ವಚನಕಾರರು ಮತ್ತು ಜಾತಿ ವಿರೋಧಿ ಹೋರಾಟ

Date: 05-09-2022

Location: ಬೆಂಗಳೂರು


ಚಾತುರ್ವರ್ಣ ವ್ಯವಸ್ಥೆ ಯಾರನ್ನು ಮೇಲೆಂದು ಕರೆದಿತ್ತೋ ಅದೆಲ್ಲ ಸುಳ್ಳೆಂದು ಸಾರಿರುವ ಶರಣರು ಕುಲ-ಜಾತಿಗಳ ಮೂಲಕ ಮೇಲು-ಕೀಳು ಇರುವುದಿಲ್ಲ. ಅದು ನಡೆ-ನುಡಿಯ ಮೂಲಕ ವ್ಯಕ್ತವಾಗುತ್ತದೆಂದು ತಿಳಿಸಿದ್ದಾರೆ ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣರ ಸಾಮಾಜಿಕ ಸಿದ್ಧಾಂತಗಳು ಅಂಕಣದಲ್ಲಿ ವರ್ಣಸಂಕರದ ಮೂಲಕವೇ ಆರಂಭವಾದ ಶರಣರ ಕ್ರಾಂತಿಯ ಬಗ್ಗೆ ಚರ್ಚಿಸಿದ್ದಾರೆ.

ಯಾವ ಆಹಾರ ಪದ್ಧತಿಯಿಂದ ಅಸ್ಪೃಶ್ಯರನ್ನು ಕೀಳೆಂದು ಪರಿಗಣಿಸಲಾಗಿತ್ತೋ ಅದೇ ಆಹಾರ ಪದ್ಧತಿಯ ಸತ್ಯಸಂಗತಿಗಳನ್ನು ಶರಣರು ಬಿಚ್ಚಿಟ್ಟರು. ವಂಶವಾಹಿನಿಯಿಂದ ಮಾತ್ರ ಜಾಣರಾಗುತ್ತಾರೆಂಬುದನ್ನು ಅಲ್ಲಗಳೆದ ಶರಣರು ಅದಕ್ಕೆ ಸಪ್ತರ್ಷಿಗಳ ಉದಾಹರಣೆ ಕೊಡುವುದರ ಮೂಲಕ ಸತ್ಯ ಸಂಗತಿಗಳನ್ನು ತೆರೆದಿಟ್ಟರು. ಆಗ ಎಲ್ಲರಿಗೂ ನಿಜಸಂಗತಿ ತಿಳಿಯುವಂತಾಯಿತು.

ಹೀಗೆ ಹಿಂದಿದ್ದ ಪರಿಸ್ಥಿತಿಯನ್ನು ಜನಸಾಮಾನ್ಯರಿಗೆ ತಿಳಿಸಿಕೊಟ್ಟ ವಚನಕಾರರು, ಅಸ್ಪøಶ್ಯರ ಬಗೆಗೆ ತಮ್ಮ ನಿಲುವುಗಳೇನೆಂಬುದನ್ನು ತಮ್ಮ ವಚನದಲ್ಲಿ ವಿವರಿಸಿದ್ದಾರೆ. ವರ್ಣಸಂಕರ ಮಹಾಪಾಪವೆಂದು ಅಂದಿನ ವಿಪ್ರರು ನಂಬಿದ್ದರೆ, ಶರಣರು ವರ್ಣಸಂಕರದ ಮೂಲಕವೇ ತಮ್ಮ ಕ್ರಾಂತಿಯನ್ನು ಪ್ರಾರಂಭಿಸಿದರು.

“ಚೆನ್ನಯ್ಯನ ಮನೆಯ ದಾಸನ ಮಗನು
ಕಕ್ಕಯ್ಯನ ಮನೆಯ ದಾಸಿಯ ಮಗಳು
ಇಬರಿಬ್ಬರು ಹೊಲದಲಿ ಬೆರಣಿಗೆಹೋಗಿ ಸಂಗವ ಮಾಡಿದರು
ಇವರಿಬ್ಬರಿಗೆ ಹುಟ್ಟಿದ ಮಗ ನಾನು ಕೂಡಲಸಂಗಮದೇವ ಸಾಕ್ಷಿಯಾಗಿ”
-ಬಸವಣ್ಣ (ಸ.ವ.ಸಂ.1, ವ: 346)

“ಅಪ್ಪನು ನಮ್ಮ ಮಾದಾರ ಚೆನ್ನಯ್ಯ
ಬೊಪ್ಪನು ನಮ್ಮ ಡೋಹರ ಕಕ್ಕಯ್ಯ
ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ
ಅಣ್ಣನು ನಮ್ಮ ಕಿನ್ನರಿ ಬೊಮ್ಮಯ್ಯ
ಎನ್ನನೇತಕ್ಕರಿಯಿರಿ, ಕೂಡಲಸಂಗಯ್ಯ?
-ಬಸವಣ್ಣ (ಸ.ವ.ಸಂ.1, ವ:349)

ಬಸವಣ್ಣನವರು ತಮ್ಮ ಈ ಎರಡು ವಚನಗಳಲ್ಲಿ ಜಾತಿಸಂಕರದ ಬಗೆಗೆ, ಅಪ್ಪ-ಬೊಪ್ಪರ ಕುರಿತು ಕ್ರಾಂತಿಕಾರಕ ಮಾತುಗಳನ್ನು ಹೇಳಿದ್ದಾರೆ. ಬ್ರಾಹ್ಮಣರಾಗಿ ಹುಟ್ಟಿದ ಬಸವಣ್ಣನವರಿಗೆ ತಮ್ಮ ಮೇಲರಿಮೆಯನ್ನು ಕಳೆದುಕೊಳ್ಳಬೇಕಾಗಿತ್ತು. ವಂಶದಿಂದ ಹುಟ್ಟಿಕೊಂಡು ಬಂದ ಕುಲಮದವನ್ನು ಅಳಿಸಿಹಾಕಬೇಕಾಗಿತ್ತು. ಆ ಕಾರಣಕ್ಕೆ ಮೊದಲಿನ ವಚನದಲ್ಲಿ ಜಾತಿಸಂಕರದ ಒಂದು ಉದಾಹರಣೆ ಕೊಡುತ್ತಾರೆ. ಚೆನ್ನಯ್ಯ-ಕಕ್ಕಯ್ಯರನ್ನು ಈ ವರ್ಣವ್ಯವಸ್ಥೆ ನಿಕೃಷ್ಟವಾಗಿ ನೋಡಿಕೊಂಡಾಗ, ಅದಕ್ಕೆ ಬಸವಣ್ಣನವರು ಪ್ರತಿಕ್ರಿಯಿಸಿದ ರೀತಿ ಇದಾಗಿದೆ. ಚೆನ್ನಯ್ಯ-ದಾಸಯ್ಯನವರ ಮನೆಯಲ್ಲಿದ್ದ ದಾಸ-ದಾಸಿಯರು ಈ ವ್ಯವಸ್ಥೆಯಲ್ಲಿ ಇನ್ನೂ ನಿಕೃಷ್ಟರು. ಇಂತಹವರ ಹಾದರಕ್ಕೆ ಹುಟ್ಟಿದ ಮಗ ನಾನು ಎನ್ನುವ ಮಾತು ವರ್ಣವ್ಯವಸ್ಥೆಯ ಕ್ರೂರ ನೀತಿಗೆ ಸಿಡಿಸಿದ ಬಾಂಬ್‍ದಂತಿದೆ. ಯಾರನ್ನು ಈ ವ್ಯವಸ್ಥೆ ಅತ್ಯಂತ ಕೀಳೆಂದು ಭಾವಿಸಿತ್ತೋ ಅಂತವರ ಸೇವಕರ ಮಗ ತಾನು ಎಂದು ಹೇಳಿಕೊಂಡಿರುವುದು ಜಾತಿವ್ಯವಸ್ಥೆಯನ್ನು ಮುರಿಯುವ ಪ್ರಬಲ ಅಸ್ತ್ರವಾಗಿದೆ. ಇನ್ನು ತನ್ನ ಅಪ್ಪ-ಬೊಪ್ಪ-ಚಿಕ್ಕಪ್ಪ-ಅಣ್ಣ-ತಮ್ಮ ಯಾರೆಂದು ಹೇಳಿರುವುದು ವರ್ಣವ್ಯವಸ್ಥೆಯ ಕೆನ್ನೆಗೆ ಹೊಡೆದ ಏಟಿನಂತಿದೆ. ಮಾದಾರ ಚೆನ್ನಯ್ಯನೇ ತಮ್ಮ ಗೋತ್ರಪುರುಷನೆಂದು ಇನ್ನೊಂದು ವಚನದಲ್ಲಿ ಹೇಳಿದ್ದಾರೆ. ಈ ನುಡಿಯಂತೂ ಕುಲ-ಗೋತ್ರ ಕೇಳುವವರಿಗೆ ಮುಖಕ್ಕೆ ಬಾರಿಸಿದಂತಿದೆ. ಇನ್ನೊಂದು ವಚನದಲ್ಲಿ ದಾಸಿಪುತ್ರರು-ವೇಶ್ಯಾಪುತ್ರರು ಶಿವದೀಕ್ಷೆಯಾದ ಬಳಿಕ ಸಾಕ್ಷಾತ್ ಶಿವನ ಸಮಾನ. ಅವರಿಗೆ ನಮಸ್ಕರಿಸಿ ಅವರಿಂದ ಪಾದೋದಕ-ಪ್ರಸಾದ ಪಡೆಯಬೇಕೆಂದು ಹೇಳಿರುವ ಮಾತಂತೂ ಕ್ರಾಂತಿಕಾರಕವಾದುದಾಗಿದೆ.

ಇದೇ ವಿಷಯವನ್ನು ಚೆನ್ನಬಸವಣ್ಣನವರು ತಮ್ಮ ವಚನಗಳಲ್ಲಿ ಹೇಳಿದ್ದಾರೆ. ಭಕ್ತರಾದವರು ಪರಸ್ಪರ ಒಬ್ಬರ ಮನೆಗೆ ಒಬ್ಬರು ಹೋದಾಗ ಕೇವಲ ಉಂಡು-ಉಡುವದನ್ನು ಮಾತ್ರ ಮಾಡದೆ, ಪರಸ್ಪರ ಹೆಣ್ಣು-ಗಂಡು ಕೊಟ್ಟು ಮದುವೆ ಮಾಡಬೇಕೆಂದು ಹೇಳಿದ್ದಾರೆ. “ಕೊಟ್ಟು ಕೊಂಬುದು ಸದಾಚಾರ, ಉಳಿದುದೆಲ್ಲ ಅನಾಚಾರ”ವೆಂದು ತಿಳಿಸಿದ್ದಾರೆ. ಜಾತಿವಿಡಿದು ಜಂಗಮ ಮಾಡಬೇಕೆಂಬುವವರನ್ನು ಚೆನ್ನಬಸವಣ್ಣನವರು ಪಾತಕಿಗಳೆಂದು ಕರೆದಿದ್ದಾರೆ. “ಆವ ಕುಲವಾದಡೇನು ದೇವನೊಲಿದಾತನೆ ಕುಲಜ” ನೆಂದು ಸ್ಪಷ್ಟಪಡಿಸಿದ್ದಾರೆ. ಜಾತಿ-ಕುಲವನರಸುವವರಿಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲವೆಂದು ತಿಳಿಸಿದ್ದಾರೆ.

“ಹೊಲೆಹೊಲೆಯನೆಂದು ಹೊರಗಿರು ಎಂದೆಂಬರು
ಹೊಲೆಯನೆಂತವನಯ್ಯಾ?
ತನ್ನ ಹೊಲೆಯ ತಾನರಿಯದೆ
ಮುನ್ನಿನವರ ಹೊಲೆಯನರಸುವ
ಭ್ರಷ್ಟರಿಗೆ ಏನೆಂಬೆನಯ್ಯಾ,
ಮಹಾದಾನಿ ಕೂಡಲಚೆನ್ನಸಂಗಮದೇವಾ”
-ಚೆನ್ನಬಸವಣ್ಣ (ಸ.ವ.ಸಂ.3, ವ:1790)

ಚೆನ್ನಬಸವಣ್ಣನವರು ಈ ವಚನದ ಮೂಲಕ ಮಹತ್ವದ ಸಂದೇಶ ಕೊಟ್ಟಿದ್ದಾರೆ. ಮೊದಲು ತನ್ನಲ್ಲಿರುವ ಹೊಲೆಯನ್ನರಿಯಬೇಕು. ತಾನು ತನ್ನೊಳಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಆಗ ನಿಜವಾದ ಹೊಲೆ ಯಾವುದೆಂಬುದು ಸ್ಪಷ್ಟವಾಗುತ್ತದೆಂದು ತಿಳಿಸಿದ್ದಾರೆ.

“ಕುಲದಲಧಿಕನು ಹೋಗಿ ಹೊಲಗೇರಿಯಲ್ಲಿ ಮನೆಯ ಕಟ್ಟಿದಡೆ,
ಕುಲಕೆಡದಿಪ್ಪ ಈ ಪರಿಯ ನೋಡಾ!
ಆತನ ಕುಲದವರೆಲ್ಲರು ಮುಖವ ನೋಡಲೊಲ್ಲದಡೆ
ಕುಲವುಳ್ಳವರೆಲ್ಲರೂ ಕೈವಿಡಿದರು
ಕುಲಗೆಟ್ಟವನೆಂದು ತಿಳಿದು ವಿಚಾರಿಸಲು
ಹೊಲೆಗೆಟ್ಟು ಹೋಯಿತ್ತು ಕಾಣಾ ಗುಹೇಶ್ವರಾ”
- ಅಲ್ಲಮಪ್ರಭು (ಸ.ವ.ಸಂ.2, ವ:50)

ಅಲ್ಲಮಪ್ರಭುಗಳ ಈ ವಚನವು ಕುಲ ಮತ್ತು ಹೊಲೆಗೆ ಸಂಬಂಧಿಸಿದಂತೆ, ಮಹತ್ವದ ವಿಚಾರವನ್ನು ಹೇಳುತ್ತದೆ. ಈ ಕುಲವೆಂಬುದು ತನ್ನಷ್ಟಕ್ಕೆ ತಾನು ಶ್ರೇಷ್ಟವಲ್ಲ, ತನ್ನಷ್ಟಕ್ಕೆ ತಾನು ಕನಿಷ್ಠವಲ್ಲ. ಕೆಲವು ಕುಹಕಿಗಳು ಇದರಲ್ಲಿ ಮೇಲು-ಕೀಳುಗಳನ್ನು ಸೃಷ್ಟಿಸಿ ಶತಮಾನಗಳಿಂದ ಇದನ್ನೆ ಹೇಳುತ್ತ ಬಂದಿರುವದರಿಂದ ಜನಸಾಮಾನ್ಯರು ಹೀಗಾಗಿದ್ದಾರೆಂಬುದನ್ನವರು ಸರಿಯಾಗಿಯೇ ಗುರುತಿಸಿದ್ದಾರೆ. ಕುಲ-ಕುಲವೆಂದು ಬಡಿದಾಡುವ ಈ ಲೋಕ ಕೊನೆಗೊಂದು ದಿನ ಹೊಲೆಗೆಟ್ಟು ಹೋಗುತ್ತದೆಂಬ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.

“ಕುಲವೆಂದು ಹೋರಾಡುವ ಅಣ್ಣಗಳಿರಾ, ಕೇಳಿರೋ
ಕುಲವೇ ಡೋಹರನ? ಕುಲವೇ ಮಾದಾರನ? ಕುಲವೇ ದೂರ್ವಾಸನ?
ಕುಲವೇ ವ್ಯಾಸನ? ಕುಲವೇ ವಾಲ್ಮೀಕನ? ಕುಲವೇ ಕೌಂಡಿಲ್ಯನ?
ಕುಲವ ನೋಳ್ವಡೆ ಹುರುಳಿಲ್ಲ,
ಅವರ ನಡೆಯನೋಳ್ಪಡೆ ನಡೆಯುವರು ತ್ರಿಲೋಕದಲ್ಲಿಲ್ಲ ನೋಡಾ
ಕಪಿಲಸಿದ್ಧಮಲ್ಲಿಕಾರ್ಜುನಾ”
- ಸಿದ್ಧರಾಮ (ಸ.ವ.ಸಂ.4, ವ: 1205)

ಈ ವಚನದಲ್ಲಿ ಸಿದ್ಧರಾಮ ಶಿವಯೋಗಿಗಳು ಕುಲಕುಲವೆಂದು ಹೋರಾಡುವವರಿಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯನಂತಹ, ಸಾಕ್ಷಾತ್ ಶರಣರಿಗೆ ಗೋತ್ರ ಪುರುಷರಾಗಿದ್ದಾರೆ. ಇಂತವರಲ್ಲಿ ಕುಲವನರಸುವದೆ? ಎಂದು ಪ್ರಶ್ನಿಸಿದ್ದಾರೆ. ವ್ಯಾಸ, ವಾಲ್ಮೀಕಿ ಮಹಾಕವಿಗಳು ದೂರ್ವಾಸ, ಕೌಂಡಿಲ್ಯ ಮಹಾರುಷಿಗಳು ಇಂತವರಲ್ಲಿ ಕುಲವನರಸುವರೆ? ಎಂದು ಪ್ರಶ್ನಿಸುತ್ತ, ಮನುಷ್ಯನಿಗೆ ಕುಲಮುಖ್ಯವಲ್ಲ ನಡತೆ ಮುಖ್ಯವೆಂದು ತಿಳಿಸಿದ್ದಾರೆ.

ಇದೇ ವಿಷಯವನ್ನು ವಿಸ್ತರಿಸಿದ ಅವರು ತಮ್ಮ ಇತರ ವಚನಗಳಲ್ಲಿ ಕುಲಾಚಾರ ಸಲ್ಲದೆಂದು ತಿಳಿಸಿದ್ದಾರೆ. ಮಧುವಯ್ಯ ಬ್ರಾಹ್ಮಣ, ಹರಳಯ್ಯ ಚಂಡಾಲಕುಲದವ ಆದರೆ ಇವರಿಬ್ಬರಲ್ಲಿ ಯಾವ ಭೇದವೂ ಇಲ್ಲ. ಅದೇರೀತಿ ದುರ್ವಾಸ ಮಚ್ಚಿಗ, ಪರಾಶರ ಚಂಡಾಲ ಇವರಿಬ್ಬರಲ್ಲಿ ಯಾವುದೇ ತಾರತಮ್ಯವಿಲ್ಲ. ಊರ್ವಶಿ ದೇವಾಂಗನೆ, ಕುಸಮಗಂಧಿ ಕಬ್ಬಿಲಗಿತ್ತಿ ಇವರಲ್ಲಿ ಯಾವುದೇ ಭಿನ್ನಭಾವವಿಲ್ಲ. ಕುಲವೆಂಬುದು ಕೇವಲ ಹುಟ್ಟೇಹೊರತು ಅದೇ ಎಲ್ಲವೂ ಅಲ್ಲ. ಹುಟ್ಟಿದ ಮೇಲೆ ಮನುಷ್ಯನ ನಡೆ-ನುಡಿ ಹೇಗಿರುತ್ತದೆಂಬುದು ಮುಖ್ಯವೇ ಹೊರತು ಕುಲವಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಹೊಲೆಯ ಹೊರಕೇರಿಯಲ್ಲಿರುವನೆಂದು ನಂಬಿದವರಿಗೆ ಅಂಬಿಗರ ಚೌಡಯ್ಯನವರು, ಹೊಲೆಯ ಊರೊಳಗಿಲ್ಲವೆ? ಎಂದು ಪ್ರಶ್ನೆ ಮಾಡುತ್ತಾರೆ. ಯಾರ್ಯಾರು ಹೊಲೆಯರೆಂದು ಒಂದು ಪಟ್ಟಿಯನ್ನೇ ಮಾಡುತ್ತಾರೆ. ತಾಯಿಗೆ ಬೈದವ, ತಂದೆಗೆ ಹೊಡೆದವ, ದಾರಿಗೆ ಮುಳ್ಳು ಹಚ್ಚಿದವ, ಪರಸತಿಯ ಬಯಸುವವ, ಧರ್ಮವ ಮಾಡದವ ಇಂತವರು ನಿಜವಾದ ಹೊಲೆಯರೆಂದು ತಿಳಿಸುತ್ತಾರೆ. ನಾ, ಶೀಲವಂತ ತಾ ಶೀಲವಂತ; ನನ್ನ ಕುಲ ಹೆಚ್ಚು ತನ್ನ ಕುಲಹೆಚ್ಚು ಎನ್ನುವವರನ್ನು ಚೌಡಯ್ಯನವರು ಕಚ್ಚಾಡುವ ನಾಯಿಗಳಿಗೆ ಹೋಲಿಸಿದ್ದಾರೆ. ಇಂತವರ ಮುಖಕ್ಕೆ ಪಡಿಹಾರಿ ಉತ್ತಣ್ಣಗಳ ಪಾದುಕೆಗಳಿಂದ ಹೊಡೆಯಬೇಕೆಂದು ನಿಷ್ಠುರವಾಗಿಯೇ ಹೇಳಿದ್ದಾರೆ.

ಚಾತುರ್ವರ್ಣ ವ್ಯವಸ್ಥೆ ಯಾರನ್ನು ಮೇಲೆಂದು ಕರೆದಿತ್ತೋ ಅದೆಲ್ಲ ಸುಳ್ಳೆಂದು ಸಾರಿರುವ ಶರಣರು ಕುಲ-ಜಾತಿಗಳ ಮೂಲಕ ಮೇಲು-ಕೀಳು ಇರುವುದಿಲ್ಲ. ಅದು ನಡೆ-ನುಡಿಯ ಮೂಲಕ ವ್ಯಕ್ತವಾಗುತ್ತದೆಂದು ತಿಳಿಸಿದ್ದಾರೆ. ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ, ಓಹಿಲದೇವ, ಉದ್ಭಟಯ್ಯ ಇವರನ್ನೆಲ್ಲಾ ಸಮಾಜವ್ಯವಸ್ಥೆ ಕೀಳೆಂದು ಭಾವಿಸಿದ್ದರೆ, ಈ ಸಮಾಜವ್ಯವಸ್ಥೆಗೆ ಜೇಡರ ದಾಸಿಮಯ್ಯನವರು ಒಂದು ಮಾತು ಹೇಳುತ್ತಾರೆ. ಕೀಳಿಂಗಲ್ಲದೆ ಹಯನು ಕರೆಯದು ಎಂದು ಹೇಳುತ್ತಾ, ಯಾವುದನ್ನು ನೀವು ಕೀಳೆಂದು ಭಾವಿಸಿರುವಿರೋ ಅದೇ ಮೇಲು ಎಂದು ಸ್ಪಷ್ಟಪಡಿಸಿದ್ದಾರೆ.

“ಮಡದಿಯ ಪ್ರಾಣಕ್ಕೆ ಮೊಲೆಮುಡಿ ಇದ್ದಿತ್ತೆ?
ಒಡೆಯನ ಪ್ರಾಣಕ್ಕೆ ಇದ್ದಿತ್ತೆ ಯಜ್ಞೋಪವೀತ?
ಕಡೆಯಿಲ್ಲಿದ್ದ ಅಂತ್ಯಜನು ಹಿಡಿದಿದ್ದನೆ ಹಿಡಿಗೋಲ?
ನೀ ತೊಡಕಿಕ್ಕಿದ ತೊಡಕನೀ ಲೋಕದ ಜಡರೆತ್ತ ಬಲ್ಲರೈ ರಾಮನಾಥ”
- ಜೇಡರ ದಾಸಿಮಯ್ಯ (ಸ.ವ.ಸಂ.7, ವ:841)

ಜೇಡರ ದಾಸಿಮಯ್ಯನವರ ಈ ವಚನ ಕೆಲವು ಪ್ರಶ್ನೆಗಳನ್ನೆತ್ತಿಕೊಂಡು ಚರ್ಚಿಸುವುದರ ಮೂಲಕ ಕುಲದ ಬಗೆಗಿರುವ ತಪ್ಪು ಕಲ್ಪನೆಯನ್ನು ಹೊಡೆದೋಡಿಸುತ್ತದೆ. ಮಡದಿಯ ಪ್ರಾಣವೂ ಅಷ್ಟೆ, ಒಡೆಯನ ಪ್ರಾಣವೂ ಅಷ್ಟೆ. ಪ್ರಾಣಕ್ಕೆ ಭೇದಭಾವವಿಲ್ಲವೆಂದು ತಿಳಿಸಿರುವ ಅವರು ಈ ವಚನದಲ್ಲಿ ಮಹತ್ವದ ಪ್ರಶ್ನೆಗಳನ್ನು ಕೇಳಿ, ಅದಕ್ಕೆ ಕೊನೆಗೆ ತಕ್ಕ ಉತ್ತರವನ್ನು ನೀಡಿದ್ದಾರೆ. ಅವರು ತಮ್ಮ ಇನ್ನೊಂದು ವಚನದಲ್ಲಿ ಶರಣರ ಸೂಳ್ನುಡಿಗಳಿಂದ ಸಂಸ್ಕಾರ ಪಡೆದವರು ನಿಜವಾದ ಕುಲಜರೆಂದು ಹೇಳಿದ್ದಾರೆ.

ಮಡಿವಾಳ ಮಾಚಿದೇವರು “ಆ ಜಾತಿ ಈ ಜಾತಿಯವರೆನಬೇಡ” ಎಂದು ಹೇಳುತ್ತಾ ಯಾವುದೇ ಜಾತಿಯವರಿರಲಿ ಅಂಗದ ಮೇಲೆ ಲಿಂಗಧರಿಸಿ ಗುರುಕಾರುಣ್ಯ ಪಡೆದ ಮೇಲೆ ಅವರೆಲ್ಲಾ ಒಂದೇಯೆಂದು ಹೇಳಿದ್ದಾರೆ. ಭಕ್ತರದೊಂದು ಕುಲ-ಭವಿಗಳದೊಂದು ಕುಲವೆಂದು ಹೇಳಿದ ಶರಣರು, ಹುಟ್ಟಿನಿಂದ ಬಂದ ಕುಲ, ಕುಲವಲ್ಲ, ನಡತೆಯಿಂದ ಬಂದ ಗುಣ-ಸ್ವಭಾವ ನಿಜವಾದ ಕುಲವಾಗುತ್ತದೆಂದು ತಿಳಿಸಿದ್ದಾರೆ. ದರ್ಪ-ಅಹಂಕಾರದಲ್ಲಿರುವ ಪ್ರಭುಗಳನ್ನು, ಅಹಂಕಾರಿಗಳನ್ನು ಶರಣರು ಭವಿಯೆಂದು ಕರೆದಿದ್ದಾರೆ. ಷಡ್‍ವೈರಿಗಳಾದ ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರಗಳನ್ನು ಗೆದ್ದವ ಭಕ್ತನಾದರೆ, ಇವುಗಳ ದಾಸಾನುದಾಸನಾಗಿ ಅಸಡ್ಡೆಯಿಂದ ವರ್ತಿಸುವವ, ಸೊಕ್ಕಿನಿಂದ ಮೆರೆಯುವವ ಭವಿಯೆಂದು ಸ್ಪಷ್ಟಪಡಿಸಿದ್ದಾರೆ. “ಕುಲವುಳ್ಳನ್ನಕ್ಕ ಭಕ್ತನಲ್ಲ, ಛಲವುಳ್ಳನ್ನಕ್ಕ ಮಹೇಶ್ವರನಲ್ಲ, ಫಲವುಳ್ಳನಕ್ಕ ಪ್ರಸಾದಿಯಲ್ಲ” ಎಂದು ತಿಳಿಸಿರುವ ಸಂಗಮೇಶ್ವರ ಅಪ್ಪಣ್ಣನವರು ತಮ್ಮ ವಚನಗಳಲ್ಲಿ ಮಹತ್ವದ ಸಂಗತಿಗಳನ್ನು ಹೇಳಿದ್ದಾರೆ. ಕುಲ, ಗುರುಕೃಪೆಯನ್ನು ಕೆಡಿಸಿದರೆ, ಛಲ, ಲಿಂಗಾರ್ಚನೆಯನ್ನು ಕೆಡಿಸುತ್ತದೆ. ಕುಲದ ಮದ ಇಳಿಯದೆ ಮನುಷ್ಯ ಉದ್ಧಾರವಾಗುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

“ಎಡಬಲವೆಂದೇನೋ ನಿಮ್ಮ ಅಡಿಗಳನರಿದವಂಗೆ?
ಕಡೆನಡುವೆಂದೇನೊ ಮೃಢನ ಹಾಡುವಂಗೆ?
ಕುಲಛಲವೆಂದೇನೊ ಮನದ ಹೊಲೆಯ ಕಳೆದವಂಗೆ?
ತಲೆಕಾಲೆಂದೆನೋ ಮಾಯೆಯ ಬಲೆಯ ನುಸುಳಿದವಂಗೆ?
ಕಲಿಯುಗದ ಕತ್ತಲೆಯ ದಾಂಟಿದವಂಗೆ ನಿಮ್ಮ ನೆಲೆಯನರಿದ ಶರಣಂಗೆ
ಇನ್ನು ಸ್ಥಲನೆಲೆ ಆವುದುಂಟು ಹೇಳಾ
ಬಸವಪ್ರಿಯ ಕೂಡಲಚೆನ್ನಬಸವಣ್ಣಾ?”
- ಹಡಪದ ಅಪ್ಪಣ್ಣ (ಸ.ವ.ಸಂ.9, ವ:911)

ಹಡಪದ ಅಪ್ಪಣ್ಣನವರು ಈ ವಚನದಲ್ಲಿ ಎಲ್ಲ ಭೇದಗಳನ್ನೂ ನಿರಾಕರಿಸಿ, ಸಾಧಕರಿಗೆ ಇವ್ಯಾವೂ ಇರುವುದಿಲ್ಲವೆಂದು ಹೇಳಿದ್ದಾರೆ. ಎಡ-ಬಲ, ಕಡೆ-ನಡು, ಕುಲ-ಛಲ, ತಲೆ-ಕಾಲು ಈ ಭೇದಗಳು ಅರಿಯದವರಿಗೆ, ಮೂರ್ಖರಿಗೆ ಮಾತ್ರ; ಅರಿತವರು, ತಿಳಿದುಕೊಂಡವರು ಸಾಧಕರು ಇವೆಲ್ಲವನ್ನೂ ದಾಟಿರುತ್ತಾರೆಂದು ಅಪ್ಪಣ್ಣ ಇಲ್ಲಿ ತಿಳಿಸಿದ್ದಾರೆ. ಶರಣನಾದವನಿಗೆ, ಕಲಿಯುಗದ ಕತ್ತಲೆ ದಾಟಿದವನಿಗೆ ಇಂತಹ ಭೇದಗಳಿರುವುದಿಲ್ಲವೆಂದು ತಿಳಿಹೇಳಿದ್ದಾರೆ.

ಮತ್ತೆ ಮತ್ತೆ ಕುಲದ ಬಗೆಗೆ ಮಾತನಾಡುವವರನ್ನು ಕಂಡು ಬಸವಣ್ಣನವರು ತಾಳ್ಮೆಯಿಂದಲೇ ಸತ್ಯ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. “ಹೊಲೆಯೊಳಗೆ ಹುಟ್ಟಿ ಕುಲವನರಸುವರೆ?” ಎಂಬ ಅವರ ಈ ಪ್ರಶ್ನೆಯಲ್ಲಿ ಮಹತ್ವದ ಸತ್ಯವಿದೆ. ಎಲ್ಲರೂ ಹುಟ್ಟುವುದು ಅಲ್ಲಿಯೇ; ಹುಟ್ಟಿದಮೇಲೆ, ಮೇಲು-ಕೀಳು ಮಾಡುವುದು ಸರಿಯಲ್ಲವೆಂದವರು ತಿಳಿಸಿದ್ದಾರೆ. “ಸತ್ತುದನೆಳೆವನೆತ್ತಣ ಹೊಲೆಯ? ಹೊತ್ತುತಂದು ನೀವು ಕೊಲುವಿರಿ” ಎಂದು ವಿಪ್ರರನ್ನು ಕುರಿತೇ ಹೇಳಿದ್ದಾರೆ. ವ್ಯಾಸ ಬೋಯಿತಿಯ ಮಗನಾದರೇನು ಮಹಾಭಾರತ ರಚಿಸಲಿಲ್ಲವೆ? ಮಾರ್ಕಂಡೇಯ ಮಾತಂಗಿಯ ಮಗನಾದರೇನು ಸಾಧನೆ ಮಾಡಲಿಲ್ಲವೆ? ಕುಲವನರಸಬೇಡಿರಿ, ಕುಲವೆಂಬುದು ಹುಟ್ಟಿಗೆ ನೆಪಮಾತ್ರವೆಂದು ಹೇಳಿರುವ ಬಸವಣ್ಣನವರು “ಶ್ವಪಚೋಪಿಯಾದಡೇನು? ಶಿವಭಕ್ತನೇ ಕುಲಜನು” ಎಂದು ಸ್ಪಷ್ಟಪಡಿಸಿದ್ದಾರೆ. ಅಗಸ್ತ್ಯ-ಕಬ್ಬಿಲ, ದುರ್ವಾಸ-ಮುಚ್ಚಿಗ, ಕಶ್ಯಪ-ಕಮ್ಮಾರ, ಕೌಂಡಿನ್ಯ-ನಾವಿದ ಆದರೇನು? ಅವರು ಋಷಿಮುನಿಗಳಾಗಿ ಸಾಧಿಸಿದ ಸಾಧನೆ ಸಣ್ಣದೆ? ಎಂದು ಪ್ರಶ್ನಿಸಿದ್ದಾರೆ.

ಬಸವಣ್ಣನವರು, ಜನರು ತಿನ್ನುತ್ತಿದ್ದ ಆಹಾರವನ್ನು ಕುಡಿಯುತ್ತಿದ್ದ ಸುರೆಯನ್ನು ಕೀಳೆಂದು ಭಾವಿಸಲಿಲ್ಲ. ಅಂತವರು ಲಿಂಗಕಟ್ಟಿಕೊಂಡು ಭಕ್ತರಾದ ಮೇಲೆ ಅದೆಲ್ಲವನ್ನೂ ತಾವಾಗಿಯೇ ಬಿಟ್ಟುಬಿಡುತ್ತಾರೆ. ಅದಕ್ಕೇಕೆ ಮಹತ್ವಕೊಡುವಿರೆಂದು ಕೇಳಿದ್ದಾರೆ. “ಎಡದ ಕೈಯಲ್ಲಿ ಕತ್ತಿ, ಬಲದ ಕೈಯಲ್ಲಿ ಮಾಂಸ, ಬಾಯಲಿ ಸುರೆಯಗಡಿಗೆ, ಕೊರಳಲಿ ದೇವರಿರಲು, ಅವರ ಲಿಂಗನೆಂಬೆ, ಸಂಗನೆಂಬೆ” ಎಂದು ತಮ್ಮ ವಚನದಲ್ಲಿ ಹೇಳಿರುವ ಬಸವಣ್ಣನವರು ಮಾಂಸಾಹಾರಿಗಳನ್ನು ವಿರೋಧಿಸಲಿಲ್ಲ. ಸುರೆ ಕುಡಿದವರನ್ನು ತಿರಸ್ಕರಿಸಲಿಲ್ಲ. ಇಂತವರು ಕೊರಳಲಿ ಲಿಂಗಕಟ್ಟಿಕೊಂಡ ಮೇಲೆ, ನಂತರದಲ್ಲಿ ಅವರೇ ಸತ್ಯ ತಿಳಿದುಕೊಳ್ಳುತ್ತಾರೆ. ಶರಣಸಂಸ್ಕøತಿಯ ಸಂಸ್ಕಾರ ಪಡೆದಮೇಲೆ ಅವರೇ ದೊಡ್ಡ ಸಾಧಕರಾಗುತ್ತಾರೆ. ಆದುದರಿಂದ ಅವರ ಕೊರಳಲಿ ದೇವರಿದೆ ಅವರು ನಿಜವಾಗಿಯೂ ಮುಖಲಿಂಗಿಗಳೆಂದು ಹೇಳಿದ್ದಾರೆ.

“ನೆಲನೊಂದೆ; ಹೊಲಗೇರಿ ಶಿವಾಲಯಕ್ಕೆ
ಜಲವೊಂದೆ; ಶೌಚಾಚಮನಕ್ಕೆ,
ಕುಲವೊಂದೆ; ತನ್ನ ತಾನರಿದವಂಗೆ
ಫಲವೊಂದೆ ಷಡುದರುಶನ ಮುಕ್ತಿಗೆ
ನೆಲವೊಂದೆ ಕೂಡಲಸಂಗಮದೇವಾ ನಿಮ್ಮನರಿದವಂಗೆ”
-ಬಸವಣ್ಣ (ಸ.ವ.ಸಂ.1, ವ: 879)

ಬಸವಣ್ಣನವರ ಈ ವಚನ ಜಾತ್ಯಾತೀತ ನಿಲುವಿಗೆ ಹಿಡಿದ ಕನ್ನಡಿಯಂತಿದೆ. ಅವರು ನೆಲ-ಜಲಗಳ ಉದಾಹರಣೆಯ ಮೂಲಕ ಕುಲಭೇದವನ್ನಿಲ್ಲಿ ಅಳಿಸಿ ಹಾಕಿದ್ದಾರೆ. ಹೊಲಗೇರಿ ಮತ್ತು ಶಿವಾಲಯವಿರುವ ಜಾಗ ಎರಡೂ ಒಂದೇಯಾಗಿದೆ. ಹೀಗೆ ಎರಡೂ ಒಂದೇಯಾಗಿರುವಾಗ ಶಿವಾಲಯ ಹೇಗೆ ಶ್ರೇಷ್ಠ? ಹೊಲಗೇರಿ ಹೇಗೆ ಕನಿಷ್ಠ? ಎಂಬಂತಹ ಪ್ರಶ್ನೆಗಳು ಇಲ್ಲಿ ಕಾಣಿಸಿಕೊಂಡಿವೆ. ಅದೇರೀತಿ ಸ್ನಾನ ಮಾಡುವುದಕ್ಕಾಗಿ ತೀರ್ಥ ಹಂಚುವದಕ್ಕಾಗಿ ಅದೇ ಜಲವನ್ನು ಉಪಯೋಗಿಸಲಾಗುತ್ತದೆ. ಜಲವೊಂದೇ ಆಗಿರುವಾಗ ಭೇದವೇಕೆ? ತನ್ನ ತಾನರಿದವಂಗೆ ಕುಲವೊಂದೇಯೆಂದು ಹೇಳಿರುವ ನುಡಿ ತುಂಬ ಮಹತ್ವದ್ದಾಗಿದೆ. ಅರಿವು ಮೂಡಿದಾಗ ಈ ಭೇದ ಸಂಸ್ಕøತಿ ಹೊರಟು ಹೋಗಿ ಅಭೇದ ಸಂಸ್ಕೃತಿ ಕಾಣಿಸುತ್ತದೆ. ಆದುದರಿಂದ ಅರಿವು ಮುಖ್ಯ-ಆಚಾರ ಮುಖ್ಯವೆಂದವರು ತಿಳಿಸಿದ್ದಾರೆ.

ಶಿವಶರಣೆಯರೂ ಕೂಡ ಜಾತಿ ಅಸಮಾನತೆಯನ್ನು ವಿರೋಧಿಸಿದ್ದಾರೆ. ಕುಲ, ಜಾತಿಗಳನ್ನಿಟ್ಟುಕೊಂಡು ಶೀಲವಂತನೆಂದು ಮೆರೆಯುವುದು ಸರಿಯಲ್ಲವೆಂದು ಹೇಳಿದ ಅಮುಗೆ ರಾಯಮ್ಮ “ಶೀಲವಂತನಾದಡೆ ಜಾತಿಯ ಬಿಡಬೇಕೆಂದು ಹೇಳಿದ್ದಾರೆ. ಶಿವಜ್ಞಾನಿಯಾದ ಬಳಿಕ ಕುಲದ ಹಂಗನ್ನು ಬಿಡಬೇಕೆಂದು ತಿಳಿಸಿದ್ದಾರೆ.

“ನಾ ತಿರುಹುವ ರಾಟೆಯ ಕುಲಜಾತಿಯ ಕೇಳಿರಣ್ಣಾ;
ಅಡಿಯಹಲಗೆ ಬ್ರಹ್ಮ, ತೋರಣ ವಿಷ್ಣು
ನಿಂದ ಬೊಂಬೆ ಮಹಾರುದ್ರ
ರುದ್ರನ ಬೆಂಬಳಿಯವೆರಡು ಸೂತ್ರಕರ್ಣ
ಅರಿವೆಂಬ ಕದಿರು, ಭಕ್ತಿಯೆಂಬ ಕೈಯಲ್ಲಿ ತಿರುಹಲಾಗಿ
ಸುತ್ತಿತ್ತು ನೂಲು ಕದಿರು ತುಂಬಿತ್ತು
ರಾಟೆಯ ತಿರುಹಲಾರೆ, ಎನ್ನಗಂಡ ಕುಟ್ಟಿಹ,
ಇನ್ನೇವೆ ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ?”
- ಕದಿರ ರೆಮ್ಮವ್ವೆ (ಸ.ವ.ಸಂ.5, ವ:747)

ನೇಕಾರವೃತ್ತಿ ಮಾಡುತ್ತಿದ್ದ ಕದಿರರೆಮ್ಮವ್ವೆ ಈ ವಚನದಲ್ಲಿ ತನ್ನ ವೃತ್ತಿಪ್ರತಿಮೆಯ ಮೂಲಕ ಮಾತನಾಡಿದ್ದಾರೆ. ತಾನು ತಿರುಹುತ್ತಿರುವ ರಾಟೆಗೆ ಕುಲಜಾತಿಗಳಿಲ್ಲವೆಂದು ಸ್ಪಷ್ಟಪಡಿಸಿದ ಈ ಶರಣೆ ಬ್ರಹ್ಮ, ವಿಷ್ಣು, ರುದ್ರರನ್ನೆಲ್ಲ ಆ ರಾಟೆಯೊಳಗಡೆಯೇ ಕಂಡಿದ್ದಾಳೆ. ಅರಿವೆಂಬ ಕದಿರನ್ನು ಭಕ್ತಿಯೆಂಬ ಕೈಯಲ್ಲಿ ತಿರುಹಿದಾಗ ನೂಲು ತುಂಬಿತ್ತೆಂದು ಹೇಳುವ ನುಡಿಗಳಲ್ಲಿ ಅನುಭವದ ಮೂಲಕ ಅನುಭಾವವನ್ನು ಕಂಡುಕೊಂಡ ಸಾಧನೆಯ ಹಂತವಿದೆ. ಕುಲ-ಜಾತಿಗಳಲ್ಲಿ ಭೇದಭಾವ ಮಾಡುವವರೆಲ್ಲ ಕುಬ್ಜರೆಂದು ಶರಣೆಯರು ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ.

“ಕುಲವನತಿಗಳೆದವಂಗೆ ಕುಲದ ಹಂಗೇಕಯ್ಯಾ?
ಬಲ್ಲೆನೆಂಬವಂಗೆ ಗೆಲ್ಲುವ ಸೋಲುವ ಹಂಗೇಕಯ್ಯಾ?
ಅಮುಗೇಶ್ವರನೆಂಬ ಲಿಂಗವನರಿದ ಶರಣಂಗೆ
ಈ ಸಮಯದ ಹಂಗೇಕಯ್ಯಾ?”
-ಅಮುಗೆ ರಾಯಮ್ಮ (ಸ.ವ.ಸಂ.5, ವ:636)

ಕುಲವನ್ನು ಅತಿಗಳಿದ ಕೆಲವರು ಮತ್ತೆ ಕುಲಾಚಾರಣೆ ಮಾಡಿದ್ದನ್ನು ಕಂಡಾಗ ಅಮುಗೆ ರಾಯಮ್ಮನಿಗೆ ಕೋಪ ಬರುತ್ತದೆ. ಕುಲವನ್ನೇ ಬಿಟ್ಟವರಿಗೆ ಮತ್ತೆ ಕುಲದ ಹಂಗೇಕೆಂದು ಕೇಳಿದ್ದಾಳೆ. ಬಲ್ಲವರಿಗೆ, ತಿಳಿದವರಿಗೆ ಸೋಲು-ಗೆಲುವಿನ ಹಂಗೇಕೆ? ಎಂದು ಪ್ರಶ್ನಿಸುತ್ತಾ ಕುಲದ ಹಂಗನ್ನು ತೊರೆಯಬೇಕೆಂದು ಹೇಳಿದ್ದಾಳೆ.

“ಊರ ಒಳಗಣ ಬಯಲು, ಊರ ಹೊರಗಣ ಬಯಲೆಂದುಂಟೆ?
ಊರೊಳಗೆ ಬ್ರಾಹ್ಮಣ ಬಯಲು, ಊರಹೊರಗೆ ಹೊಲೆಬಯಲೆಂದುಂಟೆ?
ಎಲ್ಲಿ ನೋಡಿದಡೂ ಬಯಲೊಂದೆ.........”
-ಬೊಂತಾದೇವಿ (ಸ.ವ.ಸಂ.5, ವ: 1094)

ಬೊಂತಾದೇವಿ ಕಾಶ್ಮೀರ ದೇಶದ ಮಾಂಡವ್ಯಪುರದ ಅರಸನ ಮಗಳು. ಈಕೆಯ ಮೊದಲಿನ ಹೆಸರು ನಿಜದೇವಿ. ಶರಣರ ಚಳವಳಿಯ ಸುದ್ಧಿ ತಿಳಿದು ಈಕೆ ಕಾಶ್ಮೀರದಿಂದ ಕಲ್ಯಾಣಕ್ಕೆ ಬರುತ್ತಾಳೆ. ಶಿವನನ್ನೇ ಪ್ರಶ್ನಿಸಿ ವೈರಾಗ್ಯ ತಾಳಿದ ಬೊಂತಾದೇವಿಯ ಈ ವಚನ ಅತ್ಯಂತ ತಾರ್ಕಿಕವಾಗಿದ್ದು, ಸತ್ಯಸಂಗತಿಯನ್ನು ಹೇಳುತ್ತದೆ.

ಒಂದು ಊರಿನಲ್ಲಿರುವ ಬಯಲಿನ ಬಗೆಗೆ ಇಲ್ಲಿ ಬೊಂತಾದೇವಿ ಹೇಳಿದ್ದಾಳೆ. ಒಂದು ಊರೊಳಗೆ ಒಳಗೊಂದು ಬಯಲು, ಹೊರಗೊಂದು ಬಯಲು ಎಂಬುದಿಲ್ಲ. ಊರೊಳಗೆ ಬ್ರಾಹ್ಮಣ ಬಯಲು, ಊರಹೊರಗೆ ಹೊಲೆಬಯಲೆಂಬುದಿಲ್ಲಯೆಂದು ತಿಳಿಸಿರುವ ಬೊಂತಾದೇವಿ ಎಲ್ಲಿ ನೋಡಿದರೂ ಒಂದೇ ಬಯಲಿದೆ, ಒಂದೇ ಆಕಾಶವಿದೆಯೆಂದು ಹೇಳುವುದರ ಮೂಲಕ ಬ್ರಾಹ್ಮಣ-ಹೊಲೆಯ ಎಂಬ ಭೇದಭಾವ ಸರಿಯಲ್ಲವೆಂದು ಹೇಳಿದ್ದಾಳೆ. ‘ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ” ಎಂದು ಬಸವಣ್ಣನವರು ಹೇಳಿದರೆ, ಬಯಲೊಂದೆ ಬ್ರಾಹ್ಮಣ-ಹೊಲೆಯರಿಗೆಂದು ಬೊಂತಾದೇವಿ ಹೇಳಿದ್ದಾಳೆ. ಪೃಥ್ವಿ, ಆಪ್, ತೇಜು, ವಾಯು, ಆಕಾಶ ಪ್ರಕೃತಿಯಲ್ಲಿರುವ ಈ ಪಂಚತತ್ವಗಳು ಎಲ್ಲರಿಗೂ ಒಂದೇ ರೀತಿಯಾಗಿವೆ. ಇಲ್ಲಿ ಯಾವುದೇ ಭಿನ್ನಭಾವವಿಲ್ಲ. ಮೇಲುಕೀಳು ಇಲ್ಲ. ಪ್ರಕೃತಿಯಲ್ಲಿ, ಪರಿಸರದಲ್ಲಿ, ನೆಲ-ಬಯಲುಗಳಲ್ಲಿ ಇಲ್ಲದ ಭೇದಭಾವ ಮನುಷ್ಯ ಕಟ್ಟಿಕೊಂಡ ಕುಲ-ಜಾತಿಗಳಲ್ಲೇಕೆಂದು ಶರಣೆಯರು ಕೇಳಿದ್ದಾರೆ. ಎಲ್ಲ ಶರಣೆಯರೂ ಜಾತಿ ವ್ಯವಸ್ಥೆಯನ್ನು ವಿರೋಧಿಸಿದ್ದಾರೆ.

ಶರಣರು ಚಳವಳಿಯನ್ನು ಮಾಡಲಿಲ್ಲ, ಜಾತಿಯ ವಿರುದ್ಧ ಹೋರಾಡಲಿಲ್ಲವೆಂಬ ಅಪಸ್ವರಗಳು ಇಂದು ಅಲ್ಲಲ್ಲಿ ಕೇಳಿ ಬಂದಿವೆ. ಅಂತವರಿಗೆ ಇಲ್ಲಿ ತಕ್ಕ ಉತ್ತರಗಳಿವೆ. ಅನೇಕ ಶರಣ-ಶರಣೆಯರು ಕುಲ-ಜಾತಿಗಳ ಭೇದವನ್ನು ನಿರಾಕರಿಸಿದ್ದಾರೆ, ಜಾತಿವ್ಯವಸ್ಥೆಯ ವಿರುದ್ಧ ದನಿಯೆತ್ತಿದ್ದಾರೆ.

ಅಷ್ಟಮದಗಳಲ್ಲಿ ಕುಲಮದವೂ ಒಂದೆಂದು ಹೇಳಿ, ಈ ಕುಲಮದವು ಅತ್ಯಂತ ಅಪಾಯಕಾರಿಯಾದುದೆಂದು ತಿಳಿಸಿದ್ದಾರೆ. ಶರಣರು ಜಾತಿವ್ಯವಸ್ಥೆಯನ್ನು ವಿರೋಧಿಸಿ ಬರೆದ ಅನೇಕ ವಚನಗಳನ್ನು ಇಲ್ಲಿ ಉದ್ದೇಶಪೂರ್ವಕವಾಗಿಯೇ ಉಲ್ಲೇಖಿಸಲಾಗಿದೆ. ಇಲ್ಲಿ ಉಲ್ಲೇಖಿಸಿರುವ ವಚನಗಳಲ್ಲದೆ ಇನ್ನೂ ಅನೇಕ ವಚನಗಳಲ್ಲಿ ಇದೇ ಜಾತಿನಿರಸನದ ಸಿದ್ಧಾಂತವಿದೆ. ಇದನ್ನು ತಿಳಿದುಕೊಳ್ಳದೆ, ವಚನಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡದೆ, ಕೆಲವು ಲೇಖಕರು ಕ್ಯಾತೆ ತೆಗೆದಿದ್ದಾರೆ. ಕೆಲವರು, “ವಚನಕಾರರದು ಚಳುವಳಿಯೇ ಇಲ್ಲ, ಅಲ್ಲಿ ಜಾತಿ ವಿರೋಧಿ ಹೋರಾಟವಿಲ್ಲವೆಂದು” ಹೇಳುತ್ತ ಜನರ ದಿಕ್ಕುತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಇಂತಹ ಜನವಿರೋಧಿ ಪ್ರಯತ್ನಗಳು ಆಗಾಗ ನಡೆಯುತ್ತಿರುತ್ತವೆ. ಇಂತಹ ಮಾತುಗಳಿಗೆ ಬೆಲೆಕೊಡಬೇಕಾಗಿಲ್ಲ. ಶರಣರ ವಚನಗಳು ನಮ್ಮೆದುರಿಗಿವೆ, ಸತ್ಯ ಕಣ್ಣೆದುರು ಕಾಣುತ್ತದೆ. ಜನಸಾಮಾನ್ಯರು ಸತ್ಯದ ಕಡೆ ಇರುತ್ತಾರೆ. ಹೀಗಾಗಿ ಇದಕ್ಕೆ ಮಹತ್ವ ಕೊಡಬೇಕಾಗಿಲ್ಲ. ಉದ್ದೇಶಪೂರ್ವಕವಾಗಿ ಜನಸಾಮಾನ್ಯರಿಗೆ ತಿಳಿಯಲೆಂದೇ ಇಲ್ಲಿ ಶರಣರ ಸಂದೇಶಗಳನ್ನು, ಅವರ ವಿಚಾರಧಾರೆಯನ್ನು, ಅವರಿಗಿರುವ ಬದ್ಧತೆಯನ್ನು ಸ್ಪಷ್ಟವಾಗಿ ಸರಳವಾಗಿ ಹೇಳಲು ಪ್ರಯತ್ನಿಸಲಾಗಿದೆ. ವರ್ಣವ್ಯವಸ್ಥೆಯ ವಿರುದ್ಧ 12ನೇ ಶತಮಾನದಲ್ಲಿಯೇ ನಡೆದ ಈ ಚಳವಳಿ ಈ ನಾಡು ಕಂಡ, ಈ ದೇಶ ಕಂಡ ಪ್ರಥಮ ಚಳವಳಿಯಾಗಿದೆ.

ಈ ಅಂಕಣದ ಹಿಂದಿನ ಬರಹಗಳು:
ವರ್ಣವ್ಯವಸ್ಥೆಯ ವಿರುದ್ಧ ಶರಣರ ದನಿ
ಅಸಮಾನತೆಯ ವಿರುದ್ಧದ ಚಳವಳಿಯಾದ ಬಸವಧರ್ಮ
ಶರಣರ ದಾಸೋಹ ತತ್ವ - ಹಲವು ಆಯಾಮಗಳು
ಆಚಾರವೇ ಲಿಂಗವಾಗುವ,, ಅನುಭಾವವೇ ಜಂಗಮವಾಗುವ ನಿಜ ದಾಸೋಹ
ಶರಣರ ಪಾಲಿಗೆ ಕಡ್ಡಾಯ ಮಾತ್ರವಾಗಿರದೆ, ಕೈಲಾಸವೂ ಆಗಿದ್ದ ಕಾಯಕ
ಕಾಯಕವೇ ನಿಜ ವ್ರತವೆಂದು ನಂಬಿದ್ದ ಶರಣರು
ಶರಣರ ಕಾಲದ ಮನರಂಜನೆಯ ಕಾಯಕಗಳು
ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ

ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...