ದಾಸ್ಯವೂ..ಸ್ವಾತಂತ್ರ್ಯವೂ..

Date: 18-08-2021

Location: ಬೆಂಗಳೂರು


‘ಸ್ವಾತಂತ್ರ್ಯದಲ್ಲಿ ಹಲವು ವಿಧಗಳಿವೆ. ಪರಿಸರ, ಪರಿಸ್ಥಿತಿ ಮತ್ತು ಮನುಷ್ಯನ ಮಾನಸಿಕ ಬದಲಾವಣೆಗಳಿಗೆ ಅನುಸಾರವಾಗಿ ಅವುಗಳು ನಿರ್ಧರಿಸಲ್ಪಡುತ್ತವೆ’ ಎನ್ನುತ್ತಾರೆ ಲೇಖಕ ಸಂತೋಷ ಅನಂತಪುರ. ತಮ್ಮ ಅನಂತಯಾನ ಅಂಕಣದಲ್ಲಿ ಸ್ವಾತಂತ್ರ್ಯ ಹಾಗೂ ದಾಸ್ಯಗಳ ಕುರಿತು ವಿಶ್ಲೇಷಿಸಿದ್ದಾರೆ.

“ಸ್ವಾತಂತ್ರ್ಯ ಎಂದರೆ ಶಿಸ್ತು, ವಿಧೇಯತೆ, ಶಾಂತಿ. ಅದಿಲ್ಲದೆ ಸಾತಂತ್ರ್ಯಕ್ಕೆ ಏನರ್ಥ?” ಇದು ಸರದಾರ್ ವಲ್ಲಭಬಾಯಿ ಪಟೇಲ್ ಹೇಳಿದ ಮಾತು. ಪ್ರತಿಯೊಂದು ಜೀವಿಯೂ ಸ್ವಾತಂತ್ರ್ಯವನ್ನು ಪಡೆಯುವ ತರಾತುರಿಯಲ್ಲಿದ್ದು ಅದಕ್ಕೋಸ್ಕರ ತಮ್ಮ ಬಲಿದಾನವನ್ನು ಮಾಡಲು ಸಹ ಸಿದ್ಧವಿರುತ್ತವೆ. ಪ್ರಾಣಿ-ಪಕ್ಷಿಗಳು ಪಂಜರದಲ್ಲಿ ಚಡಪಡಿಸುವುದನ್ನು ಕಂಡರೆ ಸ್ವಾತಂತ್ರ್ಯದ ಮಹತ್ವದ ಅರಿವಾಗುತ್ತದೆ. ಆದರೆ ಇಂದು ಸ್ವಾತಂತ್ರ್ಯವೆಂದರೆ ಸ್ವೇಚ್ಛಾಚಾರದ ಪರಮಾವಧಿಯಲ್ಲಿ ನಲಿಯಲಿಕ್ಕಿರುವ ಒಂದು ಸುವಿಧಾನವಷ್ಟೆ. ಮನಸ್ಸಿಗೆ ತೋಚಿದ್ದನ್ನು ಮಾಡುವುದೇ ಸ್ವಾತಂತ್ರ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ದೇಶದ ಉದ್ದಗಲಕ್ಕೂ ಸ್ವಾತಂತ್ರ್ಯದ ವಿಧೇಯತೆಯನ್ನು ಕಾಣುವುದಿಲ್ಲ. ದೇಶದ ವಯಸ್ಸು ಏರುತ್ತಾ ಹೋದರೂ ದೇಶವಾಸಿಗಳಲ್ಲಿ ಮಾಗುವಿಕೆಯು ಮಾತ್ರ ಗೋಚರಿಸುತ್ತಿಲ್ಲ.

ಸ್ವಾತಂತ್ರ್ಯದಲ್ಲಿ ಹಲವು ವಿಧಗಳಿವೆ. ಪರಿಸರ, ಪರಿಸ್ಥಿತಿ ಮತ್ತು ಮನುಷ್ಯನ ಮಾನಸಿಕ ಬದಲಾವಣೆಗಳಿಗೆ ಅನುಸಾರವಾಗಿ ಅವುಗಳು ನಿರ್ಧರಿಸಲ್ಪಡುತ್ತವೆ. ಒಂದು ದೇಶದ ಜನತೆಗೆ, ತಮ್ಮ ಇಚ್ಛೆಗೆ ಅನುಗುಣವಾಗಿ ಸರಕಾರಿ ವ್ಯವಸ್ಥೆಯನ್ನು ಸ್ಥಾಪಿಸಿ ಅದನ್ನು ಅನುಭವಿಸಿಕೊಂಡು ಬರುವಂತಹದ್ದಕ್ಕೆ ಸ್ವಾತಂತ್ರ್ಯ ಎನ್ನುತ್ತೇವೆ. ಸ್ವಾತಂತ್ರ್ಯವನ್ನು ಪಡೆಯುವುದು, ಸ್ವತಂತ್ರವಾಗಿ ನಡೆಯುವುದು ಎರಡೂ ಸುಖಾಸುಮ್ಮನೆ ಘಟಿಸುವುವಂತಹದ್ದಲ್ಲ. ಸ್ವಾತಂತ್ರ್ಯವನ್ನು ಗಳಿಸಿಕೊಳ್ಳುವುದಾಗಿದೆ. ಸುಮಾರು ಇನ್ನೂರು ವರ್ಷಗಳ ಅವಧಿಯಲ್ಲಿ ಪರಾಧೀನವಾಗಿದ್ದುಕೊಂಡ ಭಾರತವು-ಯಾವುದೇ ರೀತಿಯಲ್ಲಿ ಆಂತರಿಕ, ಬಾಹ್ಯಾ ಕೇತ್ರಗಳಲ್ಲಿ ಆಡಳಿತಾತ್ಮಕವಾದ ವ್ಯವಸ್ಥೆಯೊಂದನ್ನು ಮಾಡಿಕೊಳ್ಳುವುದರಿಂದ ವಂಚಿತವಾಗಿತ್ತು. ಕೊನೆಗೂ, ಸತತ ಪ್ರಯತ್ನದಿಂದ 1947ರಲ್ಲಿ ಸರ್ವ ಕ್ಷೇತ್ರಗಳಲ್ಲೂ ಸ್ವಾತಂತ್ರ್ಯವನ್ನು ಗಳಿಸುವತ್ತ ಹೆಜ್ಜೆಯನ್ನಿಟ್ಟೆವು ಎಂಬುದೀಗ ಇತಿಹಾಸ.

ಈ ದೇಶದ ಜನತೆಗೆ ಒಲ್ಲದ, ಒಗ್ಗದ ಸರಕಾರವು ಬಲ ಪ್ರಯೋಗದಿಂದ ತನ್ನ ಅಧಿಪತ್ಯವನ್ನು ಸ್ಥಾಪಿಸಿ ಇಲ್ಲಿಯ ಜನರನ್ನು ಸೇವಕರಂತೆ ನಡೆಸಿಕೊಳ್ಳುತ್ತಿತ್ತು. ಎಲ್ಲ ಧೋರಣೆಗಳು, ರೀತಿ-ನೀತಿ-ನಿಯಮಗಳು ಬ್ರಿಟಿಷ್ ಸಾಮ್ರಾಜ್ಯದ ಒಳಿತಿಗಾಗಿಯೇ ಇತ್ತು. ಇದರಿಂದಾಗಿ, ದೇಶವು ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಬರಡಾಗುತ್ತಾ ಹೋಯಿತು. ಜೊತೆಯಲ್ಲಿ, ದೇಶದೊಳಗಿನ ರಾಜಾಢಳಿತವು ಆಂತರಿಕ ಬಿಕ್ಕಟ್ಟನ್ನು ಹೆಚ್ಚಿಸುತ್ತಾ, ಆಂಗ್ಲರ ಎದುರು ಒಗ್ಗಟ್ಟನ್ನು ಪ್ರದರ್ಶಿಸುವಲ್ಲಿ ವಿಫಲವಾಯಿತು. ಯಾವುದೇ ದೇಶದ ವಾಸಿಗಳು ದಾಸ್ಯದ ಸಂಕೋಲೆಯೊಳಗೆ ಸಾಧ್ಯತೆಯ ಗುರಿಯನ್ನು ಕಂಡುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅದಕ್ಕೆ ವೈಯಕ್ತಿಕ, ಧಾರ್ಮಿಕ ಮತ್ತು ರಾಜಕೀಯ ಸ್ವಾತಂತ್ರ್ಯವು ಅತ್ಯಂತ ಅವಶ್ಯಕವಾಗಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಳೆದರೂ ನಮ್ಮಲ್ಲಿನ್ನೂ ಆ ಪದದ ಪರಿಕಲ್ಪನೆ ಆಗದಿರುವುದು ಮಾತ್ರ ವಿಷಾದನೀಯ. ದೇಶ ಸ್ವತಂತ್ರವಾಯಿತೆಂದರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ದೊರಕಿತು ಎಂದರ್ಥವಲ್ಲ. ಸ್ವಾತಂತ್ರ್ಯದ ಮಹತ್ವವನ್ನು ಅರಿತು ಅದರ ಸಂಪೂರ್ಣ ಸೌಲಭ್ಯ ಪಡೆದುಕೊಳ್ಳುವ ಜವಾಬ್ದಾರಿ ನಮ್ಮದಾಗಬೇಕು. ಬೇಸರದ ಸಂಗತಿಯೆಂದರೆ; ನಿಜಾರ್ಥದ `ಸ್ವಾತಂತ್ರ್ಯ'ದ ಸದ್ಬಳಕೆಯು ಇಂದಿಗೂ ಜರುಗದೆ ಸ್ವಾತಂತ್ರ್ಯದ ಹೆಸರಲ್ಲಿ ದುರಾಡಳಿತವು ನಡೆಯುತ್ತಿದೆ ಎನ್ನುವುದು.
***
ಸ್ವಾತಂತ್ರ್ಯದಿಂದ ಆಗುವ ಉಪಯೋಗಕ್ಕಿಂತ ಹೆಚ್ಚಾಗಿ ನಮ್ಮ ದೃಷ್ಟಿಕೋನವು ಅದು ನಮ್ಮ ಮೇಲೆ ಹೇರುವ ಜವಾಬ್ದಾರಿಯ ಮೇಲಿರಬೇಕು. ಈ ದೇಶದ 130 ಕೋಟಿಗೂ ಮಿಕ್ಕ ಜನತೆಗೆ ಸಮಾನಾವಕಾಶಗಳು ದೊರಕುವಂತೆ, ಪ್ರತಿಯೊಬ್ಬ ವ್ಯಕ್ತಿಯೂ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕವಾಗಿ ಔನ್ನತ್ಯಕ್ಕೆ ಏರಬೇಕಾದುದು ಆಧುನಿಕ ಭಾರತದ ಅಗತ್ಯವಾಗಿದೆ. ಸ್ವಾತಂತ್ರ್ಯದ ಸೌಲಭ್ಯಗಳನ್ನು ಜನಬಲದ ಜತೆಗೆ ಬೌದ್ಧಿಕ ಬಲವುಳ್ಳವರೂ ಕಸಿದು ಕೊಂಡದ್ದನ್ನು- ಕೊಳ್ಳುವುದನ್ನು ಕಂಡಿದ್ದೇವೆ ಮತ್ತು ಕಾಣುತ್ತಿದ್ದೇವೆ. ಸಿಗಬೇಕಾದಲ್ಲಿ ಸಿಗದ ಸ್ವಾತಂತ್ರ್ಯವು ಸಮಾಜದಲ್ಲಿ ಅಸಮತೋಲನವನ್ನು ಸೃಷ್ಟಿಸುತ್ತದೆ. ಪರಿಣಾಮ ಆರ್ಥಿಕ-ಸಾಮಾಜಿಕವಾಗಿ ಹಿಂದುಳಿದವರು ನಿರಂತರವಾಗಿ ಶೋಷಣೆಗೆ ಒಳಗಾಗುತ್ತಲೇ ಇರುತ್ತಾರೆ.

ಆಂತರಿಕವಾಗಿ ದೇಶದ ಸ್ಥಿತಿಗೆ ಅನುಕೂಲವಾಗುವಂತಹ ಒಂದು ಸಾಮಾಜಿಕ, ಆರ್ಥಿಕ ವ್ಯವಸ್ಥೆಯನ್ನು ರೂಪಿಸಿಕೊಳ್ಳುವ ಮತ್ತು ಅದಕ್ಕೆ ಪೂರಕವಾಗಿ ಹೊರಗಿನ ದೇಶಗಳೊಂದಿಗೆ ಸಂಪರ್ಕವನ್ನು ಬೆಸೆದು ಬೆಳೆಸಿಕೊಳ್ಳುವುದು ದೇಶದ ವ್ಯೂಹಾತ್ಮಕ ದೃಷ್ಟಿಯಲ್ಲಿ ಮಹತ್ತದ್ದು. ದೇಶದ ರಕ್ಷಣೆ, ವೈಜ್ಞಾನಿಕ ಪ್ರಗತಿ, ಆರ್ಥಿಕ ಮುನ್ನಡೆ ಇವುಗಳನ್ನು ಅಂತಾರಾಷ್ಟ್ರೀಯ ಪೈಪೋಟಿಯೊಂದಿಗೆ ಸಾಧಿಸಿ ಪಡೆದುಕೊಳ್ಳುವುದು ಸುಲಭದ ಮಾತಲ್ಲ. ಅದಕ್ಕಾಗಿ ಪಡಬೇಕಾದ ಶ್ರಮ ಅಪಾರ. ಈ ಪ್ರಕ್ರಿಯೆಗೆ ಸಹಾಯಕವಾಗುವಂತಹ ವಿಷಯಗಳನ್ನು ಸಂಪಾದಿಸುವುದಕ್ಕೆ ಸಾಧ್ಯವಾಗುವ ರೀತಿಯ ವ್ಯವಸ್ಥೆಯನ್ನು ನಿರ್ಮಿಸುವುದಲ್ಲದೆ, ಅದನ್ನು ಸದುಪಯೋಗ ಪಡಿಸುವತ್ತಲೂ ಶ್ರಮಿಸಬೇಕಿರುವುದು ಕಾಲದ ಅಗತ್ಯಗಳಲ್ಲಿ ಒಂದು. ಪ್ರಬಲ ರಾಷ್ಟ್ರಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ದುರ್ಬಲ ದೇಶಗಳನ್ನು ಕೈಗೊಂಬೆಗಳಾಗಿಸಿ, ಹಿರಿಯಣ್ಣನೆಂಬ ಹಣೆಪಟ್ಟಿ ಕಟ್ಟಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ. ಕೇವಲ 500 ವರ್ಷದ ಇತಿಹಾಸವನ್ನು ಹೊಂದಿದ ಅಮೆರಿಕಾವು ಜಾಗತಿಕವಾಗಿ ನಂಬರ್ ಒನ್ ದೇಶ ಆಗಬಹುದಾದರೆ, 5000 ವರ್ಷಗಳಷ್ಟು ಇತಿಹಾಸವನ್ನು ಹೊಂದಿರುವ ಭಾರತಕ್ಕೆ ಆ ಸ್ಥಾನವನ್ನು ಗಳಿಸಿಕೊಳ್ಳಲು ಯಾಕೆ ಸಾಧ್ಯವಾಗುತ್ತಿಲ್ಲ? ಭವ್ಯ ಪರಂಪರೆ ಇರುವ ಈ ನಾಡಿಗೆ ದಾಸ್ಯತನದಿಂದ ಇನ್ನೂ ಮುಕ್ತಿ ದೊರಕಿಲ್ಲ ಎಂದರೆ ಅಚ್ಚರಿಯೇ ಸರಿ. ಅದಕ್ಕೆ ಬಲವಾದ ಕಾರಣಗಳೂ ಇಲ್ಲದಿಲ್ಲ. ನಮ್ಮವರಿಂದಲೇ ತುಳಿತಕ್ಕೊಳಗಾಗುವ ನಾವು- ನಮ್ಮವರಿಗೇ ದಾಸ್ಯರಾಗಿ ಬಿಡುವುದು ಪ್ರಸಕ್ತ ಸಮಯದ ಬಹುದೊಡ್ಡ ಅಚ್ಚರಿ ಮತ್ತು ಸಂಕಟ.

ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದಾಗ ಕಾಣಬರುವ ಕಪ್ಪು ಚುಕ್ಕೆಗಳು ಅದೆಷ್ಟೋ. ಅವೆಲ್ಲವನ್ನೂ ಇಂದು ಸಾಧ್ಯವಾದಷ್ಟು ಮಟ್ಟಿಗೆ ತೊಡೆದು ಹಾಕಿದ್ದೇವೆಂದರೂ ಸಂಪೂರ್ಣವಾಗಿ ನಿರ್ಮೂಲನ ಮಾಡುವಲ್ಲಿ ಇನ್ನೂ ಯಶಸ್ವಿಯಾಗಿಲ್ಲ. ಸತ್ಯವನ್ನು ಸತ್ಯವೆಂದು ಹೇಳಿಕೊಳ್ಳುವ ಎದೆಗಾರಿಕೆ ಇನ್ನೂ ಬಂದೇ ಇಲ್ಲ. ಚರಿತ್ರೆಯನ್ನು ತಿರುಚುವಂತಹ ಕಲೆಗಾರಿಕೆಯು ಪ್ರತಿಭಾವಂತರಲ್ಲಿ ಮೇಳೈಸಿದೆ. ಆ ರೀತಿ ಮಾಡುವುದು ಬುದ್ಧಿವಂತರ ಲಕ್ಷಣ ಎನ್ನುವಂತಾಗಿದೆ. ವ್ಯಕ್ತಿ ಪ್ರತಿಷ್ಠೆಯು ತಾರಕಕ್ಕೇರಿ ವ್ಯಕ್ತಿತ್ವದ ಬಗ್ಗೆಯೇ ಸಂಶಯಪಡುವಂತಹ ವಾತಾವರಣ ನಿರ್ಮಾಣಗೊಂಡಿದೆ. ಧರ್ಮ ಇಂದು ಕೇವಲ ಅಧಿಕಾರ ಹಿಡಿಯಲಿರುವ ಸಾಧನವಾಗಿದೆ. ಸಂಸ್ಕೃತಿ, ಸಂಸ್ಕಾರ, ಪರಂಪರೆಯ ಬಗ್ಗೆ ತೆಗಳಿ, ಕೀಳರಿಮೆ ತೋರುವುದೊಂದು ಫ್ಯಾಷನ್ ಆಗಿದೆ. ಖಾದಿ, ಖಾವಿ, ಖಾಕಿಯೇ ಇಂದು ದೇಶದ ಜೀವನದಿಗಳು ಎಂಬಂತಾಗಿವೆ. ದ್ವೈತ, ಅದ್ವೈತ, ವಿಶಿಷ್ಟಾದ್ವೈತಗಳೆಲ್ಲವೂ ಪೆಟ್ಟಿಗೆಯೊಳಗೆ ಭದ್ರ- ಸುಭದ್ರ.

“ಈ ದೇಶವನ್ನು ಸೆಕ್ಯುಲರಿಸ್ಟ್ ಗಳು ಅವಸಾನದ ಅಂಚಿಗೆ ತಳ್ಳಿದ್ದಾರೆ. ಪ್ರತಿಯೊಂದು ಸಿದ್ಧಾಂತವೂ ಪುಸ್ತಕವನ್ನು ಅಂದ ಗೊಳಿಸುತ್ತದೆಯೇ ಹೊರತು ಸಮಾಜವನ್ನು ಉದ್ಧರಿಸುವುದಿಲ್ಲ. ಎಲ್ಲಾ ವಾದ, ಸಿದ್ಧಾಂತ, ಕಾನೂನುಗಳೂ ವಿಧಿಗೆ ವಿರುದ್ಧವಾಗಿವೆ. ಆದರೆ ಎಲ್ಲಾ ನಂಬಿಕೆ ಅದರ ಪರವಾಗಿದೆ'' ಎಂದು ಡಾ. ಜಾನ್ಸನ್ ಹೇಳಿರುವುದರ ಕುರಿತಂತೆ ಚಿಂತಿಸಬೇಕಿದೆ. ತಂತಮ್ಮ ಹೊಟ್ಟೆಯ ಕೆಳಗೆ ಕೆದಕಿ ಬದುಕಲು ಜಾತ್ಯತೀತ ಪಟ್ಟವನ್ನು ಅಲಂಕರಿಸಿಕೊಳ್ಳುವ ಮಂದಿಯ ಅವಸ್ಥೆಯನ್ನು ದುರವಸ್ಥೆ ಎನ್ನದಿರಲಾದೀತೇ? ಅಷ್ಟಕ್ಕೂ, ಈ ಸಿದ್ಧಾಂತಗಳೆಲ್ಲವೂ ವೈರಾಗ್ಯಗಳನ್ನು ಸೃಷ್ಟಿಸುವುದೇ ಹೆಚ್ಚು. ವೈಚಾರಿಕತೆ, ಸಿದ್ಧಾಂತಗಳ ಅಮಲು ಇಳಿದದ್ದೇ ನಿಜವಾದ ಬಾಳು ಎಂತಹದ್ದು ಎನ್ನುವುದರ ಅರಿವಾಗುತ್ತದೆ. ಆದರೆ ಅಷ್ಟು ಸುಲಭಕ್ಕೆ ಇಳಿಯುವಂತಹ ಅಮಲವಲ್ಲ ಅದು. ಇಂತಹ ವಸ್ತುಸ್ಥಿತಿಯು ನಿರ್ಮಾಣಗೊಂಡಿರುವ ಕಾಲದಲ್ಲಿ- ಆಯಾ ಬೌದ್ಧಿಕ, ಸಾಮಾಜಿಕ, ಧಾರ್ಮಿಕ, ಆರ್ಥಿಕ ದಾಸ್ಯತನದಿಂದ ಕಳಚಿಕೊಳ್ಳುವುದಲ್ಲದೆ, ನಮ್ಮವರಿಂದ ನಾವು ಮತ್ತು ಅನ್ಯರು ಅನುಭವಿಸಲ್ಪಡುವ ದಾಸ್ಯತನದಿಂದಲೂ ಮುಕ್ತಿ ದೊರಕಬೇಡವೇ?

ಸಮಾಜ, ದೇಶೋದ್ಧಾರಕ್ಕಿಂತಲೂ ಆಯಾ ಜನ್ಮೋದ್ಧಾರವೇ ಶ್ರೇಷ್ಠವೆಂದು ನಂಬಿ, ಕಾಣುವ ಕನಸನ್ನು ನನಸನ್ನಾಗಿಸುವ ಹೊತ್ತಿನಲ್ಲಿ ಆಪತ್ತುಗಳು ಹುಟ್ಟುವುದೇ ಹೆಚ್ಚು. ಒಂದು ಕಡೆ ಎಲುಬಿಲ್ಲದ ನಾಲಗೆಯಾಟ, ಇನ್ನೊಂದು ಕಡೆ ಇಂತಹದ್ದೇ ಇಲಾಖೆ, ಜವಾಬ್ದಾರಿ ಬೇಕೆಂದು ಕಾಡಿಸಿ ಪೀಡಿಸುವವರ ಜೂಟಾಟ. ಜನರ ಕಣ್ಣಲ್ಲಿ ಅದೆಷ್ಟು ಚೀಪಾಗಿ ಬಿಡುತ್ತಾರೆ ಇವರು. ಮಂದಿ ತಕರಾರು ಎತ್ತಿದರೂ ಆಳುವ ನಾಯಕ ಗಣಗಳಿಗೆ ಇನ್ನೂ ಬುದ್ದಿ ಬಲಿತಂತಿಲ್ಲ. ರಾಜ್ಯ-ದೇಶವನ್ನಾಳಲು ರಾಜಕೀಯ ಪಕ್ಷ-ನಾಯಕರೇ ಬೇಕೇನು? ಉತ್ತಮ ತಜ್ಞ, ಪರಿಣಿತರ ರಾಜಕೀಯೇತರ ತಂಡವೊಂದು ರೂಪಿತಗೊಂಡರೆ ಸಾಲದೇನು? ನಿಜ ಹೇಳಬೇಕೆಂದರೆ; ರಾಜಕೀಯವು ಆಯಾಯ ಜೀವ-ಭಾವಗಳ ಸಂಪತ್ತನ್ನು ವೃದ್ಧಿಸಲಿಕ್ಕಿರುವ ವ್ಯವಹಾರ ಮಾರ್ಗವಷ್ಟೇ. ವರಗಳು ಶಾಪಗಳಾಗುತ್ತಲೇ.. ಶಾಪಗಳು ವರಗಳಾಗುವ ಕಾಲಾವಸ್ಥೆಯೊಳಗೆ ನಾವಿದ್ದೇವೆಂದರೆ ಅಚ್ಚರಿ ಪಡಬೇಕಿಲ್ಲ.

ಉತ್ತಮ ಪರಂಪರೆ ಇತಿಹಾಸವಿರುವ ಈ ಮಣ್ಣು ಹತ್ತಲವು ಆಕ್ರಮಣಗಳನ್ನು ಎದುರಿಸಿಯೂ ಇಂದು ತಲೆ ಎತ್ತಿ ನಿಂತಿದೆ ಎಂದರೆ ಅದು ಈ ಮಣ್ಣಿನ ಗುಣಶ್ರೇಷ್ಠತೆ ಎಂದೇ ಹೇಳಬೇಕು. ಲೋಕದ ಎಲ್ಲಿಯೂ ಇಲ್ಲದ್ದು ಇಲ್ಲಿದೆ. ಆದರೆ ಇಲ್ಲಿರುವುದು ಬೇರೆಲ್ಲೂ ಇಲ್ಲ. ಆದರೂ ನಮಗೆ ಬೇಕಿರುವುದು ಹೊರ ಜಗತ್ತಿನದ್ದೇ. ಹೊರ ಲೋಕವೊಂದು ಇಲ್ಲಿಯ ಗುಣ ವೈಶಿಷ್ಟ್ಯಗಳನ್ನು ಮೆಚ್ಚಿ ಕೊಂಡಾಡಿತೆಂದರೆ ಅಷ್ಟೇ ಸಾಕು-ನಮಗೂ ಅದನ್ನು ಮೆಚ್ಚಿ ಸ್ವೀಕರಿಸಲು. ಲೋಕದ ದೃಷ್ಟಿಯೊಳಗೆ ನಮ್ಮ ಸೃಷ್ಟಿ ಮೆಚ್ಚಲ್ಪಟ್ಟಿತೆಂದಾದರೆ ಮಾನ್ಯತೆಯೂ ತನ್ನಿಂತಾನಾಗಿಯೇ ಒದಗಿ ಬರುತ್ತದೆ ಎಂಬ ಸತ್ಯವನ್ನು ಅರಗಿಸಿ ಕೊಳ್ಳಲಾಗುವುದಿಲ್ಲವಷ್ಟೇ. ನಮ್ಮೊಳಗಿನ ದಾಸ್ಯತನಕ್ಕೆ ಯಾರು ಹೊಣೆ? ಇಂತಹ ಬೌದ್ಧಿಕ ದಿವಾಳಿತನದಿಂದ ಮುಕ್ತಿ ಪಡೆಯದ ಹೊರತು ನಾವು ಏಳಿಗೆಯನ್ನು ಹೊಂದಲಾರೆವು. ಯಾವಾಗ ಸ್ವತಂತ್ರವಾಗಿ ಚಿಂತಿಸಿ, ಚರ್ಚಿಸಿ ನುಡಿಯುವ ಎದೆಗಾರಿಕೆ ನಮ್ಮದಾಗುತ್ತದೋ ಆಗಲೇ ನಿಜವಾದ ಅರ್ಥದಲ್ಲಿ ನಾವು ಸ್ವತಂತ್ರಗೊಂಡಂತೆ. ಅಲ್ಲಿಯವರೆಗೆ 'ಯಾರಿಗೆ ಬಂತು, ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ?' ಎಂಬ ಸಾಲು ಎತ್ತರದ ಧ್ವನಿಯಲ್ಲಿ ಮೊಳಗುತ್ತಲೇ ಇರುತ್ತದೆ.

ಈ ಅಂಕಣದ ಹಿಂದಿನ ಬರೆಹಗಳು:
ಮುಸ್ಸಂಜೆಯ ಒಳಗೊಂದು ಅರ್ಥ
ಧಮ್ಮ ಗುಮ್ಮನ ನಂಬಿ ಕೆಟ್ಟರೆ ಎಲ್ಲರೂ ?
ಭರವಸೆಯ ಜೊತೆ ಹೆಜ್ಜೆ ಹಾಕೋಣ..
ಚಾದರದೊಳಗಿನ ಕಥೆ, ವ್ಯಥೆ...
'ಚಂದ್ರಗಿರಿ ತೀರದಲ್ಲಿ' ತೀರದ ಬವಣೆ..
‘ಬಯಲರಸಿ ಹೊರಟವಳು’- ಇಟ್ಟ ಹೆಜ್ಜೆಯ ಜಾಡು
ಬೆಳಕ ದಾಟಿಸುವ ಹಣತೆ- ಎಸ್.ದಿವಾಕರ್
ಅನುಭವಿಸಿ ಬರೆಯುವ ಜಯಂತ ಕಾಯ್ಕಿಣಿ
ಜೀವ ಜೀವಗಳ ಅಳು…
ಹನಿ ಹನಿಸಿದ ಚೊಕ್ಕಾಡಿ
ಶಾಂತ ಕಡಲೊಳು ಬೀಸಿದ ಬಿರುಗಾಳಿ
ರಂಗದ ಮೇಲಿನ ಬಣ್ಣದ ಭಾವಗಳು
ಬೆಳಕ ದಾಟಿಸುವ ಹಣತೆಯೂ...ಒಳ್ಳೆಯವರಾಗುವ ವ್ಯಸನವೂ...
ಟ್ಯಾಗ್ ಹಾಕಿ ನೋಡುವ ಮನಸ್ಸುಗಳ ನಡುವೆ
ಸಖನೂ ಸುಖವೂ ಒಂದೇ ಆಗುವ ಕ್ಷಣ

 

MORE NEWS

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...

ಸೆಲ್ಫಿ ಮತ್ತು ಅವಳು...

29-04-2024 ಬೆಂಗಳೂರು

"ಅವಳ ಅಂತರಂಗದ ಹೊಳೆಯ ಮೇಲೆ ಯಾವ ಗಮ್ಯ ತಲುಪುವ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ಸ್ವತಃ ಅವಳ ಅರಿವಿಗೂ ಬಾರದ...

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...