ಪ್ರಜಾಪ್ರಭುತ್ವದ ಮೂಲ ಅಂಗಗಳು ವಿಕಲಗೊಂಡಿವೆಯೇ?

Date: 02-09-2021

Location: ಬೆಂಗಳೂರು


‘ನಿತ್ಯದ ಘಟನೆಗಳನ್ನು, ಆಗು ಹೋಗುಗಳನ್ನು ತಮ್ಮ ಹಾಗೂ ಪಕ್ಷದ ಹಿತಾಸಕ್ತಿಗನುಗುಣವಾಗಿ ಬಳಸಿಕೊಳ್ಳುವ ನಿಪುಣತೆ ನಮ್ಮ ನಾಯಕ ಗಣದ್ದು. ರಾಜಕಾರಣಿಗಳ ಇಂತಹ ಕುಹಕ ನಡತೆಯನ್ನು ಕಂಡು ಅನುಭವಿಸುವ ದರ್ದು ಜನ ಸಾಮಾನ್ಯರದ್ದು’ ಎನ್ನುತ್ತಾರೆ ಲೇಖಕ ಸಂತೋಷ ಅನಂತಪುರ. ತಮ್ಮ ಅನಂತಯಾನ ಅಂಕಣದಲ್ಲಿ ಪ್ರಜಾಪ್ರಭುತ್ವ ಮತ್ತು ವಾಸ್ತವಗಳ ಕುರಿತು ವಿಶ್ಲೇಷಿಸಿದ್ದಾರೆ.

ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳ ಸಾಲಿನಲ್ಲಿ ಭಾರತವು ತನ್ನದೇ ಸ್ಥಾನವನ್ನು ಪಡೆದುಕೊಂಡಿದೆ. ಭಾರತದ ಬಹು ಧರ್ಮೀಯ, ಭಾಷೀಯ, ಸಂಸ್ಕೃತಿಯ ಸಹಿಷ್ಣು ಗುಣವು ಮಾತ್ರ ಅನ್ಯ ದೇಶೀಯರಿಗೆ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಅನೇಕತೆಯಲ್ಲಿ ಏಕತೆಯನ್ನು ಕಾಣುವುದು ಈ ಮಣ್ಣಿನ ಶ್ರೇಷ್ಠ ಗುಣ. ಎಲ್ಲಾ ವೈವಿಧ್ಯತೆಗಳ ಜತೆಗೆ ಒಂದು ವ್ಯವಸ್ಥೆಯಡಿ ಸಮಸ್ತ ದೇಶವಾಸಿಗಳನ್ನು ಒಗ್ಗೂಡಿಸಿ ನಡೆಸುವುದು ಸವಾಲಿನ ಕೆಲಸ.

ದೇಶದ ಮುಖ್ಯ ಆಧಾರ ಸ್ಥಂಭಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗವು ವ್ಯವಸ್ಥೆಗೆ ಪೂರಕವಾಗಿ ಕಾರ್ಯನಿರ್ವಹಿಸುವ ಅಂಗಗಳು. ಹಾಗಿದ್ದರೂ ಇವುಗಳಿಗೆಲ್ಲ ‘ಸನ್ನಿ’ ಬಡಿದು ಬಿದ್ದಂತೆ ತೋರುವುದಿಲ್ಲವೇ? ವ್ಯವಸ್ಥೆ ಎನ್ನುವುದು ಸಮಾಜವೊಂದರ ನೆಲೆಗಟ್ಟು-ಅದು ಚೆನ್ನಾಗಿದ್ದಲ್ಲಿ ಮಾತ್ರ ಉತ್ತಮ ಫಸಲಿನ ಸಮಾಜ ನಿರ್ಮಾಣವಾಗುವುದು. ಆದರೆ ಕಲುಷಿತಗೊಂಡ ಭೂಮಿಯಲ್ಲಿ ಉತ್ತಮ ಇಳುವರಿಯಾದರೂ ಹೇಗೆ ಬಂದೀತು?

ಪ್ರಜಾಫ್ರಭುತ್ವದಲ್ಲಿ ಹೆಚ್ಚಾಗುತ್ತಿರುವ ಹುಳುಕುಗಳೇ ಇವಕ್ಕೆಲ್ಲಾ ಕಾರಣ. ಅದರಲ್ಲಿ ಪ್ರಜೆಗಳದ್ದೇ ಮುಖ್ಯ ಭೂಮಿಕೆ. ಅವರ ಅಭಿಪ್ರಾಯ ಕಾನೂನಿದ್ದಂತೆ. ಆದರೀಗ ಜನಪ್ರತಿನಿಧಿಗಳದ್ದೇ ಕಾರುಬಾರು. ಆಸೆ-ಆಕಾಂಕ್ಷೆಗಳನ್ನು ಹೊತ್ತ ಕ್ಷೇತ್ರವಾರು ಪ್ರತಿನಿಧಿಸುವ ಮತದಾರರ ಇಚ್ಛೆಗಳಿಗೆ ವಿರುದ್ಧವಾಗಿ ಘಟಿಸುವ ಘಟನೆಗಳೇ ಪ್ರಸಕ್ತ ಕಾಲಾವಸ್ಥೆಗೊಂದು ಜ್ವಲಂತ ಸಾಕ್ಷಿ.

ನ್ಯಾಯಾಂಗ: ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ವಿಶೇಷ ಟಾಡಾ ನ್ಯಾಯಾಲಯವು ಸಂಜಯ್ ದತ್ ಆದಿಯಾಗಿ ಎಲ್ಲಾ ತಪ್ಪಿತಸ್ಥರಿಗೂ ನೀಡಿದ ಶಿಕ್ಷೆ ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆ ಇನ್ನೂ ಜೀವಂತವಾಗಿದೆ ಎಂಬುದನ್ನು ಉದಾಹರಣೆ ಸಮೇತ ತೋರಿಸಿಕೊಟ್ಟಿತು. ‘ಪರದೆ ಕಿ ಪೀಚೆ' ನಡೆಯುವ ಚಟುವಟಿಕೆಗಳಿಂದ ನ್ಯಾಯಾಂಗವು ವಿಚಲಿತವಾಗದೆ ತನ್ನತನವನ್ನು, ಕರ್ತವ್ಯವನ್ನು ಪೂರೈಸಿತು. ಈ ರೀತಿ ದೇಶದ ಸಮಗ್ರತೆಯನ್ನು ನ್ಯಾಯಾಂಗವು ಕಾಪಿಟ್ಟುಕೊಂಡು ಬಂದುದು ಶ್ಲಾಘನೀಯ. ವಿಪರ್ಯಾಸವೆಂದರೆ, ಸಂಜಯ್ ದತ್‌ಗೆ ಜೈಲು ಶಿಕ್ಷೆ ಬೇಡ ಎಂದು ಊಳಿಟ್ಟ ಜನಪ್ರತಿನಿಧಿ, ಕಲಾವಿದರ ವರ್ತನೆಗೆ ಏನೆನ್ನಬೇಕು? ಯಾರೇ ಅಪರಾಧ ಮಾಡಿದರೂ ಅದು ಅಪರಾಧವೇ. ಕುಲ, ಗೋತ್ರ, ಜಾತಿ, ಮತಗಳಿಗೆ ಖಂಡಿತಾ ಆಸ್ಪದವಿರಬಾರದು. ಇದೇ ಸಂಜು ಬಾಬಾನ ಬದಲು ಸಾಮಾನ್ಯ ನಾಗರಿಕನೊಬ್ಬ ಆ ಸುಳಿಯಲ್ಲಿ ಸಿಲುಕಿದ್ದಿದ್ದರೆ ಬೆಂಬಲ, ಪ್ರತಿರೋಧಗಳು ಮೂಡುತ್ತಿತ್ತೇ? ಅಂದರೆ ನಮ್ಮಲ್ಲಿ ಸೆಲೆಬ್ರೆಟಿಗಳಿಗೆ ಮಾತ್ರ ವಿಶೇಷ ಸವಲತ್ತೇ? ಸೆಲೆಬ್ರಿಟಿ ಅಂದ ಮಾತ್ರಕ್ಕೆ ಏನೂ ಆಡಬಹುದು-ಮಾಡಬಹುದು ಎಂದರೆ ಎಂತಹ ದೊಡ್ಡ ದುರಂತ.

ನಾಲಗೆಯ ಮೇಲಿನ ಹಿಡಿತವನ್ನು ಕಳಕೊಂಡು ಸ್ಟಾರ್ಡಮ್ ನ ಮೇಲೆ ಕುಳಿತವರು ಇಂದು ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಖೇದದ ವಿಚಾರ. ಇಂತವರು ಸಮಾಜಕ್ಕೆ, ತಮ್ಮ ಅಭಿಮಾನಿಗಳಿಗೆ ಎಂತಹ ಸಂದೇಶವನ್ನು ಕೊಡಲು ಬಯಸುತ್ತಾರೆ? ಈಗೀಗಂತೂ ಈ ರೀತಿಯ ವರ್ತನೆಯು ಚಾಳಿಯಾಗಿದೆ. ದೇಹದ ಕೊಬ್ಬೊ ಅಥವಾ ಬುದ್ಧಿಗಂಟಿದ ಮಬ್ಬೊ.. ಏನೋ ಒಂದು ಗಬ್ಬು ಹೀರೊ-ಹೀರೋಯಿನ್ ಎನಿಸಿಕೊಂಡವರಿಂದ ಎದ್ದು ಬರುತ್ತಿದೆ. ಎಂತೆಂತಹ ಅತಿರಥ ಮಹಾರಥ ಸಿನಿ ನಾಯಕ/ಕಿಯರನ್ನು ಈ ದೇಶ-ರಾಜ್ಯಗಳು ಕಂಡಿಲ್ಲ ಹೇಳಿ? ಅಂತಹದ್ದರಲ್ಲಿ ಸಾಮಾನ್ಯ ಮನುಷ್ಯನಿಗೂ ಅಸಹ್ಯ ಎನಿಸುವಷ್ಟರವರೆಗೆ 'ನಾಯಕ-ನಾಯಕಿ'ಯರು ವರ್ತಿಸುವುದು ನಿಜಕ್ಕೂ ಅಸಹ್ಯ. ಮುಂಬೈ ಫುಟ್‌ಪಾತ್ ಮೇಲೆ ನಿದ್ರಿಸಿ ಆಕಾಶದಲ್ಲಿ ನಕ್ಷತ್ರಗಳನ್ನು ಎಣಿಸಿ, ಕನಸನ್ನು ಪೋಣಿಸುತ್ತಿದ್ದವರ ಮೇಲೆ ಕಾರು ಚಲಾಯಿಸಿದ ಕೃಷ್ಣಮೃಗ ಬೇಟೆಯ ಸಲ್ಮಾನ್‌ಖಾನ್- ಮದ್ಯ ಪೂರೈಸಲಿಲ್ಲವೆಂದು ಪಿಸ್ತೂಲ್ ತೆಗೆದು ಕೊಬ್ಬಿನಿಂದ ಉತ್ತರಿಸಿದ ‘ಅಮೀರ್ ಬಾಪ್ ಕೆ ಬಿಗಡೇ ಹುವೇ ಬೇಟೆ' ಮನುಶರ್ಮಾ.. ಇವರೆಲ್ಲರಿಗೂ ಶಾಸಕಾಂಗವು ಪರೋಕ್ಷವಾಗಿ ಸಹಾಯ ಮಾಡುತ್ತಾ, ರಕ್ಷಣೆ ನೀಡುತ್ತಾ ಬಂದಿದೆ. ಹಾಗಿದ್ದರೂ ನ್ಯಾಯ ದೇವತೆ ತನ್ನ ತಕ್ಕಡಿಯನ್ನು ಸಮಾನಂತರವಾಗಿ ತೂಗಿದ್ದಾಳೆ ಎಂಬುದೊಂದು ಸಮಾಧಾನದ ವಿಷಯ.

ಶಾಸಕಾಂಗ: ರಾಷ್ಟ್ರದ ಪ್ರಥಮ ಪ್ರಜೆಯ ಆಯ್ಕೆಯ ವಿಚಾರದಲ್ಲಿ ನಡೆದ ಗೊಂದಲವು ನಮ್ಮ ಜನಪ್ರತಿನಿಧಿಗಳಿಗೆ ರಾಷ್ಟ್ರದ ಅಭ್ಯುದಯದ ಕುರಿತು ಎಷ್ಟು ಕಾಳಜಿ ಇದೆ ಎಂಬುದನ್ನು ತೋರಿಸುತ್ತದೆ. ‘ಜನರ ರಾಷ್ಟ್ರಪತಿ' ಎಂದೇ ಕರೆಯಲ್ಪಟ್ಟ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಅವರನ್ನು ಸಕಲ ರಾಜಕೀಯ ಪಕ್ಷಗಳು ಎರಡನೇ ಅವಧಿಗೆ ಆಯ್ಕೆ ಮಾಡುವಲ್ಲಿ ಹಿಂದೇಟು ಹಾಕಿದ್ದ ಉದಾಹರಣೆ ಪಕ್ಷಗಳ, ಜನಪ್ರತಿನಿಧಿಗಳ ಸ್ವ-ಹಿತವನ್ನು ಎತ್ತಿ ತೋರಿಸಿತಲ್ಲವೇ? ಹಾಗಾದರೆ ಸಮುದಾಯದ ಹಿತಕ್ಕಿಂತ ಪಕ್ಷ, ವ್ಯಕ್ತಿಗಳ ಹಿತವೇ ಮುಖ್ಯ ಎಂದಾಯಿತಲ್ಲ? ಇದೂ ಕೂಡ ಪ್ರಜಾಪ್ರಭುತ್ವದ ಬಹುದೊಡ್ಡ ಹುಳುಕು.

ಪ್ರಜಾಪ್ರಭುತ್ವದ ಮೂರು ಅಂಗಗಳಲ್ಲಿ ಶಾಸಕಾಂಗವೇ ಮುಖ್ಯವಾದುದು. ಕಾರ್ಯಾಂಗ, ನ್ಯಾಯಾಂಗಗಳಲ್ಲಿ ಮಾಡಿದ ಬದಲಾವಣೆಯನ್ನು ಕೂಡ ಚುನಾಯಿತಗೊಂಡ ಜನಪ್ರತಿನಿಧಿಗಳ ಶಾಸಕಾಂಗವು ತಿದ್ದುಪಡಿ ಮಾಡುವಷ್ಟು ಬಲಯುತವಾಗಿದೆ ಎಂದರೆ ನೀವೇ ಊಹಿಸಿಕೊಳ್ಳಿ ವಸ್ತುಸ್ಥಿತಿಯನ್ನು. ದೇಶದ ಎಲ್ಲಾ ಚುನಾಯಿತ ಜನಪ್ರತಿನಿಧಿಗಳ ಮಾತು-ನಡತೆಯನ್ನು ಗಮನಿಸಿದರೆ ಅವರಿಗಿರುವ ರಾಜಕೀಯ ಜ್ಞಾನ ಅದೆಷ್ಟರ ಮಟ್ಟದ್ದೆಂದು ಬಹಳ ಬೇಗನೆ ಅರಿವಿಗೆ ಬರುತ್ತದೆ. ಎಷ್ಟೋ ಸಚಿವರಿಗೆ ತಮ್ಮ ಖಾತೆಯ ಬಗ್ಗೆ ಪ್ರಾಥಮಿಕ ಜ್ಞಾನ ಕೂಡ ಇರುವುದಿಲ್ಲ. ಗೊತ್ತಿಲ್ಲದ್ದನ್ನು ತಿಳಿದುಕೊಳ್ಳುವ ಅನಿವಾರ್ಯವೂ ರಾಜಕೀಯ ವ್ಯವಸ್ಥೆಯಲ್ಲಿ ಇಲ್ಲದಿರುವುದು ದುರಂತವೇ ಸರಿ.

ಭ್ರಷ್ಟಾಚಾರ, ಜಾತಿ-ಮತ-ಮಠ-ಧರ್ಮಗಳ ನಡುವಿನ ಕಿತ್ತಾಟ, ಪರಸ್ಪರ ಕಾಲೆಳೆಯುವುದರಲ್ಲೇ ತಮ್ಮ ಸಮಯವನ್ನು ಹಾಳು ಮಾಡುವ ಇವರು ಜನರ ಸಮಸ್ಯೆಗಳಿಗೆ ಸ್ಪಂದಿಸಲು ಹೇಗೆ ಸಾಧ್ಯ? ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗವು ಎಡವಿದ್ದಲ್ಲಿ ಎಚ್ಚರಿಸಿ ದಾರಿ ತೋರಿಸಬೇಕಾದುದು ಮಾಧ್ಯಮದ ಕೆಲಸ. ಹಾಗಾಗುತ್ತಿದೆಯೇ? ಆಯಾ ಒಲವು-ನಿಲುವುಗಳಿಗೆ ಬದ್ಧರಾಗಿದ್ದುಕೊಂಡು ಕೊಂಬು-ಕಹಳೆಯನ್ನು ಊದುವ ಮಾಧ್ಯಮವು ತನ್ನ ಕರ್ತವ್ಯವನ್ನು ಪಾಲಿಸುತ್ತಿದೆ ಎಂದೆನ್ನಿಸುತ್ತಿದೆಯೇ? ದೇಶದ ನಾಲ್ಕನೇ ಅಂಗವೆಂದು ಕರೆಸಿಕೊಳ್ಳುತ್ತಿರುವ ಮಾಧ್ಯಮವು ತನ್ನ ಸಾರ್ಥಕತೆಯನ್ನು ಹೀಗೂ ಅಭಿವ್ಯಕ್ತಿಸುತ್ತದೆ ಎಂದರೆ ಆಶ್ಚರ್ಯವಾಗದಿರಲಾದೀತೇ ಹೇಳಿ ?

ರಾಜಕೀಯ ನಾಯಕರ ಸೌಜನ್ಯ ಹೇಗಿದೆ ಎನ್ನುವುದಕ್ಕೆ ಹಳೆಯ ಒಂದು ಉದಾಹರಣೆ; ದೇಶಕ್ಕಾಗಿ ವೀರ ಮರಣವನ್ನಪ್ಪಿದ ಕರ್ನಲ್ ವಸಂತಕುಮಾರ್ ಗೆ ಗೌರವ ಸಲ್ಲಿಸಲು ನಮ್ಮ ಯಾವೊಬ್ಬ ಜನನಾಯಕರೂ ಹೋಗಿರಲಿಲ್ಲ. ಅಷ್ಟೇ ಏಕೆ, ಸಾಮಾಜಿಕ ಕಳಕಳಿ ಹೊಂದಿರುವ ಸಾಲು ಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲಾದಾಗಲೂ ಯಾವೊಬ್ಬ ನಾಯಕರೂ ಕನಿಷ್ಠ ಸೌಜನ್ಯವನ್ನೂ ತೋರಿಸಿರಲಿಲ್ಲ. ಇದನ್ನು ಮಾಧ್ಯಮಗಳು ಬೊಟ್ಟು ಮಾಡಿ ತೋರಿಸಿದಂತೆ ರಾಜಕೀಯ ಪಕ್ಷಗಳ, ನಾಯಕರ ಅಪಸವ್ಯಗಳನ್ನೂ ತೋರಿಸಿವೆ. ಆದರೆ ಅದು ತಮ್ಮ ಮೂಗಿನ ನೇರಕ್ಕನುಗುಣವಾಗಿ ಮಾತ್ರ. ಪರಿಣಾಮ ನಿಜ-ಸುಳ್ಳು ಯಾವುದು? ಎಂಬ ದ್ವಂದ್ವ ಜನ ಸಾಮಾನ್ಯರಲ್ಲಿ. ಹೀಗಿರಲು ರಾಜಕೀಯ ಪಕ್ಷಗಳೇ ಮಾಧ್ಯಮವನ್ನು ಖರೀದಿಸಿವೆಯೇನೋ ಎನ್ನುವ ಗುಮಾನಿಯು ಹುಟ್ಟಿಕೊಂಡಿತೆಂದರೆ ಅದರಲ್ಲಿ ತಪ್ಪೇನಿಲ್ಲ.

ನಿತ್ಯದ ಘಟನೆಗಳನ್ನು, ಆಗು ಹೋಗುಗಳನ್ನು ತಮ್ಮ ಹಾಗೂ ಪಕ್ಷದ ಹಿತಾಸಕ್ತಿಗನುಗುಣವಾಗಿ ಬಳಸಿಕೊಳ್ಳುವ ನಿಪುಣತೆ ನಮ್ಮ ನಾಯಕ ಗಣದ್ದು. ರಾಜಕಾರಣಿಗಳ ಇಂತಹ ಕುಹಕ ನಡತೆಯನ್ನು ಕಂಡು ಅನುಭವಿಸುವ ದರ್ದು ಜನ ಸಾಮಾನ್ಯರದ್ದು. ನಿತ್ಯ ಯಾತನೆಗಳಾದ- ಬರ, ನೆರೆ, ಅರೋಗ್ಯ, ಆರ್ಥಿಕ, ಸಾಮಾಜಿಕ, ರಕ್ಷಣಾ ವಿಚಾರಗಳ ಜೊತೆಗೆ ಭಯೋತ್ಪಾದನೆಯ ನಿತ್ಯ ಅಟ್ಟಹಾಸ... ಹೀಗೆ ಇತರ ಯಾವುದೇ ನೈಜ ಸಮಸ್ಯೆಯ ಬಗ್ಗೆ ಯಾರೂ ಸತ್ಯವನ್ನು ಮಾತನಾಡಲೊಲ್ಲರು! ಅಷ್ಟರವರೆಗೆ ಓಟ್ ಬ್ಯಾಂಕ್ ರಾಜಕಾರಣವು ದೇಶ ಪೂರ್ತಿ ವ್ಯಾಪಿಸಿದ್ದಲ್ಲದೆ ಯಾವುದೇ ಪಕ್ಷಗಳೂ ಇದಕ್ಕೆ ಹೊರತಲ್ಲ ಎನ್ನುವುದನ್ನೂ ತೋರಿಸಿಕೊಟ್ಟಿವೆ. ವ್ಯವಸ್ಥೆಯ ನೆಲೆಗಟ್ಟು ಭದ್ರವಾಗಿರಲು ಆರೋಗ್ಯವಂತ ಸಮಾಜ ನಿರ್ಮಾಣದ ಅಗತ್ಯವಿದೆ. ಅಂತಹ ಒಂದು ಪ್ರಕ್ರಿಯೆ ಸಮಾಜದ ತಳಹದಿಯಿಂದಲೇ ಆರಂಭವಾಗಬೇಕು. ಜನರ ನಡುವೆ ಇರಬೇಕಾದ ಆಳುವ ವ್ಯಕ್ತಿಗಳು ಸ್ವಾರ್ಥದ ಚಿಪ್ಪೊಳಗೆ ಕುಣಿದು ಕುಪ್ಪಳಿಸುತ್ತಿರುವುದು ದುರದೃಷ್ಟವೇ ಸರಿ.

ಪೊಳ್ಳು ಆಶ್ವಾಸನೆ ಕೊಡುವುದು ಜನಪ್ರತಿನಿಧಿಗಳ ವೃತ್ತಿ ಜೀವನದ ಅರ್ಹತೆ ಎಂದುಕೊಂಡಂತಿದೆ. ಜನರ ನೋವು ನಲಿವುಗಳಿಗೆ ಸ್ಪಂದಿಸುವ ಹೃದಯವಿರಬೇಕು. ಅದು ಸದಾ ಮಿಡಿಯುತ್ತಲೂ ಇರಬೇಕು ಎನ್ನುವುದೇನೋ ನಿಜ. ಬಹುತೇಕ ರಾಜಕಾರಣಿಗಳಲ್ಲಿರುವ ಬೇಜವಬ್ದಾರಿತನ, ಅಸಡ್ಡೆ, ನಿರ್ಲಕ್ಷ್ಯಕ್ಕೆ- ಚುನಾವಣೆ ಸಂದರ್ಭದಲ್ಲಿ ಹೆಂಡ, ಹಣವನ್ನು ಪಡೆದು ಅಂತಹವರನ್ನು ಆರಿಸಿ ಕಳುಹಿಸಿದ ಪ್ರಜೆಗಳೇ ಕಾರಣ. ಪರೋಕ್ಷವಾಗಿ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುತ್ತಿರುವವರು ಕೂಡಾ ಮತದಾರರೇ. ಇಂತಿಂತಹ ಜಾತಿ, ಧರ್ಮ ಎಂಬ ಅಂಧಾಭಿಮಾನದ ಮುಸುಕಿನೊಳಗೆ ಇರುವವರಿಗೆ ಸಾಮಾಜಿಕ ಕಾಳಜಿ ಹುಟ್ಟುವುದಾದರೂ ಹೇಗೆ? ಆಯ್ಕೆಯು ಮನುಷ್ಯನ ಅಸ್ತಿತ್ವವನ್ನು ನಿರ್ಧರಿಸುವುದರಿಂದ ಪ್ರತಿಯೊಬ್ಬ ನಾಗರಿಕನೂ ತನ್ನ ಜವಾಬ್ದಾರಿಯನ್ನು ಅರಿತು ತನ್ನದೇ ಸ್ವಂತಿಕೆಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಜೊತೆಗೆ ಉತ್ತಮ ಸಮಾಜಕ್ಕೆ ಬೇಕಾದ ಭದ್ರ ಬುನಾದಿಯನ್ನೂ ಹಾಕಬೇಕು. ಆಗಲೇ ಜನಪ್ರಾತಿನಿಧ್ಯಕ್ಕೆ ಮತ್ತು ವ್ಯವಸ್ಥೆಗೊಂದು ಪರಿಪೂರ್ಣತೆ ಕಂಡು ಬರಲು ಸಾಧ್ಯ.

ನ್ಯಾಯಾಂಗ, ಶಾಸಕಾಂಗ, ಕಾರ್ಯಂಗಗಳ ಜೊತೆಗೆ ಮಾಧ್ಯಮವೂ ಒಂದಕ್ಕೊಂದು ಪೂರಕವಾಗಿ ನಡೆದುಕೊಂಡರೆ ರಾಷ್ಟ್ರ ಪ್ರಬಲವೂ, ಸಂಪದ್ಭರಿತವೂ, ಸ್ವಾರ್ಥರಹಿತವೂ, ಸ್ವಾವಲಂಬಿಯೂ ಆಗುವುದರಲ್ಲಿ ಸಂಶಯವಿಲ್ಲ. ಆದರೆ ಈ ಮೂರೂ ಅಂಗಗಳು ಕುಸಿದರೆ ದೇಶದ ಬೆನ್ನೆಲುಬಾದ ಜನರೇ ಎಚ್ಚೆತ್ತು ಕಿವಿ ಹಿಂಡಬೇಕಿದೆ. ಹಾಗಾದಾಗಲೇ ಸಾಮುದಾಯಿಕ ಹಿತವೆನ್ನುವುದು ಬೆಳೆದು ಬೆಳಗಲು ಸಾಧ್ಯ.

ಈ ಅಂಕಣದ ಹಿಂದಿನ ಬರೆಹಗಳು:
ದಾಸ್ಯವೂ..ಸ್ವಾತಂತ್ರ್ಯವೂ..
ಮುಸ್ಸಂಜೆಯ ಒಳಗೊಂದು ಅರ್ಥ
ಧಮ್ಮ ಗುಮ್ಮನ ನಂಬಿ ಕೆಟ್ಟರೆ ಎಲ್ಲರೂ ?
ಭರವಸೆಯ ಜೊತೆ ಹೆಜ್ಜೆ ಹಾಕೋಣ..
ಚಾದರದೊಳಗಿನ ಕಥೆ, ವ್ಯಥೆ...
'ಚಂದ್ರಗಿರಿ ತೀರದಲ್ಲಿ' ತೀರದ ಬವಣೆ..
‘ಬಯಲರಸಿ ಹೊರಟವಳು’- ಇಟ್ಟ ಹೆಜ್ಜೆಯ ಜಾಡು
ಬೆಳಕ ದಾಟಿಸುವ ಹಣತೆ- ಎಸ್.ದಿವಾಕರ್
ಅನುಭವಿಸಿ ಬರೆಯುವ ಜಯಂತ ಕಾಯ್ಕಿಣಿ
ಜೀವ ಜೀವಗಳ ಅಳು…
ಹನಿ ಹನಿಸಿದ ಚೊಕ್ಕಾಡಿ
ಶಾಂತ ಕಡಲೊಳು ಬೀಸಿದ ಬಿರುಗಾಳಿ
ರಂಗದ ಮೇಲಿನ ಬಣ್ಣದ ಭಾವಗಳು
ಬೆಳಕ ದಾಟಿಸುವ ಹಣತೆಯೂ...ಒಳ್ಳೆಯವರಾಗುವ ವ್ಯಸನವೂ...
ಟ್ಯಾಗ್ ಹಾಕಿ ನೋಡುವ ಮನಸ್ಸುಗಳ ನಡುವೆ
ಸಖನೂ ಸುಖವೂ ಒಂದೇ ಆಗುವ ಕ್ಷಣ

MORE NEWS

ರಾಜಾರಾಂ ತಲ್ಲೂರು ಎಂಬ ನಾಗರಿಕ ಸಮಾ...

22-09-2021 ಬೆಂಗಳೂರು

‘ರಾಜಾರಾಂರವರ ಬರೆಹಗಳನ್ನು ನಿರಂತರವಾಗಿ ಫಾಲೋ ಮಾಡುತ್ತ ಬಂದಿರುವ ನನಗೆ ಅವರು ನಮ್ಮ ಕಾಲದ ನಾಗರಿಕ ಸಮಾಜದ ಓರ್ವ ಸ...

ಸದಭಿರುಚಿ ಎಂಬುದು ಆಧುನಿಕ ಬದುಕಿನ ...

21-09-2021 ಬೆಂಗಳೂರು

ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯು...

ಲೋಕೋಪಕಾರಿಯ ಪಾತ್ರದಲ್ಲಿ ಲೋಹದ ಹಕ್...

16-09-2021 ಬೆಂಗಳೂರು

ಮೂಲತಃ ಉಡುಪಿ ಜಿಲ್ಲೆಯ ಮರವಂತೆಯವರಾದ ಯೋಗೀಂದ್ರ ಮರವಂತೆ ಅವರು ಇಂಗ್ಲೆಂಡ್‌ನ ಬ್ರಿಸ್ಟಲ್‌ ನಗರದಲ್ಲಿ &lsqu...