ಮಹಾಯುದ್ದ-೨ (ಮಿಲನಿಯಮ್-೭)

Author : ಕೆ.ಪಿ. ಪೂರ್ಣಚಂದ್ರ ತೇಜಸ್ವಿ

Pages 100

₹ 87.00




Year of Publication: 2011
Published by: ಪುಸ್ತಕ ಪ್ರಕಾಶನ
Address: 91, 9ನೇ ಮುಖ್ಯರಸ್ತೆ, ಸರಸ್ವತಿಪುರಂ, ಮೈಸೂರು-570 009
Phone: 0821-2545774, 9448203730

Synopsys

ಮಿಲನಿಯಮ್ ಸರಣಿಯು ಸಹಸ್ರಾರು ವರ್ಷಗಳ ಹಲವು ವಿದ್ಯಮಾನಗಳನ್ನು ಕುರಿತ ಪುಸ್ತಕ ಮಾಲೆ. ಮಿಲನಿಯಮ್ ಸರಣಿಯ ಏಳನೆಯ ಕೃತಿ ಮಹಾಯುದ್ದ-2. ಮಹಾಯುದ್ದ ಘಟನೆಗಳ ಮುಂದುವರೆದ ಭಾಗ, ಫ್ರೆಂಚ್ ಸೈನಿಕನೊಬ್ಬ ರಕ್ಷಿಸುವ ಜರ್ಮನ್ ಷೆಫರ್ಡ್ ತಳಿಯ ನಾಯಿ ಅವರ ಪರವಾಗಿ ನಡೆಸುವ ಸಾಹಸಗಳ ಹೃದಯಂಗಮ ಚಿತ್ರಣ, ಯುದ್ದ ಹೊತ್ತು ತರುವ ಅಪಹರಣ, ಸಂಚಿನ ಕೊಲೆಗಳು, ಹಿಟ್ಲರನ ಕೊನೆಯ ದಿನಗಳು ಮತ್ತು ಜಪಾನಿನ ಮೇಲೆ ನಡೆದ ಅಣುಬಾಂಬಿನ ಘೋರದಾಳಿ - ಹೀಗೆ ಯುದ್ದದ ವಿವಿಧ ಮುಖಗಳನ್ನು ಈ ಕೃತಿ ಒರೆಗೆ ಹಚ್ಚುತ್ತದೆ.

About the Author

ಕೆ.ಪಿ. ಪೂರ್ಣಚಂದ್ರ ತೇಜಸ್ವಿ
(08 September 1938 - 05 April 2007)

ಕನ್ನಡದ ಹೆಸರಾಂತ ಲೇಖಕ ಕುವೆಂಪು ಅವರ ಪುತ್ರರಾಗಿರುವ ಪೂರ್ಣಚಂದ್ರ ತೇಜಸ್ವಿ ಅವರು 08-09-1938ರದು ಜನಿಸಿದರು. ತಮ್ಮ ಬರವಣಿಗೆಯ ಮೂಲಕವೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ’ಚಿದಂಬರ ರಹಸ್ಯ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ತೇಜಸ್ವಿ ಅವರು ಕನ್ನಡದಲ್ಲಿ ನವ್ಯ ಸಾಹಿತ್ಯ ಚಳುವಳಿಯು ಉಚ್ಛ್ರಾಯ ಸ್ಥಿತಿಯಲ್ಲಿದ್ದ  ದಿನಗಳಲ್ಲಿ ಅದಕ್ಕಿಂತ ಭಿನ್ನವಾದ ನೆಲೆಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ನವ್ಯ ಲೇಖಕರು ನಗರ ಕೇಂದ್ರಿತ, ವ್ಯಕ್ತಿನಿಷ್ಟ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಬದುಕು ಕುರಿತ ಮತ್ತು ಅದು ಹಳಹಳಿಕೆಯ ಧ್ವನಿಯಲ್ಲಿ ಇರದ ಹಾಗೆ ನೋಡಿಕೊಂಡರು. ಲೋಹಿಯಾ ಚಿಂತನೆಗಳಿಂದ ಪ್ರೇರಿತರಾಗಿದ್ದ ...

READ MORE

Reviews

‘ಮಹಾಯುದ್ಧ-೨’ ಮಿಲನಿಯಮ್-೭’ ಕೃತಿಯ ವಿಮರ್ಶೆ

ಆ ಸಮಯದಲ್ಲಿ ನನ್ನ ತರ್ಕ ಬಹಳ ಸರಳವಾಗಿತ್ತು. ಯಾರ್ಯಾರು ಮಕ್ಕಳ ಕಥೆ ಬರೆಯುತ್ತಾರೋ, ನನಗೆ ಅರ್ಥವಾಗುವಂತಹ ಪರಿಸರ, ವಿಜ್ಞಾನ ಇತ್ಯಾದಿ ವಿಷಯಗಳ ಬಗ್ಗೆ ಸರಳವಾಗಿ ಬರೆಯುತ್ತಾರೋ ಅವರೆಲ್ಲಾ ಚಿಕ್ಕ ಲೇಖಕರು. ಯಾರ ಬರಹಗಳು ಅರ್ಥವಾಗುವುದಿಲ್ಲವೋ, ಒಂದು ಪ್ಯಾರಾಕ್ಕಿಂತಲೂ ಜಾಸ್ತಿ ಓದಿಸಿಕೊಂಡು ಹೋಗುವುದಿಲ್ಲವೋ ಅವರೆಲ್ಲಾ ದೊಡ್ಡ ಲೇಖಕರು ಅನ್ನೋ ನಂಬಿಕೆಯಲ್ಲಿದ್ದೆ. ಆದರೆ ತೇಜಸ್ವಿಯವರ ಬರಹಗಳು ಈ ನಂಬಿಕೆಯನ್ನು ಸಡಿಲಗೊಳಿಸಿದವು.‘ಓದುವ ಸುಖ’ ಅಂಕಣದಲ್ಲಿ ಗಿರಿಧರ್ ಗುಂಜಗೋಡು ಬರಹ

ನಾನಾಗ ಏಳು ಅಥವಾ ಎಂಟನೆಯ ತರಗತಿಯಲ್ಲಿದ್ದೆ. ಒಂದಿನ ಶಾಲೆಯಿಂದ‌ ಬಂದವನು ಕೈಕಾಲು ತೊಳೆದು, ತಿಂಡಿ ತಿಂದು, ಪೇಪರ್ ಓದಿ ಮಡಚಿಟ್ಟಮೇಲೆ ಆ ತಿಂಗಳು ಬಂದಿದ್ದ ‘ತುಷಾರ’ ಕಣ್ಣಿಗೆ ಬಿದ್ದಿತ್ತು. ಆಗ ಅದು ನನಗೆ ಅಷ್ಟು ಆಸಕ್ತಿ ಕೆರಳಿಸುವ ನಿಯತಕಾಲಿಕೆವೇನೂ ಆಗಿರಲಿಲ್ಲ. ಆದರೂ ಸುಮ್ಮನೆ ಪುಟ ತಿರುಗಿಸಿದಾಗ ‘ಜರ್ಮನ್ ಷಫರ್ಡ್’ ಅಂತ ತಲೆ ಬರಹವಿರುವ ಲೇಖನವೊಂದು ಕಣ್ಣಿಗೆ ಬಿದ್ದಿತು. ಎರಡು‌ ಮೂರು ಸಾಲು ಓದಿದ್ದೇ ಇನ್ನಿಲ್ಲದ ಕುತೂಹಲದಿಂದ‌ ಮುಂದಕ್ಕೆ ಓದಿಸಿಕೊಂಡು ಹೋಯಿತು. ಎರಡನೇ ಮಹಾಯುದ್ಧದ ಸಮಯದಲ್ಲಿ ತನ್ನ ಅದ್ಭುತ ಸಾಮರ್ಥ್ಯದಿಂದ ನೂರಾಅದುವರೆಗೆ ಕಂಡು ಕೇಳರಿಯದ ಪ್ರಪಂಚವೊಂದನ್ನು ಪರಿಚಯಿಸುವ ಈ ಎಲ್ಲಾ ಪುಸ್ತಕಗಳನ್ನು ಓದಲೇಬೇಕೆಂಬ ಆಸೆ ಬಲವಾಗುತ್ತಲೇ ಹೋಗಿತ್ತು. ಬೆಲೆ ಅಂದಿನ ದಿನಗಳಲ್ಲಿ ೪೫ ರೂಪಾಯಿಗಳಿತ್ತು. ಅಂದಿನ ದಿನದಲ್ಲಿ ಅದು ಖಂಡಿತವಾಗಿಯೂ ಚಿಕ್ಕ ಮೊತ್ತವಲ್ಲ. ಪುಸ್ತಕ ಕೊಳ್ಳಲು ಅಷ್ಟು ಹಣ ಸಿಗುವುದು ದೊಡ್ಡ ವಿಷಯವಲ್ಲದಿದ್ದರೂ ಪದೇ‌ ಪದೇ‌ ಕೇಳುವಷ್ಟು ಚಿಕ್ಕ ಮೊತ್ತವೂ ಅಲ್ಲವೆ‌ನ್ನುವ ಅರಿವೂ‌ ಇತ್ತು. ಮೊದಲ ಬಾರಿಗೆ ಮನೆಯಲ್ಲಿ ಹಣ ಇಸಿದುಕೊಂಡು ಸಿದ್ದಾಪುರ ಹೆರ್ಲೆಕರ್ ಅವರ ಅಂಗಡಿಗೆ ಮಿಲೇನಿಯಂ ಸರಣಿಯ ‘ಮಹಾಯುದ್ಧ-೨’ ಪುಸ್ತಕವನ್ನು ಕೊಂಡು ಕೊಳ್ಳಲು ಹೋಗಿದ್ದೆ. ದುರದೃಷ್ಟವಶಾತ್ ಅದರ ಪ್ರತಿಗಳು ಖಾಲಿಯಾಗಿದ್ದವು. ಅದರ ಬದಲಿಗೆ ಅದೇ ಸರಣಿಯ ೪-೫ ಬೇರೆ ಪುಸ್ತಕಗಳನ್ನು ತೋರಿಸಿದಾಗ ಹೆಸರಿನಲ್ಲಿ ಹೆಚ್ಚು ಆಸಕ್ತಿಕರವಾಗಿ ಕಂಡ ‘ಫೆಸಿಫಿಕ್ ದ್ವೀಪಗಳು’ ಅನ್ನುವ ಕೃತಿಯನ್ನು ಕೊಂಡುಕೊಂಡೆ. ಅದರ ಕೊನೆಯಲ್ಲಿರುವ ಕಿರು ಕಾದಂಬರಿಯೊಂದನ್ನು ಬಿಟ್ಟು ಉಳಿದುದೆಲ್ಲವೂ ಬಹಳ‌ ಇಷ್ಟವಾಗಿತ್ತು. ಒಂದು ಭಾಗದಲ್ಲಿ ‘ಅಟಲ್’ಗಳ ಸುಂದರ ಪರಿಚಯವಿದ್ದರೆ, ಇನ್ನೊಂದರಲ್ಲಿ ಭಯಾನಕವಾದ ಫಿಜಿಯನ್ ನರಭಕ್ಷಕರ ಕತೆಯಿತ್ತು , ಮತ್ತೊಂದು ಭಾಗದಲ್ಲಿ ರಸಗೊಬ್ಬರ ತಯಾರಿಕೆಗೆ ಅತ್ಯಗತ್ಯವಾದ ಪಾಸ್ಫೇಟಿನ‌ ಮೂಲಕ ಧಿಡೀರ್ ಬಂದ ಐಶ್ವರ್ಯ ‘ನೌರು’ ಎಂಬ ಪುಟ್ಟ ದ್ವೀಪವನ್ನು ಅಲ್ಲಿನ ಜನಜೀವನ‌ ಮತ್ತು ಸಂಸ್ಕೃತಿಯನ್ನು ಹೇಗೆ ಹಾಳು ಮಾಡಿತು ಅನ್ನುವುದರ ವಿವರಣೆಯಿತ್ತು. ಅದಾದ ಮೇಲೆ ಕೆಲ ದಿನಗಳ ನಂತರ ದೇಶವಿದೇಶದ ನಾಲ್ಕು ಭಾಗಗಳಲ್ಲಿ ಯಾವುದೋ ಒಂದು ಭಾಗ ಮತ್ತು ಮಹಾಯುದ್ಧದ ಮೂರು ಭಾಗಗಳಲ್ಲಿ ಭಾಗ ಎರಡನ್ನು ಕೊಂಡುಕೊಂಡೆ. ಜೊತೆಗೆ ಜೀವನ ಸಂಗ್ರಾಮ ಎಂಬ ಮಿಲೆನಿಯಂ ಸರಣಿಯ ಎರಡನೆ ಹೊತ್ತಿಗೆಯನ್ನು ಕೂಡಾ ಜನರನ್ನು ರಕ್ಷಿಸಲು ಸಹಕರಿಸಿದ ಆ್ಯಂಟಿಸ್ ಎಂಬ ಹೆಸರಿನ ಜರ್ಮನ್ ಷಫರ್ಡ್ ತಳಿಯ ನಾಯಿಯೊಂದರ ಕುರಿತಾದ ಬರಹ ಅದಾಗಿತ್ತು. ಆಮೇಲೆ‌ ಅದು ತೇಜಸ್ವಿಯವರು ಬರೆದಿದ್ದ ಮಿಲೇನಿಯಂ ಸರಣಿಯ ಪುಸ್ತಕಗಳಲ್ಲಿ ಒಂದಾದ‌ ‘ಮಹಾಯುದ್ಧ-೨’ ರ ಒಂದು ಲೇಖನವಾಗಿತ್ತು ಎಂದು ತಿಳಿಯಿತು.

ಅಲ್ಲಿಯವರೆಗೆ ಕುವೆಂಪು ಗೊತ್ತಿತ್ತು, ಆದರೆ ತೇಜಸ್ವಿ ಗೊತ್ತಿರಲಿಲ್ಲ. ಅವರು ಕುವೆಂಪು ಅವರ ಮಗ ಅಂತನೂ ಗೊತ್ತಿರಲಿಲ್ಲ (ಕುವೆಂಪು ಅವರ ಬಗ್ಗೆ ಕೂಡಾ ಬೇಕಾದಷ್ಟು ಕೇಳಿ ಗೊತ್ತಿದ್ದರೂ ಕೂಡಾ ಪಠ್ಯದಲ್ಲಿ ಬಂದ ಕವಿತೆಗಳ ಬಿಟ್ಟು ಅವರ ಉಳಿದ ಸಾಹಿತ್ಯ ಅಪರಿಚಿತವೇ ಆಗಿತ್ತು). ಆ ಸಮಯದಲ್ಲಿ ನನ್ನ ತರ್ಕ ಬಹಳ ಸರಳವಾಗಿತ್ತು. ಯಾರ್ಯಾರು ಮಕ್ಕಳ ಕಥೆ ಬರೆಯುತ್ತಾರೋ, ನನಗೆ ಅರ್ಥವಾಗುವಂತಹ ಪರಿಸರ, ವಿಜ್ಞಾನ ಇತ್ಯಾದಿ ವಿಷಯಗಳ ಬಗ್ಗೆ ಸರಳವಾಗಿ ಬರೆಯುತ್ತಾರೋ ಅವರೆಲ್ಲಾ ಚಿಕ್ಕ ಲೇಖಕರು. ಯಾರ ಬರಹಗಳು ಅರ್ಥವಾಗುವುದಿಲ್ಲವೋ, ಒಂದು ಪ್ಯಾರಾಕ್ಕಿಂತಲೂ ಜಾಸ್ತಿ ಓದಿಸಿಕೊಂಡು ಹೋಗುವುದಿಲ್ಲವೋ ಅವರೆಲ್ಲಾ ದೊಡ್ಡ ಲೇಖಕರು ಅನ್ನೋ ನಂಬಿಕೆಯಲ್ಲಿದ್ದೆ. ಆದ ಕಾರಣ ಅಷ್ಟು ಸುಲಭಕ್ಕೆ ನಮಗೆಲ್ಲಾ ಓದಿಸಿಕೊಂಡು ಹೋಗುವಂತೆ ವಿವಿಧ ವಿಷಯಗಳನ್ನು ತಡಕಾಡಿ ಅನುವಾದ ಮಾಡಿದ ಇವರು ದೊಡ್ಡ ಲೇಖಕರಲ್ಲವೇನೋ ಅನ್ನೋ ತೀರ್ಮಾನಕ್ಕೆ ಬಂದೆ. ಆದರೂ ಪರವಾಗಿಲ್ಲ, ನಾನು ಓದುವಂತಹ ಬರಹ ಬರೆಯುವ ಒಳ್ಳೆ ಲೇಖಕರು ಅಂತ ಸಮಾಧಾನವಾಯಿತು. ಅದೂ ಅಲ್ಲದೇ ದೊಡ್ಡವರ ಪತ್ರಿಕೆಗಳಾದ ತುಷಾರ, ಮಯೂರ ಮತ್ತು ಕಸ್ತೂರಿಗಳಲ್ಲಿ ಅಂದಿನವರೆಗೆ ಕೇವಲ ಮಕ್ಕಳ ವಿಭಾಗ ಮಾತ್ರ ಓದುತ್ತಿದ್ದ ನಾನು ಈಗ ಹೊಸದೊಂದನ್ನು ಓದಿದ್ದಕ್ಕೆ ಏನೋ ಒಂದು upgrade ಆದ ಹೆಮ್ಮೆ ಮನಸ್ಸೊಳಗೆ ಬಂದಿತ್ತು.

ಅನೇಕರಿಗೆ ತಿಳಿದಿದ್ದರೂ, ಗೊತ್ತಿಲ್ಲದವರಿಗಾಗಿ ಮತ್ತೊಮ್ಮೆ ಹೇಳುತ್ತೇನೆ. ಈ ಸರಣಿಯಲ್ಲಿ ಒಟ್ಟೂ ಹದಿನಾರು ಪುಸ್ತಕಗಳಿವೆ. ಮೊದಲ ಭಾಗವಾದ ‘ಹುಡುಕಾಟದಿಂದ’ ಮೊದಲ್ಗೊಂಡು ಕೊನೆಯ ಭಾಗ ‘ಅಡ್ವೆಂಚರ್’ವರೆಗೆ ಒಂದೊಂದು ಪುಸ್ತಕಗಳೂ ಅನೇಕ ಅದ್ಭುತ ವಿಷಯಗಳನ್ನು ನಿಮಗೆ ಪರಿಚಯಿಸುತ್ತದೆ. ಆದಿಮಾನವನ ಇತಿಹಾಸ, ನಾಗರೀಕತೆಗಳನ್ನೇ ನಾಶಮಾಡಿದ ವಿವಿಧ ಪ್ರಾಕೃತಿಕ ವಿಕೋಪಗಳು, ಚಂದ್ರನೆಡೆಗೆ ಮಾನವನ ಪಯಣದ ಕುರಿತ ಅನೇಕ ವಿಷಯಗಳು, ವಿವಿಧ ದೇಶಗಳ ಆಶ್ಚರ್ಯಕರ ಸಂಗತಿಗಳು, ಎರಡನೇ ಮಹಾಯುದ್ಧದ ವಿವಿಧ ಘಟನಾವಳಿಗಳು, ಸೈಬೀರಿಯಾದ ಖೈದಿಗಳ ಕ್ಯಾಂಪಿನಿಂದ ತಪ್ಪಿಸಿಕೊಂಡು ಹೋದವರ ಸಾವು ಬದುಕಿನ ಹೋರಾಟದ ಕತೆಯಾದ ಮಹಾಪಲಾಯನ ಹೀಗೆ ಏಳೂ ಭೂಖಂಡಗಳ ವಿವಿಧ‌ ವಿಷಯಗಳೆಡೆ ಬೆಳಕು ಚೆಲ್ಲುತ್ತವೆ. ಮತ್ತು ಇವ್ಯಾವವೂ ಮುಂದುವರಿಕೆಗಳಲ್ಲದ ಕಾರಣ ಅನುಕ್ರಮವಾಗಿಯೇ ಓದಬೇಕೆಂದಿಲ್ಲ. ಯಾವುದನ್ನು ಬೇಕಾದರೂ ಹಿಡಿದುಕೊಂಡು ಓದಲು ಶುರುಮಾಡಬಹುದು.

ನೆನಪಿಡಿ, ಆಗ ನಾನು ಬದುಕುತ್ತಿದ್ದ ಜಗತ್ತಿನಲ್ಲಿ ಇಂಟರ್‌ನೆಟ್ ಇನ್ನೂ ಬಂದಿರಲಿಲ್ಲ. ಆ ಸಮಯದಲ್ಲಿ ತೇಜಸ್ವಿ ಅಂತರ್ಜಾಲದ ಮಹತ್ವ, ಕನ್ನಡದ ಭವಿಷ್ಯದಲ್ಲಿ ಯೂನಿಕೋಡಿನ ಮಹತ್ವದ ಬಗ್ಗೆ ಮುಂದಾಲೋಚನೆ ಮಾಡಿದ್ದರು. ಅದರ ಬಗ್ಗೆ ಹೇಳಹೊರಟರೆ ಬೇರೆಯೇ ಬರಹ ಬರೆಯಬೇಕಾಗುತ್ತದೆ. ನನ್ನ ಅಥವಾ ಆ ಸಮಯದಲ್ಲಿ ಬಹುತೇಕರ ಕೈಗೆಟುಕಲಾರದಂತಿದ್ದ ಅಮೂಲ್ಯ ತಿಳುವಳಿಕೆಗಳನ್ನು ಹೇಗೆ ಸರಳವಾಗಿ ಕೊಟ್ಟರು ಮತ್ತು ಹೇಗೆ ಅದು ಮುಂದೆ ಅನೇಕ ವಿಷಯಗಳೆಡೆಗೆ ಕಿಂಚಿತ್ತಾದರೂ ಓದಲು ಸಾಧ್ಯವಾಯಿತು ಹಾಗೂ ಈ ವಿಷಯದಲ್ಲಿ ಅವರಿಗೆ ನಾವೆಷ್ಟು ಕೃತಜ್ಞರಾಗಿದ್ದರೂ ಕಮ್ಮಿಯೇ ಅನ್ನುವುದನ್ನ ಹೇಳಹೊರಟಿದ್ದೆ ಅಷ್ಟೇ.

ನಾನು ಓದುವಂತಹ ಬರಹ ಬರೆಯುವ ಒಳ್ಳೆ ಲೇಖಕರು ಅಂತ ಸಮಾಧಾನವಾಯಿತು. ಅದೂ ಅಲ್ಲದೇ ದೊಡ್ಡವರ ಪತ್ರಿಕೆಗಳಾದ ತುಷಾರ, ಮಯೂರ ಮತ್ತು ಕಸ್ತೂರಿಗಳಲ್ಲಿ ಅಂದಿನವರೆಗೆ ಕೇವಲ ಮಕ್ಕಳ ವಿಭಾಗ ಮಾತ್ರ ಓದುತ್ತಿದ್ದ ನಾನು ಈಗ ಹೊಸದೊಂದನ್ನು ಓದಿದ್ದಕ್ಕೆ ಏನೋ ಒಂದು UPGRADE ಆದ ಹೆಮ್ಮೆ ಮನಸ್ಸೊಳಗೆ ಬಂದಿತ್ತು.

ನನ್ನ ಭಾಗ್ಯಕ್ಕೆ ಮನೆಯಲ್ಲಿ ಉತ್ತಮ ಓದಿಗೆ ಪ್ರೋತ್ಸಾಹ ನೀಡುವ ವಾತಾವರಣವಿತ್ತು. ಅದೇ ತರಹ ಒಡಹುಟ್ಟಿದವರಿಗೆ ಮತ್ತು ಬಾಲ್ಯದ ಗೆಳೆಯರಿಗೂ. ಮುಖ್ಯವಾಗಿ ನಾನು ಬೇಸಿಗೆಯಲ್ಲಿ ಅಜ್ಜನ ಮನೆಗೆ ಅಂದರೆ ತಾಯಿಯ ತವರಿಗೆ ಹೋದಾಗ ಅನೇಕ ಹೊಸ ಪುಸ್ತಕಗಳು ಕಾದಿರುತ್ತಿದ್ದವು. ನನ್ನ ಮಾವನ ಮಕ್ಕಳ ಜೊತೆ ಇತ್ತೀಚೆಗೆ ಓದಿದ ಪುಸ್ತಕಗಳ ಬಗೆಗೆ ದೀರ್ಘವಾದ ಚರ್ಚೆ ಸಾಗುತ್ತಿತ್ತು‌. ಹೀಗೆ ಒಂದು ಬೇಸಗೆ ರಜೆಯಲ್ಲಿ ಹೋದಾಗ ಬಾವ ಮಹಾಪಲಾಯನವೆನ್ನುವ ಪುಸ್ತಕವನ್ನು ತೋರಿಸಿದ. ಅದು ಬೇಡ ಈಗ ಇನ್ನೊಂದು ಪುಸ್ತಕ ಓದ್ತೀನಂತ ಹೊರಟವನನ್ನು ತಡೆದು ಮೊದಲು ಮಹಾಪಲಾಯನವನ್ನೇ ಓದು ಅಂದ. ಅವನ ಬಲವಂತಕ್ಕೆ ಮೊದಲ ಪುಟ ತೆರೆದು ಓದಲು ಶುರುಮಾಡಿದಾಗ ಹೊತ್ತಿನ ಪರಿವೆಯಿಲ್ಲದೇ ಓದುತ್ತಿದ್ದೆ. ಓದಿ ಮುಗಿಸಿದಾಗ ಅದರ ಗುಂಗಿನಿಂದ ಹೊರಬರಲು ನಾಲ್ಕು ದಿನ ಬೇಕಾಗಿತ್ತು. ನನಗೆ ಮಾತ್ರವಲ್ಲ, 80-2000 ದಶಕಗಳಲ್ಲಿ ಹುಟ್ಟಿದ ಪುಸ್ತಕಪ್ರಿಯರಲ್ಲಿ ದೊಡ್ಡ ಪ್ರಮಾಣದ ಜನರಿಗೆ ಈ ಪುಸ್ತಕ ಹುಚ್ಚು ಹಿಡಿಸಿದೆ ಎಂಬುದನ್ನು ಖಚಿತವಾಗಿ ಹೇಳಬಲ್ಲೆ.

ಒಮ್ಮೆ ಪಿಯುಸಿ ಓದುತ್ತಿರಬೇಕಾದರೆ ನಾವು 4-5 ಗೆಳೆಯರು ಯಾವುದೋ ಸ್ಪರ್ಧೆಗೆ ಸಾಗರ ಹತ್ತಿರದ ಸಿರಿವಂತೆಗೆ ಹೋದವರು 6-7 ಕಿಲೋಮೀಟರ್ ದೂರದ ಸಾಗರದ ಕಡೆ ನಡೆದುಕೊಂಡು ಹೊರಟಿದ್ದೆವು. ಆಗ ನಾವು ಮಹಾಪಲಾಯನ‌ ಹೊರಟಂತೆ ನಾವು ನಾವೇ ಪಾತ್ರಗಳ ಹಂಚಿಕೊಂಡು ಮುನ್ನಡೆದಿದ್ದೆವು. ಅವರಲ್ಲೊಬ್ಬ ಆ ಕಾಲದಲ್ಲೇ ತೇಜಸ್ವಿಯವರ ಮನೆಗೆ ಭೇಟಿಕೊಟ್ಟು ಅವರ ಸಂದರ್ಶನ ಮಾಡಿಕೊಂಡು ಬಂದಿದ್ದ. ಪ್ಯಾಪಿಲಾನ್ ಅನ್ನೋ ಹೆಸರಿನಿಂದ ಸುಮಾರು ಬರಹಗಳ ಬರೆದಿದ್ದಾನೆ.

ಈ ಸರಣಿ ನನ್ನ ಅರಿವನ್ನು ವಿಸ್ತರಿಸುವಲ್ಲಿ ಹೇಗೆ ಸಹಾಯಕವಾಯಿತು ಅನ್ನುವುದಕ್ಕೆ ಒಂದೇ ಉದಾಹರಣೆ ಕೊಡುತ್ತೇನೆ. ಅವರ ಅಡ್ವೆಂಚರ್ ಪುಸ್ತಕದಲ್ಲಿ ಕಫೈಬರಾ ಅನ್ನುವ ಚಿಕ್ಕ ಆಡಿನ ಗಾತ್ರದ ಆದರೆ ಹೆಗ್ಗಣದ ಜಾತಿಗೆ ಸೇರಿದ ಪ್ರಾಣಿಯೊಂದರ ಬಗ್ಗೆ ವಿವರಣೆ ಹಾಗೂ ಪ್ರಾಯಶಃ ಚಿಕ್ಕ ರೇಖಾಚಿತ್ರ ಬರುತ್ತದೆ. ನಾವು ಅಮೆರಿಕಾದ ಡಾಲ್ಲಸ್‌ನಲ್ಲಿದ್ದಾಗ ಅಲ್ಲಿನ ಪ್ರಾಣಿ ಸಂಗ್ರಹಾಲಯಕ್ಕೆ ಒಮ್ಮೆ ಭೇಟಿ ಕೊಟ್ಟಿದ್ದೆವು. ಹಿಂದೆಂದೂ ಕಫೈಬರಾವನ್ನು ನೋಡಿರದಿದ್ದರೂ ಕೂಡಲೇ ನನಗೆ ಆ ಪ್ರಾಣಿಯನ್ನು ಗುರುತಿಸಲು ಸಾಧ್ಯವಾಯಿತು. ಇಂತಹ ಅನೇಕ ಉದಾಹರಣೆಗಳಿವೆ.

ನನ್ನ ಸಂಬಂಧಿಕ ಅಕ್ಕನ ಹತ್ತಿರ ಈ ಸರಣಿಯ ಎಲ್ಲಾ ಪುಸ್ತಕಗಳಿರುವುದು ತಿಳಿದುಬಂದಿತ್ತು. ಹಿಂಜರಿಕೆಯಿಂದಲೇ ಕೇಳಿದಾಗ ಪ್ರೀತಿಯಿಂದ ಕೊಟ್ಟಿದ್ದಳು. ಅಂದು ನನಗೆ ದೊಡ್ಡ ನಿಧಿ ಸಿಕ್ಕಷ್ಟು ಸಂತೋಷವಾಗಿತ್ತು. ಅದರಲ್ಲಿ ಕೆಲವು ಓದಿದ ಪುಸ್ತಕಗಳಿದ್ದರೂ ಮತ್ತೆ ಓದಿದ್ದೆ. ಸರಣಿಯ ಮೊದಲ ಭಾಗವಾದ ಹುಡುಕಾಟದಿಂದ ಮೊದಲ್ಗೊಂಡು ಕೊನೆಯ ಪುಸ್ತಕ ಅಡ್ವೆಂಚರ್ ವರೆಗೆ ದಿನಕ್ಕೊಂದು ಪುಸ್ತಕದಂತೆ ಓದಿ ಮುಗಿಸಿದ್ದೆ. ಈ ಹದಿನಾರು ಪುಸ್ತಕಗಳನ್ನು ಓದುವುದು ಒಂತರಾ ವಿಶ್ವದರ್ಶನ ಮಾಡಿದಹಾಗೇ ಆಗಿತ್ತು.

ಆಗಲೇ ಹೇಳಿದಂತೆ ಈ ಸರಣಿಯ ಹದಿನಾರೂ ಪುಸ್ತಕಗಳನ್ನು ತೇಜಸ್ವಿಯವರು ಬರೆದಿಲ್ಲ. ಬದಲಾಗಿ ಅನುವಾದಿಸಿದ್ದಾರೆ ಅಥವಾ ಕನ್ನಡೀಕರಿಸಿದ್ದಾರೆ ಅಂದರೆ ಹೆಚ್ಚು ಸೂಕ್ತವೇನೋ. ಮುಂದೆ ಅವರದೇ ‘ಅಣ್ಣನ ನೆನಪು’ ಓದುವಾಗ ಅವರ ಇಂಗ್ಲಿಷ್ ವಿಷಯದಲ್ಲಾದ ಫಜೀತಿಯನ್ನು ಓದಿದಾಗ ಅಂತವರು ಹೇಗೆ ಇಂತಹ ಅನುವಾದ ಮಾಡಿದರು? ಎಷ್ಟು ಅದ್ಭುತ ಕೆಲಸ‌ ಮಾಡಿದರು! ಅಂತ ಆಶ್ಚರ್ಯಪಟ್ಟಿದ್ದೆವು. ಬೇರೆಯವರಿಗೆ ಗೊತ್ತಿಲ್ಲ, ನನಗಂತೂ ಅನುವಾದವೆಂದರೆ ಬಹಳ ಸುಲಭದ ಕೆಲಸವೆಂಬ ಭಾವನೆಯಿತ್ತು. ಅನುವಾದವೆಂದರೆ ಪಕ್ಕದಲ್ಲಿ ಡಿಕ್ಷನರಿ ಇಟ್ಟುಕೊಂಡು ಬರೀತಾ ಹೋಗೋದು ಅಂತ ಅಂದುಕೊಂಡಿದ್ದೆ. ಆದರೆ ಅದು ಅಷ್ಟು ಸುಲಭದ ಕೆಲಸವಲ್ಲವೆಂಬ ಅರಿವು ಆಮೇಲೆ ಆಯಿತು. ಈ ಸರಣಿಯಲ್ಲಿ ಅವರು ಸ್ವಲ್ಪವೇ ಸ್ವಲ್ಪ ಅಜಾಗ್ರತೆ ಮಾಡಿದ್ದರೂ ಬರೀ ಒಣ ಬರಹಗಳ ಸಂತೆಯಾಗುತ್ತಿತ್ತಷ್ಟೇ.

ಆನ್ಲೈನಿನಲ್ಲಿ ಇವುಗಳ ಈಗಿನ ಬೆಲೆ ಹುಡುಕಿದಾಗ ಇವುಗಳ ಈಗಿನ ಬೆಲೆ 1399 ಅಂತ ತೋರಿಸುತ್ತಾ ಇತ್ತು. ಅಂದರೆ ಪುಸ್ತಕವೊಂದರ ಬೆಲೆ ನೂರಕ್ಕಿಂತಲೂ ಕಮ್ಮಿ. ನಿಮ್ಮೂರ ಶಾಲೆಯ ವಾಚನಾಲಯಕ್ಕಾಗಲೀ, ಓದುಗ ಮಕ್ಕಳಿಗೆ ಉಡುಗೊರೆ ಕೊಡಲಾಗಲೀ ಅಥವಾ ನಿಮಗೇ ಸಂಗ್ರಹಿಸಿಟ್ಟುಕೊಳ್ಳಲು ಇದೊಂದು ಅತ್ಯುತ್ತಮ ಆಯ್ಕೆ.

(ಕೃಪೆ : ಕೆಂಡಸಂಪಿಗೆ)

‘ಮಹಾಯುದ್ಧ-೨’ ಮಿಲನಿಯಮ್-೭’

Related Books