿಖೆ ದಾಖಲಿಸುತ್ತದೆ. 2021ರಲ್ಲಿ ಮುಗಿದ ತನಿಖೆ, ವಿಚಾರಣೆಗಳ ನಂತರ ಬೋಯಿಂಗ್ ಸಂಸ್ಥೆಯ ಮೇಲಿನ ಆಪಾದನೆ ಸಾಬೀತಾಗಿ, 2.5 ಬಿಲಿಯನ್ ಡಾಲರ್ ಗಳ ದಂಡ ಹಾಕಲಾಯಿತು. ಪ್ರತಿವರ್ಷ ಹಲವು ನೂರು ವಿಮಾನಗಳನ್ನು ಮಾರಿ ಕೆಲವು ನೂರು ಬಿಲಿಯನ್ ಡಾಲರ್ ದುಡಿಯುವ ವ್ಯಾಪಾರಿ ಸಂಸ್ಥೆಗೆ ಈ ದಂಡ ದೊಡ್ಡದಾಗಿರಲಿಲ್ಲ. ಎರಡನೆಯ ಅಪಘಾತದ ನಂತರ ಮ್ಯಾಕ್ಸ್ ವಿಮಾನಗಳ ಸೇವೆಯನ್ನು ನಿಲ್ಲಿಸಿದಾಗ ಕುಸಿದ ಬೋಯಿಂಗ್ ನ ಷೇರುಗಳ ಬೆಲೆಯೂ ಕಂಪೆನಿಯ ಪ್ರಮಾದಕ್ಕೆ ಶಿಕ್ಷೆ ಆಗಲಾರದು. ತನಿಖೆ, ದಂಡಗಳ ಅಧ್ಯಾಯ ಮುಗಿದು, MCAS ವ್ಯವಸ್ಥೆಗೆ ಸೂಕ್ತ ಬದಲಾವಣೆ ಮಾಡಿ ಮರುಪರೀಕ್ಷೆ ನಡೆಸಿ ಪರವಾನಿಗೆ ಪಡೆದು ಇಡೀಗೆ 737 ಮ್ಯಾಕ್ಸ್ ಗಳು ಮತ್ತೆ ಸೇವೆ ಆರಂಭಿಸಿವೆ. ಆದರೆ, ಸುರಕ್ಷತೆಯ ಕುರಿತು ಕುಸಿದು ಹೋಗಿರುವ ನಂಬಿಕೆ ಮತ್ತೆ ಮರಳೀತೇ ಎನ್ನುವ ಪ್ರಶ್ನೆ ಹಾಗೆ ಉಳಿದಿದೆ. ವಿಮಾನಯಾನದ ವಿದ್ರೋಹ ಪ್ರಕರಣವಾಗಿ ದೀರ್ಘಕಾಲ ಕಾಡಲಿದೆ.

ಈ ಅಂಕಣದ ಹಿಂದಿನ ಬರಹಗಳು
ವಿಮಾನ ಪಯಣದ ವಿದಾಯ ಸಮಾರಂಭ
ವಿಮಾನ ಹಾರಾಟದಿಂದ ಹಸಿರು ಹೋರಾಟಕ್ಕೆ
ಬಿಡುವಿಲ್ಲದ ಆಗಸದಲ್ಲಿ ಏನೆಲ್ಲ ಎಷ್ಟೆಲ್ಲ..
ತುರ್ತು ನಿರ್ಗಮನದ ವಿಲಕ್ಷಣ ಕ್ಷಣಗಳು
ಮನೆಗೆ ಮರಳಿದ ಮಹಾರಾಜ
ಲೋಕೋಪಕಾರಿಯ ಪಾತ್ರದಲ್ಲಿ ಲೋಹದ ಹಕ್ಕಿ
ಆಕಾಶದ ರಾಣಿಯೂ ಕನಸಿನ ಹಕ್ಕಿಯೂ.....
ಅಸಲಿ ವಿಮಾನಗಳು ಮತ್ತು ನಕಲಿ ಹಕ್ಕಿಗಳು
ವಿಮಾನ ನಿಲ್ದಾಣಕ್ಕೆ ಸ್ವಾಗತ
ವಿಮಾನ ಸಂತತಿಯ ಶಬ್ದ ಬಣ್ಣ ಚಿತ್ರಗಳು
ಒಂದು ಆಕಾಶ ಹಲವು ಏಣಿಗಳು
ಆಗಸದ ಬಂಡಿಗಳ ಅಂಗರಚನಾಶಾಸ್ತ್ರ
ಕಟ್ಟಿಗೆಯ ಆಟಿಕೆಗಳು ಲೋಹದ ಹಕ್ಕಿಯಾದ ಅಧ್ಯಾಯ
ಗಗನಯಾನದ ದೈತ್ಯ ಹೆಜ್ಜೆಗಳು

MORE NEWS

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...