About the Author

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. 

ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ಗೆಲುವಿನ ಹಾದಿ, ಚಂದನ ಕಸ್ತೂರಿ, ಚೆಲ್ಲಿದ ಪನ್ನೀರು ಜೇನು ಬೆರೆತ ಹಾಲು, ದುಂಬಿ ಮುಟ್ಟದ ಹೂವು, ಬಂಗಾರದ ಮೆಟ್ಟಿಲು, ಬೇರು ಕಡಿದ ಮರ, ಭ್ರಮರ ಬಂಧನ, ವಜ್ರಪಂಜರ, ಶುಭ ವಸಂತ, ಸಪ್ತವರ್ಣ ಮಿನುಗಿತು, ಸುವರ್ಣ ಸೇತುವೆ, ಸೊಬಗಿನ ಸೆರೆಮನೆ, ಸೌಭಾಗ್ಯ ಸಂಪದ’ ಅವರ ಪ್ರಮುಖ ಕಾದಂಬರಿಗಳು. ಅನುರಾಗ ಅರಳಿತು ಹಾಗೂ ಸುವರ್ಣ ಸೇತುವೆ ಕಾದಂಬರಿಗಳು ಕನ್ನಡ ಚಲನಚಿತ್ರಗಳಾಗಿವೆ.  ‘ಮಿಂಚಿನಿಂದಿಳಿದ ಮೋಹನಾಂಗಿ’ ಜಾನಪದ ಕಥಾಸಂಕಲನಕ್ಕೆ ಧಾರವಾಡದ ವಿದ್ಯಾವರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ’ ಲಭಿಸಿವೆ. ಎಚ್.ಜಿ. ರಾಧಾದೇವಿ ಅವರು 2006 ರ ನವೆಂಬರ್‌ 09ರಂದು ನಿಧನರಾದರು.

ಹೆಚ್.ಜಿ. ರಾಧಾದೇವಿ

(30 Jan 1952-09 Nov 2006)

Books by Author