ನಾದದ ನದಿಯೊಂದು ನಡೆದ್ಹಾಂಗ

Date: 03-02-2022

Location: ಬೆಂಗಳೂರು


‘ಭಾಷೆಗೂ ಮೊದಲು ಇರುವುದು ನಾದ. ಅದು ಅರ್ಥ ಮೂಡುವುದಕ್ಕೂ ಮುಂಚಿನ ಸ್ಥಿತಿ. ಅನಿರ್ವಚನೀಯ ಎನ್ನುತ್ತೇವಲ್ಲ, ಅಂಥ ಸ್ಥಿತಿ. ಅದಕ್ಕೆಂದೇ ‘ನಾದದ ಹಾದಿ ಕಾಣಬೇಕು’ ಎಂದು ಬೇಂದ್ರೆಯವರು ಪ್ರತಿಪಾದಿಸುತ್ತಾರೆ’ ಎನ್ನುತ್ತಾರೆ ಲೇಖಕಿ ಗೀತಾ ವಸಂತ. ಅವರು ತಮ್ಮ ‘ತೆರೆದಷ್ಟೂ ಅರಿವು’ ಅಂಕಣದಲ್ಲಿ ವರಕವಿ ದ.ರಾ.ಬೇಂದ್ರೆಯವರು ನಾದದ ಕುರಿತು ಬರೆದ ಕವಿತೆಗಳನ್ನು ವಿಶ್ಲೇಷಿಸಿದ್ದಾರೆ.

“ಊದುವರೆ ಕೊಳಲು; ಇಲ್ಲ; ಬಿದಿರು” ಇದು ಬೇಂದ್ರೆಯವರ ನಿಃಶಬ್ದ ಕವಿತೆಯ ಸಾಲು. ಬಿದಿರೊಳಗೆ ಸುಪ್ತವಾಗಿದ್ದ ನಾದ ಉಸಿರಿನ ಪ್ರೇರಣೆಯಿಂದ ಹೊರಹೊಮ್ಮುವುದೇ ಲೋಕದ ಬೆಡಗು. ಬಿದಿರೆಂಬ ಭೌತ ವಸ್ತುವಿನೊಳಗೆ ಊದುವವರ ಭಾವ, ಉಸಿರಿನ ಚೈತನ್ಯ ಸಂಭವಿಸಿದಾಗ ಅದು ಸಂಗೀತವಾಗುವುದು. ಇದುವೇ ಸೃಷ್ಟಿಯ ರಹಸ್ಯ. ನಾದದಲ್ಲಿ ಹುಟ್ಟಿದ ಜಗತ್ತು ನಾದದಲ್ಲೇ ಲಯವಾಗುವುದು. ನಾದದ ಅಖಂಡತೆಯಲ್ಲಿ ಎಲ್ಲವೂ ಕರಗಿರುವುದು. ಅದು ಹಾಡಾಗಿ ತುಟಿಗೆ ಬಂದಾಗ ಮಾತ್ರ ನಾವದನ್ನು ಕೇಳುವೆವು. ಆದರೆ ನಾವು ಕೇಳದೇ ಇರುವಾಗಲೂ ನಾದವೆಂಬುದು ಇದೆ. ಅದು ಆದಿ ಆಧಾರವಾಗಿದೆ. ಇದು ಭೌತವಿಜ್ಞಾನದ ಸಂಗತಿಯೂ ಹೌದು. ಯೌಗಿಕ ಅನುಭೂತಿಯೂ ಹೌದು. ಆದರೆ ನಾದವನ್ನು ಭಾಷೆಯಲ್ಲಿ ಬಣ್ಣಿಸುವುದು ಬಲು ಕಷ್ಟದ ಕೆಲಸ. ನಾದವನ್ನೇ ರೂಪಕವಾಗಿಸಿಕೊಂಡು ಸೃಷ್ಟಿಯ ಅಖಂಡತೆಯನ್ನು ಬೇಂದ್ರೆಯವರು ತಮ್ಮ ಕಾವ್ಯದಲ್ಲಿ ಧ್ವನಿಸಿದ್ದಾರೆ.

ಹಾಗೆ ನೋಡಿದರೆ ಬೇಂದ್ರೆ ನಿಜ ಅರ್ಥದಲ್ಲಿ ಶ್ರಾವಣದ ಕವಿ. ವಿಶ್ವದ ಒಳನುಡಿಯನ್ನು ಕನ್ನಡಿಸುವ ಅವರ ಕಾವ್ಯಪ್ರಜ್ಞೆಯೇ ಶೃತಿ ಪರಂಪರೆಗೆ ಸೇರಿದ್ದು. ಅವರ ಕವಿತೆಗಳನ್ನು ಅವರು ಹಾಡು ಎಂದೇ ಬಣ್ಣಿಸಿದ್ದಾರೆ. “ಮುನ್ನ ಬಗೆಯಲಿ ಹಾಡ ನೀನೀನೆ ಹೆತ್ತಿ, ನನ್ನ ನಾಲಗೆ ನಿನ್ನ ಬರಿ ಸೂಲಗಿತ್ತಿ” ( ಓ ಹಾಡೆ) ಎನ್ನುತ್ತಾರೆ ಅವರು. ಪ್ರಜ್ಞೆಯೊಳಗೆ ಈಗಾಗಲೇ ಇರುವ ಹಾಡುಗಳನ್ನು ವ್ಯಕ್ತಮಾಧ್ಯಮಕ್ಕೆ ಒಗ್ಗಿಸುವುದಷ್ಟೇ ತನ್ನ ಕೆಲಸ ಎಂಬ ಅವರ ಈ ಭಾವ ವಿಶೇಷವಾದುದು. ಇಡೀ ಪರಂಪರೆಯ ಸೊಲ್ಲುಗಳು ಕವಿಯೊಬ್ಬನಿಂದ ಬರೆಸಿಕೊಳ್ಳುತ್ತವೆ ಎಂಬ ಸೋಜಿಗದ ನುಡಿಯಿದು. ಮಾತುಗಳು ಮಥಿಸುತ್ತ ನಾದದ ನವನೀತ ಉದಿಸಬೇಕೆಂಬುದು ಈ ಕವಿಯ ಕನಸು. ಭಾಷೆಯ ವಿಭಜಿತ ನೋಟಗಳು ಕರಗಿ ನಾದದ ಅವಿಭಜಿತ ಸಂವೇದನೆಯು ಮರಮರಳಿ ನಮ್ಮನ್ನು ಅರಳಿಸಬೇಕೆಂಬ ವಿಕಾಸಭಾವದಲ್ಲಿ ಅವರು ಕಾವ್ಯಕಟ್ಟುತ್ತಾರೆ.

ಭಾಷೆಗೂ ಮೊದಲು ಇರುವುದು ನಾದ. ಅದು ಅರ್ಥ ಮೂಡುವುದಕ್ಕೂ ಮುಂಚಿನ ಸ್ಥಿತಿ. ಅನಿರ್ವಚನೀಯ ಎನ್ನುತ್ತೇವಲ್ಲ, ಅಂಥ ಸ್ಥಿತಿ. ಅದಕ್ಕೆಂದೇ ‘ನಾದದ ಹಾದಿ ಕಾಣಬೇಕು’ ಎಂದು ಬೇಂದ್ರೆಯವರು ಪ್ರತಿಪಾದಿಸುತ್ತಾರೆ. ಮನುಷ್ಯನ ನಾಡಿಮಿಡಿತದಲ್ಲಿ, ಎದೆ ಬಡಿತದಲ್ಲಿ, ಉಸಿರಾಟದ ಗತಿಯಲ್ಲಿ ನಾದವಿದೆ. ಹಾಗೆಯೇ ಬ್ರಹ್ಮಾಂಡದ ಗತಿಯಲ್ಲೂ ನಾದವೇ ಇದೆ. ಬ್ರಹ್ಮಾಂಡವನ್ನು ವ್ಯಾಪಿಸಿರುವ ನಾದದ ಸೂಕ್ಷ್ಮರೂಪವನ್ನು ‘ಅನಾಹತ’ನಾದ ವೆಂದು ಕರೆದಿದ್ದಾರೆ. ಕಿವಿಯ ಮಿತಿಯು ಬಯಲಾದಗ ಕೇಳುವ ನಾದವಿದು. ಅಂದರೆ ಇಂದ್ರಿಯಗಳ ಮಿತಿ ದಾಟಿ ಸೂಕ್ಷ್ಮಗೊಳ್ಳುವ ಸಾಧಕರಿಗೆ ಈ ಅನುಭೂತಿ ಸಾಧ್ಯವೆಂದು ಯೌಗಿಕ ಪರಂಪರೆಗಳ ನಿಲುವು. ಇಂಥ ನಾದಾನುಭೂತಿಯನ್ನು ಅಕ್ಷರಗಳಲ್ಲಿ ಪ್ರಕಟಗೊಳಿಸುವ, ಛಂದಸ್ಸಿನಲ್ಲಿ ಅದರ ನಡೆಯನ್ನು ಕಾಣುವ ಹೊಸನೋಟಗಳು ಬೇಂದ್ರೆ ಕಾವ್ಯದಲ್ಲಿವೆ.

ಸ್ವಾದದ ನಾದದ ಮೋದದ ಒಳಬಸಿರನೆ ಬಗೆದು
ಹುಂಕಾರದ ಒಳನೂಲನು ಮೆಲ್ಲನೆ ಹೊರದೆಗೆದು
ಶಬ್ದಕೆ ಹಾಸಿಕೆಯಾಗಿಹ ತನಿಮೌನದಿ ಮುಗಿದು
ಉಸಿರುಸಿರಲಿ ಸರಿದರಿದೂ ಊದೂದುತ ನಲಿದು
ದನಿಯೇ ನದಿಯೊಲು ಚಲಿಸಿತು ಕೊಂಕೊಂಕೆನೆ ಒಲೆದು
ಅಲೆಯಾಯಿತು ಬಲೆಯಾಯಿತು ಜಗದಗಲಕೆ ಸೆಲೆದು (ಏಲಾಗೀತೆ)

ಮೌನದ ಒಳಬಸಿರ ಭಿತ್ತಿಯಿಂದಲೇ ಹೊಮ್ಮುವ ಶಬ್ದವು ಮೌನವನ್ನೂ ಸಹಜವಾಗಿಯೇ ಒಳಗೊಂಡಿರುತ್ತದೆ. ಇದನ್ನೇ ಅಲ್ಲಮ “ಶಬ್ದದೊಳಗಿನ ನಿಃಶಬ್ದದಂತೆ “ಎನ್ನುವುದು. ಉಸಿರ ಜೊತೆಗೇ ಹೊಮ್ಮವ ಹುಂಕಾರದ ನೂಲನ್ನು ನೇಯುತ್ತ ಪದಗಳು ಆಕಾರಗೊಳ್ಳತ್ತವೆ. ದೇಹ ಹಾಗೂ ಉಸಿರಿನ ಸಹಭಾಗಿತ್ವದಲ್ಲಿ ನಾದವು ಪ್ರಕಟವಾಗುವುದು. ಅಂಥ ದನಿಯೇ ನದಿಯಾಗಿ ಚಲಿಸುವುದು. ಹಾಗೆ ಚಲಿಸುವ ಗತಿಯೇ ಲಯ. ಈ ಲಯವು ಇಡಿಯ ಬ್ರಹ್ಮಾಂಡವನ್ನೇ ವ್ಯಾಪಿಸಿದೆ. ನಾದವು ಬಿಂದುವೂ ಹೌದು, ಆಕಾಶವೂ ಹೌದು. ಜಗತ್ತನ್ನೆಲ್ಲ ತನ್ನ ಜೋಲಿಯಲ್ಲಿ ತೂಗಿ ಮಲಗಿಸುವ ನಾದವು ವಿಶ್ವದ ಅವ್ಯಕ್ತ ಸಂಗೀತ, ಇದನ್ನು ಬೇಂದ್ರೆ ‘ಗ್ರಹಗೋಲ ಸಿಂಫನಿ’ ಎನ್ನುತ್ತಾರೆ. ಸಿಂಫನಿ ಎಂದರೆ ಅನೇಕ ವಾದ್ಯಗಳನ್ನು ಒಟ್ಟಿಗೆ ನುಡಿಸುವ ವಾದ್ಯಗೋಷ್ಠಿ. ಅನೇಕವು ಏಕಶೃತಿಯಲ್ಲಿ ಮಿಡಿದಾಗ ಅದು ಸಾಮರಸ್ಯದ ಸಂಗೀತವಾಗುವುದು. ಅಂತೆಯೇ ಬ್ರಹ್ಮಾಂಡವು ಸದಾ ಲಯಬದ್ಧವಾದ ಚಲನಶೀಲ ಸ್ಥಿತಿಲ್ಲಿದೆ. ಇಲ್ಲಿನ ಸಕಲ ಚರಾಚರಗಳೂ ಬ್ರಹ್ಮಾಂಡದವ ಪೂರ್ಣತೆಗೆ ಪೂರಕವಾಗಿವೆ. ವಿಭಜಿತ ಅನುಭವ ಇಲ್ಲದ ನಾದದ ಅಖಂಡತೆಯು ಬ್ರಹ್ಮಾಂಡದ ಸಾಮರಸ್ಯಕ್ಕೆ ಮಹಾರೂಪಕವಾಗಿ ತೋರುತ್ತದೆ. ಜಗತ್ತು ಸಿಡಿದು ಚೂರಾಗದೇ ಸಂಬಂಧದ ಗುರುತ್ವ ಶಕ್ತಿಯಿಂದ ಉಳಿದುಕೊಳ್ಳುತ್ತದೆ. ಈ ಸೃಷ್ಟಿಯ ರಹಸ್ಯವನ್ನು ನಾದದ ಪರಿಭಾಷೆಯಲ್ಲಿ ಬೇಂದ್ರೆ ಕಟ್ಟುತ್ತಾ ಹೋಗುತ್ತಾರೆ.

ಗ್ರಹಗೋಲ ಸಂಗೀತ ತಾನ ತಾನದ ನನೆಯು
ಭಾವದ ಪರಿಸ್ಪಂದ ಆತ್ಮ ಆತ್ಮವೇ ತಾನು
ವಾಚ್ಯವರ್ಣಗಳಲ್ಲಿ ನವಿರು ನವಿಲಿನ ಕೇಕೆ
ಶ್ರೀ ಅನಿರ್ವಾಚ್ಯಕ್ಕೆ ಬೇರೆ ಭಾಷ್ಯವು ಬೇಕೆ? (ನಾದಮಯೂರ)

ಜಗತ್ತಿನ ವಿಕಾಸ ಹಾಗೂ ಅದರ ಸ್ವರೂಪವು ವಾಚ್ಯವಾದ ಅಕ್ಷರಗಳ ಅರಿವಿಗೆ ಮೀರಿದ್ದು. ಆದರೆ ಈ ವಿಕಾಸದಲ್ಲಿ ಒಂದು ಲಯಬದ್ದ ಸಂಯೋಜನೆಯಿದೆ. ಅದು ನಮ್ಮೊಳಗೂ ಇದೆ. ಅದನ್ನು ಒಳಗೊಳ್ಳುವುದು ಸಾಧ್ಯವೇ ಹೊರತೂ ವಿಮರ್ಶಿಸುವುದು ಕಷ್ಟ. ನಾದವನ್ನು ಅನುಭವಿಸಲು ತನ್ಮಯೀಭಾವ ಬೇಕು. ಆಗಲೇ ಅದರ ಒಳದನಿಗಳು ಕೇಳಲು ಸಾಧ್ಯ.

ನಾದಬೇಕು ನಾದಬೇಕು
ನಾದಾನ ನಾದಬೇಕು
ನಾದಕ್ಕೆ ಪ್ರತಿನಾದ ಬೇಕು
ನಾದಾನನ ಆದಮ್ಯಾಲೆ ಬ್ಯಾರೆಯಾಕ ವಾದ ಬೇಕು?

ಇಲ್ಲೆಲ್ಲ ವಿಶ್ವಪ್ರಜ್ಞೆಯ ಅವಿಭಜಿತ ಸ್ಥಿತಿಯನ್ನು ನಾದರೂಪಕದಲ್ಲಿ ಬೇಂದ್ರೆ ಕಟ್ಟಿಕೊಡುತ್ತಾರೆ. ಹಿಟ್ಟು ನಾದುವುದು ಧ್ಯಾನಸ್ಥ ಮನಸ್ಥಿತಿಯನ್ನು ಬೇಡುವ ಕ್ರಿಯೆ. ಹದತಪ್ಪದಂತೆ ನಡೆಸಬೇಕಾದ ಸೂಕ್ಷ್ಮ ಪ್ರಕ್ರಿಯೆ. ಅಂದರೆ ಪ್ರತಿ ಕ್ರಿಯೆಯ ಹಿಂದೆಯೂ ಲಯಬದ್ಧ ವಿನ್ಯಾಸವೊಂದು ನಮಗರಿವಿಲ್ಲದೆಯೇ ಇರುತ್ತದೆ. ಅದು ನಮ್ಮಲ್ಲಿ ಕರಗಿದಾಗ ಕರಗತವಾಗುತ್ತದೆ. ಕ್ರಿಯೆ ಬೇರೆ ಅದರ ಫಲಿತ ಬೇರೆಯಾಗಿ ತೋರುವುದಿಲ್ಲ. ಬ್ರಹ್ಮಾಂಡದ ಸೃಷ್ಟಿಯ ಹಿಂದೆಯೂ ಇಂಥ ಕ್ರಿಯಾಶೀಲತೆಯಿದೆ. ಇದು ಸಾಮರಸ್ಯದಿಂದ ಹದಗೊಂಡ ಕ್ರಿಯಾಶೀಲತೆ. ಇದು ಮನುಷ್ಯ ಸಂಬಂಧಗಳಲ್ಲೂ, ಸಾಮಾಜಿಕ ಸಂಬಂಧಗಳಲ್ಲೂ ಬರಬೇಕೆಂದು ಕವಿ ಬಯಸುತ್ತಾರೆ. ವಾದಗ್ರಸ್ಥ ಮನಸ್ಥಿತಿಯಿಂದ ಇಂಥ ಸಾಮರಸ್ಯ ಮೂಡುವುದು ಸಾಧ್ಯವಿಲ್ಲ. ಒಡಕು ಧ್ವನಿಗಳನ್ನು ನಿವಾರಿಸಿಕೊಳ್ಳುತ್ತ ನಡೆಯುವ ಜೀವಪ್ರೇಮದ ಪಕ್ವತೆಯಲ್ಲಿ, ಆವರಿಸಿಕೊಳ್ಳುವ, ಜೋಡಿಸುವ ಭಾವಪರಿಪಾಕದಲ್ಲಿ ಮಾತ್ರ ಏಕಾನುಭೂತಿಯ ಬದುಕು ಸಾಧ್ಯ. ಅಂಥ ಸ್ಥಿತಿ ಆಧ್ಯಾತ್ಮಿಕ ಸಿದ್ಧಿಯಲ್ಲಿದೆ. ಅದಕ್ಕೆ ಕವಿ ಯೋಗದ ಮೊರೆಹೋಗುತ್ತಾರೆ. ಜೀವಾತ್ಮ ಹಾಗೂ ಪರಮಾತ್ಮಗಳು ಒಂದೇ ಆಗಿ ಮಿಡಿಯುವ ಸ್ಥಿತಿಯನ್ನು ದೇಹದ ಮೂಲಕವೇ ಸಿದ್ದಿಸಿಕೊಂಡ ಈ ಸಾಧನಾಧಾರೆಗಳ ಅನುಭವಲೋಕ ನಾದದ ಮೂಲಕ ಈ ಕಾವ್ಯದಲ್ಲಿ ತೆರೆಯುತ್ತ ಹೋಗುತ್ತದೆ.

ಹೊರಗಿನ ದೇವರು ಯಾಕಬೇಕು
ಒಳಗಿನ ದೇವನ ಸಾಕ ಬೇಕು
ತನ್ನೊಳು ತನ್ನ ನೋಡಬೇಕು
ಹರಿಹರ ಗುರುವನು ಮಾಡಬೇಕು
ಆ ಉಸಿರಿಂದಲೆ ಹಾಡಬೇಕು
ಹೊಸ ತೋಡಿಗೆ ತೋಡಬೇಕು ಬ್ರಹ್ಮನಾಡಿಯೊಳು ಆಡಬೇಕು (ನಾದಬೇಕು)

ನಾದವು ಒಳಗು ಹಾಗೂ ಹೊರಗು ಎಂಬ ಮಿಥ್ಯೆಗಳನ್ನು ಅಳಿಸಿಹಾಕುವ ಸತ್ಯ. ದೇಹವೆಂಬುದು ವಿಶ್ವಪ್ರಜ್ಞೆಯ ಅಖಂಡತೆಯನ್ನು ಕಾಣಲು ನಮಗಿರುವ ಮಿತಿ. ಇಂದ್ರಿಯಗಳ ಮೂಲಕ ಗ್ರಹಿಸಬೇಕಾದುದೇ ಪ್ರಜ್ಞೆಗಿರುವ ಬಂಧನ. ಎಲ್ಲವನ್ನೂ ದ್ವಂದ್ವಗಳ ಮೂಲಕವೇ ಗ್ರಹಿಸುವ ಮಿಥ್ಯಾಜ್ಞಾನವನ್ನು ಸೃಷ್ಟಿಸುವ ಇಂದ್ರಿಯಗಳ ಮಿತಿಯನ್ನು ಮೀರಿದಾಗ ಅರಿವು ಆಕಾಶವಾಗುತ್ತದೆ. ಇದನ್ನೆಲ್ಲ ಸಾಧಿಸಲು ದೇಹವನ್ನೇ ಭಿತ್ತಿಯಾಗಿಸಿಕೊಳ್ಳುವುದು ನಮಗೆ ಅನಿವಾರ್ಯ. ದೇಹದಲ್ಲಿ ವಿಶ್ವತ್ಮಕವಾದ ಚೈತನ್ಯವು ಸೂಕ್ಷ್ಮರೂಪದಲ್ಲಿದೆ. ಅದನ್ನು ಸಾಧನೆಯ ಮೂಲಕ ಪಡೆದಾಗ ವಿಶ್ವವೇ ತಾನೆಂಬ ಆತ್ಮಜ್ಞಾನವುಂಟಾಗುತ್ತದೆ. ದೇಹಸ್ಥವಾದ ಸೂಕ್ಷ್ಮ ನಾಡಿ ಹಾಗೂ ಚಕ್ರಗಳನ್ನು ಉದ್ದೀಪಿಸಿ ದೇವಾನುಭವ ಪಡೆವ ಯೌಗಿಕ ಸಂಜ್ಞೆಯನ್ನು ಈ ಕವಿತೆ ಒಳಗೊಂಡಿದೆ. ‘ದೇವವೀಣೆ’ ಎಂಬ ಕವಿತೆಯಲ್ಲೂ ಸಂಗೀತದ ಪರಿಭಾಷೆಯಲ್ಲಿ ಇದೇ ಪರಿಕಲ್ಪನೆ ಅಭಿವ್ಯಕ್ತವಾಗಿದೆ.

ದೇಹವೊಂದು ದೇವವೀಣೆ
ನರನರವೂ ತಂತಿ ತಾನೆ
ಹಗಲಿರುಳೂ ನುಡಿಯುತ್ತಿಹ ಉಸಿರಾಟವೆ ಗೀತ
ಅದ ಬಾರಿಸೆ ನೀ ಪ್ರವೀಣೆ
ತಾಯಿ ನಿನ್ನ ಕೈಗೆ ನಾನೆ
ಒಪ್ಪಿಸಿಕೊಂಡಿಹೆನು ಬರಲಿ ಜೀವದ ಸಂಗೀತ (ದೇವವೀಣೆ)

ಪಿಂಡದಲ್ಲಿರುವುದೆಲ್ಲವೂ ಬ್ರಮ್ಹಾಂಡದಲ್ಲಿಯೂ ಇರುತ್ತದೆ. ಹಾಗೆ ನೋಡಿದರೆ ದೇಹವೂ ಒಂದು ಬ್ರಹ್ಮಾಂಡ. ಅದರೊಳಗಿನ ಪ್ರತಿ ಜೀವಕೋಶಗಳೂ ಜೀವಲಯದಲ್ಲಿ ಮಿಡಿಯುತ್ತವೆ. ಅಂಗಾಂಗಗಳ ನಡುವಿನ ಸಾಮರಸ್ಯವಿದ್ದಾಗ ಮಾತ್ರ ದೇಹ ಮತ್ತು ಪ್ರಾಣಗಳು ಅಭೇದವಾಗಿ ಮಿಡಿಯುವುದು ಸಾಧ್ಯ. ನಾನು ಎಂಬ ಪ್ರಜ್ಞೆಯು ಉದಯಿಸಲು ದೇಹಭಾವವು ಬೇಕೇಬೇಕು. ಆ ಪ್ರಜ್ಞೆಯು ವಿಶ್ವಪ್ರಜ್ಞೆಯೊಂದಿಗೆ ಒಂದಾಗುವುದು ಯೌಗಿಕ ಕ್ರಿಯೆಯ ಮೂಲಕ ಸಾಧ್ಯ. ಮೂಲಾಧಾರದ ಶಕ್ತಿ ಪ್ರವಾಹವು (ಕುಂಡಲಿನೀ) ಷಟ್ಚಕ್ರಗಳ ಮೂಲಕ ಹರಿಯುತ್ತಾ ಕೊನೆಯಲ್ಲಿ ಸುಷುಮ್ನಾ ನಾಡಿಯು ತೆರೆದಾಗ ಸಹಸ್ರಾರದಲ್ಲಿರುವ ಶಿವನೊಂದಿಗೆ ಐಕ್ಯವಾಗುತ್ತದೆ. ಅದಕ್ಕೆ ಶೂನ್ಯಚಕ್ರವೆಂಬ ಸಂಜ್ಞೆಯೂ ಇದೆ. ನಾದದ ಹಾದಿಯನ್ನು ಅರಿಯಬೇಕು ಎಂಬುದು ಈ ಯೌಗಿಕ ಐಕ್ಯದ ಹಾದಿಯೂ ಹೌದು. ಇದಕ್ಕಾಗಿ ದೇಹವೇ ದೇವವೀಣೆಯಾಗಿ ಶೃತಿಗೊಳ್ಳಬೇಕು. ಉಸಿರ ಲಯವನ್ನೇ ಧ್ಯಾನಿಸುವ ಮೂಲಕ ಈ ದಾರಿಯನ್ನು ತೆರೆಯುವ ಧ್ಯಾನದ ಹಂಸಮಾರ್ಗವೂ ನಾದದ ಜಾಡಿನಲ್ಲೇ ಮೂಡಿದೆ. ಇದು ಹೆಜ್ಜೆಮೂಡದ ಹಾದಿ. ಆದ್ದರಿಂದಲೇ ಇದು ಅನಿರ್ವಚನೀಯವೂ ಹೌದು.

ತಿಳಿಯದ್ಯಾವುದೋ ಕಂಪು ಎಳೀತದ ತುಂಬಿ ಹುಚ್ಚು ಆಗಿ
ಎಚ್ಚರಿಲ್ಲದ ಎತ್ತ ತಿರಗತಾವ ದಿಕ್ಕು ತೋರದಾಗಿ
ಬಂತು ಸುಗ್ಗಿ ಬಂದದ ಸುಗ್ಗಿ ಬರತದ ಸುಗ್ಗಿ ಎಂದು
ಕುಹೂ ಅನ್ನತದ ಕಹೂ ಅನ್ನತದ ಕುಹುಕ್ಕುಹೂ ಅಂದು (ಜೋಗಿ)

ತಾರ ಪಂಚಮದಲ್ಲಿ ಕೂಗುವ ಈ ಕೋಗಿಲೆಯು ಒಳಗಿನ ಸೊಲ್ಲು ಎಚ್ಚರಾದ ಸಂಕೇತ. ಬೇಂದ್ರೆ ಹೇಳುವ ‘ಗುಹಾಧ್ವನಿ’ಯಿದು. ಇದನ್ನು ಪರಾವಾಣಿಯೆಂತಲೂ ಅನ್ನಬಹುದು. ಇದು ಎಚ್ಚರಾದಾಗ ‘ತಲೆಯ ಯಾವುದೋ ನಾಡಿಯೊಳಗೆ ‘ಸುಗ್ಗಿ ಸೊಲ್ಲು’ ಶುರುವಾಗುತ್ತದೆ. ಈ ಎಲ್ಲ ಯೌಗಿಕ ವಿವರಗಳು ಬೇಂದ್ರೆಯವರ ‘ಜೋಗಿ’ ಕವಿತೆಯಲ್ಲಿ ಚಿತ್ರವತ್ತಾಗಿ ಬರುತ್ತವೆ. ಮನದ ಜಪದ ನಡುವೆ ‘ಓಂ ಕುಹೂ’ ಎಂದು ಕರೆಯುವ ಈ ಕೋಗಿಲೆ ಧ್ಯಾನದ ಪರಾಕಾಷ್ಠೆಯಲ್ಲಿ ಮೂಡಿದ ಸ್ವರ. ‘ಕನಸಿನೊಳಗ ನಾ ಸ್ವರಾ ಕೇಳಿ ಮಾಮರಾ ಆಗತೇನೊ’ ಎನ್ನುವ ಸಾಲು ಈ ನಾದಕ್ಕೆ ವಶವಾಗಿ ಪರಿವರ್ತನೆಗೊಂಡ ಪ್ರಜ್ಞೆಯ ಫಲ. ಪ್ರಜ್ಞೆಯ ಜಾಗೃತ, ಸ್ವಪ್ನ, ಸುಷುಪ್ತಿ ಹಾಗೂ ತುರೀಯಾವಸ್ಥೆಗಳಲ್ಲೂ ಈ ನಾದದ ಜಾಡು ಇದೆ. ಸಾಧಕರ ಸಿದ್ದಿಯ ವಿವಿಧ ಹಂತಗಳಲ್ಲಿ ಅದರ ಸಾಕ್ಷಾತ್ಕಾರವಾಗುತ್ತದೆ. ಆಧ್ಯಾತ್ಮಿಕ ಅನುಭವದ ಸಮೃದ್ಧ ಸರಣಿಯನ್ನೇ ಕಟ್ಟಿಕೊಡುವ ಈ ಕವಿತೆ ಎಚ್ಚೆತ್ತ ಒಳದನಿಯ ಲಯಕ್ಕೆ ತೂಗುತ್ತ ಜೀವವು ಪಾಡಾಗುವ, ಹಾಡಾಗುವ, ಹಣ್ಣಾಗುವ ವಿಕಾಸವನ್ನು ತೆರೆದಿಡುತ್ತದೆ. ಈ ಸ್ವರವೇ ಎಲ್ಲವನ್ನೂ ಆವರಿಸಿಕೊಳ್ಳುತ್ತಾ ಪರಿವರ್ತಿಸುತ್ತಾ ಹೋಗುವ ಅನುಭವ ಸಾಧಕನೊಬ್ಬನ ಸಿದ್ದಿಯ ಸ್ಥಿತಿಯ ಹದವನ್ನು ಸೂಚಿಸುತ್ತದೆ. ಕವಿತೆಯು ಈ ಭಾವವನ್ನು ಉತ್ಕಟ ಚಿತ್ರಗಳ ಮೂಲಕ ಕಟ್ಟಿಕೊಟ್ಟಿದೆ.

ಅತೀಂದ್ರಿಯ ಅನುಭವಕ್ಕೆ ಗ್ರಾಮದ ಘಾಟು ತರಬಲ್ಲ ರಸಿಕರು ಬೇಂದ್ರೆ ಎಂದು ಯು.ಆರ್. ಅನಂತಮೂರ್ತಿಯವರು ತಮ್ಮ ‘ಯುಗದಕವಿ ಬೇಂದ್ರೆ’ ಎಂಬ ಲೇಖನದಲ್ಲಿ ಗುರುತಿಸುತ್ತಾರೆ. ಹಳ್ಳಿಪಳ್ಳಿಗಳ ಓಣಿಯ ನುಡಿಯನ್ನು ಆತ್ಮವಾಣಿಯ ಅಭಿವ್ಯಕ್ತಿಗೆ ಬಳಸಿಕೊಂಡ ‘ಶರೀಫನ ವಾಣಿ’ ನಮಗಿಂದು ಬೇಕಾಗಿದೆಯೆಂದು ಬೇಂದ್ರೆಯವರು ತಮ್ಮ ‘ಸಾಹಿತ್ಯದ ವಿರಾಟ್ ಸ್ವರೂಪ’ದಲ್ಲಿ ದಾಖಲಿಸಿದ್ದಾರೆ. ಈ ಭಾಷೆ ‘ಅವಧೂತ ಮುದ್ರೆ’ಯ ಭಾಷೆ. ಅವಧೂತರು ತಮ್ಮ ದೇಸಿ ನಡೆನುಡಿಯ ಸತ್ವವನ್ನು ಆಧ್ಯಾತ್ಮದ ವಿಶ್ವಾತ್ಮಕ ಅನುಭವದ ಭಿತ್ತಿಯಾಗಿಸಿಕೊಂಡವರು. ಅವರ ವಿಕ್ಷಿಪ್ತತೆ, ಬೆಡಗಿನ ನುಡಿಗಳಲ್ಲಿ ಈ ದೇಸಿತನವಿದೆ. ತತ್ವಪದಕಾರರ ರಚನೆಗಳಲ್ಲಿ ಈ ಸತ್ವ ಒಡಲುಗೊಂಡಿದೆ. ಜನಪದರು ಅಕ್ಷರಜ್ಞಾನಕ್ಕಿಂತ ನಾದಾನುಭೂತಿಗೆ ಮನಸೋತವರು. ಜ್ಞಾನದ ವಿಭಜನೆಗಳಿಂದ ದೂರವುಳಿಯಲು ನಾದ ಅವರಿಗೆ ನೆರವಾಗಿದೆ. ಬೇಂದ್ರೆಯವರ ಬಾಲ್ಯಕಾಲದ ಸ್ಮೃತಿಗಳಲ್ಲಿ ಸೇರಿಹೋದ ಗೊಂದಲಿಗರ ಹಾಡು, ಭಜನೆ ಮೇಳದ ಧ್ವನಿ, ಪುರವಂತರ ವಚನಗಳ ಗತ್ತು, ಅವರಲ್ಲಿ ನಾದದ ಸೆಳೆತವನ್ನು ತುಂಬಿವೆ.

ಭಜನೀಯ ಮ್ಯಾಳದ ಧನಿ
ಅಲ್ಲಾ ದೂರಾ ಅಲ್ಲಾ ಸನಿ
ತುಳಕ್ಯಾಡತಾವ ದಿಕ್ಕು ದಿಕ್ಕು
ತಪ್ಪಿ ಉಳಿದ ಕೋಗಿಲಾ
ನಡುವೇನ್ಯ ಕೂಗ್ತದ
ಶ್ರಾವಣದ ಝಡಿಯೊಳಗ ಸಿಕ್ಕು
ಹರ ಹರ ಮಹಾದೇವ
ಈಸಾಡತಾವ ಜೀವಾ
ಮಾನಸ ಸರೋವರ ಹೊಕ್ಕು (ಸಣ್ಣ ಸೋಮವಾರ)

ಭಜನಿಯ ಮ್ಯಾಳದ ದನಿಯು ತುಂಬಿದ ಉನ್ಮನಿ ದಿಕ್ಕುದಿಕ್ಕುಗಳಲ್ಲೂ ತುಳುಕಾಡಿದೆ. ಎದೆಕೋಗಿಲೆಯ ಆ ಒಳದನಿಯನ್ನು ಎಚ್ಚರಿಸಿದೆ. ಆಗ ಜೀವ ಒಳಮುಖಗೊಳ್ಳುತ್ತ ಪ್ರಜ್ಞೆಯ ಆಳವನ್ನು ಥಟ್ಟನೆ ದರ್ಶನ ಮಾಡಿಸಿದೆ. ಮಾನಸ ಸರೋವರದಲ್ಲಿ ಈಸಾಡುವ ಜೀವದ ರೂಪಕವೇ ಅತೀಂದ್ರಿಯಾನುಭವದ ಸರಣಿಯನ್ನು ಉದ್ದೀಪಿಸುತ್ತದೆ. ನಾದದ ಮೂಲಕ ಮನವು ಉನ್ಮನದ ನೆಲೆಗೇರುವ ದರ್ಶನವಿಲ್ಲಿದೆ.

ದರ್ಶನ ಹಾಗೂ ಸೃಜನಶೀಲತೆ ಎರಡನ್ನೂ ಒಟ್ಟೊಟ್ಟಿಗೆ ಬೆಸೆಯುವ ಬೇಂದ್ರೆಯವರು ನಾದದ ಹಾದಿಯಲ್ಲಿ ನದಿಯಂತೆ ನಡೆದ ಜಂಗಮ. ಕಾವ್ಯವನ್ನು ‘ಲೀಲೆ’ ಯಾಗಿ ಕಾಣುವ ಬೇಂದ್ರೆ ಅದನ್ನು ಆತ್ಮಯೋಗ ಹಾಗೂ ಲೀಲಾಯೋಗವೆಂದು ಕರೆಯುತ್ತಾರೆ. ತರ್ಕವನ್ನು ಮೀರಿ ಹರಿಯುತ್ತಾ ಸದಾ ಆಗುತ್ತಲೇ ಇರುವುದು ಲೀಲೆ. ಅದನ್ನು ಕಾಣಲು ದರ್ಶನದ ಒಳಗಣ್ಣು ತೆರೆಯಬೇಕು. ಹಾಗೆ ಕಂಡಿದ್ದನ್ನು ಭಾಷೆಯಲ್ಲಿ ಹಿಡಿದಿಡುವುದು ಎಂದಿಗೂ ಸವಾಲು. ಮಾತಿಗೆ ಮಂತ್ರಮಯತೆ ಒದಗಿದಾಗಲೇ ಮಾತನ್ನು ‘ಕಾಣಲು’ ಸಾದ್ಯ. ಅವರ ಒಂದು ಕವಿತೆಯು ವಾಣಿಯನ್ನು ‘ಪರಾ ಶರ ರೂಪಾ’ ಎಂದು ಬಣ್ಣಿಸುತ್ತದೆ. ಶರರೂಪದಲ್ಲಿ ಧಾವಿಸುವ ಪರಾವಾಣಿಯ ಪಯಣವನ್ನಿದು ಪ್ರತಿಮಿಸುತ್ತದೆ. ಇದನ್ನು ವೈಖರೀ ವಾಣಿಯಲ್ಲಿ ಅಂದರೆ, ಮಾತಿನ ಆಕೃತಿಯಲ್ಲೇ ರಚಿಸಬೇಕಾದುದು ಅನಿವಾರ್ಯ. ಪರಾ, ಪಶ್ಯಂತಿ, ವಾಕ್, ವೈಖರೀ ಇವು ನಾಲ್ಕು ಮಾತಿನ ನಾಲ್ಕು ನೆಲೆಗಳು. ಒಳಶೃತಿಯಾದ, ವಿಶ್ವದ ಒಳನುಡಿಯೇ ಆದ ಪರಾವಾಣಿಯು ಮಾತಿನ ಹೊರರೂಪ ತಾಳುವುದು ಕಾವ್ಯ ಸಿದ್ದಿ. ಆದು ಮಾತನ್ನು ಶಬ್ದಾರ್ಥಗಳ ರೂಢಿಗತ ನೆಲೆಯಿಂದ ಇನ್ನೊಂದು ನೆಲೆಗೆ ಪರಿವರ್ತಿಸುವ ಗುಟ್ಟನ್ನು ಬೇಂದ್ರೆ ನಾದದಲ್ಲೇ ಕಾಣುತ್ತಾರೆ.

ಇದು ಮಂತ್ರ: ಅರ್ಥಕೊಗ್ಗದ ಶಬ್ದಗಳ ಪಣಿಸುವ ತಂತ್ರ:
ತಾನೆ ತಾನೆ ಅಸಮರ್ಥ ಛಂದ: ದೃಗ್ಬಂಧ ದಿ
ಗ್ಬಂಧ: ಪ್ರಾಣದ ಕೆಚ್ಚು ಕೆತ್ತಿ ರಚಿಸಿದೆ: ಉಸಿರ
ಹೆದೆಗೆ ಹೂಡಿದ ಗರಿಯ ಗುರಿಯ ನಿರಿಯಿಟ್ಟು ಬರು
ತಿದೆ ತೂರಿ ಲೀಲರಯಲನಾಯಾಸ..
(ಗಾರುಡಿಗ)

ಉಸಿರ ಹೆದೆಗೆ ಗುರಿಯಿಟ್ಟು ಚಿಮ್ಮಿಸಿದ ಈ ನಾದ ತನಗೆ ತಾನೇ ಛಂದಸ್ಸಿನ ನಡಿಗೆಯನ್ನು ಪಡೆದು ಸಹಜ ಬಂಧದಲ್ಲಿ ಪ್ರಕಟಗೊಳ್ಳುತ್ತದೆ. ಭಾಷೆಗಿರುವ ಶಬ್ದಾರ್ಥಗಳ ಹಂಗನ್ನು ಕಳಚಿಕೊಂಡು ಅನುಭವದ ನಿಜದರ್ಶನವು ಸಾಧ್ಯವಾಗಿಸುವ ಕಂಪನಗಳನ್ನು ಕಾವ್ಯದಲ್ಲಿ ಕಟ್ಟಲು ಬೇಂದ್ರೆ ಭಾಷೆಯ ನಾದಮಯತೆಯ ಮೊರೆಹೋಗುತ್ತಾರೆ. ಮಾತು ಬರಿಯ ಸಾಂಕೇತಿಕ ಅರ್ಥವ್ಯವಸ್ಥೆಯಾಗದೇ ನಿಜದ ಸೂಕ್ಷ್ಮ ಸ್ವರೂಪವನ್ನು ಕೇಳಿಸುವ ಶೃತಿಯಾಗುತ್ತದೆ. ಕಾಣಿಸುವ ದರ್ಶನವೂ ಆಗುತ್ತದೆ. ಕಾವ್ಯವು ಬರಿಯ ರಚನೆಯ ಲಾಲಿತ್ಯವಾಗಿರದೇ ‘ಪ್ರಾಣದ ಕೆಚ್ಚು ಕೆತ್ತಿ ರಚಿಸುವ’ ತೀವ್ರ ತೊಡಗುವಿಕೆಯಾಗಿ ಇಲ್ಲಿ ಕಾಣುತ್ತದೆ. ದೇಹ ಮನಸ್ಸು ಪ್ರಜ್ಞೆ ಎಲ್ಲವೂ ಒಂದೇ ಕಾವಿನಲ್ಲಿ ಕರಗಿದಾಗ ಮಂತ್ರಮಯತೆ ಮಾತಿಗೆ ಒದಗುತ್ತದೆ. ಕಾವ್ಯವು ಭಾವಗೀತೆಯ ಲಲಿತ ಸ್ವರೂಪ ಪಡೆಗಾಗ ಅದು ‘ಓಂಕಾರದ ಶಂಖನಾಧಕಿಂತ ಕಿಂಚಿತ್ ಊನ’ ವಾಗಿಯೂ ಅವರಿಗೆ ಕಂಡಿದೆ.

ಭಾವವೂ ಬೇಂದ್ರೆಯವರಿಗೆ ನಾದವಾಗಿಯೇ ಕಂಡಿದೆ. ಅವರ ‘ಭಾವ-ಭಾಷೆ’ ಎಂಬ ಕವಿತೆ ‘ಮೂಕನಲು ಕಿವುಡನಲು ಮೌನಿಯಲು ನಾದವಿದೆ’ ಎನ್ನುತ್ತದೆ. ಕೇಳುವ, ನುಡಿಯುವ, ಅರ್ಥೈಸಿಕೊಳ್ಳವ ಈ ಎಲ್ಲ ಕ್ರಿಯೆಗಳು ಮೌನವಾದರೂ ನಾದ ಇರುತ್ತದೆ. ಏಕೆಂದರೆ ಅದು ಅನಾದಿ.

ಕಣ್ಣಿಗು ಅದು ಕಾಣಿಸದು
ಕಿವಿಗೂ ಅದು ಕೇಳಿಸದು
ಆದರೂ ಸಂವೇದ್ಯ...
ಅಲ್ಲದು ತಾನಲೆ ಅಲೆಯಲಿ
ಇಲ್ಲದ ಹಿರಿ ಬಯಲಿನಲಿ
ಕೊಳಲಿಲ್ಲದ ವೇಣುವನ
ಬೆರಳರಿಯದ ವೀಣಾಸ್ವನ..
(ಅಣುಸಂಗೀತ)

ಅಣುಅಣುವಿನಲ್ಲೂ ನಾದವಿದೆ. ಆದರೆ ಅದು ಬಾಹ್ಯ ಕಣ್ಣು, ಕಿವಿಗಳಿಗೆ ಎಟುಕದ್ದು. ಅತ್ಯಂತ ಸೂಕ್ಷ್ಮ ಇರುವಿಕೆಯನ್ನು ‘ಅಣುಸಂಗೀತ’ ಕವಿತೆ ರೂಪಕಾತ್ಮಕವಾಗಿ ಕಟ್ಟಿಕೊಟ್ಟಿದೆ. ಕೊಳಲಿನ ಹಂಗಿಲ್ಲದೆಯೂ, ಬೆರಳಿನ ನೆರವಿಲ್ಲದೆಯೂ ಆ ಸಂಗೀತ ಇರುತ್ತದೆ. ಇರುವು ಮೈದೋರುವ ಮೂಲಕ ನಮ್ಮ ಅರಿವಿಗೆ ಬರಲಷ್ಟೇ ನಮಗೆ ಮಾಧ್ಯಮಗಳು ಬೇಕು. ದೇಹ ಅಂಥ ವ್ಯಕ್ತ ಮಾಧ್ಯಮ. ಪ್ರಜ್ಞೆಯ ಅವ್ಯಕ್ತ ಹರಿವು ಈ ದೇಹಮಾಧ್ಯಮದಲ್ಲೇ ಚಲಿಸುವುದು ಸೋಜಿಗ. ಇದನ್ನು ಬೇಂದ್ರೆ ಮತ್ತೆ ಮತ್ತೆ ಸಂಗೀತದ ಪರಿಭಾಷೆಯಲ್ಲೇ ಕಾಣಿಸುತ್ತಾ ಹೋಗುತ್ತಾರೆ. ಮೃದಂಗ, ಕೊಳಲು, ರುದ್ರವೀಣೆಗಳೆಲ್ಲ ಸಂದರ್ಭಾನುಸಾರಿಯಾಗಿ ರೂಪಕಗಳಾಗುತ್ತವೆ.

ಅಂತರಂಗದಾ ಮೃದಂಗ ಅಂತು ತೋಂ ತನಾನಾ
ಚಿತ್ತ ತಾಳ ಬಾರಿಸುತ್ತಲಿತ್ತು ಝಂಝಣಾಣಾ
ನೆನವು ತಂತಿ ಮೀಟುತಿತ್ತು ತಂತನನ ತಾನಾ..
(ಕಣ್ಣ ಕಾಣಿಕೆ)

ಹಲವು ಜನುಮಗಳಿಂದ ಹರಿದುಬರುವ ಈ ಪ್ರಜ್ಞೆಯ ನದಿಯು ನಾನು ನೀನು ಎಂಬ ವಿಭಜನೆಗಳನ್ನೇ ಇಲ್ಲವಾಗಿಸಿ ಏಕನಾದದಲ್ಲಿ ಜೀವಗಳನ್ನು ಕಟ್ಟುತ್ತದೆ. ಆ ಆದಿ ಆಧಾರದಿಂದ ಕಳಚಿಕೊಂಡ ಮನುಷ್ಯ ಪ್ರಜ್ಞೆ ಮತ್ತೆ ಆ ಮಹತ್ತಿನೊಂದಿಗೆ ಒಂದಾಗಲು ತಹತಹಿಸುವ ತಳಮಳದ ಎಳೆಗಳು ಕಣ್ಣಕಾಣಿಕೆ ಕವಿತೆಯಲ್ಲಿವೆ. ನಾನು ನೀನೆಂಬುದು ಅಳಿದು ಹೋಗುವಂತೆ ಕೂಡಬೇಕೆಂಬ ಮಿಲನದ ಉತ್ಕಟತೆ ಹಾಗೂ ವಿರಹದ ತೀವ್ರತೆಯನ್ನು ಅವರು ಶೃಂಗಾರ ಭಕ್ತಿ ಕಾವ್ಯಗಳಲ್ಲಿ ರಸನೇತ್ರದಿಂದ ವರ್ಣಿಸಿದರೆ, ಇಲ್ಲಿ ಅದನ್ನು ಚಿತ್ತದ ಅನೂಹ್ಯ ನಾದವಾಗಿ ಕೆತ್ತುತ್ತಾರೆ. “ನಿನ್ನ ಕೊಳಲಹುದು ಈ ನನ್ನ ಕೊರಳು” ಎಂಬ ಅವರ ನುಡಿ ನಾದದ ಹಾದಿಯಲ್ಲಿ ಪಯಣಿಸಿ ಈ ಅಭೇದವನ್ನು ಕಾಣುವ ಕಣ್ಣು ಕೊಡುತ್ತದೆ. ಅವರ ಕಾವ್ಯದ ನಾದಲೀಲೆಗೆ ನಮ್ಮನ್ನು ಒಳಗುಮಾಡುತ್ತದೆ.

ಈ ಅಂಕಣದ ಹಿಂದಿನ ಬರೆಹಗಳು:
ನದಿಗೆ ನೆನಪಿನ ಹಂಗಿಲ್ಲ
ಶಬ್ದದೊಳಗಿನ ನಿಶ್ಯಬ್ದವನ್ನು ಸ್ಫೋಟಿಸುವ ಕಥನ
ಮೊಲೆ ಮುಡಿಗಳ ಹಂಗು
ನೆಲದಕಣ್ಣಿನ ಕಾರುಣ್ಯ: ನೋವೂ ಒಂದು ಹೃದ್ಯ ಕಾವ್ಯ
ಫಣಿಯಮ್ಮ ಎಂಬ ಹೊಸ ಪುರಾಣ:
‘ಹಾರುವ ಹಕ್ಕಿ ಮತ್ತು ಇರುವೆ...’ ಅನನ್ಯ ನೋಟ
ಹೊತ್ತು ಗೊತ್ತಿಲ್ಲದ ಕಥೆಗಳು
ಹೊಳೆಮಕ್ಕಳು : ಅರಿವಿನ ಅಖಂಡತೆಗೆ ತೆಕ್ಕೆಹಾಯುವ ಕಥನ
ಕನ್ನಡ ಚಿಂತನೆಯ ಸ್ವರೂಪ ಹಾಗೂ ಮಹಿಳಾ ಸಂವೇದನೆಗಳು
ಸಾಹಿತ್ಯ ಸರಸ್ವತಿ ಬದುಕಿನ ‘ಮುಂತಾದ ಕೆಲ ಪುಟಗಳು’...
ಹೋದವರು ಹಿಂದಿರುಗಿ ಬರಲು ಹಾದಿಗಳಿಲ್ಲ
ನಿಗೂಢ ಮನುಷ್ಯರು: ತೇಜಸ್ವಿಯವರ ವಿಶ್ವರೂಪ ದರ್ಶನ
ಕನಕನ ಕಿಂಡಿಯಲ್ಲಿ ಮೂಡಿದ ಲೋಕದೃಷ್ಟಿ
ವಿಶ್ವಮೈತ್ರಿಯ ಅನುಭೂತಿ : ಬೇಂದ್ರೆ ಕಾವ್ಯ
ಕಾರ್ನಾಡರ ಯಯಾತಿ- ಕಾಲನದಿಯ ತಳದಲ್ಲಿ ಅಸ್ತಿತ್ವದ ಬಿಂಬಗಳ ಹುಡುಕಾಟ
ಹರಿವ ನದಿಯಂಥ ಅರಿವು : ಚಂದ್ರಿಕಾರ ಚಿಟ್ಟಿ
ಕಾಲುದಾರಿಯ ಕವಿಯ ಅ_ರಾಜಕೀಯ ಕಾವ್ಯ

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...