ಬೇರು ಕಡಿದ ಮರ

Author : ಹೆಚ್.ಜಿ. ರಾಧಾದೇವಿ

Pages 216

₹ 90.00




Year of Publication: 2009
Published by: ಓಂ ಶಕ್ತಿ ಪ್ರಕಾಶನ
Address: ಬೆಂಗಳೂರು

Synopsys

ಎಚ್ ಜಿ ರಾಧಾದೇವಿ ಅವರ ಸಾಮಾಜಿಕ ಕಾದಂಬರಿ ಬೇರು ಕಡಿದ ಮರ. ಹಳೆಯ ಪೀಳಿಗೆಯವರಷ್ಟೇ ಅಲ್ಲದೆ, ಹೊಸ ಪೀಳಿಗೆಯವರಲ್ಲೂ ಶ್ರೀಮತಿ ಎಚ್ ಜಿ ರಾಧಾದೇವಿಯವರ ಕಾದಂಬರಿಗಳನ್ನು ಕೊಂಡು ಓದುವ ಅಭಿಮಾನಿಗಳಿದ್ದಾರೆ. ರಾಧಾದೇವಿಯವರು ಬರೆದಿದ್ದರಲ್ಲಿ ಸುಖಾಂತ ಕಾದಂಬರಿಗಳೇ ಹೆಚ್ಚು. ಆದರೆ ‘ಬೇರು ಕಡಿದ ಮರ' ಶೀರ್ಷಿಕೆಯೇ ದ್ವನಿಸುವಂತೆ ದುರಂತ ಕಾದಂಬರಿ.

ಚಂದಲಾಪುರದ ಜಮೀನ್ದಾರರಾದ ದೇಸಾಯಿ ಮಧ್ವಾಚಾರ್ಯರ ಮೊಮ್ಮಗಳು, ಹನುಮಂತಾಚಾರ್ಯರ ಒಬ್ಬಳೇ ಮಗಳು ಶಾಂತಿ. ಕಾಲ ಇಪ್ಪತ್ತನೇ ಶತಮಾನದತ್ತ ಓಡಿದ್ದರೂ , ಶಾಂತಿಯ ಮನೆಯಲ್ಲಿ ಹದಿನಾಲ್ಕನೆಯ ಶತಮಾನದ ವಾತಾವರಣ. ಶಾಂತಿಯ ಅಜ್ಜಿ ಲಕ್ಷ್ಮಮ್ಮನದೇ ದರ್ಬಾರು, ಕಾರುಬಾರು. ಅಜ್ಜಿಯ ಆದೇಶದಂತೆ ನಾಲ್ಕನೇ ತರಗತಿಗೆ ಜಾಣೆ ಶಾಂತಿಯ ಓದು ಮುಗಿದಿತ್ತು. ನಂತರ ಸೋಮಣ್ಣ ಮಾಸ್ತರರ ಪಾಠ ಹಾಗೂ ಖಾಸಗಿಯಾಗಿ ಪರೀಕ್ಷೆ ಕಟ್ಟಿ ಆಕೆ ಏಳನೇ ತರಗತಿಯಲ್ಲಿ ಜಿಲ್ಲೆಗೇ ಮೊದಲಿಗಳಾಗಿ ಉತ್ತೀರ್ಣಳಾಗಿದ್ದಳು.ಸೋಮಣ್ಣ ಮಾಸ್ತರರ ಒತ್ತಾಯದಿಂದ ಶಾಂತಿಯ ತಂದೆ, ಗಂಗೆಯ ಜೊತೆ ಅವಳನ್ನು ಮೂರು ಮೈಲಿ ದೂರದಲ್ಲಿದ್ದ ಹೈಸ್ಕೂಲ್ ಗೆ ಕಳಿಸಲು ಅಜ್ಜಿಯ ಗೊಣಗಾಟ ಹಾಗೂ ರಂಪಾಟಗಳ ನಡುವೆಯೂ ಒಪ್ಪಿದ್ದರು. ಸಾಂಪ್ರದಾಯಿಕ ಉಡುಗೆ, ಏಳು ಗಜದ ಸ್ಪನ್ ಸಿಲ್ಕ್ ಸೀರೆಯುಟ್ಟು, ದೊಗಲೆ ಹಾಗೂ ಮುಂಗೈ ಮುಚ್ಚುವಂತಹ ಕುಬುಸ ಧರಿಸಿ, ಎಣ್ಣೆ ಹಚ್ಚಿ , ಕೂದಲು ತಲೆಗೆ ಅಂಟುವಂತೆ ತೀಡಿತೀಡಿ ನುಣ್ಣಗೆ ಬಾಚಿ, ಬಿಗಿಯಾಗಿ ಹೆಣೆದ ಜಡೆ, ತಲೆಗೆ ಹೊರೆ ಭಾರದ ಹೂ ದಂಡೆ ಮುಡಿದು, ಅರಿಶಿನ ಬಳಿದ, ಸ್ನೋ ಪೌಡರ್ ಸೋಂಕಿಲ್ಲದ ಮುಖಕ್ಕೆ , ಕಾಸಿನಗಲದ ಕುಂಕುಮವಿಟ್ಟು ಕೊರಳಿಗೆ ಶರಟಡ್ಡಿಕೆ ಧರಿಸಿ, ಎತ್ತಿನಗಾಡಿಯಲ್ಲಿ ಆಕೆ ಗೆಳತಿ ಗಂಗೆಯ ಜೊತೆಗೆ ಶಾಲೆಗೆ ಹೋಗಬೇಕಿತ್ತು.ಆಗ ಹೆಣ್ಣುಮಕ್ಕಳು ಚಪ್ಪಲಿ ಹಾಕುವುದೂ ಅಪರಾಧವೇ.ಜೋರಾಗಿ ಉಸಿರಾಡಲೂ ಶಾಂತಿಗೆ ಅಜ್ಜಿಯ ಒಪ್ಪಿಗೆ ಬೇಕಾಗಿತ್ತು. ಏಳು ತಲೆಮಾರಿಗಾಗುವಷ್ಟು ಶ್ರೀಮಂತಿಕೆಯಿದ್ದರೂ, ಅಂಕೆ, ಕಡಿವಾಣಗಳ ಹಿಡಿತದಲ್ಲಿ ಶಾಂತಿಗೆ ಮತ್ತವಳ ತಾಯಿಗೆ ಯಾವ ಸುಖವೂ ಇಲ್ಲ, ನೆಮ್ಮದಿಯೂ ಇಲ್ಲ.ತಾಯಿ ಸಾವಿತ್ರಮ್ಮ ಬಾಯಿ ಕಳೆದುಕೊಂಡಾಕೆ. ಗಾಣದೆತ್ತಿನಂತೆ ಮೌನವಾಗಿ ಮೂಗಿಗೆ ಕವಡೆ ಕಟ್ಟಿ ದುಡಿಯುತ್ತಿದ್ದವಳು.ಮದುವೆಯಾಗಿ ಬಂದ ನಂತರದಲ್ಲಿ ಆಕೆ ತವರಿಗೂ ಹೋಗಿದ್ದಿಲ್ಲ.ಅಂತಹ ಸಾಧ್ವಿನಿಗೂ ಆಗಾಗ್ಗೆ ದೊಣ್ಣೆ ಸೇವೆ ಮಾಡಬೇಕೆಂದು ಮಗನಿಗೆ ಬೋಧಿಸುತ್ತಿದ್ದ ಮಹಾನ್ ತಾಯಿ ಲಕ್ಷ್ಮಮ್ಮ.ಸ್ವಾತಂತ್ರ್ಯ ಮತ್ತು ವ್ಯಕ್ತಿ ಸ್ವಾತಂತ್ರ್ಯ ಪದಗಳ ಪರಿಚಯವಿಲ್ಲದ ಜನರ ಜೊತೆಯಲ್ಲಿ ಅತ್ಯಂತ ಚೆಲುವೆ ಶಾಂತಿಯ ದಾರುಣ ಬದುಕು. ಶಾಂತಿಗೆ ಅಪ್ಪನ ತಂಗಿ ಗುಂಡಮ್ಮನ ಮಗ ಸಕಲ ಕಲಾ ವಲ್ಲಭ ಕಪ್ಪು ಕೋಣದಂತಿದ್ದ ಭೀಮನೊಂದಿಗೆ ಮದುವೆ ಎಂದು ತೊಟ್ಟಿಲಲ್ಲೇ ನಿರ್ಧಾರವಾಗಿತ್ತು. ಆದರೆ ಹದಿನಾರು ವರ್ಷದ ಶಾಂತಿ ತನ್ನ ಶಾಲೆಯ ಹಿಸ್ಟರಿ ಮೇಸ್ಟ್ರು ರಾಜ್ ನನ್ನೇ ಪ್ರೀತಿಸಿದ್ದಳು. ಆತ ವಿದೇಶದಲ್ಲಿ ಉನ್ನತ ಶಿಕ್ಷಣ ಮುಗಿಸಿ ಬರುವಷ್ಟರಲ್ಲಿ ಆಕೆಗೆ ಹದಿನೆಂಟು ತುಂಬಿರುತ್ತೆ. ಆಗ ಕಾನೂನಿನ ಬೆಂಬಲದಿಂದ ಯಾವ ಅಡ್ಡಿ ಆತಂಕಗಳು ಬಂದರೂ ಎದುರಿಸಿ ನಿಲ್ಲಬಹುದೆಂದು,ಆ ನಂತರ ಮದುವೆಯಾಗಲು ಇಬ್ಬರೂ ನಿರ್ಧರಿಸಿದ್ದರು..ಈ ಸಂದರ್ಭದಲ್ಲಿ ಶಾಂತಿಯ ನಿರ್ಧಾರವೇನು ? ಆ ನಿರ್ಧಾರ ಆಕೆಯ ಬದುಕನ್ನು ಯಾವ ದಿಶೆಯಲ್ಲಿ ಮುನ್ನಡೆಸುತ್ತದೆ ಎಂಬುದೇ ಕಾದಂಬರಿಯ ಜೀವಾಳ.

ಕಾದಂಬರಿಯ ಶೀರ್ಷಿಕೆ ‘ಬೇರು ಕಡಿದ ಮರ' ಸಮೃದ್ದ ರೂಪಕವಾಗಿ ಹೇಳಬೇಕಾದುದನ್ನೆಲ್ಲಾ ಸಾಂಕೇತಿಕವಾಗಿ ಧ್ವನಿಸುತ್ತದೆ! ಹಸಿರೆಲೆ, ಹೂವು, ಕಾಯಿ , ಹಣ್ಣು ತುಂಬಿ ನಳ ನಳಿಸುವ ಮರದ ರೆಂಬೆ ಕೊಂಬೆಗಳು ಕೊಡಲಿ ಪೆಟ್ಟನ್ನೂ ತಾಳಬಲ್ಲವು; ಆದರೆ ಬೇರನ್ನೇ ತುಂಡರಿಸಿದರೆ? ಕ್ರಮೇಣ ಒಣಗಿ ನಶಿಸುತ್ತದೆ! ಕಥಾನಾಯಕಿಯೇ ಬೇರು ಕಡಿದ ಮರ ಎಂಬ ವಾಸ್ತವವನ್ನು ಅರಗಿಸಿಕೊಳ್ಳಲು ಕಷ್ಟ ಸಾಧ್ಯವೇ ಸರಿ. ಮೊದಲ ಮುದ್ರಣ- 1983, ಮೂರನೆಯ ಮುದ್ರಣ- 2009

About the Author

ಹೆಚ್.ಜಿ. ರಾಧಾದೇವಿ
(30 January 1952 - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books